182: ಉಷಯಾ ಸಹಾನಿರುದ್ಧಸ್ಯ ವಿವಾಹಃ

ಪ್ರವೇಶ

।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।

ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ

ಶ್ರೀ ಮಹಾಭಾರತ

ಖಿಲಭಾಗೇ ಹರಿವಂಶಃ

ವಿಷ್ಣು ಪರ್ವ

ಅಧ್ಯಾಯ 182

ಸಾರ

ದ್ವಾರಕೆಯಲ್ಲಿ ಉತ್ಸವ, ಉಷೆಯು ಅಂತಃಪುರವನ್ನು ಪ್ರವೇಶಿಸಿದುದು ಮತ್ತು ಅವಳ ಸತ್ಕಾರ (1-20), ಕೃಷ್ಣನ ಮತ್ತು ವಿಷ್ಣುಪರ್ವದ ಮಹಿಮೆ (21-41).

19182001 ವೈಶಂಪಾಯನ ಉವಾಚ ।
19182001a ಅಥಾಹುಕೋ ಮಹಾಬಾಹುಃ ಕೃಷ್ಣಂ ಪ್ರಾಹ ಮಹಾದ್ಯುತಿಃ ।
19182001c ಹರ್ಷಾದುತ್ಫುಲ್ಲನಯನಃ ಶ್ರೂಯತಾಂ ಯದುನಂದನ ।।

ವೈಶಂಪಾಯನನು ಹೇಳಿದನು: “ಆಗ ಮಹಾದ್ಯುತಿ ಮಹಾಬಾಹು ಆಹುಕ ಉಗ್ರಸೇನನು ಹರ್ಷದಿಂದ ಕಣ್ಣುಗಳನ್ನು ಅರಳಿಸಿ ಕೃಷ್ಣನಿಗೆ ಹೇಳಿದನು: “ಯದುನಂದನ! ಕೇಳಬೇಕು.

19182002a ಏವಂ ಗತೇಽನಿರುದ್ಧಸ್ಯ ಕ್ರಿಯತಾಂ ಮಹದುತ್ಸವಃ ।
19182002c ಕ್ಷೇಮಾತ್ಪ್ರತ್ಯಾಗತಂ ದೃಷ್ಟ್ವಾ ಸೇವ್ಯಮಾನಾಃ ಮಹಾಮತೇ ।।

ಮಹಾಮತೇ! ಹೀಗೆ ಕ್ಷೇಮದಿಂದ ಹಿಂದಿರುಗಿದ ಅನಿರುದ್ಧನನ್ನು ಕಂಡು ಅವನ ಸೇವೆಗಾಗಿ ಮಹಾ ಉತ್ಸವವನ್ನು ರಚಿಸಬೇಕು.

19182003a ಉಷಾಪಿ ಚ ಮಹಾಭಾಗಾ ಸಖೀಭಿಃ ಪರಿವಾರಿತಾ ।
19182003c ರಮತೇ ಪರಯಾ ಪ್ರೀತ್ಯಾ ಚಾನಿರುದ್ಧೇನ ಸಂಗತಾ ।।

ಸಖಿಗಳಿಂದ ಪರಿವಾರಿತಳಾಗಿರುವ ಮಹಾಭಾಗೆ ಉಷೆಯೂ ಕೂಡ ಪರಮ ಪ್ರೀತಿಯಿಂದ ಅನಿರುದ್ಧನೊಡನೆ ರಮಿಸುತ್ತಿದ್ದಾಳೆ.

19182004a ಕುಂಭಾಂಡದುಹಿತಾ ರಾಮಾ ಉಷಾಯಾಃ ಸಖಿಮಂಡಲೇ ।
19182004c ಪ್ರವೇಶ್ಯತಾಂ ಮಹಾಭಾಗಾ ವೈದರ್ಭೀಂ ವರ್ಧಯತ್ಯುತ ।।

ಉಷೆಯ ಸಖಿಮಂಡಲದಲ್ಲಿರುವ ಕುಂಭಾಂಡನ ಮಗಳು ರಾಮೆಯೊಂದಿಗೆ ಉಷೆಯು ಅಂತಃಪುರವನ್ನು ಪ್ರವೇಶಿಸಲಿ ಮತ್ತು ಮಹಾಭಾಗೆ ವೈದರ್ಭಿ ರುಕ್ಮಿಣಿಯು ಅವಳನ್ನು ಅಭಿನಂದಿಸಲಿ.

19182005a ಸಾಂಬಾಯ ದೀಯತಾಂ ರಾಮಾ ಕುಂಭಾಂಡದುಹಿತಾ ಶುಭಾ ।
19182005c ಶೇಷಾಶ್ಚ ಕನ್ಯಾ ನ್ಯಸ್ಯಂತಾಂ ಕುಮಾರಾಣಾಂ ಯಥಾಕ್ರಮಮ್ ।।

ಕುಂಭಾಂಡನ ಮಗಳು ಶುಭೆ ರಾಮೆಯನ್ನು ಸಾಂಬನಿಗೆ ಕೊಡೋಣ. ಉಳಿದ ಕನ್ಯೆಯರನ್ನು ಯಥಾಕ್ರಮವಾಗಿ ಉಳಿದ ಕುಮಾರರಿಗೆ ಒಪ್ಪಿಸೋಣ.”

19182006a ವರ್ತತೇ ಸೋತ್ಸವಸ್ತತ್ರ ಅನಿರುದ್ಧಸ್ಯ ವೇಶ್ಮನಿ ।
19182006c ಗೃಹೇ ಶ್ರೀಧನ್ವನಶ್ಚೈವ ಶುಭಸ್ತತ್ರ ಪ್ರವರ್ತತೇ ।।

ಅನಿರುದ್ಧನ ಭವನದಲ್ಲಿ ಉತ್ಸವವು ನಡೆಯಿತು ಮತ್ತು ಶೀಧನ್ವನ ಶುಭ ಮನೆಯಲ್ಲಿಯೂ ಕೂಡ ಉತ್ಸವವು ನಡೆಯಿತು.

19182007a ವಾದಯಂತಿ ಪುರೇ ತತ್ರ ನಾರ್ಯೋ ಮದವಶಂ ಗತಾಃ ।
19182007c ನೃತ್ಯಂತೇ ಚಾಪ್ಸರಾಸ್ತತ್ರ ಗಾಯಂತಿ ಚ ತಥಾಪರಾಃ ।।

ಅಲ್ಲಿ ಪುರದ ನಾರಿಯರು ಮದವಶರಾಗಿ ವಾದ್ಯಗಳನ್ನು ನುಡಿಸುತ್ತಿದ್ದರು. ಕೆಲವು ಅಪ್ಸರೆಯರು ಕೂಡ ಅಲ್ಲಿ ಹಾಡುತ್ತಿದ್ದರು ಮತ್ತು ನರ್ತಿಸುತ್ತಿದ್ದರು.

19182008a ಕಾಶ್ಚಿತ್ಪ್ರಮುದಿತಾಸ್ತತ್ರ ಕಾಶ್ಚಿದನ್ಯೋನ್ಯಮಬ್ರುವನ್ ।
19182008c ನಾನಾವರ್ಣಾಂಬರಧರಾಃ ಕ್ರೀಡಮಾನಾಸ್ತತಸ್ತತಃ ।।

ಕೆಲವು ಸ್ತ್ರೀಯರು ಅಲ್ಲಿ ವಿನೋದಿಸುತ್ತಿದ್ದರು. ಕೆಲವರು ಅನ್ಯೋನ್ಯರೊಡನೆ ಮಾತನಾಡುತ್ತಿದ್ದರು. ಅಲ್ಲಲ್ಲಿ ನಾನಾವರ್ಣದ ವಸ್ತ್ರಗಳುನ್ನುಟ್ಟು ಆಡುತ್ತಿದ್ದರು.

19182009a ಅಭಿಯಾಂತಿ ತತೋಽನ್ಯೋನ್ಯಂ ಕಾಶ್ಚಿನ್ಮದವಶಾತ್ಸ್ವಯಮ್ ।
19182009c ಕ್ರೀಡಂತಿ ಕಾಶ್ಚಿದಕ್ಷೈಸ್ತು ಹರ್ಷಾದುತ್ಫುಲ್ಲಲೋಚನಾಃ ।।

ಕೆಲವು ಸ್ತ್ರೀಯರು ಯೌವನ ಮದಕ್ಕೆ ವಶೀಭೂತರಾಗಿ ಪರಸ್ಪರರನ್ನೇ ಆಲಂಗಿಸುತ್ತಿದ್ದರು. ಹರ್ಷದಿಂದ ಅರಳಿದ ಕಣ್ಣುಗಳಿಂದ ಕೆಲವರು ದ್ಯೂತಕ್ರೀಡೆಯಲ್ಲಿ ತೊಡಗಿದ್ದರು.

19182010a ಮಾಯೂರಂ ರಥಮಾರುಹ್ಯ ಸಖೀಭಿಃ ಪರಿವಾರಿತಾ ।
19182010c ಉಷಾ ಸಂಪ್ರೇಷಿತಾ ದೇವ್ಯಾ ರುದ್ರಾಣ್ಯಾ ಪ್ರತಿಗೃಹ್ಯತಾಮ್ ।।
19182011a ಇಯಂ ಚೈವ ಕುಲಶ್ಲಾಘ್ಯಾ ನಾಮ್ನೋಷಾ ಸುಂದರೀ ವರಾ ।
19182011c ಬಾಣಪುತ್ರೀ ತವವಧೂಃ ಪ್ರತಿಗೃಹ್ಣೀಷ್ವ ಭಾಮಿನೀಮ್ ।।

(ಆ ಮೊದಲೇ ಉಷೆಯ ರಥವು ದ್ವಾರದಲ್ಲಿ ಬರಲು ಕೃಷ್ಣನು ರುಕ್ಮಿಣಿಗೆ ಹೇಳಿದನು): “ರುದ್ರಾಣಿ ದೇವಿಯು ಮಯೂರ ರಥವನ್ನೇರಿಸಿ ಕಳುಹಿಸಿರುವ ಸಖಿಗಳಿಂದ ಪರಿವಾರಿತಳಾಗಿರುವ ಉಷೆಯನ್ನು ಬರಮಾಡಿಕೋ! ಇದು ನಮ್ಮ ಕುಲಕ್ಕೆ ಶ್ಲಾಘನೀಯವಾದುದು. ಈ ಶ್ರೇಷ್ಠ ಸುಂದರಿಯ ಹೆಸರು ಉಷಾ. ನಿನ್ನ ಸೊಸೆ ಭಾಮಿನೀ ಬಾಣಪುತ್ರಿಯನ್ನು ಸ್ವೀಕರಿಸು.”

19182012a ತತಃ ಪ್ರತಿಗೃಹೀತಾ ಸಾ ಸ್ತ್ರೀಭಿರಾಚಾರಮಂಗಲೈಃ ।
19182012c ಪ್ರವೇಶಿತಾ ಚ ಸಾ ವೇಶ್ಮ ಅನಿರುದ್ಧಸ್ಯ ಶೋಭನಾ ।।

ಆಗ ಮಂಗಲಾಚಾರಗಳಿಂದ ಸ್ತ್ರೀಯರು ಶೋಭನೆಯನ್ನು ಬರಮಾಡಿಕೊಳ್ಳಲು ಉಷೆಯು ಅನಿರುದ್ಧನ ಭವನವನ್ನು ಪ್ರವೇಶಿಸಿದಳು.

19182013a ದೇವಕೀ ರೋಹಿಣೀ ಚೈವ ರುಕ್ಮಿಣ್ಯಥ ವಿದರ್ಭಜಾ ।
19182013c ದೃಷ್ಟ್ವಾನಿರುದ್ಧಂ ರೋದಂತ್ಯಃ ಸ್ನೇಹಹರ್ಷಸಮನ್ವಿತಾಃ ।।

ದೇವಕೀ, ರೋಹಿಣೀ ಮತ್ತು ವಿದರ್ಭಜೆ ರುಕ್ಮಿಣಿಯರು ಅನಿರುದ್ಧನನ್ನು ನೋಡಿ ಸ್ನೇಹಹರ್ಷಸಮನ್ವಿತರಾಗಿ ರೋದಿಸತೊಡಗಿದರು.

19182014a ರೇವತೀ ರುಕ್ಮಿಣೀ ಚೈವ ಗೃಹಮುಖ್ಯಂ ಪ್ರವೇಶಯತ್ ।
19182014c ವಧೂರ್ವರ್ಧಸಿ ದಿಷ್ಟ್ಯಾ ತ್ವಮನಿರುದ್ಧಸ್ಯ ದರ್ಶನಾತ್ ।।

ರೇವತಿ ಮತ್ತು ರುಕ್ಮಿಣಿಯರು ಅವನನ್ನು ಶ್ರೇಷ್ಠ ಭವನಕ್ಕೆ ಪ್ರವೇಶಿಸಿ ಪ್ರದ್ಯುಮ್ನನ ಪತ್ನಿ ಶುಭಾಂಗಿಗೆ “ವಧೂ! ಅಭಿನಂದನೆಗಳು! ಸೌಭಾಗ್ಯವು! ನೀನು ಅನಿರುದ್ಧನನ್ನು ನೋಡುತ್ತಿದ್ದೀಯೆ!”

19182015a ತತಸ್ತೂರ್ಯಪ್ರಣಾದೈಸ್ತಾ ವರನಾರ್ಯಃ ಶುಭಾನನಾಃ ।
19182015c ಕ್ರಿಯಾಮಾರೇಭಿರೇ ಕರ್ತುಮುಷಾ ಚ ಗೃಹಸಂಸ್ಥಿತಾ ।।

ಅನಂತರ ಶ್ರೇಷ್ಠ ಶುಭಾನನ ನಾರಿಯರು ತೂರ್ಯಪ್ರಣಾದಗಳಿಂದ ಸಂಪ್ರದಾಯಪೂರ್ವಕವಾಗಿ ಉಷೆಯನ್ನು ಗೃಹಸಂಸ್ಥಿತೆಯನ್ನಾಗಿ ಮಾಡಿದರು.

19182016a ತತೋ ಹರ್ಮ್ಯತಲಸ್ಥಾ ಸಾ ವೃಷ್ಣಿಪುಂಗವಸಂಸ್ಥಿತಾ ।
19182016c ರಮತೇ ಸರ್ವಸದೃಶೈರುಪಭೋಗೈರ್ವರಾನನಾ ।।

ವರಾನನೆ ಉಷೆಯು ಮಹಡಿಯಲ್ಲಿ ವೃಷ್ಣಿಪುಂಗವ ಅನಿರುದ್ಧನೊಡನೆ ವಾಸಿಸುತ್ತಾ ತನಗೆ ಅನುರೂಪವಾದ ಸಮಸ್ತ ಉಪಭೋಗಗಳಿಂದ ರಮಿಸಿದಳು.

19182017a ಚಿತ್ರಲೇಖಾ ಚ ಸುಶ್ರೋಣೀ ಅಪ್ಸರಾರೂಪಧಾರಿಣೀ ।
19182017c ಆಪೃಚ್ಚ್ಯ ಚ ಸಖೀವರ್ಗಮುಷಾಂ ಚ ತ್ರಿದಿವಂ ಗತಾ ।।

ಸುಶ್ರೋಣಿ ಅಪ್ಸರರೂಪಧಾರಿಣೀ ಚಿತ್ರಲೇಖೆಯು ಉಷೆ ಮತ್ತು ಸಖೀವರ್ಗವನ್ನು ಬೀಳ್ಕೊಂಡು ಸ್ವರ್ಗಲೋಕಕ್ಕೆ ತೆರಳಿದಳು.

19182018a ಗತಾಸು ತಾಸು ಸರ್ವಾಸು ಸಖೀಷ್ವಸುರಸುಂದರೀ ।
19182018c ಮಾಯಾವತ್ಯಾ ಗೃಹಂ ನೀತಾ ಪ್ರಥಮಂ ಸಾ ನಿಮಂತ್ರಿತಾ ।।

ಆ ಎಲ್ಲ ಸಖಿಯರೂ ಹೊರಟುಹೋದ ನಂತರ ಅಸುರಸುಂದರಿಯನ್ನು ಮಾಯಾವತಿಯು ತನ್ನ ಭವನಕ್ಕೆ ಆಮಂತ್ರಿಸಿ ಕರೆದುಕೊಂಡು ಹೋದಳು.

19182019a ಸಾ ತು ಪ್ರದ್ಯುಮ್ನಗೃಹಿಣೀ ಸ್ನುಷಾಂ ದೃಷ್ಟ್ವಾ ಸುಮಧ್ಯಮಾ ।
19182019c ವಾಸೋಭಿರನ್ನಪಾನೈಶ್ಚ ಪೂಜಯಾಮಾಸ ಸುಂದರೀಮ್ ।।

ಪ್ರದ್ಯುಮ್ನನ ಪತ್ನಿ ಮಾಯಾವತಿಯು ಆ ಸುಮಧ್ಯಮೆ ಸೊಸೆಯನ್ನು ನೋಡಿ ಸುಂದರಿಯನ್ನು ವಸ್ತ್ರ, ಭೋಜನ, ಪಾನೀಯಗಳಿಂದ ಸತ್ಕರಿಸಿದಳು.

19182020a ತತಃ ಕ್ರಮೇಣ ಸರ್ವಾಸ್ತಾ ವಧೂಮೂಷಾಂ ಯದುಸ್ತ್ರಿಯಃ ।
19182020c ಆಚಾರಮನುಪಶ್ಯಂತ್ಯಃ ಸ್ವಧರ್ಮಮುಪಚಕ್ರಿರೇ ।।

ಅನಂತರ ಎಲ್ಲ ಯದುಸ್ತ್ರೀಯರೂ ತಮ್ಮ ಕುಲಾಚಾರಗಳಿಗನುಗುಣವಾಗಿ ವಧು ಉಷೆಯನ್ನು ಕರೆದು ಸತ್ಕರಿಸಿ ಸ್ವಧರ್ಮವನ್ನು ಪಾಲಿಸಿದರು.”

19182021 ವೈಶಂಪಾಯನ ಉವಾಚ ।
19182021a ಏತತ್ತೇ ಸರ್ವಮಾಖ್ಯಾತಂ ಮಯಾ ಕುರುಕುಲೋದ್ವಹ ।
19182021c ಯಥಾ ಬಾಣೋ ಜಿತಃ ಸಂಖ್ಯೇ ಜೀವನ್ಮುಕ್ತಶ್ಚ ವಿಷ್ಣುನಾ ।।

ವೈಶಂಪಾಯನನು ಹೇಳಿದನು: “ಕುರುಕುಲೋದ್ವಹ! ಯುದ್ಧದಲ್ಲಿ ಬಾಣನು ಹೇಗೆ ಸೋತು ವಿಷ್ಣುವಿನಿಂದ ಜೀವನ್ಮುಕ್ತನಾದನು ಎನ್ನುವುದರ ಕುರಿತು ಎಲ್ಲವನ್ನೂ ಹೇಳಿದ್ದೇನೆ.

19182022a ದ್ವಾರಕಾಯಾಂ ತತಃ ಕೃಷ್ಣೋ ರೇಮೇ ಯದುಗಣೈರ್ವೃತಃ ।
19182022c ಅನ್ವಶಾಸನ್ಮಹೀಂ ಕೃತ್ಸ್ನಾಂ ಪರಯಾ ಸಂಯುತೋ ಮುದಾ ।।

ಅನಂತರ ಕೃಷ್ಣನು ದ್ವಾರಕೆಯಲ್ಲಿ ಯದುಗಣಗಳಿಂದ ಆವೃತನಾಗಿ ರಮಿಸಿದನು. ಪರಮ ಮುದದಿಂದ ಅವನು ಇಡೀ ಮಹಿಯನ್ನು ಆಳಿದನು.

19182023a ಏವಮೇಷೋಽವತೀರ್ಣೋ ವೈ ಪೃಥಿವೀಂ ಪೃಥಿವೀಪತೇ ।
19182023c ವಿಷ್ಣುರ್ಯದುಕುಲಶ್ರೇಷ್ಠೋ ವಾಸುದೇವೇತಿ ವಿಶ್ರುತಃ ।।

ಪೃಥಿವೀಪತೇ! ಹೀಗೆ ವಿಷ್ಣುವು ಈ ಭೂಮಿಯಲ್ಲಿ ಅವತರಿಸಿ ಯದುಕುಲಶ್ರೇಷ್ಠ ವಾಸುದೇವನೆಂದು ವಿಶ್ರುತನಾದನು.

19182024a ಏತೈಶ್ಚ ಕಾರಣೈಃ ಶ್ರೀಮಾನ್ವಸುದೇವಕುಲೇ ಪ್ರಭುಃ ।
19182024c ಜಾತೋ ವೃಷ್ಣಿಷು ದೇವಕ್ಯಾಂ ಯನ್ಮಾಂ ತ್ವಂ ಪರಿಪೃಚ್ಛಸಿ ।।

ನೀನು ಕೇಳಿದ್ದಂತೆ, ಇವೇ ಕಾರಣಗಳಿಗಾಗಿ ಶ್ರೀಮಾನ್ ಪ್ರಭುವು ವೃಷ್ಣಿಗಳ ವಸುದೇವಕುಲದ ದೇವಕಿಯಲ್ಲಿ ಹುಟ್ಟಿದ್ದನು.

19182025a ನಿವೃತ್ತೇ ನಾರದಪ್ರಶ್ನೇ ಯನ್ಮಯೋಕ್ತಂ ಸಮಾಸತಃ ।
19182025c ಶ್ರುತಾಸ್ತೇ ವಿಸ್ತರಾಃ ಸರ್ವೇ ಯೇ ಪೂರ್ವಂ ಜನಮೇಜಯ ।।

ಜನಮೇಜಯ! ನಾರದನ ಪ್ರಶ್ನೆಗೆ ದೊರೆತ ಉತ್ತರವನ್ನು ಮೊದಲು ಸಂಕ್ಷಿಪ್ತವಾಗಿ ಹೇಳಿ ಈಗ ಎಲ್ಲವನ್ನೂ ವಿಸ್ತಾರವಾಗಿ ಹೇಳಿದ್ದೇನೆ.

19182026a ವಿಷ್ಣೋಸ್ತು ಮಾಥುರೇ ಕಲ್ಪೇ ಯತ್ರ ತೇ ಸಂಶಯೋ ಮಹಾನ್ ।
19182026c ವಾಸುದೇವಗತಿಶ್ಚೈವ ಸಾ ಮಯಾ ಸಮುದಾಹೃತಾ ।।

ವಿಷ್ಣುವು ಮಥುರೆಯಲ್ಲಿ ಅವತರಿಸಿದ ಕುರಿತು ನಿನಗೆ ಏನು ಮಹಾ ಸಂಶಯವಿತ್ತೋ ಅದನ್ನು ಮತ್ತು ಉದಾಹರಣೆಗಳೊಂದಿಗೆ ವಾಸುದೇವನ ಗತಿಯನ್ನೂ ನಾನು ವಿವರಿಸಿದ್ದೇನೆ.

19182027a ಆಶ್ಚರ್ಯಂ ಚೈವ ನಾನ್ಯದ್ವೈ ಕೃಷ್ಣಶ್ಚಾಶ್ಚರ್ಯಸಂನಿಧಿಃ ।
19182027c ಸರ್ವೇಷ್ವಾಶ್ಚರ್ಯಕಲ್ಪೇಷು ನಾಸ್ತ್ಯಾಶ್ಚರ್ಯಮವೈಷ್ಣವಮ್ ।।

ಕೃಷ್ಣನಲ್ಲದೇ ಬೇರೆ ಯಾವುದೂ ಆಶ್ಚರ್ಯವಾದುದಲ್ಲ. ಅವನು ಆಶ್ಚರ್ಯ ಸನ್ನಿಧಿಯು. ಸಮಸ್ತ ಆಶ್ಚರ್ಯಮಯ ವಸ್ತುಗಳಲ್ಲಿ ವಿಷ್ಣುವಿನ ಅಂಶವಿಲ್ಲದಿರುವುದು ಯಾವುದೂ ಇಲ್ಲ.

19182028a ಏಷ ಧನ್ಯೋ ಹಿ ಧನ್ಯಾನಾಂ ಧನ್ಯಕೃದ್ಧನ್ಯಭಾವನಃ ।
19182028c ದೇವೇಷು ತು ಸದೈತ್ಯೇಷು ನಾಸ್ತಿ ಧನ್ಯತರೋಽಚ್ಯುತಾತ್ ।।

ಕೃಷ್ಣನೇ ಧನ್ಯ! ಇವನೇ ಧನ್ಯರನ್ನು ಧನ್ಯರಾಗಿಸುವ ಧನ್ಯಭಾವನನು. ದೇವತೆಗಳು ಮತ್ತು ದೈತ್ಯರಲ್ಲಿ ಅಚ್ಯುತನಿಗಿಂತಲೂ ಶ್ರೇಷ್ಠ ಧನ್ಯನು ಯಾರೂ ಇಲ್ಲ.

19182029a ಆದಿತ್ಯಾ ವಸವೋ ರುದ್ರಾ ಅಶ್ವಿನೌ ಮರುತಸ್ತಥಾ ।
19182029c ಗಗನಂ ಭೂರ್ದಿಶಶ್ಚೈವ ಸಲಿಲಂ ಜ್ಯೋತಿರೇವ ಚ ।।

ಆದಿತ್ಯರು, ವಸುಗಳು, ರುದ್ರರು, ಅಶ್ವಿನಿಯರು, ಮರುತರು, ಗಗನ, ಭೂಮಿ, ದಿಕ್ಕುಗಳು, ನೀರು ಮತ್ತು ಜ್ಯೋತಿ ಎಲ್ಲವೂ ಇವನೇ.

19182030a ಏಷ ಧಾತಾ ವಿಧಾತಾ ಚ ಸಂಹರ್ತಾ ಚೈವ ನಿತ್ಯಶಃ ।
19182030c ಸತ್ಯಂ ಧರ್ಮಸ್ತಪಶ್ಚೈವ ಬ್ರಹ್ಮಾ ಚೈವ ಪಿತಾಮಹಃ ।।

ಇವನೇ ಧಾತಾ, ವಿಧಾತಾ, ಮತ್ತು ನಿತ್ಯ ಸಂಹರ್ತನು. ಇವನೇ ಸತ್ಯ, ಧರ್ಮ, ತಪಸ್ಸು ಮತ್ತು ಪಿತಾಮಹ ಬ್ರಹ್ಮನೂ ಇವನೇ.

19182031a ಅನಂತಶ್ಚೈವ ನಾಗಾನಾಂ ರುದ್ರಾಣಾಂ ಶಂಕರಃ ಸ್ಮೃತಃ ।
19182031c ಜಂಗಮಾಜಂಗಮಂ ಚೈವ ಜಗನ್ನಾರಾಯಣೋದ್ಭವಮ್ ।।

ನಾಗರಲ್ಲಿ ಅನಂತನೂ ಇವನೇ ಮತ್ತು ರುದ್ರರ ಶಂಕರನೂ ಇವನೇ ಎಂದು ಹೇಳಿದ್ದಾರೆ. ಈ ಜಂಗಮಾಜಂಗಮವೆಲ್ಲವೂ ನಾರಾಯಣನಿಂದಲೇ ಉದ್ಭವಿಸಿವೆ.

19182032a ಏತಸ್ಮಾಚ್ಚ ಜಗತ್ಸರ್ವಂ ಪ್ರಸೂಯೇತ ಜನಾರ್ದನಾತ್ ।
19182032c ಜಗಚ್ಚ ಸರ್ವಂ ದೇವೇಶೇ ತಂ ನಮಸ್ಕುರು ಭಾರತ ।।

ಈ ಜಗತ್ತೆಲ್ಲವೂ ಜನಾರ್ದನನಿಂದಲೇ ಹುಟ್ಟುತ್ತದೆ. ಭಾರತ! ದೇವೇಶನಲ್ಲಿ ಸರ್ವ ಜಗತ್ತೂ ವಿದ್ಯಮಾನವಾಗಿದೆ. ಅವನನ್ನು ನಮಸ್ಕರಿಸು.

19182033a ಪೂಜ್ಯಶ್ಚ ಸತತಂ ಸರ್ವೈರ್ದೇವೈರೇಷ ಸನಾತನಃ ।
19182033c ಇತ್ಯುಕ್ತಂ ಬಾಣಯುದ್ಧಂ ತೇ ಮಾಹಾತ್ಮ್ಯಂ ಕೇಶವಸ್ಯ ತು ।।

ಈ ಸನಾತನ ದೇವನು ಸರ್ವ ದೇವತೆಗಳಿಗೂ ಪೂಜನೀಯನು. ಹೀಗೆ ನಾನು ಬಾಣಯುದ್ಧ ಮತ್ತು ಕೇಶವನ ಮಹಾತ್ಮೆಯನ್ನು ವರ್ಣಿಸಿದ್ದೇನೆ.

19182034a ವಂಶಪ್ರತಿಷ್ಠಾಮತುಲಾಂ ಶ್ರವಣಾದೇವ ಲಪ್ಸ್ಯಸೇ ।
19182034c ಯೇ ಚೇದಂ ಧಾರಯಿಷ್ಯಂತಿ ಬಾಣಯುದ್ಧಮನುತ್ತಮಮ್ ।।
19182035a ಕೇಶವಸ್ಯ ಚ ಮಾಹಾತ್ಮ್ಯಂ ನಾಧರ್ಮಸ್ತಾನ್ಭವಿಷ್ಯತಿ ।

ಇದರ ಶ್ರವಣಮಾತ್ರದಿಂದ ಅತುಲ ವಂಶಪ್ರತಿಷ್ಠೆಯನ್ನು ಪಡೆಯುತ್ತೀಯೆ. ಈ ಅನುತ್ತಮ ಬಾಣಯುದ್ಧ ಮತ್ತು ಕೇಶವನ ಮಹಾತ್ಮೆಯನ್ನು ಮನೋಗತಮಾಡಿಕೊಂಡಿರುವವರನ್ನು ಅಧರ್ಮವು ಪ್ರವೇಶಿಸುವುದಿಲ್ಲ.

19182035c ಏಷಾ ತು ವೈಷ್ಣಾವೀ ಚರ್ಯಾ ಮಯಾ ಕಾರ್ತ್ಸ್ನ್ಯೇನ ಕೀರ್ತಿತಾ ।।
19182036a ಪೃಚ್ಛತಸ್ತಾತ ಯಜ್ಞೇಽಸ್ಮಿನ್ನಿವೃತ್ತೇ ಜನಮೇಜಯ ।

ಅಯ್ಯಾ ಜನಮೇಜಯ! ಈ ಯಜ್ಞದ ಸಮಾಪ್ತಿಯಲ್ಲಿ ನೀನು ಕೇಳಿದ ಪ್ರಶ್ನೆಗಳಿಗೆ ಉತ್ತರಿಸಿ ವಿಷ್ಣುವಿನ ಸಂಪೂರ್ಣ ಲೀಲೆಗಳನ್ನು ನಿನಗೆ ವರ್ಣಿಸಿದ್ದೇನೆ.

19182036c ಆಶ್ಚರ್ಯಪರ್ವ ನಿಖಿಲಂ ಯೋ ಹೀದಂ ಧಾರಯೇನ್ನೃಪ ।।
19182037a ಸರ್ವಪಾಪವಿನಿರ್ಮುಕ್ತೋ ವಿಷ್ಣುಲೋಕಂ ಸ ಗಚ್ಛತಿ ।

ನೃಪ! ಈ ಆಶ್ಚರ್ಯಮಯ ಪರ್ವವನ್ನು ಮನೋಗತಮಾಡಿಕೊಂಡಿರುವವನು ಸರ್ವಪಾಪಗಳಿಂದ ಮುಕ್ತನಾಗಿ ವಿಷ್ಣುಲೋಕಕ್ಕೆ ಹೋಗುತ್ತಾನೆ.

19182037c ಕಲ್ಯ ಉತ್ಥಾಯ ಯೋ ನಿತ್ಯಂ ಕೀರ್ತಯೇತ್ಸುಸಮಾಹಿತಃ ।।
19182038a ನ ತಸ್ಯ ದುರ್ಲಭಂ ಕಿಂಚಿದಿಹ ಲೋಕೇ ಪರತ್ರ ಚ ।

ನಿತ್ಯವೂ ಬೆಳಿಗ್ಗೆ ಎದ್ದು ಸಮಾಹಿತನಾಗಿ ಇದರ ಕೀರ್ತನೆಯನ್ನು ಮಾಡುವವನಿಗೆ ಇಹ ಮತ್ತು ಪರಲೋಕಗಳಲ್ಲಿ ಯಾವುದೂ ದುರ್ಲಭವಲ್ಲ.

19182038c ಬ್ರಾಹ್ಮಣಃ ಸರ್ವವೇದೀ ಸ್ಯಾತ್ಕ್ಷತ್ರಿಯೋ ವಿಜಯೀ ಭವೇತ್ ।।
19182039a ವೈಶ್ಯೋ ಧನಸಮೃದ್ಧಃ ಸ್ಯಾಚ್ಛೂದ್ರಃ ಕಾಮಾನವಾಪ್ನುಯಾತ್ ।
19182039c ನಾಶುಭಂ ಪ್ರಾಪ್ನುಯಾತ್ಕಿಂಚಿದ್ದೀರ್ಘಮಾಯುರ್ಲಭೇತ ಸಃ ।।

ಬ್ರಾಹ್ಮಣನು ಸರ್ವವೇದಗಳನ್ನು ತಿಳಿದುಕೊಳ್ಳುತ್ತಾನೆ. ಕ್ಷತ್ರಿಯನು ವಿಜಯಿಯಾಗುತ್ತಾನೆ. ವೈಶ್ಯನು ಧನಸಮೃದ್ಧನಾಗುತ್ತಾನೆ. ಮತ್ತು ಶೂದ್ರನು ಕಾಮನೆಗಳನ್ನು ಪೂರೈಸಿಕೊಳ್ಳುತ್ತಾನೆ. ಯಾವುದೇ ರೀತಿಯ ಅಶುಭವುಂಟಾಗುವುದಿಲ್ಲ ಮತ್ತು ಅವನು ದೀರ್ಘಾಯುಸ್ಸನ್ನು ಪಡೆಯುತ್ತಾನೆ.””

19182040 ಸೌತಿರುವಾಚ ।
19182040a ಇತಿ ಪಾರಿಕ್ಷಿತೋ ರಾಜಾ ವೈಶಂಪಾಯನಭಾಷಿತಮ್ ।
19182040c ಶ್ರುತವಾನಚಲೋ ಭೂತ್ವ ಹರಿವಂಶಂ ದ್ವಿಜೋತ್ತಮಾಃ ।।

ಸೌತಿಯು ಹೇಳಿದನು: “ದ್ವಿಜೋತ್ತಮರೇ! ಹೀಗೆ ರಾಜಾ ಪಾರಿಕ್ಷಿತನು ಅಚಲನಾಗಿದ್ದುಕೊಂಡು ವೈಶಂಪಾಯನನು ಹೇಳಿದ ಈ ಹರಿವಂಶವನ್ನು ಕೇಳಿದನು.

19182041a ಏವಂ ಶೌನಕ ಸಂಕ್ಷೇಪಾದ್ವಿಸ್ತರೇಣ ತಥೈವ ಚ ।
19182041c ಪ್ರೋಕ್ತಾ ವೈ ಸರ್ವವಂಶಾಸ್ತೇ ಕಿಂ ಭೂಯಃ ಶ್ರೋತುಮಿಚ್ಛಸಿ ।।

ಶೌನಕ! ಹೀಗೆ ನಾನು ಸಂಕ್ಷೇಪವಾಗಿ ಮತ್ತು ವಿಸ್ತಾರವಾಗಿ ಸರ್ವ ವಂಶಗಳನ್ನೂ ವರ್ಣಿಸಿದ್ದೇನೆ. ಇನ್ನೂ ಏನನ್ನು ಕೇಳ ಬಯಸುತ್ತೀಯೆ?”

ಸಮಾಪ್ತಿ

ಇತಿ ಶ್ರೀಮಹಾಭಾರತೇ ಖಿಲೇಷು ಹರಿವಂಶೇ ವಿಷ್ಣುಪರ್ವಣಿ ಉಷಾಹರಣಸಮಾಪ್ತೌ ದ್ವಶೀತ್ಯಧಿಕಶತತಮೋಽಧ್ಯಾಯಃ ।।

ಸಮಾಪ್ತಮಿದಂ ವಿಷ್ಣುಪರ್ವಃ ।।