181: ದ್ವಾರಕಾಪ್ರತ್ಯಾಗಮನಂ

ಪ್ರವೇಶ

।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।

ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ

ಶ್ರೀ ಮಹಾಭಾರತ

ಖಿಲಭಾಗೇ ಹರಿವಂಶಃ

ವಿಷ್ಣು ಪರ್ವ

ಅಧ್ಯಾಯ 181

ಸಾರ

ನಾಗಪಾಶದಿಂದ ಅನಿರುದ್ಧನ ಬಿಡುಗಡೆ, ಉಷೆಯೊಂದಿಗೆ ಅವನ ವೀರ್ಯ ವಿವಾಹ ಮತ್ತು ಎಲ್ಲರೂ ದ್ವಾರಕೆಗೆ ಪ್ರಸ್ಥಾನಿಸಿದುದು (1-39); ಮಾರ್ಗದಲ್ಲಿ ಬಾಣನ ಗೋವುಗಳಿಗಾಗಿ ಕೃಷ್ಣನು ವರುಣನನ್ನು ಪರಾಜಯಗೊಳಿಸಿದುದು (40-104); ದ್ವಾರಕೆಯಲ್ಲಿ ಉತ್ಸವ (105-148).

19181001 ವೈಶಂಪಾಯನ ಉವಾಚ ।
19181001a ಏವಂ ವರಾನ್ಬಹೂನ್ಪ್ರಾಪ್ಯ ಬಾಣಃ ಪ್ರೀತಮನಾಭವತ್ ।
19181001c ಜಗಾಮ ಸಹ ರುದ್ರೇಣ ಮಹಾಕಾಲತ್ವಮಾಗತಃ ।।

ವೈಶಂಪಾಯನನು ಹೇಳಿದನು: “ಹೀಗೆ ಅನೇಕ ವರಗಳನ್ನು ಪಡೆದು ಬ್ರಾಣನು ಪ್ರೀತಮನಸ್ಕನಾದನು. ಮಹಾಕಾಲತ್ವವನ್ನು ಪಡೆದು ಅವನು ರುದ್ರನೊಂದಿಗೆ ಹೊರಟು ಹೋದನು.

19181002a ವಾಸುದೇವೋಽಪಿ ಬಹುಧಾ ನಾರದಂ ಪರ್ಯಪೃಚ್ಛತ ।
19181002c ಕ್ವಾನಿರುದ್ಧೋಽಸ್ತಿ ಭಗವನ್ಸಂಯತೋ ನಾಗಬಂಧನೈಃ ।।
19181003a ಶ್ರೋತುಮಿಚ್ಛಾಮಿ ತತ್ತ್ವೇನ ಸ್ನೇಹಕ್ಲಿನ್ನಂ ಹಿ ಮೇ ಮನಃ ।
19181003c ಅನಿರುದ್ಧೇ ಹೃತೇ ವೀರೇ ಕ್ಷುಭಿತಾ ದ್ವಾರಕಾ ಪುರೀ ।।

ವಾಸುದೇವನಾದರೋ ನಾರದನನ್ನು ಅನೇಕಬಾರಿ ಕೇಳಿದನು: “ಭಗವನ್! ಅನಿರುದ್ಧನು ಎಲ್ಲಿ ನಾಗಬಂಧನದಲ್ಲಿದ್ದಾನೆ? ಅದನ್ನು ತತ್ತ್ವತಃ ತಿಳಿಯಬಯಸುತ್ತೇನೆ. ನನ್ನ ಮನಸ್ಸು ಸ್ನೇಹದಿಂದ ವ್ಯಾಕುಲಗೊಳ್ಳುತ್ತಿದೆ. ಅನಿರುದ್ಧನ ಅಪಹರಣದಿಂದಾಗಿ ದ್ವಾರಕಾಪುರಿಯು ಕ್ಷೋಭೆಗೊಂಡಿದೆ.

19181004a ಶೀಘ್ರಂ ತಂ ಮೋಕ್ಷಯಿಷ್ಯಾಮೋ ಯದರ್ಥಂ ವಯಮಾಗತಾಃ ।
19181004c ಅದ್ಯ ತಂ ನಷ್ಟಶತ್ರುಂ ವೈ ದ್ರಷ್ಟುಮಿಚ್ಛಾಮಹೇ ವಯಮ್ ।।
19181005a ಸ ಪ್ರದೇಶಸ್ತು ಭಗವನ್ವಿದಿತಸ್ತವ ಸುವ್ರತ ।

ನಾವು ಇಲ್ಲಿಗೆ ಯಾವ ಉದ್ದೇಶದಿಂದ ಬಂದಿದ್ದೇವೋ ಅದರಂತೆ ಅವನನ್ನು ಶೀಘ್ರದಲ್ಲಿಯೇ ಮುಕ್ತಗೊಳಿಸೋಣ. ಇಂದು ಅವನ ಶತ್ರುವು ನಾಶವಾಗಿದ್ದಾನೆ. ನಾವು ಅವನನ್ನು ನೋಡಬೇಕು. ಭಗವನ್! ಸುವ್ರತ! ಅವನಿರುವ ಪ್ರದೇಶವು ನಿನಗೆ ತಿಳಿದಿದೆ.”

19181005c ಏವಮುಕ್ತಸ್ತು ಕೃಷ್ಣೇನ ನಾರದಃ ಪ್ರತ್ಯಭಾಷತ ।।
19181006a ಕನ್ಯಾಪುರೇ ಕುಮಾರೋಽಸೌ ಬದ್ಧೋ ನಾಗೈಶ್ಚ ಮಾಧವ ।

ಕೃಷ್ಣನು ಹೀಗೆ ಹೇಳಲು ನಾರದನು ಉತ್ತರಿಸಿದನು: “ಮಾಧವ! ಕನ್ಯೆಯ ಅಂತಃಪುರದಲ್ಲಿ ಕುಮಾರ ಅನಿರುದ್ಧನು ನಾಗಪಾಶಗಳಿಂದ ಬಂಧಿತನಾಗಿದ್ದಾನೆ.”

19181006c ಏತಸ್ಮಿನ್ನಂತರೇ ಶೀಘ್ರಂ ಚಿತ್ರಲೇಖಾ ಹ್ಯುಪಸ್ಥಿತಾ ।।
19181007a ಬಾಣಸ್ಯೋತ್ತಮಶರ್ವಸ್ಯ ದೈತ್ಯೇಂದ್ರಸ್ಯ ಮಹಾತ್ಮನಃ ।
19181007c ಇದಮಂತಃಪುರಂ ದೇವ ಪ್ರವಿಶಸ್ವ ಯಥಾಸುಖಮ್ ।।

ಈ ಮಧ್ಯದಲ್ಲಿ ಚಿತ್ರಲೇಖೆಯು ಶೀಘ್ರವಾಗಿ ಅಲ್ಲಿ ಉಪಸ್ಥಿತಳಾಗಿ ಹೇಳಿದಳು: “ದೇವ! ಇದು ಶರ್ವನ ಭಕ್ತ ಮಹಾತ್ಮ ದೈತ್ಯೇಂದ್ರ ಬಾಣನ ಅಂತಃಪುರವು. ಯಥಾಸುಖವಾಗಿ ಇದನ್ನು ಪ್ರವೇಶಿಸು.”

19181008a ತತಃ ಪ್ರವಿಷ್ಟಾಸ್ತೇ ಸರ್ವೇ ಹ್ಯನಿರುದ್ಧಸ್ಯ ಮೋಕ್ಷಣೇ ।
19181008c ಬಲಃ ಸುಪರ್ಣಃ ಕೃಷ್ಣಸ್ತು ಪ್ರದ್ಯುಮ್ನೋ ನಾರದಸ್ತಥಾ ।।

ಆಗ ಅನಿರುದ್ಧನನ್ನು ಬಿಡುಗಡೆಗೊಳಿಸಲು ಅವರೆಲ್ಲರೂ – ಬಲರಾಮ, ಸುಪರ್ಣ, ಕೃಷ್ಣ, ಪ್ರದ್ಯುಮ್ನ ಮತ್ತು ನಾರದರು – ಅಂತಃಪುರವನ್ನು ಪ್ರವೇಶಿಸಿದರು.

19181009a ತತೋ ದೃಷ್ಟ್ವೈವ ಗರುಡಂ ಯೇಽನಿರುದ್ಧಶರೀರಗಾಃ ।
19181009c ಶರರೂಪಾ ಮಹಾಸರ್ಪಾ ವೇಷ್ಟಯಿತ್ವಾ ತನುಂ ಸ್ಥಿತಾಃ ।।
19181010a ತೇ ಸರ್ವೇ ಸಹಸಾ ದೇಹಾತ್ತಸ್ಯ ನಿಃಸೃತ್ಯ ಭೋಗಿನಃ ।
19181010c ಕ್ಷಿತಿಂ ಸಮಭಿವರ್ತಿತ್ವಾ ಪ್ರಕೃತ್ಯಾವಸ್ಥಿತಾಃ ಶರಾಃ ।।

ಗರುಡನನ್ನು ಕಂಡೊಡನೆಯೇ ಬಾಣರೂಪಿಗಳಾಗಿ ಅನಿರುದ್ಧನ ಶರೀರವನ್ನು ಬಂಧಿಸಿದ್ದ ಮಹಾಸರ್ಪಗಳು ಎಲ್ಲವೂ ಅವನ ದೇಹದಿಂದ ಹೊರಟು ನೆಲದ ಮೇಲೆ ಬಿದ್ದವು ಮತ್ತು ಸಾಧಾರಣ ಬಾಣಗಳ ರೂಪದಲ್ಲಿ ಬದಲಾದವು.

19181011a ದೃಷ್ಟಃ ಸ್ಪೃಷ್ಟಶ್ಚ ಕೃಷ್ಣೇನ ಸೋಽನಿರುದ್ಧೋ ಮಹಾಯಶಾಃ ।
19181011c ಸ್ಥಿತಃ ಪ್ರೀತಮನಾ ಭೂತ್ವಾ ಪ್ರಾಂಜಲಿರ್ವಾಕ್ಯಮಬ್ರವೀತ್ ।।

ಕೃಷ್ಣನ ದರ್ಶನ ಮತ್ತು ಸ್ಪರ್ಶದಿಂದ ಪ್ರೀತಮನಸ್ಕನಾದ ಮಹಾಯಶಸ್ವೀ ಅನಿರುದ್ಧನು ನಿಂತು ಕೈಮುಗಿದು ಈ ಮಾತನ್ನಾಡಿದನು.

19181012 ಅನಿರುದ್ಧ ಉವಾಚ ।
19181012a ದೇವದೇವ ಸದಾ ಯುದ್ಧೇ ಜೇತಾ ತ್ವಮಸಿ ಕೇಶವ ।
19181012c ನ ಶಕ್ತಃ ಪ್ರಮುಖೇ ಸ್ಥಾತುಂ ಸಾಕ್ಷಾದಪಿ ಶತಕ್ರತುಃ ।।

ಅನಿರುದ್ಧನು ಹೇಳಿದನು: “ದೇವದೇವ! ಕೇಶವ! ನೀನು ಸದಾ ಯುದ್ಧದಲ್ಲಿ ವಿಜಯಿಯು. ನಿನ್ನ ಎದಿರು ನಿಲ್ಲಲು ಸಾಕ್ಷಾತ್ ಶತಕ್ರತುವೂ ಶಕ್ತನಲ್ಲ.”

19181013 ಭಗವಾನುವಾಚ ।
19181013a ಆರೋಹ ಗರುಡಂ ತೂರ್ಣಂ ಗಚ್ಛಾಮ ದ್ವಾರಕಾಂ ಪುರೀಮ್ ।
19181013c ಏವಮುಕ್ತೋಽನಿರುದ್ಧಸ್ತು ಉಷಯಾ ಸಹ ಕನ್ಯಯಾ ।
19181013e ಸ್ಥಿತಃ ಪ್ರೀತಮನಾ ಭೂತ್ವಾ ಜ್ಞಾತ್ವಾ ಬಾಣಂ ಜಿತಂ ರಣೇ ।।

ಭಗವಂತನು ಹೇಳಿದನು: “ಬೇಗನೇ ಗರುಡನನ್ನೇರು. ದ್ವಾರಕಾ ಪುರಿಗೆ ಹೋಗೋಣ!” ಇದನ್ನು ಕೇಳಿ, ರಣದಲ್ಲಿ ಬಾಣನು ಪರಾಜಿತನಾದುದನ್ನು ತಿಳಿದು ಅನಿರುದ್ಧನಾದರೋ ಕನ್ಯೆ ಉಷೆಯೊಂದಿಗೆ ಪ್ರೀತಮನಸ್ಕನಾದನು.

19181013g ತತೋ ಮಹಾಬಲಂ ದೇವಂ ಬಲಭದ್ರಂ ಯಶಸ್ವಿನಮ್ ।
19181013i ಅಭಿವಾದಯತೇ ಹೃಷ್ಟಃ ಸೋಽನಿರುದ್ಧೋ ಮಹಾಮನಾಃ ।।

ಆಗ ಮಹಾಮನಸ್ವೀ ಅನಿರುದ್ಧನು ಹೃಷ್ಟನಾಗಿ ಮಹಾಬಲ ಯಶಸ್ವೀ ದೇವ ಬಲಭದ್ರನನ್ನು ಅಭಿವಂದಿಸಿದನು.

19181014a ಮಾಧವಂ ಚ ಮಹಾತ್ಮಾನಮಭಿವಾದ್ಯ ಕೃತಾಂಜಲಿಃ ।
19181014c ಖಗೋತ್ತಮಂ ಮಹಾವೀರ್ಯಂ ಸುಪರ್ಣಮಭಿವಾದ್ಯ ಚ ।।
19181015a ತತೋ ಮಕರಕೇತುಂ ಚ ಚಿತ್ರಬಾಣಧರಂ ಪ್ರಭುಮ್ ।
19181015c ಪಿತರಂ ಸೋಽಭ್ಯುಪಾಗಮ್ಯ ಪ್ರದ್ಯುಮ್ನಮಭಿವಾದಯತ್ ।।

ಮಹಾತ್ಮ ಮಾಧವನನ್ನೂ ಕೈಮುಗಿದು ನಮಸ್ಕರಿಸಿದನು. ಮಹಾವೀರ್ಯ ಖಗೋತ್ತಮ ಸುಪರ್ಣನನ್ನೂ ಅಭಿವಂದಿಸಿದನು. ಅನಂತರ ಮಕರಕೇತು ಚಿತ್ರಬಾಣಧರ ಪ್ರಭು ತಂದೆ ಪ್ರದ್ಯುಮ್ನನ ಬಳಿಸಾರಿ ಅವನನ್ನು ಅಭಿವಂದಿಸಿದನು.

19181016a ಸಖೀಗಣವೃತಾ ಚೈವ ಸಾ ಚೋಷಾ ಭವನೇ ಸ್ಥಿತಾ ।
19181016c ಬಲಂ ಚಾತಿಬಲಂ ಚೈವ ವಾಸುದೇವಂ ಸುದುರ್ಜಯಮ್ ।।
19181017a ಅಸಂಖ್ಯಾತಗತಿಂ ಚೈವ ಸುಪರ್ಣಮಭಿವಾದ್ಯ ಚ ।
19181017c ಪುಷ್ಪಬಾಣಧರಂ ಚೈವ ಲಜ್ಜಮಾನಾಭ್ಯವಾದಯತ್ ।।

ಭವನದಲ್ಲಿದ್ದ ಉಷೆಯು ಸಖೀಗಣಗಳಿಂದ ಆವೃತಳಾಗಿ ಅತಿಬಲ ಬಲರಾಮನನ್ನೂ, ಸುದುರ್ಜಯ ವಾಸುದೇವನನ್ನು, ಅಸಂಖ್ಯಾತಗತಿ ಸುಪರ್ಣನನ್ನೂ ಅಭಿವಂದಿಸಿ, ಲಜ್ಜೆಯಿಂದ ಪುಷ್ಪಬಾಣಧರ ಪ್ರದ್ಯುಮ್ನನನನ್ನೂ ವಂದಿಸಿದಳು.

19181018a ತತಃ ಶಕ್ರಸ್ಯ ವಚನಾನ್ನಾರದಃ ಪರಮದ್ಯುತಿಃ ।
19181018c ವಾಸುದೇವಸಮೀಪಂ ಸ ಪ್ರಹಸನ್ಪುನರಾಗತಃ ।।

ಆಗ ಶಕ್ರನ ಮಾತಿನಂತೆ ಪರಮದ್ಯುತಿ ನಾರದನು ನಗುತ್ತಾ ಪುನಃ ವಾಸುದೇವನ ಸಮೀಪ ಬಂದನು.

19181019a ವರ್ಧಾಪಯತಿ ತಂ ದೇವಂ ಗೋವಿಂದಂ ಶತ್ರುಸೂದನಮ್ ।
19181019c ದಿಷ್ಟ್ಯಾ ವರ್ಧಸಿ ಗೋವಿಂದ ಅನಿರುದ್ಧಸಮಾಗಮಾತ್ ।।

ಶತ್ರುಸೂದನ ದೇವ ಗೋವಿಂದನಿಗೆ ಅಭಿನಂದನೆಗಳನ್ನು ನೀಡುತ್ತಾ ಹೇಳಿದನು: “ಗೋವಿಂದ! ಒಳ್ಳೆಯದಾಯಿತು! ಅನಿರುದ್ಧನ ಸಮಾಗಮದಿಂದ ಅಭ್ಯುದಯವನ್ನು ಪಡೆದಿರುವೆ!”

19181020a ತತೋಽನಿರುದ್ಧಸಹಿತಾ ನಾರದಂ ಪ್ರಣತಾಃ ಸ್ಥಿತಾಃ ।
19181020c ಆಶೀರ್ಭಿರ್ವರ್ದ್ಧಯಿತ್ವಾ ಚ ದೇವರ್ಷಿಃ ಕೃಷ್ಣಮಬ್ರವೀತ್ ।।

ಆಗ ಅನಿರುದ್ಧನೊಡನೆ ಎಲ್ಲರೂ ನಾರದನನ್ನು ನಮಸ್ಕರಿಸಿ ನಿಂತರು. ಅವರನ್ನು ಆಶೀರ್ವದಿಸುತ್ತಾ ಮತ್ತು ಅಭಿನಂದಿಸುತ್ತಾ ದೇವರ್ಷಿಯು ಕೃಷ್ಣನಿಗೆ ಹೇಳಿದನು:

19181021a ಅನಿರುದ್ಧಸ್ಯ ವೀರ್ಯಾಖ್ಯೋ ವಿವಾಹಃ ಕ್ರಿಯತಾಂ ವಿಭೋ ।
19181021c ಜಂಬೂಲಮಾಲಿಕಾಂ ದ್ರಷ್ಟುಂ ಶ್ರದ್ಧಾ ಹಿ ಮಮ ಜಾಯತೇ ।।

“ವಿಭೋ! ಅನಿರುದ್ಧನಿಗೆ ವೀರ್ಯ1 ಎಂಬ ಹೆಸರಿನ ವಿವಾಹವನ್ನು ಮಾಡಬೇಕು. ಜಂಬೂಲ2ಮಾಲಿಕೆಯನ್ನು ನೋಡಲು ನನಗೆ ಇಚ್ಛೆಯುಂಟಾಗಿದೆ.”

19181022a ತತಃ ಪ್ರಹಸಿತಾಃ ಸರ್ವೇ ನಾರದಸ್ಯ ವಚಃಶ್ರವಾತ್ ।
19181022c ಕೃಷ್ಣಃ ಪ್ರೋವಾಚ ಭಗವನ್ ಕ್ರಿಯತಾಮಾಶು ಮಾ ಚಿರಮ್ ।।

ನಾರದನ ಆ ಮಾತನ್ನು ಕೇಳಿ ಎಲ್ಲರೂ ನಕ್ಕರು. ಕೃಷ್ಣನು “ಭಗವನ್! ಇದನ್ನು ನೆರವೇರಿಸಬೇಕು. ತಡಮಾಡಬಾರದು” ಎಂದನು.

19181023a ಏತಸ್ಮಿನ್ನಂತರೇ ತಾತ ಕುಂಭಾಂಡಃ ಸಮುಪಸ್ಥಿತಃ ।
19181023c ವೈವಾಹಿಕಾಂಸ್ತು ಸಂಭಾರಾನ್ಗೃಹ್ಯ ಕೃಷ್ಣಂ ನಮಸ್ಯ ತು ।।

ಈ ಮಧ್ಯದಲ್ಲಿ ವೈವಾಹಿಕ ಸಾಮಗ್ರಿಗಳನ್ನು ಸಂಗ್ರಹಿಸಿ ಕುಂಭಾಂಡನು ಅಲ್ಲಿ ಉಪಸ್ಥಿತನಾಗಿ ಕೃಷ್ಣನನ್ನು ನಮಸ್ಕರಿಸಿದನು.

19181024 ಕುಂಭಾಂಡ ಉವಾಚ ।
19181024a ಕೃಷ್ಣ ಕೃಷ್ಣ ಮಹಾಬಾಹೋ ಭವ ತ್ವಮಭಯಪ್ರದಃ ।
19181024c ಶರಣಾಗತೋಽಸ್ಮಿ ದೇವೇಶ ಪ್ರಸೀದೈಷೋಽಂಜಲಿಸ್ತವ ।।

ಕುಂಭಾಂಡನು ಹೇಳಿದನು: “ಕೃಷ್ಣ! ಕೃಷ್ಣ! ಮಹಾಬಾಹೋ! ದೇವೇಶ! ಶರಣಾಗತನಾಗಿದ್ದೇನೆ. ಕೈಜೋಡಿಸಿದ್ದೇನೆ. ಪ್ರಸನ್ನನಾಗು!”

19181025a ನಾರದಸ್ಯ ವಚಃ ಶ್ರುತ್ವಾ ಸರ್ವಂ ಪ್ರಾಗೇವ ಚಾಚ್ಯುತಃ ।
19181025c ಅಭಯಂ ಯಚ್ಛತೇ ತಸ್ಮೈ ಕುಂಭಾಂಡಾಯ ಮಹಾತ್ಮನೇ ।।

ನಾರದನಿಂದ ಅವನ ಕುರಿತು ಮೊದಲೇ ಎಲ್ಲವನ್ನು ಕೇಳಿದ್ದ ಅಚ್ಯುತನು ಬೇಡುತ್ತಿದ್ದ ಮಹಾತ್ಮ ಕುಂಭಾಂಡನಿಗೆ ಅಭಯವನ್ನು ನೀಡಿದನು.

19181026a ಕುಂಭಾಂಡ ಮಂತ್ರಿಣಾಂ ಶ್ರೇಷ್ಠ ಪ್ರೀತೋಽಸ್ಮಿ ತವ ಸುವ್ರತ ।
19181026c ಸುಕೃತಂ ತೇ ವಿಜಾನಾಮಿ ರಾಷ್ಟ್ರಿಕೋಽಸ್ತು ಭವಾನಿಹ ।
19181026e ಸಜ್ಞಾತಿಪಕ್ಷಃ ಸುಸುಖೀ ನಿವೃತ್ತೋಽಸ್ತು ಭವಾನಿಹ ।।
19181027a ರಾಜ್ಯಂ ಚ ತೇ ಮಯಾ ದತ್ತಂ ಚಿರಂ ಜೀವ ಮಮಾಶ್ರಯಾತ್ ।

“ಕುಂಭಾಂಡ! ಮಂತ್ರಿಗಳಲ್ಲಿ ಶ್ರೇಷ್ಠ! ಸುವ್ರತ! ಪ್ರೀತನಾಗಿದ್ದೇನೆ. ನಿನ್ನ ಸುಕೃತಗಳನ್ನು ತಿಳಿದಿದ್ದೇನೆ. ಇಲ್ಲಿಯ ರಾಷ್ಟ್ರಪತಿಯಾಗು. ಸ್ವಜಾತಿ-ಪಕ್ಷದವರೊಡನೆ ಇಲ್ಲಿ ಸುಖಿಯಾಗಿರು. ನಿನಗೆ ರಾಜ್ಯವನ್ನು ನೀಡುತ್ತಿದ್ದೇನೆ. ನನ್ನ ಆಶ್ರಯದಲ್ಲಿ ಬಹುಕಾಲ ಬಾಳು.”

19181027c ಏವಂ ದತ್ತ್ವಾ ರಾಜ್ಯಮಸ್ಮೈ ಕುಂಭಾಂಡಾಯ ಮಹಾತ್ಮನೇ ।।
19181028a ವಿವಾಹಮಕರೋತ್ತಸ್ಯಾನಿರುದ್ಧಸ್ಯ ಜನಾರ್ದನಃ ।
19181028c ತತಸ್ತು ಭಗವಾನ್ವಹ್ನಿಸ್ತತ್ರ ಸ್ವಯಮುಪಸ್ಥಿತಃ ।।

ಹೀಗೆ ಮಹಾತ್ಮ ಕುಂಭಾಂಡನಿಗೆ ಆ ರಾಜ್ಯವನ್ನು ನೀಡಿ ಜನಾರ್ದನನು ಅನಿರುದ್ಧನ ವಿವಾಹವನ್ನು ನೆರವೇರಿಸಿದನು. ಆಗ ಅಲ್ಲಿ ಭಗವಾನ್ ಅಗ್ನಿಯು ಸ್ವಯಂ ಉಪಸ್ಥಿತನಾಗಿದ್ದನು.

19181029a ಸ ವಿವಾಹೋಽನಿರುದ್ಧಸ್ಯ ನಕ್ಷತ್ರೇ ಚ ಶುಭೇಽಭವತ್ ।
19181029c ತತೋಽಪ್ಸರೋಗಣಶ್ಚೈವ ಕೌತುಕಂ ಕರ್ತುಮುದ್ಯತಃ ।।

ಅನಿರುದ್ಧನ ವಿವಾಹವು ಶುಭ ನಕ್ಷತ್ರದಲ್ಲಿ ಆಯಿತು. ಆಗ ಮಾಂಗಲಿಕ ಕ್ರಿಯೆಯಲ್ಲಿ ಅಪ್ಸರಗಣಗಳು ಉಪಸ್ಥಿತರಿದ್ದರು.

19181030a ಸ್ನಾತಸ್ತ್ವಲಂಕೃತಸ್ತತ್ರ ಸೋಽನಿರುದ್ಧಃ ಸ್ವಭಾರ್ಯಯಾ ।
19181030c ತತಃ ಸ್ನಿಗ್ಧೈಃ ಶುಭೈರ್ವಾಕ್ಯೈರ್ಗಂಧರ್ವಾಶ್ಚ ಜಗುಸ್ತದಾ ।।
19181031a ನೃತ್ಯಂತ್ಯಪ್ಸರಸಶ್ಚೈವ ವಿವಾಹಮುಪಶೋಭಯನ್ ।

ಭಾರ್ಯೆಯೊಡನೆ ಅನಿರುದ್ಧನು ಸ್ನಾನಗೈದು ಅಲಂಕೃತನಾದನು. ಅನಂತರ ಮಂಗಲಸೂಚಕ ಸ್ನಿಗ್ಧ ವಚನಗಳಿಂದ ಗಂಧರ್ವರು ಹಾಡಿದರು ಮತ್ತು ಅಪ್ಸರೆಯರು ನರ್ತಿಸುತ್ತಾ ಆ ವಿವಾಹದ ಶೋಭೆಯನ್ನು ಹೆಚ್ಚಿಸಿದರು.

19181031c ತತೋ ನಿರ್ವರ್ತಯಿತ್ವಾ ತು ವಿವಾಹಂ ಶತ್ರುಸೂದನಃ ।।
19181032a ಅನಿರುದ್ಧಸ್ಯ ಸುಪ್ರಜ್ಞಃ ಸರ್ವೈರ್ದೇವಗಣೈರ್ವೃತಃ ।
19181032c ಆಮಂತ್ರ್ಯ ವರದಂ ತತ್ರ ರುದ್ರಂ ದೇವನಮಸ್ಕೃತಮ್ ।।
19181033a ಚಕಾರ ಗಮನೇ ಬುದ್ಧಿಂ ಕೃಷ್ಣಃ ಪರಪುರಂಜಯಃ ।

ಅನಂತರ ಅನಿರುದ್ಧನ ವಿವಾಹವನ್ನು ಪೂರೈಸಿ ಸರ್ವ ದೇವಗಣಗಳಿಂದ ಆವೃತನಾಗಿದ್ದ ಶತ್ರುಸೂದನ ಸುಪ್ರಜ್ಞ ಪರಪುರಂಜಯ ಕೃಷ್ಣನು ವರದ ದೇವನಮಸ್ಕೃತ ರುದ್ರನ ಅಪ್ಪಣೆಯನ್ನು ಪಡೆದು ಹೊರಡಲು ನಿಶ್ಚಯಿಸಿದನು.

19181033c ದ್ವಾರಕಾಭಿಮುಖಂ ಕೃಷ್ಣಂ ಜ್ಞಾತ್ವಾ ಶತ್ರುನಿಷೂದನಮ್ ।।
19181034a ಕುಂಭಾಂಡೋ ವಚನಂ ಪ್ರಾಹ ಪ್ರಾಂಜಲಿರ್ಮಧುಸೂದನಮ್ ।

ಶತ್ರುನಿಷೂದನ ಕೃಷ್ಣನು ದ್ವಾರಕಾಭಿಮುಖನಾಗಿ ಹೊರಡುತ್ತಿದ್ದನ್ನು ತಿಳಿದ ಕುಂಭಾಂಡನು ಕೈಮುಗಿದು ಮಧುಸೂದನನಿಗೆ ಹೇಳಿದನು:

19181034c ಬಾಣಸ್ಯ ಗಾವಸ್ತಿಷ್ಠಂತಿ ಹಸ್ತೇ ತು ವರುಣಸ್ಯ ವೈ ।।
19181035a ಯಾಸಾಮಮೃತಕಲ್ಪಂ ವೈ ಕ್ಷೀರಂ ಕ್ಷರತಿ ಮಾಧವ ।
19181035c ತತ್ಪೀತ್ವಾತಿಬಲಶ್ಚೈವ ನರೋ ಭವತಿ ದುರ್ಜಯಃ ।।

“ಮಾಧವ! ಬಾಣನ ಗೋವುಗಳು ವರುಣನ ವಶದಲ್ಲಿವೆ. ಆ ಗೋವುಗಳಿಂದ ಅಮೃತಕಲ್ಪ ಕ್ಷೀರವು ಹರಿಯುತ್ತದೆ. ಅದನ್ನು ಕುಡಿದ ನರನು ಅತಿಬಲನೂ ದುರ್ಜಯನೂ ಆಗುತ್ತಾನೆ.”

19181036a ಕುಂಭಾಡೇನೈವಮಾಖ್ಯಾತೇ ಹರಿಃ ಪ್ರೀತಮನಾಸ್ತದಾ ।
19181036c ಗಮನಾಯ ಮತಿಂ ಚಕ್ರೇ ಗಂತವ್ಯಮಿತಿ ನಿಶ್ಚಯಮ್ ।।

ಕುಂಭಾಂಡನು ಹೀಗೆ ಹೇಳಲು ಹರಿಯು ಪ್ರೀತಮನಸ್ಕನಾದನು. ಅವನು ಹೋಗಲು ದೃಢನಿಶ್ಚಯವನ್ನು ಮಾಡಿದನು.

19181037a ತತಸ್ತು ಭಗವಾನ್ಬ್ರಹ್ಮಾ ವರ್ಧಾಪ್ಯ ಸ ತು ಕೇಶವಮ್ ।
19181037c ಜಗಾಮ ಬ್ರಹ್ಮಲೋಕಂ ಸ ವೃತಃ ಸ್ವಭವನಾಲಯೈಃ ।।

ಅನಂತರ ಭಗವಾನ್ ಬ್ರಹ್ಮನು ಕೇಶವನನ್ನು ಅಭಿನಂದಿಸಿ ಬ್ರಹ್ಮಲೋಕವಾಸಿಗಳೊಂದಿಗೆ ಆವೃತನಾಗಿ ಬ್ರಹ್ಮಲೋಕಕ್ಕೆ ಹೋದನು.

19181038a ಇಂದ್ರೋ ಮರುದ್ಗಣಯುತೋ ದ್ವಾರಕಾಭಿಮುಖೋ ಯಯೌ ।
19181038c ಯತಃ ಕೃಷ್ಣಸ್ತತಃ ಸರ್ವೇ ಗಚ್ಛಂತಿ ಜಯಕಾಂಕ್ಷಿಣಃ ।।

ಮರುದ್ಗಣಗಳಿಂದ ಕೂಡಿದವನಾಗಿ ಇಂದ್ರನು ದ್ವಾರಕಾಭಿಮುಖವಾಗಿ ಹೋದನು. ಅವರೆಲ್ಲರೂ ಜಯಕಾಂಕ್ಷೀ ಕೃಷ್ಣನು ಎಲ್ಲಿಗೆ ಹೋಗುತ್ತಿದ್ದನೋ ಅಲ್ಲಿಗೇ ಹೋಗುತ್ತಿದ್ದರು.

19181039a ವಾಹನೇನ ಮಯೂರೇಣ ಸಖೀಭಿಃ ಪರಿವಾರಿತಾ ।
19181039c ದ್ವಾರಕಾಭಿಮುಖೀ ಹ್ಯೂಷಾ ದೇವ್ಯಾ ಪ್ರಸ್ಥಾಪಿತಾ ಯಯೌ ।

ದೇವಿ ಪಾರ್ವತಿಯಿಂದ ಬೀಳ್ಕೊಂಡ ಉಷೆಯು ಸಖಿಗಳಿಂದ ಪರಿವಾರಿತಳಾಗಿ ಮಯೂರವಾಹನವನ್ನೇರಿ ದ್ವಾರಕಾಭಿಮುಖವಾಗಿ ಹೋದಳು.

19181039e ತತೋ ಬಲಶ್ಚ ಕೃಷ್ಣಶ್ಚ ಪ್ರದ್ಯುಮ್ನಶ್ಚ ಮಹಾಬಲಃ ।। 19181040a ಆರೂಢವಂತೋ ಗರುಡಮನಿರುದ್ಧಶ್ಚ ವೀರ್ಯವಾನ್ ।

ಅನಂತರ ಬಲರಾಮ, ಕೃಷ್ಣ, ಮಹಾಬಲ ಪ್ರದ್ಯುಮ್ನ, ಮತ್ತು ವೀರ್ಯವಾನ್ ಅನಿರುದ್ಧರು ಗರುಡನನ್ನೇರಿದರು.

19181040c ಪ್ರಸ್ಥಿತಶ್ಚ ಸ ತೇಜಸ್ವೀ ಗರುಡಃ ಪತತಾಂ ವರಃ ।।
19181041a ಉನ್ಮೂಲಯಂಸ್ತರುಗಣಾನ್ಕಂಪಯಂಶ್ಚಾಪಿ ಮೇದಿನೀಮ್ ।

ಪಕ್ಷಿಶ್ರೇಷ್ಠ ತೇಜಸ್ವೀ ಗರುಡನು ವೃಕ್ಷಗಣಗಳನ್ನು ಕೀಳುತ್ತಾ ಮತ್ತು ಮೇದಿನಿಯನ್ನು ಕಂಪಿಸುತ್ತಾ ಪ್ರಸ್ಥಾನಗೈದನು.

19181041c ಆಕುಲಾಸ್ಚ ದಿಶಃ ಸರ್ವಾ ರೇಣುಧ್ವಸ್ತಮಿವಾಂಬರಮ್ ।।
19181042a ಗರುಡೇ ಸಂಪ್ರಯಾತೇಽಭೂನ್ಮಂದರಶ್ಮಿರ್ದಿವಾಕರಃ ।

ಗರುಡನು ಹೊರಡಲು ಸರ್ವ ದಿಕ್ಕುಗಳೂ ವ್ಯಾಕುಲಗೊಂಡವು. ಆಕಾಶದಲ್ಲಿ ಧೂಳು ತುಂಬಿಕೊಂಡಿತು. ಮತ್ತು ದಿವಾಕರನ ರಶ್ಮಿಗಳು ಮಂದವಾದವು.

19181042c ತತಸ್ತೇ ದೀರ್ಘಮಧ್ವಾನಂ ಪ್ರಯಯುಃ ಪುರುಷರ್ಷಭಾಃ ।।
19181043a ಆರುಹ್ಯ ಗರುಡಂ ಸರ್ವೇ ಜಿತ್ವಾ ಬಾಣಂ ಮಹೌಜಸಮ್ ।

ಮಹೌಜಸ ಬಾಣನನ್ನು ಗೆದ್ದು ಆ ಎಲ್ಲ ಪುರುಷರ್ಷಭರೂ ಗರುಡನನ್ನೇರಿ ದೀರ್ಘ ಮಾರ್ಗದಲ್ಲಿ ಪ್ರಯಾಣಿಸಿದರು.

19181043c ತತೋಽಂಬರತಲಸ್ಥಾಸ್ತೇ ವಾರುಣೀಂ ದಿಶಮಾಸ್ಥಿತಾಃ ।।
19181044a ಅಪಶ್ಯಂತ ಮಹಾತ್ಮಾನೋ ಗಾವೋ ದಿವ್ಯಪಯಃಪ್ರದಾಃ ।
19181044c ವೇಲಾವನವಿಚಾರಿಣ್ಯೋ ನಾನಾವರ್ಣಾಃ ಸಹಸ್ರಶಃ ।।

ಅಂಬರತಲವನ್ನು ತಲುಪಿ ಪಶ್ಚಿಮದಿಶೆಯಲ್ಲಿ ಪ್ರಯಾಣಿಸುತ್ತಿರಲು ಆ ಮಹಾತ್ಮರು ದಿವ್ಯಕ್ಷೀರವನ್ನು ನೀಡುವ ನಾನಾವರ್ಣದ ಸಹಸ್ರಾರು ಗೋವುಗಳು ಸಮುದ್ರತೀರದ ವನದಲ್ಲಿ ವಿಚರಿಸುತ್ತಿರುವುದನ್ನು ಕಂಡರು.

19181045a ಅವಜ್ಞಾಯ ತದಾ ರೂಪಂ ಕುಂಭಾಂಡವಚನಾಶ್ರಯಾತ್ ।
19181045c ಕೃಷ್ಣಃ ಪ್ರಹರತಾಂ ಶ್ರೇಷ್ಠಸ್ತತ್ತ್ವತೋಽರ್ಥವಿಶಾರದಃ ।।
19181046a ನಿಶಮ್ಯ ಬಾಣಗಾವಸ್ತು ತಾಸು ಚಕ್ರೇ ಮನಸ್ತದಾ ।
19181046c ಆಸ್ಥಿತೋ ಗರುಡಂ ಪ್ರಾಹ ಸ ತು ಲೋಕಾದಿರವ್ಯಯಃ ।।

ಕುಂಭಾಂಢನ ವಚನವನ್ನು ಜ್ಞಾಪಿಸಿಕೊಂಡು ಆ ಗೋವುಗಳ ಸ್ವರೂಪವನ್ನು ಗುರುತಿಸಿ ಪ್ರಹಾರಮಾಡುವವರಲ್ಲಿ ಶ್ರೇಷ್ಠ, ತಾತ್ವಿಕ ಅರ್ಥನೀತಿಯ ವಿಶಾರದ ಕೃಷ್ಣನು ಬಾಣನ ಆ ಗೋವುಗಳನ್ನು ಕೊಂಡೊಯ್ಯಲು ಮನಸ್ಸುಮಾಡಿದನು. ಲೋಕದ ಆದಿಕಾರಣ ಅವ್ಯಯ ಕೃಷ್ಣನು ಕುಳಿತಲ್ಲಿಂದಲೇ ಗರುಡನಿಗೆ ಹೇಳಿದನು.

19181047 ಶೀಕೃಷ್ಣ ಉವಾಚ ।
19181047a ವೈನತೇಯ ಪ್ರಯಾಹಿ ತ್ವಂ ಯತ್ರ ಬಾಣಸ್ಯ ಗೋಧನಮ್ ।
19181047c ಯಾಸಾಂ ಪೀತ್ವಾ ಕಿಲ ಕ್ಷೀರಮಮೃತತ್ವಮವಾಪ್ನುಯಾತ್ ।।

ಶ್ರೀಕೃಷ್ಣನು ಹೇಳಿದನು: “ವೈನತೇಯ! ಬಾಣನ ಗೋಧನವಿರುವಲ್ಲಿಗೇ ಹೋಗು. ಈ ಗೋವುಗಳ ಕ್ಷೀರವನ್ನು ಕುಡಿತು ಅಮೃತತ್ವವನ್ನು ಪಡೆಯುತ್ತಾರಲ್ಲವೇ?

19181048a ಆಹ ಮಾಂ ಸತ್ಯಭಾಮಾ ಚ ಬಾಣಗಾವೋ ಮಮಾನಯ ।
19181048c ಯಾಸಂ ಪೀತ್ವಾ ಕಿಲ ಕ್ಷೀರಂ ನ ಜೀರ್ಯಂತಿ ಮಹಾಸುರಾಃ ।।

ಸತ್ಯಭಾಮೆಯು ನನ್ನಲ್ಲಿ ಹೇಳಿದ್ದಳು: “ಬಾಣನ ಗೋವುಗಳನ್ನು ನನಗೆ ತಂದುಕೊಡು. ಅದರ ಹಾಲನ್ನು ಕುಡಿದು ಮಹಾಸುರರು ವೃದ್ಧರಾಗುವುದಿಲ್ಲ!

19181049a ವಿಜರಾಶ್ಚ ಜರಾಂ ತ್ಯಕ್ತ್ವಾ ಭವಂತಿ ಕಿಲ ಜಂತವಃ ।
19181049c ತಾ ಆನಯಸ್ವ ಭದ್ರಂ ತೇ ಯದಿ ಧರ್ಮೋ ನ ಲುಪ್ಯತೇ ।।
19181050a ಅಥ ವಾ ಕಾರ್ಯಲೋಪೋ ವೈ ಮೈವ ತಾಸು ಮನಃ ಕೃಥಾಃ ।
19181050c ಇತಿ ಮಾಮಬ್ರವೀತ್ಸತ್ಯಾ ತಾಶ್ಚೈತಾ ವಿದಿತಾ ಮಮ ।।

ವೃದ್ಧಜಂತುಗಳೂ ವೃದ್ಧಾಪ್ಯವನ್ನು ತೊರೆದು ಅಜರರಾಗುತ್ತಾರೆ. ನಿನಗೆ ಮಂಗಳವಾಗಲಿ! ಧರ್ಮದ ಲೋಪವಾಗದೇ ಇದ್ದರೆ ಆ ಗೋವುಗಳನ್ನು ತಾ! ಅಥವಾ ಕಾರ್ಯಲೋಪವಾಗುತ್ತದೆಯೆಂದಾದರೆ ಅವುಗಳ ಕುರಿತು ಯೋಚಿಸಬೇಡ.” ಸತ್ಯಭಾಮೆಯು ನನಗೆ ಹೀಗೆ ಹೇಳಿದ್ದಳು. ಈ ಗೋವುಗಳು ಅವೇ ಆಗಿವೆ. ನಾನು ಗುರುತಿಸಬಲ್ಲೆ.”

19181051 ಗರುಡ ಉವಾಚ ।
19181051a ದೃಷ್ಯಂತೇ ಗಾವ ಏತಾಸ್ತಾ ದೃಷ್ಟ್ವಾ ಮಾಂ ವರುಣಾಲಯಮ್ ।
19181051c ವಿಶಂತಿ ಸಹಸಾ ಸರ್ವಾಃ ಕಾರ್ಯಮತ್ರ ವಿಧೀಯತಾಮ್ ।।

ಗರುಡನು ಹೇಳಿದನು: “ಆ ಗೋವುಗಳು ಕಾಣಿಸುತ್ತಿವೆ. ಆದರೆ ನನ್ನನ್ನು ನೋಡಿ ಆ ಗೋವುಗಳೆಲ್ಲವೂ ಕೂಡಲೇ ಸಮುದ್ರವನ್ನು ಪ್ರವೇಶಿಸುತ್ತಿವೆ. ಈ ವಿಷಯದಲ್ಲಿ ಉಚಿತವಾದುದನ್ನು ಮಾಡು.”

19181052a ಇತ್ಯುಕ್ತ್ವಾ ಚೈವ ಗರುಡಃ ಪಕ್ಷವಾತೇನ ಸಾಗರಾಮ್ ।
19181052c ಸಹಸಾ ಕ್ಷೋಭಯಿತ್ವಾ ಚ ವಿವೇಶ ವರುಣಾಲಯಮ್ ।।

ಹೀಗೆ ಹೇಳಿ ಗರುಡನು ತನ್ನ ರೆಕ್ಕೆಗಳ ಬಡಿತದಿಂದುಂಟಾದ ಭಿರುಗಾಳಿಯಿಂದ ಸಮುದ್ರವನ್ನು ಅಲ್ಲೋಲಕಲ್ಲೋಲಗೊಳಿಸಿ ಕೂಡಲೇ ವರುಣಾಲಯವನ್ನು ಪ್ರವೇಶಿಸಿದನು.

19181053a ದೃಷ್ಟ್ವಾ ಜವೇನ ಗರುಡಂ ಪ್ರಾಪ್ತಂ ವೈ ವರುಣಾಲಯಮ್ ।
19181053c ವಾರುಣಾಶ್ಚ ಗಣಾಃ ಸರ್ವೇ ವಿಭ್ರಾಂತಾಃ ಪ್ರಾಚಲಂಸ್ತದಾ ।।

ವೇಗವಾಗಿ ಗರುಡನು ವರುಣಾಯಲಕ್ಕೆ ಬಂದುದನ್ನು ಕಂಡು ವರುಣನ ಸರ್ವ ಗಣಗಳೂ ವಿಭ್ರಾಂತಗೊಂಡು ವಿಚಲಿತರಾದರು.

19181054a ತತಸ್ತು ವಾರುಣಂ ಸೈನ್ಯಮಭಿಜ್ಞಾತುಂ ಸುದುರ್ಜಯಮ್ ।
19181054c ಪ್ರಮುಖೇ ವಾಸುದೇವಸ್ಯ ನಾನಾಪ್ರಹರಣೋದ್ಯತಮ್ ।
19181054e ತದ್ಯುದ್ಧಮಭವದ್ಘೋರಂ ವಾರುಣೈಃ ಪನ್ನಗಾರಿಣಾ ।।

ಆಗ ವರುಣನ ದುರ್ಜಯ ಸೇನೆಯು ನಾನಾ ಆಯುಧಗಳನ್ನು ಹಿಡಿದು ವಾಸುದೇವನ ಎದಿರು ಬಂದಿತು. ಆ ವರುಣನ ಸೈನಿಕರ ಮತ್ತು ಪನ್ನಗಾರಿ ಗರುಡರ ನಡುವೆ ಘೋರ ಯುದ್ಧವು ನಡೆಯಿತು.

19181055a ತೇಷಾಮಾಪತತಾಂ ಸಂಖ್ಯೇ ವಾರುಣಾನಾಂ ಸಹಸ್ರಶಃ ।
19181055c ಭಗ್ನಂ ಬಲಮನಾಧೃಷ್ಯಂ ಕೇಶವೇನ ಮಹಾತ್ಮನಾ ।।

ಯುದ್ಧದಲ್ಲಿ ಆಕ್ರಮಣಿಸುತ್ತಿದ್ದ ವರುಣನ ಆ ಸಹಸ್ರಾರು ಸೈನಿಕರನ್ನು ಮಹಾತ್ಮ ಕೇಶವನು ಭಗ್ನಗೊಳಿಸಿ ಓಡಿಸಿದನು.

19181056a ತತಸ್ತೇ ಪ್ರದ್ರುತಾ ಯಾಂತಿ ತಮೇವ ವರುಣಾಲಯಮ್ ।
19181056c ಷಷ್ಟಿಂ ರಥಸಹಸ್ರಾಣಿ ಷಷ್ಟಿಂ ರಥಶತಾನಿ ಚ ।।
19181057a ವಾರುಣಾನಿ ಚ ಯುದ್ಧಾನಿ ದೀಪ್ತಶಸ್ತ್ರಾಣಿ ಸಂಯುಗೇ ।

ಹಾಗೆ ಓಡಿಹೋಗಿ ಅವರು ಅದೇ ವರುಣಾಲಯವನ್ನು ಹೊಗಲು, ಅರವತ್ತಾರು ಸಾವಿರ ವರುಣನ ರಥಗಳು ಪ್ರಜ್ವಲಿಸುತ್ತಿರುವ ಶಸ್ತ್ರಗಳಿಂದ ಯುದ್ಧಕ್ಕೆ ಬಂದವು.

19181057c ತದ್ಬಲಂ ಬಲಿಭಿಃ ಶೂರೈರ್ಬಲದೇವಜನಾರ್ದನೈಃ ।।
19181058a ಪ್ರದ್ಯುಮ್ನೇನಾನಿರುದ್ಧೇನ ಗರುಡೇನ ಚ ಸರ್ವಶಃ ।
19181058c ಶರೌಘೈರ್ವಿವಿಧೈಸ್ತೀಕ್ಷ್ಣೈರ್ವಧ್ಯಮಾನಂ ಸಮಂತತಃ ।।

ಬಲದೇವ, ಜನಾರ್ದನ, ಪ್ರದ್ಯುಮ್ನ, ಅನಿರುದ್ಧ ಮತ್ತು ಗರುಡ ಈ ಎಲ್ಲ ಬಲಶಾಲಿ ಶೂರರು ಎಲ್ಲಕಡೆಗಳಿಂದ ಆ ಸೇನೆಯನ್ನು ವಿವಿಧ ತೀಕ್ಷ್ಣ ಶರಸಮೂಹಗಳಿಂದ ವಧಿಸಿದರು.

19181059a ತತೋ ಭಗ್ನಂ ಬಲಂ ದೃಷ್ಟ್ವಾ ಕೃಷ್ಣೇನಾಕ್ಲಿಷ್ಟಕರ್ಮಣಾ ।
19181059c ವರುಣಸ್ತ್ವಥ ಸಂಕ್ರುದ್ಧೋ ನಿರ್ಯಯೌ ಯತ್ರ ಕೇಶವಃ ।।

ಅಕ್ಲಿಷ್ಟಕರ್ಮಿ ಕೃಷ್ಣನು ಆ ಬಲವನ್ನು ಭಗ್ನಗೊಳಿಸಿದುದನ್ನು ನೋಡಿ ಸಂಕ್ರುದ್ಧನಾದ ವರುಣನು ಕೇಶವನಿದ್ದಲ್ಲಿಗೆ ಹೊರಟುಬಂದನು.

19181060a ಋಷಿಭಿರ್ದೇವಗಂಧರ್ವೈಸ್ತಥೈವಾಪ್ಸರಸಾಂ ಗಣೈಃ ।
19181060c ಸಂಸ್ತೂಯಮಾನೋ ಬಹುಧಾ ವರುಣಃ ಪ್ರತ್ಯದೃಶ್ಯತ ।।

ಋಷಿಗಳು-ದೇವ-ಗಂಧರ್ವರು ಮತ್ತು ಅಪ್ಸರಗಣಗಳಿಂದ ಅನೇಕ ರೀತಿಗಳಲ್ಲಿ ಸ್ತುತಿಸಲ್ಪಡುತ್ತಾ ವರುಣನು ಕಾಣಿಸಿಕೊಂಡನು.

19181061a ಛತ್ರೇಣ ಧ್ರಿಯಮಾಣೇನ ಪಾಂಡುರೇಣ ವಪುಷ್ಮತಾ ।
19181061c ಸಲಿಲಸ್ರಾವಿಣಾ ಶ್ರೇಷ್ಠಂ ಚಾಪಮುದ್ಯಮ್ಯ ಧಿಷ್ಠಿತಃ ।।

ಅವನ ನೆತ್ತಿಯ ಮೇಲೆ ಸುಂದರ ಶ್ವೇತಚತ್ರವು ನೀರಿನ ಬಿಂದುಗಳನ್ನು ಸುರಿಸುತ್ತಾ ಓಲಾಡುತ್ತಿತ್ತು. ಅವನು ಶ್ರೇಷ್ಠ ಧನುಸ್ಸನ್ನು ಹಿಡಿದು ನಿಂತಿದ್ದನು.

19181062a ಅಪಾಂ ಪತಿರತಿಕ್ರುದ್ಧಃ ಪುತ್ರಪೌತ್ರಬಲಾನ್ವಿತಃ ।
19181062c ಆಹ್ವಯನ್ನಿವ ಯುದ್ಧಾಯ ವಿಸ್ಫಾರಿತಮಹಾಧನುಃ ।।

ಅತಿಕ್ರುದ್ಧನಾದ ಪುತ್ರಪೌತ್ರಬಲಾನ್ವಿತನಾದ ಅಪಾಂಪತಿ ವರುಣನು ಯುದ್ಧಕ್ಕೆ ಆಹ್ವಾನಿಸುತ್ತಿರುವಂತೆ ಮಹಾಧನುಸ್ಸನ್ನು ಟೇಂಕರಿಸಿದನು.

19181063a ಸ ತು ಪ್ರಾಧ್ಮಾಪಯಚ್ಛಂಖಂ ವರುಣಃ ಸಮಧಾವತ ।
19181063c ಹರಿಂ ಹರ ಇವ ಕ್ರುದ್ಧೋ ಬಾಣಜಾಲೈಃ ಸಮಾವೃಣೋತ್ ।।

ಶಂಖವನ್ನು ಊದಿ ವರುಣನು ಆಕ್ರಮಣಿಸಿ ಕ್ರುದ್ಧ ಹರನು ಹರಿಯ ಮೇಲೆ ಹೇಗೋ ಹಾಗೆ ಬಾಣಜಾಲಗಳಿಂದ ಮುಸುಕಿದನು.

19181064a ತತಃ ಪ್ರಧ್ಮಾಯ ಜಲಜಂ ಪಾಂಚಜನ್ಯಂ ಜನಾರ್ದನಃ ।
19181064c ಬಾಣಜಾಲೈರ್ದಿಶಃ ಸರ್ವಾಸ್ತತಶ್ಚಕ್ರೇ ಮಹಾಬಲಃ ।।

ಆಗ ಮಹಾಬಲ ಜನಾರ್ದನನು ಪಾಂಚಜನ್ಯ ಶಂಖವನ್ನು ಊದಿ ಬಾಣಜಾಲಗಳಿಂದ ಸರ್ವ ದಿಕ್ಕುಗಳನ್ನೂ ಮುಸುಕಿಬಿಟ್ಟನು.

19181065a ತತಃ ಶರೌಘೈರ್ವಿಮಲೈರ್ವರುಣಃ ಪೀಡಿತೋ ರಣೇ ।
19181065c ಸ್ಮಯನ್ನಿವ ತತಃ ಕೃಷ್ಣಂ ವರುಣಃ ಪ್ರತ್ಯಯುಧ್ಯತ ।।

ರಣದಲ್ಲಿ ವಿಮಲ ಶರೌಘಗಳಿಂದ ಪೀಡಿತನಾದರೂ ವರುಣನು ನಸುನಗುತ್ತಲೇ ಕೃಷ್ಣನೊಡನೆ ಯುದ್ಧಮಾಡಿದನು.

19181066a ತತೋಽಸ್ತ್ರಂ ವೈಷ್ಣವಂ ಘೋರಮಭಿಮಂತ್ರ್ಯಾಹವೇ ಸ್ಥಿತಃ ।
19181066c ವಾಸುದೇವೋಽಬ್ರವೀದ್ವಾಕ್ಯಂ ಪ್ರಮುಖೇ ತಸ್ಯ ಧೀಮತಃ ।।

ಆಗ ಯುದ್ಧದಲ್ಲಿ ಘೋರ ವೈಷ್ಣವ ಅಸ್ತ್ರವನ್ನು ಅಭಿಮಂತ್ರಿಸಿ ಧೀಮತ ವಾಸುದೇವನು ತನ್ನ ಎದುರಿದ್ದ ವರುಣನಿಗೆ ಹೇಳಿದನು:

19181067a ಇದಮಸ್ತ್ರಂ ಮಹಾಘೋರಂ ವೈಷ್ಣವಂ ಶತ್ರುಸೂದನಮ್ ।
19181067c ಮಯೋದ್ಯತಂ ವಧಾರ್ಥಂ ತೇ ತಿಷ್ಠೇದಾನೀಂ ಸ್ಥಿರೋ ಭವ ।।

“ನಿನ್ನ ವಧೆಗಾಗಿ ಇಗೋ ನಾನು ಈ ಶತ್ರುಸೂದನ ಮಹಾಘೋರ ವೈಷ್ಣವಾಸ್ತ್ರವನ್ನು ಹಿಡಿದಿದ್ದೇನೆ. ಸ್ಥಿರನಾಗಿ ನಿಲ್ಲು!”

19181068a ತತೋಽಸ್ತ್ರಂ ವರುಣೋ ದೇವೋ ಹ್ಯಸ್ತ್ರಂ ವೈಷ್ಣವಮುದ್ಯತಃ ।
19181068c ವಾರುಣಾಸ್ತ್ರೇಣ ಸಂಯೋಜ್ಯ ವಿನನಾದ ಮಹಾಬಲಃ ।।

ಆಗ ವೈಷ್ಣವಾಸ್ತ್ರವನ್ನು ಎದುರಿಸಲು ಮಹಾಬಲ ವರುಣದೇವನು ವಾರುಣಾಸ್ತ್ರವನ್ನು ಹೂಡಿ ಸಿಂಹನಾದಗೈದನು.

19181069a ತಸ್ಯಾಸ್ತ್ರೇ ವಿತತಾ ಹ್ಯಾಪೋ ವರುಣಸ್ಯ ವಿನಿಃಸೃತಾಃ ।
19181069c ವೈಷ್ಣವಾಸ್ತ್ರಸ್ಯ ಶಮನೇ ವರ್ತತೇ ಸಮಿತಿಂಜಯಃ ।।

ಯುದ್ಧವಿಜಯೀ ವರುಣನು ಪ್ರಯೋಗಿಸಿದ ವಾರುಣಾಸ್ತ್ರದಲ್ಲಿದ್ದ ಜಲದ ರಾಶಿಯು ವೈಷ್ಣವಾಸ್ತ್ರವನ್ನು ಶಮನಗೊಳಿಸ ತೊಡಗಿತು.

19181070a ಆಪಸ್ತು ವಾರುಣಾಸ್ತತ್ರ ಕ್ಷಿಪ್ತಾಃ ಕ್ಷಿಪ್ತಾ ಜ್ವಲಂತಿ ವೈ ।
19181070c ದಹ್ಯಂತೇ ವಾರುಣಾಸ್ತತ್ರ ತತೋಽಸ್ತ್ರೇ ಜ್ವಲಿತೇ ಪುನಃ ।।
19181071a ವೈಷ್ಣವೇ ತು ಮಹಾವೀರ್ಯೇ ದಿಶೋ ಭೀತಾ ವಿದುದ್ರುವುಃ ।

ಆದರೆ ವಾರುಣಾಸ್ತ್ರವು ಚೆಲ್ಲುತ್ತಿದ್ದ ನೀರು ವೈಷ್ಣವಾಸ್ತ್ರದ ಅಗ್ನಿಯ ಮೇಲೆ ಬಿದ್ದಾಗಲೆಲ್ಲ ಅದರ ಅಗ್ನಿಯು ಪುನಃ ಪ್ರಜ್ವಲಿಸಿ ವರುಣನ ಸೇನೆಯನ್ನು ದಹಿಸುತ್ತಿತ್ತು. ಮಹಾವೀರ್ಯಯುಕ್ತ ವೈಷ್ಣವಾಸ್ತ್ರದಿಂದಾಗಿ ವರುಣನ ಸೇನೆಯು ಭಯಗೊಂಡು ದಿಕ್ಕಾಪಾಲಾಗಿ ಓಡಿಹೋಯಿತು.

19181071c ತದ್ಬಲಂ ಜ್ವಲಿತಂ ದೃಷ್ಟ್ವಾ ವರುಣಃ ಕೃಷ್ಣಮಬ್ರವೀತ್ ।।
19181072a ಸ್ಮರ ಸ್ವಪ್ರಕೃತಿಂ ಪೂರ್ವಾಮವ್ಯಕ್ತಾಂ ವ್ಯಕ್ತಲಕ್ಷಣಾಮ್ ।
19181072c ತಮೋ ಜಹಿ ಮಹಾಭಾಗ ತಮಸಾ ಮುಹ್ಯಸೇ ಕಥಮ್ ।।

ತನ್ನ ಸೇನೆಯು ಸುಡುತ್ತಿದ್ದುದನ್ನು ನೋಡಿ ವರುಣನು ಕೃಷ್ಣನಿಗೆ ಹೇಳಿದನು: “ಮಹಾಭಾಗ! ನಿನ್ನ ವ್ಯಕ್ತಾವ್ಯಕ್ತ ಪೂರ್ವಪ್ರಕೃತಿಯನ್ನು ಸ್ಮರಿಸಿಕೋ! ಈ ತಮಸ್ಸನ್ನು ನಾಶಪಡಿಸು. ಸ್ವಯಂ ನೀನೇ ಏಕೆ ತಮೋಗುಣದಿಂದ ಮೋಹಿತನಾಗುತ್ತಿರುವೆ?

19181073a ಸತ್ತ್ವಸ್ಥೋ ನಿತ್ಯಮಾಸೀಸ್ತ್ವಂ ಯೋಗೀಶ್ವರ ಮಹಾಮತೇ ।
19181073c ಪಂಚಭೂತಾಶ್ರಯಾಂದೋಷಾನಹಂಕಾರಂ ಚ ವರ್ಜಯ ।।

ಯೋಗೀಶ್ವರ! ಮಹಾಮತೇ! ನಿತ್ಯವೂ ನೀನು ಸತ್ತ್ವಸ್ಥನಾಗಿದ್ದೀಯೆ. ಆದುದರಿಂದ ಪಂಚಭೂತಗಳನ್ನು ಆಶ್ರಯಿಸಿರುವ ದೋಷಗಳನ್ನೂ ಅಹಂಕಾರವನ್ನೂ ತ್ಯಜಿಸು.

19181074a ಯಾ ಯಾ ತೇ ವೈಷ್ಣವೀ ಮೂರ್ತಿಸ್ತಸ್ಯಾ ಜ್ಯೇಷ್ಠೋ ಹ್ಯಹಂ ತವ ।
19181074c ಜ್ಯೇಷ್ಠಭಾವೇನ ಮಾನ್ಯಂ ತು ಕಿಂ ಮಾಂ ತ್ವಂ ದಗ್ಧುಮಿಚ್ಛಸಿ ।।

ನಿನ್ನ ಯಾವ ಯಾವ ವೈಷ್ಣವೀ ಮೂರ್ತಿಗಳಿವೆಯೋ ಅವುಗಳಲ್ಲಿ ನಾನು ಜ್ಯೇಷ್ಠನು3. ಜ್ಯೇಷ್ಠಭಾವದಿಂದ ನಾನು ನಿನ್ನ ಆದರಕ್ಕೆ ಪಾತ್ರನು. ನನ್ನನ್ನು ಏಕೆ ಸುಡಲು ಬಯಸುತ್ತೀಯೆ?

19181075a ನಾಗ್ನಿರ್ವಿಕ್ರಮತೇ ಹ್ಯಗ್ನೌ ತ್ಯಜ ಕೋಪಂ ಯುಧಾಂ ವರ ।
19181075c ತ್ವಯಿ ನ ಪ್ರಭವಿಷ್ಯಾಮಿ ಜಗತಃ ಪ್ರಭವೋ ಹ್ಯಸಿ ।।

ಯೋದ್ಧರಲ್ಲಿ ಶ್ರೇಷ್ಠ! ಅಗ್ನಿಯು ಅಗ್ನಿಯ ಮೇಲೆ ತನ್ನ ಪರಾಕ್ರಮವನ್ನು ನಡೆಸುವುದಿಲ್ಲ. ಕೋಪವನ್ನು ತ್ಯಜಿಸು. ನಿನ್ನ ಮೇಲೆ ಪ್ರಭುತ್ವವನ್ನು ಸ್ಥಾಪಿಸಲಾರೆ. ನೀನು ಜಗತ್ತಿನ ಪ್ರಭುವಾಗಿರುವೆ!

19181076a ಪೂರ್ವಂ ಹಿ ಯಾ ತ್ವಯಾ ಸೃಷ್ಟಾ ಪ್ರಕೃತಿರ್ವಿಕೃತಾತ್ಮಿಕಾ ।
19181076c ಧರ್ಮಿಣೀ ಬೀಜಭಾವೇನ ಪೂರ್ವಧರ್ಮಂ ಸಮಾಶ್ರಿತಾ ।।

ಹಿಂದೆ ನಿನ್ನಿಂದಲೇ ಸೃಷ್ಟಿಸಲ್ಪಟ್ಟ ವಿಕೃತಾತ್ಮಿಕೆ ಧರ್ಮಿಣೀ ಪ್ರಕೃತಿಯು ಬೀಜಭಾವದಿಂದ ಪೂರ್ವಧರ್ಮ4ವನ್ನು ಆಶ್ರಯಿಸಿದ್ದಾಳೆ.

19181077a ಆಗ್ನೇಯಂ ವೈಷ್ಣವಂ ಸೌಮ್ಯಂ ಪ್ರಕೃತ್ಯೈವೇದಮಾದಿತಃ ।
19181077c ತ್ವಯಾ ಸೃಷ್ಟಂ ಜಗದಿದಂ ಸ ಕಥಂ ಮಯಿ ವರ್ತಸೇ ।।

ಪ್ರಕೃತಿಯ ಮೂಲಕ ನೀನೇ ಈ ಆಗ್ನೇಯ, ವೈಷ್ಣವ ಮತ್ತು ಸೌಮ್ಯ ಅಸ್ತ್ರಗಳನ್ನು ಸೃಷ್ಟಿಸಿದ್ದೀಯೆ ಮತ್ತು ನಿನ್ನಿಂದಲೇ ಈ ಸಂಪೂರ್ಣ ಜಗತ್ತು ಸೃಷ್ಟಿಸಲ್ಪಟ್ಟಿದೆ. ನೀನೇಕೆ ನನ್ನಲ್ಲಿ ಈ ರೀತಿ ವರ್ತಿಸುತ್ತಿರುವೆ?

19181078a ಅಜೇಯಃ ಶಾಶ್ವತೋ ದೇವಃ ಸ್ವಯಂಭೂರ್ಭೂತಭಾವನಃ ।
19181078c ಅಕ್ಷರಂ ಚ ಕ್ಷರಂ ಚೈವ ಭಾವಾಭಾವೌ ಮಹಾದ್ಯುತೇ ।।

ಮಹಾದ್ಯುತೇ! ನೀನು ಅಜೇಯ, ಶಾಶ್ವತ ದೇವತೆ, ಸ್ವಯಂಭು ಮತ್ತು ಭೂತಭಾವನನು. ಅಕ್ಷರ, ಕ್ಷರ ಮತ್ತು ಭಾವಾಭಾವಗಳೂ ನೀನೇ.

19181079a ರಕ್ಷ ಮಾಂ ರಕ್ಷಣೀಯೋಽಹಂ ತ್ವಯಾನಘ ನಮೋಽಸ್ತು ತೇ ।
19181079c ಆದಿಕರ್ತಾಸಿ ಲೋಕಾನಾಂ ತ್ವಯೈತದ್ಬಹುಲೀಕೃತಮ್ ।।

ನನ್ನನ್ನು ರಕ್ಷಿಸು! ನಾನು ರಕ್ಷಣೀಯನು! ಅನಘ! ನಿನಗೆ ನಮಸ್ಕಾರ. ನೀನು ಲೋಕಗಳ ಆದಿಕರ್ತನಾಗಿರುವೆ. ನಿನ್ನಿಂದಲೇ ಇದು ವಿಸ್ತೃತಗೊಂಡಿದೆ.

19181080a ವಿಕ್ರೀಡಸಿ ಮಹಾದೇವ ಬಾಲಃ ಕ್ರೀಡನಕೈರಿವ ।
19181080c ನ ಹ್ಯಯಂ ಪ್ರಕೃತಿದ್ವೇಷೀ ನಾಹಂ ಪ್ರಕೃತಿದೂಷಕಃ ।।

ಮಹಾದೇವ! ಬಾಲಕನು ಆಟಿಗೆಗಳೊಂದಿಗೆ ಆಟವಾಡುವಂತೆ ನೀನು ಈ ಜಗತ್ತಿನೊಡನೆ ಆಟವಾಡುತ್ತಿರುವೆ! ನಾನು ಪ್ರಕೃತಿದ್ವೇಷಿಯಲ್ಲ. ನಾನು ಪ್ರಕೃತಿದೂಷಕನೂ ಅಲ್ಲ.

19181081a ಪ್ರಕೃತಿರ್ಯಾ ವಿಕಾರೇಷು ವರ್ತತೇ ಪುರುಷರ್ಷಭ ।
19181081c ತಸ್ಯಾ ವಿಕಾರಶಮನೇ ವರ್ತಸೇ ತ್ವಂ ಮಹಾದ್ಯುತೇ ।।

ಪುರುಷರ್ಷಭ! ಮಹಾದ್ಯುತೇ! ಪ್ರಕೃತಿಯಲ್ಲಿ ವಿಕಾರಗಳುಂಟಾದಾಗ ಆ ವಿಕಾರಗಳ ಶಾಂತಿಗಾಗಿ ನೀನು ಕಾರ್ಯಕೈಗೊಳ್ಳುತ್ತೀಯೆ.

19181082a ವಿಕಾರೋ ವಾ ವಿಕಾರಾಣಾಂ ವಿಕಾರಾಯ ನ ತೇಽನಘ ।
19181082c ತಾನಧರ್ಮವಿದೋ ಮಂದಾನ್ಭವಾನ್ವಿಕುರುತೇ ಸದಾ ।।

ಅನಘ! ನಿನ್ನ ವಿಕಾರಗಳು ವಿಕಾರಗಳನ್ನು ನಾಶಗೊಳಿಸಲೆಂದೇ ಉಂಟಾಗುತ್ತವೆ. ಸದಾ ನೀನು ಆ ಅಧರ್ಮವಿದು ಮಂದರ ನಾಶಮಾಡುತ್ತೀಯೆ.

19181083a ಇದಂ ಪ್ರಕೃತಿಜೈರ್ದೋಷೈಸ್ತಮಸಾ ಮುಹ್ಯತೇ ಯದಾ ।
19181083c ರಜಸಾ ವಾಪಿ ಸಂಸ್ಪೃಷ್ಟ್ವಾ ತದಾ ಮೋಹಃ ಪ್ರವರ್ತತೇ ।।

ಈ ಜಗತ್ತು ಯಾವಾಗ ಪ್ರಕೃತಿಜನ್ಯ ದೋಷವಾದ ತಮಸ್ಸಿನಿಂದ ಮೋಹಗೊಳ್ಳುತ್ತದೆಯೋ ಅಥವಾ ರಜಸ್ಸಿನಿಂದ ಸಂಗ್ರಹ-ಪರಿಗ್ರಹಗಳಲ್ಲಿ ವ್ಯಗ್ರವಾಗುತ್ತದೆಯೋ ಆಗ ಜಗತ್ತಿನಲ್ಲಿ ಮೋಹವು ಆವರಿಸಿಕೊಳ್ಳುತ್ತದೆ.

19181084a ಪರಾವರಜ್ಞಃ ಸರ್ವಜ್ಞ ಐಶ್ವರ್ಯವಿಧಿಮಾಸ್ಥಿತಃ ।
19181084c ಕಿಂ ಮೋಹಯಸಿ ನಃ ಸರ್ವಾನ್ಪ್ರಜಾಪತಿರಿವ ಸ್ವಯಮ್ ।।

ಸ್ವಯಂ ಪ್ರಜಾಪತಿಯಂತಿರುವ ನೀನು ಪರಾವರಜ್ಞನು. ಸರ್ವಜ್ಞನು. ಐಶ್ವರ್ಯವಿಧಿಯನ್ನು ಆಶ್ರಯಿಸಿರುವವನು. ಆದರೂ ನಮ್ಮೆಲ್ಲರನ್ನೂ ಏಕೆ ಮೋಹಗೊಳಿಸುತ್ತಿರುವೆ?”

19181085a ವರುಣೇನೈವಮುಕ್ತಸ್ತು ಕೃಷ್ಣೋ ಲೋಕಪರಾಯಣಃ ।
19181085c ಭಾವಜ್ಞಃ ಸರ್ವಕೃದ್ಧೀರಸ್ತತಃ ಪ್ರೀತಮನಾ ಹ್ಯಭೂತ್ ।।
19181086a ಇತ್ಯೇವಮುಕ್ತಃ ಕೃಷ್ಣಸ್ತು ಪ್ರಹಸನ್ವಾಕ್ಯಮಬ್ರವೀತ್ ।

ವರುಣನು ಹೀಗೆ ಹೇಳಲು ಲೋಕಪರಾಯಣ ಭಾವಜ್ಞ ಸರ್ವಕೃತ ಧೀರ ಕೃಷ್ಣನು ಪ್ರೀತಮನಸ್ಕನಾದನು. ಅವನ ಮಾತಿಗೆ ನಕ್ಕು ಕೃಷ್ಣನು ಇಂತೆಂದನು.

19181086 ಶ್ರೀಕೃಷ್ಣ ಉವಾಚ ।
19181086c ಗಾವಃ ಪ್ರಯಚ್ಛ ಮೇ ವೀರ ಶಾಂತ್ಯರ್ಥಂ ಭೀಮವಿಕ್ರಮ ।।
19181087a ಇತ್ಯೇವಮುಕ್ತೇ ಕೃಷ್ಣೇನ ವಾಕ್ಯಂ ವಾಕ್ಯವಿಶಾರದಃ ।
19181087c ವರುಣೋ ಹ್ಯಬ್ರವೀದ್ಭೂಯಃ ಶೃಣು ಮೇ ಮಧುಸೂದನ ।।

ಶ್ರೀಕೃಷ್ಣನು ಹೇಳಿದನು: “ವೀರ! ಭೀಮವಿಕ್ರಮಿ! ಶಾಂತಿಗಾಗಿ ಈ ಗೋವುಗಳನ್ನು ನನಗೆ ನೀಡು!” ಕೃಷ್ಣನು ಹೀಗೆ ಹೇಳಲು ವಾಕ್ಯವಿಶಾರದ ವರುಣನು ಹೇಳಿದನು: “ಮಧುಸೂದನ! ನನ್ನನ್ನು ಕೇಳು.”

19181088 ವರುಣ ಉವಾಚ ।
19181088a ಬಾಣೇನ ಸಾರ್ಧಂ ಸಮಯೋ ಮಯಾ ದೇವ ಕೃತಃ ಪುರಾ ।
19181088c ಕಥಂ ಚ ಸಮಯಂ ಕೃತ್ವಾ ಕುರ್ಯಾಂ ವಿಫಲಮನ್ಯಥಾ ।।

ವರುಣನು ಹೇಳಿದನು: “ದೇವ! ಹಿಂದೆ ನಾನು ಬಾಣನೊಂದಿಗೆ ಒಂದು ಒಪ್ಪಂದವನ್ನು ಮಾಡಿಕೊಂಡಿದ್ದೆನು. ಹಾಗೆ ಒಪ್ಪಂದಮಾಡಿಕೊಂಡು ಅನ್ಯಥಾ ಅದನ್ನು ಹೇಗೆ ವಿಫಲಗೊಳಿಸಬಲ್ಲೆ?

19181089a ತ್ವಮೇವ ವೇದ ಸರ್ವಸ್ಯ ಯಥಾ ಸಮಯಭೇದಕಃ ।
19181089c ಚಾರಿತ್ರಂ ದುಷ್ಯತೇ ತೇನ ನ ಚ ಸದ್ಭಿಃ ಪ್ರಶಸ್ಯತೇ ।।

ಒಪ್ಪಂದವನ್ನು ಒಡೆಯುವವನು ಹೇಗೆಂದು ನಿನಗೆ ಎಲ್ಲವೂ ತಿಳಿದೇ ಇದೆ. ಅವನ ಚಾರಿತ್ರವು ದೋಷಯುಕ್ತವಾಗುತ್ತದೆ. ಮತ್ತು ಸತ್ಪುರುಷರು ಅವನನ್ನು ಪ್ರಶಂಸಿಸುವುದಿಲ್ಲ.

19181090a ಧರ್ಮಭಾಗೀಶ್ವರೋ ನಿತ್ಯಂ ವರ್ಜ್ಯತೇ ಮಧುಸೂದನ ।
19181090c ನ ಚ ಲೋಕಾನವಾಪ್ನೋತಿ ಪಾಪಃ ಸಮಯಭೇದಕಃ ।।

ಮಧುಸೂದನ! ಧರ್ಮಭಾಗೀ ಈಶ್ವರರು ಅಂಥವನನ್ನು ನಿತ್ಯವೂ ವರ್ಜಿಸುತ್ತಾರೆ. ಒಪ್ಪಂದವನ್ನು ಒಡೆದ ಪಾಪಿಯು ಉತ್ತಮ ಲೋಕಗಳನ್ನು ಪಡೆಯುವುದಿಲ್ಲ.

19181091a ಪ್ರಸೀದ ಧರ್ಮಲೋಪಶ್ಚ ಮಾ ಭೂನ್ಮೇ ಮಧುಸೂದನ ।
19181091c ನ ಮಾಂ ಸಮಯಭೇದೇನ ಯೋಕ್ತುಮರ್ಹಸಿ ಮಾಧವ ।।

ಮಧುಸೂದನ! ಪ್ರಸನ್ನನಾಗು! ನಾನು ಧರ್ಮಲೋಪನಾಗುವುದು ಬೇಡ! ಮಾಧವ! ಪ್ರತಿಜ್ಞಾಭಂಗದ ಪಾಪವನ್ನು ನನಗೆ ತಗುಲಿಸಬಾರದು.

19181092a ಜೀವನ್ನಾಹಂ ಪ್ರದಾಸ್ಯಾಮಿ ಗಾವೋ ವೈ ವೃಷಭೇಕ್ಷಣ ।
19181092c ಹತ್ವಾ ನಯಸ್ವ ಮಾಂ ಗಾವ ಏಷ ಮೇ ಸಮಯಃ ಪುರಾ ।।

ವೃಷಭೇಕ್ಷಣ! ನಾನು ಜೀವಂತವಾಗಿದ್ದುಕೊಂಡು ಗೋವುಗಳನ್ನು ಕೊಡಲಾರೆ. ನನ್ನನ್ನು ವಧಿಸಿ ಈ ಗೋವುಗಳನ್ನು ಕೊಂಡೊಯ್ಯಿ. ಹಿಂದೆ ಇದೇ ನನ್ನ ಪ್ರತಿಜ್ಞೆಯಾಗಿತ್ತು.

19181093a ಏತಚ್ಚ ಮೇ ಸಮಾಖ್ಯಾತಂ ಸಮಯಂ ಮಧುಸೂದನ ।
19181093c ಸತ್ಯಮೇವ ಮಹಾಬಾಹೋ ನ ಮಿಥ್ಯಾ ತು ಸುರೇಶ್ವರ ।।

ಮಧುಸೂದನ! ನನ್ನ ಪ್ರತಿಜ್ಞೆಯ ಕುರಿತು ಇಗೋ ನಿನಗೆ ಹೇಳಿದ್ದೇನೆ. ಮಹಾಬಾಹೋ! ಸುರೇಶ್ವರ! ಇದು ಸತ್ಯ. ಸುಳ್ಳಲ್ಲ.

19181094a ಯದೇವಾಹಮನುಗ್ರಾಹ್ಯೋ ರಕ್ಷ ಮಾಂ ಮಧುಸೂದನ ।
19181094c ಅಥ ವಾ ಗೋಷು ನಿರ್ಬಂಧೋ ಹತ್ವಾ ನಯ ಮಹಾಭುಜ ।।

ಮಧುಸೂದನ! ಮಹಾಭುಜ! ನಿನ್ನ ಅನುಗ್ರಹಕ್ಕೆ ಪಾತ್ರನಾಗಿದ್ದರೆ ನನ್ನನ್ನು ರಕ್ಷಿಸು. ಅಥವಾ ಗೋವುಗಳ ನಿರ್ಬಂಧವಿದ್ದರೆ ನನ್ನನ್ನು ಕೊಂದು ತೆಗೆದುಕೊಂಡು ಹೋಗು.””

19181095 ವೈಶಂಪಾಯನ ಉವಾಚ ।
19181095a ವರುಣೇನೈವಮುಕ್ತಸ್ತು ಯದೂನಾಂ ವಂಶವರ್ಧನಃ ।
19181095c ಅಭೇದ್ಯಂ ಸಮಯಂ ಮತ್ವಾ ನ್ಯಸ್ತವಾದೋ ಗವಾಂ ಪ್ರತಿ ।।

ವೈಶಂಪಾಯನನು ಹೇಳಿದನು: “ವರುಣನು ಹೀಗೆ ಹೇಳಲು ಯದುಗಳ ವಂಶವರ್ಧನನು ಪ್ರತಿಜ್ಞಾಭಂಗವಾಗುವುದೆಂದು ತಿಳಿದು ಗೋವುಗಳ ವಿಷಯದಲ್ಲಿ ಒತ್ತಾಯಿಸಲಿಲ್ಲ.

19181096a ಸ ಪ್ರಹಸ್ಯ ತತೋ ವಾಕ್ಯಂ ವ್ಯಾಜಹಾರಾರ್ಥಕೋವಿದಃ ।
19181096c ತಸ್ಮಾನ್ಮುಕ್ತೋಽಸಿ ಯದ್ಯೇವಂ ಬಾಣೇನ ಸಮಯಃ ಕೃತಃ ।।

ಅರ್ಥಕೋವಿದ ಕೃಷ್ಣನು ನಗುತ್ತಾ ಹೇಳಿದನು: “ಬಾಣನೊಂದಿಗೆ ನೀನು ಒಪ್ಪಂದವನ್ನು ಮಾಡಿಕೊಂಡಿದ್ದಾದರೆ ಈ ಕಲಹದಿಂದ ನಿನ್ನನ್ನು ಮುಕ್ತಗೊಳಿಸುತ್ತೇನೆ.”

19181097a ಪ್ರಶ್ರಿತೈರ್ಮಧುರೈರ್ವಾಕ್ಯೈಸ್ತತ್ತ್ವಾರ್ಥಮಧುಭಾಷಿತೈಃ ।
19181097c ಕಥಂ ಪಾಪಂ ಕರಿಷ್ಯಾಮಿ ವರುಣ ತ್ವಯ್ಯಹಂ ಪ್ರಭೋ ।।

ವಿನಯಯುಕ್ತ ಮಧುರ ಮಾತು ಮತ್ತು ತಾತ್ತ್ವಿಕ ಅರ್ಥಯುಕ್ತ ಸಿಹಿಮಾತುಗಳಿಂದ ಅವನನ್ನು ಪ್ರಸನ್ನಗೊಳಿಸುತ್ತಾ ಹೇಳಿದನು: “ಪ್ರಭೋ! ವರುಣ! ನಿನ್ನ ಕುರಿತು ನಾನು ಹೇಗೆತಾನೆ ಪಾಪವನ್ನೆಸಗಲಿ?

19181098a ಗಚ್ಛ ಮುಕ್ತೋಽಸಿ ವರುಣ ಸತ್ಯಸಂಧೋಽಸಿ ನೋ ಭವಾನ್ ।
19181098c ತ್ವತ್ಪ್ರಿಯಾರ್ಥಂ ಮಯಾ ಮುಕ್ತಾ ಬಾಣಗಾವೋ ನ ಸಂಶಯಃ ।

ವರುಣ! ಹೋಗು! ಮುಕ್ತನಾಗಿದ್ದೀಯೆ! ನೀನು ಸತ್ಯಸಂಧನಾಗಿದ್ದೀಯೆ. ನಿನಗೆ ಪ್ರಿಯವಾಗಲೆಂದು ನಾನು ಬಾಣನ ಗೋವುಗಳನ್ನು ಬಿಟ್ಟುಕೊಟ್ಟಿದ್ದೇನೆ. ಅದರಲ್ಲಿ ಸಂಶಯವಿಲ್ಲ.”

19181098e ತತಸ್ತೂರ್ಯನಿನಾದೈಶ್ಚ ಭೇರೀಣಾಂ ಚ ಮಹಾಸ್ವನೈಃ ।
19181099a ಅರ್ಘಮಾದಾಯ ವರುಣಃ ಕೇಶವಂ ಪ್ರತ್ಯಪೂಜಯತ್ ।
19181099c ಕೇಶವೋಽರ್ಘಂ ತದಾ ಗೃಹ್ಯ ವರುಣಾದ್ಯದುನಂದನಃ ।।

ಆಗ ವರುಣನು ಕಹಳೆಗಳ ನಿನಾದಗಳಿಂದ ಮತ್ತು ಭೇರಿಗಳ ಮಹಾಧ್ವನಿಗಳಿಂದ ಅರ್ಘ್ಯವನ್ನಿತ್ತು ಕೇಶವನನ್ನು ಪೂಜಿಸಿದನು. ಆಗ ಯದುನಂದನ ಕೇಶವನು ವರುಣನಿಂದ ಅರ್ಘ್ಯವನ್ನು ಸ್ವೀಕರಿಸಿದನು.

19181100a ಬಲಂ ಚಾಪೂಜಯದ್ದೇವಃ ಕುಶಲೀವ ಸಮಾಹಿತಃ ।
19181100c ವರುಣಾಯಾಭಯಂ ದತ್ತ್ವಾ ವಾಸುದೇವಃ ಪ್ರತಾಪವಾನ್ ।
19181101a ದ್ವಾರಕಾಂ ಪ್ರಸ್ಥಿತಃ ಶೌರಿಃ ಶಚೀಪತಿಸಹಾಯವಾನ್ ।

ದೇವ ವರುಣನು ಸಕುಶಲ ಪುರುಷನಂತೆ ಏಕಾಗ್ರಚಿತ್ತನಾಗಿ ಬಲರಾಮನನ್ನೂ ಪೂಜಿಸಿದನು. ವರುಣನಿಗೆ ಅಭಯವನ್ನು ನೀಡಿ ಶಚೀಪತಿಯ ಸಹಾಯಕ ಪ್ರತಾಪವಾನ್ ವಾಸುದೇವ ಶೌರಿಯು ದ್ವಾರಕೆಗೆ ಪ್ರಯಾಣಿಸಿದನು.

19181101c ತತ್ರ ದೇವಾಃ ಸಮರುತಃ ಸಸಾಧ್ಯಾಃ ಸಿದ್ಧಚಾರಣಾಃ ।।
19181102a ಗಂಧರ್ವಾಪ್ಸರಸಶ್ಚೈವ ಕಿಂನರಾಶ್ಚಾಂತರಿಕ್ಷಗಾಃ ।
19181102c ಅನುಗಚ್ಛಂತಿ ಭೂತೇಶಂ ಸರ್ವಭೂತಾದಿಮವ್ಯಯಮ್ ।।

ಅಲ್ಲಿ ಮರುತರೊಂದಿಗೆ ದೇವತೆಗಳು, ಸಾಧ್ಯರೊಂದಿಗೆ ಸಿದ್ಧ-ಚಾರಣರು, ಗಂಧರ್ವಾಪ್ಸರೆಯರು, ಮತ್ತು ಅಂತರಿಕ್ಷಗಾಮೀ ಕಿನ್ನರರು ಸರ್ವಭೂತಗಳ ಆದಿ, ಅವ್ಯಯ, ಭೂತೇಶನನ್ನು ಅನುಸರಿಸಿ ಹೋದರು.

19181103a ಆದಿತ್ಯಾ ವಸವೋ ರುದ್ರಾ ಅಶ್ವಿನೌ ಯಕ್ಷರಾಕ್ಷಸಾಃ ।
19181103c ವಿದ್ಯಾಧರಗಣಾಶ್ಚೈವ ಯೇ ಚಾನ್ಯೇ ಸಿದ್ಧಚಾರಣಾಃ ।
19181103e ಗಚ್ಛಂತಮನುಗಚ್ಛಂತಿ ಯಶಸಾ ವಿಜಯೇನ ಚ ।।

ಆದಿತ್ಯರು, ವಸುಗಳು, ರುದ್ರರು, ಅಶ್ವಿನಿಯರು, ಯಕ್ಷ-ರಾಕ್ಷಸರು, ವಿದ್ಯಾಧರಗಣಗಳು ಮತ್ತು ಅನ್ಯ ಸಿದ್ಧ-ಚಾರಣರು ಯಶಸ್ಸು ಮತ್ತು ವಿಜಯಪೂರ್ವಕ ಪ್ರಯಾಣಿಸುತ್ತಿದ್ದ ಕೃಷ್ಣನನ್ನು ಅನುಸರಿಸಿದರು.

19181104a ನಾರದಸ್ಚ ಮಹಾಭಾಗಃ ಪ್ರಸ್ಥಿತೋ ದ್ವಾರಕಾಂ ಪ್ರತಿ ।
19181104c ತುಷ್ಟೋ ಬಾಣಜಯಂ ದೃಷ್ಟ್ವಾ ವರುಣಂ ಚ ಕೃತಪ್ರಿಯಮ್ ।।

ಬಾಣನಮೇಲಿನ ಜಯ ಮತ್ತು ವರುಣನ ಮೇಲಿನ ಪ್ರಿಯಕೃತ್ಯಗಳನ್ನು ನೋಡಿ ಸಂತುಷ್ಟನಾದ ಮಹಾಭಾಗ ನಾರದನೂ ಕೂಡ ದ್ವಾರಕೆಯ ಕಡೆ ಪ್ರಯಾಣಿಸಿದನು.

19181105a ಕೈಲಾಸಶಿಖರಪ್ರಖ್ಯೈಃ ಪ್ರಾಸಾದೈಃ ಕಂದರೈಃ ಶುಭೈಃ ।
19181105c ದೂರಾನ್ನಿಶಮ್ಯ ಮಧುಹಾ ದ್ವಾರಕಾಂ ದ್ವಾರಮಾಲಿನೀಮ್ ।।
19181106a ಪಾಂಚಜನ್ಯಸ್ಯ ನಿರ್ಘೋಷಂ ಚಕ್ರೇ ಚಕ್ರಗದಾಧರಃ ।
19181106c ಸಂಜ್ಞಾಂ ಪ್ರಯಚ್ಛತೇ ದೇವೋ ದ್ವಾರಕಾಪುರವಾಸಿನಾಮ್ ।।

ಕೈಲಾಸಶಿಖರಗಳಂತಿದ್ದ ಪ್ರಾಸಾದಗಳಿಂದ, ಶುಭ ಕಂದರಗಳಿಂದ ಶೋಭಿಸುತ್ತಿದ್ದ ದ್ವಾರಮಾಲಿನೀ ದ್ವಾರಕೆಯನ್ನು ದೂರದಿಂದಲೇ ನೋಡಿ ಮಧುಹ ಚಕ್ರಗದಾಧರನು ಪಾಂಚಜನ್ಯವನ್ನು ಮೊಳಗಿಸಿದನು. ಹೀಗೆ ದೇವನು ದ್ವಾರಕಾಪುರವಾಸಿಗಳಿಗೆ ತನ್ನ ಆಗಮನವನ್ನು ಸೂಚಿಸಿದನು.

19181107a ದೇವಾನುಯಾನನಿರ್ಘೋಷಂ ಪಾಂಚಜನ್ಯಸ್ಯ ನಿಃಸ್ವನಮ್ ।
19181107c ಶ್ರುತ್ವಾ ದ್ವಾರವತೀಂ ಸರ್ವೇ ಪ್ರಹರ್ಷಮತುಲಂ ಗತಾಃ ।।

ಹಿಂಬಾಲಿಸಿ ಬರುತ್ತಿದ್ದ ದೇವಯಾನಗಳ ನಿರ್ಘೋಷ ಮತ್ತು ಪಾಂಚಜನ್ಯದ ನಿನಾದವನ್ನು ಕೇಳಿ ದ್ವಾರವತಿಯ ಸರ್ವರೂ ಅತುಲ ಹರ್ಷಿತರಾದರು.

19181108a ಪೂರ್ಣಕುಂಭೈಶ್ಚ ಲಾಜೈಶ್ಚ ಬಹುವಿನ್ಯಸ್ತವಿಸ್ತರೈಃ ।
19181108c ದ್ವಾರೋಪಶೋಭಿತಾಂ ಕೃತ್ವಾ ಸರ್ವಾಂ ದ್ವಾರವತೀಂ ಪುರೀಮ್ ।।

ಪೂರ್ಣಕುಂಭಗಳಿಂದ, ಆರಳುಗಳಿಂದ ಮತ್ತು ಅನೇಕ ವಿಸ್ತಾರದ ವಿನ್ಯಾಸಗಳಿಂದ ದ್ವಾರವತೀ ಪುರಿಯ ದ್ವಾರಗಳನ್ನು ಸಿಂಗರಿಸಿದರು.

19181109a ಸುಶ್ಲಿಷ್ಟರಥ್ಯಾಂ ಸಶ್ರೀಕಾಂ ಬಹುರತ್ನೋಪಶೋಭಿತಾಮ್ ।
19181109c ವಿಪ್ರಾಶ್ಚಾರ್ಘಂ ಸಮಾದಾಯ ಯಥೈವ ಕುಲನೈಗಮಾಃ ।।
19181110a ಜಯಶಬ್ದೈಶ್ಚ ವಿವಿಧೈಃ ಪೂಜಯಂತಿ ಸ್ಮ ಮಾಧವಮ್ ।
19181110c ವೈನತೇಯೇ ಸಮಾಸೀನಂ ನೀಲಾಂಜನಚಯೋಪಮಮ್ ।।

ಮಾರ್ಗಗಳನ್ನು ಗುಡಿಸಿ ಸಾರಿಸಿ ಸ್ವಚ್ಛ-ಸುಸಜ್ಜಿತ ಗೊಳಿಸಿ ಅನೇಕ ರತ್ನಗಳಿಂದ ಸಿಂಗರಿಸಿದರು. ವಿಪ್ರರು ಮತ್ತು ಕುಲಪುರೋಹಿತರು ಒಟ್ಟಾಗಿ ಜಯಕಾರಗಳಿಂದ ವೈನತೇಯನ ಮೇಲೆ ಕುಳಿತಿದ್ದ ಶ್ಯಾಮಸುಂದರ ಮಾಧವನನ್ನು ವಿವಿಧರೀತಿಯಲ್ಲಿ ಪೂಜಿಸಿದರು.

19181111a ವವಂದಿರೇ ತದಾ ಕೃಷ್ಣಂ ಶ್ರಿಯಾ ಪರಮಯಾ ಯುತಮ್ ।
19181111c ತಮಾನುಪೂರ್ವ್ಯಾ ವರ್ಣಾಶ್ಚ ಪೂಜಯಂತಿ ಮಹಾಬಲಮ್ ।।
19181112a ಅನಂತಂ ಕೇಶಿಹಂತಾರಂ ಶ್ರೇಷ್ಠಿಪೂರ್ವಾಶ್ಚ ಶ್ರೇಣಯಃ ।

ಪರಮಶ್ರೀಯಿಂದ ಕೂಡಿದ್ದ ಕೃಷ್ಣನನ್ನು ವಂದಿಸಿದರು. ಸರ್ವವರ್ಣದವರೂ ಮಹಾಬಲ ಅನಂತ ಮತ್ತು ಕೇಶಿಹಂತಾರ ಕೃಷ್ಣನನ್ನು ಕ್ರಮಶಃ ಪೂಜಿಸತೊಡಗಿದರು. ವರ್ತಕರು ಮತ್ತು ಧನಿಕರೂ ಅವರನ್ನು ಪೂಜಿಸಿದರು.

19181112c ಋಷಿಭಿರ್ದೇವಗಂಧರ್ವೈಶ್ಚಾರಣೈಶ್ಚ ಸಮಂತತಃ ।।
19181113a ಸ್ತೂಯತೇ ಪುಂಡರೀಕಾಕ್ಷೋ ದ್ವಾರಕೋಪವನೇ ಸ್ಥಿತಃ ।

ದ್ವಾರಕೆಯ ಉಪವನದಲ್ಲಿ ಉಪಸ್ಥಿತನಾಗಿದ್ದ ಪುಂಡರೀಕಾಕ್ಷನನ್ನು ಸುತ್ತುವರೆದಿದ್ದ ಋಷಿಗಳು, ದೇವತೆಗಳು, ಗಂಧರ್ವರು ಮತ್ತು ಚಾರಣರೂ ಕೂಡ ಸ್ತುತಿಸಿದರು.

19181113c ತದಾಶ್ಚರ್ಯಮಪಶ್ಯಂತ ದಾಶಾರ್ಹಗಣಸತ್ತಮಾಃ ।।
19181114a ಪ್ರಹರ್ಷಮತುಲಂ ಪ್ರಾಪ್ತಾ ದೃಷ್ಟ್ವಾ ಕೃಷ್ಣಂ ಮಹಾಭುಜಮ್ ।
19181114c ಬಾಣಂ ಜಿತ್ವಾ ಮಹಾದೇವಮಾಯಾಂತಂ ಪುರುಷೋತ್ತಮಮ್ ।।

ದಾಶಾರ್ಹಗಣಸತ್ತಮರು ಆ ಆಶ್ಚರ್ಯವನ್ನು ಕಣ್ಣಾರೆ ನೋಡಿದರು. ಬಾಣನನ್ನು ಗೆದ್ದು ಬಂದ ಮಹಾಭುಜ ಮಹಾದೇವ ಪುರುಷೋತ್ತಮ ಕೃಷ್ಣನನ್ನು ನೋಡಿ ಪರಮ ಹರ್ಷಿತರಾದರು.

19181115a ದ್ವಾರಕಾವಾಸಿನಾಂ ವಾಚಶ್ಚರಂತಿ ಬಹುಧಾ ತದಾ ।
19181115c ಪ್ರಾಪ್ತೇ ಕೃಷ್ಣೇ ಮಹಾಭಾಗೇ ಯಾದವಾನಾಂ ಮಹಾರಥೇ ।।

ಯಾದವರ ಮಹಾರಥ ಮಹಾಭಾಗ ಕೃಷ್ಣನು ಹಿಂದಿರುಗಿದಾಗ ದ್ವಾರಕಾವಾಸಿಗಳಲ್ಲಿ ಅನೇಕ ರೀತಿಯ ಮಾತುಗಳು ಹೊರಬರುತ್ತಿದ್ದವು.

19181116a ಗತ್ವಾ ಚ ದೂರಮಧ್ವಾನಂ ಸುಪರ್ಣೋ ದ್ರುತಮಾಗತಃ ।
19181116c ಧನ್ಯಾಃ ಸ್ಮೋಽನುಗೃಹೀತಾಃ ಸ್ಮೋ ಯೇಷಾಂ ವೈ ಜಗತಃ ಪಿತಾ ।।
19181117a ರಕ್ಷಿತಾ ಚೈವ ಗೋಪ್ತಾ ಚ ದೀರ್ಘಬಾಹುರ್ಮಹಾಭುಜಃ ।
19181117c ವೈನತೇಯೇ ಸಮಾರುಹ್ಯ ಜಿತ್ವಾ ಬಾಣಂ ಸುದುರ್ಜಯಮ್ ।।
19181118a ಪ್ರಾಪ್ತೋಽಯಂ ಪುಂಡರೀಕಾಕ್ಷೋ ಮನಾಂಸ್ಯಾಹ್ಲಾದಯನ್ನಿವ।

“ದೂರದ ಪ್ರಯಾಣವನ್ನು ಮಾಡಿ ಸುಪರ್ಣನು ಬೇಗ ಬಂದಿದ್ದಾನೆ. ಜಗತ್ತಿನ ಪಿತ ದೀರ್ಘಬಾಹು ಮಹಾಭುಜನಿಂದ ರಕ್ಷಿತರಾದ ನಾವು ಧನ್ಯರು ಮತ್ತು ಅನುಗೃಹೀತರು. ವೈನತೇಯನನ್ನೇರಿ ದುರ್ಜಯ ಬಾಣನನ್ನು ಗೆದ್ದು ಪುಂಡರೀಕಾಕ್ಷನು ನಮ್ಮ ಮನಸ್ಸುಗಳನ್ನು ಆಹ್ಲಾದಿತಗೊಳಿಸುತ್ತಾ ಹಿಂದಿರುಗಿದ್ದಾನೆ!”

19181118c ಏವಂ ಕಥಯತಾಮೇವ ದ್ವಾರಕಾವಾಸಿನಾಂ ತದಾ ।।
19181119a ವಾಸುದೇವಗೃಹೇ ದೇವಾ ವಿವಿಶುಸ್ತಂ ಮಹಾರಥಾಃ ।

ದ್ವಾರಕಾವಾಸಿಗಳು ಹೀಗೆ ಮಾತನಾಡಿಕೊಳ್ಳುತ್ತಿರಲು ಮಹಾರಥ ದೇವತೆಗಳು ವಾಸುದೇವನ ಭವನವನ್ನು ಪ್ರವೇಶಿಸಿದರು.

19181119c ಅವತೀರ್ಯ ಸುಪರ್ಣಾತ್ತು ವಾಸುದೇವೋ ಬಲಸ್ತದಾ ।।
19181120a ಪ್ರದ್ಯುಮ್ನಶ್ಚಾನಿರುದ್ಧಶ್ಚ ಗೃಹಾನ್ಪ್ರವಿವಿಶುಸ್ತದಾ ।

ವಾಸುದೇವ, ಬಲರಾಮ, ಪ್ರದ್ಯುಮ್ನ ಮತ್ತು ಅನಿರುದ್ಧರು ಸುಪರ್ಣನಿಂದ ಕೆಳಗಿಳಿದು ಭವನಗಳನ್ನು ಪ್ರವೇಶಿಸಿದರು.

19181120c ತತೋ ದೇವವಿಮಾನಾನಿ ಸಂಚರಂತಿ ತದಾ ದಿವಮ್ ।।
19181121a ಅವಸ್ಥಿತಾನಿ ದೃಶ್ಯಂತೇ ನಾನಾರೂಪಾಣಿ ಸರ್ವಶಃ ।

ಆಗ ಆಕಾಶದಲ್ಲಿ ಸಂಚರಿಸುತ್ತಿದ್ದ ನಾನಾ ರೂಪದ ದೇವ ವಿಮಾನಗಳು ಎಲ್ಲೆಡೆ ನಿಂತಿರುವುದು ಕಂಡುಬಂದಿತು.

19181121c ಹಂಸರ್ಷಭಮೃಗೈರ್ನಾಗೈರ್ವಾಜಿಸಾರಸಬರ್ಹಿಣೈಃ ।
19181121e ಭಾಸ್ವಂತಿ ತಾನಿ ದೃಷ್ಯಂತೇ ವಿಮಾನಾನಿ ಸಹಸ್ರಶಃ ।।

ಅಲ್ಲಿ ಹಂಸ, ವೃಷಭ, ಜಿಂಕೆ, ಆನೆ, ಕುದುರೆ, ಸಾರಸ ಮತ್ತು ನವಿಲುಗಳಿಂದ ಕೂಡಿದ ಸಹಸ್ರಾರು ತೇಜಸ್ವೀ ವಿಮಾನಗಳು ಕಾಣುತ್ತಿದ್ದವು.

19181122a ಅತಃ ಕೃಷ್ಣೋಽಬ್ರವೀದ್ವಾಕ್ಯಂ ಕುಮಾರಾಂಸ್ತಾನ್ಸಹಸ್ರಶಃ ।
19181122c ಪ್ರದ್ಯುಮ್ನಾದೀನ್ಸಮಸ್ತಾಂಸ್ತು ಶ್ಲಕ್ಷ್ಣಂ ಮಧುರಯಾ ಗಿರಾ ।।

ಆಗ ಕೃಷ್ಣನು ಅಲ್ಲಿ ಸೇರಿದ್ದ ಪ್ರದ್ಯುಮ್ನಾದಿ ಸಹಸ್ರಾರು ಕುಮಾರರನ್ನು ಉದ್ದೇಶಿಸಿ ಪ್ರೇಮಯುಕ್ತ ಮಧುರ ವಾಣಿಯಲ್ಲಿ ಹೇಳಿದನು:

19181123a ಏತೇ ರುದ್ರಾಸ್ತಥಾದಿತ್ಯಾ ವಸವೋಽಥಾಶ್ವಿನಾವಪಿ ।
19181123c ಸಾಧ್ಯಾ ದೇವಾಸ್ತಥಾನ್ಯೇ ಚ ವಂದಧ್ವಂ ಚ ಯಥಾಕ್ರಮಮ್ ।।

“ಇವರು ರುದ್ರರು, ಆದಿತ್ಯರು, ವಸುಗಳು, ಮತ್ತು ಅಶ್ವಿನಿಯರು, ಸಾಧ್ಯರು ಮತ್ತು ಅನ್ಯ ದೇವತೆಗಳು. ಯಥಾಕ್ರಮವಾಗಿ ಇವರನ್ನು ವಂದಿಸಿರಿ.

19181124a ಸಹಸ್ರಾಕ್ಷಂ ಮಹಾಭಾಗಂ ದಾನವಾನಾಂ ಭಯಂಕರಮ್ ।
19181124c ವಂದಧ್ವಂ ಸಹಿತಾಃ ಶಕ್ರಂ ಸಗಣಂ ನಾಗವಾಹನಮ್ ।।

ದಾನವರಿಗೆ ಭಯಂಕರನಾದ ಮಹಾಭಾಗ ಗಜವಾಹನ ಸಹಸ್ರಾಕ್ಷ ಶಕ್ರನನ್ನು ಅವನ ಗಣಗಳೊಂದಿಗೆ ವಂದಿಸಿರಿ.

19181125a ಸಪ್ತರ್ಷಯೋ ಮಹಾಭಾಗಾ ಭೃಗ್ವಾಂಗಿರಸಮಾಶ್ರಿತಾಃ ।
19181125c ಋಷಯಶ್ಚ ಮಹಾತ್ಮಾನೋ ವಂದಧ್ವಂ ಚ ಯಥಾಕ್ರಮಮ್ ।।

ಭೃಗು-ಆಂಗಿರಸಾದಿ ಮಹಾಭಾಗ ಸಪ್ತರ್ಷಿಗಳಿಗೂ, ಅವರ ಜೊತೆಗಿರುವ ಮಹಾತ್ಮ ಋಷಿಗಳಿಗೂ ಯಥಾಕ್ರಮವಾಗಿ ವಂದಿಸಿರಿ.

19181126a ಏತೇ ಚಕ್ರಧರಾಶ್ಚೈವ ತಾವಂದಧ್ವಂ ಚ ಸರ್ವಶಃ ।
19181126c ಸಾಗರಾಶ್ಚ ಹ್ರದಾಶ್ಚೈವ ಮತ್ಪ್ರಿಯಾರ್ಥಮಿಹಾಗತಾಃ ।।
19181127a ದಿಶಶ್ಚ ವಿದಿಶಶ್ಚೈವ ವಂದಧ್ವಂ ಚ ಯಥಾಕ್ರಮಮ್ ।

ಇವರು ಎಲ್ಲ ಚಕ್ರಧಾರೀ ಲೋಕಪಾಲಕರು. ಇವರನ್ನು ವಂದಿಸಿರಿ. ನನ್ನ ಪ್ರಿಯಾರ್ಥವಾಗಿ ಸಾಗರಗಳು, ಸರೋವರಗಳು, ದಿಕ್ಕು-ಉಪದಿಕ್ಕುಗಳಿಗೆ ಇಲ್ಲಿಗೆ ಆಗಮಿಸಿದ್ದಾರೆ. ಅವರನ್ನೂ ಯಥಾಕ್ರಮವಾಗಿ ವಂದಿಸಿರಿ.

19181127c ವಾಸುಕಿಪ್ರಮುಖಾಶ್ಚೈವ ನಾಗಾ ವೈ ಸುಮಹಾಬಲಾಃ ।।
19181128a ಗಾವಶ್ಚ ಮತ್ಪ್ರಿಯಾರ್ಥಂ ವೈ ವಂದಧ್ವಂ ಚ ಯಥಾಕ್ರಮಮ್ ।।

ವಾಸುಕಿಪ್ರಮುಖರಾದ ಮಹಾಬಲ ನಾಗರೂ, ಗೋವುಗಳೂ ನನಗೆ ಪ್ರಿಯವನ್ನುಂಟುಮಾಡಲು ಇಲ್ಲಿಗೆ ಆಗಮಿಸಿದ್ದಾರೆ. ಯಥಾಕ್ರಮವಾಗಿ ಅವರನ್ನೂ ವಂದಿಸಿರಿ.

19181128c ಜ್ಯೋತೀಂಷಿ ಸಹ ನಕ್ಷತ್ರೈರ್ಯಕ್ಷರಾಕ್ಷಸಕಿಂನರೈಃ ।।
19181129a ಆಗತಾ ಮತ್ಪ್ರಿಯಾರ್ಥಂ ವೈ ವಂದಧ್ವಂ ಚ ಯಥಾಕ್ರಮಮ್ ।

ಗ್ರಹಗಳ ಸಹಿತ ನಕ್ಷತ್ರಗಳು, ಯಕ್ಷ-ರಾಕ್ಷಸ-ಕಿನ್ನರರು ನನಗೆ ಪ್ರಿಯವನ್ನುಂಟುಮಾಡಲು ಇಲ್ಲಿಗೆ ಆಗಮಿಸಿದ್ದಾರೆ. ಯಥಾಕ್ರಮವಾಗಿ ಅವರನ್ನೂ ವಂದಿಸಿರಿ.”

19181129c ವಾಸುದೇವವಚಃ ಶ್ರುತ್ವಾ ಕುಮಾರಾಃ ಪ್ರಣತಾಃ ಸ್ಥಿತಾಃ ।।
19181130a ಯಥಾಕ್ರಮೇಣ ಸರ್ವೇಷಾಂ ದೇವತಾನಾಂ ಮಾಹಾತ್ಮನಾಮ್ ।

ವಾಸುದೇವನ ಮಾತನ್ನು ಕೇಳಿ ಕೈಮುಗಿದು ನಿಂತಿದ್ದ ಕುಮಾರರೆಲ್ಲರೂ ಯಥಾಕ್ರಮವಾಗಿ ಎಲ್ಲ ದೇವತೆಗಳನ್ನು ಮತ್ತು ಮಹಾತ್ಮರನ್ನು ವಂದಿಸಿದರು.

19181130c ಸರ್ವಾಂದಿವೌಕಸೋ ದೃಷ್ಟ್ವಾ ಪೌರಾ ವಿಸ್ಮಯಮಾಗತಾಃ ।।
19181131a ಪೂಜಾರ್ಥಮಥ ಸಂಭಾರಾನ್ಪ್ರಗೃಹ್ಯ ದ್ರುತಮಾಗತಾಃ ।

ಸರ್ವ ದಿವೌಕಸರನ್ನೂ ನೋಡಿ ಪುರಜನರು ವಿಸ್ಮಿತರಾದರು. ಅವರ ಪೂಜೆಗೆಂದು ದ್ರವ್ಯಗಳನ್ನು ಹಿಡಿದು ಓಡಿ ಓಡಿ ಬಂದರು.

19181131c ಅಹೋ ಸುಮಹದಾಶ್ಚರ್ಯಂ ವಾಸುದೇವಸ್ಯ ಸಂಶ್ರಯಾತ್ ।।
19181132a ಪ್ರಾಪ್ಯತೇ ಯದಿಹಾಸ್ಮಾಭಿರಿತಿ ವಾಚಶ್ಚರಂತ್ಯುತ ।

“ಅಹೋ! ವಾಸುದೇವನ ಆಶ್ರಯದಲ್ಲಿದ್ದ ನಮಗೆ ಈ ಮಹಾದಾಶ್ಚರ್ಯವನ್ನು ನೋಡಲಿಕ್ಕಾಯಿತು!” ಎಂದು ಮಾತನಾಡಿಕೊಳ್ಳುತ್ತಿದ್ದರು.

19181132c ತತಶ್ಚಂದನಚೂರ್ಣೈಶ್ಚ ಗಂಧಪುಷ್ಪೈಶ್ಚ ಸರ್ವಶಃ ।।
19181133a ಕಿರಂತಿ ಪೌರಃ ಸರ್ವಾಂಸ್ತಾನ್ಪೂಜಯಂತೋ ದಿವೌಕಸಃ ।

ಆಗ ಎಲ್ಲ ಪೌರರು ದಿವೌಕಸರನ್ನು ಪೂಜಿಸುತ್ತಾ ಚಂದನ-ಚೂರ್ಣಗಳನ್ನು, ಗಂಧ-ಪುಷ್ಪಗಳನ್ನು ಎಲ್ಲಕಡೆ ಬೀರತೊಡಗಿದರು.

19181133c ಲಾಜೈಃ ಪ್ರಣಾಮೈರ್ಧೂಪೈಶ್ಚ ವಾದ್ಯಧ್ವನಿಯಮೈಸ್ತಥಾ ।।
19181134a ದ್ವಾರಕಾವಾಸಿನಃ ಸರ್ವೇ ಪೂಜಯಂತಿ ದಿವೌಕಸಃ ।

ಅರಳುಗಳಿಂದ, ನಮಸ್ಕಾರಗಳಿಂದ, ಧೂಪಗಳಿಂದ, ವಾದ್ಯಧ್ವನಿಗಳಿಂದ, ನಿಯಮಗಳಿಂದ ದ್ವಾರಕಾವಾಸಿಗಳೆಲ್ಲರೂ ದಿವೌಕಸರನ್ನು ಪೂಜಿಸಿದರು.

19181134c ಆಹುಕಂ ವಾಸುದೇವಂ ಚ ಸಾಂಬಂ ಚ ಯದುನಂದನಮ್ ।।
19181135a ಸಾತ್ಯಕಿಂ ಚೋಲ್ಮುಕಂ ಚೈವ ವಿಪೃಥುಂ ಚ ಮಹಾಬಲಮ್ ।
19181135c ಅಕ್ರೂರಂ ಚ ಮಹಾಭಾಗಂ ತಥಾ ನಿಷಠಮೇವ ಚ ।।
19181136a ಏತಾನ್ಪರಿಷ್ವಜ್ಯ ತದಾ ಮೂರ್ಧ್ನಿ ಚಾಘ್ರಾಯ ವಾಸವಃ ।

ಆಗ ವಾಸವನು ಆಹುಕ, ವಾಸುದೇವ, ಯದುನಂದನ ಸಾಂಬ, ಸಾತ್ಯಕಿ, ಉಲ್ಮುಕ, ಮಹಾಬಲಿ ವಿಪೃಥು, ಮಹಾಭಾಗ ಅಕ್ರೂರ, ಮತ್ತು ನಿಷಠ ಇವರನ್ನು ಆಲಂಗಿಸಿ ನೆತ್ತಿಯನ್ನು ಆಘ್ರಾಣಿಸಿದನು.

19181136c ಅಥ ಶಕ್ರೋ ಮಹಾಭಾಗಃ ಸಮಕ್ಷಂ ಯದುಮಂಡಲೇ ।।
19181137a ಸ್ತುವಂತಂ ಕೇಶಿಹಂತಾರಂ ತತ್ರೋವಾಚೋತ್ತರಂ ವಚಃ ।

ಆಗ ಮಹಾಭಾಗ ಶಕ್ರನು ಯದುಮಂಡಲದ ಸಮಕ್ಷಮದಲ್ಲಿ ಕೇಶಿಹಂತಾರನನ್ನು ಸ್ತುತಿಸುತ್ತಾ ಅವನಿಗೆ ಉತ್ತರವಾಗಿ ಈ ಮಾತನ್ನಾಡಿದನು:

19181137c ಸಾತ್ವತಃ ಸಾತ್ತ್ವತಾಮೇಷ ಸರ್ವೇಷಾಂ ಯದುನಂದನಮ್ ।।
19181138a ಮೋಕ್ಷಯಿತ್ವಾ ರಣೇ ಚೈವ ಯಶಸಾ ಪೌರುಷೇಣ ಚ ।
19181138c ಮಹಾದೇವಸ್ಯ ಮಿಷತೋ ಗುಹಸ್ಯ ಚ ಮಹಾತ್ಮನಃ ।।
19181139a ಏಷ ಬಾಣಂ ರಣೇ ಜಿತ್ವಾ ದ್ವಾರಕಾಂ ಪುನರಾಗತಃ ।

“ಇವನು ಸರ್ವ ಸಾತ್ವತರಲ್ಲಿ ಸಾತ್ವತನು. ಇವನು ರಣದಲ್ಲಿ ಯಶಸ್ಸು ಮತ್ತು ಪೌರುಷಗಳನ್ನು ತೋರಿಸಿ ಯದುನಂದನ ಅನಿರುದ್ಧನನ್ನು ಬಿಡುಗಡೆಗೊಳಿಸಿ, ರಣದಲ್ಲಿ ಮಹಾದೇವ ಮತ್ತು ಮಹಾತ್ಮ ಗುಹರು ನೋಡುತ್ತಿದ್ದಂತೆಯೇ ಬಾಣನನ್ನು ಗೆದ್ದು ದ್ವಾರಕೆಗೆ ಹಿಂದಿರುಗಿದ್ದಾನೆ.

19181139c ಸಹಸ್ರಬಾಹೋ ಬಾಹೂನಾಂ ಕೃತ್ವಾ ದ್ವಯಮನುತ್ತಮಮ್ ।।
19181140a ಸ್ಥಾಪಯಿತ್ವಾ ದ್ವಿಬಾಹುತ್ವೇ ಪ್ರಾಪ್ತೋಽಯಂ ಸ್ವಪುರಂ ಹರಿಃ ।

ಸಹಸ್ರಬಾಹುಗಳ ಬಾಣನನ್ನು ಎರಡೇ ಬಾಹುಗುಳುಳ್ಳವನನ್ನಾಗಿ ಮಾಡಿ, ಅವನನ್ನು ದ್ವಿಬಾಹುತ್ವದಲ್ಲಿ ಸ್ಥಾಪಿಸಿ ಹರಿಯು ತನ್ನ ಪುರಿಗೆ ಮರಳಿದ್ದಾನೆ.

19181140c ಯದರ್ಥಂ ಜನ್ಮ ಕೃಷ್ಣಸ್ಯ ಮಾನುಷೇಷು ಮಹಾತ್ಮನಃ ।।
19181141a ತದಪ್ಯವಸಿತಂ ಕಾರ್ಯಂ ನಷ್ಟಾಶೋಕಾ ವಯಂ ಕೃತಾಃ ।

ಯಾವ ಉದ್ದೇಶದಿಂದ ಮಹಾತ್ಮ ಕೃಷ್ಣನ ಜನ್ಮವು ಮನುಷ್ಯರಲ್ಲಿ ಆಗಿತ್ತೋ ಆ ಕಾರ್ಯವು ಈಗ ಪೂರ್ಣವಾಯಿತು. ಇವನು ನಮ್ಮ ಶೋಕಗಳನ್ನು ನಷ್ಟಗೊಳಿಸಿದ್ದಾನೆ.

19181141c ಪಿಬತಾಂ ಮಧು ಮಧ್ವೀಕಂ ಭವತಾಂ ಪ್ರೀತಿಪೂರ್ವಕಮ್ ।।
19181142a ಕಾಲೋ ಯಾಸ್ಯತ್ಯವಿರತಂ ವಿಷಯೇಷ್ವೇವ ಸಜ್ಜತಾಮ್ ।

ಇನ್ನು ಮಧುರ ಮಧುಪಾನಗೈಯುತ್ತಾ ನಿರಂತರ ಮನೋವಾಂಛಿತ ವಿಷಯಸುಖಗಳನ್ನು ಭೋಗಿಸುತ್ತಾ ನಿಮ್ಮ ಸಮಯವು ಅತ್ಯಂತ ಪ್ರಸನ್ನಪೂರ್ವಕವಾಗಿ ಕಳೆಯಲಿ.

19181142c ಬಾಹೂನಾಂ ಸಂಶ್ರಯಾತ್ಸರ್ವೇ ವಯಮಸ್ಯ ಮಹಾತ್ಮನಃ ।।
19181143a ಪ್ರಣಷ್ಟಶೋಕಾ ರಂಸ್ಯಾಮಃ ಸರ್ವೇ ಏವ ಯಥಾಸುಖಮ್ ।

ನಾವೆಲ್ಲರೂ ಈ ಮಹಾತ್ಮನ ಬಾಹುಗಳನ್ನಾಶ್ರಯಿಸಿ ಶೋಕಹೀನರಾಗಿದ್ದೇವೆ. ಇನ್ನು ನಾವೆಲ್ಲರೂ ಯಥಾಸುಖವಾಗಿ ರಮಿಸುತ್ತೇವೆ.”

19181143c ಏವಂ ಸ್ತುತ್ವಾ ಸಹಸ್ರಾಕ್ಷಃ ಕೇಶವಂ ದಾನವಾಂತಕಮ್ ।।
19181144a ಆಪೃಚ್ಛ್ಯ ತಂ ಮಹಾಭಾಗಃ ಸರ್ವದೇವಗಣೈರ್ವೃತಃ ।
19181144c ತತಃ ಪುನಃ ಪರಿಷ್ವಜ್ಯ ಕೃಷ್ಣಂ ಲೋಕನಮಸ್ಕೃತಮ್ ।
19181144e ಪುರಂದರೋ ದಿವಂ ಯಾತಃ ಸಹ ದೇವಮರುದ್ಗಣೈಃ ।।

ದಾನವಾಂತಕ ಕೇಶವನನ್ನು ಹೀಗೆ ಸ್ತುತಿಸಿ ಸರ್ವದೇವಗಣಗಳಿಂದ ಆವೃತನಾಗಿದ್ದ ಮಹಾಭಾಗ ಸಹಸ್ರಾಕ್ಷನು ಅಪ್ಪಣೆಯನ್ನು ಕೇಳಿದನು. ಪುನಃ ಲೋಕನಮಸ್ಕೃತ ಕೃಷ್ಣನನ್ನು ಆಲಂಗಿಸಿ ದೇವಮರುದ್ಗಣಗಳೊಂದಿಗೆ ಪುರಂದರನು ದಿವಕ್ಕೆ ತೆರಳಿದನು.

19181145a ಋಷಯಶ್ಚ ಮಹಾತ್ಮಾನೋ ಜಯಾಶೀರ್ಭಿರ್ಮಹೌಜಸಮ್ ।
19181145c ಯಥಾಗತಂ ಪುನರ್ಯಾತಾ ಯಕ್ಷರಾಕ್ಷಸಕಿಂನರಾಃ ।।

ಮಹಾತ್ಮ ಋಷಿಗಳೂ ಕೂಡ ಮಹೌಜಸನಿಗೆ ಜಯಾಶೀರ್ವಾದಗಳನ್ನಿತ್ತು ಯಕ್ಷರಾಕ್ಷಸಕಿನ್ನರರೂ ಸೇರಿ ಎಲ್ಲಿಂದ ಬಂದಿದ್ದರೋ ಅಲ್ಲಿಗೆ ಪುನಃ ತೆರಳಿದರು.

19181146a ಪುರಂದರೇ ದಿವಂ ಯಾತೇ ಪದ್ಮನಾಭೋ ಮಹಾಬಲಃ ।
19181146c ಅಪೃಚ್ಛತ ಮಹಾಭಾಗಃ ಸರ್ವಾನ್ಕುಶಲಮವ್ಯಯಮ್ ।।

ಪುರಂದರನು ದಿವಕ್ಕೆ ತೆರಳಲು ಮಹಾಬಲ ಮಹಾಭಾಗ ಪದ್ಮನಾಭನು ಸರ್ವರ ಅವ್ಯಯ ಕುಶಲವನ್ನು ವಿಚಾರಿಸಿದನು.

19181147a ತತಃ ಕಿಲಕಿಲಾಶಬ್ದಂ ನಿರ್ವಮಂತಃ ಸಹಸ್ರಶಃ ।
19181147c ಗಚ್ಛಂತಿ ಕೌಮುದೀಂ ದ್ರಷ್ಟುಂ ಸೋಽನಘಃ ಪ್ರೀಯತೇ ಸದಾ ।।

ಅನಂತರ ಕಿಲಕಿಲ ಶಬ್ದಗಳೊಂದಿಗೆ ಪುರಜನರು ಅನಘ ಕೃಷ್ಣನ ಮುಖಚಂದ್ರವನ್ನು ನೋಡಲು ಬಂದು ಹೋಗುತ್ತಿದ್ದರು.

19181148a ದ್ವಾರಕಾಂ ಪ್ರಾಪ್ಯ ಕೃಷ್ಣಾಸ್ತು ರೇಮೇ ಯದುಗಣೈಃ ಸಹ ।
19181148c ವಿವಿಧಾನ್ಸರ್ವಕಾಮಾರ್ಥಾಂಛ್ರಿಯಾ ಪರಮಯಾ ಯುತಃ ।।

ದ್ವಾರಕೆಯನ್ನು ಸೇರಿ ಕೃಷ್ಣನಾದರೋ ಯದುಗಣಗಳ ಸಹಿತ ಪರಮಶ್ರೀಯಿಂದ ವಿವಿಧ ಸರ್ವಕಾಮನೆಗಳನ್ನೂ ಪೂರೈಸಿ ರಮಿಸಿದನು.”

ಸಮಾಪ್ತಿ

ಇತಿ ಶ್ರೀಮಹಾಭಾರತೇ ಖಿಲೇಷು ಹರಿವಂಶೇ ವಿಷ್ಣುಪರ್ವಣಿ ದ್ವಾರಕಾಪ್ರತ್ಯಾಗಮನೇ ಏಕಶೀತ್ಯಧಿಕಶತತಮೋಽಧ್ಯಾಯಃ ।।


  1. ಬಲಪರಾಕ್ರಮಗಳಿಂದ ಗೆದ್ದ ಕನ್ಯೆಯ ವಿವಾಹವನ್ನು ವೀರ್ಯವಿವಾಹ ಎನ್ನುತ್ತಾರೆ (ಗೀತಾ ಪ್ರೆಸ್). ↩︎

  2. ವಿವಾಹದಲ್ಲಿ ಕನ್ಯೆಯ ಪಕ್ಷದ ಸ್ತ್ರೀಯರು ವರನಪಕ್ಷದ ಸ್ತ್ರೀಯರಿಗೆ ಪ್ರೇಮಪೂರ್ಣ ಪರಿಹಾಸದ ರೂಪದಲ್ಲಿ ನೀಡುವ ಬೈಗುಳಗಳನ್ನು ಜಂಬೂಲ ಎನ್ನುತ್ತಾರೆ. ಆ ಸಂಪ್ರದಾಯವನ್ನೇ ಇಲ್ಲಿ ಜಂಬೂಲಮಾಲಿಕಾ ಎನ್ನಲಾಗಿದೆ (ನೀಲಕಂಠ). ↩︎

  3. ವಿಷ್ಣುವಿನ ಅವತಾರಗಳಲ್ಲಿ ಮತ್ಸ್ಯಾವತಾರವು ಮೊದಲನೆಯದು. ಅದು ಜಲದಲ್ಲಿ ಆದುದರಿಂದ ಜಲದ ಅಧಿಷ್ಠಾತಾ ವರುಣದೇವನು ಅದರಲ್ಲಿ ವಿದ್ಯಮಾನನಾಗಿದ್ದನು. ಆದುದರಿಂದ ವೈಷ್ಣವೀ ಅವತಾರಗಳಲ್ಲಿ ವರುಣನೇ ಪ್ರಥಮನೆಂದಾದನು (ಗೀತಾ ಪ್ರೆಸ್). ↩︎

  4. ಜನ್ಮ, ಸತ್ತಾ, ಪರಿಣಾಮ, ವೃದ್ಧಿ, ಕ್ಷಯ ಮತ್ತು ನಾಶ – ಈ ಆರು ಭಾವವಿಕಾರಗಳು ಪ್ರಾಕೃತ ಶರೀರದ ಧರ್ಮಗಳು. ಇವುಗಳಲ್ಲಿ ಮೊದಲನೆಯ ಧರ್ಮವು ಜನ್ಮವು. ಆದುದರಿಂದ ಇಲ್ಲಿ ಪೂರ್ವಧರ್ಮದ ಅರ್ಥವು ಜನ್ಮ ಎಂದಾಗುತ್ತದೆ (ನೀಲಕಂಠ). ↩︎