ಪ್ರವೇಶ
।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।
ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ
ಶ್ರೀ ಮಹಾಭಾರತ
ಖಿಲಭಾಗೇ ಹರಿವಂಶಃ
ವಿಷ್ಣು ಪರ್ವ
ಅಧ್ಯಾಯ 180
ಸಾರ
ಕಾರ್ತಿಕೇಯ ಮತ್ತು ಕೃಷ್ಣರ ಯುದ್ಧದಲ್ಲಿ ಕಾರ್ತಿಕೇಯನ ಪರಾಜಯ (1-20); ಕೋಟವೀದೇವಿಯು ಕಾರ್ತಿಕೇಯನನ್ನು ರಕ್ಷಿಸಿದುದು (21-29); ಬಾಣಾಸುರ ಮತ್ತು ಕೃಷ್ಣರ ಯುದ್ಧ (30-100); ಕೃಷ್ಣನು ಬಾಣಾಸುರನ ಸಹಸ್ರ ಬಾಹುಗಳನ್ನು ಕತ್ತರಿಸಿದುದು (101-141); ಮಹಾದೇವನು ಬಾಣಾಸುರನಿಗೆ ಮಹಾಕಾಲನಾಗುವ ವರದಾನವನ್ನಿತ್ತುದುದು (142-164).
19180001 ಜನಮೇಜಯ ಉವಾಚ ।
19180001a ಅಪಯಾತೇ ತತೋ ದೇವೇ ಕೃಷ್ಣೇ ಚೈವ ಮಹಾತ್ಮನಿ ।
19180001c ಪುನಶ್ಚಾಸೀತ್ಕಥಂ ಯುದ್ಧಂ ಪರೇಷಾಂ ಲೋಮಹರ್ಷಣಮ್ ।।
ಜನಮೇಜಯನು ಹೇಳಿದನು: “ಮಹಾತ್ಮರಾದ ಮಹಾದೇವ ಮತ್ತು ಕೃಷ್ಣರು ಯುದ್ಧದಿಂದ ಹಿಂದೆ ಸರಿಯಲು ಶತ್ರುಗಳ ಆ ಲೋಮಹರ್ಷಣ ಯುದ್ಧವು ಹೇಗೆ ನಡೆಯಿತು?”
19180002 ವೈಶಂಪಾಯನ ಉವಾಚ ।
19180002a ಕುಂಭಾಂಡಸಂಗೃಹೀತೇ ತು ರಥೇ ತಿಷ್ಠನ್ಗುಹಸ್ತದಾ ।
19180002c ಅಭಿದುದ್ರಾವ ಕೃಷ್ಣಂ ಚ ಬಲಂ ಪ್ರದ್ಯುಮ್ನಮೇವ ಚ ।।
ವೈಶಂಪಾಯನನು ಹೇಳಿದನು: “ಕುಂಭಾಂಡನು ನಡೆಸುತ್ತಿದ್ದ ರಥದಲ್ಲಿ ನಿಂತಿದ್ದ ಗುಹ ಕಾರ್ತಿಕೇಯನು ಕೃಷ್ಣ, ಬಲರಾಮ ಮತ್ತು ಪ್ರದ್ಯುಮ್ನರನ್ನು ಆಕ್ರಮಣಿಸಿದನು.
19180003a ತತಃ ಶರಶತೈರುಗ್ರೈಸ್ತಾನ್ವಿವ್ಯಾಧ ರಣೇ ಗುಹಃ ।
19180003c ಅಮರ್ಷರೋಷಸಂಕ್ರುದ್ಧಃ ಕುಮಾರಃ ಪ್ರವರೋ ನದನ್ ।।
ಅಮರ್ಷಣನೂ ರೋಷಸಂಕ್ರುದ್ಧನೂ ಆದ ಪ್ರವರ ಗುಹ ಕುಮಾರನು ರಣದಲ್ಲಿ ಸಿಂಹನಾದಗೈದು ನೂರು ಉಗ್ರ ಶರಗಳಿಂದ ಅವರನ್ನು ಹೊಡೆದನು.
19180004a ಶರಸಂವೃತಗಾತ್ರಾಸ್ತೇ ತ್ರಯಸ್ತ್ರಯ ಇವಾಗ್ನಯಃ ।
19180004c ಶೋಣಿತೌಘಪ್ಲುತೈರ್ಗಾತ್ರೈಃ ಪ್ರಾಯುಧ್ಯಂತ ಗುಹಂ ತತಃ ।।
ಶರಗಳಿಂದ ಆವೃತಗೊಂಡ ಆ ಮೂವರ ಶರೀರಗಳು ಮೂರು ಅಗ್ನಿಗಳಂತೆ ತೋರಿದವು. ರಕ್ತದಿಂದ ತೋಯ್ದ ಶರೀರಗಳಿಂದಲೇ ಅವರು ಗುಹನನ್ನು ಆಕ್ರಮಣಿಸಿದರು.
19180005a ತತಸ್ತೇ ಯುದ್ಧಮಾರ್ಗಜ್ಞಾಸ್ತ್ರಯಸ್ತ್ರಿಭಿರನುತ್ತಮೈಃ ।
19180005c ವಾಯವ್ಯಾಗ್ನೇಯಪಾರ್ಜನ್ಯೈರ್ಬಿಭಿದುರ್ದೀಪ್ತತೇಜಸಃ ।।
ಆಗ ಯುದ್ಧಮಾರ್ಗಗಳನ್ನು ತಿಳಿದಿದ್ದ ಆ ಮೂವರು ದೀಪ್ತತೇಜಸ್ವಿಗಳು ಅನುತ್ತಮ ವಾಯವ್ಯ, ಆಗ್ನೇಯ ಮತ್ತು ಪಾರ್ಜನ್ಯ ಅಸ್ತ್ರಗಳನ್ನು ಪ್ರಯೋಗಿಸಿದರು.
19180006a ತಾನಸ್ತ್ರಾಂತ್ರಿಭಿರೇವಾಸ್ತ್ರೈರ್ವಿನಿವಾರ್ಯ ಸ ಪಾವಕಿಃ ।
19180006c ಶೈಲವಾರುಣಸಾವಿತ್ರೈಸ್ತಾನ್ಸ ವಿವ್ಯಾಧ ಕೋಪವಾನ್ ।
ಆ ಮೂರು ಅಸ್ತ್ರಗಳನ್ನೂ ತಡೆದು ಕೋಪವಾನ್ ಪಾವಕಿಯು ಶೈಲ, ವಾರುಣ ಮತ್ತು ಸಾವಿತ್ರಾಸ್ತ್ರಗಳಿಂದ ಅವರನ್ನು ಹೊಡೆದನು.
19180006e ತಸ್ಯ ದೀಪ್ತಶರೌಘಸ್ಯ ದೀಪ್ತಚಾಪಧರಸ್ಯ ಚ ।।
19180007a ಶರೌಘಾನಸ್ತ್ರಮಾಯಾಭಿರ್ಗ್ರಸಂತಿ ಸ್ಮ ಮಹಾತ್ಮನಃ ।
19180007c ಯದಾ ತದಾ ಗುಹಃ ಕ್ರುದ್ಧಃ ಪ್ರಜ್ವಲನ್ನಿವ ತೇಜಸಾ ।।
ದೀಪ್ತಶರೌಘಗಳನ್ನು ಪ್ರಯೋಗಿಸುತ್ತಿದ್ದ ಮತ್ತು ದೀಪ್ತಚಾಪವನ್ನು ಧರಿಸಿದ್ದ ಅವನ ಶರೌಘಗಳನ್ನು ಆ ಮೂವರು ಮಹಾತ್ಮರೂ ಅಸ್ತ್ರಮಾಯೆಗಳಿಂದ ನಷ್ಟಗೊಳಿಸತೊಡಗಿದರು. ಆಗ ಗುಹನು ಕ್ರುದ್ಧನಾಗಿ ತೇಜಸ್ಸಿನಿಂದ ಪ್ರಜ್ವಲಿಸುತ್ತಿರುವವನಂತೆ ಕಂಡನು.
19180008a ಅಸ್ತ್ರಂ ಬ್ರಹ್ಮಶಿರೋ ನಾಮ ಕಾಲಕಲ್ಪಂ ದುರಾಸದಮ್ ।
19180008c ಸಂದಷ್ಟೌಷ್ಠಪುಟಃ ಸಂಖ್ಯೇ ಜಗೃಹೇ ಪಾವಕಿಃ ಪ್ರಭುಃ ।।
ಆಗ ರಣದಲ್ಲಿ ಪ್ರಭು ಪಾವಕಿಯು ತುಟಿಗಳನ್ನು ಕಚ್ಚುತ್ತಾ ಕಾಲನಂತೆ ದುರಾಸದವಾದ ಬ್ರಹ್ಮಶಿರ ಎಂಬ ಹೆಸರಿನ ಅಸ್ತ್ರವನ್ನು ತೆಗೆದುಕೊಂಡನು.
19180009a ಪ್ರಯುಕ್ತೇ ಬ್ರಹ್ಮಶಿರಸಿ ಸಹಸ್ರಾಂಶುಸಮಪ್ರಭೇ ।
19180009c ಉಗ್ರೇ ಪರಮದುರ್ಧರ್ಷೇ ಲೋಕಕ್ಷಯಕರೇ ತಥಾ ।।
19180010a ಹಾಹಾಭೂತೇಷು ಸರ್ವೇಷು ಪ್ರಧಾವತ್ಸು ಸಮಂತತಃ ।
19180010c ಅಸ್ತ್ರತೇಜಃಪ್ರಮೂಢೇ ತು ವಿಷಣ್ಣೇ ಜಗತಿ ಪ್ರಭುಃ ।
ಸಹಸ್ರಸೂರ್ಯರ ಪ್ರಭೆಯಿದ್ದ ಉಗ್ರ ಪರಮದುರ್ಧರ್ಷ ಲೋಕಕ್ಷಯಕರ ಬ್ರಹ್ಮಶಿರಸ್ಸನ್ನು ಪ್ರಯೋಗಿಸಲು ಭೂತಗಳು ಹಾಹಾಕಾರಗೈದವು. ಎಲ್ಲರೂ ಎಲ್ಲಕಡೆ ಓಡತೊಡಗಿದರು. ಅಸ್ತ್ರತೇಜಸ್ಸಿನಿಂದ ಮೂಢಗೊಂಡ ಜಗತ್ತು ವಿಷಾದಹೊಂದಿತು.
19180010e ಕೇಶವಃ ಕೇಶಿಮಥನಶ್ಚಕ್ರಂ ಜಗ್ರಾಹ ವೀರ್ಯವಾನ್ ।।
19180011a ಸರ್ವೇಷಾಮಸ್ತ್ರವೀರ್ಯಾಣಾಂ ವಾರಣಂ ಘಾತನಂ ತಥಾ ।
19180011c ಚಕ್ರಮಪ್ರತಿಚಕ್ರಸ್ಯ ಲೋಕೇ ಖ್ಯಾತಂ ಮಹಾತ್ಮನಃ ।।
ಆಗ ಕೇಶವ ಕೇಶಿಮಥನ ವೀರ್ಯವಾನ್ ಮಹಾತ್ಮ ಕೃಷ್ಣನು ಸರ್ವಾಸ್ತ್ರಗಳ ವೀರ್ಯಗಳನ್ನೂ ತಡೆಯುವ ಮತ್ತು ನಾಶಗೊಳಿಸುವ, ಲೋಕದಲ್ಲಿ ಪ್ರತಿಯಾಗಿ ಯಾವುದೂ ತಿರುಗದ, ಲೋಕದಲ್ಲಿ ಖ್ಯಾತವಾದ ಚಕ್ರವನ್ನು ಹಿಡಿದನು.
19180012a ಅಸ್ತ್ರಂ ಬ್ರಹ್ಮಶಿರಸ್ತೇನ ನಿಷ್ಪ್ರಭಂ ಕೃತಮೋಜಸಾ ।
19180012c ಘನೈರಿವಾತಪಾಪಾಯೇ ಸವಿತುರ್ಮಂಡಲಂ ಯಥಾ ।।
ಆ ಚಕ್ರವು ತನ್ನ ಓಜಸ್ಸಿನಿಂದ, ವರ್ಷಾಕಾಲದಲ್ಲಿ ದಟ್ಟ ಮೋಡಗಳು ಸೂರ್ಯಮಂಡಲವನ್ನು ಹೇಗೋ ಹಾಗೆ ಬ್ರಹ್ಮಶಿರವನ್ನು ನಿಷ್ಪ್ರಭೆಗೊಳಿಸಿತು.
19180013a ತತೋ ನಿಷ್ಪ್ರಭತಾಂ ಯಾತೇ ನಷ್ಟವೀರ್ಯೇ ಮಹೌಜಸಿ ।
19180013c ತಸ್ಮಿನ್ಬ್ರಹ್ಮಶಿರಸ್ಯಸ್ತ್ರೇ ಕ್ರೋಧಸಂರಕ್ತಲೋಚನಃ ।।
19180014a ಗುಹಃ ಪ್ರಜಜ್ವಾಲ ರಣೇ ಹವಿಷೇವಾಗ್ನಿರುಲ್ಬಣಃ ।
ಆ ಮಹೌಜಸ ಬ್ರಹ್ಮಶಿರಾಸ್ತ್ರವು ನಿಷ್ಪ್ರಭೆಯೂ ನಷ್ಟವೀರ್ಯವೂ ಆದುದನ್ನು ನೋಡಿ ರಣದಲ್ಲಿ ಗುಹನು ಹವಿಸ್ಸುಗಳಿಂದ ಉಲ್ಬಣಿಸುವ ಅಗ್ನಿಯಂತೆ ಕ್ರೋಧಸಂರಕ್ತಲೋಚನನಾಗಿ ಪ್ರಜ್ವಲಸಿದನು.
19180014c ಶತ್ರುಘ್ನೀಂ ಜ್ವಲಿತಾಂ ದಿವ್ಯಾಂ ಶಕ್ತಿಂ ಜಗ್ರಾಹ ಕಾಂಚನೀಮ್ ।।
19180015a ಅಮೋಘಾಂ ದಯಿತಾಂ ಘೋರಾಂ ಸರ್ವಲೋಕಭಯಾವಹಾಮ್ ।
19180015c ತಾಂ ಪ್ರದೀಪ್ತಾಂ ಮಹೋಲ್ಕಾಭಾಂ ಯುಗಾಂತಾಗ್ನಿಸಮಪ್ರಭಾಮ್ ।।
19180016a ಘಂಟಾಮಾಲಾಕುಲಾಂ ದಿವ್ಯಾಂ ಚಿಕ್ಷೇಪ ರುಷಿತೋ ಗುಹಃ ।
19180016c ನನಾದ ಬಲವಚ್ಚಾಪಿ ನಾದಂ ಶತ್ರುಭಯಂಕರಮ್ ।।
ಆಗ ಗುಹನು ರೋಷಿತಗೊಂಡು ಸರ್ವಲೋಕಗಳಿಗೂ ಭಯವನ್ನುಂಟುಮಾಡುವ, ಯುಗಾಂತದ ಅಗ್ನಿಯ ಪ್ರಭೆಯಿದ್ದ, ಮಹಾಉಲ್ಕೆಯಂತೆ ಹೊಳೆಯುತ್ತಿದ್ದ ಅಮೋಘವಾದ, ಘಂಟೆಗಳ ಮಾಲೆಗಳಿಂದ ಅಲಂಕೃತವಾಗಿದ್ದ, ತನಗೆ ಪ್ರಿಯವಾದ, ಅಮೋಘ, ಘೋರ, ಪ್ರಜ್ವಲಿಸುತ್ತಿದ್ದ ದಿವ್ಯ ಕಾಂಚನ ಶಕ್ತಿಯನ್ನು ಹಿಡಿದು ಕೃಷ್ಣನ ಮೇಲೆ ಎಸೆದನು ಮತ್ತು ಬಲವತ್ತಾದ ಶತ್ರುಭಯಂಕರ ಸಿಂಹನಾದಗೈದನು ಕೂಡ.
19180017a ಸಾ ಚ ಕ್ಷಿಪ್ತಾ ತದಾ ತೇನ ಬ್ರಹ್ಮಣ್ಯೇನ ಮಹಾತ್ಮನಾ ।
19180017c ಜೃಂಭಮಾಣೇವ ಗಗನೇ ಸಂಪ್ರದೀಪ್ತಮುಖೀ ತದಾ ।।
19180018a ಅಧಾವತ ಮಹಾಶಕ್ತಿಃ ಕೃಷ್ಣಸ್ಯ ವಧಕಾಂಕ್ಷಿಣೀ ।
ಮಹಾತ್ಮ ಬ್ರಹ್ಮಣ್ಯನು ಎಸೆದ ಆ ಮಹಾಶಕ್ತಿಯು ಕೃಷ್ಣನ ವಧೆಯನ್ನು ಬಯಸಿ ಆಕಳಿಸುತ್ತಿರುವಂತೆ ಮುಖದ ತುಂಬಾ ಅಗ್ನಿಯನ್ನು ಹೊರಚೆಲ್ಲುತ್ತಾ ಆಕಾಶಮಾರ್ಗವಾಗಿ ಧಾವಿಸಿತು.
19180018c ಭೃಶಂ ವಿಷಣ್ಣಃ ಶಕ್ರೋಽಪಿ ಸರ್ವಾಮರಗಣೈರ್ವೃತಃ ।।
19180019a ಶಕ್ತಿಂ ಪ್ರಜ್ವಲಿತಾಂ ದೃಷ್ಟ್ವಾ ದಗ್ಧಃ ಕೃಷ್ಣೇತಿ ಚಾಬ್ರವೀತ್ ।
ಸರ್ವ ಅಮರಗಣಗಳಿಂದ ಆವೃತನಾಗಿದ್ದ ಶಕ್ರನೂ ಕೂಡ ಪ್ರಜ್ವಲಿಸುತ್ತಿದ್ದ ಶಕ್ತಿಯನ್ನು ನೋಡಿ ಅತ್ಯಂತ ವಿಷಣ್ಣನಾದನು ಮತ್ತು “ಕೃಷ್ಣನು ಸುಟ್ಟುಹೋದ!” ಎಂದೂ ಹೇಳಿದನು.
19180019c ತಾಂ ಸಮೀಪಮನುಪ್ರಾಪ್ತಾಂ ಮಹಾಶಕ್ತಿಂ ಮಹಾಮೃಧೇ ।
19180019e ಹುಂಕಾರೇಣೈವ ನಿರ್ಭರ್ತ್ಸ್ಯ ಪಾತಯಾಮಾಸ ಭೂತಲೇ ।।
ಮಹಾರಣದಲ್ಲಿ ತನ್ನ ಬಳಿಬರುತ್ತಿದ್ದ ಆ ಮಹಾಶಕ್ತಿಯನ್ನು ಕೃಷ್ಣನು ಹುಂಕಾರಮಾತ್ರದಿಂದಲೇ ತಿರಸ್ಕರಿಸಿ ಭೂಮಿಯ ಮೇಲೆ ಬೀಳಿಸಿದನು.
19180020a ಪತಿತಾಯಾಂ ಮಹಾಶಕ್ತ್ಯಾಂ ಸಾಧು ಸಾಧ್ವಿತಿ ಸರ್ವಶಃ ।
19180020c ಸಿಂಹನಾದಂ ತತಶ್ಚಕ್ರುಃ ಸರ್ವೇ ದೇವಾಃ ಸವಾಸವಾಃ ।।
ಆ ಮಹಾಶಕ್ತಿಯು ಬೀಳಲು ಎಲ್ಲರೂ ಸಾಧು ಸಾಧು ಎಂದರು. ವಾಸವನೊಂದಿಗೆ ಸರ್ವ ದೇವತೆಗಳೂ ಸಿಂಹನಾದಗೈದರು.
19180021a ತತೋ ದೇವೇಷು ನರ್ದತ್ಸು ವಾಸುದೇವಃ ಪ್ರತಾಪವಾನ್ ।
19180021c ಪುನಶ್ಚಕ್ರಂ ಸ ಜಗ್ರಾಹ ದೈತ್ಯಾಂತಕರಣಂ ರಣೇ ।।
ಹಾಗೆ ದೇವತೆಗಳು ನಾದಗೈಯುತ್ತಿರಲು ಪ್ರತಾಪವಾನ್ ವಾಸುದೇವನು ರಣದಲ್ಲಿ ದೈತ್ಯರನ್ನು ನಾಶಗೊಳಿಸುವ ಚಕ್ರವನ್ನು ಪುನಃ ಎತ್ತಿಕೊಂಡನು.
19180022a ವ್ಯಾವಿಧ್ಯಮಾನೇ ಚಕ್ರೇ ತು ಕೃಷ್ಣೇನಾಪ್ರತಿಮೌಜಸಾ ।
19180022c ಕುಮಾರರಕ್ಷಣಾರ್ಥಾಯ ಬಿಭ್ರತೀ ಸುತನುಂ ತದಾ ।।
19180023a ದಿಗ್ವಾಸಾ ದೇವವಚನಾತ್ಪ್ರವಿಷ್ಟಾ ತತ್ರ ಕೋಟವೀ ।
19180023c ಲಂಬಮಾನಾ ಮಹಾಭಾಗಾ ಭಾಗೋ ದೇವ್ಯಾಸ್ತಥಾಷ್ಟಾಮಃ ।
19180023e ಚಿತ್ರಾ ಕನಕಶಕ್ತಿಸ್ತು ಸಾ ಚ ನಗ್ನಾ ಸ್ಥಿತಾಂತರೇ ।।
ಅಪ್ರತಿಮೌಜಸ ಕೃಷ್ಣನು ಚಕ್ರವನ್ನು ತಿರುಗಿಸುತ್ತಿರಲು ಕುಮಾರನ ರಕ್ಷಣೆಗಾಗಿ ಮಹಾದೇವನ ವಚನದಂತೆ, ದೇವಿ ಪಾರ್ವತಿಯ ಎಂಟನೇ ಅಂಶ, ಮಹಾಭಾಗೆ ಕೋಟವಿಯು ಸುಂದರ ಶರೀರವನ್ನು ಧರಿಸಿ ಕೃಷ್ಣ ಮತ್ತು ಕುಮಾರರ ಮಧ್ಯೆ ಬಂದು ನಗ್ನರೂಪದಲ್ಲಿಯೇ ನಿಂತುಕೊಂಡಳು. ಆ ವಿಚಿತ್ರ ಕನಕಶಕ್ತಿ ಮತ್ತು ದೇವಿ ಕೋಟವಿ ಇಬ್ಬರೂ ಮಧ್ಯದಲ್ಲಿ ಸ್ಥಿತರಾಗಿದ್ದರು.
19180024a ಅಥಾಂತರಾತ್ಕುಮಾರಸ್ಯ ದೇವೀಂ ದೃಷ್ಟ್ವಾ ಮಹಾಭುಜಃ ।
19180024c ಪರಾಙ್ಮುಖಸ್ತತೋ ವಾಕ್ಯಮುವಾಚ ಮಧುಸೂದನಃ ।।
ಮಧ್ಯಬಂದಿದ್ದ ದೇವಿಯನ್ನು ನೋಡಿ ಕುಮಾರನು ಪರಾಙ್ಮುಖನಾಗಲು ಮಹಾಭುಜ ಮಧುಸೂದನನು ಈ ಮಾತನ್ನಾಡಿದನು.
19180025a ಶ್ರೀಭಗವಾನುವಾಚ ।
19180025a ಅಪಗಚ್ಛಾಪಗಚ್ಛ ತ್ವಂ ಧಿಕ್ತ್ವಾಮಿತಿ ವಚೋಽಬ್ರವೀತ್ ।
19180025c ಕಿಮೇವಂ ಕುರುಷೇ ವಿಘ್ನಂ ನಿಶ್ಚಿತಸ್ಯ ವಧಂ ಪ್ರತಿ ।।
ಶ್ರೀಭಗವಂತನು ಹೇಳಿದನು: “ಹೋಗು! ಹೋಗು! ನಿನಗೆ ಧಿಕ್ಕಾರ! ವಧೆಗೈಯಲು ನಿಶ್ಚಯಿಸಿರುವಾಗ ನೀನು ಏಕೆ ಹೀಗೆ ವಿಘ್ನವನ್ನುಂಟುಮಾಡುತ್ತಿದ್ದೀಯೆ?” ಎಂದನು.”
19180026a ವೈಶಂಪಾಯನ ಉವಾಚ ।
19180026a ಶ್ರುತ್ವೈವಂ ವಚನಂ ತಸ್ಯ ಕೋಟಾವೀ ತು ತದಾ ವಿಭೋಃ ।
19180026c ನೈವ ವಾಸಃ ಸಮಾಧತ್ತೇ ಕುಮಾರಪರಿರಕ್ಷಣಾತ್ ।।
ವೈಶಂಪಾಯನನು ಹೇಳಿದನು: “ವಿಭುವಿನ ಆ ಮಾತನ್ನು ಕೇಳಿಯೂ ಕುಮಾರನನ್ನು ರಕ್ಷಿಸುವ ಸಲುವಾಗಿ ಅವಳು ವಸ್ತ್ರವನ್ನು ತೊಡಲಿಲ್ಲ.
19180027 ಶ್ರೀಭಗವಾನುವಾಚ ।
19180027a ಅಪವಾಹ್ಯ ಗುಹಂ ಶೀಘ್ರಮಪಯಾಹಿ ರಣಾಜಿರಾತ್ ।
19180027c ಸ್ವಸ್ತಿ ಹ್ಯೇವಂ ಭವೇದದ್ಯ ಯೋತ್ಸ್ಯತೋ ಯೋತ್ಸ್ಯತಾ ಮಯಾ ।।
ಶ್ರೀಭಗವಂತನು ಹೇಳಿದನು: “ರಣಾಂಗಣದಿಂದ ಶೀಘ್ರದಲ್ಲಿಯೇ ಗುಹನನ್ನು ಕರೆದುಕೊಂಡು ಹೋಗಿ ನೀನೂ ಕೂಡ ಹೊರಟುಹೋಗು. ಇದರಿಂದಾಗಿ ಇಂದು ನನ್ನೊಡನೆ ಯುದ್ಧಮಾಡುತ್ತಿರುವ ಅವನಿಗೆ ಮಂಗಳವುಂಟಾಗುತ್ತದೆ.”
19180028a ತಾಂ ಚ ದೃಷ್ಟ್ವಾ ಸ್ಥಿತಾಂ ದೇವೋ ಹರಿಃ ಸಂಗ್ರಾಮಮೂರ್ಧನಿ ।
19180028c ಸಂಜಹಾರ ತತಶ್ಚಕ್ರಂ ಭಗವಾನ್ವಾಸವಾನುಜಃ ।।
ಸಂಗ್ರಾಮಮೂರ್ಧನಿಯಲ್ಲಿ ಸ್ಥಿತಳಾಗಿದ್ದ ಅವಳನ್ನು ನೋಡಿ ವಾಸವಾನುಜ ಭಗವಾನ್ ಹರಿಯು ಚಕ್ರವನ್ನು ಹಿಂತೆಗೆದುಕೊಂಡನು.
19180029a ಏವಂ ಕೃತೇ ತು ಕೃಷ್ಣೇನ ದೇವದೇವೇನ ಧೀಮತಾ ।
19180029c ಅಪವಾಹ್ಯ ಗುಹಂ ದೇವೀ ಹರಸಾನ್ನಿಧ್ಯಮಾಗತಾ ।।
ಧೀಮತ ದೇವದೇವ ಕೃಷ್ಣನು ಹೀಗೆ ಮಾಡಲು ದೇವಿಯು ಗುಹನನ್ನು ಎತ್ತಿಕೊಂಡು ಹರನ ಸಾನ್ನಿಧ್ಯದಲ್ಲಿ ಬಂದಳು.
19180030a ಏತಸ್ಮಿನ್ನಂತರೇ ಚೈವ ವರ್ತಮಾನೇ ಮಹಾಭಯೇ ।
19180030c ಕುಮಾರೇ ರಕ್ಷಿತೇ ದೇವ್ಯಾ ಬಾಣಸ್ತಂ ದೇಶಮಾಯಯೌ ।।
ಈ ಮಧ್ಯದಲ್ಲಿ, ಆ ಮಹಾಭಯವು ಉಂಟಾಗಿ ದೇವಿಯು ಕುಮಾರನನ್ನು ರಕ್ಷಿಸಲು, ಬಾಣನು ಅಲ್ಲಿಗೆ ಬಂದನು.
19180031a ಅಪಯಾಂತಂ ಗುಹಂ ದೃಷ್ಟ್ವಾ ಮುಕ್ತಂ ಕೃಷ್ಣೇನ ಸಂಯುಗಾತ್ ।
19180031c ಬಾಣಶ್ಚಿಂತಯತೇ ತತ್ರ ಸ್ವಯಂ ಯೋತ್ಸ್ಯಾಮಿ ಮಾಧವಮ್ ।।
ಕೃಷ್ಣನ ಹಿಡಿತದಿಂದ ಗುಹನನ್ನು ಮುಕ್ತಗೊಳಿಸಿ ಕರೆದುಕೊಂಡು ಹೋದುದನ್ನು ನೋಡಿ ಬಾಣನು ಸ್ವಯಂ ತಾನೇ ಮಾಧವನೊಡನೆ ಯುದ್ಧಮಾಡಲು ಯೋಚಿಸಿದನು.”
19180032 ವೈಶಂಪಾಯನ ಉವಾಚ ।
19180032a ಭೂತಯಕ್ಷಗಣಾಶ್ಚೈವ ಬಾಣಾನೀಕಂ ಚ ಸರ್ವಶಃ ।
19180032c ದಿಶಂ ಪ್ರದುದ್ರುವುಃ ಸರ್ವೇ ಭಯಮೋಹಿತಲೋಚನಾಃ ।।
ವೈಶಂಪಾಯನನು ಹೇಳಿದನು: “ಆಗ ಭೂತ-ಯಕ್ಷಗಣಗಳು ಮತ್ತು ಬಾಣನ ಸರ್ವ ಸೇನೆಗಳೂ ಭಯಮೋಹಿತಲೋಚನರಾಗಿ ಎಲ್ಲಕಡೆ ದಿಕ್ಕಾಪಾಲಾಗಿ ಓಡಿಹೋದವು.
19180033a ಪ್ರಮಾಥಗಣಭೂಯಿಷ್ಠೇ ಸೈನ್ಯೇ ದೀರ್ಣೇ ಮಹಾಸುರಃ ।
19180033c ನಿರ್ಜಗಾಮ ತತೋ ಬಾಣೋ ಯುದ್ಧಾಯಾಭಿಮುಖಸ್ತ್ವರನ್ ।।
ಪ್ರಮಥಗಣಗಳೇ ಅಧಿಕವಾಗಿದ್ದ ಆ ಸೇನೆಯೂ ಚದುರಿಹೋಗಲು ಮಹಾಸುರ ಬಾಣನು ತ್ವರೆಮಾಡಿ ಯುದ್ಧಾಭಿಮುಖವಾಗಿ ಹೊರಟನು.
19180034a ಭೀಮಪ್ರಹರಣೈರ್ಘೋರೈರ್ದೈತ್ಯೇಂದ್ರೈಃ ಸುಮಹಾರಥೈಃ ।
19180034c ಮಹಾಬಲೈರ್ಮಹಾವೀರೈರ್ವಜ್ರೀವ ಸುರಸತ್ತಮೈಃ ।।
ಸುರಸತ್ತಮರಿಂದ ವಜ್ರಿಯು ಹೇಗೋ ಹಾಗೆ ಭಯಂಕರ ಆಯುಧಗಳನ್ನು ಹಿಡಿದಿದ್ದ ಸುಮಹಾರಥ ಘೋರ ಮಹಾಬಲ ಮಹಾವೀರ ದೈತ್ರೇಂದ್ರರಿಂದ ಅವನು ಸುತ್ತುವರೆಯಲ್ಪಟ್ಟಿದ್ದನು.
19180035a ಪುರೋಹಿತಾಃ ಶತ್ರುವಧಂ ವದಂತಸ್ತಥೈವ ಚಾನ್ಯೇ ಶ್ರುತಶೀಲವೃದ್ಧಾಃ ।
19180035c ಜಪೈಶ್ಚ ಮಂತ್ರೈಶ್ಚ ತಥೌಷಧೀಭಿರ್ಮಹಾತ್ಮನಃ ಸ್ವಸ್ತ್ಯಯನಂ ಪ್ರಚಕ್ರುಃ ।।
ಆಗ ಶ್ರುತಶೀಲವೃದ್ಧ ಪುರೋಹಿತರು ಮತ್ತು ಅನ್ಯರು ಶತ್ರುವಧೆಯ ಆಶೀರ್ವಾದವನ್ನು ನೀಡುತ್ತಾ ಜಪ-ಮಂತ್ರ-ಓಷಧಿಗಳಿಂದ ಆ ಮಹಾತ್ಮ ದೈತ್ಯರಾಜನಿಗೆ ಸ್ವಸ್ತಿವಾಚನವನ್ನು ಮಾಡಿದರು.
19180036a ತತಸ್ತೂರ್ಯಪ್ರಣಾದೈಶ್ಚ ಭೇರೀಣಾಂ ತು ಮಹಾಸ್ವನೈಃ ।
19180036c ಸಿಂಹನಾದೈಶ್ಚ ದೈತ್ಯಾನಾಂ ಬಾಣಃ ಕೃಷ್ಣಮಭಿದ್ರವತ್ ।।
ಆಗ ಕಹಳೆ-ನಗಾರಿಗಳ ರಣಭೇರಿಗಳ ಮಹಾಧ್ವನಿಗಳೊಡನೆ ಮತ್ತು ದೈತ್ಯರ ಸಿಂಹನಾದಗಳೊಡನೆ ಬಾಣನು ಕೃಷ್ಣನನ್ನು ಆಕ್ರಮಣಿಸಿದನು.
19180037a ದೃಷ್ಟ್ವಾ ಬಾಣಂ ತು ನಿರ್ಯಾತಂ ಯುದ್ಧಾಯೈವ ವ್ಯವಸ್ಥಿತಮ್ ।
19180037c ಆರುಹ್ಯ ಗರುಡಂ ಕೃಷ್ಣೋ ಬಾಣಾಯಾಭಿಮುಖೋ ಯಯೌ ।।
ಬಾಣನು ಹೊರಟು ಯುದ್ಧದಲ್ಲಿ ವ್ಯವಸ್ಥಿತನಾಗಿದ್ದುದನ್ನು ನೋಡಿ ಕೃಷ್ಣನು ಗರುಡನನ್ನೇರಿ ಬಾಣನ ಅಭಿಮುಖನಾಗಿ ಬಂದನು.
19180038a ಆಯಾಂತಮಥ ತಂ ದೃಷ್ಟ್ವಾ ಯದೂನಾಮೃಷಭಂ ರಣೇ ।
19180038c ವೈನತೇಯಮಥಾರೂಢಂ ಕೃಷ್ಣಮಪ್ರತಿಮೌಜಸಮ್ ।।
19180039a ಅಥ ಬಾಣಸ್ತು ತಂ ದೃಷ್ಟ್ವಾ ಪ್ರಮುಖೇ ಪ್ರತ್ಯುಪಸ್ಥಿತಮ್ ।
19180039c ಉವಾಚ ವಚನಂ ಕ್ರುದ್ಧೋ ವಾಸುದೇವಂ ತರಸ್ವಿನಮ್ ।।
ಆಗ ವೈನತೇಯನನ್ನೇರಿ ರಣದಲ್ಲಿ ತನ್ನೆಡೆಗೆ ಬರುತ್ತಿದ್ದ ಯದುಗಳ ವೃಷಭ ಅಪ್ರತಿಮತೇಜಸ್ವೀ ಕೃಷ್ಣನನ್ನು ನೋಡಿ, ತನ್ನ ಎದಿರು ಬಂದು ಉಪಸ್ಥಿತನಾದ ಅವನನ್ನು ನೋಡಿ ಬಾಣನು ಕ್ರುದ್ಧನಾಗಿ ತರಸ್ವೀ ವಾಸುದೇವನಿಗೆ ಈ ಮಾತನ್ನಾಡಿದನು.
19180040 ಬಾಣ ಉವಾಚ ।
19180040a ತಿಷ್ಠ ತಿಷ್ಠ ನ ಮೇಽದ್ಯ ತ್ವಂ ಜೀವನ್ಪ್ರತಿಗಮಿಷ್ಯಸಿ ।
19180040c ದ್ವಾರಕಾಂ ದ್ವಾರಕಾಸ್ಥಾಂಶ್ಚ ಸುಹೃದೋ ದ್ರಕ್ಷ್ಯಸೇ ನ ಚ ।।
ಬಾಣನು ಹೇಳಿದನು: “ನಿಲ್ಲು! ನಿಲ್ಲು! ಇಂದು ನೀನು ಜೀವಿತನಾಗಿ ದ್ವಾರಕೆಗೆ ಹಿಂದಿರುಗಲಾರೆ ಮತ್ತು ದ್ವಾರಕೆಯಲ್ಲಿರುವ ನಿನ್ನ ಸುಹೃದಯರನ್ನು ನೋಡಲಾರೆ!
19180041a ಸುವರ್ಣವರ್ಣಾನ್ವೃಕ್ಷಾಗ್ರಾನದ್ಯ ದ್ರಕ್ಷ್ಯಸಿ ಮಾಧವ ।
19180041c ಮಯಾಭಿಭೂತಃ ಸಮರೇ ಮುಮೂರ್ಷುಃ ಕಾಲನೋದಿತಃ ।।
ಮಾಧವ! ಇಂದು ರಣಭೂಮಿಯಲ್ಲಿ ನನ್ನಿಂದ ಪರಾಜಿತನಾಗಿ ನೀನು ಕಾಲಪ್ರೇರಿತನಾಗಿ ಮರಣಾಸನ್ನನಾಗಿ ವೃಕ್ಷಗಳ ತುದಿಗಳ ಸುಂದರ ಬಣ್ಣಗಳನ್ನು ನೋಡುತ್ತೀಯೆ.
19180042a ಅದ್ಯ ಬಾಹುಸಹಸ್ರೇಣ ಕಥಮಷ್ಟಭುಜೋ ರಣೇ ।
19180042c ಮಯಾ ಸಹ ಸಮಾಗಮ್ಯ ಯೋತ್ಸ್ಯಸೇ ಗರುಡಧ್ವಜ ।।
ಗರುಡಧ್ವಜ! ಇಂದು ರಣದಲ್ಲಿ ಎಂಟೇ ಬಾಹುಗಳಿಂದ ನೀನು ಸಹಸ್ರಬಾಹುಗಳುಳ್ಳ ನನ್ನೊಡನೆ ಹೇಗೆ ಯುದ್ಧಮಾಡುತ್ತೀಯೆ?
19180043a ಅದ್ಯ ತ್ವಂ ವೈ ಮಯಾ ಯುದ್ಧೇ ನಿರ್ಜಿತಃ ಸಹಬಾಂಧವಃ ।
191800043c ದ್ವಾರಕಾಂ ಶೋಣಿತಪುರೇ ನಿಹತಃ ಸಂಸ್ಮರಿಷ್ಯಸಿ ।।
ಇಂದು ಯುದ್ಧದಲ್ಲಿ ಬಾಂಧವರೊಂದಿಗೆ ನನ್ನಿಂದ ಸೋತು ಶೋಣಿತಪುರದಲ್ಲಿ ಹತನಾಗುವಾಗ ದ್ವಾರಕೆಯನ್ನು ನೆನಪಿಸಿಕೊಳ್ಳುತ್ತೀಯೆ.
19180044a ನಾನಾಪ್ರಹರಣೋಪೇತಂ ನಾನಾಂಗದವಿಭೂಷಿತಮ್ ।
19180044c ಅದ್ಯ ಬಾಹುಸಹಸ್ರಂ ಮೇ ಕೋಟೀಭೂತಂ ನಿಶಾಮಯ ।।
ನಾನಾ ಪ್ರಹರಣೋಪೇತವಾದ ಮತ್ತು ನಾನಾ ಅಂಗದ ವಿಭೂಷಿತವಾದ ನನ್ನ ಈ ಸಹಸ್ರಬಾಹುಗಳು ಇಂದು ಕೋಟಿಬಾಹುಗಳಂತಾಗುವುದನ್ನು ನೋಡು.”
19180045a ಗರ್ಜತಸ್ತಸ್ಯ ವಾಕ್ಯೌಘಾ ಜಲೌಘಾ ಇವ ಸಿಂಧುತಃ ।
19180045c ನಿಶ್ಚರಂತಿ ಮಹಾಘೋರಾ ವಾತೋದ್ಧುತಾ ಇವೋರ್ಮಯಃ ।।
ಚಂಡಮಾರುತಕ್ಕೆ ಸಿಕ್ಕಿ ಸಮುದ್ರದಲ್ಲಿ ನೊರೆಗಳೊಂದಿಗೆ ನೀರಿನ ಮಹಾ ಅಲೆಗಳು ಮೇಲೇಳುವಂತೆ ಗರ್ಜಿಸುತ್ತಿದ್ದ ಅವನ ಬಾಯಿಗಳಿಂದ ಈ ಮಹಾಘೋರ ವಾಕ್ಯಗಳು ಹೊರಹೊಮ್ಮುತ್ತಿದ್ದವು.
19180046a ರೋಷಪರ್ಯಾಕುಲೇ ಚೈವ ನೇತ್ರೇ ತಸ್ಯ ಬಭೂವತುಃ ।
19180046c ಜಗದ್ದಿಧಕ್ಷನ್ನಿವ ಖೇ ಮಹಾಸೂರ್ಯ ಇವೋದಿತಃ ।।
ಅವನ ಕಣ್ಣುಗಳು ಜಗತ್ತನ್ನೇ ಸುಟ್ಟುಬಿಡುತ್ತವೆಯೋ ಅಥವಾ ಆಕಾಶದಲ್ಲಿ ಮಹಾಸೂರ್ಯನ ಉದಯವಾಯಿತೋ ಎನ್ನುವಂತೆ ರೋಷದಿಂದ ಭುಗಿಲೆದ್ದವು.
19180047a ತಚ್ಛ್ರುತ್ವಾ ನಾರದಸ್ತಸ್ಯ ಬಾಣಸ್ಯಾತ್ಯೂರ್ಜಿತಂ ವಚಃ ।
19180047c ಜಹಾಸ ಸುಮಹಾಹಾಸಂ ಭಿಂದನ್ನಿವ ನಭಸ್ತಲಮ್ ।।
ಬಾಣನ ಆ ಊರ್ಜಿತ ಮಾತನ್ನು ಕೇಳಿ ನಾರದನು ನಭಸ್ತಲವನ್ನೇ ಸೀಳುವಂತಹ ಧ್ವನಿಯಲ್ಲಿ ಮಹಾ ಅಟ್ಟಹಾಸಗೈದನು.
19180048a ಯೋಗಪಟ್ಟಮುಪಾಶ್ರಿತ್ಯ ತಸ್ಥೌ ಯುದ್ಧದಿದೃಕ್ಷಯಾ ।
19180048c ಕೌತೂಹಲೋತ್ಫುಲ್ಲದೃಶಃ ಕುರ್ವನ್ಪರ್ಯಟತೇ ಮುನಿಃ ।।
ಯುದ್ಧವನ್ನು ನೋಡುವ ಇಚ್ಛೆಯಿಂದ ಆ ಮುನಿಯು ಯೋಗಪಟ್ಟವನ್ನು ಆಶ್ರಯಿಸಿ ಕುತೂಹಲದಿಂದ ಕಣ್ಣುಗಳನ್ನು ಅರಳಿಸಿ ಆಕಾಶದಲ್ಲಿ ಎಲ್ಲಕಡೆ ಓಡಾಡುತ್ತಿದ್ದನು.
19180049 ಕೃಷ್ಣ ಉವಾಚ ।
191800049a ಬಾಣ ಕಿಂ ಗರ್ಜಸೇ ಮೋಹಾಚ್ಛೂರಾಣಾಂ ನಾಸ್ತಿ ಗರ್ಜಿತಮ್ ।
19180049c ಏಹ್ಯೇಹಿ ಯುಧ್ಯಸ್ವ ರಣೇ ಕಿಂ ವೃಥಾ ಗರ್ಜಿತೇನ ತೇ ।।
ಕೃಷ್ಣನು ಹೇಳಿದನು: “ಬಾಣ! ಮೋಹದಿಂದ ಏಕೆ ಗರ್ಜಿಸುತ್ತಿರುವೆ? ಶೂರರು ಈ ರೀತಿ ಗರ್ಜಿಸುವುದಿಲ್ಲ. ಬಾ! ಬಾ! ರಣದಲ್ಲಿ ಯುದ್ಧಮಾಡು. ಸುಮ್ಮನೇ ಏಕೆ ಗರ್ಜಿಸುತ್ತಿರುವೆ?
19180050a ಯದಿ ಯುದ್ಧಾನಿ ವಚನೈಃ ಸಿದ್ಧ್ಯೇಯುರ್ದಿತಿನಂದನ ।
19180050c ಭವಾನೇವ ಜಯೇ ನಿತ್ಯಂ ಬಹ್ವಬದ್ಧಂ ಪ್ರಜಲ್ಪತಿ ।।
ದಿತಿನಂದನ! ಒಂದುವೇಳೆ ಮಾತುಗಳಿಂದಲೇ ಯುದ್ಧದಲ್ಲಿ ಸಿದ್ಧಿಯಾಗುತ್ತಿದ್ದರೆ ನಿತ್ಯವೂ ನೀನೇ ವಿಜಯಿಯಾಗುತ್ತಿದ್ದೆ. ಏಕೆಂದರೆ ನೀನು ಬಹಳ ಅಬದ್ಧವಾಗಿ ಮಾತನಾಡುತ್ತಿರುವೆ.
19180051a ಏಹ್ಯೇಹಿ ಜಯ ಮಾಂ ಬಾಣ ಜಿತೋ ವಾ ವಸುಧಾತಲೇ ।
19180051c ಚಿರಾಯಾವಾಙ್ಮುಖೋ ದೀನಃ ಪತಿತಃ ಶೇಷ್ಯಸೇಽಸುರೈಃ ।।
ಬಾಣ! ಬಾ! ಬಾ! ನನ್ನನ್ನು ಜಯಿಸು ಅಥವಾ ವಸುಧಾತಲದಲ್ಲಿ ಮುಖವನ್ನು ಕೆಳಮಾಡಿ ದೀನನಾಗಿ ಬಿದ್ದು ಅಸುರರೊಂದಿಗೆ ಚಿರಕಾಲದವರೆಗೆ ಮಲಗು.”
19180052a ಇತ್ಯೇವಮುಕ್ತ್ವಾ ಬಾಣಂ ತು ಮರ್ಮಭೇದಿಭಿರಾಶುಗೈಃ ।
19180052c ನಿರ್ಬಿಭೇದ ತದಾ ಕೃಷ್ಣಸ್ತಮಮೋಘೈರ್ಮಹಾಶರೈಃ ।।
ಹೀಗೆ ಹೇಳಿ ಕೃಷ್ಣನು ಬಾಣನನ್ನು ಅಮೋಘ ಮಹಾಶರಗಳಿಂದ ಮತ್ತು ಮರ್ಮಭೇದೀ ಆಶುಗಗಳಿಂದ ಗಾಯಗೊಳಿಸಿದನು.
19180053a ವಿನಿರ್ಭಿನ್ನಸ್ತು ಕೃಷ್ಣೇನ ಮಾರ್ಗಣೈರ್ಮರ್ಮಭೇದಿಭಿಃ ।
19180053c ಸ್ಮಯನ್ಬಾಣಸ್ತತಃ ಕೃಷ್ಣಂ ಶರವರ್ಷೈರವಾಕಿರತ್ ।।
ಕೃಷ್ಣನ ಮರ್ಮಭೇದೀ ಮಾರ್ಗಣಗಳಿಂದ ಗಾಯಗೊಂಡು ಬಾಣನು ನಸುನಗುತ್ತಾ ಕೃಷ್ಣನನ್ನು ಶರವರ್ಷಗಳಿಂದ ಮುಸುಕಿದನು.
19180054a ಜ್ವಲದ್ಭಿರಿವ ಸಂಯುಕ್ತಂ ತಸ್ಮಿನ್ಯುದ್ಧೇ ಸುದಾರುಣೇ ।
19180054c ತತಃ ಪರಿಘನಿಸ್ತ್ರಿಂಶೈರ್ಗದಾತೋಮರಶಕ್ತಿಭಿಃ ।।
19180055a ಮುಸಲೈಃ ಪಟ್ಟಿಶೈಶ್ಚೈವ ಚ್ಛಾದಯಾಮಾಸ ಕೇಶವಮ್ ।
ಆ ಸುದಾರುಣ ಯುದ್ಧದಲ್ಲಿ ಬಾಣನು ಪುನಃ ಪ್ರಜ್ವಲಿಸುತ್ತಿದ್ದ ಪರಿಘ, ಖಡ್ಗ, ಗದೆ, ತೋಮರ, ಶಕ್ತಿ, ಮುಸಲ ಮತ್ತು ಪಟ್ಟಿಶಗಳಿಂದ ಕೇಶವನನ್ನು ಮುಚ್ಚಿಬಿಟ್ಟನು.
19180055c ಸ ತು ಬಾಹುಸಹಸ್ರೇಣ ಗರ್ವಿತೋ ದೈತ್ಯಸತ್ತಮಃ ।।
19180056a ಯೋಧಯಾಮಾಸ ಸಮರೇ ದ್ವಿಬಾಹುಮಥ ಲೀಲಯಾ ।
ಸಹಸ್ರಬಾಹುಗಳಿಂದ ಗರ್ವಿತನಾಗಿದ್ದ ಆ ದೈತ್ಯಸತ್ತಮನು ಸಮರದಲ್ಲಿ ದ್ವಿಬಾಹು ಕೃಷ್ಣನೊಂದಿಗೆ ಬಹು ಲೀಲೆಯಿಂದಲೇ ಯುದ್ಧಮಾಡಿದನು.
19180056c ಲಾಘವಾತ್ತಸ್ಯ ಕೃಷ್ಣಸ್ಯ ಬಲಿಸೂನೂ ರುಷಾನ್ವಿತಃ ।।
19180057a ತತೋಽಸ್ತ್ರಂ ಪರಮಂ ದಿವ್ಯಂ ತಪಸಾ ನಿರ್ಮಿತಂ ಮಹತ್ ।
19180057c ಯದಪ್ರತಿಹತಂ ಯುದ್ಧೇ ಸರ್ವಾಮಿತ್ರವಿನಾಶನಮ್ ।।
19180058a ಬ್ರಹ್ಮಣಾ ವಿಹಿತಂ ದಿವ್ಯಂ ತನ್ಮುಮೋಚ ದಿತೇಃ ಸುತಃ ।
ಕೃಷ್ಣನ ಲಾಘವದಿಂದ ಬಲಿಸೂನುವು ರೋಷಾನ್ವಿತನಾದನು. ಆಗ ಆ ದಿತಿಯ ಸುತನು ಮಹಾತಪಸ್ಸಿನಿಂದ ನಿರ್ಮಿತವಾದ, ಯುದ್ಧದಲ್ಲಿ ಪ್ರಯೋಗಿಸಿದರೆ ಸರ್ವ ಶತ್ರುಗಳನ್ನೂ ನಾಶಪಡಿಸಬಲ್ಲ, ಬ್ರಹ್ಮನು ರಚಿಸಿದ್ದ ದಿವ್ಯ ಪರಮ ಅಸ್ತ್ರವನ್ನು ಕೃಷ್ಣನ ಮೇಲೆ ಪ್ರಯೋಗಿಸಿದನು.
19180058c ತಸ್ಮಿನ್ಮುಕ್ತೇ ದಿಶಃ ಸರ್ವಾಸ್ತಮಃ ಪಿಹಿತಮಂಡಲಾಃ ।।
19180059a ಪ್ರಾದುರಾಸನ್ಸಹಸ್ರಾಣಿ ಸುಘೋರಾಣಿ ಚ ಸರ್ವಶಃ ।
ಅದನ್ನು ಪ್ರಯೋಗಿಸುತ್ತಲೇ ಸರ್ವ ದಿಗ್ಮಂಡಲಗಳೂ ಅಂಧಕಾರದಿಂದ ಆಚ್ಛಾದಿತಗೊಂಡವು. ಸರ್ವಶಃ ಘೋರ ಅಪಶಕುನಗಳು ಪ್ರಕಟವಾದವು.
19180059c ತಮಸಾ ಸಂವೃತೇ ಲೋಕೇ ನ ಪ್ರಜ್ಞಾಯತ ಕಿಂಚನ ।।
19180060a ಸಾಧು ಸಾಧ್ವಿತಿ ಬಾಣಂ ತು ಪೂಜಯಂತಿ ಸ್ಮ ದಾನವಾಃ ।
19180060c ಹಾ ಹಾ ಧಿಗಿತಿ ದೇವಾನಾಂ ಶ್ರೂಯತೇ ವಾಗುದೀರಿತಾ ।।
ಲೋಕದಲ್ಲಿ ಕತ್ತಲೆಯು ಆವರಿಸಲು ಏನೂ ತಿಳಿಯದಂತಾಯಿತು. ದಾನವರು ಸಾಧು ಸಾಧು ಎಂದು ಬಾಣನನ್ನು ಪ್ರಶಂಸಿಸುತ್ತಿದ್ದರೆ ಹಾ ಹಾ ಧಿಕ್ಕಾರ ಎಂದು ದೇವತೆಗಳು ಕೂಗಿಕೊಳ್ಳುತ್ತಿದ್ದುದು ಕೇಳಿಬರುತ್ತಿತ್ತು.
19180061a ತತೋಽಸ್ತ್ರಬಲವೇಗೇನ ಸಾರ್ಚಿಷ್ಮತ್ಯಃ ಸುದಾರುಣಾಃ ।
19180061c ಘೋರರೂಪಾ ಮಹಾಘೋರಾ ನಿಪೇತುರ್ಬಾಣವೃಷ್ಟಯಃ ।।
ಆಗ ಆ ಅಸ್ತ್ರದ ಬಲ ಮತ್ತು ವೇಗದಿಂದಾಗಿ ಅಗ್ನಿಯ ಚಟ ಪಟಾ ಕಿಡಿಗಳೊಂದಿಗೆ ದಾರುಣವಾದ ಘೋರರೂಪವಾದ ಮಹಾಘೋರ ಬಾಣವೃಷ್ಟಿಯು ಬಿದ್ದಿತು.
19180062a ನೈವ ವಾತಾಃ ಪ್ರವಾಯಂತಿ ನ ಮೇಘಾಃ ಸಂಚರಂತಿ ಚ ।
19180062c ಅಸ್ತ್ರೇ ವಿಸೃಷ್ಟೇ ಬಾಣೇನ ದಹ್ಯಮಾನೇ ಚ ಕೇಶವೇ ।।
ಬಾಣಾಸುರನು ಆ ಅಸ್ತ್ರವನ್ನು ಪ್ರಯೋಗಿಸುತ್ತಲೇ ಕೇಶವನು ದಹಿಸುತ್ತಿರಲು ಗಾಳಿಯು ಬೀಸಲಿಲ್ಲ ಮತ್ತು ಮೇಘಗಳು ಚಲಿಸಲಿಲ್ಲ.
19180063a ತತೋಽಸ್ತ್ರಂ ಸುಮಹಾವೇಗಂ ಜಗ್ರಾಹ ಮಧುಸೂದನಃ ।
19180063c ಪಾರ್ಜನ್ಯಂ ನಾಮ ಭಗವಾನ್ಕಾಲಾಂತಕನಿಭಂ ರಣೇ ।।
ಆಗ ರಣದಲ್ಲಿ ಭಗವಾನ್ ಮಧುಸೂದನನು ಮಹಾವೇಗಯುಕ್ತ ಕಾಲ ಮತ್ತು ಅಂತಕರಂತೆ ಭಯಂಕರವಾಗಿದ್ದ ಪಾರ್ಜ್ಯನ್ಯ ಎಂಬ ಹೆಸರಿನ ಅಸ್ತ್ರವನ್ನು ತೆಗೆದುಕೊಂಡನು.
19180064a ತತೋ ವಿತಿಮಿರೇ ಲೋಕೇ ಶರಾಗ್ನಿಃ ಪ್ರಶಮಂ ಗತಃ ।
19180064c ದಾನವಾ ಮೋಘಸಂಕಲ್ಪಾಃ ಸರ್ವೇಽಭೂವಂಸ್ತದಾ ಭೃಶಮ್ ।।
ಅದರಿಂದಾಗಿ ಲೋಕವು ಅಂಧಕಾರರಹಿತವಾಹಿತು. ಬಾಣನ ಶರಾಗ್ನಿಯು ಪ್ರಶಮನಗೊಂಡಿತು. ಸರ್ವ ದಾನವರ ಅತಿಯಾದ ಸಂಕಲ್ಪಗಳೂ ವ್ಯರ್ಥವಾದವು.
19180065a ದಾನವಾಸ್ತ್ರಂ ಪ್ರಶಾಂತಂ ತು ಪರ್ಜನ್ಯಾಸ್ತ್ರೇಽಭಿಮಂತ್ರಿತೇ ।
19180065c ತತೋ ದೇವಗಣಾಃ ಸರ್ವೇ ನದಂತಿ ಚ ಹಸಂತಿ ಚ ।।
ಪರ್ಜನ್ಯಾಸ್ತ್ರವನ್ನು ಅಭಿಮಂತ್ರಿಸಿ ದಾನವಾಸ್ತ್ರವನ್ನು ಪ್ರಶಾಂತಗೊಳಿಸಿದಾಗ ದೇವಗಣಗಳೆಲ್ಲವೂ ಸಿಂಹನಾದ ಗೈದು ನಕ್ಕರು.
19180066a ಹತೇ ಶಸ್ತ್ರೇ ಮಹಾರಾಜ ದೈತೇಯಃ ಕ್ರೋಧಮೂರ್ಚ್ಛಿತಃ ।
19180066c ಭೂಯಃ ಸ ಛಾದಯಾಮಾಸ ಕೇಶವಂ ಗರುಡೇ ಸ್ಥಿತಮ್ ।।
19180067a ಮುಸಲೈಃ ಪಟ್ಟಿಶೈಶ್ಚೈವ ಚ್ಛಾದಯಾಮಾಸ ಕೇಶವಮ್ ।
ಮಹಾರಾಜ! ಶಸ್ತ್ರವು ನಾಶವಾಗಲು ಕ್ರೋಧಮೂರ್ಛಿತನಾದ ದೈತ್ಯನು ಗರುಡನಮೇಲಿದ್ದ ಕೇಶವನನ್ನು ಇನ್ನೂ ಮುಸುಕಿದನು. ಮುಸಲ-ಪಟ್ಟಿಶಗಳಿಂದ ಕೇಶವನನ್ನು ಮುಚ್ಚಿಬಿಟ್ಟನು.
19180067c ತಸ್ಯ ತಾಂ ತರಸಾ ಸರ್ವಾಂ ಬಾಣವೃಷ್ಟಿಂ ಸಮುದ್ಯತಾಮ್ ।।
19180068a ಪ್ರಹಸನ್ವಾರಯಾಮಾಸ ಕೇಶವಃ ಶತ್ರುಸೂದನಃ ।
ಶತ್ರುಸೂದನ ಕೇಶವನು ಅವನು ಪ್ರಯೋಗಿಸಿದ್ದ ಆ ಎಲ್ಲ ಬಾಣವೃಷ್ಟಿಯನ್ನು ನಗುತ್ತಾ ತ್ವರೆಮಾಡಿ ನಿರಸನಗೊಳಿಸಿದನು.
19180068c ಕೇಶವಸ್ಯ ತು ಬಾಣೇನ ವರ್ತಮಾನೇ ಮಹಾಹವೇ ।।
19180069a ತಸ್ಯ ಶಾಂಙ್ರವಿನಿರ್ಮುಕ್ತೈಃ ಶರೈರಶನಿಸಂನಿಭೈಃ ।
19180069c ತಿಲಶಸ್ತದ್ರಥಂ ಚಕ್ರೇ ಸಾಶ್ವಧ್ವಜಪತಾಕಿನಮ್ ।।
ಆ ಮಹಾಯುದ್ಧವು ನಡೆಯುತ್ತಿರಲು ಕೇಶವನು ತನ್ನ ಶಾಂಙ್ರಧನುಸ್ಸಿನಿಂದ ಹೊರಟ ವಜ್ರಸನ್ನಿಭ ಶರಗಳಿಂದ ಬಾಣನ ರಥವನ್ನು, ಅಶ್ವ-ಧ್ವಜ-ಪತಾಕೆಗಳ ಸಹಿತ ಚೂರು ಚೂರುಮಾಡಿದನು.
19180070a ಚಿಚ್ಛೇದ ಕವಚಂ ಕಾಯಾನ್ಮುಕುಟಂ ಚ ಮಹಾಪ್ರಭಮ್ ।
19180070c ಕಾರ್ಮುಕಂ ಚ ಮಹಾತೇಜಾ ಹಸ್ತಚಾಪಂ ಚ ಕೇಶವಃ ।।
19180071a ವಿವ್ಯಾಧ ಚೈನಮುರಸಿ ನಾರಾಚೇನ ಸ್ಮಯನ್ನಿವ ।
ಮಹಾತೇಜಸ್ವೀ ಕೇಶವನು ಅವನ ಶರೀರದಿಂದ ಕವಚ, ಮಸ್ತಕದಿಂದ ಮುಕುಟ, ಕೈಯಿಂದ ಧನುಸ್ಸು ಮತ್ತು ಹಸ್ತಚಾಪಗಳನ್ನು ತುಂಡರಿಸಿದನು. ಮತ್ತು ನಗುತ್ತಾ ನಾರಾಚದಿಂದ ಅವನ ವಕ್ಷಸ್ಥಳಕ್ಕೆ ಹೊಡೆದು ಗಾಯಗೊಳಿಸಿದನು.
19180071c ಸ ಮರ್ಮಾಭಿಹತಃ ಸಂಖ್ಯೇ ಪ್ರಮುಮೋಹಾಲ್ಪಚೇತನಃ ।।
19180072a ತಂ ದೃಷ್ಟ್ವಾ ಮೂರ್ಚ್ಛಿತಂ ಬಾಣಂ ಪ್ರಹಾರಪರಿಪೀಡಿತಮ್ ।
19180072c ಪ್ರಾಸಾದವರಶೃಂಗಸ್ಥೋ ನಾರದೋ ಮುನಿಪುಂಗವಃ ।।
19180073a ಉತ್ಥಾಯಾಪಶ್ಯತ ತದಾ ಕಕ್ಷ್ಯಾಸ್ಫೋಟನತತ್ಪರಃ ।
19180073c ವಾದಯಾನೋ ನಖಾಂಶ್ಚೈವ ದಿಷ್ಟ್ಯಾ ದಿಷ್ಟ್ಯೇತಿ ಚಾಬ್ರವೀತ್ ।।
ರಣದಲ್ಲಿ ಮರ್ಮಗಳಿಗೆ ಪೆಟ್ಟುತಿಂದ ಅವನು ಅಲ್ಪಚೇತಸನಾಗಿ ಮೂರ್ಛಿತನಾದನು. ಪ್ರಹಾರಪೀಡಿತನಾದ ಬಾಣನು ಮೂರ್ಛಿತನಾದುದನ್ನು ಕಂಡು ಭವನದ ಎತ್ತರದ ಪ್ರಾಸಾದದಲ್ಲಿದ್ದ ಮುನಿಪುಂಗವ ನಾರದನು ಎದ್ದು ಎದ್ದು ಅವನ ಕಡೆ ನೋಡುತ್ತಿದ್ದನು. ಆಗ ಅವನು ತನ್ನ ಅಂಗೈಮೇಲೆ ಬೆರಳನ್ನು ಬಡಿಯುತ್ತಾ “ಒಳ್ಳೆಯದಾಯಿತು! ಒಳ್ಳೆಯದಾಯಿತು!” ಎಂದನು.
19180074a ಅಹೋ ಮೇ ಸುಫಲಂ ಜನ್ಮ ಜೀವಿತಂ ಚ ಸುಜೀವಿತಮ್ ।
19180074c ದೃಷ್ಟಂ ಮೇ ಯದಿದಂ ಚಿತ್ರಂ ದಾಮೋದರಪರಾಕ್ರಮಮ್ ।।
“ಅಹೋ! ನನ್ನ ಜನ್ಮವು ಸಫಲವಾಯಿತು. ಈ ಜೀವನವು ಉತ್ತಮ ಜೀವನವು. ಏಕೆಂದರೆ ನಾನು ದಾಮೋದರನ ಅದ್ಭುತ ಪರಾಕ್ರಮವನ್ನು ಕಣ್ಣಾರೆ ನೋಡುತ್ತಿದ್ದೇನೆ!
19180075a ಜಯ ಬಾಣಂ ಮಹಾಬಾಹೋ ದೈತೇಯಂ ದೇವಕಿಲ್ಬಿಷಮ್ ।
19180075c ಯದರ್ಥಮವತೀರ್ಣೋಽಸಿ ತತ್ಕರ್ಮ ಸಫಲೀಕುರು ।।
ಮಹಾಬಾಹೋ! ಈ ದೇವಕಿಲ್ಬಿಷ ದೈತ್ಯ ಬಾಣನನ್ನು ಜಯಿಸು! ಯಾವ ಕಾರಣಕ್ಕಾಗಿ ನೀನು ಅವತಾರವನ್ನೆತ್ತಿದ್ದೀಯೋ ಆ ಕರ್ಮವನ್ನು ಸಫಲಗೊಳಿಸು.”
19180076a ಏವಂ ಸ್ತುತ್ವಾ ತದಾ ದೇವಂ ಬಾಣೈಃ ಖಂ ದ್ಯೋತಯಂಶಿತೈಃ ।
19180076c ಇತಸ್ತತಃ ಸಂಪತದ್ಭಿರ್ನಾರದೋ ವ್ಯಚರದ್ರಣೇ ।।
ಹೀಗೆ ದೇವನನ್ನು ಸ್ತುತಿಸಿ ಆಕಾಶವನ್ನು ಪ್ರಕಾಶಗೊಳಿಸುತ್ತಿದ್ದ ನಾರದನು ನಿಶಿತ ಬಾಣಗಳಂತೆ ರಣದಲ್ಲಿ ಇಲ್ಲಿಂದಲ್ಲಿಗೆ ಓಡಾಡತೊಡಗಿದನು.
19180077a ಕೇಶವಸ್ಯ ತು ಬಾಣೇನ ವರ್ತಮಾನೇ ಮಹಾಭಯೇ ।
19180077c ಪ್ರಯುಧ್ಯೇತಾಂ ಧ್ವಜೌ ತತ್ರ ತಾವನ್ಯೋನ್ಯಮಭಿದ್ರುತೌ ।
19180077e ಯುದ್ಧಂ ತ್ವಭೂದ್ವಾಹನಯೋರುಭಯೋರ್ದೇವದೈತ್ಯಯೋಃ ।।
ಕೇಶವನ ಬಾಣದಿಂದ ಆ ಮಹಾಭಯವು ನಡೆಯುತ್ತಿರಲು ಅನ್ಯೋನ್ಯರ ಧ್ವಜಗಳು ಪರಸ್ಪರ ಯುದ್ಧಮಾಡಗೊಡಗಿದವು. ದೇವ ಮತ್ತು ದೈತ್ಯನ ಆ ವಾಹನಗಳ ಮಧ್ಯೆ ಯುದ್ಧವು ನಡೆಯಿತು.
19180078a ಗರುಡಸ್ಯ ಚ ಸಂಗ್ರಾಮೋ ಮಯೂರಸ್ಯ ಚ ಧೀಮತಾ ।
19180078c ಪಕ್ಷತುಂಡಪ್ರಹಾರೈಸ್ತು ಚರಣಾಸ್ಯನಖೈಸ್ತಥಾ ।।
ರೆಕ್ಕೆ-ಕೊಕ್ಕುಗಳ ಪ್ರಹಾರದಿಂದ ಕಾಲು ಮತ್ತು ಉಗುರುಗಳಿಂದ ಗರುಡನ ಸಂಗ್ರಾಮವು ಧೀಮತ ಮಯೂರನೊಡನೆ ನಡೆಯಿತು.
19180079a ಅನ್ಯೋನ್ಯಂ ಜಘ್ನತುಃ ಕ್ರುದ್ಧೌ ಮಯೂರಗರುಡಾವುಭೌ ।
19180079c ವೈನತೇಯಸ್ತತಃ ಕ್ರುದ್ಧೋ ಮಯೂರೇ ದೀಪ್ತತೇಜಸಮ್ ।।
19180080a ಜಗ್ರಾಹ ಶಿರಸಿ ಕ್ಷಿಪ್ರಂ ತುಂಡೇನಾಭಿಪತಂಸ್ತದಾ ।
19180080c ಉತ್ಕ್ಷಿಪ್ಯ ಚೈವ ಪಕ್ಷಾಭ್ಯಾಂ ನಿಜಘಾನ ಮಹಾಬಲಃ ।।
ಮಯೂರ ಮತ್ತು ಗರುಡರು ಕ್ರುದ್ಧರಾಗಿ ಅನ್ಯೋನ್ಯರನ್ನು ಗಾಯಗೊಳಿಸಿದರು. ಆಗ ಮಹಾಬಲಿ ವೈನತೇಯನು ಕುಪಿತನಾಗಿ ಮೇಲೆ ಹಾರಿ ತನ್ನ ಕೊಕ್ಕಿನಿಂದ ದೀಪ್ತತೇಜಸ್ವೀ ಮಯೂರನ ತಲೆಯನ್ನು ಶೀಘ್ರವಾಗಿ ಹಿಡಿದು ಅದನ್ನು ಜಗ್ಗಾಡಿ ತನ್ನ ಎರಡೂ ರೆಕ್ಕೆಗಳಿಂದ ಹೊಡೆಯತೊಡಗಿದನು.
19180081a ಪದ್ಭ್ಯಾಂ ಪಾರ್ಶ್ವಾಭಿಘಾತಾಭ್ಯಾಂ ಕೃತ್ವಾ ಘಾತಾನ್ಯನೇಕಶಃ ।
19180081c ಆಕೃಷ್ಯ ಚೈನಂ ತರಸಾ ವಿಕೃಷ್ಯ ಚ ಮಹಾಬಲಃ ।।
19180082a ನಿಃಸಂಜ್ಞಂ ಪಾತಯಾಮಾಸ ಗಗನಾದಿವ ಭಾಸ್ಕರಮ್ ।
ಕಾಲುಗಳಿಂದ ಎರಡೂ ಕಡೆಗಳಲ್ಲಿ ಒದೆದು ಬಹಾಬಲಿ ಗರುಡನು ಮಯೂರನ ಮೇಲೆ ಅನೇಕಬಾರಿ ಪ್ರಹಾರ ಮಾಡಿದನು. ಅವನನ್ನು ತನ್ನಕಡೆ ವೇಗವಾಗಿ ಎಳೆದುಕೊಂಡು ಮತ್ತು ದೂರತಳ್ಳಿ ಮೂರ್ಛೆಗೊಳಿಸಿ, ಗಗನದಿಂದ ಸೂರ್ಯನನ್ನು ಬೀಳಿಸುವಂತೆ, ಕೆಳಕ್ಕೆ ಬೀಳಿಸಿದನು.
19180082c ಮಯೂರೇ ಪತಿತೇ ತಸ್ಮಿನ್ಪಪಾತಾತಿಬಲೋ ಭುವಿ ।।
19180083a ಬಾಣಃ ಸಮರಸಂವಿಗ್ನಶ್ಚಿಂತಯನ್ಕಾರ್ಯಮಾತ್ಮನಃ ।
ಮಯೂರವು ಬೀಳಲು ಬಲಶಾಲೀ ಬಾಣನು ಸಮರದಲ್ಲಿ ಗಾಭರಿಗೊಂಡು ತಾನು ಮಾಡಬೇಕಾದ ಕಾರ್ಯದ ಕುರಿತು ಯೋಚಿಸುತ್ತಾ ಭೂಮಿಯ ಮೇಲೆ ಬಿದ್ದನು.
19180083c ಮಯಾತಿಬಲಮತ್ತೇನ ನ ಕೃತಂ ಸುಹೃದಾಂ ವಚಃ ।।
19180084a ಪಶ್ಯತಾಂ ದೇವದೈತ್ಯಾನಾಂ ಪ್ರಾಪ್ತೋಽಸ್ಮ್ಯಾಪದಮುತ್ತಮಾಮ್ ।
“ನಾನು ಅತಿಯಾದ ಬಲದ ಮತ್ತಿನಿಂದ ಸುಹೃದಯರ ಮಾತಿನಂತೆ ನಡೆದುಕೊಳ್ಳಲಿಲ್ಲ. ಈಗ ದೇವ-ದೈತ್ಯರು ನೋಡುತ್ತಿದ್ದಂತೆಯೇ ಈ ಅನುತ್ತಮ ಆಪತ್ತನ್ನು ಹೊಂದುಬಿಟ್ಟೆನಲ್ಲ!”
19180084c ತಂ ದೀನಮನಸಂ ಜ್ಞಾತ್ವಾ ರಣೇ ಬಾಣಂ ಸುವಿಕ್ಲವಮ್ ।।
19180085a ಚಿಂತಯದ್ಭಗವಾನ್ರುದ್ರೋ ಬಾಣರಕ್ಷಣಮಾತುರಃ ।
ರಣಭೂಮಿಯಲ್ಲಿ ಬಾಣನು ಅತ್ಯಂತ ವ್ಯಾಕುಲಗೊಂಡು ದೀನಮನಸ್ಕನಾದುದನ್ನು ತಿಳಿದ ಭಗವಾನ್ ರುದ್ರನು ಬಾಣನ ರಕ್ಷಣೆಯ ಕುರಿತು ಯೋಚಿಸತೊಡಗಿದನು.
19180085c ತತೋ ನಂದೀಂ ಮಹಾದೇವಃ ಪ್ರಾಹ ಗಂಭೀರಯಾ ಗಿರಾ ।।
19180086a ನಂದಿಕೇಶ್ವರ ಯಾಹಿ ತ್ವಂ ಯತೋ ಬಾಣೋ ರಣೇ ಸ್ಥಿತಃ ।
19180086c ರಥೇನಾನೇನ ದಿವ್ಯೇನ ಸಿಂಹಯುಕ್ತೇನ ಭಾಸ್ವತಾ ।।
19180087a ಬಾಣೇ ಸಂಯೋಜಯಾಶು ತ್ವಮಲಂ ಯುದ್ಧಾಯ ವಾನಘ ।
ಆಗ ಮಹಾದೇವನು ಗಂಭೀರವಾಣಿಯಲ್ಲಿ ನಂದಿಗೆ ಹೇಳಿದನು: “ನಂದಿಕೇಶ್ವರ! ರಣಭೂಮಿಯಲ್ಲಿ ಬಾಣನು ನಿಂತಿರುವಲ್ಲಿಗೆ ಹೋಗು. ಸಿಂಹಯುಕ್ತವಾದ ಈ ತೇಜಸ್ವಿ ದಿವ್ಯ ರಥವನ್ನು ಬಾಣನಿಗೆ ಕೊಡು. ಅನಘ! ಇದು ಅವನ ಯುದ್ಧಕ್ಕೆ ಪರ್ಯಾಪ್ತವಾಗಿದೆ.
19180087c ಪ್ರಮಾಥಗಣಾಮಧ್ಯೇಽಹಂ ಸ್ಥಾಸ್ಯಾಮಿ ನ ಹಿ ಮೇ ಮನಃ ।।
19180088a ಯೋದ್ಧುಂ ವಿತರತೇ ಹ್ಯದ್ಯ ಬಾಣಂ ಸಂರಕ್ಶ್ಯ ಗಮ್ಯತಾಮ್ ।
ನಾನು ಇಲ್ಲಿ ಪ್ರಮಥಗಣಗಳ ಮಧ್ಯೆ ಇರುತ್ತೇನೆ. ಈಗ ನನ್ನ ಮನಸ್ಸು ಯುದ್ಧಮಾಡುವುದರಲ್ಲಿ ಉತ್ಸಾಹಿತವಾಗಿಲ್ಲ. ನೀನು ಹೋಗು. ಬಾಣನನ್ನು ರಕ್ಷಿಸು!”
19180088c ತಥೇತ್ಯುಕ್ತ್ವಾ ತತೋ ನಂದೀ ರಥೇನ ರಥಿನಾಂ ವರಃ ।।
19180089a ಯತೋ ಬಾಣಸ್ತತೋ ಗತ್ವಾ ಬಾಣಮಾಹ ಶನೈರಿದಮ್ ।
19180089c ದೈತ್ಯಾಮುಂ ರಥಮಾತಿಷ್ಠ ಶೀಘ್ರಮೇಹಿ ಮಹಾಬಲ ।।
19180090a ತತೋ ಯುದ್ಧ್ಯಸ್ವ ಕೃಷ್ಣಂ ವೈ ದಾನವಾಂತಕರಂ ರಣೇ ।
ಹಾಗೆಯೇ ಆಗಲೆಂದು ಹೇಳಿ ರಥಿಗಳಲ್ಲಿ ಶ್ರೇಷ್ಠ ನಂದಿಯು ರಥವನ್ನೇರಿ ಬಾಣನಿರುವಲ್ಲಿಗೆ ಹೋಗಿ ಬಾಣನಿಗೆ ಮೆಲ್ಲನೇ ಇಂತೆಂದನು: “ಮಹಾಬಲಿ ದೈತ್ಯ! ಶೀಘ್ರವಾಗಿ ಬಾ ಮತ್ತು ಈ ರಥವನ್ನೇರು. ಅನಂತರ ರಣರಂಗದಲ್ಲಿ ದಾನವಾಂತಕ ಕೃಷ್ಣನೊಡನೆ ಯುದ್ಧಮಾಡು.”
19180090c ಆರುರೋಹ ರಥಂ ಬಾಣೋ ಮಹಾದೇವಸ್ಯ ಧೀಮತಃ ।।
19180091a ಆರೂಢಃ ಸ ತು ಬಾಣಶ್ಚ ತಂ ರಥಂ ಬ್ರಹ್ಮನಿರ್ಮಿತಮ್ ।
19180091c ತಂ ಸ್ಯಂದನಮಧಿಷ್ಠಾಯ ಭವಸ್ಯಾಮಿತತೇಜಸಃ ।।
19180092a ಪ್ರಾದುಶ್ಚಕ್ರೇ ಮಹಾರೌದ್ರಮಸ್ತ್ರಂ ಸರ್ವಾಸ್ತ್ರಘಾತನಮ್ ।
19180092c ದೀಪ್ತಂ ಬ್ರಹ್ಮಶಿರೋ ನಾಮ ಬಾಣಃ ಕ್ರುದ್ಧೋಽತಿವೀರ್ಯವಾನ್ ।।
ಆಗ ಧೀಮಂತ ಬಾಣನು ಮಹಾದೇವನ ರಥವನ್ನೇರಿದನು. ಆ ರಥವನ್ನು ಬ್ರಹ್ಮನೇ ನಿರ್ಮಿಸಿದ್ದನು. ಭವನ ಆ ರಥದಲ್ಲಿ ಕುಳಿತು ಅಮಿತತೇಜಸ್ವೀ ಅತಿವೀರ್ಯವಾನ್ ಬಾಣನು ಕ್ರುದ್ಧನಾಗಿ ಬ್ರಹ್ಮಶಿರ ಎಂಬ ಹೆಸರಿನ, ಸರ್ವ ಅಸ್ತ್ರಗಳನ್ನೂ ನಾಶಗೊಳಿಸುವ, ಮಹಾರೌದ್ರ ಅಸ್ತ್ರವನ್ನು ಪ್ರಯೋಗಿಸತೊಡಗಿದನು.
19180093a ಪ್ರದೀಪ್ತೇ ಬ್ರಹ್ಮಶಿರಸಿ ಲೋಕಃ ಕ್ಷೋಭಮುಪಾಗಮತ್ ।
19180093c ಲೋಕಸಂರಕ್ಷಣಾರ್ಥೇ ವೈ ತತ್ಸೃಷ್ಟಂ ಬ್ರಹ್ಮಯೋನಿನಾ ।।
ಆ ಬ್ರಹ್ಮಶಿರ ಅಸ್ತ್ರವು ಪ್ರಜ್ವಲಿತಗೊಳ್ಳಲು ಲೋಕವು ಕ್ಷೋಭೆಗೊಂಡಿತು. ಬ್ರಹ್ಮಯೋನಿಯು ಲೋಕಸಂರಕ್ಷಣೆಗಾಗಿಯೇ ಆ ಅಸ್ತ್ರವನ್ನು ಸೃಷ್ಟಿಸಿದ್ದನು.
19180094a ತಚ್ಚಕ್ರೇಣ ನಿಹತ್ಯಾಸ್ತ್ರಂ ಪ್ರಾಹ ಕೃಷ್ಣಸ್ತರಸ್ವಿನಮ್ ।
19180094c ಲೋಕೇ ಪ್ರಖ್ಯಾತಯಶಸಂ ಬಾಣಮಪ್ರತಿಮಂ ರಣೇ ।।
ಕೃಷ್ಣನು ತನ್ನ ಚಕ್ತ್ರದಿಂದ ಆ ಅಸ್ತ್ರವನ್ನು ವಿನಾಶಗೊಳಿಸಿ ರಣದಲ್ಲಿ ಅಪ್ರತಿಮನಾಗಿದ್ದ ಮತ್ತು ಲೋಕದಲ್ಲಿ ಪ್ರಖ್ಯಾತ ಯಶಸ್ಸನ್ನು ಗಳಿಸಿದ್ದ ತರಸ್ವೀ ಬಾಣನಿಗೆ ಇಂತೆಂದನು.
19180095a ಕಥಿತಾನಿ ಕ್ವ ತೇ ತಾತ ಬಾಣ ಕಿಂ ನ ವಿಕತ್ಥಸೇ ।
19180095c ಅಯಮಸ್ಮಿ ಸ್ಥಿತೋ ಯುದ್ಧೇ ಯುದ್ಧ್ಯಸ್ವ ಪುರುಷೋ ಭವ ।।
“ಅಯ್ಯಾ! ನಿನ್ನ ಆ ಮಾತುಗಳು ಎಲ್ಲಿಹೋದವು? ಬಾಣ! ಈಗ ಏಕೆ ಕೊಚ್ಚಿಕೊಳ್ಳುತ್ತಿಲ್ಲ? ಇಗೋ! ನಾನಿಲ್ಲಿ ಯುದ್ಧಕ್ಕಾಗಿಯೇ ನಿಂತಿದ್ದೇನೆ. ಯುದ್ಧಮಾಡಿ ಪುರುಷನಾಗು!
19180096a ಕಾರ್ತವೀರ್ಯಾರ್ಜುನೋ ನಾಮ ಪೂರ್ವಂ ಬಾಹುಸಹಸ್ರವಾನ್ ।
19180096c ಮಹಾಬಲಃ ಸ ರಾಮೇಣ ದ್ವಿಬಾಹುಃ ಸಮರೇ ಕೃತಃ ।।
ಹಿಂದೆ ಕಾರ್ತವೀರ್ಯಾರ್ಜುನ ಎಂಬ ಹೆಸರಿನ ಸಹಸ್ರಬಾಹುಗಳ ಮಹಾಬಲನಿದ್ದನು. ಸಮರದಲ್ಲಿ ಪರಶುರಾಮನು ಅವನನ್ನು ದ್ವಿಬಾಹುವನ್ನಾಗಿ ಮಾಡಿದ್ದನು.
19180097a ತಥಾ ತಾವಾಪಿ ದರ್ಪೋಽಯಂ ಬಾಹೂನಾಂ ವೀರ್ಯಸಂಭವಃ ।
19180097c ಏಶ ತೇ ದರ್ಪಶಮನಂ ಕರೋಮಿ ರಣಮೂರ್ದ್ಧನಿ ।
ಅವನಂತೆ ನಿನಗಿರುವ ಈ ದರ್ಪವೂ ಕೂಡ ನಿನ್ನ ಸಹಸ್ರಬಾಹುಗಳ ವೀರ್ಯದಿಂದಲೇ ಉಂಟಾಗಿದೆ. ಇಗೋ! ರಣಮೂರ್ಧನಿಯಲ್ಲಿ ನಿನ್ನ ದರ್ಪವನ್ನು ಇಳಿಸುತ್ತೇನೆ.
19180097e ಯಾವತ್ತೇ ದರ್ಪಶಮನಂ ಕರೋಮ್ಯದ್ಯ ಸ್ವಬಾಹುನಾ ।।
19180098a ತಿಷ್ಠೇದಾನೀಂ ನ ಮೇಽದ್ಯ ತ್ವಂ ಮೋಕ್ಷ್ಯಸೇ ರಣಮೂರ್ದ್ಧನಿ ।
ನನ್ನ ಈ ಬಾಹುಗಳಿಂದ ಇಂದು ನಾನು ನಿನ್ನ ದರ್ಪವನ್ನು ಇಳಿಸುವವರೆಗೆ ನೀನು ಇಲ್ಲಿಯೇ ನಿಂತಿರು. ಇಂದು ನೀನು ಈ ರಣಭೂಮಿಯಿಂದ ಜೀವಂತ ಬಿಡುಗಡೆಹೊಂದಲಾರೆ!”
19180098c ಅಥ ತದ್ದುರ್ಲಭಂ ದೃಷ್ಟ್ವಾ ಯುದ್ಧಂ ಪರಮದಾರುಣಂ ।।
19180099a ತತ್ರ ದೇವಾಸುರಸಮೇ ಯುದ್ಧೇ ನೃತ್ಯತಿ ನಾರದಃ ।
ದೇವಾಸುರರ ಯುದ್ಧದ ಸಮನಾದ ಮತ್ತು ದುರ್ಲಭವಾದ ಆ ಪರಮದಾರುಣ ಯುದ್ಧವನ್ನು ನೋಡಿ ನಾರದನು ಕುಣಿದಾಡಿದನು.
19180099c ನಿರ್ಜಿತಾಶ್ಚ ಗಣಾಃ ಸರ್ವೇ ಪ್ರದ್ಯುಮ್ನೇನ ಮಹಾತ್ಮನಾ ।।
19180100a ನಿಕ್ಷಿಪ್ತವಾದಾ ಯುದ್ಧಸ್ಯ ದೇವದೇವಂ ಗತಾಃ ಪುನಃ ।
ಮಹಾತ್ಮಾ ಪ್ರದ್ಯುಮ್ನನು ರುದ್ರಗಣಗಳೆಲ್ಲವನ್ನೂ ಪರಾಜಿತಗೊಳಿಸಲು ಯುದ್ಧದ ಕುರಿತು ಮಾತನಾಡುವುದನ್ನೇ ಬಿಟ್ಟು ಅವರೆಲ್ಲರೂ ಪುನಃ ದೇವದೇವನಲ್ಲಿಗೆ ಹೊರಟುಹೋದರು.
19180100c ಸ ತಚ್ಚಕ್ರಂ ಸಹಸ್ರಾರಂ ನದನ್ಮೇಘ ಇವೋಷ್ಣಗೇ ।।
19180101a ಜಗ್ರಾಹ ಕೃಷ್ಣಸ್ತ್ವರಿತೋ ಬಾಣಾಂತಕರಣಂ ರಣೇ ।
ಅನಂತರ ಕೃಷ್ಣನು ವರ್ಷಾಕಾಲದ ಮೇಘದಂತೆ ಗರ್ಜಿಸುತ್ತಾ ರಣದಲ್ಲಿ ಬಾಣನನ್ನು ಅಂತ್ಯಗೊಳಿಸಬಲ್ಲ ತನ್ನ ಆ ಸಹಸ್ರಾರ ಚಕ್ರವನ್ನು ತೆಗೆದುಕೊಂಡನು.
19180101c ತೇಜೋ ಯಜ್ಜ್ಯೋತಿಷಾಂ ಚೈವ ತೇಜೋ ವಜ್ರಾಶನೇಸ್ತಥಾ ।।
19180102a ಸುರೇಶಸ್ಯ ಚ ಯತ್ತೇಜಸ್ತಚ್ಚಕ್ರೇ ಪರ್ಯವಸ್ಥಿತಮ್ ।
ಆ ಸಮಯದಲ್ಲಿ ಗ್ರಹ-ನಕ್ಷತ್ರಗಳಲ್ಲಿದ್ದ ತೇಜಸ್ಸು, ವಜ್ರ ಮತ್ತು ಸಿಡುಲುಗಳ ತೇಜಸ್ಸು, ಮತ್ತು ಸುರೇಶ ಇಂದ್ರನಲ್ಲಿದ್ದ ತೇಜಸ್ಸು – ಎಲ್ಲವೂ ಆ ಚಕ್ರದಲ್ಲಿ ಸ್ಥಾಪಿತಗೊಂಡಿತ್ತು.
19180102c ತ್ರೇತಾಗ್ನೇಶ್ಚೈವ ಯತ್ತೇಜೋ ಯಶ್ಚ ವೈ ಬ್ರಹ್ಮಚಾರಿಣಾಮ್ ।।
19180103a ಋಷೀಣಾಂ ಚ ತತೋ ಜ್ಞಾನಂ ತಚ್ಚಕ್ರೇ ಸಮವಸ್ಥಿತಮ್ ।
ಮೂರೂ ಅಗ್ನಿಗಳ ತೇಜಸ್ಸು, ಬ್ರಹ್ಮಚಾರಿಗಳಲ್ಲಿದ್ದ ತೇಜಸ್ಸು, ಮತ್ತು ಋಷಿಗಳ ಜ್ಞಾನಗಳಲ್ಲಿದ್ದ ತೇಜಸ್ಸು ಎಲ್ಲವೂ ಆ ಚಕ್ರದಲ್ಲಿ ಸ್ಥಾಪಿತಗೊಂಡವು.
19180103c ಪತಿವ್ರತಾನಾಂ ಯತ್ತೇಜಃ ಪ್ರಾಣಾಶ್ಚ ಮೃಗಪಕ್ಷಿಣಾಮ್ ।।
19180104a ಯಚ್ಚ ಚಕ್ರಧರೇಷ್ವಸ್ತಿ ತಚ್ಚಕ್ರೇ ಸಂನಿವೇಶಿತಮ್ ।
ಪತಿವ್ರತೆಯರಲ್ಲಿರುವ ತೇಜಸ್ಸು, ಮೃಗ-ಪಕ್ಷಿಗಳಲ್ಲಿದ್ದ ಪ್ರಾಣಗಳು, ಮತ್ತು ಚಕ್ರಧಾರಿಯಲ್ಲಿದ್ದ ಬಲ – ಎಲ್ಲವೂ ಆ ಚಕ್ರದಲ್ಲಿ ಸಮಾವಿಷ್ಟಗೊಂಡವು.
19180104c ನಾಗರಾಕ್ಷಸಯಕ್ಷಾಣಾಂ ಗಂಧರ್ವಾಪ್ಸರಸಾಮಪಿ ।।
19180105a ತ್ರೈಲೋಕ್ಯಸ್ಯ ಚ ಯತ್ಪ್ರಾಣಂ ಸರ್ವಂ ಚಕ್ರೇ ವ್ಯವಸ್ಥಿತಮ್ ।
ನಾಗ-ರಾಕ್ಷಸ-ಯಕ್ಷರ ಮತ್ತು ಗಂಧರ್ವ-ಅಪ್ಸರೆಯರ ಹಾಗೂ ತ್ರೈಲೋಕ್ಯದಲ್ಲಿರುವ ಸರ್ವ ಪ್ರಾಣಗಳೂ ಚಕ್ರದಲ್ಲಿ ವ್ಯವಸ್ಥಿತಗೊಂಡವು.
19180105c ತೇಜಸಾ ತೇನ ಸಂಯುಕ್ತಂ ಜ್ವಲನ್ನಿವ ಚ ಭಾಸ್ಕರಃ ।।
19180106a ವಪುಷಾ ತೇಜ ಆಧತ್ತೇ ಬಾಣಸ್ಯ ಪ್ರಮುಖೇ ಸ್ಥಿತಮ್ ।
ಆ ತೇಜಸ್ಸಿನಿಂದ ಸಂಯುಕ್ತಗೊಂಡು ಭಾಸ್ಕರನಂತೆ ಪ್ರಜ್ವಲಿಸುತ್ತಾ ಆ ಚಕ್ರವು ಎದಿರು ನಿಂತಿದ್ದ ಬಾಣನ ಶರೀರದ ತೇಜಸ್ಸನ್ನು ಹೀರಿಕೊಳ್ಳತೊಡಗಿತು.
19180106c ಜ್ಞಾತ್ವಾತಿತೇಜಸಾ ಚಕ್ರಂ ಕೃಷ್ಣೇನಾಭ್ಯುದಿತಂ ರಣೇ ।।
19180107a ಅಪ್ರಮೇಯಂ ಹ್ಯವಿಹತಂ ರುದ್ರಾಣೀ ಚಾಬ್ರವೀಚ್ಛಿವಮ್ ।
ರಣರಂಗದಲ್ಲಿ ಅತಿತೇಜಸ್ವೀ ಕೃಷ್ಣನು ಅಪ್ರಮೇಯ ಚಕ್ರವನ್ನು ಹಿಡಿದಿದ್ದಾನೆ ಎಂದು ತಿಳಿದ ರುದ್ರಾಣಿಯು ಶಿವನಿಗೆ ಹೇಳಿದಳು:
19180107c ಅಜೇಯಮೇತತ್ತ್ರೈಲೋಕ್ಯೇ ಚಕ್ರಂ ಕೃಷ್ಣೇನ ಧಾರ್ಯತೇ ।।
19180108a ಬಾಣಂ ತ್ರಾಯಸ್ವ ದೇವ ತ್ವಂ ಯಾವಚ್ಚಕ್ರಂ ನ ಮುಂಚತಿ ।
“ದೇವ! ಕೃಷ್ಣನು ಹಿಡಿದಿರುವ ಈ ಚಕ್ರವು ತ್ರಿಲೋಕಗಳಲ್ಲಿಯೂ ಅಜೇಯವು. ಅವನು ಚಕ್ರವನ್ನು ಪ್ರಯೋಗಿಸುವುದರ ಮೊದಲೇ ಬಾಣನನ್ನು ರಕ್ಷಿಸು!”
19180108c ತತಸ್ತ್ರ್ಯಕ್ಷೋ ವಚಃ ಶ್ರುತ್ವಾ ದೇವೀಂ ಲಂಬಾಮಥಾಬ್ರವೀತ್ ।।
19180109a ಗಚ್ಛೈಹಿ ಲಂಬೇ ಶೀಘ್ರಂ ತ್ವಂ ಬಾಣಸಂರಕ್ಷಣಂ ಪ್ರತಿ ।
ಅವಳ ಮಾತನ್ನು ಕೇಳಿ ತ್ರ್ಯಕ್ಷನು ಲಂಬಾದೇವಿಗೆ ಹೇಳಿದನು: “ಲಂಬೇ! ಬಾಣನನ್ನು ಸಂರಕ್ಷಿಸಲು ಶೀಘ್ರವೇ ಹೋಗು.”
19180109c ತತೋ ಯೋಗಂ ಸಮಧಾಯ ಅದೃಶ್ಯಾ ಹಿಮವತ್ಸುತಾ ।।
19180110a ಕೃಷ್ಣಸ್ಯೈಕಸ್ಯ ತದ್ರೂಪಂ ದರ್ಶಂತೀ ಪಾರ್ಶ್ವಮಾಗತಾ ।
ಆಗ ಹಿವವತ್ಸುತೆಯು ಯೋಗವನ್ನಾಶ್ರಯಿಸಿ ಅದೃಶ್ಯಳಾಗಿ ಕೃಷ್ಣನಿಗೊಬ್ಬನೇ ತನ್ನ ರೂಪವನ್ನು ಕಾಣಿಸುತ್ತಾ ಅವನ ಪಕ್ಕಕ್ಕೆ ಆಗಮಿಸಿದಳು.
19180110c ಚಕ್ರೋದ್ಯತಕರಂ ದೃಷ್ಟ್ವಾ ಭಗವಂತಂ ರಣಾಜಿರೇ ।।
19180111a ಅಂತರ್ಧಾನಮುಪಾಗಮ್ಯ ತ್ಯಜ್ಯ ಸಾ ವಾಸಸೀ ಪುನಃ ।
19180111c ಪರಿತ್ರಾಣಾಯ ಬಾಣಸ್ಯ ವಿಜಯಾಧಿಷ್ಠಿತಾ ತತಃ ।।
19180112a ಪ್ರಮುಖೇ ವಾಸುದೇವಸ್ಯ ದಿಗ್ವಾಸಾಃ ಕೋಟವೀ ಸ್ಥಿತಾ ।
ರಣಾಂಗಣದಲ್ಲಿ ಚಕ್ರವನ್ನು ಎತ್ತಿಹಿಡಿದಿದ್ದ ಭಗವಂತನನ್ನು ನೋಡಿ ಪುನಃ ಅದೃಶ್ಯಳಾಗಿ ಕೋಟವಿಯು ತನ್ನ ವಸ್ತ್ರಗಳನ್ನು ಕಳಚಿ ಬಾಣಾಸುರನ ರಕ್ಷಣೆಗಾಗಿ ಮತ್ತು ಅವನ ವಿಜಯಕ್ಕಾಗಿ ನಗ್ನಳಾಗಿಯೇ ವಾಸುದೇವನ ಎದಿರು ನಿಂತುಕೊಂಡಳು.
19180112c ತಾಂ ದೃಷ್ಟ್ವಾಥ ಪುನಃ ಪ್ರಾಪ್ತಾಂ ದೇವೀಂ ರುದ್ರಸ್ಯ ಸಂಮತಾಮ್ ।।
19180113a ಲಂಬಾದ್ವಿತೀಯಾಂ ತಿಷ್ಠಂತೀಂ ಕೃಷ್ಣೋ ವಚನಮಬ್ರವೀತ್ ।
19180113c ಭೂಯಃ ಸಾಮರ್ಷತಾಮ್ರಾಕ್ಷೀ ದಿಗ್ವಸ್ತ್ರಾವಸ್ಥಿತಾ ರಣೇ ।।
19180114a ಬಾಣಸಂರಕ್ಷಣಪರಾ ಹನ್ಮಿ ಬಾಣಂ ನ ಸಂಶಯಃ ।
ರುದ್ರಪ್ರಿಯೆ ಪಾರ್ವತಿಯು ಆಗಮಿಸಿ ಪುನಃ ಲಂಬೆಯೊಡನೆ ನಿಂತಿದ್ದುದನ್ನು ನೋಡಿ ಕೃಷ್ಣನು ಈ ಮಾತನ್ನಾಡಿದನು: “ತಾಮ್ರಾಕ್ಷೀ! ರಣರಂಗದಲ್ಲಿ ಮತ್ತೊಮ್ಮೆ ನಗ್ನಳಾಗಿ ಬಾಣಸಂರಕ್ಷಣಪರಳಾಗಿ ಪ್ರಯತ್ನಿಸುತ್ತಿರುವೆ. ಆದರೆ ಇಂದು ಬಾಣನನ್ನು ಸಂಹರಿಸುತ್ತೇನೆ ಎನ್ನುವುದರಲ್ಲಿ ಸಂಶಯವಿಲ್ಲ.”
19180114c ಏವಮುಕ್ತಾ ತು ಕೃಷ್ಣೇನ ಭೂಯೋ ದೇವ್ಯಬ್ರವೀದಿದಮ್ ।।
19180115a ಜಾನೇ ತ್ವಾಂ ಸರ್ವಭೂತಾನಾಂ ಸ್ರಷ್ಟಾರಂ ಪುರುಷೋತ್ತಮಮ್ ।
19180115c ಮಹಾಭಾಗಂ ಮಹಾದೇವಮನಂತಂ ನೀಲಮವ್ಯಯಮ್ ।।
19180116a ಪದ್ಮನಾಭಂ ಹೃಷೀಕೇಶಂ ಲೋಕಾನಾಮಾದಿಸಂಭವಮ್ ।
19180116c ನಾರ್ಹಸೇ ದೇವ ಹಂತುಂ ವೈ ಬಾಣಮಪ್ರತಿಮಂ ರಣೇ ।।
ಕೃಷ್ಣನು ಹೀಗೆ ಹೇಳಲು ದೇವಿಯು ಪುನಃ ಇದನ್ನು ಹೇಳಿದಳು: “ನಾನು ನಿನ್ನನ್ನು ತಿಳಿದಿದ್ದೇನೆ. ನೀನು ಸರ್ವಭೂತಗಳ ಸ್ರಷ್ಟಾರ. ಪುರುಷೋತ್ತಮ. ನೀನು ಮಹಾಭಾಗ, ಮಹಾದೇವ, ಅನಂತ, ನೀಲ ಮತ್ತು ಅವ್ಯಯ. ನೀನು ಲೋಕಗಳ ಆದಿಸಂಭವ ಪದ್ಮನಾಭ, ಹೃಷೀಕೇಶ. ದೇವ! ರಣದಲ್ಲಿ ಅಪ್ರತಿಮನಾಗಿರುವ ಈ ಬಾಣನನ್ನು ನೀನು ಕೊಲ್ಲಬಾರದು.
19180117a ಪ್ರಯಚ್ಛ ಹ್ಯಭಯಂ ಬಾಣೇ ಜೀವಪುತ್ರೀತ್ವಮೇವ ಚ ।
19180117c ಮಯಾ ದತ್ತವರೋ ಹ್ಯೇಷ ಭೂಯಶ್ಚ ಪರಿರಕ್ಷ್ಯತೇ ।।
19180118a ನ ಮೇ ಮಿಥ್ಯಾ ಸಮುದ್ಯೋಗಂ ಕರ್ತುಮರ್ಹಸಿ ಮಾಧವ ।
ಮಾಧವ! ಬಾಣನಿಗೆ ಅಭಯವನ್ನು ನೀಡಿ ನನ್ನನ್ನು ಜೀವಂತ ಪುತ್ರನ ಜನನಿಯನ್ನಾಗಿ ಮಾಡು. ನಾನು ಇವನಿಗೆ ವರವನ್ನಿತ್ತಿದ್ದೇನೆ. ಆದುದರಿಂದ ಪುನಃ ನಾನು ಇವನನ್ನು ರಕ್ಷಿಸುತ್ತಿದ್ದೇನೆ. ನನ್ನ ಈ ಉದ್ಯೋಗವನ್ನು ಸುಳ್ಳಾಗಿಸಬಾರದು.”
19180118c ಏವಮುಕ್ತೇ ತು ವಚನೇ ದೇವ್ಯಾ ಪರಪುರಂಜಯಃ ।।
19180119a ಕೃಷ್ಣಃ ಪ್ರಭಾಷತೇ ವಾಕ್ಯಂ ಶೃಣು ಸತ್ಯಂ ತು ಭಾಮಿನಿ ।
ದೇವಿಯು ಹೀಗೆ ಹೇಳಲು ಪರಪುರಂಜಯ ಕೃಷ್ಣನು ಹೇಳಿದನು: “ಭಾಮಿನೀ! ಸತ್ಯವನ್ನು ಕೇಳು.
19180119c ಬಾಣೋ ಬಾಹುಸಹಸ್ರೇಣ ನರ್ದತೇ ದರ್ಪಮಾಶ್ರಿತಃ ।।
19180120a ಏತೇಷಾಂ ಛೇದನಂ ತ್ವದ್ಯ ಕರ್ತವ್ಯಂ ನಾತ್ರ ಸಂಶಯಃ ।
ಬಾಣನು ತನ್ನ ಸಹಸ್ರಬಾಹುಗಳ ದರ್ಪವನ್ನಾಶ್ರಯಿಸಿ ಗರ್ಜಿಸುತ್ತಿರುತ್ತಾನೆ. ಆದುದರಿಂದ ಇಂದು ಆ ಭುಜಗಳನ್ನು ಕತ್ತರಿಸುವುದು ಕರ್ತವ್ಯ ಎನ್ನುವುದರಲ್ಲಿ ಸಂಶಯವಿಲ್ಲ.
19180120c ದ್ವಿಬಾಹುನಾ ಚ ಬಾಣೇನ ಜೀವಪುತ್ರೀ ಭವಿಷ್ಯಸಿ ।।
19180121a ಆಸುರಂ ದರ್ಪಮಾಶ್ರಿತ್ಯ ನ ಚ ಮಾಂ ಸಂಶ್ರಯಿಶ್ಯತಿ ।
ಬಾಣನಿಗೆ ಎರಡೇ ಬಾಹುಗಳಿದ್ದರೂ ನೀನು ಜೀವಪುತ್ರಿಯಾಗುತ್ತೀಯೆ. ದರ್ಪವನ್ನಾಶ್ರಯಿಸಿರುವ ಈ ಅಸುರನು ನನ್ನ ಶರಣುಬರುವುದಿಲ್ಲ.”
19180121c ಏವಮುಕ್ತೇ ತು ವಚನೇ ಕೃಷ್ಣೇನಾಕ್ಲಿಷ್ಟಕರ್ಮಣಾ ।।
19180122a ಪ್ರೋವಾಚ ದೇವೀ ಬಾಣೋಽಯಂ ದೇವದತ್ತೋ ಭವೇದಿತಿ ।
ಅಕ್ಲಿಷ್ಟಕರ್ಮಿ ಕೃಷ್ಣನು ಹೀಗೆ ಹೇಳಲು ದೇವಿಯು “ಈ ಬಾಣನು ನನಗೆ ದೇವನಿತ್ತ ದತ್ತಕ ಪುತ್ರನಾಗಲಿ” ಎಂದಳು.
19180122c ಅಥ ತಾಂ ಕಾರ್ತಿಕೇಯಸ್ಯ ಮಾತರಂ ಸೋಽಭಿಭಾಷ್ಯ ವೈ ।।
19180123a ತತಃ ಕ್ರುದ್ಧೋ ಮಹಾಬಾಹುಃ ಕೃಷ್ಣಃ ಪ್ರವದತಾಂ ವರಃ ।
19180123c ಪ್ರೋವಾಚ ಬಾಣಂ ಸಮರೇ ವದತಾಂ ಪ್ರವರಃ ಪ್ರಭುಃ ।
ಕಾರ್ತಿಕೇಯನ ಮಾತೆಯೊಂದಿಗೆ ಈ ರೀತಿ ಮಾತನಾಡಿ ಮಾತನಾಡುವವರಲ್ಲಿ ಶ್ರೇಷ್ಠ ಮಹಾಬಾಹು ಪ್ರಭು ಕೃಷ್ಣನು ಕ್ರುದ್ಧನಾಗಿ ಸಮರದಲ್ಲಿ ಬಾಣನಿಗೆ ಇಂತೆಂದನು:
19180123e ಯುಧ್ಯತಾಂ ಯುಧ್ಯತಾಂ ಸಂಖ್ಯೇ ಭವತಾಂ ಕೋಟವೀ ಸ್ಥಿತಾ ।।
19180124a ಅಶಕ್ತಾನಾಮಿವ ರಣೇ ಧಿಗ್ಬಾಣ ತವ ಪೌರುಷಮ್ ।
“ಯುದ್ಧಮಾಡು! ಯುದ್ಧಮಾಡು! ಅಶಕ್ತನಂತಿರುವ ನಿನ್ನನ್ನು ರಕ್ಷಿಸಲು ಕೋಟವಿಯು ರಣಭೂಮಿಗೆ ಬಂದಿದ್ದಾಳೆ. ಬಾಣ! ನಿನ್ನ ಪೌರುಷಕ್ಕೆ ಧಿಕ್ಕಾರ!”
19180124c ಏವಮುಕ್ತ್ವಾ ತತಃ ಕೃಷ್ಣಸ್ತಚ್ಚಕ್ರಂ ಪರಮಾತ್ಮವಾನ್ ।।
19180125a ನಿಮೀಲಿತಾಕ್ಷೋ ವಿಸೃಜದ್ಬಾಣಂ ಪ್ರತಿ ಮಹಾಬಲಃ ।
ಹೀಗೆ ಹೇಳಿ ಪರಮಾತ್ಮವಾನ್ ಮಹಾಬಲ ಕೃಷ್ಣನು ತನ್ನ ಕಣ್ಣುಗಳೆರಡನ್ನೂ ಮುಚ್ಚಿ ಬಾಣನ ಕಡೆ ಚಕ್ರವನ್ನು ಪ್ರಯೋಗಿಸಿದನು.
19180125c ಕ್ಷೇಪಣಾದ್ಯಸ್ಯ ಮುಹ್ಯಂತಿ ಲೋಕಾಃ ಸಸ್ಥಾಣುಜಂಗಮಾಃ ।।
19180126a ಕ್ರವ್ಯಾದಾನಿ ಚ ಭೂತಾನಿ ತೃಪ್ತಿಂ ಯಾಂತಿ ಮಹಾಮೃಧೇ ।
19180126c ತಮಪ್ರತಿಮಕರ್ಮಾಣಂ ಸಮಾನಂ ಸೂರ್ಯವರ್ಚಸಾ ।।
19180127a ಚಕ್ರಮುದ್ಯಮ್ಯ ಸಮರೇ ಕೋಪದೀಪ್ತೋ ಗದಾಧರಃ ।
19180127c ಸ ಮುಷ್ಣಂದಾನವಂ ತೇಜಃ ಸಮರೇ ಸ್ವೇನ ತೇಜಸಾ ।।
19180128a ಚಿಚ್ಛೇದ ಬಾಹೂಂಶ್ಚಕ್ರೇಣ ಶ್ರೀಧರಃ ಪರಮೌಜಸಾ ।
ಮಹಾರಣದಲ್ಲಿ ಯಾವುದನ್ನು ಪ್ರಯೋಗಿಸುವುದರಿಂದ ಸ್ಥಾಣು-ಜಂಗಮಸಹಿತ ಲೋಕಗಳು ಮೋಹಗೊಳ್ಳುವವೋ, ಮತ್ತು ಕ್ರವ್ಯಾದ ಭೂತಗಳು ತೃಪ್ತರಾಗುವವೋ ಆ ಅಪ್ರತಿಮಕರ್ಮಿ ಸೂರ್ಯವರ್ಚಸ್ಸಿಗೆ ಸಮನಾಗಿದ್ದ ಚಕ್ರವನ್ನು ಎತ್ತಿ ಸಮರದಲ್ಲಿ ಕೋಪದೀಪ್ತನಾಗಿದ್ದ ಗದಾಧರ ಪರಮೌಜಸ ಕೃಷ್ಣನು ತನ್ನ ತೇಜಸ್ಸಿನಿಂದ ಬಾಣನ ತೇಜಸ್ಸನ್ನು ಅಪಹರಿಸುತ್ತಾ ಅವನ ಬಾಹುಗಳನ್ನು ಚಕ್ರದಿಂದ ತುಂಡರಿಸಿದನು.
19180128c ಅಲಾತಚಕ್ರವತ್ತೂರ್ಣಂ ಭ್ರಾಮ್ಯಮಾಣಂ ರಣಾಜಿರೇ ।।
19180129a ಕ್ಷಿಪ್ತಂ ತು ವಾಸುದೇವೇನ ಬಾಣಸ್ಯ ರಣಮೂರ್ಧನಿ ।
19180129c ವಿಷ್ಣುಚಕ್ರಂ ಭ್ರಮತ್ಯಾಶು ಶೈಘ್ರ್ಯಾದ್ರೂಪಂ ನ ದೃಶ್ಯತೇ ।।
ರಣಾಜಿರದಲ್ಲಿ ಬಾಣಾಸುರನಿಗೆ ಗುರಿಯಿಟ್ಟು ವಾಸುದೇವನು ಪ್ರಯೋಗಿಸಿದ ಆ ಚಕ್ರವು ಕೂಡಲೇ ಅಲಾತಚಕ್ರದಂತೆ ಅಲ್ಲಿಯೇ ತಿರುಗತೊಡಗಿತು. ಆ ವಿಷ್ಣುಚಕ್ರವು ಎಷ್ಟು ಜೋರಾಗಿ ತಿರುಗುತ್ತಿತ್ತೆಂದರೆ ಅದರ ರೂಪವೇ ಕಾಣುತ್ತಿರಲಿಲ್ಲ.
19180130a ತಸ್ಯ ಬಾಹುಸಹಸ್ರಸ್ಯ ಪರ್ಯಾಯೇನ ಪುನಃ ಪುನಃ ।
19180130c ಬಾಣಸ್ಯ ಚ್ಛೇದನಂ ಚಕ್ರೇ ತಚ್ಚಕ್ರಂ ರಣಮೂರ್ಧನಿ ।।
ರಣಮೂರ್ಧನಿಯಲ್ಲಿ ಆ ಚಕ್ರವು ಬಾಣನ ಸಹಸ್ರಬಾಹುಗಳನ್ನು ಒಂದರ ನಂತರ ಒಂದರಂತೆ ಪುನಃ ಪುನಃ ಕತ್ತರಿಸತೊಡಗಿತು.
19180131a ಕೃತ್ವಾ ದ್ವಿಬಾಹುಂ ತಂ ಬಾಣಂ ಛಿನ್ನಶಾಖಮಿವ ದ್ರುಮಮ್ ।
19180131c ಪುನಃ ಕರಾಗ್ರೇ ಕೃಷ್ಣಸ್ಯ ಚಕ್ರಂ ಪ್ರಾಪ್ತಂ ಸುದರ್ಶನಮ್ ।।
ರೆಂಬೆಗಳನ್ನು ಕಡಿದ ಮರದಂತೆ ಬಾಣನನ್ನು ದ್ವಿಬಾಹುವನ್ನಾಗಿ ಮಾಡಿ ಸುದರ್ಶನ ಚಕ್ರವು ಕೃಷ್ಣನ ಕೈಗೆ ಪುನಃ ಬಂದು ಸೇರಿತು.”
19180132 ವೈಶಂಪಾಯನ ಉವಾಚ ।
19180132a ಕೃತಕೃತ್ಯೇ ತು ಸಂಪ್ರಾಪ್ತೇ ಚಕ್ರೇ ದೈತ್ಯನಿಪಾತನೇ ।
19180132c ಸ್ರವತಾ ತೇನ ಕಾಯೇನ ಶೋಣಿತೌಘಪರಿಪ್ಲುತಃ ।।
ವೈಶಂಪಾಯನನು ಹೇಳಿದನು: “ದೈತ್ಯರನ್ನು ಕೆಳಗುರುಳಿಸುವ ಆ ಚಕ್ರವು ತನ್ನ ಕೆಲಸವನ್ನು ಮಾಡಿ ಪುನಃ ಕೃಷ್ಣನನ್ನು ಬಂದು ಸೇರಲು, ಬಾಣನ ಶರೀರದಿಂದ ರಕ್ತದ ಧಾರೆಯು ಹರಿಯತೊಡಗಿತು.
19180133a ಅಭವತ್ಪರ್ವತಾಕಾರಶ್ಛಿನ್ನಬಾಹುರ್ಮಹಾಸುರಃ ।
19180133c ಅಸೃಂಮತ್ತಶ್ಚ ವಿವಿಧಾನ್ನಾದಾನ್ಮುಂಚನ್ಘನೋ ಯಥಾ ।।
ಬಾಹುಗಳು ತುಂಡಾದ ಆ ಮಹಾಸುರನು ಪರ್ವತಾಕಾರನಾದನು ಮತ್ತು ರಕ್ತದಿಂದ ತೋಯ್ದು ಘನ ಮೇಘದಂತೆ ನಾನಾ ವಿವಿಧ ಗರ್ಜನೆಗಳನ್ನು ಮಾಡತೊಡಗಿದನು.
19180134a ತಸ್ಯ ನಾದೇನ ಮಹತಾ ಕೇಶವೋ ರಿಪುಸೂದನಃ ।
19180134c ಚಕ್ರಂ ಭೂಯಃ ಕ್ಷೇಪ್ತುಕಾಮೋ ಬಾಣನಾಶಾರ್ಥಮುದ್ಯತಃ ।
19180134e ತಮುಪೇತ್ಯ ಮಹಾದೇವಃ ಕುಮಾರಸಹಿತೋಽಬ್ರವೀತ್ ।।
ಅವನ ಆ ಮಹಾನಾದವನ್ನು ಕೇಳಿ ರಿಪುಸೂದನ ಕೇಶವನು ಬಾಣನನ್ನು ನಾಶಪಡಿಸಲು ಪುನಃ ಚಕ್ರವನ್ನು ಪ್ರಯೋಗಿಸಲು ಬಯಸಿದನು. ಆಗ ಮಹಾದೇವನು ಕುಮಾರನ ಸಹಿತ ಅವನಲ್ಲಿಗೆ ಬಂದು ಹೇಳಿದನು.
19180135 ಈಶ್ವರ ಉವಾಚ ।
19180135a ಕೃಷ್ಣ ಕೃಷ್ಣ ಮಹಾಬಾಹೋ ಜಾನೇ ತ್ವಾಂ ಪುರುಷೋತ್ತಮಮ್ ।
19180135c ಮಧುಕೈಟಭಹಂತಾರಂ ದೇವದೇವಂ ಸನಾತನಮ್ ।।
ಈಶ್ವರನು ಹೇಳಿದನು: “ಕೃಷ್ಣ! ಕೃಷ್ಣ! ಮಹಾಬಾಹೋ! ಪುರುಷೋತ್ತಮನೂ, ಮಧುಕೈಟಭರ ಹಂತಕನೂ ಆದ ಸನಾತನ ದೇವದೇವನೆಂದು ನಿನ್ನನ್ನು ಅರಿತಿದ್ದೇನೆ.
19180136a ಲೋಕಾನಾಂ ತ್ವಂ ಗತಿರ್ದೇವ ತ್ವತ್ಪ್ರಸೂತಮಿದಂ ಜಗತ್ ।
19180136c ಅಜೇಯಸ್ತ್ವಂ ತ್ರಿಭಿರ್ಲೋಕೈಃ ಸಸುರಾಸುರಪನ್ನಗೈಃ ।।
ದೇವ! ನೀನು ಲೋಕಗಳ ಗತಿ. ಈ ಜಗತ್ತು ನಿನ್ನಿಂದಲೇ ಹುಟ್ಟಿದೆ. ಮೂರುಲೋಕಗಳಲ್ಲಿಯೂ, ಸುರಾಸುರಪನ್ನಗಗಳಿಗೂ ನೀನು ಅಜೇಯನು.
19180137a ತಸ್ಮಾತ್ಸಂಹರ ದಿವ್ಯಂ ತ್ವಮಿದಂ ಚಕ್ರಂ ಸಮುದ್ಯತಮ್ ।
19180137c ಅನಿವಾರ್ಯಮಸಂಹಾರ್ಯಂ ರಣೇ ಶತ್ರುಭಯಂಕರಮ್ ।।
ಆದುದರಿಂದ ಮೇಲೆತ್ತಿರುವ ಈ ದಿವ್ಯ ಚಕ್ರವನ್ನು ಉಪಸಂಹರಿಸು! ಶತ್ರುಭಯಂಕರವಾಗಿರುವ ಇದನ್ನು ರಣದಲ್ಲಿ ತಡೆಯುವವರು ಅಥವಾ ನಾಶಪಡಿಸುವವರು ಯಾರೂ ಇಲ್ಲ.
19180138a ಬಾಣಸ್ಯಾಸ್ಯಾಭಯಂ ದತ್ತಂ ಮಯಾ ಕೇಶಿನಿಷೂದನ ।
19180138c ತನ್ಮೇ ನ ಸ್ಯಾದ್ವೃಥಾ ವಾಕ್ಯಮತಸ್ತ್ವಾಂ ಕ್ಷಾಮಯಾಮ್ಯಹಮ್ ।।
ಕೇಶಿನಿಷೂದನ! ನಾನು ಬಾಣನಿಗೆ ಅಭಯವನ್ನಿತ್ತಿದ್ದೇನೆ. ನನ್ನ ಆ ಮಾತನ್ನು ವ್ಯರ್ಥಗೊಳಿಸಬೇಡ. ಆದುದರಿಂದ ನಾನು ನಿನ್ನಿಂದ ಕ್ಷಮೆಯನ್ನು ಕೇಳುತ್ತಿದ್ದೇನೆ.”
19180139 ಶ್ರೀಕೃಷ್ಣ ಉವಾಚ ।
19180139a ಜೀವತಾಂ ದೇವ ಬಾಣೋ ಽಯಮೇತತ್ಚ್ಚಕ್ರಂ ನಿವರ್ತಿತಮ್ ।
19180139c ಮಾನ್ಯಸ್ತ್ವಂ ದೇವದೇವಾನಾಮಸುರಾಣಾಂ ಚ ಸರ್ವಶಃ ।।
ಶ್ರೀಕೃಷ್ಣನು ಹೇಳಿದನು: “ದೇವ! ಈ ಬಾಣನು ಜೀವಿತವಿರಲೆಂದು ನಾನು ಚಕ್ರವನ್ನು ಹಿಂತೆಗೆದುಕೊಂಡಿದ್ದೇನೆ. ನೀನು ದೇವತೆಗಳಿಗೂ ದೇವನು ಮತ್ತು ಸರ್ವಶಃ ಅಸುರರಿಗೆ ಮಾನ್ಯನು.
19180140a ನಮಸ್ತೇಽಸ್ತು ಗಮಿಷ್ಯಾಮಿ ಯತ್ಕಾರ್ಯಂ ತನ್ಮಹೇಶ್ವರ ।
19180140c ನ ತಾವತ್ಕ್ರಿಯತೇ ತಸ್ಮಾನ್ಮಾಮನುಜ್ಞಾತುಮರ್ಹಸಿ ।।
ಮಹೇಶ್ವರ! ನಿನಗೆ ನಮಸ್ಕಾರ! ನಾನು ಹೋಗುತ್ತೇನೆ. ನಾನು ಯಾವಕಾರ್ಯವನ್ನು ಮಾಡಬೇಕಾಗಿತ್ತೋ ಅದನ್ನು ನೀನು ಮಾಡಕೊಡಲಿಲ್ಲ. ಆದುದರಿಂದ ನನಗೆ ಅನುಜ್ಞೆಯನ್ನು ನೀಡಬೇಕು.”
19180141a ಏವಮುಕ್ತ್ವಾ ಮಹಾದೇವಂ ಕೃಷ್ಣಸ್ತೂರ್ಣಂ ಮಹಾಮನಾಃ ।
19180141c ಜಗಾಮ ತತ್ರ ಯತ್ರಾಸ್ತೇ ಪ್ರಾದ್ಯುಮ್ನಿಃ ಸಾಯಕೈಶ್ಚಿತಃ ।।
ಮಹಾದೇವನಿಗೆ ಹೀಗೆ ಹೇಳಿ ಮಹಾಮನಸ್ವೀ ಕೃಷ್ಣನು ತಕ್ಷಣವೇ ಸಾಯಕಗಳ ಮಧ್ಯೆ ಬಂಧಿತನಾಗಿದ್ದ ಪ್ರದ್ಯುಮ್ನನ ಮಗ ಅನಿರುದ್ಧನ ಬಳಿ ಹೋದನು.
19180142a ಗತೇ ಕೃಷ್ಣೇ ತತೋ ನಂದೀ ಬಾಣಮಾಹ ವಚಃ ಶುಭಮ್ ।
19180142c ಗಚ್ಛ ಬಾಣ ಪ್ರಸನ್ನಸ್ಯ ದೇವದೇವಸ್ಯ ಚಾಗ್ರತಃ ।।
ಕೃಷ್ಣನು ಹೊರಟುಹೋಗಲು ನಂದಿಯು ಬಾಣನಿಗೆ ಈ ಶುಭ ವಚನವನ್ನಾಡಿದನು: “ಬಾಣ! ಪ್ರಸನ್ನನಾಗಿರುವ ದೇವದೇವನ ಎದಿರು ಹೋಗು!”
19180143a ತಚ್ಛ್ರುತ್ವಾ ನಂದಿವಾಕ್ಯಂ ತು ಬಾಣೋಽಗಚ್ಛತ ಶೀಘ್ರಗಃ ।
19180143c ಛಿನ್ನಬಾಹುಂ ತತೋ ಬಾಣಂ ದೃಷ್ಟ್ವಾ ನಂದೀ ಪ್ರತಾಪವಾನ್ ।।
19180144a ಅಪವಾಹ್ಯ ರಥೇನೈನಂ ಯತೋ ದೇವಸ್ತತೋ ಯಯೌ ।
ನಂದಿಯ ವಾಕ್ಯವನ್ನು ಕೇಳಿ ಬಾಣನು ಶೀಘ್ರದಲ್ಲಿಯೇ ಹೊರಟನು. ಅವನ ಬಾಹುಗಳು ತುಂಡಾದುದನ್ನು ನೋಡಿ ಪ್ರತಾಪವಾನ್ ನಂದಿಯು ಬಾಣನನ್ನು ತನ್ನ ರಥದಲ್ಲಿ ಏರಿಸಿಕೊಂಡು ದೇವನಿರುವಲ್ಲಿಗೆ ಹೋದನು.
19180144c ತತೋ ನಂದೀ ಪುನರ್ಬಾಣಂ ಪ್ರಾಗುವಾಚೋತ್ತರಂ ವಚಃ ।।
19180145a ಬಾಣ ಬಾಣ ಪ್ರನೃತ್ಯಸ್ವ ಶ್ರೇಯಸ್ತವ ಭವಿಷ್ಯತಿ ।
19180145c ಏಷ ದೇವೋ ಮಹಾದೇವಃ ಪ್ರಸಾದಸುಮುಖಸ್ತವ ।।
ಆಗ ನಂದಿಯು ಬಾಣನಿಗೆ ಮೊದಲೇ ಈ ಉತ್ಕೃಷ್ಟ ಮಾತನ್ನು ಹೇಳಿದನು: “ಬಾಣ! ಬಾಣ! ನೀನು ಭಗವಾನ್ ಶಂಕರನ ಎದಿರು ನರ್ತಿಸು. ಇದರಿಂದ ನಿನಗೆ ಶ್ರೇಯಸ್ಸುಂಟಾಗುತ್ತದೆ. ಇಗೋ! ಮಹಾದೇವ ದೇವನು ನಿನ್ನ ಕುರಿತು ಪ್ರಸನ್ನಮುಖನಾಗಿದ್ದಾನೆ.”
19180146a ಶೋಣಿತೌಘಪ್ಲುತೈರ್ಗಾತ್ರೈರ್ನಂದಿವಾಕ್ಯಪ್ರಚೋದಿತಃ ।
19180146c ಜೀವಿತಾರ್ಥೀ ತತೋ ಬಾಣಃ ಪ್ರಮುಖೇ ಶಂಕರಸ್ಯ ವೈ ।।
19180147a ಅನೃತ್ಯದ್ಭಯಸಂವಿಗ್ನೋ ದಾನವಃ ಸ ವಿಚೇತನಃ ।
ನಂದಿಯ ಮಾತಿನಿಂದ ಪ್ರಚೋದಿತನಾದ ದಾನವ ಬಾಣನು ರಕ್ತದ ಧಾರೆಗಳಿಂದ ತೋಯ್ದುಹೋಗಿದ್ದ ಶರೀರದಿಂದಲೇ ಜೀವಿತಾರ್ಥಿಯಾಗಿ ಶಂಕರನ ಎದಿರು ಭಯಸಂವಿಗ್ನನಾಗಿ ವಿಚೇತನನಾಗಿ ನರ್ತಿಸಿದನು.
19180147c ತಂ ದೃಷ್ಟ್ವಾ ಚ ಪ್ರನೃತ್ಯಂತಂ ಭಯೋದ್ವಿಗ್ನಂ ಪುನಃ ಪುನಃ ।।
19180148a ನಂದಿವಾಕ್ಯಪ್ರಜವಿತಂ ಭಕ್ತಾನುಗ್ರಹಕೃದ್ಭವಃ ।
19180148c ಕರುಣಾವಶಮಾಪನ್ನೋ ಮಹಾದೇವೋಽಬ್ರವೀದ್ವಚಃ ।।
ನಂದಿಯು ಹೇಳಿದಂತೆ ಭಯೋದ್ವಿಗ್ನನಾಗಿ ಪುನಃ ಪುನಃ ನರ್ತಿಸುತ್ತಿದ್ದ ಬಾಣನನ್ನು ನೋಡಿ ಭಕ್ತರಿಗೆ ಅನುಗ್ರಹಮಾಡುವ ಮಹಾದೇವ ಭವನು ಕರುಣಾವಶನಾಗಿ ಹೇಳಿದನು.
19180149 ಈಶ್ವರ ಉವಾಚ ।
19180149a ವರಂ ವೃಣೀಷ್ವ ಬಾಣ ತ್ವಂ ಮನಸಾ ಯದಭೀಪ್ಸಸಿ ।
19180149c ಪ್ರಸಾದಸುಮುಖಸ್ತೇಽಹಂ ಪ್ರಿಯೋಽಸಿ ಮಮ ದಾನವ ।।
ಈಶ್ವರನು ಹೇಳಿದನು: “ಬಾಣ! ನೀನು ಮನಸಾರೆ ಬಯಸುವ ವರವನ್ನು ಕೇಳು. ನಿನ್ನ ಕುರಿತು ಪ್ರಸನ್ನವದನನಾಗಿದ್ದೇನೆ. ದಾನವ! ನೀನು ನನಗೆ ಪ್ರಿಯನಾಗಿರುವೆ!”
19180150 ಬಾಣ ಉವಾಚ ।
19180150a ಅಜರಶ್ಚಾಮರಶ್ಚೈವ ಭವೇಯಂ ಸತತಂ ವಿಭೋ ।
19180150c ಏಷ ಮೇ ಪ್ರಥಮೋ ದೇವ ವರೋಽಸ್ತು ಯದಿ ಮನ್ಯಸೇ ।।
ಬಾಣನು ಹೇಳಿದನು: “ವಿಭೋ! ನಾನು ಸತತವೂ ಅಜರಾಮರನಾಗಿರಲಿ. ದೇವ! ನೀನು ಒಪ್ಪಿದರೆ ಇದು ನನ್ನ ಮೊದಲನೆಯ ವರವು.”
19180151 ದೇವ ಉವಾಚ ।
19180151a ತುಲ್ಯೋಽಸಿ ದೈವತೈರ್ಬಾಣ ನ ಮೃತ್ಯುಸ್ತವ ವಿದ್ಯತೇ ।
19180151c ಅಥಾಪರಂ ವೃಣೀಷ್ವಾದ್ಯ ಅನುಗ್ರಾಹ್ಯೋಽಸಿ ಮೇ ಸದಾ ।।
ದೇವನು ಹೇಳಿದನು: “ಬಾಣ! ನೀನು ದೇವತೆಗಳ ಸಮನಾಗುವೆ. ನಿನಗೆ ಮೃತ್ಯುವೇ ಇರುವುದಿಲ್ಲ. ಇಂದು ಇನ್ನೊಂದು ವರವನ್ನು ಕೇಳು. ನಿನ್ನ ಮೇಲೆ ಸದಾ ನನ್ನ ಅನುಗ್ರಹವಿದೆ.”
19180152 ಬಾಣ ಉವಾಚ ।
19180152a ಯಥಾಹಂ ಶೋಣಿತೈರ್ದಿಗ್ಧೋ ಭೃಶಾರ್ತೋ ವ್ರಣಪೀಡಿತಃ ।
19180152c ಭಕ್ತಾನಾಂ ನೃತ್ಯತಾಂ ದೇವ ಪುತ್ರಜನ್ಮ ಭವೇದ್ಭವ ।।
ಬಾಣನು ಹೇಳಿದನು: “ದೇವ! ಭವ! ರಕ್ತದಿಂದ ತೋಯ್ದು, ಅತ್ಯಂತ ಆರ್ತನಾಗಿ ಗಾಯಗಳಿಂದ ಪೀಡಿತನಾಗಿ ನಾನು ಹೇಗೆ ನರ್ತಿಸುತ್ತಿದ್ದೇನೋ ಹಾಗೆ ನರ್ತಿಸುತ್ತಿರುವ ಭಕ್ತರಿಗೆ ಪುತ್ರಜನ್ಮವಾಗಲಿ!”
19180153 ಶ್ರೀಹರ ಉವಾಚ ।
19180153a ನಿರಾಹಾರಾಃ ಕ್ಷಮಾವಂತಃ ಸತ್ಯಾರ್ಜವಸಮಾಹಿತಾಃ ।
19180153c ಮದ್ಭಕ್ತಾ ಯೇಽಪಿ ನೃತ್ಯಂತಿ ತೇಷಾಮೇವಂ ಭವಿಷ್ಯತಿ ।।
ಶ್ರೀಹರನು ಹೇಳಿದನು: “ನಿರಾಹಾರರೂ ಕ್ಷಮಾವಂತರೂ ಸತ್ಯ-ಆರ್ಜವ ಸಮಾಹಿತರೂ ಆಗಿ ನರ್ತಿಸುವ ನನ್ನ ಭಕ್ತರು ನಿನ್ನಂತೆಯೇ ಆಗುತ್ತಾರೆ.
19180154a ತೃತೀಯಂ ತ್ವಮಥೋ ಬಾಣ ವರಂ ವರ ಮನೋಗತಮ್ ।
19180154c ತದ್ವಿಧಾಸ್ಯಾಮಿ ತೇ ಪುತ್ರ ಸಫಲೋಽಸ್ತು ಭವಾನಿಹ ।।
ಬಾಣ! ಈಗ ನೀನು ನಿನ್ನ ಮನೋಗತವಾಗಿರುವ ಮೂರನೆಯ ವರವನ್ನು ಕೇಳು. ಪುತ್ರ! ಅದನ್ನು ನೀಡುತ್ತೇನೆ. ನೀನು ಇಲ್ಲಿ ಸಫಲನಾಗುತ್ತೀಯೆ.”
19180155 ಬಾಣ ಉವಾಚ ।
19180155a ಚಕ್ರತಾಡನಜಾ ಘೋರಾ ರುಜಾ ತೀವ್ರಾ ಹಿ ಮೇಽನಘ ।
19180155c ವರೇಣಾಸೌ ತೃತೀಯೇನ ಶಾಂತಿಂ ಗಚ್ಛತು ಮೇ ಭವ ।।
ಬಾಣನು ಹೇಳಿದನು: “ಅನಘ! ಭವ! ಚಕ್ರದ ಘೋರ ಪ್ರಹಾರದಿಂದ ನನಗೆ ತೀವ್ರ ಗಾಯಗಳಾಗಿವೆ. ಮೂರನೆಯ ವರದಿಂದ ನನಗೆ ಶಾಂತಿಯು ದೊರೆಯಲಿ.”
19180156 ಶ್ರೀರುದ್ರ ಉವಾಚ ।
19180156a ಏವಂ ಭವತು ಭದ್ರಂ ತೇ ನ ರುಜಾ ಪ್ರಭವಿಷ್ಯತಿ ।
19180156c ಅಕ್ಷತಂ ತವ ಗಾತ್ರಂ ತು ಸ್ವಸ್ಥಾವಸ್ಥಂ ಭವಿಷ್ಯತಿ ।।
ಶ್ರೀರುದ್ರನು ಹೇಳಿದನು: “ಹೀಗೆಯೇ ಆಗಲಿ. ನಿನಗೆ ಮಂಗಳವಾಗಲಿ. ಗಾಯಗಳುಂಟಾಗುವುದಿಲ್ಲ. ನಿನ್ನ ಶರೀರವು ಗಾಯರಹಿತವಾಗಿ ನೀನು ಸ್ವಸ್ಥಾವಸ್ಥೆಯನ್ನು ಅನುಭವಿಸುತ್ತೀಯೆ.
19180157a ಚತುರ್ಥಂ ತೇ ವರಂ ದದ್ಮಿ ವೃಣೀಷ್ವ ಯದಿ ಕಾಂಕ್ಷಸಿ ।
19180157c ನ ತೇಽಹಂ ವಿಮುಖಸ್ತಾತ ಪ್ರಸಾದಸುಮುಖೋ ಹ್ಯಹಮ್ ।।
ನಿನಗೆ ನಾಲ್ಕನೆಯ ವರವನ್ನು ಕೊಡುತ್ತೇನೆ. ಬಯಸುವೆಯಾದರೆ ಕೇಳಿಕೋ. ಅಯ್ಯಾ! ನಾನು ನಿನ್ನಿಂದ ವಿಮುಖನಾಗಿಲ್ಲ. ನಾನು ನಿನ್ನಕುರಿತು ಪ್ರಸಾದಮುಖನೇ ಆಗಿದ್ದೇನೆ.”
19180158 ಬಾಣ ಉವಾಚ ।
19180158a ಪ್ರಮಾಥಗಣವಂಶ್ಯಸ್ಯ ಪ್ರಥಮಃ ಸ್ಯಾಮಹಂ ವಿಭೋ ।
19180158c ಮಹಾಕಾಲ ಇತಿ ಖ್ಯಾತಿಂ ಗಚ್ಛೇಯಂ ಶಾಶ್ವತೀಃ ಸಮಾಃ ।।
ಬಾಣನು ಹೇಳಿದನು: “ವಿಭೋ! ನಾನು ನಿನ್ನ ಪ್ರಮಥಗಣವಂಶದ ಪ್ರಥಮನಾಗಲಿ. ಮಹಾಕಾಲನೆಂದು ನಾನು ಶಾಶ್ವತ ಖ್ಯಾತಿಯನ್ನು ಪಡೆಯಲಿ.””
19180159 ವೈಶಂಪಾಯನ ಉವಾಚ ।
19180159a ಏವಂ ಭವಿಷ್ಯತೀತ್ಯಾಹ ಬಾಣಂ ದೇವೋ ಮಹೇಶ್ವರಃ ।
19180159c ದಿವ್ಯರೂಪೋಽಕ್ಷತೋ ಗಾತ್ರೈರ್ನೀರುಜಸ್ತು ಮಮಾಶ್ರಯಾತ್ ।।
ವೈಶಂಪಾಯನನು ಹೇಳಿದನು: “ದೇವ ಮಹೇಶ್ವರನು ಬಾಣನಿಗೆ ಹೇಳಿದನು: “ಹಾಗೆಯೇ ಆಗುತ್ತದೆ. ನನ್ನ ಆಶ್ರಯದಿಂದ ನಿನ್ನ ಶರೀರವು ಗಾಯಗಳಿಲ್ಲದೇ ದಿವ್ಯರೂಪವನ್ನು ತಾಳುತ್ತದೆ ಮತ್ತು ನೀನು ನಿರೋಗಿಯಾಗುವೆ.
19180160a ಮಮಾತಿಸರ್ಗಾದ್ಬಾಣ ತ್ವಂ ಭವ ಚೈವಾಕುತೋಭಯಃ ।
19180160c ಭೂಯಸ್ತೇ ಪಂಚಮಂ ದದ್ಮಿ ಪ್ರಖ್ಯಾತಬಲಪೌರುಷಮ್ ।
19180160e ಪುನರ್ವರಯ ಭದ್ರಂ ತೇ ಯತ್ತೇ ಮನಸಿ ವರ್ತತೇ ।।
ಪ್ರಖ್ಯಾತಬಲಪೌರುಷ! ಬಾಣ! ನಾನು ನೀಡಿರುವ ವರಗಳಿಂದ ನೀನು ನಿರ್ಭಯನಾಗು. ನಿನಗೆ ಯಾರಿಂದಲೂ ಭಯವುಂಟಾಗುವುದಿಲ್ಲ. ಈಗ ನಾನು ಪುನಃ ಐದನೆಯ ವರವನ್ನು ಕೊಡುತ್ತೇನೆ. ನಿನಗೆ ಮಂಗಳವಾಗಲಿ. ನಿನ್ನ ಮನಸ್ಸಿನಲ್ಲಿರುವ ವರವನ್ನು ಪುನಃ ಕೇಳು.”
19180161 ಬಾಣ ಉವಾಚ ।
19180161a ವೈರೂಪ್ಯಮಂಗಜಂ ಯನ್ಮೇ ಮಾ ಭೂದ್ದೇವ ಕದಾಚನ ।
19180161c ದ್ವಿಬಾಹುರಪಿ ಮೇ ದೇಹೋ ನ ವಿರೂಪೋ ಭವೇದ್ಭವ ।।
ಬಾಣನು ಹೇಳಿದನು: “ದೇವ! ನನ್ನ ದೇಹದಲ್ಲಿ ಎಂದೂ ಕುರೂಪತ್ವವು ಇರದಂತಾಗಲಿ. ಭವ! ಎರಡೇ ಕೈಗಳಿದ್ದರೂ ಕೂಡ ನನ್ನ ದೇಹವು ವಿರೂಪವಾಗದಿರಲಿ!”
19180162 ಶ್ರೀಹರ ಉವಾಚ ।
19180162a ಭವಿತಾ ಸರ್ವಮೇತತ್ತೇ ಯಥೇಚ್ಛಸಿ ಮಹಾಸುರ ।
19180162c ಭವತ್ಯೇವಂ ನ ಚಾದೇಯಂ ಭಕ್ತಾನಾಂ ವಿದ್ಯತೇ ಮಮ ।।
ಶ್ರೀಹರನು ಹೇಳಿದನು: “ಮಹಾಸುರ! ನೀನು ಬಯಸಿದ ಇವೆಲ್ಲವೂ ಹಾಗೆಯೇ ಆಗುತ್ತವೆ. ಭಕ್ತರಿಗೆ ಕೊಡದೇ ಇರುವಂಥಹುದು ನನ್ನಲ್ಲಿ ಯಾವುದೂ ಇಲ್ಲ.””
19180163 ವೈಶಂಪಾಯನ ಉವಾಚ ।
19180163a ತತೋಽಬ್ರವೀನ್ಮಹಾದೇವೋ ಬಾಣಂ ಸ್ಥಿತಮಥಾಂತಿಕೇ ।
19180163c ಏವಂ ಭವಿಷ್ಯತೇ ಸರ್ವಂ ಯತ್ತ್ವಯಾ ಸಮುದಾಹೃತಮ್ ।।
ವೈಶಂಪಾಯನನು ಹೇಳಿದನು: “ಆಗ ಹತ್ತಿರದಲ್ಲಿಯೇ ನಿಂತಿದ್ದ ಬಾಣನಿಗೆ ಮಹಾದೇವನು ಹೇಳಿದನು: “ನೀನು ಕೇಳಿದ ಎಲ್ಲವೂ ಹಾಗೆಯೇ ಆಗುತ್ತವೆ.”
19180164a ಏತಾವದುಕ್ತ್ವಾ ಭಗವಾಂಸ್ತ್ರಿನೇತ್ರೋ ಗಣಸಂವೃತಃ ।
19180164c ಪಶ್ಯತಾಂ ಸರ್ವಭೂತಾನಾಂ ತತ್ರೈವಾಂತರಧೀಯತ ।।
ಹೀಗೆ ಹೇಳಿ ಭಗವಾನ್ ತ್ರಿನೇತ್ರನು ಗಣಸಂವೃತನಾಗಿ ಸರ್ವಭೂತಗಳೂ ನೋಡುತ್ತಿದ್ದಂತೆ ಅಲ್ಲಿಯೇ ಅಂತರ್ಧಾನನಾದನು.”
ಸಮಾಪ್ತಿ
ಇತಿ ಶ್ರೀಮಹಾಭಾರತೇ ಖಿಲೇಷು ಹರಿವಂಶೇ ವಿಷ್ಣುಪರ್ವಣಿ ಉಷಾಹರಣೇ ಬಾಣಾಸುರವರಪ್ರದಾನೇ ಅಶೀತ್ಯಧಿಕಶತತಮೋಽಧ್ಯಾಯಃ ।।