ಪ್ರವೇಶ
।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।
ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ
ಶ್ರೀ ಮಹಾಭಾರತ
ಖಿಲಭಾಗೇ ಹರಿವಂಶಃ
ವಿಷ್ಣು ಪರ್ವ
ಅಧ್ಯಾಯ 179
ಸಾರ
ಕೃಷ್ಣನ ಜೃಂಭಾಸ್ತ್ರದಿಂದ ಶಂಕರನು ಆಕಳಿಕೆಯ ವಶೀಭೂತನಾದುದು (1-15); ಬ್ರಹ್ಮನು ಶಿವನಿಗೆ ವಿಷ್ಣುವಿನೊಂದಿಗಿದ್ದ ಅವನ ಏಕಾತ್ಮತೆಯನ್ನು ಸ್ಮರಿಸಿಕೊಡುವುದು (16-24); ಬ್ರಹ್ಮನ ಕೇಳಿಕೆಯಂತೆ ಮಾರ್ಕಂಡೇಯನು ಹರಿಹರರ ಏಕತ್ವವನ್ನು ಸ್ಥಾಪಿಸಿ ಅವರ ಮಹಾತ್ಮ್ಯೆಯೊಂದಿಗೆ ಹರಿಹರಾತ್ಮಕ ಸ್ತ್ರೋತ್ರವನ್ನು ವರ್ಣಿಸುವುದು (25-64).
19179001 ವೈಶಂಪಾಯನ ಉವಾಚ ।
19179001a ಅಂಧಕಾರೀಕೃತೇ ಲೋಕೇ ಪ್ರದೀಪ್ತೇ ತ್ರ್ಯಂಬಕೇ ತಥಾ ।
19179001c ನ ನಂದೀ ನಾಪಿ ಚ ರಥೋ ನ ರುದ್ರಃ ಪ್ರತ್ಯದೃಶ್ಯತ ।।
ವೈಶಂಪಾಯನನು ಹೇಳಿದನು: “ವೈಷ್ಣವಾಸ್ತ್ರದಿಂದ ಲೋಕದಲ್ಲಿ ಅಂಧಕಾರವುಂಟಾಗಲು ತ್ರ್ಯಂಬಕನು ಪ್ರಜ್ವಲಿಸಿದನು. ನಂದಿಯಾಗಲೀ, ರಥವಾಗಲೀ, ರುದ್ರನಾಗಲೀ ಕಾಣುತ್ತಿರಲಿಲ್ಲ.
19179002a ದ್ವಿಗುಣಂ ದೀಪ್ತದೇಹಸ್ತು ರೋಷೇಣ ಚ ಬಲೇನ ಚ ।
19179002c ತ್ರಿಪುರಾಂತಕರೋ ಬಾಣಂ ಜಗ್ರಾಹ ಚ ಚತುರ್ಮುಖಃ ।।
ರೋಷ ಮತ್ತು ಬಲದಿಂದ ದೇಹವು ದ್ವಿಗುಣವಾಗಿ ಪ್ರಕಾಶಿಸಲು ತ್ರಿಪುರಾಂತಕರನು ಚತುರ್ಮುಖ ಬಾಣವನ್ನು ತೆಗೆದುಕೊಂಡನು.
19179003a ಸಂದಧತ್ಕಾರ್ಮುಕಂ ಚೈವ ಕ್ಷೇಪ್ತುಕಾಮಸ್ತ್ರಿಲೋಚನಃ ।
19179003c ವಿಜ್ಞಾತೋ ವಾಸುದೇವೇನ ಚಿತ್ತಜ್ಞೇನ ಮಹಾತ್ಮನಾ ।।
ತ್ರಿಲೋಚನನು ಆ ಬಾಣವನ್ನು ಧನುಸ್ಸಿಗೆ ಹೂಡಿ ಪ್ರಯೋಗಿಸುವುದರಲ್ಲಿಯೇ ಮಹಾತ್ಮಾ ಚಿತ್ತಜ್ಞ ವಾಸುದೇವನಿಗೆ ಅವನ ಇಂಗಿತವು ತಿಳಿಯಿತು.
19179004a ಜೃಂಭಣಂ ನಾಮ ಸೋಽಪ್ಯಸ್ತ್ರಂ ಜಗ್ರಾಹ ಪುರುಷೋತ್ತಮಃ ।
19179004c ಹರಂ ಸಂಜೃಂಭಯಾಮಾಸ ಕ್ಷಿಪ್ರಕಾರೀ ಮಹಾಬಲಃ ।
ಕ್ಷಿಪ್ರಕಾರೀ ಮಹಾಬಲ ಪುರುಷೋತ್ತಮನು ಜೃಂಭಣ ಎಂಬ ಹೆಸರಿನ ಅಸ್ತ್ರವನ್ನು ತೆಗೆದುಕೊಂಡು ಅದರಿಂದ ಹರನನ್ನು ಜೃಂಭನೆಯಿಂದ ಅಭಿಭೂತನನ್ನಾಗಿಸಿದನು.
19179004e ಸಶರಃ ಸಧನುಶ್ಚೈವ ಹರಸ್ತೇನಾಶು ಜೃಂಭಿತಃ ।।
19179005a ಸಂಜ್ಞಾಂ ನ ಲೇಭೇ ಭಗವಾನ್ವಿಜೇತಾಸುರರಕ್ಷಸಾಮ್ ।
ಇದರಿಂದಾಗಿ ಹರನು ಧನುರ್ಬಾಣಗಳನ್ನು ಹಿಡಿದುಕೊಂಡೇ ಆಕಳಿಸತೊಡಗಿದನು. ಅಸುರ-ರಾಕ್ಷಸರಿಗೆ ವಿಜಯವನ್ನು ದೊರಕಿಸುವ ಭಗವಂತನಿಗೆ ಸಂಜ್ಞೆಯೇ ಇಲ್ಲದಂತಾಯಿತು.
19179005c ಸಶರಂ ಸಧನುಷ್ಕಂ ಚ ದೃಷ್ಟ್ವಾತ್ಮಾನಂ ವಿಜೃಂಭಿತಮ್ ।।
19179006a ಬಲೋನ್ಮತ್ತೋಽಥ ಬಾಣೋಽಸೌ ಶರ್ವಂ ಚೋದಯತೇಽಸಕೃತ್ ।
ಆತ್ಮಸ್ವರೂಪ ಶಿವನು ಶರ-ಧನುಸ್ಸುಗಳೊಂದಿಗೆ ವಿಜೃಂಭಿತನಾದುದನ್ನು ಕಂಡು ಬಲೋನ್ಮತ್ತ ಬಾಣನು ಶರ್ವನನ್ನು ಪುನಃ ಪುನಃ ಯುದ್ಧಕ್ಕೆ ಪ್ರಚೋದಿಸತೊಡಗಿದನು.
19179006c ತತೋ ನನಾದ ಭೂತಾತ್ಮಾ ಸ್ನಿಗ್ಧಗಂಭೀರಯಾ ಗಿರಾ ।।
19179007a ಪ್ರಧ್ಮಾಪಯಾಮಾಸ ತದಾ ಕೃಷ್ಣಃ ಶಂಖಂ ಮಹಾಬಲಃ ।
ಆಗ ಭೂತಾತ್ಮ ಮಹಾಬಲ ಕೃಷ್ಣನು ಸ್ನಿಗ್ಧ ಗಂಭೀರವಾಣಿಯಿಂದ ಸಿಂಹನಾದಗೈದನು ಮತ್ತು ಶಂಖವನ್ನು ಜೋರಾಗಿ ಊದಿದನು.
19179007c ಪಾಂಚಜನ್ಯಸ್ಯ ಘೋಷೇಣಾ ಶಾಂಙ್ರವಿಸ್ಫೂರ್ಜಿತೇನ ಚ ।।
19179008a ದೇವಂ ವಿಜೃಂಭಿತಂ ದೃಷ್ಟ್ವಾ ಸರ್ವಭೂತಾನಿ ತತ್ರಸುಃ ।
ಪಾಂಚಜನ್ಯದ ಘೋಷದಿಂದ ಮತ್ತು ಶಾಂಙ್ರಧನುಸ್ಸಿನ ಟೇಂಕಾರಗಳಿಂದ ಮತ್ತು ದೇವನು ಆಕಳಿಸುತ್ತಿದ್ದುದನ್ನು ನೋಡಿ ಸರ್ವಭೂತಗಳು ಭಯದಿಂದ ತತ್ತರಿಸಿದವು.
19179008c ಏತಸ್ಮಿನ್ನಂತರೇ ತತ್ರ ರುದ್ರಸ್ಯ ಪಾರ್ಷದಾ ರಣೇ ।।
19179009a ಮಾಯಾಯುದ್ಧಂ ಸಮಾಶ್ರಿತ್ಯ ಪ್ರದ್ಯುಮ್ನಂ ಪರ್ಯವಾರಯನ್ ।
ಈ ಮಧ್ಯದಲ್ಲಿ ರುದ್ರನ ಪಾರ್ಷದಗಣಗಳು ರಣದಲ್ಲಿ ಮಾಯಾಯುದ್ಧವನ್ನು ಬಳಸಿ ಪ್ರದ್ಯುಮ್ನನನ್ನು ಮುತ್ತಿದರು.
19179009c ಸರ್ವಾಂಸ್ತು ನಿದ್ರಾವಶಗಾನ್ಕೃತ್ವಾ ಮಕರಕೇತುಮಾನ್ ।।
19179010a ದಾನವಾನ್ನಾಶಯತ್ತತ್ರ ಶರಜಾಲೇನ ವೀರ್ಯವಾನ್ ।
19179010c ಪ್ರಮಾಥಗಣಭೂಯಿಷ್ಠಾಂಸ್ತತ್ರ ತತ್ರ ಮಹಾಬಲಾನ್ ।।
ಆದರೆ ಮಕರಧ್ವಜ ವೀರ್ಯವಾನ್ ಪ್ರದ್ಯುಮ್ನನು ಆ ಎಲ್ಲ ದಾನವರನ್ನೂ, ಪ್ರಮಥಗಣಗಳೇ ಹೆಚ್ಚಾಗಿದ್ದ ಆ ಮಹಾಬಲವನ್ನೂ ನಿದ್ರಾವಶರನ್ನಾಗಿ ಮಾಡಿ ಶರಜಾಲಗಳಿಂದ ನಾಶಪಡಿಸಿದನು.
19179011a ತತಸ್ತು ಜೃಂಭಮಾಣಸ್ಯ ದೇವಸ್ಯಾಕ್ಲಿಷ್ಟಕರ್ಮಣಃ ।
19179011c ಜ್ವಾಲಾ ಪ್ರಾದುರಭೂದ್ವಕ್ತ್ರಾದ್ದಹಂತೀವ ದಿಶೋ ದಶ ।।
ಅನಂತರ ಆಕಳಿಸುತ್ತಿದ್ದ ಅಕ್ಲಿಷ್ಟಕರ್ಮಿ ದೇವ ಶಿವನ ಮುಖದಿಂದ ದಶ ದಿಕ್ಕುಗಳನ್ನೂ ಸುಟ್ಟುಬಿಡುತ್ತದೆಯೋ ಎನ್ನುವಂತಹ ಜ್ವಾಲೆಯು ಹೊರಹೊಮ್ಮಿತು.
19179012a ತತಸ್ತು ಧರಣೀ ದೇವೀ ಪೀಡ್ಯಮಾನಾ ಮಹಾತ್ಮಭಿಃ ।
19179012c ಬ್ರಹ್ಮಾಣಂ ವಿಶ್ವಧಾತಾರಂ ವೇಪಮಾನಾಭ್ಯುಪಾಗಮತ್ ।।
ಆಗ ಮಹಾತ್ಮರಿಂದ ಪೀಡಿತಳಾದ ಧರಣೀ ದೇವಿಯು ನಡುಗುತ್ತಾ ವಿಶ್ವಧಾತಾರ ಬ್ರಹ್ಮನ ಬಳಿಸಾರಿದಳು.
19179013 ಪೃಥಿವ್ಯುವಾಚ ।
19179013a ದೇವದೇವ ಮಹಾಬಾಹೋ ಪೀಡ್ಯಾಮಿ ಪರಮೌಜಸಾ ।
19179013c ಕೃಷ್ಣರುದ್ರಭರಾಕ್ರಾಂತಾ ಭವಿಷ್ಯೈಕಾರ್ಣವಾ ಪುನಃ ।।
ಪೃಥ್ವಿಯು ಹೇಳಿದಳು: “ದೇವದೇವ! ಮಹಾಬಾಹೋ! ಪರಮ ಓಜಸ್ಸಿನಿಂದ ಪೀಡಿತಳಾಗಿದ್ದೇನೆ. ಕೃಷ್ಣ-ರುದ್ರರ ಭಾರದಿಂದ ಆಕ್ರಾಂತಳಾಗಿ ಪುನಃ ಸಮುದ್ರದಲ್ಲಿ ಮುಳುಗಿಹೋಗುತ್ತೇನೆ.
19179014a ಅವಿಷಹ್ಯಮಿಮಂ ಭಾರಂ ಚಿಂತಯಸ್ವ ಪಿತಾಮಹ ।
19179014c ಲಘ್ವೀಭೂತಾ ಯಥಾ ದೇವ ಧಾರಯೇಯಂ ಚರಾಚರಮ್ ।।
ಪಿತಾಮಹ! ದೇವ! ಈ ಭಾರವನ್ನು ಸಹಿಸಿಕೊಳ್ಳಲಾರೆನು. ಲಘುವಾದರೆ ಈ ಚರಾಚರವನ್ನು ಧರಿಸಬಲ್ಲೆ. ಇದರ ಕುರಿತು ವಿಚಾರಿಸು!”
19179015a ತತಸ್ತು ಕಾಶ್ಯಪೀಂ ದೇವೀಂ ಪ್ರತ್ಯುವಾಚ ಪಿತಾಮಹಃ ।
19179015c ಮುಹೂರ್ತಂ ಧಾರಯಾತ್ಮಾನಮಾಶು ಲಘ್ವೀ ಭವಿಷ್ಯಸಿ ।।
ಆಗ ಪಿತಾಮಹನು ದೇವಿ ಕಾಶ್ಯಪಿಗೆ ಹೇಳಿದನು: “ಮುಹೂರ್ತಕಾಲ ನಿನ್ನನ್ನು ನೀನು ಧರಿಸಿಕೊಂಡಿರು. ಶೀಘ್ರವಾಗಿಯೇ ಹಗುರವಾಗುತ್ತೀಯೆ!””
19179016 ವೈಶಂಪಾಯನ ಉವಾಚ ।
19179016a ದೃಷ್ಟ್ವಾ ತು ಭಗವಾನ್ಬ್ರಹ್ಮಾ ರುದ್ರಂ ವಚನಮಬ್ರವೀತ್ ।
19179016c ಸೃಷ್ಟೋ ಮಹಾಸುರವಧಃ ಕಿಂ ಭೂಯಃ ಪರಿರಕ್ಷ್ಯಸೇ ।।
ವೈಶಂಪಾಯನನು ಹೇಳಿದನು: “ರುದ್ರನನ್ನು ನೋಡಿ ಭಗವಾನ್ ಬ್ರಹ್ಮನು ಈ ಮಾತನ್ನಾಡಿದನು: “ಮಹಾ ಅಸುರರ ವಧೆಯು ಆರಂಭವಾಗಿಬಿಟ್ಟಿದೆ. ಇನ್ನೂ ಏಕೆ ಅವರನ್ನು ರಕ್ಷಿಸುತ್ತಿರುವೆ?
19179017a ನ ಚ ಯುದ್ಧಂ ಮಹಾಬಾಹೋ ತವ ಕೃಷ್ಣೇನ ರೋಚತೇ ।
19179017c ನ ಚ ಬುಧ್ಯಸಿ ಕೃಷ್ಣಂ ತ್ವಮಾತ್ಮಾನಂ ತು ದ್ವಿಧಾ ಕೃತಮ್ ।।
ಮಹಾಬಾಹೋ! ಕೃಷ್ಣನೊಡನೆ ನಿನ್ನ ಈ ಯುದ್ಧವು ಇಷ್ಟವಾಗುತ್ತಿಲ್ಲ. ಕೃಷ್ಣನನ್ನು ನೀನು ತಿಳಿದುಕೊಂಡಿಲ್ಲ. ನಿನ್ನ ಆತ್ಮವೇ ಎರಡಾಗಿ ಮಾಡಲ್ಪಟ್ಟಿದೆ.”
19179018a ತತಃ ಶರೀರಯೋಗಾದ್ಧಿ ಭಗವಾನವ್ಯಯಃ ಪ್ರಭುಃ ।
19179018c ಪ್ರವಿಶ್ಯ ಪಶ್ಯತೇ ಕೃತ್ಸ್ನಾಂಸ್ತ್ರೀಂಲ್ಲೋಕಾನ್ಸಚರಾಚರಾನ್ ।।
ಆಗ ಅವ್ಯಯ ಪ್ರಭು ಭಗವಾನ್ ಶಿವನು ಶರೀರಯೋಗದಿಂದ ಆತ್ಮವನ್ನು ಪ್ರವೇಶಿಸಿ ಮೂರೂ ಲೋಕಗಳ ಚರಾಚರಗಳನ್ನು ಸಾಕ್ಷಾತ್ಕರಿಸಿದನು.
19179019a ಪ್ರವಿಶ್ಯ ಯೋಗಂ ಯೋಗಾತ್ಮಾ ವರಾಂಸ್ತಾನನುಚಿಂತಯನ್ ।
19179019c ದ್ವಾರವತ್ಯಾಂ ಯದುಕ್ತಂ ಚ ತದನುಸ್ಮೃತ್ಯ ಸರ್ವಶಃ ।
19179019e ಜಗಾದ ನೋತ್ತರಂ ಕಿಂಚಿನ್ನಿವೃತ್ತೋಽಸೌ ಭವತ್ತದಾ ।।
ಯೋಗಾತ್ಮನು ಯೋಗವನ್ನು ಪ್ರವೇಶಿಸಿ ಆ ವರಗಳ ಕುರಿತು ಯೋಚಿಸತೊಡಗಿದನು. ದ್ವಾರವತಿಯಲ್ಲಿ ಹೇಳಿದುದೆಲ್ಲವನ್ನೂ ಸ್ಮರಿಸಿಕೊಂಡು ಭವನು ಬ್ರಹ್ಮನಿಗೆ ಏನನ್ನೂ ಉತ್ತರಿಸಲಿಲ್ಲ ಮತ್ತು ಯುದ್ಧದಿಂದ ನಿವೃತ್ತನಾದನು.
19179020a ಆತ್ಮಾನಂ ಕೃಷ್ಣಯೋನಿಸ್ಥಂ ಪಶ್ಯತ ಹ್ಯೇಕಯೋನಿಜಮ್ ।
19179020c ತತೋ ನಿಃಸೃತ್ಯ ರುದ್ರಸ್ತು ನ್ಯಸ್ತವಾದೋಽಭವನ್ಮೃಧೇ ।।
ರುದ್ರನು ತನ್ನನ್ನು ಕೃಷ್ಣಯೋನಿಸ್ಥನೆಂದೂ, ಅವರಿಬ್ಬರೂ ಏಕಯೋನಿಜರೆಂದು ಕಂಡುಕೊಂಡನು. ಆಗ ಅವನು ಯುದ್ಧದಿಂದ ಹಿಂದೆಸರಿದು ಯುದ್ಧದ ಭಾವನೆಯನ್ನು ಪರಿತ್ಯಜಿಸಿದನು.
19179021a ಬ್ರಹ್ಮಾಣಂ ಚಾಬ್ರವೀದ್ರುದ್ರೋ ನ ಯೋತ್ಸ್ಯೇ ಭಗವನ್ನಿತಿ ।
19179021c ಕೃಷ್ಣೇನ ಸಹ ಸಂಗ್ರಾಮೇ ಲಘ್ವೀ ಭವತು ಮೇದಿನೀ ।।
ರುದ್ರನು ಬ್ರಹ್ಮನಿಗೆ ಹೇಳಿದನು: “ಭಗವನ್! ಸಂಗ್ರಾಮದಲ್ಲಿ ನಾನು ಕೃಷ್ಣನೊಡನೆ ಯುದ್ಧಮಾಡುವುದಿಲ್ಲ. ಮೇದಿನಿಯು ಹಗುರಾಗಲಿ!” ಎಂದನು.
19179022a ತತಃ ಕೃಷ್ಣೋಽಥ ರುದ್ರಶ್ಚ ಪರಿಷ್ವಜ್ಯ ಪರಸ್ಪರಮ್ ।
19179022c ಪರಾಂ ಪ್ರೀತಿಮುಪಾಗಮ್ಯ ಸಂಗ್ರಾಮಾದಪಜಗ್ಮತುಃ ।।
ಆಗ ಕೃಷ್ಣ ಮತ್ತು ರುದ್ರರು ಪರಸ್ಪರರನ್ನು ಆಲಂಗಿಸಿದರು. ಪರಮ ಪ್ರೀತರಾಗಿ ಸಂಗ್ರಾಮದಿಂದ ಹಿಂದೆಸರಿದರು.
19179023a ನ ಚ ತೌ ಪಶ್ಯತೇ ಕೇಚಿದ್ಯೋಗಿನೌ ಯೋಗಮಾಗತೌ ।
19179023c ಏಕೋ ಬ್ರಹ್ಮ ತಥಾ ಕೃತ್ವಾ ಪಶ್ಯಂಲ್ಲೋಕಾನ್ಪಿತಾಮಹಃ ।।
19179024a ಉವಾಚೈತತ್ಸಮುದ್ದಿಶ್ಯ ಮಾರ್ಕಂಡೇಯಂ ಸನಾರದಮ್ ।
19179024c ಪಾರ್ಶ್ವಸ್ಥಂ ಪರಿಪಪ್ರಚ್ಛ ಜ್ಞಾತ್ವಾ ವೈ ದೀರ್ಘದರ್ಶಿನಮ್ ।।
ಪಿತಾಮಹ ಬ್ರಹ್ಮನೊಬ್ಬನನ್ನು ಬಿಟ್ಟು ಲೋಕದಲ್ಲಿ ಯಾರೂ ಆ ಇಬ್ಬರು ಯೋಗಿಗಳು ಒಂದೇ ಎನ್ನುವುದನ್ನು ಕಾಣಲಿಲ್ಲ. ಅದನ್ನು ಉದ್ದೇಶಿಸಿ ಬ್ರಹ್ಮನು ಪಕ್ಕದಲ್ಲಿ ನಾರದನೊಂದಿಗಿದ್ದ ಮಾರ್ಕಂಡೇಯನಿಗೆ, ಅವನು ದೀರ್ಘದರ್ಶಿಯೆಂದು ತಿಳಿದು, ಪ್ರಶ್ನಿಸಿದನು.
19179025 ಪಿತಾಮಹ ಉವಾಚ ।
19179025a ಮಂದರಸ್ಯ ಗಿರೇಃ ಪಾರ್ಶ್ವೇ ನಲಿನ್ಯಾಂ ಭವಕೇಶವೌ ।
19179025c ರಾತ್ರೌ ಸ್ವಪ್ನಾಂತರೇ ಬ್ರಹ್ಮನ್ಮಯಾ ದೃಷ್ಟೌ ಹರಾಚ್ಯುತೌ ।।
ಪಿತಾಮಹನು ಹೇಳಿದನು: “ಬ್ರಹ್ಮನ್! ನಾನು ಮಂದರಾಚಲ ಪರ್ವತದ ಪಾರ್ಶ್ವದಲ್ಲಿ ರಾತ್ರಿ ಮಲಗಿದ್ದಾಗ ಸ್ವಪ್ನದಲ್ಲಿ ಒಂದು ಸರೋವರದ ತಟದಲ್ಲಿ ಭವ ಮತ್ತು ಕೇಶವರನ್ನು ನೋಡಿದೆನು. ತತ್ಕಾಲದಲ್ಲಿ ಹರ ಮತ್ತು ಅಚ್ಯುತರು ಒಂದೇ ರೂಪವನ್ನು ತಾಳಿದ್ದರು.
19179026a ಹರಂ ಚ ಹರಿರೂಪೇಣ ಹರಿಂ ಚ ಹರರೂಪಿಣಮ್ ।
19179026c ಶಂಖಚಕ್ರಗದಾಪಾಣಿಂ ಪೀತಾಂಬರಧರಂ ಹರಮ್ ।।
ಹರನು ಹರಿರೂಪವನ್ನು ತಾಳಿದ್ದನು. ಮತ್ತು ಹರಿಯು ಹರನ ರೂಪವನ್ನು ತಾಳಿದ್ದನು. ಹರನು ಶಂಖಚಕ್ರಗದಾಪಾಣಿಯಾಗಿಯೂ ಪೀತಾಂಬರಧಾರಿಯೂ ಆಗಿದ್ದನು.
19179027a ತ್ರಿಶೂಲಪಟ್ಟಿಶಧರಂ ವ್ಯಾಘ್ರಚರ್ಮಧರಂ ಹರಿಮ್ ।
19179027c ಗರುಡಸ್ಥಂ ಚಾಪಿ ಹರಂ ಹರಿಂ ಚ ವೃಷಭಧ್ವಜಮ್ ।।
ಹರಿಯು ತ್ರಿಶೂಲ-ಪಟ್ಟಿಶಗಳನ್ನು ಹಿಡಿದಿದ್ದನು ಮತ್ತು ವ್ಯಾಘ್ರಚರ್ಮವನ್ನು ಧರಿಸಿದ್ದನು. ಹರನು ಗರುಡಸ್ಥನಾಗಿದ್ದನು ಮತ್ತು ಹರಿಯು ವೃಷಭಧ್ವಜನಾಗಿದ್ದನು.
19179028a ವಿಸ್ಮಯೋ ಮೇ ಮಹಾನ್ಬ್ರಹ್ಮಂದೃಷ್ಟ್ವಾ ತತ್ಪರಮಾದ್ಭುತಮ್ ।
19179028c ಏತದಾಚಕ್ಷ್ವ ಭಗವನ್ಯಾಥಾತಥ್ಯೇನ ಸುವ್ರತ ।।
ಬ್ರಹ್ಮನ್! ಆ ಪರಮ ಅದ್ಭುತವನ್ನು ಕಂಡು ನನಗೆ ಮಹಾ ವಿಸ್ಮಯವಾಯಿತು. ಭಗವನ್! ಸುವ್ರತ! ನೀನು ಈ ರಹಸ್ಯವನ್ನು ಯಥಾರ್ಥರೂಪದಲ್ಲಿ ವಿವೇಚಿಸು!”
19179029 ಮಾರ್ಕಂಡೇಯ ಉವಾಚ । 19179029a ಶಿವಾಯ ವಿಷ್ಣುರೂಪಾಯ ವಿಷ್ಣವೇ ಶಿವರೂಪಿಣೇ ।
19179029c ಯಥಾಂತರಂ ನ ಪಶ್ಯಾಮಿ ತೇನ ತೌ ದಿಶತಃ ಶಿವಮ್ ।।
ಮಾರ್ಕಂಡೇಯನು ಹೇಳಿದನು: “ವಿಷ್ಣುರೂಪನಾದ ಶಿವನಿಗೆ ಮತ್ತು ಶಿವರೂಪಿಯಾದ ವಿಷ್ಣುವಿಗೆ ನಮಸ್ಕಾರ. ಇವರಿಬ್ಬರಲ್ಲಿ ಅಂತರವನ್ನು ನಾನು ಕಾಣುತ್ತಿಲ್ಲ. ಇಬ್ಬರೂ ಸಂತುಷ್ಟರಾಗಿ ನನಗೆ ಮಂಗಳವನ್ನುಂಟುಮಾಡಲಿ.
19179030a ಅನಾದಿಮಧ್ಯನಿಧನಮೇತದಕ್ಷರಮವ್ಯಯಮ್ ।
19179030c ತದೇವ ತೇ ಪ್ರವಕ್ಷ್ಯಾಮಿ ರೂಪಂ ಹರಿಹರಾತ್ಮಕಮ್ ।।
ಆದಿ-ಮಧ್ಯ-ಅಂತ್ಯ ರಹಿತ ಅವಿನಾಶೀ ಅಕ್ಷರಬ್ರಹ್ಮವೇ ಆಗಿರುವ ಹರಿಹರಾತ್ಮಕ ರೂಪವನ್ನು ವರ್ಣಿಸುತ್ತೇನೆ.
19179031a ಯೋ ವಿಷ್ಣುಃ ಸ ತು ವೈ ರುದ್ರೋ ಯೋ ರುದ್ರಃ ಸ ಪಿತಾಮಹಃ ।
19179031c ಏಕಾ ಮೂರ್ತಿಸ್ತ್ರಯೋ ದೇವಾ ರುದ್ರವಿಷ್ಣುಪಿತಾಮಹಾಃ ।।
ಯಾರು ವಿಷ್ಣುವೋ ಅವನೇ ರುದ್ರನು ಮತ್ತು ಯಾರು ರುದ್ರನೋ ಅವನೇ ಪಿತಾಮಹ ಬ್ರಹ್ಮನು. ರುದ್ರ-ವಿಷ್ಣು-ಪಿತಾಮಹ ಈ ಮೂರು ದೇವತೆಗಳ ಮೂರ್ತಿಗಳೂ ಒಂದೇ.
19179032a ವರದಾ ಲೋಕಕರ್ತಾರೋ ಲೋಕನಾಥಾಃ ಸ್ವಯಂಭುವಃ ।
19179032c ಅರ್ಧನಾರೀಶ್ವರಾಸ್ತೇ ತು ವ್ರತಂ ತೀವ್ರಂ ಸಮಾಸ್ಥಿತಾಃ ।।
ಈ ಮೂವರೂ ವರಗಳನ್ನೀಯುವವರು, ಲೋಕಕರ್ತಾರರು, ಲೋಕನಾಥರು, ಸ್ವಯಂಭುಗಳು, ಅರ್ಧನಾರೀಶ್ವರರು ಮತ್ತು ತೀವ್ರವ್ರತಗಳನ್ನು ಕೈಗೊಂಡಿರುವವರು.
19179033a ಯಥಾ ಜಲೇ ಜಲಂ ಕ್ಷಿಪ್ತಂ ಜಲಮೇವ ತು ತದ್ಭವೇತ್ ।
19179033c ರುದ್ರಂ ವಿಷ್ಣುಃ ಪ್ರವಿಷ್ಟಸ್ತು ತಥಾ ರುದ್ರಮಯೋ ಭವೇತ್ ।।
ನೀರಿನಲ್ಲಿ ಬಿದ್ದ ನೀರು ಹೇಗೆ ನೀರೇ ಆಗುತ್ತದೆಯೋ ಹಾಗೆ ರುದ್ರನನ್ನು ಪ್ರವೇಶಿಸಿದ ವಿಷ್ಣುವು ರುದ್ರಮಯನೇ ಆಗುತ್ತಾನೆ.
19179034a ಅಗ್ನಿಮಗ್ನಿಃ ಪ್ರವಿಷ್ಟಸ್ತು ಅಗ್ನಿರೇವ ಯಥಾ ಭವೇತ್ ।
19179034c ತಥಾ ವಿಷ್ಣುಂ ಪ್ರವಿಷ್ಟಸ್ತು ರುದ್ರೋ ವಿಷ್ಣುಮಯೋ ಭವೇತ್ ।।
ಅಗ್ನಿಯನ್ನು ಪ್ರವೇಶಿಸಿದ ಅಗ್ನಿಯು ಅಗ್ನಿಯೇ ಆಗುವಂತೆ ವಿಷ್ಣುವನ್ನು ಪ್ರವೇಶಿಸಿದ ರುದ್ರನು ವಿಷ್ಣುಮಯನೇ ಆಗುತ್ತಾನೆ.
19179035a ರುದ್ರಮಗ್ನಿಮಯಂ ವಿದ್ಯಾದ್ವಿಷ್ಣುಃ ಸೋಮಾತ್ಮಕಃ ಸ್ಮೃತಃ ।
19179035c ಅಗ್ನೀಷೋಮಾತ್ಮಕಂ ಚೈವ ಜಗತ್ಸ್ಥಾವರಜಂಗಮಮ್ ।।
ರುದ್ರನು ಅಗ್ನಿಮಯನೆಂದು ತಿಳಿಯಬೇಕು ಮತ್ತು ವಿಷ್ಣುವು ಸೋಮಾತ್ಮಕನೆಂದು ಹೇಳಿದ್ದಾರೆ. ಆದುದರಿಂದ ಈ ಸ್ಥಾವರಜಂಗಮಗಳ ಜಗತ್ತನ್ನು ಅಗ್ನೀಷೋಮಾತ್ಮಕವೆನ್ನುತ್ತಾರೆ.
19179036a ಕರ್ತಾರೌ ಚಾಪಹರ್ತಾರೌ ಸ್ಥಾವರಸ್ಯ ಚರಸ್ಯ ತು ।
19179036c ಜಗತಃ ಶುಭಕರ್ತಾರೌ ಪ್ರಭವಿಷ್ಣೂ ಮಹೇಶ್ವರೌ ।।
ವಿಷ್ಣು-ಮಹೇಶ್ವರರು ಈ ಸ್ಥಾವರ-ಜಂಗಮಜಗತ್ತಿನ ಕರ್ತಾರರು, ಸಂಹಾರಕರು, ಶುಭಕಾರಕರು ಮತ್ತು ಪ್ರಭುಗಳು.
19179037a ಕರ್ತೃಕಾರಣಕರ್ತಾರೌ ಕರ್ತೃಕಾರಣಕಾರಕೌ ।
19179037c ಭೂತಭವ್ಯಭವೌ ದೇವೌ ನಾರಾಯಣಮಹೇಶ್ವರೌ ।।
ನಾರಾಯಣ-ಮಹೇಶ್ವರ ದೇವರಿಬ್ಬರೂ ಕರ್ತರು, ಕಾರಣಕರ್ತರು, ಕರ್ತೃಕಾರಣಕಾರಕರು, ಮತ್ತು ಅವರೇ ಭೂತ-ಭವ್ಯ-ಭವಿಷ್ಯತ್ತುಗಳು.
19179038a ಜಗತಃ ಪಾಲಕಾವೇತಾವೇತೌ ಸೃಷ್ಟಿಕರೌ ಸ್ಮೃತೌ ।
19179038c ಏತೇ ಚೈವ ಪ್ರವರ್ಷಂತಿ ಭಾಂತಿ ವಾಂತಿ ಸೃಜಂತಿ ಚ ।
19179038e ಏತತ್ಪರತರಂ ಗುಹ್ಯಂ ಕಥಿತಂ ತೇ ಪಿತಾಮಹ ।।
ಅವರೇ ಜಗತ್ತಿನ ಪಾಲಕರು ಮತ್ತು ಸೃಷ್ಟಿಕರ್ತರು ಎಂದು ಹೇಳಿದ್ದಾರೆ. ಇವರೇ ಮೋಡವಾಗಿ ಮಳೆಸುರಿಯುತ್ತಾರೆ, ಸೂರ್ಯಾದಿಗಳಾಗಿ ಪ್ರಕಾಶಿಸುತ್ತಾರೆ, ವಾಯುವಾಗಿ ಬೀಸುತ್ತಾರೆ ಮತ್ತು ಬ್ರಹ್ಮನಾಗಿ ಸೃಷ್ಟಿಸುತ್ತಾರೆ. ಪಿತಾಮಹ! ಈ ಪರಾತ್ಪರ ರಹಸ್ಯವನ್ನು ನಿನಗೆ ಹೇಳಿದ್ದೇನೆ.
19179039a ಯಶ್ಚೈನಂ ಪಠತೇ ನಿತ್ಯಂ ಯಶ್ಚೈನಂ ಶೃಣುಯಾನ್ನರಃ ।
19179039c ಪ್ರಾಪ್ನೋತಿ ಪರಮಂ ಸ್ಥಾನಂ ವಿಷ್ಣುರುದ್ರಪ್ರಸಾದಜಮ್ ।।
ಯಾವ ನರರು ಇದನ್ನು ನಿತ್ಯವೂ ಪಠಿಸುತ್ತಾರೋ ಮತ್ತು ಯಾರು ಕೇಳುತ್ತಾರೋ ಅವರು ವಿಷ್ಣು-ರುದ್ರರ ಕೃಪೆಯಿಂದ ಪರಮ ಸ್ಥಾನವನ್ನು ಹೊಂದುತ್ತಾರೆ.
19179040a ದೇವೌ ಹರಿಹರೌ ಸ್ತೋಷ್ಯೇ ಬ್ರಹ್ಮನಾ ಸಹ ಸಂಗತೌ ।
19179040c ಏತೌ ಚ ಪರಮೌ ದೇವೌ ಜಗತಃ ಪ್ರಭವಾಪ್ಯಯೌ ।।
ಬ್ರಹ್ಮನ ಜೊತೆಗಿರುವ ಹರಿಹರದೇವರಿಬ್ಬರನ್ನೂ ಸ್ತುತಿಸುತ್ತೇನೆ. ಇವರಿಬ್ಬರು ಪರಮ ದೇವತೆಗಳೂ ಜಗತ್ತಿನ ಸೃಷ್ಟಿ ಮತ್ತು ಸಂಹಾರಕರು.
19179041a ರುದ್ರಸ್ಯ ಪರಮೋ ವಿಷ್ಣುರ್ವಿಷ್ಣೋಶ್ಚ ಪರಮಃ ಶಿವಃ ।
19179041c ಏಕ ಏವ ದ್ವಿಧಾ ಭೂತೋ ಲೋಕೇ ಚರತಿ ನಿತ್ಯಶಃ ।।
ರುದ್ರನ ಪರಮದೇವನು ವಿಷ್ಣುವು ಮತ್ತು ವಿಷ್ಣುವಿನ ಪರಮ ದೇವನು ಶಿವನು. ಒಬ್ಬನೇ ಈ ಇಬ್ಬರಾಗಿ ನಿತ್ಯವೂ ಈ ಭೂತಲೋಕಗಳಲ್ಲಿ ಸಂಚರಿಸುತ್ತಾನೆ.
19179042a ನ ವಿನಾ ಶಂಕರಂ ವಿಷ್ಣುರ್ನ ವಿನಾ ಕೇಶವಂ ಶಿವಃ ।
19179042c ತಸ್ಮಾದೇಕತ್ವಮಾಯಾತೌ ರುದ್ರೋಪೇಂದ್ರೌ ತು ತೌ ಪುರಾ ।
19179042e ನಮೋ ರುದ್ರಾಯ ಕೃಷ್ಣಾಯ ನಮಃ ಸಂಹತಚಾರಿಣೇ ।।
ಶಂಕರನಿಲ್ಲದೇ ವಿಷ್ಣುವಿಲ್ಲ. ಕೇಶವನಿಲ್ಲದೇ ಶಿವನಿಲ್ಲ. ಆದುದರಿಂದ ಹಿಂದಿನಿಂದಲೂ ರುದ್ರ-ಉಪೇಂದ್ರವಿಷ್ಣು ಇವರು ಏಕತ್ವವನ್ನು ಪಡೆದುಕೊಂಡಿದ್ದಾರೆ. ಸಂಯುಕ್ತರಾಗಿ ಸಂಚರಿಸುವ ರುದ್ರ-ಕೃಷ್ಣರಿಗೆ ನಮಸ್ಕಾರ.
19179043a ನಮಃ ಷಡರ್ಧನೇತ್ರಾಯ ಸದ್ವಿನೇತ್ರಾಯ ವೈ ನಮಃ ।
19179043c ನಮಃ ಪಿಂಗಲನೇತ್ರಾಯ ಪದ್ಮನೇತ್ರಾಯ ವೈ ನಮಃ ।।
ತ್ರಿನೇತ್ರ ಶಿವನಿಗೆ ನಮಸ್ಕಾರ. ದ್ವಿನೇತ್ರ ವಿಷ್ಣುವಿಗೆ ನಮಸ್ಕಾರ. ಪಿಂಗಲನೇತ್ರ ಶಿವನಿಗೆ ನಮಸ್ಕಾರ. ಪದ್ಮನೇತ್ರ ವಿಷ್ಣುವಿಗೆ ನಮಸ್ಕಾರ.
19179044a ನಮಃ ಕುಮಾರಗುರವೇ ಪ್ರದ್ಯುಮ್ನಗುರವೇ ನಮಃ ।
19179044c ನಮೋ ಧರಣೀಧರಾಯ ಗಂಗಾಧರಾಯ ವೈ ನಮಃ ।।
ಕುಮಾರಗುರು ಶಿವನಿಗೆ ನಮಸ್ಕಾರ. ಪ್ರದ್ಯುಮ್ನಗುರು ವಿಷ್ಣುವಿಗೆ ನಮಸ್ಕಾರ. ಧರಣೀಧರ ವಿಷ್ಣುವಿಗೆ ನಮಸ್ಕಾರ. ಗಂಗಾಧರ ಶಿವನಿಗೆ ನಮಸ್ಕಾರ.
19179045a ನಮೋ ಮಯೂರಪಿಚ್ಛಾಯ ನಮಃ ಕೇಯೂರಧಾರಿಣೇ ।
19179045c ನಮಃ ಕಪಾಲಮಾಲಾಯ ವನಮಾಲಾಯ ವೈ ನಮಃ ।।
ನವಿಲುಗರಿಯನ್ನು ಧರಿಸಿರುವ ವಿಷ್ಣುವಿಗೆ ನಮಸ್ಕಾರ. ಕೇಯೂರಧಾರೀ ಶಿವನಿಗೆ ನಮಸ್ಕಾರ. ಕಪಾಲಮಾಲೀ ಶಿವನಿಗೆ ನಮಸ್ಕಾರ. ವನಮಾಲೀ ವಿಷ್ಣುವಿಗೆ ನಮಸ್ಕಾರ.
19179046a ನಮಸ್ತ್ರಿಶೂಲಹಸ್ತಾಯ ಚಕ್ರಹಸ್ತಾಯ ವೈ ನಮಃ ।
19179046c ನಮಃ ಕನಕದಂಡಾಯ ನಮಸ್ತೇ ಬ್ರಹ್ಮದಂಡಿನೇ ।।
ತ್ರಿಶೂಲಹಸ್ತ ಶಿವನಿಗೆ ನಮಸ್ಕಾರ. ಚಕ್ರಹಸ್ತ ವಿಷ್ಣುವಿಗೆ ನಮಸ್ಕಾರ. ಕನಕದಂಡಧಾರೀ ವಿಷ್ಣುವಿಗೆ ನಮಸ್ಕಾರ. ಬ್ರಹ್ಮದಂಡಧಾರೀ ಶಿವನಿಗೆ ನಮಸ್ಕಾರ.
19179047a ನಮಶ್ಚರ್ಮನಿವಾಸಾಯ ನಮಸ್ತೇ ಪೀತವಾಸಸೇ ।
19179047c ನಮೋಽಸ್ತು ಲಕ್ಷ್ಮೀಪತಯೇ ಉಮಾಯಾಃ ಪತಯೇ ನಮಃ ।।
ವ್ಯಾಘ್ರಚರ್ಮಾಂಬರಧರ ಶಿವನಿಗೆ ನಮಸ್ಕಾರ. ಪೀತಾಂಬರಧಾರಿ ವಿಷ್ಣುವಿಗೆ ನಮಸ್ಕಾರ. ಲಕ್ಷ್ಮೀಪತಿ ವಿಷ್ಣುವಿಗೆ ನಮಸ್ಕಾರ. ಉಮಾಪತಿ ಶಿವನಿಗೆ ನಮಸ್ಕಾರ.
19179048a ನಮಃ ಖಟ್ವಾಂಗಧಾರಾಯ ನಮೋ ಮುಸಲಧಾರಿಣೇ ।
19179048c ನಮೋ ಭಸ್ಮಾಂಗರಾಗಾಯ ನಮಃ ಕೃಷ್ಣಾಂಗಧಾರಿಣೇ ।।
ಖಟ್ವಾಂಗಧಾರೀ ಶಿವನಿಗೆ ನಮಸ್ಕಾರ. ಮುಸಲಧಾರೀ ವಿಷ್ಣುವಿಗೆ ನಮಸ್ಕಾರ. ಭಸ್ಮಾಂಗರಾಗ ಶಿವನಿಗೆ ನಮಸ್ಕಾರ. ಕೃಷ್ಣಾಂಗಧಾರೀ ವಿಷ್ಣುವಿಗೆ ನಮಸ್ಕಾರ.
19179049a ನಮಃ ಶ್ಮಶಾನವಾಸಾಯ ನಮಃ ಸಾಗರವಾಸಿನೇ ।
19179049c ನಮೋ ವೃಷಭವಾಹಾಯ ನಮೋ ಗರುಡವಾಹಿನೇ ।।
ಶ್ಮಶಾನವಾಸೀ ಶಿವನಿಗೆ ನಮಸ್ಕಾರ. ಸಾಗರವಾಸೀ ವಿಷ್ಣುವಿಗೆ ನಮಸ್ಕಾರ. ವೃಷಭವಾಹನ ಶಿವನಿಗೆ ನಮಸ್ಕಾರ. ಗರುಡವಾಹನ ವಿಷ್ಣುವಿಗೆ ನಮಸ್ಕಾರ.
19179050a ನಮಸ್ತ್ವನೇಕರೂಪಾಯ ಬಹುರೂಪಾಯ ವೈ ನಮಃ ।
19179050c ನಮಃ ಪ್ರಲಯಕರ್ತ್ರೇ ಚ ನಮಸ್ತ್ರೈಲೋಕ್ಯಧಾರಿಣೇ ।।
ಅನೇಕರೂಪಧಾರೀ ವಿಷ್ಣುವಿಗೆ ನಮಸ್ಕಾರ. ಬಹುರೂಪೀ ಶಿವನಿಗೆ ನಮಸ್ಕಾರ. ಪ್ರಲಯಕರ್ತ ಶಿವನಿಗೆ ನಮಸ್ಕಾರ. ತ್ರಿಲೋಕಪಾಲಕ ವಿಷ್ಣುವಿಗೆ ನಮಸ್ಕಾರ.
19179051a ನಮೋಽಸ್ತು ಸೌಮ್ಯರೂಪಾಯ ನಮೋ ಭೈರವರೂಪಿಣೇ ।
19179051c ವಿರೂಪಾಕ್ಷಾಯ ದೇವಾಯ ನಮಃ ಸೌಮ್ಯೇಕ್ಷಣಾಯ ಚ ।।
ಸೌಮ್ಯರೂಪೀ ವಿಷ್ಣುವಿಗೆ ನಮಸ್ಕಾರ. ಭೈರವರೂಪೀ ಶಿವನಿಗೆ ನಮಸ್ಕಾರ. ದೇವ ವಿರೂಪಾಕ್ಷನಿಗೆ ನಮಸ್ಕಾರ. ಸೌಮ್ಯೇಕ್ಷಣ ವಿಷ್ಣುವಿಗೆ ನಮಸ್ಕಾರ.
19179052a ದಕ್ಷಯಜ್ಞವಿನಾಶಾಯ ಬಲೇರ್ನಿಯಮನಾಯ ಚ ।
19179052c ನಮಃ ಪರ್ವತವಾಸಾಯ ನಮಃ ಸಾಗರವಾಸಿನೇ ।।
ದಕ್ಷಯಜ್ಞವಿನಾಶಕ ಶಿವನಿಗೆ ನಮಸ್ಕಾರ. ಬಲಿಯನ್ನು ನಿಯಂತ್ರಿಸಿದ ವಿಷ್ಣುವಿಗೆ ನಮಸ್ಕಾರ. ಪರ್ವತವಾಸೀ ಶಿವನಿಗೆ ನಮಸ್ಕಾರ. ಸಾಗರವಾಸೀ ವಿಷ್ಣುವಿಗೆ ನಮಸ್ಕಾರ.
19179053a ನಮಃ ಸುರರಿಪುಘ್ನಾಯ ತ್ರಿಪುರಘ್ನಾಯ ವೈ ನಮಃ ।
19179053c ನಮೋಽಸ್ತು ನರಕಘ್ನಾಯ ನಮಃ ಕಾಮಾಂಗನಾಶಿನೇ ।।
ಸುರರಿಪುಘ್ನ ವಿಷ್ಣುವಿಗೆ ನಮಸ್ಕಾರ. ತ್ರಿಪುರಘ್ನ ಶಿವನಿಗೆ ನಮಸ್ಕಾರ. ನರಕಘ್ನ ವಿಷ್ಣುವಿಗೆ ನಮಸ್ಕಾರ. ಕಾಮಾಂಗನಾಶೀ ಶಿವನಿಗೆ ನಮಸ್ಕಾರ.
19179054a ನಮಸ್ತ್ವಂಧಕನಾಶಾಯ ನಮಃ ಕೈಟಭನಾಶಿನೇ ।
19179054c ನಮಃ ಸಹಸ್ರಹಸ್ತಾಯ ನಮೋಽಸಂಖ್ಯೇಯಬಾಹವೇ ।।
ಅಂಧಕನಾಶಿನೀ ಶಿವನಿಗೆ ನಮಸ್ಕಾರ. ಕೈಟಭನಾಶಿನೀ ವಿಷ್ಣುವಿಗೆ ನಮಸ್ಕಾರ. ಸಹಸ್ರಹಸ್ತ ವಿಷ್ಣುವಿಗೆ ನಮಸ್ಕಾರ. ಅಸಂಖ್ಯೇಯಬಾಹು ಶಿವನಿಗೆ ನಮಸ್ಕಾರ.
19179055a ನಮಃ ಸಹಸ್ರಶೀರ್ಷಾಯ ಬಹುಶೀರ್ಷಾಯ ವೈ ನಮಃ ।
19179055c ದಾಮೋದರಾಯ ದೇವಾಯ ಮುಂಜಮೇಖಲಿನೇ ನಮಃ ।।
ಸಹಸ್ರಶೀರ್ಷ ವಿಷ್ಣುವಿಗೆ ನಮಸ್ಕಾರ. ಬಹುಶೀರ್ಷ ಶಿವನಿಗೆ ನಮಸ್ಕಾರ. ದಾಮೋದರ ದೇವನಿಗೆ ನಮಸ್ಕಾರ. ಮುಂಜಮೇಖಲಿನೀ ಶಿವನಿಗೆ ನಮಸ್ಕಾರ.
19179056a ನಮಸ್ತೇ ಭಗವನ್ವಿಷ್ಣೋ ನಮಸ್ತೇ ಭಗವಂಶಿವ ।
19179056c ನಮಸ್ತೇ ಭಗವಂದೇವ ನಮಸ್ತೇ ದೇವಪೂಜಿತ ।।
ಭಗವಾನ್ ವಿಷ್ಣೋ! ನಿನಗೆ ನಮಸ್ಕಾರ. ಭಗವಾನ್ ಶಿವ! ನಿನಗೆ ನಮಸ್ಕಾರ. ಭಗವನ್ ದೇವ! ನಿನಗೆ ನಮಸ್ಕಾರ. ದೇವಪೂಜಿತ! ನಿನಗೆ ನಮಸ್ಕಾರ.
19179057a ನಮಸ್ತೇ ಸಾಮಭಿರ್ಗೀತ ನಮಸ್ತೇ ಯಜುಭಿಃ ಸಹ ।
19179057c ನಮಸ್ತೇ ಸುರಶತ್ರುಘ್ನ ನಮಸ್ತೇ ಸುರಪೂಜಿತ ।।
ಸಾಮಗೀತಗಳಿಂದ ಸ್ತುತಿಸಲ್ಪಡುವವನೇ! ನಿನಗೆ ನಮಸ್ಕಾರ! ಯಜುಸ್ಸುಗಳಿಂದ ಸ್ತುತಿಸಲ್ಪಡುವವನೇ! ನಿನಗೆ ನಮಸ್ಕಾರ! ಸುರಶತ್ರುಘ್ನ! ನಿನಗೆ ನಮಸ್ಕಾರ! ಸುರಪೂಜಿತ! ನಿನಗೆ ನಮಸ್ಕಾರ!
19179058a ನಮಸ್ತೇ ಕರ್ಮಿಣಾಂ ಕರ್ಮ ನಮೋಽಮಿತಪರಾಕ್ರಮ ।
19179058c ಹೃಷೀಕೇಶ ನಮಸ್ತೇಽಸ್ತು ಸ್ವರ್ಣಕೇಶ ನಮೋಽಸ್ತು ತೇ ।।
ಕರ್ಮಿಗಳ ಕರ್ಮನೇ! ನಿನಗೆ ನಮಸ್ಕಾರ! ಅಮಿತಪರಾಕ್ರಮಿ! ನಮಸ್ಕಾರ! ಹೃಷೀಕೇಶ! ನಿನಗೆ ನಮಸ್ಕಾರ! ಸ್ವರ್ಣಕೇಶ! ನಿನಗೆ ನಮಸ್ಕಾರ!
19179059a ಇಮಂ ಸ್ತವಂ ಯೋ ರುದ್ರಸ್ಯ ವಿಷ್ಣೋಶ್ಚೈವ ಮಹಾತ್ಮನಃ ।
19179059c ಸಮೇತ್ಯ ಋಷಿಭಿಃ ಸರ್ವೈಃ ಸ್ತುತೌ ಸ್ತೌತಿ ಮಹರ್ಷಿಭಿಃ ।।
19179060a ವ್ಯಾಸೇನ ವೇದವಿದುಷಾ ನಾರದೇನ ಚ ಧೀಮತಾ ।
19179060c ಭಾರದ್ವಾಜೇನ ಗರ್ಗೇಣ ವಿಶ್ವಾಮಿತ್ರೇಣ ವೈ ತಥಾ ।।
19179061a ಅಗಸ್ತ್ಯೇನ ಪುಲಸ್ತ್ಯೇನ ಧೌಮ್ಯೇನ ಚ ಮಹಾತ್ಮನಾ ।
19179061c ಯ ಇದಂ ಪಠತೇ ನಿತ್ಯಂ ಸ್ತೋತ್ರಂ ಹರಿಹರಾತ್ಮಕಮ್ ।।
19179062a ಅರೋಗಾ ಬಲವಾಂಶ್ಚೈವ ಜಾಯತೇ ನಾತ್ರ ಸಂಶಯಃ ।
19179062c ಶ್ರಿಯಂ ಚ ಲಭತೇ ನಿತ್ಯಂ ನ ಚ ಸ್ವರ್ಗಾನ್ನಿವರ್ತತೇ ।।
ವೇದವಿದುಷಿ ವ್ಯಾಸ, ಧೀಮಂತ ನಾರದ, ಭಾರದ್ವಾಜ, ಗರ್ಗ, ವಿಶ್ವಾಮಿತ್ರ, ಅಗಸ್ತ್ಯ, ಪುಲಸ್ತ್ಯ, ಮಹಾತ್ಮಾ ಧೌಮ್ಯ ಮೊದಲಾದ ಸಮಸ್ತ ಋಷಿ-ಮಹರ್ಷಿಗಳು ಒಂದಾಗಿ ಯಾರ ಸ್ತುತಿಯನ್ನು ಮಾಡಿದ್ದರೋ ಆ ಭಗವಾನ್ ರುದ್ರ ಮತ್ತು ಮಹಾತ್ಮ ವಿಷ್ಣುವಿನ ಈ ಸ್ತೋತ್ರವನ್ನು ಪಠಿಸಿ ಸ್ತುತಿಸುವವರು ಮತ್ತು ಪ್ರತಿದಿನ ಈ ಹರಿಹರಾತ್ಮಕ ಸ್ತೋತ್ರವನ್ನು ಪಠಿಸುವವರು ಈ ಲೋಕದಲ್ಲಿ ನಿರೋಗಿಗಳೂ ಬಲವಂತರೂ ಆಗುತ್ತಾರೆ ಎನ್ನುವುದರಲ್ಲಿ ಸಂಶಯವಿಲ್ಲ. ಅವರು ಸದಾ ಲಕ್ಷ್ಮಿವಂತರಾಗಿರುತ್ತಾರೆ ಮತ್ತು ಸ್ವರ್ಗದಿಂದ ಹಿಂದಿರುಗುವುದಿಲ್ಲ.
19179063a ಅಪುತ್ರೋ ಲಭತೇ ಪುತ್ರಮ್ ಕನ್ಯಾ ವಿಂದತಿ ಸತ್ಪತಿಮ್ ।
19179063c ಗುರ್ವಿಣೀ ಶೃಣುತೇ ಯಾ ತು ವರಂ ಪುತ್ರಂ ಪ್ರಸೂಯತೇ ।।
ಪುತ್ರಹೀನನಿಗೆ ಪುತ್ರನಾಗುತ್ತಾನೆ. ಕನ್ಯೆಯು ಸತ್ಪತಿಯನ್ನು ಪಡೆಯುತ್ತಾಳೆ. ಗರ್ಭಿಣಿಯು ಇದನ್ನು ಕೇಳಿದರೆ ಅವಳಿಗೆ ಶ್ರೇಷ್ಠ ಪುತ್ರನು ಹುಟ್ಟುತ್ತಾನೆ.
19179064a ರಾಕ್ಷಸಾಶ್ಚ ಪಿಶಾಚಾಶ್ಚ ವಿಘ್ನಾನಿ ಚ ವಿನಾಯಕಃ ।
19179064c ಭಯಂ ತತ್ರ ನ ಕುರ್ವಂತಿ ಯತ್ರಾಯಂ ಪಠ್ಯತೇ ಸ್ತವಃ ।।
ಎಲ್ಲಿ ಈ ಸ್ತವವನ್ನು ಪಠಿಸುತ್ತಾರೋ ಅಲ್ಲಿ ವಿನಾಯಕನು ರಾಕ್ಷಸರ, ಪಿಶಾಚಿಗಳ ಮತ್ತು ವಿಘ್ನಗಳ ಭಯವನ್ನುಂಟುಮಾಡುವುದಿಲ್ಲ.””
ಸಮಾಪ್ತಿ
ಇತಿ ಶ್ರೀಮಹಾಭಾರತೇ ಖಿಲೇಷು ಹರಿವಂಶೇ ವಿಷ್ಣುಪರ್ವಣಿ ಹರಿಹರಾತ್ಮಕಸ್ತವೋ ನಾಮ ಏಕೋನಶೀತ್ಯಧಿಕಶತತಮೋಽಧ್ಯಾಯಃ ।।