ಪ್ರವೇಶ
।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।
ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ
ಶ್ರೀ ಮಹಾಭಾರತ
ಖಿಲಭಾಗೇ ಹರಿವಂಶಃ
ವಿಷ್ಣು ಪರ್ವ
ಅಧ್ಯಾಯ 178
ಸಾರ
ಬಾಣಾಸುರನ ಸೇನೆಯ ಪಲಾಯನ (1-14). ಭಗವಾನ್ ಶಂಕರನು ತನ್ನ ಗಣಗಳೊಂದಿಗೆ ಯುದ್ಧಕ್ಕೆ ಆಗಮಿಸಿದುದು (15-25). ಕೃಷ್ಣ ಮತ್ತು ರುದ್ರರ ಯುದ್ಧ (26-48) ಮತ್ತು ಬಾಣಾಸುರನು ರಣಭೂಮಿಯನ್ನು ಪ್ರವೇಶಿಸಿದುದು (49-56).
19178001 ವೈಶಂಪಾಯನ ಉವಾಚ ।
19178001a ತತಸ್ತೇ ತ್ವರಿತಾಃ ಸರ್ವೇ ತ್ರಯಸ್ತ್ರಯ ಇವಾಗ್ನಯಃ ।
19178001c ವೈನತೇಯಮಥಾರುಹ್ಯ ಯುಧ್ಯಮಾನಾ ರಣೇ ಸ್ಥಿತಾಃ ।।
ವೈಶಂಪಾಯನನು ಹೇಳಿದನು: “ಆಗ ಆ ಎಲ್ಲ ಮೂವರೂ ಮೂರು ಅಗ್ನಿಗಳಂತೆ ತ್ವರೆಮಾಡಿ ವೈನತೇಯನನ್ನು ಏರಿ ಯುದ್ಧಮಾಡುತ್ತಾ ರಣರಂಗದಲ್ಲಿ ಸ್ಥಿತರಾದರು.
19178002a ತತಃ ಸರ್ವಾಣ್ಯನೀಕಾನಿ ಬಾಣವರ್ಷೈರವಾಕಿರನ್ ।
19178002c ಅರ್ದಯನ್ವೈನತೇಯಸ್ಥಾ ನದಂತೋಽತಿಬಲಾದ್ರಣೇ ।।
ವೈನತೇಯನನ್ನೇರಿದ್ದ ಅವರು ರಣದಲ್ಲಿ ಗರ್ಜಿಸುತ್ತಾ ಬಲದಿಂದ ಬಾಣವರ್ಷಗಳನ್ನು ಸುರಿಸಿ ಆ ಸೇನೆಗಳೆಲ್ಲವನ್ನೂ ಪೀಡಿಸಿದರು.
19178003a ಚಕ್ರಲಾಂಗಲಪಾತೈಶ್ಚ ಬಾಣವರ್ಷೈಶ್ಚ ಪೀಡಿತಮ್ ।
19178003c ಸಂಚುಕೋಪ ಮಹಾನೀಕಂ ದಾನವಾನಾಂ ದುರಾಸದಮ್ ।।
ಚಕ್ರ ಮತ್ತು ಹಲಾಯುಧದ ಪ್ರಹಾರಗಳಿಂದ ಮತ್ತು ಬಾಣವರ್ಷಗಳಿಂದ ಪೀಡಿತ ದಾನವರ ಆ ದುರಾಸದ ಮಹಾಸೇನೆಯು ಅತ್ಯಂತ ಕುಪಿತಗೊಂಡಿತು.
19178004a ಕಕ್ಷೇಽಗ್ನಿರಿವ ಸಂವೃದ್ಧಃ ಶುಷ್ಕೇಂಧನಸಮೀರಿತಃ ।
19178004c ಕೃಷ್ಣಬಾಣಾಗ್ನಿರುದ್ಭೂತೋ ವಿವೃದ್ಧಿಂ ಪರಮಾಂ ಗತಃ ।।
ಒಣಗಿದ ಹುಲ್ಲಿನ ಮೆದೆಗೆ ಬೆಂಕಿ ಹೊತ್ತಿಸಿ ಒಣಗಿದ ಕಟ್ಟಿಗೆಯಿಂದ ಬೆಂಕಿಯನ್ನು ಹೆಚ್ಚಿಸುವಂತೆ ಕೃಷ್ಣಬಾಣಗಳಿಂದ ಹುಟ್ಟಿದ ಅಗ್ನಿಯು ಬಹುಬೇಗ ಅಧಿಕವಾಗಿ ವೃದ್ಧಿಹೊಂದಿತು.
19178005a ದಾನವಾನಾಂ ಸಹಸ್ರಾಣಿ ತಸ್ಮಿನ್ಸಮರಮೂರ್ಧನಿ ।
19178005c ಯುಗಾಂತಾಗ್ನಿರಿವಾರ್ಚಿಷ್ಮಾಂದಹಮಾನೋ ವ್ಯರಾಜತ ।।
ಆ ಸಮರಮೂರ್ಧನಿಯಲ್ಲಿ ಅದು ಸಹಸ್ರಾರು ದಾನವರನ್ನು ದಹಿಸುತ್ತಾ ಯುಗಾಂತದ ಜ್ವಾಲಾಯುಕ್ತ ಅಗ್ನಿಯಂತೆ ವಿರಾಜಿಸಿತು.
19178006a ತಾಂ ದೀಪ್ಯಮಾನಾಂ1 ಮಹತೀಂ ನಾನಾಪ್ರಹರಣಾರ್ದಿತಾಮ್ ।
19178006c ಸೇನಾಂ ಬಾಣಃ ಸಮಾಸಾದ್ಯ ವಾರಯನ್ವಾಕ್ಯಮಬ್ರವೀತ್ ।।
ನಾನಾಪ್ರಹಾರಗಳಿಂದ ಉರಿದು ಪೀಡಿತಗೊಂಡು ಪಲಾಯನಗೈಯುತ್ತಿದ್ದ ಆ ಮಹಾ ಸೇನೆಯ ಬಳಿಸಾರಿ ಬಾಣನು ಅವರನ್ನು ತಡೆಯುತ್ತಾ ಹೇಳಿದನು:
19178007a ಲಾಘವಂ ಸಮುಪಾಗಮ್ಯ ಕಿಮರ್ಥಂ ಭಯವಿಕ್ಲವಾಃ ।
19178007c ದೈತ್ಯವಂಶಸಮುತ್ಪನ್ನಾಃ ಪಲಾಯಧ್ವಂ ಮಹಾಹವಾತ್ ।।
“ದೈತ್ಯವಂಶದಲ್ಲಿ ಹುಟ್ಟಿಕೊಂಡೂ ಯಾವ ಕಾರಣಕ್ಕಾಗಿ ಹೇಡಿಗಳಂತೆ ಭಯವ್ಯಾಕುಲರಾಗಿ ಮಹಾಯುದ್ಧದಿಂದ ಪಲಾಯನಗೈಯುತ್ತಿದ್ದೀರಿ?
19178008a ಕವಚಾಸಿಗದಾಪ್ರಾಸಖಡ್ಗಚರ್ಮಪರಶ್ವಧಾನ್ ।
19178008c ಉತ್ಸೃಜ್ಯೋತ್ಸೃಜ್ಯ ಗಚ್ಛಂತಿ ಕಿಂ ಭವಂತೋಽಂತರಿಕ್ಷಗಾಃ ।।
ಕವಚ, ಖಡ್ಗ, ಗದೆ, ಪ್ರಾಸ, ಗುರಾಣಿ, ಪರಶಾಯುಧಗಳನ್ನು ಎಸೆ-ಎಸೆದು ಏಕೆ ಆಕಾಶಮಾರ್ಗದಲ್ಲಿ ಓಡಿಹೋಗುತ್ತಿದ್ದೀರಿ?
19178009a ಸ್ವಜಾತಿಂ ಚೈವ ಭಾವಂ ಚ ಹರಸಂಸರ್ಗಮೇವ ಚ ।
19178009c ಮಾನಯದ್ಭಿರ್ನ ಗಂತವ್ಯಮೇಷೋ ಹ್ಯಹಮವಸ್ಥಿತಃ ।।
ಸ್ವಜಾತಿಯನ್ನು, ವೀರಭಾವವನ್ನು ಮತ್ತು ಹರನೊಂದಿಗೆ ನಮಗಿರುವ ಸಂಬಂಧವನ್ನು ಗೌರವಿಸದೇ ನೀವು ಹೀಗೆ ಓಡಿಹೋಗಬಾರದು. ಇಗೋ! ನಾನು ರಣರಂಗದಲ್ಲಿಯೇ ನಿಂತಿದ್ದೇನೆ.”
19178010a ಏವಮುಚ್ಚರಿತಂ ವಾಕ್ಯಂ ಶೃಣ್ವಂತಸ್ತದಚಿಂತಯನ್ ।
19178010c ಅಪಾಕ್ರಾಮಂತ ತೇ ಸರ್ವೇ ದಾನವಾ ಭಯಮೋಹಿತಾಃ ।।
ಹೀಗೆ ಆಡಿದ ಮಾತುಗಳನ್ನು ಕೇಳಿಯೂ ಅದರ ಕುರಿತು ಯೋಚಿಸದೇ ಭಯಮೋಹಿತರಾದ ದಾನವರೆಲ್ಲರೂ ಓಡಿಹೋದರು.
19178011a ಪ್ರಮಾಥಗಣಶೇಷಂ ತು ತದನೀಕಮತಿಷ್ಠತ ।
19178011c ಭಗ್ನಾವಶೇಶಂ ಯುದ್ಧಾಯ ಪುನಶಚಕ್ರೇ ಮನಸ್ತದಾ ।।
ಆ ಸೇನೆಯಲ್ಲಿ ಆಗ ಕೇವಲ ಪ್ರಮಥಗಣಗಳು ಮಾತ್ರ ಉಳಿದಿದ್ದವು. ಅವುಗಳಿಂದಾಗಿಯೇ ಆ ಸೇನೆಯು ನಿಂತಿತ್ತು. ಭಗ್ನರಾಗದೇ ಉಳಿದಿದ್ದ ಸೇನೆಯು ಪುನಃ ಯುದ್ಧಕ್ಕೆ ಮನಸ್ಸುಮಾಡಿತು.
19178012a ಕುಂಭಾಂಡೋ ನಾಮ ಬಾಣಸ್ಯ ಸಖಾಮಾತ್ಯಶ್ಚ ವೀರ್ಯವಾನ್ ।
19178012c ಭಗ್ನಂ ಸ್ವಬಲಮಾಲೋಕ್ಯ ಇದಂ ವಚನಮಬ್ರವೀತ್ ।।
ಭಗ್ನವಾದ ತನ್ನ ಸೇನೆಯನ್ನು ನೋಡಿ ಕುಂಭಾಂಡ ಎಂಬ ಹೆಸರಿನ ಬಾಣನ ಸಖ ಅಮಾತ್ಯ ವೀರ್ಯವಾನನು ಇಂತೆಂದನು:
19178013a ಏಷ ಬಾಣಃ ಸ್ಥಿತೋ ಯುದ್ಧೇ ಶಂಕರೋಽಯಂ ಗುಹಸ್ತಥಾ ।
19178013c ಕಿಮರ್ಥಂ ಬಲಮುತ್ಸೃಜ್ಯ ಭವಂತೋ ಯಾಂತಿ ಮೋಹಿತಾಃ ।।
“ಇಗೋ ಯುದ್ಧದಲ್ಲಿ ಬಾಣ, ಈ ಶಂಕರ ಮತ್ತು ಗುಹರು ಇರುವಾಗ ನೀವು ಏಕೆ ಮೋಹಿತರಾಗಿ ಸೇನೆಯನ್ನು ಬಿಟ್ಟು ಓಡಿಹೋಗುತ್ತಿರುವಿರಿ?”
19178014a ಪ್ರಾಣಾಂಸ್ತ್ಯಕ್ತ್ವಾ ಪಲಾಯಂತೇ ಸರ್ವೇ ದಾನವಪುಂಗವಾಃ ।
19178014c ಏವಂ ಕುಂಭಾಂಡವಾಕ್ಯಂ ತೇ ಶೃಣ್ವಂತೋ ಭಯವಿಹ್ವಲಾಃ ।।
19178015a ಏಕಾಂತೇ2 ಭಯವಿತ್ರಸ್ತಾಃ ಸರ್ವೇ ಯಾಂತಿ ದಿಶೋ ದಶ ।
ಕುಂಭಾಂಡನ ಈ ಮಾತನ್ನು ಕೇಳಿಯೂ ಭಯವಿಹ್ವಲರಾದ ಸರ್ವ ದಾನವಪುಂಗವರೂ ಪ್ರಾಣಗಳನ್ನು ತೊರೆದು ಪಲಾಯನಗೈದರು. ಭಯದಿಂದ ನಡುಗಿದ ಅವರೆಲ್ಲರೂ ಹತ್ತೂ ದಿಕ್ಕುಗಳಲ್ಲಿ ಹೋಗಿ ಅಡಗಿಕೊಂಡರು.
19178015c ಭಗ್ನಂ ಬಲಂ ತತೋ ದೃಷ್ಟ್ವಾ ಕೃಷ್ಣೇನಾಮಿತತೇಜಸಾ ।
19178015e ಸಂರಕ್ತನಯನಃ ಸ್ಥಾಣುರ್ಯುದ್ಧಾಯ ಪರ್ಯವರ್ತತ ।।
ಆಗ ಅಮಿತತೇಜಸ್ವಿ ಕೃಷ್ಣನಿಂದ ಸೇನೆಯು ಭಗ್ನವಾದುದನ್ನು ನೋಡಿ ಕೋಪದಿಂದ ಕಣ್ಣುಗಳು ಕೆಂಪಾದ ಸ್ಥಾಣುವು ಯುದ್ಧಕ್ಕೆ ತೊಡಗಿದನು.
19178016a ಬಾಣಸಂರಕ್ಷಣಂ ಕರ್ತುಂ ರಥಮಾಸ್ಥಾಯ ಸುಪ್ರಭಮ್ ।
19178016c ದೇವಃ ಕುಮಾರಶ್ಚ ತಥಾರಥೇನಾಗ್ನಿಸಮೇನ ವೈ ।।
ಬಾಣನ ಸಂರಕ್ಷಣೆಯನ್ನು ಮಾಡಲು ಅವನು ಅತಿಪ್ರಭೆಯ ರಥವನ್ನೇರಿದ್ದನು. ಜೊತೆಗೆ ದೇವ ಕುಮಾರನೂ ಅಗ್ನಿಸಮಾನ ರಥದಲ್ಲಿದ್ದನು.
19178017a ನಂದೀಶ್ವರಸಮಾಯುಕ್ತಂ ರಥಮಾಸ್ಥಾಯ ವೀರ್ಯವಾನ್ ।
19178017c ಸಂದಷ್ಟೌಷ್ಠಪುಟೋ ರುದ್ರಃ ಪ್ರಧಾವತ ಯತೋ ಹರಿಃ ।।
ನಂದೀಶ್ವರನಿಂದ ಸಮಾಯುಕ್ತವಾಗಿದ್ದ ರಥದಲ್ಲಿ ಕುಳಿತು ವೀರ್ಯವಾನ್ ರುದ್ರನು ತನ್ನ ತುಟಿಗಳನ್ನು ಕಚ್ಚುತ್ತಾ ಹರಿಯಿದ್ದಲ್ಲಿಗೆ ಧಾವಿಸಿದನು.
19178018a ಪಿಬನ್ನಿವ ತದಾಕಾಶಂ ಸಿಂಹಯುಕ್ತೋ ಮಹಾಸ್ವನಃ ।
19178018c ರಥೋ ಭಾತಿ ಘನೋನ್ಮುಕ್ತಃ ಪೌರ್ಣಮಾಸ್ಯಾಂ ಯಥಾ ಶಶೀ ।।
ಸಿಂಹಯುಕ್ತವಾದ ಅವನ ರಥವು ಮಹಾಶಬ್ದದೊಂದಿಗೆ ಆಕಾಶವನ್ನೇ ಕುಡಿಯುತ್ತಿದೆಯೋ ಎನ್ನುವಂತೆ ಮತ್ತು ಘನ ಮೇಘಗಳಿಂದ ಮುಕ್ತನಾದ ಪೌರ್ಣಿಮೆಯ ಶಶಿಯಂತೆ ತೋರುತ್ತಿತ್ತು.
19178019a ತತೋ ಗಣಸಹಸ್ರೈಸ್ತು ನಾನಾರೂಪೈರ್ಭಯಾವಹೈಃ ।
19178019c ನದದ್ಭಿರ್ವಿವಿಧಾನ್ನಾದಾನ್ರಥೋ ದೇವಸ್ಯ ಶೋಭಯನ್ ।।
ಆಗ ವಿವಿಧ ಸಿಂಹನಾದಗೈಯುತ್ತಿದ್ದ ಭಯವನ್ನುಂಟುಮಾಡುವ ನಾನಾರೂಪಗಳ ಸಹಸ್ರಾರು ಗಣಗಳಿಂದ ದೇವನ ಆ ರಥವು ಇನ್ನೂ ಶೋಭಿಸಿತು.
19178020a ಕೇಚಿತ್ಸಿಂಹಮುಖಾಸ್ತತ್ರ ತಥಾ ವ್ಯಾಘ್ರಮುಖಾಃ ಪರೇ ।
19178020c ನಾಗಾಶ್ವೋಷ್ಟ್ರಮುಖಾಸ್ತತ್ರ ಪ್ರವೇಪುರತಿಪೀಡಿತಾಃ ।।
ಅಲ್ಲಿ ಕೆಲವರಿಗೆ ಸಿಂಹದ ಮುಖಗಳಿದ್ದವು. ಇತರರು ವ್ಯಾಘ್ರಮುಖರಾಗಿದ್ದರು. ಆನೆ-ಕುದುರೆ-ಒಂಟೆಗಳ ಮುಖವುಳ್ಳವರಿದ್ದರು. ಅವರು ಕೃಷ್ಣನ ಬಾಣಗಳಿಂದ ಅತಿಪೀಡಿತರಾಗಿ ನಡುಗತೊಡಗಿದರು.
19178021a ವ್ಯಾಲಯಜ್ಞೋಪವೀತಾಶ್ಚ ಕೇಚಿತ್ತತ್ರ ಮಹಾಬಲಾಃ ।
19178021c ಖರೋಷ್ಟ್ರಗಜವಕ್ತ್ರಾಶ್ಚ ಅಶ್ವಗ್ರೀವಾಶ್ಚ ಸಂಸ್ಥಿತಾಃ ।।
ಆ ಮಹಾಬಲರಲ್ಲಿ ಕೆಲವರು ಸರ್ಪಗಳನ್ನೇ ಯಜ್ಞೋಪವೀತಗಳನ್ನಾಗಿ ಧರಿಸಿದ್ದರು. ಕತ್ತೆ-ಒಂಟೆ ಮತ್ತು ಆನೆಗಳ ಮುಖವುಳ್ಳವರಿದ್ದರು. ಮತ್ತು ಕೆಲವರ ಕುತ್ತಿಗೆಗಳು ಕುದುರೆಗಳ ಕುತ್ತಿಗೆಗಳಂತಿದ್ದವು.
19178022a ಛಾಗಮಾರ್ಜಾರವಕ್ತ್ರಾಶ್ಚ ಮೇಷವಕ್ತ್ರಾಸ್ತಥಾಪರೇ ।
19178022c ಚೀರಿಣಃ ಶಿಖಿನಶ್ಚಾನ್ಯೇ ಜಟಿಲೋರ್ಧ್ವಶಿರೋರುಹಾಃ ।।
19178023a ಭಗ್ನಾಃ ಪರಿಪತಂತಿ ಸ್ಮ ಶಂಖದುಂದುಭಿನಿಃಸ್ವನೈಃ ।
ಕೆಲವರ ಮುಖಗಳು ತೋಳ, ಆಡು ಮತ್ತು ಬೆಕ್ಕಿನ ಮುಖಗಳಂತಿದ್ದವು. ಇತರರ ಮುಖಗಳು ಕುರಿಯ ಮುಖಗಳಂತಿದ್ದವು. ಕೆಲವರು ಚೀರವಸ್ತ್ರವನ್ನುಟ್ಟಿದ್ದರು. ಅನ್ಯರಿಗೆ ಶಿಖೆಗಳಿದ್ದವು. ಕೆಲವರು ಜಟೆಗಳನ್ನು ಧರಿಸಿದ್ದರು ಮತ್ತು ಕೆಲವರ ತಲೆಗೂದಲಗಳು ಮೇಲ್ಮುಖವಾಗಿದ್ದವು. ಶಂಖ-ದುಂದುಭಿಗಳ ಶಬ್ದದಿಂದಲೇ ಪರಿತಪಿಸಿ ಬೀಳುತ್ತಿದ್ದರು.
19178023c ಕೇಚಿತ್ಸೌಮ್ಯಮುಖಾಸ್ತತ್ರ ದಿವ್ಯೈಃ ಶಸ್ತ್ರೈರಲಂಕೃತಾಃ ।।
19178024a ನಾನಾಪುಷ್ಪಕೃತಾಪೀಡಾ ನಾನಾಪ್ರಹರಣಾಯುಧಾಃ ।
ಕೆಲವರ ಮುಖಗಳು ಸೌಮ್ಯವಾಗಿದ್ದವು ಮತ್ತು ದಿವ್ಯ ಶಸ್ತ್ರಗಳಿಂದ ಅಲಂಕೃತರಾಗಿದ್ದರು. ನಾನಾಪುಷ್ಪಗಳ ಕಿರೀಟಗಳನ್ನು ಧರಿಸಿದ್ದರು ಮತ್ತು ನಾನಾ ಆಯುಧಗಳನ್ನು ಪ್ರಯೋಗಿಸುತ್ತಿದ್ದರು.
19178024c ವಾಮನಾ ವಿಕಟಾಶ್ಚೈವ ಸಿಂಹವ್ಯಾಘ್ರಪರಿಚ್ಛದಾಃ ।।
19178025a ರುಧಿರಾರ್ದ್ರೈರ್ಮಹಾವಕ್ತ್ರೈರ್ಮಹಾದಂಷ್ಟ್ರಾ ಬಲಿಪ್ರಿಯಾಃ ।
ವಾಮನರೂ, ವಿಕಟರೂ, ಸಿಂಹ-ವ್ಯಾಘ್ರಗಳ ಚರ್ಮಗಳನ್ನು ಹೊದೆದವರೂ, ರಕ್ತದಿಂದ ತೋಯ್ದವರು, ಅತಿ ದೊಡ್ಡ ಮುಖವುಳ್ಳವರು, ದೊಡ್ಡ ದೊಡ್ಡ ಹಲ್ಲಿನವರು ಮತ್ತು ಬಲಿಪ್ರಿಯರು ಅಲ್ಲಿದ್ದರು.
19178025c ದೇವಂ ಸಂಪರಿವಾರ್ಯಾಥ ಮಹಾಶತ್ರುಪ್ರಮರ್ದನಮ್ ।।
19178026a ಲೀಲಾಯಮಾನಾಸ್ತಿಷ್ಠಂತಿ ಸಂಗ್ರಾಮಾಭಿಮುಖೋನ್ಮುಖಾಃ ।
ಮಹಾಶತ್ರುಗಳನ್ನು ಮರ್ದಿಸುವ ಇವರು ದೇವನನ್ನು ಸುತ್ತುವರೆದು ಲೀಲಾಪೂರ್ವಕ ಸಂಗ್ರಾಮಕ್ಕೆ ಉತ್ಸುಕರಾಗಿ ರಣಮೂರ್ಧನಿಯಲ್ಲಿ ನಿಂತಿದ್ದರು.
19178026c ತತೋ ದಿವ್ಯಂ ರಥಂ ದೃಷ್ಟ್ವಾ ರುದ್ರಸ್ಯಾಕ್ಲಿಷ್ಟಕರ್ಮಣಃ ।।
19178027a ಕೃಷ್ಣೋ ಗರುಡಮಾಸ್ಥಾಯ ಯಯೌ ರುದ್ರಾಯ ಸಂಯುಗೇ ।
ಆಗ ರುದ್ರನ ದಿವ್ಯ ರಥವನ್ನು ನೋಡಿ ಅಕ್ಲಿಷ್ಟಕರ್ಮಿ ಕೃಷ್ಣನು ಗರುಡನನ್ನೇರಿ ರುದ್ರನೊಡನೆ ಯುದ್ಧಕ್ಕೆ ಮುಂದಾದನು.
19178027c ವೈನತೇಯಸ್ಥಮಾಸ್ಯಂತಮಾಯಾಂತಮಗ್ರಣೀಂ ಹರಿಮ್ ।।
19178028a ವಿವ್ಯಾಧ ಕುಪಿತೋ ಬಾಣೈರ್ನಾರಾಚಾನಾಂ ಶತೇನ ಸಃ ।
ಕುಪಿತನಾದ ರುದ್ರನು ವೈನತೇಯನ ಮೇಲೆ ಕುಳಿತು ಮುಂದುವರೆದು ಬರುತ್ತಿದ್ದ ಹರಿಯನ್ನು ನೂರು ನಾರಾಚ ಬಾಣಗಳಿಂದ ಹೊಡೆದನು.
19178028c ಸ ಶರೈರರ್ದಿತಸ್ತೇನ ಹರೇಣಾಕ್ಲಿಷ್ಟಕರ್ಮಣಾ ।।
19178029a ಹರಿರ್ಜಗ್ರಾಹ ಕುಪಿತೋ ಹ್ಯಸ್ತ್ರಂ ಪಾರ್ಜನ್ಯಮುತ್ತಮಮ್ ।
ಅಕ್ಲಿಷ್ಟಕರ್ಮಿ ಹರನ ಶರಗಳಿಂದ ಪೀಡಿತನಾಗಿ ಹರಿಯು ಕುಪಿತನಾಗಿ ಉತ್ತಮ ಪಾರ್ಜನ್ಯಾಸ್ತ್ರವನ್ನು ತೆಗೆದುಕೊಂಡನು.
19178029c ಪ್ರಚಚಾಲ ತತೋ ಭೂಮಿರ್ವಿಷ್ಣುರುದ್ರಪ್ರಪೀಡಿತಾ ।।
19178030a ನಾಗಾಶ್ಚೋರ್ಧ್ವಮುಖಾಸ್ತತ್ರ ವಿಚೇಲುರಭಿಪೀಡಿತಾಃ ।
ಆಗ ವಿಷ್ಣು ಮತ್ತು ರುದ್ರರ ಭಾರದಿಂದ ಪೀಡಿತ ಭೂಮಿಯು ನಡುಗಿತು. ದಿಗ್ಗಜಗಳು ಅತ್ಯಂತ ಪೀಡಿತರಾಗಿ ಮುಖವನ್ನು ಮೇಲೆತ್ತಿ ವಿಚಲಿತಗೊಂಡವು.
19178030c ಪರ್ವತಾಃ ಪತಿತಾಸ್ತತ್ರ ಜಲಧಾರಾಭಿರಾಪ್ಲುತಾಃ ।।
19178031a ಕೇಚಿನ್ಮುಮುಚಿರೇ ತತ್ರ ಶಿಖರಾಣಿ ಸಮಂತತಃ ।
ಜಲಧಾರೆಗಳಿಂದ ಮುಳುಗಿ ಪರ್ವತಗಳು ಬಿದ್ದವು. ಕೆಲವು ಪರ್ವತಗಳು ಎಲ್ಲಕಡೆಗಳಿಂದ ಶಿಖರಗಳನ್ನು ತೊರೆದವು.
19178031c ದಿಶಶ್ಚ ಪ್ರದಿಶಶ್ಚೈವ ಭೂಮಿರಾಕಾಶಮೇವ ಚ ।।
19178032a ಪ್ರದೀಪ್ತಾನೀವ ದೃಶ್ಯಂತೇ ಸ್ಥಾಣುಕೃಷ್ಣಸಮಾಗಮೇ ।
19178032c ಸಮಂತತಶ್ಚ ನಿರ್ಘಾತಾಃ ಪತಂತಿ ಧರಣೀತಲೇ ।।
ಸ್ಥಾಣು-ಕೃಷ್ಣರ ಯುದ್ಧದಲ್ಲಿ ದಿಕ್ಕುಗಳು, ಉಪದಿಕ್ಕುಗಳು, ಭೂಮಿ-ಆಕಾಶಗಳು ಎಲ್ಲವೂ ಪ್ರಜ್ವಲಿತಗೊಂಡಂತೆ ಕಾಣುತ್ತಿದ್ದವು. ಧರಣೀತಲದಲ್ಲಿ ಎಲ್ಲಕಡೆ ವಜ್ರಪಾತವಾಯಿತು.
19178033a ಶಿವಾಶ್ಚೈವಾಶಿವಾನ್ನಾದಾನ್ನದಂತೇ ಭೀಮದರ್ಶನಾಃ ।
19178033c ವಾಸವಶ್ಚಾನದನ್ಘೋರಂ ರುಧಿರಂ ಚಾಪ್ಯವರ್ಷತ ।।
ಭೀಮದರ್ಶನ ನರಿಗಳು ಅಮಂಗಳಕರವಾಗಿ ಕೂಗತೊಡಗಿದವು. ಇಂದ್ರನು ಘೋರಗರ್ಜನೆಗಳೊಂದಿಗೆ ರಕ್ತದ ಮಳೆಯನ್ನು ಸುರಿಸಿದನು.
19178034a ಉಲ್ಕಾ ಚ ಬಾಣಸೈನ್ಯಸ್ಯ ಪುಚ್ಛೇನಾವೃತ್ಯ ತಿಷ್ಠತಿ ।
19178034c ಪ್ರವವೌ ಮಾರುತಶ್ಚಾಪಿ ಜ್ಯೋತೀಂಷ್ಯಾಕುಲತಾಮಿಯುಃ ।।
19178035a ಪ್ರಭಾಹೀನಾಸ್ತಥೌಷಧ್ಯೋ ನ ಚರಂತ್ಯಂತರಿಕ್ಷಗಾಃ ।
ಉಲ್ಕೆಯು ಬಾಣಸೇನೆಯ ಬಾಲದ ಭಾಗದಲ್ಲಿ ನಿಂತಿತು. ವಾಯುವು ಪ್ರಚಂಡಗತಿಯಲ್ಲಿ ಬೀಸುತ್ತಿದ್ದನು. ನಕ್ಷತ್ರಗಳು ವ್ಯಾಕುಲಗೊಂಡವು. ಓಷಧಗಳು ಪ್ರಭಾಹೀನವಾದವು ಮತ್ತು ಆಕಾಶಚಾರೀ ಜೀವಿಗಳು ಅಂತರಿಕ್ಷದಲ್ಲಿ ಚಲಿಸುವುದನ್ನು ನಿಲ್ಲಿಸಿದವು.
19178035c ಏತಸ್ಮಿನ್ನಂತರೇ ಬ್ರಹ್ಮಾ ಸರ್ವದೇವಗಣೈರ್ವೃತಃ ।।
19178036a ತ್ರಿಪುರಾಂತಕಮುಹ್ಯಂತಂ ಜ್ಞಾತ್ವಾ ರುದ್ರಮುಪಾಗಮತ್ ।
ಈ ಮಧ್ಯೆ ಸರ್ವದೇವಗಣಗಳಿಂದ ಆವೃತನಾದ ಬ್ರಹ್ಮನು ತ್ರಿಪುರಾಂತಕನು ಯುದ್ಧದಲ್ಲಿ ತೊಡಗಿದ್ದಾನೆಂದು ತಿಳಿದು ರುದ್ರನ ಬಳಿ ಬಂದನು.
19178036c ಗಂಧರ್ವಾಪ್ಸರಸಶ್ಚೈವ ಯಕ್ಷಾ ವಿದ್ಯಾಧರಾಸ್ತಥಾ ।।
19178037a ಸಿದ್ಧಚಾರಣಸಂಘಾಶ್ಚ ಪಶ್ಯಂತೋಽಥ ದಿವಿ ಸ್ಥಿತಾಃ ।
ಗಂಧರ್ವರು, ಅಪ್ಸರೆಯರು, ಯಕ್ಷರು, ವಿದ್ಯಾಧರರು, ಸಿದ್ಧ-ಚಾರಣಸಂಘಗಳು ದಿವಿಯಲ್ಲಿ ನೆರೆದಿರುವುದು ಕಂಡುಬಂದಿತು.
19178037c ತತಃ ಪಾರ್ಜನ್ಯಮಸ್ತ್ರಂ ತತ್ಕ್ಷಿಪ್ತಂ ರುದ್ರಾಯ ವಿಷ್ಣುನಾ ।।
19178038a ಯಯೌ ಜ್ವಲನ್ನಥ ತದಾ ಯತೋ ರುದ್ರೋ ರಥಸ್ಥಿತಃ ।
ಆಗ ವಿಷ್ಣುವು ಪಾರ್ಜನ್ಯಾಸ್ತ್ರವನ್ನು ರುದ್ರನ ಮೇಲೆ ಎಸೆದನು. ಅದು ಪ್ರಜ್ವಲಿಸುತ್ತಾ ರಥಾರೂಡನಾಗಿದ್ದ ರುದ್ರನ ಕಡೆ ಹೊರಟಿತು.
19178038c ತತಃ ಶತಸಹಸ್ರಾಣಿ ಶರಾಣಾಂ ನತಪರ್ವಣಾಮ್ ।।
19178039a ನಿಪೇತುಃ ಸರ್ವತೋ ದಿಗ್ಭ್ಯೋ ಯತೋ ಹರರಥಸ್ಥಿತಃ ।
ಆಗ ಹರನು ಕುಳಿತಿದ್ದ ರಥದ ಸುತ್ತಲೂ ಎಲ್ಲ ದಿಕ್ಕುಗಳಿಂದಲೂ ಲಕ್ಷಗಟ್ಟಲೆ ನತಪರ್ವ ಶರಗಳು ಬಿದ್ದವು.
19178039c ಅಥಾಗ್ನೇಯಂ ಮಹಾರೌದ್ರಮಸ್ತ್ರಮಸ್ತ್ರವಿದಾಂ ವರಃ ।।
19178040a ಮುಮೋಚ ರುಷಿತೋ ರುದ್ರಸ್ತದದ್ಭುತಮಿವಾಭವತ್ ।
ಆಗ ಅಸ್ತ್ರವಿದರಲ್ಲಿ ಶ್ರೇಷ್ಠ ರುದ್ರನು ರೋಷಗೊಂಡು ಮಹಾರೌದ್ರ ಆಗ್ನೇಯಾಸ್ತ್ರವನ್ನು ಪ್ರಯೋಗಿಸಿದನು. ಅದೊಂದು ಅದ್ಭುತವಾಗಿತ್ತು.
19178040c ತತೋ ವಿಶೀರ್ಣದೇಹಾಸ್ತೇ ಚತ್ವಾರೋಽಪಿ ಸಮಂತತಃ ।।
19178041a ನಾದೃಶ್ಯಂತ ಶರೈಶ್ಛನ್ನಾ ದಹ್ಯಮಾನಾಶ್ಚ ವಹ್ನಿನಾ ।
19178041c ಸಿಂಹನಾದಂ ತತಶ್ಚಕ್ರುಃ ಸರ್ವ ಏವಾಸುರೋತ್ತಮಾಃ ।।
ಆಗ ಆ ನಾಲ್ವರ ದೇಹಗಳೂ ಎಲ್ಲಕಡೆಗಳಲ್ಲಿ ಗಾಯಗೊಂಡವು. ಶರಗಳಿಂದ ದಹಿಸಲ್ಪಟ್ಟ ಅವರು ಅಗ್ನಿಗಳಂತಾಗಿ ಕಾಣದೇ ಹೋದರು. ಆಗ ಸರ್ವ ಅಸುರೋತ್ತಮರೂ ಸಿಂಹನಾದಗೈದರು.
19178042a ಹತೋಽಯಮಿತಿ ವಿಜ್ಞಾಯ ಆಗ್ನೇಯಾಸ್ತ್ರೇಣ ವೈ ತದಾ ।
19178042c ತತಸ್ತದ್ವಿಸಹಿತ್ವಾಜೋ ಹ್ಯಸ್ತ್ರಮಸ್ತ್ರವಿದಾಂ ವರಃ ।।
19178043a ಜಗ್ರಾಹ ವಾರುಣಂ ಸೋಽಸ್ತ್ರಂ ವಾಸುದೇವಃ ಪ್ರತಾಪವಾನ್।
ಆಗ್ನೇಯಾಸ್ತ್ರದಿಂದ ಅವರು ಹತರಾದರೆಂದು ತಿಳಿಯಲು, ಆಗ್ನೇಯಾಸ್ತ್ರವನ್ನು ಸಹಿಸಿಕೊಂಡ ಅಸ್ತ್ರವಿದರಲ್ಲಿ ಶ್ರೇಷ್ಠ ಪ್ರತಾಪವಾನ್ ವಾಸುದೇವನು ವಾರುಣಾಸ್ತ್ರವನ್ನು ತೆಗೆದುಕೊಂಡನು.
19178043c ಪ್ರಯುಕ್ತೇ ವಾಸುದೇವೇನ ವಾರುಣಾಸ್ತ್ರೇಽತಿತೇಜಸಿ ।।
19178044a ಆಗ್ನೇಯಂ ಪ್ರಶಮಂ ಯಾತಮಸ್ತ್ರಂ ವಾರುಣತೇಜಸಾ ।
ಅತಿತೇಜಸ್ವಿ ವಾಸುದೇವನು ಪ್ರಯೋಗಿಸಿದ ವಾರುಣಾಸ್ತ್ರದ ವಾರುಣತೇಜಸ್ಸಿನಿಂದ ಆಗ್ನೇಯಾಸ್ತ್ರವು ಪ್ರಶಮನಗೊಂಡಿತು.
19178044c ತಸ್ಮಿನ್ಪ್ರತಿಹತೇ ತ್ವಸ್ತ್ರೇ ವಾಸುದೇವೇನ ಸಂಯುಗೇ ।।
19178045a ಪೈಶಾಚಂ ರಾಕ್ಷಸಂ ರೌದ್ರಂ ತಥೈವಾಂಗಿರಸಂ ಭವಃ ।
19178045c ಮುಮೋಚಾಸ್ತ್ರಾಣಿ ಚತ್ವಾರಿ ಯುಗಾಂತಾಗ್ನಿನಿಭಾನಿ ವೈ ।।
ಯುದ್ಧದಲ್ಲಿ ವಾಸುದೇವನು ಆ ಅಸ್ತ್ರವನ್ನು ನಾಶಗೊಳಿಸಲು ಭವನು ಪೈಶಾಚ, ರಾಕ್ಷಸ, ರೌದ್ರ ಮತ್ತು ಆಂಗಿರಸವೆಂಬ ಯುಗಾಂತದ ಅಗ್ನಿಗಳಂತೆ ಬೆಳಗುತ್ತಿದ್ದ ನಾಲ್ಕು ಅಸ್ತ್ರಗಳನ್ನು ಪ್ರಯೋಗಿಸಿದನು.
19178046a ವಾಯವ್ಯಮಥ ಸಾವಿತ್ರಂ ವಾಸವಂ ಮೋಹನಂ ತಥಾ ।
19178046c ಅಸ್ತ್ರಾನಾಂ ವಾರಣಾರ್ಥಾಯ ವಾಸುದೇವೋ ಹ್ಯಮುಂಚತ ।।
ಆ ಅಸ್ತ್ರಗಳನ್ನು ತಡೆಯಲು ವಾಸುದೇವನು ವಾಯವ್ಯಾಸ್ತ್ರ, ಸಾವಿತ್ರಾಸ್ತ್ರ, ಐಂದ್ರಾಸ್ತ್ರ ಮತ್ತು ಮೋಹನಾಸ್ತ್ರಗಳನ್ನು ಪ್ರಯೋಗಿಸಿದನು.
19178047a ಅಸ್ತ್ರೈಶ್ಚತುರ್ಭಿಶ್ಚತ್ವಾರಿ ವಾರಯಿತ್ವಾಶು ಮಾಧವಃ ।
19178047c ಮುಮೋಚ ವೈಷ್ಣವಂ ಸೋಽಸ್ತ್ರಂ ವ್ಯಾದಿತಾಸ್ಯಾಂತಕೋಪಮಮ್ ।।
ಅಸ್ತ್ರಗಳಿಂದ ಆ ನಾಲ್ಕು ಅಸ್ತ್ರಗಳನ್ನು ತಡೆದು ಮಾಧವನು ಬಾಯಿಕಳೆದ ಅಂತಕನಂತಿದ್ದ ವೈಷ್ಣವಾಸ್ತ್ರವನ್ನು ಪ್ರಯೋಗಿಸಿದನು.
19178048a ವೈಷ್ಣವಾಸ್ತ್ರೇ ಪ್ರಯುಕ್ತೇ ತು ಸರ್ವ ಏವಾಸುರೋತ್ತಮಾಃ ।
19178048c ಭೂತಯಕ್ಷಗಣಾಶ್ಚೈವ ಬಾಣಾನೀಕಂ ಚ ಸರ್ವಶಃ ।।
19178049a ದಿಶಃ ಸರ್ವಾ ಪ್ರಾದ್ರವಂತ ಭಯಮೋಹೇನ ವಿಕ್ಲವಾಃ ।
ವೈಷ್ಣವಾಸ್ತ್ರವನ್ನು ಪ್ರಯೋಗಿಸಲು ಸರ್ವ ಸುರೋತ್ತಮರೂ ಭೂತ-ಯಕ್ಷಗಣಗಳೂ ಮತ್ತು ಬಾಣನ ಸೇನೆಯೆಲ್ಲವೂ ಭಯ-ಮೋಹಗಳಿಂದ ವ್ಯಾಕುಲಗೊಂಡು ಎಲ್ಲ ದಿಕ್ಕುಗಳಲ್ಲಿ ಓಡತೊಡಗಿದವು.
19178049c ಪ್ರಮಾಥಗಣಭೂಯಿಷ್ಠೇ ದೀರ್ಣೇ ಸೈನ್ಯೇ ಮಹಾಸುರಃ ।।
19178050a ನಿರ್ಜಗಾಮ ತತೋ ಬಾಣೋ ಯುದ್ಧಾಯಾಭಿಮುಖಸ್ತ್ವರನ್।
ಪ್ರಮಥಗಣಗಳೇ ಹೆಚ್ಚಾಗಿದ್ದ ಸೇನೆಯು ಚದುರಿ ಹೋಗಲು ಮಹಾಸುರ ಬಾಣನು ತ್ವರೆಮಾಡಿ ಯುದ್ಧಾಭಿಮುಖನಾಗಿ ಹೊರಟನು.
19178050c ಭೀಮಪ್ರಹರಣೈರ್ಘೋರೈರ್ದೈತ್ಯೈಶ್ಚ ಸುಮಹಾಬಲೈಃ ।
19178050e ವೃತೋ ಮಾಹಾರಥೈರ್ವೀರೈರ್ವಜ್ರೀವ ಸುರಸತ್ತಮೈಃ ।।
ವಜ್ರಿ ಇಂದ್ರನು ಸುರಸತ್ತಮರಿಂದ ಸುತ್ತುವರೆಯಲ್ಪಟ್ಟಂತೆ ಬಾಣನು ಭಯಂಕರ ಆಯುಧಗಳನ್ನು ಹಿಡಿದಿದ್ದ ಘೋರ ಮಹಾಬಲಶಾಲೀ ಮಹಾರಥ ವೀರ ದೈತ್ಯರಿಂದ ಆವೃತನಾಗಿದ್ದನು.”
19178051 ವೈಶಂಪಾಯನ ಉವಾಚ ।
19178051a ಜಪೈಶ್ಚ ಹೋಮೈಶ್ಚ ತಥೌಷಧೀಭಿರ್ಮಹಾತ್ಮನಃ ಸ್ವಸ್ತ್ಯಯನಂ ಪ್ರಚಕ್ರುಃ ।
19178051c ಸ ತತ್ರ ವಸ್ತ್ರಾಣಿ ಶುಭಾಶ್ಚ ಗಾವಃ ಫಲಾನಿ ಪುಷ್ಪಾಣಿ ತಥೈವ ನಿಷ್ಕಾನ್ ।।
19178052a ಬಲೇಃ ಸುತೋ ಬ್ರಾಹ್ಮಣೇಭ್ಯಃ ಪ್ರಯಚ್ಛನ್ವಿರಾಜತೇ ತೇನ ಯಥಾ ಧನೇಶಃ ।
ವೈಶಂಪಾಯನನು ಹೇಳಿದನು: “ಆಗ ಬ್ರಾಹ್ಮಣರು ಜಪ, ಮಂತ್ರ ಮತ್ತು ಓಷಧಿಗಳಿಂದ ಮಹಾತ್ಮ ಬಾಣನಿಗೆ ಸ್ವಸ್ತಿವಾಚನ ಮಾಡುತ್ತಿದ್ದರು. ಬಲಿಯ ಸುತ ಬಾಣನಾದರೋ ಅವರಿಗೆ ಶುಭವಸ್ತ್ರಗಳನ್ನೂ, ಗೋವುಗಳನ್ನೂ, ಫಲ-ಪುಷ್ಪಗಳನ್ನೂ, ನಿಷ್ಕಗಳನ್ನೂ ನೀಡುತ್ತಾ ಧನೇಶನಂತೆ ವಿರಾಜಿಸಿದನು.
19178052c ಸಹಸ್ರಸೂರ್ಯೋ ಬಹುಕಿಂಕಿಣೀಕಃ ಪರಾರ್ಘ್ಯಜಾಂಬೂನದರತ್ನಚಿತ್ರಃ ।।
19178053a ಸಹಸ್ರಚಂದ್ರಾಯುತತಾರಕಶ್ಚ ರಥೋ ಮಹಾನಗ್ನಿರಿವಾವಭಾತಿ ।
19178053c ತಮಾಸ್ಥಿತೋ ದಾನವಸಂಗೃಹೀತಂ ಮಹಾಧ್ವಜಂ ಕಾರ್ಮುಕಧೃಕ್ಸ ಬಾಣಃ ।।
ಸಹಸ್ರಸೂರ್ಯರನ್ನು ಚಿತ್ರಿಸಿದ್ದ, ಅನೇಕ ಕಿಂಕಿಣೀ ಗಂಟೆಗಳನ್ನು ಕಟ್ಟಿದ್ದ, ಅತ್ಯಂತ ಬೆಲೆಬಾಳುವ ಚಿನ್ನ-ರತ್ನಗಳಿಂದ ವಿಚಿತ್ರವಾಗಿ ಶೋಭಿಸುತ್ತಿದ್ದ, ಸಹಸ್ರ ಚಂದ್ರರು ಮತ್ತು ಹತ್ತುಸಾವಿರ ನಕ್ಷತ್ರಗಳು ಚಿತ್ರಿತವಾಗಿದ್ದ ಅವನ ರಥವು ಮಹಾನ್ ಅಗ್ನಿಯಂತೆ ಹೊಳೆಯುತ್ತಿತ್ತು. ಅದರಲ್ಲಿ ದಾನವ ಬಾಣನು ಮಹಾಧ್ವಜ ಮತ್ತು ಕಾರ್ಮುಕವನ್ನು ಹಿಡಿದು ಕುಳಿತಿದ್ದನು.
19178054a ಉದ್ವರ್ತಯಿಷ್ಯನ್ಯದುಪುಂಗವಾನಾ- ಮತೀವ ರೌದ್ರಂ ಸ ಬಿಭರ್ತಿ ರೂಪಮ್ ।
19178054c ಸ ಮನ್ಯುಮಾನ್ವೀರರಥೌಘಸಂಕುಲೋ ವಿನಿರ್ಯಯೌ ತಾನ್ಪ್ರತಿ ದೈತ್ಯಸಾಗರಃ ।।
19178055a ವಾತಪ್ರವೃದ್ಧಸ್ತು ತರಂಗಸಂಕುಲೋ ಯಥಾರ್ಣವಾ ಲೋಕವಿನಾಶನಾಯ ।
ಆ ಯದುಪುಂಗವರನ್ನು ಸಂಹರಿಸಲು ಉದ್ಯುಕ್ತನಾಗಿದ್ದ ಅವನ ರೌದ್ರ ರೂಪವು ಪ್ರಕಾಶಿಸುತ್ತಿತ್ತು. ಕುಪಿತನಾದ ಆ ದೈತ್ಯಸಾಗರನು ವೀರರಥಸಂಕುಲಗಳಿಂದ ಸುತ್ತುವರೆಯಲ್ಪಟ್ಟು ಚಂಡಮಾರುತದಿಂದ ಮೇಲೆದ್ದ ಅಲೆಗಳಿಂದ ಸಮುದ್ರವು ಲೋಕವಿನಾಶಕ್ಕೆ ಹೊರಡುವಂತೆ ಅವರ ಕಡೆ ಹೊರಟನು.
19178055c ಭೀಮಾನಿ ಸಂತ್ರಾಸಕರೈರ್ವಪುರ್ಭಿ ಸ್ತಾನ್ಯಗ್ರತೋ ಭಾಂತಿ ಬಲಾನಿ ತಸ್ಯ ।।
19178056a ಮಹಾರಥಾನ್ಯುಚ್ಛ್ರಿತಕಾರ್ಮುಕಾಣಿ ಸಪರ್ವತಾನೀವ ವನಾನಿ ರಾಜನ್ ।
19178056c ವಿನಿಃಸೃತಃ ಸಾಗರತೋಯವಾಸಾ ದತ್ಯದ್ಭುತಶ್ಚಾಹವದ್ರಷ್ಟುಕಾಮಃ ।।
ಅವನ ಮುಂದೆ ಮುಂದೆ ತಮ್ಮ ಭಯಂಕರ ರೂಪಗಳಿಂದ ಭಯತ್ರಾಸವನ್ನುಂಟುಮಾಡುವ ಸೇನೆಯು ಹೋಗುತ್ತಿತ್ತು. ರಾಜನ್! ವಿಶಾಲ ರಥಗಳು ಮತ್ತು ಮೇಲೆತ್ತಿಹಿಡಿದಿದ್ದ ಧನುಸ್ಸುಗಳಿಂದ ಕೂಡಿದ್ದ ಆ ಸೇನೆಗಳು ಪರ್ವತಸಹಿತ ವನಗಳಂತೆ ತೋರುತ್ತಿದ್ದವು. ಅತ್ಯದ್ಭುತವಾದ ಆ ಯುದ್ಧವನ್ನು ನೋಡಲು ಬಯಸಿ ಬಾಣನು ಸಮುದ್ರತಟದಲ್ಲಿದ್ದ ತನ್ನ ನಿವಾಸಸ್ಥಾನದಿಂದ ಹೊರಟನು.”
ಸಮಾಪ್ತಿ
ಇತಿ ಶ್ರೀಮಹಾಭಾರತೇ ಖಿಲೇಷು ಹರಿವಂಶೇ ವಿಷ್ಣುಪರ್ವಣಿ ರುದ್ರಕೃಷ್ಣಯುದ್ಧೇ ಅಷ್ಟಸಪ್ತತ್ಯಧಿಕಶತತಮೋಽಧ್ಯಾಯಃ ।।