177: ಜ್ವರಸ್ಯ ಪರಾಜಯೋ ವರಲಾಭಶ್ಚ

ಪ್ರವೇಶ

।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।

ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ

ಶ್ರೀ ಮಹಾಭಾರತ

ಖಿಲಭಾಗೇ ಹರಿವಂಶಃ

ವಿಷ್ಣು ಪರ್ವ

ಅಧ್ಯಾಯ 177

ಸಾರ

ಪರಾಜಿತನಾದ ಜ್ವರನು ಕೃಷ್ಣನ ಶರಣುಹೋಗುವುದು (1-16). ಕೃಷ್ಣನಿಂದ ಜ್ವರನಿಗೆ ವರದಾನ (17-39).

19177001 ವೈಶಂಪಾಯನ ಉವಾಚ ।
19177001a ಮೃತಮಿತ್ಯಬಿವಿಜ್ಞಾಯ ಜ್ವರಂ ಶತ್ರುನಿಷೂದನಃ ।
19177001c ಕೃಷ್ಣೋ ಭುಜಬಲಾಭ್ಯಾಂ ತು ಚಿಕ್ಷೇಪಾಥ ಮಹೀತಲೇ ।।

ವೈಶಂಪಾಯನನು ಹೇಳಿದನು: “ಜ್ವರನು ಮೃತನಾದನೆಂದು ಭಾವಿಸಿ ಶತ್ರುನಿಷೂದನ ಕೃಷ್ಣನು ತನ್ನ ಭುಜಬಲದಿಂದ ಅವನನ್ನು ಭೂಮಿಯ ಮೇಲೆ ಎಸೆದನು.

19177002a ಮುಕ್ತಮಾತ್ರಃ ಸ ಬಾಹುಭ್ಯಾಂ ಕೃಷ್ಣದೇಹಂ ವಿವೇಶ ಹ ।
19177002c ಅಮುಕ್ತ್ವಾ ವಿಗ್ರಹಂ ತಸ್ಯ ಕೃಷ್ಣಸ್ಯಾಪ್ರತಿಮೌಜಸಃ ।।

ಕೃಷ್ಣನ ಭುಜಗಳಿಂದ ಬಿಡುಗಡೆಹೊಂದುತ್ತಲೇ ಅವನು ಕೃಷ್ಣನ ದೇಹವನ್ನು ಪ್ರವೇಶಿಸಿದನು. ಅಪ್ರತಿಮ ತೇಜಸ್ವೀ ಕೃಷ್ಣನ ಶರೀರದಿಂದ ಅವನಿಗೆ ಹೊರಬರಲಿಕ್ಕಾಗಲಿಲ್ಲ.

19177003a ಸ ಹ್ಯಾವಿಷ್ಟಸ್ತಥಾ ತೇನ ಜ್ವರೇಣಾಪ್ರತಿಮೌಜಸಾ ।
19177003c ಕೃಷ್ಣಃ ಸ್ಖಲನ್ನಿವ ಮುಹುಃ ಕ್ಷಿತೌ ಗಾಢಂ ವ್ಯವರ್ತತ ।।

ಆ ಅಪ್ರತಿಮ ಬಲಶಾಲಿ ಜ್ವರನಿಂದ ಆವಿಷ್ಟನಾದ ಕೃಷ್ಣನು ಪುನಃ ಪುನಃ ಎಡವುತ್ತಾ ಭೂಮಿಯಮೇಲೆ ಕುಳಿತುಕೊಂಡು ಜೋರಾಗಿ ಸುತ್ತತೊಡಗಿದನು.

19177004a ಜೃಂಭತೇ ಶ್ವಸತೇ ಚೈವ ವಲ್ಗತೇ ಚ ಪುನಃ ಪುನಃ ।
19177004c ರೋಮಾಂಚೋತ್ಥಿತಗಾತ್ರಶ್ಚ ನಿದ್ರಯಾ ಚಾಭಿಭೂಯತೇ ।।

ಪುನಃ ಪುನಃ ಆಕಳಿಸುತ್ತಿದ್ದನು ಮತ್ತು ದೀರ್ಘ ನಿಟ್ಟುಸಿರು ಬಿಡುತ್ತಿದ್ದನು. ಮುಕ್ಕರಿಸಿ ಬೀಳುತ್ತಿದ್ದನು. ಅವನ ಸಂಪೂರ್ಣ ಅಂಗಾಂಗಗಳಲ್ಲಿ ರೋಮಾಂಚನವುಂಟಾಯಿತು ಮತ್ತು ಅವನು ನಿದ್ರೆಯಿಂದ ಆವರಿಸಲ್ಪಟ್ಟನು.

19177005a ತತಃ ಸ್ಥೈರ್ಯಂ ಸಮಾಲಂಬ್ಯ ಕೃಷ್ಣಃ ಪರಪುರಂಜಯಃ ।
19177005c ವಿಕುರ್ವತಿ ಮಹಾಯೋಗೀ ಜೃಂಭಮಾಣಃ ಪುನಃ ಪುನಃ ।।

ಆಗ ಸ್ಥೈರ್ಯವನ್ನು ತಂದುಕೊಂಡು ಪರಪುರಂಜಯ ಮಹಾಯೋಗೀ ಕೃಷ್ಣನು ಪುನಃ ಪುನಃ ಆಕಳಿಸುತ್ತಾ ವಿಕಾರಹೊಂದಲು ಪ್ರಾರಂಭಿಸಿದನು.

19177006a ಜ್ವರಾಭಿಭೂತಮಾತ್ಮಾನಂ ವಿಜ್ಞಾಯ ಪುರುಷೋತ್ತಮಃ ।
19177006c ಸೋಽಸೃಜಜ್ಜ್ವರಮನ್ಯಂ ತು ಪೂರ್ವಜ್ವರವಿನಾಶನಮ್ ।।

ತಾನು ಜ್ವರದಿಂದ ಅಭಿಭೂತನಾಗಿದ್ದೇನೆಂದು ತಿಳಿದ ಪುರುಷೋತ್ತಮನು ಹಿಂದಿನ ಜ್ವರವನ್ನು ನಾಶಗೊಳಿಸುವಂತಹ ಅನ್ಯ ಜ್ವರವನ್ನು ಸೃಷ್ಟಿಸಿದನು.

19177007a ಘೋರಂ ವೈಷ್ಣವಮತ್ಯುಗ್ರಂ ಸರ್ವಪ್ರಾಣಿಭಯಂಕರಮ್ ।
19177007c ಸಂಸೃಷ್ಟವಾನ್ಸ ತೇಜಸ್ವೀ ತಂ ಜ್ವರಂ ಭೀಮವಿಕ್ರಮಮ್ ।।

ಆ ತೇಜಸ್ವಿಯು ಸರ್ವಪ್ರಾಣಿಗಳಿಗೂ ಭಯಂಕರವಾದ ಉಗ್ರವಾದ ಭೀಮವಿಕ್ರಮಿಯಾದ ವೈಷ್ಣವೀ ಜ್ವರನನ್ನು ಸೃಷ್ಟಿಸಿದನು.

19177008a ಜ್ವರಃ ಕೃಷ್ಣವಿಸೃಷ್ಟಸ್ತು ಗೃಹೀತ್ವಾ ತಂ ಜ್ವರಂ ಬಲಾತ್ ।
19177008c ಕೃಷ್ಣಾಯ ಹೃಷ್ಟಃ ಪ್ರಾಯಚ್ಛತ್ತಂ ಜಗ್ರಾಹ ತತೋ ಹರಿಃ ।।

ಕೃಷ್ಣನು ಸೃಷ್ಟಿಸಿದ ಜ್ವರನು ತ್ರಿಶಿರ ಜ್ವರನನ್ನು ಬಲವತ್ತಾಗಿ ಹಿಡಿದು ಕೃಷ್ಣನಿಗೆ ಕೊಟ್ಟನು. ಹರಿಯು ಅವನನ್ನು ಸಂತೋಷದಿಂದ ಹಿಡಿದುಕೊಂಡನು.

19177009a ತತಸ್ತಂ ಪರಮಕ್ರುದ್ಧೋ ವಾಸುದೇವೋ ಮಹಾಬಲಃ ।
19177009c ಸ್ವಗಾತ್ರಾತ್ಸ್ವಜ್ವರೇಣೈವ ನಿಷ್ಕಾಸಯತ ವೀರ್ಯವಾನ್ ।।

ಪರಮಕ್ರುದ್ಧನಾದ ಮಹಾಬಲಿ ವೀರ್ಯವಾನ್ ವಾಸುದೇವನು ತನ್ನ ಜ್ವರದಿಂದಲೇ ತನ್ನ ಶರೀರದಲ್ಲಿದ್ದ ಜ್ವರನನ್ನು ಹೊರತೆಗೆದನು.

19177010a ಆವಿಧ್ಯ ಭೂತಲೇ ಚೈನಂ ಶತಧಾ ಕರ್ತುಮುದ್ಯತಃ ।
19177010c ವ್ಯಘೋಷತ ಜ್ವರಸ್ತತ್ರ ಭೋಃ ಪರಿತ್ರಾತುಮರ್ಹಸಿ ।।

ಅವನನ್ನು ಭೂತಲಕ್ಕೆ ಹೊಡೆದು ನೂರಾರು ಚೂರುಗಳನ್ನಾಗಿ ಮಾಡಲು ಹೊರಟಾಗ ಜ್ವರನು “ಭೋ! ನನ್ನನ್ನು ಪಾರುಮಾಡಬೇಕು!” ಎಂದು ಕೂಗಿಕೊಂಡನು.

19177011a ಆವಿದ್ಧ್ಯಮಾನೇ ತಸ್ಮಿಂಸ್ತು ಕೃಷ್ಣೇನಾಮಿತತೇಜಸಾ ।
19177011c ಅಶರೀರಾ ತತೋ ವಾಣೀ ಹ್ಯಂತರಿಕ್ಷಾದಭಾಶತ ।।

ಅಮಿತ ತೇಜಸ್ವೀ ಕೃಷ್ಣನು ಅವನನು ಅಪ್ಪಳಿಸಲು ತಿರುಗಿಸುತ್ತಿದ್ದಾಗ ಅಂತರಿಕ್ಷದಲ್ಲಿ ಅಶರೀರವಾಣಿಯೊಂದು ನುಡಿಯಿತು.

19177012a ಕೃಷ್ಣ ಕೃಷ್ಣ ಮಹಾಬಾಹೋ ಯದೂನಾಂ ನಂದಿವರ್ಧನ ।
19177012c ಮಾ ವಧೀರ್ಜ್ವರಮೇನಂ ತು ರಕ್ಷಣೀಯಸ್ತ್ವಯಾನಘ ।।

“ಕೃಷ್ಣ! ಕೃಷ್ಣ! ಮಹಾಬಾಹೋ! ಯದುಗಳ ಆನಂದವನ್ನು ವೃದ್ಧಿಸುವವನೇ! ಅನಘ! ಈ ಜ್ವರನನ್ನು ವಧಿಸಬೇಡ. ಇವನನ್ನು ರಕ್ಷಿಸು!”

19177013a ಇತ್ಯೇವಮುಕ್ತೇ ವಚನೇ ತಂ ಮುಮೋಚ ಹರಿಃ ಸ್ವಯಮ್ ।
19177013c ಭೂತಭವ್ಯಭವಿಷ್ಯಸ್ಯ ಜಗತಃ ಪರಮೋ ಗುರುಃ ।।

ಈ ಮಾತನ್ನು ಕೇಳಿ ಭೂತ-ಭವ್ಯ-ಭವಿಷ್ಯದ ಜಗತ್ತಿನ ಪರಮ ಗುರು ಸ್ವಯಂ ಹರಿಯು ಅವನನ್ನು ಮುಕ್ತಗೊಳಿಸಿದನು.

19177014a ಕೃಷ್ಣಸ್ಯ ಪಾದಯೋರ್ಮೂರ್ಧ್ನಾ ಶರಣಂ ಸೋಽಗಮಜ್ಜ್ವರಃ।
19177014c ಏವಂ ಮುಕ್ತೋ ಹೃಷೀಕೇಶಂ ಜ್ವರೋ ವಾಕ್ಯಮಥಾಬ್ರವೀತ್ ।।

ಹೀಗೆ ಅವನಿಂದ ಮುಕ್ತನಾದ ಜ್ವರನು ಕೃಷ್ಣನ ಪಾದಗಳಲ್ಲಿ ಶಿರವನ್ನಿತ್ತು ಅವನ ಶರಣುಬಂದನು. ಹೃಷೀಕೇಶನಿಗೆ ಜ್ವರನು ಹೇಳಿದನು:

19177015a ಶೃಣುಷ್ವ ಮಮ ಗೋವಿಂದ ವಿಜ್ಞಾಪ್ಯಂ ಯದುನಂದನ ।
19177015c ಯೋ ಮೇ ಮನೋರಥೋ ದೇವ ತಂ ತ್ವಂ ಕುರು ಮಹಾಭುಜ ।।

“ಗೋವಿಂದ! ಯದುನಂದನ! ನನ್ನ ವಿಜ್ಞಾಪನೆಯನ್ನು ಕೇಳು. ದೇವ! ಮಹಾಭುಜ! ನನ್ನ ಮನೋರಥವನ್ನು ಈಡೇರಿಸಿಕೊಡು.

19177016a ಅಹಮೇಕೋ ಜ್ವರಸ್ತಾತ ನಾನ್ಯೋ ಲೋಕೇ ಜ್ವರೋ ಭವೇತ್।
19177016c ತ್ವತ್ಪ್ರಸಾದಾದ್ಧಿ ದೇವೇಶ ವರಮೇನಂ ವೃಣೋಮ್ಯಹಮ್ ।।

ಅಯ್ಯಾ! ನಾನೊಬ್ಬನೇ ಜ್ವರನಿರುವಂತಾಗಲಿ. ಲೋಕದಲ್ಲಿ ಅನ್ಯ ಜ್ವರವು ಇರದಂತಾಗಲಿ. ದೇವೇಶ! ನಿನ್ನ ಪ್ರಸಾದದಿಂದ ಈ ವರವನ್ನು ನಾನು ಕೇಳಿಕೊಳ್ಳುತ್ತಿದ್ದೇನೆ.”

19177017 ದೇವ ಉವಾಚ ।
19177017a ಏವಂ ಭವತು ಭದ್ರಂ ತೇ ಯಥಾ ತ್ವಂ ಜ್ವರ ಕಾಂಕ್ಷಸೇ ।
19177017c ವರಾರ್ಥಿನಾಂ ವರೋ ದೇಯೋ ಭವಾಂಶ್ಚ ಶರಣಂ ಗತಃ ।।

ದೇವನು ಹೇಳಿದನು: “ಜ್ವರ! ನಿನಗೆ ಮಂಗಳವಾಗಲಿ! ನೀನು ಬಯಸಿದಂತೆಯೇ ಆಗಲಿ! ವರಾರ್ಥಿಗಳಿಗೆ ವರವನ್ನು ನೀಡುವುದು ಉಚಿತವಾಗಿದೆ. ನೀನಾದರೋ ನನ್ನ ಶರಣುಬಂದಿದ್ದೀಯೆ.

19177018a ಏಕ ಏವ ಜ್ವರೋ ಲೋಕೇ ಭವಾನಸ್ತು ಯಥಾ ಪುರಾ ।
19177018c ಯೋಽಯಂ ಮಯಾ ಜ್ವರಃ ಸೃಷ್ಟೋ ಮಯ್ಯೇವೈಷ ಪ್ರಲೀಯತಾಮ್ ।।

ಹಿಂದಿನಂತೆ ನೀನೋಬ್ಬನೇ ಜ್ವರನು ಲೋಕದಲ್ಲಿರುತ್ತೀಯೆ. ನಾನು ಸೃಷ್ಟಿಸಿದ ಈ ಜ್ವರವು ನನ್ನಲ್ಲಿಯೇ ಲೀನಗೊಳ್ಳುತ್ತದೆ.””

19177019 ವೈಶಂಪಾಯನ ಉವಾಚ ।
19177019a ಏವಮುಕ್ತೇ ತು ವಚನೇ ಜ್ವರಂ ಪ್ರತಿ ಮಹಾಯಶಾಃ ।
19177019c ಕೃಷ್ಣಃ ಪ್ರಹರತಾಂ ಶ್ರೇಷ್ಠಃ ಪುನರ್ವಾಕ್ಯಮುವಾಚ ಹ ।।

ವೈಶಂಪಾಯನನು ಹೇಳಿದನು: “ಜ್ವರನ ಕುರಿತು ಹೀಗೆ ಮಾತನಾಡಿ ಮಹಾಯಶಸ್ವೀ ಪ್ರಹಾರಮಾಡುವವರಲ್ಲಿ ಶ್ರೇಷ್ಠ ಕೃಷ್ಣನು ಪುನಃ ಇಂತೆಂದನು.

19177020 ವಾಸುದೇವ ಉವಾಚ ।
19177020a ಶೃಣುಷ್ವ ಜ್ವರ ಸಂದೇಶಂ ಯಥಾ ಲೋಕೇ ಚರಿಷ್ಯಸಿ ।
19177020c ಸರ್ವಜಾತಿಷು ವಿಶ್ರಬ್ಧಂ ಯಥಾ ಸ್ಥಾವರಜಂಗಮೇ ।।

ವಾಸುದೇವನು ಹೇಳಿದನು: “ಜ್ವರ! ನೀನು ಲೋಕದಲ್ಲಿ ಸರ್ವಜಾತಿಯ ಸ್ಥಾವರಜಂಗಮಗಳಲ್ಲಿ ಹೇಗೆ ನಿರಾತಂಕನಾಗಿ ನಡೆದುಕೊಳ್ಳುತ್ತೀಯೆ ಎನ್ನುವುದರ ಕುರಿತು ನನ್ನ ಸಂದೇಶವನ್ನು ಕೇಳು.

19177021a ತ್ರಿಧಾ ವಿಭಜ್ಯ ಚಾತ್ಮಾನಂ ಮತ್ಪ್ರಿಯಂ ಯದಿ ಕಾಂಕ್ಷಸೇ ।
19177021c ಚತುಷ್ಪಾದಾನ್ಭಜೈಕೇನ ದ್ವಿತೀಯೇನ ಚ ಸ್ಥಾವರಾನ್ ।।
19177022a ತೃತೀಯೋ ಯಶ್ಚ ತೇ ಭಾಗೋ ಮಾನುಷೇಷೂಪಪತ್ಸ್ಯತೇ ।

ನನಗೆ ಪ್ರಿಯವಾದುದನ್ನು ಮಾಡಲು ಬಯಸುವೆಯಾದರೆ ನೀನು ಮೂರುಭಾಗಗಳಾಗಿ ವಿಭಜನೆಹೊಂದಿ ಒಂದು ಭಾಗದಿಂದ ಚತುಷ್ಪಾದಗಳನ್ನು ಆಶ್ರಯಿಸಿ, ಎರಡನೇ ಭಾಗದಿಂದ ವೃಕ್ಷ ಪರ್ವತಾದಿ ಸ್ಥಾವರ ವಸ್ತುಗಳನ್ನು ಮತ್ತು ಮೂರನೆಯ ಭಾಗದಿಂದ ಮನುಷ್ಯರನ್ನು ಆಶ್ರಯಿಸುತ್ತೀಯೆ.

19177022c ತ್ರಿಧಾಭೂತಂ ವಪುಃ ಕೃತ್ವಾ ಪಕ್ಷಿಷು ತ್ವಂ ಭವ ಜ್ವರ ।।
19177023a ಚತುರ್ಥೋ ಯಸ್ತೃತೀಯಸ್ಯ ಭವಿಷ್ಯತಿ ಸ ತೇ ಧ್ರುವಮ್ ।
19177023c ಏಕಾಂತರಸ್ತೃತೀಯಸ್ತು ಸ ವೈ ಚಾತುರ್ಥಿಕೋ ಜ್ವರಃ ।।

ಜ್ವರ! ಹೀಗೆ ನಿನ್ನ ಸ್ವರೂಪವನ್ನು ಮೂರು ಭಾಗಗಳನ್ನಾಗಿ ಮಾಡಿಕೊಂಡಿರು. ಮೂರನೆಯ ಭಾಗದ ಕಾಲು ಅಂಶದಲ್ಲಿ ನೀನು ಪಕ್ಷಿಗಳಲ್ಲಿ ನಿರಂತರವಾಗಿ ವಾಸಿಸುತ್ತೀಯೆ. ಈ ಮೂರನೆಯ ಭಾಗದ ಜ್ವರವು ಒಂದು ದಿನದ ಅಂತರದಲ್ಲಿ ಬರಬಹುದು (ಏಕಾಂತರ ಜ್ವರ), ಮೂರು ದಿನಗಳ ಅಂತರದಲ್ಲಿ ಬರಬಹುದು (ತೃತೀಯಾಂತರ ಜ್ವರ) ಮತ್ತು ನಾಲ್ಕು ದಿನಗಳ ಅಂತರದಲ್ಲಿ ಬರಬಹುದು (ಚಾತುರ್ಥಿಕ ಜ್ವರ).

19177024a ಮಾನುಷೇಷ್ವಭಿಭೇದೇನ ವಸ ತ್ವಂ ಪ್ರವಿಭಜ್ಯ ವೈ ।
19177024c ಜಾತಿಷ್ವಥಾವಶೇಷಾಸು ನಿವಸ ತ್ವಂ ಶೃಣುಷ್ವ ಮೇ ।।

ಈ ರೀತಿ ನಿನ್ನ ರೂಪವನ್ನು ಭೇದ-ಉಪಭೇದಗಳಾಗಿ ವಿಂಗಡಿಸಿಕೊಂಡು ಮನುಷ್ಯರಲ್ಲಿ ವಾಸಿಸು. ಉಳಿದ ಜೀವಜಾತಿಗಳಲ್ಲಿಯೂ ವಾಸಿಸು. ನನ್ನ ಈ ಮಾತನ್ನು ಕೇಳು.

19177025a ವೃಕ್ಷೇಷು ಕೀಟರೂಪೇಣ ತಥಾ ಸಂಕೋಚಪತ್ರಕಃ ।
19177025c ಪಾಂಡುಪತ್ರಶ್ಚ ವಿಖ್ಯಾತಃ ಫಲೇಷ್ವಾತುರ್ಯಮೇವ ಚ ।।

ವೃಕ್ಷಗಳಲ್ಲಿ ಕೀಟರೂಪದಿಂದ ನೀನು ಸಂಕೋಚಪತ್ರಕ1 ಮತ್ತು ಪಾಂಡುಪತ್ರಕ2 ಎಂಬ ನಾಮಗಳಿಂದ ಹಾಗೂ ಫಲಗಳಲ್ಲಿ ಆತುರ್ಯ3 ಎಂಬ ಹೆಸರಿನಿಂದ ವಿಖ್ಯಾತನಾಗುತ್ತೀಯೆ.

19177026a ಅಪಾಂ ತು ನೀಲಿಕಾಂ ವಿದ್ಯಾಚ್ಛಿಖೋದ್ಭೇದೇನ ಬರ್ಹಿಣಾಮ್ ।
19177026c ಪದ್ಮಿನ್ಯಾದೌ ಹಿಮೋ ಭೂತ್ವಾ ಪೃಥಿವ್ಯಾಮಪಿ ಚೋಷರಃ ।।
19177027a ಗೈರಿಕಃ ಪರ್ವತೇಷ್ವೇವ ಮತ್ಪ್ರಸಾದಾದ್ಭವಿಷ್ಯಸಿ ।

ನೀರಿನಲ್ಲಿ ನೀಲಿಕೆಯನ್ನು ಜ್ವರವೆಂದು ತಿಳಿಯಬೇಕು. ನವಿಲುಗಳ ಶಿಖೆಯು ಒಡೆದುಬರುವುದು ಜ್ವರದ ಸೂಚಕ. ಕಮಲಗಳಲ್ಲಿ ಹಿಮವಾಗಿ ಹಾಗೂ ಭೂಮಿ-ಪರ್ವತಗಳಲ್ಲಿ ಗೈರಿಕವಾಗಿ ನನ್ನ ಕೃಪೆಯಿಂದ ವಾಸಿಸುತ್ತೀಯೆ.

19177027c ಗೋಷ್ವಪಸ್ಮಾರಕೋ ಭೂತ್ವಾ ಖೋರಕಶ್ಚ ಭವಿಷ್ಯಸಿ ।।
19177028a ಏವಂ ತ್ವಂ ಬಹುರೂಪೇಣ ಭವಿಷ್ಯಸಿ ಮಹೀತಲೇ ।

ಗೋವುಗಳಲ್ಲಿ ಅಪಸ್ಮಾರಕವಾಗಿ ಮತ್ತು ಖೋರಕವಾಗಿರುತ್ತೀಯೆ. ಹೀಗೆ ಮಹೀತಲದಲ್ಲಿ ನೀನು ಬಹುರೂಪಗಳಲ್ಲಿರುತ್ತೀಯೆ.

19177028c ದರ್ಶನಾತ್ಸ್ಪರ್ಶನಾಚ್ಚಾಪಿ ಪ್ರಾಣಿನಾಂ ವಧಮೇಷ್ಯಸಿ ।।
19177029a ಋತೇ ದೇವಮನುಷ್ಯಾಣಾಂ ನಾನ್ಯಸ್ತ್ವಾಂ ವಿಸಹಿಷ್ಯತಿ ।

ನೀನು ನಿನ್ನ ದೃಷ್ಟಿ ಮತ್ತು ಸ್ಪರ್ಶನಮಾತ್ರದಿಂದಲೇ ಪ್ರಾಣಿಗಳನ್ನು ವಧಿಸುತ್ತೀಯೆ. ದೇವತೆಗಳು ಮತ್ತು ಮನುಷ್ಯರನ್ನು ಬಿಟ್ಟು ಅನ್ಯ ಯಾರೂ ನಿನ್ನನ್ನು ಸಹಿಸಿಕೊಳ್ಳಲಾರರು.””

19177029 ವೈಶಂಪಾಯನ ಉವಾಚ ।
19177029c ಕೃಷ್ಣಸ್ಯ ವಚನಂ ಶ್ರುತ್ವಾ ಜ್ವರೋ ಹೃಷ್ಟಮನಾ ಹ್ಯಭೂತ್ ।।
19177030c ಪ್ರೋವಾಚ ವಚನಂ ಕಿಂಚಿತ್ಪ್ರಣಮಿತ್ವಾ ಕೃತಾಂಜಲಿಃ ।

ವೈಶಂಪಾಯನನು ಹೇಳಿದನು: “ಕೃಷ್ಣನ ಮಾತನ್ನು ಕೇಳಿ ಜ್ವರನು ಹೃಷ್ಟಮನಸ್ಕನಾದನು. ಅವನು ಕೈಮುಗಿದು ನಮಸ್ಕರಿಸಿ ಕೆಲವು ಮಾತುಗಳನ್ನಾಡಿದನು.

19177030 ಜ್ವರ ಉವಾಚ ।
19177030c ಸರ್ವಜಾತಿಪ್ರಭುತ್ವೇನ ಕೃತೋ ಧನ್ಯೋಽಸ್ಮಿ ಮಾಧವ ।।
19177031a ಭೂಯಶ್ಚ ತೇ ವಚಃ ಕರ್ತುಮಿಚ್ಛಾಮಿ ಪುರುಷರ್ಷಭ ।
19177031c ತದಾಜ್ಞಾಪಯ ಗೋವಿಂದ ಕಿಂ ಕರೋಮಿ ಮಹಾಭುಜ ।।

ಜ್ವರನು ಹೇಳಿದನು: “ಮಾಧವ! ಸರ್ವ ಜೀವಜಾತಿಗಳ ಮೇಲೆ ನನಗೆ ಪ್ರಭುತ್ವವನ್ನು ನೀಡಿ ನನ್ನನ್ನು ಧನ್ಯನಾಗಿಸಿದೆ. ಪುರುಷರ್ಭಭ! ನಾನು ಇನ್ನೂ ಹೆಚ್ಚಿನ ನಿನ್ನ ಮಾತಿನಂತೆ ಮಾಡಲು ಬಯಸುತ್ತೇನೆ. ಗೋವಿಂದ! ಮಹಾಭುಜ! ನಾನೇನು ಮಾಡಬೇಕು ಆಜ್ಞಾಪಿಸು!

19177032a ಅಹಮಸುರಕುಲಪ್ರಮಾಥಿನಾ ತ್ರಿಪುರಹರೇಣ ಹರೇಣ ನಿರ್ಮಿತಃ ।
19177032c ರಣಶಿರಸಿ ವಿನಿರ್ಜಿತಸ್ತ್ವಯಾ ಪ್ರಭುರಸಿ ದೇವ ತವಾಸ್ಮಿ ಕಿಂಕರಃ ।।

ಅಸುರಕುಲಪ್ರಮಥಿ ತ್ರಿಪುರಹರ ಹರನು ನನ್ನನ್ನು ನಿರ್ಮಿಸಿದನು4. ರಣಮೂರ್ಧನಿಯಲ್ಲಿ ನನ್ನನ್ನು ಸೋಲಿಸಿದ ನೀನು ನನ್ನ ಪ್ರಭುವಾಗಿದ್ದೀಯೆ ಮತ್ತು ನಾನು ನಿನ್ನ ಕಿಂಕರನಾಗಿದ್ದೇನೆ.

19177033a ಧನ್ಯೋಸ್ಮನುಗೃಹೀತೋಽಸ್ಮಿ ಯತ್ತ್ವಯಾ ಮತ್ಪ್ರಿಯಂ ಕೃತಮ್ ।
19177033c ಆಜ್ಞಾಪಯ ಪ್ರಿಯಂ ಕಿಂ ತೇ ಚಕ್ರಾಯುಧ ಕರೋಮ್ಯಹಮ್ ।।

ಚಕ್ರಾಯುಧ! ನೀನು ನನಗೆ ಪ್ರಿಯವಾದುದನ್ನು ಮಾಡಿದುದರಿಂದ ನಾನು ಧನ್ಯನಾಗಿದ್ದೇನೆ. ಅನುಗೃಹೀತನಾಗಿದ್ದೇನೆ. ನಿನಗೆ ಪ್ರಿಯವಾದ ಏನನ್ನು ಮಾಡಲಿ? ಆಜ್ಞಾಪಿಸು!””

19177034 ವೈಶಂಪಾಯನ ಉವಾಚ ।
19177034a ಜ್ವರಸ್ಯ ವಚನಂ ಶ್ರುತ್ವಾ ವಾಸುದೇವೋಽಬ್ರವೀದ್ವಚಃ ।
19177034c ಅಭಿಸಂಧಿಂ ಶೃಣುಷ್ವಾದ್ಯ ಯತ್ತ್ವಾಂ ವಕ್ಷ್ಯಾಮಿ ನಿಶ್ಚಯಾತ್ ।।

ವೈಶಂಪಾಯನನು ಹೇಳಿದನು: “ಜ್ವರನ ಮಾತನ್ನು ಕೇಳಿ ವಾಸುದೇವನು ಹೇಳಿದನು: “ನಾನು ಏನನ್ನು ಬಯಸುತ್ತೇನೆ ಕೇಳು. ನಾನು ಹೇಳುವುದನ್ನು ನಿಶ್ಚಿತವಾಗಿ ಕೇಳು.”

19177035 ಶ್ರೀಭಗವಾನುವಾಚ ।
19177035a ಮಹಾಹವೇ ತವ ಮಮ ಚ ದ್ವಯೋರಿಮಂ ಪರಾಕ್ರಮಂ ಭುಜಬಲಕೇವಲಾಸ್ತ್ರಯೋಃ ।
19177035c ಪ್ರಣಮ್ಯ ಮಾಮೇಕಮನಾಃ ಪಠೇತ್ತು ಯಃ ಸ ವೈ ಭವೇಜ್ಜ್ವರ ವಿಗತಜ್ವರೋ ನರಃ ।।

ಶ್ರೀಭಗವಂತನು ಹೇಳಿದನು: “ಈ ಮಹಾಯುದ್ಧದಲ್ಲಿ ಕೇವಲ ಪರಾಕ್ರಮ ಮತ್ತು ಭುಜಬಲಗಳೇ ನಮ್ಮಿಬ್ಬರ ಅಸ್ತ್ರಗಳಾಗಿದ್ದವು. ಜ್ವರ! ನನ್ನನ್ನು ನಮಸ್ಕರಿಸಿ ಏಕಮನಸ್ಕನಾಗಿ ಇದನ್ನು ಪಠಿಸುವ ನರನು ವಿಗತಜ್ವರನಾಗುತ್ತಾನೆ.

191770036 ತ್ರಿಪಾದ್ಭಸ್ಮಪ್ರಹರಣಸ್ತ್ರಿಶಿರಾ ನವಲೋಚನಃ ।
19177036c ಸ ಮೇ ಪ್ರೀತಃ ಸುಖಂ ದದ್ಯಾತ್ಸರ್ವಾಮಯಪತಿರ್ಜ್ವರಃ ।।

“ಮೂರುಪಾದಗಳಿರುವ, ಭಸ್ಮವೇ ಆಯುಧವಾಗಿರುವ, ಮೂರು ಶಿರಗಳುಳ್ಳ ಮತ್ತು ಒಂಭತ್ತು ಕಣ್ಣುಗಳುಳ್ಳ ಆ ಸಮಸ್ತ ರೋಗಗಳ ಅಧಿಪತಿ ಜ್ವರನು ಪ್ರಸನ್ನನಾಗಿ ನನಗೆ ಸುಖವನ್ನೀಯಲಿ.

19177037a ಆದ್ಯಂತವಂತಃ ಕವಯಃ ಪುರಾಣಾಃ ಸೂಕ್ಷ್ಮಾ ಬೃಹಂತೋಽಪ್ಯನುಶಾಸಿತಾರಃ ।
19177037c ಸರ್ವಾಂಜ್ವರಾನ್ಘ್ನಂತು ಮಮಾನಿರುದ್ಧ- ಪ್ರದ್ಯುಮ್ನಸಂಕರ್ಷಣವಾಸುದೇವಾಃ ।।

ಜಗತ್ತಿನ ಆದಿ-ಅಂತ್ಯಗಳ ಕಾರಣರಾದ, ಜ್ಞಾನಿ, ಪುರಾಣಪುರುಷರಾದ, ಸೂಕ್ಷ್ಮಸ್ವರೂಪೀ, ಪರಮ ಮಹಾನ್, ಎಲ್ಲರ ಶಾಸಕರಾದ ಅನಿರುದ್ಧ, ಪ್ರದ್ಯುಮ್ನ, ಸಂಕರ್ಷಣ, ವಾಸುದೇವರು ನನ್ನ ಸರ್ವಜ್ವರಗಳನ್ನೂ ಹೋಗಲಾಡಿಸಲಿ!””

19177038a ಏವಮುಕ್ತಸ್ತು ಕೃಷ್ಣೇನ ಜ್ವರಃ ಸಾಕ್ಷಾನ್ಮಹಾತ್ಮನಾ ।
19177038c ಪ್ರೋವಾಚ ಯದುಶಾರ್ದೂಲಮೇವಮೇತದ್ಭವಿಷ್ಯತಿ ।।

ಸಾಕ್ಷಾತ್ ಮಹಾತ್ಮಾ ಕೃಷ್ಣನು ಹೀಗೆ ಹೇಳಲು ಜ್ವರನು ಅದು ಹೀಗೆಯೇ ಆಗುತ್ತದೆ ಎಂದು ಯದುಶಾರ್ದೂಲನಿಗೆ ಉತ್ತರಿಸಿದನು.

19177039a ವರಂ ಲಬ್ಧ್ವಾ ಜ್ವರೋ ಹೃಷ್ಟಃ ಕೃಷ್ಣಾಚ್ಚ ಸಮಯಂ ಪುನಃ ।
19177039c ಪ್ರಣಮ್ಯ ಶಿರಸಾ ಕೃಷ್ಣಮಪಕ್ರಾಂತಸ್ತತೋ ರಣಾತ್ ।।

ಕೃಷ್ಣನಿಂದ ವರವನ್ನು ಪಡೆದು ಮತ್ತು ಅವನೊಡನೆ ಒಪ್ಪಂದ ಮಾಡಿಕೊಂಡು ಹೃಷ್ಟನಾದ ಜ್ವರನು ಕೃಷ್ಣನಿಗೆ ಶಿರಸಾ ವಂದಿಸಿ ರಣಭೂಮಿಯಿಂದ ದೂರ ಹೊರಟುಹೋದನು.”

ಸಮಾಪ್ತಿ

ಇತಿ ಶ್ರೀಮಹಾಭಾರತೇ ಖಿಲೇಷು ಹರಿವಂಶೇ ವಿಷ್ಣುಪರ್ವಣಿ ಜ್ವರಕೃಷ್ಣಸಂವಾದೇ ಸಪ್ತಸಪ್ತತ್ಯಧಿಕಶತತಮೋಽಧ್ಯಾಯಃ ।।


  1. ಎಲೆಗಳು ಮುದುಡಿಕೊಳ್ಳುವಂತೆ ಮಾಡುವ ಜ್ವರ (ಗೀತಾ ಪ್ರೆಸ್). ↩︎

  2. ಎಲೆಗಳನ್ನು ಬಿಳಿಯಾಗಿಸುವ ಜ್ವರ (ಗೀತಾ ಪ್ರೆಸ್). ↩︎

  3. ಹಣ್ಣುಗಳನ್ನು ಒಣಗಿಸುವ ಜ್ವರ (ಗೀತಾ ಪ್ರೆಸ್). ↩︎

  4. ಶಿವನಿಂದಾದ ಜ್ವರೋತ್ಪತ್ತಿ ಕಥನವು ಶಾಂತಿಪರ್ವದ ಮೋಕ್ಷಧರ್ಮಪರ್ವದಲ್ಲಿ ಅಧ್ಯಾಯ 274ರಲ್ಲಿ ಬಂದಿದೆ. ↩︎