176: ಕೃಷ್ಣಜ್ವರಯುದ್ಧಃ

ಪ್ರವೇಶ

।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।

ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ

ಶ್ರೀ ಮಹಾಭಾರತ

ಖಿಲಭಾಗೇ ಹರಿವಂಶಃ

ವಿಷ್ಣು ಪರ್ವ

ಅಧ್ಯಾಯ 176

ಸಾರ

ಕೃಷ್ಣ-ಬಲರಾಮ-ಪ್ರದ್ಯುಮ್ನರು ಶೋಣಿತಪುರವನ್ನು ತಲುಪಲು ಪುರದ ಗಡಿಯಲ್ಲಿಯೇ ಅಗ್ನಿಗಣಗಳೊಂದಿಗೆ ಅವರ ಯುದ್ಧ ಮತ್ತು ಅಗ್ನಿಗಣಗಳ ಪಲಾಯನ (1-40). ಶೋಣಿತಪುರದಲ್ಲಿ ಬಾಣನ ಸೇನೆಗಳೊಂದಿಗೆ ಅವರ ಯುದ್ಧ, ಜ್ವರನೊಡನೆ ಬಲರಾಮ-ಕೃಷ್ಣರ ಯುದ್ಧ (41-95).

19176001 ವೈಶಂಪಾಯನ ಉವಾಚ ।
19176001a ತತಸ್ತೂರ್ಯನಿನಾದೈಶ್ಚ ಶಂಖಾನಾಂ ಚ ಮಹಾಸ್ವನೈಃ ।
19176001c ಬಂದಿಮಾಗಧಸೂತಾನಾಂ ಸ್ತವೈಶ್ಚಾಪಿ ಸಹಸ್ರಶಃ ।।
19176002a ಸ ತೂನ್ಮುಖೈರ್ಜಯಾಶೀರ್ಭಿಃ ಸ್ತೂಯಮಾನೋ ಹಿ ಮಾನವೈಃ ।
19176002c ಬಭಾರ ರೂಪಂ ಸೋಮಾರ್ಕಶುಕ್ರಾಣಾಂ ಪ್ರತಿಮಂ ತದಾ ।।

ವೈಶಂಪಾಯನನು ಹೇಳಿದನು: “ಅನಂತರ ತೂರ್ಯನಿನಾದಗಳಿಂದ ಮತ್ತು ಶಂಖಗಳ ಮಹಾಸ್ವನಗಳಿಂದ, ಸಹಸ್ರಾರು ಬಂದಿ-ಮಾಗಧ-ಸೂತರ ಸ್ತವಗಳಿಂದ ಮತ್ತು ಮುಖಗಳನ್ನು ಮೇಲಕ್ಕೆತ್ತಿದ ಮನುಷ್ಯರ ಸ್ತುತಿಗಳೊಡನೆ ಕೃಷ್ಣನು ಚಂದ್ರ-ಸೂರ್ಯ-ಇಂದ್ರರ ಸಮಾನ ತೇಜಸ್ವೀ ರೂಪವನ್ನು ಧರಿಸಿದನು.

19176003a ಅತೀವ ಶುಶುಭೇ ರೂಪಂ ವ್ಯೋಮ್ನಿ ತಸ್ಯೋತ್ಪತಿಷ್ಯತಃ ।
19176003c ವೈನತೇಯಸ್ಯ ಭದ್ರಂ ತೇ ಬೃಂಹಿತಂ ಹರಿತೇಜಸಾ ।।

ನಿನಗೆ ಮಂಗಳವಾಗಲಿ! ಆಕಾಶಕ್ಕೆ ಏರುತ್ತಿದ್ದ ವೈನತೇಯನ ರೂಪವು ಹರಿಯ ತೇಜಸ್ಸಿನಿಂದ ವ್ಯಾಪ್ತಗೊಂಡು ಅಧಿಕವಾಗಿ ಶೋಭಿಸಿತು.

19176004a ಅಥಾಷ್ಟಬಾಹುಃ ಕೃಷ್ಣಾಸ್ತು ಪರ್ವತಾಕಾರಸಂನಿಭಃ ।
19176004c ವಿಬಭೌ ಪುಂಡರೀಕಾಕ್ಷೋ ವಿಕಾಂಕ್ಷನ್ಬಾಣಸಂಕ್ಷಯಮ್ ।।

ಆಗ ಪುಂಡಾರೀಕಾಕ್ಷ ಕೃಷ್ಣನು ಬಾಣನ ನಾಶವನ್ನು ಬಯಸಿ ಅಷ್ಟಬಾಹುಗಳನ್ನು ಧರಿಸಿ ಪರ್ವತಾಕಾರನಾಗಿ ಬೆಳೆದನು.

19176005a ಅಸಿಚಕ್ರಗದಾಬಾಣಾ ದಕ್ಷಿಣಂ ಪಾರ್ಶ್ವಮಾಸ್ಥಿತಾಃ ।
19176005c ಚರ್ಮ ಶಾಙ್ರಂ1 ತಥಾ ಚಾಪಂ ಶಂಖಂ ಚೈವಾಸ್ಯ ವಾಮತಃ ।।

ಖಡ್ಗ, ಚಕ್ರ ಗದೆ ಮತ್ತು ಬಾಣಗಳು ಅವನ ಎಡ ಕೈಗಳಲ್ಲಿದ್ದವು. ಗುರಾಣಿ, ಧನುಸ್ಸು, ಶಾಂಙ್ರ ಮತ್ತು ಶಂಖಗಳು ಅವನ ಬಲಗೈಗಳಲ್ಲಿದ್ದವು.

19176006a ಶೀರ್ಷಾಣಾಂ ವೈ ಸಹಸ್ರಂ ತು ವಿಹಿತಂ ಶಾಂಙ್ರಧನ್ವನಾ ।
19176006c ಸಹಸ್ರಂ ಚೈವ ಕಾಯಾನಾಂ ವಹನ್ಸಂಕರ್ಷಣಸ್ತದಾ ।।

ಶಾಂಙ್ರಧನ್ವಿಯು ಸಹಸ್ರಾರು ಶಿರಗಳನ್ನು ಧರಿಸಿದನು ಮತ್ತು ಸಂಕರ್ಷಣನು ಸಹಸ್ರಾರು ಶರೀರಗಳನ್ನು ಧರಿಸಿದನು.

19176007a ಶ್ವೇತಪ್ರಹರಣೋಽಧೃಷ್ಯಃ ಕೈಲಾಸ ಇವ ಶೃಂಗವಾನ್ ।
19176007c ಪ್ರಸ್ಥಿತೋ ಗರುಡೇನಾಥ ಉದ್ಯನ್ನಿವ ದಿವಾಕರಃ2।।

ಶ್ವೇತ ಆಯುಧಯುಕ್ತ ಅಜೇಯ ವೀರ ಬಲರಾಮನು ಶಿಖರಯುಕ್ತ ಕೈಲಾಸದಂತೆ ಶೋಭಿಸುತ್ತಿದ್ದನು. ಅವನು ಉದಯಿಸುತ್ತಿರುವ ದಿವಾಕರನಂತೆ ಗರುಡನ ಮೇಲೆ ಪ್ರಕಾಶಿಸುತ್ತಿದ್ದನು.

19176008a ಸನತ್ಕುಮಾರಸ್ಯ ವಪುಃ ಪ್ರಾದುರಾಸೀನ್ಮಹಾತ್ಮನಃ ।
19176008c ಪ್ರದ್ಯುಮ್ನಸ್ಯ ಮಹಾಬಾಹೋಃ ಸಂಗ್ರಾಮೇ ವಿಕ್ರಮಿಷ್ಯತಃ ।।

ಸಂಗ್ರಾಮದಲ್ಲಿ ಪರಾಕ್ರಮ ತೋರಿಸಲು ಉದ್ಯುಕ್ತನಾದ ಮಹಾಬಾಹು ಪ್ರದ್ಯುಮ್ನನ ಶರೀರದಲ್ಲಿ ಮಹಾತ್ಮಾ ಸನತ್ಕುಮಾರನ ರೂಪವು ಪ್ರಕಟಗೊಂಡಿತು.

19176009a ಸ ಪಕ್ಷಬಲವಿಕ್ಷೇಪೈರ್ವಿಧುನ್ವನ್ಪರ್ವತಾನ್ಬಹೂನ್ ।
19176009c ಜಗಾಮ ಮಾರ್ಗಂ ಬಲವಾನ್ವಾತಸ್ಯ ಪ್ರತಿಷೇಧಯನ್ ।।

ಬಾಲವಾನ್ ಗರುಡನು ತನ್ನ ರೆಕ್ಕೆಗಳನ್ನು ಬಲಪೂರ್ವಕ ಬಡಿದು ಅನೇಕ ಪರ್ವತಗಳನ್ನು ನಡುಗಿಸಿದನು ಮತ್ತು ವಾಯುವಿನ ಮಾರ್ಗವನ್ನು ತಡೆಯುತ್ತಾ ಮುಂದೆ ಸಾಗಿದನು.

19176010a ಅಥ ವಾಯೋರತಿಗತಿಮಾಸ್ಥಾಯ ಗರುಡಸ್ತದಾ ।
19176010c ಸಿದ್ಧಚಾರಣಸಂಘಾನಾಂ ಶುಭಂ ಮಾರ್ಗಮವಾತರತ್ ।।

ಅನಂತರ ವಾಯುವಿನ ವೇಗಕ್ಕಿಂತಲೂ ಹೆಚ್ಚಿನ ವೇಗದಲ್ಲಿ ಹೋಗುತ್ತಾ ಗರುಡನು ಸಿದ್ಧಚಾರಣಗಣಗಳ ಶುಭ ಮಾರ್ಗವನ್ನು ತಲುಪಿದನು.

19176011a ಅಥ ರಾಮೋಽಬ್ರವೀದ್ವಾಕ್ಯಂ ಕೃಷ್ಣಮಪ್ರತಿಮಂ ರಣೇ ।
19176011c ಸ್ವಾಭಿಃ ಪ್ರಭಾಭಿರ್ಹೀನಾಃ ಸ್ಮ ಕೃಷ್ಣ ಕಸ್ಮಾದಪೂರ್ವವತ್ ।।

ಆಗ ರಾಮನು ರಣಭೂಮಿಯಲ್ಲಿ ಅಪ್ರತಿಮನಾದ ಕೃಷ್ಣನಿಗೆ ಹೇಳಿದನು: “ಕೃಷ್ಣ! ನಾವು ನಮ್ಮ ಸ್ವಾಭಾವಿಕ ಪ್ರಭೆಯನ್ನು ಕಳೆದುಕೊಂಡು ಹಿಂದಿನಂತಿರದಂತೆ ಹೀಗೆ ಹೇಗೆ ಆದೆವು?

19176012a ಸರ್ವೇ ಕನಕವರ್ಣಾಭಾಃ ಸಂವೃತ್ತಾಃ ಸ್ಮ ನ ಸಂಶಯಃ ।
19176012c ಕಿಮಿದಂ ಬ್ರೂಹಿ ನಸ್ತತ್ತ್ವಂ ಕಿಂ ಮೇರೋಃ ಪಾರ್ಶ್ವಗಾ ವಯಮ್ ।।

ನಮ್ಮೆಲ್ಲರ ಅಂಗಕಾಂತಿಯು ಸ್ವರ್ಣದ ಸಮಾನವಾಗಿಬಿಟ್ಟಿದೆ ಎನ್ನುವುದರಲ್ಲಿ ಸಂಶಯವಿಲ್ಲ. ಇದು ಹೇಗಾಯಿತು? ಇದನ್ನು ನಮಗೆ ಸರಿಯಾಗಿ ಹೇಳು. ನಾವು ಮೇರು ಪರ್ವತದ ಹತ್ತಿರ ಹೋಗುತ್ತಿದ್ದೇವೆಯೇ?”

19176013 ಶ್ರೀಭಗವಾನುವಾಚ ।
19176013a ಮನ್ಯೇ ಬಾಣಸ್ಯ ನಗರಮಭ್ಯಾಸಸ್ಥಮರಿಂದಮ ।
19176013c ರಕ್ಷಾರ್ಥಂ ತಸ್ಯ ನಿರ್ಯಾತೋ ವಹ್ನಿರೇಷ ಸ್ಥಿತೋ ಜ್ವಲನ್ ।।

ಶ್ರೀಭಗವಂತನು ಹೇಳಿದನು: “ಅರಿಂದಮ! ಬಾಣನ ನಗರಿಯು ಹತ್ತಿರದಲ್ಲಿಯೇ ಇದೆ ಅನ್ನಿಸುತ್ತಿದೆ. ಅವನ ರಕ್ಷಣೆಗಾಗಿ ಅಗ್ನಿಯು ಪ್ರಜ್ವಲಿಸುತ್ತಾ ನಗರದ ಹೊರಬಂದು ನಿಂತಿದ್ದಾನೆ.

19176014a ಅಗ್ನೇರಾಹವನೀಯಸ್ಯ ಪ್ರಭಯಾ ಸ್ಮ ಸಮಾಹತಾಃ ।
19176014c ತೇನ ನೋ ವರ್ಣವೈರೂಪ್ಯಮಿದಂ ಜಾತಂ ಹಲಾಯುಧ ।।

ಹಲಾಯುಧ! ನಾವು ಆಹವನೀಯ ಅಗ್ನಿಯ ಪ್ರಭೆಯಿಂದ ಆಹತರಾಗಿದ್ದೇವೆ. ಇದರಿಂದಲೇ ನಮ್ಮ ಅಂಗಕಾಂತಿಯಲ್ಲಿ ಬದಲಾವಣೆ ಉಂಟಾಗಿದೆ.”

19176015 ಶ್ರೀರಾಮ ಉವಾಚ ।
19176015a ಯದಿ ಸ್ಮ ಸನ್ನಿಕರ್ಷಸ್ಥಾ ಯದಿ ನಿಷ್ಪ್ರಭತಾಂ ಗತಾಃ ।
19176015c ತದ್ವಿಧತ್ಸ್ವ ಸ್ವಯಂ ಬುದ್ಧ್ಯಾ ಯದತ್ರಾನಂತರಂ ಹಿತಮ್ ।।

ಶ್ರೀರಾಮನು ಹೇಳಿದನು: “ಒಂದುವೇಳೆ ನಾವು ಬಾಣನ ನಗರಿಯ ಹತ್ತಿರ ಬಂದಿರುವುದರಿಂದ ನಿಷ್ಪ್ರಭೆಯುಳ್ಳವರಾಗಿದ್ದೇವೆ ಎಂದಾದರೆ, ನಮಗೆ ಈಗ ಯಾವುದು ಹಿತ ಎನ್ನುವುದನ್ನು ನಿನ್ನ ಬುದ್ಧಿಯನ್ನು ಬಳಸಿ ತಿಳಿಸು.”

19176016 ಶ್ರೀಭಗವಾನುವಾಚ ।
19176016a ಕುರುಷ್ವ ವೈನತೇಯ ತ್ವಂ ಯಚ್ಚ ಕಾರ್ಯಮನಂತರಮ್ ।
19176016c ತ್ವಯಾ ವಿಧಾನೇ ವಿಹಿತೇ ಕರಿಷ್ಯಾಮ್ಯಹಮುತ್ತಮಮ್ ।।

ಶ್ರೀಭಗವಂತನು ಹೇಳಿದನು: “ವೈನತೇಯ! ನಂತರದ ಕಾರ್ಯವನ್ನು ನೀನೇ ಮಾಡು. ನಿನ್ನ ವಿಧಾನದಿಂದ ಈ ಅಗ್ನಿಯನ್ನು ನಿವಾರಿಸಿದ ನಂತರ ನಾನು ನನ್ನ ಉತ್ತಮ ಪರಾಕ್ರಮವನ್ನು ಪ್ರಕಟಿಸುತ್ತೇನೆ.””

19176017 ವೈಶಂಪಾಯನ ಉವಾಚ ।
19176017a ಏತಚ್ಛ್ರುತ್ವಾ ತು ಗರುಡೋ ವಾಸುದೇವಸ್ಯ ಭಾಷಿತಮ್ ।
19176017c ಚಕ್ರೇ ಮುಖಸಹಸ್ರಂ ಹಿ ಕಾಮರೂಪೀ ಮಹಾಬಲಃ ।।

ವೈಶಂಪಾಯನನು ಹೇಳಿದನು: “ವಾಸುದೇವನಾಡಿದುದನ್ನು ಕೇಳಿದ ಕಾಮರೂಪೀ ಮಹಾಬಲ ಗರುಡನು ಸಹಸ್ರಾರು ಮುಖಗಳನ್ನು ಮಾಡಿಕೊಂಡನು.

19176018a ಗಂಗಾಮುಪಾಗಮತ್ತೂರ್ಣಂ ವೈನತೇಯೋ ಮಹಾಬಲಃ ।
19176018c ಆಪ್ಲುತ್ಯಾಕಾಶಗಂಗಾಯಾಮಾಪೀಯ ಸಲಿಲಂ ಬಹು ।।
19176019a ಪ್ರವವರ್ಷೋಪರಿ ಗತೋ ವೈನತೇಯಃ ಪ್ರತಾಪವಾನ್ ।
19176019c ತೇನಾಗ್ನಿಂ ಶಮಯಾಮಾಸ ಬುದ್ಧಿಮಾನ್ವಿನತಾತ್ಮಜಃ ।।

ಆಗ ಮಹಾಬಲ ಪ್ರತಾಪವಾನ್ ಬುದ್ಧಿಮಾನ್ ವಿನತೆಯ ಮಗ ವೈನತೇಯನು ಕ್ಷಣಮಾತ್ರದಲ್ಲಿ ಗಂಗೆಗೆ ಹೋಗಿ ಆಕಾಶಗಂಗೆಯಲ್ಲಿ ಇಳಿದು ಬಹಳಷ್ಟು ಜಲವನ್ನು ಹೊತ್ತು ತಂದು ಅಗ್ನಿಯ ಮೇಲೆ ಸುರಿಸಿ ಆ ಅಗ್ನಿಯನ್ನು ಶಾಂತಗೊಳಿಸಿದನು.

19176020a ಅಗ್ನಿರಾಹವನೀಯಸ್ತು ತತಃ ಶಾಂತಿಮುಪಾಗಮತ್ ।
19176020c ತಂ ದೃಷ್ಟ್ವಾಽಽಹವನೀಯಂ ತು ಶಾಂತಮಾಕಾಶಗಂಗಯಾ ।
19176020e ಪರಮಂ ವಿಸ್ಮಯಂ ಗತ್ವಾ ಸುಪರ್ಣೋ ವಾಕ್ಯಮಬ್ರವೀತ್ ।।

ಆಗ ಆಹವನೀಯ ಅಗ್ನಿಯು ಶಾಂತವಾಯಿತು. ಆಕಾಶಗಂಗೆಯಿಂದ ಆಹವನೀಯ ಅಗ್ನಿಯು ಶಾಂತವಾದುದನ್ನು ಕಂಡು ಪರಮ ವಿಸ್ಮಿತನಾದ ಸುಪರ್ಣನು ಹೇಳಿದನು:

19176021a ಅಹೋ ವೀರ್ಯಮಥಾಗ್ನೇಸ್ತು ಯೋ ದಹೇದ್ಯುಗಸಂಕ್ಷಯೇ ।
19176021c ಯದೇವ ವರ್ಣವೈರೂಪ್ಯಂ ಚಕ್ರೇ ಕೃಷ್ಣಸ್ಯ ಧೀಮತಃ ।।

“ಅಹೋ ಅಗ್ನಿಯ ವೀರ್ಯವೇ! ಯುಗಸಂಕ್ಷಯದಲ್ಲಿ ಎಲ್ಲವನ್ನೂ ದಹಿಸುವ ಅವನು ಧೀಮಂತ ಕೃಷ್ಣನ ವರ್ಣರೂಪವನ್ನೇ ಬದಲಿಸಿಬಿಟ್ಟನಲ್ಲ!

19176022a ತ್ರಯಸ್ತ್ರಯಾಣಾಂ ಲೋಕಾನಾಂ ಪರ್ಯಾಪ್ತಾ ಇತಿ ಮೇ ಮತಿಃ ।
19176022c ಕೃಷ್ಣಃ ಸಂಕರ್ಷಣಶ್ಚೈವ ಪ್ರದ್ಯುಮ್ನಶ್ಚ ಮಹಾಬಲಃ ।।

ನನ್ನ ಅಭಿಪ್ರಾಯದಲ್ಲಿ ಕೃಷ್ಣ, ಸಂಕರ್ಷಣ ಮತ್ತು ಮಹಾಬಲ ಪ್ರದ್ಯುಮ್ನ ಈ ಮೂವರು ಮೂರು ಲೋಕಗಳನ್ನೂ ಎದುರಿಸಲು ಪರ್ಯಾಪ್ತರು.”

19176023a ತತಃ ಪ್ರಶಾಂತೇ ದಹನೇ ಸಂಪ್ರತಸ್ಥೇ ಸ ಪಕ್ಷಿರಾಟ್ ।
19176023c ಸ್ವಪಕ್ಷಬಲವಿಕ್ಷೇಪಂ ಕುರ್ವನ್ಘೋರಂ ಮಹಾಸ್ವನಮ್ ।।

ಅಗ್ನಿಯು ಶಾಂತವಾಗಲು ಪಕ್ಷಿರಾಜನು ತನ್ನ ರೆಕ್ಕೆಗಳನ್ನು ಬಲಪೂರ್ವಕವಾಗಿ ಬಡಿದು ಭಯಂಕರ ಮತ್ತು ಮಹಾನ್ ಕೋಲಾಹಲಗೈಯುತ್ತಾ ಮುಂದುವರೆದನು.

19176024a ತಂ ದೃಷ್ಟ್ವಾ ವಿಸ್ಮಯಂ ತತ್ರ ರುದ್ರಸ್ಯಾನುಚರಾಗ್ನಯಃ ।
19176024c ಆಸ್ಥಿತಾ ಗರುಡಂ ಹ್ಯೇತೇ ನಾನಾರೂಪಾ ಭಯಾವಹಾಃ ।।
19176025a ಕಿಮರ್ಥಮಿಹ ಸಂಪ್ರಾಪ್ತಾಃ ಕೇ ವಾಪೀಮೇ ಜನಾಸ್ತ್ರಯಃ ।

ಅಲ್ಲಿ ಅವನನ್ನು ನೋಡಿ ವಿಸ್ಮಿತರಾದ ರುದ್ರನ ಅನುಚರ ಅಗ್ನಿಗಣಗಳು ಯೋಚಿಸಿದವು: “ನಾನಾರೂಪಗಳನ್ನು ಧರಿಸಬಲ್ಲ ಭಯಾವಹ ಗರುಡನು ಇಲ್ಲಿಗೇಕೆ ಬಂದಿದ್ದಾನೆ? ಮತ್ತು ಈ ಮೂವರು ಪುರುಷರು ಯಾರು?”

19176025c ನಿಶ್ಚಯಂ ನಾಧಿಗಚ್ಛಂತಿ ತೇ ಗಿರಿವ್ರಜವಹ್ನಯಃ ।।
19176026a ಪ್ರಾವರ್ತಯಂಶ್ಚ ಸಂಗ್ರಾಮಂ ತೈಸ್ತ್ರಿಭಿಃ ಸಹ ಯಾದವೈಃ ।

ಅದನ್ನು ನಿಶ್ಚಯಿಸಲಾಗದೇ ಗಿರಿಯಲ್ಲಿದ್ದ ಅಗ್ನಿಗಳು ಆ ಮೂರು ಯಾದವರೊಂದಿಗೆ ಸಂಗ್ರಾಮವನ್ನು ನಡೆಸಿದರು.

19176026c ತೇಷಾಂ ಯುದ್ಧಪ್ರಸಕ್ತಾನಾಂ ಸಂನಾದಃ ಸುಮಹಾನಭೂತ್ ।।
19176027a ತಂ ಚ ಶ್ರುತ್ವಾ ಮಹಾನಾದಂ ಸಿಂಹಾನಾಮಿವ ಗರ್ಜತಾಮ್।
19176027c ಅಥಾಂಗಿರಾಃ ಸ್ವಪುರುಷಂ ಪ್ರೇಷಯಾಮಾಸ ಬುದ್ಧಿಮಾನ್ ।।

ಯುದ್ಧಪ್ರಸಕ್ತರಾದ ಅವರಲ್ಲಿ ಮಹಾ ಸಿಂಹನಾದವುಂಟಾಯಿತು. ಸಿಂಹಗಳಂತೆ ಗರ್ಜಿಸುತ್ತಿದ್ದ ಅವರ ಆ ಮಹಾನಾದವನ್ನು ಕೇಳಿ ಬುದ್ಧಿಮಾನ್ ಅಂಗಿರನು ತನ್ನ ಓರ್ವ ಪುರುಷನನ್ನು ಅಲ್ಲಿಗೆ ಕಳುಹಿಸಿದನು.

19176028a ಯತ್ರ ತದ್ವರ್ತತೇ ಯುದ್ಧಂ ತತ್ರ ಗಚ್ಛಸ್ವ ಮಾ ಚಿರಮ್ ।
19176028c ದೃಷ್ಟ್ವಾ ತತ್ಸರ್ವಮಾಗಚ್ಛ ಇತ್ಯುಕ್ತಃ ಪ್ರಹಿತಸ್ತ್ವರನ್ ।।

“ಆ ಯುದ್ಧವು ನಡೆಯುತ್ತಿರುವಲ್ಲಿಗೆ ಶೀಘ್ರವೇ ಹೋಗಿ ನೋಡಿ ಎಲ್ಲವನ್ನೂ ಬಂದು ತಿಳಿಸು!” ಎಂದು ಹೇಳಿ ಕಳುಹಿಸಿದನು.

19176029a ತಥೇತ್ಯುಕ್ತ್ವಾ ಸ ತದ್ಯುದ್ಧಂ ವರ್ತಮಾನಮವೈಕ್ಷತ ।
19176029c ಅಗ್ನೀನಾಂ ವಾಸುದೇವೇನ ಸಂಸಕ್ತಾನಾಂ ಮಹಾಮೃಧೇ ।।

ಹಾಗೆಯೇ ಆಗಲೆಂದು ಹೇಳಿ ಆ ಪುರುಷನು ವಾಸುದೇವನೊಂದಿಗೆ ಮಹಾಯುದ್ಧದಲ್ಲಿ ತೊಡಗಿದ್ದ ಅಗ್ನಿಗಳನ್ನು ನೋಡಿದನು.

19176030a ತೇ ಜಾತವೇದಸಃ ಸರ್ವೇ ಕಲ್ಮಾಷಃ ಕುಸುಮಸ್ತಥಾ ।
19176030c ದಹನಃ ಶೋಷಣಶ್ಚೈವ ತಪನಶ್ಚ ಮಹಾಬಲಃ ।।
19176031a ಸ್ವಾಹಾಕಾರಸ್ಯ ವಿಷಯೇ ಪ್ರಖ್ಯಾತಾಃ ಪಂಚ ವಹ್ನಯಃ ।

ಅವರೆಲ್ಲರೂ ಸ್ವಾಹಾಕಾರ ವಿಷಯಕ ಅಗ್ನಿಗಳೆಂದು ಪ್ರಖ್ಯಾತರಾದ ಐದು ಜಾತವೇದ ಅಗ್ನಿಗಳಾಗಿದ್ದರು: ಕಲ್ಮಾಷ, ಕುಸುಮ, ದಹನ, ಶೋಷಣ, ಮತ್ತು ಮಹಾಬಲ ತಪನ.

19176031c ಅಥಾಪರೇ ಮಹಾಭಾಗಾಃ ಸ್ವೈರನೀಕೈರ್ವ್ಯವಸ್ಥಿತಾಃ ।।
19176032a ಪಿಠರಃ ಪತಗಃ ಸ್ವರ್ಣಃ ಶ್ವಾಗಾಧೋ ಭ್ರಾಜ ಏವ ಚ ।
19176032c ಸ್ವಧಾಕಾರಾಶ್ರಯಾಃ ಪಂಚ ಅಯುದ್ಧ್ಯಂಸ್ತೇಽಪಿ ಚಾಗ್ನಯಃ ।।

ಅವರಲ್ಲದೇ ಇತರ ಮಹಾಭಾಗ ಸೈನಿಕರೂ ಅಲ್ಲಿ ಜೊತೆಗಿದ್ದರು: ಪಿಠರ, ಪತಗ, ಸ್ವರ್ಣ, ಶ್ವಾಗಾಧ, ಮತ್ತು ಭ್ರಾಜ. ಸ್ವಾಧಾಕಾರಾಶ್ರಯರಾಗಿದ್ದ ಈ ಐದು ಅಗ್ನಿಗಳೂ ಕೂಡ ಯುದ್ಧಮಾಡುತ್ತಿದ್ದರು.

19176033a ಜ್ಯೋತಿಷ್ಟೋಮವಿಭಾಗೌ ಚ ವಷಟ್ಕಾರಾಶ್ರಯೌ ಪುನಃ ।
19176033c ದ್ವಾವಗ್ನೀ ಸಂಪ್ರಯುಧ್ಯೇತೇ ಮಹಾತ್ಮಾನೌ ಮಹಾದ್ಯುತೀ ।।

ಪುನಃ ವಷಟ್ಕಾರದ ಆಶ್ರಯದಲ್ಲಿರುವ ಇಬ್ಬರು ಮಹಾತ್ಮಾ ಮಹಾದ್ಯುತಿ ಅಗ್ನಿಗಳು – ಜ್ಯೋತಿಷ್ಟೋಮ ಮತ್ತು ವಿಭಾಗ – ಇವರೂ ಅಲ್ಲಿದ್ದರು.

19176034a ಆಗ್ನೇಯಂ ರಥಮಾಸ್ಥಾಯ ಶರಮುದ್ಯಮ್ಯ ಭಾಸ್ವರಮ್ ।
19176034c ತಯೋರ್ಮಧ್ಯೇಽಂಗಿರಾಶ್ಚೈವ ಮಹರ್ಷಿರ್ವಿಬಭೌ ರಣೇ ।।

ಅವರ ಮಧ್ಯೆ ಮಹರ್ಷಿ ಅಂಗಿರನು ಆಗ್ನೇಯ ರಥವನ್ನೇರಿ ತೇಜಸ್ವೀ ಬಾಣವನ್ನು ಹಿಡಿದು ರಣಭೂಮಿಯಲ್ಲಿ ಪ್ರಕಾಶಿಸುತ್ತಿದ್ದನು.

19176035a ಸ್ಥಿತಮಂಗಿರಸಂ ದೃಷ್ಟ್ವಾ ವಿಮುಂಚಂತಂ ಶಿತಾಂಛರಾನ್।
19176035c ಕೃಷ್ಣಃ ಪ್ರೋವಾಚ ಸಂಕ್ರುದ್ಧಃ ಸ್ಮಯನ್ನಿವ ಪುನಃ ಪುನಃ ।।

ನಿಶಿತ ಶರಗಳನ್ನು ಪ್ರಯೋಗಿಸುತ್ತಿದ್ದ ಅಂಗಿರಸನನ್ನು ನೋಡಿ ಸಂಕ್ರುದ್ಧನಾದ ಕೃಷ್ಣನು ಪುನಃ ಪುನಃ ನಸುನಗುತ್ತಿರುವನೋ ಎನ್ನುವಂತೆ ಮಾತನಾಡಿದನು:

19176036a ತಿಷ್ಠಧ್ವಮಗ್ನಯಃ ಸರ್ವೇ ಏಷ ವೋ ವಿದಧೇ ಭಯಮ್ ।
19176036c ಮಮಾಸ್ತ್ರತೇಜಸಾ ದಗ್ಧಾ ದಿಶೋ ಯಾಸ್ಯಥ ವಿದ್ರುತಾಃ ।

“ಅಗ್ನಿಗಳೇ! ನೀವೆಲ್ಲರೂ ನಿಲ್ಲಿ! ನಿಮಗೆ ಭಯವನ್ನು ನೀಡುತ್ತೇನೆ. ನನ್ನ ಅಸ್ತ್ರತೇಜಸ್ಸಿನಿಂದ ಸುಟ್ಟು ನೀವು ದಿಕ್ಕಾಪಾಲಾಗಿ ಓಡುತ್ತೀರಿ!”

19176036e ಅಥಾಂಗಿರಾಸ್ತ್ರಿಶೂಲೇನ ದೀಪ್ತೇನ ಸಮಧಾವತ ।।
19176037a ಆದದಾನ ಇವ ಕ್ರೋಧಾತ್ಕೃಷ್ಣಪ್ರಾಣಾನ್ಮಹಾಮೃಧೇ ।

ಆಗ ಅಂಗಿರನು ಕ್ರೋಧದಿಂದ ಮಹಾರಣದಲ್ಲಿ ಬೆಳಗುತ್ತಿದ್ದ ತಿಶೂಲವನ್ನು ಹಿಡಿದು ಕೃಷ್ಣನ ಪ್ರಾಣಗಳನ್ನು ಅಪಹರಿಸುವನೋ ಎನ್ನುವಂತೆ ಆಕ್ರಮಣಿಸಿದನು.

19176037c ತ್ರಿಶೂಲಂ ತಸ್ಯ ದೀಪ್ತಂ ತು ಚಿಚ್ಛೇದ ಪರಮೇಷುಭಿಃ ।
19176037e ಅರ್ಧಚಂದ್ರೈಸ್ತಥಾ ತೀಕ್ಷ್ಣೈರ್ಯಮಾಂತಕನಿಭೋಪಮೈಃ ।।

ಬೆಳಗುತ್ತಿದ್ದ ಅವನ ಆ ತ್ರಿಶೂಲವನ್ನು ಕೃಷ್ಣನು ಅಂತಕನಂತಿದ್ದ ತೀಕ್ಷ್ಣ ಅರ್ಧಚಂದ್ರ ಪರಮ ಬಾಣದಿಂದ ತುಂಡರಿಸಿದನು.

19176038a ಸ್ಥೂಣಾಕರ್ಣೇನ ಬಾಣೇನ ದೀಪ್ತೇನ ಸ ಮಹಾಮನಾಃ ।
19176038c ವಿವ್ಯಾಧಾಂತಕತುಲ್ಯೇನ ವಕ್ಷಸ್ಯಂಗಿರಸಂ ತತಃ ।।

ಅನಂತರ ಮಹಾಮನಸ್ವೀ ಕೃಷ್ಣನು ಬೆಳಗುತ್ತಿದ್ದ ಅಂತಕಸಮಾನ ಸ್ಥೂಣಾಕರ್ಣ ಬಾಣದಿಂದ ಅಂಗಿರನ ವಕ್ಷಸ್ಥಳಕ್ಕೆ ಹೊಡೆದು ಗಾಯಗೊಳಿಸಿದನು.

19176039a ರುಧಿರೌಘಪ್ಲುತೈರ್ಗಾತ್ರೈರಂಗಿರಾ ವಿಹ್ವಲನ್ನಿವ ।
19176039c ವಿಷ್ಟಬ್ಧಗಾತ್ರಃ ಸಹಸಾ ಪಪಾತ ಧರಣೀತಲೇ ।।

ಅಂಗಾಂಗಗಳು ರಕ್ತದಿಂದ ತೋಯ್ದು ವಿಹ್ವಲಿಸುತ್ತಾ ಅಂಗಿರನು ಕೂಡಲೇ ನಿಶ್ಚೇಷ್ಟನಾಗಿ ಭೂಮಿಯ ಮೇಲೆ ಬಿದ್ದನು.

19176040a ಶೇಷಾಸ್ತತೋಽಗ್ನಯಃ ಸರ್ವೇ ಚತ್ವಾರೋ ಬ್ರಹ್ಮಣಃ ಸುತಾಃ ।
19176040c ಆಧಾವಂತಸ್ತದಾ ಶೀಘ್ರಂ ಬಾಣಸ್ಯ ಪುರಮಂತಿಕಾತ್ ।।

ಆಗ ಬ್ರಹ್ಮನ ಸುತರಾದ ಉಳಿದ ಎಲ್ಲ ನಾಲ್ಕು ಅಗ್ನಿಗಳೂ ಶೀಘ್ರದಲ್ಲಿ ಬಾಣನಗರಿಯ ಗಡಿಯಿಂದ ಓಡಿಹೋದರು.

19176041a ಅಥಾಗಮತ್ತತಃ ಕೃಷ್ಣೋ ಯತ್ರ ಬಾಣಪುರಂ ತತಃ ।
19176041c ಅಥ ಬಾಣಪುರಂ ದೃಷ್ಟ್ವಾ ದೂರಾತ್ಪ್ರೋವಾಚ ನಾರದಃ ।।

ಆಗ ಕೃಷ್ಣನು ಬಾಣಪುರನ ಬಳಿ ಬರಲು ಬಾಣಪುರವನ್ನು ನೋಡಿದ ನಾರದನು ದೂರದಿಂದಲೇ ಹೇಳಿದನು:

19176042a ಏತತ್ತಚ್ಛೋಣಿತಪುರಂ ಕೃಷ್ಣ ಪಶ್ಯ ಮಹಾಭುಜ ।
19176042c ಅತ್ರ ರುದ್ರೋ ಮಹಾತೇಜಾ ರುದ್ರಾಣ್ಯಾ ಸಹಿತೋಽವಸತ್ ।।
19176043a ಗುಹಶ್ಚ ಬಾಣಗುಪ್ತ್ಯರ್ಥಂ ಸತತಂ ಕ್ಷೇಮಕಾರಣಾತ್ ।

“ಕೃಷ್ಣ! ಮಹಾಭುಜ! ಇದೇ ಆ ಶೋಣಿತಪುರವು. ನೋಡು. ಬಾಣನ ಕ್ಷೇಮಕ್ಕಾಗಿ ಮಹಾತೇಜಸ್ವಿ ರುದ್ರನು ರುದ್ರಾಣಿ ಮತ್ತು ಗುಹರ ಸಹಿತ ಸದಾ ಇಲ್ಲಿ ವಾಸಿಸುತ್ತಾನೆ.”

19176043c ನಾರದಸ್ಯ ವಚಃ ಶ್ರುತ್ವಾ ಕೃಷ್ಣಃ ಸಂಪ್ರಹಸನ್ಬ್ರವೀತ್ ।।
19176044a ಕ್ಷಣಾಂ ಚಿಂತಯತಾಮತ್ರ ಶ್ರೂಯತಾಂ ಚ ಮಹಾಮುನೇ ।
19176044c ಯದಿ ವಾವತರೇದ್ರುದ್ರೋ ಬಾಣಸಂರಕ್ಷಣಂ ಪ್ರತಿ ।।
19176045a ಶಕ್ತಿತೋ ವಯಮಪ್ಯತ್ರ ಸಹ ಯೋತ್ಸ್ಯಾಮ ತೇನ ವೈ ।

ನಾರದನ ಮಾತನ್ನು ಕೇಳಿ ಕೃಷ್ಣನು ನಗುತ್ತಾ ಹೇಳಿದನು: “ಮಹಾಮುನೇ! ನನ್ನ ಮಾತನ್ನು ಕೇಳಬೇಕು ಮತ್ತು ಅದರ ಕುರಿತು ಒಂದು ಕ್ಷಣ ಯೋಚಿಸಬೇಕು. ಒಂದುವೇಳೆ ಬಾಣಾಸುರನನ್ನು ರಕ್ಷಿಸಲು ರುದ್ರನು ರಣಕ್ಕೆ ಇಳಿದರೆ ನಾವೂ ಕೂಡ ನಮ್ಮ ಶಕ್ತ್ಯಾನುಸಾರ ಅವನೊಂದಿಗೆ ಯುದ್ಧಮಾಡುತ್ತೇವೆ.”

19176045c ಏವಂ ವಿವದತೋಸ್ತತ್ರ ಕೃಷ್ಣನಾರದಯೋಸ್ತದಾ ।।
19176046a ಪ್ರಾಪ್ತಾ ನಿಮೇಷಮಾತ್ರೇಣ ಶೀಘ್ರಗಾ ಗರುಡೇನ ತೇ ।

ಕೃಷ್ಣ-ನಾರದರು ಹೀಗೆ ಮಾತನಾಡಿಕೊಳ್ಳುತ್ತಿರಲು ಶೀಘ್ರಗ ಗರುಡನ ಸಹಾಯದಿಂದ ಅವರು ನಿಮಿಷಮಾತ್ರದಲ್ಲಿ ಬಾಣಪುರಿಯನ್ನು ತಲುಪಿದರು.

19176046c ತತಃ ಶಂಖಂ ಸಮಾಧಾಯ ವದನೇ ಪುಷ್ಕರೇಕ್ಷಣಃ ।।
19176047a ವಾಯುವೇಗಸಮುದ್ಭೂತೋ ಮೇಘಶ್ಚಂದ್ರಮಿವೋದ್ಗಿರನ್ ।

ಆಗ ಕಮಲಲೋಚನ ಕೃಷ್ಣನು ಶಂಖವನ್ನು ತನ್ನ ಬಾಯಿಗಿರಿಸಿ ಊದಿದನು. ಆ ಶಬ್ದವು ವಾಯುವೇಗದಿಂದ ಮೇಲೆದ್ದ ಮೋಡಗಳು ಚಂದ್ರನ ಮೇಲೆ ಎರಗುತ್ತಿರುವವೋ ಎನ್ನುವಂತೆ ಕೇಳಿಸಿತು.

19176047c ತತಃ ಪ್ರಧ್ಮಾಪ್ಯ ತಂ ಶಂಖಂ ಭಯಮುತ್ಪಾದ್ಯ ವೀರ್ಯವಾನ್ ।।
19176048a ಪ್ರವಿವೇಶ ಪುರಂ ಕೃಷ್ಣೋ ಬಾಣಸ್ಯಾದ್ಭುತಕರ್ಮಣಃ ।

ಹೀಗೆ ಶಂಖವನ್ನು ಊದಿ ಅಸುರರಲ್ಲಿ ಭಯವನ್ನುಂಟುಮಾಡಿ ವೀರ್ಯವಾನ್ ಕೃಷ್ಣನು ಅದ್ಭುತಕರ್ಮಿ ಬಾಣನ ಪುರವನ್ನು ಪ್ರವೇಶಿಸಿದನು.

19176048c ತತಃ ಶಂಖಪ್ರಣಾದೈಶ್ಚ ಭೇರೀಣಾಂ ಚ ಮಹಾಸ್ವನೈಃ ।।
19176049a ಬಾಣಾನೀಕಾನಿ ಸಹಸಾ ಸಂನಹ್ಯಂತ ಸಮಂತತಃ ।

ಶಂಖನಾದ ಮತ್ತು ಭೇರಿಗಳ ಮಹಾಸ್ವನಗಳಿಂದ ಪ್ರೇರಿತರಾದ ಬಾಣನ ಸೇನೆಗಳು ಕೂಡಲೇ ಕವಚಗಳನ್ನು ತೊಟ್ಟು ಎಲ್ಲರೀತಿಯಲ್ಲಿ ಸಿದ್ಧವಾದವು.

19176049c ತತಃ ಕಿಂಕರಸೈನ್ಯಂ ತು ವ್ಯಾದಿಷ್ಟಂ ಸಮರೇ ಭಯಾತ್ ।।
19176050a ಕೋಟಿಶಶ್ಚಾಪಿ ಬಹುಶೋ ದೀಪ್ತಪ್ರಹರಣಾಸ್ತದಾ ।

ಭಯದಿಂದ ಬಾಣನು ಉರಿಯುತ್ತಿದ್ದ ಆಯುಧಗಳನ್ನು ಹಿಡಿದಿದ್ದ ಕೋಟಿಗಿಂತಲೂ ಹೆಚ್ಚು ಸಂಖ್ಯೆಯಲ್ಲಿದ್ದ ತನ್ನ ಕಿಂಕರಸೈನ್ಯವನ್ನು ಯುದ್ಧಕ್ಕೆ ಆಜ್ಞಾಪಿಸಿದನು.

19176050c ತದಸಂಖ್ಯೇಯಮೇಕಸ್ಥಂ ಮಹಾಭ್ರವನಸಂನಿಭಮ್ ।।
19176051a ನೀಲಾಂಜನಚಯಪ್ರಖ್ಯಮಪ್ರಮೇಯಮಥಾಕ್ಷಯಮ್ ।

ಒಂದೇ ಸ್ಥಾನದಲ್ಲಿ ನಿಂತಿದ್ದ ಆ ಅಸಂಖ್ಯ ಸೇನೆಯು ಮಹಾಮೇಘದಂತೆ ಕಾಣುತ್ತಿತ್ತು. ನೀಲಿ ಅಂಜನದಂತೆ ಹೊಳೆಯುತ್ತಿದ್ದ ಆ ಸೇನೆಯು ಅಪ್ರಮೇಯವೂ ಅಕ್ಷಯವೂ ಆಗಿತ್ತು.

19176051c ದೀಪ್ತಪ್ರಹರಣಾಃ ಸರ್ವೇ ದೈತ್ಯದಾನವರಾಕ್ಷಸಾಃ ।।
19176052a ಪ್ರಮಾಥಗಣಮುಖ್ಯಾಶ್ಚ ಅಯುಧ್ಯನ್ಕೃಷ್ಣಮವ್ಯಯಮ್ ।

ಆ ಸೇನೆಯಲ್ಲಿದ್ದ ಎಲ್ಲ ದೈತ್ಯ-ದಾನವ-ರಾಕ್ಷಸರೂ ಮತ್ತು ಪ್ರಮಾಥಗಣಮುಖ್ಯರೂ ಉರಿಯುತ್ತಿದ್ದ ಆಯುಧಗಳಿಂದ ಅವ್ಯಯ ಕೃಷ್ಣನೊಡನೆ ಯುದ್ಧಮಾಡಿದರು.

19176052c ಸರ್ವತಸ್ತೈಃ ಪ್ರದೀಪ್ತಾಸ್ಯೈಃ ಸಾರ್ಚಿಷ್ಮದ್ಭಿರಿವಾಗ್ನಿಭಿಃ ।।
19176053a ಅಭ್ಯುಪೇತ್ಯ ತದಾತ್ಯುಗ್ರೈರ್ಯಕ್ಷರಾಕ್ಷಸಕಿನ್ನರೈಃ ।
19176053c ಪೀಯತೇ ರುಧಿರಂ ತೇಷಾಂ ಚತುರ್ಣಾಮಪಿ ಸಂಯುಗೇ ।।

ಬೆಳಗುತ್ತಿದ್ದ ಆಯುಧಗಳನ್ನು ಹಿಡಿದಿದುರಿಂದ ಅವರು ಜ್ವಾಲಾಯುಕ್ತ ಅಗ್ನಿಗಳಂತೆ ತೋರುತ್ತಿದ್ದರು. ಆ ಉಗ್ರ ಯಕ್ಷ-ರಾಕ್ಷಸ-ಕಿನ್ನರರು ಎಲ್ಲಕಡೆಗಳಿಂದ ಆಕ್ರಮಣಿಸಿ ರಣದಲ್ಲಿ ಆ ನಾಲ್ವರ (ಕೃಷ್ಣ, ಬಲರಾಮ, ಪ್ರದ್ಯುಮ್ನ ಮತ್ತು ಗರುಡರ) ರಕ್ತವನ್ನು ಕುಡಿಯತೊಡಗಿದರು.

19176054a ತದ್ಬಲಂ ತು ಸಮಾಸಾದ್ಯ ಬಲಭದ್ರೋ ಮಹಾಬಲಃ ।
19176054c ಪ್ರೋವಾಚ ವಚನಂ ತತ್ರ ಪರಸ್ಯ ಬಲನಾಶನಃ ।।

ಆ ಸೇನೆಯನ್ನು ಎದುರಿಸಿ ಮಹಾಬಲ, ಶತ್ರುಸೇನಾನಾಶಕ, ಬಲಭದ್ರನು ಈ ಮಾತನ್ನಾಡಿದನು:

19176055a ಕೃಷ್ಣ ಕೃಷ್ಣ ಮಹಾಬಾಹೋ ವಿಧತ್ಸ್ವೈಷಾಂ ಮಹದ್ಭಯಮ್।
19176055c ಇತಿ ಸಂಚೋದಿತಃ ಕೃಷ್ಣೋ ಬಲಭದ್ರೇಣ ಧೀಮತಾ ।।
19176056a ತೇಷಾಂ ವಧಾರ್ಥಮಾಗ್ನೇಯಂ ಜಗ್ರಾಹ ಪುರುಷೋತ್ತಮಃ ।
19176056c ಅಸ್ತ್ರಮಸ್ತ್ರವಿದಾಂ ಶ್ರೇಷ್ಠೋ ಯಮಾಂತಕಸಮಪ್ರಭಃ ।

“ಕೃಷ್ಣ! ಮಹಾಬಾಹೋ! ಕೃಷ್ಣ! ಇವರಿಗೆ ಮಹಾಭಯವನ್ನುಂಟುಮಾಡು!” ಬಲಭದ್ರನಿಂದ ಪ್ರಚೋದಿತನಾದ ಅಸ್ತ್ರವಿದರಲ್ಲಿ ಶ್ರೇಷ್ಠ ಧೀಮತ ಪುರುಷೋತ್ತಮ ಕೃಷ್ಣನು ಅವರ ವಧೆಗಾಗಿ ಯಮಾಂತಕಸಮ ಪ್ರಭೆಯಿದ್ದ ಆಗ್ನೇಯ ಅಸ್ತ್ರವನ್ನು ತೆಗೆದುಕೊಂಡನು.

19176056e ಪ್ರವಿಧೂಯಾಸುರಗಣಾನ್ಕ್ರವ್ಯಾದಾನಸ್ತ್ರತೇಜಸಾ ।।
19176057a ಪ್ರಯಯೌ ತ್ವರಯಾ ಯುಕ್ತೋ ಯತ್ರ ದೃಶ್ಯೇತ ತದ್ಬಲಮ್ ।

ಅಸ್ತ್ರದ ತೇಜಸ್ಸಿನಿಂದ ಆ ಕ್ರವ್ಯಾದ ಅಸುರಗಣಗಳನ್ನು ನಾಶಗೊಳಿಸಿ ಕೃಷ್ಣನು ತ್ವರೆಮಾಡಿ ಆ ಸೇನೆಯು ಕಾಣುವ ಪ್ರದೇಶಕ್ಕೆ ಹೋದನು.

19176057c ಶೂಲಪಟ್ಟಿಶಶಕ್ತ್ಯೃಷ್ಟಿಪಿನಾಕಪರಿಘಾಯುಧಮ್ ।।
19176058a ಪ್ರಮಾಥಗಣಭೂಯಿಷ್ಠಂ ಬಲಂ ತದಭವತ್ಕ್ಷಿತೌ ।

ಶೂಲ-ಪಟ್ಟಿಶ-ಶಕ್ತಿ-ಋಷ್ಟಿ-ಪಿನಾಕ-ಪರಿಘಾಯುಧಗಳನ್ನು ಹಿಡಿದಿದ್ದ ಅಧಿಕತಃ ಪ್ರಮಾಥಗಣಗಳ ಸೇನೆಯು ಅಲ್ಲಿ ಭೂತಲದಲ್ಲಿ ನಿಂತಿತ್ತು.

19176058c ಶೈಲಮೇಘಪ್ರತೀಕಾಶೈರ್ನಾನಾರೂಪೈರ್ಭಯಾನಕೈಃ ।
19176058e ವಾಹನೈಃ ಸಂಘಶಃ ಸರ್ವೇ ಯೋಧಾಸ್ತತ್ರಾವತಸ್ಥಿರೇ ।।

ಪರ್ವತ ಮತ್ತು ಮೇಘಗಳಂತೆ ನಾನಾ ಭಯಾನಕ ರೂಪೀ ಸರ್ವ ಯೋಧರೂ ಅಲ್ಲಿ ವಾಹನಗಳನ್ನೇರಿ ಸಂಘಟಿತರಾಗಿ ನಿಂತಿದ್ದರು.

19176059a ವಾತೋದ್ಭೂತೈರಿವ ಘನೈರ್ವಿಪ್ರಕೀರ್ಣೈರಿವಾಚಲೈಃ ।
19176059c ಶುಶುಭೇ ತತ್ರ ಬಹುಲೈರನೀಕೈರ್ದೃಢಧನ್ವಿಭಿಃ ।

ಆ ದೃಢಧನ್ವೀ ಬಹುಸಂಖ್ಯೆಯ ಸೈನಿಕರು ಭಿರುಗಾಳಿಗೆ ಸಿಲುಕಿ ಒಡೆದುಹೋದ ಮೋಡಗಳಂತೆ ಮತ್ತು ಚೆಲ್ಲಲ್ಪಟ್ಟ ಪರ್ವತಗಳಂತೆ ಶೋಭಿಸುತ್ತಿದ್ದರು.

19176059e ಮುಸಲೈರಸಿಭಿಃ ಶೂಲೈರ್ಗದಾಭಿಃ ಪರಿಘೈಸ್ತಥಾ ।।
19176060a ಅಬಾಧಂ ತದಸಂಖ್ಯೇಯಂ ಶುಶುಭೇ ಸರ್ವತೋ ಬಲಮ್ ।

ಆ ಅಸಂಖ್ಯ ಮತ್ತು ಅಗಾಧ ಸೇನೆಯು ಎಲ್ಲ ಕಡೆಗಳಿಂದ ಮುಸಲ-ಖಡ್ಗ-ಶೂಲ-ಗದೆ-ಪರಿಘಗಳನ್ನು ಹಿಡಿದು ಶೋಭಿಸುತ್ತಿತ್ತು.

19176060c ತತಃ ಸಂಕರ್ಷಣೋ ದೇವಮುವಾಚ ಮಧುಸೂದನಮ್ ।।
19176061a ಕೃಷ್ಣ ಕೃಷ್ಣ ಮಹಾಬಾಹೋ ಯದೇತದ್ದೃಶ್ಯತೇ ಬಲಂ ।
19176061c ಏತೈಃ ಸಹ ರಣೇ ಯೋದ್ಧುಮಿಚ್ಛಾಮಿ ಪುರುಷೋತ್ತಮ ।।

ಆಗ ಸಂಕರ್ಷಣನು ದೇವ ಮಧುಸೂದನನಿಗೆ ಹೇಳಿದನು: “ಕೃಷ್ಣ! ಕೃಷ್ಣ! ಮಹಾಬಾಹೋ! ಪುರುಷೋತ್ತಮ! ರಣದಲ್ಲಿ ಕಾಣುತ್ತಿರುವ ಈ ಸೇನೆಯೊಂದಿಗೆ ಯುದ್ಧಮಾಡಲು ಇಚ್ಛಿಸುತ್ತೇನೆ!”

19176062 ಶ್ರೀಕೃಷ್ಣ ಉವಾಚ ।
19176062a ಮಮಾಪ್ಯೇಷೈವ ಸಂಜಾತಾ ಬುದ್ಧಿರಿತ್ಯಬ್ರವೀಚ್ಚ ತಮ್ ।
19176062c ಏಭಿಃ ಸಹ ರಣೇ ಯೋದ್ಧುಮಿಚ್ಛೇಯಂ ಯೋಧಸತ್ತಮೈಃ ।।
19176063a ಯುದ್ಧ್ಯತಃ ಪ್ರಾಙ್ಮುಖಸ್ಯಾಸ್ತು ಸುಪರ್ಣೋ ವೈ ಮಮಾಗ್ರತಃ ।
19176063c ಸವ್ಯಪಾರ್ಶ್ವೇ ತು ಪ್ರದ್ಯುಮ್ನಸ್ತಥಾ ಮೇ ದಕ್ಷಿಣೇ ಭವಾನ್ ।
19176063e ರಕ್ಷಿತವ್ಯಮಥಾನ್ಯೋನ್ಯಮಸ್ಮಿನ್ಘೋರೇ ಮಹಾಮೃಧೇ ।।

ಶ್ರೀಕೃಷ್ಣನು ಹೇಳಿದನು: “ನನ್ನ ಮನಸ್ಸಿನಲ್ಲಿಯೂ ಅದೇ ಯೋಚನೆಯು ಹುಟ್ಟಿದೆ! ನಾನೂ ಕೂಡ ರಣದಲ್ಲಿ ಈ ಯೋಧಸತ್ತಮರೊಂದಿಗೆ ಯುದ್ಧಮಾಡಲು ಬಯಸುತ್ತೇನೆ. ಪೂರ್ವಾಭಿಮುಖವಾಗಿ ಯುದ್ಧಮಾಡುವಾಗ ನನ್ನ ಮುಂದೆ ಸುಪರ್ಣನು ಇರಲಿ. ಎಡಗಡೆ ಪ್ರದ್ಯುಮ್ನನಿರಲಿ ಮತ್ತು ಬಲಗಡೆ ನೀನು ಇರು. ಈ ಘೋರ ಮಹಾಯುದ್ಧದಲ್ಲಿ ನಾವು ಅನ್ಯೋನ್ಯರನ್ನು ರಕ್ಷಿಸಿಕೊಂಡಿರಬೇಕು.””

19176064 ವೈಶಂಪಾಯನ ಉವಾಚ ।
19176064a ಏವಂ ಬ್ರುವಂತಸ್ತೇಽನ್ಯೋನ್ಯಮಧಿರೂಢಾಃ ಖಗೋತ್ತಮಮ್।
19176065c ಗಿರಿಶೃಂಗನಿಭೈರ್ಘೋರೈರ್ಗದಾಮುಸಲಲಾಂಗಲೈಃ ।।
19176066a ಯುದ್ಧ್ಯತೋ ರೌಹಿಣೇಯಸ್ಯ ರೌದ್ರಂ ರೂಪಮಭೂತ್ತದಾ ।
19176067c ಯುಗಾಂತೇ ಸರ್ವಭೂತಾನಾಂ ಕಾಲಸ್ಯೇವ ದಿಧಕ್ಷತಃ ।।

ವೈಶಂಪಾಯನನು ಹೇಳಿದನು: “ಹೀಗೆ ಅನ್ಯೋನ್ಯರೊಡನೆ ಮಾತನಾಡಿಕೊಳ್ಳುತ್ತಾ ಖಗೋತ್ತಮನನ್ನು ಏರಿದ್ದ ಅವರು ಯುದ್ಧದಲ್ಲಿ ತೊಡಗಿದರು. ಗಿರಿಶೃಂಗದಂತಿದ್ದ ಘೋರ ಗದೆ, ಮುಸಲ ಮತ್ತು ಹಲಾಯುಧಗಳಿಂದ ಯುದ್ಧಮಾಡುತ್ತಿದ್ದ ರೌಹಿಣೇಯನ ರೂಪವು ಯುಗಾಂತದಲ್ಲಿ ಸರ್ವಭೂತಗಳನ್ನೂ ಸುಡುವ ಕಾಲನಂತೆಯೇ ರೌದ್ರವಾಗಿತ್ತು.

19176068a ಆಕೃಷ್ಯ ಲಾಂಗಲಾಗ್ರೇಣ ಮುಸಲೇನಾವಪೋಥಯತ್ ।
19176068c ಚಚಾರಾತಿಬಲೋ ರಾಮೋ ಯುದ್ಧಮಾರ್ಗವಿಶಾರದಃ ।।

ಯುದ್ಧಮಾರ್ಗವಿಶಾರದ ಅತಿಬಲಶಾಲಿ ರಾಮನು ರಣರಂಗದಲ್ಲಿ ಸಂಚರಿಸಿ ಹಲದ ಅಗ್ರಭಾಗದಿಂದ ಶತ್ರುಗಳನ್ನು ಎಳೆದು ಮುಸಲದಿಂದ ಹೊಡೆದು ಬೀಳಿಸುತ್ತಿದ್ದನು.

19176069a ಪ್ರದ್ಯುಮ್ನಃ ಶರಜಾಲೈಸ್ತಾನ್ಸಮಂತಾತ್ಪರ್ಯವಾರಯತ್ ।
19176069c ದಾನವಾನ್ಪುರುಷವ್ಯಾಘ್ರೋ ಯುದ್ಧ್ಯಮಾನಾನ್ಮಹಾಬಲಃ ।।

ಪುರುಷವ್ಯಾಘ್ರ ಮಹಾಬಲ ಪ್ರದ್ಯುಮ್ನನು ಶರಜಾಲಗಳಿಂದ ಯುದ್ಧಮಾಡುತ್ತಿದ್ದ ದಾನವರನ್ನು ಎಲ್ಲಕಡೆಗಳಿಂದ ತಡೆದನು.

19176070a ಸ್ನಿಗ್ಧಾಂಜನಚಯಪ್ರಖ್ಯಃ ಶಂಖಚಕ್ರಗದಾಧರಃ ।
19176070c ಪ್ರಧ್ಮಾಯ ಬಹುಶಃ ಶಂಖಮಯುಧ್ಯತ ಜನಾರ್ದನಃ ।।

ಸ್ನಿಗ್ಧ ಅಂಜನದಂತೆ ಹೊಳೆಯುತ್ತಿದ್ದ ಶಂಖಚಕ್ರಗದಾಧರ ಜನಾರ್ದನನು ಅನೇಕಬಾರಿ ಶಂಖವನ್ನು ಊದುತ್ತಾ ಯುದ್ಧಮಾಡುತ್ತಿದ್ದನು.

19176071a ಪಕ್ಷಪ್ರಹಾರನಿಹತಾ ನಖತುಂಡಾಗ್ರದಾರಿತಾಃ ।
19176071c ನೀತಾ ವೈವಸ್ವತಪುರಂ ವೈನತೇಯೇನ ಧೀಮತಾ ।।

ಧೀಮತ ವೈನತೇಯನು ತನ್ನ ರೆಕ್ಕೆಗಳಿಂದ ಬಡಿದು ಮತ್ತು ಉಗುರು-ಕೊಕ್ಕಿನಿಂದ ಸೀಳಿ ಶತ್ರುಗಳನ್ನು ವೈವಸ್ವತಪುರಿಗೆ ಕಳುಹಿಸುತ್ತಿದ್ದನು.

19176072a ತೈರ್ಹನ್ಯಮಾನಂ ದೈತ್ಯಾನಾಮನೀಕಂ ಭೀಮವಿಕ್ರಮಮ್ ।
19176072c ಅಭಜ್ಯತ ತದಾ ಸಂಖ್ಯೇ ಬಾಣವರ್ಷಸಮಾಹತಮ್ ।।

ಅವರಿಂದ ಸಂಹರಿಸಲ್ಪಡುತ್ತಿದ್ದ ಭೀಮವಿಕ್ರಮಿ ದೈತ್ಯರ ಆ ಸೇನೆಯು ಕುಂಠಿತಗೊಂಡಿತು. ಯುದ್ಧದಲ್ಲಿ ಬಾಣವರ್ಷಗಳಿಂದ ಕ್ಷತ-ವಿಕ್ಷತಗೊಂಡಿತು.

19176073a ಭಜ್ಯಮಾನೇಷ್ವನೀಕೇಷು ತ್ರಾತುಕಾಮಃ ಸಮಭ್ಯಯಾತ್ ।
19176073c ಜ್ವರಸ್ತ್ರಿಪಾದಸ್ತ್ರಿಶಿರಾಃ ಷಡ್ಭುಜೋ ನವಲೋಚನಃ ।।
19176074a ಭಸ್ಮಪ್ರಹರಣೋ ರೌದ್ರಃ ಕಾಲಾಂತಕಯಮೋಪಮಃ ।
19176074c ನದನ್ಮೇಘಸಹಸ್ರೇಣ ತುಲ್ಯೋ ನಿರ್ಘಾತನಿಃಸ್ವನಃ ।।

ಹೀಗೆ ಸೇನೆಗಳು ಭಗ್ನಗೊಂಡು ಓಡಿಹೋಗುತ್ತಿರಲು ಅವುಗಳನ್ನು ರಕ್ಷಿಸಲು ತ್ರಿಶಿರನೆಂಬ ಜ್ವರನು ಮುಂದೆಬಂದನು. ಅವನಿಗೆ ಮೂರು ಪಾದಗಳು, ಮೂರು ಶಿರಗಳು, ಆರು ಭುಜಗಳು ಮತ್ತು ಒಂಭತ್ತು ಕಣ್ಣುಗಳಿದ್ದವು. ಭಸ್ಮವೇ ಅವನ ಆಯುಧವಾಗಿತ್ತು. ಕಾಲ-ಅಂತಕ-ಯಮನಂತಿದ್ದ ಅವನು ರೌದ್ರನಾಗಿದ್ದನು. ಸಹಸ್ರಾರು ಮೇಘಗಳು ಗುಡುಗುತ್ತಿರುವಂತೆ ಮತ್ತು ಸಿಡಿಲುಬಡಿದಂತೆ ಅವನ ಗರ್ಜನೆಯು ಕೇಳುತ್ತಿತ್ತು.

19176075a ನಿಃಶ್ವಸಂಜೃಂಭಮಾಣಶ್ಚ ನಿದ್ರಾನ್ವಿತತನುರ್ಭೃಶಮ್ ।
19176075c ನೇತ್ರಾಭ್ಯಾಮಾಕುಲಂ ವಕ್ತ್ರಂ ಮುಹುಃ ಕುರ್ವನ್ಭ್ರಮನ್ಮುಹುಃ।।

ದೀರ್ಘ ನಿಟ್ಟುಸಿರು ಬಿಡುತ್ತಿದ್ದನು ಮತ್ತು ಆಕಳಿಸುತ್ತಿದ್ದನು. ಅವನ ಶರೀರವು ಅತ್ಯಂತ ನಿದ್ರೆಯಿಂದ ಆವರಿಸಿದಂತ್ತಿತ್ತು. ಪುನಃ ಪುನಃ ತಿರುಗುತ್ತಿದ್ದ ಅವನ ಎರಡೂ ಕಣ್ಣುಗಳು ಮತ್ತು ಮುಖವು ವ್ಯಥೆಯಿಂದ ವ್ಯಾಕುಲಗೊಂಡತ್ತಿದ್ದವು.

19176076a ಸಂಹೃಷ್ಟರೋಮಾ ಗ್ಲಾನಾಕ್ಷೋ ಭಗ್ನಚಿತ್ತ ಇವ ಶ್ವಸನ್ ।
19176076c ಹಲಾಯುಧಮಭಿಕ್ರುದ್ಧಃ ಸಾಕ್ಷೇಪಮಿದಮಬ್ರವೀತ್ ।।

ಕೂದಲುಗಳು ಎದ್ದುನಿಂತಿದ್ದ ಮತ್ತು ಕಣ್ಣುಗಳು ಕರಗಿಹೋಗುವಂತಿದ್ದ ಅವನು ಉತ್ಸಾಹಕಳೆದುಕೊಂಡವನಂತೆ ನಿಟ್ಟುಸಿರುಬಿಡುತ್ತಿದ್ದನು. ಅವನು ಹಲಾಯುಧ ಬಲರಾಮನನ್ನು ಎದುರಿಸಿ ಕ್ರುದ್ಧನಾಗಿ ಆಕ್ಷೇಪಯುಕ್ತ ಈ ಮಾತನ್ನಾಡಿದನು:

19176077a ಕಿಮೇವಂ ಬಲಮತ್ತೋಽಸಿ ನ ಮಾಂ ಪಶ್ಯಸಿ ಸಂಯುಗೇ ।
19176077c ತಿಷ್ಠ ತಿಷ್ಠ ನ ಮೇ ಜೀವನ್ಮೋಕ್ಷ್ಯಸೇ ರಣಮೂರ್ಧನಿ ।।

“ಇದೇನು ಹೀಗೆ ಬಲದಿಂದ ಉನ್ಮತ್ತನಾಗುತ್ತಿದ್ದೀಯೆ? ಈ ರಣರಂಗದಲ್ಲಿ ನಾನು ನಿನಗೆ ಕಾಣುತ್ತಿಲ್ಲವೇ? ನಿಲ್ಲು! ನಿಲ್ಲು! ಈ ರಣಮೂರ್ಧನಿಯಲ್ಲಿ ನಿನಗೆ ನನ್ನಿಂದ ಜೀವಂತ ಬಿಡುಗಡೆಯಿಲ್ಲ!”

19176078a ಇತ್ಯೇವಮುಕ್ತ್ವಾ ಪ್ರಹಸನ್ ಹಲಾಯುಧಮುಪಾದ್ರವತ್ ।
19176078c ಯುಗಾಂತಾಗ್ನಿನಿಭೈರ್ಘೋರೈರ್ಮುಷ್ಟಿಭಿರ್ಜನಯನ್ಭಯಮ್ ।।

ಹೀಗೆ ಹೇಳಿ ಅಟ್ಟಹಾಸಗೈಯುತ್ತಾ ಅವನು ಯುಗಾಂತದ ಅಗ್ನಿಯಂತೆ ಘೋರವಾಗಿದ್ದ ತನ್ನ ಮುಷ್ಟಿಯಿಂದ ಹಲಾಯುಧನನ್ನು ಆಕ್ರಮಣಿಸಿ ಭಯವನ್ನುಂಟುಮಾಡಿದನು.

19176079a ಚರತಸ್ತತ್ರ ಸಂಗ್ರಾಮೇ ಮಂಡಲಾನಿ ಸಹಸ್ರಶಃ ।
19176079c ರೌಹಿಣೇಯಸ್ಯ ಶೀಘ್ರೇಣ ನಾವಸ್ಥಾನಮದೃಶ್ಯತ ।।

ಸಹಸ್ರಾರು ಮಂಡಲಗಳಲ್ಲಿ ಶೀಘ್ರವಾಗಿ ಸಂಚರಿಸುತ್ತಿದ್ದ ರೌಹಿಣೇಯನು ರಣರಂಗದಲ್ಲಿ ಅವನು ನಿಂತಿದ್ದುದನ್ನು ನೋಡಲಿಲ್ಲ.

19176080a ತಸ್ಯ ಭಸ್ಮ ತದಾ ಕ್ಷಿಪ್ತಂ ಜ್ವರೇಣಾಪ್ರತಿಮೌಜಸಾ ।
19176080c ಶೈಘ್ರ್ಯಾದ್ವಕ್ಷೋ ನಿಪತಿತಂ ಶರೀರೇ ಪರ್ವತೋಪಮೇ ।।

ಆಗ ಆ ಅಪ್ರತಿಮ ತೇಜಸ್ವೀ ಜ್ವರನು ಅತ್ಯಂತ ಶೀಘ್ರವಾಗಿ ಹಿಡಿ ಭಸ್ಮವನ್ನು ಬಲರಾಮನ ಮೇಲೆ ಎಸೆಯಲು ಅದು ಅವನ ಪರ್ವತೋಪಮ ಶರೀರದ ವಕ್ಷಸ್ಥಳದ ಮೇಲೆ ಬಿದ್ದಿತು.

19176081a ತದ್ಭಸ್ಮ ವಕ್ಷಸಸ್ತಸ್ಯ ಮೇರೋಃ ಶಿಖರಮಾಗಮತ್ ।
19176081c ಪ್ರದೀಪ್ತಂ ಪತಿತಂ ತತ್ರ ಗಿರಿಶೃಂಗಂ ವ್ಯದಾರಯತ್ ।।

ಅವನ ವಕ್ಷಸ್ಥಳದಿಂದ ಆ ಭಸ್ಮವು ಮೇರುಪರ್ವತದ ಶಿಖರದ ಮೇಲೆ ಬಿದ್ದಿತು. ಉರಿಯುತ್ತಾ ಬಿದ್ದ ಆ ಭಸ್ಮವು ಗಿರಿಶೃಂಗವನ್ನು ಪುಡಿಪುಡಿಮಾಡಿತು.

19176082a ಶೇಷೇಣ ಚಾಪಿ ಜಜ್ವಾಲ ಭಸ್ಮನಾ ಕೃಷ್ಣಪೂರ್ವಜಃ ।
19176082c ನಿಃಶ್ವಸನ್ಜೃಂಭಮಾಣಶ್ಚ ನಿದ್ರಾನ್ವಿತತನುರ್ಭೃಶಮ್ ।।

ಉಳಿದ ಸ್ವಲ್ಪವೇ ಭಸ್ಮದಿಂದ ಕೃಷ್ಣನ ಅಣ್ಣ ಬಲರಾಮನು ಸುಡತೊಡಗಿದನು. ನಿಟ್ಟುಸಿರು ಬಿಡುತ್ತಾ ಮತ್ತು ಆಕಳಿಸುತ್ತಾ ಅವನ ಶರೀರವು ಅತ್ಯಂತ ನಿದ್ರಾನ್ವಿತವಾಯಿತು.

19176083a ನೇತ್ರಯೋರಾಕುಲತ್ವಂ ಚ ಮುಹುಃ ಕುರ್ವನ್ಭ್ರಮಂಸ್ತಥಾ ।
19176083c ಸಂಹೃಷ್ಟರೋಮಾ ಗ್ಲಾನಾಕ್ಷಃ ಕ್ಷಿಪ್ತಚಿತ್ತ ಇವ ಶ್ವಸನ್ ।।

ಅವನ ಕಣ್ಣುಗಳು ವ್ಯಾಕುಲಗೊಂಡು ಅವನು ಪುನಃ ಪುನಃ ತಿರುಗತೊಡಗಿದನು. ಅವನ ರೋಮಗಳು ಎದ್ದುನಿಂತವು. ಕಣ್ಣು ಕರಗುತ್ತಿರುವಂತಾಯಿತು ಮತ್ತು ದೀರ್ಘ ನಿಟ್ಟುಸಿರುಬಿಡತೊಡಗಿದನು.

19176084a ತತೋ ಹಲಧರೋ ಭಗ್ನಃ ಕೃಷ್ಣಮಾಹ ವಿಚೇತನಃ ।
19176084c ಕೃಷ್ಣ ಕೃಷ್ಣ ಮಹಾಬಾಹೋ ಪ್ರದೀಪ್ತೋಽಸ್ಮ್ಯಭಯಂ ಕುರು ।।
19176085a ದಹ್ಯಾಮಿ ಸರ್ವತಸ್ತಾತ ಕಥಂ ಶಾಂತಿರ್ಭವೇನ್ಮಮ ।

ಆಗ ಭಗ್ನನೂ ವಿಚೇತಸನೂ ಆದ ಹಲಧರನು ಕೃಷ್ಣನಿಗೆ ಹೇಳಿದನು: “ಕೃಷ್ಣ! ಕೃಷ್ಣ! ಮಹಾಬಾಹೋ! ಸುಡುತ್ತಿದ್ದೇನೆ. ಅಭಯವನ್ನುಂಟುಮಾಡು. ಅಯ್ಯಾ! ಎಲ್ಲಕಡೆ ಸುಡುತ್ತಿದ್ದೇನೆ. ನನಗೆ ಹೇಗೆ ಶಾಂತಿದೊರೆಯಬಲ್ಲದು?”

19176085c ಇತ್ಯೇವಮುಕ್ತೇ ವಚನಂ ಬಲೇನಾಮಿತತೇಜಸಾ ।।
19176086a ಪ್ರಹಸ್ಯ ವಚನಂ ಪ್ರಾಹ ಕೃಷ್ಣಃ ಪ್ರಹರತಾಂ ವರಃ ।
19176086c ನ ಭೇತವ್ಯಮಿತೀತ್ಯುಕ್ತ್ವಾ ಪರಿಷ್ವಕ್ತೋ ಹಲಾಯುಧಃ ।।
19176087a ಕೃಷ್ಣೇನ ಪರಮಸ್ನೇಹಾತ್ತತೋ ದಾಹಾತ್ಪ್ರಮುಚ್ಯತ ।

ಅಮಿತತೇಜಸ್ವೀ ಬಲರಾಮನ ಈ ಮಾತನ್ನು ಕೇಳಿ ಪ್ರಹಾರಮಾಡುವವರಲ್ಲಿ ಶ್ರೇಷ್ಠ ಕೃಷ್ಣನು ನಗುತ್ತಾ “ಹೆದರಬೇಡ!” ಎಂದು ಹೇಳಿ ಹಲಾಯುಧನನ್ನು ಅಪ್ಪಿಕೊಂಡನು. ಕೃಷ್ಣನ ಆ ಪರಮಸ್ನೇಹದಿಂದ ಅವನು ಬೇಗೆಯಿಂದ ಮುಕ್ತನಾದನು.

19176087c ಮೋಕ್ಷಯಿತ್ವಾ ಬಲಂ ತತ್ರ ದಾಹಾತ್ತು ಮಧುಸೂದನಃ ।।
19176088a ಪ್ರೋವಾಚ ಪರಮಕ್ರುದ್ಧೋ ವಾಸುದೇವೋ ಜ್ವರಂ ತದಾ ।

ಬಲರಾಮನನ್ನು ದಾಹದಿಂದ ಮೋಕ್ಷಗೊಳಿಸಿದ ಮಧುಸೂದನ ವಾಸುದೇವನು ಪರಮಕ್ರುದ್ಧನಾಗಿ ಜ್ವರನಿಗೆ ಹೇಳಿದನು.

19176088 ಶ್ರೀಭಗವಾನುವಾಚ ।
19176088c ಏಹ್ಯೇಹಿ ಜ್ವರ ಯುಧ್ಯಸ್ವ ಯಾ ತೇ ಶಕ್ತಿರ್ಮಹಾಮೃಧೇ ।।
19176089a ಯಚ್ಚ ತೇ ಪೌರುಷಂ ಸರ್ವಂ ತದ್ದರ್ಶಯತು ನೋ ಭವಾನ್।

ಶ್ರೀಭಗವಂತನು ಹೇಳಿದನು: “ಜ್ವರ! ಮುಂದೆ ಬಂದು ಯುದ್ಧಮಾಡು! ನಿನ್ನಲ್ಲಿರುವ ಶಕ್ತಿ ಮತ್ತು ಪೌರುಷಗಳೆಲ್ಲವನ್ನು ಈ ಮಹಾರಣದಲ್ಲಿ ನನಗೆ ತೋರಿಸು!”

19176089c ಸವ್ಯೇತರಾಭ್ಯಾಂ ಬಾಹುಭ್ಯಾಮೇವಮುಕ್ತೋ ಜ್ವರಸ್ತದಾ ।।
19176090a ಚಿಕ್ಷೇಪೈನಂ ಮಹದ್ಭಸ್ಮ ಜ್ವಾಲಾಗರ್ಭಂ ಮಹಾಬಲಃ ।

ಇದನ್ನು ಕೇಳಿ ಮಹಾಬಲ ಜ್ವರನು ತನ್ನ ಎರಡು ಎಡಭುಜಗಳಿಂದ ಅವನ ಮೇಲೆ ಜ್ವಾಲೆಯು ಅಡಗಿದ್ದ ಮಹಾ ಭಸ್ಮವನ್ನು ಎಸೆದನು.

19176090c ತತಃ ಪ್ರದೀಪ್ತಗಾತ್ರಸ್ತು ಮುಹೂರ್ತಮಭವತ್ಪ್ರಭುಃ ।।
19176091a ಕೃಷ್ಣಃ ಪ್ರಹರತಾಂ ಶ್ರೇಷ್ಠಃ ಶಮಂ ಚಾಗ್ನಿರ್ಗತಸ್ತತಃ ।

ಆಗ ಒಂದು ಮುಹೂರ್ತಕಾಲ ಪ್ರಹಾರಮಾಡುವವರಲ್ಲಿ ಶ್ರೇಷ್ಠ ಕೃಷ್ಣನ ಶರೀರವು ಉರಿಯತೊಡಗಿತು ಮತ್ತು ಆ ಅಗ್ನಿಯು ತಾನೇ ಆರಿಹೋಯಿತು.

19176091c ತತಸ್ತೈರ್ಭುಜಗಾಕಾರೈರ್ಬಾಹುಭಿಸ್ತು ತ್ರಿಭಿಸ್ತದಾ ।।
19176092a ಜಘಾನ ಕೃಷ್ಣಂ ಗ್ರೀವಾಯಾಂ ಮುಷ್ಟಿನೈಕೇನ ಚೋರಸಿ ।

ಆಗ ತ್ರಿಶಿರನು ತನ್ನ ಸರ್ಪಾಕಾರದ ಭುಜಗಳಿಂದ ಕೃಷ್ಣನ ಕಂಠಕ್ಕೆ ಹೊಡೆದನು ಮತ್ತು ಒಂದು ಮುಷ್ಟಿಯಿಂದ ಅವನ ಎದೆಗೆ ಗುದ್ದಿದನು.

19176092c ಸ ಸಂಪ್ರಹಾರಸ್ತುಮುಲಸ್ತಯೋಃ ಪುರುಷಸಿಂಹಯೋಃ ।।
19176093a ಜ್ವರಸ್ಯ ತು ಮಹಾಯುದ್ಧೇ ಕೃಷ್ಣಸ್ಯ ತು ಮಹೌಜಸಃ ।
19176093c ಪರ್ವತೇಷು ಪತಂತೀನಾಮಶನೀನಾಮಿವ ಸ್ವನಃ ।।

ಆ ಮಹಾಯುದ್ಧದಲ್ಲಿ ಪುರುಷಸಿಂಹರಾದ ಜ್ವರ ಮತ್ತು ಮಹಾತೇಜಸ್ವೀ ಕೃಷ್ಣರ ನಡುವೆ ಭಯಂಕರ ಮುಷ್ಟಿಪ್ರಹಾರಗಳಾದವು. ಅವುಗಳ ಶಬ್ದವು ಪರ್ವತಗಳ ಮೇಲೆ ಬೀಳುತ್ತಿರುವ ಸಿಡಿಲುಗಳಂತೆ ಕೇಳಿಬರುತ್ತಿತ್ತು.

19176094a ಕೃಷ್ಣಜ್ವರಭುಜಾಘಾತೈರ್ಯುದ್ಧಮಾಸೀತ್ಸುದಾರುಣಮ್ ।
19176094c ನೈವಮೇವಂ ಪ್ರಹರ್ತವ್ಯಮಿತಿ ತತ್ರ ಮಹಾಸ್ವನಃ ।
19176094e ಮುಹೂರ್ತಮಭವದ್ಯುದ್ಧಮನ್ಯೋನ್ಯಂ ತು ಮಹಾತ್ಮನೋಃ।।

ಕೃಷ್ಣ ಮತ್ತು ಜ್ವರರ ಭುಜಾಘಾತದಿಂದ ದಾರುಣ ಯುದ್ಧವು ನಡೆಯಿತು. ಇದು ಹೀಗಲ್ಲ. ಹೀಗೆ ಹೊಡೆಯಬೇಕು ಎಂಬ ಮಹಾಕೂಗುಗಳು ಕೇಳಿಬಂದವು. ಹೀಗೆ ಆ ಮಹಾತ್ಮರ ಅನ್ಯೋನ್ಯ ಯುದ್ಧವು ಒಂದು ಮುಹೂರ್ತಕಾಲ ನಡೆಯಿತು.

19176095a ತತೋ ಜ್ವರಂ ಕನಕವಿಚಿತ್ರಭೂಷಣಂ ನ್ಯಪೀಡಯದ್ಭುಜವಲಯೇನ ಸಂಯುಗೇ ।
19176095c ಜಗತ್ಕ್ಷಯಂ ಸಮುಪನಯಂಜಗತ್ಪತಿಃ ಶರೀರಧೃಗ್ಗಗನಚರಂ ಮಹಾಮೃಧೇ ।।

ಆಗ ಮಾನವಶರೀರಧಾರಿಯಾದ ಜಗಧೀಶ್ವರ ಹರಿಯು ಆ ಮಹಾಸಮರದಲ್ಲಿ ವಿಚಿತ್ರ ಕನಕ ಭೂಷಣಗಳನ್ನು ಧರಿಸಿದ್ದ ಆಕಾಶಚಾರೀ ಜ್ವರನನ್ನು ತನ್ನ ಎರಡೂ ಭುಜಗಳಿಂದ ಅದುಮಿದನು. ಆಗ ಅವನು ಜಗತ್ತನ್ನೇ ಕ್ಷಯಗೊಳಿಸುವಂತೆ ತೋರುತ್ತಿದ್ದನು.”

ಸಮಾಪ್ತಿ

ಇತಿ ಶ್ರೀಮಹಾಭಾರತೇ ಖಿಲೇಷು ಹರಿವಂಶೇ ವಿಷ್ಣುಪರ್ವಣಿ ಕೃಷ್ಣಜ್ವರಯುದ್ಧೇ ಷಟ್‌ಸಪ್ತತ್ಯಧಿಕಶತತಮೋಽಧ್ಯಾಯಃ।।


  1. ವಜ್ರಂ (ಗೀತಾ ಪ್ರೆಸ್). ↩︎

  2. ನಿಶಾಕರಃ (ಗೀತಾ ಪ್ರೆಸ್). ↩︎