175: ಕೃಷ್ಣಸ್ಯ ಶೋಣಿತಪುರಗಮನಮ್

ಪ್ರವೇಶ

।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।

ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ

ಶ್ರೀ ಮಹಾಭಾರತ

ಖಿಲಭಾಗೇ ಹರಿವಂಶಃ

ವಿಷ್ಣು ಪರ್ವ

ಅಧ್ಯಾಯ 175

ಸಾರ

ಅನಿರುದ್ಧನ ಅಪಹರಣದಿಂದ ರಾಣೀವಾಸದಲ್ಲಿ ಶೋಕ (1-12). ಶ್ರೀಕೃಷ್ಣ ಮತ್ತು ಯಾದವರ ಚಿಂತೆ, ಗುಪ್ತಚರರ ನಿಯುಕ್ತಿ ಮತ್ತು ಅವರ ವಿಫಲತೆ (13-71). ನಾರದನ ಆಗಮನ ಮತ್ತು ಅನಿರುದ್ಧನ ಸಮಾಚಾರವನ್ನು ನಿವೇದಿಸಿದುದು (72-94). ಶ್ರೀಕೃಷ್ಣನು ಗರುಡನನ್ನು ಆವಾಹಿಸಿದುದು, ಗರುಡ-ಶ್ರೀಕೃಷ್ಣರ ಸಂವಾದ ಮತ್ತು ಶ್ರೀಕೃಷ್ಣನು ಗರುಡನನ್ನೇರಿ ಶೋಣಿತಪುರಕ್ಕೆ ಪ್ರಯಾಣಿಸಿದುದು (95-145).

19175001 ವೈಶಂಪಾಯನ ಉವಾಚ ।
19175001a ತತೋಽನಿರುದ್ಧಸ್ಯ ಗೃಹೇ ರುರುದುಃ ಸರ್ವಯೋಷಿತಃ ।
19175001c ಪ್ರಿಯಂ ನಾಥಮಪಶ್ಯಂತ್ಯಃ ಕುರರ್ಯ ಇವ ಸಂಘಶಃ ।।

ವೈಶಂಪಾಯನನು ಹೇಳಿದನು: “ಪ್ರಿಯ ನಾಥನನ್ನು ಕಾಣದೇ ಅನಿರುದ್ಧನ ಗೃಹದಲ್ಲಿ ಸರ್ವ ಸ್ತ್ರೀಯರು ಒಟ್ಟಾಗಿ ಕುರರಿ ಪಕ್ಷಿಗಳಂತೆ ರೋದಿಸತೊಡಗಿದರು.

19175002a ಅಹೋ ಧಿಕ್ಕಿಮಿದಂ ನಾಥ ನಾಥೇ ಕೃಷ್ಣೇ ವ್ಯವಸ್ಥಿತೇ ।
19175002c ಅನಾಥಾ ಇವ ಸಂತ್ರಸ್ತಾ ರುದಿಮೋ ಭಯಪೀಡಿತಾಃ ।।

“ಅಯ್ಯೋ ಧಿಕ್ಕಾರ! ಇದೇನಾಯಿತು! ನಾಥನಾಥ ಕೃಷ್ಣನು ಇರುವಾಗ ನಾವು ಅನಾಥರಂತೆ ಭಯಪೀಡಿತರಾಗಿ ನಡುಗುತ್ತಾ ರೋದಿಸುತ್ತಿದ್ದೇವೆ.

19175003a ಯಸ್ಯೇಂದ್ರಪ್ರಮುಖಾ ದೇವಾಃ ಸಾದಿತ್ಯಾಃ ಸಮರುದ್ಗಣಾಃ ।
19175003c ಬಾಹುಚ್ಛಾಯಾಮುಪಾಶ್ರಿತ್ಯ ವಸಂತಿ ದಿವಿ ದೇವತಾಃ ।।
19175004a ತಸ್ಯೋತ್ಪನ್ನಮಿದಂ ಲೋಕೇ ಭಯದಸ್ಯ ಮಹಾಭಯಮ್ ।
19175004c ತಸ್ಯಾನಿರುದ್ಧಃ ಪೌತ್ರಸ್ತು ವೀರಾಃ ಕೇನಾಪಿ ನೋ ಹೃತಃ ।।

ಯಾರ ಬಾಹುಬಲವನ್ನಾಶ್ರಯಿಸಿ ದಿವಿಯಲ್ಲಿ ಆದಿತ್ಯ-ಮರುದ್ಗಣಗಳೊಂದಿಗೆ ಇಂದ್ರಪ್ರಮುಖ ದೇವತೆಗಳು ವಾಸಿಸುತ್ತಾರೋ ಆ ಲೋಕಕ್ಕೇ ಮಹಾಭಯವನ್ನು ನೀಡುವವನ ವೀರ ಪೌತ್ರ ನಮ್ಮ ಸ್ವಾಮೀ ಅನಿರುದ್ಧನನ್ನು ಇಂದು ಯಾರೋ ಅಪಹರಿಸಿದ್ದಾರೆ.

19175005a ಅಹೋ ನಾಸ್ತಿ ಭಯಂ ನೂನಂ ತಸ್ಯ ಲೋಕೇ ಸುದುರ್ಮತೇಃ।
19175005c ವಾಸುದೇವಸ್ಯ ಯಃ ಕ್ರೋಧಮುತ್ಪಾದಯತಿ ದುಃಸಹಮ್ ।।

ಅಹೋ! ಸಹಿಸಲಸಾಧ್ಯವಾದ ವಾಸುದೇವನ ಕೋಪವನ್ನು ಹುಟ್ಟಿಸುವ ಆ ದುರ್ಬುದ್ಧಿಗೆ ಲೋಕದಲ್ಲಿ ಕಿಂಚಿತ್ತೂ ಭಯವಿರಲಿಕ್ಕಿಲ್ಲ.

19175006a ವ್ಯಾದಿತಾಸ್ಯಸ್ಯ ಯೋ ಮೃತ್ಯೋರ್ದಂಷ್ಟ್ರಾಗ್ರೇ ಪರಿವರ್ತತೇ ।
19175006c ಸ ವಾಸುದೇವಂ ಸಮರೇ ಮೋಹಾದಭ್ಯುದಿಯಾದ್ರಿಪುಃ ।।

ಬಾಯಿಕಳೆದ ಮೃತ್ಯುವಿನ ದಾಡೆಗಳ ಎದಿರು ತಿರುಗಾಡುತ್ತಿರುವವನಂತೆ ಅವನು ಮೋಹವಶನಾಗಿ ಸಮರದಲ್ಲಿ ರಿಪು ವಾಸುದೇವನನ್ನು ಎದುರಿಸುತ್ತಾನೆ.

19175007a ಇದಮೇವಂವಿಧಂ ಕೃತ್ವಾ ವಿಪ್ರಿಯಂ ಯದುಪುಂಗವೇ ।
19175007c ಕಥಂ ಜೀವನ್ವಿಮುಚ್ಯೇತ ಸಾಕ್ಷಾದಪಿ ಶಚೀಪತಿಃ ।।

ಯದುಪುಂಗವನಿಗೆ ಈ ರೀತಿ ವಿಪ್ರಿಯವಾದುದನ್ನು ಮಾಡಿದವನು ಸಾಕ್ಷಾತ್ ಶಚೀಪತಿಯೇ ಅಗಿದ್ದರೂ ಅವನು ಹೇಗೆ ಜೀವವನ್ನು ತೊರೆದಾನು?

19175008a ಹೃತನಾಥಾಃ ಸ್ಮ ಶೋಚ್ಯಾಃ ಸ್ಮ ವಯಂ ನಾಥಂ ವಿನಾ ಕೃತಾಃ ।
19175008c ವಿಪ್ರಯೋಗೇಣ ನಾಥಸ್ಯ ಕೃತಾಂತವಶಗಾಃ ಕೃತಾಃ ।।

ನಮ್ಮ ನಾಥನ ಅಪಹರಣದಿಂದಾಗಿ ನಾವು ಅನಾಥರೂ ಶೋಚನೀಯರೂ ಆಗಿಬಿಟ್ಟಿದ್ದೇವೆ. ನಾಥನ ವಿಯೋಗದಿಂದ ನಾವು ಕೃತಾಂತನ ವಶರಾಗಿಬಿಟ್ಟಿದ್ದೇವೆ.”

19175009a ಇತ್ಯೇವಂ ತಾ ವದಂತ್ಯಶ್ಚ ರುದಂತ್ಯಶ್ಚ ಪುನಃ ಪುನಃ ।
19175009c ನೇತ್ರಜಂ ವಾರಿ ಮುಮುಚುರಶಿವಂ ಪರಮಾಂಗನಾಃ ।।

ಆ ಸುಂದರಾಂಗಿಯರು ಹೀಗೆ ಪುನಃ ಪುನಃ ಹೇಳಿಕೊಳ್ಳುತ್ತಾ ಮತ್ತು ರೋದಿಸುತ್ತಾ ಕಣ್ಣುಗಳಿಂದ ಅಮಂಗಲಕರ ಕಣ್ಣೀರನ್ನು ಸುರಿಸಿದರು.

19175010a ತಾಸಾಂ ಬಾಷ್ಪಾಂಬುಪೂರ್ಣಾನಿ ನಯನಾನಿ ಚಕಾಶಿರೇ ।
19175010c ಸಲಿಲೇನಾಪ್ಲುತಾನೀವ ಪಂಕಜಾನಿ ಜಲಾಗಮೇ ।।

ಕಣ್ಣೀರಿನಿಂದ ತುಂಬಿಹೋಗಿದ್ದ ಅವರ ಕಣ್ಣುಗಳು ಮಳೆಗಾಲದಲ್ಲಿ ನೀರಿನಿಂದ ತೋಯ್ದುಹೋದ ಕಮಲಗಳಂತೆ ಪ್ರಕಾಶಿಸುತ್ತಿದ್ದವು.

19175011a ತಾಸಾಮರಾಲಪಕ್ಷ್ಮಾಣಿ ರಾಜಯಂತಿ ಶುಭಾನಿ ಚ ।
19175011c ರುಧಿರೇಣಾಪ್ಲುತಾನೀವ ನಯನಾನಿ ಚಕಾಶಿರೇ ।।

ಅವರ ಸುಂದರ ಹುಬ್ಬುಗಳ ಕೆಂಪು ಕಣ್ಣುಗಳು ರಕ್ತದಲ್ಲಿ ಮುಳುಗಿಹೋಗಿವೆಯೋ ಎಂಬಂತೆ ತೋರುತ್ತಿದ್ದವು.

19175012a ತಾಸಾಂ ಹರ್ಮ್ಯತಲಸ್ಥಾಣಾಂ ಪೂರ್ಣ ಆಸೀನ್ಮಹಾಸ್ವನಃ ।
19175012c ಕುರರೀಣಾಮಿವಾಕಾಶೇ ರುದತೀನಾಂ ಸಹಸ್ರಶಃ ।।

ಅಟ್ಟದ ಮೇಲೆ ಕುಳಿತು ರೋದಿಸುತ್ತಿದ್ದ ಆ ಸುಂದರಿಯರ ರೋದನವು ಎಲ್ಲಕಡೆ ಹರಡಿ ಆಕಾಶದಲ್ಲಿ ಸಹಸ್ರಾರು ಕುರರೀ ಪಕ್ಷಿಗಳು ಕೂಗುತ್ತಿವೆಯೋ ಎಂಬಂತೆ ಕೇಳಿಬರುತ್ತಿತ್ತು.

19175013a ತೇ ಶ್ರುತ್ವಾ ನಿನದಂ ಘೋರಮಪೂರ್ವಂ ಭಯಮಾಗತಮ್ ।
19175013c ಉತ್ಪೇತುಃ ಸಹಸಾ ಸ್ವೇಭ್ಯೋ ಗೃಹೇಭ್ಯಃ ಪುರುಷರ್ಷಭಾಃ ।।

ಮೊದಲೆಂದೂ ಕೇಳಿರದ, ಭಯವನ್ನುಂಟುಮಾಡುವ ಆ ಘೋರ ರೋದನವನ್ನು ಕೇಳಿ ತಮ್ಮ ತಮ್ಮ ಮನೆಗಳಲ್ಲಿದ್ದ ಪುರುಷರ್ಷಭರು ಒಮ್ಮೆಲೇ ಎದ್ದು ಕುಳಿತರು.

19175014a ಕಸ್ಮಾದೇಷೋಽನಿರುದ್ಧಸ್ಯ ಶ್ರೂಯತೇ ಸುಮಹಾಸ್ವನಃ ।
19175014c ಗೃಹೇ ಕೃಷ್ಣಾಭಿಗುಪ್ತಾನಾಂ ಕುತೋ ನೋ ಭಯಮಾಗತಮ್।।

“ಅನಿರುದ್ಧನ ಭವನದಿಂದ ಇದೇನು ಮಹಾಸ್ವನವು ಕೇಳಿಬರುತ್ತಿದೆ? ಕೃಷ್ಣನು ರಕ್ಷಿಸುತ್ತಿರುವ ನಮ್ಮ ಮನೆಗಳಲ್ಲಿ ಈ ಭಯವು ಎಲ್ಲಿಂದ ಬಂದಿತು?”

19175015a ಇತ್ಯೇವಮೂಚುಸ್ತೇಽನ್ಯೋನ್ಯಂ ಸ್ನೇಹವಿಕ್ಲವಗದ್ಗದಾಃ ।
19175015c ಅಧರ್ಷಿತಾ ಯಥಾ ಸಿಂಹಾ ಗುಹಾಭ್ಯ ಇವ ನಿಃಸೃತಾಃ ।।

ಹೀಗೆ ಅವರು ಅನ್ಯೋನ್ಯರಲ್ಲಿ ಸ್ನೇಹಭಾವದಿಂದ ಗದ್ಗದ ಧ್ವನಿಗಳಲ್ಲಿ ಮಾತನಾಡತೊಡಗಿದರು. ಯಾರಿಂದಲೂ ಭಯವಿಲ್ಲದಿದ್ದ ಸಿಂಹವು ಗುಹೆಯಿಂದ ಹೇಗೋ ಹಾಗೆ ಅವರು ತಮ್ಮ ತಮ್ಮ ಮನೆಗಳಿಂದ ಹೊರಬಂದರು.

19175016a ಸನ್ನಾಹಭೇರೀ ಕೃಷ್ಣಸ್ಯ ಆಹತಾ ಮಹತೀ ತದಾ ।
19175016c ಯಸ್ಯಾಃ ಶಬ್ದೇನ ತೇ ಸರ್ವೇ ಸಮಾಗಮ್ಯ ಚ ಧಿಷ್ಠಿತಾಃ ।।

ಕೃಷ್ಣನ ಮಹಾ ನಗಾರಿಯಿಂದ ಸನ್ನಾಹಭೇರಿಯು ಕೇಳಿಬಂದಿತು. ಆ ಶಬ್ದವನ್ನು ಕೇಳಿ ಎಲ್ಲರೂ ಒಟ್ಟಾಗಿ ಬಂದು ನಿಂತರು.

19175017a ಕಿಮೇತದಿತಿ ತೇಽನ್ಯೋನ್ಯಂ ಸಮಪೃಚ್ಛಂತ ಯಾದವಾಃ ।
19175017c ಅನ್ಯೋನ್ಯಸ್ಯ ಹಿ ತೇ ಸರ್ವೇ ಯಥಾವೃತ್ತಮವೇದಯನ್ ।।

ಏನಾಯಿತು ಎಂದು ಯಾದವರು ಅನ್ಯೋನ್ಯರಲ್ಲಿ ಕೇಳಿದರು. ತಿಳಿದವರು ಎಲ್ಲರೂ ಪರಸ್ಪರರಿಗೆ ನಡೆದುದನ್ನು ತಿಳಿಸಿದರು.

19175018a ತತಸ್ತೇ ಬಾಷ್ಪಪೂರ್ಣಾಕ್ಷಾಃ ಕ್ರೋಧಸಂರಕ್ತಲೋಚನಾಃ ।
19175018c ನಿಃಶ್ವಸಂತೋ ವ್ಯತಿಷ್ಠಂತ ಯಾದವಾ ಯುದ್ಧದುರ್ಮದಾಃ ।।

ಆಗ ಯುದ್ಧದುರ್ಮದ ಯಾದವರು ಕಣ್ಣೀರುತುಂಬಿಸಿಕೊಂಡು, ಕ್ರೋಧದಿಂದ ಕಣ್ಣುಕೆಂಪುಮಾಡಿಕೊಂಡು ದೀರ್ಘ ನಿಟ್ಟುಸಿರು ಬಿಡುತ್ತಾ ನಿಂತುಕೊಂಡರು.

19175019a ತೂಷ್ಣೀಂಭೂತೇಷು ಸರ್ವೇಷು ವಿಪೃಥುರ್ವಾಕ್ಯಮಬ್ರವೀತ್ ।
19175019c ಕೃಷ್ಣಂ ಪ್ರಹರತಾಂ ಶ್ರೇಷ್ಠಂ ನಿಃಶ್ವಸಂತಂ ಮುಹುರ್ಮುಹುಃ ।।

ಎಲ್ಲರೂ ಸುಮ್ಮನಾಗಲು ವಿಪೃಥನು ಪುನಃ ಪುನಃ ನಿಟ್ಟುಸಿರು ಬಿಡುತ್ತಾ ಪ್ರಹಾರಮಾಡುವವರಲ್ಲಿ ಶ್ರೇಷ್ಠ ಕೃಷ್ಣನಿಗೆ ಹೇಳಿದನು:

19175020a ಕಿಮಿದಂ ಚಿಂತಯಾವಿಷ್ಟಃ ಪುರುಷೇಂದ್ರ ಭವಾನಿಹ ।
19175020c ತವ ಬಾಹುಬಲಪ್ರಾಣಾಃ ಸ್ವಾಸ್ಥಿತಾಃ ಸರ್ವಯಾದವಾಃ ।।

“ಪುರುಷೇಂದ್ರ! ನೀನು ಏಕೆ ಹೀಗೆ ಚಿಂತಾವಿಷ್ಟನಾಗಿರುವೆ? ಸರ್ವಯಾದವರೂ ನಿನ್ನ ಬಾಹುಬಲದ ಭರವಸೆಯಿಂದಲೇ ಇಲ್ಲಿ ಸ್ವಸ್ಥರಾಗಿ ವಾಸಿಸುತ್ತಿದ್ದಾರೆ.

19175021a ಭವಂತಮಾಶ್ರಿತಾಃ ಕೃಷ್ಣ ಸಂವಿಭಕ್ತಾಶ್ಚ ಸರ್ವಶಃ ।
19175021c ತಥೈವ ಬಲವಾಂಶಕ್ರಸ್ತ್ವಯ್ಯಾವೇಶ್ಯ ಜಯಾಜಯೌ ।।
19175022a ಸುಖಂ ಸ್ವಪಿತಿ ನಿಃಶಂಕಃ ಕಥಂ ತ್ವಂ ಚಿಂತಯಾನ್ವಿತಃ ।
19175022c ಶೋಕಸಾಗರಮಕ್ಷೋಭ್ಯಂ ಸರ್ವೇ ತೇ ಜ್ಞಾತಯೋ ಗತಾಃ ।।

ಕೃಷ್ಣ! ನಿನ್ನನ್ನು ಆಶ್ರಯಿಸಿರುವ ನಮಗೆಲ್ಲರಿಗೆ ಪ್ರತ್ಯೇಕ ಪ್ರತ್ಯೇಕವಾಗಿ ಸುಖ-ಸುವಿಧಗಳನ್ನು ಕಲ್ಪಿಸಿಕೊಟ್ಟಿದ್ದೀಯೆ. ಹಾಗೆಯೇ ಬಲವಾನ್ ಶಕ್ರನೂ ಕೂಡ ಜಯಾಜಯಗಳನ್ನು ನಿನ್ನ ಮೇಲಿರಿಸಿ ನಿಃಶಂಕನಾಗಿ ಸುಖವಾಗಿ ನಿದ್ರಿಸುತ್ತಾನೆ. ಹೀಗಿರುವಾಗ ನೀನು ಹೇಗೆ ಚಿಂತಾನ್ವಿತನಾಗಿರುವೆ? ನಿನ್ನ ಈ ಪರಿಸ್ಥಿತಿಯನ್ನು ತಿಳಿದು ನಾವೆಲ್ಲರೂ ಶೋಕಸಾಗರದಲ್ಲಿ ಮುಳುಗಿ ಹೋಗಿದ್ದೇವೆ.

19175023a ತಾನ್ಮಜ್ಜಮಾನಾನೇಕಸ್ತ್ವಂ ಸಮುದ್ಧರ ಮಹಾಭುಜ ।
19175023c ಕಿಮೇವಂ ಚಿಂತಯಾವಿಷ್ಟೋ ನ ಕಿಂಚಿದಪಿ ಭಾಶಸೇ ।।
19175024a ಚಿಂತಾಂ ಕರ್ತುಂ ವೃಥಾ ದೇವ ನ ತ್ವಮರ್ಹಸಿ ಮಾಧವಾ ।

ಮಹಾಭುಜ! ನೀನೊಬ್ಬನೇ ಮುಳುಗಿಹೋಗುತ್ತಿರುವ ನಮ್ಮನ್ನು ಉದ್ಧರಿಸು. ಈ ರೀತಿ ಚಿಂತಾವಿಷ್ಟನಾಗಿ ನೀನೇಕೆ ಏನೂ ಮಾತನಾಡುತ್ತಿಲ್ಲ? ದೇವ! ಮಾಧವ! ವೃಥಾ ಚಿಂತಿಸುವುದು ನಿನಗೆ ತಕ್ಕುದಲ್ಲ.”

19175024c ಇತ್ಯೇವಮುಕ್ತಃ ಕೃಷ್ಣಸ್ತು ನಿಃಶ್ವಸ್ಯ ಸುಚಿರಂ ಬಹು ।।
19175025a ಪ್ರಾಹ ವಾಕ್ಯಂ ಸ ವಾಕ್ಯಜ್ಞೋ ಬೃಹಸ್ಪತಿರಿವ ಸ್ವಯಮ್ ।

ಅವನು ಹೀಗೆ ಹೇಳಲು ವಾಕ್ಯಜ್ಞ ಕೃಷ್ಣನು ದೀರ್ಘಕಾಲ ನಿಟ್ಟುಸಿರು ಬಿಡುತ್ತಾ ಸ್ವಯಂ ಬೃಹಸ್ಪತಿಯಂತೆ ಈ ಮಾತನ್ನಾಡಿದನು.

19175025 ಶ್ರೀಕೃಷ್ಣ ಉವಾಚ ।
19175025c ವಿಪೃಥೋ ಚಿಂತಯಾವಿಷ್ಟೋ ಹ್ಯೇತತ್ಕಾರ್ಯಮಚಿಂತಯಮ್ ।।
19175036a ವಿಚಿಂತಯಂಸ್ತ್ವಹಂ ಚಾಸ್ಯ ಕಾರ್ಯಸ್ಯ ನ ಲಭೇ ಗತಿಮ್ ।
19175036c ತಥಾಹಂ ಭವತಾಪ್ಯುಕ್ತೋ ನೋತ್ತರಂ ವಿದಧೇ ಕ್ವಚಿತ್ ।।

ಶ್ರೀಕೃಷ್ಣನು ಹೇಳಿದನು: “ವಿಪೃಥೋ! ಚಿಂತಾವಿಷ್ಟನಾಗಿ ನಾನು ಈ ಕಾರ್ಯದ ಕುರಿತೇ ಯೋಚಿಸುತ್ತಿದ್ದೆ. ಆದರೆ ಯೋಚಿಸಿದರೂ ನನಗೆ ಈ ಕಾರ್ಯದ ಆಧಾರವು ದೊರೆಯುತ್ತಿಲ್ಲ. ಆದುದರಿಂದ ನೀನು ಕೇಳಿದರೂ ನಿನಗೆ ಯಾವ ಉತ್ತರವನ್ನೂ ಕೊಡಲಾರದಾಗಿದ್ದೇನೆ.

19175027a ದಾಶಾರ್ಹಗಣಮಧ್ಯೇಽಹಂ ವದಾಮ್ಯರ್ಥವತೀಂ ಗಿರಮ್ ।
19175027c ಶೃಣುಧ್ವಂ ಯಾದವಾಃ ಸರ್ವೇ ಯಥಾ ಚಿಂತಾನ್ವಿತೋ ಹ್ಯಹಮ್ ।।

ದಾಶಾರ್ಹಗಣದ ಮಧ್ಯೆ ನಾನು ಹೇಳುವ ಅರ್ಥವತ್ತಾದ ಮಾತನ್ನು ಕೇಳಿ. ಸರ್ವಯಾದವರೇ! ನಾನು ಯಾವ ಚಿಂತೆಯಲ್ಲಿದ್ದೇನೆ ಎನ್ನುವುದನ್ನು ಕೇಳಿ.

19175028a ಅನಿರುದ್ಧೇ ಹೃತೇ ವೀರೇ ಪೃಥಿವ್ಯಾಂ ಸರ್ವಪಾರ್ಥಿವಾಃ ।
19175028c ಅಶಕ್ತಾ ಇತಿ ಮಂಸ್ಯಂತೇ ಸರ್ವಾನಸ್ಮಾನ್ಸ್ವಬಾಂಧವಾನ್ ।।

ವೀರ ಅನಿರುದ್ಧನ ಅಪಹರಣದಿಂದಾಗಿ ಪೃಥ್ವಿಯ ಸರ್ವಪಾರ್ಥಿವರೂ, ನಮ್ಮ ಸರ್ವ ಬಾಂಧವರೂ ನಮ್ಮನ್ನು ಅಶಕ್ತರು ಎಂದು ತಿಳಿಯುತ್ತಾರೆ.

19175029a ಆಹುಕಶ್ಚೈವ ನೋ ರಾಜಾ ಹೃತಃ ಶಾಲ್ವೇನ ವೈ ಪುರಾ ।
19175029c ಪ್ರತ್ಯಾನೀತಃ ಸ ಚಾಸ್ಮಾಭಿರ್ಯುದ್ಧಂ ಕೃತ್ವಾ ಸುದಾರುಣಮ್।।

ಹಿಂದೆ ಶಾಲ್ವನು ನಮ್ಮ ರಾಜಾ ಆಹುಕ ಉಗ್ರಸೇನನನ್ನು ಅಪಹರಿಸಿದ್ದನು. ಆಗ ನಾವು ದಾರುಣ ಯುದ್ಧ ಮಾಡಿ ಅವನನ್ನು ಮರಳಿ ತಂದಿದ್ದೆವು.

19175030a ಪ್ರದ್ಯುಮ್ನಶ್ಚಾಪಿ ನೋ ಬಾಲಃ ಶಂಬರೇಣ ಹೃತೋ ಹ್ಯಭೂತ್ ।
19175030c ಸ ತಂ ನಿಹತ್ಯ ಸಮರೇ ಪ್ರಾಪ್ತೋ ರುಕ್ಮಿಣಿನಂದನಃ ।।

ನಮ್ಮ ಬಾಲಕ ಪ್ರದ್ಯುಮ್ನನನ್ನೂ ಶಂಬರನು ಅಪಹರಿಸಿದ್ದನು. ಆದರೆ ರುಕ್ಮಿಣಿನಂದನ ಪ್ರದ್ಯುಮ್ನನು ಸಮರದಲ್ಲಿ ಅವನನ್ನು ಸಂಹರಿಸಿ ಹಿಂದಿರುಗಿದ್ದನು.

19175031a ಇದಂ ತು ಸುಮಹತ್ಕಷ್ಟಂ ಪ್ರಾದ್ಯುಮ್ನಿಃ ಕ್ವ ಪ್ರವಾಸಿತಃ ।
19175031c ನೈವಂವಿಧಮಹಂ ದೋಷಂ ನ ಸ್ಮರೇ ಮನುಜರ್ಷಭಾಃ ।।

ಆದರೆ ಇದು ಮಹಾ ಕಷ್ಟಕರವಾದುದು. ಪ್ರದ್ಯುಮ್ನನ ಮಗ ಅನಿರುದ್ಧನನ್ನು ಎಲ್ಲಿಗೆ ಕೊಂಡೊಯ್ಯಲಾಗಿದೆ ಎನ್ನುವುದು ನಮಗೆ ತಿಳಿದಿಲ್ಲ. ಮನುಜರ್ಷಭರೇ! ಇಂತಹ ದೋಷವು ಹಿಂದಾದುದು ನನಗೆ ನೆನಪಿಲ್ಲ.

19175032a ಭಸ್ಮನಾ ಗುಂಠಿತಃ ಪಾದೋ ಯೇನ ಮೇ ಮೂರ್ಧ್ನಿ ಪಾತಿತಃ।
19175032c ತಸ್ಯಾಹಂ ಸಾನುಬಂಧಸ್ಯ ಹರಿಷ್ಯೇ ಜೀವಿತಂ ರಣೇ ।।

ನನ್ನ ಮಸ್ತಕದ ಮೇಲೆ ಈ ಭಸ್ಮದಲ್ಲಿ ಅದ್ದಿದ ಪಾದವನ್ನು ಇಟ್ಟವನನ್ನು ಅವನ ಅನುಯಾಯಿಗಳೊಂದಿಗೆ ರಣದಲ್ಲಿ ಸಂಹರಿಸುತ್ತೇನೆ.”

19175033a ಇತ್ಯೇವಮುಕ್ತೇ ಕೃಷ್ಣೇನ ಸಾತ್ಯಕಿರ್ವಾಕ್ಯಮಬ್ರವೀತ್ ।
19175033c ಚಾರಾಃ ಕೃಷ್ಣ ಪ್ರಣೀಯಂತಾಮನಿರುದ್ಧಸ್ಯ ಮಾರ್ಗಣೇ ।
19175033e ಸಪರ್ವತವನೋದ್ದೇಶಾಂ ಮಾರ್ಗಂತು ವಸುಧಾಮಿಮಾಮ್ ।।

ಕೃಷ್ಣನು ಹೀಗೆ ಹೇಳಲು, ಸಾತ್ಯಕಿಯು ಹೇಳಿದನು: “ಕೃಷ್ಣ! ಅನಿರುದ್ಧನನ್ನು ಹುಡುಕಲು ಚಾರರನ್ನು ಕಳುಹಿಸಬೇಕು. ಈ ವಸುಧೆಯ ಪರ್ವತ ವನಗಳಲ್ಲೆಲ್ಲಾ ಅವನನ್ನು ಹುಡುಕಲಿ!”

19175034a ಆಹುಕಂ ಪ್ರಾಹ ಕೃಷ್ಣಸ್ತು ಸ್ಮಿತಂ ಕೃತ್ವಾ ವಚಸ್ತದಾ ।
19175034c ಆಭ್ಯಂತರಾಶ್ಚ ಬಾಹ್ಯಾಶ್ಚ ವ್ಯಾದಿಶ್ಯಂತಾಂ ಚರಾ ನೃಪ ।।

ಆಗ ಕೃಷ್ಣನು ನಸುನಗುತ್ತಾ ಆಹುಕ ಉಗ್ರಸೇನನಿಗೆ “ನೃಪ! ಪ್ರಕಟ ಮತ್ತು ಗುಪ್ತ ಚರರನ್ನು ಈ ಕಾರ್ಯಕ್ಕೆ ನಿಯುಕ್ತ ಗೊಳಿಸು” ಎಂದನು.”

19175035 ವೈಶಂಪಾಯನ ಉವಾಚ ।
19175035a ಕೇಶವಸ್ಯ ವಚಃ ಶ್ರುತ್ವಾ ಆಹುಕಸ್ತ್ವರಿತೋಽಭವತ್ ।
19175035c ಅನ್ವೇಷಣೇಽನಿರುದ್ಧಸ್ಯ ಸ ಚಾರಾಂದಿಷ್ಟವಾಂಸ್ತದಾ ।।

ವೈಶಂಪಾಯನನು ಹೇಳಿದನು: “ಕೇಶವನ ಮಾತನ್ನು ಕೇಳಿ ಆಹುಕನು ತ್ವರೆಮಾಡಿ ಅನಿರುದ್ಧನ ಅನ್ವೇಷಣೆಗೆ ಚಾರರನ್ನು ಆಜ್ಞಾಪಿಸಿದನು.

19175036a ತತಶ್ಚಾರಾಸ್ತು ವ್ಯಾದಿಷ್ಟಾಃ ಪಾರ್ಥಿವೇನ ಯಶಸ್ವಿನಾ ।
19175036c ಹಯಾ ರಥಾಶ್ಚ ವ್ಯಾದಿಷ್ಟಾಃ ಪಾರ್ಥಿವೇನ ಮಹಾತ್ಮನಾ ।
19175036e ಅಭ್ಯಂತರಂ ಚ ಮಾರ್ಗಧ್ವಂ ಬಾಹ್ಯತಶ್ಚ ಸಮಂತತಃ ।।

ಯಶಸ್ವೀ ಮಹಾತ್ಮಾ ಪಾರ್ಥಿವನು ಚಾರರನ್ನು ನಿಯುಕ್ತಗೊಳಿಸಿ ಅವರಿಗೆ ಕುದುರೆ-ರಥಗಳನ್ನು ನಿಯೋಜಿಸಿ “ಒಳಗೆ ಮತ್ತು ಹೊರಗೆ ಎಲ್ಲಕಡೆ ಅನಿರುದ್ಧನನ್ನು ಹುಡುಕಿ!” ಎಂದು ಆಜ್ಞಾಪಿಸಿದನು.

19175037a ವೇಣುಮಂತಂ ಲತಾವಿಷ್ಟಂ ತಥಾ ರೈವತಕಂ ಗಿರಿಮ್ ।
19175037c ಋಕ್ಷವಂತಂ ಗಿರಿಂ ಚೈವ ಮಾರ್ಗಧ್ವಂ ತ್ವರಿತಾ ಹಯೈಃ ।।

“ಕುದುರೆಗಳನ್ನೇರಿ ತ್ವರೆಮಾಡಿ ವೇಣುಮಾನ್, ಲತಾವಿಷ್ಟ, ರೈವತಕ ಗಿರಿ ಮತ್ತು ಋಕ್ಷವಂತ ಗಿರಿಗಳಲ್ಲಿ ಅವನನ್ನು ಹುಡುಕಿ.

19175038a ಏಕೈಕಂ ತತ್ರ ಚೋದ್ಯಾನಂ ಮಾರ್ಗಧ್ವಂ ಕಾನನಾನಿ ಚ ।
19175038c ಯಾತವ್ಯಂ ಚಾಪಿ ನಿಃಶಂಕಮುದ್ಯಾನಾನಿ ಸಮಂತತಃ ।।
19175039a ಹಯಾನಾಂ ಚ ಸಹಸ್ರಾಣಿ ರಥಾನಾಂ ಚಾಪ್ಯನೇಕಶಃ ।
19175039c ಆರುಹ್ಯ ತ್ವರಿತಾಃ ಸರ್ವೇ ಮಾರ್ಗಧ್ವಂ ಯದುನಂದನಮ್ ।।

ಅಲ್ಲಿಯ ಒಂದೊಂದು ಉದ್ಯಾನಗಳನ್ನೂ ಕಾನನಗಳನ್ನೂ ಹುಡುಕಿ. ಉದ್ಯಾನಗಳಲ್ಲಿ ನಿಃಶಂಕವಾಗಿ ಎಲ್ಲಕಡೆ ತಿರುಗಾಡಿ. ಸಹಸ್ರಾರು ಕುದುರೆಗಳು ಮತ್ತು ಅನೇಕ ರಥಗಳನ್ನು ಏರಿ ತ್ವರೆಮಾಡಿ ಎಲ್ಲರೂ ಯದುನಂದನ ಅನಿರುದ್ಧನನ್ನು ಹುಡುಕಿ.”

19175040a ಸೇನಾಪತಿರನಾಧೃಷ್ಟೀರಿದಂ ವಚನಮಬ್ರವೀತ್ ।
19175040c ಕೃಷ್ಣಮಕ್ಲಿಷ್ಟಕರ್ಮಾಣಮಚ್ಯುತಂ ಭೀತಭೀತವತ್ ।।

ಅನಂತರ ಸೇನಾಪತಿ ಅನಾಧೃಷ್ಟಿಯು ಅಕ್ಲಿಷ್ಟಕರ್ಮಿ ಅಚ್ಯುತ ಕೃಷ್ಣನಿಗೆ ಹೆದರುತ್ತಾ ಈ ಮಾತನ್ನಾಡಿದನು.

19175041a ಶೃಣು ಕೃಷ್ಣ ವಚೋ ಮಹ್ಯಂ ರೋಚತೇ ಯದಿ ತೇ ಪ್ರಭೋ ।
19175041c ಚಿರಾತ್ಪ್ರಭೃತಿ ಮೇ ವಕ್ತುಂ ಭವಂತಂ ಜಾಯತೇ ಮತಿಃ ।।

“ಪ್ರಭೋ! ಕೃಷ್ಣ! ನಿನಗೆ ಇಷ್ಟವಾದರೆ ನನ್ನ ಮಾತನ್ನು ಕೇಳು. ಇದನ್ನು ನಿನಗೆ ಹೇಳಬೇಕೆಂದು ಸ್ವಲ್ಪ ತಡವಾಗಿ ನನ್ನ ಮನಸ್ಸಿಗೆ ಅನಿಸಿತು.

19175042a ಅಸಿಲೋಮಾ ಪುಲೋಮಾ ಚ ನಿಸುಂದನರಕೌ ಹತೌ ।
19175042c ಸೌಭಃ ಶಾಲ್ವಶ್ಚ ನಿಹತೌ ಮೈಂದೋ ದ್ವಿವಿದ ಏವ ಚ ।।

ನಿನ್ನಿಂದ ಅಸಿಲೋಮಾ, ಪುಲೋಮಾ, ನಿಸುಂದ ಮತ್ತು ನರಕರು ಹತರಾದರು. ಹಾಗೆಯೇ ಸೌಭ ಮತ್ತು ಶಾಲ್ವರು, ಮೈಂದ ಮತ್ತು ದ್ವಿವಿದರು ಕೂಡ ನಿನ್ನಿಂತ ಹತರಾದರು.

19175043a ಹಯಗ್ರೀವಶ್ಚ ಸುಮಹಾನ್ಸಾನುಬಂಧಸ್ತ್ವಯಾ ಹತಃ ।
19175043c ತಾದೃಶೇ ವಿಗ್ರಹೇ ವೃತ್ತೇ ದೇವಹೇತೋಃ ಸುದಾರುಣೇ ।।
19175044a ಸರ್ವಾಣ್ಯೇತಾನಿ ಕರ್ಮಾಣಿ ನಿಃಶೇಷಾಣಿ ರಣೇ ರಣೇ ।
19175044c ಕೃತವಾನಸಿ ಗೋವಿಂದ ಪಾರ್ಷ್ಣಿಗ್ರಾಹಶ್ಚ ನಾಸ್ತಿ ತೇ ।।

ಮಹಾಸುರ ಹಯಗ್ರೀವನೂ ಅವನ ಅನುಯಾಯಿಗಳೊಂದಿಗೆ ನಿನ್ನಿಂದ ಹತನಾದನು. ದೇವತೆಗಳಿಗಾಗಿ ನೀನು ಎಂಥೆಂಥಹ ಸುದಾರುಣ ಯುದ್ಧಗಳನ್ನು ಮಾಡಿದ್ದೀಯೆ! ಗೋವಿಂದ! ಪ್ರತಿಯೊಂದು ರಣದಲ್ಲಿಯೂ ನೀನು ಈ ಎಲ್ಲವನ್ನೂ ಸಂಪೂರ್ಣವಾಗಿ ನೆರವೇರಿಸಿರುವೆ. ಆದರೆ ನಿನಗೆ ಸಹಾಯಮಾಡುವವರು ಯಾರೂ ಇಲ್ಲವಾಗಿದ್ದಾರೆ.

19175045a ಇದಂ ಕರ್ಮ ತ್ವಯಾ ಕೃಷ್ಣ ಸಾನುಬಂಧಂ ಮಹತ್ಕೃತಮ್ ।
19175045c ಪಾರಿಜಾತಸ್ಯ ಹರಣೇ ಯತ್ಕಿತಂ ಕರ್ಮ ದುಷ್ಕರಮ್ ।।

ಕೃಷ್ಣ! ಪಾರಿಜಾತದ ಹರಣದ ಸಮಯದಲ್ಲಿ ನೀನು ಮಾಡಿದ ದುಷ್ಕರ ಕರ್ಮವು ಮಹತ್ತರವಾದದ್ದಾಗಿತ್ತು.

19175046a ತತ್ರ ಶಕ್ರಸ್ತ್ವಯಾ ಕೃಷ್ಣ ಐರಾವತಶಿರೋಗತಃ ।
19175046c ನಿರ್ಜಿತೋ ಬಾಹುವೀರ್ಯೇಣ ತ್ವಯಾ ಯುದ್ಧವಿಶಾರದಃ ।।

ಕೃಷ್ಣ! ಆಗ ನಿನ್ನ ಬಾಹುವೀರ್ಯದಿಂದ ಐರಾವತಶಿರೋಗತನಾಗಿದ್ದ ಯುದ್ಧವಿಶಾರದ ಶಕ್ರನನ್ನೂ ಗೆದ್ದಿದ್ದೆ.

19175047a ತೇನ ವೈರಂ ತ್ವಯಾ ಸಾರ್ಧಂ ಕರ್ತವ್ಯಂ ನಾತ್ರ ಸಂಶಯಃ ।
19175047c ವೈರಾನುಬಂಧಶ್ಚ ಮಹಾಂಸ್ತೇನ ಕಾರ್ಯಸ್ತ್ವಯಾ ಸಹ ।।

ಆದುದರಿಂದ ಅವನು ನಿನ್ನೊಡನೆ ವೈರತ್ವವನ್ನು ಸಾಧಿಸುತ್ತಿದ್ದಾನೆ ಎನ್ನುವುದರಲ್ಲಿ ಸಂಶಯವಿಲ್ಲ. ಅವನು ನಿನ್ನೊಡನೆ ಮಹಾ ವೈರವನ್ನು ಕಟ್ಟಿಕೊಂಡಿರಲು ಸಾಕು.

19175048a ತತ್ರಾನಿರುದ್ಧಹರಣಂ ಕೃತಂ ಮಘವತಾ ಸ್ವಯಮ್ ।
19175048c ನ ಹ್ಯನ್ಯಸ್ಯ ಭವೇಚ್ಛಕ್ತಿರ್ವೈರನಿರ್ಯಾತನಂ ಪ್ರತಿ ।।

ಸ್ವಯಂ ಮಘವತ ಇಂದ್ರನೇ ಅನಿರುದ್ಧನನ್ನು ಅಪಹರಿಸಿದ್ದಾನೆ. ಬೇರೆ ಯಾರಲ್ಲಿಯೂ ಈ ರೀತಿ ನಿನ್ನೊಡನಿರುವ ವೈರವನ್ನು ಸಾಧಿಸಲು ಶಕ್ತಿಯಿಲ್ಲ.”

19175049a ಇತ್ಯೇವಮುಕ್ತೇ ವಚನೇ ಕೃಷ್ಣೋ ನಾಗ ಇವ ಶ್ವಸನ್ ।
19175049c ಉವಾಚ ವಚನಂ ಧೀಮಾನನಾಧೃಷ್ಟಿಂ ಮಹಾಬಲಮ್ ।।

ಹೀಗೆ ಹೇಳಲು ಧೀಮಾನ್ ಕೃಷ್ಣನು ಸರ್ಪದಂತೆ ನಿಟ್ಟುಸಿರು ಬಿಡುತ್ತಾ ಮಹಾಬಲ ಅನಾಧೃಷ್ಟಿಗೆ ಇಂತೆಂದನು:

19175050a ಸೇನಾನೀಸ್ತಾತ ಮಾ ಮೈವಂ ನ ದೇವಾಃ ಕ್ಷುದ್ರಕರ್ಮಿಣಃ ।
19175050c ನಾಕೃತಜ್ಞಾ ನ ಚ ಕ್ಲೀಬಾ ನಾವಲಿಪ್ತಾ ನ ಬಾಲಿಶಾಃ ।।

“ಅಯ್ಯಾ! ಸೇನಾನೀ! ಹೀಗೆ ಹೇಳಬೇಡ! ದೇವತೆಗಳು ಅಂತಹ ಕ್ಷುದ್ರಕರ್ಮಿಗಳಲ್ಲಿ. ಅವರು ಅಕೃತಜ್ಞರಲ್ಲ, ಹೇಡಿಗಳಲ್ಲ ಮತ್ತು ಅವರು ಸೊಕ್ಕಿನವರೂ ಮೂಢರೂ ಅಲ್ಲ.

19175051a ದೇವತಾರ್ಥಂ ಚ ಮೇ ಯತ್ನೋ ಮಹಾಂದಾನವಸಂಕ್ಷಯೇ ।
19175051c ತೇಷಾಂ ಪ್ರಿಯಾರ್ಥಂ ಚ ರಣೇ ಹನ್ಮಿ ದೃಪ್ತಾನ್ಮಹಾಬಲಾನ್ ।।

ದೇವತೆಗಳಿಗಾಗಿಯೇ ನನ್ನ ಈ ಮಹಾ ದಾನವನಾಶದ ಯತ್ನವು ನಡೆಯುತ್ತಿರುತ್ತದೆ. ಅವರಿಗೆ ಪ್ರಿಯವನ್ನುಂಟುಮಾಡಲಿಕ್ಕಾಗಿಯೇ ನಾನು ರಣದಲ್ಲಿ ಅಭಿಮಾನೀ ಮಹಾಬಲೀ ಅಸುರರನ್ನು ವಧಿಸಿದ್ದೇನೆ.

19175052a ತತ್ಪರಸ್ತನ್ಮನಾಶ್ಚಾಸ್ಮಿ ತದ್ಭಕ್ತಸ್ತತ್ಪ್ರಿಯೇ ರತಃ ।
19175052c ಕಥಂ ಪಾಪಂ ಕರಿಷ್ಯಂತಿ ವಿಜ್ಞಾಯೈವಂವಿಧಂ ಹಿ ಮಾಮ್ ।।

ನಾನು ಮನಸ್ಸಿನಲ್ಲಿ ಅವರ ತತ್ಪರನಾಗಿದ್ದೇನೆ. ಅವರ ಭಕ್ತನೂ ಪ್ರಿಯರತನೂ ಆಗಿದ್ದೇನೆ. ನಾನು ಹೀಗೆಂದು ತಿಳಿದನಂತರವೂ ಅವರು ಏಕೆ ನನಗೆ ಪಾಪವನ್ನೆಸಗುತ್ತಾರೆ?

19175053a ಅಕ್ಷುದ್ರಾಃ ಸತ್ಯವಂತಶ್ಚ ನಿತ್ಯಂ ಭಕ್ತಾನುಕಂಪಿನಃ ।
19175053c ತೇಭ್ಯೋ ನ ವಿದ್ಯತೇ ಪಾಪಂ ಬಾಲಿಶತ್ವಾತ್ಪ್ರಭಾಷಸೇ ।।

ಅಕ್ಷುದ್ರರೂ, ಸತ್ಯವಂತರೂ, ನಿತ್ಯ ಭಕ್ತಾನುಕಂಪಿಗಳೂ ಆದ ಅವರಲ್ಲಿ ಪಾಪವಿಲ್ಲ. ಏನೂ ತಿಳಿಯದವನಂತೆ ಮಾತನಾಡುತ್ತಿದ್ದೀಯೆ!

19175054a ಕದಾಚಿದಿಹ ಪುಂಶ್ಚಲ್ಯಾ ಅನಿರುದ್ಧೋ ಹೃತೋ ಭವೇತ್ ।
19175054c ದೇವೇಷು ಸಮಹೇಂದ್ರೇಷು ನೈತತ್ಕರ್ಮ ವಿಧೀಯತೇ ।।

ಯಾವಳೋ ಪುಂಶ್ಚಲ್ಯ ಸ್ತ್ರೀಯು ಅನಿರುದ್ಧನನ್ನು ಅಪಹರಿಸಿರಬಹುದು. ಮಹೇಂದ್ರನೊಂದಿಗೆ ದೇವತೆಗಳಿಂದ ಇಂಥಹ ಕಾರ್ಯವು ನಡೆದಿರಲಿಕ್ಕಿಲ್ಲ.””

19175055 ವೈಶಂಪಾಯನ ಉವಾಚ ।
19175055a ಏವಂ ಚಿಂತಯಮಾನಸ್ಯ ಕೃಷ್ಣಸ್ಯಾದ್ಭುತಕರ್ಮಣಃ ।
19175055c ಕೃಷ್ಣಸ್ಯ ವಚನಂ ಶ್ರುತ್ವಾ ತತೋಽಕ್ರೂರೋಽಬ್ರವೀದ್ವಚಃ ।।
19175056a ಮಧುರಂ ಶ್ಲಕ್ಷ್ಣಯಾ ವಾಚಾ ಅರ್ಥವಾಕ್ಯವಿಶಾರದಃ ।
19175056c ಯಚ್ಛಕ್ರಸ್ಯ ಪ್ರಭೋ ಕಾರ್ಯಂ ತದಸ್ಮಾಕಂ ವಿನಿಶ್ಚಿತಮ್ ।।
19175057a ಅಸ್ಮಾಕಂ ಚಾಪಿ ಯತ್ಕಾರ್ಯಂ ತದ್ಧಿ ಕಾರ್ಯಂ ಶಚೀಪತೇಃ ।

ವೈಶಂಪಾಯನನು ಹೇಳಿದನು: “ಅದ್ಭುತಕರ್ಮಿ ಕೃಷ್ಣನು ಹೀಗೆ ಯೋಚಿಸುತ್ತಿರಲು ಕೃಷ್ಣನ ಮಾತನ್ನು ಕೇಳಿ ಅರ್ಥವಾಕ್ಯವಿಶಾರದ ಅಕ್ರೂರನು ಪ್ರೀತಿಯಿಂದ ಈ ಮಧುರ ಮಾತನ್ನಾಡಿದನು: “ಪ್ರಭೋ! ಇಂದ್ರನ ಕಾರ್ಯ ಮತ್ತು ನಮ್ಮ ಕಾರ್ಯ ಎರಡೂ ಒಂದೇ ಎಂದು ನಿಶ್ಚಯವಾಗಿದೆ. ಹಾಗೆಯೇ ನಮ್ಮ ಕಾರ್ಯವು ಶಚೀಪತಿಯ ಕಾರ್ಯವೂ ಹೌದು.

19175057c ಸಂರಕ್ಷ್ಯಾಶ್ಚ ವಯಂ ದೇವೈರಸ್ಮಾಭಿಶ್ಚಾಪಿ ದೇವತಾಃ ।
19175057e ದೇವತಾರ್ಥಂ ವಯಂ ಚಾಪಿ ಮಾನುಷತ್ವಮುಪಾಗತಾಃ ।।

ದೇವತೆಗಳು ನಮ್ಮನ್ನು ರಕ್ಷಿಸಬೇಕು ಮತ್ತು ನಾವು ದೇವತೆಗಳನ್ನು. ದೇವತೆಗಳಿಗಾಗಿಯೇ ನಾವು ಮನುಷತ್ವವನ್ನು ಪಡೆದುಕೊಂಡಿದ್ದೇವೆ.”

19175058a ಏವಮಕ್ರೂರವಚನೈಶ್ಚೋದಿತೋ ಮಧುಸೂದನಃ ।
19175058c ಸ್ನಿಗ್ಧಗಂಭೀರಯಾ ವಾಚಾ ಪುನಃ ಕೃಷ್ಣೋಽಭ್ಯಭಾಷತ ।।

ಅಕ್ರೂರನ ಈ ಮಾತಿನಿಂದ ಪ್ರಚೋದಿತನಾದ ಮಧುಸೂದನ ಕೃಷ್ಣನು ಸ್ನೇಹ-ಗಂಭೀರವಾಣಿಯಲ್ಲಿ ಪುನಃ ಈ ಮಾತನ್ನಾಡಿದನು:

19175059a ನಾಯಂ ದೇವೈರ್ನ ಗಂಧರ್ವೈರ್ನ ಯಕ್ಷೈರ್ನ ಚ ರಾಕ್ಷಸೈಃ ।
19175059c ಪ್ರದ್ಯುಮ್ನಪುತ್ರೋಽಪಹೃತಃ ಪುಂಶ್ಚಲ್ಯಾ ನು ಮಹಾಯಶಃ ।।

“ಮಹಾಯಶಸ್ವೀ! ಪ್ರದ್ಯುಮ್ನಪುತ್ರ ಅನಿರುದ್ಧನ ಅಪಹರಣವು ದೇವತೆಗಳಿಂದಾಗಲೀ, ಗಂಧರ್ವರಿಂದಾಗಲೀ, ಯಕ್ಷರಿಂದಾಗಲೀ ಮತ್ತು ರಾಕ್ಷಸರಿಂದಾಗಲೀ ಆಗಲಿಲ್ಲ. ಇದನ್ನು ಓರ್ವ ವ್ಯಭಿಚಾರಿಣಿಯೇ ಮಾಡಿದ್ದಾಳೆ.

19175060a ಮಾಯಾವಿದಗ್ಧಾಃ ಪುಂಶ್ಚಲ್ಯೋ ದೈತ್ಯದಾನವಯೋಷಿತಃ ।
19175060c ತಾಭಿರ್ಹೃತೋ ನ ಸಂದೇಹೋ ನಾನ್ಯತೋ ವಿದ್ಯತೇ ಭಯಮ್ ।।

ದೈತ್ಯ-ದಾನವರ ಪುಂಶ್ಚಲ್ಯ ಸ್ತ್ರೀಯರು ಮಾಯಾನಿಪುಣರಾಗಿರುತ್ತಾರೆ. ಅವರಿಂದಲೇ ಅನಿರುದ್ಧನ ಅಪಹರಣವಾಗಿದೆ. ಅನ್ಯರಿಂದ ಈ ಭಯವುಂಟಾಗಲಿಲ್ಲ ಎನ್ನುವುದರಲ್ಲಿ ಸಂದೇಹವಿಲ್ಲ.””

19175061 ವೈಶಂಪಾಯನ ಉವಾಚ ।
19175061a ಇತ್ಯೇವಮುಕ್ತೇ ವಚನೇ ಕೃಷ್ಣೇನ ತು ಮಹಾತ್ಮನಾ ।
19175061c ಅಥಾವಗಮ್ಯ ತತ್ತ್ವೇನ ಯದ್ಭೂತಂ ಯದುಮಂಡಲೇ ।।
19175062a ಉದತಿಷ್ಠನ್ಮಹಾನಾದಸ್ತದಾ ಕೃಷ್ಣಂ ಪ್ರಶಂಸಯನ್ ।

ವೈಶಂಪಾಯನನು ಹೇಳಿದನು: “ಮಹಾತ್ಮ ಕೃಷ್ಣನು ಹೀಗೆ ಹೇಳಲು ನಡೆದುದನ್ನು ತಿಳಿದುಕೊಂಡ ಯದುಮಂಡಲದಲ್ಲಿ ಕೃಷ್ಣನನ್ನು ಪ್ರಶಂಸಿಸುವ ಮಹಾ ನಿನಾದವುಂಟಾಯಿತು.

19175062c ಹರ್ಷಯನ್ಸ ತು ಸರ್ವೇಷಾಂ ಸೂತಮಾಗಧಬಂದಿನಾಮ್ ।
19175062e ಮಧುರಃ ಶ್ರೂಯತೇ ಘೋಷೋ ಯಾದವಸ್ಯ ನಿವೇಶನೇ ।।

ಯಾದವನ ಭವನದಲ್ಲಿ ಹರ್ಷವನ್ನು ಹೆಚ್ಚಿಸುವ ಸೂತ-ಮಾಗಧ-ಬಂದಿಗಳ ಮಧುರಘೋಷವು ಕೇಳಿಬಂದಿತು.

19175063a ತೇ ಚಾರಾಃ ಸರ್ವತಃ ಸರ್ವೇ ಸಭಾದ್ವಾರಮುಪಾಗತಾಃ ।
19175063c ಶನೈರ್ಗದ್ಗದಯಾ ವಾಚಾ ಇದಂ ವಚನಮಬ್ರುವನ್ ।।

ಅಷ್ಟರಲ್ಲಿಯೇ ಎಲ್ಲಕಡೆಗಳಿಂದ ಎಲ್ಲ ಚಾರರೂ ಸಭಾದ್ವಾರವನ್ನು ತಲುಪಿ ಮೆಲ್ಲ ಸ್ವರಗಳಲ್ಲಿ ಈ ಮಾತನ್ನಾಡಿದರು:

19175064a ಉದ್ಯಾನಾನಿ ಗುಹಾಃ ಶೈಲಾಃ ಸಭಾ ನದ್ಯಃ ಸರಾಂಸಿ ಚ ।
19175064c ಏಕೈಕಂ ಶತಶೋ ರಾಜನ್ಮಾರ್ಗಿತಂ ನ ಚ ದೃಶ್ಯತೇ ।।

“ರಾಜನ್! ನೂರಾರು ಉದ್ಯಾನಗಳು, ಗುಹೆಗಳು, ಶೈಲಗಳು, ಸಭೆಗಳು, ನದಿಗಳು, ಸರೋವರಗಳನ್ನು ಒಂದೊಂದಾಗಿ ಹುಡುಕಿದರೂ ಅವನು ಕಾಣಲಿಲ್ಲ.”

19175065a ಅನ್ಯೇ ಕೃಷ್ಣಂ ಚರಾ ರಾಜನ್ನುಪಾಗಮ್ಯ ತದಾಬ್ರುವನ್ ।
19175065c ಸರ್ವೇ ನೋ ವಿದಿತಾ ದೇಶಾಃ ಪ್ರಾದ್ಯುಮ್ನಿರ್ನ ಚ ದೃಶ್ಯತೇ ।।

ರಾಜನ್! ಅನ್ಯ ಚರರೂ ಕೃಷ್ಣನ ಬಳಿಸಾರಿ ಅವನಿಗೆ “ನಾವು ಎಲ್ಲ ದೇಶಗಳಲ್ಲಿ ಹುಡುಕಿದೆವು. ಪ್ರದ್ಯುಮ್ನನ ಮಗನು ಕಾಣಲಿಲ್ಲ” ಎಂದರು.

19175066a ಯದನ್ಯತ್ಸಂವಿಧಾತವ್ಯಂ ವಿಧಾನಂ ಯದುನಂದನ ।
19175066c ತದಾಜ್ಞಾಪಯ ನಃ ಕ್ಷಿಪ್ರಮನಿರುದ್ಧಸ್ಯ ಮಾರ್ಗಣೇ ।।

“ಯದುನಂದನ! ಅನಿರುದ್ಧನ ಅನ್ವೇಷಣೆಗೆ ಈಗ ಏನನ್ನು ಮಾಡಬೇಕೋ ಅದನ್ನು ಬೇಗನೇ ಆಜ್ಞಾಪಿಸು.”

19175067a ತತಸ್ತೇ ದೀನಮನಸಃ ಸರ್ವೇ ಬಾಷ್ಪಾಕುಲೇಕ್ಷಣಾಃ ।
19175067c ಅನ್ಯೋನ್ಯಮಭ್ಯಭಾಷಂತ ಕಿಮತಃ ಕಾರ್ಯಮುತ್ತಮಮ್ ।।

ಆಗ ಎಲ್ಲರೂ ದೀನಮನಸ್ಕರಾದರು. ಕಣ್ಣುಗಳಲ್ಲಿ ಕಣ್ಣೀರು ತುಂಬಿತು. ಈಗ ಉತ್ತಮ ಕಾರ್ಯವ್ಯಾವುದು ಎಂದು ಅನ್ಯೋನ್ಯರಲ್ಲಿ ಮಾತನಾಡಿಕೊಳ್ಳತೊಡಗಿದರು.

19175068a ಸಂದಷ್ಟೌಷ್ಠಪುಟಾಃ ಕೇಚಿತ್ಕೇಚಿದ್ಬಾಷ್ಪಾಕುಲೇಕ್ಷಣಾಃ ।
19175068c ಕೇಚಿದ್ಭ್ರುಕುಟಿಮಾಸ್ಥಾಯ ಚಿಂತಯಂತ್ಯರ್ಥಸಿದ್ಧಯೇ ।।

ಕೆಲವರು ಕೋಪದಿಂದ ತುಟಿಕಚ್ಚಿದರು. ಕೆಲವರ ಕಣ್ಣುಗಳಲ್ಲಿ ಕಣ್ಣೀರು ತುಂಬಿಬಂದಿತು. ಇನ್ನು ಕೆಲವರು ಹುಬ್ಬುಗಳನ್ನು ಗಂಟಿಕ್ಕಿ ಉದ್ದೇಶಸಾಧನೆಯ ಕುರಿತು ಆಲೋಚಿಸತೊಡಗಿದರು.

19175069a ಏವಂ ಚಿಂತಯತಾಂ ತೇಷಾಂ ಬಹ್ವರ್ಥಮಭಿಭಾಷಿತಮ್ ।
19175069c ಅನಿರುದ್ಧಃ ಕುತಶ್ಚೇತಿ ಸಂಭ್ರಮಃ ಸುಮಹಾನಭೂತ್ ।।

ಹೀಗೆ ಚಿಂತಿಸುತ್ತಿದ್ದ ಅವರು ಅನೇಕ ರೀತಿಯ ಮಾತುಗಳನ್ನಾಡಿದರು. ಅನಿರುದ್ಧನು ಎಲ್ಲಿದ್ದಾನೆ ಎಂಬ ಪ್ರಶ್ನೆಯಿಂದ ಎಲ್ಲರ ಹೃದಯದಲ್ಲಿಯೂ ಮಹಾ ಸಂಭ್ರಮವುಂಟಾಯಿತು.

19175070a ಅನ್ಯೋನ್ಯಮಭಿವೀಕ್ಷಂತೇ ಯಾದವಾ ಜಾತಮನ್ಯವಃ ।
19175070c ತಾಂ ನಿಶಾಂ ವಿಮನಸ್ಕಾಸ್ತೇ ಗಮಯೇಯುಃ ಕಥಂಚನ ।
19175070e ಅನಿರುದ್ಧೋ ಹೃತಶ್ಚೇತಿ ಪುನಃ ಪುನರರಿಂದಮ ।।

ಅರಿಂದಮ! ವಿಮನಸ್ಕರೂ ಕುಪಿತರೂ ಆದ ಯಾದವರು ಅನ್ಯೋನ್ಯರನ್ನು ನೋಡುತ್ತಿದ್ದರು. ಅನಿರುದ್ಧನ ಅಪಹರಣದ ಕುರಿತು ಮತ್ತೆ ಮತ್ತೆ ಚರ್ಚಿಸುತ್ತಾ ರಾತ್ರಿಯು ಕಳೆಯಿತು.

19175071a ಏವಂ ಚ ಬ್ರುವತಾಂ ತೇಷಾಂ ಪ್ರಭಾತಾ ರಜನೀ ತದಾ ।
19175071c ತತಸ್ತೂರ್ಯನಿನಾದೈಶ್ಚ ಶಂಖಾನಾಂ ಚ ಮಹಾಸ್ವನೈಃ ।
19175071e ಪ್ರಬೋಧನಂ ಮಹಾಬಾಹೋಃ ಕೃಷ್ಣಸ್ಯಾಕ್ರಿಯತಾಲಯೇ ।।

ಹೀಗೆ ಮಾತನಾಡಿಕೊಳ್ಳುತ್ತಿರುವಾಗಲೇ ಅವರ ರಾತ್ರಿಯು ಕಳೆದು ಪ್ರಭಾತವಾಯಿತು. ಆಗ ಮಹಾಬಾಹು ಕೃಷ್ಣನ ಭವನದಲ್ಲಿ ಸುಪ್ರಭಾತದ ತೂರ್ಯನಿನಾದಗಳೂ ಶಂಖಗಳ ಮಹಾಶಬ್ದಗಳೂ ಕೇಳಿಬಂದವು.

19175072a ತತಃ ಪ್ರಭಾತೇ ವಿಮಲೇ ಪ್ರಾದುರ್ಭೂತೇ ದಿವಾಕರೇ ।
19175072c ಪ್ರವಿವೇಶ ಸಭಾಮೇಕೋ ನಾರದಃ ಪ್ರಹಸನ್ನಿವ ।।

ಅನಂತರ ನಿರ್ಮಲ ಪ್ರಭಾತಸಮಯದಲ್ಲಿ ದಿವಾಕರನು ಉದಯಿಸಲು ನಾರದನೋರ್ವನೇ ನಗುತ್ತಾ ಸಭೆಯನ್ನು ಪ್ರವೇಶಿಸಿದನು.

19175073a ದೃಷ್ಟ್ವಾ ತು ಯಾದವಾನ್ಸರ್ವಾನ್ಕೃಷ್ಣೇನ ಸಹ ಸಂಗತಾನ್ ।
19175073c ತತಃ ಸ ಜಯಶಬ್ದೇನ ಮಾಧವಂ ಪ್ರತ್ಯಪೂಜಯತ್ ।।

ಕೃಷ್ಣನೊಂದಿಗೆ ಸೇರಿದ್ದ ಯಾದವರೆಲ್ಲರನ್ನೂ ನೋಡಿ ಅವನು ಜಯ ಶಬ್ದದಿಂದ ಮಾಧವನನ್ನು ಪೂಜಿಸಿದನು.

19175074a ಉಗ್ರಸೇನಾದಯಸ್ತೇ ಚ ತಮೃಷಿಂ ಪ್ರತ್ಯಪೂಜಯನ್ ।
19175074c ಅಥಾಭ್ಯುತ್ಥಾಯ ವಿಮನಾಃ ಕೃಷ್ಣಃ ಸಮಿತಿದುರ್ಜಯಃ ।
19175074e ಮಧುಪರ್ಕಂ ಚ ಗಾಂ ಚೈವ ನಾರದಾಯ ದದೌ ಪ್ರಭುಃ ।।

ಉಗ್ರಸೇನಾದಿಗಳು ಆ ಋಷಿಯನ್ನು ಪೂಜಿಸಿದರು. ಅನಂತರ ರಣದುರ್ಜಯ ಪ್ರಭು ಕೃಷ್ಣನು ಉದಾಸ ಮನಸ್ಸಿನಿಂದ ಎದ್ದು ನಾರದನಿಗೆ ಮಧುಪರ್ಕ ಮತ್ತು ಗೋವುಗಳನ್ನಿತ್ತನು.

19175075a ಸೋಪವಿಶ್ಯಾಸನೇ ಶುಭ್ರೇ ಸರ್ವಾಸ್ತರಣಸಂವೃತೇ ।
19175075c ಸುಖಾಸೀನೋ ಯಥಾನ್ಯಾಯಮುವಾಚೇದಂ ವಚೋಽರ್ಥವತ್ ।।

ಸ್ವಾಗತ-ಸತ್ಕಾರದ ನಂತರ ನಾರದನು ಎಲ್ಲತರಹದ ವಸ್ತ್ರಗಳಿಂದ ಅಲಂಕೃತವಾದ ಶುಭ್ರ ಆಸನದಲ್ಲಿ ಸುಖಾಸೀನನಾಗಿ ಯಥಾನ್ಯಾಯವಾಗಿ ಅರ್ಥವತ್ತಾದ ಈ ಮಾತುಗಳನ್ನಾಡಿದನು.

19175076 ನಾರದ ಉವಾಚ ।
19175076a ಕಿಮೇವಂ ಚಿಂತಯಾವಿಷ್ಟಾ ನಿಃಸಂಗಾ ಗತಮಾನಸಾಃ ।
19175076c ಉತ್ಸಾಹಹೀನಾಃ ಸರ್ವೇ ವೈ ಕ್ಲೀಬಾ ಇವ ಸಮಾಸತೇ ।।

ನಾರದನು ಹೇಳಿದನು: “ಇದೇನಿದು? ಎಲ್ಲರೂ ಚಿಂತಾವಿಷ್ಟರಾಗಿ ಅಸಂಗ ಮತ್ತು ಗತಮಾನಸರಾಗಿ, ಉತ್ಸಾಹಹೀನರಾಗಿ ಹೇಡಿಗಳಂತೆ ಸುಮ್ಮನೇ ಕುಳಿತಿದ್ದೀರಿ?”

19175077a ಇತ್ಯೇವಮುಕ್ತೇ ವಚನೇ ನಾರದೇನ ಮಹಾತ್ಮನಾ ।
19175077c ವಾಸುದೇವೋಽಬ್ರವೀದ್ವಾಕ್ಯಂ ಶ್ರೂಯತಾಂ ಭಗವನ್ನಿದಮ್ ।।

ಮಹಾತ್ಮ ನಾರದನು ಈ ಮಾತನ್ನಾಡಲು ವಾಸುದೇವನು ಹೇಳಿದನು: “ಭಗವನ್! ಇದನ್ನು ಕೇಳಬೇಕು.

19175078a ಅನಿರುದ್ಧೋ ಹೃತೋ ಬ್ರಹ್ಮನ್ಕೇನಾಪಿ ನಿಶಿ ಸುವ್ರತ ।
19175078c ಯಸ್ಯಾರ್ಥೇ ಸರ್ವ ಏವಾಸ್ಮ ಚಿಂತಯಾವಿಷ್ಟಚೇತಸಃ ।।

ಬ್ರಹ್ಮನ್! ಸುವ್ರತ! ರಾತ್ರಿ ಯಾರಿಂದಲೋ ಅನಿರುದ್ಧನು ಅಪಹೃತನಾಗಿದ್ದಾನೆ. ಅವನ ಕುರಿತಾಗಿಯೇ ನಾವೆಲ್ಲರೂ ಚಿಂತಾವಿಷ್ಟರಾಗಿದ್ದೇವೆ.

19175079a ಏಷ ತೇ ಯದಿ ವೃತ್ತಾಂತಃ ಶ್ರುತೋ ದೃಷ್ಟೋಽಪಿ ವಾ ಮುನೇ ।
19175079c ಭಗವನ್ಕಥ್ಯತಾಂ ಸಾಧು ಪ್ರಿಯಮೇತನ್ಮಮಾನಘ ।।

ಮುನೇ! ಅನಘ! ಭಗವನ್! ನೀನೇನಾದರೂ ಈ ವೃತ್ತಾಂತವನ್ನು ಕೇಳಿದ್ದಾದರೆ ಅಥವಾ ಕಂಡಿದ್ದಾದರೆ ಚೆನ್ನಾಗಿ ಹೇಳಬೇಕು. ಇದು ನನಗೆ ಪ್ರಿಯವನ್ನುಂಟುಮಾಡುತ್ತದೆ.”

19175080a ಇತ್ಯೇವಮುಕ್ತೇ ವಚನೇ ಕೇಶವೇನ ಮಹಾತ್ಮನಾ ।
19175080c ಪ್ರಹಸ್ಯೈತದ್ವಚಃ ಪ್ರಾಹ ಶ್ರೂಯತಾಂ ಮಧುಸೂದನ ।।

ಮಹಾತ್ಮ ಕೇಶವನು ಹೀಗೆ ಹೇಳಲು ನಾರದನು ನಗುತ್ತಾ ಹೇಳಿದನು: “ಮಧುಸೂದನ! ಕೇಳಬೇಕು.

19175081a ನಿವೃತ್ತಂ ಸುಮಹದ್ಯುದ್ಧಂ ದೇವಾಸುರಸಮಂ ಮಹತ್ ।
19175081c ಅನಿರುದ್ಧಸ್ಯ ಚೈಕಸ್ಯ ಬಾಣಸ್ಯಾಪಿ ಮಹಾಮೃಧೇ ।।

ಮಹಾರಣದಲ್ಲಿ ದೇವಾಸುರ ಯುದ್ಧಕ್ಕೆ ಸಮನಾದ ಮಹಾ ಯುದ್ಧವು ಏಕಾಕೀ ಅನಿರುದ್ಧ ಮತ್ತು ಬಾಣರ ನಡುವೆ ನಡೆಯಿತು.

19175082a ಉಷಾ ನಾಮ ಸುತಾ ತಸ್ಯ ಬಾಣಸ್ಯಾಪ್ರತಿಮೌಜಸಃ ।
19175082c ತಸ್ಯಾರ್ಥೇ ಚಿತ್ರಲೇಖಾ ವೈ ಜಹಾರಾಶು ತಮಪ್ಸರಾಃ ।।

ಅಪ್ರತಿಮ ತೇಜಸ್ವೀ ಬಾಣನ ಸುತೆಯ ಹೆಸರು ಉಷಾ. ಅವಳಿಗೋಸ್ಕರ ಅಪ್ಸರೆ ಚಿತ್ರಲೇಖೆಯು ಅನಿರುದ್ಧನನ್ನು ಅಪಹರಿಸಿದಳು.

19175083a ಉಭಯೋರಪಿ ತತ್ರಾಸೀನ್ಮಹಾಯುದ್ಧಂ ಸುದಾರುಣಮ್ ।
19175083c ಪ್ರಾದ್ಯುಮ್ನಿಬಾಣಯೋಃ ಸಂಖ್ಯೇ ಬಲಿವಾಸವಯೋರಿವ ।।

ಅಲ್ಲಿ ಇಬ್ಬರ ನಡುವೆ ದಾರುಣ ಮಹಾಯುದ್ಧವು ನಡೆಯಿತು. ಅನಿರುದ್ಧ ಮತ್ತು ಬಾಣರ ಯುದ್ಧವು ಬಲಿ ಮತ್ತು ವಾಸವರ ಯುದ್ಧದಂತಿತ್ತು.

19175084a ಅಸ್ಮಾಭಿಶ್ಚಾಪಿ ತದ್ಯುದ್ಧಂ ದೃಷ್ಟಂ ಸುಮಹದದ್ಭುತಮ್ ।
19175084c ಅನಿರುದ್ಧೋ ಭಯಾತ್ತೇನ ಸಂಯುಗೇಷ್ವನಿವರ್ತಿನಾ ।।
19175085a ಬಾಣೇನ ಮಾಯಾಮಾಸ್ಥಾಯ ಬದ್ಧೋ ನಾಗೈರ್ಮಹಾಬಲಃ।

ನಾನೂ ಕೂಡ ಅ ಮಹಾ ಅದ್ಭುತ ಯುದ್ಧವನ್ನು ನೋಡಿದೆ. ಯುದ್ಧದಿಂದ ಹಿಂದಿರುಗದ ಬಾಣನು ಭಯದಿಂದ ಮಾಯೆಯನ್ನು ಬಳಸಿ ಮಹಾಬಲ ಅನಿರುದ್ಧನನ್ನು ನಾಗಪಾಶದಿಂದ ಬಂಧಿಸಿದನು.

19175085c ವ್ಯಾದಿಷ್ಟಸ್ತು ವಧಸ್ತಸ್ಯ ಬಾಣೇನ ಗರುಡಧ್ವಜ ।।
19175086a ತಂ ನಿವಾರಿತವಾಣ್ಮಂತ್ರೀ ಕುಂಭಾಂಡೋ ನಾಮ ತಸ್ಯ ಹ ।

ಗರುಡಧ್ವಜ! ಬಾಣನು ಅನಿರುದ್ಧನ ವಧೆಗೆ ಆಜ್ಞಾಪಿಸಲು ಕುಂಭಾಂಡ ಎಂಬ ಅವನ ಮಂತ್ರಿಯು ಅವನನ್ನು ತಡೆದನು.

19175086c ಕುಮಾರಸ್ಯಾನಿರುದ್ಧಸ್ಯ ತೇನಾಸಕ್ತೇನ ಸಂಯುಗೇ ।।
19175087a ಬಾಣೇನ ಮಾಯಾಮಾಸ್ಥಾಯ ಸರ್ಪೈರ್ನಿಯಮನಂ ಕೃತಮ್।
19175087c ಉತ್ತಿಷ್ಠತು ಭವಾಂಛೀಘ್ರಂ ಯಶಸೇ ವಿಜಯಾಯ ಚ ।।

ಯುದ್ಧದಲ್ಲಿ ಆಸಕ್ತನಾಗಿದ್ದ ಬಾಣಾಸುರನು ಮಾಯೆಯನ್ನು ಅವಲಂಬಿಸಿ ಸರ್ಪಮಯ ಬಾಣಗಳಿಂದ ಕುಮಾರ ಅನಿರುದ್ಧನನ್ನು ಬಂಧಿಸಿದ್ದಾನೆ. ಆದುದರಿಂದ ನೀನು ಯಶಸ್ಸು ಮತ್ತು ವಿಜಯಕ್ಕೆ ಶೀಘ್ರ ಎದ್ದುನಿಲ್ಲಬೇಕು.

19175088a ನಾಯಂ ಸಂರಕ್ಷಿತುಂ ಕಾಲಃ ಪ್ರಾಣಾಂಸ್ತಾತ ಜಯೈಷಿಣಾಮ್।
19175088c ಪ್ರಾಣೈಃ ಕಿಂಚಿದ್ಗತೈರ್ವೀರೋ ಧೈರ್ಯಮಾಲಂಭ್ಯ ತಿಷ್ಠತಿ ।।

ಅಯ್ಯಾ! ಜಯವನ್ನು ಬಯಸುವ ವೀರರಿಗೆ ತಮ್ಮ ಪ್ರಾಣಗಳನ್ನು ಸಂರಕ್ಷಿಸಿಕೊಳ್ಳುವ ಕಾಲವಿದಲ್ಲ. ಪ್ರಾಣವು ಸಂಕಟದಲ್ಲಿ ಸಿಲುಕಿದಾಗ ವೀರರು ಧೈರ್ಯತಾಳಿ ಶತ್ರುವನ್ನು ಎದುರಿಸುತ್ತಾರೆ.””

19175089 ವೈಶಂಪಾಯನ ಉವಾಚ ।
19175089a ಇತ್ಯೇವಮುಕ್ತೇ ವಚನೇ ವಾಸುದೇವಃ ಪ್ರತಾಪವಾನ್ ।
19175089c ಪ್ರಾಯಾತ್ರಿಕಾನ್ವೈ ಸಂಭಾರಾನಾಜ್ಞಾಪಯತ ವೀರ್ಯವಾನ್ ।।

ವೈಶಂಪಾಯನನು ಹೇಳಿದನು: “ಇದನ್ನು ಕೇಳಿದ ಪ್ರತಾಪವಾನ್ ವೀರ್ಯವಾನ್ ವಾಸುದೇವನು ರಣಯಾತ್ರೆಗೆ ಉಪಯುಕ್ತ ಸಾಮಗ್ರಿಗಳನ್ನು ಸಿದ್ಧಪಡಿಸಲು ಆಜ್ಞಾಪಿಸಿದನು.

19175090a ತತಶ್ಚಂದನಚೂರ್ಣೈಶ್ಚ ಲಾಜೈಶ್ಚೈವ ಸಮಂತತಃ ।
19175090c ನಿರ್ಯಯೌ ಸ ಮಹಾಬಾಹುಃ ಕೀರ್ಯಮಾಣೋ ಜನಾರ್ದನಃ ।।

ಅನಂತರ ಮಹಾಬಾಹು ಜನಾರ್ದನನು ಹೊರಡಲು, ಅವನ ಎಲ್ಲಕಡೆ ಚಂದನ-ಚೂರ್ಣ ಮತ್ತು ಅರಳುಗಳನ್ನು ಚೆಲ್ಲಿದರು.

19175091 ನಾರದ ಉವಾಚ ।
19175091a ಸ್ಮರಣಂ ವೈನತೇಯಸ್ಯ ಕರ್ತುಮರ್ಹಸಿ ಮಾಧವ ।
19175091c ನ ಹ್ಯನ್ಯೇನ ತದಧ್ವಾನಂ ಶಕ್ಯಂ ಗಂತುಂ ಮಹಾಭುಜ ।।

ನಾರದನು ಹೇಳಿದನು: “ಮಾಧವ! ಮಹಾಭುಜ! ವೈನತೇಯನನ್ನು ಸ್ಮರಿಸು. ಅವನಲ್ಲದೇ ಬೇರೆ ಯಾರಿಗೂ ಆ ಮಾರ್ಗದಲ್ಲಿ ಹೋಗಲಿಕ್ಕಾಗುವುದಿಲ್ಲ.

19175092a ಆಕರ್ಣಯ ತಮಧ್ವಾನಂ ಗಂತವ್ಯಮತಿದುರ್ಜಯಮ್ ।
19175092c ಏಕಾದಶ ಸಹಸ್ರಾಣಿ ಯೋಜನಾನಾಂ ಜನಾರ್ದನ ।।
19175093a ತದಿತಃ ಶೋಣಿತಪುರಂ ಪ್ರಾದ್ಯುಮ್ನಿರ್ಯತ್ರ ಸಾಂಪ್ರತಮ್ ।

ಜನಾರ್ದನ! ಕೇಳು. ಅತಿ ದುರ್ಜಯವಾದ ಹನ್ನೊಂದು ಸಹಸ್ರ ಯೋಜನಗಳ ಮಾರ್ಗದಲ್ಲಿ ಹೋಗಬೇಕಾಗಿದೆ. ಅಲ್ಲಿ ಶೋಣಿತಪುರದಲ್ಲಿ ಪ್ರಾದ್ಯುಮ್ನಿಯು ಸದ್ಯ ಇದ್ದಾನೆ.

19175093c ಮನೋಜವೋ ಮಹಾವೀರ್ಯೋ ವೈನತೇಯಃ ಪ್ರತಾಪವಾನ್ ।।
19175094a ಸಮಾಹ್ವಯಸ್ವ ಗೋವಿಂದ ಸ ಹಿ ತ್ವಾಂ ತತ್ರ ನೇಷ್ಯತಿ ।
19175094c ಏಕೇನ ಸುಮುಹೂರ್ತೇನ ಬಾಣಂ ಸಂದರ್ಷಯಿಷ್ಯತಿ ।।

ಮಹಾವೇಗಶಾಲೀ ಮಹಾವೀರ್ಯಶಾಲೀ ಪ್ರತಾಪವಾನ್ ವೈನತೇಯನನ್ನು ಆಹ್ವಾನಿಸು. ಅವನೇ ನಿನ್ನನ್ನು ಅಲ್ಲಿ ಕೊಂಡೊಯ್ಯುತ್ತಾನೆ. ಅವನು ಒಂದೇ ಮುಹೂರ್ತದಲ್ಲಿ ಬಾಣನ ಸಮ್ಮುಖಕ್ಕೆ ಕೊಂಡೊಯ್ಯುತ್ತಾನೆ.””

19175095 ವೈಶಂಪಾಯನ ಉವಾಚ ।
19175095a ತಸ್ಯ ತದ್ವಚನಂ ಶ್ರುತ್ವಾ ಸಸ್ಮಾರ ಗರುಡಂ ತದಾ ।
19175095c ಸ ಕೃಷ್ಣಪಾರ್ಶ್ವಮಾಗಮ್ಯ ಪ್ರಾಂಜಲಿರ್ಗರುಡಃ ಸ್ಥಿತಃ ।।

ವೈಶಂಪಾಯನನು ಹೇಳಿದನು: “ಅವನ ಆ ಮಾತನ್ನು ಕೇಳಿ ಕೃಷ್ಣನು ಗರುಡನನ್ನು ಸ್ಮರಿಸಿದನು. ಗರುಡನು ಆಗಮಿಸಿ ಕೈಮುಗಿದು ಕೃಷ್ಣನ ಬಳಿ ನಿಂತನು.

19175096a ಪ್ರಣಮ್ಯಾಥ ವಚಃ ಪ್ರಾಹ ವೈನತೇಯೋ ಮಹಾಬಲಃ ।
19175096c ವಾಸುದೇವಂ ಮಹಾತ್ಮಾನಂ ಶ್ಲಕ್ಷ್ಣಂ ಮಧುರಯಾ ಗಿರಾ ।।

ಮಹಾತ್ಮಾ ವಾಸುದೇವನನ್ನು ನಮಸ್ಕರಿಸಿ ಮಹಾಬಲಿ ವೈನತೇಯನು ಸ್ನೇಹಯುಕ್ತ ಮಧುರವಾಣಿಯಲ್ಲಿ ಹೇಳಿದನು.

19175097 ಗರುಡ ಉವಾಚ ।
19175097a ಪದ್ಮನಾಭ ಮಹಾಬಾಹೋ ಕಿಮರ್ಥಂ ಸಂಸ್ಮೃತೋ ಹ್ಯಹಮ್ ।
19175097c ಕೃತ್ಯಂ ತೇ ಯದಿಹಾತ್ರಾಸ್ತಿ ಶ್ರೋತುಮಿಚ್ಛಾಮಿ ತತ್ತ್ವತಃ ।।

ಗರುಡನು ಹೇಳಿದನು: “ಪದ್ಮನಾಭ! ಮಹಾಬಾಹೋ! ಯಾವ ಉದ್ದೇಶಕ್ಕಾಗಿ ನನ್ನನ್ನು ಸ್ಮರಿಸಿಕೊಂಡೆ? ನಿನಗಾಗಿ ಏನನ್ನು ಮಾಡಬೇಕು ಎನ್ನುವುದನ್ನು ತತ್ತ್ವತಃ ಕೇಳಲು ಬಯಸುತ್ತೇನೆ.

19175098a ಕಸ್ಯ ಪಕ್ಷಪರಿಕ್ಷೇಪೈರ್ನಾಶಯಾಮಿ ಪುರೀಂ ಪ್ರಭೋ ।
19175098c ಪ್ರಭಾವಾತ್ತವ ಗೋವಿಂದ ಕೋ ನ ವಿದ್ಯಾದ್ಬಲಂ ಮಮ ।।

ಪ್ರಭೋ! ನನ್ನ ರೆಕ್ಕೆಗಳ ಪ್ರಹಾರದಿಂದ ಯಾರ ಪುರಿಯನ್ನು ನಾಶಪಡಿಸಬೇಕು? ಗೋವಿಂದ! ನಿನ್ನ ಪ್ರಭಾವದಿಂದ ನನ್ನ ಬಲವನ್ನು ಯಾರುತಾನೇ ತಿಳಿದಿಲ್ಲ?

19175099a ಗದಾವೇಗಂ ಚ ತೇ ವೀರ ಚಕ್ರಾಗ್ನಿಂ ಚ ಮಹಾಭುಜ ।
19175099c ನಾವಬುಧ್ಯತಿ ಮೂಢಾತ್ಮಾ ಕೋ ದರ್ಪಾನ್ನಾಶಮೇಷ್ಯತಿ ।।

ವೀರ! ಮಹಾಭುಜ! ಯಾವ ಮೂಢಾತ್ಮನು ನಿನ್ನ ಗದೆಯ ವೇಗ ಮತ್ತು ಚಕ್ರದ ಅಗ್ನಿಯನ್ನು ಅರಿತಿಲ್ಲ? ಅವನು ತನ್ನ ದರ್ಪದಿಂದ ನಾಶಹೊಂದುತ್ತಾನೆ.

19175100a ಹಲಂ ಸಿಂಹಮುಖಂ ಕಸ್ಯ ವನಮಾಲೀ ನಿಯೋಕ್ಷ್ಯತಿ ।
19175100c ಕಸ್ಯ ದೇಹಸ್ತು ನಿರ್ಭಿನ್ನೋ ಮೇದಿನೀಂ ಯಾಸ್ಯತಿ ಪ್ರಭೋ ।।

ಪ್ರಭೋ! ವನಮಾಲೀ ಬಲರಾಮನು ಇಂದು ತನ್ನ ಸಿಂಹಮುಖದಂತಿರುವ ಹಲಾಯುಧವನ್ನು ಯಾರಮೇಲೆ ಪ್ರಯೋಗಿಸುತ್ತಾನೆ? ಯಾರ ದೇಹವು ತುಂಡಾಗಿ ಮೇದಿನಿಯ ಮೇಲೆ ಬೀಳಲಿಕ್ಕಿದೆ?

19175101a ಕಸ್ಯ ಶಂಖರವೈಃ ಪ್ರಾಣಾನ್ಮೋಹಯಿಷ್ಯಸಿ ಮಾಧವ ।
19175101c ಕೋಽಯಂ ಸಪರಿವಾರೋಽದ್ಯ ಯಾಸ್ಯತೇ ಯಮಸಾದನಮ್।।

ಮಾಧವ! ನಿನ್ನ ಶಂಖಧ್ವನಿಯಿಂದ ಯಾರ ಪ್ರಾಣಗಳನ್ನು ಮೋಹಗೊಳಿಸಲಿರುವೆ? ಇಂದು ಯಾರು ಸಪರಿವಾರನಾಗಿ ಯಮಸಾದನಕ್ಕೆ ಹೋಗುತ್ತಾನೆ?”

19175102a ಏವಮುಕ್ತೇ ತು ವಚನೇ ವೈನತೇಯೇನ ಧೀಮತಾ ।
19175102c ವಾಸುದೇವೋ ವಚಃ ಪ್ರಾಹ ಶೃಣು ತ್ವಂ ವದತಾಂ ವರ ।।

ಧೀಮತ ವೈನತೇಯನು ಹೀಗೆ ಹೇಳಲು ವಾಸುದೇವನು ಈ ಮಾತನ್ನಾಡಿದನು: “ಮಾತನಾಡುವವರಲ್ಲಿ ಶ್ರೇಷ್ಠ! ಕೇಳು.

19175103a ಬಲೇಃ ಪುತ್ರೇಣ ಬಾಣೇನ ಪ್ರಾದ್ಯುಮ್ನಿರಪರಾಜಿತಃ ।
19175103c ಉಷಾಯಾಃ ಕಾರಣೇ ಬದ್ಧೋ ನಗರೇ ಶೋಣಿತಾಹ್ವಯೇ ।
19175103e ಅನಿರುದ್ಧಸ್ತು ಕಾಮಾರ್ತೋ ಬದ್ಧೋ ನಾಗೈರ್ವಿಷೋಲ್ಬಣೈಃ।।

ಬಲಿಯ ಪುತ್ರ ಬಾಣನು ಅಪರಾಜಿತ ಅನಿರುದ್ಧನನ್ನು ಉಷೆಯ ಕಾರಣದಿಂದಾಗಿ ಶೋಣಿತಾಹ್ವಯ ನಗರದಲ್ಲಿ ಬಂಧಿಸಿದ್ದಾನೆ. ಕಾಮಾರ್ತನಾದ ಅನಿರುದ್ಧನು ಪ್ರಚಂಡ ವಿಷವುಳ್ಳ ನಾಗಗಳಿಂದ ಬಂಧಿತನಾಗಿದ್ದಾನೆ.

19175104a ತಸ್ಯ ಮೋಕ್ಷಾರ್ಥಮಾಹೂತೋ ಮಯಾ ತ್ವಂ ಪತಗೇಶ್ವರ ।
19175104c ತವವೇಗಸಮೋ ನಾಸ್ತಿ ಪಕ್ಷಿಣಾಂ ಪ್ರವರೋ ಭವಾನ್ ।
19175104e ಅಶಕ್ಯಂ ಚ ತದಧ್ವಾನಂ ಗಂತುಮನ್ಯೇನ ಕಾಶ್ಯಪ ।।

ಪತಗೇಶ್ವರ! ಅವನನ್ನು ಬಿಡುಗಡೆಗೊಳಿಸಲೋಸುಗ ನಾನು ನಿನ್ನನ್ನು ಕರೆದಿದ್ದೇನೆ. ನೀನು ಪಕ್ಷಿಗಳಲ್ಲಿಯೇ ಶ್ರೇಷ್ಠನಾಗಿರುವೆ. ನಿನ್ನ ವೇಗಕ್ಕೆ ಸಮನಾದವರು ಇಲ್ಲ. ಕಾಶ್ಯಪ! ಆ ಮಾರ್ಗದಲ್ಲಿ ಹೋಗಲು ಅನ್ಯರಿಗೆ ಶಕ್ಯವಿಲ್ಲ.

19175105a ತತ್ರ ಪ್ರಾಪಯ ಮಾಂ ಶೀಘ್ರಂ ಯತ್ರ ಪ್ರಾದ್ಯುಮ್ನಿರಾವಸತ್ ।
19175105c ವೈದರ್ಭೀ ತೇ ಸ್ನುಷಾ ವೀರ ರುದತೀ ಪುತ್ರಗೃದ್ಧಿನೀ ।
19175106a ತ್ವತ್ಪ್ರಸಾದಾದ್ಭವತ್ಯೇಷಾ ಪುತ್ರೇಣ ಸಹ ಭಾಮಿನೀ ।

ಪ್ರದ್ಯುಮ್ನಕುಮಾರನಿರುವಲ್ಲಿಗೆ ಶೀಘ್ರವೇ ನನ್ನನ್ನು ತಲುಪಿಸು. ವೀರ! ನಿನ್ನ ಸೊಸೆಯಂತಿರುವ ವೈದರ್ಭೀ ರುಕ್ಮಿಣಿಯು ಪುತ್ರನನ್ನು ನೋಡಲು ಬಯಸಿ ರೋದಿಸುತ್ತಿದ್ದಾಳೆ. ನಿನ್ನ ಕೃಪೆಯಿಂದ ಆ ಭಾಮಿನಿಯು ಪುತ್ರನೊಂದಿಗೆ ಕೂಡುವಂತಾಗಲಿ.

19175106c ಅಮೃತಂ ತು ಹೃತಂ ಪೂರ್ವಂ ತ್ವಯಾ ಪನ್ನಗನಾಶನ ।।
19175107a ಮಯಾ ಸಹ ಸಮಾಗಮ್ಯ ತಸ್ಮಿನ್ಕಾಲೇ ಮಹಾಭುಜ ।
19175107c ಅಭವನ್ಮೇ ಧ್ವಜಶ್ಚೈವ ತ್ವದ್ಭಕ್ತಾಃ ಸರ್ವವೃಷ್ಣಯಃ ।
19175107e ಸಖಿತ್ವಂ ಮಾನಯಸ್ವಾದ್ಯ ಭಕ್ತಿಂ ಚ ಪತಗೇಶ್ವರ ।।

ಪನ್ನಗನಾಶನ! ಹಿಂದೆ ನೀನು ಅಮೃತವನ್ನು ಅಪಹರಿಸಿದ್ದೆ. ಮಹಾಭುಜ! ಆ ಸಮಯದಲ್ಲಿ ನಾನು ನಿನ್ನನ್ನು ಭೇಟಿ ಮಾಡಿದ್ದೆ. ಆಗ ನೀನು ನನ್ನ ಧ್ವಜರೂಪಿಯಾದೆ. ಈ ಎಲ್ಲ ವೃಷ್ಣಿಗಳೂ ನಿನ್ನ ಭಕ್ತರು. ಪತಗೇಶ್ವರ! ಇಂದು ನೀನು ನಮ್ಮ ಸಖ್ಯವನ್ನೂ ಭಕ್ತಿಯನ್ನೂ ಮನ್ನಿಸು.

19175108a ತವ ವೇಗಸಮೋ ನಾಸ್ತಿ ಪಕ್ಷಿಣೋ ನ ಚ ತೇ ಸಮಾಃ ।
19175108c ಸುಪರ್ಣ ಸುಕೃತೇನ ತ್ವಾಂ ಶಪೇ ಪನ್ನಗನಾಶನ ।।

ಪನ್ನಗನಾಶನ! ಸುಪರ್ಣ! ವೇಗದಲ್ಲಿ ನಿನ್ನ ಸಮನಾದವರು ಇಲ್ಲ. ಇತರ ಪಕ್ಷಿಗಳೂ ನಿನ್ನ ಸಮನಾಗಿಲ್ಲ. ಪುಣ್ಯದ ಶಪಥಮಾಡಿ ನಾನು ನಿನಗೆ ಹೇಳುತ್ತಿದ್ದೇನೆ.

19175109a ದಾಸೀಭಾವಂ ಗತಾ ಮಾತಾ ಮೋಕ್ಷಿತೈಕಾಕಿನಾ ಪುರಾ ।
19175109c ಪಕ್ಷವಿಕ್ಷೇಪಮಾಶ್ರಿತ್ಯ ಹತಾ ಯೋಧಾಸ್ತ್ವಯಾ ಪುರಾ ।।

ಹಿಂದೆ ನೀನು ದಾಸೀಭಾವವನ್ನು ಪಡೆದಿದ್ದ ನಿನ್ನ ತಾಯಿ ವಿನತೆಯನ್ನು ಏಕಾಕಿಯಾಗಿ ಬಿಡುಗಡೆಗೊಳಿಸಿದ್ದೆ. ನಿನ್ನ ರೆಕ್ಕೆಗಳ ಪ್ರಹಾರಮಾತ್ರದಿಂದ ಹಿಂದೆ ನೀನು ಅನೇಕ ಯೋಧರನ್ನು ಸಂಹರಿಸಿದ್ದೆ.

19175110a ಭವಾನ್ಸುರಗಣಾನ್ಸರ್ವಾನ್ಪೃಷ್ಠಮಾರೋಪ್ಯ ವಿಕ್ರಮಾತ್ ।
19175110c ಗಚ್ಛ ಮೇ ಹ್ಯಗಮಾಂದೇಶಾನ್ವಿಜಯಶ್ಚ ತವಾಶ್ರಯಾತ್ ।।

ನೀನು ಈ ಸುರಗಣಗಳೆಲ್ಲವನ್ನೂ ವಿಕ್ರಮದಿಂದ ನಿನ್ನ ಬೆನ್ನಮೇಲೆ ಏರಿಸಿಕೊಂಡು ನನ್ನೊಡನೆ ಆ ಅಗಮ್ಯ ದೇಶಕ್ಕೆ ಹೊರಡು. ನಮ್ಮ ವಿಜಯವು ನಿನ್ನನ್ನು ಅವಲಂಬಿಸಿದೆ.

19175111a ಗುರುತ್ವಾನ್ಮೇರುತುಲ್ಯಸ್ತ್ವಂ ಲಘುತ್ವಾತ್ಪವನೋಪಮಃ ।
19175111c ಭೂತೇ ಭವ್ಯೇ ಭವಿಷ್ಯೇ ಚ ನ ತೇ ತುಲ್ಯೋಽಸ್ತಿ ವಿಕ್ರಮೇ ।।

ಭಾರದಲ್ಲಿ ನೀನು ಮೇರುವಿನ ಸಮನಾಗಿರುವೆ. ಲಘುತ್ವದಲ್ಲಿ ವಾಯುವಿನ ಸಮನಾಗಿರುವೆ. ವಿಕ್ರಮದಲ್ಲಿ ನಿನ್ನ ಸಮನಾಗಿರುವವರು ಭೂತ-ಭವ್ಯ-ಭವಿಷ್ಯತ್ತುಗಳಲ್ಲಿ ಯಾರೂ ಇಲ್ಲ.

19175112a ಸತ್ಯಸಂಧ ಮಹಾಭಾಗ ವೈನತೇಯ ಮಹಾದ್ಯುತೇ ।
19175112c ಅನಿರುದ್ಧೇಕ್ಷಣೇನಾದ್ಯ ಸಾಹಾಯ್ಯಮುಪಕಲ್ಪ್ಯತಾಮ್ ।।

ಸತ್ಯಸಂಧ! ಮಹಾಭಾಗ! ವೈನತೇಯ! ಮಹಾದ್ಯುತೇ! ಇಂದು ಅನಿರುದ್ಧನನ್ನು ನೋಡಲು ನಮಗೆ ಸಹಾಯ ಮಾಡು.”

19175113 ಗರುಡ ಉವಾಚ ।
19175113a ಅತ್ಯದ್ಭುತಮಿದಂ ವಾಕ್ಯಂ ತವ ಕೃಷ್ಣ ಮಹಾಭುಜ ।
19175113c ತ್ವತ್ಪ್ರಸಾದಾಚ್ಚ ವಿಜಯಃ ಸರ್ವತ್ರೈವ ಮಹಾಭುಜ ।।

ಗರುಡನು ಹೇಳಿದನು: “ಕೃಷ್ಣ! ಮಹಾಭುಜ! ನಿನ್ನ ಈ ಮಾತು ಅತ್ಯದ್ಭುತವಾಗಿದೆ. ಮಹಾಭುಜ! ನಿನ್ನ ಕೃಪೆಯಿಂದಲೇ ಸರ್ವತ್ರ ವಿಜಯವಾಗುತ್ತದೆ.

19175114a ಧನ್ಯೋಽಸ್ಮ್ಯನುಗೃಹೀತೋಽಸ್ಮಿ ಸಂಸ್ತವಾನ್ಮಧುಸೂದನ ।
19175114c ಸ್ತೋತವ್ಯಸ್ತ್ವಂ ಮಯಾ ಕೃಷ್ಣ ಸ್ತೌಷಿ ಮಾಂ ತ್ವಂ ಮಹಾಭುಜ ।।

ಮಧುಸೂದನ! ನಿನ್ನ ಪ್ರಶಂಸೆಯಿಂದ ನಾನು ಧನ್ಯನಾದೆ. ಅನುಗೃಹೀತನಾದೆ. ಕೃಷ್ಣ! ಮಹಾಭುಜ! ನಾನು ನಿನ್ನನ್ನು ಸ್ತುತಿಸಬೇಕು. ಆದರೆ ನೀನು ನನ್ನನ್ನು ಸ್ತುತಿಸಿರುವೆ!

19175115a ವೇದಾಧ್ಯಕ್ಷಃ ಸುರಾಧ್ಯಕ್ಷಃ ಸರ್ವಕಾಮಪ್ರದೋ ಭವಾನ್ ।
19175115c ಅಮೋಘದರ್ಶನಸ್ತ್ವಂ ಹಿ ವರಾರ್ತೀನಾಂ ವರಪ್ರದಃ ।।

ನೀನು ವೇದಗಳಿಗೆ ಅಧ್ಯಕ್ಷ. ಸುರರಿಗೆ ಅಧ್ಯಕ್ಷ. ಸರ್ವಕಾಮಗಳನ್ನೂ ಪೂರೈಸುವವನು. ವರಗಳನ್ನು ಬಯಸುವವರಿಗೆ ನಿನ್ನ ದರ್ಶನವು ಅಮೋಘವಾಗುತ್ತದೆ.

19175116a ಚತುರ್ಭುಜಶ್ಚತುರ್ಮೂರ್ತಿಶ್ಚಾತುರ್ಹೋತ್ರಪ್ರವರ್ತಕಃ ।
19175116c ಚಾತುರಾಶ್ರಮ್ಯಹೋತಾ ಚ ಚತುರ್ನೇತಾ ಮಹಾಕವಿಃ ।।

ನೀನು ಚತುರ್ಭುಜ, ಚತುರ್ಮೂರ್ತಿ (ವಾಸುದೇವ, ಸಂಕರ್ಷಣ, ಪ್ರದ್ಯುಮ್ನ ಮತ್ತು ಅನಿರುದ್ಧ ಎಂಬ ನಾಲ್ಕು ಮೂರ್ತಿಗಳು), ಮತ್ತು ಚಾತುರ್ಹೋತ್ರ ಯಜ್ಞದ ಪ್ರವರ್ತಕನು. ನಾಲ್ಕೂ ಆಶ್ರಮಗಳಲ್ಲಿ ನೀನು ಹೋತಾರ. ನಾಲ್ಕೂ ಪುರುಷಾರ್ಥಗಳನ್ನು ಒದಗಿಸುವವನು ಮತ್ತು ಮಹಾಕವಿಯು.

19175117a ಧನುರ್ಧರಶ್ಚಕ್ರಧರೋ ಭವಾಂಛಂಖಧರೋ ಮಹಾನ್ ।
19175117c ಭವಾನ್ಪೂರ್ವೇಷು ದೇಹೇಷು ಖ್ಯಾತೋ ಭೂಮಿಧರಃ ಪ್ರಭೋ ।।

ನೀನು ಶಾಂಙ್ರಧನುಸ್ಸು, ಸುದರ್ಶನ ಚಕ್ರ ಮತ್ತು ಪಾಂಚಜನ್ಯ ಶಂಖವನ್ನು ಧರಿಸುವ ಮಹಾ ವಿಷ್ಣುವು. ಪ್ರಭೋ! ಪೂರ್ವದೇಹಗಳಲ್ಲಿ ನೀನು ಧರಣೀಧರನ ರೂಪದಲ್ಲಿ ವಿಖ್ಯಾತನಾಗಿದ್ದೀಯೆ.

19175118a ಲಾಂಗಲೀ ಮುಸಲೀ ಚಕ್ರೀ ದೇವಕೀತನಯೋ ಭವಾನ್ ।
19175118c ಚಾಣೂರಮಥನಶ್ಚೈವ ಗೋಪ್ರಿಯಃ ಕಂಸಹಾ ಭವಾನ್ ।।

ನೀನು ಹಲಧರ, ಮುಸಲಧಾರೀ ಮತ್ತು ಚಕ್ರಧಾರಿ ದೇವಕೀತನಯ. ನೀನು ಚಾಣೂರನನ್ನು ಸಂಹರಿಸಿದೆ, ಗೋವುಗಳಿಗೆ ಪ್ರಿಯನಾದವನು ಮತ್ತು ಕಂಸನನ್ನು ಕೊಂದವನು.

19175119a ಗೋವರ್ಧನಧರಶ್ಚೈವ ಮಲ್ಲಾರಿರ್ಮಲ್ಲಭಾವನಃ ।
19175119c ಮಲ್ಲಪ್ರಿಯೋ ಮಹಾಮಲ್ಲೋ ಮಹಾಪುರುಷ ಇತ್ಯಪಿ ।।

ನೀನು ಗೋವರ್ಧನಧಾರಿ. ಮಲ್ಲರ ಶತ್ರು, ಮಲ್ಲರ ಪೋಷಕ ಮತ್ತು ಮಲ್ಲರ ಪ್ರೇಮಿಯಾದ ನೀನು ಮಹಾಮಲ್ಲಸ್ವರೂಪನು ಮತ್ತು ಮಹಾಪುರುಷನು.

19175120a ವಿಪ್ರಪ್ರಿಯೋ ವಿಪ್ರಹಿತೋ ವಿಪ್ರಜ್ಞೋ ವಿಪ್ರಭಾವನಃ ।
19175120c ಬ್ರಹ್ಮಣ್ಯಶ್ಚ ವರೇಣ್ಯಶ್ಚ ಭವಾಂದಾಮೋದರಃ ಸ್ಮೃತಃ ।
19175120e ಪ್ರಲಂಬಮಥನಶ್ಚೈವ ಕೇಶಿಹಾ ದಾನವಾಂತಕಃ ।।

ನೀನು ವಿಪ್ರಪ್ರಿಯ, ವಿಪ್ರಹಿತಕಾರಿಣೀ, ವಿಪ್ರಜ್ಞ, ವಿಪ್ರಭಾವನ, ಬ್ರಹ್ಮಣ್ಯ, ವರೇಣ್ಯ, ಮತ್ತು ದಾಮೋದರ ಎಂದು ಅನಿಸಿಕೊಂಡಿದ್ದೀಯೆ. ನೀನು ಪ್ರಲಂಬನನ್ನು ಸಂಹರಿಸಿದವನು. ಕೇಶಿಹಂತಕನು ಮತ್ತು ದಾನವಾಂತಕನು.

19175121a ಅಸಿಲೋಮ್ನಶ್ಚ ಹಂತಾ ಚ ತಥಾ ರಾವಣನಾಶನಃ ।
19175121c ವಿಭೀಷಣಸ್ಯ ಭಗವಾನ್ರಾಜ್ಯದೋ ವಾಲಿನಾಶನಃ ।।

ನೀನು ಅಸಿಲೋಮನ ಹಂತಕ ಮತ್ತು ನೀನೇ ರಾವಣನಾಶಕ. ನೀನೇ ವಾಲಿಯನ್ನು ನಾಶಪಡಿಸಿದವನು ಮತ್ತು ವಿಭೀಷಣನಿಗೆ ರಾಜ್ಯವನ್ನು ನೀಡಿದ ಭಗವಂತ ರಾಮನು.

19175122a ಸುಗ್ರೀವರಾಜ್ಯದಾತಾ ತ್ವಂ ಬಲಿರಾಜ್ಯಾಪಹಾರಕಃ ।
19175122c ರತ್ನಹರ್ತಾ ಮಹಾರತ್ನಂ ಸಮುದ್ರೋದರಸಂಭವಃ ।।

ನೀನು ಸುಗ್ರೀವನಿಗೆ ರಾಜ್ಯದಾತನು. ಬಲಿಗೆ ರಾಜ್ಯಾಪಹಾರಕನು. ನೀನು ಸಮುದ್ರದ ಉದರದಲ್ಲಿ ಜನಿಸಿದ ಕೌಸ್ತುಭ ರತ್ನ ಮತ್ತು ಮಹಾರತ್ನ ಲಕ್ಷ್ಮಿಯನ್ನು ವರಿಸಿದವನು.

19175123a ವರುಣಶ್ಚ ಭವಾನ್ಖ್ಯಾತೋ ಭವಾಂಶ್ಚ ಸರಿದುದ್ಭವಃ ।
19175123c ಭವಾನ್ಖಡ್ಗಧರೋ ಧನ್ವೀ ಧನುರ್ಧರವರೋ ಮಹಾನ್ ।।

ನೀನೇ ವರುಣನಾಗಿ ವಿಖ್ಯಾತನಾಗಿದ್ದೀಯೆ. ನೀನೇ ಸರಿತ್ತುಗಳ ಉದ್ಭವಸ್ಥಾನ ಮೇರು ಪರ್ವತವು. ನೀನು ನಂದಕ ಎಂಬ ಹೆಸರಿನ ಖಡ್ಗವನ್ನು ಧರಿಸಿದ್ದೀಯೆ. ನೀನು ಮಹಾನ್ ಧನ್ವೀ ಮತ್ತು ಧನುರ್ಧರರಲ್ಲಿ ಶ್ರೇಷ್ಠನು.

19175124a ದಾಶಾರ್ಹ ಇತಿ ವಿಖ್ಯಾತೋ ಮಹಾಧನ್ವಾ ಧನುಃಪ್ರಿಯಃ ।
19175124c ಗೋವಿಂದ ಇತಿ ವಿಖ್ಯಾತ ಉದಧಿಸ್ತ್ವಂ ಚ ಸುವ್ರತ ।।

ನೀನು ದಾಶಾರ್ಹನೆಂದು ವಿಖ್ಯಾತನಾಗಿದ್ದೀಯೆ. ನಿನ್ನ ಧನುಸ್ಸು ವಿಶಾಲವಾಗಿದೆ. ನೀನು ಧನುಸ್ಸಿನ ಪ್ರೇಮಿಯಾಗಿರುವೆ. ಸುವ್ರತ! ನೀನು ಗೋವಿಂದನೆಂದೂ ವಿಖ್ಯಾತನಾಗಿರುವೆ. ಮತ್ತು ನೀನೇ ಸಮುದ್ರವು.

19175125a ಆಕಾಶಶ್ಚ ತಪಶ್ಚೈವ ಸಮುದ್ರಮಥನೋ ಭವಾನ್ ।
19175125c ಭವಾನ್ಸ್ವರ್ಗೋ ಬಹುಫಲೋ ಭವಾನ್ಸ್ವರ್ಗಚರೋ ಮಹಾನ್ ।।

ಆಕಾಶ, ತಪಸ್ಸು ಮತ್ತು ಸಮುದ್ರಮಥನಗಳು ನೀನಾಗಿರುವೆ. ನೀನು ಕರ್ಮಗಳ ಬಹುಫಲ ಸ್ವರ್ಗ ಮತ್ತು ನೀನು ಮಹಾನ್ ಸ್ವರ್ಗಚಾರಿಯು.

19175126a ತ್ವಮೇವ ಚ ಮಹಾಮೇಘೋ ಬೀಜನಿಷ್ಪತ್ತಿರೇವ ಚ ।
19175126c ತ್ರೈಲೋಕ್ಯಮಥನಸ್ತ್ವಂ ಚ ಕ್ರೋಧಲೋಭಮನೋರಥಃ ।।

ನೀನೇ ಮಹಾಮೇಘವು. ನಿನ್ನಿಂದಲೇ ಬೀಜಗಳು ಸಿದ್ಧಿಸುತ್ತವೆ. ಕ್ರೋಧ-ಲೋಭ-ಮನೋರಥ ಸ್ವರೂಪನಾದ ನೀನೇ ಮೂರೂಲೋಕಗಳನ್ನು ಮಥಿಸುತ್ತಿರುತ್ತೀಯೆ.

19175127a ಭವಾನ್ಕಾಮಪ್ರದಶ್ಚೈವ ಕಾಮಃ ಸರ್ವಧನುರ್ಧರಃ ।
19175127c ಸಂವರ್ತೋ ವರ್ತನಶ್ಚೈವ ಪ್ರಲಯೋ ನಿಲಯೋ ಮಹಾನ್ ।।

ಕಾಮನೆಗಳನ್ನು ಪೂರೈಸುವವನು ನೀನೇ. ಸರ್ವಧನುಸ್ಸುಗಳನ್ನು ಧರಿಸುವ ಕಾಮನು ನೀನೇ. ನೀನೇ ಮಹಾನ್ ಸಂವರ್ತ, ವರ್ತನ, ಪ್ರಲಯ ಮತ್ತು ನಿಲಯ ಸ್ವರೂಪನು.

19175128a ಹಿರಣ್ಯಗರ್ಭೋ ರೂಪಜ್ಞೋ ರೂಪವಾನ್ಮಧುಸೂದನಃ ।
19175128c ಈಶಸ್ತ್ವಂ ಚ ಮಹಾದೇವ ಅಸಂಖ್ಯೇಯಗುಣಾನ್ವಿತಃ ।।
19175129a ಸ್ತೋತುಮಿಚ್ಛಸಿ ಮಾಂ ದೇವ ಸ್ತೋತವ್ಯಸ್ತ್ವಂ ಯದೂತ್ತಮ ।

ನೀನು ಹಿರಣ್ಯಗರ್ಭ, ರೂಪಜ್ಞ, ರೂಪವಾನ್ ಮತ್ತು ಮಧುಸೂದನ. ನೀನು ಅಸಂಖ್ಯ ಗುಣಾನ್ವಿತ ಮಹಾದೇವ ಈಶ. ಯದೂತ್ತಮ! ನೀನೇ ಸ್ತೋತ್ರಗಳಿಗೆ ಅರ್ಹನಾಗಿರುವೆ. ದೇವ! ಆದರೂ ನೀನು ನನ್ನನ್ನು ಸ್ತುತಿಸಲು ಬಯಸುತ್ತಿರುವೆ!

19175129c ಚಕ್ಷುಷಾ ಯೇ ತ್ವಯಾ ಘೋರಾಃ ಪ್ರಾಣಿನೋ ಹಿ ನಿರೀಕ್ಷಿತಾಃ।।
19175130a ಹತಾಸ್ತೇ ಯಮದಂಡೇನ ತಿರ್ಯಂನಿರಯಗಾಮಿನಃ ।

ಯಾರನ್ನು ನೀನು ಘೋರ ದೃಷ್ಟಿಯಿಂದ ನೋಡುತ್ತೀಯೋ ಆ ಪ್ರಾಣಿಗಳು ಯಮದಂಡದಿಂದ ಹತರಾಗಿ ನರಕ ಮತ್ತು ತಿರ್ಯಗ್ಯೋನಿಗಳಿಗೆ ಹೋಗುತ್ತಾರೆ.

19175130c ಯೇ ತ್ವಯಾ ಪರಮಪ್ರೀತ್ಯಾ ಪ್ರಾಣಿನೋ ವೈ ನಿರೀಕ್ಷಿತಾಃ ।।
19175131a ಇಹ ಚ ಪ್ರೇತ್ಯ ತೇ ಸರ್ವೇ ಸರ್ವಥಾ ಸ್ವರ್ಗಗಾಮಿನಃ ।
19175131c ಏಷ ತೇಽಹಂ ಮಹಾಬಾಹೋ ವಶಗಃ ಶಾಸನೇ ಸ್ಥಿತಃ ।।

ಯಾವ ಪ್ರಾಣಿಗಳನ್ನು ನೀನು ಪರಮ ಪ್ರೀತಿಯಿಂದ ನೋಡುತ್ತೀಯೋ ಅವರೆಲ್ಲರೂ ಇಹದಲ್ಲಿಯೂ ಪರದಲ್ಲಿಯೂ ಸರ್ವಥಾ ಸ್ವರ್ಗಗಾಮಿಗಳಾಗುತ್ತಾರೆ. ಇದೋ! ಮಹಾಬಾಹೋ! ನಾನು ನಿನ್ನ ಶಾಸನದಡಿಯಲ್ಲಿ ನಿಂತಿದ್ದೇನೆ.”

19175132a ಜಯಸ್ಥಾನಂ ತತಃ ಕೃತ್ವಾ ಗರುಡಃ ಪ್ರಾಹ ಕೇಶವಮ್ ।
19175132c ಅಯಮಸ್ಮಿ ಸ್ಥಿತೋ ವೀರ ಆರುಹಸ್ವ ಮಹಾಬಲ ।।

ಅನಂತರ ಜಯಸ್ಥಾನವನ್ನು ಮಾಡಿಕೊಂಡು ಗರುಡನು “ಮಹಾಬಲ! ವೀರ! ಇಗೋ ನಾನು ಹೊರಡಲು ನಿಂತಿದ್ದೇನೆ. ನನ್ನನ್ನು ಏರು!” ಎಂದು ಕೇಶವನಿಗೆ ಹೇಳಿದನು.

19175133a ತತಃ ಕಂಠೇ ಪರಿಷ್ವಜ್ಯ ಮಾಧವೋ ಗರುಡಂ ತತಃ ।
19175133c ಸಖೇ ಶತ್ರುವಿನಾಶಾಯ ಅರ್ಘ್ಯೋಽಯಂ ಪ್ರತಿಗೃಹ್ಯತಾಮ್।।

ಅನಂತರ ಮಾಧವನು ಗರುಡನ ಕುತ್ತಿಗೆಯನ್ನು ಆಲಂಗಿಸಿ “ಸಖ! ಶತ್ರುವಿನ ವಿನಾಶಕ್ಕಾಗಿ ಈ ಅರ್ಘ್ಯವನ್ನು ಸ್ವೀಕರಿಸು!” ಎಂದನು.

19175134a ದತ್ತ್ವಾರ್ಘ್ಯಂ ಪರಯಾ ಪ್ರೀತ್ಯಾ ಶಂಖಚಕ್ರಗದಾಸಿಭೃತ್ ।
19175134c ಆರುರೋಹ ಮಹಾಬಾಹುಃ ಸುಪರ್ಣಂ ಪುರುಷೋತ್ತಮಃ ।।

ಹೀಗೆ ಪರಮ ಪ್ರೀತಿಯಿಂದ ಅರ್ಘ್ಯವನ್ನಿತ್ತು ಶಂಖ-ಚಕ್ರ-ಖಡ್ಗಧಾರೀ ಮಹಾಬಾಹು ಪುರುಷೋತ್ತಮನು ಸುಪರ್ಣನನ್ನೇರಿದನು.

19175135a ಕೃಷ್ಣಸ್ಯ ಪಾರ್ಶ್ವಮಾಗಮ್ಯ ಹರ್ಷಾದೇವಾಸ್ಥಿತೋಽಭವತ್ ।
19175135c ಕೃಷ್ಣಕೇಶಃ ಪ್ರವಲಯೋ ವಿಷ್ಣುಃ ಕೃಷ್ಣಶ್ಚ ವರ್ಣತಃ ।।

ಅನಂತರ ಹರ್ಷದಿಂದ ಕೃಷ್ಣಕೇಶ ಬಲರಾಮನು ಕೃಷ್ಣನ ಪಕ್ಕಕ್ಕೆ ಬಂದು ಕುಳಿತುಕೊಂಡನು. ಅವನ ತಲೆಗೂದಲು ಕೃಷ್ಣವರ್ಣಕ್ಕಿಂತ ಕಪ್ಪಾಗಿತ್ತು. ಅವನು ಕೈಯಲ್ಲಿ ಕಡಗವನ್ನು ತೊಟ್ಟಿದ್ದನು.

19175136a ಚತುರ್ದಂಷ್ಟ್ರಶ್ಚತುರ್ಬಾಹುಶ್ಚತುರ್ವೇದಷಡಂಗವಿತ್ ।
19175136c ಶ್ರೀವತ್ಸಾಂಕೋಽರವಿಂದಾಕ್ಷ ಊರ್ಧ್ವರೋಮಾ ಮೃದುತ್ವಚಃ ।।
19175137a ಸಮಾಂಗುಲಿಃ ಸಮನಖೋ ರಕ್ತಾಂಗುಲಿನಖಾಂತರಃ ।
19175137c ಸ್ನಿಗ್ಧಗಂಭೀರನಿರ್ಘೋಷೋ ವೃತ್ತಬಾಹುರ್ಮಹಾಭುಜಃ ।।
19175138a ಆಜಾನುಬಾಹುಸ್ತಾಮ್ರಾಸ್ಯಃ ಸಿಂಹವಿಸ್ಪಷ್ಟವಿಕ್ರಮಃ ।
19175138c ಸಹಸ್ರಮಿವ ಸೂರ್ಯಾಣಾಂ ದೀಪ್ಯಮಾನಃ ಪ್ರಕಾಶತೇ ।।
19175139a ಯಃ ಪ್ರಭುರ್ಭಾತಿ ವಿಶ್ವಾತ್ಮಾ ಭೂತಾನಾಂ ಭಾವನೋ ವಿಭುಃ ।
19175139c ಯಸ್ಯಾಷ್ಟಾಗುಣಮೈಶ್ವರ್ಯಂ ದದೌ ಪ್ರೀತಃ ಪ್ರಜಾಪತಿಃ ।
19175139e ಪ್ರಜಾಪತೀನಾಂ ಸಾಧ್ಯಾನಾಂ ತ್ರಿದಶಾನಾಂ ಚ ಶಾಶ್ವತಃ ।।
19175140a ಸ್ತೂಯಮಾನಃ ಸ್ತವೈರ್ದಿವ್ಯೈಃ ಸೂತಮಾಗಧಬಂದಿಭಿಃ ।
19175140c ಋಷಿಭಿಶ್ಚ ಮಹಾಭಾಗೈರ್ವೇದವೇದಾಂಗಪಾರಗೈಃ ।।
19175141a ಸಂವಿಧಾನಮಥಾಜ್ಞಾಪ್ಯ ದ್ವಾರಕಾಯಾಂ ಮಹಾಬಲಃ ।
19175141c ಗಮನಾಯ ಮತಿಂ ಚಕ್ರೇ ವಾಸುದೇವಃ ಪ್ರತಾಪವಾನ್ ।।

ಚತುರ್ದಂಷ್ಟ್ರ, ಚತುರ್ಬಾಹು, ಚತುರ್ವೇದವಿದು, ಷಡಂಗವಿದು, ಶ್ರೀವತ್ಸಾಂಕ, ಅರವಿಂದಾಕ್ಷ, ಊರ್ಧ್ವರೋಮಾ, ಮೃದುತ್ವಚ, ಸಮನಾದ ಬೆರಳುಗಳಿದ್ದ, ಸಮನಾದ ಉಗುರುಗಳಿದ್ದ, ಬೆರಳು-ಉಗುರುಗಳ ಮಧ್ಯೆ ಕೆಂಪಾಗಿದ್ದ, ಸ್ನಿಗ್ಧಗಂಭೀರನಿರ್ಘೋಷ, ಉರುಟಾದ ಬಾಹುಗಳಿದ್ದ, ಮಹಾಭುಜ, ಆಜಾನುಬಾಹು, ತಾಮ್ರವರ್ಣದ ಮುಖದ, ಸಿಂಹದಂತೆ ಸ್ಪಷ್ಟವಿಕ್ರಮಿಯಾಗಿದ್ದ, ಸಹಸ್ರ ಸೂರ್ಯರಂತೆ ಬೆಳಗಿ ಪ್ರಕಾಶಿಸುತ್ತಿದ್ದ, ಭೂತಗಳ ಭಾವನ ವಿಭು ವಿಶ್ವಾತ್ಮನಂತೆ ಬೆಳಗುತ್ತಿದ್ದ ಪ್ರಭು, ಪ್ರೀತನಾದ ಪ್ರಜಾಪತಿ ಕಶ್ಯಪನು ಯಾರಿಗೆ ಅಷ್ಟೈಶ್ವರ್ಯಗುಣಗಳನ್ನು ನೀಡಿದ್ದನೋ, ಪ್ರಜಾಪತಿಗಳು-ಸಾಧ್ಯರು ಮತ್ತು ದೇವತೆಗಳು ಸ್ತುತಿಸುವ ಶಾಶ್ವತ, ಸೂತ-ಮಾಗಧ-ಬಂದಿಗಳು ಹಾಗೂ ಮಹಾಭಾಗ ವೇದವೇದಾಂಗಪಾರಗ ಋಷಿಗಳು ಸ್ತುತಿಸುವ ಮಹಾಬಲ ಪ್ರತಾಪವಾನ್ ವಾಸುದೇವನು ದ್ವಾರಕೆಯಲ್ಲಿ ಯಾತ್ರೆಯ ಸಿದ್ಧತೆಗೆ ಆಜ್ಞಾಪಿಸಿ ಶೋಣಿತಪುರಕ್ಕೆ ಹೋಗುವ ಮನಸ್ಸುಮಾಡಿದನು.

19175142a ಆಸ್ಥಿತೋ ಗರುಡಂ ದೇವಸ್ತಸ್ಯ ಚಾನು ಹಲಾಯುಧಃ ।
19175142c ಪೃಷ್ಠತೋಽನು ಬಲಸ್ಯಾಪಿ ಪ್ರದ್ಯುಮ್ನಃ ಶತ್ರುಕರ್ಷಣಃ ।।

ದೇವನು ಗರುಡನನ್ನೇರಲು, ಅವನನ್ನು ಅನುಸರಿಸಿ ಹಲಾಯುಧ ಬಲರಾಮ ಮತ್ತು ಅವನ ಹಿಂದೆ ಶತ್ರುಕರ್ಷಣ ಪ್ರದ್ಯುಮ್ನರು ಕುಳಿತುಕೊಂಡರು.

19175143a ಜಯ ಬಾಣಂ ಮಹಾಬಾಹೋ ಯೇ ಚಾಸ್ಯಾನುಗತಾ ರಣೇ ।
19175143c ನ ಹಿ ತೇ ಪ್ರಮುಖೇ ಸ್ಥಾತುಂ ಕಶ್ಚಿಚ್ಛಕ್ತೋ ಮಹಾಮೃಧೇ ।।

“ಮಹಾಬಾಹೋ! ರಣದಲ್ಲಿ ಬಾಣ ಮತ್ತು ಅವನ ಅನುಯಾಯಿಗಳನ್ನು ಜಯಿಸು! ಮಹಾರಣದಲ್ಲಿ ನಿನ್ನ ಎದಿರು ನಿಲ್ಲಲು ಯಾರಿಗೂ ಶಕ್ಯವಿಲ್ಲ.

19175144a ಪ್ರಸಾದೇ ತೇ ಧ್ರುವಾ ಲಕ್ಷ್ಮೀರ್ವಿಜಯಶ್ಚ ಪರಾಕ್ರಮೇ ।
19175144c ವಿಜೇಷ್ಯಸಿ ರಣೇ ಶತ್ರುಂ ದೈತ್ಯೇಂದ್ರಂ ಸಹಸೈನಿಕಮ್ ।।

ನಿನ್ನ ಪ್ರಸಾದದಲ್ಲಿ ಲಕ್ಷ್ಮಿಯ ಅಟಲ ನಿವಾಸವಿದೆ ಮತ್ತು ಪರಾಕ್ರಮದಲ್ಲಿ ಜಯವು ನಿಶ್ಚಿತವಾಗಿದೆ. ರಣದಲ್ಲಿ ಶತ್ರು ದೈತ್ಯೇಂದ್ರನನ್ನು, ಅವನ ಸೈನಿಕರೊಂದಿಗೆ, ಜಯಿಸುತ್ತೀಯೆ!”

19175145a ಸಿದ್ಧಚಾರಣಸಂಘಾನಾಂ ಮಹರ್ಷೀಣಾಂ ಚ ಸರ್ವಶಃ ।
19175145c ಶೃಣ್ವನ್ವಾಚೋಽಂತರಿಕ್ಷೇ ವೈ ಪ್ರಯಯೌ ಕೇಶವೋ ರಣೇ ।।

ಕೇಶವನು ರಣಕ್ಕೆ ಹೊರಡುವಾಗ ಹೀಗೆ ಅಂತರಿಕ್ಷದಲ್ಲಿ ಸಿದ್ಧ-ಚಾರಣಸಂಘಗಳ ಮತ್ತು ಮಹರ್ಷಿಗಳ ಜಯಘೋಷವು ಎಲ್ಲಕಡೆಗಳಿಂದ ಕೇಳಿಬಂದಿತು.”

ಸಮಾಪ್ತಿ

ಇತಿ ಶ್ರೀಮಹಾಭಾರತೇ ಖಿಲೇಷು ಹರಿವಂಶೇ ವಿಷ್ಣುಪರ್ವಣಿ ಕೃಷ್ಣಪ್ರಯಾಣೇ ಪಂಚಸಪ್ತತ್ಯಧಿಕಶತತಮೋಽಧ್ಯಾಯಃ।।