174: ಅನಿರುದ್ಧಕೃತಾರ್ಯಾಸ್ತವೋ ತದ್ವರಲಾಭಶ್ಚ

ಪ್ರವೇಶ

।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।

ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ

ಶ್ರೀ ಮಹಾಭಾರತ

ಖಿಲಭಾಗೇ ಹರಿವಂಶಃ

ವಿಷ್ಣು ಪರ್ವ

ಅಧ್ಯಾಯ 174

ಸಾರ

ಅನಿರುದ್ಧನಿಂದ ಆರ್ಯಾದೇವಿಯ ಸ್ತುತಿ (1-35). ದೇವಿಯು ಪ್ರಸನ್ನಳಾಗಿ ಅವನನ್ನು ಬಂಧನದಿಂದ ಮುಕ್ತಗೊಳಿಸಿದುದು (36-48).

19174001 ವೈಶಂಪಾಯನ ಉವಾಚ ।
19174001a ಯದಾ ಬಾಣಪುರೇ ವೀರಃ ಸೋಽನಿರುದ್ಧಃ ಸಹೋಷಯಾ ।
19174001c ಸಂನಿರುದ್ಧೋ ನರೇಂದ್ರೇಣ ಬಾಣೇನ ಬಲಿಸೂನುನಾ ।।
19174002a ತದಾ ದೇವೀಂ ಕೋಟವತೀಂ ರಕ್ಷಾರ್ಥಂ ಶರಣಂ ಗತಃ ।
19174002cಯದ್ಗೀತಮನಿರುದ್ಧೇನ ದೇವ್ಯಾಃ ಸ್ತೋತ್ರಮಿದಂ ಶೃಣು ।।

ವೈಶಂಪಾಯನನು ಹೇಳಿದನು: “ಉಷೆಯೊಡನೆ ವೀರ ಅನಿರುದ್ಧನು ಬಲಿಸೂನು ನರೇಂದ್ರ ಬಾಣನಿಂದ ಬಾಣಪುರದಲ್ಲಿ ಬಂಧನಕ್ಕೊಳಗಾಗಿದ್ದಾಗ ತನ್ನ ರಕ್ಷಣೆಗಾಗಿ ಅವನು ದೇವೀ ಕೋಟವತಿಯ ಶರಣುಹೋದನು. ಅನಿರುದ್ಧನು ಮಾಡಿದ ದೇವಿಯ ಸ್ತೋತ್ರವನ್ನು ಕೇಳು.

19174003a ಅನಂತಮಕ್ಷಯಂ ದಿವ್ಯಮಾದಿದೇವಂ ಸನಾತನಮ್ ।
19174003c ನಾರಾಯಣಂ ನಮಸ್ಕೃತ್ಯ ಪ್ರವರಂ ಜಗತಾಂ ಪ್ರಭುಮ್ ।।
19174004a ಚಂಡೀಂ ಕಾತ್ಯಾಯನೀಂ ದೇವೀಮಾರ್ಯಾಂ ಲೋಕನಮಸ್ಕೃತಾಮ್ ।
19174004c ವರದಾಂ ಕೀರ್ತಯಿಷ್ಯಾಮಿ ನಾಮಭಿರ್ಹರಿಸಂಸ್ತುತೈಃ ।।

ಅನಂತ, ಅಕ್ಷಯ, ದಿವ್ಯ, ಆದಿದೇವ, ಸನಾತನ, ಆ ಸರ್ವಶ್ರೇಷ್ಠ ಜಗದೀಶ್ವರ ನಾರಾಯಣನನ್ನು ನಮಸ್ಕರಿಸಿ ಲೋಕನಮಸ್ಕೃತೆ ಚಂಡೀ, ಕಾತ್ಯಾಯನೀ, ದೇವಿ, ವರದೆ ಆರ್ಯೆಯನ್ನು ಹರಿಯು ಸ್ತುತಿಸಿದ ನಾಮಗಳಿಂದ ಕೀರ್ತನೆಮಾಡುತ್ತೇನೆ.

19174005a ಋಷಿಭಿರ್ದೈವತೈಶ್ಚೈವ ವಾಕ್ಪುಷ್ಪೈರರ್ಚಿತಾಂ ಶುಭಾಮ್ ।
19174005c ತಾಂ ದೇವೀಂ ಸರ್ವದೇಹಸ್ಥಾಂ ಸರ್ವದೇವನಮಸ್ಕೃತಾಮ್ ।।

ಋಷಿಗಳು ಮತ್ತು ದೇವತೆಗಳು ವಾಕ್ಪುಷ್ಪಗಳಿಂದ ಅರ್ಚಿಸುವ ಶುಭೆ ದೇವಿ ಸರ್ವದೇವನಮಸ್ಕೃತೆ ದೇವಿಯನ್ನು ಸ್ತುತಿಸುತ್ತೇನೆ.

19174006 ಅನಿರುದ್ಧ ಉವಾಚ ।
19174006a ಮಹೇಂದ್ರವಿಷ್ಣುಭಗಿನೀಂ ನಮ್ಸ್ಯಾಮಿ ಹಿತಾಯ ವೈ ।
19174006c ಮನಸಾ ಭಾವಶುದ್ಧೇನ ಶುಚಿಃ ಸ್ತೋಷ್ಯೇ ಕೃತಾಂಜಲಿಃ ।।

ಅನಿರುದ್ಧನು ಹೇಳಿದನು: “ನನ್ನ ಹಿತವನ್ನು ಬಯಸಿ ಮಹೇಂದ್ರ ಮತ್ತು ವಿಷ್ಣುವಿನ ತಂಗಿಯನ್ನು ನಮಸ್ಕರಿಸುತ್ತೇನೆ. ಕೈಜೋಡಿಸಿ ಭಾವಶುದ್ಧಿಯಿಂದ ಮನಸಾ ಅವಳನ್ನು ಸ್ತುತಿಸುತ್ತೇನೆ.

19174007a ಗೌತಮೀಂ ಕಂಸಭಯದಾಂ ಯಶೋದಾನಂದವರ್ದ್ಧಿನೀಮ್ ।
19174007c ಮೇಧ್ಯಾಂ ಗೋಕುಲಸಂಭೂತಾಂ ನಂದಗೋಪಸ್ಯ ನಂದಿನೀಮ್ ।।

ಗೌತಮೀ, ಕಂಸನಿಗೆ ಭಯವನ್ನಿತ್ತ, ಯಶೋದೆಯ ಆನಂದವನ್ನು ವರ್ಧಿಸಿದ, ಪವಿತ್ರ ಗೋಕುಲಸಂಭೂತೆ, ನಂದಗೋಪನಂದಿನಿಗೆ ನಮಸ್ಕರಿಸುತ್ತೇನೆ.

19174008a ಪ್ರಾಜ್ಞಾಂ ದಕ್ಷಾಂ ಶಿವಾಂ ಸೌಮ್ಯಾಂ ದನುಪುತ್ರವಿಮರ್ದಿನೀಮ್ ।
19174008c ತಾಂ ದೇವೀಂ ಸರ್ವದೇಹಸ್ಥಾಂ ಸರ್ವಭೂತನಮಸ್ಕೃತಾಮ್ ।।

ಪ್ರಾಜ್ಞೆ, ದಕ್ಷೆ, ಶಿವೆ, ಸೌಮ್ಯೆ, ದನುಪುತ್ರರನ್ನು ಮರ್ದಿಸುವ, ಸರ್ವದೇಹಗಳಲ್ಲಿರುವ, ಸರ್ವಭೂತನಮಸ್ಕೃತೆ ಆ ದೇವಿಯನ್ನು ನಮಸ್ಕರಿಸುತ್ತೇನೆ.

19174009a ದರ್ಶನೀಂ ಪೂರಣೀಂ ಮಾಯಾಂ ವಹ್ನಿಸೂರ್ಯಶಶಿಪ್ರಭಾಮ್ ।
19174009c ಶಾಂತಿಂ ಧ್ರುವಾಂ ಚ ಜನನೀಂ ಮೋಹಿನೀಂ ಶೋಷಣೀಂ ತಥಾ ।।

ದರ್ಶನೀ (ದೃಷ್ಟಿಶಕ್ತಿ), ಪೂರಣೀ (ಮನೋರಥಗಳನ್ನು ಪೂರ್ಣಗೊಳಿಸುವವಳು), ಮಾಯಾಸ್ವರೂಪಿಣೀ, ಅಗ್ನಿ-ಸೂರ್ಯ-ಚಂದ್ರರ ಪ್ರಭೆಯಿರುವ, ಶಾಂತಿಮಯೀ, ಧ್ರುವೆ (ಅವಿನಾಶಿನೀ), ಜನನೀ, ಮೋಹಿನೀ ಮತ್ತು ಶೋಷಣಿಗೆ ನಮಸ್ಕರಿಸುತ್ತೇನೆ.

19174010a ಸೇವ್ಯಾಂ ದೇವೈಃ ಸರ್ಷಿಗಣೈಃ ಸರ್ವದೇವನಮಸ್ಕೃತಾಮ್ ।
19174010c ಕಾಲೀಂ ಕಾತ್ಯಾಯನೀಂ ದೇವೀಂ ಭಯದಾಂ ಭಯನಾಶಿಣೀಮ್ ।।

ಋಷಿಗಳೊಂದಿಗೆ ದೇವತೆಗಳು ಸೇವೆಗೈಯುವ, ಸರ್ವದೇವನಮಸ್ಕೃತೆ, ಕಾಲೀ, ಕಾತ್ಯಾಯನೀ, ಭಯದಾಯಿನೀ ಮತ್ತು ಭಯನಾಶಿನೀ ದೇವಿಯನ್ನು ನಮಸ್ಕರಿಸುತ್ತೇನೆ.

19174011a ಕಾಲರಾತ್ರಿಂ ಕಾಮಗಮಾಂ ತ್ರಿನೇತ್ರಾಂ ಬ್ರಹ್ಮಚಾರಿಣೀಮ್ ।
19174011c ಸೌದಾಮಿನೀಂ ಮೇಘರವಾಂ ವೇತಾಲೀಂ ವಿಪುಲಾನನಾಮ್ ।।

ಕಾಲರಾತ್ರಿ, ಇಚ್ಛಾನುಸಾರ ಸರ್ವತ್ರ ಹೋಗುವ, ತ್ರಿನೇತ್ರೆ, ಬ್ರಹ್ಮಚಾರಿಣೀ, ವಿದ್ಯುತ್ ಸ್ವರೂಪೀ, ಮೇಘಗಳಂತೆ ಗರ್ಜಿಸುವ, ವೇತಾಲೀ ಮತ್ತು ವಿಶಾಲಮುಖವುಳ್ಳವಳಿಗೆ ನಮಸ್ಕರಿಸುತ್ತೇನೆ.

19174012a ಯೂಥಸ್ಯಾದ್ಯಾಂ ಮಹಾಭಾಗಾಂ ಶಕುನೀಂ ರೇವತೀಂ ತಥಾ।
19174012c ತಿಥೀನಾಂ ಪಂಚಮೀಂ ಷಷ್ಠೀಂ ಪೂರ್ಣಮಾಸೀಂ ಚತುರ್ದಶೀಮ್।।

ಯೂಥದ ಅಧ್ಯಕ್ಷೆ, ಮಹಾಭಾಗೆ, ಶಕುನಿ, ರೇವತಿ, ತಿಥಿಗಳಲ್ಲಿ ಪಂಚಮಿ, ಷಷ್ಠಿ, ಪೂರ್ಣಮಾಸಿ ಮತ್ತು ಚತುರ್ದಶೀಸ್ವರೂಪಿಣಿಗೆ ನಮಸ್ಕರಿಸುತ್ತೇನೆ.

19174013a ಸಪ್ತವಿಂಶತಿಋಕ್ಷಾಣಿ ನದ್ಯಃ ಸರ್ವಾ ದಿಶೋ ದಶ ।
19174013c ನಗರೋಪವನೋದ್ಯಾನದ್ವಾರಾಟ್ಟಾಲಕವಾಸಿನೀಮ್ ।।

ಇಪ್ಪತ್ತೇಳು ನಕ್ಷತ್ರಗಳು, ಸರ್ವ ನದಿಗಳು, ಮತ್ತು ದಶ ದಿಕ್ಕುಗಳ ಸ್ವರೂಪಿಣೀ ಹಾಗೂ ನಗರ-ಉಪವನ-ಉದ್ಯಾನ-ದ್ವಾರ-ಅಟ್ಟಗಳಲ್ಲಿ ವಾಸಿಸುವ ದೇವಿಗೆ ನಮಸ್ಕರಿಸುತ್ತೇನೆ.

19174014a ಹ್ರೀಂ ಶ್ರೀಂ ಗಂಗಾಂ ಚ ಗಂಧರ್ವಾಂ ಯೋಗಿನೀಂ ಯೋಗದಾಂ ಸತಾಮ್ ।
19174014c ಕೀರ್ತಿಮಾಶಾಂ ದಿಶಂ ಸ್ಪರ್ಶಾಂ ನಮಸ್ಯಾಮಿ ಸರಸ್ವತೀಮ್ ।।

ಹ್ರೀ, ಶ್ರೀ, ಗಂಗಾ, ಗಂಧರ್ವಾ (ರಾಧೆ), ಯೋಗಿನೀ, ಸತ್ಪುರುಷರಿಗೆ ಯೋಗವನ್ನು ದಯಪಾಲಿಸುವ ಆ ಕೀರ್ತಿ, ಆಶಾ, ದಿಶಾ, ಸ್ಪರ್ಷಾ ಮತ್ತು ಸರಸ್ವತಿಗೆ ನಮಸ್ಕರಿಸುತ್ತೇನೆ.

19174015a ವೇದಾನಾಂ ಮಾತರಂ ಚೈವ ಸಾವಿತ್ರೀಂ ಭಕ್ತವತ್ಸಲಾಮ್ ।
19174015c ತಪಸ್ವಿನೀಂ ಶಾಂತಿಕರೀಮೇಕಾನಂಶಾಂ ಸನಾತನಾಮ್ ।।

ವೇದಮಾತೆ, ಸಾವಿತ್ರೀ, ಭಕ್ತವತ್ಸಲೆ, ತಪಸ್ವಿನೀ, ಶಾಂತಿಕರೀ, ಏಕಾನಂಶಾ ಮತ್ತು ಸನಾತನಿ ದೇವಿಗೆ ನಮಸ್ಕರಿಸುತ್ತೇನೆ.

19174016a ಕೌಟೀರ್ಯಾಂ ಮದಿರಾಂ ಚಂಡಾಮಿಲಾಂ ಮಲಯವಾಸಿನೀಮ್ ।
19174016c ಭೂತಧಾತ್ರೀಂ ಭಯಕರೀಂ ಕೂಷ್ಮಾಂಡೀಂ ಕುಸುಮಪ್ರಿಯಾಮ್ ।।

ಕುಟೀರವಾಸಿನೀ, ಮದಿರೆ, ಚಂಡಿ, ಇಲೆ, ಮಲಯವಾಸಿನಿ, ಭೂತಧಾತ್ರಿ, ಭಯಕರೀ, ಕೂಷ್ಮಾಂಡೀ ಮತ್ತು ಕುಸುಮಪ್ರಿಯೆಗೆ ನಮಸ್ಕರಿಸುತ್ತೇನೆ.

19174017a ದಾರುಣೀಂ ಮದಿರಾವಾಸಾಂ ವಿಂಧ್ಯಕೈಲಾಸವಾಸಿನೀಮ್ ।
19174017c ವರಾಂಗನಾಂ ಸಿಂಹರಥೀಂ ಬಹುರೂಪಾಂ ವೃಷಧ್ವಜಾಮ್ ।।

ದಾರುಣೀ, ಮದಿರಾವಾಸಿನೀ, ವಿಂಧ್ಯ-ಕೈಲಾಸವಾಸಿನೀ, ವರಾಂಗನೆ, ಸಿಂಹರಥಿ, ಬಹುರೂಪಿಣೀ, ವೃಷಧ್ವಜಳಿಗೆ ನಮಸ್ಕರಿಸುತ್ತೇನೆ.

19174018a ದುರ್ಲಭಾಂ ದುರ್ಜಯಾಂ ದುರ್ಗಾಂ ನಿಶುಂಭಭಯದರ್ಶಿನೀಮ್ ।
19174018c ಸುರಪ್ರಿಯಾಂ ಸುರಾಂ ದೇವೀಂ ವಜ್ರಪಾಣ್ಯನುಜಾಂ ಶಿವಾಮ್ ।।

ದುರ್ಲಭೆ, ದುರ್ಜಯಿ, ದುರ್ಗೆ, ನಿಶುಂಭಭಯದರ್ಶಿನೀ, ಸುರಪ್ರಿಯೆ, ಸುರಸ್ವರೂಪಿಣೀ, ದೇವೀ, ವಜ್ರಪಾಣಿಯ ಅನುಜೆ ಶಿವೆಗೆ ನಮಸ್ಕರಿಸುತ್ತೇನೆ.

19174019a ಕಿರಾತೀಂ ಚೀರವಸನಾಂ ಚೌರಸೇನಾನಮಸ್ಕೃತಾಮ್ ।
19174019c ಆಜ್ಯಪಾಂ ಸೋಮಪಾಂ ಸೌಮ್ಯಾಂ ಸರ್ವಪರ್ವತವಾಸಿನೀಮ್ ।।

ಕಿರಾತರೂಪಧಾರಿಣೀ, ಚೀರ-ವಸ್ತ್ರಧಾರಿಣೀ, ಚೋರರ ಸೇನೆಯಿಂದ ನಮಸ್ಕೃತಳಾದ, ತುಪ್ಪವನ್ನು ಕುಡಿಯುವ, ಸೋಮವನ್ನು ಕುಡಿಯುವ, ಸೌಮ್ಯೆ, ಸರ್ವಪರ್ವತವಾಸಿನಿಗೆ ನಮಸ್ಕರಿಸುತ್ತೇನೆ.

19174020a ನಿಶುಂಭಶುಂಭಮಥನೀಂ ಗಜಕುಂಭೋಪಮಸ್ತನೀಮ್ ।
19174020c ಜನನೀಂ ಸಿದ್ಧಸೇನಸ್ಯ ಸಿದ್ಧಚಾರಣಸೇವಿತಾಮ್ ।।
19174021a ಚರಾಂ ಕುಮಾರಪ್ರಭವಾಂ ಪಾರ್ವತೀಂ ಪರ್ವತಾತ್ಮಜಾಮ್ ।

ನಿಶುಂಭ-ಶುಂಭಮಥಿನೀ, ಗಜಕುಂಭೋಪಮ ಸ್ತನವಿರುವ, ಸಿದ್ಧಸೇನೆಯ ಜನನಿ, ಸಿದ್ಧಚಾರಣಸೇವಿತೆ, ಎಲ್ಲಕಡೆ ಸಂಚರಿಸುವ, ಕುಮಾರನ ಜನನಿ, ಪರ್ವತಾತ್ಮಜೆ, ಪಾರ್ವತಿಗೆ ನಮಸ್ಕರಿಸುತ್ತೇನೆ.

19174021c ಪಂಚಾಶದ್ದೇವಕನ್ಯಾನಾಂ ಪತ್ನ್ಯೋ ದೇವಗಣಸ್ಯ ಚ ।।
19174022a ಕದ್ರುಪುತ್ರಸಹಸ್ರಸ್ಯ ಪುತ್ರಪೌತ್ರವರಸ್ತ್ರಿಯಃ ।
19174022c ಮಾತಾ ಪಿತಾ ಜಗನ್ಮಾನ್ಯಾ ದಿವಿ ದೇವಾಪ್ಸರೋಗಣೈಃ ।।
19174023a ಋಷಿಪತ್ನೀಗಣಾನಾಂ ಚ ಯಕ್ಷಗಂಧರ್ವಯೋಷಿತಾಮ್ ।
19174023c ವಿದ್ಯಾಧರಾಣಾಂ ನಾರೀಷು ಸಾಧ್ವೀಷು ಮನುಜಾಸು ಚ ।।
19174024a ಏವಮೇತಾಸು ನಾರೀಷು ಸರ್ವಭೂತಾಶ್ರಯಾ ಹ್ಯಸಿ ।
19174024c ನಮಸ್ಕೃತಾಸಿ ತ್ರೈಲೋಕ್ಯೇ ಕಿನ್ನರೋದ್ಗೀತಸೇವಿತೇ ।।

ಐವತ್ತು ದೇವಕನ್ಯೆಯರಲ್ಲಿ, ದೇವಗಣಗಳ ಪತ್ನಿಯರಲ್ಲಿ, ಕದ್ರುವಿನ ಸಹಸ್ರ ಪುತ್ರರು, ಅವರ ಪುತ್ರ ಪೌತ್ರರು, ಮತ್ತು ಅವರ ವರಸ್ತ್ರೀಯರಲ್ಲಿ, ಮಾತಾ-ಪಿತೃಗಳಲ್ಲಿ, ದಿವಿಯಲ್ಲಿಯ ದೇವತೆಗಳಲ್ಲಿ, ಅಪ್ಸರಗಣಗಳಲ್ಲಿ, ಋಷಿಪತ್ನೀಗಣಗಳಲ್ಲಿ, ಯಕ್ಷಗಂಧರ್ವಸ್ತ್ರೀಯರಲ್ಲಿ, ವಿದ್ಯಾಧರಸ್ತ್ರೀಯರಲ್ಲಿ, ಮನುಷ್ಯ ಸಾಧ್ವಿಯರಲ್ಲಿ – ಈ ಎಲ್ಲ ನಾರಿಯರಲ್ಲಿ ನೀನು ಜಗನ್ಮಾನ್ಯ ಸರ್ವಭೂತಾಶ್ರಯಿಯಾಗಿರುವೆ. ತ್ರೈಲೋಕ್ಯದಲ್ಲಿಯೂ ನೀನು ನಮಸ್ಕೃತಳಾಗಿದ್ದೀಯೆ. ಕಿನ್ನರರು ಗೀತೆಗಳಿಂದ ನಿನ್ನ ಸೇವೆಗೈಯುತ್ತಾರೆ.

19174025a ಅಚಿಂತ್ಯಾ ಹ್ಯಪ್ರಮೇಯಾಸಿ ಯಾಸಿ ಸಾಸಿ ನಮೋಽಸ್ತು ತೇ ।
19174025c ಏಭಿರ್ನಾಮಭಿರನ್ಯೈಶ್ಚ ಕೀರ್ತಿತಾ ಹ್ಯಸಿ ಗೌತಮಿ ।।

ನೀನು ಅಚಿಂತ್ಯೆಯೂ ಅಪ್ರಮೇಯಳೂ ಆಗಿದ್ದೀಯೆ. ನೀನು ಹೇಗಿದ್ದೀಯೋ ಹಾಗೆಯೇ ಇದ್ದೀಯೆ. ನಿನಗೆ ನಮಸ್ಕರಿಸುತ್ತೇನೆ. ಗೌತಮೀ! ಈ ಮತ್ತು ಅನ್ಯ ನಾಮಗಳಿಂದ ನಿನ್ನ ಕೀರ್ತನೆಯಾಗುತ್ತದೆ.

19174026a ತ್ವತ್ಪ್ರಸಾದಾದವಿಘ್ನೇನ ಕ್ಷಿಪ್ರಂ ಮುಚ್ಯೇಯ ಬಂಧನಾತ್ ।
19174026c ಅವೇಕ್ಷಸ್ವ ವಿಶಾಲಾಕ್ಷಿ ಪಾದೌ ತೇ ಶರಣಂ ವ್ರಜೇ ।।
19174027a ಸರ್ವೇಷಾಮೇವ ಬಂಧಾನಾಂ ಮೋಕ್ಷಣಂ ಕರ್ತುಮರ್ಹಸಿ ।

ವಿಶಾಲಾಕ್ಷಿ! ನಿನ್ನ ಪ್ರಸಾದದಿಂದ ನಾನು ಯಾವ ವಿಘ್ನಗಳೂ ಇಲ್ಲದೇ ಬೇಗನೇ ಬಂಧನದಿಂದ ಮುಕ್ತನಾಗಲಿ. ನಾನು ನಿನ್ನ ಪಾದಗಳ ಶರಣು ಬಂದಿದ್ದೇನೆ. ನೋಡು. ನನ್ನನ್ನು ಸರ್ವ ಬಂಧನಗಳಿಂದ ಬಿಡುಗಡೆ ಮಾಡಬೇಕು.

19174027c ಬ್ರಹ್ಮಾ ವಿಷ್ಣುಶ್ಚ ರುದ್ರಶ್ಚ ಚಂದ್ರಸೂರ್ಯಾಗ್ನಿಮಾರುತಾಃ ।।
19174028a ಅಶ್ವಿನೌ ವಸವಶ್ಚೈವ ವಿಶ್ವೇಸಾಧ್ಯಾಸ್ತಥೈವ ಚ ।
19174028c ಮರುತಾ ಸಹ ಪರ್ಜನ್ಯೋ ಧಾತಾ ಭೂಮಿರ್ದಿಶೋ ದಶ ।।
19174029a ಗಾವೋ ನಕ್ಷತ್ರವಂಶಾಶ್ಚ ಗ್ರಹಾ ನದ್ಯೋ ಹ್ರದಾಸ್ತಥಾ ।
19174029c ಸರಿತಃ ಸಾಗರಾಶ್ಚೈವ ನಾನಾವಿದ್ಯಾಧರೋರಗಾಃ ।।
19174030a ತಥಾ ನಾಗಾಃ ಸುಪರ್ವಾಣೋ ಗಂಧರ್ವಾಪ್ಸರಸಾಂ ಗಣಾಃ ।
19174030c ಕೃತ್ಸ್ನಂ ಜಗದಿದಂ ಪ್ರೋಕ್ತಂ ದೇವ್ಯಾ ನಾಮಾನುಕೀರ್ತನಾತ್ ।।

ದೇವಿಯ ನಾಮಕೀರ್ತನೆಗಳಿಂದ ಬ್ರಹ್ಮ, ವಿಷ್ಣು, ರುದ್ರ, ಚಂದ್ರ, ಸೂರ್ಯ, ಅಗ್ನಿ, ವಾಯು, ಅಶ್ವಿನಿಯರು, ವಸುಗಳು, ವಿಶ್ವೇದೇವತೆಗಳು, ಸಾಧ್ಯರು, ಮರುತ್ತರೊಂದಿಗೆ ಪರ್ಜನ್ಯ, ಧಾತಾ, ಭೂಮಿ, ದಶ ದಿಕ್ಕುಗಳು, ಗೋವುಗಳು, ನಕ್ಷತ್ರವಂಶಗಳು, ಗ್ರಹಗಳು, ನದಿಗಳು, ಸರೋವರಗಳು, ಸರಿತ-ಸಾಗರಗಳು, ನಾನಾವಿದ್ಯಾಧರ-ಉರಗರು, ನಾಗರು, ಪಕ್ಷಿಗಳು, ಗಂಧರ್ವ-ಅಪ್ಸರಗಣಗಳು, ಮತ್ತು ಈ ಸಂಪೂರ್ಣ ಜಗತ್ತಿನ ಕೀರ್ತನವಾಗುತ್ತದೆ.

19174031a ದೇವ್ಯಾಃ ಸ್ತವಮಿಮಂ ಪುಣ್ಯಂ ಯಃ ಪಠೇತ್ಸುಸಮಾಹಿತಃ ।
19174031c ಸಾ ತಸ್ಮೈ ಸಪ್ತಮೇ ಮಾಸಿ ವರಮಗ್ರ್ಯಂ ಪ್ರಯಚ್ಛತಿ ।।

ಏಕಾಗ್ರಚಿತ್ತರಾಗಿ ಯಾರು ದೇವಿಯ ಈ ಪುಣ್ಯ ಸ್ತುತಿಯನ್ನು ಪಠಿಸುತ್ತಾರೋ ಅವರಿಗೆ ದೇವಿಯು ಏಳನೇ ತಿಂಗಳಿನಲ್ಲಿ ಉತ್ತಮ ವರವನ್ನು ದಯಪಾಲಿಸುತ್ತಾಳೆ.

19174032a ಅಷ್ಟಾದಶಭುಜಾ ದೇವೀ ದಿವ್ಯಾಭರಣಭೂಷಿತಾ ।
19174032c ಹಾರಶೋಭಿತಸರ್ವಾಂಗೀ ಮುಕುಟೋಜ್ಜ್ವಲಭೂಷಣಾ ।।
19174033a ಕಾತ್ಯಾಯನೀ ಸ್ತೂಯಸೇ ತ್ವಂ ವರಮಗ್ರ್ಯಂ ಪ್ರಯಚ್ಛಸಿ ।
19174033c ಅತಃ ಸ್ತವೀಮಿ ತಾಂ ದೇವೀಂ ವರದೇ ವಾಮಲೋಚನೇ ।।

ಅಷ್ಟಾದಶಭುಜವುಳ್ಳವಳೇ, ದಿವ್ಯಾಭರಣಭೂಷಿತೇ, ಸರ್ವಾಂಗಗಳಲ್ಲಿ ಹಾರಗಳಿಂದ ಶೋಭಿಸುವವಳೇ, ಪ್ರಜ್ವಲಿಸುವ ಮುಕುಟ-ಆಭರಣಗಳನ್ನು ಧರಿಸಿರುವ ದೇವಿಯೇ, ಕಾತ್ಯಾಯನೀ, ನಿನ್ನನ್ನು ಸ್ತುತಿಸಿದವರಿಗೆ ಉತ್ತಮ ವರವನ್ನು ನೀಡುತ್ತೀಯೆ. ವರದೇ! ವಾಮಲೋಚನೇ! ದೇವಿ! ನಾನು ನಿನ್ನನ್ನು ಸ್ತುತಿಸುತ್ತೇನೆ.

19174034a ನಮೋಽಸ್ತು ತೇ ಮಹಾದೇವಿ ಸುಪ್ರೀತಾ ಮೇ ಸದಾ ಭವ ।
19174034c ಪ್ರಯಚ್ಛ ತ್ವಂ ವರಂ ಹ್ಯಾಯುಃ ಪುಷ್ಟಿಂ ಚೈವ ಕ್ಷಮಾಂ ಧೃತಿಮ್ ।।
19174035a ಬಂಧನಸ್ಥೋ ವಿಮುಚ್ಯೇಯಂ ಸತ್ಯಮೇತದ್ಭವೇದಿತಿ ।

ಮಹಾದೇವೀ! ನಿನಗೆ ನಮಸ್ಕಾರ! ಸದಾ ನನ್ನ ಮೇಲೆ ಸುಪ್ರೀತಳಾಗಿರು. ಮತ್ತು ನನಗೆ ಶ್ರೇಷ್ಠ ಆಯುಸ್ಸು, ಪುಷ್ಟಿ, ಕ್ಷಮಾ ಮತ್ತು ಧೈರ್ಯಗಳನ್ನು ನೀಡು. ಬಂಧನಸ್ಥನಾಗಿರುವ ನನ್ನ ಬಿಡುಗಡೆಯಾಗಲಿ. ನನ್ನ ಈ ಮನೋರಥವು ಸತ್ಯವಾಗಲಿ.””

19174035 ವೈಶಂಪಾಯನ ಉವಾಚ ।
19174035c ಏವಂ ಸ್ತುತಾ ಮಹಾದೇವೀ ದುರ್ಗಾ ದುರ್ಗಪರಾಕ್ರಮಾ ।।
19174036a ಸಾಂನಿಧ್ಯಂ ಕಲ್ಪಯಾಮಾಸ ಅನಿರುದ್ಧಸ್ಯ ಬಂಧನೇ ।

ವೈಶಂಪಾಯನನು ಹೇಳಿದನು: “ಈ ರೀತಿ ಸ್ತುತಿಸಲು ಮಹಾದೇವೀ ದುರ್ಗಪರಾಕ್ರಮಿ ದುರ್ಗೆಯು ಸೆರೆಮನೆಯಲ್ಲಿ ಅನಿರುದ್ಧನ ಬಳಿ ಬಂದು ದರ್ಶನವನ್ನಿತ್ತಳು.

19174036c ಅನಿರುದ್ಧಹಿತಾರ್ಥಾಯ ದೇವೀ ಶರಣವತ್ಸಲಾ ।।
19174037a ಬದ್ಧಂ ಬಾಣಪುರೇ ವೀರಮನಿರುದ್ಧಂ ವ್ಯಮೋಕ್ಷಯತ್ ।
19174037c ಸಾಂತ್ವಯಾಮಾಸ ತಂ ವೀರಮನಿರುದ್ಧಮಮರ್ಷಣಮ್ ।।

ಅನಿರುದ್ಧನ ಹಿತಕ್ಕಾಗಿ ಶರಣವತ್ಸಲೆ ದೇವಿಯು ಬಾಣಪುರದಲ್ಲಿ ಬಂಧಿತನಾಗಿದ್ದ ವೀರ ಅನಿರುದ್ಧನನ್ನು ಮೋಕ್ಷಗೊಳಿಸಿದಳು. ಆ ಅಮರ್ಷಣ ವೀರ ಅನಿರುದ್ಧನನ್ನು ಸಂತವಿಸಿದಳು.

19174038a ಪೂಜಯಾಮಾಸ ತಾಂ ವೀರಃ ಸೋಽನಿರುದ್ಧಃ ಪ್ರತಾಪವಾನ್ ।
19174038c ಪ್ರಸಾದಾಂ ದರ್ಶಯಾಮಾಸ ಅನಿರುದ್ಧಸ್ಯ ಬಂಧನೇ ।।

ವೀರ ಪ್ರತಾಪವಾನ್ ಅನಿರುದ್ಧನು ಅವಳನ್ನು ಪೂಜಿಸಿದನು. ಸೆರೆಮನೆಯಲ್ಲಿ ಅನಿರುದ್ಧನಿಗೆ ದೇವಿಯು ತನ್ನ ದರ್ಶನವನ್ನು ಕರುಣಿಸಿದಳು.

19174039a ನಾಗಪಾಶೇನ ಬದ್ಧಸ್ಯ ತಸ್ಯೋಷಾಹೃತಚೇತಸಃ ।
19174039c ಸ್ಫೋಟಯಿತ್ವಾ ಕರಾಗ್ರೇಣ ಪಂಜರಂ ವಜ್ರಸನ್ನಿಭಮ್ ।।

ಉಷೆಯ ಹೃದಯವನ್ನು ಕದ್ದು ನಾಗಪಾಶದಿಂದ ಬಂಧಿತನಾದ ಅವನನ್ನು ವಜ್ರದಂತಿದ್ದ ಪಂಜರವನ್ನು ಕರಾಗ್ರದಿಂದ ಒಡೆದು ಬಿಡುಗಡೆಗೊಳಿಸಿದಳು.

19174040a ರುದ್ಧಂ ಬಾಣಪುರೇ ವೀರಂ ಸಾನಿರುದ್ಧಮಭಾಷತ ।
19174040c ಸಾಂತ್ವಯಂತೀ ವಚೋ ದೇವೀ ಪ್ರಸಾದಾಭಿಮುಖೀ ತದಾ ।।

ಬಾಣಪುರದಲ್ಲಿ ತಡೆಯಲ್ಪಟ್ಟಿದ್ದ ಆ ವೀರ ಅನಿರುದ್ಧನನ್ನು ಸಂತವಿಸುತ್ತಾ ದಯಾನ್ವಿತಮುಖಿ ದೇವಿಯು ಈ ಮಾತನ್ನಾಡಿದಳು.

19174041 ಶ್ರೀದೇವ್ಯುವಾಚ ।
19174041a ಚಕ್ರಾಯುಧೋ ಮೋಕ್ಷಯಿತಾನಿರುದ್ಧ ತ್ವಾಂ ಬಂಧನಾದಾಶು ಸಹಸ್ವ ಕಾಲಮ್ ।
19174041c ಛಿತ್ವಾ ಸ ಬಾಣಸ್ಯ ಸಹಸ್ರಬಾಹುಂ ಪುರೀಂ ನಿಜಾಂ ನೇಷ್ಯತಿ ದೈತ್ಯಸೂದನಃ ।।

ಶ್ರೀದೇವಿಯು ಹೇಳಿದಳು: “ಅನಿರುದ್ಧ! ಚಕ್ರಾಯುಧನು ನಿನ್ನನ್ನು ಈ ಬಂಧನದಿಂದ ಮುಕ್ತಗೊಳಿಸುತ್ತಾನೆ. ಸ್ವಲ್ಪ ಸಮಯ ಸಹಿಸಿಕೊಂಡಿರು. ಆ ದೈತ್ಯಸೂದನನು ಬಾಣನ ಸಹಸ್ರಬಾಹುಗಳನ್ನು ಕತ್ತರಿಸಿ ನಿನ್ನನ್ನು ನಿನ್ನ ಪುರಿಗೆ ಕೊಂಡೊಯ್ಯುತ್ತಾನೆ.””

19174042 ವೈಶಂಪಾಯನ ಉವಾಚ ।
19174042a ತತೋಽನಿರುದ್ಧಃ ಪುನರೇವ ದೇವೀಂ ತುಷ್ಟಾವ ಹೃಷ್ಟಃ ಶಶಿಕಾಂತವಕ್ತ್ರಃ ।

ವೈಶಂಪಾಯನನು ಹೇಳಿದನು: “ಅನಂತರ ಹೃಷ್ಟನಾದ ಶಶಿಕಾಂತಿಯ ಮುಖದ ಅನಿರುದ್ಧನು ಪುನಃ ದೇವಿಯನ್ನು ಸ್ತುತಿಗಳಿಂದ ತೃಪ್ತಿಪಡಿಸಿದನು.

19174042 ಅನಿರುದ್ಧ ಉವಾಚ ।
19174042c ನಮೋಽಸ್ತು ತೇ ದೇವಿ ವರಪ್ರದೇ ಶಿವೇ ನಮೋಽಸ್ತು ತೇ ದೇವಿ ಸುರಾರಿನಾಶಿನಿ ।।
19174043a ನಮೋಽಸ್ತು ತೇ ಕಾಮಚರೇ ಸದಾಶಿವೇ ನಮೋಽಸ್ತು ತೇ ಸರ್ವಹಿತೈಷಿಣಿ ಪ್ರಿಯೇ ।
19174043c ನಮೋಽಸ್ತು ತೇ ಭೀತಿಕರಿ ದ್ವಿಷಾಂ ಸದಾ ನಮೋಽಸ್ತು ತೇ ಬಂಧನಮೋಕ್ಷಕಾರಿಣಿ ।।

ಅನಿರುದ್ಧನು ಹೇಳಿದನು: “ವರಪ್ರದೇ! ದೇವಿ! ಶಿವೇ! ನಿನಗೆ ಸಮಸ್ಕಾರ. ದೇವಿ! ಸುರಾರಿನಾಶಿನಿ! ನಿನಗೆ ನಮಸ್ಕಾರ! ಕಾಮಚರೇ! ಸದಾಶಿವೇ! ನಿನಗೆ ನಮಸ್ಕಾರ! ಸರ್ವಹಿತೈಷಿಣಿ ಪ್ರಿಯೇ! ನಿನಗೆ ನಮಸ್ಕಾರ! ದ್ವೇಷಿಗಳಿಗೆ ಸದಾ ಭಯವನ್ನುಂಟುಮಾಡುವವಳೇ! ನಿನಗೆ ನಮಸ್ಕಾರ! ಬಂಧನಮೋಕ್ಷಕಾರಿಣಿ! ನಿನಗೆ ನಮಸ್ಕಾರ!

19174044a ಬ್ರಹ್ಮಾಣೀಂದ್ರಾಣಿ ರುದ್ರಾಣಿ ಭೂತಭವ್ಯಭವೇ ಶಿವೇ ।
19174044c ತ್ರಾಹಿ ಮಾಂ ಸರ್ವಭೀತಿಭ್ಯೋ ನಾರಾಯಣಿ ನಮೋಽಸ್ತು ತೇ ।।

ಬ್ರಹ್ಮಾಣಿ! ಇಂದ್ರಾಣಿ! ರುದ್ರಾಣಿ! ಭೂತಭವ್ಯಭವೇ! ಶಿವೇ! ನನ್ನನ್ನು ಸರ್ವಭೀತಿಗಳಿಂದ ರಕ್ಷಿಸು. ನಾರಾಯಣಿ! ನಿನಗೆ ನಮಸ್ಕಾರ!

19174045a ನಮೋಽಸ್ತು ತೇ ಜಗನ್ನಾಥೇ ಪ್ರಿಯೇ ದಾಂತೇ ಮಹಾವ್ರತೇ ।
19174045c ಭಕ್ತಿಪ್ರಿಯೇ ಜಗನ್ಮಾತಃ ಶೈಲಪುತ್ರಿ ವಸುಂಧರೇ ।।

ಜಗನ್ನಾಥೇ! ಪ್ರಿಯೇ! ದಾಂತೇ! ಮಹಾವ್ರತೇ! ಭಕ್ತಪ್ರಿಯೇ! ಜಗನ್ಮಾತೇ! ಶೈಲಪುತ್ರೀ! ವಸುಂಧರೇ! ನಿನಗೆ ನಮಸ್ಕಾರ!

19174046a ತ್ರಾಹಿ ಮಾಂ ತ್ವಂ ವಿಶಾಲಾಕ್ಷಿ ನಾರಾಯಣಿ ನಮೋಽಸ್ತು ತೇ ।
19174046c ತ್ರಾಯಸ್ವ ಸರ್ವದುಃಖೇಭ್ಯೋ ದಾನವಾನಾಂ ಭಯಂಕರೀ ।।

ವಿಶಾಲಾಕ್ಷಿ! ನನ್ನನ್ನು ಉದ್ಧರಿಸು! ನಾರಾಯಣಿ! ನಿನಗೆ ನಮಸ್ಕಾರ! ದಾನವರಿಗೆ ಭಯವನ್ನುಂಟುಮಾಡುವವಳೇ! ಸರ್ವದುಃಖಗಳಿಂದ ಪಾರುಮಾಡು.

19174047a ರುದ್ರಪ್ರಿಯೇ ಮಹಾಭಾಗೇ ಭಕ್ತಾನಾಮಾರ್ತಿನಾಶಿನಿ ।
19174047c ನಮಾಮಿ ಶಿರಸಾ ದೇವೀಂ ಬಂಧನಸ್ಥೋ ವಿಮೋಕ್ಷಿತಃ ।।

ಬಂಧನದಿಂದ ಬಿಡುಗಡೆ ಹೊಂದಿದ ನಾನು ರುದ್ರಪ್ರಿಯೆ, ಮಹಾಭಾಗೆ, ಭಕ್ತರ ಆರ್ತನಾಶಿನಿ, ದೇವಿಯನ್ನು ಶಿರಸಾ ನಮಸ್ಕರಿಸುತ್ತೇನೆ.””

19174048 ವೈಶಪಾಯನ ಉವಾಚ ।
19174048a ಆರ್ಯಾಸ್ತವಮಿದಂ ಪುಣ್ಯಂ ಯಃ ಪಠೇತ್ಸುಸಮಾಹಿತಃ ।
19174048c ಸರ್ವಪಾಪವಿನಿರ್ಮುಕ್ತೋ ವಿಷ್ಣುಲೋಕಂ ಸ ಗಚ್ಛತಿ ।
19174048e ಬಂಧನಸ್ಥೋ ವಿಮುಚ್ಯೇತ ಸತ್ಯಂ ವ್ಯಾಸವಚೋ ಯಥಾ ।।

ವೈಶಂಪಾಯನನು ಹೇಳಿದನು: “ಸಮಾಹಿತನಾಗಿ ಯಾರು ಈ ಆರ್ಯಾಸ್ತವವನ್ನು ಪಠಿಸುತ್ತಾನೋ ಅವನು ಸರ್ವಪಾಪಗಳಿಂದ ಮುಕ್ತನಾಗಿ ವಿಷ್ಣುಲೋಕಕ್ಕೆ ಹೋಗುತ್ತಾನೆ. ಬಂಧನದಲ್ಲಿರುವವನು ಬಿಡುಗಡೆಹೊಂದುತ್ತಾನೆ. ವ್ಯಾಸನ ಈ ಮಾತು ಸತ್ಯವು.”

ಸಮಾಪ್ತಿ

ಇತಿ ಶ್ರೀಮಹಾಭಾರತೇ ಖಿಲೇಷು ಹರಿವಂಶೇ ವಿಷ್ಣುಪರ್ವಣಿ ಅನಿರುದ್ಧಕೃತಾರ್ಯಾಸ್ತವೋ ನಾಮ ಚತುಃಸಪ್ತತ್ಯಧಿಕಶತತಮೋಽಧ್ಯಾಯಃ ।