173: ಬಾಣಾನಿರುದ್ಧಯುದ್ಧಃ

ಪ್ರವೇಶ

।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।

ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ

ಶ್ರೀ ಮಹಾಭಾರತ

ಖಿಲಭಾಗೇ ಹರಿವಂಶಃ

ವಿಷ್ಣು ಪರ್ವ

ಅಧ್ಯಾಯ 173

ಸಾರ

ಚಿತ್ರಲೇಖಾ ಮತ್ತು ನಾರದರ ಸಂವಾದ, ಚಿತ್ರಲೇಖೆಯು ನಾರದನಿಂದ ತಾಮಸೀ ವಿದ್ಯೆಯನ್ನು ಪಡೆದುದು (1-20). ಚಿತ್ರಲೇಖೆಯು ಅನಿರುದ್ಧನನ್ನು ಕಂಡು ಅವನಿಗೆ ಉಷೆಯ ಕುರಿತು ತಿಳಿಸಿ, ತನ್ನೊಡನೆ ಶೋಣಿತಪುರಕ್ಕೆ ಬರುವಂತೆ ನಿವೇದಿಸಿದುದು (21-47). ಚಿತ್ರಲೇಖೆಯು ಅನಿರುದ್ಧನನ್ನು ಶೋಣಿತಪುರಕ್ಕೆ ಎತ್ತಿಕೊಂಡು ಹೋದುದು (48-55), ಉಷಾ-ಅನಿರುದ್ಧರ ಗಾಂಧರ್ವ ವಿವಾಹ (56-76), ಬಾಣಾಸುರನೊಂದಿಗೆ ಅನಿರುದ್ಧನ ಯುದ್ಧ, ಅನಿರುದ್ಧನನ್ನು ಬಾಣನು ನಾಗಪಾಶದಿಂದ ಬಂಧಿಸಿದುದು (77-196), ನಾರದನು ಈ ವಿಷಯವನ್ನು ತಿಳಿಸಲು ದ್ವಾರಕೆಗೆ ತೆರಳಿದುದು (197-203).

19173001 ವೈಶಂಪಾಯನ ಉವಾಚ ।
19173001a ಅಥ ದ್ವಾರವತೀಂ ಪ್ರಾಪ್ಯ ಸ್ಥಿತಾ ಸಾ ಭವನಾಂತಿಕೇ ।
19173001c ಪ್ರವೃತ್ತಿಹರಣಾರ್ಥಾಯ ಚಿತ್ರಲೇಖಾ ವ್ಯಚಿಂತಯತ್ ।।

ವೈಶಂಪಾಯನನು ಹೇಳಿದನು: “ಆಗ ದ್ವಾರವತಿಯನ್ನು ತಲುಪಿ ಚಿತ್ರಲೇಖೆಯು ಅನಿರುದ್ಧನ ಭವನದ ಬಳಿ ನಿಂತು ಅವನಿಗೆ ಸಂದೇಶವನ್ನು ನೀಡುವ ಕುರಿತು ಯೋಚಿಸಿದಳು.

19173002a ಅಥ ಚಿಂತಯತೀ ಸಾ ತು ಬುದ್ಧಿಬುದ್ಧ್ಯರ್ಥನಿಶ್ಚಯಮ್ ।
19173002c ಅಪಶ್ಯನ್ನಾರದಂ ತತ್ರ ಧ್ಯಾಯಂತಮುದಕೇ ಮುನಿಮ್ ।।

ಅರ್ಥನಿಶ್ಚಯಕಾರಕ ಬುದ್ಧಿಪೂರ್ವಕವಾಗಿ ಹಾಗೆ ಚಿಂತಿಸುತ್ತಿರಲು ಅವಳು ಅಲ್ಲಿ ಸಮುದ್ರದಲ್ಲಿ ಧ್ಯಾನಿಸುತ್ತಿದ್ದ ಮುನಿ ನಾರದನನ್ನು ಕಂಡಳು.

19173003a ತಂ ದೃಷ್ಟ್ವಾ ಚಿತ್ರಲೇಖಾ ತು ಹರ್ಷೇಣೋತ್ಫುಲ್ಲಲೋಚನಾ।
19173003c ಉಪಸೃತ್ಯಾಭಿವಾದ್ಯಾಥ ತತ್ರೈವಾಧೋಮುಖೀ ಸ್ಥಿತಾ ।।

ಅವನನ್ನು ನೋಡಿದೊಡನೆಯೇ ಚಿತ್ರಲೇಖೆಯ ಕಣ್ಣುಗಳು ಹರ್ಷದಿಂದ ಅರಳಿದವು. ಅವಳು ಅವನ ಬಳಿಹೋಗಿ ಅಲ್ಲಿಯೇ ಮುಖತಗ್ಗಿಸಿ ನಿಂತುಕೊಂಡಳು.

19173004a ನಾರದಸ್ತ್ವಾಶಿಷಂ ದತ್ತ್ವಾ ಚಿತ್ರಲೇಖಾಮಥಾಬ್ರವೀತ್ ।
19173004c ಕಿಮರ್ಥಮಿಹ ಸಂಪ್ರಾಪ್ತಾ ಶ್ರೋತುಮಿಚ್ಛಾಮಿ ತತ್ತ್ವತಃ ।।

ನಾರದನು ಆಶೀರ್ವಾದವನ್ನಿತ್ತು ಚಿತ್ರಲೇಖೆಗೆ ಹೇಳಿದನು: “ಇಲ್ಲಿಗೆ ಏಕೆ ಬಂದಿದ್ದೀಯೆ? ತತ್ತ್ವತಃ ಕೇಳಬಯಸುತ್ತೇನೆ.”

19173005a ದೇವರ್ಷಿಮಥ ತಂ ದಿವ್ಯಂ ನಾರದಂ ಲೋಕಪೂಜಿತಮ್ ।
19173005c ಕೃತಾಂಜಲಿಪುಟಾ ಭೂತ್ವಾ ಚಿತ್ರಲೇಖಾ ತ್ವಥಾಬ್ರವೀತ್ ।।

ಆಗ ಚಿತ್ರಲೇಖೆಯು ಅಂಜಲೀಬದ್ಧಳಾಗಿ ಆ ಲೋಕಪೂಜಿತ ದಿವ್ಯ ದೇವರ್ಷಿ ನಾರದನಿಗೆ ಹೇಳಿದಳು:

19173006a ಭಗವಂಛ್ರೂಯತಾಂ ವಾಕ್ಯಂ ದೌತ್ಯೇನಾಹಮಿಹಾಗತಾ ।
19173006c ಅನಿರುದ್ಧಂ ಮುನೇ ನೇತುಂ ಯದರ್ಥಂ ಚ ಶೃಣುಷ್ವ ಮೇ ।।

“ಭಗವನ್! ನನ್ನ ಮಾತನ್ನು ಕೇಳಬೇಕು. ದೂತಿಯಾಗಿ ನಾನು ಇಲ್ಲಿಗೆ ಬಂದಿದ್ದೇನೆ. ಮುನೇ! ಅನಿರುದ್ಧನನ್ನು ಕೊಂಡೊಯ್ಯಲು ಬಂದಿದ್ದೇನೆ. ಅದು ಏಕೆ ಎನ್ನುವುದನ್ನು ನನ್ನಿಂದ ಕೇಳು.

19173007a ನಗರೇ ಶೋಣಿತಪುರೇ ಬಾಣೋ ನಾಮ ಮಹಾಸುರಃ ।
19173007c ತಸ್ಯ ಕನ್ಯಾ ವರಾರೋಹಾ ನಾಮ್ನೋಷೇತಿ ಚ ವಿಶ್ರುತಾ ।।

ಶೋಣಿತಪುರ ನಗರಿಯಲ್ಲಿ ಬಾಣ ಎಂಬ ಹೆಸರಿನ ಮಹಾಸುರನಿದ್ದಾನೆ. ಅವನ ಕನ್ಯೆ ವರಾರೋಹೆಯು ಉಷೆ ಎಂಬ ಹೆಸರಿನಿಂದ ವಿಶ್ರುತಳಾಗಿದ್ದಾಳೆ.

19173008a ಭಗವನ್ಸಾನುರಕ್ತಾ ಚ ಪ್ರಾದ್ಯುಮ್ನಿಂ ಪುರುಷೋತ್ತಮಮ್ ।
19173008c ದೇವ್ಯಾ ವರವಿಸರ್ಗೇಣ ತಸ್ಯಾ ಭರ್ತಾ ವಿನಿರ್ಮಿತಃ ।।

ಭಗವನ್! ಅವಳು ಪ್ರದ್ಯುಮ್ನನ ಮಗ ಪುರುಷೋತ್ತಮ ಅನಿರುದ್ಧನಲ್ಲಿ ಅನುರಕ್ತಳಾಗಿದ್ದಾಳೆ. ದೇವಿ ಪಾರ್ವತಿಯು ವರವನ್ನು ನೀಡುವಾಗ ಅವನನ್ನೇ ಅವಳ ಪತಿಯೆಂದು ನಿಯುಕ್ತಗೊಳಿಸಿದ್ದಳು.

19173009a ತಂ ಚ ನೇತುಂ ಸಮಾಯಾತಾ ತತ್ರ ಸಿದ್ಧಿಂ ವಿಧತ್ಸ್ವ ಮೇ ।
19173009c ಮಯಾ ನೀತೇಽನಿರುದ್ಧಂ ತು ನಗರಂ ಶೋಣಿತಾಹ್ವಯಮ್ ।।
19173010a ಪ್ರವೃತ್ತಿಃ ಪುಂಡರೀಕಾಕ್ಷೇ ತ್ವಯಾಖ್ಯೇಯಾ ಮಹಾಮುನೇ ।

ಅವನನ್ನು ಕರೆದುಕೊಂಡು ಹೋಗಲೇ ನಾನು ಬಂದಿದ್ದೇನೆ. ನನ್ನ ಕಾರ್ಯವು ಸಿದ್ಧಿಯಾಗುವಂತೆ ಉಪಾಯವನ್ನು ತಿಳಿಸಬೇಕು. ಮಹಾಮುನೇ! ನಾನು ಅನಿರುದ್ಧನನ್ನು ಶೋಣಿತಾಹ್ವಯ ನಗರಕ್ಕೆ ಕೊಂಡೊಯ್ದ ನಂತರ ನೀನು ಈ ವಿಷಯವನ್ನು ಪುಂಡರೀಕಾಕ್ಷ ಕೃಷ್ಣನಿಗೆ ಹೇಳಬೇಕು.

19173010c ಅವಶ್ಯಂ ಭವಿತಾ ಚೈವ ಕೃಷ್ಣೇನ ಸಹ ವಿಗ್ರಹಃ ।
19173010e ಬಾಣಸ್ಯ ಸುಮಹಾನ್ಸಂಖ್ಯೇ ದಿವ್ಯೋ ಹಿ ಸ ಮಹಾಸುರಃ ।।

ಅವಶ್ಯವಾಗಿಯೂ ಕೃಷ್ಣನೊಂದಿಗೆ ಬಾಣನ ಮಹಾ ಯುದ್ಧವು ನಡೆಯುತ್ತದೆ. ಆ ಮಹಾಸುರನು ರಣದಲ್ಲಿ ದಿವ್ಯ ಶಕ್ತಿ ಸಂಪನ್ನನಾಗಿದ್ದಾನೆ.

19173011a ನ ಚ ಶಕ್ತೋಽನಿರುದ್ಧಸ್ತಂ ಯುದ್ಧೇ ಜೇತುಂ ಮಹಾಸುರಮ್ ।
19173011c ಸಹಸ್ರಬಾಹುಮಾಯಾಂತಂ ಜಯೇತ್ಕೃಷ್ಣೋ ಮಹಾಭುಜಃ ।।

ಅನಿರುದ್ಧನು ಯುದ್ಧದಲ್ಲಿ ಮಹಾಸುರನನ್ನು ಜಯಿಸಲು ಶಕ್ತನಾಗುವುದಿಲ್ಲ. ಸಹಸ್ರಬಾಹುಯುಕ್ತನಾದ ಅವನನ್ನು ಮಹಾಭುಜ ಕೃಷ್ಣನೇ ಜಯಿಸಬಲ್ಲನು.

19173012a ಭಗವನ್ಸನ್ನಿಕರ್ಷಂ ತೇ ಯದರ್ಥಮಹಮಾಗತಾ ।
19173012c ಕಥಂ ಹಿ ಪುಂಡರೀಕಾಕ್ಷೋ ಜ್ಞಾಪಿತಸ್ತದಿದಂ ಭವೇತ್ ।।

ಪುಂಡರೀಕಾಕ್ಷ ಕೃಷ್ಣನಿಗೆ ಈ ವಿಷಯವನ್ನು ಹೇಗೆ ತಿಳಿಸಬೇಕು ಎಂಬ ಅಭಿಪ್ರಾಯದಿಂದ ನಾನು ನಿನ್ನ ಬಳಿ ಬಂದಿದ್ದೇನೆ.

19173013a ತ್ವತ್ಪ್ರಸಾದಾಚ್ಚ ಭಗವನ್ನ ಮೇ ಕೃಷ್ಣಾದ್ಭಯಂ ಭವೇತ್ ।
19173013c ಸ ಹಿ ತತ್ತ್ವಾರ್ಥದೃಷ್ಟಿಸ್ತು ಅನಿರುದ್ಧಃ ಕಥಂ ಹ್ರಿಯೇತ್ ।।

ಭಗವನ್! ನಿನ್ನ ಕೃಪೆಯಿಂದಾಗಿ ನನಗೆ ಕೃಷ್ಣನಲ್ಲಿ ಯಾವ ಭಯವೂ ಇಲ್ಲ. ಏಕೆಂದರೆ ಅವನು ತತ್ತ್ವಾರ್ಥದರ್ಶಿಯು. ಆದರೆ ಅನಿರುದ್ಧನನ್ನು ಹೇಗೆ ಅಪಹರಿಸಬಲ್ಲೆ?

19173014a ಕ್ರುದ್ಧೋ ಹಿ ಸ ಮಹಾಬಾಹುಸ್ತ್ರೈಲೋಕ್ಯಮಪಿ ನಿರ್ದಹೇತ್ ।
19173014c ಪೌತ್ರಶೋಕಾಭಿಸಂತಪ್ತಃ ಶಾಪೇನ ಸ ದಹೇತ ಮಾಮ್ ।।

ಮಹಾಬಾಹು ಕೃಷ್ಣನು ಕ್ರುದ್ಧನಾದರೆ ಅವನು ಮೂರು ಲೋಕಗಳನ್ನೂ ಸುಟ್ಟುಬಿಡಬಲ್ಲನು. ಪುತ್ರಶೋಕದಿಂದ ಸಂತಪ್ತನಾಗಿ ನನ್ನನ್ನು ಶಾಪದಿಂದ ಸುಡಲೂ ಬಹುದು.

19173015a ತತ್ರೋಪಾಯಂ ಚ ಭಗವಂಶ್ಚಿಂತಿತುಂ ವೈ ತ್ವಮರ್ಹಸಿ ।
19173015c ಯಥಾ ಹ್ಯೂಷಾ ಲಭೇತ್ಕಾಂತಂ ಮಮ ಚೈವಾಭಯಂ ಭವೇತ್ ।।

ಭಗವನ್! ಉಷೆಗೆ ಅವಳ ಪ್ರಿಯತಮನು ದೊರೆಯುವಂತೆ ಮತ್ತು ನನಗೂ ಅಭಯವುಂಟಾಗುವಂತೆ ಯಾವುದಾದರೂ ಉಪಾಯವನ್ನು ನೀನು ಯೋಚಿಸಬೇಕು.”

19173016a ಇತ್ಯೇವಮುಕ್ತೋ ಭಗವಾಂಶ್ಚಿತ್ರಲೇಖಾಂ ಸ ನಾರದಃ ।
19173016c ಉವಾಚ ಚ ಶುಭಂ ವಾಕ್ಯಂ ಮಾ ಭೈಸ್ತ್ವಮಭಯಂ ಶೃಣು ।।

ಇದನ್ನು ಕೇಳಿ ಭಗವಾನ್ ನಾರದನು ಚಿತ್ರಲೇಖೆಗೆ ಈ ಶುಭಮಾತನ್ನು ಆಡಿದನು: “ಭಯಪಡಬೇಡ. ಅಭಯವನ್ನು ಕೇಳು.

19173017a ತ್ವಯಾ ನೀತೇಽನಿರುದ್ಧೇ ತು ಕನ್ಯಾವೇಶ್ಮ ಪ್ರವೇಶಿತೇ ।
19173017c ಯದಿ ಯುದ್ಧಂ ಭವೇತ್ತತ್ರ ಸ್ಮರ್ತವ್ಯೋಽಹಂ ಶುಚಿಸ್ಮಿತೇ ।।

ಶುಚಿಸ್ಮಿತೇ! ನೀನು ಅನಿರುದ್ಧನನ್ನು ಕೊಂಡೊಯ್ದು ಕನ್ಯೆಯ ಭವನವನ್ನು ಪ್ರವೇಶಿಸಿದ ನಂತರ ಒಂದು ವೇಳೆ ಯುದ್ಧವಾಗುತ್ತದೆ ಎಂದಾದರೆ ಆಗ ನನ್ನನ್ನು ಸ್ಮರಿಸಬೇಕು.

19173018a ಮಮೈಷ ಪರಮಃ ಕಾಮೋ ಯುದ್ಧಂ ದ್ರಷ್ಟುಂ ಮನೋರಮೇ।
19173018c ತದ್ದೃಷ್ಟ್ವಾ ಚ ಮಹಾಪ್ರೀತಿಃ ಪ್ರವೃತ್ತಿಶ್ಚ ದೃಢಾ ಭವೇತ್ ।।

ಮನೋರಮೇ! ಯುದ್ಧವನ್ನು ನೋಡಲು ನನಗೂ ಪರಮ ಇಚ್ಛೆಯಿದೆ. ಅದನ್ನು ನೋಡಿ ಮಹಾಪ್ರೀತನಾಗುತ್ತೇನೆ. ಮತ್ತು ಯುದ್ಧಮಾಡಿಸುವ ನನ್ನ ಪ್ರವೃತ್ತಿಯು ದೃಢವಾಗುತ್ತದೆ.

19173019a ಗೃಹ್ಯತಾಂ ತಾಮಸೀ ವಿದ್ಯಾ ಸರ್ವಲೋಕಪ್ರಮೋಹಿನೀ ।
19173019c ಕೃತಕೃತ್ಯಸ್ತು ತೇ ದೇವಿ ಏಷ ವಿದ್ಯಾಂ ದದಾಮ್ಯಹಮ್ ।।

ಸರ್ವಲೋಕಗಳನ್ನೂ ಮೋಹಗೊಳಿಸುವ ಈ ತಾಮಸೀ ವಿದ್ಯೆಯನ್ನು ಸ್ವೀಕರಿಸು. ದೇವೀ! ನಿನ್ನ ಕಾರ್ಯಸಿದ್ಧಿಯಾಗಲೆಂದೇ ನಾನು ಈ ವಿದ್ಯೆಯನ್ನು ನಿನಗೆ ನೀಡುತ್ತಿದ್ದೇನೆ.”

19173020a ಏವಮುಕ್ತೇ ತು ವಚನೇ ನಾರದೇನ ಮಹರ್ಷಿಣಾ ।
19173020c ತಥೇತಿ ವಚನಂ ಪ್ರಾಹ ಚಿತ್ರಲೇಖಾ ಮನೋಜವಾ ।।

ಮಹರ್ಷಿನಾರದನು ಹೀಗೆ ಹೇಳಲು ಮನೋವೇಗದ ಚಿತ್ರಲೇಖೆಯು ಹಾಗೆಯೇ ಆಗಲೆಂದು ಹೇಳಿದಳು.

19173021a ಅಭಿವಾದ್ಯ ಮಹಾತ್ಮಾನಮೃಷೀಣಾಂ ನಾರದಂ ವರಮ್ ।
19173021c ಸಾ ಜಗಾಮಾನಿರುದ್ಧಸ್ಯ ಗೃಹಂ ಚೈವಾಂತರಿಕ್ಷಗಾ ।।

ಋಷಿಗಳಲ್ಲಿ ಶ್ರೇಷ್ಠ ಮಹಾತ್ಮಾ ನಾರದನಿಗೆ ನಮಸ್ಕರಿಸಿ ಅವಳು ಅಂತರಿಕ್ಷಮಾರ್ಗವಾಗಿ ಅನಿರುದ್ಧನ ಮನೆಗೆ ಹೋದಳು.

19173022a ತತೋ ದ್ವಾರವತೀಮಧ್ಯೇ ಕಾಮಸ್ಯ ಭುವನಂ ಶುಭಮ್ ।
19173022c ತತ್ಸಮೀಪೇಽನಿರುದ್ಧಸ್ಯ ಭವನಂ ಸಾ ವಿವೇಶ ಹ ।।

ದ್ವಾರವತಿಯ ಮಧ್ಯೆ ಕಾಮ ಪ್ರದ್ಯುಮ್ನನ ಶುಭ ಭವನದ ಸಮೀಪದಲ್ಲಿಯೇ ಇದ್ದ ಅನಿರುದ್ಧನ ಭವನವನ್ನು ಅವಳು ಪ್ರವೇಶಿಸಿದಳು.

19173023a ಸೌವರ್ಣವೇದಿಕಾಸ್ತಂಭಂ ರುಕ್ಮವೈಡೂರ್ಯತೋರಣಮ್ ।
19173023c ಮಾಲ್ಯದಾಮಾವಸಕ್ತಂ ಚ ಪೂರ್ಣಕುಂಭೋಪಶೋಭಿತಮ್।।
19173024a ಬರ್ಹಿಕಂಠನಿಭಗ್ರೀವಂ ಪ್ರಾಸಾದೈರೇಕಸಂಚಯೈಃ ।
19173024c ಮಣಿಪ್ರವಾಲವಿಸ್ತೀರ್ಣಂ ದೇವಗಂಧರ್ವನಾದಿತಮ್ ।।

ಆ ಭವನದಲ್ಲಿ ಸುವರ್ಣದ ವೇದಿ-ಸ್ತಂಭಗಳಿದ್ದವು. ಚಿನ್ನ ಮತ್ತು ವೈಡೂರ್ಯಗಳ ತೋರಣವಿತ್ತು. ಹೂಮಾಲೆಗಳನ್ನು ಕಟ್ಟಿದ್ದ ಭವನವು ಪೂರ್ಣಕುಂಭಗಳಿಂದ ಶೋಭಿಸುತ್ತಿತ್ತು. ಕಂಬಗಳಿಲ್ಲದ ವಿಶಾಲ ಪ್ರಾಸಾದವು ನವಿಲಿನ ಕಂಠದಂತೆ ತೋರುತ್ತಿತ್ತು. ಮಣಿ-ಪ್ರವಾಲಗಳನ್ನು ಹಾಸಿದಂತಿತ್ತು. ದೇವಗಂಧರ್ವರ ನಾದವು ಕೇಳಿಬರುತ್ತಿತ್ತು.

19173025a ದದರ್ಶ ಭವನಂ ಯತ್ರ ಪ್ರಾದ್ಯುಮ್ನಿರವಸತ್ಸುಖಮ್ ।
19173025c ತತಃ ಪ್ರವಿಶ್ಯ ಸಹಸಾ ಭವನಂ ತಸ್ಯ ತನ್ಮಹತ್ ।।
19173026a ತತ್ರಾನಿರುದ್ಧಂ ಸಾಪಶ್ಯಚ್ಚಿತ್ರಲೇಖಾ ವರಾಪ್ಸರಾಃ ।
19173026c ಮಧ್ಯೇ ಪರಮನಾರೀಣಾಂ ತರಾಪತಿಮಿವೋದಿತಮ್ ।।

ಪ್ರಾದ್ಯುಮ್ನಿ ಅನಿರುದ್ಧನು ಸುಖವಾಗಿ ವಾಸಿಸುತ್ತಿದ್ದ ಆ ಭವನವನ್ನು ನೋಡಿ ಅವಳು ಕೂಡಲೇ ಅವನ ಆ ಮಹಾಭವನವನ್ನು ಪ್ರವೇಶಿಸಿದಳು. ಅಲ್ಲಿ ಆ ಶ್ರೇಷ್ಠ ಅಪ್ಸರೆ ಚಿತ್ರಲೇಖೆಯು ಪರಮ ನಾರಿಗಳ ಮಧ್ಯೆ ಉದಯಿಸುತ್ತಿದ ಚಂದ್ರನಂತಿದ್ದ ಅನಿರುದ್ಧನನ್ನು ನೋಡಿದಳು.

19173027a ಕ್ರೀಡಾವಿಹಾರೇ ನಾರೀಭಿಃ ಸೇವ್ಯಮಾನಮಿತಸ್ತತಃ ।
19173027c ಪಿಬಂತಂ ಮಧು ಮಾಧ್ವೀಕಂ ಶ್ರಿಯಾ ಪರಮಯಾ ಯುತಮ್ ।।

ಕ್ರೀಡಾವಿಹಾರದಲ್ಲಿ ನಾರಿಯರು ಅಲ್ಲಲ್ಲಿ ಅವನ ಸೇವೆಗೈಯುತ್ತಿದ್ದರು. ಅವನು ಪರಮಕಾಂತಿಯಿಂದ ಯುಕ್ತನಾಗಿ ಮಧುರ ಮಧುವನ್ನು ಕುಡಿಯುತ್ತಿದ್ದನು.

19173028a ವರಾಸನಗತಂ ತತ್ರ ಯಥಾ ಚೈಡವಿಲಂ ತಥಾ ।
19173028a ವಾದ್ಯತೇ ಸಮತಾಲಂ ಚ ಗೀಯತೇ ಮಧುರಂ ತಥಾ ।।

ವೈಡವಿಲ ಕುಬೇರನಂತೆ ಶ್ರೇಷ್ಠ ಸಿಂಹಾಸನದಲ್ಲಿ ವಿರಾಜಮಾನನಾಗಿದ್ದನು. ಸಮತಾಲದಲ್ಲಿ ವಾದ್ಯವನ್ನು ನುಡಿಸುತ್ತಿದ್ದರು ಮತ್ತು ಮಧುರ ಗೀತೆಯನ್ನು ಹಾಡುತ್ತಿದ್ದರು.

19173029a ನ ಚ ತಸ್ಯ ಮನಸ್ತತ್ರ ತಮೇವಾರ್ಥಮಚಿಂತಯತ್ ।
19173029c ಸ್ತ್ರಿಯಃ ಸರ್ವಗುಣೋಪೇತಾ ನೃತ್ಯಂತೇ ತತ್ರ ತತ್ರ ವೈ ।।

ಆದರೆ ಅವನ ಮನಸ್ಸು ಅಲ್ಲಿರಲಿಲ್ಲ. ಅವನು ಯಾವುದೋ ವಿಷಯದ ಕುರಿತು ಚಿಂತಿಸುತ್ತಿದ್ದನು. ಸರ್ವಗುಣೋಪೇತ ಸ್ತ್ರೀಯರು ಅಲ್ಲಲ್ಲಿ ನರ್ತಿಸುತ್ತಿದ್ದರು.

19173030a ನ ಚಾಸ್ಯ ಮನಸಸ್ತುಷ್ಟಿಂ ಚಿತ್ರಲೇಖಾ ಪ್ರಪಶ್ಯತಿ ।
19173030c ನ ಚಾಭಿರಮತೇ ಭೋಗೈರ್ನ ಚಾಪಿ ಮಧು ಸೇವತೇ ।।

ಅವನ ಮನಸ್ಸು ಸಂತುಷ್ಟವಾಗಿಲ್ಲ ಎನ್ನುವುದನ್ನು ಚಿತ್ರಲೇಖೆಯು ನೋಡಿದಳು. ಅವನು ಭೋಗಗಳಿಂದಾಗಲೀ ಮಧುಸೇವನೆಯಿಂದಾಗಲೀ ಸಂತೋಷಪಡುತ್ತಿರಲಿಲ್ಲ.

19173031a ವ್ಯಕ್ತಮಸ್ಯ ಹಿ ತತ್ಸ್ವಪ್ನೋ ಹೃದಯೇ ಪರಿವರ್ತತೇ ।
19173031c ಇತಿ ತತ್ರೈವ ಬುದ್ಧ್ಯಾ ಚ ನಿಶ್ಚಿತಾ ಗತಸಾಧ್ವಸಾ ।।

ಇವನ ಹೃದಯದಲ್ಲಿಯೂ ಅದೇ ಸ್ವಪ್ನವು ಮರುಕಳಿಸಿ ಬರುತ್ತಿದೆ ಎಂದು ವ್ಯಕ್ತವಾಗುತ್ತಿತ್ತು. ತನ್ನ ಬುದ್ಧಿಯಿಂದ ಇದನ್ನು ನಿಶ್ಚಯಮಾಡಿಕೊಂಡ ಚಿತ್ರಲೇಖೆಯ ಭಯವು ಹೊರಟುಹೋಯಿತು.

19173032a ಸಾ ದೃಷ್ಟ್ವಾ ಪರಮಸ್ತ್ರೀಣಾಂ ಮಧ್ಯೇ ಶಕ್ರಧ್ವಜೋಪಮಮ್ ।
19173032c ಚಿಂತಯಾವಿಷ್ಟಹೃದಯಾ ಚಿತ್ರಲೇಖಾ ಮನಸ್ವಿನೀ ।।

ಪರಮಸ್ತ್ರೀಯರ ಮಧ್ಯೆ ಇಂದ್ರಧ್ವಜದಂತೆ ಶೋಭಿಸುತ್ತಿದ್ದ ಅವನನ್ನು ನೋಡಿ ಮನಸ್ವಿನೀ ಚಿತ್ರಲೇಖೆಯು ಮನದಲ್ಲಿಯೇ ಈ ರೀತಿ ಚಿಂತಿಸತೊಡಗಿದಳು.

19173033a ಕಥಂ ಕಾರ್ಯಮಿದಂ ಕಾರ್ಯಂ ಕಥಂ ಸ್ವಸ್ತಿ ಭವೇದಿತಿ ।
19173033c ಸಾಂತರ್ಹಿತಾ ಚಿಂತಯಿತ್ವಾ ಚಿತ್ರಲೇಖಾ ಯಶಸ್ವಿನೀ ।।
19173034a ತಾಮಸ್ಯಾ ಚ್ಛಾದಯಾಮಾಸ ವಿದ್ಯಯಾ ಶುಭಲೋಚನಾ ।

“ಈ ಕಾರ್ಯವನ್ನು ಹೇಗೆ ನಿರ್ವಹಿಸಬೇಕು? ಹೇಗೆ ಮಾಡುವುದರಿಂದ ಕಲ್ಯಾಣವಾಗುತ್ತದೆ?” ಹೀಗೆ ಅಂತರ್ಧಾನಳಾಗಿದ್ದುಕೊಂಡೇ ವಿಚಾರಮಾಡಿ ಯಶಸ್ವಿನೀ ಶುಭಲೋಚನೆ ಚಿತ್ರಲೇಖೆಯು ತಾಮಸೀ ವಿದ್ಯೆಯ ಮೂಲಕ ಅನಿರುದ್ಧನನ್ನು ಬಿಟ್ಟು ಉಳಿದ ಎಲ್ಲರನ್ನೂ ಮೋಹಗೊಳಿಸಿದಳು.

19173034c ತತೋಽಂತರಿಕ್ಷಾದೇವಾಶು ಪ್ರಾಸಾದೋಪರ್ಯಧಿಷ್ಠಿತಾ ।।
19173035a ಪ್ರಾದ್ಯುಮ್ನಿಂ ವಚನಂ ಪ್ರಾಹ ಶ್ಲಕ್ಷ್ಣಂ ಮಧುರಯಾ ಗಿರಾ ।

ಅನಂತರ ಅಂತರಿಕ್ಷದಿಂದ ಶೀಘ್ರವಾಗಿ ಭವನದ ಪ್ರಾಸಾದದ ಮೇಲೆ ನಿಂತು ಅನಿರುದ್ಧನಿಗೆ ಮಧುರ ವಾಣಿಯಲ್ಲಿ ಸ್ನೇಹಯುಕ್ತವಾಗಿ ಮಾತನಾಡಿದಳು.

19173035c ಚಕ್ಷುರ್ದತ್ತ್ವಾ ತು ಸಾ ತಸ್ಮೈ ಕೃತ್ವಾ ಚಾತ್ಮನಿ ದರ್ಶನಮ್ ।।
19173036a ವಿವಿಕ್ತೇ ಸಾ ಚ ವೈ ದೇಶೇ ತಂ ವಾಕ್ಯಮಿದಮಬ್ರವೀತ್ ।

ಅವನಿಗೆ ದಿವ್ಯದೃಷ್ಟಿಯನ್ನಿತ್ತು ತನ್ನ ಸ್ವರೂಪದ ದರ್ಶನವನ್ನು ಮಾಡಿಸಿದಳು. ಅನಂತರ ಏಕಾಂತ ಸ್ಥಳದಲ್ಲಿ ಅವನಿಗೆ ಇಂತೆಂದಳು:

19173036c ಅಪಿ ತೇ ಕುಶಲಂ ವೀರ ಸರ್ವತ್ರ ಯದುನಂದನ ।।
19173037a ಅಹಸ್ತಾವತ್ಪ್ರದೋಷೋ ವಾ ಕಚ್ಚಿದ್ಗಚ್ಛತಿ ತೇ ಸುಖಮ್ ।
19173037c ಶೃಣುಷ್ವ ತ್ವಂ ಮಹಾಬಾಹೋ ವಿಜ್ಞಪ್ತಿಂ ಮೇ ರತೀಸುತ ।।

“ವೀರ! ಯದುನಂದನ! ನೀನು ಸರ್ವತ್ರ ಕುಶಲನಾಗಿದ್ದೀಯೆ ತಾನೇ? ನಿನ್ನ ದಿನ ಮತ್ತು ಪ್ರದೋಶಕಾಲವು ಸುಖವಾಗಿ ಕಳೆಯುತ್ತಿದೆಯಲ್ಲವೇ? ಮಹಾಬಾಹೋ! ರತೀಸುತ! ನನ್ನ ಈ ವಿಜ್ಞಾಪನೆಯನ್ನು ಕೇಳು.

19173038a ಉಷಾಯಾ ಮಮ ಸಖ್ಯಾಸ್ತು ವಾಕ್ಯಂ ವಕ್ಷ್ಯಾಮಿ ತತ್ತ್ವತಃ ।
19173038c ಸ್ವಪ್ನೇ ತು ಯಾ ತ್ವಯಾ ದೃಷ್ಟಾ ಸ್ತ್ರೀಭಾವಂ ಚಾಪಿ ಭಾವಿತ ।।

ಸ್ವಪ್ನದಲ್ಲಿ ಯಾರನ್ನು ನೋಡಿ ನೀನು ನಿನ್ನ ಪತ್ನಿಯನ್ನಾಗಿ ಮಾಡಿಕೊಂಡಿರುವೆಯೋ ಆ ನನ್ನ ಸಖಿ ಉಷೆಯ ಕುರಿತು ತತ್ತ್ವತಃ ಹೇಳುತ್ತೇನೆ.

19173039a ಬಿಭರ್ತಿ ಹೃದಯೇ ಯಾ ತ್ವಾಮುಷಯಾ ಪ್ರೇಷಿತಾ ತ್ವಹಮ್।
19173039c ರುದಂತೀ ಜೃಂಭತೀ ಚೈವ ನಿಃಶ್ವಸಂತೀ ಮುಹುರ್ಮುಹುಃ ।।

ಅವಳೂ ಕೂಡ ನಿನ್ನನ್ನು ತನ್ನ ಹೃದಯದಲ್ಲಿ ಧರಿಸಿದ್ದಾಳೆ. ಉಷೆಯೇ ನನ್ನನ್ನು ಇಲ್ಲಿಗೆ ಕಳುಹಿಸಿದ್ದಾಳೆ. ಅವಳು ರೋದಿಸುತ್ತಿದ್ದಾಳೆ. ಆಕಳಿಸುತ್ತಿದ್ದಾಳೆ ಮತ್ತು ಪುನಃ ಪುನಃ ನಿಟ್ಟುಸಿರು ಬಿಡುತ್ತಿದ್ದಾಳೆ.

19173040a ತ್ವದ್ದರ್ಶನಪರಾ ಸೌಮ್ಯ ಕಾಮಿನೀ ಪರಿತಪ್ಯತೇ ।
19173040c ಯದಿ ತ್ವಂ ಯಾಸ್ಯಸೇ ವೀರ ಧಾರಯಿಷ್ಯತಿ ಜೀವಿತಮ್ ।।

ಸೌಮ್ಯ! ನಿನ್ನ ಕಾಣಲೋಸುಗ ಆ ಕಾಮಿನಿಯು ಪರಿತಪಿಸುತ್ತಿದ್ದಾಳೆ. ವೀರ! ಒಂದು ವೇಳೆ ನೀನು ಅವಳ ಬಳಿಸಾಗಿದರೆ ಅವಳು ಜೀವವನ್ನು ಹಿಡಿದಿಟ್ಟುಕೊಳ್ಳುತ್ತಾಳೆ.

19173041a ಅದರ್ಶನೇನ ಮರಣಂ ತಸ್ಯಾ ನಾಸ್ತ್ಯತ್ರ ಸಂಶಯಃ ।
19173041c ಯದಿ ನಾರೀಸಹಸ್ರಂ ತೇ ಹೃದಿಸ್ಥಂ ಯದುನಂದನ ।।
19173042a ಸ್ತ್ರಿಯಾಃ ಕಾಮಯಮಾನಾಯಾಃ ಕರ್ತವ್ಯಾ ಹಸ್ತಧಾರಣಾ ।

ನಿನ್ನನ್ನು ನೋಡದೇ ಇದ್ದರೆ ಅವಳು ಮರಣ ಹೊಂದುತ್ತಾಳೆ ಎನ್ನುವುದರಲ್ಲಿ ಸಂಶಯವಿಲ್ಲ. ಯದುನಂದನ! ನಿನ್ನ ಹೃದಯದಲ್ಲಿ ಸಹಸ್ರನಾರಿಯರು ನೆಲೆಸಿದ್ದರೂ ನಿನ್ನನ್ನು ಕಾಮಿಸುವ ಈ ಅನುರಕ್ತ ಸ್ತ್ರೀಯ ಕೈಹಿಡಿಯಬೇಕು.

19173042c ತ್ವಂ ಚ ತಸ್ಯಾ ವರೋತ್ಸರ್ಗೇ ದತ್ತೋ ದೇವ್ಯಾ ಮನೋರಥಃ।।
19173043a ಚಿತ್ರಪಟ್ಟಂ ಮಯಾ ದತ್ತಂ ತ್ವಚ್ಚಿಹ್ನಂ ದೃಶ್ಯ ಜೀವತಿ ।

ವರವನ್ನು ನೀಡುವಾಗ ದೇವಿ ಪಾರ್ವತಿಯು ಅವಳ ಮನೋರಥವನ್ನೀಡೇರಿಸಲು ನಿನ್ನನ್ನೇ ನೀಡಿದ್ದಳು. ನಾನು ಕೊಟ್ಟ ನಿನ್ನ ಚಿತ್ರಪಟವನ್ನು ನೋಡುತ್ತಾ ಅವಳು ಜೀವಿಸಿದ್ದಾಳೆ.

19173043c ಸಾನುಕ್ರೋಶೋ ಯದುಶ್ರೇಷ್ಠ ಭವ ತಸ್ಯಾ ಮನೋರಥೇ ।।
19173044a ಉಷಾ ತೇ ಪತತೇ ಮೂರ್ಧ್ನಾ ವಯಂ ಚ ಯದುನಂದನ ।

ಯದುಶ್ರೇಷ್ಠ! ಅವಳ ಮನೋರಥವನ್ನು ಪೂರ್ಣಗೊಳಿಸಲು ದಯೆತೋರಿಸಬೇಕು. ಯದುನಂದನ! ಉಷೆ ಮತ್ತು ನಾವೂ ಕೂಡ ಶಿರಸಾ ನಮಸ್ಕರಿಸುತ್ತೇವೆ.

19173044c ಶ್ರೂಯತಾಂ ಚೋದ್ಭವಸ್ತಸ್ಯಾಃ ಕುಲಶೀಲಂ ಚ ಯಾದೃಶಮ್ ।।
19173045a ಸಂಸ್ಥಾನಂ ಪ್ರಕೃತಿಂ ಚಾಸ್ಯಾಃ ಪಿತರಂ ಚ ಬ್ರವೀಮಿ ತೇ ।

ಉಷೆಯ ಉತ್ಪತ್ತಿ ಮತ್ತು ಕುಲ-ಶೀಲಗಳು ಎಂಥಹುದು ಎನ್ನುವುದನ್ನು ಕೇಳಬೇಕು. ಅವಳ ಆಕೃತಿ, ಪ್ರಕೃತಿ ಮತ್ತು ತಂದೆಯ ಕುರಿತು ನಿನಗೆ ಹೇಳುತ್ತೇನೆ.

19173045c ವೈರೋಚನಿಸುತೋ ವೀರ ಬಾಣೋ ನಾಮ ಮಹಾಸುರಃ ।।
19173046a ಸ ರಾಜಾ ಶೋಣಿತಪುರೇ ತಸ್ಯ ತ್ವಾಮಿಚ್ಛತೇ ಸುತಾ ।
19173046c ತ್ವದ್ಭಾವಗತಚಿತ್ತಾ ಸಾ ತ್ವನ್ಮಯಂ ಚಾಪಿ ಜೀವಿತಮ್ ।।

ವಿರೋಚನನ ಮಗ ಬಲಿಯ ವೀರ ಪುತ್ರನು ಬಾಣನೆಂಬ ಹೆಸರಿನ ಮಹಾಸುರನು. ಅವನು ಶೋಣಿತಪುರದ ರಾಜನು. ಅವನ ಮಗಳು ನಿನ್ನನ್ನು ಇಚ್ಛಿಸುತ್ತಾಳೆ. ಅವಳ ಚಿತ್ತವು ನಿನ್ನಲ್ಲಿಯೇ ತನ್ಮಯಗೊಂಡಿದೆ ಮತ್ತು ಜೀವಿತವೂ ನೀನೇ ಆಗಿದ್ದೀಯೆ.

19173047a ಮನೋರಥಕೃತೋ ಭರ್ತಾ ದೇವ್ಯಾ ದತ್ತೋ ನ ಸಂಶಯಃ ।
19173047c ತ್ವತ್ಸಂಗಮಾತ್ಸಾ ಸುಶ್ರೋಣೀ ಪ್ರಾಣಾಂಧಾರಯತೇ ಶುಭಾ ।।

ದೇವಿ ಪಾರ್ವತಿಯೇ ನಿನ್ನನ್ನು ಅವಳಿಗೆ ಪತಿಯಾಗಿ ಕೊಟ್ಟು ಅವಳ ಮನೋರಥವನ್ನು ಪೂರೈಸಿದ್ದಾಳೆ ಎನ್ನುವುದರಲ್ಲಿ ಸಂಶಯವಿಲ್ಲ. ಆ ಶುಭೆ ಸುಶ್ರೋಣಿಯು ನಿನ್ನ ಸಮಾಗಮದ ಆಶಯದಿಂದಲೇ ಪ್ರಾಣಗಳನ್ನು ಧರಿಸಿದ್ದಾಳೆ.”

19173048a ಚಿತ್ರಲೇಖಾವಚಃ ಶ್ರುತ್ವಾ ಸೋಽನಿರುದ್ಧೋಽಬ್ರವೀದಿದಮ್ ।
19173048c ದೃಷ್ಟಾ ಸ್ವಪ್ನೇ ಮಯಾ ಸಾ ಹಿ ತನ್ಮತ್ತಃ ಶೃಣು ಶೋಭನೇ ।।
19173049a ರೂಪಂ ಕಾಂತಿಂ ಮತಿಂ ಚೈವ ಸಂಯೋಗಂ ರುದಿತಂ ತಥಾ ।
19173049c ಏವಂ ಸರ್ವಮಹೋರಾತ್ರಂ ಮುಹ್ಯಾಮಿ ಪರಿಚಿಂತಯನ್ ।।

ಚಿತ್ರಲೇಖೆಯ ಮಾತನ್ನು ಕೇಳಿ ಅನಿರುದ್ಧನು ಇದನ್ನು ಹೇಳಿದನು: “ಶೋಭನೇ! ನಾನು ಅವಳನ್ನು ಸ್ವಪ್ನದಲ್ಲಿ ನೋಡಿದ್ದೇನೆ. ಅದರಿಂದ ಏನಾಯಿತೆಂದು ನನ್ನಿಂದ ಕೇಳು. ನಾನು ಅಹೋರಾತ್ರಿ ಅವಳ ರೂಪ, ಕಾಂತಿ, ಮತಿ, ಸಂಯೋಗಸುಖ ಮತ್ತು ಅವಳ ರೋದನ ಇವೆಲ್ಲವನ್ನೂ ಚಿಂತಿಸುತ್ತಾ ಮೋಹಿತನಾಗಿಬಿಟ್ಟಿದ್ದೇನೆ.

19173050a ಯದ್ಯಹಂ ಸಮನುಗ್ರಾಹ್ಯೋ ಯದಿ ಸಖ್ಯಂ ತ್ವಮಿಚ್ಛಸಿ ।
19173050c ನಯಸ್ವ ಚಿತ್ರಲೇಖೇ ಮಾಂ ದ್ರಷ್ಟುಮಿಚ್ಛಾಮ್ಯಹಂ ಪ್ರಿಯಾಮ್ ।।

ಚಿತ್ರಲೇಖೇ! ಒಂದು ವೇಳೆ ನಾನು ನಿನ್ನ ಅನುಗ್ರಹಕ್ಕೆ ಪಾತ್ರನಾಗಿದ್ದರೆ ಮತ್ತು ನೀನು ನನ್ನ ಸಖ್ಯವನ್ನು ಇಚ್ಛಿಸುವೆಯಾದರೆ ನನ್ನನ್ನು ಕೊಂಡೊಯ್ಯಿ. ಪ್ರಿಯೆ ಉಷೆಯನ್ನು ನೋಡಬಯಸುತ್ತೇನೆ.

19173051a ಕಾಮಸಂತಾಪಸಂತಪ್ತಃ ಪ್ರಿಯಾಸಂಗಮಕಾಮತಃ ।
19173051c ಏಷೋಽಂಜಲಿರ್ಮಯಾ ಬದ್ಧಃ ಸತ್ಯಂ ಸ್ವಪ್ನಂ ಕುರುಷ್ವ ಮೇ ।।

ಕಾಮಸಂತಾಪಸಂತಪ್ತನಾಗಿದ್ದೇನೆ. ಪ್ರಿಯೆಯ ಸಂಗಮವನ್ನು ಬಯಸುತ್ತಿದ್ದೇನೆ. ಕೈಮುಗಿಯುತ್ತೇನೆ. ನನ್ನ ಸ್ವಪ್ನವನ್ನು ಸತ್ಯವನ್ನಾಗಿಸು.”

19173052a ತಸ್ಯ ತದ್ವಚನಂ ಶ್ರುತ್ವಾ ಚಿತ್ರಲೇಖಾ ವರಾಪ್ಸರಾಃ ।
19173052c ಸಫಲೋಽದ್ಯ ಮಮ ಕ್ಲೇಶಃ ಸಖ್ಯಾ ಮೇ ಯತ್ಪ್ರಯಾಚಿತಮ್ ।।

ಅವನ ಆ ಮಾತನ್ನು ಕೇಳಿ ಅಪ್ಸರಶ್ರೇಷ್ಠೆ ಚಿತ್ರಲೇಖೆಯು “ಇಂದು ನನ್ನ ಕ್ಲೇಶವು ಸಫಲವಾಯಿತು. ನನ್ನ ಸಖಿಯು ಕೇಳಿದುದು ದೊರೆಯಿತು” ಎಂದುಕೊಂಡಳು.”

19173053 ವೈಶಂಪಾಯನ ಉವಾಚ ।
19173053a ಈಪ್ಸಿತಂ ತಸ್ಯ ವಿಜ್ಞಾಯ ಅನಿರುದ್ಧಸ್ಯ ಭಾಮಿನೀ ।
19173053c ಚಿತ್ರಲೇಖಾ ತತಸ್ತುಷ್ಟಾ ತಥೇತಿ ಚ ತಮಬ್ರವೀತ್ ।।

ವೈಶಂಪಾಯನನು ಹೇಳಿದನು: “ಅನಿರುದ್ಧನ ಇಚ್ಛೆಯನ್ನು ತಿಳಿದ ಭಾಮಿನಿ ಚಿತ್ರಲೇಖೆಯು ಸಂತೋಷದಿಂದ ಆಗೆಯೇ ಆಗಲಿ ಎಂದು ಹೇಳಿದಳು.

19173054a ಹರ್ಮ್ಯೇ ಸ್ತ್ರೀಗಣಮಧ್ಯಸ್ಥಂ ಕೃತ್ವಾ ಚಾಂತರ್ಹಿತಂ ತದಾ ।
19173054c ಉತ್ಪಪಾತ ಗೃಹೀತ್ವಾ ಸಾ ಪ್ರಾದ್ಯುಮ್ನಿಂ ಯುದ್ಧದುರ್ಮದಮ್ ।।

ಮಂಚದ ಮೇಲೆ ಸ್ತ್ರೀಗಣಗಳ ಮಧ್ಯೆ ಕುಳಿತಿದ್ದ ಯುದ್ಧದುರ್ಮದ ಅನಿರುದ್ಧನನ್ನು ಅದೃಶ್ಯಗೊಳಿಸಿ ಎತ್ತಿಕೊಂಡು ಆಕಾಶಕ್ಕೆ ಹಾರಿದಳು.

19173055a ಸಾ ತಮಧ್ವಾನಮಾಗಮ್ಯ ಸಿದ್ಧಚಾರಣಸೇವಿತಮ್ ।
19173055c ಸಹಸಾ ಶೋಣಿತಪುರಂ ಪ್ರವಿವೇಶ ಮನೋಜವಾ ।।

ಮನೋವೇಗಿಯಾಗಿದ್ದ ಅವಳು ಸಿದ್ಧಚಾರಣಸೇವಿತ ಆಕಾಶಮಾರ್ಗದಲ್ಲಿ ಬಂದು ಕೂಡಲೇ ಶೋಣಿತಪುರವನ್ನು ಪ್ರವೇಶಿಸಿದಳು.

19173056a ಅದರ್ಶನಂ ತಮಾನೀಯ ಮಾಯಯಾ ಕಾಮರೂಪಿಣೀ ।
19173056c ಅನಿರುದ್ಧಂ ಮಹಾಭಾಗಾ ಯತ್ರೋಷಾ ತತ್ರ ಗಚ್ಛತಿ ।।

ಕಾಮರೂಪಿಣೀ ಮಹಾಭಾಗೆ ಚಿತ್ರಲೇಖೆಯು ಅನಿರುದ್ಧನನ್ನು ಅದೃಶ್ಯನನ್ನಾಗಿಸಿ ಕರೆದುಕೊಂಡು ಬಂದು ಉಷೆಯಿರುವಲ್ಲಿಗೆ ಹೋದಳು.

19173057a ಉಷಾಯಾ ದರ್ಶಯಚ್ಚೈನಂ ಚಿತ್ರಾಭರಣಭೂಷಿತಮ್ ।
19173057c ಚಿತ್ರಾಂಬರಧರಂ ವೀರಂ ರಹಸ್ಯಮರರೂಪಿಣಮ್ ।।

ಮತ್ತು ಚಿತ್ರಾಭರಣಭೂಷಿತ ಚಿತ್ರಾಂಬರಧರ ವೀರ ಅಮರರೂಪಿಣಿ ಅನಿರುದ್ಧನನ್ನು ಏಕಾಂತದಲ್ಲಿ ಉಷೆಗೆ ತೋರಿಸಿದಳು.

19173058a ತತ್ರೋಷಾಂ ವಿಸ್ಮಿತಾಂ ದೃಷ್ಟ್ವಾ ಹರ್ಮ್ಯಸ್ಥಾಂ ಸಖಿಸಂನಿಧೌ ।
19173058c ಪ್ರವೇಶಯಾಮಾಸ ಚ ತಂ ತದಾ ಸಾ ಸ್ವಗೃಹಂ ತತಃ ।।

ಅಟ್ಟದ ಮೇಲೆ ಸಖಿಸನ್ನಿಧಿಯಲ್ಲಿದ್ದ ಉಷೆಯು ಅನಿರುದ್ಧನನ್ನು ನೋಡಿ ವಿಸ್ಮಿತಳಾಗಿ ಕೂಡಲೇ ಅವನನ್ನು ತನ್ನ ಭವನದೊಳಗೆ ಪ್ರವೇಶಿಸಿಕೊಂಡಳು.

19173059a ಪ್ರಹರ್ಷೋತ್ಫುಲ್ಲನಯನಾ ಪ್ರಿಯಂ ದೃಷ್ಟ್ವಾರ್ಥಕೋವಿದಾ ।
19173059c ಸಾ ಹರ್ಮ್ಯಸ್ಥಾ ತಮರ್ಘೇಣ ಯಾದವಂ ಸಮಪೂಜಯತ್ ।।

ಪ್ರಿಯನ ದರ್ಶನದ ಹರ್ಷದಿಂದ ಅವಳ ಕಣ್ಣುಗಳು ಅರಳಿದವು. ಆ ಅರ್ಥಕೋವಿದೆಯು ಅಟ್ಟದ ಮೇಲೆಯೇ ಆ ಯಾದವನನ್ನು ಅರ್ಘ್ಯದಿಂದ ಪೂಜಿಸಿದಳು.

19173060a ಚಿತ್ರಲೇಖಾಂ ಪರಿಷ್ವಜ್ಯ ಪ್ರಿಯಾಖ್ಯಾನೈರತೋಷಯತ್ ।
19173060c ತ್ವರಿತಾ ಕಾಮಿನೀ ಪ್ರಾಹ ಚಿತ್ರಲೇಖಾಂ ಭಯಾತುರಾ ।।

ಚಿತ್ರಲೇಖೆಯನ್ನು ಬಿಗಿದಪ್ಪಿ ಪ್ರಿಯಮಾತುಗಳಿಂದ ಸಂತುಷ್ಟಗೊಳಿಸಿದಳು. ಅನಂತರ ಕಾಮಿನಿ ಉಷೆಯು ಭಯದಿಂದ ವ್ಯಾಕುಲಗೊಂಡು ತ್ವರಿತದಲ್ಲಿ ಚಿತ್ರಲೇಖೆಗೆ ಹೇಳಿದಳು:

19173061a ಸಖೀದಂ ವೈ ಕಥಂ ಕಾರ್ಯಂ ಗುಹ್ಯೇ ಕಾರ್ಯವಿಶಾರದೇ ।
19173061c ಗುಹ್ಯೇ ಕೃತೇ ಭವೇತ್ಸ್ವಸ್ತಿ ಪ್ರಕಾಶೇ ಜೀವಿತಕ್ಷಯಃ ।।

“ಕಾರ್ಯವಿಶಾರದೇ! ಈ ಕಾರ್ಯವನ್ನು ಹೇಗೆ ಗುಪ್ತವಾಗಿರಿಸಬಹುದು? ಗುಟ್ಟಾಗಿಡುವುದರಿಂದಲೇ ಕಲ್ಯಾಣವಾಗುತ್ತದೆ. ಇದನ್ನು ಪ್ರಕಾಶಿತಗೊಳಿಸಿದರೆ ಜೀವಕ್ಕೆ ಸಂಕಟ ಬಂದೊದಗಬಹುದು.”

119173062a ಇತ್ಯುಕ್ತ್ವಾ ತ್ವರಮಾಣಾ ಸಾ ಗುಹ್ಯದೇಶೇ ಸ್ವಲಂಕೃತಾ ।
19173062c ಕಾಂತೇನ ಸಹ ಸಂಯುಕ್ತಾ ಸ್ಥಿತಾ ವೈ ಭೀತಭೀತವತ್ ।।

ಹೀಗೆ ಹೇಳಿ ಅವಳು ತ್ವರೆಮಾಡಿ ಅಲಂಕೃತವಾಗಿದ್ದ ಒಂದು ಗುಹ್ಯಪ್ರದೇಶದಲ್ಲಿ ಕಾಂತನ ಜೊತೆಯಲ್ಲಿ ಭೀತಿಯಿಂದ ನಿಂತುಕೊಂಡಳು.

19173063a ಚಿತ್ರಲೇಖಾಬ್ರವೀದ್ವಾಕ್ಯಂ ಶೃಣು ತ್ವಂ ನಿಶ್ಚಯಮ್ ಸಖಿ ।
19173063c ಕೃತಂ ಪುರುಷಕಾರೇಣ ದೈವಂ ನಾಶಯತೇ ಸಖಿ ।।

ಚಿತ್ರಲೇಖೆಯು ಹೇಳಿದಳು: “ಸಖಿ! ನನ್ನ ನಿಶ್ಚಯವನ್ನು ಕೇಳು. ಸಖಿ! ಪುರುಷಾರ್ಥದಿಂದ ಮಾಡಿದ ಕಾರ್ಯವನ್ನು ದೈವವು ಕ್ಷಣಭರದಲ್ಲಿ ನಾಶಮಾಡಿಬಿಡುತ್ತದೆ.

19173064a ಯದಿ ದೇವ್ಯಾಃ ಪ್ರಸಾದಸ್ತೇ ಹ್ಯನುಕೂಲೋ ಭವಿಷ್ಯತಿ ।
19173064c ಅದ್ಯ ಮಾಯಾಕೃತಂ ಗುಹ್ಯಂ ನ ಕಶ್ಚಿಜ್ಜ್ಞಾಸ್ಯತೇ ನರಃ ।।

ಒಂದುವೇಳೆ ದೇವಿಯ ಕೃಪಾಪ್ರಸಾದದಿಂದ ನಿನಗೆ ಅನುಕೂಲವಾಗುತ್ತದೆ ಎಂದಾದರೆ ಇಂದು ಮಾಯೆಯಿಂದ ಗುಟ್ಟಿನಲ್ಲಿ ಮಾಡಿದ ಈ ಕಾರ್ಯವನ್ನು ಯಾರೂ ತಿಳಿಯಲಾರರು.”

19173065a ಸಖ್ಯಾ ವೈ ಏವಮುಕ್ತಾ ಸಾ ಪರ್ಯವಸ್ಥಿತಚೇತನಾ ।
19173065c ಏವಮೇತದಿತಿ ಪ್ರಾಹ ಸಾನಿರುದ್ಧಮಿದಂ ವಚಃ ।।

ಸಖಿಯು ಹೀಗೆ ಹೇಳಲು ಉಷೆಯ ಚಿತ್ತವೃತ್ತಿಯು ಸ್ಥಿರಗೊಂಡಿತು. ಇದು ಸರಿಯಾಗಿದೆ ಎಂದು ಅವಳಿಗೆ ಹೇಳಿ ಅನಿರುದ್ಧನೊಡನೆ ಮಾತನ್ನಾಡಿದಳು.

19173066a ದಿಷ್ಟ್ಯಾ ಸ್ವಪ್ನಗತಶ್ಚೌರೋ ದೃಶ್ಯತೇ ಸುಭಗಃ ಪತಿಃ ।
19173066c ಯತ್ಕೃತೇ ತು ವಯಂ ಖಿನ್ನಾ ದುರ್ಲಭಪ್ರಿಯಕಾಂಕ್ಷಯಾ ।।

“ಸ್ವಪ್ನದಲ್ಲಿ ಬಂದಿದ್ದ ಆ ಕಳ್ಳನು ಇಂದು ಸುಂದರ ಪತಿಯ ರೂಪದಲ್ಲಿ ಪ್ರತ್ಯಕ್ಷವಾಗಿ ಕಾಣುತ್ತಿದ್ದಾನೆಂದರೆ ಇದು ನನ್ನ ಸೌಭಾಗ್ಯವೇ ಸರಿ. ದುರ್ಲಭ ಪ್ರಿಯತಮನ ಆಕಾಂಕ್ಷೆಯಲ್ಲಿದ್ದ ನಾವು ಖಿನ್ನರಾಗಿದ್ದೆವು.

19173037a ಕಚ್ಚಿತ್ತವ ಮಹಾಬಾಹೋ ಕುಶಲಂ ಸರ್ವತೋ ಗತಮ್ ।
19173067c ಹೃದಯಂ ಹಿ ಮೃದು ಸ್ತ್ರೀಣಾಂ ತೇನ ಪೃಚ್ಛಾಮ್ಯಹಂ ತವ ।।

ಮಹಾಬಾಹೋ! ನೀನು ಎಲ್ಲ ರೀತಿಯಿಂದ ಕುಶಲನಾಗಿದ್ದೀಯೆ ತಾನೇ? ಸ್ತ್ರೀಯರ ಹೃದಯವು ಕೋಮಲವಾಗಿರುತ್ತದೆ. ಆದುದರಿಂದ ನಾನು ನಿನ್ನನ್ನು ಕೇಳುತ್ತಿದ್ದೇನೆ.”

19173068a ತಸ್ಯಾಸ್ತದ್ವಚನಂ ಶ್ರುತ್ವಾ ಉಷಾಯಾಃ ಶ್ಲಕ್ಷ್ಣಮರ್ಥವತ್ ।
19173068c ಸೋಽಪ್ಯಾಹ ಯದುಶಾರ್ದೂಲಃ ಶುಭಾಕ್ಷರತರಂ ವಚಃ ।।

ಉಷೆಯ ಈ ಅರ್ಥಪೂರ್ಣ ಸ್ನೇಹಯುಕ್ತ ಮಾತನ್ನು ಕೇಳಿ ಆ ಯದುಶಾರ್ದೂಲನೂ ಕೂಡ ಅತ್ಯಂತ ಶುಭಾಕ್ಷರಯುಕ್ತ ಈ ಮಾತನ್ನಾಡಿದನು.

19173069a ಹರ್ಷವಿಪ್ಲುತನೇತ್ರಾಯಾಃ ಪಾಣಿನಾಶ್ರು ಪ್ರಮೃಜ್ಯ ಚ ।
19173069c ಪ್ರಹಸ್ಯ ಸಸ್ಮಿತಂ ಪ್ರಾಹ ಹೃದಯಗ್ರಾಹಕಂ ವಚಃ ।।

ಆನಂದಬಾಷ್ಪಗಳಿಂದ ತುಂಬಿದ ಅವಳ ಕಣ್ಣುಗಳನ್ನು ತನ್ನ ಕೈಯಿಂದ ಒರೆಸಿ, ನಕ್ಕು ನಸುನಗುತ್ತಾ ಹೃದಯಗ್ರಾಹಕ ಈ ಮಾತನ್ನಾಡಿದನು.

19173070a ಕುಶಲಂ ಮೇ ವರಾರೋಹೇ ಸರ್ವತ್ರ ಮಿತಭಾಷಿಣಿ ।
19173070c ತ್ವತ್ಪ್ರಸಾದೇನ ಮೇ ದೇವಿ ಪ್ರಿಯಮಾವೇದಯಾಮಿ ತೇ ।।

“ವರಾರೋಹೇ! ಮಿತಭಾಷಿಣಿ! ನಾನು ಎಲ್ಲ ರೀತಿಯಲ್ಲಿ ಕುಶಲನಾಗಿದ್ದೇನೆ. ದೇವಿ! ನಿನ್ನ ಕೃಪೆಯಿದ್ದರೆ ನನ್ನ ಈ ಪ್ರೀತಿಯನ್ನು ನಿನಗೆ ನಿವೇದಿಸುತ್ತೇನೆ.

19173071a ಅದೃಷ್ಟಪೂರ್ವಶ್ಚ ಮಯಾ ದೇಶೋಽಯಂ ಶುಭದರ್ಶನೇ ।
19173071c ನಿಶಿ ಸ್ವಪ್ನೇ ಯಥಾ ದೃಷ್ಟಃ ಸಕೃತ್ಕನ್ಯಾಪುರೇ ತಥಾ ।।

ಶುಭದರ್ಶನೇ! ಈ ಹಿಂದೆ ನಾನು ಈ ದೇಶವನ್ನು ನೋಡಿರಲಿಲ್ಲ. ರಾತ್ರಿ ಸ್ವಪ್ನದಲ್ಲಿ ಈ ಕನ್ಯಾಕಕ್ಷವನ್ನು ನೋಡಿದಂತಿದೆ.

19173072a ಏವಮೇವಮಹಂ ಭೀರು ತ್ವತ್ಪ್ರಸಾದಾದಿಹಾಗತಃ ।
19173072c ನ ಚ ತದ್ರುದ್ರಪತ್ನ್ಯಾ ವೈ ಮಿಥ್ಯಾ ವಾಕ್ಯಂ ಭವಿಷ್ಯತಿ ।।

ಭೀರು! ನಿನ್ನ ಪ್ರಸಾದದಿಂದಲೇ ನಾನು ಇಲ್ಲಿಗೆ ಬಂದಿದ್ದೇನೆ. ರುದ್ರಪತ್ನಿಯ ಮಾತು ಎಂದೂ ಸುಳ್ಳಾಗುವುದಿಲ್ಲ.

19173073a ದೇವ್ಯಾಸ್ತೇ ಪ್ರೀತಿಮಾಜ್ಞಾಯ ತ್ವತ್ಪ್ರಿಯಾರ್ಥಂ ಚ ಭಾಮಿನಿ ।
19173073c ಅನುಪ್ರಾಪ್ತೋಽಸ್ಮಿ ಚಾದ್ಯೈವ ಪ್ರಸೀದ ಶರಣಂ ಗತಃ ।।

ಭಾಮಿನಿ! ದೇವಿಗೆ ನಿನ್ನ ಮೇಲಿದ್ದ ಪ್ರೀತಿಯನ್ನು ತಿಳಿದು ನಿನಗೆ ಪ್ರಿಯವಾಗಲೆಂದೇ ನಾನು ಇಲ್ಲಿಗೆ ಬಂದಿದ್ದೇನೆ. ಪ್ರಸನ್ನಳಾಗು. ನಾನು ನಿನ್ನ ಶರಣು ಬಂದಿದ್ದೇನೆ.”

19173074a ಇತ್ಯುಕ್ತಾ ತ್ವರಮಾಣಾ ಸಾ ಗುಹ್ಯದೇಶೇ ಸ್ವಲಂಕೃತಾ ।
19173074c ಕಾಂತೇನ ಸಹ ಸಂಯುಕ್ತಾ ಸ್ಥಿತಾ ವೈ ಭೀತಭೀತವತ್ ।।

ಹೀಗೆ ಹೇಳಲು ಅವಳು ತ್ವರೆಮಾಡಿ ತನ್ನನ್ನು ಅಲಂಕರಿಸಿಕೊಂಡು ಕಾಂತನ ಜೊತೆಗೂಡಿ ಗುಪ್ತಸ್ಥಾನವನ್ನು ಸೇರಿದಳು. ಆಗ ಅವಳು ಭಯಭೀತಳಾಗಿದ್ದಳು.

19173075a ತತಶ್ಚೋದ್ವಾಹಧರ್ಮೇಣ ಗಾಂಧರ್ವೇಣ ಸಮೀಯತುಃ ।
19173075c ಅನ್ಯೋನ್ಯಂ ರಮತುಸ್ತೌ ತು ಚಕ್ರವಾಕೌ ಯಥಾ ದಿವಾ ।।

ಅನಂತರ ಅವರಿಬ್ಬರೂ ಗಾಂಧರ್ವವಿವಾಹದ ನಿಯಮದಂತೆ ಪರಸ್ಪರ ದಾಂಪತ್ಯಭಾವವನ್ನು ಸ್ವೀಕರಿಸಿ ಆಕಾಶದಲ್ಲಿ ಚಕ್ರವಾಕಗಳಂತೆ ರಮಿಸಿದರು.

19173076a ಪತಿನಾ ಸಾನಿರುದ್ಧೇನ ಮುಮುದೇ ತು ವರಾಂಗನಾ ।
19173076c ಕಾಂತೇನಾ ಸಹ ಸಂಯುಕ್ತಾ ದಿವ್ಯವಸ್ತ್ರಾನುಲೇಪನಾ ।।

ದಿವ್ಯ ವಸ್ತ್ರ-ಅನುಲೇಪನಗಳಿಂದ ಸಂಯುಕ್ತಳಾದ ಆ ವರಾಂಗನೆಯಾದರೋ ತನ್ನ ಪ್ರಿಯತಮ ಪತಿ ಅನಿರುದ್ಧನೊಡನೆ ಮೋದಿಸಿದಳು.

19173077a ರಮಮಾಣಾನಿರುದ್ಧೇನ ಅವಿಜ್ಞಾತಾ ಸುತಾ ತದಾ ।
19173077c ತಸ್ಮಿನ್ನೇವ ಕ್ಷಣೇ ಪ್ರಾಪ್ತೇ ಯದೂನಾಮೃಷಭೋ ಹಿ ಸಃ ।।
19173078a ದಿವ್ಯಮಾಲ್ಯಾಂಬರಧರೋ ದಿವ್ಯಸ್ರಗನುಲೇಪನಃ ।
19173078c ಉಷಯಾ ಸಹ ಸಂಯುಕ್ತೋ ವಿಜ್ಞಾತೋ ಬಾಣರಕ್ಷಿಭಿಃ ।।

ಅನಿರುದ್ಧನೊಡನೆ ತನ್ನ ಮಗಳು ರಮಿಸುತ್ತಿದ್ದಾಳೆ ಎನ್ನುವ ವಿಷಯವು ಬಾಣನಿಗೆ ತಿಳಿದಿರಲಿಲ್ಲ. ಆದರೆ ಬಾಣನ ರಕ್ಷಕನೋರ್ವನು ಅದೇ ಕ್ಷಣದಲ್ಲಿ ಯದುಗಳ ವೃಷಭ, ದಿವ್ಯಮಾಲಾ-ವಸ್ತ್ರಧಾರೀ ದಿವ್ಯ ಹೂಮಾಲೆ-ಅನುಲೇಪನಗಳನ್ನು ಧರಿಸಿದ್ದ ಅನಿರುದ್ಧನು ಉಷೆಯೊಡನೆ ಸೇರಿದುದನ್ನು ತಿಳಿದುಕೊಂಡನು.

19173079a ತತಸ್ತೈಶ್ಚಾರಪುರುಷೈರ್ಬಾಣಸ್ಯಾವೇದಿತಂ ದ್ರುತಮ್ ।
19173079c ಯಥಾ ದೃಷ್ಟಮಶೇಷೇಣ ಕನ್ಯಾಯಾಸ್ತದತಿಕ್ರಮಮ್ ।।

ಅನಂತರ ಆ ಚಾರಪುರುಷರು ಕನ್ಯೆಯ ಅಪರಾಧವನ್ನು ಹೇಗೆ ನೋಡಿದ್ದರೋ ಹಾಗೆ ಶೀಘ್ರವಾಗಿ ಬಾಣನಿಗೆ ತಿಳಿಸಿದರು.

19173080a ತತಃ ಕಿಂಕರಸೈನ್ಯಂ ತು ವ್ಯಾದಿಷ್ಟಂ ಭೀಮಕರ್ಮಣಾ ।
19173080c ಬಲೇಃ ಪುತ್ರೇಣ ವೀರೇಣ ಬಾಣೇನಾಮಿತ್ರಘಾತಿನಾ ।।

ಆಗ ಭೀಮಕರ್ಮಿ, ಬಲಿಯ ಪುತ್ರ, ಅಮಿತ್ರಘಾತೀ ವೀರ ಬಾಣನು ತನ್ನ ಕಿಂಕರರ ಸೇನೆಗೆ ಈ ಆದೇಶವನ್ನಿತ್ತನು:

19173081a ಗಚ್ಛಧ್ವಂ ಸಹಿತಾಃ ಸರ್ವೇ ಹನ್ಯತಾಮೇವ ದುರ್ಮತಿಃ ।
19173081c ಯೇನ ನಃ ಕುಲಚಾರಿತ್ರಂ ದೂಷಿತಂ ಧೂಷಿತಾತ್ಮನಾ ।।

“ನೀವೆಲ್ಲರೂ ಒಟ್ಟಾಗಿ ಹೋಗಿ ತನ್ನ ಹೃದಯವನ್ನು ದೂಷಿತಗೊಳಿಸಿದ್ದಲ್ಲದೇ ನಮ್ಮ ಕುಲದ ಸದಾಚಾರವನ್ನೂ ಕಲಂಕಿತಗೊಳಿಸಿದ ಆ ದುರ್ಬುದ್ಧಿ ಮನುಷ್ಯನನ್ನು ಕೊಲ್ಲಿ.

19173082a ಉಷಾಯಾಂ ಧರ್ಷಿತಾಯಾಂ ಹಿ ಕುಲಂ ನೋ ಧರ್ಷಿತಂ ಮಹತ್ ।
19173082c ಅಸಂಪ್ರದತ್ತಾಂ ಯೋಽಸ್ಮಾಭಿಃ ಸ್ವಯಂಗ್ರಾಹಮಧರ್ಷಯತ್।।

ಉಷೆಯನ್ನು ದೂಷಿತಗೊಳಿಸಿದ್ದಲ್ಲದೇ ಅವನು ನಮ್ಮ ಮಹಾ ಕುಲವನ್ನೂ ದೂಷಿತಗೊಳಿಸಿದ್ದಾನೆ. ನಾವು ಕೊಡದೇ ಇದ್ದರೂ ಇವನು ಸ್ವಯಂ ಉಷೆಯನ್ನು ಸ್ವೀಕರಿಸಿ ಅವಳನ್ನು ದೂಷಿತಳನ್ನಾಗಿಸಿದ್ದಾನೆ.

19173083a ಅಹೋ ವೀರ್ಯಮಹೋ ಧೈರ್ಯಮಹೋ ಧಾರ್ಷ್ಟ್ಯಂ ಚ ದುರ್ಮತೇಃ ।
19173083c ಯಃ ಪುರಂ ಭವನಂ ಚೇದಂ ಪ್ರವಿಷ್ಟೋ ನಃ ಸ ಬಾಲಿಶಃ ।।

ಅಹೋ! ಅವನ ವೀರ್ಯವೇ! ಅಹೋ ಅವನ ಧೈರ್ಯವೇ! ಆ ದುರ್ಮತಿಯು ಎಂಥಹ ದುಷ್ಟನು! ನಮ್ಮ ಪುರವನ್ನಷ್ಟೇ ಅಲ್ಲದೆ ನಮ್ಮ ಮನೆಯನ್ನೂ ಪ್ರವೇಶಿಸಿದ ಇವನು ಬಾಲಿಶನಾಗಿರಲಿಕ್ಕಿಲ್ಲ.”

19173084a ಏವಮುಕ್ತ್ವಾ ಪುನಸ್ತಾಂ ತು ಕಿಂಕರಾಂಶ್ಚೋದಯದ್ಭೃಶಮ್ ।
19173084c ತೇ ತಸ್ಯಾಜ್ಞಾಮಥೋ ಗೃಹ್ಯ ಸುಸಂನದ್ಧಾ ವಿನಿರ್ಯಯುಃ ।
19173084e ಯತ್ರಾನಿರುದ್ಧೋ ಹ್ಯಭವತ್ತತ್ರಾಗಚ್ಛನ್ಮಹಾಬಲಾಃ ।।

ಹೀಗೆ ಹೇಳಿ ಬಾಣನು ಪುನಃ ತನ್ನ ಕಿಂಕರರನ್ನು ವಿಶೇಷವಾಗಿ ಪ್ರೇರೇಪಿಸಿದನು. ಅವನ ಆಜ್ಞೆಯನ್ನು ಪಡೆದ ಅವರು ಸುಸನ್ನದ್ಧರಾಗಿ ಭವನದಿಂದ ಹೊರಟರು. ಆ ಮಹಾಬಲರು ಅನಿರುದ್ಧನು ಎಲ್ಲಿದ್ದನೋ ಅಲ್ಲಿಗೆ ಬಂದರು.

19173085a ನಾನಾಶಸ್ತ್ರೋದ್ಯತಕರಾ ನಾನಾರೂಪಾ ಭಯಂಕರಾಃ ।
19173085c ದಾನವಾಃ ಸಮಭಿಕ್ರುದ್ಧಾಃ ಪ್ರಾದ್ಯುಮ್ನಿವಧಕಾಂಕ್ಷಿಣಃ ।।

ನಾನಾಶಸ್ತ್ರಗಳನ್ನು ಎತ್ತಿಹಿಡಿದಿದ್ದ ನಾನಾರೂಪದ ಭಯಂಕರ ದಾನವರು ಅನಿರುದ್ಧನ ವಧೆಯನ್ನು ಬಯಸಿ ಅತ್ಯಂತ ಕ್ರುದ್ಧರಾಗಿದ್ದರು.

19173086a ರುರೋದ ತದ್ಬಲಂ ದೃಷ್ಟ್ವಾ ಬಾಷ್ಪೇಣಾವೃತಲೋಚನಾ ।
19173086c ಪ್ರಾದ್ಯುಮ್ನಿವಧಭೀತಾ ಸಾ ಬಾಣಪುತ್ರೀ ಯಶಸ್ವಿನೀ ।।

ಆ ಸೇನೆಯನ್ನು ನೋಡಿ ಬಾಣಪುತ್ರೀ ಯಶಸ್ವಿನಿಯು ಅನಿರುದ್ಧನನ್ನು ಕೊಲ್ಲುತ್ತಾರೆಂಬ ಭೀತಿಯಿಂದ ಕಣ್ಣೀರುತುಂಬಿಸಿಕೊಂಡು ರೋದಿಸತೊಡಗಿದಳು.

19173087a ತತಸ್ತು ರುದತೀಂ ದೃಷ್ಟ್ವಾ ತಾಂ ಸುತಾಂ ಮೃಗಲೋಚನಾಮ್ ।
19173087c ಹಾ ಹಾ ಕಾಂತೇತಿ ವೇಪಂತೀಮನಿರುದ್ಧೋಽಭ್ಯಭಾಷತ ।।

“ಹಾ ಕಾಂತ! ಹಾ!” ಎಂದು ನಡುಗುತ್ತಾ ರೋದಿಸುತ್ತಿದ್ದ ಆ ಕನ್ಯೆ ಮೃಗಲೋಚನೆಗೆ ಅನಿರುದ್ಧನು ಹೇಳಿದನು:

19173088a ಅಭಯಂ ತೇಽಸ್ತು ಸುಶ್ರೋಣಿ ಮಾ ಭೈಸ್ತ್ವಂ ಹಿ ಮಯಿ ಸ್ಥಿತೇ।
19173088c ಸಂಪ್ರಾಪ್ತೋ ಹರ್ಷಕಾಲಾಸ್ತೇ ನೇಹಾಸ್ತಿ ಭಯಕಾರಣಮ್ ।।

“ಸುಶ್ರೋಣಿ! ನಿನಗೆ ಅಭಯವುಂಟಾಗಲಿ! ನಾನಿರುವಾಗ ನೀನು ಹೆದರಬೇಡ. ನಿನಗೆ ಹರ್ಷಕಾಲವು ಪ್ರಾಪ್ತವಾಗಿದೆಯೇ ಹೊರತು ಇದು ಭಯಕ್ಕೆ ಕಾರಣವಲ್ಲ.

19173089a ಕೃತ್ಸ್ನೋಽಯಂ ಯದಿ ಬಾಣಸ್ಯ ಭೃತ್ಯವರ್ಗೋ ಯಶಸ್ವಿನಿ ।
19173089c ಆಗಚ್ಛತಿ ನ ಮೇ ಚಿಂತಾ ಭೀರು ಪಶ್ಯಾದ್ಯ ವಿಕ್ರಮಮ್ ।।

ಬಾಣನ ಸಂಪೂರ್ಣ ಸೇನೆಯೇ ಬಂದರೂ ನನಗೆ ಚಿಂತೆಯಿಲ್ಲ. ಯಶಸ್ವಿನೀ! ಭೀರು! ಇಂದು ನನ್ನ ವಿಕ್ರಮವನ್ನು ನೋಡು.”

19173090a ತಸ್ಯ ಸೈನ್ಯಸ್ಯ ನಿನದಂ ಶ್ರುತ್ವಭ್ಯಾಗಚ್ಛತಸ್ತತಃ ।
19173090c ಸಹಸೈವೋತ್ಥಿತಃ ಶ್ರೀಮಾನ್ಪ್ರಾದ್ಯುಮ್ನಿಃ ಕಿಮಿತಿ ಬ್ರುವನ್ ।।

ಆಕ್ರಮಣಿಸುತ್ತಿದ್ದ ಆ ಸೇನೆಯ ಕೋಲಾಹಲವನ್ನು ಕೇಳಿ ಶ್ರೀಮಾನ್ ಪ್ರದ್ಯುಮ್ನಕುಮಾರ ಅನಿರುದ್ಧನು ಇದೇನು ಎಂದು ಹೇಳುತ್ತಾ ಕೂಡಲೇ ಎದ್ದು ನಿಂತನು.

19173091a ಅಥ ಸೋಽಪಶ್ಯತ ಬಲಂ ನಾನಾಪ್ರಹರಣೋದ್ಯತಮ್ ।
19173091c ಸ್ಥಿತಂ ಸಮಂತತಸ್ತತ್ರ ಪರಿವಾರ್ಯ ಗೃಹಂ ಮಹತ್ ।।

ಆಗ ಅವನು ಆ ಮಹಾ ಭವನವನ್ನು ಎಲ್ಲಕಡೆಗಳಿಂದ ಸುತ್ತುವರೆದು ನಾನಾಪ್ರಹರಣಗಳನ್ನು ಎತ್ತಿಹಿಡಿದಿದ್ದ ಸೇನೆಯು ನಿಂತಿರುವುದನ್ನು ನೋಡಿದನು.

19173092a ತತೋಽಭ್ಯಗಚ್ಛತ್ತ್ವರಿತೋ ಯತ್ರ ತದ್ವೇಷ್ಟಿತಂ ಬಲಮ್ ।
19173092c ಕ್ರುದ್ಧಃ ಸ್ವಬಲಮಾಸ್ಥಾಯ ಅದಶದ್ದಶನಚ್ಛದಮ್ ।।

ಆಗ ಕೃದ್ಧನಾದ ಅವನು ತ್ವರೆಮಾಡಿ ಸ್ವಬಲವನ್ನು ಅವಲಂಬಿಸಿ ತನ್ನ ಹಲ್ಲುಗಳನ್ನು ಮಸೆಯುತ್ತಾ ಸುತ್ತುವರೆದಿದ್ದ ಆ ಸೇನೆಯ ಕಡೆ ಹೋದನು.

19173093a ತತೋ ಯೋದ್ಧುಮಪೋಢಾನಾಂ ಬಾಣೇಯಾನಾಂ ನಿಶಮ್ಯ ತು ।
19173093c ಸಾ ಚಿತ್ರಲೇಖಾಸ್ಮರತ ನಾರದಂ ದೇವದರ್ಶನಮ್ ।।

ಅಷ್ಟರಲ್ಲಿ ಯುದ್ಧಕ್ಕೆ ನಿಂತಿದ್ದ ಬಾಣನ ಸೇನೆಯನ್ನು ನೋಡಿ ಚಿತ್ರಲೇಖೆಯು ದೇವದರ್ಶೀ ನಾರದನನ್ನು ಸ್ಮರಿಸಿದಳು.

19173094a ತತೋ ನಿಮೇಷಮಾತ್ರೇಣ ಸಂಪ್ರಾಪ್ತೋ ಮುನಿಪುಂಗವಃ ।
19173094c ಸ್ಮೃತೋಽಥ ಚಿತ್ರಲೇಖಾಯಾಃ ಪುರಂ ಶೋಣಿತಸಾಹ್ವಯಮ್ ।।

ಚಿತ್ರಲೇಖೆಯು ಸ್ಮರಿಸಲು ನಿಮಿಷಮಾತ್ರದಲ್ಲಿ ಮುನಿಪುಂಗವ ನಾರದನು ಶೋಣಿತಸಾಹ್ವಯ ಪುರವನ್ನು ತಲುಪಿದನು.

19173095a ಅಂತರಿಕ್ಷೇ ಸ್ಥಿತಸ್ತತ್ರ ಸೋಽನಿರುದ್ಧಮಥಾಬ್ರವೀತ್ ।
19173095c ಮಾ ಭಯಂ ಸ್ವಸ್ತಿ ತೇ ವೀರ ಪ್ರಾಪ್ತೋಽಸ್ಮ್ಯದ್ಯ ಪುರಂ ತವ ।।

ಅಂತರಿಕ್ಷದಲ್ಲಿಯೇ ನಿಂತು ಅವನು ಅನಿರುದ್ಧನಿಗೆ ಹೇಳಿದನು: “ವೀರ! ಹೆದರ ಬೇಡ! ನಿನಗೆ ಮಂಗಳವಾಗಲಿ! ಇಂದೇ ನಿನ್ನ ಪುರವನ್ನು ತಲುಪಿದ್ದೇನೆ.”

19173096a ತತಶ್ಚ ನಾರದಂ ದೃಷ್ಟ್ವಾ ಸೋಽಭಿವಾದ್ಯ ಮಹಾಬಲಃ ।
19173096c ಪ್ರಹೃಷ್ಟಮಾನಸೋ ಭೂತ್ವಾ ಯುದ್ಧಾರ್ಥಮಭಿವರ್ತತ ।।

ನಾರದನನ್ನು ಕಂಡು ಆ ಮಹಾಬಲನು ನಮಸ್ಕರಿಸಿ, ಹೃಷ್ಟಮಾನಸನಾಗಿ, ಯುದ್ಧದಲ್ಲಿ ತೊಡಗಿದನು.

19173097a ತತಸ್ತೇಷಾಂ ಸ್ವನಂ ಶ್ರುತ್ವಾ ಸರ್ವೇಷಾಮೇವ ಗರ್ಜತಾಮ್ ।
19173097c ಸಹಸೈವೋತ್ಥಿತಃ ಶೂರಸ್ತೋತ್ರಾರ್ದಿತ ಇವ ದ್ವಿಪಃ ।।

ಗರ್ಜಿಸುತ್ತಿರುವ ಅವರೆಲ್ಲರ ಕೂಗನ್ನು ಕೇಳಿ ಶೂರ ಅನಿರುದ್ಧನು ಅಂಕುಶದಿಂದ ತಿವಿಯಲ್ಪಟ್ಟ ಸಲಗದಂತೆ ಒಮ್ಮೆಲೇ ಎದ್ದು ನಿಂತನು.

19173098a ತಮಾಪತಂತಂ ಸಂಪ್ರೇಕ್ಷ್ಯ ಸಂದಷ್ಟೌಷ್ಠಂ ಮಹಾಭುಜಮ್ ।
19173098c ಪ್ರಾಸಾದಾಚ್ಚಾವರೋಹಂತಂ ಭಯಾರ್ತಾ ವಿಪ್ರದುದ್ರುವುಃ ।।

ತುಟಿಯನ್ನು ಕಚ್ಚುತ್ತಾ ಭವನದಿಂದ ಕೆಳಗಿಳಿಯುತ್ತಿದ್ದ ಆ ಮಹಾಭುಜನನ್ನು ನೋಡಿ ಭಯಾರ್ತರಾದ ಎಷ್ಟೋ ಸೈನಿಕರು ಓಡತೊಡಗಿದರು.

19173099a ಅಂತಃಪುರದ್ವಾರಗತಂ ಪರಿಘಂ ಗೃಹ್ಯ ಚಾತುಲಮ್ ।
19173099c ವಧಾಯ ತೇಷಾಂ ಚಿಕ್ಷೇಪ ನಾನಾಯುದ್ಧವಿಶಾರದಃ ।।

ಅಂತಃಪುರದ ದ್ವಾರದಲ್ಲಿರಿಸಿದ್ದ ಅನುಪಮ ಪರಿಘವನ್ನು ಕೈಯಲ್ಲಿ ಹಿಡಿದು ನಾನಾಯುದ್ಧವಿಶಾರದ ಅನಿರುದ್ಧನು ಅವರನ್ನು ವಧಿಸಲು ಅವರ ಮೇಲೆ ಎಸೆದನು.

19173100a ತೇ ಸರ್ವೇ ಬಾಣವರ್ಷೈಶ್ಚ ಗದಾಭಿರ್ಮುಶಲೈಸ್ತಥಾ ।
19173100c ಅಸಿಭಿಃ ಶಕ್ತಿಭಿಃ ಶೂಲೈರ್ನಿಜಘ್ನೂ ರಣಗೋಚರೇ ।।

ಆಗ ಅವರೆಲ್ಲರೂ ರಣದಲ್ಲಿ ಕಾಣಿಸಿಕೊಂಡ ಅನಿರುದ್ಧನ ಮೇಲೆ ಬಾಣದ ಮಳೆಗಳನ್ನೂ, ಗದೆ-ಮುಸಲಗಳನ್ನೂ, ಖಡ್ಗಗಳನ್ನೂ, ಶಕ್ತಿಗಳನ್ನೂ, ಶೂಲಗಳನ್ನೂ ಪ್ರಯೋಗಿಸಿದರು.

19173101a ಸ ಹನ್ಯಮಾನೋ ನಾರಾಚೈಃ ಪರಿಘೈಶ್ಚ ಸಮಂತತಃ ।
19173101c ದಾನವೈಃ ಸಮಭಿಕ್ರುದ್ಧೈಃ ಪ್ರಾದ್ಯುಮ್ನಿಃ ಶಸ್ತ್ರಕೋವಿದೈಃ ।।
19173102a ನಾಕ್ಷುಭ್ಯತ್ಸರ್ವಭೂತಾತ್ಮಾ ನದನ್ಮೇಘ ಇವೋಷ್ಣಗೇ ।
19173102c ಆವಿಧ್ಯ ಪರಿಘಂ ಘೋರಂ ತೇಷಾಂ ಮಧ್ಯೇ ವ್ಯತಿಷ್ಠತ ।।
19173103a ಸೂರ್ಯೋ ದಿವಿ ಚರನ್ಮಧ್ಯೇ ಮೇಘಾನಾಮಿವ ಸರ್ವಶಃ ।

ಕ್ರುದ್ಧ ಶಸ್ತ್ರಕೋವಿದ ದಾನವರು ಎಲ್ಲಕಡೆಗಳಿಂದ ನಾರಾಚ ಮತ್ತು ಪರಿಘಗಳನ್ನು ಪ್ರಹಾರಿಸುತ್ತಿದ್ದರೂ ಸರ್ವಭೂತಾತ್ಮಾ ಅನಿರುದ್ಧನು ಕ್ಷೋಭೆಗೊಳ್ಳಲಿಲ್ಲ. ವರ್ಷಾಕಾಲದ ಮೇಘದಂತೆ ಗರ್ಜಿಸುತ್ತಾ ಘೋರ ಪರಿಘವನ್ನು ತಿರುಗಿಸುತ್ತಾ, ದಿವಿಯಲ್ಲಿ ಸುತ್ತಲೂ ಇದ್ದ ಮೇಘಗಳ ಮಧ್ಯೆ ಚರಿಸುವ ಸೂರ್ಯನಂತೆ, ಅವರ ಮಧ್ಯೆ ನಿಂತನು.

19173103c ದಂಡಕೃಷ್ಣಾಜಿನಧರೋ ನಾರದೋ ಹೃಷ್ಟಮಾನಸಃ ।
19173103e ಸಾಧು ಸಾಧ್ವಿತಿ ವೈ ತತ್ರ ಸೋಽನಿರುದ್ಧಮಭಾಷತ ।।

ದಂಡ-ಕೃಷ್ಣಾಜಿನಗಳನ್ನು ಧರಿಸಿದ್ದ ನಾರದನು ಹೃಷ್ಟಮಾನಸನಾಗಿ “ಸಾಧು! ಸಾಧು!” ಎಂದು ಅನಿರುದ್ಧನಿಗೆ ಹೇಳಿದನು.

19173104a ತೇ ಹನ್ಯಮಾನಾ ರೌದ್ರೇಣ ಪರಿಘೇಣಾಮಿತೌಜಸಾ ।
19173104c ಪ್ರಾದ್ರವಂತ ಭಯಾತ್ಸರ್ವೇ ಮೇಘಾ ವಾತೇರಿತಾ ಯಥಾ ।।

ಆ ಅಮಿತೌಜಸ ರೌದ್ರ ಪರಿಘದಿಂದ ಪೆಟ್ಟುತಿಂದು ಭಿರುಗಾಳಿಗೆ ಸಿಲುಕಿದ ಮೋಡಗಳಂತೆ ಭಯದಿಂದ ಅವರೆಲ್ಲರೂ ಓಡಿಹೋದರು.

19173105a ವಿದ್ರಾವ್ಯ ದಾನವಾನ್ವೀರಃ ಪರಿಘೇಣ ಸುವಿಕ್ರಮಃ ।
19173105c ಅನಿರುದ್ಧೋ ರಣೇ ಹೃಷ್ಟಃ ಸಿಂಹನಾದಂ ನನಾದ ಚ ।।

ಪರಿಘದಿಂದ ದಾನವರನ್ನು ಓಡಿಸಿ ವೀರ ವಿಕ್ರಮಿ ಅನಿರುದ್ಧನು ರಣರಂಗದಲ್ಲಿ ಹೃಷ್ಟನಾಗಿ ಸಿಂಹನಾದಗೈದನು.

19173106a ಘರ್ಮಾಂತೇ ತೋಯದೋ ವ್ಯೋಮ್ನಿ ನದನ್ನಿವ ಮಹಾಸ್ವನಃ।
19173106c ತಿಷ್ಠಧ್ವಮಿತಿ ಚುಕ್ರೋಶ ದಾನವಾನ್ಯುದ್ಧದುರ್ಮದಾನ್ ।।
19173107a ಪ್ರಾದ್ಯುಮ್ನಿರ್ವ್ಯಹನಚ್ಚಾಪಿ ಸರ್ವಾಂಛತ್ರುನಿಬರ್ಹಣಃ ।

ಬೇಸಗೆಯ ಕೊನೆಯಲ್ಲಿ ಆಕಾಶದಲ್ಲಿ ಮೋಡಗಳು ಗುಡುಗುವಂತೆ ಮಹಾಸ್ವನದಿಂದ ಅನಿರುದ್ಧನು ನಿಲ್ಲಿ ಎಂದು ಆ ಯುದ್ಧದುರ್ಮದ ದಾನವರಿಗೆ ಕೂಗಿ ಹೇಳಿದನು. ಜೊತೆಯಲ್ಲಿ ಆ ಶತ್ರುನಿಬರ್ಹಣನು ಅವರೆಲ್ಲರನ್ನು ವಧಿಸಲು ಪ್ರಾರಂಭಿಸಿದನು.

19173107c ತೇನ ತೇ ಸಮರೇ ಸರ್ವೇ ಹನ್ಯಮಾನಾ ಮಹಾತ್ಮನಾ ।।
19173108a ಯತೋ ಬಾಣಸ್ತತೋ ಭೀತಾ ಯಯುರ್ಯುದ್ಧಪರಾಙ್ಮುಖಾಃ ।

ಸಮರದಲ್ಲಿ ಆ ಮಹಾತ್ಮನಿಂದ ಹತರಾಗುತ್ತಿದ್ದ ಅವರೆಲ್ಲರೂ ಯುದ್ಧದಿಂದ ಪರಾಙ್ಮುಖರಾಗಿ ಭೀತಿಯಿಂದ ಬಾಣನಿದ್ದಲ್ಲಿಗೆ ಬಂದರು.

19173108c ತತೋ ಬಾಣಸಮೀಪಸ್ಥಾಃ ಶ್ವಸಂತೋ ರುಧಿರೋಕ್ಷಿತಾಃ ।।
19173109a ನ ಶರ್ಮ ಲೇಭಿರೇ ದೈತ್ಯಾ ಭಯವಿಕ್ಲವಚೇತಸಃ ।

ಬಾಣನ ಸಮೀಪ ನಿಂತು ಗಾಯದಿಂದ ರಕ್ತಸುರಿಸುತ್ತಿದ್ದ ಅವರು ನಿಟ್ಟುಸಿರುಬಿಡತೊಡಗಿದರು. ಭಯದಿಂದ ವ್ಯಾಕುಲ ಚಿತ್ತರಾಗಿದ್ದ ದೈತ್ಯರಿಗೆ ಶಾಂತಿಯೇ ಇಲ್ಲದಂತಾಗಿತ್ತು.

19173109c ಮಾ ಭೈಷ್ಟಾ ಮಾ ಭೈಷ್ಟ ಇತಿ ರಾಜ್ಞಾ ತೇ ತೇನ ಚೋದಿತಾಃ ।।
19173110a ತ್ರಾಸಮುತ್ಸೃಜ್ಯ ಚೈಕಸ್ಥಾ ಯುದ್ಧ್ಯಧ್ವಂ ದಾನವರ್ಷಭಾಃ ।

ಆಗ ರಾಜನು ಅವರನ್ನು ಪ್ರಚೋದಿಸಿದನು: “ದಾನವರ್ಷಭರೇ! ಹೆದರ ಬೇಡಿ! ಹೆದರ ಬೇಡಿ! ಭಯವನ್ನು ತೊರೆದು ಒಟ್ಟಾಗಿ ಯುದ್ಧಮಾಡಿ!”

19173110c ತಾನುವಾಚ ಪುನರ್ಬಾಣೋ ಭಯವಿಸ್ರಸ್ತಲೋಚನಾನ್ ।।
19173111a ಕಿಮಿದಂ ಲೋಕವಿಖ್ಯಾತಂ ಯಶ ಉತ್ಸೃಜ್ಯ ದೂರತಃ ।
19173111c ಭವಂತೋ ಯಾಂತಿ ವೈಕ್ಲವ್ಯಂ ಕ್ಲೀಬಾ ಇವ ವಿಚೇತಸಃ ।।

ಅವರ ಕಣ್ಣುಗಳು ಭಯದಿಂದ ಇನ್ನೂ ವ್ಯಾಕುಲಗೊಂಡಿರುವುದನ್ನು ನೋಡಿ ಬಾಣನು ಅವರಿಗೆ ಪುನಃ ಹೇಳಿದನು: “ಇದೇನಿದು! ನಮ್ಮ ಲೋಕವಿಖ್ಯಾತ ಯಶಸ್ಸನ್ನು ದೂರದಿಂದಲೇ ಎಸೆದು ಹೇಡಿಗಳಂತೆ ವಿಚೇತಸರಾಗಿ ವ್ಯಾಕುಲಾಗುತ್ತಿದ್ದೀರಿ!

19173112a ಕೋಽಯಂ ಯಸ್ಯ ಭಯತ್ರಸ್ತಾ ಭವಂತೋ ಯಾಂತ್ಯನೇಕಶಃ ।
19173112c ಕುಲಾಪದೇಶಿನಃ ಸರ್ವೇ ನಾನಾಯುದ್ಧವಿಶಾರದಾಃ ।।

ಯಾರ ಭಯದಿಂದ ವಿಖ್ಯಾತ ಕುಲದಲ್ಲಿ ಹುಟ್ಟಿದ ಮತ್ತು ನಾನಾಯುದ್ಧ ವಿಶಾರದರಾದ ನೀವು ನಡುಗುತ್ತಾ ಚದುರಿ ಹೋಗುತ್ತಿರುವಿರೋ ಅವನು ಯಾರು?

19173113a ಭವದ್ಭಿರ್ನ ಹಿ ಮೇ ಕಾರ್ಯಂ ಯುದ್ಧಸಾಹಾಯ್ಯಮದ್ಯ ವೈ ।
19173113c ಅಬ್ರವೀದ್ಧ್ವಂಸತೇತ್ಯೇವಂ ಮತ್ಸಮೀಪಾಚ್ಚ ನಶ್ಯತ ।।

ನನಗೆ ನಿಮ್ಮಿಂದ ಇಂದು ಯುದ್ಧದ ಸಹಾಯ ಮತ್ತು ಏನೂ ಆಗಬೇಕಾಗಿಲ್ಲ. ಇವನನ್ನು ನಾನೇ ಧ್ವಂಸಮಾಡುತ್ತೇನೆ. ನನ್ನ ಸಮೀಪದಿಂದ ಹೊರಟುಹೋಗಿ!” ಎಂದನು.

19173114a ಅಥ ತಾನ್ವಾಗ್ಭಿರುಗ್ರಾಭೀಸ್ತ್ರಾಸಯನ್ಬಹುಧಾ ಬಲೀ ।
19173114c ವ್ಯಾದಿದೇಶ ರಣೇ ಶೂರಾನನ್ಯಾನಯುತಶಃ ಪುನಃ ।।

ಹೀಗೆ ಉಗ್ರ ಮಾತುಗಳಿಂದ ಅವರನ್ನು ಅನೇಕ ರೀತಿಯಲ್ಲಿ ಬೆದರಿಸಿ ಬಲಶಾಲೀ ಬಾಣನು ಅನ್ಯ ಹತ್ತುಸಾವಿರ ಶೂರರನ್ನು ಪುನಃ ಯುದ್ಧಕ್ಕೆ ಆಜ್ಞಾಪಿಸಿದನು.

19173115a ಪ್ರಮಾಥಗಣಭೂಯಿಷ್ಠಂ ವ್ಯಾದಿಷ್ಟಂ ತಸ್ಯ ನಿಗ್ರಹೇ ।
19173115c ಅನೀಕಂ ಸುಮಹಾರೌದ್ರಂ ನಾನಾಪ್ರಹರಣೋದ್ಯತಮ್ ।।

ಅನಿರುದ್ಧನನ್ನು ಬಂಧಿಸುವುದಕ್ಕಾಗಿ ಬಾಣನು ನಾನಾ ಪ್ರಹರಣಗಳನ್ನು ಎತ್ತಿ ಹಿಡಿದಿದ್ದ ಮತ್ತು ಅಧಿಕಾಂಶ ಪ್ರಮಥಗಣಗಳೇ ಇದ್ದ ಮಹಾರೌದ್ರ ಸೇನೆಯನ್ನು ಆಜ್ಞಾಪಿಸಿದನು.

19173116a ಅಥಾಂತರಿಕ್ಷೇ ಬಹುಧಾ ವಿದ್ಯುದ್ವದ್ಭಿರಿವಾಂಬುದೈಃ ।
19173116c ಬಾಣಾನೀಕೈಃ ಸಮಭವದ್ವ್ಯಾಪ್ತಂ ಸಂದೀಪ್ತಲೋಚನೈಃ ।।

ಕೂಡಲೆ ಮಿಂಚಿನಿಂದ ಕೂಡಿದ ಮಳೆಗಾಲದ ಮೋಡಗಳಂತೆ ಉರಿಯುತ್ತಿರುವ ಕಣ್ಣುಗಳಿದ್ದ ಆ ಬಾಣನ ಸೇನೆಯು ಆಕಾಶದ ಅಧಿಕ ಭಾಗವನ್ನು ವ್ಯಾಪಿಸಿನಿಂತಿತು.

19173117a ಕೇಚಿತ್ಕ್ಷಿತಿಸ್ಥಾಃ ಪ್ರಾಕ್ರೋಶಂಗಜಾ ಇವ ಸಮಂತತಃ ।
19173117c ಅಂತರಿಕ್ಷೇ ವ್ಯರಾಜಂತ ಘರ್ಮಾಂತ ಇವ ತೋಯದಾಃ ।।

ಕೆಲವರು ಭೂಮಿಯ ಮೇಲೆ ನಿಂತು ಸುತ್ತಲೂ ಆನೆಗಳಂತೆ ಘೀಳಿಡುತ್ತಿದ್ದರು. ಇನ್ನು ಕೆಲವರು ವರ್ಷಾಕಾಲದ ಮೇಘಗಳಂತೆ ಆಕಾಶದಲ್ಲಿ ವಿರಾಜಿಸುತ್ತಿದ್ದರು.

19173118a ತತಸ್ತತ್ಸುಮಹತ್ಸೈನ್ಯಂ ಸಮೇತಮಭವತ್ಪುನಃ ।
19173118c ತಿಷ್ಠ ತಿಷ್ಠೇತಿ ಚ ತದಾ ವಾಚೋಽಶ್ರೂಯಂತ ಸರ್ವಶಃ ।।

ಅನಂತರ ಆ ಮಹಾಸೇನೆಯು ಪುನಃ ಒಂದಾಯಿತು. “ನಿಲ್ಲು! ನಿಲ್ಲು!” ಎಂಬ ಕೂಗುಗಳು ಎಲ್ಲೆಡೆ ಕೇಳಿಬಂದವು.

19173119a ಅನಿರುದ್ಧೋ ರಣೇ ವೀರಃ ಸ ಚ ತಾನಭ್ಯವರ್ತತ ।
19173119c ತದಾಶ್ಚರ್ಯಂ ಸಮಭವದ್ಯದೇಕಸ್ತು ಸಮಾಗತಃ ।।

ರಣದಲ್ಲಿ ವೀರ ಅನಿರುದ್ಧನು ಏಕಾಕಿಯಾಗಿಯೇ ಸೇರಿದ್ದ ಅವರೆಲ್ಲರನ್ನೂ ಎದುರಿಸಿದನು. ಅದೊಂದು ಆಶ್ಚರ್ಯವಾಗಿತ್ತು.

19173120a ಅಯುಧ್ಯತ ಮಹಾವೀರ್ಯೈರ್ದಾನವೈಃ ಸಹ ಸಂಯುಗೇ ।
19173120c ತೇಷಾಮೇವ ಚ ಜಗ್ರಾಹ ಪರಿಘಾಂಸ್ತೋಮರಾನಪಿ ।।

ರಣದಲ್ಲಿ ಅವನು ಮಹಾವೀರ್ಯದಿಂದ ದಾನವರೊಂದಿಗೆ ಯುದ್ಧಮಾಡಿದನು. ಅವನು ಅವರ ಪರಿಘ-ತೋಮರಗಳನ್ನೇ ಕೈಗೆತ್ತಿಕೊಂಡನು.

19173121a ತೈರೇವ ಚ ತದಾ ಯುದ್ಧೇ ತಂಜಘಾನ ಮಹಾಬಲಃ ।
19173121c ಪುನಃ ಪರಿಘಮುತ್ಸೃಜ್ಯ ಪ್ರಗೃಹ್ಯ ರಣಮೂರ್ಧನಿ ।।

ಅವುಗಳಿಂದಲೇ ಆ ಮಹಾಬಲನು ಯುದ್ಧದಲ್ಲಿ ಅವರನ್ನು ಸಂಹರಿಸಿದನು. ರಣಮೂರ್ಧನಿಯಲ್ಲಿ ಅವನು ಪುನಃ ಪುನಃ ಪರಿಘವನ್ನು ಪ್ರಯೋಗಿಸಿ ಹಿಂತೆಗೆದುಕೊಳ್ಳುತ್ತಿದ್ದನು.

19173122a ಸ ತೇನ ವಿಚರನ್ಮಾರ್ಗಾನೇಕಃ ಶತ್ರುನಿಬರ್ಹಣಃ ।
19173122c ಭ್ರಾಂತಮುದ್ಭ್ರಾಂತಮಾವಿದ್ಧಮಾಪ್ಲುತಂ ವಿಪ್ಲುತಂ ಪ್ಲುತಮ್।।
19173123a ಇತಿ ಪ್ರಕಾರಾಂದ್ವಾತ್ರಿಂಶದ್ವಿಚರನ್ನಾಭ್ಯದೃಶ್ಯತ ।

ಶತ್ರುಸೂದನ ಅನಿರುದ್ಧನು ಆ ಪರಿಘವನ್ನು ಹಿಡಿದು ಅನೇಕ ಮಾರ್ಗಗಳಲ್ಲಿ ಭ್ರಾಂತ2, ಉದ್ಭ್ರಾಂತ3, ಅವಿದ್ಧ4, ಆಪ್ಲುತ5, ವಿಪ್ಲುತ6 ಮತ್ತು ಪ್ಲುತ7 ಮೊದಲಾದ ಮೂವತ್ತೆರಡು8 ಪ್ರಕಾರದ ಮಂಡಲಗಳಲ್ಲಿ ತಿರುಗುತ್ತಾ ಸಂಚರಿಸುತ್ತಿರುವುದು ಕಂಡುಬಂದಿತು.

19173123c ಏಕಂ ಸಹಸ್ರಶಶ್ಚಾತ್ರ ದದೃಶೂ ರಣಮೂರ್ಧನಿ ।।
19173124a ಕ್ರೀಡಂತಂ ಬಹುಧಾ ಯುದ್ಧೇ ವ್ಯಾದಿತಾಸ್ಯಮಿವಾಂತಕಮ್ ।

ರಣಮೂರ್ಧನಿಯಲ್ಲಿ ಬಾಯಿಕಳೆದ ಅಂತಕನಂತೆ ಅನೇಕ ಪ್ರಕಾರದಲ್ಲಿ ಪರಿಘವನ್ನು ಪ್ರಯೋಗಿಸುತ್ತಾ ಆಟವಾಡುತ್ತಿರುವ ಒಬ್ಬನೇ ಅನಿರುದ್ಧನನ್ನು ಶತ್ರುಗಳು ಸಹಸ್ರಸಂಖ್ಯೆಗಳಲ್ಲಿ ಕಂಡರು.

19173124c ತತಸ್ತೇನಾಭಿಸಂತಪ್ತಾ ರುಧಿರೌಘಪರಿಪ್ಲುತಾಃ ।।
19173125a ಪುನರ್ಭಗ್ನಾಃ ಪ್ರಾದ್ರವಂತ ಯತ್ರ ಬಾಣೋ ವ್ಯವಸ್ಥಿತಃ ।

ಆಗ ಅವನಿಂದ ಸಂತಪ್ತಗೊಂಡ ಮತ್ತು ರಕ್ತದ ಕೋಡಿಯಲ್ಲಿ ಮುಳುಗಿದ್ದ ಸೇನೆಯು ಪುನಃ ಒಡೆದು ಬಾಣನಿರುವಲ್ಲಿ ಓಡಿಹೋಯಿತು.

19173125c ಗಜವಾಜಿರಥೌಘೈಸ್ತೇ ಚೋಹ್ಯಮಾನಾಃ ಸಮಂತತಃ ।।
19173126a ಕೃತ್ವಾ ಚಾರ್ತಸ್ವರಂ ಘೋರಂ ದಿಶೋ ಜಗ್ಮುರ್ಮಹೌಜಸಃ ।

ಆನೆ-ಕುದುರೆ-ರಥಸಮೂಹಗಳನ್ನು ಸುತ್ತಲೂ ಕರೆದುಕೊಂಡು ಹೋಗುತ್ತಿದ್ದ ಆ ಮಹೌಜಸರು ಘೋರ ಆರ್ತಸ್ವರಗೈಯುತ್ತಾ ದಿಕ್ಕಾಪಾಲಾಗಿ ಹೋದರು.

19173126c ಏಕೈಕಸ್ಯೋಪರಿ ತದಾ ತೇಽನ್ಯೋನ್ಯಂ ಭಯಪೀಡಿತಾಃ ।।
19173127a ವಮಂತಃ ಶೋಣಿತಂ ಜಗ್ಮುರ್ವಿಷಾದಾದ್ವಿಮುಖಾ ರಣೇ ।

ಆಗ ಭಯಪೀಡಿತರಾದ ಅವರು ಅನ್ಯೋನ್ಯರನ್ನು ತುಳಿದುಕೊಂಡೇ ಓಡುತ್ತಿದ್ದರು. ವಿಷಾದದಿಂದ ರಕ್ತಕಾರುತ್ತಾ ರಣದಿಂದ ಪಲಾಯನಗೈಯುತ್ತಿದ್ದರು.

19173127c ನ ಬಭೂವ ಪುರಾ ದೇವೈರ್ಯುಧ್ಯತಾಂ ತಾದೃಶಂ ಭಯಮ್ ।।
19173128a ಯಾದೃಶಂ ಯುದ್ಧ್ಯಮಾನಾನಾಮನಿರುದ್ಧೇನ ಸಂಯುಗೇ ।

ರಣದಲ್ಲಿ ಅನಿರುದ್ಧನೊಡನೆ ಯುದ್ಧಮಾಡುವಾಗ ಅವರಿಗೆ ಆದ ಭಯದಂತೆ ಹಿಂದೆ ದೇವತೆಗಳೊಡನೆ ಯುದ್ಧಮಾಡುವಾಗಲೂ ಆಗಿರಲಿಲ್ಲ.

19173128c ಕೇಚಿದ್ವಮಂತೋ ರುಧಿರಂ ಹ್ಯಪತನ್ವಸುಧಾತಲೇ ।।
19173129a ದಾನವಾ ಗಿರಿಶೃಂಗಾಭಾ ಗದಾಶೂಲಾಸಿಪಾಣಯಃ ।

ಗದಾಶೂಲಗಳನ್ನು ಹಿಡಿದು ಗಿರಿಶೃಂಗಗಳಂತಿದ್ದ ದಾನವರಲ್ಲಿ ಕೆಲವರು ರಕ್ತಕಾರುತ್ತಾ ಭೂಮಿಯ ಮೇಲೆ ಬಿದ್ದರು.

19173129c ತೇ ಬಾಣಮುತ್ಸೃಜ್ಯ ರಣೇ ಜಗ್ಮುರ್ಭಯಸಮಾಕುಲಾಃ ।।
19173130a ವಿಶಾಲಮಾಕಾಶತಲಂ ದಾನವಾ ನಿರ್ಜಿತಾಸ್ತದಾ ।

ರಣದಲ್ಲಿ ಪರಾಜಿತರಾದ ದಾನವರು ಭಯದಿಂದ ವ್ಯಾಕುಲಗೊಂಡು ಬಾಣನನ್ನು ಅಲ್ಲಿಯೇ ಬಿಟ್ಟು ವಿಶಾಲ ಆಕಾಶಮಾರ್ಗವಾಗಿ ಓಡಿ ಹೋದರು.

19173130c ನಿಃಶೇಷಭಗ್ನಾಂ ಮಹತೀಂ ದೃಷ್ಟ್ವಾ ತಾಂ ವಾಹಿನೀಂ ತದಾ।।
19173131a ಬಾಣಃ ಕ್ರೋಧಾತ್ಪ್ರಜಜ್ವಾಲ ಸಮಿದ್ಧೋಽಗ್ನಿರಿವಾಧ್ವರೇ ।

ಆ ಮಹಾ ಸೇನೆಯು ನಿಃಶೇಷವಾಗಿ ಭಗ್ನವಾದುದನ್ನು ನೋಡಿ ಯಜ್ಞದಲ್ಲಿ ಸಮಿತ್ತುಗಳಿಂದ ಭುಗಿಲೇಳುವ ಅಗ್ನಿಯಂತೆ ಬಾಣನು ಕ್ರೋಧದಿಂದ ಭುಗಿಲೆದ್ದನು.

19173131c ಅಂತರಿಕ್ಷಚರೋ ಭೂತ್ವಾ ಸಾಧುವಾದೀ ಸಮಂತತಃ ।।
19173132a ನಾರದೋ ನೃತ್ಯತಿ ಪ್ರೀತೋ ಹ್ಯನಿರುದ್ಧಸ್ಯ ಸಂಯುಗೇ ।

ಯುದ್ಧದಲ್ಲಿ ಅನಿರುದ್ಧನನ್ನು ನೋಡಿ ಪ್ರೀತನಾದ ನಾರದನು ಅಂತರಿಕ್ಷಚರನಾಗಿ ಸಾಧು ಸಾಧು ಎಂದು ಹೇಳುತ್ತಾ ಎಲ್ಲ ಕಡೆ ನರ್ತಿಸಿದನು.

19173132c ಏತಸ್ಮಿನ್ನಂತರೇ ಚೈವ ಬಾಣಃ ಪರಮಕೋಪನಃ ।।
19173133a ಕುಂಭಾಂಡಸಂಗೃಹೀತಂ ತು ರಥಮಾಸ್ಥಾಯ ವೀರ್ಯವಾನ್।
19173133c ಯಯೌ ಯತ್ರಾನಿರುದ್ಧೋ ವೈ ಉದ್ಯತಾಸೀ ರಥೇ ಸ್ಥಿತಃ ।।

ಈ ಮಧ್ಯದಲ್ಲಿ ಪರಮ ಕೋಪೀ ವೀರ್ಯವಾನ್ ಬಾಣನು ಕುಂಭಾಂಡನು ನಿಯಂತ್ರಿಸುತ್ತಿದ್ದ ರಥದಲ್ಲಿ ಕುಳಿತು ಅನಿರುದ್ಧನು ಖಡ್ಗವನ್ನು ಹಿಡಿದು ನಿಂತಿದ್ದಲ್ಲಿಗೆ ಹೋದನು.

19173134a ಪಟ್ಟಿಶಾಸಿಗದಾಶೂಲಮುದ್ಯಮ್ಯ ಚ ಪರಶ್ವಧಾನ್ ।
19173134c ಬಭೌ ಬಾಹುಸಹಸ್ರೇಣ ಶಕ್ರೋ ಧ್ವಜಶತೈರಿವ ।।

ಬಾಣನು ತನ್ನ ಸಹಸ್ರ ಭುಜಗಳಲ್ಲಿ ಪಟ್ಟಿಶ, ಖಡ್ಗ, ಗದೆ, ಶೂಲ, ಮತ್ತು ಪರಶುಗಳನ್ನು ಹಿಡಿದು ನೂರಾರು ಧ್ವಜಗಳನ್ನು ಹಿಡಿದು ಶಕ್ರನಂತೆ ಶೋಭಿಸಿದನು.

19173135a ಬದ್ಧಗೋಧಾಂಗುಲಿತ್ರೈಶ್ಚ ಬಾಹುಭಿಃ ಸ ಮಹಾಭುಜಃ ।
19173135c ನಾನಾಪ್ರಹರಣೋಪೇತಃ ಶುಶುಭೇ ದಾನವೋತ್ತಮಃ ।।

ಬಾಹುಗಳಿಗೆ ಗೋಧಾಂಗುಲಿಗಳನ್ನು ಕಟ್ಟಿಕೊಂಡಿದ್ದ ಆ ಮಹಾಭುಜ ದಾನವೋತ್ತಮನು ನಾನಾ ಆಯುಧಗಳನ್ನು ಹಿಡಿದು ಶೋಭಿಸಿದನು.

19173136a ಸಿಂಹನಾದಂ ನದನ್ಕ್ರುದ್ಧೋ ವಿಸ್ಫಾರಿತಮಹಾಧನುಃ ।
19173136c ಅಬ್ರವೀತ್ತಿಷ್ಠ ತಿಷ್ಠೇತಿ ಕ್ರೋಧಸಂರಕ್ತಲೋಚನಃ ।।

ಕ್ರೋಧದಿಂದ ಕಣ್ಣುಗಳನ್ನು ಕೆಂಪುಮಾಡಿಕೊಂಡು ಕ್ರುದ್ಧನಾಗಿ ಸಿಂಹನಾದಗೈದು ಮಹಾಧನುಸ್ಸನ್ನು ಠೇಂಕರಿಸಿ ನಿಲ್ಲು ನಿಲ್ಲು ಎಂದು ಹೇಳಿದನು.

19173137a ವಚನಂ ತಸ್ಯ ಸಂಶ್ರುತ್ಯ ಪ್ರಾದ್ಯುಮ್ನಿರಪರಾಜಿತಃ ।
19173137c ಬಾಣಸ್ಯ ವದನಂ ಸಂಖ್ಯೇ ಸಮುದ್ವೀಕ್ಷ್ಯ ತತೋಽಹಸತ್ ।।

ಬಾಣಾಸುರನ ಮಾತನ್ನು ಕೇಳಿ ರಣರಂಗದಲ್ಲಿ ಅವನ ಮುಖವನ್ನು ನೋಡಿ ಅಪರಾಜಿತ ಅನಿರುದ್ಧನು ನಗತೊಡಗಿದನು.

19173138a ಕಿಂಕಿಣೀಶತನಿರ್ಘೋಷಂ ರಕ್ತಧ್ವಜಪತಾಕಿನಮ್ ।
19173138c ಋಷ್ಯಚರ್ಮಾವನದ್ಧಾಂಗಂ ದಶನಲ್ವಂ ಮಹಾರಥಮ್ ।।

ಬಾಣನ ಮಹಾರಥವು ಹತ್ತು ನಲ್ವ (ನಾಲ್ಕು ಸಾವಿರ ಮಾರು) ಅಗಲವಾಗಿತ್ತು. ರಥಕ್ಕೆ ಕಟ್ಟಿದ್ದ ನೂರಾರು ಸಣ್ಣ ಸಣ್ಣ ಗಂಟೆಗಳ ಧ್ವನಿಯು ಎಲ್ಲೆಡೆ ಪ್ರತಿಧ್ವನಿಸುತ್ತಿತ್ತು. ಕೆಂಪು ಬಣ್ಣದ ಧ್ವಜ-ಪತಾಕೆಗಳಿದ್ದವು. ಅದರ ಅವಯವಗಳಿಗೆ ಋಷ್ಯ ಮೃಗದ ಚರ್ಮವನ್ನು ಹೊದಿಸಲಾಗಿತ್ತು.

19173139a ತಸ್ಯ ವಾಜಿಸಹಸ್ರಂ ತು ರಥೇ ಯುಕ್ತಂ ಮಹಾತ್ಮನಃ ।
19173139c ಪುರಾ ದೇವಾಸುರೇ ಯುದ್ಧೇ ಹಿರಣ್ಯಕಶಿಪೋರಿವ ।।

ಹಿಂದೆ ದೇವಾಸುರ ಯುದ್ಧದಲ್ಲಿ ಹಿರಣ್ಯಕಶಿಪುವು ಹೇಗೋ ಹಾಗೆ ಮಹಾತ್ಮ ಬಾಣಾಸುರನ ರಥಕ್ಕೂ ಸಾವಿರ ಕುದುರೆಗಳನ್ನು ಕಟ್ಟಲಾಗಿತ್ತು.

19173140a ತಮಾಪತಂತಂ ದದೃಶೇ ದಾನವಂ ಯದುಪುಂಗವಃ ।
19173140c ಸಂಪ್ರಹೃಷ್ಟಸ್ತತೋ ಯುದ್ಧೇ ತೇಜಸಾ ಚಾಪ್ಯಪೂರ್ಯತ ।।

ಮುಂದೆಬರುತ್ತಿದ್ದ ಆ ದಾನವನನ್ನು ನೋಡಿದ ಯದುಪುಂಗವ ಅನಿರುದ್ಧನು ಹೃಷ್ಟನಾಗಿ ಯುದ್ಧದ ಉತ್ಸಾಹ ತೇಜಸ್ಸುಗಳಿಂದ ತುಂಬಿಹೋದನು.

19173141a ಅಸಿಚರ್ಮಧರೋ ವೀರಃ ಸ್ವಸ್ಥಃ ಸಂಗ್ರಾಮಲಾಲಸಃ ।
19173141c ನರಸಿಂಹೋ ಯಥಾ ಪೂರ್ವಮಾದಿದೈತ್ಯವಧೋದ್ಯತಃ ।।

ಹಿಂದೆ ಆದಿದೈತ್ಯ ಹಿರಣ್ಯಕಶಿಪುವನ್ನು ವಧಿಸಲು ನರಸಿಂಹನು ಹೇಗೋ ಹಾಗೆ ಸಂಗ್ರಾಮಲಾಲಸನಾದ ಆ ವೀರ ಅನಿರುದ್ಧನು ಖಡ್ಗ-ಗುರಾಣಿಗಳನ್ನು ಹಿಡಿದು ನಿಂತನು.

19173142a ಆಪತಂತಂ ದದರ್ಶಾಥ ಖಡ್ಗಚರ್ಮಧರಂ ತದಾ ।
19173142c ಖಡ್ಗಚರ್ಮಧರಂ ತಂ ತು ದೃಷ್ಟ್ವಾ ಬಾಣಃ ಪದಾತಿನಮ್ ।।
19173143a ಪ್ರಹರ್ಷಮತುಲಂ ಲೇಭೇ ಪ್ರಾದ್ಯುಮ್ನಿವಧಕಾಂಕ್ಷಯಾ ।

ಆಗ ಬಾಣನು ಖಡ್ಗ-ಗುರಾಣಿಗಳನ್ನು ಹಿಡಿದು ಆಕ್ರಮಣಿಸುತ್ತಿದ್ದ ಅನಿರುದ್ಧನನ್ನು ನೋಡಿದನು. ಖಡ್ಗ-ಗುರಾಣಿಗಳನ್ನು ಹಿಡಿದು ಪದಾತಿಯಾಗಿಯೇ ಬರುತ್ತಿದ್ದ ಅವನನ್ನು ನೋಡಿ ಅನಿರುದ್ಧನನ್ನು ವಧಿಸಲು ಬಯಸಿದ್ದ ಬಾಣನು ಅತುಲ ಹರ್ಷಿತನಾದನು.

19173143c ತನುತ್ರೇಣ ವಿಹೀನಶ್ಚ ಖಡ್ಗಪಾಣೀಶ್ಚ ಯಾದವಃ ।।
19173144a ಅಜೇಯ ಇತಿ ತಂ ಮತ್ವಾ ಯುದ್ಧಾಯಾಭಿಮುಖಃ ಸ್ಥಿತಃ ।

ಕವಚವಿಲ್ಲದೇ ಖಡ್ಗಪಾಣಿಯಾಗಿದ್ದ ಯಾದವನು “ಇವನು ಅಜೇಯ” ಎಂದು ತಿಳಿದು ಯುದ್ಧಾಭಿಮುಖನಾಗಿ ನಿಂತನು.

19173144c ಅನಿರುದ್ಧಂ ರಣೇ ಬಾಣೋ ಜಿತಕಾಶೀ ಮಹಾಬಲಃ ।।
19173145a ವಾಚಂ ಚೋವಾಚ ಸಂಕ್ರುದ್ಧೋ ಗೃಹ್ಯತಾಂ ಹನ್ಯತಾಮಿತಿ ।

ಜಿತಕಾಶೀ ಮಹಾಬಲ ಬಾಣನು ಸಂಕೃದ್ಧನಾಗಿ ಅನಿರುದ್ಧನಿಗೆ “ಇವನನ್ನು ಹಿಡಿಯಿರಿ! ಕೊಲ್ಲಿರಿ!” ಎಂದು ಕೂಗಿ ಹೇಳಿದನು.

19173145c ವಾಚಂ ಚ ಬ್ರುವತಸ್ತಸ್ಯ ಶ್ರುತ್ವಾ ಪ್ರಾದ್ಯುಮ್ನಿರಾಹವೇ ।।
19173146a ಬಾಣಸ್ಯ ಬ್ರುವತಃ ಕ್ರೋಧಾದ್ಧಸಮಾನೋಽಭ್ಯುದೈಕ್ಷತ ।

ಯುದ್ಧದಲ್ಲಿ ಬಾಣನು ಈ ರೀತಿ ಹೇಳುತ್ತಿದ್ದುದನ್ನು ಕೇಳಿ ಕ್ರೋಧಸಮನ್ವಿತನಾದ ಅನಿರುದ್ಧನು ಅವನ ಕಡೆ ನೋಡಿದನು.

19173146c ಉಷಾಂ ಭಯಪರಿತ್ರಸ್ತಾಂ ರುದತೀಂ ತತ್ರ ಭಾಮಿನೀಮ್ ।।
19173147a ಅನಿರುದ್ಧಃ ಪ್ರಹಸ್ಯಾಥ ಸಮಾಶ್ವಾಸ್ಯ ಚ ತಾಂ ಸ್ಥಿತಃ ।

ಅಲ್ಲಿ ಭಯದಿಂದ ನಡುಗುತ್ತಾ ರೋದಿಸುತ್ತಿದ್ದ ಭಾಮಿನೀ ಉಷೆಯನ್ನು ಸಂತವಿಸಿ ಅನಿರುದ್ಧನು ನಗುತ್ತಾ ಯುದ್ಧಕ್ಕೆ ನಿಂತನು.

19173147c ಅಥ ಬಾಣಃ ಶರೌಘಾಣಾಂ ಕ್ಷುದ್ರಕಾಣಾಂ ಸಮಂತತಃ ।।
19173148a ಚಿಕ್ಷೇಪ ಸಮರೇ ಕ್ರುದ್ಧೋ ಹ್ಯನಿರುದ್ಧವಧೇಪ್ಸಯಾ ।
19173148c ಅನಿರುದ್ಧಸ್ತು ಚಿಚ್ಛೇದ ಕಾಂಕ್ಷಂಸ್ತಸ್ಯ ಪರಾಜಯಮ್ ।।

ಆಗ ಅನಿರುದ್ಧನ ವಧೆಯನ್ನು ಬಯಸಿ ಕ್ರುದ್ಧನಾದ ಬಾಣನು ಅವನ ಮೇಲೆ ಕ್ಷುದ್ರಕ ಬಾಣಸಮೂಹಗಳನ್ನು ಪ್ರಯೋಗಿಸಿದನು. ಆದರೆ ಅನಿರುದ್ಧನು ಅವನ ಪರಾಜಯವನ್ನು ಬಯಸಿ ಬಾಣಗಳನ್ನು ಕತ್ತರಿಸಿದನು.

19173149a ವವರ್ಷ ಶರಜಾಲಾನಿ ಕ್ಷುದ್ರಕಾಣಾಂ ಸಮಂತತಃ ।
19173149c ಬಾಣೋಽನಿರುದ್ಧಶಿರಸಿ ಕಾಂಕ್ಷಂಸ್ತಸ್ಯ ರಣೇ ವಧಮ್ ।।

ರಣದಲ್ಲಿ ಅನಿರುದ್ಧನನ್ನು ವಧಿಸಲು ಬಯಸಿದ ಬಾಣನು ಅವನ ಶಿರದ ಮೇಲೆ ಎಲ್ಲ ಕಡೆಗಳಿಂದ ಕ್ಷುದ್ರಕ ಬಾಣಜಾಲಗಳ ಮಳೆಯನ್ನು ಸುರಿಸಿದನು.

19173150a ತತೋ ಬಾಣಸಹಸ್ರಾಣಿ ಚರ್ಮಣಾ ವ್ಯವಧೂಯ ಸಃ ।
19173150c ಬಭೌ ಪ್ರಮುಖತಸ್ತಸ್ಯ ಸ್ಥಿತಃ ಸೂರ್ಯ ಇವೋದಯೇ ।।

ಆಗ ಆ ಸಹಸ್ರಾರು ಬಾಣಗಳನ್ನು ಗುರಾಣಿಯಿಂದ ಚದುರಿಸಿ ಅನಿರುದ್ಧನು ಉದಯಕಾಲದ ಸೂರ್ಯನಂತೆ ಬಾಣನ ಎದಿರು ನಿಂತನು.

19173151a ಸೋಽಭಿಭೂಯ ರಣೇ ಬಾಣಮಾಸ್ಥಿತೋ ಯದುನಂದನಃ ।
19173151c ಸಿಂಹಪ್ರಮುಖತೋ ದೃಷ್ಟ್ವಾ ಗಜಮೇಕಂ ಯಥಾ ವನೇ ।।

ರಣದಲ್ಲಿ ಬಾಣನನ್ನು ತಿರಸ್ಕರಿಸಿ ಯದುನಂದನನು ವನದಲ್ಲಿ ಒಂದು ಸಲಗವನ್ನು ನೋಡಿದ ಸಿಂಹದಂತೆ ನಿರ್ಭಯನಾಗಿ ಅವನ ಎದಿರು ನಿಂತನು.

19173152a ತತೋ ಬಾಣಃ ಸ ಬಾಣೌಘೈರ್ಮರ್ಮಭೇದಿಭಿರಾಶುಗೈಃ ।
19173152c ವಿವ್ಯಾಧ ನಿಶಿತೈಸ್ತೀಕ್ಷ್ಣೈಃ ಪ್ರಾದ್ಯುಮ್ನಿಮಪರಾಜಿತಮ್ ।।

ಆಗ ಬಾಣನು ಮರ್ಮಭೇದಿ ನಿಶಿತ ತೀಕ್ಷ್ಣ ಆಶುಗ ಬಾಣಗಳಿಂದ ಅಪರಾಜಿತ ಅನಿರುದ್ಧನನ್ನು ಹೊಡೆದನು.

19173153a ಸಮಾಹತಸ್ತತೋ ಬಾಣೈಃ ಖಡ್ಗಚರ್ಮಧರೋಽಪತತ್ ।
19173153c ತಮಾಪತಂತಂ ನಿಶಿತೈರಭ್ಯಘ್ನನ್ಸಾಯಕೈಸ್ತಥಾ ।।

ಬಾಣಗಳಿಂದ ಗಾಯಗೊಂಡ ಅನಿರುದ್ಧನು ಖಡ್ಗ-ಗುರಾಣಿಗಳನ್ನು ಹಿಡಿದು ಬಾಣನ ಮೇಲೆ ಬಿದ್ದನು. ಆಕ್ರಮಣಿಸುತ್ತಿದ್ದ ಅವನನ್ನು ಬಾಣನು ನಿಶಿತ ಸಾಯಕಗಳಿಂದ ಗಾಯಗೊಳಿಸಿದನು.

19173154a ಸೋಽತಿವಿದ್ಧೋ ಮಹಾಬಾಹುರ್ಬಾಣೈಃ ಸನ್ನತಪರ್ವಭಿಃ ।
19173154c ಕ್ರೋಧೇನಾಭಿಪ್ರಜಜ್ವಾಲ ಚಿಕೀರ್ಷುಃ ಕರ್ಮ ದುಷ್ಕರಮ್ ।।

ಸನ್ನತಪರ್ವ ಬಾಣಗಳಿಂದ ಅತಿಯಾಗಿ ಗಾಯಗೊಂಡ ಮಹಾಬಾಹು ಅನಿರುದ್ಧನು ಕ್ರೋಧದಿಂದ ಭುಗಿಲೆದ್ದನು ಮತ್ತು ದುಷ್ಕರ ಕರ್ಮವನ್ನೆಸಗಲು ಬಯಸಿದನು.

19173155a ರುಧಿರೌಘಪ್ಲುತೈರ್ಗಾತ್ರೈರ್ಬಾಣವರ್ಷೈಃ ಸಮಾಹಿತಃ ।
19173155c ಅಭಿಭೂತಃ ಸುಸಂಕ್ರುದ್ಧೋ ಯಯೌ ಬಾಣರಥಂ ಪ್ರತಿ ।।

ಬಾಣವರ್ಷದಿಂದ ಅಂಗಾಂಗಗಳು ರಕ್ತದಿಂದ ತೋಯ್ದಿರಲು ಸಮಾಹಿತನಾದ ಅನಿರುದ್ಧನು ಸಂಕ್ರುದ್ಧನಾಗಿ ಬಾಣನ ರಥದ ಕಡೆ ನುಗ್ಗಿದನು.

19173156a ಅಸಿಭಿರ್ಮುಶಲೈಃ ಶೂಲೈಃ ಪಟ್ಟಿಶೈಸ್ತೋಮರೈಸ್ತಥಾ ।
19173156c ಸೋಽತಿವಿದ್ಧಃ ಶರೌಘೈಶ್ಚ ಪ್ರಾದ್ಯುಮ್ನಿರ್ನ ವ್ಯಕಂಪತ ।।

ಖಡ್ಗ-ಮುಶಲ-ಶೂಲ-ಪಟ್ಟಿಶ-ತೋಮರಗಳು ಮತ್ತು ಶರೌಘಗಳಿಂದ ಅತಿಗಾಯಗೊಂಡಿದ್ದರೂ ಅನಿರುದ್ಧನು ಕಂಪಿಸಲಿಲ್ಲ.

19173157a ಆಪ್ಲುತ್ಯ ಸಹಸಾ ಕ್ರುದ್ಧೋ ರಥೇಷಾಂ ತಸ್ಯ ಸೋಽಚ್ಛಿನತ್ ।
19173157c ಜಘಾನ ಚಾಶ್ವಾನ್ಖಡ್ಗೇನ ಬಾಣಸ್ಯ ರಣಮೂರ್ಧನಿ ।।

ಕ್ರುದ್ಧನಾಗಿ ಒಮ್ಮೆಲೇ ಹಾರಿ ಅವನ ರಥದ ಮೂಕಿಯನ್ನು ತುಂಡುಮಾಡಿ ರಣಮೂರ್ಧನಿಯಲ್ಲಿ ಖಡ್ಗದಿಂದ ಬಾಣನ ಕುದುರೆಗಳನ್ನು ಸಂಹರಿಸಿದನು.

19173158a ತಂ ಪುನಃ ಶರವರ್ಷೇಣ ಪಟ್ಟಿಶೈಸ್ತೋಮರೈರಪಿ ।
19173158c ಚಕಾರಾಂತರ್ಹಿತಂ ಬಾಣೋ ಯುದ್ಧಮಾರ್ಗವಿಶಾರದಃ ।।

ಆಗ ಯುದ್ಧಮಾರ್ಗವಿಶಾರದ ಬಾಣನು ಪುನಃ ಪಟ್ಟಿಶ-ತೋಮರ ಮತ್ತು ಶರವರ್ಷಗಳಿಂದ ಅನಿರುದ್ಧನನ್ನು ಕಾಣದಂತೆ ಮಾಡಿಬಿಟ್ಟನು.

19173159a ಹತೋಽಯಮಿತಿ ವಿಜ್ಞಾಯ ಪ್ರಾಣದನ್ನೈರೃತಾ ಗಣಾಃ ।
19173159c ತತೋಽವಪ್ಲುತ್ಯ ಸಹಸಾ ರಥಪಾರ್ಶ್ವೇ ವ್ಯವಸ್ಥಿತಃ ।।

ಇವನು ಹತನಾದನೆಂದೇ ತಿಳಿದ ದೈತ್ಯಗಣಗಳು ಗರ್ಜಿಸಲು ಅನಿರುದ್ಧನು ಒಮ್ಮಿಂದೊಮ್ಮೆಲೇ ಹಾರಿ ರಥದ ಪಾರ್ಶ್ವಭಾಗದಲ್ಲಿ ನಿಂತನು.

19173160a ಶಕ್ತಿಂ ಬಾಣಸ್ತತಃ ಕ್ರುದ್ಧೋ ಘೋರರೂಪಾಂ ಭಯಾನಕಾಮ್ ।
19173160c ಜಗ್ರಾಹ ಜ್ವಲಿತಾಂ ಘೋರಾಂ ಘಂಟಾಮಾಲಾಕುಲಾಂ ರಣೇ ।।
19173161a ಜ್ವಲನಾದಿತ್ಯಸಂಕಾಶಾಂ ಯಮದಂಡೋಗ್ರದರ್ಶನಾಮ್ ।
19173161c ಪ್ರಾಹಿಣೋತ್ತಾಮಸಂಗೇನ ಮಹೋಲ್ಕಾಂ ಜ್ವಲಿತಾಮಿವ ।।

ಆಗ ಕ್ರುದ್ಧನಾದ ಬಾಣನು ಘೋರರೂಪದ ಭಯಾನಕ ಪ್ರಜ್ವಲಿಸುತ್ತಿದ್ದ ಘೋರ ಘಂಟಮಾಲೆಗಳಿಂದ ಕೂಡಿದ್ದ ಆದಿತ್ಯನಂತೆ ಉರಿಯುತ್ತಿದ್ದ ಯಮದಂಡದಂತೆ ಉಗ್ರವಾಗಿ ಕಾಣುತ್ತಿದ್ದ ಮಹಾ ಉಲ್ಕೆಯಂತೆ ಜ್ವಲಿಸುತ್ತಿದ್ದ ಶಕ್ತಿಯನ್ನು ಹಿಡಿದು ಅದನ್ನು ಅನಿರುದ್ಧನ ಮೇಲೆ ಪ್ರಯೋಗಿಸಿದನು.

19173162a ತಾಮಾಪತಂತೀಂ ಸಂಪ್ರೇಕ್ಷ್ಯ ಜೀವಿತಾಂತಕರೀಂ ತದಾ ।
19173162c ಸೋಽಭಿಪ್ಲುತ್ಯ ತದಾ ಶಕ್ತಿಂ ಜಗ್ರಾಹ ಪುರುಷೋತ್ತಮಃ ।।

ಬೀಳುತ್ತಿದ್ದ ಜೀವಿತಾಂತಕಾರಿ ಶಕ್ತಿಯನ್ನು ನೋಡಿ ಪುರುಷೋತ್ತಮ ಅನಿರುದ್ಧನು ಹಾರಿ ಹಿಡಿದುಕೊಂಡನು.

19173163a ನಿರ್ಬಿಭೇದ ತತೋ ಬಾಣಂ ತಯಾ ಶಕ್ತ್ಯಾ ಮಹಾಬಲಃ ।
19173163c ಸಾ ಭಿತ್ವಾ ತಸ್ಯ ದೇಹಂ ವೈ ಪ್ರಾವಿಶದ್ಧರಣೀತಲಮ್ ।।

ಆಗ ಮಹಾಬಲನು ಆ ಶಕ್ತಿಯಿಂದಲೇ ಬಾಣನನ್ನು ಸೀಳಿದನು. ಅದು ಅವನ ದೇಹವನ್ನು ಸೀಳಿ ಧರಣೀತಲವನ್ನು ಪ್ರವೇಶಿಸಿತು.

19173164a ಸ ಗಾಢವಿದ್ಧೋ ವ್ಯಥಿತೋ ಧ್ವಜಯಷ್ಟಿಂ ಸಮಾಶ್ರಿತಃ ।
19173164c ತತೋ ಮೂರ್ಚ್ಛಾಭಿಭೂತಂ ತಂ ಕುಂಭಾಂಡೋ ವಾಕ್ಯಮಬ್ರವೀತ್ ।।

ಗಾಢವಾಗಿ ಗಾಯಗೊಂಡು ವ್ಯಥಿತನಾಗಿ ಧ್ವಜದ ಕಂಬವನ್ನು ಆಶ್ರಯಿಸಿ ಮೂರ್ಛಿತನಾದ ಬಾಣನಿಗೆ ಕುಂಭಾಂಡನು ಈ ಮಾತನ್ನಾಡಿದನು:

19173165a ಉಪೇಕ್ಷಸೇ ದಾನವೇಂದ್ರ ಕಿಮೇವಂ ಶತ್ರುಮುದ್ಯತಮ್ ।
19173165c ಲಬ್ಧಲಕ್ಷೋ ಹ್ಯಯಂ ವೀರೋ ನಿರ್ವಿಕಾರೋಽದ್ಯ ದೃಶ್ಯತೇ ।।

“ದಾನವೇಂದ್ರ! ಕೈಮೇಲಾಗುತ್ತಿರುವ ಶತ್ರುವನ್ನು ಏಕೆ ಉಪೇಕ್ಷಿಸುತ್ತಿರುವೆ? ಈ ವೀರನು ನಿನ್ನ ಲಕ್ಷೆಯನ್ನು ಹೊಂದಿದ್ದಾನೆ. ಇಂದು ನಿರ್ವಿಕಾರನಾಗಿ ಕಾಣುತ್ತಿದ್ದಾನೆ.

19173166a ಮಾಯಾಮಾಶ್ರಿತ್ಯ ಯುದ್ಧ್ಯಸ್ವ ನಾಯಂ ವಧ್ಯೋಽನ್ಯಥಾ ಭವೇತ್ ।
19173166c ಆತ್ಮಾನಂ ಮಾಂ ಚ ರಕ್ಷಸ್ವ ಪ್ರಮಾದಾತ್ಕಿಮುಪೇಕ್ಷಸೇ ।।

ಮಾಯೆಯನ್ನಾಶ್ರಯಿಸಿ ಯುದ್ಧಮಾಡು. ಅನ್ಯಥಾ ಇವನ ವಧೆಯಾಗುವುದಿಲ್ಲ. ನಿನ್ನನ್ನೂ ಮತ್ತು ನನ್ನನ್ನೂ ರಕ್ಷಿಸು. ಪ್ರಮಾದದಿಂದ ಏಕೆ ಉಪೇಕ್ಷಿಸುತ್ತಿರುವೆ?

19173167a ವಧ್ಯತಾಮಯಮದ್ಯೈವ ನ ನಃ ಸರ್ವಾನ್ವಿನಾಶಯೇತ್ ।
19173167c ಅನ್ಯಾಂಶ್ಚ ಶತಶೋ ಹತ್ವಾ ಉಷಾಂ ನೀತ್ವಾ ವ್ರಜಿಷ್ಯತಿ ।।

ನಾವೆಲ್ಲರೂ ವಿನಾಶಹೊಂದದಂತೆ ಇಂದೇ ಇವನನ್ನು ಕೊಲ್ಲು. ಇಲ್ಲದಿದ್ದರೆ ಅನ್ಯ ನೂರಾರು ಯೋಧರನ್ನು ಕೊಂದು ಇವನು ಉಷೆಯನ್ನು ಕರೆದುಕೊಂಡು ಹೋಗಿಬಿಡುತ್ತಾನೆ.”

19173168a ಕುಂಭಾಂಡವಚನೈರೇವಂ ದಾನವೇಂದ್ರಃ ಪ್ರಣೋದಿತಃ ।
19173168c ವಾಚಂ ರೂಕ್ಷಾಂ ಅಭಿಕ್ರುದ್ಧಃ ಪ್ರೋವಾಚ ವದತಾಂ ವರಃ ।।

ಕುಂಭಾಂಡನ ವಚನಗಳಿಂದ ಪ್ರಚೋದಿತನಾದ ಮಾತನಾಡುವವರಲ್ಲಿ ಶ್ರೇಷ್ಠ ದಾನವೇಂದ್ರನು ಅತ್ಯಂತ ಕುಪಿತನಾಗಿ ಈ ಕಠೋರ ಮಾತುಗಳನ್ನಾಡಿದನು:

19173169a ಏಷೋಽಹಮಸ್ಯ ವಿದಧೇ ಮೃತ್ಯುಂ ಪ್ರಾಣಹರಂ ರಣೇ ।
19173169c ಆದಾಸ್ಯಾಮ್ಯಹಮೇತಂ ವೈ ಗರುತ್ಮಾನಿವ ಪನ್ನಗಮ್ ।।

“ಇದೋ! ರಣದಲ್ಲಿ ಇವನ ಪ್ರಾಣವನ್ನು ಮೃತ್ಯುವಿಗೆ ಕೊಟ್ಟುಬಿಡುತ್ತೇನೆ. ಗರುಡನು ಸರ್ಪವನ್ನು ಹೇಗೋ ಹಾಗೆ ಇವನನ್ನು ಅದುಮಿ ಹಿಡಿಯುತ್ತೇನೆ.”

19173170a ಇತ್ಯೇವಮುಕ್ತ್ವಾ ಸರಥಃ ಸಧ್ವಜಃ ಸಾಶ್ವಸಾರಥಿಃ ।
19173170c ಗಂಧರ್ವನಗರಾಕಾರಸ್ತತ್ರೈವಾಂತರಧೀಯತ ।।

ಹೀಗೆ ಹೇಳಿ ಅವನು ರಥ-ಧ್ವಜ-ಅಶ್ವ-ಸಾರಥಿಗಳೊಂದಿಗೆ ಗಂಧರ್ವನಗರದಂತೆ ಅಲ್ಲಿಯೇ ಅಂತರ್ಧಾನನಾದನು.

19173171a ಮುಮೋಚ ನಿಶಿತಾನ್ಬಾಣಾಂಶ್ಛನ್ನೋ ಮಾಯಾಧರೋ ಬಲೀ।
19173171c ವಿಜ್ಞಾಯಾಂತರ್ಹಿತಂ ಬಾಣಂ ಪ್ರಾದ್ಯುಮ್ನಿರಪರಾಜಿತಃ ।।
19173172a ಪೌರುಷೇಣ ಸಮಾಯುಕ್ತಃ ಸಂಪ್ರೈಕ್ಷತ ದಿಶೋ ದಶ ।

ಆ ಮಾಯಾಧಾರೀ ಬಲಶಾಲಿಯು ಅಡಗಿಕೊಂಡೇ ನಿಶಿತ ಬಾಣಗಳನ್ನು ಪ್ರಯೋಗಿಸಿದನು. ಬಾಣನು ಅಂತರ್ಹಿತನಾದುದನ್ನು ತಿಳಿದ ಅಪರಾಜಿತ ಅನಿರುದ್ಧನು ಪೌರುಷದಿಂದ ಕೂಡಿ ದಶದಿಕ್ಕುಗಳನ್ನೂ ವೀಕ್ಷಿಸಿದನು.

19173172c ಆಸ್ಥಾಯ ತಾಮಸೀಂ ವಿದ್ಯಾಂ ತದಾ ಕ್ರುದ್ಧೋ ಮಹಾಬಲಃ ।।
19173173a ಮುಮೋಚ ವಿಶಿಖಾಂಸ್ತೀಕ್ಷ್ಣಾಂಶ್ಛನ್ನೋ ಮಾಯಾಧರೋ ಬಲೀ ।

ಆ ಕ್ರುದ್ಧನಾದ ಮಹಾಬಲಿ ಮಾಯಾಧರ ಬಲಶಾಲೀ ಬಾಣನು ತಾಮಸೀ ವಿದ್ಯೆಯನ್ನು ಬಳಸಿ ಅಡಗಿಕೊಂಡೇ ತೀಕ್ಷ್ಣ ವಿಶಿಖ ಬಾಣಗಳನ್ನು ಪ್ರಯೋಗಿಸಿದನು.

19173173c ಪ್ರಾದ್ಯುಮ್ನಿರ್ವಿಶಿಖೈರ್ಬದ್ಧಃ ಸರ್ಪಭೂತೈಃ ಸಮಂತತಃ ।।
19173174a ವೇಷ್ಟಿತೋ ಬಹುಧಾ ತಸ್ಯ ದೇಹಃ ಪನ್ನಗರಾಶಿಭಿಃ ।

ಆಗ ಅನಿರುದ್ಧನು ಸರ್ಪಾಕಾರದ ವಿಶಿಖಗಳಿಂದ ಎಲ್ಲಕಡೆಗಳಿಂದ ಬಂಧಿತನಾದನು. ಪನ್ನಗರಾಶಿಗಳಿಂದ ಅವನ ದೇಹವು ಗಟ್ಟಿಯಾಗಿ ಬಿಗಿಯಲ್ಪಟ್ಟಿತು.

19173174c ಸ ತು ವೇಷ್ಟಿತಸರ್ವಾಂಗೋ ಬದ್ಧಃ ಪ್ರಾದ್ಯುಮ್ನಿರಾಹವೇ ।।
19173175a ನಿಷ್ಪ್ರಯತ್ನಃ ಕೃತಸ್ತಸ್ಥೌ ಮೈನಾಕ ಇವ ಪರ್ವತಃ ।

ಯುದ್ಧದಲ್ಲಿ ಸರ್ವಾಂಗಗಳಲ್ಲಿ ಬಂಧಿತನಾದ ಅನಿರುದ್ಧನು ಮೈನಾಕ ಪರ್ವತದಂತೆ ನಿಷ್ಪ್ರಯತ್ನನಾಗಿ ನಿಂತುಬಿಟ್ಟನು.

19173175c ಜ್ವಾಲಾವಲೀಢವದನೈಃ ಸರ್ಪಭೋಗೈರ್ವಿಚೇಷ್ಟಿತಃ ।।
19173176a ಅಭಿತಃ ಪರ್ವತಾಕಾರಃ ಪ್ರಾದ್ಯುಮ್ನಿರಭವದ್ರಣೇ ।

ಬಾಯಿಗಳಿಂದ ಜ್ವಾಲೆಗಳನ್ನು ಕಾರುತ್ತಿದ್ದ ಸರ್ಪಗಳಿಂದ ಬಂಧಿಸಲ್ಪಟ್ಟಿದ್ದ ಅನಿರುದ್ಧನು ರಣದಲ್ಲಿ ಪರ್ವತದಂತೆಯೇ ತೋರುತ್ತಿದ್ದನು.

19173176c ನಿಷ್ಪ್ರಯತ್ನಗತಿಶ್ಚಾಪಿ ಸರ್ಪವಕ್ತ್ರಮಯೈಃ ಶರೈಃ ।।
19173177a ನ ವಿವ್ಯಥೇ ಸ ಭೂತಾತ್ಮಾ ಸರ್ವತಃ ಪರಿವೇಷ್ಟಿತಃ ।

ಸರ್ಪದ ಬಾಯಿಗಳಿದ್ದ ಶರಗಳಿಂದ ಬಂಧಿಸಲ್ಪಟ್ಟು ಸರ್ವತಃ ನಿಷ್ಪ್ರಯತ್ನಗತಿಯನ್ನು ಹೊಂದಿದ್ದರೂ ಭೂತಾತ್ಮಾ ಅನಿರುದ್ಧನು ವ್ಯಥಿತನಾಗಲಿಲ್ಲ.

19173177c ತತಸ್ತಂ ವಾಗ್ಭಿರುಗ್ರಾಭಿಃ ಸಂರಬ್ಧಃ ಸಮತರ್ಜಯತ್ ।।
19173178a ಬಾಣೋ ಧ್ವಜಂ ಸಮಾಶ್ರಿತ್ಯ ಪ್ರೋವಾಚಾಮರ್ಷಿತೋ ವಚಃ ।

ಅನಂತರ ಅವನನ್ನು ಉಗ್ರ ಮಾತುಗಳಿಂದ ಬೆದರಿಸಿ ಬಾಣನು ಧ್ವಜವನ್ನು ಆಶ್ರಯಿಸಿ ಈ ರೋಷಭರಿತ ಮಾತನ್ನಾಡಿದನು:

19173178c ಕುಂಭಾಂಡ ವಧ್ಯತಾಂ ಶೀಘ್ರಮಯಂ ವೈ ಕುಲಪಾಂಸನಃ ।।
19173179a ಚಾರಿತ್ರಂ ಯೇನ ಮೇ ಲೋಕೇ ದೂಷಿತಂ ದೂಷಿತಾತ್ಮನಾ ।

“ಕುಂಭಾಂಡ! ಶೀಘ್ರವೇ ಈ ಕುಲಪಾಂಸನನನ್ನು ಕೊಲ್ಲು. ಈ ದೂಷಿತಾತ್ಮನು ಲೋಕದ ಚಾರಿತ್ರವನ್ನೇ ದೂಷಿಸಿದ್ದಾನೆ.”

19173179c ಇತ್ಯೇವಮುಕ್ತೇ ವಚನೇ ಕುಂಭಾಂಡೋ ವಾಕ್ಯಮಬ್ರವೀತ್ ।।
19173180a ರಾಜನ್ವಕ್ಷ್ಯಾಂಯಹಂ ಕಿಂಚಿತ್ತನ್ಮೇ ಶೃಣು ಯದಿಚ್ಛಸಿ ।

ಈ ಮಾತಿಗೆ ಕುಂಭಾಂಡನು ಹೇಳಿದನು: “ರಾಜನ್! ಈ ವಿಷಯದಲ್ಲಿ ಸ್ವಲ್ಪ ಹೇಳಲು ಬಯಸುತ್ತೇನೆ. ಇಚ್ಛಿಸಿದರೆ ಕೇಳು.

19173180c ಅಯಂ ವಿಜ್ಞಾಯತಾಂ ಕಸ್ಯ ಕುತೋ ವಾಯಮಿಹಾಗತಃ ।।
19173181a ಕೇನ ವಾಯಮಿಹಾನೀತಃ ಶಕ್ರತುಲ್ಯಪರಾಕ್ರಮಃ ।

ಇವನು ಯಾರ ಮಗನು ಮತ್ತು ಎಲ್ಲಿಂದ ಇಲ್ಲಿಗೆ ಬಂದಿದ್ದಾನೆ ಅಥವಾ ಈ ಶಕ್ರತುಲ್ಯಪರಾಕ್ರಮಿಯನ್ನು ಇಲ್ಲಿಗೆ ಯಾರು ಕರೆತಂದಿದ್ದಾರೆ ಎನ್ನುವುದನ್ನು ತಿಳಿದುಕೋ.

19173181c ಮಯಾಯಂ ಬಹುಶೋ ರಾಜಂದೃಷ್ಟೋ ಯುದ್ಧ್ಯನ್ಮಹಾರಣೇ ।।
19173182a ಕ್ರೀಡನ್ನಿವ ಚ ಯುದ್ಧೇಷು ದೃಶ್ಯತೇ ದೇವಸೂನುವತ್ ।

ರಾಜನ್! ಮಹಾರಣದಲ್ಲಿ ಯುದ್ಧಮಾಡುವಾಗ ಇವನನ್ನು ನಾನು ಮತ್ತೆ ಮತ್ತೆ ನೋಡುತ್ತಿದ್ದೆ. ಇವನು ಯುದ್ಧದಲ್ಲಿ ದೇವಸೂನುವಂತೆ ಆಟವಾಡುತ್ತಿರುವುದು ಕಂಡುಬರುತ್ತಿತ್ತು.

19173182c ಬಲವಾನ್ಸತ್ತ್ವಸಂಪನ್ನಃ ಸರ್ವಶಾಸ್ತ್ರವಿಶಾರದಃ ।।
19173183a ನಾಯಂ ವಧಕೃತಂ ದೋಷಮರ್ಹತೇ ದೈತ್ಯಸತ್ತಮ ।

ದೈತ್ಯಸತ್ತಮ! ಇವನು ಬಲವಾನನೂ, ಸತ್ತ್ವಸಂಪನ್ನನೂ ಮತ್ತು ಸರ್ವಶಾಸ್ತ್ರವಿಶಾರದನೂ ಆಗಿದ್ದಾನೆ. ಇವನನ್ನು ವಧಿಸಿ ದೋಷವನ್ನು ತಂದುಕೊಳ್ಳಬೇಡ.

19173183c ಗಾಂಧರ್ವೇಣ ವಿವಾಹೇನ ಕನ್ಯೇಯಂ ತವ ಸಂಗತಾ ।।
19173184a ಅದೇಯಾ ಹ್ಯಪ್ರತಿಗ್ರಾಹ್ಯಾ ಅತಶ್ಚಿಂತ್ಯಂ ವಧಂ ಕುರು ।

ನಿನ್ನ ಕನ್ಯೆಯು ಇವನನ್ನು ಗಾಂಧರ್ವ ವಿವಾಹದಿಂದ ಕೂಡಿದ್ದಾಳೆ. ಆದುದರಿಂದ ಅವಳು ಇತರರಿಗೆ ಕೊಡಲು ಅಥವಾ ಇನ್ನೊಬ್ಬರ ಪರಿಗ್ರಹಕ್ಕೆ ಅನರ್ಹಳಾಗಿದ್ದಾಳೆ. ಆದುದರಿಂದ ಚೆನ್ನಾಗಿ ಯೋಚಿಸಿ ಇವನನ್ನು ವಧಿಸು.

19173184c ವಿಜ್ಞಾಯ ಚ ವಧಂ ವಾಸ್ಯ ಪೂಜಾಂ ವಾಸ್ಯ ಕರಿಷ್ಯಸಿ ।।
19173185a ವಧೇ ಹ್ಯಸ್ಯ ಮಹಾಂದೋಷೋ ರಕ್ಷಣೇ ಸುಮಹಾನ್ಗುಣಃ ।

ಇವನ ಕುರಿತು ತಿಳಿದ ನಂತರವೇ ಇವನ ವಧೆ ಅಥವಾ ಪೂಜೆಯನ್ನು ಮಾಡು. ಇವನ ವಧೆಯಿಂದ ಮಹಾ ದೋಷವೂ ರಕ್ಷಣೆಯಿಂದ ಮಹಾಗುಣವೂ ಇದೆ.

19173185c ಅಯಂ ಹಿ ಪುರುಷೋತ್ಕೃಷ್ಟಃ ಸರ್ವಥಾ ಮಾನಮರ್ಹತಿ ।।
19173186a ಸರ್ವತೋ ವೇಷ್ಟಿತತನುರ್ನ ವ್ಯಥತ್ಯೇಷ ಭೋಗಿಭಿಃ ।
19173186c ಕುಲಶೌಂಡೀರ್ಯವೀರ್ಯೈಶ್ಚ ಸತ್ತ್ವೇನ ಚ ಸಮನ್ವಿತಃ ।।

ಪುರುಷರಲ್ಲಿಯೇ ಉತ್ಕೃಷ್ಟನಾಗಿರುವ ಇವನು ಸರ್ವಥಾ ಸನ್ಮಾನ ಯೋಗ್ಯನು. ಎಲ್ಲಕಡೆಗಳಿಂದ ಸರ್ಪಗಳಿಂದ ಬಿಗಿಯಲ್ಪಟ್ಟಿದ್ದರೂ ಇವನು ವ್ಯಥಿಸುತ್ತಿಲ್ಲ. ತನ್ನ ಕುಲದ ಅಭಿಮಾನ, ಬಲ-ಪರಾಕ್ರಮ ಮತ್ತು ಸತ್ತ್ವದಿಂದ ಸಮನ್ವಿತನಾಗಿದ್ದಾನೆ.

19173187a ಪಶ್ಯ ರಾಜನ್ಮಹಾವೀರ್ಯೈರನ್ವಿತಃ ಪುರುಷೋತ್ತಮಃ ।
19173187c ನ ನೋ ಗಣಯತೇ ಸರ್ವಾನ್ವಧಂ ಪ್ರಾಪ್ತೋಽಪ್ಯಯಂ ಬಲೀ।।

ರಾಜನ್! ನೋಡು! ಮಹಾಬಲಿ ಸರ್ಪಗಳಿಂದ ಬಂಧಿತನಾಗಿ ವಧಾವಸ್ಥೆಯನ್ನು ಹೊಂದಿದ್ದರೂ ಈ ಮಹಾವೀರ ಪುರುಷೋತ್ತಮನಿಗೆ ನಮ್ಮೆಲ್ಲರ ಗಣನೆಯೇ ಇಲ್ಲವಾಗಿದೆ.

19173188a ಯದಿ ಮಾಯಾಪ್ರಭಾವೇಣ ನಾತ್ರ ಬದ್ಧೋ ಭವೇದಯಮ್ ।
19173188c ಸರ್ವಾನ್ಸುರಗಣಾನ್ಸಂಖ್ಯೇ ಯೋಧಯೇನ್ನಾತ್ರ ಸಂಶಯಃ ।।

ಒಂದುವೇಳೆ ಮಾಯೆಯ ಪ್ರಭಾವದಿಂದ ಇವನನ್ನು ನಾವು ಬಂಧಿಸದೇ ಇದ್ದಿದ್ದರೆ ಇವನು ಯುದ್ಧದಲ್ಲಿ ಸರ್ವ ಸುರಗಣಗಳೊಂದಿಗೂ ಯುದ್ಧಮಾಡುತ್ತಿದ್ದನು ಎನ್ನುವುದರಲ್ಲಿ ಸಂಶಯವಿಲ್ಲ.

19173189a ಸರ್ವಸಂಗ್ರಾಮಮಾರ್ಗಜ್ಞೋ ಭವೇದ್ವೀರ್ಯಾಧಿಕಸ್ತವ ।
19173189c ಶೋಣಿತೌಘಪ್ಲುತೈರ್ಗಾತ್ರೈರ್ನಾಗಭೋಗೈಶ್ಚ ವೇಷ್ಟಿತಃ ।।
19173190a ತ್ರಿಶಿಖಾಂ ಭ್ರುಕುಟಿಂ ಕೃತ್ವಾ ನ ಚಿಂತಯತಿ ನಃ ಸ್ಥಿತಾನ್ ।

ಸರ್ವಸಂಗ್ರಾಮಮಾರ್ಗಗಳನ್ನೂ ತಿಳಿದುಕೊಂಡಿರುವ ಇವನು ನಿನಗಿಂತಲೂ ಅಧಿಕನಾಗಿದ್ದಾನೆ. ಇವನ ಅಂಗಾಂಗಗಳು ರಕ್ತದಿಂದ ತೋಯ್ದುಹೋಗಿವೆ. ಇವನ ಶರೀರವನ್ನು ಸರ್ಪಗಳ ದೇಹಗಳು ಗಟ್ಟಿಯಾಗಿ ಕಟ್ಟಿಹಾಕಿವೆ. ಆದರೂ ಇವನು ಹುಬ್ಬನ್ನು ಗಂಟಿಕ್ಕಿ ಇಲ್ಲಿ ನಿಂತು ನಮ್ಮಕುರಿತು ಏನನ್ನೂ ಯೋಚಿಸುತ್ತಿಲ್ಲ!

19173190c ಇಮಾಮವಸ್ಥಾಂ ನೀತೋಽಪಿ ಸ್ವಬಾಹುಬಲಮಾಶ್ರಿತಃ ।।
19173191a ನ ಚಿಂತಯತಿ ರಾಜಂಸ್ತ್ವಾಂ ವೀರ್ಯವಾನ್ಕೋಽಪ್ಯಸೌ ಯುವಾ ।

ರಾಜನ್! ಈ ಅವಸ್ಥೆಗೆ ಇಳಿದಿದ್ದರೂ ಸ್ವಬಾಹುಬಲವನ್ನು ಆಶ್ರಯಿಸಿ ನಿನ್ನ ಕುರಿತು ಚಿಂತಿಸುತ್ತಿಲ್ಲ. ಈ ಯುವಕನು ಯಾರೋ ವೀರ್ಯವಾನನೇ ಆಗಿದ್ದಾನೆ.

19173191c ಸಹಸ್ರಬಾಹೋಃ ಸಮರೇ ದ್ವಿಬಾಹುಃ ಸಮವಸ್ಥಿತಃ ।
19173191e ನ ಚಿಂತಯತಿ ತೇ ವೀರ್ಯಮಯಂ ವೀರ್ಯಮದಾನ್ವಿತಃ ।।
19173192a ಉಚಿತಂ ಯದಿ ತೇ ರಾಜನ್ಜ್ಞೇಯೋ ವೀರ್ಯಬಲಾನ್ವಿತಃ ।

ಸಮರದಲ್ಲಿ ಸಹಸ್ರಬಾಹುವಿನ ಎದಿರು ಎರಡೇ ಬಾಹುಗಳ ಈ ವೀರನು ನಿಂತಿದ್ದಾನೆ. ವೀರ್ಯಮದಾನ್ವಿತನಾದ ಇವನು ನಿನ್ನ ವೀರ್ಯದ ಕುರಿತು ಚಿಂತಿಸುತ್ತಿಲ್ಲ. ರಾಜನ್! ಒಂದು ವೇಳೆ ಉಚಿತವೆಂದು ಅಂದುಕೊಂಡರೆ ಈ ವೀರ್ಯಬಲಾನ್ವಿತನ ಕುರಿತು ತಿಳಿದುಕೋ!

19173192c ಕನ್ಯಾ ಚೇಯಂ ನ ಚಾನ್ಯಸ್ಯ ನಿರ್ಯಾತ್ಯೇತೇನ ಸಂಗತಾ ।।
19173193a ಯದಿ ಚೇಷ್ಟತಮಃ ಕಶ್ಚಿದಯಂ ವಂಶೇ ಮಹಾತ್ಮನಾಮ್ ।
19173193c ತತಃ ಪೂಜಾಮಯಂ ವೀರಃ ಪ್ರಾಪ್ಸ್ಯತೇ ಚಾಸುರೋತ್ತಮ ।।

ನಿನ್ನ ಕನ್ಯೆಯು ಕೂಡ ಇವನೊಂದಿಗೆ ಸಂಬಂಧವನ್ನು ಮಾಡಿಕೊಂಡುಬಿಟ್ಟಿದ್ದಾಳೆ. ಆದುದರಿಂದ ಇವಳನ್ನು ಅನ್ಯರಿಗೆ ಕೊಡಲಿಕ್ಕಾಗುವುದಿಲ್ಲ. ಒಂದುವೇಳೆ ಇವನು ಮಹಾತ್ಮರ ವಂಶದವನಾಗಿದ್ದರೆ ಅದು ನಮಗೆ ಅಭೀಷ್ಟವಾದುದೇ ಆಗಿದೆ. ಅಸುರೋತ್ತಮ! ಹಾಗಿದ್ದರೆ ಈ ವೀರನು ಪೂಜಾರ್ಹನು.

19173194a ರಕ್ಷ್ಯತಾಮಿತಿ ಚೋಕ್ತ್ವೈವ ತಥಾಸ್ತ್ವಿತಿ ಚ ತಸ್ಥಿವಾನ್ ।
19173194c ಏವಮುಕ್ತೇ ತು ವಚನೇ ಕುಂಭಾಂಡೇನ ಮಹಾತ್ಮನಾ ।।
19173195a ತಥೇತ್ಯಾಹ ಚ ಕುಂಭಾಂಡಂ ಬಾಣಃ ಶತ್ರುನಿಷೂದನಃ ।

ಆದುದರಿಂದ ಇವನನ್ನು ರಕ್ಷಿಸಬೇಕು” ಎಂದು ಹೇಳಿ ಕುಂಭಾಂಡನು ಸುಮ್ಮನಾದನು. ಮಹಾತ್ಮ ಕುಂಭಾಂಡನು ಹೀಗೆ ಹೇಳಲು ಶತ್ರುನಿಷೂದನ ಬಾಣನು ಕುಂಭಾಂಡನಿಗೆ ಹಾಗೆಯೇ ಆಗಲಿ ಎಂದನು.

19173195c ಸಂರಕ್ಷಿಣಸ್ತತೋ ದತ್ತ್ವಾ ಅನಿರುದ್ಧಸ್ಯ ಧೀಮತಃ ।।
19173196a ಯಯೌ ಸ್ವಮೇವ ಭವನಂ ಬಲೇಃ ಪುತ್ರೋ ಮಹಾಯಶಾಃ ।

ಧೀಮಂತ ಅನಿರುದ್ಧನಿಗೆ ಕಾವಲನ್ನಿರಿಸಿ ಬಲಿಯ ಪುತ್ರ ಮಹಾಯಶಸ್ವಿ ಬಾಣನು ತನ್ನ ಭವನಕ್ಕೆ ತೆರಳಿದನು.

19173196c ಸಂಯತಂ ಮಾಯಯಾ ದೃಷ್ಟ್ವಾ ಅನಿರುದ್ಧಂ ಮಹಾಬಲಮ್ ।।
19173197a ಋಷೀಣಾಂ ನಾರದಃ ಶ್ರೇಷ್ಠೋಽವ್ರಜದ್ದ್ವಾರವತೀಂ ಪ್ರತಿ ।
19173197c ತತೋ ಹ್ಯಾಕಾಶಮಾರ್ಗೇಣ ಮುನಿರ್ದ್ವಾರವತೀಂ ಗತಃ ।।

ಮಹಾಬಲ ಅನಿರುದ್ಧನು ಮಾಯೆಯಿಂದ ಬಂಧಿತನಾದುದನ್ನು ನೋಡಿ ಋಷಿಗಳಲ್ಲಿ ಶ್ರೇಷ್ಠ ನಾರದನು ದ್ವಾರವತಿಯ ಕಡೆ ಹೊರಟನು. ಆಕಾಶಮಾರ್ಗದಿಂದ ಮುನಿಯು ದ್ವಾರವತಿಯನ್ನು ತಲುಪಿದನು.

19173198a ಗತೇ ಋಷೀಣಾಂ ಪ್ರವರೇ ಸೋಽನಿರುದ್ಧೋ ವ್ಯಚಿಂತಯತ್ ।
19173198c ನಷ್ಟೋಽಯಂ ದಾನವಃ ಕ್ರೂರೋ ಯುದ್ಧಮೇಷ್ಯತ್ಯಸಂಶಯಃ।।

ಋಷಿಪ್ರವರ ನಾರದನು ಹೊರಟುಹೋದ ನಂತರ ಅನಿರುದ್ಧನು ಯೋಚಿಸಿದನು: “ಈ ಕ್ರೂರ ದಾನವನು ಎಲ್ಲಿಯೋ ಅಡಗಿಕೊಂಡಿದ್ದಾನೆ. ಯುದ್ಧಕ್ಕೆ ಮತ್ತೆ ಬರುತ್ತಾನೆ ಎನ್ನುವುದರಲ್ಲಿ ಸಂಶಯವಿಲ್ಲ.

19173199a ಸ ಗತ್ವಾ ನಾರದಸ್ತತ್ರ ಶಂಖಚಕ್ರಗದಾಧರಮ್ ।
19173199c ಜ್ಞಾಪಯಿಷ್ಯತಿ ತತ್ತ್ವೇನ ಇಮಮರ್ಥಂ ನ ಸಂಶಯಃ ।।

ನಾರದನು ಹೋಗಿ ಶಂಖಚಕ್ರಗದಾಧರನಿಗೆ ಈ ಎಲ್ಲ ಸಮಾಚಾರಗಳನ್ನೂ ನಡೆದಂತೆ ಹೇಳುತ್ತಾನೆ ಎನ್ನುವುದರಲ್ಲಿ ಸಂಶಯವಿಲ್ಲ.”

19173200a ನಾಗೈರ್ವಿಚೇಷ್ಟಿತಂ ದೃಷ್ಟ್ವಾ ಉಷಾ ಪ್ರಾದ್ಯುಮ್ನಿಮಾತುರಾ।
19173200c ರುರೋದ ಬಾಷ್ಪರುದ್ಧಾಕ್ಷೀ ತಾಮಾಹ ರುದತೀಂ ಪುನಃ ।।

ಅನಿರುದ್ಧನು ನಾಗಗಳಿಂದ ಬಿಗಿಯಲ್ಪಟ್ಟಿದ್ದುದನ್ನು ನೋಡಿ ವ್ಯಾಕುಲಳಾದ ಉಷೆಯು ಬಿಕ್ಕಿ ಬಿಕ್ಕಿ ರೋದಿಸತೊಡಗಿದಳು. ಕಣ್ಣೀರುತುಂಬಿದ ಕಣ್ಣುಗಳಿಂದ ಪುನಃ ರೋದಿಸುತ್ತಿದ್ದ ಅವಳಿಗೆ ಅನಿರುದ್ಧನು ಹೇಳಿದನು:

19173201a ಕಿಮಿದಂ ರುದ್ಯತೇ ಭೀರು ಮಾ ಭೈಸ್ತ್ವಂ ಮೃಗಲೋಚನೇ ।
19173201c ಪಶ್ಯ ಸುಶ್ರೋಣಿ ಸಂಪ್ರಾಪ್ತಂ ಮತ್ಕೃತೇ ಮಧುಸೂದನಮ್ ।।
19173202a ಯಸ್ಯ ಶಂಖಧ್ವನಿಂ ಶ್ರುತ್ವಾ ಬಾಹುಶಬ್ದಂ ಬಲಸ್ಯ ಚ ।
19173202c ದಾನವಾ ನಾಶಮೇಷ್ಯಂತಿ ಗರ್ಭಾಶ್ಚಾಸುರಯೋಷಿತಾಮ್ ।।

“ಭೀರು! ಇದೇಕೆ ರೋದಿಸುತ್ತಿರುವೆ? ಮೃಗಲೋಚನೇ! ಭಯಪಡಬೇಡ! ಸುಶ್ರೋಣಿ! ನನ್ನಿಂದಾಗಿ ಮಧುಸೂದನನು ಇಲ್ಲಿಗೆ ಬರುವುದನ್ನು ನೋಡು. ಅವನ ಶಂಖಧ್ವನಿ, ಬಾಹುಶಬ್ದ ಮತ್ತು ಬಲದ ಕುರಿತು ಕೇಳಿ ದಾನವರು ನಾಶವಾಗುತ್ತಾರೆ ಮತ್ತು ಅಸುರರ ಸ್ತ್ರೀಯರ ಗರ್ಭಪಾತವಾಗುತ್ತದೆ!””

19173203 ವೈಶಂಪಾಯನ ಉವಾಚ ।
19173203a ಏವಮುಕ್ತಾನಿರುದ್ಧೇನ ಉಷಾ ವಿಶ್ರಂಭಮಾಗತಾ ।
19173203c ನೃಶಂಸಂ ಪಿತರಂ ಚೈವ ಶೋಚತೇ ಸಾ ಸುಮಧ್ಯಮಾ ।।

ವೈಶಂಪಾಯನನು ಹೇಳಿದನು: “ಅನಿರುದ್ಧನು ಹೀಗೆ ಹೇಳಲು ಉಷೆಗೆ ವಿಶ್ವಾಸವುಂಟಾಯಿತು. ಆ ಸುಮಧ್ಯಮೆಯು ತನ್ನ ನಿರ್ದಯಿ ತಂದೆಯ ಕುರಿತು ಶೋಕಿಸತೊಡಗಿದಳು.”

ಸಮಾಪ್ತಿ

ಇತಿ ಶ್ರೀಮಹಾಭಾರತೇ ಖಿಲೇಷು ಹರಿವಂಶೇ ವಿಷ್ಣುಪರ್ವಣಿ ಬಾಣಾನಿರುದ್ಧಯುದ್ಧೇ ತ್ರಿಸಪ್ತತ್ಯಧಿಕಶತತಮೋಽಧ್ಯಾಯಃ


  1. ಈ ಶ್ಲೋಕವು ಗೋರಖಪುರ ಗೀತಾ ಪ್ರೆಸ್ ಸಂಪುಟದಲ್ಲಿಲ್ಲ. ಆದರೆ ಮುಂದೆ 74ನೇ ಶ್ಲೋಕದಲ್ಲಿ ಇದೇ ಶ್ಲೋಕವು ಪುನಃ ಬರುವುದರಿಂದ ಇದು ಇಲ್ಲಿ ಸಮಂಜಸವಲ್ಲ. ↩︎

  2. ಖಡ್ಗ ಅಥವಾ ಪರಿಘವನ್ನು ವೃತ್ತಾಕಾರದಲ್ಲಿ ಬೀಸುವುದು. ಇದರಿಂದ ಶತ್ರುವಿನ ಪ್ರಹಾರಗಳನ್ನು ನಿಷ್ಫಲವನ್ನಾಗಿಸಬಹುದು (ಗೀತಾ ಪ್ರೆಸ್). ↩︎

  3. ಕೈಯನ್ನು ಮೇಲೆತ್ತಿ ಖಡ್ಗ ಅಥವಾ ಪರಿಘವನ್ನು ತಿರುಗಿಸುವುದು (ಗೀತಾ ಪ್ರೆಸ್). ↩︎

  4. ಖಡ್ಗ ಅಥವಾ ಪರಿಘವನ್ನು ತನ್ನ ನಾಲ್ಕೂ ಕಡೆ ತಿರುಗಿಸಿ ಶತ್ರುವು ಪ್ರಯೋಗಿಸಿದ ಪ್ರಹಾರವನ್ನು ವ್ಯರ್ಥಗೊಳಿಸುವುದು (ಗೀತಾ ಪ್ರೆಸ್). ↩︎

  5. ಖಡ್ಗ ಅಥವಾ ಪರಿಘವನ್ನು ಎಲ್ಲಕಡೆ ತಿರುಗಿಸುತ್ತಾ ಹಾರುವುದು (ಗೀತಾ ಪ್ರೆಸ್). ↩︎

  6. ವಿಶಿಷ್ಟ ರೀತಿಯಲ್ಲಿ ಖಡ್ಗ ಅಥವಾ ಪರಿಘವನ್ನು ತಿರುಗಿಸುತ್ತಾ ಶತ್ರುಸೇನೆಯಲ್ಲಿ ಕ್ಷೇಭೆಯನ್ನುಂಟುಮಾಡುವುದು (ಗೀತಾ ಪ್ರೆಸ್). ↩︎

  7. ಕುಪ್ಪಳಿಸುತ್ತಾ ಶತ್ರುಗಳ ಸಮ್ಮುಖ ಖಡ್ಗ ಅಥವಾ ಪರಿಘವನ್ನು ಪ್ರಯೋಗಿಸುವುದು (ಗೀತಾ ಪ್ರೆಸ್). ↩︎

  8. ಖಡ್ಗ ಅಥವಾ ಪರಿಘಗಳನ್ನು ಪ್ರಯೋಗಿಸುವ ಮೂವತ್ತೆರಡು ಪ್ರಕಾರಗಳು ಈ ರೀತಿ ಇವೆ: ಭ್ರಾಂತ, ಉದ್ಭ್ರಾಂತ, ಆವಿದ್ಧ, ಆಪ್ಲುತ, ವಿಪ್ಲುತ, ಪ್ಲುತ, ಸೃತ, ಸಂಚಾಂತ, ಸಮುದೀರ್ಣ, ನಿಗ್ರಹ, ಪ್ರಗ್ರಹ, ಪದಾವಕರ್ಷಣ, ಸಂಢಾನ, ಮಸ್ತಕ ಭ್ರಮಣ, ಭುಜಭ್ರಮಣ, ಪಾಶ, ಪಾದ, ವಿಬಂಧ, ಭೂಮಿ, ಉದ್ಭ್ರಮಣ, ಗತಿ, ಪ್ರತ್ಯಾಗತಿ, ಆಕ್ಷೇಪ, ಪಾತನ, ಉತ್ಥಾನಕಪ್ಲುತಿ, ಲಘುತಾ, ಸೌಷ್ಠವ ಶೋಭಾ, ಸ್ಥೈಯ, ದೃಢಮುಷ್ಟಿತಾ, ತಿರ್ಯಕ್ಪ್ರಚಾರ ಮತ್ತು ಕಧ್ವೇಪ್ರಚಾರ (ಗೀತಾ ಪ್ರೆಸ್). ↩︎