ಪ್ರವೇಶ
।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।
ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ
ಶ್ರೀ ಮಹಾಭಾರತ
ಖಿಲಭಾಗೇ ಹರಿವಂಶಃ
ವಿಷ್ಣು ಪರ್ವ
ಅಧ್ಯಾಯ 172
ಸಾರ
ಉಷೆಗೆ ಸ್ವಪ್ನದಲ್ಲಿ ಪ್ರಿಯತಮನೊಂದಿಗೆ ಸಮಾಗಮ (1-2). ಉಷೆಯು ಸಖಿಗಳಲ್ಲಿ ತನ್ನ ಚಿಂತೆಯನ್ನು ಹೇಳಿಕೊಳ್ಳುವುದು (3-25). ಕುಂಭಾಂಡಕುಮಾರಿಯ ಸಲಹೆಯಂತೆ ಚಿತ್ರಲೇಖೆಯನ್ನು ಕರೆಯಿಸಿ ಅವಳು ಮಾಡಿದ ಚಿತ್ರಗಳಲ್ಲಿ ಉಷೆಯು ಅನಿರುದ್ಧನನ್ನು ಗುರುತಿಸುವುದು ಮತ್ತು ಅವನನ್ನು ತರಲು ಚಿತ್ರಲೇಖೆಯು ದ್ವಾರಕೆಗೆ ಹೋದುದು (26-98).
19172001 ವೈಶಂಪಾಯನ ಉವಾಚ ।
19172001a ತತ್ರಸ್ಥಾಃ ಪರಮಾ ನಾರ್ಯಶ್ಚಿತ್ರೇಣ ಪರಮಾದ್ಭುತಾಃ ।
19172001c ತತೋ ಹರ್ಮ್ಯೇ ಶಯಾನಾಂ ತು ವೈಶಾಖೇ ಮಾಸಿ ಭಾಮಿನೀಮ್ ।।
19172002a ದ್ವಾದಶ್ಯಾಂ ಶುಕ್ಲಪಕ್ಷಸ್ಯ ಸಖೀಗಣವೃತಾಂ ತದಾ ।
19172002c ಯಥೋಕ್ತಃ ಪುರುಷಃ ಸ್ವಪ್ನೇ ರಮಯಾಮಾಸ ತಾಂ ಶುಭಾಮ್ ।
ವೈಶಂಪಾಯನನು ಹೇಳಿದನು: “ಅಲ್ಲಿದ್ದ ಪರಮ ಸುಂದರ ನಾರಿಯರು ಚಿತ್ರಕಲೆಯಲ್ಲಿ ಪರಮ ಅಧ್ಭುತರಾಗಿದ್ದರು. ಅನಂತರ ವೈಶಾಖ ಮಾಸದ ಶುಕ್ಲಪಕ್ಷದ ದ್ವಾದಶಿಯಂದು ಸಖೀಗಣಗಳಿಂದ ಆವೃತಳಾಗಿದ್ದ ಭಾಮಿನೀ ಉಷೆಯು ತನ್ನ ಪರ್ಯಂಕದ ಮೇಲೆ ಮಲಗಿದ್ದಳು. ಆಗ ಸ್ವಪ್ನದಲ್ಲಿ ಪಾರ್ವತಿಯು ಹೇಳಿದಂತೆ ಓರ್ವ ಪುರುಷನು ಆ ಶುಭೆಯೊಡನೆ ರಮಿಸಿದನು.
19172002e ವಿಚೇಷ್ಟಮಾನಾ ರುದತೀ ದೇವ್ಯಾ ವಚನಚೋದಿತಾ ।।
19172003a ಸಾ ಸ್ವಪ್ನೇ ರಮಿತಾ ತೇನ ಸ್ತ್ರೀಭಾವಂ ಚಾಪಿ ಲಂಭಿತಾ ।
ಅಳುತ್ತಾ ಬೇಡವೆಂದು ನಡೆದುಕೊಂಡರೂ ದೇವೀ ಪಾರ್ವತಿಯ ವಚನದಿಂದ ಪ್ರೇರಿತನಾ ಅವನು ಅವಳನ್ನು ಸ್ಪಪ್ನದಲ್ಲಿ ರಮಿಸಿ ತನ್ನ ಸ್ತ್ರೀಯನ್ನಾಗಿ ಮಾಡಿಕೊಂಡನು.
19172003c ಶೋಣಿತಾಕ್ತಾ ಪ್ರರುದತೀ ಸಹಸೈವೋತ್ಥಿತಾ ನಿಶಿ ।।
19172004a ತಾಂ ತಥಾ ರುದತೀಂ ದೃಷ್ಟ್ವಾ ಸಖೀ ಭಯಸಮನ್ವಿತಾ ।
19172004c ಚಿತ್ರಲೇಖಾ ವಚಃ ಸ್ನಿಗ್ಧಮುವಾಚ ಪರಮಾದ್ಭುತಮ್ ।।
ಯೋನಿರಕ್ತದಿಂದ ತೋಯ್ದ ಅವಳು ರಾತ್ರಿ ತಕ್ಷಣವೇ ಅಳುತ್ತಾ ಮೇಲೆದ್ದಳು. ಹೀಗೆ ಅಳುತ್ತಿರುವ ಅವಳನ್ನು ನೋಡಿ ಭಯಭೀತಳಾದ ಸಖಿ ಚಿತ್ರಲೇಖೆಯು ಮರಮ ಅಧ್ಭುತ ಸ್ನಿಗ್ಧವಾಣಿಯಲ್ಲಿ ಹೇಳಿದಳು:
19172005a ಉಷೇ ಮಾ ಭೈಃ ಕಿಮೇವಂ ತ್ವಂ ರುದತೀ ಪರಿತಪ್ಯಸೇ ।
19172005c ಬಲೇಃ ಸುತಸುತಾ ಚ ತ್ವಂ ಪ್ರಖ್ಯಾತಾ ಕಿಂ ಭಯಾನ್ವಿತಾ ।।
“ಉಷೇ! ಹೆದರಬೇಡ! ಏಕೆ ನೀನು ಈ ರೀತಿ ರೋದಿಸಿ ಪರಿತಪಿಸುತ್ತಿದ್ದೀಯೆ? ನೀನಾದರೋ ಬಲಿಯ ಮಗನ ಮಗಳೆಂದು ಪ್ರಖ್ಯಾತಳಾಗಿರುವೆ. ನಿನಗೇಕೆ ಭಯ?
19172006a ನ ಭಯಂ ವಿದ್ಯತೇ ಲೋಕೇ ತವ ಸುಭ್ರು ವಿಶೇಷತಃ ।
19172006c ಅಭಯಂ ತವ ವಾಮೋರು ಪಿತಾ ದೇವಾಂತಕೋ ರಣೇ ।।
ಸುಭ್ರು! ವಿಶೇಷವಾಗಿ ನಿನಗೆ ಈ ಲೋಕದಲ್ಲಿ ಭಯವೆನ್ನುವುದೇ ಇಲ್ಲ. ವಾಮೋರು! ಅಭಯ ತಾಳು. ನಿನ್ನ ತಂದೆಯು ರಣದಲ್ಲಿ ದೇವತೆಗಳಿಗೂ ಅಂತಕನಾಗಿದ್ದಾನೆ.
19172007a ಉತ್ತಿಷ್ಠೋತ್ತಿಷ್ಠ ಭದ್ರಂ ತೇ ವಿಷಾದಂ ಮಾ ಕೃಥಾಃ ಶುಭೇ ।
19172007c ನೈವಂವಿಧೇಷು ವಾಸೇಷು ಭಯಮಸ್ತಿ ವರಾನನೇ ।।
ಎದ್ದೇಳು! ನಿನಗೆ ಮಂಗಳವಾಗಲಿ! ಶುಭೇ! ವಿಷಾದಿಸಬೇಡ! ವರಾನನೇ! ಇಂಥಹ ನಿವಾಸಸ್ಥಾನಗಳಲ್ಲಿ ಭಯವಾಗುವುದಿಲ್ಲ.
19172008a ಅಸಕೃದ್ದೇವಸಹಿತಃ ಶಚೀಭರ್ತಾ ಸುರೇಶ್ವರಃ ।
19172008c ಅಪ್ರಾಪ್ತ ಏವ ನಗರಂ ಪಿತ್ರಾ ತೇ ಮೃದಿತೋ ರಣೇ ।।
ಸುರೇಶ್ವರ ಶಚೀಪತಿ ಇಂದ್ರನು ದೇವಗಣಗಳ ಸಹಿತ ಆಕ್ರಮಣಿಸಿದರೂ ಈ ನಗರವನ್ನು ಪಡೆದುಕೊಳ್ಳಲು ಆಗಲಿಲ್ಲ. ಏಕೆಂದರೆ ನಿನ್ನ ಪಿತನು ಅವರನ್ನು ರಣರಂಗದಲ್ಲಿಯೇ ಮರ್ದಿಸಿದ್ದನು.
19172009a ಅಯಂ ದೇವಸಮೂಹಸ್ಯ ಭಯದಶ್ಚ ಪಿತಾ ತವ ।
19172009c ಮಹಾಸುರವರಃ ಶ್ರೀಮಾನ್ಬಲೇಃ ಪುತ್ರೋ ಮಹಾಬಲಃ ।।
ನಿನ್ನ ಈ ತಂದೆಯು ದೇವಸಮೂಹಕ್ಕೇ ಭಯವನ್ನುಂಟುಮಾಡುತ್ತಾನೆ. ಬಲಿಯ ಪುತ್ರ ಶ್ರೀಮಾನನು ಮಹಾ ಅಸುರಶ್ರೇಷ್ಠ ಮತ್ತು ಮಹಾಬಲಶಾಲಿ.”
19172010a ಏವಂ ಸಾಭಿಹಿತಾ ಸಖ್ಯಾ ಬಾಣಪುತ್ರೀ ಯಶಸ್ವಿನೀ ।
19172010c ಸ್ವಪ್ನೇ ರೂಪಂ ಯಥಾ ದೃಷ್ಟಂ ನ್ಯವೇದಯದನಿಂದಿತಾ ।।
ಸಖಿಯು ಹೀಗೆ ಹೇಳಲು ಯಶಸ್ವಿನೀ ಬಾಣಪುತ್ರಿ ಅನಿಂದಿತೆಯು ಸ್ವಪ್ನದಲ್ಲಿ ಕಂಡ ರೂಪವನ್ನು ಕಂಡಂತೆ ಅವಳಿಗೆ ನಿವೇದಿಸಿದಳು.
19172011 ಉಷೋವಾಚ ।
19172011a ಏವಂ ಸಂಧರ್ಷಿತಾ ಸಾಧ್ವೀ ಕಥಂ ಜೀವಿತುಮುತ್ಸಹೇ ।
19172012a ಪಿತರಂ ಕಿಂ ನು ವಕ್ಷ್ಯಾಮಿ ದೇವಶತ್ರುಮರಿಂದಮಮ್ ।
ಉಷೆಯು ಹೇಳಿದಳು: “ಸಾಧ್ವಿಯಾಗಿದ್ದ ನನ್ನ ಮೇಲೆ ಈ ರೀತಿ ಬಲಾತ್ಕಾರವಾದ ನಂತರ ನಾನು ಹೇಗೆ ತಾನೇ ಜೀವಿಸಿರಲಿ? ದೇವಶತ್ರು ಅರಿಂದಮ ತಂದೆಗೆ ನಾನು ಏನನ್ನು ಹೇಳಲಿ?
19172012c ಏವಂ ಸಂದೂಷಣಕರೀ ವಂಶಸ್ಯಾಸ್ಯ ಮಹೌಜಸಃ ।।
19172013a ಶ್ರೇಯೋ ಹಿ ಮರಣಂ ಮಹ್ಯಂ ನ ಮೇ ಶ್ರೇಯೋಽದ್ಯ ಜೀವಿತಮ್ ।
ಈ ಮಹಾತೇಜಸ್ವೀ ವಂಶಕ್ಕೆ ಕಲಂಕವನ್ನುಂಟುಮಾಡಿದ್ದೇನೆ. ಮರಣವೇ ನನಗೆ ಶ್ರೇಯಸ್ಕರವಾದುದು. ಜೀವಿಸಿರುವುದರಲ್ಲಿ ಇಂದು ಶ್ರೇಯಸ್ಸಿಲ್ಲ.
19172013c ಈಪ್ಸಿತೋ ವಾ ಯಥಾ ಕೋಽಪಿ ಪುರುಶೋಽಧಿಗತೋ ಹಿ ಮೇ ।।
19172014a ಜಾಗ್ರತೀವ ಯಥಾ ಚಾಹಮವಸ್ಥೈವಂ ಕೃತಾ ಮಮ ।
ಸ್ವಪ್ನದಲ್ಲಿ ನನಗೆ ಬಹಳ ಇಷ್ಟವಾಗಿದ್ದ ಪುರುಷನೋರ್ವನು ಸಿಕ್ಕನು. ಅವನು ಸ್ವಪ್ನದಲ್ಲಿಯೂ ಜಾಗ್ರತಾವಸ್ಥೆಯಲ್ಲಿರುವವನಂತೆ ನನ್ನನ್ನು ಈ ಪರಿಸ್ಥಿತಿಗೆ ತಂದನು.
19172014c ನಿಶಾಯಾಂ ಜಾಗ್ರತೀವಾಹಂ ನೀತಾ ಕೇನ ದಶಾಮಿಮಾಮ್ ।
19172014e ಕಥಮೇವಂ ಕೃತಾ ನಾಮ ಕನ್ಯಾ ಜೀವಿತುಮುತ್ಸಹೇ ।।
ರಾತ್ರಿಯಲ್ಲಿ ಎಚ್ಚರವಿದ್ದವನಂತೆ ನನಗೆ ಯಾರು ಈ ಅವಸ್ಥೆಯನ್ನು ತಂದಿತ್ತರು? ಕನ್ಯೆಯಾಗಿದ್ದರೂ ನನಗೆ ಈ ದಶೆಯುಂಟಾಯಿತು ಎಂದರೆ ನಾನು ಇನ್ನು ಹೇಗೆ ಜೀವಿಸಿರಲಿ?
19172015a ಕುಲೋಪಕ್ರೋಶನಕರೀ ಕುಲಾಂಗಾರೀ ನಿರಾಶ್ರಯಾ ।
19172015c ಜೀವಿತುಂ ನ ಸ್ಪೃಹೇನ್ನಾರೀ ಸಾಧ್ವೀನಾಮಗ್ರತಃ ಸ್ಥಿತಾ ।।
ಹಿಂದೆ ಸಾಧ್ವಿಯರಲ್ಲಿ ಮೊದಲಿಗಳಾಗಿದ್ದ ನಾರಿಯು ಕುಲಕಳಂಕಿತಳಾದರೆ, ಕುಲವನ್ನೇ ಸುಟ್ಟರೆ ಮತ್ತು ನಿರಾಶ್ರಯಳಾದರೆ ಅಂಥವಳು ಜೀವಿಸಿರಬಾರದು.”
19172016a ಇತ್ಯೇವಂ ಬಾಷ್ಪಪೂರ್ಣಾಕ್ಷೀ ಸಖೀಜನವೃತಾ ತದಾ ।
19172016c ವಿಲಲಾಪ ಚಿರಂ ಕಾಲಮುಷಾ ಕಮಲಲೋಚನಾ ।।
ಈ ರೀತಿ ಕಣ್ಣೀರುತುಂಬಿದವಳಾಗಿ ಆ ಕಮಲಲೋಚನೆ ಉಷೆಯು ಸಖೀಜನರಮಧ್ಯೆ ಬಹಳ ಹೊತ್ತು ವಿಲಪಿಸಿದಳು.
19172017a ಅನಾಥವತ್ತಾಂ ರುದತೀಂ ಸಖ್ಯಃ ಸರ್ವಾ ವಿಚೇತಸಃ ।
19172017c ಊಚುರಶ್ರುಪರೀತಾಕ್ಷೀಮುಷಾಂ ಸರ್ವಾಃ ಸಮಾಗತಾಃ ।।
ಅನಾಥೆಯಂತೆ ಅಳುತ್ತಿರುವ ಅವಳನ್ನು ನೋಡಿ ಎಲ್ಲ ಸಖಿಯರೂ ಬುದ್ಧಿಕಳೆದುಕೊಂಡವರಂತಾದರು. ಎಲ್ಲರೂ ಆ ಕಣ್ಣೀರುತುಂಬಿದ ಉಷೆಯನ್ನು ಸುತ್ತಲೂ ಸುತ್ತುವರೆದು ಹೇಳಿದರು:
19172018a ದುಷ್ಟೇನ ಮನಸಾ ದೇವಿ ಶುಭಂ ವಾ ಯದಿ ವಾಶುಭಮ್ ।
19172018c ಕ್ರಿಯತೇ ನ ಚ ತೇ ಸುಭ್ರು ಕಿಂಚಿದ್ದುಷ್ಟಂ ಮನಃ ಶುಭೇ ।।
“ದೇವಿ! ಸುಭ್ರು! ಶುಭೇ! ದುಷ್ಟಮನಸ್ಸಿನಿಂದ ಶುಭ ಅಥವಾ ಅಶುಭಕರ್ಮವನ್ನು ಮಾಡಿದರೆ ಅದರ ಫಲವು ಅನಿಷ್ಟಕಾರಿಯಾಗುತ್ತದೆ. ಆದರೆ ನಿನ್ನ ಮನಸ್ಸಿನಲ್ಲಿ ಸ್ವಲ್ಪವೂ ದುಷ್ಟಭಾವವಿಲ್ಲ.
19172019a ಪ್ರಸಭಂ ದೇವಸಂಯೋಗಾದ್ಯದಿ ಭುಕ್ತಾಸಿ ಭಾಮಿನಿ ।
19172019c ಸ್ವಪ್ನಯೋಗೇನ ಕಲ್ಯಾಣಿ ವ್ರತಲೋಪೋ ನ ವಿದ್ಯತೇ ।।
ಭಾಮಿನಿ! ಕಲ್ಯಾಣಿ! ಒಂದು ವೇಳೆ ದೈವಸಂಯೋಗದಿಂದ ಸ್ವಪ್ನದಲ್ಲಿ ಯಾರಾದರೂ ನಿನ್ನನ್ನು ಉಪಭೋಗಿಸಿದರೆ ಅದರಿಂದ ನಿನ್ನ ಕನ್ಯಾವ್ರತದ ಲೋಪವಾಗುವುದಿಲ್ಲ.
19172020a ವ್ಯಭಿಚಾರೇಣ ತೇ ದೇವಿ ನಾಸ್ತಿ ಕಶ್ಚಿದ್ವ್ಯತಿಕ್ರಮಃ ।
19172020c ನ ಚ ಸ್ವಪ್ನಕೃತೋ ದೋಷೋ ಮರ್ತ್ಯಲೋಕೇಽಸ್ತಿ ಸುಂದರಿ ।।
ದೇವಿ! ನಿನ್ನ ಈ ವ್ಯಭಿಚಾರದಿಂದ ನೀನು ಏನನ್ನೂ ಅತಿಕ್ರಮಿಸಿಲ್ಲ. ಸುಂದರಿ! ಸ್ವಪ್ನದಲ್ಲಿ ಮಾಡಿದ ಅಶುಭ ಕರ್ಮಗಳ ದೋಷವು ಮರ್ತ್ಯಲೋಕದಲ್ಲಿ ಆಗುವುದಿಲ್ಲ.
19172021a ಏವಂ ವಿಪ್ರರ್ಷಯೋ ದೇವಿ ಧರ್ಮಜ್ಞಾಃ ಕಥಯಂತಿ ವೈ ।
19172021c ಮನಸಾ ಚೈವ ವಾಚಾ ಚ ಕರ್ಮಣಾ ಚ ವಿಶೇಷತಃ ।
19172021e ದುಷ್ಟಾ ಯಾ ತ್ರಿಭಿರೇತೈಸ್ತು ಪಾಪಾ ಸಾ ಪ್ರೋಚ್ಯತೇ ಬುಧೈಃ।।
ದೇವಿ! ಧರ್ಮಜ್ಞ ವಿಪ್ರರ್ಷಿಗಳು ಹೀಗೆ ಹೇಳುತ್ತಾರೆ. ಮನಸಾ, ವಾಚಾ ಮತ್ತು ವಿಶೇಷವಾಗಿ ಕರ್ಮತಃ ಈ ಮೂರರಿಂದಲೂ ದೋಷಯುಕ್ತ ಕ್ರಿಯೆಯನ್ನು ಎಸಗಿದರೆ ತಿಳಿದವರು ಅವಳನ್ನು ಪಾಪಿನೀ ಎಂದು ಹೇಳುತ್ತಾರೆ.
19172022a ನ ಚ ತೇ ದೃಶ್ಯತೇ ಭೀರು ಮನಃ ಪ್ರಚಲಿತಂ ಸದಾ ।
19172022c ಕಥಂ ತ್ವಂ ದೋಷಸಂದುಷ್ಟಾ ನಿಯತಾ ಬ್ರಹ್ಮಚಾರಿಣೀ ।।
ಭೀರು! ನಿನ್ನ ಮನಸ್ಸಾದರೋ ಎಂದೂ ಚಂಚಲವಾದದ್ದು ಕಂಡಿಲ್ಲ. ನಿಯಮಪೂರ್ವಕ ಬ್ರಹ್ಮಚಾರಿಣಿಯಾಗಿರುವ ನಿನಗೆ ದೋಷವು ಹೇಗೆ ಉಂಟಾಗುತ್ತದೆ?
19172023a ಯದಿ ಸುಪ್ತಾ ಸತೀ ಸಾಧ್ವೀ ಶುದ್ಧಭಾವಾ ಮನಸ್ವಿನೀ ।
19172023c ಇಮಾಮವಸ್ಥಾಂ ಪ್ರಾಪ್ತಾ ತ್ವಂ ನೈವ ಧರ್ಮೋ ವಿಲುಪ್ಯತೇ ।।
ಸತಿಯೂ ಸಾಧ್ವಿಯೂ ಶುದ್ಧಭಾವದವಳೂ ಮನಸ್ವಿನಿಯೂ ಆದ ನೀನು ನಿದ್ರಿಸುತ್ತಿರುವಾಗ ಈ ಅವಸ್ಥೆಯನ್ನು ಹೊಂದಿದರೆ ಅದರಲ್ಲಿ ನಿನ್ನ ಯಾವ ಧರ್ಮವೂ ಲುಪ್ತವಾಗುವುದಿಲ್ಲ.
19172024a ಯಸ್ಯಾ ದುಷ್ಟಂ ಮನಃ ಪೂರ್ವಂ ಕರ್ಮಣಾ ಚೋಪಪಾದಿತಮ್ ।
19172024c ತಾಮಾಹುರಸತೀಂ ನಾಮ ಸತೀ ತ್ವಮಸಿ ಭಾಮಿನಿ ।।
ಯಾವ ಸ್ತ್ರೀಯ ಮನಸ್ಸು ಮೊದಲು ದೂಷಿತವಾಗಿ ನಂತರ ಕ್ರಿಯೆಯ ಮೂಲಕ ಆ ದೋಷವನ್ನೆಸಗುತ್ತಾಳೋ ಅವಳನ್ನು ಅಸತಿ ಎಂಬ ಹೆಸರಿನಿಂದ ಕರೆಯುತ್ತಾರೆ. ಭಾಮಿನಿ! ನೀನಾದರೋ ಸತಿಯಾಗಿದ್ದೀಯೆ.
19172025a ಕುಲಜಾ ರೂಪಸಂಪನ್ನಾ ನಿಯತಾ ಬ್ರಹ್ಮಚಾರಿಣೀ ।
19172025c ಇಮಾಮವಸ್ಥಾಂ ನೀತಾಸಿ ಕಾಲೋ ಹಿ ದುರತಿಕ್ರಮಃ ।।
ಉತ್ತಮ ಕುಲಪ್ರಸೂತೆಯೂ, ರೂಪಸಂಪನ್ನೆಯೂ, ನಿಯಮಗಳಿಂದ ಬ್ರಹ್ಮಚಾರಿಣಿಯೂ ಆದ ನೀನು ಈ ಅವಸ್ಥೆಯಲ್ಲಿದ್ದೀಯೆ ಎಂದರೆ ಕಾಲವನ್ನು ಮೀರಿಸಲು ಯಾರಿಗೂ ಆಗುವುದಿಲ್ಲ.”
19172026a ಇತ್ಯೇವಮುಕ್ತಾಂ ರುದತೀಂ ಬಾಷ್ಪೇಣಾವೃತಲೋಚನಾಮ್ ।
19172026c ಕುಂಭಾಂಡದುಹಿತಾ ವಾಕ್ಯಂ ಪರಮಂ ತ್ವಿದಮಬ್ರವೀತ್ ।।
ಸಖಿಯರು ಹೀಗೆ ಹೇಳಿದರೂ ಕಣ್ಣೀರು ತುಂಬಿಸಿ ರೋದಿಸುತ್ತಿದ್ದ ಅವಳಿಗೆ ಕುಂಭಾಂಡನ ಮಗಳು ಈ ಪರಮ ವಾಕ್ಯವನ್ನು ಹೇಳಿದಳು:
19172027a ತ್ಯಜ ಶೋಕಂ ವಿಶಾಲಾಕ್ಷಿ ಅಪಾಪಾ ತ್ವಂ ವರಾನನೇ ।
19172027c ಶ್ರುತಂ ಮೇ ಯದಿದಂ ವಾಕ್ಯಂ ಯಾಥಾತಥ್ಯೇನ ತಚ್ಛೃಣು ।।
“ವಿಶಾಲಾಕ್ಷೀ! ವರಾನನೇ! ಶೋಕವನ್ನು ತ್ಯಜಿಸು! ನೀನು ಅಪಾಪಿಯು. ನಾನು ಕೇಳಿದ್ದ ಈ ಮಾತನ್ನು ಇದ್ದಹಾಗೆ ಕೇಳು.
19172028a ಉಷೇ ಯದುಕ್ತಾ ದೇವ್ಯಾಸಿ ಭರ್ತಾರಂ ಧ್ಯಾಯತೀ ತದಾ ।
19172028c ಸಮೀಪೇ ದೇವದೇವಸ್ಯ ಸ್ಮರ ಭಾಮಿನಿ ತದ್ವಚಃ ।।
ಉಷೇ! ಭಾಮಿನಿ! ಅಂದು ದೇವದೇವನ ಸಮೀಪದಲ್ಲಿ ನೀನು ಪತಿಯ ಕುರಿತು ಯೋಚಿಸುತ್ತಿರುವಾಗ ದೇವಿಯು ಏನು ಹೇಳಿದ್ದಳೋ ಅದನ್ನು ಸ್ಮರಿಸಿಕೋ!
19172029a ದ್ವಾದಶ್ಯಾಂ ಶುಕ್ಲಪಕ್ಷಸ್ಯ ವೈಶಾಖೇ ಮಾಸಿ ಯೋ ನಿಶಿ ।
19172029c ಹರ್ಮ್ಯೇ ಶಯಾನಾಂ ರುದತೀಂ ಸ್ತ್ರೀತ್ವಂ ಸಮುಪನೇಷ್ಯತಿ ।।
19172030a ಭವಿತಾ ಸ ಹಿ ತೇ ಭರ್ತಾ ಶೂರಃ ಶತ್ರುನಿಬರ್ಹಣಃ ।
“ವೈಶಾಖಮಾಸದ ಶುಕ್ಲಪಕ್ಷದ ದ್ವಾದಶಿಯ ರಾತ್ರಿ ಮಂಚದಲ್ಲಿ ಮಲಗಿರುವಾಗ ನೀನು ರೋದಿಸುತ್ತಿದ್ದರೂ ನಿನ್ನನ್ನು ತನ್ನ ಸ್ತ್ರೀಯನ್ನಾಗಿ ಮಾಡಿಕೊಳ್ಳುವ ಶತ್ರುಸೂದನ ಶೂರನೇ ನಿನ್ನ ಪತಿಯಾಗುತ್ತಾನೆ.”
19172030c ಇತ್ಯುವಾಚ ವಚೋ ಹೃಷ್ಟಾ ದೇವೀ ತವ ಮನೋಗತಮ್ ।।
19172031a ನ ಹಿ ತದ್ವಚನಂ ಮಿಥ್ಯಾ ಪಾರ್ವತ್ಯಾ ಯದುದಾಹೃತಮ್ ।
19172031c ಸಾ ತ್ವಂ ಕಿಮಿದಮತ್ಯರ್ಥಂ ರೋದಿಷೀಂದುನಿಭಾನನೇ ।।
ಹೃಷ್ಟಳಾದ ದೇವಿಯು ನಿನ್ನ ಮನೋಗತವಾಗಿದ್ದುದನ್ನು ಮಾತಿನಲ್ಲಿ ಹೀಗೆ ಹೇಳಿದ್ದಳು. ಪಾರ್ವತಿಯು ಆಡಿದ್ದ ಮಾತು ಎಂದೂ ಮಿಥ್ಯವಾಗುವುದಿಲ್ಲ. ಇಂದುನಿಭಾನನೇ! ನೀನು ಈ ಘಟನೆಗಾಗಿ ಏಕೆ ರೋದಿಸುತ್ತಿರುವೆ?”
19172032a ಏವಮುಕ್ತಾ ತಯಾ ಬಾಲಾ ಸ್ಮೃತ್ವಾ ದೇವೀವಚಸ್ತತಃ ।
19172032c ಅಭವನ್ನಷ್ಟಶೋಕಾ ಸಾ ಬಾಣಪುತ್ರೀ ಶುಭೇಕ್ಷಣಾ ।।
ಅವಳು ಹೀಗೆ ಹೇಳಲು ದೇವಿಯ ವಚನವನ್ನು ಸ್ಮರಿಸಿಕೊಂಡು ಬಾಲಕಿ ಶುಭೇಕ್ಷಣೆ ಬಾಣಪುತ್ರಿಯು ಶೋಕವನ್ನು ಕಳೆದುಕೊಂಡಳು.
19172033 ಉಷೋವಾಚ ।
19172033a ಸ್ಮರಾಮಿ ಭಾಮಿನಿ ವಚೋ ದೇವ್ಯಾಃ ಕ್ರೀಡಾಗತೇ ಭವೇ ।
19172033c ಯಥೋಕ್ತಂ ಸರ್ವಮಖಿಲಂ ಪ್ರಾಪ್ತಂ ಹರ್ಮ್ಯತಲೇ ಮಯಾ।।
ಉಷೆಯು ಹೇಳಿದಳು: “ಭಾಮಿನೀ! ಭವನ ಕ್ರೀಡೆಗೆಂದು ಹೋಗಿದ್ದಾಗ ದೇವಿಯಾಡಿದ ಮಾತು ನೆನಪಿಗೆ ಬರುತ್ತಿದೆ. ನಾನು ಮಂಚದಮೇಲೆ ಮಲಗಿದ್ದಾಗ ಅವಳು ಹೇಳಿದಂತೆ ಎಲ್ಲವೂ ನನಗಾಯಿತು.
19172034a ಭರ್ತಾ ತು ಮಮ ಯದ್ಯೇಷ ಲೋಕನಾಥಸ್ಯ ಭಾರ್ಯಯಾ ।
19172034c ವ್ಯಾದಿಷ್ಟಃ ಸ ಕಥಂ ಜ್ಞೇಯಸ್ತತ್ರ ಕಾರ್ಯಂ ವಿಧೀಯತಾಮ್ ।।
ಲೋಕನಾಥನ ಭಾರ್ಯೆಯು ಒಂದುವೇಳೆ ಇವನನ್ನೇ ನನ್ನ ಪತಿಯನ್ನಾಗಿ ವಿಧಿಸಿದ್ದಾದರೆ ಅವನ್ಯಾರೆಂದು ತಿಳಿಯುವುದು ಹೇಗೆ? ಇದಕ್ಕೆ ಯಾವುದಾದರೂ ಉಪಾಯವನ್ನು ಹೇಳು.”
19172035a ಇತ್ಯೇವಮುಕ್ತೇ ವಚನೇ ಕುಂಭಾಂಡದುಹಿತಾ ಪುನಃ ।
19172035c ವ್ಯಾಜಹಾರ ಯಥಾನ್ಯಾಯಮರ್ಥತತ್ತ್ತ್ವವಿಶಾರದಾ ।।
ಅವಳು ಹೀಗೆ ಹೇಳಲು ಅರ್ಥತತ್ತ್ವವಿಶಾರದೆ ಕುಂಭಾಂಡನ ಮಗಳು ಯಥಾನ್ಯಾಯವಾದ ಮಾತನ್ನಾಡಿದಳು:
19172036a ನ ಹಿ ತಸ್ಯ ಕುಲಂ ದೇವಿ ನ ಕೀರ್ತಿರ್ನಾಪಿ ಪೌರುಷಮ್ ।
19172036c ಕಶ್ಚಿಜ್ಜಾನಾತಿ ತತ್ತ್ವೇನ ಕಿಮಿದಂ ತ್ವಂ ವಿಮುಹ್ಯಸೇ ।।
“ದೇವಿ! ಅವನ ಕುಲವಾಗಲೀ, ಕೀರ್ತಿಯಾಗಲೀ, ಪೌರುಷವಾಗಲೀ ಯಾವುದೂ ತತ್ತ್ವತಃ ತಿಳಿದಿಲ್ಲ. ನೀನು ಏಕೆ ಮೋಹಗೊಳ್ಳುತ್ತಿರುವೆ?
19172037a ಅದೃಷ್ಟಶ್ಚಾಶ್ರುತಶ್ಚೈವ ದೃಷ್ಟಃ ಸ್ವಪ್ನೇ ಚ ಯಃ ಶುಭೇ ।
19172037c ಕಥಂ ಜ್ಞೇಯೋ ಭವೇದ್ಭೀರು ಸೋಽಸ್ಮಾಭೀ ರತಿತಸ್ಕರಃ ।
ಶುಭೇ! ಸ್ವಪ್ನದಲ್ಲಿ ನೀನು ಯಾರನ್ನೂ ನೋಡಿದ್ದೆಯೋ ಅವನನ್ನು ನಮ್ಮಲ್ಲಿ ಯಾರೂ ನೋಡಿಲ್ಲ ಮತ್ತು ಅವನ ಕುರಿತು ಯಾರೂ ಕೇಳಿಲ್ಲ ಕೂಡ. ಹೀಗಿರುವಾಗ ನೀನು ಹೇಗೆ ತಾನೇ ಆ ರತಿಕಳ್ಳನ ಪತ್ತೇಹಚ್ಚುತ್ತೀಯೆ?
19172037e ಯೇನ ತ್ವಮಸಿತಾಪಾಂಗಿ ಮತ್ತಕಾಶಿನಿ ವಿಕ್ರಮಾತ್ ।।
19172038a ರುದತೀ ಪ್ರಸಭಂ ಭುಕ್ತಾ ಪ್ರವಿಶ್ಯಾಂತಃಪುರಂ ಸಖಿ ।।
19172039a ನ ಹ್ಯಸೌ ಪ್ರಾಕೃತಃ ಕಶ್ಚಿದ್ಯಃ ಪ್ರವಿಷ್ಟಃ ಪ್ರಸಹ್ಯತೇ ।
19172039c ನಗರಂ ಲೋಕವಿಖ್ಯಾತಮೇಕಃ ಶತ್ರುನಿಬರ್ಹಣಃ ।।
ಮತ್ತಕಾಶಿನಿ! ಅಸಿತಾಪಾಂಗಿ! ಸಖಿ! ಅಂತಃಪುರವನ್ನು ಪ್ರವೇಶಿಸಿ ನೀನು ರೋದಿಸುತ್ತಿದ್ದರೂ ಬಲಾತ್ಕಾರವಾಗಿ ನಿನ್ನನ್ನು ಉಪಭೋಗಿಸಿದವನು ಸಾಧಾರಣ ಮನುಷ್ಯನಾಗಿರಲಾರ! ಈ ಲೋಕವಿಖ್ಯಾತ ನಗರವನ್ನು ಓರ್ವನೇ ಪ್ರವೇಶಿಸಿರುವ ಅವನು ಶತ್ರುಮರ್ದನ ವೀರನೇ ಆಗಿರಬೇಕು.
19172040a ಆದಿತ್ಯಾ ವಸವೋ ರುದ್ರಾ ಅಶ್ವಿನೌ ಚ ಮಹೌಜಸೌ ।
19172040c ನ ಶಕ್ತಾಃ ಶೋಣಿತಪುರಂ ಪ್ರವೇಷ್ಟುಂ ಭೀಮವಿಕ್ರಮಾಃ ।।
ಭೀಮವಿಕ್ರಮಿ ಆದಿತ್ಯರು, ವಸುಗಳು, ರುದ್ರರು ಮತ್ತು ಮಹಾ ತೇಜಸ್ವೀ ಅಶ್ವಿನಿಯರೂ ಶೋಣಿತಪುರವನ್ನು ಪ್ರವೇಶಿಸಲು ಶಕ್ತರಿಲ್ಲ.
19172041a ಸೋಽಯಮೇತೈಃ ಶತಗುಣೈರ್ವಿಶಿಷ್ಟಶ್ಚಾರಿಸೂದನಃ ।
19172041c ಪ್ರವಿಷ್ಟಃ ಶೋಣಿತಪುರಂ ಬಾಣಮಾಕ್ರಮ್ಯ ಮೂರ್ಧನಿ ।।
ಬಾಣನ ಮೂರ್ಧನಿಯನ್ನು ಅತಿಕ್ರಮಿಸಿ ಶೋಣಿತಪುರವನ್ನು ಪ್ರವೇಶಿಸಿದ ಅರಿಸೂದನನು ಇವರಿಗಿಂತ ನೂರುಪಟ್ಟು ಗುಣವಿಶಿಷ್ಟನಾಗಿರಬೇಕು.
19172042a ಯಸ್ಯಾ ನೈವಂವಿಧೋ ಭರ್ತಾ ಭವೇದ್ಯುದ್ಧವಿಶಾರದಃ ।
19172042c ಕಸ್ತಸ್ಯಾ ಜೀವಿತೇನಾರ್ಥೋ ಭೋಗೈರ್ವಾಸ್ತ್ಯಂಬುಜೇಕ್ಷಣೇ ।।
ಅಂಬುಜಾಕ್ಷಿ! ಪತಿಯು ಇಂತಹ ಯುದ್ಧವಿಶಾರದನಾಗಿರದಿದ್ದರೆ ಅಂಥವಳ ಜೀವನ ಅಥವಾ ಭೋಗಗಳ ಅರ್ಥವಾದರೂ ಏನು?
19172043a ಧನ್ಯಾಸ್ಯನುಗೃಹೀತಾಸಿ ಯಸ್ಯಾಸ್ತೇ ಪತಿರೀದೃಶಃ ।
19172043c ಪ್ರಾಪ್ತೋ ದೇವ್ಯಾಃ ಪ್ರಸಾದೇನ ಕಂದರ್ಪಸಮವಿಕ್ರಮಃ ।।
ನೀನು ಧನ್ಯಳಾಗಿದ್ದೀಯೆ. ದೇವಿಯ ಪ್ರಸಾದ ಮತ್ತು ಅನುಗ್ರದಿಂದ ನಿನಗೆ ಇಂತಹ ಕಂದರ್ಪಸಮವಿಕ್ರಮಿ ಪತಿಯು ದೊರಕಿದ್ದಾನೆ.
19172044a ಇದಂ ತು ಯತ್ಕಾರ್ಯತಮಂ ಶೃಣು ತ್ವಂ ತನ್ಮಯೇರಿತಮ್ ।
19172044c ವಿಜ್ಞೇಯೋ ಯಸ್ಯ ಪುತ್ರೋ ವೈ ಯನ್ನಾಮಾ ಯತ್ಕುಲಶ್ಚ ಸಃ।।
ಈಗ ಯಾವ ಮಹತ್ಕಾರ್ಯವಿದೆಯೋ ಅದನ್ನು ನನ್ನಿಂದ ಕೇಳು. ಮೊದಲು ಅವನು ಯಾರ ಪುತ್ರನೆಂದು ತಿಳಿದುಕೊಳ್ಳಬೇಕು. ಅವನ ಹೆಸರೇನು? ಮತ್ತು ಯಾವ ಕುಲದಲ್ಲಿ ಹುಟ್ಟಿದ್ದಾನೆ?”
19172045a ಇತ್ಯೇವಮುಕ್ತೇ ವಚನೇ ತತ್ರೋಷಾ ಕಾಮಮೋಹಿತಾ ।
19172045c ಉವಾಚ ಕುಂಭಾಂಡಸುತಾಂ ಕಥಂ ಜ್ಞಾಸ್ಯಾಮ್ಯಹಂ ಸಖಿ ।।
ಈ ಮಾತನ್ನು ಕೇಳಿ ಉಷೆಯು ಕಾಮಮೋಹಿತಳಾಗಿ “ಸಖಿ! ಇವನನ್ನು ನಾನು ಹೇಗೆ ತಿಳಿಯಬಲ್ಲೆನು?” ಎಂದು ಕುಂಭಾಂಡಸುತೆಗೆ ಹೇಳಿದಳು.
19172046a ತ್ವಮೇವ ಚಿಂತಯ ಸಖಿ ನೋತ್ತರಂ ಪ್ರತಿಭಾತಿ ಮೇ ।
19172046c ಸ್ವಕಾರ್ಯೇ ಮುಹ್ಯತೇ ಲೋಕೋ ಯಥಾ ಜೀವಂ ಲಭಾಮ್ಯಹಮ್।।
“ಸಖಿ! ಇದರ ಕುರಿತು ನೀನೇ ಯೋಚಿಸು. ನನಗೆ ಏನೊಂದೂ ಹೊಳೆಯುತ್ತಿಲ್ಲ. ಸ್ವಕಾರ್ಯದಲ್ಲಿ ಜನರು ಮೋಹಿತರಾಗುತ್ತಾರೆ. ನನಗೆ ಹೊಸ ಜೀವವನ್ನು ಕೊಡುವ ಉಪಾಯವನ್ನು ನೀನೇ ಆಲೋಚಿಸು.”
19172047a ಉಷಾಯಾ ವಚನಂ ಶ್ರುತ್ವಾ ರಾಮಾ ವಾಕ್ಯಮಿದಂ ಪುನಃ ।
19172047c ಉವಾಚ ರುದತೀಂ ಚೋಷಾಂ ಕುಂಭಾಂಡದುಹಿತಾ ಸಖೀ ।।
ಉಷೆಯ ಈ ಮಾತನ್ನು ಕೇಳಿ ಅವಳ ಸಖಿ ಕುಂಭಾಂಡಸುತೆ ರಾಮೆಯು ರೋದಿಸುತ್ತಿದ್ದ ಉಷೆಗೆ ಪುನಃ ಇದನ್ನು ಹೇಳಿದಳು:
19172048a ಕುಶಲಾ ತೇ ವಿಶಾಲಾಕ್ಷಿ ಸರ್ವಥಾ ಸಂಧಿವಿಗ್ರಹೇ ।
19172048c ಅಪ್ಸರಾ ಚಿತ್ರಲೇಖಾ ವೈ ಕ್ಷಿಪ್ರಂ ವಿಜ್ಞಾಪ್ಯತಾಂ ಸಖಿ ।।
“ವಿಶಾಲಾಕ್ಷಿ! ಸಖಿ! ಬೇಗನೇ ಈ ವಿಷಯವನ್ನು ಅಪ್ಸರೆ ಚಿತ್ರಲೇಖೆಗೆ ತಿಳಿಸು. ಅವಳು ಸಂಧಿ-ವಿಗ್ರಹ ಎಲ್ಲದರಲ್ಲಿಯೂ ಕುಶಲೆಯು.
19172049a ಅಸ್ಯಾಃ ಸರ್ವಮಶೇಷೇಣ ತ್ರೈಲೋಕ್ಯಂ ವಿದಿತಂ ಸದಾ ।
19172049c ಏವಮುಕ್ತಾ ತದೈವೋಷಾ ಹರ್ಷೇಣಾಗತವಿಸ್ಮಯಾ ।।
ಅವಳಿಗೆ ಸದಾ ತ್ರೈಲೋಕ್ಯವೆಲ್ಲವೂ ಏನೂ ಬಿಡದೇ ತಿಳಿದಿದೆ.” ಇದನ್ನು ಕೇಳಿ ಉಷೆಯು ಹರ್ಷಿತಳೂ ವಿಸ್ಮಿತಳೂ ಆದಳು.
19172050a ತಾಮಪ್ಸರಸಮಾನಾಯ್ಯ ಚಿತ್ರಲೇಖಾಂ ಸಖೀಂ ಪ್ರಿಯಾಮ್ ।
19172050c ಕೃತಾಂಜಲಿಪುಟಾ ದೀನಾ ಉಷಾ ವಚನಮಬ್ರವೀತ್ ।।
ಉಷೆಯು ತನ್ನ ಪ್ರಿಯಸಖಿ ಅಪ್ಸರೆ ಚಿತ್ರಲೇಖೆಯನ್ನು ಕರೆಯಿಸಿ ಕೈಮುಗಿದು ದೀನಳಾಗಿ ಹೇಳಿಕೊಂಡಳು.
19172051a ಸಾ ತಚ್ಛ್ರುತ್ವಾ ತು ವಚನಮುಷಾಯಾಃ ಪರಿಕೀರ್ತಿತಮ್ ।
19172051c ಆಶ್ವಾಸಯಾಮಾಸ ಸಖೀ ಬಾಣಪುತ್ರೀಂ ಯಶಸ್ವಿನೀಂ ।।
ಉಷೆಯು ಆಡಿದ ಮಾತನ್ನು ಕೇಳಿ ಸಖಿ ಚಿತ್ರಲೇಖೆಯು ಯಶಸ್ವಿನೀ ಬಾಣಪುತ್ರಿಗೆ ಆಶ್ವಾಸನೆಯನ್ನು ನೀಡಿದಳು.
19172052a ತತಃ ಸಾ ವಿನಯಾವಿಷ್ಟಾ ವಚನಂ ಪ್ರಾಹ ದುರ್ವಚಮ್ ।
19172052c ಚಿತ್ರಲೇಖಾಮಪ್ಸರಸಂ ಪ್ರಣಯಾತ್ತಾಂ ಸಖೀಮಿದಮ್ ।।
ಆಗ ಅವಳು ವಿನಯಾವಿಷ್ಟಳಾಗಿ ಹೇಳಲು ಕಷ್ಟವಾದ ಆದರೆ ಆಡಲು ಯೋಗ್ಯವಾದ ಈ ಮಾತನ್ನು ತನ್ನ ಸಖಿ ಅಪ್ಸರೆ ಚಿತ್ರಲೇಖೆಗೆ ಪ್ರಣಯದಿಂದ ಹೇಳಿದಳು.
19172053a ಪರಮಂ ಶೃಣು ಮೇ ವಾಕ್ಯಂ ಯತ್ತ್ವಾಂ ವಕ್ಷ್ಯಾಮಿ ಭಾಮಿನಿ ।
19172053c ಭರ್ತಾರಂ ಯದಿ ಮೇಽದ್ಯ ತ್ವಂ ನಾನಯಿಷ್ಯಸಿ ಮತ್ಪ್ರಿಯಮ್।।
19172054a ಕಾಂತಂ ಪದ್ಮಪಲಾಶಾಕ್ಷಂ ಮತ್ತಮಾತಂಗಗಾಮಿನಮ್ ।
19172054c ತ್ಯಕ್ಷ್ಯಾಮ್ಯಹಂ ತತಃ ಪ್ರಾಣಾನಚಿರಾತ್ತನುಮಧ್ಯಮೇ ।।
“ಭಾಮಿನಿ! ತನುಮಧ್ಯಮೆ! ನಿನಗೆ ನಾನು ಏನನ್ನು ಹೇಳುತ್ತಿದ್ದೇನೋ ಆ ಪರಮ ವಾಕ್ಯವನ್ನು ಕೇಳು. ಇಂದು ನೀನು ನನಗೆ ಪ್ರಿಯನಾದ, ಕಾಂತ, ಪದ್ಮಪಲಾಶಾಕ್ಷ, ಮತ್ತಮಾತಂಗಗಾಮಿನಿ ಪತಿಯನ್ನು ತರದೇ ಇದ್ದರೆ ನಾನು ಬೇಗನೇ ಪ್ರಾಣಗಳನ್ನು ತ್ಯಜಿಸುತ್ತೇನೆ.”
19172055a ಚಿತ್ರಲೇಖಾಬ್ರವೀದ್ವಾಕ್ಯಮುಷಾಂ ಹರ್ಷಯತೀ ಶನೈಃ ।
19172055c ನೈಷೋಽರ್ಥಃ ಶಕ್ಯತೇಽಸ್ಮಾಭಿರ್ವೇತ್ತುಂ ಭಾಮಿನಿ ಸುವ್ರತೇ।।
ಚಿತ್ರಲೇಖೆಯು ಉಷೆಯನ್ನು ಹರ್ಷಗೊಳಿಸುತ್ತಾ ಮೆಲ್ಲನೇ ಈ ಮಾತನ್ನಾಡಿದಳು: “ಸುವ್ರತೇ! ಭಾಮಿನಿ! ನಿನ್ನ ಈ ಮನೋರಥವನ್ನು ನಮಗೆ ಅರ್ಥಮಾಡಿಕೊಳ್ಳಲು ಶಕ್ಯವಿಲ್ಲ.
19172056a ನ ಕುಲೇನ ನ ವರ್ಣೇನ ನ ಶೀಲೇನ ನ ರೂಪತಃ ।
19172056c ನ ದೇಶತಶ್ಚ ವಿಜ್ಞಾತಃ ಸ ಹಿ ಚೋರೋ ಮಯಾ ಸಖಿ ।।
ಸಖಿ! ನಿನ್ನ ಈ ಚಿತ್ತಚೋರನ ಕುಲ, ವರ್ಣ, ಶೀಲ, ರೂಪ, ದೇಶ ಯಾವುದೂ ನನಗೆ ತಿಳಿದಿಲ್ಲ.
19172057a ಕಿಂ ತು ಕರ್ತುಂ ಯಥಾ ಶಕ್ಯಂ ಬುದ್ಧಿಪೂರ್ವಂ ಮಯಾ ಸಖಿ।
19172057c ಪ್ರಾಪ್ತಂ ಚ ಶೃಣು ಮೇ ವಾಕ್ಯಂ ಯಥಾ ಕಾಮಮವಾಪ್ಸ್ಯಸಿ ।।
ಸಖಿ! ಆದರೂ ನಾನು ಬುದ್ಧಿಪೂರ್ವಕವಾಗಿ ಏನನ್ನು ಮಾಡಲು ಶಕ್ಯವೋ ಅದನ್ನು ಮಾಡುತ್ತೇನೆ. ನಿನ್ನ ಕಾಮನೆಯನ್ನು ಹೇಗೆ ಪಡೆದುಕೊಳ್ಳಬಲ್ಲೆ ಎನ್ನುವುದರ ಕುರಿತು ನನ್ನ ಈ ಮಾತನ್ನು ಕೇಳು.
19172058a ದೇವದಾನವಯಕ್ಷಾಣಾಂ ಗಂಧರ್ವೋರಗರಕ್ಷಸಾಮ್ ।
19172058c ಯೇ ವಿಶಿಷ್ಟಾಃ ಪ್ರಭಾವೇಣ ರೂಪೇಣಭಿಜನೇನ ಚ ।।
19172059a ಯಥಾಪ್ರಭಾವಂ ತಾನ್ಸರ್ವಾನಾಲಿಖಿಷ್ಯಾಮ್ಯಂ ಸಖಿ ।
19172059c ಮನುಷ್ಯಲೋಕೇ ಯೇ ಚಾಪಿ ಪ್ರವರಾ ಲೋಕವಿಶ್ರುತಾಃ ।।
ಸಖಿ! ದೇವ, ದಾನವ, ಯಕ್ಷ, ಗಂಧರ್ವ, ಉರಗ, ರಾಕ್ಷಸರಲ್ಲಿ ಯಾರು, ಪ್ರಭಾವ, ರೂಪ, ಕುಲಗಳಲ್ಲಿ ಶ್ರೇಷ್ಠರೋ, ಮತ್ತು ಮನುಷ್ಯಲೋಕದಲ್ಲಿ ಕೂಡ ಯಾರ ಪ್ರವರವು ಲೋಕವಿಶ್ರುತವೋ, ಅವರವರ ಪ್ರಭಾವಕ್ಕೆ ತಕ್ಕುದಾಗಿ ಎಲ್ಲರ ಚಿತ್ರಗಳನ್ನೂ ಬರೆಯುತ್ತೇನೆ.
19172060a ಸಪ್ತರಾತ್ರೇಣ ತೇ ಭೀರು ದರ್ಶಯಿಷ್ಯಾಮಿ ತಾನಹಮ್ ।
19172060c ತತೋ ವಿಜ್ಞಾಯ ಪಾದಸ್ಥಂ ಭರ್ತಾರಂ ಪ್ರತಿಪತ್ಸ್ಯಸೇ ।।
ಭೀರು! ಏಳು ರಾತ್ರಿಗಳಲ್ಲಿ ನಾನು ಅವುಗಳನ್ನು ತೋರಿಸುತ್ತೇನೆ. ಆಗ ತಿಳಿದು ನಿನ್ನ ಪತಿಯನ್ನು ನಿನ್ನ ಪಾದದ ಬಳಿ ಹೊಂದುತ್ತೀಯೆ.”
19172061a ಸಾ ಚಿತ್ರಲೇಖಯಾ ಪ್ರೋಕ್ತಾ ಉಷಾ ಹಿತಚಿಕೀರ್ಷಯಾ ।
19172061c ಕ್ರಿಯತಾಮೇವಮಿತ್ಯಾಹ ಚಿತ್ರಲೇಖಾಂ ಸಖೀಂ ಪ್ರಿಯಾಮ್ ।।
ಉಷೆಯ ಹಿತವನ್ನೇ ಬಯಸಿ ಚಿತ್ರಲೇಖೆಯು ಇದನ್ನು ಹೇಳಲು ಅವಳು ಪ್ರಿಯ ಸಖಿ ಚಿತ್ರಲೇಖೆಗೆ ಹಾಗೆಯೇ ಮಾಡು ಎಂದಳು.
19172062a ತತಃ ಕುಶಲಹಸ್ತತ್ವಾದ್ಯಥಾಲೇಖ್ಯಂ ಸಮಂತತಃ ।
19172062c ಇತ್ಯುಕ್ತ್ವಾ ಸಪ್ತರಾತ್ರೇಣ ಕೃತ್ವಾ ಲೇಖ್ಯಗತಾಂಸ್ತು ತಾನ್ ।।
19172063a ಚಿತ್ರಪಟ್ಟಗತಾನ್ಮುಖ್ಯಾನಾನಯಾಮಾಸ ಶೋಭನಾ ।
ಅನಂತರ ಇದ್ದಂತೆ ಚಿತ್ರಬರೆಯುವುದರಲ್ಲಿ ಕುಶಲ ಹಸ್ತಳಾದ ಶೋಭನೆ ಚಿತ್ರಲೇಖೆಯು ಹೀಗೆ ಹೇಳಿ ಏಳು ರಾತ್ರಿಗಳಲ್ಲಿ ಎಲ್ಲೆಡೆಯ ಮುಖ್ಯ ಪುರುಷರ ಚಿತ್ರಪಟಗಳನ್ನು ಬರೆದು ತಂದಳು.
19172063c ತತಃ ಪ್ರಾಸ್ತೀರ್ಯ ಪಟ್ಟಂ ಸಾ ಚಿತ್ರಲೇಖಾ ಸ್ವಯಂ ಕೃತಮ್।।
19172064a ಉಷಾಯೈ ದರ್ಶಯಾಮಾಸ ಸಖೀನಾಂ ತು ವಿಶೇಷತಃ ।
ಅನಂತರ ಚಿತ್ರಲೇಖೆಯು ತಾನೇ ಮಾಡಿದ್ದ ಚಿತ್ರಪಟಗಳನ್ನು ಹರಡಿ ಉಷೆಗೆ, ಅದರಲ್ಲೂ ವಿಶೇಷವಾಗಿ ಅವಳ ಸಖಿಗಳಿಗೆ ತೋರಿಸಿದಳು.
19172064c ಏತೇ ದೇವೇಷು ಯೇ ಮುಖ್ಯಾಸ್ತಥಾ ದಾನವವಂಶಜಾಃ ।।
19172065a ಕಿಂನರೋರಗಯಕ್ಷಾಣಾಂ ರಾಕ್ಷಸಾನಾಂ ಸಮಂತತಃ ।
19172065c ಗಂಧರ್ವಾಸುರದೈತ್ಯಾನಾಂ ಯೇ ಚಾನ್ಯೇ ಭೋಗಿನಃ ಸ್ಮೃತಾಃ ।।
“ಇವರು ದೇವತೆಗಳಲ್ಲಿರುವ ಮುಖ್ಯಪುರುಷರು. ಇವರು ದಾನವವಂಶದವರು. ಅನ್ಯರು ಕಿನ್ನರರು, ಉರಗರು, ಯಕ್ಷರು, ರಾಕ್ಷಸರು, ಗಂಧರ್ವರು, ಅಸುರರು, ದೈತ್ಯರು ಮತ್ತು ಸರ್ಪಗಳಲ್ಲಿ ಮುಖ್ಯರೆಂದು ಖ್ಯಾತರಾದವರು.
19172066a ಮನುಷ್ಯಾಣಾಂ ಚ ಸರ್ವೇಷಾಂ ಯೇ ವಿಶಿಷ್ಟತಮಾ ನರಾಃ ।
19172066c ತಾನೇತಾನ್ಪಶ್ಯ ಸರ್ವಾಂಸ್ತ್ವಾಂ ಯಥೈವ ಲಿಖಿತಾನ್ಮಯಾ ।।
ಇವರು ಸರ್ವ ಮನುಷ್ಯರಲ್ಲಿ ವಿಶಿಷ್ಟರಾದ ನರರು. ಇವರೆಲ್ಲರ ಚಿತ್ರಗಳನ್ನೂ ನಾನು ಹೇಗೆ ಬರೆದಿದ್ದೇನೆ. ನೋಡು.
19172067a ಯಸ್ತೇ ಭರ್ತಾ ಯಥಾರೂಪಃ ಸ ಮಯಾ ಲಿಖಿತಃ ಸಖಿ ।
19172067c ತಂ ತ್ವಂ ಪ್ರತ್ಯಭಿಜಾನೀಹಿ ಸ್ವಪ್ನೇ ಯಂ ದೃಷ್ಟವತ್ಯಸಿ ।।
ಸಖಿ! ಯಾರು ನಿನ್ನ ಪತಿಯಾಗುತ್ತಾನೋ ಅವನ ರೂಪವನ್ನು ಯಥಾವತ್ತಾಗಿ ಚಿತ್ರಿಸಿದ್ದೇನೆ. ನೀನು ಸ್ವಪ್ನದಲ್ಲಿ ಕಂಡವನನ್ನು ಈ ಚಿತ್ರಗಳಲ್ಲಿ ಗುರುತಿಸು.”
19172068a ತತಃ ಕ್ರಮೇಣ ಸರ್ವಾಂಸ್ತಾಂದೃಷ್ಟ್ವಾ ಸಾ ಮತ್ತಕಾಶಿನೀ ।
19172068c ದೇವದಾನವಗಂಧರ್ವವಿದ್ಯಾಧರಗಣಾನಥ ।
19172068e ಅತೀತ್ಯ ಚ ಯದೂನ್ಸರ್ವಾಂದದರ್ಶ ಯದುನಂದನಮ್ ।।
ಅನಂತರ ಆ ಮತ್ತಕಾಶಿನಿಯು ಕ್ರಮೇಣ ಆ ಎಲ್ಲ ಚಿತ್ರಪಟಗಳನ್ನೂ ನೋಡಿ, ದೇವ-ದಾನವ-ಗಂಧರ್ವ-ವಿದ್ಯಾಧರ ಗಣಗಳ ಚಿತ್ರಪಟಗಳನ್ನು ಹಿಂದೆಹಾಕಿ ಸರ್ವ ಯದುಗಳನ್ನು ಮತ್ತು ಯದುನಂದನ ಕೃಷ್ಣನನ್ನು ನೋಡಿದಳು.
19172069a ತತ್ರಾನಿರುದ್ಧಂ ದೃಷ್ಟ್ವಾ ಸಾ ವಿಸ್ಮಯೋತ್ಫುಲ್ಲಲೋಚನಾ ।
19172069c ಉವಾಚ ಚಿತ್ರಲೇಖಾಂ ತಾಮಯಂ ಚೌರಃ ಸ ವೈ ಸಖಿ ।।
19172070a ಯೇನಾಹಂ ದೂಷಿತಾ ಪೂರ್ವಂ ಸ್ವಪ್ನೇ ಹರ್ಮ್ಯಗತಾ ಸತೀ ।
19172070c ಸೋಽಯಂ ವಿಜ್ಞಾತರೂಪೋ ಮೇ ಕುತೋಽಯಂ ರತಿತಸ್ಕರಃ ।।
ಅಲ್ಲಿಯೇ ಅನಿರುದ್ಧನ ಚಿತ್ರವನ್ನು ನೋಡಿ ಅವಳ ಕಣ್ಣುಗಳು ಆಶ್ಚರ್ಯದಿಂದ ಅರಳಿದವು. ಅವಳು ಹೇಳಿದಳು: “ಸಖೀ! ಇವನೇ ಆ ಕಳ್ಳನು. ಇವನೇ ಹಿಂದೆ ಸಾಧ್ವೀ ಸತಿಯಾದ ನಾನು ಮಂಚದ ಮೇಲೆ ಮಲಗಿದ್ದಾಗ ಸ್ಪಪ್ನದಲ್ಲಿ ನನ್ನನ್ನು ದೂಷಿತಳನ್ನಾಗಿ ಮಾಡಿದವನು. ಇವನ ರೂಪವನ್ನು ನಾನು ಚೆನ್ನಾಗಿ ಗುರುತಿಸುತ್ತೇನೆ. ಆದರೆ ಈ ರತಿಕಳ್ಳನು ಎಲ್ಲಿಂದ ಬಂದ?
19172071a ಚಿತ್ರಲೇಖೇ ವದಸ್ವೈನಂ ತತ್ತ್ವತೋ ಮಮ ಶೋಭನೇ ।
19172071c ಕುಲಶೀಲಾಭಿಜನತೋ ನಾಮ ಕಿಂ ಚಾಸ್ಯ ಭಾಮಿನಿ ।।
19172072a ತತಃ ಪಶ್ಚಾದ್ವಿಧಾಸ್ಯಾಮಿ ಕಾರ್ಯಸ್ಯಾಸ್ಯ ವಿನಿಶ್ಚಯಮ್ ।
ಚಿತ್ರಲೇಖೇ! ಶೋಭನೇ! ಇವನ ಕುರಿತು ನನಗೆ ಸರಿಯಾಗಿ ಹೇಳು. ಭಾಮಿನಿ! ಇವನ ಕುಲ, ಶೀಲ, ಅಭಿಜನ, ಮತ್ತು ಹೆಸರು ಏನು? ಇವೆಲ್ಲವನ್ನೂ ತಿಳಿದ ನಂತರ ನಾನು ನನ್ನ ಕರ್ತವ್ಯವನ್ನು ನಿಶ್ಚಯಿಸುತ್ತೇನೆ.”
19172072 ಚಿತ್ರಲೇಖೋವಾಚ ।
19172072c ಅಯಂ ತ್ರೈಲೋಕ್ಯನಾಥಸ್ಯ ನಪ್ತಾ ಕೃಷ್ಣಸ್ಯ ಧೀಮತಃ ।
19172072e ಭರ್ತಾ ತವ ವಿಶಾಲಾಕ್ಷಿ ಪ್ರಾದ್ಯುಮ್ನಿರ್ಭೀಮವಿಕ್ರಮಃ ।।
ಚಿತ್ರಲೇಖೆಯು ಹೇಳಿದಳು: “ವಿಶಾಲಾಕ್ಷೀ! ನಿನ್ನ ಈ ಪತಿಯು ತ್ರೈಲೋಕ್ಯನಾಥ ಧೀಮತ ಕೃಷ್ಣನ ಮೊಮ್ಮಗ. ಪ್ರದ್ಯುಮ್ನನ ಮಗ ಮತ್ತು ಭೀಮವಿಕ್ರಮಿ.
19172073a ನ ಹ್ಯಸ್ತಿ ತ್ರಿಷು ಲೋಕೇಷು ಸದೃಶೋಽಸ್ಯ ಪರಾಕ್ರಮೇ ।
19172073c ಉತ್ಪಾಟ್ಯ ಪರ್ವತಾನೇವ ಪರ್ವತೈರೇಷ ಶಾತಯೇತ್ ।।
ಮೂರು ಲೋಕಗಳಲ್ಲಿಯೂ ಇವನ ಸಮನಾದ ಪರಾಕ್ರಮವುಳ್ಳವರಿಲ್ಲ. ಇವನು ಪರ್ವತಗಳನ್ನೇ ಕಿತ್ತು ಆ ಪರ್ವತಗಳಿಂದಲೇ ಶತ್ರುಗಳನ್ನು ಸಂಹರಿಸಬಲ್ಲನು.
19172074a ಧನ್ಯಾಸ್ಯನುಗೃಹೀತಾಸಿ ಯಸ್ಯಾಸ್ತೇ ಯದುಪುಂಗವಃ ।
19172074c ತ್ರ್ಯಕ್ಷಪತ್ನ್ಯಾ ಸಮಾದಿಷ್ಟಃ ಸದೃಶಃ ಸಜ್ಜನಃ ಪತಿಃ ।।
ನೀನು ಧನ್ಯಳು. ಅನುಗ್ರಹಿತಳು. ಇದರಿಂದಾಗಿಯೇ ನಿನಗೆ ತ್ರ್ಯಕ್ಷನ ಪತ್ನಿ ಪಾರ್ವತಿಯು ಅನಿರುದ್ಧನನ್ನು ಪತಿರೂಪದಲ್ಲಿ ನೀಡಿದ್ದಾಳೆ. ಇವನ ಪೂರ್ವಜನು ಶ್ರೇಷ್ಠತಮ ಪುರುಷನು.”
19172075 ಉಷೋವಾಚ ।
19172075a ತ್ವಮೇವಾತ್ರ ವಿಶಾಲಾಕ್ಷಿ ಯೋಗ್ಯಾ ಭವ ವರಾನನೇ ।
19172075c ನ ಶಕ್ಯಾ ಹಿ ಗತಿಶ್ಚಾನ್ಯಾ ಅಗತ್ಯಾ ಮೇ ಗತಿರ್ಭವ ।।
ಉಷೆಯು ಹೇಳಿದಳು: “ವಿಶಾಲಾಕ್ಷೀ! ವರಾನನೇ! ನೀನೇ ಈ ಕಾರ್ಯವನ್ನು ಮಾಡಲು ಯೋಗ್ಯಳು. ಅನ್ಯ ಯಾರೂ ನನ್ನ ಗತಿಯಾಗಲಾರರು. ಗತಿಯಿಲ್ಲದ ನನಗೆ ನೀನು ಗತಿಯಾಗು.
19172076a ಅಂತರಿಕ್ಷಚರಾ ಚ ತ್ವಂ ಯೋಗಿನೀ ಕಾಮರೂಪಿಣೀ ।
19172076c ಉಪಾಯಸ್ಯಾಸ್ಯ ಕುಶಲಾ ಕ್ಷಿಪ್ರಮಾನಯ ಮೇ ಪ್ರಿಯಮ್ ।।
ನೀನು ಅಂತರಿಕ್ಷಚಾರಿಣಿಯು. ಯೋಗಿನಿ ಮತ್ತು ಕಾಮರೂಪಿಣಿಯು. ಉಪಾಯಗಳಲ್ಲಿಯೂ ನೀನು ಕುಶಲೆಯು. ಬೇಗನೇ ನನ್ನ ಪ್ರಿಯನನ್ನು ಕರೆದುಕೊಂಡು ಬಾ.
19172077a ಉಪಾಯಶ್ಚಿಂತ್ಯತಾಂ ಭೀರು ಸಂಪ್ರತರ್ಕ್ಯ ಪ್ರಿಯೇ ಸುಖಮ್ ।
19172077c ಸಿದ್ಧಾರ್ಥಾ ಸಂನಿವರ್ತಸ್ವ ಯೇನೋಪಾಯೇನ ಸುಂದರಿ ।।
ಭೀರು! ಸುಂದರಿ! ಪ್ರಿಯೇ! ನನ್ನ ಸುಖದ ಕುರಿತು ತರ್ಕಿಸಿ ಚಿಂತಿಸಿ ಉಪಾಯವನ್ನು ಮಾಡು. ಆ ಉಪಾಯದಿಂದ ಯಶಸ್ವಿಯಾಗಿ ಹಿಂದಿರುಗು.
19172078a ಭವೇದಾಪತ್ಸು ಯನ್ಮಿತ್ರಂ ತನ್ಮಿತ್ರಂ ಶಸ್ಯತೇ ಬುಧೈಃ ।
19172078c ಕಾಮಾರ್ತಾ ಚಾಸ್ಮಿ ಸುಶ್ರೋಣಿ ಭವ ಮೇ ಪ್ರಾಣಧಾರಿಣೀ ।।
ಆಪತ್ಕಾಲದಲ್ಲಿ ಮಿತ್ರನಾದವನನ್ನೇ ತಿಳಿದವರು ಮಿತ್ರನೆಂದು ಪ್ರಶಂಸಿಸುತ್ತಾರೆ. ಸುಶ್ರೋಣಿ! ಕಾಮಾರ್ತಳಾಗಿದ್ದೇನೆ. ನನ್ನ ಪ್ರಾಣಧಾರಿಣಿಯಾಗು.
19172079a ಯದ್ಯೇನಂ ಮೇ ವಿಶಾಲಾಕ್ಷಿ ಭರ್ತಾರಮಮರೋಪಮಮ್ ।
19172079c ಅದ್ಯ ನಾನಯಸಿ ಕ್ಷಿಪ್ರಂ ಪ್ರಾಣಾಂಸ್ತ್ಯಕ್ಷ್ಯಾಮ್ಯಹಂ ಶುಭೇ ।।
ವಿಶಾಲಾಕ್ಷೀ! ಶುಭೇ! ಇಂದು ನೀನು ಅಮರೋಪಮನಾದ ನನ್ನ ಪತಿಯನ್ನು ಕರೆದುಕೊಂಡು ಬರದೇ ಇದ್ದರೆ ನಾನು ಪ್ರಾಣಗಳನ್ನು ತೊರೆಯುತ್ತೇನೆ.”
19172080a ಉಷಾಯಾ ವಚನಂ ಶ್ರುತ್ವಾ ಚಿತ್ರಲೇಖಾಬ್ರವೀದ್ವಚಃ ।
19172080c ಶ್ರೋತುಮರ್ಹಸಿ ಕಲ್ಯಾಣಿ ವಚನಂ ಮೇ ಶುಚಿಸ್ಮಿತೇ ।।
ಉಷೆಯ ಮಾತನ್ನು ಕೇಳಿ ಚಿತ್ರಲೇಖೆಯು ಹೇಳಿದಳು: “ಕಲ್ಯಾಣೀ! ಶುಚಿಸ್ಮಿತೇ! ನನ್ನ ಮಾತನ್ನು ಕೇಳಬೇಕು.
19172081a ಯಥಾ ಬಾಣಸ್ಯ ನಗರೀ ರಕ್ಷ್ಯತೇ ದೇವಿ ಸರ್ವಶಃ ।
19172081c ದ್ವಾರಕಾಪಿ ತಥಾ ಭೀರು ದುರಾಧರ್ಷಾ ಸುರೈರಪಿ ।।
ದೇವಿ! ಭೀರು! ಹೇಗೆ ಬಾಣನ ನಗರಿಯು ಎಲ್ಲಕಡೆಗಳಿಂದ ರಕ್ಷಿತವಾಗಿದೆಯೋ ಹಾಗೆ ದ್ವಾರಕೆಯೂ ಸುರರಿಗೂ ಅಬೇದ್ಯವಾದುದು.
19172082a ಅಯಸ್ಮಯಪ್ರತಿಚ್ಛನ್ನಾ ಗುಪ್ತದ್ವಾರಾ ಚ ಸಾ ಪುರೀ ।
19172082c ಗುಪ್ತಾ ವೃಷ್ಣಿಕುಮಾರೈಶ್ಚ ತಥಾ ದ್ವಾರಕವಾಸಿಭಿಃ ।।
ಉಕ್ಕಿನ ಮಿಡಗಳಿವೆ. ಆ ಪುರಿಯ ದ್ವಾರಗಳು ಸಂಪೂರ್ಣ ಸುರಕ್ಷಿತವಾಗಿದೆ. ವೃಷ್ಣಿಕುಮಾರರು ಮತ್ತು ದ್ವಾರಕಾವಾಸಿಗಳು ಅದನ್ನು ರಕ್ಷಿಸುತ್ತಿದ್ದಾರೆ.
19172083a ಪಾಂತೇ ಸಲಿಲಸಂಯುಕ್ತಾ ವಿಹಿತಾ ವಿಶ್ವಕರ್ಮಣಾ ।
19172083c ರಕ್ಷ್ಯತೇ ಪುರುಷೈರ್ಘೋರೈಃ ಪದ್ಮನಾಭಸ್ಯ ಶಾಸನಾತ್ ।।
ಸಮುದ್ರದ ತೀರವಿರುವ ಆ ಪುರಿಯನ್ನು ವಿಶ್ವಕರ್ಮನು ನಿರ್ಮಿಸಿದ್ದನು. ಪದ್ಮನಾಭ ಕೃಷ್ಣನ ಶಾಸನದಂತೆ ಘೋರ ಪುರುಷರು ಅದರ ರಕ್ಷಣೆಯನ್ನು ಮಾಡುತ್ತಾರೆ.
19172084a ಶೈಲಪ್ರಾಕಾರಪರಿಖಾದುರ್ಗಮಾರ್ಗಪ್ರವೇಶಿನೀ ।
19172084c ಸಪ್ತಪ್ರಾಕಾರರಚಿತಾ ಪರ್ವತೈರ್ಧಾತುಮಂಡಿತೈಃ ।।
ಪರ್ವತವೇ ಅದರ ಪ್ರಾಕಾರ. ಸಮುದ್ರವೇ ಅದರ ಕೋಡಿ. ದುರ್ಗಮಾರ್ಗದಿಂದಲೇ ಅದನ್ನು ಪ್ರವೇಶಿಸಬೇಕು. ಅದಕ್ಕೆ ಧಾತುಮಂಡಿತ ಪರ್ವತಗಳ ಏಳು ಕೋಟೆಗಳಿವೆ.
19172085a ನ ಚ ಶಕ್ಯಮವಿಜ್ಞಾತೈಃ ಪ್ರವೇಷ್ಟುಂ ದ್ವಾರಕಾಂ ಪುರೀಮ್ ।
19172085c ಆತ್ಮಾನಂ ಮಾಂ ಚ ರಕ್ಷಸ್ವ ಪಿತರಂ ಚ ವಿಶೇಷತಃ ।।
ಅಪರಿಚಿತನು ದ್ವಾರಕಾ ಪುರಿಯನ್ನು ಪ್ರವೇಶಿಸಲು ಶಕ್ಯವಿಲ್ಲ. ನಿನ್ನನ್ನು ಮತ್ತು ವಿಶೇಷತಃ ನಿನ್ನ ತಂದೆಯನ್ನು ರಕ್ಷಿಸು.”
19172086 ಉಷೋವಾಚ ।
19172086a ತವ ಯೋಗಪ್ರಭಾವೇಣ ಶಕ್ಯಂ ತತ್ರ ಪ್ರವೇಶನಮ್ ।
19172086c ಕಿಂ ಮೇ ಬಹುವಿಲಾಪೇನ ಶ್ರೂಯತಾಂ ಸಖಿ ಕಾರಣಮ್1 ।।
ಉಷೆಯು ಹೇಳಿದಳು: “ನಿನ್ನ ಯೋಗಪ್ರಭಾವದಿಂದ ಅಲ್ಲಿ ಪ್ರವೇಶಿಸಲು ನಿನಗೆ ಶಕ್ಯವಿದೆ. ಸಖಿ! ನನ್ನ ಈ ಬಹುವಿಲಾಪಕ್ಕೆ ಕಾರಣವನ್ನು ಕೇಳು.
19172087a ಅನಿರುದ್ಧಸ್ಯ ವದನಂ ಪೂರ್ಣಚಂದ್ರಸಮಪ್ರಭಮ್ ।
19172087c ಯದ್ಯಹಂ ತನ್ನ ಪಶ್ಯಾಮಿ ಯಾಸ್ಯಾಮಿ ಯಮಸಾದನಮ್ ।।
ಪೂರ್ಣಚಂದ್ರಸಮ ಪ್ರಭೆಯಿರುವ ಅನಿರುದ್ಧನ ವದನವನ್ನು ಇಂದು ನಾನು ಕಾಣದೇ ಹೋದರೆ ಯಮಸಾದನಕ್ಕೆ ಹೊರಟುಹೋಗುತ್ತೇನೆ.
19172088a ದೂತಮಾಸಾದ್ಯ ಕಾರ್ಯಾಣಾಂ ಸಿದ್ಧಿರ್ಭವತಿ ಭಾಮಿನಿ ।
19172088c ತಸ್ಮಾದ್ದೌತ್ಯೇನ ಮೇ ಗಚ್ಛ ಜೀವಂತೀಂ ಮಾಂ ಯದೀಚ್ಛಸಿ ।।
ಭಾಮಿನಿ! ದೂತನಿಂದ ಕಾರ್ಯಗಳ ಸಿದ್ಧಿಯಾಗುತ್ತದೆ. ನಾನು ಜೀವಿತವಿರಬೇಕೆಂದು ಇಚ್ಛಿಸುವೆಯಾದರೆ ನನ್ನ ದೂತಿಯಾಗಿ ಹೋಗು.
19172089a ಯದಿ ತ್ವಂ ಮೇ ವಿಜಾನಾಸಿ ಸಖ್ಯಂ ಪ್ರೇಮ್ಣಾ ಚ ಭಾಷಿತಮ್।
19172089c ಕ್ಷಿಪ್ರಮಾನಯ ಮೇ ಕಾಂತಂ ತವಾಸ್ಮಿ ಶರಣಂ ಗತಾ ।।
ನೀನು ನನ್ನ ಸಖ್ಯವನ್ನು ಮತ್ತು ಈ ಪ್ರೇಮಪೂರ್ವಕ ಮಾತನ್ನು ತಿಳಿದುಕೊಂಡಿದ್ದರೆ ಬೇಗನೇ ನನ್ನ ಕಾಂತನನ್ನು ಕರೆದುಕೊಂಡು ಬಾ. ನಿನ್ನ ಶರಣು ಬಂದಿದ್ದೇನೆ.
19172090a ಜೀವಿತಸ್ಯ ಹಿ ಸಂದೇಹಃ ಕ್ಷಯಂ ಚೈವ ಕುಲಸ್ಯ ಚ ।
19172090c ಕಾಮಾರ್ತಾ ಹಿ ನ ಪಶ್ಯಂತಿ ಕಾಮಿನ್ಯೋ ಮದವಿಕ್ಲವಾಃ ।।
ಪ್ರಾಣಗಳಿಗೆ ಸಂದೇಹವಾಗಿರಲಿ ಮತ್ತು ಕುಲದ ಕ್ಷಯವೇ ಆಗಲಿ, ಕಾಮಪೀಡಿತ ಮದಮತ್ತ ಕಾಮಿನಿಯರು ಇವನ್ನು ನೋಡಲಾರರು.
19172091a ಪ್ರಯತ್ನೋ ಯುಜ್ಯತೇ ಕಾರ್ಯೇಷ್ವಿತಿ ಶಾಸ್ತ್ರನಿದರ್ಶನಮ್ ।
19172091c ತ್ವಂ ಚ ಶಕ್ತಾ ವಿಶಾಲಾಕ್ಷಿ ದ್ವಾರಕಾಯಾಃ ಪ್ರವೇಶನೇ ।।
19172092a ಸಂಸ್ತುತಾಸಿ ಮಯಾ ಭೀರು ಕುರು ಮೇ ಪ್ರಿಯದರ್ಶನಮ್ ।
ಕಾರ್ಯಗಳಿಗೆ ಪ್ರಯತ್ನಮಾಡಬೇಕು ಎಂದು ಶಾಸ್ತ್ರನಿದರ್ಶನವಿದೆ. ವಿಶಾಲಾಕ್ಷಿ! ದ್ವಾರಕೆಯನ್ನು ಪ್ರವೇಶಿಸಲು ನೀನು ಶಕ್ತಳಾಗಿದ್ದೀಯೆ. ಭೀರು! ಸ್ತುತಿಸಿದ್ದೇನೆ. ನನ್ನ ಪ್ರಿಯನ ದರ್ಶನ ಮಾಡಿಸು!”
19172092 ಚಿತ್ರಲೇಖಾ ಉವಾಚ ।
19172092c ಸರ್ವಥಾ ಸಂಸ್ತುತಾ ತೇಽಹಂ ವಾಕ್ಯೈರಮೃತಸೋದರೈಃ ।।
19172093a ಕಾರಿತಾ ಚ ಸಮುದ್ಯೋಗಂ ಪ್ರಿಯೈಃ ಕಾಂತೈಶ್ಚ ಭಾಷಿತೈಃ ।
19172093c ಏಷಾ ಗಚ್ಛಾಮ್ಯಹಂ ಭೀರು ಕ್ಷಿಪ್ರಂ ವೈ ದ್ವಾರಕಾಂ ಪುರೀಮ್ ।।
ಚಿತ್ರಲೇಖೆಯು ಹೇಳಿದಳು: “ಅಮೃತೋಪಮ ಮಾತುಗಳಿಂದ ಸರ್ವಥಾ ನೀನು ನನ್ನನ್ನು ಸ್ತುತಿಸಿದ್ದೀಯೆ. ನಿನ್ನ ಪ್ರಿಯ ಮತ್ತು ಮನೋರಮ ಮಾತುಗಳಿಂದ ನೀನು ನನ್ನನ್ನು ಈ ಕಾರ್ಯವನ್ನು ಕೈಗೊಳ್ಳಲು ವಿವಶಳನ್ನಾಗಿ ಮಾಡಿದ್ದೀಯೆ. ಭೀರು! ಇದೋ! ಶೀಘ್ರದಲ್ಲಿಯೇ ದ್ವಾರಕಾ ಪುರಿಗೆ ಹೋಗುತ್ತೇನೆ.
19172094a ಭರ್ತಾರಮಾನಯಾಮ್ಯದ್ಯ ತವ ವೃಷ್ಣಿಕುಲೋದ್ಭವಮ್ ।
19172094c ಅನಿರುದ್ಧಂ ಮಹಾಬಾಹುಂ ಪ್ರವಿಶ್ಯ ದ್ವಾರಕಾಂ ಪುರೀಮ್ ।।
ಇಂದೇ ದ್ವಾರಕಾ ಪುರಿಯನ್ನು ಪ್ರವೇಶಿಸಿ ನಿನ್ನ ಪತಿ ವೃಷ್ಣಿಕುಲೋದ್ಭವ ಮಹಾಬಾಹು ಅನಿರುದ್ಧನನ್ನು ಕರೆತರುತ್ತೇನೆ.”
19172095a ಸಾ ವಚಸ್ತಥ್ಯಮಶಿವಂ ದಾನವಾನಾಂ ಭಯಾವಹಮ್ ।
19172095c ಉಕ್ತ್ವಾ ಚಾಂತರ್ಹಿತಾ ಕ್ಷಿಪ್ರಂ ಚಿತ್ರಲೇಖಾ ಮನೋಜವಾ ।।
ಅವಳ ಈ ಮಾತನ್ನು ನಿಜವಾಗಿಸುವುದು ದಾನವರಿಗೆ ಅಮಂಗಳವೂ ಭಯವನ್ನು ತರುವಂಥದ್ದೂ ಆಗಿತ್ತು. ಇದನ್ನು ಹೇಳಿ ಮನೋವೇಗದ ಚಿತ್ರಲೇಖೆಯು ತಕ್ಷಣವೇ ಅಂತರ್ಹಿತಳಾದಳು.
19172096a ಸಖೀಭಿಃ ಸಹಿತಾ ಹ್ಯೂಷಾ ಚಿಂತಯಂತೀ ತು ಸಾ ಸ್ಥಿತಾ ।
19172096c ತೃತೀಯೇ ತು ಮುಹೂರ್ತೇ ಸಾ ನಷ್ಟಾ ಬಾಣಪುರಾತ್ತದಾ ।।
ಉಷೆಯು ಸಖಿಗಳೊಂದಿಗೆ ಚಿಂತಿಸುತ್ತಾ ಅಲ್ಲಿಯೇ ನಿಂತಳು. ಮೂರನೇ ಮುಹೂರ್ತದಲ್ಲಿ ಚಿತ್ರಲೇಖೆಯು ಬಾಣಪುರದಿಂದ ಅದೃಶ್ಯಳಾದಳು.
19172097a ಸಖೀ ಪ್ರಿಯಂ ಚಿಕೀರ್ಷಂತೀ ಪೂಜಯಂತೀ ತಪೋಧನಾನ್।
19172097c ಕ್ಷಣೇನ ಸಮನುಪ್ರಾಪ್ತಾ ದ್ವಾರಕಾಂ ಕೃಷ್ಣಪಾಲಿತಾಮ್ ।।
ಸಖಿಗೆ ಪ್ರಿಯವಾದುದನ್ನು ಮಾಡಲು ಬಯಸಿದ ಅವಳು ತಪೋಧನರನ್ನು ಪೂಜಿಸುತ್ತಾ ಕ್ಷಣದಲ್ಲಿಯೇ ಕೃಷ್ಣಪಾಲಿತ ದ್ವಾರಕೆಯನ್ನು ತಲುಪಿದಳು.
19172098a ಕೈಲಾಸಶಿಖರಾಕಾರೈಃ ಪ್ರಾಸಾದೈರುಪಶೋಭಿತಾಮ್ ।
19172098c ದದರ್ಶ ದ್ವಾರಕಾಂ ರಮ್ಯಾಂ ದಿವಿ ತಾರಾಮಿವ ಸ್ಥಿತಾಮ್ ।।
ಕೈಲಾಸಶಿಖರಾಕಾರದ ಪ್ರಾಸಾದಗಳಿಂದ ಶೋಭಿತವಾಗಿದ್ದ, ದಿವಿಯಲ್ಲಿ ನಕ್ಷತ್ರದಂತೆ ಹೊಳೆಯುತ್ತಿದ್ದ ರಮ್ಯ ದ್ವಾರಕೆಯನ್ನು ಅವಳು ನೋಡಿದಳು.”
ಸಮಾಪ್ತಿ
ಇತಿ ಶ್ರೀಮಹಾಭಾರತೇ ಖಿಲೇಷು ಹರಿವಂಶೇ ವಿಷ್ಣುಪರ್ವಣಿ ಉಷಾಹರಣೇ ಚಿತ್ರಲೇಖಾಯಾ ದ್ವಾರಕಾಗಮನೇ ದ್ವಿಸಪ್ತತ್ಯಧಿಕಶತತಮೋಽಧ್ಯಾಯಃ।।
-
ಬಹುನಾ ಕಿಂ ಪ್ರಲಾಪೇನ ಪ್ರತಿಜ್ಞಾ ಶ್ರೂಯತಾಂ ಮಮ|| (ಗೀತಾ ಪ್ರೆಸ್). ↩︎