ಪ್ರವೇಶ
।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।
ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ
ಶ್ರೀ ಮಹಾಭಾರತ
ಖಿಲಭಾಗೇ ಹರಿವಂಶಃ
ವಿಷ್ಣು ಪರ್ವ
ಅಧ್ಯಾಯ 170
ಸಾರ
ಜನಮೇಜಯನು ಬಾಣಾಸುರನ ಕುರಿತು ವೈಶಂಪಾಯನನಲ್ಲಿ ಪ್ರಶ್ನಿಸುವುದು (1-6). ಭಗವಾನ್ ಶಂಕರನು ಬಾಣಾಸುರನನ್ನು ತನ್ನ ಮತ್ತು ದೇವೀ ಪಾರ್ವತಿಯ ಪುತ್ರರೂಪದಲ್ಲಿ ಸ್ವೀಕರಿಸುವುದು (7-23). ಬಾಣಾಸುರನು ಅವನೊಂದಿಗೆ ಯುದ್ಧದ ವರವನ್ನು ಬೇಡಿ ಪಡೆದುಕೊಳ್ಳುವುದು (24-36). ಇದರಿಂದಾಗಿ ಬಾಣಾಸುರನ ಮಂತ್ರಿ ಕುಂಭಾಂಡನು ಚಿಂತಿತನಾದುದು (37-88).
19170001 ಜನಮೇಜಯ ಉವಾಚ ।
19170001a ಭೂಯ ಏವ ಮಹಾಬಾಹೋರ್ಯದುಸಿಂಹಸ್ಯ ಧೀಮತಃ ।
19170001c ಕರ್ಮಾನ್ಯಪರಿಮೇಯಾಣಿ ಶ್ರುತಾನಿ ದ್ವಿಜಸತ್ತಮ ।।
19170002a ತ್ವತ್ತಃ ಶ್ರುತವತಾಂ ಶ್ರೇಷ್ಠ ವಾಸುದೇವಸ್ಯ ಧೀಮತಃ ।
ಜನಮೇಜಯನು ಹೇಳಿದನು: “ದ್ವಿಜಸತ್ತಮ! ವಿದ್ವಾಂಸರಲ್ಲಿ ಶ್ರೇಷ್ಠ! ನಿನ್ನಿಂದ ನಾನು ಮಹಾಬಾಹು ಯದುಸಿಂಹ ಧೀಮಂತ ವಾಸುದೇವನ ಅಪರಿಮೇಯ ಕರ್ಮಗಳ ಕುರಿತು ಪುನಃ ಕೇಳಿದೆ.
19170002c ಯತ್ತ್ವಯಾ ಕಥಿತಂ ಪೂರ್ವಂ ಬಾಣಂ ಪ್ರತಿ ಮಹಾಸುರಮ್ ।।
19170003a ತದಹಂ ಶ್ರೋತುಮಿಚ್ಛಾಮಿ ವಿಸ್ತರೇಣ ತಪೋಧನ ।
ತಪೋಧನ! ಹಿಂದೆ ನೀನು ಮಹಾಸುರ ಬಾಣನ ಕುರಿತು ಹೇಳಿದ್ದೆ. ಅದನ್ನು ನಾನು ವಿಸ್ತಾರವಾಗಿ ಕೇಳಬಯಸುತ್ತೇನೆ.
19170003c ಕಥಂ ಚ ದೇವದೇವಸ್ಯ ಪುತ್ರತ್ವಮಸುರೋ ಗತಃ ।।
19170004a ಯೋಽಭಿಗುಪ್ತಃ ಸ್ವಯಂ ಬ್ರಹ್ಮಂಛಂಕರೇಣ ಮಹಾತ್ಮನಾ ।
19170004c ಸಹವಾಸಂ ಗತೇನೈವ ಸಗಣೇನ ಗುಹೇನ ತು ।।
ಬ್ರಹ್ಮನ್! ಆ ಅಸುರನು ಹೇಗೆ ದೇವದೇವನ ಪುತ್ರತ್ವವನ್ನು ಪಡೆದುಕೊಂಡನು? ಯಾವ ಕಾರಣದಿಂದಾಗಿ ಸ್ವಯಂ ಮಹಾತ್ಮ ಶಂಕರನು ಅವನ ರಕ್ಷಕನಾದನು? ಗಣಗಳೊಂದಿಗೆ ಗುಹನೂ ಕೂಡ ಅವನ ಜೊತೆಯಲ್ಲಿ ಏಕೆ ವಾಸಿಸತೊಡಗಿದನು?
19170005a ಬಲೇರ್ಬಲವತಃ ಪುತ್ರೋ ಜ್ಯೇಷ್ಠೋ ಭ್ರಾತೃಶತಸ್ಯ ಯಃ ।
19170005ca ವೃತೋ ಬಾಹುಸಹಸ್ರೇಣ ದಿವ್ಯಾಸ್ತ್ರಶತಧಾರಿಣಾ ।।
ಬಲವಾನ್ ಬಲಿಯ ಪುತ್ರನಾದ ಅವನು ತನ್ನ ನೂರು ಸಹೋದರರಲ್ಲಿ ಜ್ಯೇಷ್ಠನಾಗಿದ್ದನು. ನೂರಾರು ದಿವ್ಯಾಸ್ತ್ರಗಳನ್ನು ಧರಿಸುವ ಸಹಸ್ರ ಬಾಹುಗಳಿಂದ ಕೂಡಿದ್ದನು.
19170006a ಅಸಂಖ್ಯೈಶ್ಚ ಮಹಾಕಾಯೈರ್ಮಹಾಬಲಶತೈರ್ವೃತಃ ।
19170006c ವಾಸುದೇವೇನ ಸ ಕಥಂ ಬಾಣಃ ಸಂಖ್ಯೇ ಪರಾಜಿತಃ ।।
19170007a ಸಂರಬ್ಧಶ್ಚೈವ ಯುದ್ಧಾರ್ಥೀ ಜೀವನ್ಮುಕ್ತಃ ಕಥಂ ಚ ಸಃ ।
ಅಸಂಖ್ಯ ಮಹಾಕಾಯ ಮತ್ತು ನೂರಾರು ಮಹಾಬಲ ಅಸುರರಿಂದ ಕೂಡಿದ್ದ ಆ ಬಾಣನು ಯುದ್ಧದಲ್ಲಿ ವಾಸುದೇವನಿಂದ ಹೇಗೆ ಪರಾಜಿತನಾದನು? ಆವೇಶದಿಂದ ಯುದ್ಧಾರ್ಥಿಯಾದ ಅವನು ಹೇಗೆ ಜೀವನ್ಮುಕ್ತನಾದನು?”
19170007 ವೈಶಂಪಾಯನ ಉವಾಚ ।
19170007c ಶೃಣುಷ್ವಾವಹಿತೋ ರಾಜನ್ಕೃಷ್ಣಸ್ಯಾಮಿತತೇಜಸಃ ।।
19170008a ಮನುಷ್ಯಲೋಕೇ ಬಾಣೇನ ಯಥಾಭೂದ್ವಿಗ್ರಹೋ ಮಹಾನ್ ।
ವೈಶಂಪಾಯನನು ಹೇಳಿದನು: “ರಾಜನ್! ಮನುಷ್ಯಲೋಕದಲ್ಲಿ ಅಮಿತತೇಜಸ್ವೀ ಕೃಷ್ಣನು ಬಾಣನೊಂದಿಗೆ ಹೇಗೆ ಮಹಾಯುದ್ಧವನ್ನೆಸಗಿದನು ಎನ್ನುವುದನ್ನು ಏಕಾಗ್ರಚಿತ್ತನಾಗಿ ಕೇಳು.
19170008c ವಾಸುದೇವೇನ ಯತ್ರಾಸೌ ರುದ್ರಸ್ಕಂದಸಹಾಯವಾನ್ ।।
19170009a ಬಲಿಪುತ್ರೋ ರಣಶ್ಲಾಘೀ ಜಿತ್ವಾ ಜೀವನ್ವಿಸರ್ಜಿತಃ ।
ಅಲ್ಲಿ ರುದ್ರ-ಸ್ಕಂದರು ಸಹಾಯಕರಾಗಿದ್ದ ರಣಶ್ಲಾಘೀ ಬಲಿಪುತ್ರನನ್ನು ವಾಸುದೇವನು ಗೆದ್ದಿದ್ದರೂ ಅವನನ್ನು ಜೀವಂತ ಬಿಟ್ಟುಬಿಟ್ಟಿದ್ದನು.
19170009c ತಥಾ1 ಚಾಸ್ಯ ವರೋ ದತ್ತಃ ಶಂಕರೇಣ ಮಹಾತ್ಮನಾ ।।
19170010a ನಿತ್ಯಂ ಸಾಂನಿಧ್ಯತಾಂ ಚೈವ ಗಾಣಪತ್ಯಂ ತಥಾಕ್ಷಯಮ್ ।
19170010c ಯಥಾ ಬಾಣಸ್ಯ ತದ್ಯುದ್ಧಂ ಜೀವನ್ಮುಕ್ತೋ ಯಥಾ ಚ ಸಃ ।।
19170011a ಯಥಾ ಚ ದೇವದೇವಸ್ಯ ಪುತ್ರತ್ವಂ ಸೋಽಸುರೋ ಗತಃ ।
19170011c ಯದರ್ಥಂ ಚ ಮಹದ್ಯುದ್ಧಂ ತತ್ಸರ್ವಮಖಿಲಂ ಶೃಣು ।।
ಮಹಾತ್ಮ ಶಂಕರನು ಅವನಿಗೆ ನಿತ್ಯ ಸಾನ್ನಿಧ್ಯತೆಯ ಮತ್ತು ಅಕ್ಷಯ ಗಣಪತಿ ಪದವಿಯ ವರವನ್ನು ಇತ್ತುದರ, ಬಾಣಾಸುರನ ಆ ಯುದ್ಧ ಮತ್ತು ಅದರಲ್ಲಿ ಅವನು ಜೀವನ್ಮುಕ್ತನಾದುದರ, ಆ ಅಸುರನು ದೇವದೇವನ ಪುತ್ರತ್ವವನ್ನು ಪಡೆದುದರ ಮತ್ತು ಯಾವ ಕಾರಣಕ್ಕಾಗಿ ಆ ಮಹಾಯುದ್ಧವು ನಡೆಯಿತು ಎನ್ನುವುದೆಲ್ಲವನ್ನೂ ಕೇಳು.
19170012a ದೃಷ್ಟ್ವಾ ತತಃ2 ಕುಮಾರಸ್ಯ ಕ್ರೀಡತಶ್ಚ ಮಹಾತ್ಮನಃ ।
19170012c ಬಲಿಪುತ್ರೋ ಮಹಾವೀರ್ಯೋ ವಿಸ್ಮಯಂ ಪರಮಂ ಗತಃ ।।
ಒಮ್ಮೆ ಮಹಾತ್ಮ ಕುಮಾರ ಸ್ಕಂದನು ಕ್ರೀಡೆಯಲ್ಲಿ ತೊಡಗಿರುವಾಗ ಮಹಾವೀರ್ಯಶಾಲೀ ಬಲಿಪುತ್ರನು ಪರಮ ವಿಸ್ಮಿತನಾದನು.
19170013a ತಸ್ಯ ಬುದ್ಧಿಃ ಸಮುತ್ಪನ್ನಾ ತಪಶ್ಚರ್ತುಂ ಸುದುಷ್ಕರಮ್ ।
19170013c ರುದ್ರಸ್ಯಾರಾಧನಾರ್ಥಾಯ ದೇವಸ್ಯ ಸ್ಯಾಂ ಯಥಾ ಸುತಃ ।।
ಆಗ ಅವನಲ್ಲಿ ದೇವನ ಸುತನಾಗುವಂತೆ ರುದ್ರನನ್ನು ಆರಾಧಿಸಲು ದುಷ್ಕರ ತಪಸ್ಸನ್ನು ತಪಿಸುವ ಬುದ್ಧಿಯು ಹುಟ್ಟಿಕೊಂಡಿತು.
19170014a ತತೋಽಗ್ಲಪಯದಾತ್ಮಾನಂ ತಪಸಾ ಶ್ಲಾಘತೇ ಚ ಸಃ ।
19170014c ದೇವಶ್ಚ ಪರಮಂ ತೋಷಂ ಜಗಾಮ ಚ ಸಹೋಮಯಾ ।।
ಆಗ ಅವನು ತಪಸ್ಸಿನ ಮೂಲಕ ತನ್ನ ಶರೀರವನ್ನು ಶೋಷಿಸತೊಡಗಿದನು. ತನ್ನ ತಪಸ್ಸನ್ನು ತಾನೇ ಹೊಗಳಿಕೊಳ್ಳುತ್ತಿದ್ದನು ಕೂಡ. ಉಮೆಯೊಂದಿಗೆ ದೇವನು ಅವನ ಮೇಲೆ ಪರಮ ಸಂತುಷ್ಟನಾದನು.
19170015a ನೀಲಕಂಠಃ ಪರಾಂ ಪ್ರೀತಿಂ ಗತ್ವಾ ಚಾಸುರಮಬ್ರವೀತ್ ।
19170015c ವರಂ ವರಯ ಭದ್ರಂ ತೇ ಯತ್ತೇ ಮನಸಿ ವರ್ತತೇ ।।
ಪರಮ ಪ್ರೀತನಾದ ನೀಲಕಂಠನು ಹೋಗಿ ಅಸುನರಿಗೆ ಹೇಳಿದನು: “ನಿನಗೆ ಮಂಗಳವಾಗಲಿ! ನಿನ್ನ ಮನಸ್ಸಿನಲ್ಲಿರುವ ವರವನ್ನು ಕೇಳಿಕೋ!”
19170016a ಅಥ ಬಾಣೋಽಬ್ರವೀದ್ವಾಕ್ಯಂ ದೇವದೇವಂ ಮಹೇಶ್ವರಮ್ ।
19170016c ದೇವ್ಯಾಃ ಪುತ್ರತ್ವಮಿಚ್ಛಾಮಿ ತ್ವಯಾ ದತ್ತಂ ತ್ರಿಲೋಚನ ।।
ಆಗ ಬಾಣನು ದೇವದೇವ ಮಹೇಶ್ವರನಿಗೆ ಹೇಳಿದನು: “ತ್ರಿಲೋಚನ! ದೇವಿಗೆ ನೀನು ನೀಡಿದ ಪುತ್ರತ್ವವನ್ನು ಇಚ್ಛಿಸುತ್ತೇನೆ.”
19170017a ಶಂಕರಸ್ತು ತಥೇತ್ಯುಕ್ತ್ವಾ ರುದ್ರಾಣೀಮಿದಮಬ್ರವೀತ್ ।
19170017c ಕನೀಯಾನ್ಕಾರ್ತಿಕೇಯಸ್ಯ ಪುತ್ರೋಽಯಂ ಪ್ರತಿಗೃಹ್ಯತಾಮ್ ।।
ಶಂಕರನಾದರೋ ಹಾಗೆಯೇ ಆಗಲಿ ಎಂದು ಹೇಳಿ ರುದ್ರಾಣಿಗೆ ಇದನ್ನು ಹೇಳಿದನು: “ಕಾರ್ತಿಕೇಯನಿಗೂ ಕಿರಿಯ ಪುತ್ರನನ್ನಾಗಿ ಇವನನ್ನು ಸ್ವೀಕರಿಸು!
19170018a ಯತ್ರೋತ್ಥಿತೋ ಮಹಾಸೇನಃ ಸೋಽಗ್ನಿಜೋ ರುಧಿರೇ ಪುರೇ।
19170018c ತತ್ರೋದ್ದೇಶೇ ಪುರಂ ಚಾಸ್ಯ ಭವಿಷ್ಯತಿ ನ ಸಂಶಯಃ ।।
ಅಗ್ನಿಯ ಮಹಾಸೇನನು ಪ್ರಾದುರ್ಭವಿಸಿದ್ದ ರುಧಿರಪುರವು ಇವನ ರಾಜಶಾನಿಯಾಗುವುದು. ಅದರಲ್ಲಿ ಸಂಶಯವಿಲ್ಲ.
19170019a ನಾಮ್ನಾ ತಚ್ಛೋಣಿತಪುರಂ ಭವಿಷ್ಯತಿ ಪುರೋತ್ತಮಮ್ ।
19170019c ಮಯಾಭಿಗುಪ್ತಂ ಶ್ರೀಮಂತಂ ನ ಕಶ್ಚಿತ್ಪ್ರಸಹಿಷ್ಯತಿ ।।
ಆ ಉತ್ತಮ ಪುರದ ಹೆಸರು ಶೋಣಿತಪುರವೆಂದಾಗುತ್ತದೆ. ನನ್ನಿಂದ ರಕ್ಷಿತಗೊಂಡ ಈ ಶ್ರೀಮಂತನ ವೀರ್ಯವನ್ನು ಯಾರೂ ಎದುರಿಸಲಾರರು.”
19170020a ತತಃ ಸ ನಿವಸನ್ಬಾಣಃ ಪುರೇ ಶೋಣಿತಸಾಹ್ವಯೇ ।
19170020c ರಾಜ್ಯಂ ಪ್ರಶಾಸತೇ ನಿತ್ಯಂ ಕ್ಷೋಭಯನ್ಸರ್ವದೇವತಾಃ ।।
ಅನಂತರ ಬಾಣನು ಶೋಣಿತಪುರದಲ್ಲಿ ವಾಸಿಸಿಕೊಂಡು ನಿತ್ಯವೂ ದೇವತೆಗಳನ್ನು ಕ್ಷೋಭೆಗೊಳಿಸುತ್ತಾ ರಾಜ್ಯ ಶಾಸನವನ್ನು ಮಾಡತೊಡಗಿದನು.
19170021a ಅವತೀರ್ಯ ಮದೋತ್ಸಿಕ್ತೋ3 ಬಾಣೋ ಬಾಹುಸಹಸ್ರವಾನ್ ।
19170021c ಅಚಿಂತಯಂದೇವಗಣಾನ್ಯುದ್ಧಮಾಕಾಂಕ್ಷತೇ ಸದಾ ।।
ಸಹಸ್ರಬಾಹುಗಳ ಬಾಣನು ಮದೋನ್ಮತ್ತನಾಗಿ ದೇವಗಣಗಳು ಏನೂ ಅಲ್ಲ ಎಂದು ಯೋಚಿಸಿ ಸದಾ ಅವರೊಡನೆ ಯುದ್ಧಾಕಾಂಕ್ಷಿಯಾಗಿದ್ದನು.
19170022a ಧ್ವಜಂ ಚಾಸ್ಯ ದದೌ ಪ್ರೀತಃ ಕುಮಾರೋ ಹ್ಯಗ್ನಿತೇಜಸಮ್ ।
19170022c ವಾಹನಂ ಚೈವ ಬಾಣಸ್ಯ ಮಯೂರಂ ದೀಪ್ತತೇಜಸಮ್ ।।
ಅವನ ಮೇಲೆ ಪ್ರೀತನಾದ ಕುಮಾರನು ಬಾಣನಿಗೆ ಅಗ್ನಿತೇಜಸ್ವೀ ಧ್ವಜವನ್ನೂ ಮತ್ತು ವಾಹನಕ್ಕೆ ದೀಪ್ತತೇಜಸ್ವೀ ಮಯೂರವನ್ನೂ ನೀಡಿದನು.
19170023a ನ ದೇವಾ ನ ಚ ಗಂಧರ್ವಾ ನ ಯಕ್ಷಾ ನಾಪಿ ಪನ್ನಗಾಃ ।
19170023c ತಸ್ಯ ಯುದ್ಧೇ ವ್ಯತಿಷ್ಠಂತ ದೇವದೇವಸ್ಯ ತೇಜಸಾ ।।
ದೇವದೇವನ ತೇಜಸ್ಸಿನಿಂದಾಗಿ ದೇವತೆಗಳಾಗಲೀ, ಗಂಧರ್ವರಾಗಲೀ, ಯಕ್ಷರಾಗಲೀ ಮತ್ತು ಪನ್ನಗಗಳಾಗಲೀ ಯುದ್ಧದಲ್ಲಿ ಬಾಣಾಸುರನ ಎದುರಾಗಲು ಸಮರ್ಥರಾಗಿರಲಿಲ್ಲ.
19170024a ತ್ರ್ಯಂಬಕೇಣಾಭಿಗುಪ್ತಶ್ಚ ದರ್ಪೋತ್ಸಿಕ್ತೋ ಮಹಾಸುರಃ ।
19170024c ಭೂಯೋ ಮೃಗಯತೇ ಯುದ್ಧಂ ಶೂಲಿನಂ ಸೋಽಭ್ಯಗಚ್ಛತ ।।
ತ್ರ್ಯಂಬಕನಿಂದ ಸುರಕ್ಷಿತನಾಗಿದ್ದ ಆ ಮಹಾಸುರನು ದರ್ಪದಿಂದ ತುಂಬಿ ಮತ್ತೆ ಮತ್ತೆ ಯುದ್ಧದ ಅವಕಾಶವನ್ನು ಹುಡುಕುತ್ತಿದ್ದನು. ಒಮ್ಮೆ ಅವನು ತ್ರಿಶೂಲಧಾರಿಯ ಬಳಿ ಹೋದನು.
19170025a ಸ ರುದ್ರಮಭಿಗಮ್ಯಾಥ ಪ್ರಣಿಪತ್ಯಾಭಿವಾದ್ಯ ಚ ।
19170025c ಬಲಿಸೂನುರಿದಂ ವಾಕ್ಯಂ ಪಪ್ರಚ್ಛ ವೃಷಭಧ್ವಜಮ್ ।।
ವೃಷಭಧ್ವಜ ರುದ್ರನ ಬಳಿಸಾರಿ ನಮಸ್ಕರಿಸಿ ಅಭಿವಂದಿಸಿ ಅವನಲ್ಲಿ ಬಲಿಯ ಮಗನು ಈ ಪ್ರಶ್ನೆಯನ್ನು ಕೇಳಿದನು.
19170026a ಅಸಕೃನ್ನಿರ್ಜಿತಾ ದೇವಾಃ ಸಸಾಧ್ಯಾಃ ಸಮರುದ್ಗಣಾಃ ।
19170026c ಮಯಾ ಮದಬಲೋತ್ಸೇಕಾತ್ಸಸೈನ್ಯೇನ ತವಾಶ್ರಯಾತ್ ।।
“ನಿನ್ನ ಆಶ್ರಯದಿಂದ ಮದಬಲಾನ್ವಿತನಾದ ನಾನು ಸೇನಾಸಹಿತ ಸಾಧ್ಯ-ಮರುದ್ಗಣಗಳೊಂದಿಗೆ ದೇವತೆಗಳನ್ನು ಗೆದ್ದಿದ್ದೇನೆ.
19170027a ಇಮಂ ದೇಶಂ ಸಮಾಗಮ್ಯ ವಸಂತಿ ಸ್ಮ ಪುರೇ ಸುಖಮ್ ।
19170027c ತೇ ಪರಾಜಯಸಂತ್ರಸ್ತಾ ನಿರಾಶಾ ಮತ್ಪರಾಜಯೇ ।।
ತಮ್ಮ ಪರಾಜಯದ ಭಯದಿಂದಾಗಿ ಮತ್ತು ನನ್ನನ್ನು ಜಯಿಸುವುದರಲ್ಲಿ ನಿರಾಶರಾಗಿ ಅವರು ಈ ದೇಶಕ್ಕೆ ಬಂದು ಈ ಪುರದಲ್ಲಿಯೇ ಸುಖವಾಗಿ ವಾಸಿಸುತ್ತಿದ್ದಾರೆ.
19170028a ನಾಕಪೃಷ್ಠಮುಪಾಗಮ್ಯ ನಿವಸಂತಿ ಯಥಾಸುಖಮ್ ।
19170028c ಸೋಽಹಂ ನಿರಾಶೋ ಯುದ್ಧಸ್ಯ ಜೀವಿತಂ ನಾದ್ಯ ಕಾಮಯೇ ।।
ನನ್ನ ಆಜ್ಞೆಯಂತೆ ಸ್ವರ್ಗಕ್ಕೆ ಹೋಗಿಯೂ ಅವರು ಸುಖವಾಗಿಯೇ ಇದ್ದಾರೆ. ಆದುದರಿಂದ ನಾನು ಯುದ್ಧದಿಂದ ನಿರಾಶನಾಗಿದ್ದೇನೆ. ಯುದ್ಧವೇ ಇಲ್ಲದಿರುವುದರಿಂದಾಗಿ ನನಗೆ ಜೀವಂತವಾಗಿರಲು ಇಷ್ಟವಾಗುತ್ತಿಲ್ಲ.
19170029a ಅಯುದ್ಧ್ಯತೋ ವೃಥಾ ಹ್ಯೇಷಾಂ ಬಾಹೂನಾಂ ಧಾರಣಂ ಮಮ ।
19170029c ತದ್ಬ್ರೂಹಿ ಮಮ ಯುದ್ಧಸ್ಯ ಕಚ್ಚಿದಾಗಮನಂ ಭವೇತ್ ।।
19170030a ನ ಮೇ ಯುದ್ಧಂ ವಿನಾ ದೇವ ರತಿರಸ್ತಿ ಪ್ರಸೀದ ಮೇ ।
ಯುದ್ಧವೇ ಇಲ್ಲವೆಂದಾದಮೇಲೆ ನನಗೆ ಈ ಬಾಹುಗಳ ಭಾರವನ್ನು ಧರಿಸಿಕೊಂಡಿರುವುದು ವ್ಯರ್ಥ ಎಂದೆನಿಸುತ್ತಿದೆ. ಆದುದರಿಂದ ನನ್ನ ಪಾಲಿಗೆ ಯುದ್ಧವು ಯಾವಾಗ ಬರುತ್ತದೆ ಎನ್ನುವುದನ್ನು ಹೇಳು. ದೇವ! ಯುದ್ಧವಿಲ್ಲದೇ ಸಂತೋಷವಿಲ್ಲ. ನನ್ನ ಮೇಲೆ ಪ್ರಸನ್ನನಾಗು.”
19170030c ತತಃ ಪ್ರಹಸ್ಯ ಭಗವಾನಬ್ರವೀದೃಷಭಧ್ವಜಃ ।।
19170031a ಭವಿತಾ ಬಾಣ ಯುದ್ಧಂ ವೈ ತಥಾ ತಚ್ಛೃಣು ದಾನವ ।
ಆಗ ಭಗವಾನ್ ವೃಷಭಧ್ವಜನು ನಸುನಕ್ಕು ಹೇಳಿದನು: “ದಾನವ! ಬಾಣ! ಹೇಗೆ ನಿನಗೆ ಯುದ್ಧವು ಪ್ರಾಪ್ತವಾಗುತ್ತದೆ ಎನ್ನುವುದನ್ನು ಕೇಳು.
19170031c ಧ್ವಜಸ್ಯಾಸ್ಯ ಯದಾ ಭಂಗಸ್ತವ ತಾತ ಭವಿಷ್ಯತಿ ।
19170031e ಸ್ವಸ್ಥಾನೇ ಸ್ಥಾಪಿತಸ್ಯಾಥ ತದಾ ಯುದ್ಧಂ ಭವಿಷ್ಯತಿ ।।
ಅಯ್ಯಾ! ಸ್ವಸ್ಥಾನದಲ್ಲಿ ಸ್ಥಾಪಿತಗೊಂಡಿರುವ ನಿನ್ನ ಈ ಧ್ವಜವು ಯಾವಾಗ ಮುರಿದುಬೀಳುತ್ತದೆಯೋ ಆಗ ನಿನಗೆ ಯುದ್ಧ ಪ್ರಾಪ್ತವಾಗುತ್ತದೆ.”
19170032a ಇತ್ಯೇವಮುಕ್ತಃ ಪ್ರಹಸನ್ಬಾಣಸ್ತು ಬಹುಶೋ ಮುದಾ ।
19170032c ಪ್ರಸನ್ನವದನೋ ಭೂತ್ವಾ ಪಾದಯೋಃ ಪತಿತೋಽಬ್ರವೀತ್ ।
ಅವನು ಹೀಗೆ ಹೇಳಲು ಬಾಣನು ಅತ್ಯಂತ ಮುದಿತನಾಗಿ ನಕ್ಕನು. ಪ್ರಸನ್ನವದನನಾಗಿ ಶಂಕರನ ಪಾದಗಳ ಮೇಲೆ ಬಿದ್ದು ಹೇಳಿದನು:
19170032e ದಿಷ್ಟ್ಯಾ ಬಾಹುಸಹಸ್ರಸ್ಯ ನ ವೃಥಾ ಧಾರಣಂ ಮಮ ।।
19170033a ದಿಷ್ಟ್ಯಾ ಸಹಸ್ರಾಕ್ಷಮಹಂ ವಿಜೇತಾ ಪುನರಾಹವೇ ।
“ಒಳ್ಳೆಯದಾಯಿತು! ನಾನು ಈ ಸಹಸ್ರಬಾಹುಗಳನ್ನು ಹೊತ್ತಿರುವುದು ವ್ಯರ್ಥವಾಗುವುದಿಲ್ಲ! ಸೌಭಾಗ್ಯವಾಶಾತ್ ಪುನಃ ನಾನು ಯುದ್ಧದಲ್ಲಿ ಸಹಸ್ರಾಕ್ಷನನ್ನು ಸೋಲಿಸುತ್ತೇನೆ!”
19170033c ಆನಂದೇನಾಶ್ರುಪೂರ್ಣಾಭ್ಯಾಂ ನೇತ್ರಾಭ್ಯಾಮರಿಮರ್ದನಃ ।
19170033e ಪಂಚಾಂಜಲಿಶತೈರ್ದೇವಂ ಪೂಜಯನ್ಪತಿತೋ ಭುವಿ ।।
ಹೀಗೆ ಹೇಳಿ ಅರಿಮರ್ದನ ಬಾಣನು ಆನಂದಬಾಷ್ಪಗಳಿಂದ ಕಣ್ಣುಗಳನ್ನು ತುಂಬಿಸಿಕೊಂಡು ಐನೂರು ಅಂಜಲಿಗಳ ಮೂಲಕ ದೇವನನ್ನು ಪೂಜಿಸುತ್ತಾ ಭೂಮಿಯ ಮೇಲೆ ಬಿದ್ದನು.
19170034 ಈಶ್ವರ ಉವಾಚ ।
19170034a ಉತ್ತಿಷ್ಠೋತ್ತಿಷ್ಠ ಬಾಹೂನಾಮಾತ್ಮನಃ ಸಕುಲಸ್ಯ ತು ।
19170034c ಸದೃಶಂ ಪ್ರಾಪ್ಸ್ಯಸೇ ವೀರ ಯುದ್ಧಮಪ್ರತಿಮಂ ಮಹತ್ ।।
ಈಶ್ವರನು ಹೇಳಿದನು: “ವೀರ! ಮೇಲೇಳು! ನಿನ್ನ ಈ ಬಾಹುಗಳ ಮತ್ತು ಕುಲಕ್ಕೆ ಅನುರೂಪವಾದ ಅಪ್ರತಿಮ ಮಹಾ ಯುದ್ಧವನ್ನು ಪಡೆದುಕೊಳ್ಳುತ್ತೀಯೆ.””
19170035 ವೈಶಂಪಾಯನ ಉವಾಚ ।
19170035a ಏವಮುಕ್ತಸ್ತತೋ ಬಾಣಸ್ತ್ರ್ಯಂಬಕೇನ ಮಹಾತ್ಮನಾ ।
19170035c ಹರ್ಷೇಣಾತ್ಯುಚ್ಛ್ರಿತಂ ಶೀಘ್ರಂ ನತ್ವಾ ಸ ವೃಷಭಧ್ವಜಮ್ ।।
ವೈಶಂಪಾಯನನು ಹೇಳಿದನು: “ಮಹಾತ್ಮ ತ್ರ್ಯಂಬಕನು ಹೀಗೆ ಹೇಳಲು ಬಾಣನು ಹರ್ಷದಿಂದ ಬೀಗಿ ಶೀಘ್ರವಾಗಿ ವೃಷಭಧ್ವಜನಿಗೆ ನಮಸ್ಕರಿಸಿದನು.
19170036a ಶಿತಿಕಂಠವಿಸೃಷ್ಟಸ್ತು ಬಾಣಃ ಪರಪುರಂಜಯಃ ।
19170036c ಯಯೌ ಸ್ವಭವನಂ ತತ್ರ ಯತ್ರ ಧ್ವಜಗೃಹಂ ಮಹತ್ ।।
ಶಿತಿಕಂಠನಿಂದ ಬೀಳ್ಕೊಂಡ ಪರಪುರಂಜಯ ಬಾಣನು ಮಹಾ ಧ್ವಜಗೃಹವಿದ್ದ ತನ್ನ ಭವನಕ್ಕೆ ತೆರಳಿದನು.
19170037a ತತ್ರೋಪವಿಷ್ಟಃ ಪ್ರಹಸನ್ಕುಂಭಾಂಡಮಿದಮಬ್ರವೀತ್ ।
19170037c ಪ್ರಿಯಮಾವೇದಯಿಷ್ಯಾಮಿ ಭವತೋ ಯನ್ಮನೋಗತಮ್ ।।
ಅಲ್ಲಿ ಕುಳಿತು ಬಾಣನು ನಗುತ್ತಾ ತನ್ನ ಮಂತ್ರಿ ಕುಂಭಾಂಡನಿಗೆ ಇದನ್ನು ಹೇಳಿದನು: “ಮನೋಗತವಾಗಿರುವ ಪ್ರಿಯ ಸಮಾಚಾರವನ್ನು ನಿನಗೆ ತಿಳಿಸುತ್ತೇನೆ.”
19170038a ಇತ್ಯೇವಮುಕ್ತಃ ಪ್ರಹಸನ್ಬಾಣಮಪ್ರಾತಿಮಂ ರಣೇ ।
19170038c ಪ್ರೋವಾಚ ರಾಜಂಕಿಂ ವೈತದ್ವಕ್ತುಕಾಮೋಽಸಿ ಮತ್ಪ್ರಿಯಮ್ ।।
ಹೀಗೆ ಹೇಳಲು ಅವನು ನಗುತ್ತಾ ರಣದಲ್ಲಿ ಅಪ್ರತಿಮನಾಗಿದ್ದ ಬಾಣನಿಗೆ “ರಾಜನ್! ನೀನು ನನಗೆ ಪ್ರಿಯವಾದ ಯಾವ ಸಮಾಚಾರವನ್ನು ಹೇಳಬಯಸುತ್ತಿರುವೆ?” ಎಂದನು.
19170039a ವಿಸ್ಮಯೋತ್ಫುಲ್ಲನಯನಃ ಪ್ರಹರ್ಷಾದಿವ ಭಾಷಸೇ ।
19170039c ತ್ವತ್ತಃ ಶ್ರೋತುಮಿಹೇಚ್ಛಾಮಿ ವರಂ ಕಿಂ ಲಬ್ಧವಾನಸಿ ।।
419170040a ಶಿತಿಕಂಠಪ್ರಸಾದೇನ ಸ್ಕಂದಗೋಪಾಯನೇನ ಚ ।
“ಆಶ್ಚರ್ಯದಿಂದ ಅರಳಿದ ಕಣ್ಣುಗಳುಳ್ಳವನಾಗಿ ಹರ್ಷದಿಂದ ಮಾತನಾಡುತ್ತಿದ್ದೀಯೆ. ಶಿತಿಕಂಠನ ಪ್ರಸಾದದಿಂದ ಮತ್ತು ಸ್ಕಂದನಿಂದ ಸುರಕ್ಷಿತವಾಗಿರುವ ಯಾವ ವರವನ್ನು ಪಡೆದಿದ್ದೀಯೆ ಎನ್ನುವುದನ್ನು ನಿನ್ನಿಂದ ಕೇಳಬಯಸುತ್ತೇನೆ.
19170040c ಕಚ್ಚಿತ್ತ್ರೈಲೋಕ್ಯರಾಜ್ಯಂ ತೇ ವ್ಯಾದಿಷ್ಟಂ ಶೂಲಪಾಣಿನಾ ।।
19170041a ಅಸ್ಯ ಚಕ್ರಭಯತ್ರಸ್ತಾ ನಿವಸಂತಿ ಜಲಾಶಯೇ ।
19170041c ಕಚ್ಚಿಚ್ಛಾಂಙ್ರಗದಾಪಾಣೇಃ ಸ್ಥಿತಸ್ಯ ಪರಮಾಹವೇ ।।
19170042a ಕಚ್ಚಿದಿಂದ್ರಸ್ತವ ಭಯಾತ್ಪಾತಾಲಮುಪಯಾಸ್ಯತಿ ।
ಶೂಲಪಾಣಿಯು ನಿನಗೆ ತ್ರೈಲೋಕ್ಯರಾಜ್ಯವನ್ನು ಕೊಟ್ಟನೇ? ಚಕ್ರಭಯದಿಂದ ನಡುಗೆ ಜಲಾಶಯದಲ್ಲಿ ವಾಸಿಸುತ್ತಿರುವವರು ಶಾಂಙ್ರಗದಾಪಾಣಿಯನ್ನು ಪರಮ ಯುದ್ಧದಲ್ಲಿ ಎದುರಿಸಿ ನಿಲ್ಲುತ್ತಾರೆಯೇ? ನಿನ್ನ ಭಯದಿಂದ ಇಂದ್ರನು ಪಾತಾಲಲೋಕಕ್ಕೆ ಹೊರಟುಹೋಗುತ್ತಾನೆಯೇ?
19170042c ಕಚ್ಚಿದ್ವಿಷ್ಣುಪರಿತ್ರಾಸಂ ವಿಮೋಕ್ಷ್ಯಂತಿ ದಿತೇಃ ಸುತಾಃ ।।
19170043a ಪಾತಾಲವಾಸಮುತ್ಸೃಜ್ಯ ಕಚ್ಚಿತ್ತವ ಬಲಾಶ್ರಯಾತ್ ।
19170043c ವಿಬುಧಾವಾಸನಿರತಾ ಭವಿಷ್ಯಂತಿ ಮಹಾಸುರಾಃ ।।
ದಿತಿಯ ಮಕ್ಕಳು ಈಗ ವಿಷ್ಣುವಿನ ಭಯವನ್ನು ತೊರೆದರೇ? ನಿನ್ನ ಬಲವನ್ನು ಆಶ್ರಯಿಸಿ ಮಹಾಸುರರು ಪಾತಾಲವಾಸವನ್ನು ತೊರೆದು ಇನ್ನು ಸ್ವರ್ಗಲೋಕದಲ್ಲಿ ವಾಸಿಸುವವರಾಗುತ್ತಾರೆಯೇ?
19170044a ಬಲಿರ್ವಿಷ್ಣುಪರಾಕ್ರಾಂತೋ ಬದ್ಧಸ್ತವ ಪಿತಾ ನೃಪ ।
19170044c ಸಲಿಲೌಘಾದ್ವಿನಿಷ್ಕ್ರಮ್ಯ ಕಚ್ಚಿದ್ರಾಜ್ಯಮವಾಪ್ಸ್ಯತಿ ।।
ನೃಪ! ವಿಷ್ಣುವಿನ ಪರಾಕ್ರಮಕ್ಕೆ ಒಳಗಾಗಿ ಬಂಧಿತನಾಗಿರುವ ನಿನ್ನ ತಂದೆ ಬಲಿಯು ಪಾತಾಲದಿಂದ ಹೊರಟುಬಂದು ತ್ರೈಲೋಕ್ಯದ ರಾಜ್ಯವನ್ನು ಪುನಃ ಪಡೆದುಕೊಳ್ಳುತ್ತಾನೆಯೇ?
19170045a ದಿವ್ಯಮಾಲ್ಯಾಂಬರಧರಂ ದಿವ್ಯಸ್ರಗ್ಗಂಧಲೇಪನಮ್ ।
19170045c ಕಚ್ಚಿದ್ವೈರೋಚನಿಂ ತಾತ ದ್ರಕ್ಷ್ಯಾಮಃ ಪಿತರಂ ತವ ।।
ಅಯ್ಯಾ! ದಿವ್ಯಮಾಲಾಂಬರಗಳನ್ನು ಧರಿಸಿರುವ, ದಿವ್ಯ ಮಾಲೆಗಳು, ಗಂಧಲೇಪನಗಳನ್ನು ಹೊಂದಿರುವ ನಿನ್ನ ತಂದೆ ವೈರೋಚನಿಯನ್ನು ನಾವು ನೋಡುತ್ತೇವೆಯೇ?
19170046a ಕಚ್ಚಿತ್ತ್ರಿಭಿಃ ಕ್ರಮೈಃ ಪೂರ್ವಂ ಹೃತಾನ್ಲ್ಲೋಕಾನಿಮಾನ್ಪ್ರಭೋ ।
19170046c ಪುನಃ ಪ್ರತ್ಯಾನಯಿಷ್ಯಾಮೋ ಜಿತ್ವಾ ಸರ್ವಾಂದಿವೌಕಸಃ ।।
ಪ್ರಭೋ! ಹಿಂದೆ ಮೂರು ಹೆಜ್ಜೆಗಳಲ್ಲಿ ಅಪಹೃತವಾದ ಈ ಲೋಕಗಳನ್ನು ಪುನಃ ದಿವೌಕಸರೆಲ್ಲರನ್ನೂ ಗೆದ್ದು ಪಡೆದುಕೊಳ್ಳುತ್ತೀವೆಯೋ?
19170047a ಸ್ನಿಗ್ಧಗಂಭೀರನಿರ್ಘೋಷಂ ಶಂಖಸ್ವನಪುರೋಜವಮ್ ।
19170047c ಕಚ್ಚಿನ್ನಾರಾಯಣಂ ದೇವಂ ಜೇಷ್ಯಾಮಃ ಸಮಿತಿಂಜಯಮ್ ।।
ಯಾರ ವಾಣಿ ಘೋಷವು ಮೇಘಗರ್ಜನೆಯಂತೆ ಗಂಭೀರವಾಗಿಯೂ ಸ್ನಿಗ್ಧವಾಗಿಯೂ ಇದೆಯೋ, ಯಾರ ಮೊದಲು ಅವನ ಶಂಖನಾದವು ವೇಗವಾಗಿ ಬಂದು ತಲುಪುವುದೋ ಆ ಸಮಿತಿಂಜಯ ದೇವ ನಾರಾಯಣನನ್ನು ಗೆಲ್ಲುತ್ತೇವೆಯೇ?
19170048a ಕಚ್ಚಿದ್ವೃಷಧ್ವಜಸ್ತಾತ ಪ್ರಸಾದಸುಮುಖಸ್ತವ ।
19170048c ಯಥಾ ತೇ ಹೃದಯೋತ್ಕಂಪಃ ಸಾಶ್ರುಬಿಂದುಃ ಪ್ರವರ್ತತೇ ।।
ಅಯ್ಯಾ! ನಿನ್ನ ಹೃದಯಕಂಪನ ಮತ್ತು ಆನಂದದ ಕಣ್ಣೀರುಳ್ಳ ನಿನ್ನ ಮುಖವನ್ನು ನೋಡಿದರೆ ವೃಷಧ್ವಜನು ನಿನ್ನ ಮೇಲೆ ಪ್ರಸನ್ನನಾಗಿದ್ದಾನೆಂದು ತಿಳಿಯುತ್ತದೆ.
19170049a ಕಚ್ಚಿದೀಶ್ವರತೋಷೇಣ ಕಾರ್ತಿಕೇಯಮತೇನ ಚ ।
19170049c ಪ್ರಾಪ್ತವಾನಸಿ ಸರ್ವೇಷಾಮಸ್ಮಾಕಂ ರಾಜ್ಯಸಂಪದಮ್ ।।
ಈಶ್ವರನ ಸಂತೋಷ ಮತ್ತು ಕಾರ್ತಿಕೇಯನ ಸಮ್ಮತಿಯಿಂದ ನಮಗೆಲ್ಲರಿಗೆ ನಮ್ಮ ರಾಜ್ಯಸಂಪದವು ಪ್ರಾಪ್ತವಾಗುತ್ತಿದೆಯೇ?”
19170050a ಇತಿ ಕುಂಭಾಂಡವಚನೈಶ್ಚೋದಿತಃ ಸೋಽಸುರೋತ್ತಮಃ ।
19170050c ಬಾಣೋ ವಾಣೀಮಸಂಸಕ್ತಾಂ ಪ್ರೋವಾಚ ವದತಾಂ ವರಃ ।।
ಕುಂಭಾಂಡನ ಈ ಮಾತಿನಿಂದ ಪ್ರಚೋದಿತನಾದ ಆ ಅಸುರೋತ್ತಮ, ಮಾತನಾಡುವವರಲ್ಲಿ ಶ್ರೇಷ್ಠ ಬಾಣನು, ಅಸ್ಖಲಿತ ವಾಣಿಯಲ್ಲಿ ಹೇಳಿದನು.
19170051 ಬಾಣ ಉವಾಚ ।
19170051a ಚಿರಾತ್ಪ್ರಭೃತಿ ಕುಂಭಾಂಡ ನ ಯುದ್ಧಂ ಪ್ರಾಪ್ಯತೇ ಮಯಾ ।
19170051c ತತೋ ಮಯಾ ಮುದಾ ಪೃಷ್ಟಃ ಶಿತಿಕಂಠಃ ಪ್ರತಾಪವಾನ್ ।।
ಬಾಣನು ಹೇಳಿದನು: “ಕುಂಭಾಂಡ! ಬಹಳ ಸಮಯದಿಂದ ನನಗೆ ಯುದ್ಧವೇ ಬಂದೊದಗಿಲ್ಲ. ಆಗ ನಾನು ಮುದದಿಂದ ಪ್ರತಾಪವಾನ್ ಶಿತಿಕಂಠನಲ್ಲಿ ಕೇಳಿದೆ.
19170052a ಯುದ್ಧಾಭಿಲಾಷಃ ಸುಮಹಾಂದೇವ ಸಂಜಾಯತೇ ಮಮ ।
19170052c ಅಭಿಪ್ರಾಪ್ಸ್ಯಾಮ್ಯಹಂ ಯುದ್ಧಂ ಮನಸಸ್ತುಷ್ಟಿವರ್ಧನಮ್ ।।
“ದೇವ! ನನ್ನಲ್ಲಿ ಮಹಾಯುದ್ಧಾಭಿಲಾಷೆಯು ಹುಟ್ಟಿಕೊಂಡಿದೆ. ಮನಸ್ಸಿನ ಸಂತೋಷವನ್ನು ವರ್ಧಿಸುವ ಯುದ್ಧವನ್ನು ಬಯಸುತ್ತೇನೆ.”
19170053a ತತೋಽಹಂ ದೇವದೇವೇನ ಹರೇಣಾಮಿತ್ರಘಾತಿನಾ ।
19170053c ಪ್ರಹಸ್ಯ ಸುಚಿರಂ ಕಾಲಮುಕ್ತೋಽಸ್ಮಿ ವಚನಂ ಪ್ರಿಯಮ್ ।
19170053e ಪ್ರಾಪ್ಸ್ಯಸೇ ಸುಮಹದ್ಯುದ್ಧಂ ತ್ವಂ ಬಾಣಾಪ್ರತಿಮಂ ಮಹತ್ ।।
ಆಗ ದೇವದೇವ ಅಮಿತ್ರಘಾತಿ ಹರನು ಬಹಳ ಹೊತ್ತು ನಕ್ಕು ಈ ಪ್ರಿಯವಾದ ಮಾತನ್ನು ನನಗೆ ಹೇಳಿದನು: “ಬಾಣ! ಮಹಾ ಅಪ್ರತಿಮ ಮಹಾ ಯುದ್ಧವನ್ನು ನೀನು ಪಡೆದುಕೊಳ್ಳುತ್ತೀಯೆ!
19170054a ಮಯೂರಧ್ವಜಭಂಗಸ್ತೇ ಭವಿಷ್ಯತಿ ಯದಾಸುರ ।
19170054c ತದಾ ತ್ವಂ ಪ್ರಾಪ್ಸ್ಯಸೇ ಯುದ್ಧಂ ಸುಮಹದ್ದಿತಿನಂದನ ।।
ಅಸುರ! ದಿತಿನಂದನ! ನಿನ್ನ ಮಯೂರಧ್ವಜವು ಎಂದು ಮುರಿಯುತ್ತದೆಯೋ ಅಂದು ನಿನಗೆ ಮಹಾ ಯುದ್ಧವು ಪ್ರಾಪ್ತವಾಗುತ್ತದೆ.”
19170055a ತತೋಽಹಂ ಪರಮಪ್ರೀತೋ ಭಗವಂತಂ ವೃಷಧ್ವಜಮ್ ।
19170055c ಪ್ರಣಮ್ಯ ಶಿರಸಾ ದೇವಂ ತವಾಂತಿಕಮುಪಾಗತಃ ।।
ಆಗ ನಾನು ಪರಮಪ್ರೀತನಾಗಿ ಭಗವಂತ ವೃಷಧ್ವಜ ದೇವನನ್ನು ಶಿರಸಾ ನಮಸ್ಕರಿಸಿ ನಿನ್ನ ಬಳಿ ಬಂದಿದ್ದೇನೆ.”
19170056a ಇತ್ಯೇವಮುಕ್ತಃ ಕುಂಭಾಂಡಃ ಪ್ರೋವಾಚ ನೃಪತಿಂ ತದಾ ।
19170056c ಅಹೋ ನ ಶೋಭನಂ ರಾಜನ್ಯದೇವಂ ಭಾಷಸೇ ವಚಃ ।।
ಹೀಗೆ ಹೇಳಲು ಕುಂಭಾಂಡನು ನೃಪತಿಗೆ ಹೇಳಿದನು: “ಅಹೋ ರಾಜನ್! ನೀನಾಡಿದ ಮಾತು ಶುಭವಾದದ್ದಲ್ಲ.”
19170057a ಏವಂ ಕಥಯತೋಸ್ತತ್ರ ತಯೋರನ್ಯೋನ್ಯಮುಚ್ಛ್ರಿತಃ ।
19170057c ಧ್ವಜಃ ಪಪಾತ ವೇಗೇನ ಶಕ್ರಾಶನಿಸಮಾಹತಃ ।।
ಹೀಗೆ ಅಲ್ಲಿ ಅವರು ಅನ್ಯೋನ್ಯರೊಡನೆ ಮಾತನಾಡಿಕೊಳ್ಳುತ್ತಿರಲು ಶಕ್ರನ ವಜ್ರದಿಂದ ಹೊಡೆಯಲ್ಪಟ್ಟ ಧ್ವಜವು ವೇಗದಿಂದ ಕೆಳಗೆ ಬಿದ್ದಿತು.
19170058a ತಂ ತಥಾ ಪತಿತಂ ದೃಷ್ಟ್ವಾ ಸೋಽಸುರೋ ಧ್ವಜಮುತ್ತಮಮ್ ।
19170058c ಪ್ರಹರ್ಷಮತುಲಂ ಲೇಭೇ ಮೇನೇ ಚಾಹವಮಾಗತಮ್ ।।
ತನ್ನ ಉತ್ತಮ ಧ್ವಜವು ಹಾಗೆ ಬಿದ್ದುದನ್ನು ನೋಡಿ ಆ ಅಸುರನು ಅತುಲ ಯುದ್ಧವು ಬಂದೊದಗುತ್ತಿದೆ ಎಂದು ಹರ್ಷಿತನಾದನು.
19170059a ತತಶ್ಚಕಂಪೇ ವಸುಧಾ ಶಕ್ರಾಶನಿಸಮಾಹತಾ ।
19170059c ನನಾದಾಂತರ್ಹಿತೋ ಭೂಮೌ ವೃಷದಂಶೋ ಜಗರ್ಜ ಚ ।।
ಆಗ ಇಂದ್ರನ ವಜ್ರದ ಆಘಾತದಿಂದ ವಸುಧೆಯು ನಡುಗಿತು. ಭೂಮಿಯಲ್ಲಿ ಅಂತರ್ಹಿತನಾಗಿದ್ದ ವೃಷದಂಶವು ಗರ್ಜಿಸಿತು.
19170060a ದೇವಾನಾಮಪಿ ಯೋ ದೇವಃ ಸೋಽಪ್ಯವರ್ಷತ ವಾಸವಃ ।
19170060c ಶೋಣಿತಂ ಶೋಣಿತಪುರೇ ಸರ್ವತಃ ಪರಮಂ ತತಃ ।।
ದೇವತೆಗಳಿಗೂ ದೇವನಾದ ವಾಸವನು ಶೋಣಿತಪುರದ ಎಲ್ಲಕಡೆ ರಕ್ತದ ಪರಮ ಮಳೆಯನ್ನು ಸುರಿಸಿದನು.
19170061a ಸೂರ್ಯಂ ಭಿತ್ತ್ವಾ ಮಹೋಲ್ಕಾ ಚ ಪಪಾತ ಧರಣೀತಲೇ ।
19170061c ಸ್ವಪಕ್ಷೇ ಚೋದಿತಃ ಸೂರ್ಯೋ ಭರಣೀಂ ಸಮಪೀಡಯತ್ ।।
ಸೂರ್ಯಮಂಡಲವನ್ನೇ ಸೀಳಿ ಮಹಾ ಉಲ್ಕೆಯೊಂದು ಧರಣೀತಲದಲ್ಲಿ ಬಿದ್ದಿತು. ಸ್ವಪಕ್ಷದಿಂದ ಪ್ರಚೋದಿತನಾದ ಸೂರ್ಯನು ಭರಣೀ ನಕ್ಷತ್ರವನ್ನು ಪೀಡಿಸಿದನು.
19170062a ಚೈತ್ಯವೃಕ್ಷೇಷು ಸಹಸಾ ಧಾರಾಃ ಶತಸಹಸ್ರಶಃ ।
19170062c ಶೋಣಿತಸ್ಯ ಸ್ರವನ್ಘೋರಾ ನಿಪೇತುಸ್ತಾರಕಾ ಭೃಶಮ್ ।।
ಒಮ್ಮಿಂದೊಮ್ಮೆಲೇ ಚೈತ್ಯವೃಕ್ಷದ ಮೇಲೆ ಅತ್ಯಂತ ಭಯಂಕರವಾದ ನೂರಾರು ಸಹಸ್ರಾರು ರಕ್ತದ ಘೋರ ಧಾರೆಗಳು ಬಿದ್ದವು.
19170063a ರಾಹುರಗ್ರಸದಾದಿತ್ಯಮಪರ್ವಣಿ ವಿಶಾಂಪತೇ ।
19170063c ಲೋಕಕ್ಷಯಕರೇ ಕಾಲೇ ನಿಘಾತಶ್ಚಾಪತನ್ಮಹಾನ್ ।।
ವಿಶಾಂಪತೇ! ಪರ್ವವಲ್ಲದೇ ರಾಹುವು ಆದಿತ್ಯನನ್ನು ನುಂಗಿದನು. ಲೋಕಕ್ಷಯಕಾರಕ ಕಾಲವು ಪ್ರಾಪ್ತವಾಗಿ ಘಡ-ಘಡಾ ಶಬ್ದದೊಂದಿಗೆ ವಜ್ರಪಾತವಾಗತೊಡಗಿತು.
19170064a ದಕ್ಷಿಣಾಂ ದಿಶಮಾಸ್ಥಾಯ ಧೂಮಕೇತುಃ ಸ್ಥಿತೋಽಭವತ್ ।
19170064c ಅನಿಶಂ ಚಾಪ್ಯವಿಚ್ಛಿನ್ನಾ ವವುರ್ವಾತಾಃ ಸುದಾರುಣಾಃ ।।
ಧೂಮಕೇತುವು ದಕ್ಷಿಣ ದಿಕ್ಕಿನಲ್ಲಿ ಬಂದು ಸ್ಥಿತಗೊಂಡಿತು. ನಿರಂತರವಾಗಿ ಅವಿಚ್ಛಿನ್ನವಾದ ಸುದಾರುಣ ಭಿರುಗಾಳಿಯು ಬೀಸತೊಡಗಿತು.
19170065a ಶ್ವೇತಲೋಹಿತಪರ್ಯಂತಃ ಕೃಷ್ಣಗ್ರೀವಸ್ತಡಿದ್ದ್ಯುತಿಃ ।
19170065c ತ್ರಿವರ್ಣಪರಿಘೋ ಭಾನುಃ ಸಂಧ್ಯಾರಾಗಮಥಾವೃಣೋತ್ ।।
ಸೂರ್ಯನ ಮೇಲೆ ಮೂರು ವರ್ಣಗಳ ಪರಿಘಗಳು ಬಿದ್ದವು. ಹೊರಭಾಗದಲ್ಲಿ ಅವು ಬಿಳಿ ಮತ್ತು ಕೆಂಪು ವರ್ಣದ್ದಾಗಿದ್ದವು. ಆದರೆ ಕಂಠಭಾಗದಲ್ಲಿ ಕಪ್ಪುಬಣ್ಣದ್ದಾಗಿತ್ತು. ಅದರಿಂದಾಗಿ ಸೂರ್ಯನ ಕಾಂತಿಯು ವಿದ್ಯುತ್ತಿನ ಸಮಾನ ಪ್ರತೀತವಾಗುತ್ತಿತ್ತು. ಸಂಧ್ಯೆಗಳು ಕೆಂಪುವರ್ಣದ್ದಾಗಿದ್ದವು.
19170066a ವಕ್ರಮಂಗಾರಕಶ್ಚಕ್ರೇ ಕೃತ್ತಿಕಾಸು ಭಯಂಕರಃ ।
19170066c ಬಾಣಸ್ಯ ಜನ್ಮನಕ್ಷತ್ರಂ ಭರ್ತ್ಸಯನ್ನಿವ ಸರ್ವಶಃ ।।
ಭಯಂಕರ ಅಂಗಾರಕ ಗ್ರಹವು ವಕ್ರಗತಿಯಲ್ಲಿ ಬಂದು ಕೃತ್ತಿಕಾ ನಕ್ಷತ್ರದಲ್ಲಿ ನಿಂತು ಎಲ್ಲ ಕಡೆಗಳಿಂದ ಬಾಣನ ಜನ್ಮನಕ್ಷತ್ರ5ವನ್ನು ಬೆದರಿಸಿತು.
19170067a ಅನೇಕಶಾಖಶ್ಚೈತ್ಯಶ್ಚ ನಿಪಪಾತ ಮಹೀತಲೇ ।
19170067c ಅರ್ಚಿತಃ ಸರ್ವಕನ್ಯಾಭಿರ್ದಾನವಾನಾಂ ಮಹಾತ್ಮನಾಮ್ ।।
ಮಹಾತ್ಮಾ ದಾನವರ ಸರ್ವ ಕನ್ಯೆಯರೂ ಅರ್ಚಿಸುತ್ತಿದ್ದ ಅನೇಕ ಶಾಖೆಗಳ ಚೈತ್ಯ ವೃಕ್ಷವು ಮಹೀತಲದಲ್ಲಿ ಉರುಳಿ ಬಿದ್ದಿತು.
19170068a ಏವಂ ವಿವಿಧರೂಪಾಣಿ ನಿಮಿತ್ತಾನಿ ನಿಶಾಮಯನ್ ।
19170038a ಬಾಣೋ ಬಲಮದೋನ್ಮತ್ತೋ ನಿಶ್ಚಯಂ ನಾಧಿಗಚ್ಛತಿ ।।
ಈ ರೀತಿಯ ವಿವಿಧ ರೂಪಗಳ ನಿಮಿತ್ತಗಳನ್ನು ನೋಡಿಯೂ ಬಲಮದೋನ್ಮತ್ತ ಬಾಣನು ಯಾವುದೇ ನಿಶ್ಚಯಕ್ಕೆ ಬರಲಾರದಾದನು.
19170069a ವಿಚೇತಾಸ್ತ್ವಭವತ್ಪ್ರಾಜ್ಞಃ ಕುಂಭಾಂಡಸ್ತತ್ತ್ವದರ್ಶಿವಾನ್ ।
19170069c ಬಾಣಸ್ಯ ಸಚಿವಸ್ತತ್ರ ಕೀರ್ತಯನ್ಬಹು ಕಿಲ್ಬಿಷಮ್ ।।
ಆದರೆ ಬಾಣನ ಸಚಿವ ತತ್ತ್ವದರ್ಶಿ ಪ್ರಾಜ್ಞ ಕುಂಭಾಂಡನು ಅನೇಕ ದುಷ್ಪರಿಣಾಮಗಳನ್ನು ವರ್ಣಿಸುತ್ತಾ ವಿಚೇತಸನಾಗಿ ಹೇಳಿದನು.
19170070a ಉತ್ಪಾತಾ ಹ್ಯತ್ರ ದೃಶ್ಯಂತೇ ಕಥಯಂತೋ ನ ಶೋಭನಮ್ ।
19170070c ತವ ರಾಜ್ಯವಿನಾಶಾಯ ಭವಿಷ್ಯಂತಿ ನ ಸಂಶಯಃ ।।
“ಇಲ್ಲಿ ಕಾಣುವ ಉತ್ಪಾತಗಳು ಶುಭವನ್ನು ಸೂಚಿಸುತ್ತಿಲ್ಲ. ಇವು ನಿನ್ನ ರಾಜ್ಯವಿನಾಶಕ್ಕಾಗಿಯೇ ಆಗುತ್ತಿವೆ ಎನ್ನುವುದರಲ್ಲಿ ಸಂಶಯವಿಲ್ಲ.
19170071a ವಯಂ ಚಾನ್ಯೇ ಚ ಸಚಿವಾ ಭೃತ್ಯಾ ತೇ ಚ ತವಾನುಗಾಃ ।
19170071c ಕ್ಷಯಂ ಯಾಸ್ಯಂತಿ ನ ಚಿರಾತ್ಸರ್ವೇ ಪಾರ್ಥಿವದುರ್ನಯಾತ್।।
ಪಾರ್ಥಿವ! ನಿನ್ನ ದುರ್ನೀತಿಯಿಂದಾಗಿ ಬೇಗನೇ ನಿನ್ನ ಸೇವಕರೂ ಅನುಯಾಯಿಗಳೂ ಆಗಿರುವ ನಾವು ಮತ್ತು ಅನ್ಯ ಸಚಿವರು ನಾಶಹೊಂದುತ್ತೇವೆ.
19170072a ಯಥಾ ಶಕ್ರಧ್ವಜತರೋಃ ಸ್ವದರ್ಪಾತ್ಪತನಂ ಭವೇತ್ ।
19170072c ಬಲಮಾಕಾಂಕ್ಷತೋ ಮೋಹಾತ್ತಥಾ ಬಾಣಸ್ಯ ನರ್ದತಃ ।।
ತನ್ನ ದರ್ಪದಿಂದ ಶಕ್ರಧ್ವಜದಂತಿದ್ದ ಚೈತ್ಯವೃಕ್ಷವು ಹೇಗೆ ಉರುಳಿ ಬಿದ್ದಿತೋ ಹಾಗೆ ಬಲಾಕಾಂಕ್ಷಿಯಾಗಿ ಮೋಹದಿಂದ ಗರ್ಜಿಸುತ್ತಿರುವ ಬಾಣನ ಪತನವೂ ಆಗುತ್ತದೆ.
19170073a ದೇವದೇವಪ್ರಸಾದಾತ್ತು ತ್ರೈಲೋಕ್ಯವಿಜಯಂ ಗತಃ ।
19170073c ಉತ್ಸೇಕಾದ್ದೃಶ್ಯತೇ ನಾಶೋ ಯುದ್ಧಾಕಾಂಕ್ಷೀ ನನರ್ದ ಹ ।।
ದೇವದೇವನ ಪ್ರಸಾದದಿಂದ ಯಾರು ತ್ರೈಲೋಕ್ಯವಿಜಯವನ್ನು ಹೊಂದಿದ್ದನೋ ಅವನ ನಾಶವು ಕಂಡುಬರುತ್ತಿರುವುದರಿಂದಲೇ ಅವನು ಯುದ್ಧಾಕಾಂಕ್ಷಿಯಾಗಿ ಉತ್ಸಾಹದಿಂದ ಗರ್ಜಿಸುತ್ತಿದ್ದಾನೆ!”
19170074a ಬಾಣಃ ಪ್ರೀತಮನಾಸ್ತ್ವೇವಂ ಪಪೌ ಪಾನಮನುತ್ತಮಮ್ ।
19170074c ದೈತ್ಯದಾನವನಾರೀಭಿಃ ಸಾರ್ಧಮುತ್ತಮವಿಕ್ರಮಃ ।।
ಆದರೆ ಉತ್ತಮ ವಿಕ್ರಮಿ ಬಾಣಸುರನಾದರೋ ಪ್ರೀತಮನಸ್ಕನಾಗಿಯೇ ದೈತ್ಯದಾನವನಾರಿಗಳೊಂದಿಗೆ ಅನುತ್ತಪ ಮಧುಪಾನದಲ್ಲಿ ನಿರತನಾದನು.
19170075a ಕುಂಭಾಂಡಶ್ಚಿಂತಯಾವಿಷ್ಟೋ ರಾಜವೇಶ್ಮಾಭ್ಯಯಾತ್ತದಾ ।
19170075c ಅಚಿಂತಯಚ್ಚ ತತ್ತ್ವಾರ್ಥಂ ತೈಸ್ತೈರುತ್ಪಾತದರ್ಶನೈಃ ।।
ಕುಂಭಾಂಡನಾದರೋ ರಾಜಭವನವನ್ನು ಆಕ್ರಮಣಿಸಿರುವ ಆ ಉತ್ಪಾತದರ್ಶನದಿಂದ ಚಿಂತಾವಿಷ್ಟನಾಗಿ ಅವುಗಳ ತತ್ತ್ವಾರ್ಥದ ಕುರಿತು ಚಿಂತಿಸತೊಡಗಿದನು.
19170076a ರಾಜಾ ಪ್ರಮಾದೀ ದುರ್ಬುದ್ಧಿರ್ಜಿತಕಾಶೀ ಮಹಾಸುರಃ ।
19170076c ಯುದ್ಧಮೇವಾಭಿಲಷತೇ ನ ದೋಷಾನ್ಮನ್ಯತೇ ಮದಾತ್ ।।
“ಈ ರಾಜಾ ಮಹಾಸುರ ದುರ್ಬುದ್ಧಿಯು ಜಯಾಕಾಂಕ್ಷಿಯೂ ಪ್ರಮಾದಿಯೂ ಆಗಿಬಿಟ್ಟಿದ್ದಾನೆ. ಮದದಿಂದಾಗಿ ಯುದ್ಧವನ್ನು ಅಭಿಲಾಷಿಸುತ್ತಾನೆಯೇ ಹೊರತು ಅದರಲ್ಲಿರುವ ದೋಷಗಳನ್ನು ನೋಡುತ್ತಿಲ್ಲ.
19170077a ಮಹೋತ್ಪಾತಭಯಂ ಚೈವ ನ ತನ್ಮಿಥ್ಯಾ ಭವಿಷ್ಯತಿ ।
19170077c ಅಪೀದಾನೀಂ ಭವೇನ್ಮಿಥ್ಯಾ ಸರ್ವಮುತ್ಪಾತದರ್ಶನಮ್ ।।
ಮಹೋತ್ಪಾತಗಳು ಸೂಚಿಸುವ ಭಯವು ಮಿಥ್ಯವಾಗುವುದಿಲ್ಲ. ಕಾಣುವ ಈ ಎಲ್ಲ ಉತ್ಪಾತಗಳೂ ಮಿಥ್ಯವಾಗುವಂತಹ ಉಪಾಯವೇನಾದರೂ ಇದೆಯೇ?
19170078a ಇಹ ತ್ವಾಸ್ತೇ ತ್ರಿನಯನಃ ಕಾರ್ತಿಕೇಯಶ್ಚ ವೀರ್ಯವಾನ್ ।
19170078c ತೇನೋತ್ಪನ್ನೋಽಪಿ ದೋಷೋ ನಃ ಕಚ್ಚಿದ್ಗಚ್ಛೇತ್ಪರಾಭವಮ್ ।।
ಇಲ್ಲಿ ತ್ರಿಯನನೂ ವೀರ್ಯವಾನ್ ಕಾರ್ತಿಕೇಯನೂ ಇದ್ದಾರೆ. ಅವರಿಂದಾಗಿ ನಮಗೆ ಉಂಟಾಗಿರುವ ಈ ದೋಷಗಳು ಹೇಗಾದರೂ ಶಾಂತವಾಗುತ್ತವೆಯೇ?
19170079a ಉತ್ಪನ್ನದೋಷಪ್ರಭವಃ ಕ್ಷಯೋಽಯಂ ಭವಿತಾ ಮಹಾನ್ ।
19170079c ದೋಷಾಣಾಂ ನ ಭವೇನ್ನಾಶ ಇತಿ ಮೇ ಧೀಯತೇ ಮತಿಃ ।।
ಇಲ್ಲಿ ಉತ್ಪನ್ನವಾಗಿರುವ ಉತ್ಪಾತರೂಪೀ ದೋಷಗಳಿಂದ ಇಲ್ಲಿ ಮಹಾ ಕ್ಷಯವುಂಟಾಗುತ್ತದೆ. ಇನ್ನು ಈ ದೋಷಗಳ ನಾಶವಾಗುವುದಿಲ್ಲ ಎಂದು ನನ್ನ ಮನಸ್ಸಿಗೆ ಅನ್ನಿಸುತ್ತಿದೆ.
19170080a ನಿಯತೋ ದೋಷ ಏವಾಯಂ ಭವಿಷ್ಯತಿ ನ ಸಂಶಯಃ ।
19170080c ದೌರಾತ್ಮ್ಯಾನ್ನೃಪತೇರಸ್ಯ ದೋಷಭೂತಾ ಹಿ ದಾನವಾಃ ।।
ಈ ನೃಪತಿಯ ದುರಾತ್ಮತೆಯೇ ನಮಗೆ ನಿಯತ ದೋಷವಾಗುತ್ತದೆ ಎನ್ನುವುದರಲ್ಲಿ ಸಂಶಯವಿಲ್ಲ. ಏಕೆಂದರೆ ದಾನವರೇ ದೋಷಯುಕ್ತರು.
19170081a ದೇವದಾನವಸಂಘಾನಾಂ ಯಃ ಕರ್ತಾ ಭುವನಪ್ರಭುಃ ।
19170081c ಭಗವಾನ್ಕಾರ್ತಿಕೇಯಶ್ಚ ಕೃತವಾನ್ಲ್ಲೋಹಿತೇ ಪುರೇ ।।
ದೇವದಾನವರ ಸಂಘಗಳ ಕರ್ತಾ ಭುವನಪ್ರಭು ಮತ್ತು ಭಗವಾನ್ ಕಾರ್ತಿಕೇಯರು ಈ ಲೋಹಿತಪುರವನ್ನು ನಿರ್ಮಿಸಿದವರು.
19170082a ಪ್ರಾಣೈಃ ಪ್ರಿಯತರೋ ನಿತ್ಯಂ ಭವಿಷ್ಯತಿ ಗುಹಃ ಸದಾ ।
19170082c ತದ್ವಿಶಿಷ್ಟಶ್ಚ ಬಾಣೋಽಪಿ ಶಿವಸ್ಯ ಸತತಂ ಪ್ರಿಯಃ ।।
ಗುಹನು ನಿತ್ಯವೂ ಶಿವನಿಗೆ ಪ್ರಾಣಗಳಿಗಿಂತಲೂ ಹೆಚ್ಚು ಪ್ರಿಯನು. ಹಾಗೆಯೇ ಸದಾ ಅವನೊಡನಿರುವ ಬಾಣನೂ ಕೂಡ ಶಿವನಿಗೆ ಸತತವೂ ಪ್ರಿಯನಾಗಿಯೇ ಇರುತ್ತಾನೆ.
19170083a ದರ್ಪೋತ್ಸೇಕಾತ್ತು ನಾಶಾಯ ವರಂ ಯಾಚಿತವಾನ್ಭವಮ್ ।
19170083c ಯುದ್ಧಹೇತೋಃ ಸ ಲುಬ್ಧಸ್ತು ಸರ್ವಥಾ ನ ಭವಿಷ್ಯತಿ ।।
ಆದರೆ ಬಲದರ್ಪದಿಂದಾಗಿ ತನ್ನದೇ ನಾಶಕ್ಕಾಗಿ ಯುದ್ಧದ ವರವನ್ನು ಭವನಿಂದ ಬೇಡಿದನು. ಯುದ್ಧದ ಕಾರಣದಿಂದಾಗಿ ಈ ಲುಬ್ಧನು ಸರ್ವಥಾ ತನ್ನ ಅಸ್ತಿತ್ವವನ್ನು ಕಳೆದುಕೊಳ್ಳುತ್ತಾನೆ.
19170084a ಯದಿ ವಿಷ್ಣುಪುರೋಗಾನಾಮಿಂದ್ರಾದೀನಾಂ ದಿವೌಕಸಾಮ್ ।
19170084c ಭವಿತ್ರೀ ಹ್ಯಭವತ್ಪ್ರಾಪ್ತಿರ್ಭವಹಸ್ತಾತ್ಕೃತಂ ಭವೇತ್ ।।
ಒಂದುವೇಳೆ ವಿಷ್ಣುವನ್ನು ಮುಂದಿಟ್ಟುಕೊಂಡು ಇಂದ್ರಾದಿ ದಿವೌಕಸರು ಆಕ್ರಮಣಿಸಿದರೂ ಭವನ ಕೈಯಿಂದ ಅವರ ಪ್ರತೀಕಾರವಾಗುತ್ತದೆ.
19170085a ಏತಯೋಶ್ಚ ಹಿ ಕೋ ಯುದ್ಧಂ ಕುಮಾರಭವಯೋರಿಹ ।
19170085c ಶಕ್ತೋ ದಾತುಂ ಸಮಾಗಮ್ಯ ಬಾಣಸಾಹಾಯ್ಯಕಾಂಕ್ಷಿಣೋಃ ।।
ಬಾಣನಿಗೆ ಸಹಾಯಾಕಾಂಕ್ಷಿಗಳಾಗಿರುವ ಕುಮಾರ ಮತ್ತು ಭವರನ್ನು ಯುದ್ಧದಲ್ಲಿ ಯಾರುತಾನೇ ಎದುರಿಸಬಲ್ಲರು?
19170086a ನ ಚ ದೇವವಚೋ ಮಿಥ್ಯಾ ಭವಿಷ್ಯತಿ ಕದಾಚನ ।
19170086c ಭವಿಷ್ಯತಿ ಮಹದ್ಯುದ್ಧಂ ಸರ್ವದೈತ್ಯವಿನಾಶನಮ್ ।।
ದೇವವಚನವು ಎಂದೂ ಮಿಥ್ಯವಾಗುವುದಿಲ್ಲ. ಸರ್ವದೈತ್ಯವಿನಾಶಕಾರೀ ಮಹಾಯುದ್ಧವು ನಡೆಯುತ್ತದೆ.”
19170087a ಸ ಏವಂ ಚಿಂತಯಾವಿಷ್ಟಃ ಕುಂಭಾಂಡಸ್ತತ್ತ್ವದರ್ಶಿವಾನ್ ।
19170087c ಸ್ವಸ್ತಿಪ್ರಣಿಹಿತಾಂ ಬುದ್ಧಿಂ ಚಕಾರ ಸ ಮಹಾಸುರಃ ।।
ಹೀಗೆ ಚಿಂತಾವಿಷ್ಟನಾದ ತತ್ತ್ವದರ್ಶಿ ಮಹಾಸುರ ಕುಂಭಾಂಡನು ತನ್ನ ಬುದ್ಧಿಯನ್ನು ಕಲ್ಯಾಣಕಾರೀ ಯೋಚನೆಗಳಲ್ಲಿ ತೊಡಗಿಸಿಕೊಂಡನು.
19170088a ಯೇ ಹಿ ದೇವೈರ್ವಿರುದ್ಧ್ಯಂತೇ ಪುಣ್ಯಕರ್ಮಭಿರಾಹವೇ ।
19170088c ಯಥಾ ಬಲಿರ್ನಿಯಮಿತಸ್ತಥಾ ತೇ ಯಾಂತಿ ಸಂಕ್ಷಯಮ್ ।।
ಯುದ್ಧದಲ್ಲಿ ಯಾರು ಪುಣ್ಯಕರ್ಮಿ ದೇವತೆಗಳನ್ನು ವಿರೋಧಿಸುತ್ತಾರೋ ಅವರು ಬಲಿಯು ಬಂಧನಕ್ಕೊಳಗಾದಂತೆ ನಷ್ಟವಾಗುತ್ತಾರೆ.”
ಸಮಾಪ್ತಿ
ಇತಿ ಶ್ರೀಮಹಾಭಾರತೇ ಖಿಲೇಷು ಹರಿವಂಶೇ ವಿಷ್ಣುಪರ್ವಣಿ ಬಾಣಯುದ್ಧೇ ಸಪ್ತತ್ಯಧಿಕಶತತಮೋಽಧ್ಯಾಯಃ