169: ವಾಸುದೇವಪರಾಕ್ರಮವರ್ಣನಮ್

ಪ್ರವೇಶ

।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।

ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ

ಶ್ರೀ ಮಹಾಭಾರತ

ಖಿಲಭಾಗೇ ಹರಿವಂಶಃ

ವಿಷ್ಣು ಪರ್ವ

ಅಧ್ಯಾಯ 169

ಸಾರ

ಶ್ರೀಕೃಷ್ಣನ ಪರಾಕ್ರಮಗಳ ಸಂಕ್ಷಿಪ್ತ ವರ್ಣನೆ (1-23).

19169001 ಜನಮೇಜಯ ಉವಾಚ ।
19169001a ಭೂಯ ಏವಂ ದ್ವಿಜಶ್ರೇಷ್ಠ ಯದುಸಿಂಹಸ್ಯ ಧೀಮತಃ ।
19169001c ಕರ್ಮಾಣ್ಯಪರಿಮೇಯಾಣಿ ಶ್ರೋತುಮಿಚ್ಛಾಮಿ ತತ್ತ್ವತಃ ।।

ಜನಮೇಜಯನು ಹೇಳಿದನು: “ದ್ವಿಜಶ್ರೇಷ್ಠ! ಧೀಮಂತ ಯದುಸಿಂಹನ ಅಪರಿಮೇಯ ಕರ್ಮಗಳ ಕುರಿತು ತತ್ತ್ವತಃ ಇನ್ನೂ ಕೇಳ ಬಯಸುತ್ತೇನೆ.

19169002a ಶ್ರುಯಂತೇ ವಿವಿಧಾನಿ ಸ್ಮ ಅದ್ಭುತಾನಿ ಮಹಾದ್ಯುತೇಃ ।
19169002c ಅಸಂಖ್ಯೇಯಾನಿ ದಿವ್ಯಾನಿ ಪ್ರಕೃತಾನ್ಯಪಿ ಸರ್ವಶಃ ।।

ಮಹಾದ್ಯುತಿಯ ವಿವಿಧ ಅದ್ಭುತಗಳನ್ನು ಹೇಳುತ್ತಾರೆ. ಅವನ ಅಸಂಖ್ಯ ಕರ್ಮಗಳು ಸರ್ವಶಃ ದಿವ್ಯವಾದವುಗಳೇ.

19169003a ಯಾನ್ಯಹಂ ವಿವಿಧಾನ್ಯಸ್ಯ ಶ್ರುತ್ವಾ ಪ್ರೀಯೇ ಮಹಾಮುನೇ ।
19169003c ಪ್ರಬ್ರೂಯಾಃ ಸರ್ವಶಸ್ತಾತ ತಾನಿ ಮೇ ಶೃಣ್ವತೋಽನಘ ।।

ಮಹಾಮುನೇ! ಅನಘ! ಅಯ್ಯಾ! ನಾನು ಯಾವ್ಯಾವ ವಿವಿಧ ಚರಿತ್ರೆಗಳನ್ನು ಕೇಳಿ ಪ್ರೀತನಾಗುತ್ತೇನೋ ಅವುಗಳನ್ನು ಸರ್ವಶಃ ಹೇಳು. ಅದನ್ನು ಕೇಳುತ್ತೇನೆ.”

19169004 ವೈಶಂಪಾಯನ ಉವಾಚ ।
19169004a ಬಹೂನ್ಯಾಶ್ಚರ್ಯಭೂತಾನಿ ಕೇಶವಸ್ಯ ಮಹಾತ್ಮನಃ ।
19169004c ಕಥಿತಾನಿ ಮಹಾಬಾಹೋ ನಾಂತಂ ಶಕ್ಯಂ ಹಿ ಕರ್ಮಣಾಮ್ ।।
19169005a ಗಂತುಂ ಹಿ ಭರತಶ್ರೇಷ್ಠ ವಿಸ್ತರೇಣ ಸಮಂತತಃ ।
19169005c ಆವಶ್ಯಂ ಹಿ ಮಯಾ ವಾಚ್ಯಂ ಲೇಶಮಾತ್ರೇಣ ಭಾರತ ।।

ವೈಶಂಪಾಯನನು ಹೇಳಿದನು: “ಭರತಶ್ರೇಷ್ಠ! ಭಾರತ! ಮಹಾತ್ಮ ಕೇಶವನ ಅನೇಕ ಆಶ್ಚರ್ಯಜನಕ ಚರಿತ್ರೆಗಳನ್ನು ಹೇಳಿದ್ದಾರೆ. ಮಹಾಬಾಹೋ! ಎಲ್ಲ ರೀತಿಗಳಲ್ಲಿ ವಿಸ್ತಾರವಾಗಿ ಹೋದರೆ ಅವನ ಕರ್ಮಗಳ ಕೀರ್ತನೆಯನ್ನು ಅಂತ್ಯಗೊಳಿಸಲು ಶಕ್ಯವಿಲ್ಲ. ಅವಶ್ಯವಾಗಿ ನಾನು ಅವನ ಆ ಅತ್ಯಾಶ್ಚರ್ಯ ಕರ್ಮಗಳನ್ನು ಸಂಕ್ಷಿಪ್ತವಾಗಿ ವರ್ಣಿಸುತ್ತೇನೆ.

19169006a ವಿಷ್ಣೋರಮಿತವೀರ್ಯಸ್ಯ ಪ್ರಥಿತೋದಾರಕರ್ಮಣಃ ।
19169006c ಆನುಪೂರ್ವ್ಯಾ ಪ್ರವಕ್ಷ್ಯಾಮಿ ಶೃಣುಶ್ವೈಕಮನಾ ನೃಪ ।।

ನೃಪ! ಅಮಿತವೀರ್ಯ ಸುವಿಖ್ಯಾತ ಉದಾರಕರ್ಮಿ ವಿಷ್ಣುವಿನ ಕರ್ಮಗಳನ್ನು ಕ್ರಮವಾಗಿ ಹೇಳುತ್ತೇನೆ. ಏಕಮನಸ್ಕನಾಗಿ ಕೇಳು.

19169007a ದ್ವಾರವತ್ಯಾಂ ನಿವಸತಾ ಯದುಸಿಂಹೇನ ಧೀಮತಾ ।
19169007c ರಾಷ್ಟ್ರಾಣಿ ನೃಪಮುಖ್ಯಾನಾಂ ಕ್ಷೋಭಿತಾನಿ ಮಹಾತ್ಮನಾಮ್ ।।

ದ್ವಾರವತಿಯಲ್ಲಿ ವಾಸಿಸುತ್ತಿರುವಾಗ ಧೀಮಂತ ಯದುಸಿಂಹನು ರಾಷ್ಟ್ರಗಳ ಮಹಾತ್ಮ ನೃಪಮುಖ್ಯರಲ್ಲಿ ಕ್ಷೋಭೆಯನ್ನುಂಟುಮಾಡಿದನು.

19169008a ಯದೂನಾಮಂತರಪ್ರೇಪ್ಸುರ್ವಿಚಕ್ರೋ ದಾನವೋ ಹತಃ ।
19169008c ಪುರಂ ಪ್ರಾಗ್ಜ್ಯೋತಿಷಂ ಗತ್ವಾ ಪುನಸ್ತೇನ ಮಹಾತ್ಮನಾ ।।
19169009a ಸಮುದ್ರಮಧ್ಯೇ ದುಷ್ಟಾತ್ಮಾ ನರಕೋ ದಾನವೋ ಹತಃ ।

ಯದುಗಳಲ್ಲಿ ದುರ್ಬಲತೆಯನ್ನೇ ಹುಡುಕುತ್ತಿದ್ದ ದಾನವ ವಿಚಕ್ರನನ್ನು ಅವನು ಸಂಹರಿಸಿದನು. ಪುನಃ ಮಹಾತ್ಮಾ ಕೃಷ್ಣನು ಪ್ರಾಗ್ಜ್ಯೋತಿಷ ಪುರಕ್ಕೆ ಹೋಗಿ ಸಮುದ್ರಮಧ್ಯದಲ್ಲಿ ದುಷ್ಟಾತ್ಮಾ ದಾನವ ನರಕನನ್ನು ಸಂಹರಿಸಿದನು.

19169009c ವಾಸವಂ ಚ ರಣೇ ಜಿತ್ವಾ ಪಾರಿಜಾತೋ ಹೃತೋ ಬಲಾತ್ ।।
19169010a ವರುಣಶ್ಚೈವ ಭಗವಾನ್ನಿರ್ಜಿತೋ ಲೋಹಿತೇ ಹ್ರದೇ ।

ವಾಸವನನ್ನೂ ರಣದಲ್ಲಿ ಗೆದ್ದು ಬಲದಿಂದ ಪಾರಿಜಾತವನ್ನು ಅಪಹರಿಸಿದನು. ಲೋಹಿತ ಸರೋವರದಲ್ಲಿ ಭಗವಾನನು ವರುಣನನ್ನೂ ಸೋಲಿಸಿದನು.

19169010c ದಂತವಕ್ತ್ರಶ್ಚ ಕಾರೂಷೋ ನಿಹತೋ ದಕ್ಷಿಣಾಪಥೇ ।।
19169011a ಶಿಶುಪಾಲಶ್ಚ ಸಂಪೂರ್ಣೇ ಕಿಲ್ಬಿಷೈಕಶತೇ ಹತಃ ।

ಕಾರೂಷ ದೇಶದ ದಂತವಕ್ತ್ರನು ದಕ್ಷಿಣಾಪಥದಲ್ಲಿ ಕೃಷ್ಣನಿಂದ ಹತನಾದನು. ಸಂಪೂರ್ಣ ನೂರಾಒಂದು ಅಪರಾಧಗಳ ನಂತರ ಶಿಶುಪಾಲನೂ ಹತನಾದನು.

19169011c ಗತ್ವಾ ಚ ಶೋಣಿತಪುರಮ್ ಶಂಕರೇಣಾಭಿರಕ್ಷಿತಃ ।।
19169012a ಬಲೇಃ ಸುತೋ ಮಹಾವೀರ್ಯೋ ಬಾಣೋ ಬಾಹುಸಹಸ್ರಭೃತ್ ।
19169012c ಮಹಾಮೃಧೇ ಮಹಾರಾಜ ಜಿತ್ವಾ ಜೀವನ್ವಿಸರ್ಜಿತಃ ।।

ಮಹಾರಾಜ! ಶಂಕರನ ರಕ್ಷಣೆಯಲ್ಲಿದ್ದ ಶೋಣಿತಪುರಕ್ಕೆ ಹೋಗಿ ಮಹಾಯುದ್ಧದಲ್ಲಿ ಬಲಿಯ ಮಗ ಮಹಾವೀರ್ಯ ಸಹಸ್ರಬಾಹುಗಳ ಬಾಣನನ್ನು ಗೆದ್ದು ಅವನನ್ನು ಜೀವತಃ ಬಿಟ್ಟುಬಿಟ್ಟನು.

19169013a ನಿರ್ಜಿತಃ ಪಾವಕಶ್ಚೈವ ಗಿರಿಮಧ್ಯೇ ಮಹಾತ್ಮನಾ ।
19169013c ಶಾಲ್ವಶ್ಚ ವಿಜಿತಃ ಸಂಖ್ಯೇ ಸೌಭಶ್ಚ ವಿನಿಪಾತಿತಃ ।।

ಆ ಮಹಾತ್ಮನು ಮೇರುಗಿರಿಯ ಮಧ್ಯದಲ್ಲಿ ಅಗ್ನಿಯನ್ನೂ ಸೋಲಿಸಿದನು. ಯುದ್ಧದಲ್ಲಿ ಶಾಲ್ವನನ್ನು ಸೋಲಿಸಿ ಸೌಭವನ್ನು ಹೊಡೆದುರುಳಿಸಿದನು.

19169014a ವಿಕ್ಷೋಭ್ಯ ಸಾಗರಂ ಚೈವ ಪಾಂಚಜನ್ಯೋ ವಶೀಕೃತಃ ।
19169014c ಹಯಗ್ರೀವಶ್ಚ ನಿಹತೋ ನೃಪಾಶ್ಚಾನ್ಯೇ ಮಹಾಬಲಾಃ ।।

ಸಾಗರವನ್ನು ಕ್ಷೋಭೆಗೊಳಿಸಿ ಪಾಂಚಜನ್ಯವನ್ನು ವಶೀಕರಿಸಿದನು. ಹಯಗ್ರೀವನನ್ನು ಕೊಂದನು ಮತ್ತು ಅನ್ಯ ಮಹಾಬಲ ನೃಪರನ್ನೂ ಸಂಹರಿಸಿದನು.

19169015a ಜರಾಸಂಧಸ್ಯ ನಿಧನೇ ಮೋಕ್ಷಿತಾಃ ಸರ್ವಪಾರ್ಥಿವಾಃ ।
19169015c ರಥೇನ ಜಿತ್ವಾ ನೃಪತೀನ್ಗಾಂಧಾರತನಯಾ ಹೃತಾ ।।

ಜರಾಸಂಧನ ನಿಧನದ ನಂತರ ಸರ್ವ ಪಾರ್ಥಿವರನ್ನೂ ಮೋಕ್ಷಗೊಳಿಸಿದನು. ಏಕರಥದಲ್ಲಿ ನೃಪತಿಗಳನ್ನು ಗೆದ್ದು ಗಾಂಧಾರಕನ್ಯೆಯನ್ನು ಅಪಹರಿಸಿದನು.

19169016a ಭ್ರಷ್ಟರಾಜ್ಯಾಶ್ಚ ಶೋಕಾರ್ತಾಃ ಪಾಂಡವಾಃ ಪರಿರಕ್ಷಿತಾಃ ।
19169016c ದಾಹಿತಂ ಚ ವನಂ ಘೋರಂ ಪುರುಹೂತಸ್ಯ ಖಾಂಡವಮ್ ।।

ರಾಜ್ಯಗಳನ್ನು ಕಳೆದುಕೊಂಡು ಶೋಕಾರ್ತರಾಗಿದ್ದ ಪಾಂಡವರನ್ನು ರಕ್ಷಿಸಿದನು. ಪುರುಹೂತ ಇಂದ್ರನ ಘೋರ ಖಾಂಡವವನವು ಸುಡುವಂತೆ ಮಾಡಿದನು.

19169017a ಗಾಂಡೀವಂ ಚಾಗ್ನಿನಾ ದತ್ತಮರ್ಜುನಾಯೋಪಪಾದಿತಮ್ ।
19169017c ದೌತ್ಯಂ ಚ ತತ್ಕೃತಂ ಘೋರೇ ವಿಗ್ರಹೇ ಜನಮೇಜಯ ।।

ಜನಮೇಜಯ! ಅಗ್ನಿಯು ಕೊಟ್ಟ ಗಾಂಡೀವವನ್ನು ಅರ್ಜುನನಿಗೆ ನೀಡಿದನು. ಆ ಘೋರ ಯುದ್ಧದಲ್ಲಿ ಅವನು ದೌತ್ಯವನ್ನು ಕೈಗೊಂಡನು.

19169018a ಅನೇನ ಯದುಮುಖ್ಯೇನ ಯದುವಂಶೋ ವಿವರ್ಧಿತಃ ।
19169018c ಕುಂತ್ಯಾಶ್ಚ ಪ್ರಮುಖೇ ಪ್ರೋಕ್ತಾ ಪ್ರತಿಜ್ಞಾ ಪಾಂಡವಾನ್ಪ್ರತಿ ।।
19169019a ನಿವೃತ್ತೇ ಭಾರತೇ ಯುದ್ಧೇ ಪ್ರತಿದಾಸ್ಯಾಮಿ ತತ್ಸುತಾನ್ ।

ಈ ಯಾದವಮುಖ್ಯನಿಂದಲೇ ಯದುವಂಶವು ವರ್ಧಿಸಿತು. ಇವನು ಕುಂತಿಯ ಎದಿರು ಪಾಂಡವರ ಕುರಿತು “ಭಾರತ ಯುದ್ಧವು ಮುಗಿದಾಗ ನಿನ್ನ ಮಕ್ಕಳನ್ನು ಹಿಂದಿರುಗಿಸುತ್ತೇನೆ” ಎಂದು ಪ್ರತಿಜ್ಞೆ ಮಾಡಿದ್ದನು.

19169019c ಮೋಕ್ಷಿತಶ್ಚ ಮಹಾತೇಜಾ ನೃಗಃ ಶಾಪಾತ್ಸುದಾರುಣಾತ್ ।।
19169020a ಯವನಶ್ಚ ಹತಃ ಸಂಖ್ಯೇ ಕಾಲ ಇತ್ಯಭಿವಿಶ್ರುತಃ ।

ಈ ಮಹಾತೇಜನು ನೃಗನನ್ನು ದಾರುಣ ಶಾಪದಿಂದ ಬಿಡುಗಡೆಮಾಡಿದನು. ಯುದ್ಧದಲ್ಲಿ ಕಾಲಯವನನನ್ನೂ ಇವನು ಕೊಂದನೆಂದು ಕೇಳಿದ್ದೇವೆ.

19169020c ವಾನರೌ ಚ ಮಹಾವೀರ್ಯೌ ಮೈಂದೋ ದ್ವಿವಿದ ಏವ ಚ ।।
19169021a ವಿಜಿತೌ ಯುಧಿ ದುರ್ಧರ್ಷೌ ಜಾಂಬವಾಂಶ್ಚ ಪರಾಜಿತಃ ।

ಯುದ್ಧದಲ್ಲಿ ಇವನು ಮೈಂದ ಮತ್ತು ದ್ವಿವಿದರೆಂಬ ಮಹಾವೀರ್ಯ ವಾನರರನ್ನು ಸೋಲಿಸಿದನು ಹಾಗೂ ದುರ್ಧರ್ಷ ಜಾಂಬವನನ್ನು ಪಾರಾಜಿತಗೊಳಿಸಿದನು.

19169021c ಸಾಂದೀಪನೇಸ್ತಥಾ ಪುತ್ರಸ್ತವ ಚೈವ ಪಿತಾ ತಥಾ ।।
19169022a ಗತೌ ವೈವಸ್ವತವಶಂ ಜೀವಿತೌ ತಸ್ಯ ತೇಜಸಾ ।

ವೈವಸ್ವತ ಯಮನ ವಶರಾಗಿದ್ದ ಸಾಂದೀಪನಿಯ ಪುತ್ರ ಮತ್ತು ನಿನ್ನ ತಂದೆ ಇಬ್ಬರೂ ಅವನ ತೇಜಸ್ಸಿನಿಂದ ಜೀವಿತರಾದರು.

19169022c ಸಂಗ್ರಾಮಾ ಬಹವಃ ಪ್ರಾಪ್ತಾ ಘೋರಾ ನರವರಕ್ಷಯಾಃ ।।
19169023a ನಿಹತಾಶ್ಚ ನೃಪಾಃ ಸರ್ವೇ ಕೃತ್ವಾ ತಜ್ಜಯಮದ್ಭುತಮ್ ।
19169023c ಜನಮೇಜಯಾಸ್ಯ ಯುದ್ಧೇಷು ಯಥಾ ತೇ ವರ್ಣಿತಾ ಮಯಾ ।।

ಜನಮೇಜಯ! ರಾಜರ ವಿನಾಶಕಾರಕ ಅನೇಕ ಘೋರ ಸಂಗ್ರಾಮಗಳು ನಡೆದವು. ಆ ಯುದ್ಧಗಳಲ್ಲಿ ಅದ್ಭುತ ವಿಜಯವನ್ನು ಸಾಧಿಸಿ ಕೃಷ್ಣನು ಹೇಗೆ ಸಮಸ್ತ ನೃಪರನ್ನು ಸಂಹರಿಸಿದನು ಎನ್ನುವುದನ್ನು ನಾನು ನಿನಗೆ ವರ್ಣಿಸಿದ್ದೇನೆ.”

ಸಮಾಪ್ತಿ

ಇತಿ ಶ್ರೀಮಹಾಭಾರತೇ ಖಿಲೇಷು ಹರಿವಂಶೇ ವಿಷ್ಣುಪರ್ವಣಿ ವಾಸುದೇವಮಾಹಾತ್ಮ್ಯೇ ಏಕೋನಸಪ್ತತ್ಯಧಿಕಶತತಮೋಽಧ್ಯಾಯಃ ।।