168: ಗೂಢೋದ್ಘಾಟನಮ್

ಪ್ರವೇಶ

।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।

ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ

ಶ್ರೀ ಮಹಾಭಾರತ

ಖಿಲಭಾಗೇ ಹರಿವಂಶಃ

ವಿಷ್ಣು ಪರ್ವ

ಅಧ್ಯಾಯ 168

ಸಾರ

ಕೃಷ್ಣನು ಅರ್ಜುನನಿಗೆ ತನ್ನ ಯಥಾರ್ಥ ಸ್ವರೂಪವನ್ನು ಪರಿಚಯಿಸುವುದು (1-27).

19168001 ಅರ್ಜುನ ಉವಾಚ ।
19168001a ತತಃ ಕೃಷ್ಣೋ ಭೋಜಯಿತ್ವಾ ಶತಾನಿ ಸುಬಹೂನಿ ಚ ।
19168001c ವಿಪ್ರಾಣಾಮೃಷಿಕಲ್ಪಾನಾಂ ಕೃತಕೃತ್ಯೋಽಭವತ್ತದಾ ।।

ಅರ್ಜುನನು ಹೇಳಿದನು: “ಅನಂತರ ಕೃಷ್ಣನು ಅನೇಕ ನೂರು ಋಷಿಸಮಾನ ವಿಪ್ರರಿಗೆ ಭೋಜನವನ್ನಿತ್ತು ಕೃತಕೃತ್ಯನಾದನು.

19168002a ತತಃ ಸಹ ಮಯಾ ಭುಕ್ತ್ವಾ ವೃಷ್ಣಿಭೋಜೈಶ್ಚ ಸರ್ವಶಃ ।
19168002c ವಿಚಿತ್ರಾಶ್ಚ ಕಥಾ ದಿವ್ಯಾಃ ಕಥಯಾಮಾಸ ಭಾರತ ।।

ಭಾರತ! ನೊನ್ನೊಂದಿಗೆ ಮತ್ತು ವೃಷ್ಣಿ-ಭೋಜರೊಂದಿಗೆ ತಾನೂ ಊಟಮಾಡಿ ಎಲ್ಲರಿಗೂ ವಿಚಿತ್ರಾರ್ಥಗಳುಳ್ಳ ದಿವ್ಯ ಕಥೆಗಳನ್ನು ಹೇಳತೊಡಗಿದನು.

19168003a ತತಃ ಕಥಾಂತೇ ತತ್ರಾಹಮಭಿಗಮ್ಯ ಜನಾರ್ದನಮ್ ।
19168003c ಅಪೃಚ್ಛಂ ತದ್ಯಥಾವೃತ್ತಂ ಕೃಷ್ಣಂ ಯದ್ದೃಷ್ಟವಾನಹಮ್ ।।

ಕಥೆಯ ಅಂತ್ಯದಲ್ಲಿ ಜನಾರ್ದನನ ಬಳಿಸಾರಿ ನಾನು ಏನನ್ನು ನೋಡಿದ್ದೆನೋ ಅದರ ಯಥಾವತ್ತಾದ ವೃತ್ತಾಂತವನ್ನು ಕೇಳಿದನು.

19168004a ಕಥಂ ಸಮುದ್ರಃ ಸ್ತಬ್ಧೋದಃ ಕೃತಸ್ತು ಕಮಲೇಕ್ಷಣ ।
19168004c ಪರ್ವತಾನಾಂ ಚ ವಿವರಂ ಕೃತಂ ತತ್ಕಥಮಚ್ಯುತ ।।

“ಕಮಲೇಕ್ಷಣ! ಸಮುದ್ರದ ಜಲವನ್ನು ಹೇಗೆ ಸ್ತಬ್ಧಗೊಳಿಸಿದೆ? ಅಚ್ಯುತ! ಪರ್ವತಗಳ ಮಧ್ಯೆ ಸುರಂಗವನ್ನು ಹೇಗೆ ಮಾಡಿದೆ?

19168005a ತಮಸ್ತಚ್ಚ ಕಥಂ ಘೋರಂ ಘನಂ ಚಕ್ರೇಣ ಪಾಟಿತಮ್ ।
19168005c ತಚ್ಚ ಯತ್ಪರಮಂ ತೇಜಃ ಪ್ರವಿಷ್ಟೋಽಸಿ ಕಥಂ ಚ ತತ್ ।।

ಆ ಘೋರ ಘನ ತಮಸ್ಸನ್ನು ನೀನು ಚಕ್ರದಿಂದ ಹೇಗೆ ಹರಿದೆ? ಮತ್ತು ಆ ಪರಮ ತೇಜಸ್ಸನ್ನು ನೀನು ಹೇಗೆ ಪ್ರವೇಶಿಸಿದೆ?

19168006a ಕಿಮರ್ಥಂ ತೇನ ತೇ ಬಾಲಾಸ್ತದಾ ಚಾಪಹೃತಾಃ ಪ್ರಭೋ ।
19168006c ಯಚ್ಚ ತೇ ದೀರ್ಘಮಧ್ವಾನಂ ಸಂಕ್ಷಿಪ್ತಂ ತತ್ಕಥಂ ಪುನಃ ।।

ಪ್ರಭೋ! ಯಾವ ಕಾರಣಕ್ಕಾಗಿ ಆ ತೇಜಃಸ್ವರೂಪ ಪುರುಷನು ಬಾಲಕರನ್ನು ಅಪಹರಿಸಿದ್ದನು? ಮತ್ತು ದೀರ್ಘವಾದ ಆ ಮಾರ್ಗವನ್ನು ನೀನು ಪುನಃ ಹೇಗೆ ಸಂಕ್ಷಿಪ್ತಗೊಳಿಸಿಬಿಟ್ಟೆ?

19168007a ಕಥಂ ಚಾಲ್ಪೇನ ಕಾಲೇನ ಕೃತಂ ತತ್ತದ್ಗತಾಗತಮ್ ।
19168007c ಏತತ್ಸರ್ವಂ ಯಥಾವೃತ್ತಮಾಚಕ್ಷ್ವ ಮಮ ಕೇಶವ ।।

ಹೇಗೆ ನೀನು ಅಲ್ಪವೇ ಕಾಲದಲ್ಲಿ ಅಲ್ಲಿಗೆ ಹೋಗಿಬಂದೆ? ಕೇಶವ! ಎವೆಲ್ಲವನ್ನೂ ನಡೆದಹಾಗೆ ನನಗೆ ಹೇಳು.”

19168008 ವಾಸುದೇವ ಉವಾಚ ।
19168008a ಯದ್ದರ್ಶನಾರ್ಥಂ ತೇ ಬಾಲಾ ಹೃತಾಸ್ತೇನ ಮಹಾತ್ಮನಾ ।
19168008c ವಿಪ್ರಾರ್ಥಮೇಷ್ಯತೇ ಕೃಷ್ಣೋ ನಾಗಚ್ಛೇದನ್ಯಥೇತಿ ಹ ।।

ವಾಸುದೇವನು ಹೇಳಿದನು: “ಆ ತೇಜಸ್ವೀ ಮಹಾತ್ಮನು ನನ್ನನ್ನು ನೋಡಲಿಕ್ಕಾಗಿಯೇ ಬಾಲಕರನ್ನು ಅಪಹರಿಸಿದ್ದನು. ವಿಪ್ರನ ಕಾರ್ಯಕ್ಕೆ ಕೃಷ್ಣನೇ ಹೋಗುತ್ತಾನೆ. ಅನ್ಯರು ಹೋಗುವುದಿಲ್ಲ ಎಂದು.

19168009a ಬ್ರಹ್ಮತೇಜೋಮಯಂ ದಿವ್ಯಂ ಮಹದ್ಯದ್ದೃಷ್ಟವಾನಸಿ ।
19168009c ಅಹಂ ಸ ಭರತಶ್ರೇಷ್ಠ ಮತ್ತೇಜಸ್ತತ್ಸನಾತನಮ್ ।।

ಭರತಶ್ರೇಷ್ಠ! ನೀನು ನೋಡಿದ ಆ ತೇಜೋಮಯ ದಿವ್ಯ ಮಹದ್ ಬ್ರಹ್ಮನು ನಾನೇ. ಅದು ನನ್ನ ಸನಾತನ ತೇಜಸ್ಸು.

19168010a ಪ್ರಕೃತಿಃ ಸಾ ಮಮ ಪರಾ ವ್ಯಕ್ತಾವ್ಯಕ್ತಾ ಸನಾತನೀ ।
19168010c ಯಾಂ ಪ್ರವಿಶ್ಯ ಭವಂತೀಹ ಮುಕ್ತಾ ಯೋಗವಿದುತ್ತಮಃ ।।

ಅವಳು ನನ್ನ ವ್ಯಕ್ತಾವ್ಯಕ್ತಸ್ವರೂಪೀ ಸನಾತನ ಪರಾ ಪ್ರಕೃತಿಯು. ಅದನ್ನು ಪ್ರವೇಶಿಸಿ ಯೋಗವಿದುತ್ತಮರು ಮುಕ್ತರಾಗುತ್ತಾರೆ.

19168011a ಸ ಸಾಂಖ್ಯಾನಾಂ ಗತಿಃ ಪಾರ್ಥ ಯೋಗಿನಾಂ ಚ ತಪಸ್ವಿನಾಮ್ ।
19168011c ತತ್ಪದಂ ಪರಮಂ ಬ್ರಹ್ಮ ಸರ್ವಂ ವಿಭಜತೇ ಜಗತ್ ।।

ಪಾರ್ಥ! ಅದೇ ಸಾಂಖ್ಯರ, ಯೋಗಿಗಳ ಮತ್ತು ತಪಸ್ವಿಗಳ ಮಾರ್ಗವು. ಅದೇ ಸರ್ವ ಜಗತ್ತನ್ನೂ ವಿಭಜಿಸುವ ಪರಮ ಬ್ರಹ್ಮಪದವು.

19168012a ಮಾಮೇವ ತದ್ ಘನಂ ತೇಜೋ ಜ್ಞಾತುಮರ್ಹಸಿ ಭಾರತ ।
19168012c ಸಮುದ್ರಃ ಸ್ತಬ್ಧತೋಯೋಽಹಮಹಂ ಸ್ತಂಭಯಿತಾ ಜಲಮ್ ।।

ಭಾರತ! ಆ ಘನ ತೇಜಸ್ಸು ನಾನೇ ಎಂದು ತಿಳಿಯಬೇಕು. ಸ್ತಂಭಿಸಿದ ಸಮುದ್ರದ ನೀರೂ ನಾನೇ, ಜಲವನ್ನು ಸ್ತಂಭಿಸಿದವನೂ ನಾನೇ.

19168013a ಅಹಂ ತೇ ಪರ್ವತಾಃ ಸಪ್ತ ಯೇ ದೃಷ್ಟಾ ವಿವಿಧಾಸ್ತ್ವಯಾ ।
19168013c ಪಂಕಭೂತಂ ಹಿ ತಿಮಿರಂ ದೃಷ್ಟವಾನಸಿ ಯದ್ಧಿ ತತ್ ।।

ವಿವಿಧ ರೂಪದಲ್ಲಿ ನೀನು ಕಂಡ ಆ ಸಪ್ತ ಪರ್ವತಗಳೂ ನಾನೇ. ನೀನು ನೋಡಿದ ಕೆಸರಿನ ರೂಪದ ತಿಮಿರವೂ ನಾನೇ.

19168014a ಅಹಂ ತಮೋ ಘನೀಭೂತಮಹಮೇವ ಚ ಪಾಟಕಃ ।
19168014c ಅಹಂ ಚ ಕಾಲೋ ಭೂತಾನಾಂ ಧರ್ಮಶ್ಚಾಹಂ ಸನಾತನಃ ।।

ನಾನೇ ಘನೀಭೂತವಾದ ತಮವು. ನಾನೇ ಅದನ್ನು ಹರಿದವನು. ನಾನೇ ಕಾಲ ಮತ್ತು ನಾನೇ ಭೂತಗಳ ಸನಾತನ ಧರ್ಮ.

19168015a ಚಂದ್ರಾದಿತ್ಯೌ ಮಹಾಶೈಲಾಃ ಸರಿತಶ್ಚ ಸರಾಂಸಿ ಚ ।
19168015c ಚತಸ್ರಶ್ಚ ದಿಶಃ ಸರ್ವಾ ಮಮೈವಾತ್ಮಾ ಚತುರ್ವಿಧಃ ।।

ಚಂದ್ರ, ಆದಿತ್ಯ, ಮಹಾಶೈಲಗಳು, ನದಿಗಳು, ಸರೋವರಗಳು ಮತ್ತು ನಾಲ್ಕು ದಿಕ್ಕುಗಳು ಎಲ್ಲವೂ ನನ್ನ ಚತುರ್ವಿಧ ರೂಪಗಳು.

19168016a ಚಾತುರ್ವರ್ಣ್ಯಂ ಮತ್ಪ್ರಸೂತಂ ಚಾತುರಾಶ್ರಮ್ಯಮೇವ ಚ ।
19168016c ಚಾತುರ್ವಿದ್ಧ್ಯಸ್ಯ ಕರ್ತಾಹಮಿತಿ ಬುದ್ಧ್ಯಸ್ವ ಭಾರತ ।।

ಭಾರತ! ನಾಲ್ಕು ವರ್ಣಗಳು ನನ್ನಿಂದ ಹುಟ್ಟಿದವು ಮತ್ತು ನಾಲ್ಕು ಆಶ್ರಮಗಳು ಕೂಡ. ನಾಲ್ಕು ಪ್ರಕಾರದ ಪ್ರಾಣಿಗಳನ್ನು ಸೃಷ್ಟಿಸುವವನೂ ನಾನೇ ಎಂದು ತಿಳಿ.”

19168017 ಅರ್ಜುನ ಉವಾಚ ।
19168017a ಭಗವನ್ಸರ್ವಭೂತೇಶ ವೇತ್ತುಮಿಚ್ಛಾಮಿ ತೇ ಪ್ರಭೋ ।
19168017c ಪೃಚ್ಛಾಮಿ ತ್ವಾಂ ಪ್ರಪನ್ನೋಽಹಂ ನಮಸ್ತೇ ಪುರುಷೋತ್ತಮ ।।

ಅರ್ಜುನನು ಹೇಳಿದನು: “ಭಗವನ್! ಸರ್ವಭೂತೇಶ! ಪ್ರಭೋ! ನಿನ್ನನ್ನು ತಿಳಿಯ ಬಯಸುತ್ತೇನೆ. ಪುರುಷೋತ್ತಮ! ನಿನಗೆ ನಮಸ್ಕಾರವು. ನಿನಗೆ ಶರಣುಬಂದು ಇದನ್ನು ಕೇಳುತ್ತಿದ್ದೇನೆ.”

19168018 ವಾಸುದೇವ ಉವಾಚ ।
19168018a ಬ್ರಹ್ಮ ಚ ಬ್ರಾಹ್ಮಣಾಶ್ಚೈವ ತಪಃ ಸತ್ಯಂ ಚ ಭಾರತ ।
19168018c ಉಗ್ರಂ ಬೃಹತ್ತಮಂ ಚೈವ ಮತ್ತಸ್ತದ್ವಿದ್ಧಿ ಪಾಂಡವ ।।

ವಾಸುದೇವನು ಹೇಳಿದನು: “ಭಾರತ! ಪಾಂಡವ! ಬ್ರಹ್ಮ, ಬ್ರಾಹ್ಮಣ, ತಪಸ್ಸು, ಸತ್ಯ, ಉಗ್ರ (ಸಂಸಾರಬಂಧನ) ಮತ್ತು ಬೃಹತ್ತಮ (ಕೈವಲ್ಯ) – ಇವು ನನ್ನಿಂದಲೇ ಉಂಟಾಗುತ್ತದೆ ಎಂದು ತಿಳಿ.

19168019a ಪ್ರಿಯಸ್ತೇಽಹಂ ಮಹಾಬಾಹೋ ಪ್ರಿಯೋ ಮೇಽಸಿ ಧನಂಜಯ ।
19168019c ತೇನ ತೇ ಕಥಯಿಷ್ಯಾಮಿ ನಾನ್ಯಥಾ ವಕ್ತುಮುತ್ಸಹೇ ।

ಮಹಾಬಾಹೋ! ಧನಂಜಯ! ನಾನು ನಿನಗೆ ಪ್ರಿಯನು. ನೀನು ನನಗೆ ಪ್ರಿಯನು. ಆದುದರಿಂದ ನಿನಗೆ ಹೇಳುತ್ತಿದ್ದೇನೆ. ಅನ್ಯಥಾ ಹೇಳಲು ಉತ್ಸಾಹವಿಲ್ಲ.

19168019e ಅಹಂ ಯಜೂಂಷಿ ಸಾಮಾನಿ ಋಚಶ್ಚಾಥರ್ವಣಾನಿ ಚ ।।
19168020a ಋಷಯೋ ದೇವತಾ ಯಜ್ಞಾ ಮತ್ತೇಜೋ ಭರತರ್ಷಭ ।

ಭರತರ್ಷಭ! ನಾನು ಯಜುರ್ವೇದ, ಸಾಮವೇದ, ಋಗ್ವೇದ ಮತ್ತು ಅಥರ್ವವೇದ. ಋಷಿಗಳು, ದೇವತೆಗಳು ಮತ್ತು ಯಜ್ಞಗಳು ನನ್ನದೇ ತೇಜಸ್ಸುಗಳು.

19168020c ಪೃಥಿವೀ ವಾಯುರಾಕಾಶಮಾಪೋ ಜ್ಯೋತಿಶ್ಚ ಪಂಚಮಮ್ ।।
19168021a ಚಂದ್ರಾದಿತ್ಯಾವಹೋರಾತ್ರಂ ಪಕ್ಷಾ ಮಾಸಾಸ್ತಥಾರ್ತವಃ ।
19168021c ಮುಹೂರ್ತಾಶ್ಚ ಕಲಾಶ್ಚೈವ ಕ್ಷಣಾಃ ಸಂವತ್ಸರಾಸ್ತಥಾ ।।
19168022a ಮಂತ್ರಾಶ್ಚ ವಿವಿಧಾಃ ಪಾರ್ಥ ಯಾನಿ ಶಾಸ್ತ್ರಾಣಿ ಕಾನಿಚಿತ್ ।
19168022c ವಿದ್ಯಾಶ್ಚ ವೇದಿತವ್ಯಂ ಚ ಮತ್ತಃ ಪ್ರಾದುರ್ಭವಂತಿ ಹಿ ।।

ಪಾರ್ಥ! ಪೃಥ್ವಿ, ವಾಯು, ಆಕಾಶ, ಆಪ, ಮತ್ತು ಐದನೆಯ ಜ್ಯೋತಿ, ಚಂದ್ರ, ಆದಿತ್ಯ, ಅಹೋರಾತ್ರಿಗಳು, ಪಕ್ಷ-ಮಾಸ-ಋತುಗಳು, ಮುಹೂರ್ತ-ಕಲಾ-ಕ್ಷಣ-ಸಂವತ್ಸರಗಳು, ವಿವಿಧ ಮಂತ್ರಗಳು, ಯಾವುದೆಲ್ಲ ಶಾಸ್ತ್ರಗಳಿವೆಯೋ ಅವು, ವಿದ್ಯೆ, ಮತ್ತು ತಿಳಿಯಬೇಕಾದ ಎಲ್ಲವೂ ನನ್ನಿಂದಲೇ ಹುಟ್ಟಿಕೊಂಡಿವೆ ಎಂದು ತಿಳಿ.

19168023a ಮನ್ಮಯಂ ವಿದ್ಧಿ ಕೌಂತೇಯ ಕ್ಷಯಂ ಸೃಷ್ಟಿಂ ಚ ಭಾರತ ।
19168023c ಸಚ್ಚಾಸಚ್ಚ ಮಮೈವಾತ್ಮಾ ಸದಸಚ್ಚೈವ ಯತ್ಪರಮ್ ।।

ಕೌಂತೇಯ! ಭಾರತ! ಸೃಷ್ಟಿ ಮತ್ತು ಕ್ಷಯ ಇವು ನನ್ನವೇ ಸ್ವರೂಪಗಳೆಂದು ತಿಳಿ. ಸತ್, ಅಸತ್, ಸದಸತ್ ಮತ್ತು ಅದಕ್ಕೂ ಆಚೆಯಿರುವ ತತ್ತ್ವ ಎಲ್ಲವೂ ನನ್ನದೇ ಆತ್ಮವು.””

19168024 ಅರ್ಜುನ ಉವಾಚ ।
19168024a ಏವಮುಕ್ತೋಽಸ್ಮಿ ಕೃಷ್ಣೇನ ಪ್ರೀಯಮಾಣೇನ ವೈ ತದಾ ।
19168024c ತಥೈವ ಚ ಮನೋ ನಿತ್ಯಮಭವನ್ಮೇ ಜನಾರ್ದನೇ ।।
19168025a ಏತಚ್ಛ್ರುತಂ ಚ ದೃಷ್ಟಂ ಚ ಮಾಹಾತ್ಮ್ಯಂ ಕೇಶವಸ್ಯ ಮೇ ।
19168025c ಯನ್ಮಾಂ ಪೃಚ್ಛಸಿ ರಾಜೇಂದ್ರ ಭೂಯಾಂಶ್ಚಾತೋ ಜನಾರ್ದನಃ ।।

ಅರ್ಜುನನು ಹೇಳಿದನು: “ರಾಜೇಂದ್ರ! ಯಾವಾಗ ಪ್ರಸನ್ನ ಕೃಷ್ಣನು ನನಗೆ ಹೀಗೆ ಹೇಳಿದ್ದನೋ ಅಂದಿನಿಂದ ನನ್ನ ಮನಸ್ಸು ನಿತ್ಯವೂ ಜನಾರ್ದನನಲ್ಲಿದೆ. ನಾನು ಕೇಳಿದ ಮತ್ತು ನೋಡಿದ ಕೇಶವನ ಮಹಾತ್ಮೆಯನ್ನು ನೀನು ಪ್ರಶ್ನಿಸಿದುದರಿಂದ ಹೇಳಿದ್ದೇನೆ. ಆದರೆ ಅವನ ಮಹಾತ್ಮೆಯು ಇದಕ್ಕಿಂತಲೂ ಹೆಚ್ಚಿನದು.””

19168026 ವೈಶಂಪಾಯನ ಉವಾಚ ।
19168026a ಏತಚ್ಛ್ರುತ್ವಾ ಕುರುಶ್ರೇಷ್ಠೋ ಧರ್ಮರಾಜೋ ಯುಧಿಷ್ಠಿರಃ ।
19168026c ಪೂಜಯಾಮಾಸ ಧರ್ಮಾತ್ಮಾ ಗೋವಿಂದಂ ಪುರುಷೋತ್ತಮಮ್ ।।

ವೈಶಂಪಾಯನನು ಹೇಳಿದನು: “ಇದನ್ನು ಕೇಳಿ ಕುರುಶ್ರೇಷ್ಠ ಧರ್ಮರಾಜ ಯುಧಿಷ್ಠಿರನು ಧರ್ಮಾತ್ಮಾ ಪುರುಷೋತ್ತಮ ಗೋವಿಂದನನ್ನು ಪೂಜಿಸಿದನು.

19168027a ವಿಸ್ಮಿತಶ್ಚಾಭವದ್ರಾಜಾ ಸಹ ಸರ್ವೈಃ ಸಹೋದರೈಃ ।
19168027c ರಾಜಭಿಶ್ಚ ಸಮಾಸೀನೈರ್ಯೇ ತತ್ರಾಸನ್ಸಮಾಗತಾಃ ।।

ಆಗ ಸಹೋದರರೊಂದಿಗೆ ರಾಜಾ ಯುಧಿಷ್ಠಿರ ಮತ್ತು ಅಲ್ಲಿ ಆಗಮಿಸಿ ಸಮಾಸೀನರಾಗಿದ್ದ ರಾಜರೂ ಕೂಡ ಪರಮ ವಿಸ್ಮಿತರಾದರು.”

ಸಮಾಪ್ತಿ

ಇತಿ ಶ್ರೀಮಹಾಭಾರತೇ ಖಿಲೇಶು ಹರಿವಂಶೇ ವಿಷ್ಣುಪರ್ವಣಿ ವಾಸುದೇವಮಾಹಾತ್ಮ್ಯೇ ಕೃಷ್ಣಾರ್ಜುನಭಾಷಣೇ ಅಷ್ಟಷಷ್ಟ್ಯಧಿಕಶತತಮೋಽಧ್ಯಾಯಃ ।।