ಪ್ರವೇಶ
।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।
ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ
ಶ್ರೀ ಮಹಾಭಾರತ
ಖಿಲಭಾಗೇ ಹರಿವಂಶಃ
ವಿಷ್ಣು ಪರ್ವ
ಅಧ್ಯಾಯ 167
ಸಾರ
ಕೃಷ್ಣನು ವರುಣಾಲಯದಲ್ಲಿದ್ದ ಮೃತಬ್ರಾಹ್ಮಣಪುತ್ರರನ್ನು ಪುನರ್ಜೀವಿತಗೊಳಿಸಿ ತಂದುದು (1-32).
19167001 ಅರ್ಜುನ ಉವಾಚ ।
19167001a ತತಃ ಪರ್ವತಜಾಲಾನಿ ಸರಿತಶ್ಚ ವನಾನಿ ಚ ।
19167001c ಅಪಶ್ಯಂ ಸಮತಿಕ್ರಮ್ಯ ಸಾಗರಂ ವರುಣಾಲಯಮ್ ।।
ಅರ್ಜುನನು ಹೇಳಿದನು: “ಅನಂತರ ಪರ್ವತಜಾಲಗಳನ್ನು, ನದಿ-ವನಗಳನ್ನು ಅತಿಕ್ರಮಿಸಿ ನಾನು ವರುಣಾಲಯ ಸಾಗರವನ್ನು ನೋಡಿದೆನು.
19167002a ತತೋಽರ್ಘಮುದಧಿಃ ಸಾಕ್ಷಾದುಪನೀಯ ಜನಾರ್ದನಮ್ ।
19167002c ಸ ಪ್ರಾಂಜಲಿಃ ಸಮುತ್ಥಾಯ ಕಿಂ ಕರೋಮೀತಿ ಚಾಬ್ರವೀತ್ ।।
ಆಗ ಸಾಕ್ಷಾತ್ ಸಮುದ್ರನು ಜನಾರ್ದನನಿಗೆ ಅರ್ಘ್ಯವನ್ನಿತ್ತು ಕೈಮುಗಿದು ನಿಂತು “ಏನು ಮಾಡಲಿ?” ಎಂದು ಕೇಳಿದನು.
19167003a ಪ್ರತಿಗೃಹ್ಯ ಸ ತಾಂ ಪೂಜಾಂ ತಮುವಾಚ ಜನಾರ್ದನಃ ।
19167003c ರಥಪಂಥಾನಮಿಚ್ಛಾಮಿ ತ್ವಯಾ ದತ್ತಂ ನದೀಪತೇ ।।
ಅವನ ಪೂಜೆಯನ್ನು ಸ್ವೀಕರಿಸಿ ಜನಾರ್ದನನು “ನದೀಪತೇ! ನನ್ನ ರಥಕ್ಕೆ ಮಾರ್ಗವನ್ನು ಕೊಡಬೇಕೆಂದು ಬಯಸುತ್ತೇನೆ” ಎಂದು ಹೇಳಿದನು.
19167004a ಅಥಾಬ್ರವೀತ್ಸಮುದ್ರಸ್ತು ಪ್ರಾಂಜಲಿರ್ಗರುಡಧ್ವಜಮ್ ।
19167004c ಪ್ರಸೀದ ಭಗವನ್ನೈವಮನ್ಯೋಽಪ್ಯೇವಂ ಗಮಿಷ್ಯತಿ ।।
ಆಗ ಸಮುದ್ರನು ಕೈಜೋಡಿಸಿ ಗರುಡಧ್ವಜನಿಗೆ ಹೇಳಿದನು: “ಭಗವನ್! ಪ್ರಸೀದನಾಗು! ಹೀಗೆ ಮಾಡಬೇಡ! ಇದರಿಂದ ಇತರರೂ ಇಲ್ಲಿ ಬಂದು-ಹೋಗುವುದನ್ನು ಮಾಡುತ್ತಾರೆ.
19167005a ತ್ವಯೈವ ಸ್ಥಾಪಿತಂ ಪೂರ್ವಮಗಾಧೋಽಸ್ಮಿ ಜನಾರ್ದನ ।
19167005c ತ್ವಯಾ ಪ್ರವರ್ತತೇ ಮಾರ್ಗೇ ಯಾಸ್ಯಾಮಿ ಗಮನಾಯತಾಮ್ ।।
ಜನಾರ್ದನ! ಹಿಂದೆ ನೀನೇ ನನ್ನನ್ನು ಹೀಗೆ ಸ್ಥಾಪಿಸಿದ್ದೆ. ನಾನು ಅಗಾಧನು. ನನ್ನಲ್ಲಿ ನೀನು ಮಾರ್ಗವನ್ನು ಮಾಡಿಕೊಂಡರೆ ಎಲ್ಲರಿಗೂ ನಾನು ಗಮನಮಾರ್ಗನಾಗಿಬಿಡುತ್ತೇನೆ.
19167006a ಅನ್ಯೇಽಪ್ಯೇವಂ ಗಮಿಷ್ಯಂತಿ ರಾಜಾನೋ ದರ್ಪಮೋಹಿತಾಃ ।
19167006c ಏವಂ ಸಂಚಿಂತ್ಯ ಗೋವಿಂದ ಯತ್ಕ್ಷಮಂ ತತ್ಸಮಾಚರ ।।
ದರ್ಪಮೋಹಿತ ಅನ್ಯ ರಾಜರೂ ಕೂಡ ನನ್ನನ್ನು ಅತಿಕ್ರಮಿಸಿ ಹೋಗುತ್ತಾರೆ. ಇದನ್ನು ಯೋಚಿಸಿ ಗೋವಿಂದ! ಯಾವುದು ಉಚಿತವೋ ಅದನ್ನು ಮಾಡು!”
19167007 ವಾಸುದೇವ ಉವಾಚ ।
19167007a ಬ್ರಾಹ್ಮಣಾರ್ಥಂ ಮದರ್ಥಂ ಚ ಕುರು ಸಾಗರ ಮದ್ವಚಃ ।
19167007c ಮದೃತೇ ನ ಪುಮಾನ್ಕಸ್ಚಿದನ್ಯಸ್ತ್ವಾಂ ಧರ್ಷಯಿಷ್ಯತಿ ।।
ವಾಸುದೇವನು ಹೇಳಿದನು: “ಸಾಗರ! ಈ ಬ್ರಾಹ್ಮಣನಿಗಾಗಿ ಮತ್ತು ನನಗಾಗಿ ನಾನು ಹೇಳಿದಂತೆ ಮಾಡು. ನಾನಲ್ಲದೇ ಅನ್ಯ ಯಾವ ಪುರುಷರೂ ನಿನ್ನನ್ನು ಅತಿಕ್ರಮಿಸಲಾರರು.”
19167008a ಅಥಾಬ್ರವೀತ್ಸಮುದ್ರಸ್ತು ಪುನರೇವ ಜನಾರ್ದನಮ್ ।
19167008c ಅಭಿಶಾಪಭಯಾದ್ಭೀತೋ ಬಾಡಮೇವಂ ಭವಿಷ್ಯತಿ ।।
ಆಗ ಶಾಪದ ಭಯದಿಂದ ಸಮುದ್ರನು ಜನಾರ್ದನನಿಗೆ ಪುನಃ “ಒಳ್ಳೆಯದು. ಹಾಗೆಯೇ ಆಗಲಿ!” ಎಂದನು.
19167009a ಶೋಷಯಾಮ್ಯೇಷ ಮಾರ್ಗಂ ತೇ ಯೇನ ತ್ವಂ ಕೃಷ್ಣ ಯಾಸ್ಯಸಿ ।
19167009c ರಥೇನ ಸಹ ಸೂತೇನ ಸಧ್ವಜೇನ ತು ಕೇಶವ ।।
“ಕೃಷ್ಣ! ಕೇಶವ! ಇದೋ! ನಿನ್ನ ಮಾರ್ಗವನ್ನು ಒಣಗಿಸುತ್ತೇನೆ. ಇದರಿಂದ ನೀನು ಸೂತ, ಧ್ವಜಗಳ ಸಹಿತ ರಥದಲ್ಲಿ ಹೋಗಬಹುದು.”
19167010 ವಾಸುದೇವ ಉವಾಚ ।
19167010a ಮಯಾ ದತ್ತೋ ವರಃ ಪೂರ್ವಂ ನ ಶೋಷಂ ಯಾಸ್ಯಸೀತಿ ಹ ।
19167010c ಮಾನುಷಾಸ್ತೇ ನ ಜಾನೀಯುರ್ವಿವಿಧಾನ್ರತ್ನಸಂಚಯಾನ್ ।।
19167011a ಜಲಂ ಸ್ತಂಭಯ ಸಾಧೋ ತ್ವಂ ತತೋ ಯಾಸ್ಯಾಮ್ಯಹಂ ರಥೀ ।
19167011c ನ ಚ ಕಶ್ಚಿತ್ಪ್ರಮಾಣಂ ತೇ ರತ್ನಾನಾಂ ವೇತ್ಸ್ಯತೇ ನರಃ ।।
ವಾಸುದೇವನು ಹೇಳಿದನು: “ನೀನು ಎಂದೂ ಒಣಗುವುದಿಲ್ಲ ಎಂದು ಹಿಂದೆ ನಾನು ನಿನಗೆ ವರವನ್ನಿತ್ತಿದ್ದೆನು. ನಿನ್ನಲ್ಲಿರುವ ವಿವಿಧ ರತ್ನ ಸಂಚಯಗಳನ್ನು ಮನುಷ್ಯರು ತಿಳಿಯಬಾರದು. ಆದುದರಿಂದ ಸಾಧೋ! ನೀನು ಜಲವನ್ನು ಸ್ತಂಭಿತಗೊಳಿಸು. ಅದರ ಮೇಲೆ ಈ ರಥದಲ್ಲಿ ನಾನು ಹೋಗುತ್ತೇನೆ. ಯಾವ ಮನುಷ್ಯನೂ ನಿನ್ನಲ್ಲಿರುವ ರತ್ನಗಳ ಪ್ರಮಾಣವನ್ನು ತಿಳಿಯಲಾರನು.”
19167012a ಸಾಗರೇಣ ತಥೇತ್ಯುಕ್ತೇ ಪ್ರಸ್ಥಿತಾಃ ಸ್ಮ ಜಲೇನ ವೈ ।
19167012c ಸ್ತಂಭಿತೇನ ಪಥಾ ಭೂಮೌ ಮಣಿವರ್ಣೇನ ಭಾಸ್ವತಾ ।।
ಸಾಗರನು ಹಾಗೆಯೇ ಆಗಲೆಂದು ಹೇಳಲು ನಾವು ಮಣಿವರ್ಣದ ನೆಲದಂತೆ ಹೊಳೆಯುತ್ತಿದ್ದ ಸ್ತಂಭಿತ ಜಲದ ಮೇಲೆ ಪ್ರಯಾಣಿಸಿದೆವು.
19167013a ತತೋಽರ್ಣವಂ ಸಮುತ್ತೀರ್ಯ ಕುರೂನಪ್ಯುತ್ತರಾನ್ವಯಮ್ ।
19167013c ಕ್ಷಣೇನ ಸಮತಿಕ್ರಾಂತಾ ಗಂಧಮಾದನಮೇವ ಚ ।।
ಅನಂತರ ಸಮುದ್ರವನ್ನು ದಾಟಿ ಉತ್ತರ ಕುರುವನ್ನು ತಲುಪಿದೆವು. ನಂತರ ಕ್ಷಣದಲ್ಲಿಯೇ ಗಂಧಮಾದನ ಪರ್ವತವನ್ನೂ ದಾಟಿದೆವು.
19167014a ತತಸ್ತು ಪರ್ವತಾಃ ಸಪ್ತ ಕೇಶವಂ ಸಮುಪಸ್ಥಿತಾಃ ।
19167014c ಜಯಂತೋ ವೈಜಯಂತಶ್ಚ ನೀಲೋ ರಜತಪರ್ವತಃ ।।
19167015a ಮಹಾಮೇರುಃ ಸಕೈಲಾಸ ಇಂದ್ರಕೂಟಶ್ಚ ನಾಮತಃ ।
19167015c ಬಿಭ್ರಾಣಾ ವರ್ಣರೂಪಾಣಿ ವಿವಿಧಾನ್ಯದ್ಭುತಾನಿ ಚ ।।
ಆಗ ಜಯಂತ, ವೈಜಯಂತ, ನೀಲ, ರಜತಪರ್ವತ, ಮಹಾಮೇರು, ಕೈಲಾಸ ಮತ್ತು ಇಂದ್ರಕೂಟಗಳೆಂಬ ಏಳು ಪರ್ವತಗಳು ಕೇಶವನ ಸೇವೆಗೆ ಉಪಸ್ಥಿತರಾದವು. ಅವರು ವಿವಿಧ ಅದ್ಭುತ ವರ್ಣರೂಪಗಳಿಂದ ಹೊಳೆಯುತ್ತಿದ್ದರು.
19167016a ಉಪಸ್ಥಾಯ ಚ ಗೋವಿಂದಂ ಕಿಂ ಕುರ್ಮೇತ್ಯಬ್ರುವಂಸ್ತದಾ ।
19167016c ತಾಂಶ್ಚೈವ ಪ್ರತಿಜಗ್ರಾಹ ವಿಧಿವನ್ಮಧುಸೂದನಃ ।।
ಗೋವಿಂದನ ಸೇವೆಗೆ ಉಪಸ್ಥಿರತಾಗಿ ಅವರು “ಏನು ಮಾಡಬೇಕು” ಎಂದು ಕೇಳಲು ಮಧುಸೂದನನು ಅವರ ವಿಧಿವತ್ತಾದ ಸತ್ಕಾರಗಳನ್ನು ಸ್ವೀಕರಿಸಿದನು.
19167017a ತಾನುವಾಚ ಹೃಷೀಕೇಶಃ ಪ್ರಣಾಮಾವನತಾನ್ಸ್ಥಿತಾನ್ ।
19167017c ವಿವರಂ ಗಚ್ಛತೋ ಮೇಽದ್ಯ ರಥಮಾರ್ಗಃ ಪ್ರದೀಯತಾಮ್ ।।
ಕೈಮುಗಿದು ನಿಂತಿದ್ದ ಅವರಿಗೆ ಹೃಷೀಕೇಶನು “ನಾನೊಂದು ಗೂಢಸ್ಥಾನಕ್ಕೆ ಹೋಗುತ್ತಿದ್ದೇನೆ. ನನ್ನ ರಥಕ್ಕೆ ಮಾರ್ಗವನ್ನು ಕೊಡಿ!” ಎಂದನು.
19167018a ತೇ ಕೃಷ್ಣಸ್ಯ ವಚಃ ಶ್ರುತ್ವಾ ಪ್ರತಿಗೃಹ್ಯ ಚ ಪರ್ವತಾಃ ।
19167018c ಪ್ರದದುಃ ಕಾಮತೋ ಮಾರ್ಗಂ ಗಚ್ಛತೋ ಭರತರ್ಷಭ ।।
ಭರತರ್ಷಭ! ಕೃಷ್ಣನ ಮಾತನ್ನು ಕೇಳಿ ಆ ಪರ್ವತಗಳು ಹೋಗಲು ಬಯಸಿದ ಮಾರ್ಗವನ್ನು ನೀಡಿದವು.
19167019a ತತ್ರೈವಾಂತರ್ಹಿತಾಃ ಸರ್ವೇ ತದಾಶ್ಚರ್ಯತರಂ ಮಮ ।
19167019c ಅಸಕ್ತಂ ಚ ರಥೋ ಯಾತಿ ಮೇಘಜಾಲೇಷ್ವಿವಾಂಶುಮಾನ್ ।।
ಅವರೆಲ್ಲರೂ ಅಲ್ಲಿಯೇ ಅಂತರ್ಧಾನರಾದರು. ನನಗೆ ಅದೊಂದು ಅತ್ಯಂತ ಆಶ್ಚರ್ಯವಾಗಿ ತೋರಿತು. ಮೇಘಜಾಲಗಳ ಮಧ್ಯದಿಂದ ಸೂರ್ಯನ ಕಿರಣಗಳು ಹೋಗುವಂತೆ ರಥವು ಯಾವ ಅಡತಡೆಯೂ ಇಲ್ಲದೇ ಮುಂದೆ ಸಾಗಿತು.
19167020a ಸಪ್ತದ್ವೀಪಾನ್ಸಸಿಂಧೂಂಶ್ಚ ಸಪ್ತ ಸಪ್ತ ಗಿರೀನಥ ।
19167020c ಲೋಕಾಲೋಕಂ ತಥಾತೀತ್ಯ ವಿವೇಶ ಸುಮಹತ್ತಮಃ ।।
ಸಪ್ತದ್ವೀಪಗಳನ್ನೂ, ಸಪ್ತ ಸಮುದ್ರಗಳನ್ನೂ, ಮತ್ತು ಏಳು ಏಳು ಗಿರಿಗಳನ್ನೂ ದಾಟಿ ಲೋಕಾಲೋಕಪರ್ವತವನ್ನೂ ದಾಟಿ ನಾವು ಮಹಾ ತಮಸ್ಸನ್ನು ಪ್ರವೇಶಿಸಿದೆವು.
19167021a ತತಃ ಕದಾಚಿದ್ದುಃಖೇನ ರಥಮೂಹುಸ್ತುರಂಗಮಾಃ ।
19167021c ಪಂಕಭೂತಂ ಹಿ ತಿಮಿರಂ ಸ್ಪರ್ಶಾದ್ವಿಜ್ಞಾಯತೇ ನೃಪ ।।
ಆಗ ಕೆಲವೊಮ್ಮೆ ಕುದುರೆಗಳು ಬಹಳ ಕಷ್ಟದಿಂದ ರಥವನ್ನು ಎಳೆಯುತ್ತಿದ್ದವು. ನೃಪ! ಸ್ಪರ್ಶದಿಂದ ಆ ತಿಮಿರವು ಕೆಸರಿನ ರೂಪದಲ್ಲಿದೆಯೆಂದು ತಿಳಿಯುತ್ತಿತ್ತು.
19167022a ಅಥ ಪರ್ವತಭೂತಂ ತತ್ತಿಮಿರಂ ಸಮಪದ್ಯತ ।
19167022c ತದಾಸಾದ್ಯ ಮಹಾರಾಜ ನಿಷ್ಪ್ರಯತ್ನಾ ಹಯಾಃ ಸ್ಥಿತಾಃ ।।
ಆಗ ಆ ಕತ್ತಲೆಯು ಪರ್ವತರೂಪದಲ್ಲಿ ತಾಗಿತು. ಮಹಾರಾಜ! ಅದರ ಬಳಿಹೋಗಿ ಕುದುರೆಗಳು ನಿಶ್ಚೇಷ್ಟಗೊಂಡು ನಿಂತವು.
19167023a ತತಶ್ಚಕ್ರೇಣ ಗೋವಿಂದಃ ಪಾಟಯಿತ್ವಾ ತಮಸ್ತದಾ ।
19167023c ಆಕಾಶಂ ದರ್ಶಯಾಮಾಸ ರಥಪಂಥಾನಮುತ್ತಮಮ್ ।।
ಆಗ ಗೋವಿಂದನು ಚಕ್ರದಿಂದ ತಮಸ್ಸನ್ನು ಹರಿದು ರಥಕ್ಕೆ ಉತ್ತಮ ಮಾರ್ಗವಾದ ಆಕಾಶವನ್ನು ತೋರಿಸಿದನು.
19167024a ನಿಷ್ಕ್ರಮ್ಯ ತಮಸಸ್ತಸ್ಮಾದಾಕಾಶೇ ದರ್ಶಿತೇ ತದಾ ।
19167024c ಭವಿಷ್ಯಾಮೀತಿ ಸಂಜ್ಞಾ ಮೇ ಭಯಂ ಚ ವಿಗತಂ ಮಮ ।।
ಆ ತಮಸ್ಸನ್ನು ದಾಟಿ ಆಕಾಶವು ಕಂಡಾಗ ನನಗೆ ಇನ್ನು ನಾನು ಜೀವಿಸಿರುತ್ತೇನೆ ಎಂದಾಗಿ ನನ್ನಲ್ಲಿದ್ದ ಭಯವು ಹೊರಟುಹೋಯಿತು.
19167025a ತತಸ್ತೇಜಃ ಪ್ರಜ್ವಲಿತಮಪಶ್ಯಂ ತತ್ತದಾಂಬರೇ ।
19167025c ಸರ್ವಲೋಕಂ ಸಮಾವಿಶ್ಯ ಸ್ಥಿತಂ ಪುರುಷವಿಗ್ರಹಮ್ ।।
ಆಗ ನಾನು ಅಂಬರದಲ್ಲಿ ಪ್ರಜ್ವಲಿಸುತ್ತಿದ್ದ ತೇಜಸ್ಸೊಂದನ್ನು ನೋಡಿದೆನು. ಅದು ಪುರುಷನ ಆಕೃತಿಯಲ್ಲಿ ಸರ್ವಲೋಕವನ್ನು ಸಮಾವೇಶಗೊಂಡು ನಿಂತಿತ್ತು.
19167026a ತಂ ಪ್ರವಿಷ್ಟೋ ಹೃಷೀಕೇಶೋ ದೀಪ್ತಂ ತೇಜೋನಿಧಿಂ ತದಾ ।
19167026c ರಥ ಏವ ಸ್ಥಿತಶ್ಚಾಹಂ ಸ ಚ ಬಹ್ಮಣಸತ್ತಮಃ ।।
ಬೆಳಗುತ್ತಿದ್ದ ಆ ತೇಜೋನಿಧಿಯನ್ನು ಹೃಷೀಕೇಶನು ಪ್ರವೇಶಿಸಿದನು. ಆದರೆ ಬ್ರಾಹ್ಮಣ ಮತ್ತು ನಾನು ಮಾತ್ರ ರಥದಲ್ಲಿಯೇ ಇದ್ದೆವು.
19167027a ಸ ಮುಹೂರ್ತಾತ್ತತಃ ಕೃಷ್ಣೋ ನಿಶ್ಚಕ್ರಾಮ ತದಾ ಪ್ರಭುಃ ।
19167027c ಚತುರೋ ಬಾಲಕಾನ್ಗೃಹ್ಯ ಬ್ರಾಹ್ಮಣಸ್ಯಾತ್ಮಜಾಂಸ್ತದಾ ।।
ಮುಹೂರ್ತದಲ್ಲಿಯೇ ಪ್ರಭು ಕೃಷ್ಣನು ಬ್ರಾಹ್ಮಣನ ನಾಲ್ಕೂ ಬಾಲಕ ಮಕ್ಕಳನ್ನೂ ಎತ್ತಿಕೊಂಡು ಹೊರಬಂದನು.
19167028a ಪ್ರದದೌ ಬ್ರಾಹ್ಮಣಾಯಾಥ ಪುತ್ರಾನ್ಸರ್ವಾಂಜನಾರ್ದನಃ ।
19167028c ತ್ರಯಃ ಪೂರ್ವಂ ಹೃತಾ ಯೇ ಚ ಸದ್ಯೋ ಜಾತಶ್ಚ ಬಾಲಕಃ ।।
ಜನಾರ್ದನನು ಬ್ರಾಹ್ಮಣನಿಗೆ ಸರ್ವ ಪುತ್ರರನ್ನೂ ನೀಡಿದನು. ಅವರಲ್ಲಿ ಮೂವರು ಹಿಂದೆ ಅಪಹೃತರಾದವರಾಗಿದ್ದರು ಮತ್ತು ಒಬ್ಬನು ಸದ್ಯ ಹುಟ್ಟಿದವನಾಗಿದ್ದನು.
19167029a ಪ್ರಹೃಷ್ಟೋ ಬ್ರಾಹ್ಮಣಸ್ತತ್ರ ಪುತ್ರಾಂದೃಷ್ಟ್ವಾ ಪುನಃ ಪ್ರಭೋ ।
19167029c ಅಹಂ ಚ ಪರಮಪ್ರೀತೋ ವಿಸ್ಮಿತಶ್ಚಾಭವಂ ತದಾ ।।
ಪ್ರಭೋ! ಅಲ್ಲಿ ಪುತ್ರರನ್ನು ನೋಡಿ ಬ್ರಾಹ್ಮಣನು ಪುನಃ ಪುನಃ ಪ್ರಹೃಷ್ಟನಾದನು. ಆಗ ನಾನೂ ಕೂಡ ಪರಮ ಪ್ರೀತನೂ ವಿಸ್ಮಿತನೂ ಆದೆನು.
19167030a ತತೋ ವಯಂ ಪುನಃ ಸರ್ವೇ ಬ್ರಾಹ್ಮಣಸ್ಯ ಚ ತೇ ಸುತಾಃ ।
19167030c ಯಥಾಗತಾ ನಿವೃತ್ತಾಃ ಸ್ಮ ತಥೈವ ಭರತರ್ಷಭ ।।
ಭರತರ್ಷಭ! ಅನಂತರ ನಾವೆಲ್ಲರೂ – ಬ್ರಾಹ್ಮಣನ ಆ ಮಕ್ಕಳೊಂದಿಗೆ – ಹೇಗೆ ಹೋಗಿದ್ದೆವೋ ಹಾಗೆಯೇ ಹಿಂದಿರುಗಿದೆವು.
19167031a ತತಃ ಸ್ಮ ದ್ವಾರಕಾಂ ಪ್ರಾಪ್ತಾಃ ಕ್ಷಣೇನ ನೃಪಸತ್ತಮ ।
19167031c ಅಸಂಪ್ರಾಪ್ತೇಽರ್ಧದಿವಸೇ ವಿಸ್ಮಿತೋಽಹಂ ಪುನಃ ಪುನಃ ।।
ನೃಪಸತ್ತಮ! ಅನಂತರ ಕ್ಷಣಮಾತ್ರದಲ್ಲಿ ನಾವು ದ್ವಾರಕೆಯನ್ನು ತಲುಪಿದೆವು. ಆಗ ಇನ್ನು ಅರ್ಧದಿವಸವೂ ಆಗಿರಲಿಲ್ಲ. ಅದರಿಂದ ನಾನು ಪುನಃ ಪುನಃ ವಿಸ್ಮಿತನಾದೆನು.
19167032a ಸಪುತ್ರಂ ಭೋಜಯಿತ್ವಾ ತು ದ್ವಿಜಂ ಕೃಷ್ಣೋ ಮಹಾಯಶಾಃ ।
19167032c ಧನೇನ ವರ್ಷಯಿತ್ವಾ ಚ ಗೃಹಂ ಪ್ರಾಸ್ಥಾಪಯತ್ತದಾ ।।
ಪುತ್ರರೊಡನೆ ಆ ದ್ವಿಜನಿಗೆ ಭೋಜನವನ್ನಿತ್ತು, ಧನದ ಮಳೆಯನ್ನೇ ಸುರಿಸಿ, ಮಹಾಯಶಸ್ವೀ ಕೃಷ್ಣನು ಅವರನ್ನು ಮನೆಗೆ ತಲುಪಿಸಿಕೊಟ್ಟನು.”
ಸಮಾಪ್ತಿ
ಇತಿ ಶ್ರೀಮಹಾಭಾರತೇ ಖಿಲೇಷು ಹರಿವಂಶೇ ವಿಷ್ಣುಪರ್ವಣಿ ವಾಸುದೇವಮಾಹಾತ್ಮ್ಯೇ ಬ್ರಾಹ್ಮಣಪುತ್ರಾನಯನೇ ಸಪ್ತಷಷ್ಟ್ಯಧಿಕಶತತಮೋಽಧ್ಯಾಯಃ ।।