166: ಕೃಷ್ಣಸ್ಯೋದೀಚೀಗಮನಮ್

ಪ್ರವೇಶ

।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।

ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ

ಶ್ರೀ ಮಹಾಭಾರತ

ಖಿಲಭಾಗೇ ಹರಿವಂಶಃ

ವಿಷ್ಣು ಪರ್ವ

ಅಧ್ಯಾಯ 166

ಸಾರ

ಬ್ರಾಹ್ಮಣ ಬಾಲಕನ ರಕ್ಷಣೆಯಾಗದಿರಲು ಬ್ರಾಹ್ಮಣನು ಅರ್ಜುನನನ್ನು ತಿರಸ್ಕರಿಸಿದುದು (1-22); ಕೃಷ್ಣನೊಡನೆ ಅವನು ಉತ್ತರ ದಿಕ್ಕಿಗೆ ಗಮನಿಸಿದುದು (23-30).

19166001 ಅರ್ಜುನ ಉವಾಚ ।
19166001a ಮುಹೂರ್ತೇನ ವಯಂ ಗ್ರಾಮಂ ತಂ ಪ್ರಾಪ್ಯ ಭರತರ್ಷಭ ।
19166001c ವಿಶ್ರಾಂತವಾಹನಾಃ ಸರ್ವೇ ನಿವಾಸಾಯೋಪಸಂಸ್ಥಿತಾಃ ।।

ಅರ್ಜುನನು ಹೇಳಿದನು: “ಭರತರ್ಷಭ! ಮೂಹೂರ್ತದಲ್ಲಿಯೇ ನಾವು ಆ ಗ್ರಾಮವನ್ನು ತಲುಪಿ ಎಲ್ಲರೂ ವಾಹನಗಳನ್ನು ವಿಶ್ರಾಂತಗೊಳಿಸಿ ಉಳಿದುಕೊಳ್ಳುವ ವ್ಯವಸ್ಥೆಮಾಡಿಕೊಂಡೆವು.

19166002a ತತೋ ಗ್ರಾಮಸ್ಯ ಮಧ್ಯೇಽಹಂ ನಿವಿಷ್ಟಃ ಕುರುನಂದನ ।
19166002c ಸಮಂತಾದ್ವೃಷ್ಣಿಸೈನ್ಯೇನ ಮಹತಾ ಪರಿವಾರಿತಃ ।।

ಕುರುನಂದನ! ಆಗ ಗ್ರಾಮದ ಮಧ್ಯೆ, ಸುತ್ತಲೂ ಮಹಾ ವೃಷ್ಣಿಸೇನೆಯಿಂದ ಪರಿವೃತನಾಗಿ, ನಿಂತೆನು.

19166003a ತತಃ ಶಕುನಯೋ ದೀಪ್ತಾ ಮೃಗಾಶ್ಚ ಕ್ರೂರಭಾಷಿಣಃ ।
19166003c ದೀಪ್ತಾಯಾಂ ದಿಶಿ ವಾಶಂತೋ ಭಯಮಾವೇದಯಂತಿ ಮೇ ।।

ಆಗ ಬೆಂಕಿಯನ್ನು ಉಗುಳುವ ಪಕ್ಷಿಗಳು ಮತ್ತು ಕ್ರೂರವಾಗಿ ಕೂಗುವ ಮೃಗಗಳು ಬೆಳಗುತ್ತಿದ್ದ ದಿಕ್ಕುಗಳ ಕಡೆ ಮುಖಮಾಡಿ ಅವ್ಯಕ್ತವಾಗಿ ಕೂಗಿ ನನಗೆ ಭಯದ ಸೂಚನೆಯನ್ನು ಕೊಡತೊಡಗಿದವು.

19166004a ಸಂಧ್ಯಾರಾಗೋ ಜಪಾವರ್ಣೋ ಭಾನುಮಾಂಶ್ಚೈವ ನಿಷ್ಪ್ರಭಃ ।
19166004c ಪಪಾತ ಮಹತೀ ಚೋಲ್ಕಾ ಪೃಥಿವೀ ಚಾಪ್ಯಕಂಪತ ।।

ಸಂಜೆಯ ಬಣ್ಣವು ಜಪಾಕುಸುಮದ ಬಣ್ಣದಂತಾಯಿತು. ಸೂರ್ಯನು ನಿಷ್ಪ್ರಭೆಗೊಂಡನು. ಮಹಾ ಉಲ್ಕೆಯೊಂದು ಬಿದ್ದು ಪೃಥ್ವಿಯು ಕಂಪಿಸಿತು.

19166005a ತಾನ್ಸಮೀಕ್ಷ್ಯ ಮಹೋತ್ಪಾತಾಂದಾರುಣಾನ್ಲೋಮಹರ್ಷಣಾನ್ ।
19166005c ಯೋಗಮಾಜ್ಞಾಪಯಂಸ್ತತ್ರ ಜನಸ್ಯೋತ್ಸುಕಚೇತಸಃ ।।
19166006a ಯುಯುಧಾನಪುರೋಗಾಶ್ಚ ವೃಷ್ಣ್ಯಂಧಕಮಹಾರಥಾಃ ।
19166006c ಸರ್ವೇ ಯುಕ್ತರಥಾಃ ಸಜ್ಜಾಃ ಸ್ವಯಂ ಚಾಹಂ ತಥಾಭವಮ್ ।।

ಆ ದಾರುಣ ರೋಮಾಂಚಕಾರೀ ಮಹಾ ಉತ್ಪಾತಗಳನ್ನು ನೋಡಿ ಯುಯುಧಾನ ಮೊದಲಾದ ವೃಷ್ಣಿ-ಅಂಧಕ ಮಹಾರಥರು ಎಲ್ಲರೂ ಉತ್ಸುಕರಾಗಿದ್ದ ಜನರಿಗೆ ಸಜ್ಜಾಗಲು ಆಜ್ಞೆಯನ್ನಿತ್ತರು. ಎಲ್ಲರೂ ರಥಾರೂಢರಾಗಿ ಸಜ್ಜಾದರು. ನಾನೂ ಕೂಡ ಸಜ್ಜಾದೆ.

19166007a ಗತೇಽರ್ಧರಾತ್ರಸಮಯೇ ಬ್ರಾಹ್ಮಣೋ ಭಯವಿಕ್ಲವಃ ।
19166007c ಉಪಾಗಮ್ಯ ಭಯಾದಸ್ಮಾನಿದಂ ವಚನಮಬ್ರವೀತ್ ।।

ಅರ್ಧರಾತ್ರಿಯ ಸಮಯವು ಕಳೆಯಲು ಭಯದಿಂದ ವ್ಯಾಕುಲಗೊಂಡ ಬ್ರಾಹ್ಮಣನು ನಮ್ಮ ಬಳಿಸಾರಿ ಭಯದಿಂದ ಈ ಮಾತನ್ನಾಡಿದನು:

19166008a ಕಾಲೋಽಯಂ ಸಮನುಪ್ರಾಪ್ತೋ ಬ್ರಾಹ್ಮಣ್ಯಾಃ ಪ್ರಸವಸ್ಯ ಮೇ ।
19166008c ತಥಾ ಭವಂತಸ್ತಿಷ್ಠಂತು ನ ಭವೇದ್ವಂಚನಂ ಯಥಾ ।।

“ಬ್ರಾಹ್ಮಣಿಯ ಪ್ರಸವದ ಸಮಯವು ಬಂದಿದೆ. ವಂಚನೆಯಾಗದಂತೆ ನೀವು ಸಿದ್ಧರಾಗಿರಿ.”

19166009a ಮುಹೂರ್ತಾದೇವ ಚಾಶ್ರೌಷಂ ಕೃಪಣಂ ರುದಿತಸ್ವನಮ್ ।
19166009c ತಸ್ಯ ವಿಪ್ರಸ್ಯ ಭವನೇ ಹ್ರಿಯತೇಽಹ್ರಿಯತೇತಿ ಚ ।।

ಮುಹೂರ್ತದಲ್ಲಿಯೇ ಆ ವಿಪ್ರನ ಭವನದಿಂದ “ಕದ್ದುಕೊಂಡು ಹೋದರು! ಕದ್ದುಕೊಂಡು ಹೋದರು!” ಎಂಬ ದೀನ ರೋದನ ಸ್ವರವು ಕೇಳಿಬಂದಿತು.

19166010a ಅಥಾಕಾಶೇ ಪುನರ್ವಾಚಮಶ್ರೌಷಂ ಬಾಲಕಸ್ಯ ವೈ ।
19166010c ಊಂಹೇತಿ ಹ್ರಿಯಮಾಣಸ್ಯ ನ ಚ ಪಶ್ಯಾಮಿ ರಾಕ್ಷಸಮ್ ।।

ಆಗ ಆಕಾಶದಿಂದ ಬಾಲಕನ ಊಂ ಎನ್ನುವ ಶಬ್ದವು ಕೇಳಿಸಿತು. ಆದರೆ ಅಪಹರಿಸುತ್ತಿದ್ದ ರಾಕ್ಷಸನು ನನಗೆ ಕಾಣಲಿಲ್ಲ.

19166011a ತತೋಽಸ್ಮಾಭಿಸ್ತದಾ ತಾತ ಶರವರ್ಷೈಃ ಸಮಂತತಃ ।
19166011c ವಿಷ್ಟಂಭಿತಾ ದಿಶಃ ಸರ್ವಾ ಹೃತ ಏವ ಸ ಬಾಲಕಃ ।।

ಅಯ್ಯಾ! ಆಗ ನಾವು ಎಲ್ಲಕಡೆಗಳಿಂದ ಶರವರ್ಷಗಳನ್ನು ಸುರಿಸಿ ಸರ್ವ ದಿಕ್ಕುಗಳನ್ನೂ ಮುಚ್ಚಿಬಿಟ್ಟೆವು. ಆದರೂ ಆ ಬಾಲಕನ ಅಪಹರಣವಾಯಿತು.

19166012a ಬ್ರಾಹ್ಮಣೋಽಽರ್ತಸ್ವರಂ ಕೃತ್ವಾ ಹೃತೇ ತಸ್ಮಿನ್ಕುಮಾರಕೇ ।
19166012c ವಾಚಃ ಸ ಪರುಷಾಸ್ತೀವ್ರಾಃ ಶ್ರಾವಯಾಮಾಸ ಮಾಂ ತದಾ ।।

ಆ ಕುಮಾರಕನು ಅಪಹೃತನಾಗಲು ಬ್ರಾಹ್ಮಣನು ಆರ್ತಸ್ವರವನ್ನು ಮಾಡಿಕೊಂಡು ನನಗೆ ತೀವ್ರ ಕಠೋರ ಮಾತುಗಳನ್ನಾಡಿದನು.

19166013a ವೃಷ್ಣಯೋ ಹತಸಂಕಲ್ಪಾಸ್ತಥಾಹಂ ನಷ್ಟಚೇತನಃ ।
19166013c ಮಾಮೇವಂ ಹಿ ವಿಶೇಷೇಣ ಬ್ರಾಹ್ಮಣಃ ಪ್ರತ್ಯಭಾಷತ ।।

ವೃಷ್ಣಿಗಳು ಹತಸಂಲ್ಪರಾಗಿದ್ದರು. ನಾನೂ ನಷ್ಟಚೇತನನಾಗಿದ್ದೆ. ವಿಶೇಷವಾಗಿ ನನ್ನನ್ನೇ ಉದ್ದೇಶಿಸಿ ಬ್ರಾಹ್ಮಣನು ಹೇಳಿದನು:

19166014a ರಕ್ಷಿಷ್ಯಾಮೀತಿ ಚೋಕ್ತಂ ತೇ ನ ಚ ರಕ್ಷಿತವಾನಸಿ ।
19166014c ಶೃಣು ವಾಕ್ಯಮಿದಂ ಶೇಷಂ ಯತ್ತ್ವಮರ್ಹಸಿ ದುರ್ಮತೇ ।।

“ದುರ್ಮತೇ! ರಕ್ಷಿಸುತ್ತೇನೆಂದು ಹೇಳಿ ನೀನು ರಕ್ಷಿಸಲಿಲ್ಲ. ಉಳಿದ ನನ್ನ ಈ ಮಾತನ್ನು ಕೇಳು. ನೀನು ಅದಕ್ಕೆ ಅರ್ಹನಾಗಿದ್ದೀಯೆ.

19166015a ವೃಥಾ ತ್ವಂ ಸ್ಪರ್ಧಸೇ ನಿತ್ಯಂ ಕೃಷ್ಣೇನಾಮಿತಬುದ್ಧಿನಾ ।
19166015c ಯದಿ ಸ್ಯಾದಿಹ ಗೋವಿಂದೋ ನೈತದತ್ಯಾಹಿತಂ ಭವೇತ್ ।।

ವೃಥಾ ನೀನು ನಿತ್ಯವೂ ಅಮಿತಬುದ್ಧಿ ಕೃಷ್ಣನೊಡನೆ ಸ್ಪರ್ಧಿಸುತ್ತಿರುತ್ತೀಯೆ! ಒಂದುವೇಳೆ ಸ್ವಯಂ ಗೋವಿಂದನೇ ಇಲ್ಲಿಗೆ ಬಂದಿದ್ದರೆ ಈ ದುರ್ಘಟನೆಯು ನಡೆಯುತ್ತಿರಲಿಲ್ಲ.

19166016a ಯಥಾ ಚತುರ್ಥಂ ಧರ್ಮಸ್ಯ ರಕ್ಷಿತಾ ಲಭತೇ ಫಲಮ್ ।
19166016c ಪಾಪಸ್ಯಾಪಿ ತಥಾ ಮೂಢ ಭಾಗಂ ಪ್ರಾಪ್ನೋತ್ಯರಕ್ಷಿತಾ ।।

ಮೂಢ! ರಕ್ಷಿತನ ಧರ್ಮದ ನಾಲ್ಕನೆಯ ಒಂದಂಶವು ರಕ್ಷಕನಿಗೆ ದೊರೆಯುವಂತೆ ರಕ್ಷಣೆಮಾಡದವನಿಗೆ ಅವನ ಪಾಪದ ಅಷ್ಟೇ ಭಾಗವು ದೊರೆಯುತ್ತದೆ.

19166017a ರಕ್ಷಿಷ್ಯಾಮೀತಿ ಚೋಕ್ತಂ ತೇ ನ ಚ ಶಕ್ತೋಽಸಿ ರಕ್ಷಿತುಮ್ ।
19166017c ಮೋಘಂ ಗಾಂಡೀವಮೇತತ್ತೇ ಮೋಘಂ ವೀರ್ಯಂ ಯಶಶ್ಚ ತೇ ।।

ರಕ್ಷಿಸುತ್ತೇನೆ ಎಂದು ನೀನು ಹೇಳಿದ್ದೆ. ಆದರೆ ರಕ್ಷಿಸಲು ಶಕ್ತನಾಗಲಿಲ್ಲ. ನಿನ್ನ ಈ ಗಾಂಡೀವವು ವ್ಯರ್ಥ! ನಿನ್ನ ಈ ವೀರ್ಯ-ಯಶಸ್ಸುಗಳೂ ವ್ಯರ್ಥವೇ.”

19166018a ಅಕಿಂಚಿದುಕ್ತ್ವಾ ತಂ ವಿಪ್ರಂ ತತೋಽಹಂ ಪ್ರಸ್ಥಿತಸ್ತಥಾ ।
19166018c ಸಹ ವೃಷ್ಣ್ಯಂಧಕಸುತೈರ್ಯತ್ರ ಕೃಷ್ಣೋ ಮಹಾದ್ಯುತಿಃ ।।

ಆ ವಿಪ್ರನಿಗೆ ಏನನ್ನೂ ಹೇಳದೇ ನಾನು ವೃಷ್ಣಿ-ಅಂಧಕ ಸುತರೊಡನೆ ಹೊರಟು ಮಹಾದ್ಯುತಿ ಕೃಷ್ಣನಿದ್ದಲ್ಲಿಗೆ ಬಂದೆನು.

19166019a ತತೋ ದ್ವಾರವತೀಂ ಗತ್ವಾ ದೃಷ್ಟ್ವಾ ಮಧುನಿಘಾತಿನಮ್ ।
19166019c ವ್ರೀಡಿತಃ ಶೋಕಸಂತಪ್ತೋ ಗೋವಿಂದೇನೋಪಲಕ್ಷಿತಃ ।।

ಅನಂತರ ದ್ವಾರವತಿಗೆ ಹೋಗಿ ಮಧುಸೂದನನನ್ನು ನೋಡಿ ನಾಚಿಕೆ ಮತ್ತು ಶೋಕಗಳಿಂದ ಸಂತಪ್ತನಾದೆನು. ಗೋವಿಂದನು ನನ್ನ ಆ ಅವಸ್ಥೆಯನ್ನು ಗಮನಿಸಿದನು.

19166020a ಸ ತು ಮಾಂ ವ್ರೀಡಿತಂ ದೃಷ್ಟ್ವಾ ವಿನಿಂದನ್ಕೃಷ್ಣಸನ್ನಿಧೌ ।
19166020c ಮೌಢ್ಯಂ ಪಶ್ಯತ ಮೇ ಯೋಽಹಂ ಶ್ರದ್ದಧೇ ಕ್ಲೀಬಕತ್ಥನಮ್ ।।

ಆ ಬ್ರಾಹ್ಮಣನಾದರೋ ನಾನು ಲಜ್ಜಿತನಾದುದನ್ನು ಕಂಡು ಕೃಷ್ಣನ ಸನ್ನಿಧಿಯಲ್ಲಿ ನನ್ನನ್ನು ಇನ್ನೂ ನಿಂದಿಸಿದನು: “ನನ್ನ ಮೂಢತನವನ್ನು ನೋಡಿ! ಈ ಹೇಡಿಯ ಮಾತಿನಲ್ಲಿ ನಾನು ಶ್ರದ್ಧೆಯನ್ನಿಟ್ಟಿದ್ದೆ!

19166021a ನ ಪ್ರದ್ಯುಮ್ನೋ ನಾನಿರುದ್ಧೋ ನ ರಾಮೋ ನ ಚ ಕೇಶವಃ ।
19166021c ಯತ್ರ ಶಕ್ತಾಃ ಪರಿತ್ರಾತುಂ ಕೋಽನ್ಯಸ್ತದವನೇಶ್ವರಃ ।।

ಎಲ್ಲಿ ಪ್ರದ್ಯುಮ್ನನಾಗಲೀ, ಅನಿರುದ್ಧನಾಗಲೀ, ರಾಮನಾಗಲೀ ಮತ್ತು ಕೇಶವನಾಗಲೀ ರಕ್ಷಿಸಲು ಶಕ್ತರಾಗಲಿಲ್ಲವೋ ಅಲ್ಲಿ ಅನ್ಯ ಯಾವ ಅವನೇಶ್ವರನು ರಕ್ಷಿಸಬಲ್ಲನು?

19166022a ಧಿಗರ್ಜುನಂ ವೃಥಾನಾದಂ ಧಿಗಾತ್ಮಶ್ಲಾಘಿನೋ ಧನುಃ ।
19166022c ದೈವೋಪಸೃಷ್ಟೋ ಯೋ ಮೌರ್ಖ್ಯಾದಾಗಚ್ಛತಿ ಚ ದುರ್ಮತಿಃ ।।

ವೃಥಾ ನಾದಗೈಯುವ ಈ ಅರ್ಜುನನಿಗೆ ಧಿಕ್ಕಾರ! ಆತ್ಮಶ್ಲಾಘೀ ಇವನ ಈ ಧನುಸ್ಸಿಗೂ ಧಿಕ್ಕಾರ! ದೈವದಿಂದ ಸಾಯಿಸಲ್ಪಟ್ಟಿರುವ ಈ ದುರ್ಮತಿಯು ಮೂರ್ಖತನದಿಂದ ನನ್ನನ್ನು ರಕ್ಷಿಸಲು ಬಂದಿದ್ದಾನೆ!””

19166023a ಏವಂ ಶಪತಿ ವಿಪ್ರರ್ಷೌ ವಿದ್ಯಾಮಾಸ್ಥಾಯ ವೈಷ್ಣವೀಮ್ ।
19166023c ಯಯೌ ಸಂಯಮನೀಂ ವೀರೋ ಯತ್ರಾಸ್ತೇ ಭಗವಾನ್ಯಮಃ ।।

(ವೈಶಂಪಾಯನನು ಹೇಳಿದನು:) ಆ ವಿಪ್ರರ್ಷಿಯು ಈ ರೀತಿ ಶಪಿಸಲು ವೀರ ಅರ್ಜುನನು ವೈಷ್ಣವೀ ವಿದ್ಯೆಯನ್ನು ಬಳಸಿ ಭಗವಾನ್ ಯಮನಿರುವ ಸಂಯಮನೀ ಪುರಿಗೆ ಹೋದನು.

19166024a ವಿಪ್ರಾಪತ್ಯಮಚಕ್ಷಾಣಸ್ತತ ಐಂದ್ರೀಮಗಾತ್ಪುರೀಮ್ ।
19166024c ಆಗ್ನೇಯೀಂ ನೈರೃತೀಂ ಸೌಮ್ಯಾಮುದೀಚೀಂ ವಾರುಣೀಂ ತಥಾ ।।

ಅಲ್ಲಿ ವಿಪ್ರನ ಪುತ್ರನನ್ನು ಕಾಣದೇ ಅವನು ಕ್ರಮಶಃ ಇಂದ್ರ, ಅಗ್ನಿ, ನಿರೃತಿ, ಉತ್ತರದಲ್ಲಿದ್ದ ಸೋಮ ಮತ್ತು ವರುಣ – ಇವರ ಪುರಿಗಳಿಗೂ ಹೋದನು.

19166025a ರಸಾತಲಂ ನಾಕಪೃಷ್ಠಂ ಧಿಷ್ಣ್ಯಾನ್ಯನ್ಯಾನ್ಯುದಾಯುಧಃ ।
19166025c ತತೋಽಲಬ್ಧ್ವಾ ದ್ವಿಜಸುತಮನಿಸ್ತೀರ್ಣಪ್ರತಿಶ್ರವಃ ।।

ರಸಾತಲ ಮತ್ತು ನಾಕಪೃಷ್ಠಗಳಲ್ಲಿಯೂ ಆಯುಧಸಹಿತ ಹೋದನು. ಅಲ್ಲಿಯೂ ಬ್ರಾಹ್ಮಣ ಬಾಲಕನು ದೊರೆಯದಿರಲು ಅವನಿಗೆ ತನ್ನ ಪ್ರತಿಜ್ಞೆಯನ್ನು ಪೂರೈಸಲಾಗಲಿಲ್ಲ.

19166026a ಅಗ್ನಿಂ ವಿವಿಕ್ಷುಃ ಕೃಷ್ಣೇನ ಪ್ರದ್ಯುಮ್ನೇನ ನಿಷೇಧಿತಃ ।
19166026c ದರ್ಶಯೇ ದ್ವಿಜಸೂನುಂ ತೇ ಮಾವಜ್ಞಾತ್ಮಾನಮಾತ್ಮನಾ ।।
19166027a ಕೀರ್ತಿಂ ನ ಏತೇ ವಿಪುಲಾಂ ಸ್ಥಾಪಯಿಷ್ಯಂತಿ ಮಾನವಾಃ ।
19166027c ಇತಿ ಸಂಭಾಶ್ಯ ಮಾಂ ಸ್ನೇಹಾತ್ಸಮಾಶ್ವಾಸ್ಯ ಚ ಮಾಧವಃ ।।

ಅರ್ಜುನನು ಅಗ್ನಿಪ್ರವೇಶಮಾಡಲು ನಿಶ್ಚಯಿಸಲು ಕೃಷ್ಣ ಮತ್ತು ಪ್ರದ್ಯುಮ್ನರು ಅವನನ್ನು ತಡೆದರು. “ನಿನಗೆ ನಾನು ದ್ವಿಜಪುತ್ರನನ್ನು ತೋರಿಸುತ್ತೇನೆ. ನಿನ್ನನ್ನು ನೀನು ಅವಹೇಳನ ಮಾಡಿಕೊಳ್ಳಬೇಡ. ಇಲ್ಲಿ ಮಾನವರು ನಿನ್ನ ವಿಪುಲ ಕೀರ್ತಿಯನ್ನು ಸ್ಥಾಪಿಸುತ್ತಾರೆ.” ಹೀಗೆ ಮಾಧವನು ಸ್ನೇಹದಿಂದ ಮಾತನಾಡಿ ಅರ್ಜುನನಿಗೆ ಆಶ್ವಾಸನೆಯನ್ನು ನೀಡಿದನು.

19166028a ಸಾಂತ್ವಯಿತ್ವಾ ತು ತಂ ವಿಪ್ರಮಿದಂ ವಚನಮಬ್ರವೀತ್ ।
19166028c ಸುಗ್ರೀವಂ ಚೈವ ಶೈಬ್ಯಂ ಚ ಮೇಘಪುಷ್ಪಬಲಾಹಕೌ ।।
19166029a ಯೋಜಯಾಶ್ವಾನಿತಿ ತದಾ ದಾರುಕಂ ಪ್ರತ್ಯಭಾಷತ ।

ಆ ವಿಪ್ರನನ್ನು ಸಂತವಿಸಿ ಕೃಷ್ಣನು “ಸುಗ್ರೀವ, ಶೈಬ್ಯ, ಮೇಘಪುಷ್ಪ ಮತ್ತು ಬಲಾಹಕಗಳನ್ನು ಕಟ್ಟು” ಎಂದು ದಾರುಕನಿಗೆ ಹೇಳಿದನು.

19166029c ಆರೋಪ್ಯ ಬ್ರಾಹ್ಮಣಂ ಕೃಷ್ಣೋ ಹ್ಯವರೋಪ್ಯ ಚ ದಾರುಕಮ್ ।।
19166030a ಮಾಮುವಾಚ ತತಃ ಶೌರಿಃ ಸಾರಥ್ಯಂ ಕ್ರಿಯತಾಮಿತಿ ।

(ಅರ್ಜುನನು ಹೇಳಿದನು:) ಬ್ರಾಹ್ಮಣನನ್ನು ರಥದ ಮೇಲೆ ಏರಿಸಿಕೊಂಡು, ದಾರುಕನನ್ನು ಕೆಳಗಿಳಿಸಿ, ಶೌರಿ ಕೃಷ್ಣನು ನನಗೆ “ಸಾರಥ್ಯವನ್ನು ಮಾಡು” ಎಂದನು.

19166030c ತತಃ ಸಮಾಸ್ಥಾಯ ರಥಂ ಕೃಷ್ಣೋಽಹಂ ಬ್ರಾಹ್ಮಣಃ ಸ ಚ ।
19166030e ಪ್ರಯಾತಾಃ ಸ್ಮ ದಿಶಂ ಸೌಮ್ಯಾಮುದೀಚೀಂ ಕೌರವರ್ಷಭ ।।

ಕೌರವರ್ಷಭ! ಅನಂತರ ಕೃಷ್ಣ, ಬ್ರಾಹ್ಮಣ ಮತ್ತು ನಾನು ರಥದಲ್ಲಿ ಕುಳಿತು ಸೋಮನ ಉತ್ತರ ದಿಕ್ಕಿಗೆ ಪ್ರಯಾಣಿಸಿದೆವು.”

ಸಮಾಪ್ತಿ

ಇತಿ ಶ್ರೀಮಹಾಭಾರತೇ ಖಿಲೇಷು ಹರಿವಂಶೇ ವಿಷ್ಣುಪರ್ವಣಿ ವಾಸುದೇವಮಾಹಾತ್ಮ್ಯೇ ಕೃಷ್ಣಸ್ಯ ಉದೀಚೀಗಮನೇ ಷಷ್ಟಷಷ್ಟ್ಯಧಿಕಶತತಮೋಽಧ್ಯಾಯಃ ।।