165: ವಾಸುದೇವಮಾಹಾತ್ಮ್ಯಮ್

ಪ್ರವೇಶ

।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।

ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ

ಶ್ರೀ ಮಹಾಭಾರತ

ಖಿಲಭಾಗೇ ಹರಿವಂಶಃ

ವಿಷ್ಣು ಪರ್ವ

ಅಧ್ಯಾಯ 165

ಸಾರ

ವಾಸುದೇವನ ಮಹಿಮೆಯ ಕುರಿತು ಜನಮೇಜಯನು ಪ್ರಶ್ನಿಸಲು ಅರ್ಜುನನು ಯುಧಿಷ್ಠಿರನಿಗೆ ಹೇಳಿದ ಘಟನೆಯನ್ನು ವರ್ಣಿಸಲು ವೈಶಂಪಾಯನನು ಪ್ರಾರಂಭಿಸಿದುದು (1-5). ಕೃಷ್ಣನ ಅನುಜ್ಞೆಯನ್ನು ಪಡೆದು ಅರ್ಜುನನು ಬ್ರಾಹ್ಮಣ ಬಾಲಕನನ್ನು ರಕ್ಷಿಸಲು ಹೋದುದು (6-18).

19165001 ಜನಮೇಜಯ ಉವಾಚ ।
19165001a ಭೂಯ ಏವ ಮಹಾಬಾಹೋ ಕೃಷ್ಣಾಸ್ಯ ಜಗತಾಂ ಪತೇಃ ।
19165001c ಮಾಹಾತ್ಮ್ಯಂ ಶ್ರೋತುಮಿಚ್ಛಾಮಿ ಪರಮಂ ದ್ವಿಜಸತ್ತಮ ।।

ಜನಮೇಜಯನು ಹೇಳಿದನು: “ದ್ವಿಜಸತ್ತಮ! ಮಹಾಬಾಹು ಜಗತ್ಪತಿ ಕೃಷ್ಣನ ಪರಮ ಮಹಾತ್ಮೆಯನ್ನು ಇನ್ನೂ ಕೇಳಬಯಸುತ್ತೇನೆ.

19165002a ನ ಹಿ ಮೇ ತೃಪ್ತಿರಸ್ತೀಹ ಶೃಣ್ವತಸ್ತಸ್ಯ ಧೀಮತಃ ।
19165002c ಕರ್ಮಣಾಮನುಸಂಧಾನಂ ಪುರಾಣಸ್ಯ ಮಹಾತ್ಮನಃ ।।

ಆ ಧೀಮಂತ, ಪುರಾಣ, ಮಹಾತ್ಮನ ಕರ್ಮಪರಂಪರೆಗಳ ಶ್ರವಣಮಾಡುವುದರಿಂದ ನನಗೆ ಇನ್ನೂ ತೃಪ್ತಿಯಾಗಿಲ್ಲ.”

19165003 ವೈಶಂಪಾಯನ ಉವಾಚ ।
19165003a ನಾಂತಃ ಶಕ್ಯಃ ಪ್ರಭಾವಸ್ಯ ವಕ್ತುಂ ವರ್ಷಶತೈರಪಿ ।
19165003c ಗೋವಿಂದಸ್ಯ ಮಹಾರಾಜ ಶ್ರೂಯತಾಮಿದಮದ್ಭುತಂ ।।

ವೈಶಂಪಾಯನನು ಹೇಳಿದನು: “ಮಹಾರಾಜ! ಗೋವಿಂದನ ಪ್ರಭಾವವನ್ನು ನೂರು ವರ್ಷಗಳು ಹೇಳಿದರೂ ಹೇಳಿ ಮುಗಿಸಲು ಶಕ್ಯವಿಲ್ಲ. ಈ ಅದ್ಭುತವನ್ನು ಕೇಳಬೇಕು.

19165004a ಶರತಲ್ಪೇ ಶಯಾನೇನ ಭೀಷ್ಮೇಣ ಪರಿಚೋದಿತಃ ।
19165004c ಗಾಂಡೀವಧನ್ವಾ ಬೀಭತ್ಸುರ್ಮಾಹಾತ್ಮ್ಯಂ ಕೇಶವಸ್ಯ ಯತ್ ।।
19165005a ರಾಜ್ಞಾಂ ಮಧ್ಯೇ ಮಹಾರಾಜ ಜ್ಯೇಷ್ಠಂ ಭ್ರಾತರಮಬ್ರವೀತ್ ।
19165005c ಯುಧಿಷ್ಠಿರಂ ಜಿತಾಮಿತ್ರಮಿತಿ ತಚ್ಛೃಣು ಕೌರವ ।।

ಮಹಾರಾಜ! ಕೌರವ! ಶರತಲ್ಪದಲ್ಲಿ ಮಲಗಿದ್ದ ಭೀಷ್ಮನಿಂದ ಪ್ರಚೋದಿತನಾದ ಗಾಂಡೀವಧನ್ವಿ ಬೀಭತ್ಸುವು ರಾಜರ ಮಧ್ಯೆ ತನ್ನ ಜ್ಯೇಷ್ಠ ಭ್ರಾತಾ ಜಿತಾಮಿತ್ರ ಯುಧಿಷ್ಠಿರನಿಗೆ ಹೇಳಿದ ಕೇಶವನ ಮಹಾತ್ಮೆಯನ್ನು ಕೇಳು.

19165006 ಅರ್ಜುನ ಉವಾಚ ।
19165006a ಪುರಾಹಂ ದ್ವಾರಕಾಂ ಯಾತಃ ಸಂಬಂಧೀನವಲೋಕಕಃ ।
19165006c ನ್ಯವಸಂ ಪೂಜಿತಸ್ತತ್ರ ಭೋಜವೃಷ್ಣ್ಯಂಧಕೋತ್ತಮೈಃ ।।

ಅರ್ಜುನನು ಹೇಳಿದನು: “ಹಿಂದೆ ನಾನು ಸಂಬಂಧಿಗಳನ್ನು ಕಾಣಲು ದ್ವಾರಕೆಗೆ ಹೋಗಿದ್ದೆ. ಅಲ್ಲಿ ವೃಷ್ಣಿ-ಅಂಧಕೋತ್ತಮರಿಂದ ಸತ್ಕರಿಸಲ್ಪಟ್ಟು ವಾಸಿಸುತ್ತಿದ್ದೆ.

19165007a ತತಃ ಕದಾಚಿದ್ಧರ್ಮಾತ್ಮಾ ದೀಕ್ಷಿತೋ ಮಧುಸೂದನಃ ।
19165007c ಏಕಾಹೇನ ಮಹಾಬಾಹುಃ ಶಾಸ್ತ್ರದೃಷ್ಟೇನ ಕರ್ಮಣಾ ।।

ಆಗ ಒಂದುದಿನ ಧರ್ಮಾತ್ಮಾ ಮಹಾಬಾಹು ಮಧುಸೂದನನು ಶಾಸ್ತ್ರವಿಹಿತ ಕರ್ಮಗಳಿಂದ ಏಕಾಹ ಸೋಮಯಾಗದ ದೀಕ್ಷೆಯನ್ನು ಕೈಗೊಂಡನು.

19165008a ತತೋ ದೀಕ್ಷಿತಮಾಸೀನಮಭಿಗಮ್ಯ ದ್ವಿಜೋತ್ತಮಃ ।
19165008c ಕೃಷ್ಣಂ ವಿಜ್ಞಾಪಯಾಮಾಸ ತ್ರಾಹಿ ತ್ರಾಹೀತಿ ಚಾಬ್ರವೀತ್ ।।

ದೀಕ್ಷಿತನಾಗಿ ಕುಳಿತುಕೊಂಡಿದ್ದಾಗ ಓರ್ವ ದ್ವಿಜೋತ್ತಮನು “ತ್ರಾಹಿ! ತ್ರಾಹಿ!” ಎಂದು ಕೃಷ್ಣನಲ್ಲಿ ವಿಜ್ಞಾಪಿಸಿಕೊಂಡನು.

19165009 ಬ್ರಾಹ್ಮಣ ಉವಾಚ ।
19165009a ರಕ್ಷಾಧಿಕಾರೋ ಭವತಃ ಪರಿತ್ರಾಯಸ್ವ ಮಾಂ ವಿಭೋ ।
19165009c ಚತುರ್ಥಾಂಶಂ ಹಿ ಧರ್ಮಸ್ಯ ರಕ್ಷಿತಾ ಲಭತೇ ಫಲಮ್ ।।

ಬ್ರಾಹ್ಮಣನು ಹೇಳಿದನು: “ವಿಭೋ! ರಕ್ಷಣೆಯು ನಿನ್ನ ಅಧಿಕಾರವು. ನನ್ನನ್ನು ರಕ್ಷಿಸು. ರಕ್ಷಿಸುವವನು ರಕ್ಷಿತನ ಧರ್ಮದ ನಾಲ್ಕನೆಯ ಒಂದಂಶವನ್ನು ಪಡೆಯುತ್ತಾನೆ.”

19165010 ವಾಸುದೇವ ಉವಾಚ ।
19165010a ನ ಭೇತವ್ಯಂ ದ್ವಿಜಶ್ರೇಷ್ಠ ರಕ್ಷಾಮಿ ತ್ವಾಂ ಕುತೋ ಭಯಮ್ ।
19165010c ಬ್ರೂಹಿ ತತ್ತ್ವೇನ ಭದ್ರಂ ತೇ ಯದ್ಯಪಿ ಸ್ಯಾತ್ಸುದುಷ್ಕರಮ್ ।।

ವಾಸುದೇವನು ಹೇಳಿದನು: “ದ್ವಿಜಶ್ರೇಷ್ಠ! ಭಯಪಡಬೇಡ! ನಿನ್ನನ್ನು ರಕ್ಷಿಸುತ್ತೇನೆ. ಭಯವು ಯಾರಿಂದ ಎನ್ನುವುದನ್ನು ತತ್ತ್ವತಃ ಹೇಳು. ನಿನಗೆ ಮಂಗಳವಾಗಲಿ! ಅದು ಎಷ್ಟೇ ದುಷ್ಕರವಾಗಿದ್ದರೂ ಅದನ್ನು ಹೇಳು.”

19165011 ಬ್ರಾಹ್ಮಣ ಉವಾಚ ।
19165011a ಜಾತೋ ಜಾತೋ ಮಹಾಬಾಹೋ ಪುತ್ರೋ ಮೇ ಹ್ರಿಯತೇಽನಘ ।
19165011c ತ್ರಯೋ ಹೃತಾಶ್ಚತುರ್ಥಂ ತ್ವಂ ಕೃಷ್ಣ ರಕ್ಷಿತುಮರ್ಹಸಿ ।।

ಬ್ರಾಹ್ಮಣನು ಹೇಳಿದನು: “ಮಹಾಬಾಹೋ! ಅನಘ! ನನ್ನ ಪುತ್ರರು ಹುಟ್ಟುತ್ತಲೇ ಕಾಲನು ಅವರನ್ನು ಅಪಹರಿಸಿಬಿಡುತ್ತಾನೆ. ಮೂರು ಮಕ್ಕಳು ಹಾಗೆ ಅಪಹೃತರಾಗಿದ್ದಾರೆ. ಕೃಷ್ಣ! ನಾಲ್ಕನೆಯವನನ್ನು ನೀನು ರಕ್ಷಿಸಬೇಕು.

19165012a ಬ್ರಾಹ್ಮಣ್ಯಾಃ ಸೂತಿಕಾಲೋಽದ್ಯ ತತ್ರ ರಕ್ಷಾ ವಿಧೀಯತಾಮ್ ।
19165012c ಯಥಾ ಧ್ರಿಯೇದಪತ್ಯಂ ಮೇ ತಥಾ ಕುರು ಜನಾರ್ದನ ।।

ಇಂದು ಬ್ರಾಹ್ಮಣಿಯ ಪ್ರಸವಕಾಲವು. ಅಲ್ಲಿ ರಕ್ಷಣೆಯನ್ನು ನೀಡಬೇಕು. ಜನಾರ್ದನ! ನನ್ನ ಸಂತಾನವು ಉಳಿದುಕೊಳ್ಳುವಂತೆ ಏನಾದರೂ ಉಪಾಯಮಾಡು!””

19165013 ಅರ್ಜುನ ಉವಾಚ ।
19165013a ತತೋ ಮಾಮಾಹ ಗೋವಿಂದೋ ದೀಕ್ಷಿತೋಽಹಂ ಕ್ರತಾವಿತಿ ।
19165013c ರಕ್ಷಾ ಚ ಬ್ರಾಹ್ಮಣೇ ಕಾರ್ಯಾ ಸರ್ವಾವಸ್ಥಾಗತೈರಪಿ ।।

ಅರ್ಜುನನು ಹೇಳಿದನು: “ಆಗ ಗೋವಿಂದನು ನನಗೆ ಹೇಳಿದನು: “ನಾನಾದರೋ ದೀಕ್ಷೆಯನ್ನು ಕೈಗೊಂಡುಬಿಟ್ಟಿದ್ದೇನೆ. ಆದರೆ ಸರ್ವಾವಸ್ಥೆಗಳಲ್ಲಿಯೂ ಬ್ರಾಹ್ಮಣನನ್ನು ರಕ್ಷಿಸಬೇಕಾಗಿದೆ.”

19165014a ಶ್ರುತ್ವಾಹಮೇವಂ ಕೃಷ್ಣಸ್ಯ ವಚೋಽವೋಚಂ ನರಾಧಿಪ ।
19165014c ಮಾಂ ನಿಯೋಜಯ ಗೋವಿಂದ ರಕ್ಷಿಷ್ಯೇಽಹಂ ದ್ವಿಜಂ ಭಯಾತ್ ।।

ನರಾಧಿಪ! ಕೃಷ್ಣನ ಮಾತನ್ನು ಕೇಳಿ ನಾನು “ಗೋವಿಂದ! ನನ್ನನ್ನು ಈ ಕಾರ್ಯಕ್ಕೆ ನಿಯೋಜಿಸು. ನಾನು ದ್ವಿಜನನ್ನು ಭಯದಿಂದ ರಕ್ಷಿಸುತ್ತೇನೆ!” ಎಂದು ಹೇಳಿದೆನು.

19165015a ಇತ್ಯುಕ್ತಃ ಸ ಸ್ಮಿತಂ ಕೃತ್ವಾ ಮಾಮುವಾಚ ಜನಾರ್ದನಃ ।
19165015c ರಕ್ಷಸೀತ್ಯೇವಮುಕ್ತಸ್ತು ವ್ರೀಡಿತೋಽಸ್ಮಿ ನರಾಧಿಪ ।।

ಇದನ್ನು ಕೇಳಿ ಜನಾರ್ದನನು ನಸುನಗುತ್ತಾ “ನೀನು ರಕ್ಷಿಸಬಲ್ಲೆಯೇ?” ಎಂದು ಕೇಳಿದನು. ನರಾಧಿಪ! ಅವನ ಆ ಮಾತನ್ನು ಕೇಳಿ ಲಜ್ಜಿತನಾದೆನು.

19165016a ತತೋ ಮಾಂ ವ್ರೀಡಿತಂ ಮತ್ವಾ ಪುನರಾಹ ಜನಾರ್ದನಃ ।
19165016c ಗಮ್ಯತಾಂ ಕೌರವಶ್ರೇಷ್ಠ ಶಕ್ಯತೇ ಯದಿ ರಕ್ಷಿತುಮ್ ।।

ನಾನು ಲಜ್ಜಿತನಾದೆನೆಂದು ತಿಳಿದು ಜನಾರ್ದನನು ಪುನಃ “ಕೌರವಶ್ರೇಷ್ಠ! ರಕ್ಷಿಸಲು ಶಕ್ತನಾದರೆ ಹೋಗು” ಎಂದನು.

19165017a ತ್ವತ್ಪುರೋಗಾಶ್ಚ ರಕ್ಷಂತು ವೃಷ್ಣ್ಯಂಧಕಮಹಾರಥಾಃ ।
19165017c ಋತೇ ರಾಮಂ ಮಹಾಬಾಹುಂ ಪ್ರದ್ಯುಮ್ನಂ ಚ ಮಹಾಬಲಮ್ ।।

“ಮಹಾಬಾಹು ರಾಮ ಮತ್ತು ಮಹಾಬಲಿ ಪ್ರದ್ಯುಮ್ನರನ್ನು ಬಿಟ್ಟು ಉಳಿದ ವೃಷ್ಣಿ-ಅಂಧಕ ಮಹಾರಥರು ನಿನ್ನನ್ನು ಮುಂದಿರಿಸಿಕೊಂಡು ರಕ್ಷಿಸಲಿ.”

19165018a ತತೋಽಹಂ ವೃಷ್ಣಿಸೈನ್ಯೇನ ಮಹತಾ ಪರಿವಾರಿತಃ ।
19165018c ತಮಗ್ರತೋ ದ್ವಿಜಂ ಕೃತ್ವಾ ಪ್ರಯಾತಃ ಸಹ ಸೇನಯಾ ।।

ಆಗ ನಾನು ಮಹಾ ವೃಷ್ಣಿಸೇನೆಯಿಂದ ಪರಿವಾರಿತನಾಗಿ ಆ ದ್ವಿಜನನ್ನು ಮುಂದೆಮಾಡಿಕೊಂಡು ಸೇನೆಯೊಂದಿಗೆ ಪ್ರಯಾಣಿಸಿದೆನು.”

ಸಮಾಪ್ತಿ

ಇತಿ ಶ್ರೀಮಹಾಭಾರತೇ ಖಿಲೇಷು ಹರಿವಂಶೇ ವಿಷ್ಣುಪರ್ವಣಿ ವಾಸುದೇವಮಾಹಾತ್ಮ್ಯೇ ಪಂಚಷಷ್ಟ್ಯಧಿಕಶತತಮೋಽಧ್ಯಾಯಃ ।।