ಪ್ರವೇಶ
।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।
ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ
ಶ್ರೀ ಮಹಾಭಾರತ
ಖಿಲಭಾಗೇ ಹರಿವಂಶಃ
ವಿಷ್ಣು ಪರ್ವ
ಅಧ್ಯಾಯ 64
ಸಾರ
ತೋಳಗಳ ಉತ್ಪಾತದಿಂದ ಪೀಡಿತರಾದ ವ್ರಜವಾಸಿಗಳು ಆ ಸ್ಥಾನವನ್ನು ತೊರೆದು ವೃಂದಾವನಕ್ಕೆ ಹೋದುದು.
ವೈಶಂಪಾಯನ ಉವಾಚ
ಏವಂ ವೃಕಾಂಶ್ಚ ತಾಂದೃಷ್ಟ್ವಾ ವರ್ಧಮಾನಾಂದುರಾಸದಾನ್ ।
ಸಸ್ತ್ರೀಪುಮಾನ್ಸ ಘೋಷೋ ವೈ ಸಮಸ್ತೋಽಮಂತ್ರಯತ್ತದಾ ।। ೨-೬೪-೧
ವೈಶಂಪಾಯನನು ಹೇಳಿದನು: “ಹೀಗೆ ಆ ದುರಾಸದ ತೋಳಗಳ ಸಂಖ್ಯೆಯು ವೃದ್ಧಿಯಾಗುತ್ತಿರುವುದನ್ನು ಕಂಡ ವ್ರಜದ ಸ್ತ್ರೀಪುರುಷರೆಲ್ಲರೂ ಒಟ್ಟಾಗಿ ಸಮಾಲೋಚಿಸಿದರು.
ಸ್ಥಾನೇ ನೇಹ ನ ನಃ ಕಾರ್ಯಂ ವ್ರಜಾಮೋಽನ್ಯನ್ಮಹದ್ವನಮ್ ।
ಯಚ್ಛಿವಂ ಚ ಸುಖೋಷ್ಯಂ ಚ ಗವಾಂ ಚೈವ ಸುಖಾವಹಮ್ ।। ೨-೬೪-೨
“ಇನ್ನು ಇಲ್ಲಿ ನಮಗೆ ಯಾವ ಕಾರ್ಯವೂ ಇಲ್ಲ. ಬೇರೆ ಯಾವುದಾದರೂ ಮಂಗಳಕರವಾದ, ಸುಖವನ್ನು ನೀಡುವ ಮತ್ತು ಗೋವುಗಳಿಗೆ ಸುಖದಾಯಕವಾದ ಮಹಾವನಕ್ಕೆ ಹೋಗೋಣ!
ಅದ್ಯೈವ ಕಿಂ ಚಿರೇಣ ಸ್ಮ ವ್ರಜಾಮಃ ಸಹ ಗೋಧನೈಃ ।
ಯಾವದ್ವೃಕೈರ್ವಧಂ ಘೋರಂ ನ ನಃ ಸರ್ವೋ ವ್ರಜೋ ವ್ರಜೇತ್।। ೨-೬೪-೩
ತಡಮಾಡುವುದೇಕೆ? ಇಂದೇ ನಾವು ನಮ್ಮ ಗೋಧನಗಳೊಂದಿಗೆ ಹೊರಡೋಣ. ಘೋರ ತೋಳಗಳು ಎಲ್ಲವನ್ನೂ ನಾಶಗೊಳಿಸುವ ಮೊದಲೇ ನಾವು ವ್ರಜದಿಂದ ಹೊರಡಬೇಕು.
ಏಶಾಂ ಧೂಮ್ರಾರುಣಾಂಗಾನಾಂ ದಂಷ್ಟ್ರಿಣಾಂ ನಖಕರ್ಷಿಣಾಮ್ ।
ವೃಕಾಣಾಂ ಕೃಷ್ಣವಕ್ತ್ರಾಣಾಂ ಬಿಭೀಮೋ ನಿಶಿ ಗರ್ಜತಾಮ್ ।। ೨-೬೪-೪
ಬೂದು ಮತ್ತು ಕೆಂಪುಬಣ್ಣದ, ಕೋರೆದಾಡೆಗಳುಳ್ಳ, ಚೂಪಾದ ಉಗುರುಗಳುಳ್ಳ, ಮತ್ತು ರಾತ್ರಿಯಲ್ಲಿ ಗರ್ಜಿಸುವ ಈ ಕಪ್ಪುಮುಖಗಳ ತೊಳಗಳಿಂದ ನಾವು ಭಯಭೀತರಾಗಿದ್ದೇವೆ.
ಮಮ ಪುತ್ರೋ ಮಮ ಭ್ರಾತಾ ಮಮ ವತ್ಸೋಽಥ ಗೌರ್ಮಮ ।
ವೃಕೈರ್ವ್ಯಾಪಾದಿತಾ ಹ್ಯೇವಂ ಕ್ರಂದಂತಿ ಸ್ಮ ಗೃಹೇ ಗೃಹೇ ।। ೨-೬೪-೫
ಮನೆ-ಮನೆಗಳಲ್ಲಿ “ಅಯ್ಯೋ! ಈ ತೋಳಗಳು ನನ್ನ ಮಗ ನನ್ನ ಅಣ್ಣ ನನ್ನ ಕರು ಮತ್ತು ನನ್ನ ಹಸುಗಳನ್ನು ಕೊಂದುಹಾಕಿವೆ” ಎಂಬ ಕೂಗು ಕೇಳಿಬರುತ್ತಿದೆ.”
ತಾಸಾಂ ರುದಿತಶಬ್ದೇನ ಗವಾಂ ಹಂಭಾರವೇಣ ಚ ।
ವ್ರಜಸ್ಯೋತ್ಥಾಪನಂ ಚಕ್ರುರ್ಘೋಷವೃದ್ಧಾಃ ಸಮಾಗತಾಃ ।। ೨-೬೪-೬
ಅವರ ರೋದನ ಶಬ್ದದಿಂದ ಮತ್ತು ಗೋವುಗಳ ಕೂಗಿನಿಂದ ಚಿಂತಿತರಾದ ವ್ರಜದ ವೃದ್ಧರು ಒಟ್ಟಾಗಿ ಅಲ್ಲಿಂದ ಹೊರಟುಹೋಗಲು ನಿಶ್ಚಯಿಸಿದರು.
ತೇಷಾಂ ಮತಮಥಾಜ್ಞಾಯ ಗಂತುಂ ವೃಂದಾವನಂ ಪ್ರತಿ ।
ವ್ರಜಸ್ಯ ವಿನಿವೇಶಾಯ ಗವಾಂ ಚೈವ ಹಿತಾಯ ಚ ।। ೨-೬೪-೭
ವೃಂದಾವನನಿವಾಸಾಯ ತಾಂಜ್ಞಾತ್ವಾ ಕೃತನಿಶ್ಚಯಾನ್ ।
ನಂದಗೋಪೋ ಬೃಹದ್ವಾಕ್ಯಂ ಬೃಹಸ್ಪತಿರಿವಾದದೇ ।। ೨-೬೪-೮
ಗೋವುಗಳ ಹಿತಕ್ಕಾಗಿ ವ್ರಜವನ್ನು ಬಿಟ್ಟು ವೃಂದಾವನಕ್ಕೆ ಹೋಗುವ ಅವರ ಮತವನ್ನು ತಿಳಿದ ಮತ್ತು ವೃಂದಾವನದಲ್ಲಿ ವಾಸಿಸುವ ಅವರ ನಿಶ್ಚಯವನ್ನು ತಿಳಿದ ನಂದಗೋಪನು ಬೃಹಸ್ಪತಿಯಂತೆ ಈ ಮಹಾಮಾತನ್ನು ಆಡಿದನು:
ಅದ್ಯೈವ ನಿಶ್ಚಯಪ್ರಾಪ್ತಿರ್ಯದಿ ಗಂತವ್ಯಮೇವ ನಃ ।
ಶೀಘ್ರಮಾಜ್ಞಾಪ್ಯತಾಂ ಘೋಷಃ ಸಜ್ಜೀಭವತ ಮಾ ಚಿರಮ್ ।। ೨-೬೪-೯
“ನಮಗೆ ಇಲ್ಲಿಂದ ಹೋಗಬೇಕೆಂಬ ನಿಶ್ಚಯವನ್ನು ಮಾಡಿದ್ದಾದರೆ ಇಂದೇ ಹೊರಡಬೇಕು. ಶೀಘ್ರದಲ್ಲಿಯೇ ಹೊರಡಬೇಕು, ತಡಮಾಡಬಾರದು ಎಂದು ಬೇಗನೇ ಗೋವಳಕ್ಕೆ ಆಜ್ಞಾಪಿಸಬೇಕು.”
ತತೋಽವಘುಷ್ಯತ ತದಾ ಘೋಷೇ ತತ್ಪ್ರಾಕೃತೈರ್ಜನೈಃ ।
ಶೀಘ್ರಂ ಗಾವಃ ಪ್ರಕಲ್ಪ್ಯಂತಾಂ ಭಾಂದಾಂಸಮಭಿರೋಪ್ಯತಾಮ್ ।। ೨-೬೪-೧೦
ವತ್ಸಯೂಥಾನಿ ಕಾಲ್ಯಂತಾಂ ಯುಜ್ಯಂತಾಂ ಶಕಟಾನಿ ಚ ।
ವೃಂದಾವನಮಿತಃ ಸ್ಥಾನಾನ್ನಿವೇಶಾಯ ಚ ಗಮ್ಯತಾಮ್ ।। ೨-೬೪-೧೧
ಅನಂತರ ಪ್ರಾಕೃತ ಜನರ ಮೂಲಕ ಗೋವಳದಲ್ಲಿ ಈ ಘೋಷಣೆಯನ್ನು ಮಾಡಿಸಲಾಯಿತು: “ಶೀಘ್ರವೇ ಗೋವುಗಳನ್ನು ಸಿದ್ಧಗೊಳಿಸಿ! ಪಾತ್ರೆ-ಪಗಡಗಳನ್ನು ಬಂಡಿಗಳಲ್ಲಿ ತುಂಬಿಸಿ. ಕರುಗಳನ್ನು ಗುಂಪಾಗಿ ಸೇರಿಸಿ ಭದ್ರಗೊಳಿಸಿ! ಬಂಡಿಗಳನ್ನು ಕಟ್ಟಿ! ವಾಸಿಸಲು ವೃಂದಾವನ ಪ್ರದೇಶಕ್ಕೆ ಹೋಗೋಣ!”
ತಚ್ಛ್ರುತ್ವಾ ನಂದಗೋಪಸ್ಯ ವಚನಂ ಸಾಧು ಭಾಷಿತಮ್ ।
ಉದತಿಷ್ಠದ್ವ್ರಜಃ ಸರ್ವಃ ಶೀಘ್ರಂ ಗಮನಲಾಲಸಃ ।। ೨-೬೪-೧೨
ಉತ್ತಮವಾಗಿ ಆಡಿದ ನಂದಗೋಪನ ಆ ಮಾತನ್ನು ಕೇಳುತ್ತಲೇ ಪ್ರಯಾಣಿಸಲು ಉತ್ಸುಕರಾಗಿದ್ದ ಸರ್ವ ವ್ರಜವಾಸಿಗಳೂ ಎದ್ದು ನಿಂತರು.
ಪ್ರಯಾಹ್ಯುತ್ತಿಷ್ಠ ಗಚ್ಛಾಮಃ ಕಿಂ ಶೇಷೇ ಸಾಧು ಯೋಜಯ ।
ಉತ್ತಿಷ್ಠತಿ ವ್ರಜೇ ತಸ್ಮಿನ್ಗೋಪಕೋಲಾಹಲೋ ಹ್ಯಭೂತ್ ।। ೨-೬೪-೧೩
“ಏಳಿ! ಹೋಗೋಣ! ಏಕೆ ಮಲಗಿದ್ದೀರಿ? ಗಾಡಿಗಳನ್ನು ಕಟ್ಟಿ!” ಇವೇ ಮುಂತಾದ ಕೋಲಾಹಲಗಳು ಹೊರಟಿದ್ದ ಆ ಗೋಪರಲ್ಲಿ ಕೇಳಿಬಂದವು.
ಉತ್ತಿಷ್ಠಮಾನಃ ಶುಶುಭೇ ಶಕಟೀಶಕಟಸ್ತು ಸಃ ।
ವ್ಯಾಘ್ರಘೋಷಮಹಾಘೋಷೋ ಘೋಷಃ ಸಾಗರಘೋಷವಾನ್ ।। ೨-೬೪-೧೪
ಬಂಡಿಗಳಿಂದ ಕೂಡಿದ ಅವರು ಶೋಭಿಸಿದರು. ಅವರ ಕೋಲಾಹಲವು ಹುಲಿಯ ಗರ್ಝನೆಯಂತೆ ಅಥವಾ ಸಮುದ್ರದ ಭೋರ್ಗರೆತದಂತೆ ಕೇಳಿಬರುತ್ತಿತ್ತು.
ಗೋಪೀನಾಂ ಗರ್ಗರೀಭಿಶ್ಚ ಮೂರ್ಧ್ನಿ ಚೋತ್ತಮಂಭಿತೈರ್ಘಟೈಃ ।
ನಿಷ್ಪಪಾತ ವ್ರಜಾತ್ಪಂಕ್ತಿಸ್ತಾರಾಪಂಕ್ತಿರಿವಾಂಬರಾತ್ ।। ೨-೬೪-೧೫
ತಲೆಯಮೇಲೆ ಮಡಿಕೆ-ಪಾತ್ರೆಗಳನ್ನು ಹೊತ್ತು ಹೊರಟಿದ್ದ ಆ ಗೋಪಿಯರ ಸಾಲು ಆಕಾಶದಿಂದ ನಕ್ಷತ್ರಗಳ ಪಂಕ್ತಿಯೇ ವ್ರಜದ ಮೇಲೆ ಬಿದ್ದಿದೆಯೋ ಎಂಬಂತೆ ತೋರುತ್ತಿತ್ತು.
ನೀಲಪೀತಾರುಣೈಸ್ತಾಸಾಂ ವಸ್ತ್ರೈರಗ್ರಸ್ತನೋಚ್ಛ್ರಿತೈಃ ।
ಶಕ್ರಚಾಪಾಯತೇ ಪಂಕ್ತಿರ್ಗೋಪೀನಾಂ ಮಾರ್ಗಗಾಮಿನೀ ।। ೨-೬೪-೧೬
ಮಾರ್ಗಗಾಮಿನೀ ಗೋಪಿಯರ ಸಾಲು ಅವರ ಸ್ತನಗಳ ಅಗ್ರಭಾಗಗಳನ್ನು ಮುಚ್ಚಿದ್ದ ನೀಲಿ, ಹಳದಿ ಮತ್ತು ಕೆಂಪು ವಸ್ತ್ರಗಳಿಂದಾಗಿ ಕಾಮನಬಿಲ್ಲಿನಂತೆಯೇ ಕಾಣುತ್ತಿತ್ತು.
ದಾಮನೀ ದಾಮಭಾರೈಶ್ಚ ಕೈಶ್ಚಿತ್ಕಾಯಾವಲಮಂಬಿಭಿಃ।
ಗೋಪಾ ಮಾರ್ಗಗತಾ ಭಾಂತಿ ಸಾವರೋಹಾ ಇವ ದ್ರುಮಾಃ ।। ೨-೬೪-೧೭
ಕೆಲವು ಮಾರ್ಗಗಾಮಿನೀ ಗೋಪಿಯರು ಹಗ್ಗಗಳ ಭಾರವನ್ನು ಹೊತ್ತು ಹೋಗುತ್ತಿರುವಾಗ ಆ ಹಗ್ಗಗಳು ಅವರ ಅಂಗಾಂಗಗಳ ಮೇಲೆ ನೇತಾಡುತ್ತಿರುವಾಗ ಅವರು ಬೇರುಗಳು ನೇತುಬಿದ್ದಿರುವ ಆಲದ ಮರಗಳಂತೆ ಕಾಣುತ್ತಿದ್ದರು.
ಸ ವ್ರಜೋ ವ್ರಜತಾ ಭಾತಿ ಶಕಟೌಘೇನ ಭಾಸ್ವತಾ ।
ಪೋತೈಃ ಪವನವಿಕ್ಷಿಪ್ತೈರ್ನಿಷ್ಪತದ್ಭಿರಿವಾರ್ಣವಃ ।। ೨-೬೪-೧೮
ಆ ವ್ರಜದಲ್ಲಿ ಮುಂದೆ ಸಾಗುತ್ತಿದ್ದ ಬಂಡಿಗಳ ಸಮೂಹವು ಗಾಳಿಗೆ ಸಿಕ್ಕಿ ಮಹಾಸಾಗರದಲ್ಲಿ ಸಾಗುತ್ತಿರುವ ಹಡಗುಗಳ ಸಮೂಹದಂತೆ ತೋರುತ್ತಿತ್ತು.
ಕ್ಷಣೇನ ತದ್ವ್ರಜಸ್ಥಾನಮೀರಿಣಂ ಸಮಪದ್ಯತ ।
ದ್ರವ್ಯಾವಯವನಿರ್ಧೂತಂ ಕೀರ್ಣಂ ವಾಯಸಮಂದಲೈಃ ।। ೨-೬೪-೧೯
ಕ್ಷಣದಲ್ಲಿಯೇ ಆ ವ್ರಜಸ್ಥಾನವು ಮರುಭೂಮಿಯಂತಾಯಿತು. ಅನ್ನಾದಿ ದ್ರವ್ಯಗಳು ಹರಡಿ ಬಿದ್ದುದರ ಕಾರಣದಿಂದ ಅಲ್ಲಿ ಕಾಗೆಗಳ ಸಮೂಹಗಳೇ ಬಂದು ಸೇರಿದವು.
ತತಃ ಕ್ರಮೇಣ ಘೋಷಃ ಸ ಪ್ರಾಪ್ತೋ ವೃಂದಾವನಂ ವನಮ್ ।
ನಿವೇಶಂ ವಿಪುಲಂ ಚಕ್ರೇ ಗವಾಂ ಚೈವ ಹಿತಾಯ ಚ ।। ೨-೬೪-೨೦
ಅನಂತರ ಕ್ರಮೇಣವಾಗಿ ಆ ಗೋವಳವು ವೃಂದಾವನ ವನವನ್ನು ತಲುಪಿತು. ಗೋವುಗಳ ಹಿತಕ್ಕಾಗಿ ಅವರು ಅಲ್ಲಿ ದೂರದೂರ ಮನೆಮಾಡಿಕೊಂಡರು.
ಶಕಟಾವರ್ತಪರ್ಯಂತಂ ಚಂದ್ರಾರ್ಧಾಕಾರಸಂಸ್ಥಿತಮ್ ।
ಮಧ್ಯೇ ಯೋಜನವಿಸ್ತೀರ್ಣಂ ತಾವದ್ದ್ವಿಗುಣಮಾಯತಮ್ ।। ೨-೬೪-೨೧
ಅರ್ಧಚಂದ್ರಾಕಾರ ಆಕೃತಿಯಲ್ಲಿ ನೆಲೆಸಿ ಗಡಿಗಳಲ್ಲಿ ಬಂಡಿಗಳನ್ನು ನಿಲ್ಲಿಸಿದರು. ಮಧ್ಯದಲ್ಲಿ ಅವರ ವಾಸಸ್ಥಾನದ ವಿಸ್ತೀರ್ಣವು ಒಂದು ಯೋಜನ ಅಗಲ ಮತ್ತು ಎರಡು ಯೋಜನ ಉದ್ದವಾಗಿತ್ತು.
ಕಂಟಕೀಭಿಃ ಪ್ರವೃದ್ಧಾಭಿಸ್ತಥಾ ಕಂಟಕಿತದ್ರುಮೈಃ ।
ನಿಖಾತೋಚ್ಛ್ರಿತಶಾಖಾಗ್ರೈರಭಿಗುಪ್ತಂ ಸಮಂತತಃ ।। ೨-೬೪-೨೨
ಆ ನಿವಾಸಸ್ಥಾನವು ಬೆಳೆದಿದ್ದ ಮುಳ್ಳಿನ ಗಿಡಗಳಿಂದಲೂ, ಎತ್ತರವಾಗಿ ಬೆಳೆದಿದ್ದ ಮುಳ್ಳಿನ ಮರಗಳಿಂದಲೂ ಸುತ್ತಲೂ ಸುರಕ್ಷಿತವಾಗಿತ್ತು.
ಮಂಥೈರಾರೋಪ್ಯಮಾಣೈಶ್ಚ ಮಂಥಬಂಧಾನುಕರ್ಷಣೈಃ ।
ಅದ್ಭಿಃ ಪ್ರಕ್ಷಾಲ್ಯಮಾನಾಭಿರ್ಗರ್ಗರೀಭಿರಿತಸ್ತತಃ ।। ೨-೬೪-೨೩
ಅಲ್ಲಲ್ಲಿ ಕಡಗೋಲುಗಳನ್ನು ಏರಿಸುತ್ತಿದ್ದರು, ಕಡಗೋಲುಗಳನ್ನು ಕಟ್ಟುತ್ತಿದ್ದರು, ಮತ್ತು ಮಡಿಕೆಗಳನ್ನು ನೀರಿನಿಂದ ತೊಳೆಯುತ್ತಿದ್ದರು.
ಕೀಲೈರಾರೋಪ್ಯಮಾಣೈಶ್ಚ ದಾಮನೀಪಾಶಪಾಶಿತೈಃ ।
ಸ್ತಮ್ಭನೀಭಿರ್ಧೃತಾಭಿಶ್ಚ ಶಕಟೈಃ ಪರಿವರ್ತಿತೈಃ ।। ೨-೬೪-೨೪
ಅಲ್ಲಲ್ಲಿ ಬಂಡಿಗಳಿಗೆ ಕೀಲಿಗಳನ್ನು ಬಡಿಯುತ್ತಿದ್ದರು, ಹಗ್ಗಗಳನ್ನು ಕಟ್ಟುತ್ತಿದ್ದರು, ಕಂಭಗಳನ್ನು ನಿಲ್ಲಿಸುತ್ತಿದ್ದರು ಮತ್ತು ಬಂಡಿಗಳನ್ನು ತಿರುಗಿಸುತ್ತಿದ್ದರು.
ನಿಯೋಗಪಾಶೈರಾಸಕ್ತೈರ್ಗರ್ಗರೀಸ್ತಮ್ಭಮೂರ್ಧಸು ।
ಚಾದನಾರ್ಥಂ ಪ್ರಕೀರ್ಣೈಶ್ಚ ಕಟಕೈಸ್ತೃಣಸಂಕಟೈಃ ।। ೨-೬೪-೨೫
ಮೊಸರು ತುಂಬಿದ ಪಾತ್ರೆಗಳಿಗೆ ಹಗ್ಗಕಟ್ಟಿ ಕಂಭಗಳ ಮೇಲೆ ಏರಿಸುತ್ತಿದ್ದರು. ಮನೆಗಳಿಗೆ ಹೊದಿಸಲು ತಂದಿದ್ದ ಚಾಪೆ ಮತ್ತು ಸೋಗೆಗಳು ಅಲ್ಲಲ್ಲಿ ಹರಡಿ ಬಿದ್ದಿದ್ದವು.
ಶಾಖಾವಿಟಂಕೈರ್ವೃಕ್ಷಾಣಾಂ ಕ್ರಿಯಮಾಣೈರಿತಸ್ತತಃ ।
ಶೋಧ್ಯಮಾನೈರ್ಗವಾಂ ಸ್ಥಾನೈಃ ಸ್ಥಾಪ್ಯಮಾನೈರುಲೂಖಲೈಃ ।। ೨-೬೪-೨೬
ಅಲ್ಲಲ್ಲಿ ಮರಗಳ ರೆಂಬೆಗಳ ಮೇಲೆ ಪಕ್ಷಿಗಳ ವಾಸಯೋಗ್ಯ ಸ್ಥಳಗಳನ್ನು ಮಾಡುತ್ತಿದ್ದರು; ಇನ್ನು ಕೆಲವೆಡೆ ಗೋವುಗಳಿಗೆ ವಾಸಯೋಗ್ಯ ಸ್ಥಳಗಳನ್ನು ಹುಡುಕುತ್ತಿದ್ದರು.
ಪ್ರಾಂಮುಖೈಃ ಸಿಚ್ಯಮಾನೈಶ್ಚ ಸಂದೀಪ್ಯದ್ಭಿಶ್ಚ ಪಾವಕೈಃ ।
ಸವತ್ಸಚರ್ಮಾಸ್ತರಣೈಃ ಪರ್ಯಂಕೈಶ್ಚಾವರೋಪಿತೈಃ ।। ೨-೬೪-೨೭
ಕೆಲವೆಡೆ ಒರಳುಗಳನ್ನು ಇಡುತ್ತಿದ್ದರು. ಅವುಗಳನ್ನು ಪೂರ್ವಾಭಿಮುಖವಾಗಿ ಇರಿಸಿ ತೊಳೆಯುತ್ತಿದ್ದರು. ಕೆಲವೆಡೆ ಬೆಂಕಿಯನ್ನು ಹೊತ್ತಿಸುತ್ತಿದ್ದರು. ಇನ್ನು ಕೆಲವೊಮ್ಮೆ ಗೋಚರ್ಮಗಳಿಂದ ಮಾಡಿದ ಹೊದಿಕೆಗಳನ್ನು ಮಂಚಗಳ ಮೇಲೆ ಹೊದೆಸುತ್ತಿದ್ದರು.
ತೋಯಮುತ್ತಾರಯಂತೀಭಿಃ ಪ್ರೇಕ್ಷಂತೀಭಿಶ್ಚ ತದ್ವನಮ್ ।
ಶಾಖಾಶ್ಚಾಕರ್ಷಮಾಣಾಭಿರ್ಗೋಪೀಭಿಶ್ಚ ಸಮಂತತಃ ।। ೨-೬೪-೨೮
ಗೋಪಿಯರು ತಮ್ಮ ತಲೆಗೂದಲಿನ ನೀರನ್ನು ಕೊಡವಿಕೊಳ್ಳುತ್ತಾ ಆಕರ್ಷಣೀಯ ವನವನ್ನು ವೀಕ್ಷಿಸುತ್ತಿದ್ದರು. ಕೆಲವರು ಸುತ್ತಾಡುತ್ತಾ ಮರಗಳ ರೆಂಬೆಗಳನ್ನು ಎಳೆಯುತ್ತಿದ್ದರು.
ಯುವಭಿಃ ಸ್ಥವಿರೈಶ್ಚೈವ ಗೋಪೈರ್ವ್ಯಗ್ರಕರೈರ್ಭೃಶಮ್ ।
ವಿಶಸದ್ಭಿಃ ಕುಠಾರೈಶ್ಚ ಕಾಷ್ಠಾನ್ಯಪಿ ತರೂನಪಿ ।। ೨-೬೪-೨೯
ವೃದ್ಧರಾಗಿರಲಿ ಅಥವಾ ಯುವಕರಾಗಿರಲಿ ಎಲ್ಲ ಗೋಪರೂ ಕೆಲಸಗಳಲ್ಲಿ ಅತ್ಯಂತ ವ್ಯಸ್ತರಾಗಿದ್ದರು. ಕತ್ತಿ-ಕೊಡಲಿಗಳಿಂದ ಕಟ್ಟಿಗೆ ಮತ್ತು ಹುಲ್ಲುಗಳನ್ನು ಕಡಿಯುತ್ತಿದ್ದರು.
ತದ್ವ್ರಜಸ್ಥಾನಮಧಿಕಂ ಶುಶುಭೇ ಕಾನನಾವೃತಮ್ ।
ರಮ್ಯಂ ವನನಿವೇಶಂವೈ ಸ್ವಾದುಮೂಲಫಲೋದಕಮ್ ।। ೨-೬೪-೩೦
ಕಾನನಾವೃತವಾಗಿದ್ದ ಆ ವ್ರಜಸ್ಥಾನವು ಅಧಿಕವಾಗಿ ಶೋಭಿಸಿತು. ಆ ರಮ್ಯ ವನನಿವೇಶವು ಸ್ವಾದಿಷ್ಠ ಫಲ-ಮೂಲಗಳಿಂದಲೂ ನೀರಿನಿಂದಲೂ ಕೂಡಿತ್ತು.
ತಾಸ್ತು ಕಾಮದುಘಾ ಗಾವಃ ಸರ್ವಪಕ್ಷಿರುತಂ ವನಮ್ ।
ವೃಂದಾವನಮನುಪ್ರಾಪ್ತಾ ನಂದನೋಪಮಕಾನನಮ್ ।। ೨-೬೪-೩೧
ಹಾಲುನೀಡುತ್ತಿದ್ದ ಆ ಎಲ್ಲ ಗೋವುಗಳೂ ಪಕ್ಷಿಗಳ ಕಲರವದಿಂದ ತುಂಬಿ ನಂದನವನದಂತಿದ್ದ ವೃಂದಾವನ ವನವನ್ನು ಸೇರಿದವು.
ಪೂರ್ವಮೇವ ತು ಕೃಷ್ಣೇನ ಗವಾಮ್ ವೈ ಹಿತಕಾರಿಣಾ ।
ಶಿವೇನ ಮನಸಾ ದೃಷ್ಟಂ ತದ್ವನಂ ವನಚಾರಿಣಾ ।। ೨-೬೪-೩೨
ವನಚಾರೀ ಗೋವುಗಳ ಹಿತಕಾರಿ ಕೃಷ್ಣನು ಹಿಂದೆಯೇ ತನ್ನ ಕಲ್ಯಾಣಚಿಂತನ ಮನಸ್ಸಿನಿಂದ ಆ ವನವನ್ನು ಕಂಡಿದ್ದನು.
ಪಶ್ಚಿಮೇ ತು ತತೋ ರೂಖ್ಷೇ ಧರ್ಮೇ ಮಾಸೇ ನಿರಾಮಯೇ ।
ವರ್ಷತೀವಾಮೃತಂ ದೇವೇ ತೃಣಂ ತತ್ರ ವ್ಯವರ್ಧತ ।। ೨-೬೪-೩೩
ಆಗ ಅಲ್ಲಿ ಕಠೋರ ಬೇಸಗೆಯ ಕಾಲವು ಕಳೆಯುತ್ತಾ ಬಂದಿದ್ದರೂ ಇಂದ್ರದೇವನು ಅಮೃತದ ಮಳೆಯನ್ನು ಸುರಿಸಿದನೋ ಎನ್ನುವಂತೆ ಹುಲ್ಲು ಹಸಿರಾಗಿ ಬೆಳೆದಿತ್ತು.
ನ ತತ್ರ ವತ್ಸಾಃ ಸೀದಂತಿ ನ ಗಾವೋ ನೇತರೇ ಜಾನಾಃ ।
ಯತ್ರ ತಿಷ್ಠತಿ ಲೋಕಾಣಾಂ ಭವಾಯ ಮಧುಸೂದನಃ ।। ೨-೬೪-೩೪
ಲೋಕಗಳ ಕಲ್ಯಾಣಕಾರಕ ಮಧುಸೂದನನು ಎಲ್ಲಿದ್ದನೋ ಅಲ್ಲಿ ಕರುಗಳಾಗಲೀ, ಗೋವುಗಳಾಗಲೀ ಅಥವಾ ಇತರ ಜನರಾಗಲೀ ಕೃಶರಾಗುತ್ತಿರಲಿಲ್ಲ.
ತಾಶ್ಚ ಗಾವಃ ಸ ಘೋಷಸ್ತು ಸ ಚ ಸಂಕರ್ಷಣೋ ಯುವಾ ।
ಕೃಷ್ಣೇನ ವಿಹಿತಂ ವಾಸಂ ಸಮಧ್ಯಾಸತ ನಿರ್ವೃತಾಃ ।। ೨-೬೪-೩೫
ಕೃಷ್ಣನು ವಿಹಿಸಿದ್ದ ಆ ಸ್ಥಳದಲ್ಲಿ ಗೋವುಗಳು, ಗೋಪರು ಮತ್ತು ಯುವ ಸಂಕರ್ಷಣ ಎಲ್ಲರೂ ಆನಂದದಿಂದ ವಾಸಿಸತೊಡಗಿದರು.
ಸಮಾಪ್ತಿ
ಇತಿ ಶ್ರೀಮಹಾಭಾರತೇ ಖಿಲೇಷು ಹರಿವಂಶೇ ವಿಷ್ಣುಪರ್ವಣಿ ವೃಂದಾವನಪ್ರವೇಶೇ ಚತುಷಷ್ಟಿತಮೋಽಧ್ಯಾಯಃ