063: ವೃಕವರ್ಣನಮ್

ಪ್ರವೇಶ

।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।

ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ

ಶ್ರೀ ಮಹಾಭಾರತ

ಖಿಲಭಾಗೇ ಹರಿವಂಶಃ

ವಿಷ್ಣು ಪರ್ವ

ಅಧ್ಯಾಯ 63

ಸಾರ

ಶ್ರೀಕೃಷ್ಣ-ಬಲರಾಮರ ಬಾಲಚರ್ಯೆ (1-7). ಶ್ರೀಕೃಷ್ಣನು ವ್ರಜದ ಜನರನ್ನು ಬೇರೆಕಡೆ ಕೊಂಡೊಯ್ಯಲು ಬಯಸಿದುದು (8-29) ಮತ್ತು ತನ್ನ ಶರೀರದಿಂದ ತೋಳಗಳನ್ನು ಹುಟ್ಟಿಸಿ ಅವುಗಳಿಂದ ವ್ರಜದ ಜನರನ್ನು ಬೆದರಿಸಿದುದು (30-39).

19063001 ವೈಶಂಪಾಯನ ಉವಾಚ ।
19063001a ಏವಂ ತೌ ಬಾಲ್ಯಮುತ್ತೀರ್ಣೌ ಕೃಷ್ಣಸಂಕರ್ಷಣಾವುಭೌ ।
19063001c ತಸ್ಮಿನ್ನೇವ ವ್ರಜಸ್ಥಾನೇ ಸಪ್ತವರ್ಶೌ ಬಭೂವತುಃ ।।

ವೈಶಂಪಾಯನನು ಹೇಳಿದನು: “ಹೀಗೆ ಕೃಷ್ಣ-ಸಂಕರ್ಷಣರು ವ್ರಜಸ್ಥಾನದಲ್ಲಿ ತಮ್ಮ ಬಾಲ್ಯವನ್ನು ಕಳೆದರು. ಅಲ್ಲಿಯೇ ಅವರಿಗೆ ಏಳು ವರ್ಷಗಳಾದವು.

19063002a ನೀಲಪೀತಾಂಬರಧರೌ ಪೀತಶ್ವೇತಾನುಲೇಪನೌ ।
19063002c ಬಭೂವತುರ್ವತ್ಸಪಾಲೌ ಕಾಕಪಕ್ಷಧರಾವುಭೌ ।।

ಅವರು ನೀಲಿ ಮತ್ತು ಹಳದೀ ಬಣ್ಣದ ವಸ್ತ್ರಗಳನ್ನು ಉಡುತ್ತಿದ್ದರು1. ಬಿಳಿಯ ಮತ್ತು ಹಳದೀ ಗಂಧಗಳನ್ನು ಹಚ್ಚಿಕೊಳ್ಳುತ್ತಿದ್ದರು. ಅವರು ಗೋ-ಕರುಗಳನ್ನು ಕಾಯುತ್ತಿದ್ದರು ಮತ್ತು ಇಬ್ಬರೂ ನವಿಲುಗರಿಗಳನ್ನು ಧರಿಸುತ್ತಿದ್ದರು.

19063003a ಪರ್ಣವಾದ್ಯಂ ಶ್ರುತಿಸುಖಂ ವಾದಯಂತೌ ವರಾನನೌ ।
19063003c ಶುಶುಭಾತೇ ವನಗತೌ ತ್ರಿಶೀರ್ಷಾವಿವ ಪನ್ನಗೌ ।।

ಸುಂದರ ಮುಖದ ಅವರು ಕೇಳಲಿಕ್ಕೆ ಸುಖಕರವಾಗಿದ್ದ ಎಲೆಗಳಿಂದ ಮಾಡಿದ ಪೀಪಿಗಳನ್ನು ಊದುತ್ತಿದ್ದರು. ವನದಲ್ಲಿ ತಿರುಗಾಡುತ್ತಿದ್ದ ಅವರು ಮೂರು ಹೆಡೆಗಳ ಹಾವುಗಳಂತೆ ಶೋಭಿಸುತ್ತಿದ್ದರು.

19063004a ಮಯೂರಾಂಗದಕರ್ಣೌ ತು ಪಲ್ಲವಾಪೀಡಧಾರಿಣೌ ।
19063004c ವನಮಾಲಾಕುಲೋರಸ್ಕೌ ದ್ರುಮಪೋತಾವಿವೋದ್ಗತೌ ।।

ಅವರ ಅಂಗದ-ಓಲೆಗಳು ನವಿಲುಗರಿಗಳಿಂದ ಮಾಡಲ್ಪಟ್ಟಿದ್ದವು. ಎಲೆಗಳಿಂದ ಮಾಡಿದ ಕಿರೀಟವನ್ನು ಧರಿಸುತ್ತಿದ್ದರು. ಎದೆಗಳ ಮೇಲೆ ವನಮಾಲೆಗಳನ್ನು ಧರಿಸಿ ಹೂಬಿಟ್ಟ ವೃಕ್ಷಗಳಂತೆ ಶೋಭಿಸುತ್ತಿದ್ದರು.

19063005a ಅರವಿಂದಕೃತಾಪೀಡೌ ರಜ್ಜುಯಜ್ಞೋಪವೀತಿನೌ ।
19063005c ಸಶಿಕ್ಯತುಂಬಕರಕೌ ಗೋಪವೇಣುಪ್ರವಾದಕೌ ।।

ಶಿರೋಭೂಷಣಗಳು ಕಮಲದ ಹೂವಿನದ್ದಾಗಿದ್ದವು. ಹಗ್ಗಗಳ ಯಜ್ಞೋಪವೀತಗಳಿದ್ದವು. ಗೋಪಾಲಕರಂತೆ ಅವರ ಹೆಗಲುಗಳ ಮೇಲೆ ಎರಡೂ ತುದಿಗಳಲ್ಲಿ ಗಡಿಗೆಗಳನ್ನು ಕಟ್ಟಿದ್ದ ಬೆತ್ತಗಳಿದ್ದವು ಮತ್ತು ಕೊಳಲನ್ನು ಊದುತ್ತಿದ್ದರು.

19063006a ಕ್ವಚಿದ್ಧಸಂತಾವನ್ಯೋನ್ಯಂ ಕ್ರೀಡಮಾನೌ ಕ್ವಚಿತ್ಕ್ವಚಿತ್ ।
19063006c ಪರ್ಣಶಯ್ಯಾಸು ಸಂಸುಪ್ತೌ ಕ್ವಚಿನ್ನಿದ್ರಾಂತರೇಕ್ಷಣೌ ।।

ದನಕರುಗಳನ್ನು ಕಾಯುತ್ತಿದ್ದಾಗ ಕೆಲವೊಮ್ಮೆ ಅನ್ಯೋನ್ಯರೊಡನೆ ನಗುತ್ತಿದ್ದರು. ಕೆಲವೊಮ್ಮೆ ಯಾವುದಾದರೂ ಆಟವಾಡುತ್ತಿದ್ದರು. ಕೆಲವೊಮ್ಮೆ ಎಲೆಯ ಹಾಸಿಗೆಯ ಮೇಲೆ ಮಲಗುತ್ತಿದ್ದರು. ಕೆಲವೊಮ್ಮೆ ನಿದ್ದೆಮಾಡುತ್ತಿದ್ದರು.

19063007a ಏವಂ ವತ್ಸಾನ್ಪಾಲಯಂತೌ ಶೋಭಯಂತೌ ಮಹಾವನಮ್ ।
19063007c ಚಂಚೂರ್ಯಂತೌ ರಮಂತೌ ಸ್ಮ ಕಿಶೋರಾವಿವ ಚಂಚಲೌ ।।

ಹೀಗೆ ದನಕರುಗಳನ್ನು ಮಹಾವನದಲ್ಲಿ ಸುತ್ತಾಡಿಸುತ್ತಾ ಕಾಯುತ್ತಾ ಶೋಭಿಸುತ್ತಿದ್ದರು. ಕಿಶೋರರಂತೆ ಚಂಚಲರಾಗಿದ್ದ ಅವರು ತಿರುಗಾಡುವುದರಲ್ಲಿಯೇ ರಮಿಸುತ್ತಿದ್ದರು.

19063008a ಅಥ ದಾಮೋದರಃ ಶ್ರೀಮಾನ್ಸಂಕರ್ಷಣಮುವಾಚ ಹ ।
19063008c ಆರ್ಯ ನಾಸ್ಮಿನ್ವನೇ ಶಕ್ಯಂ ಗೋಪಾಲೈಃ ಸಹ ಕ್ರೀಡಿತುಮ್ ।।

ಒಮ್ಮೆ ಶ್ರೀಮಾನ್ ದಾಮೋದರನು ಸಂಕರ್ಷಣನಿಗೆ ಹೇಳಿದನು: “ಆರ್ಯ! ಈ ವನದಲ್ಲಿ ಗೋಪಾಲಕರೊಡನೆ ಆಟವಾಡಲು ಶಕ್ಯವಿಲ್ಲ.

19063009a ಅವಗೀತಮಿದಂ ಸರ್ವಮಾವಾಭ್ಯಾಂ ಭುಕ್ತಕಾನನಮ್ ।
19063009c ಪ್ರಕ್ಷೀಣತೃಣಕಾಷ್ಠಂ ಚ ಗೋಪೈರ್ಮಥಿತಪಾದಪಮ್ ।।

ಈ ಪ್ರದೇಶದ ಕುರಿತು ನಾವು ಎಲ್ಲವನ್ನೂ ತಿಳಿದುಕೊಂಡಿದ್ದಾಗಿದೆ ಮತ್ತು ಈ ಕಾನನವನ್ನು ಸಂಪೂರ್ಣವಾಗಿ ಭೋಗಿಸಿಯಾಗಿದೆ. ಗೋಪರು ಮರಗಳನ್ನು ಕಡಿದುದರಿಂದ ಇಲ್ಲಿ ಹುಲ್ಲು-ಕಟ್ಟಿಗೆಗಳೂ ಕಡಿಮೆಯಾಗುತ್ತಿವೆ.

19063010a ಘನೀಭೂತಾನಿ ಯಾನ್ಯಾಸನ್ಕಾನನಾನಿ ವನಾನಿ ಚ ।
19063010c ತಾನ್ಯಾಕಾಶನಿಕಾಶಾನಿ ದೃಶ್ಯಂತೇಽದ್ಯ ಯಥಾಸುಖಮ್ ।।

ಈ ಕಾನನ ವನಗಳು ಹಿಂದೆ ದಟ್ಟವಾಗಿದ್ದವು. ಇಂದು ಇವು ಆಕಾಶದಂತೆ ಶೂನ್ಯವಾಗಿ ಕಾಣುತ್ತಿವೆ.

19063011a ಗೋವಾಟೇಷ್ವಪಿ ಯೇ ವೃಕ್ಷಾಃ ಪರಿವೃತ್ತಾರ್ಗಲೇಷು ಚ ।
19063011c ಸರ್ವೇ ಗೋಷ್ಠಾಗ್ನಿಷು ಗತಾಃ ಕ್ಷಯಮಕ್ಷಯವರ್ಚಸಃ ।।

ಹಸುವಿನ ಕೊಟ್ಟಿಗೆಯ ಸುತ್ತಮುತ್ತಲೂ ಅಕ್ಷಯವೋ ಎಂಬಂತಿದ್ದ ಮರಗಳೆಲ್ಲವನ್ನೂ ಗೋಪರು ಕಟ್ಟಿಗೆಯಾಗಿ ಸುಟ್ಟುಹಾಕಿರುವುದರಿಂದ ಅವೂ ಕ್ಷಯವಾಗಿಬಿಟ್ಟಿವೆ.

19063012a ಸಂನಿಕೃಷ್ಟಾನಿ ಯಾನ್ಯಾಸನ್ಕಾಷ್ಠಾನಿ ಚ ತೃಣಾನಿ ಚ ।
19063012c ತಾನಿ ದೂರಾವಕೃಷ್ಟಾಸು ಮಾರ್ಗಿತವ್ಯಾನಿ ಭೂಮಿಷು ।।

ಹತ್ತಿರದಲ್ಲಿಯೇ ದೊರೆಯುತ್ತಿದ್ದ ಹುಲ್ಲು-ಕಟ್ಟಗೆಗಳನ್ನು ಈಗ ದೂರ ಪ್ರದೇಶಗಳಲ್ಲಿ ಹುಡುಕಬೇಕಾಗಿದೆ.

19063013a ಅರಣ್ಯಮಿದಮಲ್ಪೋದಮಲ್ಪಕಕ್ಷಂ ನಿರಾಶ್ರಯಮ್ ।
19063013c ಅನ್ವೇಷಿತವ್ಯವಿಶ್ರಾಮಂ ದಾರುಣಂ ವಿರಲದ್ರುಮಮ್ ।।

ಈ ಅರಣ್ಯದಲ್ಲಿ ಸ್ವಲ್ಪವೇ ನೀರು ಮತ್ತು ಕಟ್ಟಗೆಗಳು ಉಳಿದುಕೊಂಡಿವೆ. ಇದರ ಮೂಲವೇ ನಾಶವಾದಂತಿದೆ. ಮರಗಳು ಕಡಿಮೆಯಾಗಿರುವುದರಿಂದ ನೆರಳಿಗೆ ಹುಡುಕಬೇಕಾಗಿದೆ. ಇದು ಕಷ್ಟವಾಗುತ್ತಿದೆ.

19063014a ಅಕರ್ಮಣ್ಯೇಷು ವೃಕ್ಷೇಷು ಸ್ಥಿತವಿಪ್ರಸ್ಥಿತದ್ವಿಜಮ್ ।
19063014c ಸಂವಾಸಸ್ಯಾಸ್ಯ ಮಹತೋ ಜನೇನೋತ್ಸಾದಿತದ್ರುಮಮ್ ।।

ಮರಗಳಲ್ಲಿ ವಾಸಿಸುತ್ತಿದ್ದ ಪಕ್ಷಿಗಳು ಬಿಟ್ಟು ಹೊರಟುಹೋಗಿವೆ. ಈಗ ಈ ಮರಗಳಿಗೆ ಯಾವ ಕೆಲಸವೂ ಇಲ್ಲದಂತಾಗಿದೆ. ಈ ವಿಶಾಲ ಪ್ರದೇಶದಲ್ಲಿ ವಾಸಿಸುತ್ತಿರುವ ಜನರು ಮರಗಳನ್ನು ಕಡಿದುಹಾಕಿಬಿಟ್ಟಿದ್ದಾರೆ.

19063015a ನಿರಾನಂದಂ ನಿರಾಸ್ವಾದಂ ನಿಷ್ಪ್ರಯೋಜನಮಾರುತಮ್ ।
19063015c ನಿರ್ವಿಹಂಗಮಿದಂ ಶೂನ್ಯಂ ನಿರ್ವ್ಯಂಜನಮಿವಾಶನಮ್ ।।

ಇಲ್ಲಿ ಆನಂದವಿಲ್ಲ. ಸ್ವಾದವಿಲ್ಲ. ಇಲ್ಲಿಯ ಗಾಳಿಯೂ ನಿಷ್ಪ್ರಯೋಜಕವಾಗಿದೆ. ಪಕ್ಷಿಗಳೇ ಇಲ್ಲದ ಈ ವನವು ವ್ಯಂಜನಪದಾರ್ಥಗಳಿಲ್ಲದ ಊಟದಂತೆ ಶೂನ್ಯವೆನಿಸುತ್ತಿದೆ.

19063016a ವಿಕ್ರೀಯಮಾಣೈಃ ಕಾಷ್ಠೈಶ್ಚ ಶಾಕೈಶ್ಚ ವನಸಂಭವೈಃ ।
19063016c ಉಚ್ಛಿನ್ನಸಂಚಯತೃಣೈರ್ಘೋಷೋಽಯಂ ನಗರಾಯತೇ ।।

ವನದಲ್ಲಿ ಸಿಗುತ್ತಿದ್ದ ಕಟ್ಟಿಗೆ ಮತ್ತು ಆಹಾರಗಳನ್ನು ಮಾರಿಯಾಗಿದೆ. ಹುಲ್ಲಿನ ಅಭಾವವಾಗಿರುವ ಈ ಗೋವಲವು ನಗರದಂತೆ ಕಾಣುತ್ತಿದೆ.

19063017a ಶೈಲಾನಾಂ ಭೂಷಣಂ ಘೋಷೋ ಘೋಷಾಣಾಂ ಭೂಷಣಂ ವನಮ್ ।
19063017c ವನಾನಾಂ ಭೂಷಣಂ ಗಾವಸ್ತಾಶ್ಚಾಸ್ಮಾಕಂ ಪರಾ ಗತಿಃ ।।

ಗುಡ್ಡ-ಬೆಟ್ಟಗಳಿಗೆ ಹುಲ್ಲುಗಾವಲೇ ಭೂಷಣ. ಹುಲ್ಲುಗಾವಲಿಗೆ ವನವೇ ಭೂಷಣ. ವನಗಳಿಗೆ ಗೋವುಗಳೇ ಭೂಷಣ. ಮತ್ತು ಗೋವುಗಳು ನಮ್ಮ ಪರಮ ಗತಿ.

19063018a ತಸ್ಮಾದನ್ಯದ್ವನಂ ಯಾಮಃ ಪ್ರತ್ಯಗ್ರಯವಸೇಂಧನಮ್ ।
19063018c ಇಚ್ಛಂತ್ಯನುಪಭುಕ್ತಾನಿ ಗಾವೋ ಭೋಕ್ತುಂ ತೃಣಾನಿ ಚ ।।

ಆದುದರಿಂದ ಹುಲ್ಲು-ಕಟ್ಟಿಗೆಗಳು ಅಧಿಕವಾಗಿರುವ ಅನ್ಯ ವನಕ್ಕೆ ಹೋಗೋಣ. ನಮ್ಮ ಈ ಗೋವುಗಳು ಹೊಸ ಹುಲ್ಲನ್ನು ತಿನ್ನಲು ಬಯಸುತ್ತಿವೆ.

19063019a ತಸ್ಮಾದ್ವನಂ ನವತೃಣಂ ಗಚ್ಛಂತು ಧನಿನೋ ವ್ರಜಾಃ ।
19063019c ನ ದ್ವಾರಬಂಧಾವರಣಾ ನ ಗೃಹಕ್ಷೇತ್ರಿಣಸ್ತಥಾ ।
19063019e ಪ್ರಶಸ್ತಾ ವೈ ವ್ರಜಾ ಲೋಕೇ ಯಥಾ ವೈ ಚಕ್ರಚಾರಿಣಃ ।।

ಆದುದರಿಂದ ಹೊಸ ಹುಲ್ಲುಗಳಿಂದ ಸಮೃದ್ಧವಾಗಿರುವ ವ್ರಜದ ಅನ್ಯ ವನಗಳಿಗೆ ಹೋಗೋಣ. ಅಲ್ಲಿ ಮನೆಯ ಬಾಗಿಲುಗಳನ್ನು ಮುಚ್ಚಬೇಕಾಗುವುದಿಲ್ಲ ಮತ್ತು ಸುತ್ತಲೂ ಬೇಲಿಗಳನ್ನು ಕಟ್ಟಬೇಕಾಗುವುದಿಲ್ಲ. ಸ್ವಚ್ಛಂದವಾಗಿ ತಿರುಗಾಡಲು ವ್ರಜವು ಲೋಕದಲ್ಲಿಯೇ ಪ್ರಶಸ್ತವಾಗಿದೆ.

19063020a ಶಕೃನ್ಮೂತ್ರೇಷು ತೇಷ್ವೇವ ಜಾತಕ್ಷಾರರಸಾಯನಮ್ ।
19063020c ನ ತೃಣಂ ಭುಂಜತೇ ಗಾವೋ ನಾಪಿ ತತ್ಪಯಸೇ ಹಿತಮ್ ।।

ಮಲಮೂತ್ರಗಳಿಂದ ಇಲ್ಲಿ ಕ್ಷಾರ ರಸಾಯನವು ಹುಟ್ಟಿಕೊಂಡಿದೆ. ಗೋವುಗಳು ಇಲ್ಲಿಯ ಹುಲ್ಲನ್ನು ತಿನ್ನಲು ಇಷ್ಟಪಡುವುದಿಲ್ಲ, ಮತ್ತು ಇದು ಹಾಲಿಗೆ ಒಳ್ಳೆಯದಲ್ಲ.

19063021a ಸ್ಥಲೀಪ್ರಾಯಾಸು ರಥ್ಯಾಸು ನವಾಸು ವನರಾಜಿಷು ।
19063021c ಚರಾವಃ ಸಹಿತೌ ಗೋಭಿಃ ಕ್ಷಿಪ್ರಂ ಸಂವಾಹ್ಯತಾಂ ವ್ರಜಃ ।।

ಹೊಸ ಸುಂದರ ವನರಾಜಿಗಳು ಈಗ ಬಯಲಾಗಿಬಿಟ್ಟಿವೆ. ಬೇಗನೇ ಗೋವುಗಳ ಸಹಿತ ಹೋಗಿ ಇನ್ನೊಂದು ಕಡೆ ವ್ರಜವನ್ನು ನೆಲೆಸೋಣ.

19063022a ಶ್ರೂಯತೇ ಹಿ ವನಂ ರಮ್ಯಂ ಪರ್ಯಾಪ್ತಂ ತೃಣಸಂಸ್ತರಮ್ ।
19063022c ನಾಮ್ನಾ ವೃಂದಾವನಂ ನಾಮ ಸ್ವಾದುವೃಕ್ಷಫಲೋದಕಮ್ ।।

ವಿಶಾಲ ಹುಲ್ಲುಗಾವಲಿರುವ ರಮ್ಯ ವನವಿದೆಯೆಂದು ಕೇಳಿದ್ದೇವೆ. ರುಚಿಕರ ಹಣ್ಣುಗಳಿರುವ ಮರಗಳು ಮತ್ತು ನೀರಿರುವ ಅದರ ಹೆಸರು ವೃಂದಾವನ.

19063023a ಅಝಿಲ್ಲಿಕಂಟಕವನಂ ಸರ್ವೈರ್ವನಗುಣೈರ್ಯುತಮ್ ।
19063023c ಕದಂಬಪಾದಪಪ್ರಾಯಂ ಯಮುನಾತೀರಸಂಶ್ರಿತಮ್ ।।

ಕೀಟಗಳೂ ಮುಳ್ಳುಗಳೂ ಇರದ ಅದು ಸರ್ವ ವನಗುಣಗಳಿಂದ ಕೂಡಿದೆ. ಕದಂಬವೃಕ್ಷಗಳನ್ನು ಹೊಂದಿರುವ ಅದು ಯಮುನಾ ತೀರದಲ್ಲಿದೆ.

19063024a ಸ್ನಿಗ್ಧಶೀತಾನಿಲವನಂ ಸರ್ವರ್ತುನಿಲಯಂ ಶುಭಮ್ ।
19063024c ಗೋಪೀನಾಂ ಸುಖಸಂಚಾರಂ ಚಾರುಚಿತ್ರವನಾಂತರಮ್ ।।

ಆ ವನದಲ್ಲಿ ಕೋಮಲ ಶೀತಲ ಶುಭಕರ ಗಾಳಿಯು ಎಲ್ಲ ಕಡೆಗಳಿಂದ ಬೀಸುತ್ತದೆ. ಸುಂದರವೂ ಅದ್ಭುತವೂ ಆಗಿರುವ ಆ ವನದಲ್ಲಿ ಗೋಪಿಗಳು ಸುಖವಾಗಿ ಸಂಚರಿಸುತ್ತಾರೆ.

19063025a ತತ್ರ ಗೋವರ್ಧನೋ ನಾಮ ನಾತಿದೂರೇ ಗಿರಿರ್ಮಹಾನ್ ।
19063025c ಭ್ರಾಜತೇ ದೀರ್ಘಶಿಖರೋ ನಂದನಸ್ಯೇವ ಮಂದರಃ ।।

ಅದರ ಹತ್ತಿರದಲ್ಲಿಯೇ ಗೋವರ್ಧನ ಎಂಬ ಹೆಸರಿನ ಮಹಾ ಗಿರಿಯೊಂದಿದೆ. ಅದರ ಎತ್ತರ ಶಿಖರವು ನಂದನದಲ್ಲಿರುವ ಮಂದರದಂತೆ ಹೊಳೆಯುತ್ತದೆ.

19063026a ಮಧ್ಯೇ ಚಾಸ್ಯ ಮಹಾಶಾಖೋ ನ್ಯಗ್ರೋಧೋ ಯೋಜನೋಚ್ಛ್ರಿತಃ ।
19063026c ಭಾಂಡೀರೋ ನಾಮ ಶುಶುಭೇ ನೀಲಮೇಘ ಇವಾಂಬರೇ ।।

ಆ ವನದ ಮಧ್ಯದಲ್ಲಿ ವಿಶಾಲ ಶಾಖೆಗಳನ್ನುಳ್ಳ ಒಂದು ಯೋಜನ ಎತ್ತರದ ನ್ಯಗ್ರೋಧ ವೃಕ್ಷವಿದೆ. ಭಾಂಡೀರ ಎಂಬ ಹೆಸರಿನ ಅದು ಅಂಬರದಲ್ಲಿರುವ ನೀಲಮೇಘದಂತೆ ಶೋಭಿಸುತ್ತದೆ.

19063027a ಮಧ್ಯೇನ ಚಾಸ್ಯ ಕಾಲಿಂದೀ ಸೀಮಂತಮಿವ ಕುರ್ವತೀ ।
19063027c ಪ್ರಯಾತಾ ನಂದನಸ್ಯೇವ ನಲಿನೀ ಸರಿತಾಂ ವರಾ ।।

ನಂದನವನದಲ್ಲಿ ನದಿಗಳಲ್ಲಿ ಶ್ರೇಷ್ಠೆ ನಲಿನಿಯು ಹರಿಯುವಂತೆ ಕಾಲಿಂದೀ ನದಿಯು ವೃಂದಾವನದ ಮಧ್ಯದಲ್ಲಿ ತಲೆಯ ಬೈತಲೆಯಂತೆ ಹರಿಯುತ್ತದೆ.

19063028a ತತ್ರ ಗೋವರ್ಧನಂ ಚೈವ ಭಾಂಡೀರಂ ಚ ವನಸ್ಪತಿಮ್ ।
19063028c ಕಾಲಿಂದೀಂ ಚ ನದೀಂ ರಮ್ಯಾಂ ದ್ರಕ್ಷ್ಯಾವಶ್ಚರತಃ ಸುಖಮ್ ।।

ಅಲ್ಲಿ ನಾವು ಗೋವರ್ಧನ ಪರ್ವತ, ಭಾಂಡೀರ ವೃಕ್ಷ ಮತ್ತು ರಮ್ಯ ಕಾಲಿಂದೀ ನದಿಯನ್ನು ನೋಡುತ್ತಾ ಸುಖವಾಗಿ ಸುತ್ತಾಡಬಹುದು.

19063029a ತತ್ರಾಯಂ ಕಲ್ಪ್ಯತಾಂ ಘೋಷಸ್ತ್ಯಜ್ಯತಾಂ ನಿರ್ಗುಣಂ ವನಮ್ ।
19063029c ಸಂತ್ರಾಸಯಾವೋ ಭದ್ರಂ ತೇ ಕಿಂಚಿದುತ್ಪಾದ್ಯ ಕಾರಣಮ್ ।।

ಅಲ್ಲಿಯೇ ಈ ಗೋವಲವನ್ನು ನೆಲೆಸೋಣ ಮತ್ತು ನಿರ್ಗುಣವಾದ ಈ ವನವನ್ನು ತ್ಯಜಿಸೋಣ. ನಿನಗೆ ಮಂಗಳವಾಗಲಿ! ಯಾವುದಾದರೂ ಕಾರಣವನ್ನು ಹುಟ್ಟಿಸಿ ಈ ವ್ರಜವಾಸಿಗಳನ್ನು ಹೆದರಿಸೋಣ.”

19063030a ಏವಂ ಕಥಯತಸ್ತಸ್ಯ ವಾಸುದೇವಸ್ಯ ಧೀಮತಃ ।
19063030c ಪ್ರಾದುರ್ಬಭೂವುಃ ಶತಶೋ ರಕ್ತಮಾಂಸವಸಾಶನಾಃ ।।
19063031a ಘೋರಾಶ್ಚಿಂತಯತಸ್ತಸ್ಯ ಸ್ವತನೂರುಹಜಾಸ್ತದಾ ।
19063031c ವಿನಿಷ್ಪೇತುರ್ಭಯಕರಾಃ ಸರ್ವಶಃ ಶತಶೋ ವೃಕಾಃ ।।

ಧೀಮಂತ ವಾಸುದೇವನು ಹೀಗೆ ಹೇಳುತ್ತಿರುವಾಗಲೇ ರಕ್ತ-ಮಾಂಸ-ಮಜ್ಜೆಗಳನ್ನು ತಿನ್ನುವ ನೂರಾರು ತೋಳಗಳು ಕಾಣಿಸಿಕೊಂಡವು. ಅವುಗಳ ಕುರಿತು ಯೋಚಿಸುತ್ತಿದ್ದಂತೆಯೇ ಅವನದೇ ಶರೀರದ ರೋಮರೋಮಗಳಿಂದ ನೂರಾರು ಘೋರ, ಭಯಂಕರ ತೋಳಗಳು ಹೊರಬಿದ್ದು ಎಲ್ಲ ಕಡೆ ಕಾಣಿಸಿಕೊಂಡವು.

19063032a ನಿಷ್ಪತಂತಿ ಸ್ಮ ಬಹವೋ ವ್ರಜಸ್ಯೋತ್ಸಾದನಾಯ ವೈ ।
19063032c ವೃಕಾನ್ನಿಷ್ಪತಿತಾಂದೃಷ್ಟ್ವಾ ಗೋಷು ವತ್ಸೇಷ್ವಥೋ ನೃಷು ।।
19063033a ಗೋಪೀಷು ಚ ಯಥಾಕಾಮಂ ವ್ರಜೇ ತ್ರಾಸೋಽಭವನ್ಮಹಾನ್ ।

ವ್ರಜದಿಂದ ಹೋಗುವಂತೆ ಮಾಡಲು ಕೃಷ್ಣನು ರಚಿಸಿದ ಅನೇಕ ತೋಳಗಳು ಕಾಣಿಸಿಕೊಂಡವು. ಪ್ರಕಟವಾಗುತ್ತಿದ್ದ ಆ ತೋಳಗಳನ್ನು ನೋಡಿ ವ್ರಜದಲ್ಲಿ ಸುಖವಾಗಿದ್ದ ಗೋವುಗಳು, ಕರುಗಳು, ಗಂಡಸರು ಮತ್ತು ಗೋಪಿಯರಲ್ಲಿ ಮಹಾ ಭಯವು ಹುಟ್ಟಿಕೊಂಡಿತು.

19063033c ತೇ ವೃಕಾಃ ಪಂಚಬದ್ಧಾಶ್ಚ ದಶಬದ್ಧಾಸ್ತಥ ಪರೇ ।।
19063034a ತ್ರಿಂಶದ್ವಿಂಶತಿಬದ್ಧಾಶ್ಚ ಶತಬದ್ಧಾಸ್ತಥಾ ಪರೇ ।
19063034c ನಿಶ್ಚೇರುಸ್ತಸ್ಯ ಗಾತ್ರೇಭ್ಯಃ ಶ್ರೀವತ್ಸಕೃತಲಕ್ಷಣಾಃ ।।

ಆ ತೋಳಗಳು ಐದರ ಗುಂಪುಗಳಲ್ಲಿ, ಹತ್ತರ ಗುಂಪುಗಳಲ್ಲಿ, ಇನ್ನು ಕೆಲವು ಮೂವತ್ತು, ಇಪ್ಪತ್ತು ಮತ್ತು ಕೆಲವು ನೂರರ ಗುಂಪುಗಳಲ್ಲಿ ಕೃಷ್ಣನ ಶರೀರದಿಂದ ಹೊರಬಂದವು. ಅವುಗಳಲ್ಲಿ ಶ್ರೀವತ್ಸದ ಚಿಹ್ನೆಗಳಿದ್ದವು.

19063035a ಕೃಷ್ಣಸ್ಯ ಕೃಷ್ಣವದನಾ ಗೋಪಾನಾಂ ಭಯವರ್ಧನಾಃ ।
19063035c ಭಕ್ಷಯದ್ಭಿಶ್ಚ ತೈರ್ವತ್ಸಾಂಸ್ತ್ರಾಸಯದ್ಭಿಶ್ಚ ಗೋವ್ರಜಾನ್ ।।
19063036a ನಿಶಿ ಬಾಲಾನ್ ಹರದ್ಭಿಶ್ಚ ವೃಕೈರುತ್ಸಾದ್ಯತೇ ವ್ರಜಃ ।

ಕೃಷ್ಣನಿಂದ ಪ್ರಕಟಗೊಂಡ ಆ ಕಪ್ಪುಮುಖದ ತೋಳಗಳು ಗೋಪರ ಭಯವನ್ನು ಹೆಚ್ಚಿಸಿದವು. ಅವು ಕರುಗಳನ್ನು ತಿನ್ನುತ್ತಿದ್ದವು. ಗೋವ್ರಜರನ್ನು ಬೆದರಿಸುತ್ತಿದ್ದವು. ರಾತ್ರಿಯಲ್ಲಿ ಬಾಲಕರನ್ನು ಅಪಹರಿಸುತ್ತಿದ್ದವು. ಹೀಗೆ ತೋಳಗಳು ಅವರು ವ್ರಜವನ್ನು ಬಿಟ್ಟುಹೋಗುವಂತೆ ಮಾಡಿದವು.

19063036c ನ ವನೇ ಶಕ್ಯತೇ ಗಂತುಂ ನ ಗಾಶ್ಚ ಪರಿರಕ್ಷಿತುಮ್ ।।
19063037a ನ ವನಾತ್ಕಿಂಚಿದಾಹರ್ತುಂ ನ ಚ ವಾ ತರಿತುಂ ನದೀಮ್ ।

ವನಕ್ಕೆ ಹೋಗಲು ಶಕ್ಯವಾಗಲಿಲ್ಲ. ಗೋವುಗಳನ್ನು ಕಾಯುವುದು ಸಾಧ್ಯವಾಗಲಿಲ್ಲ. ವನದಿಂದ ಏನನ್ನೂ ತರಲಿಕ್ಕಾಗುತ್ತಿರಲಿಲ್ಲ ಮತ್ತು ನದಿಯನ್ನು ದಾಟಲಿಕ್ಕಾಗುತ್ತಿರಲಿಲ್ಲ.

19063038c ತ್ರಸ್ತಾ ಹ್ಯುದ್ವಿಗ್ನಮನಸೋಽಗತಾಸ್ತಸ್ಮಿನ್ವನೇಽವಸನ್ ।।
19063039a ಏವಂ ವೃಕೈರುದೀರ್ಣೈಸ್ತು ವ್ಯಾಘ್ರತುಲ್ಯಪರಾಕ್ರಮೈಃ ।
19063039c ವ್ರಜೋ ನಿಷ್ಪಂದಚೇಷ್ಟಸ್ಯ ಏಕಸ್ಥಾನಚರಃ ಕೃತಃ ।।

ಆ ವನದಲ್ಲಿ ವಾಸಿಸುತ್ತಿದ್ದ ಅವರು ಉದ್ವಿಗ್ನ ಮನಸ್ಕರಾಗಿ ಭಯಗ್ರಸ್ತರಾದರು. ಹುಲಿಯಂತೆ ಪರಾಕ್ರಮವಿದ್ದ ಆ ತೋಳಗಳಿಂದ ಪೀಡಿಸಲ್ಪಟ್ಟ ವ್ರಜದ ಜನರು ಎಲ್ಲಿಯೂ ಹೋಗಲಾರದಂತೆ ಎಲ್ಲರೂ ಒಂದೇ ಸ್ಥಳದಲ್ಲಿರುವಂತೆ ಆದರು.”

ಸಮಾಪ್ತಿ

ಇತಿ ಶ್ರೀಮಹಾಭಾರತೇ ಖಿಲೇಷು ಹರಿವಂಶೇ ವಿಷ್ಣುಪರ್ವಣಿ ಶಿಶುಚರ್ಯಾಯಾಂ ತ್ರಿಷಷ್ಟಿತಮೋಽಧ್ಯಾಯಃ


  1. ಬಲರಾಮನು ನೀಲಿ ಮತ್ತು ಕೃಷ್ಣನು ಹಳದೀ ಬಣ್ಣದ ವಸ್ತ್ರಗಳನ್ನು ಉಡುತ್ತಿದ್ದರು. ↩︎