ಪ್ರವೇಶ
।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।
ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ
ಶ್ರೀ ಮಹಾಭಾರತ
ಖಿಲಭಾಗೇ ಹರಿವಂಶಃ
ವಿಷ್ಣು ಪರ್ವ
ಅಧ್ಯಾಯ 62
ಸಾರ
19062001 ವೈಶಂಪಾಯನ ಉವಾಚ ।
19062001a ಕಾಲೇ ಗಚ್ಛತಿ ತೌ ಸೌಮ್ಯೌ ದಾರಕೌ ಕೃತನಾಮಕೌ ।
19062001c ಕೃಷ್ಣಸಂಕರ್ಷಣೌ ಚೋಭೌ ರಿಂಗಿಣೌ ಸಮಪದ್ಯತಾಮ್ ।।
ವೈಶಂಪಾಯನನು ಹೇಳಿದನು: “ಕಾಲವು ಕಳೆದಂತೆ ಕೃಷ್ಣ-ಸಂಕರ್ಷಣ ಎಂಬ ಹೆಸರಿಟ್ಟಿದ್ದ ಆ ಇಬ್ಬರು ಸೌಮ್ಯ ಶಿಶುಗಳು ಅಂಬೆಗಾಲಿಕ್ಕತೊಡಗಿದವು.
19062002a ತಾವನ್ಯೋನ್ಯಗತೌ ಬಾಲೌ ಬಾಲ್ಯಾದೇವೈಕತಾಂ ಗತೌ ।
19062002c ಏಕಮೂರ್ತಿಧರೌ ಕಾಂತೌ ಬಾಲಚಂದ್ರಾರ್ಕವರ್ಚಸೌ ।।
ಆ ಬಾಲಕರಿಬ್ಬರೂ ಅನ್ಯೋನ್ಯರಾಗಿದ್ದರು. ಬಾಲಕರಿಬ್ಬರೂ ಒಂದೇ ಎಂಬಂತಿದ್ದರು. ಉದಯಿಸುತ್ತಿರುವ ಚಂದ್ರ-ಸೂರ್ಯರ ವರ್ಚಸ್ಸಿನಿಂದ ಕೂಡಿ ಆಕರ್ಷಿತರಾಗಿದ್ದ ಅವರಿಬ್ಬರ ಶರೀರವೂ ಒಂದೇ ಆಗಿ ಕಾಣುತ್ತಿತ್ತು.
19062003a ಏಕನಿರ್ಮಾಣನಿರ್ಮುಕ್ತಾವೇಕಶಯ್ಯಾಸನಾಶನೌ ।
19062003c ಏಕವೇಷಹರಾವೇಕಂ ಪುಷ್ಯಮಾನೌ ಶಿಶುವ್ರತಮ್ ।।
ಅವರಿಬ್ಬರೂ ಒಂದೇ ರೀತಿಯಲ್ಲಿ ಮಾಡಲ್ಪಟ್ಟಿದ್ದರು. ಒಂದೇ ರೀತಿಯಲ್ಲಿ ನಿರ್ಮುಕ್ತರಾಗಿದ್ದರು. ಒಂದೇ ಹಾಸಿಗೆಯಲ್ಲಿ ಮಲಗುತ್ತಿದ್ದರು. ಒಂದೇ ಆಸನದಲ್ಲಿ ಕುಳಿತುಕೊಳ್ಳುತ್ತಿದ್ದರು ಮತ್ತು ಒಟ್ಟಿಗೇ ಊಟಮಾಡುತ್ತಿದ್ದರು. ಒಂದೇ ರೀತಿಯ ವೇಷಭೂಷಣಗಳನ್ನು ಧರಿಸುತ್ತಿದ್ದರು. ಒಂದೇ ರೀತಿಯ ಶಿಶುಚರ್ಯವನ್ನು ನಡೆಸುತ್ತಿದ್ದರು.
19062004a ಏಕಕಾರ್ಯಾಂತರಗತಾವೇಕದೇಹೌ ದ್ವಿಧಾಕೃತೌ ।
19062004c ಏಕಚರ್ಯೌ ಮಹಾವೀರ್ಯಾವೇಕಸ್ಯ ಶಿಶುತಾಂ ಗತೌ ।।
ಎರಡಾಗಿದ್ದರೂ ಒಂದೇ ದೇಹವೋ ಎಂಬಂತೆ ಇಬ್ಬರೂ ಒಂದೇ ಕಾರ್ಯದಲ್ಲಿ ತೊಡಗುತ್ತಿದ್ದರು. ಒಂದೇ ರೀತಿಯಲ್ಲಿ ನಡೆದುಕೊಳ್ಳುತ್ತಿದ್ದ ಅವರು ಶಿಶುಗಳಾಗಿದ್ದರೂ ಸಮನಾಗಿ ಮಹಾವೀರ್ಯವಂತರಾಗಿದ್ದರು.
19062005a ಏಕಪ್ರಮಾಣೌ ಲೋಕಾನಾಂ ದೇವವೃತ್ತಾಂತಮಾನುಷೌ ।
19062005c ಕೃತ್ಸ್ನಸ್ಯ ಜಗತೋ ಗೋಪಾ ಸಂವೃತ್ತೌ ಗೋಪದಾರಕೌ ।।
ಅವರ ಶರೀರಗಳು ಒಂದೇ ಪ್ರಮಾಣದಲ್ಲಿದ್ದವು. ಇಬ್ಬರೂ ದೇವತೆಗಳ ಉದ್ದೇಶಕ್ಕಾಗಿ ಮನುಷ್ಯ ಜನ್ಮವನ್ನು ತಳೆದಿದ್ದರು. ಸಂಪೂರ್ಣ ಜಗತ್ತಿನ ರಕ್ಷಕರಾಗಿದ್ದ ಅವರು ಗೋಪಬಾಲಕರಾಗಿ ಗೋಪರ ಮಧ್ಯೆ ಬೆಳೆಯುತ್ತಿದ್ದರು.
19062006a ಅನ್ಯೋನ್ಯವ್ಯತಿಷಕ್ತಾಭಿಃ ಕ್ರೀಡಾಭಿರಭಿಶೋಭಿತೌ ।
19062006c ಅನ್ಯೋನ್ಯಕಿರಣಗ್ರಸ್ತೌ ಚಂದ್ರಸೂರ್ಯಾವಿವಾಂಬರೇ ।।
ಅನ್ಯೋನ್ಯರನ್ನು ಪ್ರೀತಿಸುತ್ತಿದ್ದ ಅವರು ಆಡುತ್ತಿದ್ದಾಗ ಅತಿಯಾಗಿ ಶೋಭಿಸುತ್ತಿದ್ದರು. ಅಂಬರದಲ್ಲಿ ಚಂದ್ರ-ಸೂರ್ಯರಂತೆ ಅವರು ಅನ್ಯೋನ್ಯರ ಕಿರಣಗಳನ್ನು ಸೂಸುತ್ತಿದ್ದರು.
19062007a ವಿಸರ್ಪಂತೌ ತು ಸರ್ವತ್ರ ಸರ್ಪಭೋಗಭುಜಾವುಭೌ ।
19062007c ರೇಜತುಃ ಪಾಂಸುದಿಗ್ಧಾಂಗೌ ದೃಪ್ತೌ ಕಲಭಕಾವಿವ ।।
ಹಾವಿನ ಹೆಡೆಗಳಂತಿದ್ದ ಭುಜಗಳಿಂದ ಅವರಿಬ್ಬರೂ ಎಲ್ಲಕಡೆ ಹರಿದಾಡುತ್ತಿದ್ದರು. ಅಂಗಾಂಗಗಳು ಧೂಳಿನಿಂದ ತುಂಬಿಕೊಂಡಿದ್ದಾಗ ಅವರು ಸೊಕ್ಕಿದ ಆನೆಯ ಮರಿಗಳಂತೆ ತೋರುತ್ತಿದ್ದರು.
19062008a ಕ್ವಚಿದ್ಭಸ್ಮಪ್ರದೀಪ್ತಾಂಗೌ ಕರೀಷಪ್ರೋಕ್ಷಿತೌ ಕ್ವಚಿತ್ ।
19062008c ತೌ ತತ್ರ ಪರ್ಯಧಾವೇತಾಂ ಕುಮಾರಾವಿವ ಪಾವಕೀ ।।
ಕೆಲವೊಮ್ಮೆ ಅವರ ಅಂಗಾಂಗಗಳು ಬೂದಿಯಿಂದ ಲೇಪಗೊಳ್ಳುತ್ತಿತ್ತು. ಕೆಲವೊಮ್ಮೆ ಸಗಣಿಯಿಂದ ಲೇಪಗೊಳ್ಳುತ್ತಿದ್ದವು. ಪಾವಕನ ಮಗ ಕುಮಾರನಂತೆ ಅವರು ಅಲ್ಲಲ್ಲಿ ಓಡಾಡುತ್ತಿದ್ದರು.
19062009a ಕ್ವಚಿಜ್ಜಾನುಭಿರುದ್ಘೃಷ್ಟೈಃ ಸರ್ಪಮಾನೌ ವಿರೇಜತುಃ ।
19062009c ಕ್ರೀಡಂತೌ ವತ್ಸಶಾಲಾಸು ಶಕೃದ್ದಿಗ್ಧಾಂಗಮೂರ್ಧಜೌ ।।
ಕೆಲವೊಮ್ಮೆ ಅವರು ತಮ್ಮ ತೊಡೆಗಳನ್ನೂರಿ ತೆವಳುತ್ತಾ ರಾರಾಜಿಸುತ್ತಿದ್ದರು. ಗೋಕರುಗಳ ಕೊಟ್ಟಿಗೆಯಲ್ಲಿ ಆಟವಾಡುತ್ತಿದ್ದಾಗ ಅವರ ಅಂಗಾಂಗ ಮತ್ತು ನೆತ್ತಿಗಳು ಸಗಣಿಯಿಂದ ಲೇಪಗೊಳ್ಳುತ್ತಿದ್ದವು.
19062010a ಶುಶುಭಾತೇ ಶ್ರಿಯಾ ಜುಷ್ಟಾವಾನಂದಜನನೌ ಪಿತುಃ ।
19062010c ಜನಂ ಚ ವಿಪ್ರಕುರ್ವಾಣೌ ವಿಹಸಂತೌ ಕ್ವಚಿತ್ಕ್ವಚಿತ್ ।।
ರೂಪದಲ್ಲಿ ಅವರು ಶೋಭಿಸುತ್ತಿದ್ದರು ಮತ್ತು ತಾಯಿ-ತಂದೆಯರಿಗೆ ಆನಂದವನ್ನುಂಟುಮಾಡುತ್ತಿದ್ದರು. ಆಗಾಗ ಅವರು ತುಂಟಾಟಮಾಡಿ ನಗುತ್ತಿದ್ದರು.
19062011a ತೌ ತತ್ರ ಕೌತೂಹಲಿನೌ ಮೂರ್ಧಜವ್ಯಾಕುಲೇಕ್ಷಣೌ ।
19062011c ರೇಜತುಶ್ಚಂದ್ರವದನೌ ದಾರಕೌ ಸುಕುಮಾರಕೌ ।।
ಕುತೂಹಲರಾಗಿದ್ದಾಗ ಅಲ್ಲಿ ಅವರ ಮುಂಗುರುಗೂದಲುಗಳು ಕಣ್ಣುಗಳ ಮೇಲೆ ಬರುತ್ತಿದ್ದವು. ಆ ಸುಕುಮಾರ ಬಾಲಕರ ಮುಖಗಳು ಚಂದ್ರನಂತೆ ಬೆಳಗುತ್ತಿದ್ದವು.
19062012a ಅತಿಪ್ರಸಕ್ತೌ ತೌ ದೃಷ್ಟ್ವಾ ಸರ್ವವ್ರಜವಿಚಾರಿಣೌ 19062012c ನಾಶಕತ್ತೌ ವಾರಯಿತುಂ ನಂದಗೋಪಃ ಸುದುರ್ಮದೌ ।।
ಅವರಿಬ್ಬರೂ ವ್ರಜದಲ್ಲೆಲ್ಲಾ ತಿರುಗಾಡಲು ಅತಿ ಆಸಕ್ತರಾಗಿದ್ದರು. ಅವರು ಎಷ್ಟು ದುರ್ಮದರಾಗಿದ್ದರೆಂದರೆ ನಂದಗೋಪನಿಗೂ ಅವರನ್ನು ತಡೆಯಲು ಸಾಧ್ಯವಾಗುತ್ತಿರಲಿಲ್ಲ.
19062013a ತತೋ ಯಶೋದಾ ಸಂಕ್ರುದ್ಧಾ ಕೃಷ್ಣಂ ಕಮಲಲೋಚನಮ್ ।
19062013c ಆನಾಯ್ಯ ಶಕಟೀಮೂಲೇ ಭರ್ತ್ಸಯಂತೀ ಪುನಃ ಪುನಃ ।।
ಆಗ ಕ್ರುದ್ಧಳಾದ ಯಶೋದೆಯು ಕಮಲಲೋಚನ ಕೃಷ್ಣನನ್ನು ಪುನಃ ಪುನಃ ಬೈಯುತ್ತಾ ಒಂದು ಗಾಡಿಯ ಬಳಿ ಕರೆದುಕೊಂಡು ಹೋದಳು.
19062014a ದಾಮ್ನಾ ಚೈವೋದರೇ ಬದ್ಧ್ವಾ ಪ್ರತ್ಯಬಂಧದುಲೂಖಲೇ ।
19062014c ಯದಿ ಶಕ್ತೋಽಸಿ ಗಚ್ಛೇತಿ ತಮುಕ್ತ್ವಾ ಕರ್ಮ ಸಾಕರೋತ್ ।।
ಅವನ ಹೊಟ್ಟೆಗೆ ಒಂದು ಹಗ್ಗವನ್ನು ಕಟ್ಟಿ ಆ ಹಗ್ಗವನ್ನು ಒರಳಿನ ಕಲ್ಲಿಗೆ ಕಟ್ಟಿಹಾಕಿದಳು. ಹಾಗೆ ಮಾಡಿ “ಸಾಧ್ಯವಾದರೆ ಇದನ್ನು ಬಿಡಿಸಿಕೊಂಡು ಹೋಗು!” ಎಂದು ತನ್ನ ಕಾರ್ಯಗಳಲ್ಲಿ ತೊಡಗಿದಳು.
19062015a ವ್ಯಗ್ರಾಯಾಂ ತು ಯಶೋದಾಯಾಂ ನಿರ್ಜಗಾಮ ತತೋಽಂಗಣಾತ್ ।
19062015c ಶಿಶುಲೀಲಾಂ ತತಃ ಕುರ್ವನ್ಕೃಷ್ಣೋ ವಿಸ್ಮಾಪಯನ್ವ್ರಜಮ್ ।।
ಯಶೋದೆಯು ತನ್ನ ಕಾರ್ಯಗಳಲ್ಲಿ ಮಗ್ನಳಾಗಿರಲು ಕೃಷ್ಣನು ಶಿಶುಲೀಲೆಯನ್ನು ಮಾಡುತ್ತಾ ವ್ರಜದ ಜನರನ್ನು ವಿಸ್ಮಯಗೊಳಿಸುತ್ತಾ ಅಂಗಳದಿಂದ ಹೊರ ಹೊರಟನು.
19062016a ಸೋಽಂಗಣಾನ್ನಿಸ್ಸೃತಃ ಕೃಷ್ಣಃ ಕರ್ಷಮಾಣ ಉಲೂಖಲಮ್ ।
19062016c ಯಮಲಾಭ್ಯಾಂ ಪ್ರವೃದ್ಧಾಭ್ಯಾಮರ್ಜುನಾಭ್ಯಾಂ ಚರನ್ವನೇ ।
19062016e ಮಧ್ಯಾನ್ನಿಶ್ಚಕ್ರಾಮ ತಯೋಃ ಕರ್ಷಮಾಣ ಉಲೂಖಲಮ್ ।।
ಕೃಷ್ಣನು ಒರಳಿನ ಕಲ್ಲನ್ನು ಎಳೆಯುತ್ತಾ ಅಂಗಳದಿಂದ ಹೊರಬಂದು ವನದಲ್ಲಿ ಬೆಳೆದಿದ್ದ ಎರಡು ಅರ್ಜುನ ವೃಕ್ಷಗಳ ಕಡೆ ಹೋದನು. ಅವನು ಒರಳಿನ ಕಲ್ಲನ್ನು ಎಳೆಯುತ್ತಾ ಆ ಮರಗಳ ಮಧ್ಯದಿಂದ ಹೋದನು.
19062017a ತತ್ತಸ್ಯ ಕರ್ಷತೋ ಭದ್ಧಂ ತಿರ್ಯಗ್ಗತಮುಲೂಖಲಮ್ ।
19062017c ಲಗ್ನಂ ತಾಭ್ಯಾಂ ಸಮೂಲಾಭ್ಯಾಮರ್ಜುನಾಭ್ಯಾಂ ಚಕರ್ಷ ಚ ।।
ಅವನು ಎಳೆದುಕೊಂಡು ಹೋಗುತ್ತಿದ್ದಂತೆ ಅವನಿಗೆ ಕಟ್ಟುಹಾಕಿದ್ದ ಆ ಒರಳಿನ ಕಲ್ಲು ಮರಗಳಿಗೆ ಅಡ್ಡವಾಗಿ ಸಿಲುಕಿಕೊಂಡಿತು. ಆಗ ಅವನು ಅದಕ್ಕೆ ಸಿಲುಕಿಕೊಂಡಿದ್ದ ಆ ಅರ್ಜುನ ವೃಕ್ಷಗಳನ್ನು ಬೇರುಗಳ ಸಹಿತ ಎಳೆದನು.
19062018a ತಾವರ್ಜುನೌ ಕೃಷ್ಯಮಾಣೌ ತೇನ ಬಾಲೇನ ರಂಹಸಾ ।
19062018c ಸಮೂಲವಿಟಪೌ ಭಗ್ನೌ ಸ ತು ಮಧ್ಯೇ ಜಹಾಸ ವೈ ।।
ಆ ಬಾಲಕನು ಜೋರಾಗಿ ಎಳೆಯಲು ಅರ್ಜುನ ವೃಕ್ಷಗಳೆರಡೂ ಬೇರುಸಹಿತ ಕಿತ್ತು ಬಿದ್ದಿತು ಮತ್ತು ಅವುಗಳ ಮಧ್ಯದಲ್ಲಿ ಕುಳಿತು ಅವನು ನಗತೊಡಗಿದನು.
19062019a ನಿದರ್ಶನಾರ್ಥಂ ಗೋಪಾಣಾಂ ದಿವ್ಯಂ ಸ್ವಬಲಮಾಸ್ಥಿತಃ ।
19062019c ತದ್ದಾಮ ತಸ್ಯ ಬಾಲಸ್ಯ ಪ್ರಭಾವಾದಭವ್ದ್ದೃಢಮ್ ।।
ಅವನು ಗೋಪರಿಗೆ ತನ್ನ ದಿವ್ಯ ಬಲವನ್ನು ತೋರಿಸಲೋಸುಗ ಹೀಗೆ ಮಾಡಿದನು. ಆ ಬಾಲಕನ ಪ್ರಭಾವದಿಂದ ಹಗ್ಗವೂ ತುಂಡಾಗದೇ ದೃಢವಾಗಿಯೇ ಇದ್ದಿತು.
19062020a ಯಮುನಾತೀರಮಾರ್ಗಸ್ಥಾ ಗೋಪ್ಯಸ್ತಂ ದದೃಶುಃ ಶಿಶುಮ್ ।
19062020c ಕ್ರಂದಂತ್ಯೋ ವಿಸ್ಮಯಂತ್ಯಶ್ಚ ಯಶೋದಾಂ ಯಯುರಂಗನಾಃ ।।
ಯಮುನಾ ತೀರದ ಕಡೆ ಹೋಗುತ್ತಿದ್ದ ಗೋಪಿಯರು ಆ ಶಿಶುವನ್ನು ನೋಡಿದರು. ವಿಸ್ಮಯದಿಂದ ಕೂಗಿಕೊಳ್ಳುತ್ತಾ ಆ ಸ್ತ್ರೀಯರು ಯಶೋದೆಯ ಬಳಿ ಓಡಿಬಂದರು.
19062021a ತಾಸ್ತು ಸಂಭ್ರಾಂತವದನಾ ಯಶೋದಾಮೂಚುರಂಗನಾಃ ।
19062021c ಏಹ್ಯಾಗಚ್ಛ ಯಶೋದೇ ತ್ವಂ ಸಂಭ್ರಮಾತ್ಕಿಂ ವಿಲಂಬಸೇ ।।
ಮುಖದಲ್ಲಿ ಭ್ರಾಂತಗೊಂಡವರಂತಿದ್ದ ಆ ಅಂಗನೆಯರು ಯಶೋದೆಗೆ ಹೇಳಿದರು: “ಯಶೋದೇ! ಇಲ್ಲಿ ಬಾ! ಭಯದಿಂದ ತಡಮಾಡುತ್ತಿದ್ದೀಯಾ?
19062022a ಯೌ ತಾವರ್ಜುನವೃಕ್ಷೌ ತು ವ್ರಜೇ ಸತ್ಯೋಪಯಾಚನೌ ।
19062022c ಪುತ್ರಸ್ಯೋಪರಿ ತಾವೇತೌ ಪತಿತೌ ತೇ ಮಹೀರುಹೌ ।।
ವ್ರಜದಲ್ಲಿ ನಮ್ಮ ಯಾಚನೆಗಳನ್ನು ಸತ್ಯಗೊಳಿಸುತ್ತಿದ್ದ ಆ ಎರಡು ಅರ್ಜುನ ವೃಕ್ಷಗಳು ನಿನ್ನ ಮಗನ ಮೇಲೆ ಬಿದ್ದಿವೆ!
19062023a ದೃಢೇನ ದಾಮ್ನಾ ತತ್ರೈವ ಬದ್ಧೋ ವತ್ಸ ಇವೋದರೇ ।
19062023c ಜಹಾಸ ವೃಕ್ಷಯೋರ್ಮಧ್ಯೇ ತವ ಪುತ್ರಃ ಸ ಬಾಲಕಃ ।।
ನಿನ್ನ ಮಗನ ಹೊಟ್ಟೆಗೆ ಕಟ್ಟಿದ್ದ ಹಗ್ಗವು ತುಂಡಾಗದೇ ದೃಢವಾಗಿಯೇ ಇದೆ. ನಿನ್ನ ಬಾಲಕ ಪುತ್ರನಾದರೋ ಆ ಮರಗಳ ಮಧ್ಯೆ ಕುಳಿತು ನಗುತ್ತಿದ್ದಾನೆ!
19062024a ಉತ್ತಿಷ್ಠ ಗಚ್ಛ ದುರ್ಮೇಧೇ ಮೂಢೇ ಪಂಡಿತಮಾನಿನಿ ।
19062024c ಪುತ್ರಮಾನಯ ಜೀವಂತಂ ಮುಕ್ತಂ ಮೃತ್ಯುಮುಖಾದಿವ ।।
ದುರ್ಬುದ್ಧಿಯವಳೇ! ಮೂಢಳೇ! ಪಂಡಿತೆಯೆಂದು ಅಭಿಮಾನವುಳ್ಳವಳೇ! ಏಳು! ಹೋಗು! ನಿನ್ನ ಮಗನನ್ನು ಮೃತ್ಯುವಿನ ಬಾಯಿಯಿಂದ ಬಿಡಿಸಿ ತರುವಂತೆ ಜೀವಂತವಾಗಿ ಕರೆದುಕೊಂಡು ಬಾ!”
19062025a ಸಾ ಭೀತಾ ಸಹಸೋತ್ಥಾಯ ಹಾಹಾಕಾರಂ ಪ್ರಕುರ್ವತೀ ।
19062025c ತಂ ದೇಶಮಗಮದ್ಯತ್ರ ಪಾತಿತೌ ತಾವುಭೌ ದ್ರುಮೌ ।।
ಅವಳು ಭೀತಳಾಗಿ ಒಡನೆಯೇ ಎದ್ದು ಹಾಹಾಕಾರಗೈಯುತ್ತಾ ಆ ಎರಡು ಮರಗಳು ಬಿದ್ದಿದ್ದ ಪ್ರದೇಶಕ್ಕೆ ಆಗಮಿಸಿದಳು.
19062026a ಸಾ ದದರ್ಶ ತಯೋರ್ಮಧ್ಯೇ ದ್ರುಮಯೋರಾತ್ಮಜಂ ಶಿಶುಮ್ ।
19062026c ದಾಮ್ನಾ ನಿಬದ್ಧಮುದರೇ ಕರ್ಷಮಾಣಮುಲೂಖಲಮ್ ।।
ಆ ಮರಗಳ ಮಧ್ಯೆ ಹೊಟ್ಟೆಯನ್ನು ಕಟ್ಟಿದ್ದ ಹಗ್ಗದಿಂದ ಒರಳಿನ ಕಲ್ಲನ್ನು ಎಳೆಯುತ್ತಿದ್ದ ತನ್ನ ಶಿಶುವನ್ನು ಅವಳು ನೋಡಿದಳು.
19062027a ಸಾ ಗೋಪೀ ಗೋಪವೃದ್ಧಶ್ಚ ಸಮುವಾಚ ವ್ರಜಸ್ತದಾ ।
19062027c ಪರ್ಯಾಗಚ್ಛಂತ ತೇ ದ್ರಷ್ಟುಂ ಗೋಪೇಷು ಮಹದದ್ಭುತಮ್ ।।
ಆ ಗೋಪಿಯರು ವ್ರಜದಲ್ಲಿದ್ದ ಗೋಪವೃದ್ಧರಿಗೆ ಇದನ್ನು ವರದಿಮಾಡಿದರು. ಅವರು ಗೋಪರ ಮಧ್ಯೆ ನಡೆದ ಈ ಮಹಾ ಅದ್ಭುತವನ್ನು ನೋಡಲು ಬಂದು ಸೇರಿದರು.
19062028a ಜಜಲ್ಪುಸ್ತೇ ಯಥಾಕಾಮಂ ಗೋಪಾ ವನವಿಚಾರಿಣಃ ।
19062028c ಕೇನೇಮೌ ಪಾತಿತೌ ವೃಕ್ಷೌ ಘೋಷಸ್ಯಾಯತನೋಪಮೌ ।।
ವನಚಾರೀ ಗೋಪರು ತಮಗಿಷ್ಟಬಂದಂತೆ ಮಾತನಾಡಿಕೊಳ್ಳತೊಡಗಿದರು: “ಈ ಎರಡು ಮರಗಳು ಹೇಗೆ ಉರುಳಿ ಬಿದ್ದವು? ಇವೆರಡೂ ವ್ರಜದ ದೇವಾಲಯಗಳಂತಿದ್ದವು!
19062029a ವಿನಾ ವಾತಂ ವಿನಾ ವರ್ಷಮ್ವಿದ್ಯುತ್ಪ್ರಪತನಂ ವಿನಾ ।
19062029c ವಿನಾ ಹಸ್ತಿಕೃತಂ ದೋಷಮ್ಕೇನೇಮೌ ಪಾತಿತೌ ದ್ರುಮೌ ।।
ಗಾಳಿಯಿಲ್ಲದೇ, ಮಳೆಯಿಲ್ಲದೇ, ಮಿಂಚು ಬಡಿಯದೇ, ಆನೆಯ ಹಾಳಿಯಿಲ್ಲದೇ ಈ ಎರಡು ವೃಕ್ಷಗಳು ಯಾವ ದೋಷದಿಂದ ಕೆಳಕ್ಕುರುಳಿದವು?
19062030a ಅಹೋ ಬತ ನ ಶೋಭೇತಾಂ ವಿಮೂಲಾವರ್ಜುನಾವಿಭೌ ।
19062030c ಭೂಮೌ ನಿಪತಿತೌ ವೃಕ್ಷೌ ವಿತೋಯೌ ಜಲದಾವಿವ ।
19062030e ಯದೀಮೌ ಘೋಷರಚಿತೌ ಘೋಷಕಲ್ಯಾಣಕಾರಿಣೌ ।।
ಅಯ್ಯೋ! ಬೇರುಸಹಿತ ಕಿತ್ತುಬಿದ್ದಿರುವ ಈ ಅರ್ಜುನ ವೃಕ್ಷಗಳು ಶೋಭಿಸುತ್ತಿಲ್ಲ! ಕೆಳಗೆ ಬಿದ್ದಿರುವ ಈ ಮರಗಳು ನೀರಿಲ್ಲದ ಮೋಡಗಳಂತೆ ಕಾಣುತ್ತಿವೆ. ಈ ಎರಡು ವೃಕ್ಷಗಳು ಈ ಗೋವಲದಲ್ಲಿದ್ದುಕೊಂಡು ಗೋವಲಕ್ಕೆ ಕಲ್ಯಾಣಕಾರಿಗಳಾಗಿದ್ದವು!
19062031a ನಂದಗೋಪ ಪ್ರಸನ್ನೌ ತೇ ದ್ರುಮಾವೇವಂ ಗತಾವಪಿ ।
19062031c ಯಚ್ಚ ತೇ ದಾರಕೋ ಮುಕ್ತೋ ವಿಪುಲಾಭ್ಯಾಮಪಿ ಕ್ಷಿತೌ ।।
ನಂದಗೋಪ! ಈ ಮರಗಳೆರಡೂ ಹೋದವೆಂದು ನೀನು ಪ್ರಸನ್ನನಾಗಿರಬಹುದು! ಆದರೂ ನಿನ್ನ ಮಗನು ಗಾಯಗೊಳ್ಳದೇ ಉಳಿದುಕೊಂಡಿದ್ದಾನೆ!
19062032a ಔತ್ಪಾತಿಕಮಿದಂ ಘೋಷೇ ತೃತೀಯಂ ವರ್ತತೇ ತ್ವಿಹ ।
19062032c ಪೂತನಾಯಾ ವಿನಾಶಶ್ಚ ದ್ರುಮಯೋಃ ಶಕಟಸ್ಯ ಚ ।।
ಈ ಗೋವಲದಲ್ಲಿ ನಡೆದ ಮೂರನೆಯ ಉತ್ಪಾತವು ಇದು: ಪೂತನಿಯ, ಈ ಮರಗಳ ಮತ್ತು ಬಂಡಿಯ ವಿನಾಶ!
19062033a ಅಸ್ಮಿನ್ ಸ್ಥಾನೇ ಚ ವಾಸೋಽಯಂ ಘೋಷಸ್ಯಾಸ್ಯ ನ ಯುಜ್ಯತೇ ।
19062033c ಉತ್ಪಾತಾ ಹ್ಯತ್ರ ದಿಶ್ಯಂತೇ ಕಥಯಂತೋ ನ ಶೋಭನಮ್ ।।
ಗೋವುಗಳೊಂದಿಗೆ ಈ ಪ್ರದೇಶದಲ್ಲಿ ವಾಸಿಸುವುದು ಸರಿಯಲ್ಲ. ಏಕೆಂದರೆ ಇಲ್ಲಿ ಉತ್ಪಾತಗಳು ಕಾಣತೊಡಗಿವೆ. ಇವು ಒಳ್ಳೆಯದಲ್ಲ.”
19062034a ನಂದಗೋಪಸ್ತು ಸಹಸಾ ಮುಕ್ತ್ವಾ ಕೃಷ್ಣಮುಲೂಖಲಾತ್ ।
19062034c ನಿವೇಶ್ಯ ಚಾಂಕೇ ಸುಚಿರಂ ಮೃತಂ ಪುನರಿವಾಗತಮ್ ।।
ನಂದಗೋಪನಾದರೋ ಕೂಡಲೇ ಕೃಷ್ಣನನ್ನು ಒರಳಿನ ಕಲ್ಲಿನಿಂದ ಬಿಡುಗಡೆ ಮಾಡಿ, ಅವನು ಮೃತನಾಗಿ ಪುನಃ ಹುಟ್ಟಿರುವನೋ ಎನ್ನುವಂತೆ ಅವನನ್ನು ಬಹುಕಾಲದವರೆಗೆ ಮಡಿಲಲ್ಲಿ ಇಟ್ಟುಕೊಂಡಿದ್ದನು.
19062035a ನಾತೃಪ್ಯತ್ಪ್ರೇಕ್ಷಮಾಣೋ ವೈ ಕೃಷ್ಣಂ ಕಮಲಲೋಚನಮ್ ।
19062035c ತತೋ ಯಶೋದಾಂ ಗರ್ಹನ್ವೈ ನಂದಗೋಪೋ ವಿವೇಶ ಹ ।
19062035e ಸ ಚ ಗೋಪಜನಃ ಸರ್ವೋ ವ್ರಜಮೇವ ಜಗಾಮ ಹ ।।
ಕಮಲಲೋಚನ ಕೃಷ್ಣನನ್ನು ಎಷ್ಟು ನೋಡಿದರೂ ಅವನಿಗೆ ತೃಪ್ತಿಯಾಗಲಿಲ್ಲ. ಅನಂತರ ನಂದಗೋಪನು ಯಶೋದೆಯನ್ನು ಬೈಯುತ್ತಾ ಮನೆಯನ್ನು ಪ್ರವೇಶಿಸಿದನು. ಎಲ್ಲ ಗೋಪಜನರೂ ವ್ರಜದಲ್ಲಿ ತಮ್ಮ ಮನೆಗಳಿಗೆ ತೆರಳಿದರು.
19062036a ಸ ಚ ತೇನೈವ ನಾಮ್ನಾ ತು ಕೃಷ್ಣೋ ವೈ ದಾಮಬಂಧನಾತ್ ।
19062036c ಗೋಷ್ಠೇ ದಾಮೋದರ ಇತಿ ಗೋಪೀಭಿಃ ಪರಿಗೀಯತೇ ।।
ಹಗ್ಗದಿಂದ ಅವನ ಹೊಟ್ಟೆಯನ್ನು ಕಟ್ಟಿದುದರಿಂದ ಆ ಗೋವ್ರಜದಲ್ಲಿ ಗೋಪಿಯರು ಕೃಷ್ಣನನ್ನು ದಾಮೋದರ ಎಂಬ ಹೆಸರಿನಿಂದಲೇ ಕರೆದರು.
19062037a ಏತದಾಶ್ಚರ್ಯಭೂತಂ ಹಿ ಬಾಲಸ್ಯಾಸೀದ್ವಿಚೇಷ್ಟಿತಮ್ ।
19062037c ಕೃಷ್ಣಸ್ಯ ಭರತಶ್ರೇಷ್ಠ ಘೋಷೇ ನಿವಸತಸ್ತದಾ ।।
ಭರತಶ್ರೇಷ್ಠ! ಶಿಶುವಾಗಿ ಗೋವಲದಲ್ಲಿ ವಾಸಿಸುತ್ತಿದ್ದಾಗ ಕೃಷ್ಣನು ಈ ಆಶ್ಚರ್ಯಕರ ಚೇಷ್ಟೆಗಳನ್ನು ಮಾಡಿದನು.”
ಸಮಾಪ್ತಿ
ಇತಿ ಶ್ರೀಮಹಾಭಾರತೇ ಖಿಲೇಷು ಹರಿವಾಂಶೇ ವಿಷ್ಣುಪರ್ವಣಿ ಶಿಶುಚರ್ಯಾಯಾಂ ಯಮಲಾರ್ಜುನಭಂಗೇ ನಾಮ ದ್ವಿಷಷ್ಟಿತಮೋಽಧ್ಯಾಯಃ