ಪ್ರವೇಶ
।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।
ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ
ಶ್ರೀ ಮಹಾಭಾರತ
ಖಿಲಭಾಗೇ ಹರಿವಂಶಃ
ವಿಷ್ಣು ಪರ್ವ
ಅಧ್ಯಾಯ 61
ಸಾರ
ಶಕಟಭಂಜನ (1-21) ಮತ್ತು ಪೂತನಾವಧೆ (22-34).
19061001 ವೈಶಂಪಾಯನ ಉವಾಚ ।
19061001a ತತ್ರ ತಸ್ಯಾಸತಃ ಕಾಲಃ ಸುಮಹಾನತ್ಯವರ್ತತ ।
19061001c ಗೋವ್ರಜೇ ನಂದಗೋಪಸ್ಯ ಬಲ್ಲವತ್ವಂ ಪ್ರಕುರ್ವತಃ ।।
ವೈಶಂಪಾಯನನು ಹೇಳಿದನು: “ನಂದಗೋಪನು ಅಲ್ಲಿ ಗೋವ್ರಜದಲ್ಲಿ ಗೋಪಕರ್ಮವನ್ನೆಸಗುತ್ತಾ ವಾಸಿಸಿ ದೀರ್ಘ ಕಾಲವು ಕಳೆಯಿತು.
19061002a ದಾರಕೌ ಕೃತನಾಮಾನೌ ವವೃಧಾತೇ ಸುಖಂ ಚ ತೌ ।
19061002c ಜ್ಯೇಷ್ಠಃ ಸಂಕರ್ಷಣೋ ನಾಮ ಕನೀಯಾನ್ಕೃಷ್ಣ ಏವ ತು ।।
ನಾಮಕರಣ ಸಂಸ್ಕಾರಗಳನ್ನು ಮಾಡಿಸಿಕೊಂಡ ಆ ಇಬ್ಬರು ಬಾಲಕರೂ ಸುಖದಿಂದ ಬೆಳೆದರು. ಹಿರಿಯವನ ಹೆಸರು ಸಂಕರ್ಷಣ ಎಂದೂ ಕಿರಿಯವನ ಹೆಸರು ಕೃಷ್ಣ ಎಂದಾಯಿತು.
19061003a ಮೇಘಕೃಷ್ಣಸ್ತು ಕೃಷ್ಣೋಽಭೂದ್ದೇಹಾಂತರಗತೋ ಹರಿಃ ।
19061003c ವ್ಯವರ್ಧತ ಗವಾಂ ಮಧ್ಯೇ ಸಾಗರಸ್ಯ ಇವಾಂಬುದಃ ।।
ದೇಹಾಂತರಗತನಾಗಿದ್ದ ಹರಿಯು ಕೃಷ್ಣನಾದನು. ಮೇಘವರ್ಣನಾಗಿದ್ದ ಕೃಷ್ಣನಾದರೋ ಸಾಗರದಿಂದ ವೃದ್ಧಿಯಾಗುವ ಮೋಡದಂತೆ ಗೋವುಗಳ ಮಧ್ಯೆ ಬೆಳೆದನು.
19061004a ಶಕಟಸ್ಯ ತ್ವಧಃ ಸುಪ್ತಂ ಕದಾಚಿತ್ಪುತ್ರಗೃದ್ಧಿನೀ ।
19061004c ಯಶೋದಾ ತಂ ಸಮುತ್ಸೃಜ್ಯ ಜಗಾಮ ಯಮುನಾಂ ನದೀಮ್ ।।
ಮಗನನ್ನು ಅತ್ಯಂತ ಆಸೆಪಡುತ್ತಿದ್ದ ಯಶೋದೆಯು ಒಮ್ಮೆ ಬಂಡಿಯ ಕೆಳಗೆ ಮಲಗಿದ್ದ ಅವನನ್ನು ಅಲ್ಲಿಯೇ ಬಿಟ್ಟು ಯಮುನಾ ನದಿಗೆ ಹೋದಳು.
19061005a ಶಿಶುಲೀಲಾಂ ತತಃ ಕುರ್ವನ್ಸ ಹಸ್ತಚರಣೌ ಕ್ಷಿಪನ್ ।
19061005c ರುರೋದ ಮಧುರಂ ಕೃಷ್ಣಃ ಪಾದಾವೂರ್ಧ್ವಂ ಪ್ರಸಾರಯನ್ ।।
ಆಗ ಶಿಶುಲೀಲೆಗಳನ್ನಾಡುತ್ತಾ ಕೃಷ್ಣನು ಕೈಕಾಲುಗಳನ್ನು ತೂರಾಡುತ್ತಾ, ಕಾಲನ್ನು ಮೇಲೆ ಮಾಡುತ್ತಾ ಮಧುರವಾಗಿ ಅಳತೊಡಗಿದನು.
19061006a ಸ ತತ್ರೈಕೇನ ಪಾದೇನ ಶಕಟಂ ಪರ್ಯವರ್ತಯತ್ ।
19061006c ನ್ಯುಬ್ಜಂ ಪಯೋಧರಾಕಾಂಕ್ಷೀ ಚಕಾರ ಚ ರುರೋದ ಚ ।।
ಅವನು ಒಂದೇ ಕಾಲಿನಿಂದ ಬಂಡಿಯನ್ನು ಉರುಳಿಸಿದನು. ಮೊಲೆಯ ಹಾಲಿನ ಇಚ್ಛೆಯಿಂದ ಅವನು ಹೀಗೆ ಮಾಡಿದನು ಮತ್ತು ಅಳತೊಡಗಿದನು.
19061007a ಏತಸ್ಮಿನ್ನಂತರೇ ಪ್ರಾಪ್ತಾ ಯಶೋದಾ ಭಯವಿಕ್ಲವಾ ।
19061007c ಸ್ನಾತಾ ಪ್ರಸ್ರವದಿಗ್ಧಾಂಗೀ ಬದ್ಧಾವತ್ಸೇವ ಸೌರಭೀ ।।
ಈ ಮಧ್ಯೆ ಭಯದಿಂದ ವ್ಯಾಕುಲಳಾಗಿದ್ದ ಯಶೋದೆಯು ಸ್ನಾನಮಾಡಿ ಬಂದಳು. ಕಟ್ಟಿಹಾಕಿದ್ದ ಕರುವಿಗೆ ಹಾಲುಣಿಸುವ ತವಕದಿಂದಿದ್ದ ಹಸುವಿನಂತೆ ಅವಳ ಮೊಲೆಗಳು ಹಾಲಿನಿಂದ ಒದ್ದೆಯಾಗಿದ್ದವು.
19061008a ಸಾ ದದರ್ಶ ವಿಪರ್ಯಸ್ತಂ ಶಕಟಂ ವಾಯುನಾ ವಿನಾ ।
19061008c ಹಾಹೇತಿ ಕೃತ್ವಾ ತ್ವರಿತಾ ದಾರಕಂ ಜಗೃಹೇ ತದಾ ।।
ಭಿರುಗಾಳಿಯಿಲ್ಲದೇ ಮೊಗಚಿಬಿದ್ದಿದ್ದ ಬಂಡಿಯನ್ನು ನೋಡಿ ಅವಳು ಹಾಹಾಕಾರವನ್ನು ಮಾಡಿ ಮಗನನ್ನು ಎತ್ತಿಕೊಂಡಳು.
19061009a ನ ಸಾ ಬುಬೋಧ ತತ್ತ್ವೇನ ಶಕಟಂ ಪರಿವರ್ತಿತಮ್ ।
19061009c ಸ್ವಸ್ತಿ ತೇ ದಾರಕಾಯೇತಿ ಪ್ರೀತಾ ಭೀತಾಪಿ ಸಾಭವತ್ ।।
ಬಂಡಿಯು ಮೊಗಚಿಬಿದ್ದುದರ ಕಾರಣವು ಅವಳಿಗೆ ತಿಳಿಯಲಿಲ್ಲ. “ಮಗನೇ! ನಿನಗೆ ಮಂಗಳವಾಗಲಿ!” ಎನ್ನುತ್ತಾ ಪ್ರೀತಳೂ ಭೀತಳೂ ಆದಳು.
19061010a ಕಿಂ ತು ವಕ್ಷ್ಯತಿ ತೇ ಪುತ್ರ ಪಿತಾ ಪರಮಕೋಪನಃ ।
19061010c ತ್ವಯ್ಯಧಃ ಶಕಟೇ ಸುಪ್ತೇ ಅಕಸ್ಮಾಚ್ಚ ವಿಲೋಡಿತೇ ।।
“ಪುತ್ರ! ಬಂಡಿಯ ಕೆಳಗೆ ನೀನು ಮಲಗಿದ್ದಾಗ ಬಂಡಿಯು ಅಕಸ್ಮಾತ್ತಾಗಿ ಮೊಗಚಿ ಬಿದ್ದಿತು ಎನ್ನುವುದನ್ನು ಕೇಳಿ ಪರಮಕೋಪಿಯಾದ ನಿನ್ನ ಪಿತನು ಏನು ಹೇಳಿಯಾನು?
19061011a ಕಿಂ ಮೇ ಸ್ನಾನೇನ ದುಃಸ್ನಾನಂ ಕಿಂ ಚ ಮೇ ಗಮನೇ ನದೀಮ್ ।
19061011c ಪರ್ಯಸ್ತೇ ಶಕಟೇ ಪುತ್ರ ಯಾ ತ್ವಾಂ ಪಶ್ಯಾಮ್ಯಪಾವೃತಮ್ ।।
ಸ್ನಾನಮಾಡುವುದರಿಂದ ನನಗೇನಾಗಬೇಕಾಗಿತ್ತು? ನದಿಗೆ ಹೋಗಿ ಅಂತಹ ದುಃಸ್ನಾನವನ್ನು ಮಾಡುವುದಾದರೂ ಏಕೆ ಬೇಕಾಗಿತ್ತು? ಹಿಂದಿರುಗಿ ಬಂದು ನೋಡಿದರೆ ಪುತ್ರ! ಬಂಡಿಯು ಮೊಗಚಿಬಿದ್ದಿದೆ ಮತ್ತು ನೀನು ಯಾವ ಮರೆಯೂ ಇಲ್ಲದೇ ಆಕಾಶದ ಕೆಳಗೆ ಮಲಗಿದ್ದೀಯೆ!”
19061012a ಏತಸ್ಮಿನ್ನಂತರೇ ಗೋಭಿರಾಜಗಾಮ ವನೇಚರಃ ।
19061012c ಕಾಷಾಯವಾಸಸೀ ಬಿಭ್ರನ್ನಂದಗೋಪೋ ವ್ರಜಾಂತಿಕಮ್ ।।
ಈ ಮಧ್ಯೆ ಗೋವುಗಳನ್ನು ವನದಲ್ಲಿ ಮೇಯಿಸಿಕೊಂಡು ಕಾಷಾಯವಸ್ತ್ರವನ್ನುಟ್ಟುಕೊಂಡಿದ್ದ ನಂದಗೋಪನು ವ್ರಜದ ಬಳಿ ಬಂದನು.
19061013a ಸ ದದರ್ಶ ವಿಪರ್ಯಸ್ತಂ ಭಿನ್ನಭಾಂಡಘಟೀಘಟಮ್ ।
19061013c ಅಪಾಸ್ತಧೂರ್ವಿಭಿನ್ನಾಕ್ಷಂ ಶಕಟಂ ಚಕ್ರಮೋಲಿನಮ್ ।।
ಬಂಡಿಯು ಮೊಗಚಿ ಬಿದ್ದು, ಪಾತ್ರೆ-ಗಡಿಗೆಗಳು ಒಡೆದುದನ್ನು ಅವನು ನೋಡಿದನು. ಅದರ ಮೊಗವು ತುಂಡಾಗಿ ಬಿದ್ದಿತ್ತು. ಬಂಡಿಯ ಚಕ್ರಗಳು ಮೇಲ್ಮುಖವಾಗಿದ್ದವು.
19061014a ಭೀತಸ್ತ್ವರಿತಮಾಗತ್ಯ ಸಹಸಾ ಸಾಶ್ರುಲೋಚನಃ ।
19061014c ಅಪಿ ಮೇ ಸ್ವಸ್ತಿ ಪುತ್ರಾಯೇತ್ಯಸಕೃದ್ವಚನಂ ವದನ್ ।।
ಭೀತನಾಗಿ ಕಣ್ಣೀರುತುಂಬಿದ್ದ ಅವನು ಬೇಗನೇ ಬಂದು “ನನ್ನ ಮಗನು ಸುರಕ್ಷಿತನಾಗಿದ್ದಾನೆಯೇ?” ಎಂದು ಕೇಳಿದನು.
19061015a ಪಿಬಂತಂ ಸ್ತನಮಾಲಕ್ಷ್ಯ ಪುತ್ರಂ ಸ್ವಸ್ಥೋಽಬ್ರವೀತ್ಪುನಃ ।
19061015c ವೃಷಯುದ್ಧಂ ವಿನಾ ಕೇನ ಪರ್ಯಸ್ತಂ ಶಕಟಂ ಮಮ ।।
ಮಗನು ಸುರಕ್ಷಿತನಾಗಿ ಮೊಲೆಯುಣ್ಣುತ್ತಿರುವುದನ್ನು ನೋಡಿ “ಎತ್ತುಗಳು ಜಗಳವಾಡದೇ ನನ್ನ ಈ ಬಂಡಿಯು ಹೇಗೆ ಉರುಳಿ ಬಿದ್ದಿತು” ಎಂದು ಪುನಃ ಕೇಳಿದನು.
19061016a ಪ್ರತ್ಯುವಾಚ ಯಶೋದಾ ತಂ ಭೀತಾ ಗದ್ಗದಭಾಷಿಣೀ ।
19061016c ನ ವಿಜಾನಾಮ್ಯಹಂ ಕೇನ ಶಕಟಂ ಪರಿವರ್ತಿತಮ್ ।।
ಭೀತಳಾಗಿ ಕಣ್ಣೀರಿನಿಂದ ಗಂಟಲು ಕಟ್ಟಿದ ಯಶೋದೆಯು “ಬಂಡಿಯು ಹೇಗೆ ಉರುಳಿ ಬಿದ್ದಿತು ಎಂತು ತಿಳಿಯಲಿಲ್ಲ” ಎಂದು ಉತ್ತರಿಸಿದಳು.
19061017a ಅಹಂ ನದೀಂ ಗತಾ ಸೌಮ್ಯ ಚೈಲಪ್ರಕ್ಷಾಲನಾರ್ಥಿನೀ ।
19061017c ಆಗತಾ ಚ ವಿಪರ್ಯಸ್ತಮಪಶ್ಯಂ ಶಕಟಂ ಭುವಿ ।।
“ಸೌಮ್ಯ! ನಾನು ಬಟ್ಟೆಗಳನ್ನು ಒಗೆಯಲು ನದಿಗೆ ಹೋಗಿದ್ದೆ. ಹಿಂದಿರುಗಿದಾಗ ನಾನು ಬಂಡಿಯು ನೆಲದ ಮೇಲೆ ಉರುಳಿಬಿದ್ದುದನ್ನು ನೋಡಿದೆ.”
19061018a ತಯೋಃ ಕಥಯತೋರೇವಮಬ್ರುವಂಸ್ತತ್ರ ದಾರಕಾಃ ।
19061018c ಅನೇನ ಶಿಶುನಾ ಯಾನಮೇತತ್ಪಾದೇನ ಲೋಡಿತಮ್ ।।
ಅವರಿಬ್ಬರೂ ಹೀಗೆ ಮಾತನಾಡಿಕೊಳ್ಳುತ್ತಿರುವಾಗ ಅಲ್ಲಿದ್ದ ಬಾಲಕರು ಹೇಳಿದರು: “ಈ ಶಿಶುವು ತನ್ನ ಕಾಲಿನಿಂದ ಒದೆದು ಬಂಡಿಯನ್ನು ಉರುಳಿಸಿತು.
19061019a ಅಸ್ಮಾಭಿಃ ಸಂಪತದ್ಭಿಶ್ಚ ದೃಷ್ಟಮೇತದ್ಯದೃಚ್ಛಯಾ ।
19061019c ನಂದಗೋಪಸ್ತು ತಚ್ಛ್ರುತ್ವಾ ವಿಸ್ಮಯಂ ಪರಮಂ ಯಯೌ ।।
ಇಲ್ಲಿ ಸುಮ್ಮನೇ ಸುತ್ತಾಡುತ್ತಿರುವಾಗ ಇದು ಬಿದ್ದುದನ್ನು ನಾವು ನೋಡಿದೆವು.” ನಂದಗೋಪನಾದರೋ ಇದನ್ನು ಕೇಳಿ ಪರಮ ವಿಸ್ಮಿತನಾದನು.
19061020a ಪ್ರಹೃಷ್ಟಶ್ಚೈವ ಭೀತಶ್ಚ ಕಿಮೇತದಿತಿ ಚಿಂತಯನ್ ।
19061020c ನ ಚ ತೇ ಶ್ರದ್ಧಧುರ್ಗೋಪಾಃ ಸರ್ವೇ ಮಾನುಷಬುದ್ಧಯಃ ।।
ಹರ್ಷಿತನಾದ ಅವನು ಇದು ಏನಾಯಿತು ಎಂದು ಚಿಂತಿಸಿ ಭಯಭೀತನೂ ಆದನು. ಅದು ಮಾನುಷ ಶಿಶುವೆಂದು ತಿಳಿದುಕೊಂಡಿದ್ದ ಎಲ್ಲ ಗೋಪರೂ ಬಾಲಕರ ಆ ಮಾತನ್ನು ನಂಬಲಿಲ್ಲ.
19061021a ಆಶ್ಚರ್ಯಮಿತಿ ತೇ ಸರ್ವೇ ವಿಸ್ಮಯೋತ್ಫುಲ್ಲಲೋಚನಾಃ ।
19061021c ಸ್ವೇ ಸ್ಥಾನೇ ಶಕಟಂ ಪ್ರಾಪ್ಯ ಚಕ್ರಬಂಧಮಕಾಕ್ರಯನ್ ।।
ಆಶ್ಚರ್ಯವೆಂದು ಹೇಳಿಕೊಂಡು ಅವರೆಲ್ಲರ ಕಣ್ಣುಗಳೂ ಅರಳಿದವು. ಅವರು ಚಕ್ರಗಳನ್ನು ಬಂಡಿಗೆ ಜೋಡಿಸಿ ಅದರ ಸ್ಥಾನದಲ್ಲಿರಿಸಿದರು.
19061022a ಕಸ್ಯಚಿತ್ತ್ವಥ ಕಾಲಸ್ಯ ಶಕುನೀ ವೇಷಧಾರಿಣೀ ।
19061022c ಧಾತ್ರೀ ಕಂಸಸ್ಯ ಭೋಜಸ್ಯ ಪೂತನೇತಿ ಪರಿಶ್ರುತಾ ।।
ಕೆಲಸಮಯದ ನಂತರ ಪಕ್ಷಿಯ ರೂಪವನ್ನು ತಾಳಬಲ್ಲ ಪೂತಾನಾ ಎಂದು ಪ್ರಸಿದ್ಧಳಾಗಿದ್ದ ಭೋಜ ಕಂಸನ ಮೊಲೆಯುಣಿಸುವ ದಾಸಿಯು ಕಾಣಿಸಿಕೊಂಡಳು.
19061023a ಪೂತನಾ ನಾಮ ಶಕುನೀ ಘೋರಾ ಪ್ರಾಣಭಯಂಕರೀ ।
19061023c ಆಜಗಾಮಾರ್ಧರಾತ್ರೇ ವೈ ಪಕ್ಷೌ ಕ್ರೋಧಾದ್ವಿಧುನ್ವತೀ ।।
ಪೂತನಾ ಎಂಬ ಹೆಸರಿನ ಆ ಘೋರ ಪ್ರಾಣಭಯಂಕರ ಪಕ್ಷಿಯು ಮಧ್ಯರಾತ್ರಿಯ ವೇಳೆ ಕ್ರೋಧದಿಂದ ತನ್ನ ರೆಕ್ಕೆಗಳನ್ನು ಬೀಸುತ್ತಾ ಆಗಮಿಸಿತು.
19061024a ತತೋಽರ್ಧರಾತ್ರಸಮಯೇ ಪೂತನಾ ಪ್ರತ್ಯದೃಶ್ಯತ ।
19061024c ವ್ಯಾಘ್ರಗಂಭೀರನಿರ್ಘೋಷಂ ವ್ಯಾಹರಂತೀ ಪುನಃ ಪುನಃ ।।
ಅನಂತರ ಅರ್ಧರಾತ್ರಿಯ ಸಮಯದಲ್ಲಿ ಹುಲಿಯ ಗರ್ಜನೆಯಂತೆ ಪುನಃ ಪುನಃ ಕೂಗುತ್ತಾ ಪೂತನಿಯು ಕಾಣಿಸಿಕೊಂಡಳು.
19061025a ನಿಲಿಲ್ಯೇ ಶಕಟಸ್ಯಾಕ್ಷೇ ಪ್ರಸ್ರವೋತ್ಪೀಡವರ್ಷಿಣೀ ।
19061025c ದದೌ ಸ್ತನಂ ಚ ಕೃಷ್ಣಾಯ ತಸ್ಮಿನ್ಸುಪ್ತೇ ಜನೇ ನಿಶಿ ।।
ಬಂಡಿಯ ಮೂಕಿಯ ಮೇಲೆ ನಿಂತು, ಮೊಲೆಗಳು ಹಾಲುಸುರಿಸುತ್ತಿರುವುದರಿಂದ ಪೀಡಿತಳಾದ ಅವಳು ರಾತ್ರಿವೇಳೆ ಜನರು ಮಲಗಿದ್ದಾಗ ಮೊಲೆಯನ್ನು ಕೃಷ್ಣನಿಗೆ ನೀಡಿದಳು.
19061026a ತಸ್ಯಾಃ ಸ್ತನಂ ಪಪೌ ಕೃಷ್ಣಃ ಪ್ರಾಣೈಃ ಸಹ ವಿನದ್ಯ ಚ ।
19061026c ಛಿನ್ನಸ್ತನೀ ತು ಸಹಸಾ ಪಪಾತ ಶಕುನೀ ಭುವಿ ।।
ಕೃಷ್ಣನು ಅವಳ ಸ್ತನವನ್ನು ಪ್ರಾಣಗಳೊಂದಿಗೆ ಕುಡಿದನು. ತನ್ನ ಮೊಲೆಗಳು ಕತ್ತರಿಸಿಹೋಗಲು ಆ ಪಕ್ಷಿಣಿಯು ಜೋರಾಗಿ ಚೀರುತ್ತಾ ಕೂಡಲೇ ನೆಲದ ಮೇಲೆ ಬಿದ್ದಳು.
19061027a ತೇನ ಶಬ್ದೇನ ವಿತ್ರಸ್ತಾಸ್ತತೋ ಬುಬುಧಿರೇ ಭಯಾತ್ ।
19061027c ಸ ನಂದಗೋಪೋ ಗೋಪಾ ವೈ ಯಶೋದಾ ಚ ಸುವಿಕ್ಲವಾ ।।
ಆ ಶಬ್ದದಿಂದ ನಡುಗಿ ಭಯಗೊಂಡ ನಂದಗೋಪಾ, ಯಶೋದಾ ಮತ್ತು ಗೋಪರು ವ್ಯಾಕುಲಗೊಂಡು ಎಚ್ಚೆತ್ತರು.
19061028a ತೇ ತಾಮಪಶ್ಯನ್ಪತಿತಾಂ ವಿಸಂಜ್ಞಾಂ ವಿಪಯೋಧರಾಮ್ ।
19061028c ಪೂತನಾಂ ಪತಿತಾಂ ಭೂಮೌ ವಜ್ರೇಣೇವ ವಿದಾರಿತಾಮ್ ।।
ವಜ್ರದಿಂದ ಸೀಳಲ್ಪಟ್ಟಂತೆ ಮೊಲೆಗಳನ್ನು ಕಳೆದುಕೊಂಡು ಮೂರ್ಛೆತಪ್ಪಿ ನೆಲದ ಮೇಲೆ ಬಿದ್ದಿದ್ದ ಪೂತನಿಯನ್ನು ಅವರು ನೋಡಿದರು.
19061029a ಇದಂ ಕಿಂ ತ್ವಿತಿ ಸಂತ್ರಸ್ತಾಃ ಕಸ್ಯೇದಂ ಕರ್ಮ ಚೇತ್ಯಪಿ ।
19061029c ನಂದಗೋಪಂ ಪುರಸ್ಕೃತ್ಯ ಗೋಪಾಸ್ತೇ ಪರ್ಯವಾರಯನ್ ।।
“ಇದು ಏನು? ಇದು ಯಾರ ಕೆಲಸ?” ಎಂದು ಹೇಳಿಕೊಳ್ಳುತ್ತಾ ಭಯಭೀತರಾದ ಗೋಪರು ನಂದಗೋಪನನ್ನು ಮುಂದಿರಿಸಿಕೊಂಡು ಪೂತನಿಯನ್ನು ಸುತ್ತುವರೆದರು.
19061030a ನಾಧ್ಯಗಚ್ಛಂತ ಚ ತದಾ ಹೇತುಂ ತತ್ರ ಕದಾಚನ ।
19061030c ಆಶ್ಚರ್ಯಮಾಶ್ಚರ್ಯಮಿತಿ ಬ್ರುವಂತೋಽನುಯಯುರ್ಗೃಹಾನ್ ।।
ಆಗ ಅವರಿಗೆ ಅದರ ಕುರಿತಾದ ಯಾವ ಕಾರಣವೂ ತಿಳಿಯಲಿಲ್ಲ. “ಇದು ಆಶ್ಚರ್ಯ! ಇದು ಆಶ್ಚರ್ಯ!” ಎಂದು ಹೇಳಿಕೊಳ್ಳುತ್ತಾ ಅವರು ಮನೆಗಳಿಗೆ ತೆರಳಿದರು.
19061031a ಗತೇಷು ತೇಷು ಗೋಪೇಷು ವಿಸ್ಮಿತೇಷು ಯಥಾಗೃಹಮ್ ।
19061031c ಯಶೋದಾಂ ನಂದಗೋಪಸ್ತು ಪಪ್ರಚ್ಛ ಗತಸಂಭ್ರಮಃ ।।
ವಿಸ್ಮಿತರಾದ ಆ ಗೋಪರು ತಮ್ಮ ತಮ್ಮ ಮನೆಗಳಿಗೆ ತೆರಳಿದ ನಂತರ ಭಯಗೊಂಡ ನಂದಗೋಪನಾದರೋ ಯಶೋದೆಯನ್ನು ಪ್ರಶ್ನಿಸಿದನು.
19061032a ಕೋಽಯಂ ವಿಧಿರ್ನ ಜಾನಾಮಿ ವಿಸ್ಮಯೋ ಮೇ ಮಹಾನಯಮ್ ।
19061032c ಪುತ್ರಸ್ಯ ಮೇ ಭಯಂ ತೀವ್ರಂ ಭೀರುತ್ವಂ ಸಮುಪಾಗತಮ್ ।।
“ಇದು ಯಾವ ವಿಧಿಯೆಂದು ತಿಳಿಯಲಾರೆನು. ನನಗೆ ಅತಿದೊಡ್ಡ ವಿಸ್ಮಯವಾಗಿದೆ. ಭೀರು! ನನ್ನ ಪುತ್ರನಿಗಾಗಿ ತೀವ್ರ ಭಯವು ಉಂಟಾಗಿದೆ.”
19061033a ಯಶೋದಾ ತ್ವಬ್ರವೀದ್ಭೀತಾ ನಾರ್ಯ ಜಾನಾಮಿ ಕಿಂ ತ್ವಿದಮ್ ।
19061033c ದಾರಕೇಣ ಸಹಾನೇನ ಸುಪ್ತಾ ಶಬ್ದೇನ ಬೋಧಿತಾ ।।
ಭೀತಳಾದ ಯಶೋದೆಯು “ಆರ್ಯ! ಇದು ಏನೆಂದು ನನಗೂ ತಿಳಿಯದು. ಮಗನೊಂದಿಗೆ ಮಲಗಿಕೊಂಡಿದ್ದೆ ಮತ್ತು ಈ ಶಬ್ದದಿಂದ ನನಗೆ ಎಚ್ಚರವಾಯಿತು.”
19061034a ಯಶೋದಾಯಾಮಜಾನಂತ್ಯಾಂ ನಂದಗೋಪಃ ಸಬಾಂಧವಃ ।
19061034c ಕಂಸಾದ್ಭಯಂ ಚಕಾರೋಗ್ರಂ ವಿಸ್ಮಯಂ ಚ ಜಗಾಮ ಹ ।।
ಯಶೋದೆಗೂ ಅದು ಏನೆಂದು ತಿಳಿಯಲಿಲ್ಲ ಎಂದಾಗ ಬಾಂಧವರೊಂದಿಗೆ ನಂದಗೋಪನು ವಿಸ್ಮಿತನಾದನು. ಕಂಸನಿಂದಾಗಿ ಅವರು ಉಗ್ರ ಭಯವನ್ನು ಹೊಂದಿದರು.”
ಸಮಾಪ್ತಿ
ಇತಿ ಶ್ರೀಮಹಾಭಾರತೇ ಖಿಲೇಷು ಹರಿವಂಶೇ ವಿಷ್ಣುಪರ್ವಣಿ ಶಿಶುಚರ್ಯಾಯಾಂ ಶಕಟಭಂಗಪೂತನಾವಧೇ ಏಕಷಷ್ಟಿತಮೋಽಧ್ಯಾಯಃ