060: ನಂದವ್ರಜಗಮನಮ್

ಪ್ರವೇಶ

।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।

ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ

ಶ್ರೀ ಮಹಾಭಾರತ

ಖಿಲಭಾಗೇ ಹರಿವಂಶಃ

ವಿಷ್ಣು ಪರ್ವ

ಅಧ್ಯಾಯ 60

ಸಾರ

19060001 ವೈಶಂಪಾಯನ ಉವಾಚ ।
19060001a ಪ್ರಾಗೇವ ವಸುದೇವಸ್ತು ವ್ರಜೇ ಶುಶ್ರಾವ ರೋಹಿಣೀಮ್ ।
19060001c ಪ್ರಜಾತಾಂ ಪುತ್ರಮೇವಾಗ್ರೇ ಚಂದ್ರಾತ್ಕಾಂತತರಾನನಮ್ ।।
19060002a ಸ ನಂದಗೋಪಂ ತ್ವರಿತಃ ಪ್ರೋವಾಚ ಶುಭಯಾ ಗಿರಾ ।
19060002c ಗಚ್ಛಾನಯಾ ಸಹೈವ ತ್ವಂ ವ್ರಜಮೇವ ಯಶೋದಯಾ ।।

ವೈಶಂಪಾಯನನು ಹೇಳಿದನು: “ಪ್ರಸವದ ಪೂರ್ವದಲ್ಲಿಯೇ ವಸುದೇವನು ರೋಹಿಣಿಯನ್ನು ವ್ರಜಕ್ಕೆ ಕಳುಹಿಸಿದ್ದನು. ಕೃಷ್ಣನ ಜನ್ಮದ ಮೊದಲೇ ಅವಳಿಗೆ ಚಂದ್ರನಿಗಿಂತಲೂ ಅಧಿಕ ಕಾಂತಿಯುಕ್ತ ಮುಖದ ಪುತ್ರನಿಗೆ ಜನ್ಮವಿತ್ತಿದ್ದಳು ಎಂದು ಕೇಳಿದ್ದನು. ಅವನು ತ್ವರೆಮಾಡಿ ನಂದಗೋಪನಿಗೆ ಶುಭ ಮಾತಿನಲ್ಲಿ ಹೇಳಿದನು: “ಕೂಡಲೇ ನೀನು ಈ ಯಶೋದೆಯೊಡನೆ ವ್ರಜಕ್ಕೆ ಹೋಗು!

19060003a ತತ್ರ ತೌ ದಾರಕೌ ಗತ್ವಾ ಜಾತಕರ್ಮಾದಿಭಿರ್ಗುಣೈಃ ।
19060003c ಯೋಜಯಿತ್ವಾ ವ್ರಜೇ ತಾತ ಸಂವರ್ಧಯ ಯಥಾಸುಖಮ್ ।।

ಅಲ್ಲಿ ಈ ಇಬ್ಬರು ಮಕ್ಕಳಿಗೂ ಜಾತಕರ್ಮವೇ ಮೊದಲಾದ ಸಂಸ್ಕಾರಗಳಿಂದ ಸಂಪನ್ನಗೊಳಿಸಿ ವ್ರಜದಲ್ಲಿಯೇ ಯಥಾಸುಖವಾಗಿ ಬೆಳೆಸು.

19060004a ರೌಹಿಣೇಯಂ ಚ ಪುತ್ರಂ ಮೇ ಪರಿರಕ್ಷ ಶಿಶುಂ ವ್ರಜೇ ।
19060004c ಅಹಂ ವಾಚ್ಯೋ ಭವಿಷ್ಯಾಮಿ ಪಿತೃಪಕ್ಷೇಷು ಪುತ್ರಿಣಾಮ್ ।।
19060005a ಯೋಽಹಮೇಕಸ್ಯ ಪುತ್ರಸ್ಯ ನ ಪಶ್ಯಾಮಿ ಶಿಶೋರ್ಮುಖಮ್ ।

ವ್ರಜದಲ್ಲಿ ನನ್ನ ಪುತ್ರ ಶಿಶು ರೌಹಿಣೇಯನನ್ನು ಪರಿರಕ್ಷಿಸು. ಪುತ್ರರಿರುವ ಪಿತೃಪಕ್ಷದವರಿಗೆ ನಾನು ನಿಂದನೀಯನು. ಏಕೆಂದರೆ ನನ್ನ ಓರ್ವನೇ ಪುತ್ರ ಶಿಶುವಿನ ಮುಖವನ್ನು ಕೂಡ ನಾನು ನೋಡಿಲ್ಲ.

19060005c ಹ್ರಿಯತೇ ಹಿ ಬಲಾತ್ಪ್ರಜ್ಞಾ ಪ್ರಾಜ್ಞಸ್ಯಾಪಿ ತತೋ ಮಮ ।।
19060006a ಅಸ್ಮಾದ್ಧಿ ಮೇ ಭಯಂ ಕಂಸಾನ್ನಿರ್ಘೃಣಾದ್ವೈ ಶಿಶೋರ್ವಧೇ ।

ನಿರ್ದಯಿ ಕಂಸನು ಆ ಶಿಶುವನ್ನೂ ವಧಿಸಿಬಿಡುತ್ತಾನೋ ಎಂಬ ಭಯವಿದೆ. ಆ ಭಯವು ಪ್ರಾಜ್ಞನಾದ ನನ್ನಿಂದಲೂ ನನ್ನ ಪ್ರಜ್ಞೆಯನ್ನು ಬಲಾತ್ಕಾರವಾಗಿ ಕಸಿದುಕೊಂಡಿದೆ.

19060006c ತದ್ಯಥಾ ರೌಹಿಣೇಯಂ ತ್ವಂ ನಂದಗೋಪ ಮಮಾತ್ಮಜಮ್ ।।
19060007a ಗೋಪಾಯಸಿ ಯಥಾ ತಾತ ತತ್ತ್ವಾನ್ವೇಷೀ ತಥಾ ಕುರು ।
19060007c ವಿಘ್ನಾ ಹಿ ಬಹವೋ ಲೋಕೇ ಬಾಲಾನುತ್ತ್ರಾಸಯಂತಿ ಹಿ ।।

ಅಯ್ಯಾ! ನಂದಗೋಪ! ಆದುದರಿಂದ ನನ್ನ ಮಗ ರೌಹಿಣೇಯನನ್ನು ಹೇಗೆ ಸಂರಕ್ಷಿಸುತ್ತೀಯೋ ಹಾಗೆ ಸಂರಕ್ಷಿಸು. ಏಕೆಂದರೆ ಲೋಕದಲ್ಲಿ ಬಾಲಕರನ್ನು ಪೀಡಿಸುವ ಅನೇಕ ವಿಘ್ನಗಳುಂಟಾಗುತ್ತಿವೆ.

19060008a ಸ ಚ ಪುತ್ರೋ ಮಮ ಜ್ಯಾಯಾನ್ಕನೀಯಾಂಶ್ಚ ತವಾಪ್ಯಯಮ್ ।
19060008c ಉಭಾವಪಿ ಸಮಂ ನಾಮ್ನಾ ನಿರೀಕ್ಷಸ್ವ ಯಥಾಸುಖಮ್ ।।

ನನ್ನ ಆ ಪುತ್ರನಾದರೋ ದೊಡ್ಡವನು ಮತ್ತು ನಿನ್ನ ಈ ಪುತ್ರನು ಚಿಕ್ಕವನು. ಅವರಿಬ್ಬರ ಹೆಸರುಗಳೂ ಒಂದೇ ಸಮನಾಗಿರುವಂತೆ1 ನೀನು ಇವರಿಬ್ಬರನ್ನೂ ಒಂದೇ ದೃಷ್ಟಿಯಿಂದ ನೋಡಿಕೋ.

19060009a ವರ್ಧಮಾನಾವುಭಾವೇತೌ ಸಮಾನವಯಸೌ ಯಥಾ ।
19060009c ಶೋಭೇತಾಂ ಗೋವ್ರಜೇ ತಸ್ಮಿನ್ನಂದಗೋಪ ತಥಾ ಕುರು।।

ನಂದಗೋಪ! ಇವರಿಬ್ಬರು ಸಮಾನವಯಸ್ಕರೂ ಗೋವ್ರಜೆಯಲ್ಲಿ ಒಂದೇ ಸಮನಾಗಿ ಬೆಳೆದು ಶೋಭಿಸುವಂತೆ ಮಾಡು.

19060010a ಬಾಲ್ಯೇ ಕೇಲಿಕಿಲಃ ಸರ್ವೋ ಬಾಲ್ಯೇ ಮುಹ್ಯತಿ ಮಾನವಃ ।
19060010c ಬಾಲ್ಯೇ ಚಂಡತಮಃ ಸರ್ವಸ್ತತ್ರ ಯತ್ನಪರೋ ಭವ ।।

ಬಾಲ್ಯದಲ್ಲಿ ಎಲ್ಲರೂ ಆಟಗಳಲ್ಲಿಯೇ ಮಗ್ನರಾಗಿರುತ್ತಾರೆ. ಬಾಲ್ಯದಲ್ಲಿ ಮಾನವನು ಮೋಹಿತನಗಿರುತ್ತಾನೆ. ಬಾಲ್ಯದಲ್ಲಿ ಎಲ್ಲರೂ ಸಿಟ್ಟು-ಹಠ ಮಾಡುತ್ತೇವೆ. ಮಕ್ಕಳನ್ನು ರಕ್ಷಿಸುವುದರಲ್ಲಿ ಯತ್ನಪರನಾಗಿರು.

19060011a ನ ಚ ವೃಂದಾವನೇ ಕಾರ್ಯೋ ಗವಾಂ ಘೋಷಃ ಕಥಂಚನ ।
19060011c ಭೇತವ್ಯಂ ತತ್ರ ವಸತಃ ಕೇಶಿನಃ ಪಾಪದರ್ಶಿನಃ ।।

ವೃಂದಾವನದಲ್ಲಿ ಯಾವ ಕಾರಣಕ್ಕೂ ಗೋವುಗಳನ್ನು ಮೇಯಿಸಬೇಡ. ಅಲ್ಲಿ ವಾಸಿಸುವ ಪಾಪದರ್ಶೀ ಕೇಶಿನಿಯ ಭಯವಿರಲಿ.

19060012a ಸರೀಸೃಪೇಭ್ಯಃ ಕೀಟೇಭ್ಯಃ ಶಕುನಿಭ್ಯಸ್ತಥೈವ ಚ ।
19060012c ಗೋಷ್ಠೇಷು ಗೋಭ್ಯೋ ವತ್ಸೇಭ್ಯೋ ರಕ್ಷ್ಯೌ ತೇ ದ್ವಾವಿಮೌ ಶಿಶೂ ।।

ಸರ್ಪಗಳಿಂದ, ಕೀಟಗಳಿಂದ, ಪಕ್ಷಿಗಳಿಂದ ಮತ್ತು ಗೋವುಗಳು ಮತ್ತು ಹೋರಿಗಳಿಂದ ಈ ಇಬ್ಬರು ಶಿಶು ಮಕ್ಕಳನ್ನೂ ರಕ್ಷಿಸು.

19060013a ನಂದಗೋಪ ಗತಾ ರಾತ್ರಿಃ ಶೀಘ್ರಯಾನೋ ವ್ರಜಾಶುಗಃ ।
19060013c ಇಮೇ ತ್ವಾಂ ವ್ಯಾಹರಂತೀವ ಪಕ್ಷಿಣಃ ಸವ್ಯದಕ್ಷಿಣಮ್ ।।

ನಂದಗೋಪ! ರಾತ್ರಿಯು ಕಳೆದುಹೋಯಿತು. ಶೀಘ್ರವಾಗಿ ವೇಗ ವಾಹನದಲಿ ಇಲ್ಲಿಂದ ಹೊರಡು. ಈ ಎಡ-ಬಲಬದಿಗಳಲ್ಲಿ ಹಾರುವ ಪಕ್ಷಿಗಳು ಇಗೋ ನಿನ್ನನ್ನು ಬೀಳ್ಕೊಡುತ್ತಿವೆ!”

19060014a ರಹಸ್ಯಂ ವಸುದೇವೇನ ಸೋಽನುಜ್ಞಾತೋ ಮಹಾತ್ಮನಾ ।
19060014c ಯಾನಂ ಯಶೋದಯಾ ಸಾರ್ಧಮಾರುರೋಹ ಮುದಾನ್ವಿತಃ ।।

ಮಹಾತ್ಮ ವಸುದೇವನಿಂದ ರಹಸ್ಯದಲ್ಲಿ ಹೀಗೆ ಅನುಜ್ಞೆಯನ್ನು ಪಡೆದ ನಂದಗೋಪನು ಮುದಾನ್ವಿತನಾಗಿ ಯಶೋದೆಯೊಡನೆ ಯಾನವನ್ನೇರಿದನು.

19060015a ಕುಮಾರಸ್ಕಂಧವಾಹ್ಯಾಯಾಂ ಶಿಬಿಕಾಯಾಂ ಸಮಾಹಿತಃ ।
19060015c ಸಂವೇಶಯಾಮಾಸ ಶಿಶುಂ ಶಯನೀಯಂ ಮಹಾಮತಿಃ ।।

ಸಮಾಹಿತನಾದ ಮಹಾಮತಿ ನಂದಗೋಪನು ತನ್ನ ಆ ಶಯನೀಯ ಶಿಶುವನ್ನು ಕುಮಾರರು ತಮ್ಮ ಭುಜಗಳ ಮೇಲೆ ಎತ್ತಿಕೊಂಡು ಹೋಗುತ್ತಿದ್ದ ಶಿಬಿಕೆಯಲ್ಲಿ ಮಲಗಿಸಿದನು.

19060016a ಜಗಾಮ ಚ ವಿವಿಕ್ತೇನ ಶೀತಲಾನಿಲಸರ್ಪಿಣಾ ।
19060016c ಬಹೂದಕೇನ ಮಾರ್ಗೇಣ ಯಮುನಾತೀರಗಾಮಿನಾ ।।

ಹೀಗೆ ಬಹೂದಕದ ಮಾರ್ಗದಲ್ಲಿ ನಿರ್ಜನವಾಗಿದ್ದ ಮತ್ತು ಶೀತಲ ಗಾಳಿಯು ಬೀಸುತ್ತಿದ್ದ ಯಮುನೆಯ ತೀರದಲ್ಲಿಯೇ ಸಾಗುತ್ತಾ ಹೊರಟನು.

19060017a ಸ ದದರ್ಶ ಶುಭೇ ದೇಶೇ ಗೋವರ್ಧನಸಮೀಪಗೇ ।
19060017c ಯಮುನಾತೀರಸಂಬದ್ಧಂ ಶೀತಮಾರುತಸೇವಿತಮ್ ।।

ಅವನು ಗೋವರ್ಧನದ ಸಮೀಪದಲ್ಲಿದ್ದ ಯಮುನಾತೀರಕ್ಕೆ ಹೊಂದಿಕೊಂಡಿದ್ದ ಶೀತಲ ಗಾಳಿಯು ಬೀಸುತ್ತಿದ್ದ ಶುಭ ವ್ರಜವನ್ನು ನೋಡಿದನು.

19060018a ವಿರುತಶ್ವಾಪದೈ ರಮ್ಯಂ ಲತಾವಲ್ಲೀಮಹಾದ್ರುಮಮ್ ।
19060018c ಗೋಭಿಸ್ತೃಣವಿಲಗ್ನಾಭಿಃ ಸ್ಯಂದಂತೀಭಿರಲಂಕೃತಮ್ ।।

ಬೇರೆಯೇ ಭಾಷೆಯನ್ನು ಮಾತನಾಡುವ ಕಾಡುಜನರಿಂದ ಆ ದೇಶವು ರಮ್ಯವಾಗಿತ್ತು. ಲತೆಗಳು ಅಪ್ಪಿಕೊಂಡಿದ್ದ ಮಹಾವೃಕ್ಷಗಳಿದ್ದವು. ಹುಲ್ಲು ಮೇಯುತ್ತಿದ್ದ ಮತ್ತು ಕೆನೆಗಳಿಂದ ಹಾಲುಸುರಿಸುತ್ತಿದ್ದ ಗೋವುಗಳಿಂದ ಅಲಂಕೃತಗೊಂಡಿತ್ತು.

19060019a ಸಮಪ್ರಚಾರಂ ಚ ಗವಾಂ ಸಮತೀರ್ಥಜಲಾಶಯಮ್ ।
19060019c ವೃಷಾಣಾಂ ಸ್ಕಂಧಘಾತೈಶ್ಚ ವಿಷಾಣೋದ್ಘೃಷ್ಟಪಾದಪಮ್ ।।

ಗೋವುಗಳಿಗೆ ಮೇವಲು ಸಮತಟ್ಟಾದ ಪ್ರದೇಶವಿತ್ತು ಮತ್ತು ಜಲಾಯಗಳಿಗೆ ಇಳಿಯುವಲ್ಲಿಯೂ ಸಮತಟ್ಟಾಗಿತ್ತು. ಅಲ್ಲಿ ಮರಗಳ ಮೇಲೆ ಗೂಳಿಗಳು ತಮ್ಮ ಭುಜಗಳನ್ನು ತಿಕ್ಕಿ ತಿಕ್ಕಿ ಮತ್ತು ಕೋಡಿನಿಂದ ತಿವಿದ ಗುರುತುಗಳಿದ್ದವು.

19060020a ಭಾಸಾಮಿಷಾದಾನುಸೃತೈಃ ಶ್ಯೇನೈಶ್ಚಾಮಿಷಗೃಧ್ನುಭಿಃ ।
19060020c ಸೃಗಾಲಮೃಗಸಿಂಹೈಶ್ಚ ವಸಾಮೇದಾಶಿಭಿರ್ವೃತಮ್ ।।

ಕಾಗೆಗಳು, ಗಿಡುಗಗಳು ಮತ್ತು ಮಾಂಸತಿನ್ನುವ ಹದ್ದುಗಳಿದ್ದವು. ನರಿಗಳೂ, ಸಿಂಹಗಳೂ ಮತ್ತು ಮಾಂಸ-ಮೇದ-ಕೊಬ್ಬುಗಳನ್ನು ತಿನ್ನುವ ಇತರ ಪ್ರಾಣಿಗಳೂ ತುಂಬಿಕೊಂಡಿದ್ದವು.

19060021a ಶಾರ್ದೂಲಶಬ್ದಾಭಿರುತಂ ನಾನಾಪಕ್ಷಿಸಮಾಕುಲಮ್ ।
19060021c ಸ್ವಾದುವೃಕ್ಷಫಲಂ ರಮ್ಯಂ ಪರ್ಯಾಪ್ತತೃಣವೀರುಧಮ್ ।।

ಆ ಪ್ರದೇಶದಲ್ಲಿ ಹುಲಿಯ ಗರ್ಜನೆಗಳು ಮೊಳಗುತ್ತಿದ್ದವು. ನಾನಾ ಪಕ್ಷಿಗಳ ಸಮಾಕುಲಗಳಿದ್ದವು. ರುಚಿಕರ ಫಲವುಳ್ಳ ವೃಕ್ಷಗಳಿದ್ದವು ಮತ್ತು ಹುಲ್ಲು-ಔಷಧ ಲತೆಗಳು ತುಂಬಿಕೊಂಡಿದ್ದವು.

19060022a ಗೋವ್ರಜಂ ಗೋರುತಂ ರಮ್ಯಂ ಗೋಪನಾರೀಭಿರಾವೃತಮ್ ।
19060022c ಹಂಭಾರವೈಶ್ಚ ವತ್ಸಾನಾಂ ಸರ್ವತಃ ಕೃತನಿಃಸ್ವನಮ್ ।।

ಗೋವುಗಳು ಅಲ್ಲಿ ತಿರುಗಾಡುತ್ತಿದ್ದವು. ಗೋವುಗಳ ರಮ್ಯ ಕೂಗು ಕೇಳಿಬರುತ್ತಿತ್ತು. ಗೋಪನಾರಿಯರಿಂದ ತುಂಬಿಕೊಂಡಿತ್ತು. ಎಲ್ಲಕಡೆಗಳಲ್ಲಿ ಕರುಗಳ ಕೂಗುಗಳು ಕೇಳಿಬರುತ್ತಿದ್ದವು.

19060023a ಶಕಟಾವರ್ತವಿಪುಲಂ ಕಂಟಕೀವಾಟಸಂಕುಲಮ್ ।
19060023c ಪರ್ಯಂತೇಷ್ವಾವೃತಂ ವನ್ಯೈರ್ಬೃಹದ್ಭಿಃ ಪತಿತೈರ್ದ್ರುಮೈಃ ।।

ಅಲ್ಲಿ ಅನೇಕ ಬಂಡಿಗಳ ಗುಂಪುಗಳಿದ್ದವು. ಮುಳ್ಳಿನ ಮರಗಳ ಸಂಕುಲಗಳೂ ಇದ್ದವು. ಅದರ ಸುತ್ತಲೂ ಬಿದ್ದ ಮರಗಳಿಂದ ತುಂಬಿದ ದೊಡ್ಡ ವನಗಳಿದ್ದವು.

19060024a ವತ್ಸಾನಾಂ ರೋಪಿತಃ ಕೀಲೈರ್ದಾಮಭಿಶ್ಚ ವಿಭೂಷಿತಮ್ ।
19060024c ಕರೀಷಾಕೀರ್ಣವಸುಧಂ ಕಟಚ್ಛನ್ನಕುಟೀಮಠಮ್ ।।

ಕರುಗಳನ್ನು ಕಟ್ಟಲು ಗೂಟಗಳು ಮತ್ತು ಹಗ್ಗಗಳಿಂದ ವಿಭೂಷಿತವಾಗಿತ್ತು. ಹುಲ್ಲಿನ ಗುಡಿಸಲುಗಳಿದ್ದವು ಮತ್ತು ಎಲ್ಲಕಡೆ ಒಣಗಿದ ಬೆರಣಿಗಳಿದ್ದವು.

19060025a ಕ್ಷೇಮ್ಯಪ್ರಚಾರಬಹುಲಂ ಹೃಷ್ಟಪುಷ್ಟಜನಾವೃತಮ್ ।
19060025c ದಾಮನೀಪಾಶಬಹುಲಂ ಗರ್ಗರೋದ್ಗಾರನಿಃಸ್ವನಮ್ ।।

ಕ್ಷೇಮದಿಂದ ತಿರುಗಾಡಲು ಅಲ್ಲಿ ಸಾಕಷ್ಟು ಸ್ಥಳವಿದ್ದಿತು ಮತ್ತು ಹೃಷ್ಟಪುಷ್ಟಜನರಿಂದ ತುಂಬಿಕೊಂಡಿತ್ತು. ಮೊಸರುಕಡೆಯುವ ಕಡೆಗೋಲುಗಳು, ಕಡಗೋಲುಗಳಿಗೆ ಕಟ್ಟಿದ ಹಗ್ಗಗಳು ಮತ್ತು ಮೊಸರು ಕಡೆಯುವ ಶಬ್ಧವು ಎಲ್ಲೆಡೆಯೂ ಕೇಳಿಬರುತ್ತಿತ್ತು.

19060026a ತಕ್ರಾನಿಃಸ್ರಾವಮಲಿನಂ ದಧಿಮಂದಾರ್ದ್ರಮೃತ್ತಿಕಮ್ ।
19060026c ಮಂಥಾನವಲಯೋದ್ಗಾರೈರ್ಗೋಪೀನಾಂ ಜನಿತಸ್ವನಮ್ ।।

ಸಾಕಷ್ಟು ಮಜ್ಜಿಗೆಯು ಹರಿಯುತ್ತಿತ್ತು. ನೆಲವು ಮೊಸರಿನ ರಾಶಿಗಳಿಂದ ಒದ್ದೆಯಾಗಿತ್ತು. ಗೋಪಿಯರು ಮೊಸರನ್ನು ಕಡೆಯುವಾಗ ಅವರ ಕೈಬಳೆಗಳ ಧ್ವನಿಯು ಕೇಳಿಬರುತ್ತಿತ್ತು.

19060027a ಕಾಕಪಕ್ಷಧರೈರ್ಬಾಲೈರ್ಗೋಪಾಲಕ್ರೀಡನಾಕುಲಮ್।
19060027c ಸಾರ್ಗಲದ್ವಾರಗೋವಾಟಂ ಮಧ್ಯೇ ಗೋಸ್ಥಾನಸಂಕುಲಮ್ ।।

ಅಲ್ಲಿ ಕಾಕಪಕ್ಷಧರ2 ಗೋಪಾಲ ಬಾಲಕರು ಒಟ್ಟಾಗಿ ಆಡುತ್ತಿದ್ದರು. ಕೊಟ್ಟಿಗೆಗಳಿಂದ ತುಂಬಿತ್ತು ಮತ್ತು ಮಧ್ಯದಲ್ಲಿ ಗೋಸ್ಥಾನಸಂಕುಲಗಳಿದ್ದವು.

19060028a ಸರ್ಪಿಷಾ ಪಚ್ಯಮಾನೇನ ಸುರಭೀಕೃತಮಾರುತಮ್ ।
19060028c ನೀಲಪೀತಾಂಬರಾಭಿಶ್ಚ ತರುಣೀಭಿರಲಂಕೃತಮ್ ।।

ತುಪ್ಪವು ಕುದಿಯುತ್ತಿರುವ ಸುವಾಸನೆಯು ಗಾಳಿಯಲ್ಲಿತ್ತು. ನೀಲ ಪೀತಾಂಬರಗಳನ್ನು ಉಟ್ಟಿದ್ದ ತರುಣಿಯರು ಅಲಂಕೃತರಾಗಿದ್ದರು.

19060029a ವನ್ಯಪುಷ್ಪಾವತಂಸಾಭಿರ್ಗೋಪಕನ್ಯಾಭಿರಾವೃತಮ್ ।
19060029c ಶಿರೋಭಿರ್ಧೃತಕುಂಭಭಿರ್ಬದ್ಧೈರಗ್ರಸ್ತನಾಂಬರೈಃ ।।
19060030a ಯಮುನಾತೀರಮಾರ್ಗೇಣ ಜಲಹಾರೀಭಿರಾವೃತಮ್ ।

ವನಪುಷ್ಪಗಳನ್ನು ಮುಡಿದು ತಲೆಯಮೇಲೆ ಮೊಸರಿನ ಕೊಡಗಳನ್ನು ಹೊತ್ತ ಗೋಪಕನ್ಯೆಯರಿಂದ ಆ ಪ್ರದೇಶವು ತುಂಬಿಕೊಂಡಿತ್ತು. ಅವರ ಸ್ತನಗಳು ಕುಪ್ಪುಸಗಳಿಂದ ಕಟ್ಟಲ್ಪಟ್ಟಿದ್ದವು ಮತ್ತು ಮೇಲೆ ಸೆರಗುಗಳಿದ್ದವು. ಯಮುನಾತೀರಮಾರ್ಗದಲ್ಲಿ ನೀರನ್ನು ಹೊತ್ತು ತರುತ್ತಿದ್ದರು.

19060030c ಸ ತತ್ರ ಪ್ರವಿಶನ್ ಹೃಷ್ಟೋ ಗೋವ್ರಜಂ ಗೋಪನಾದಿತಮ್ ।।
19060031a ಪ್ರತ್ಯುದ್ಗತೋ ಗೋಪವೃದ್ಧೈಃ ಸ್ತ್ರೀಭಿರ್ವೃದ್ಧಾಭಿರೇವ ಚ ।
19060031c ನಿವೇಶಂ ರೋಚಯಾಮಾಸ ಪರಿವರ್ತೇ ಸುಖಾಶ್ರಯೇ ।।

ಗೋಪರ ನಾದಗಳಿಂದ ತುಂಬಿದ್ದ ಗೋವ್ರಜವನ್ನು ಪ್ರವೇಶಿಸಿ ಅವನು ಹೃಷ್ಟನಾದನು. ಗೋಪವೃದ್ಧರು ಮತ್ತು ವೃದ್ಧ ಸ್ತ್ರೀಯರಿಂದ ಸ್ವಾಗತಿಸಲ್ಪಟ್ಟ ಅವನು ಆ ಸುಖಾಶ್ರಯ ಆವಾಸಸ್ಥಾನದಲ್ಲಿ ವಾಸಿಸಲು ಇಷ್ಟಪಟ್ಟನು.

19060032a ಸಾ ಯತ್ರ ರೋಹಿಣೀ ದೇವೀ ವಸುದೇವಸುಖಾವಹಾ ।
19060032c ತತ್ರ ತಂ ಬಾಲಸೂರ್ಯಾಭಂ ಕೃಷ್ಣಂ ಗೂಢಂ ನ್ಯವೇಶಯತ್ ।।

ವಸುದೇವನಿಗೆ ಸುಖವನ್ನು ತರುವ ದೇವೀ ರೋಹಿಣಿಯು ಎಲ್ಲಿದ್ದಳೋ ಅಲ್ಲಿ ಬಾಲಸೂರ್ಯನ ಕಾಂತಿಯಿದ್ದ ಕೃಷ್ಣನನ್ನು ಗೂಢವಾಗಿ ಪ್ರವೇಶಿಸಿದನು.”

ಸಮಾಪ್ತಿ

ಇತಿ ಶ್ರೀಮಹಾಭಾರತೇ ಖಿಲೇಷು ಹರಿವಂಶೇ ವಿಷ್ಣುಪರ್ವಣಿ ಗೋವ್ರಜಗಮನಂ ನಾಮ ಷಷ್ಟಿತಮೋಽಧ್ಯಾಯಃ


  1. ಕೃಷ್ಣ ಎಂದರೆ ಆಕರ್ಷಿಸುವನು, ಸಂಕರ್ಷಣ ಎಂದರೆ ಆಕರ್ಷಿಸಿದವನು. ↩︎

  2. ತಲೆಯ ಹಿಂಭಾಗದಲ್ಲಿ ಕೂದಲನ್ನು ಉದ್ದ ಬಿಟ್ಟಿದ್ದ (ಗೀತಾ ಪ್ರೆಸ್). ಕಾಗೆಯ ರೆಕ್ಕೆಗಳನ್ನು ಮುಡಿದಿದ್ದ (ಬಿಬೇಕ್ ದೆಬ್ರೊಯ್). ↩︎