059: ಶ್ರೀಕೃಷ್ಣಜನ್ಮಃ

ಪ್ರವೇಶ

।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।

ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ

ಶ್ರೀ ಮಹಾಭಾರತ

ಖಿಲಭಾಗೇ ಹರಿವಂಶಃ

ವಿಷ್ಣು ಪರ್ವ

ಅಧ್ಯಾಯ 59

ಸಾರ

ಕಂಸನು ದೇವಕಿಯ ನವಜಾತ ಶಿಶುಗಳನ್ನು ಕೊಂದುದು, ಯೋಗಮಾಯೆಯು ಏಳನೇ ಗರ್ಭವನ್ನು ಸಂಕರ್ಷಿಸಿದುದು, ಶ್ರೀಕೃಷ್ಣನ ಜನನ ಮತ್ತು ನಂದಭವನದ ಪ್ರವೇಶ, ಕಂಸನು ನಂದಕನ್ಯೆಯನ್ನು ಕೊಲ್ಲಲು ಪ್ರಯತ್ನಿಸಿದುದು ಮತ್ತು ಅವಳು ತನ್ನ ದಿವ್ಯ ರೂಪವನ್ನು ಪ್ರದರ್ಶಿಸಿದುದು, ಕಂಸನು ದೇವಕಿಯಲ್ಲಿ ಕ್ಷಮೆಯನ್ನು ಪ್ರಾರ್ಥಿಸುವುದು, ದೇವಕಿಯ ಕ್ಷಮಾದಾನ.

ವೈಶಂಪಾಯನ ಉವಾಚ।
ಕೃತೇ ಗರ್ಭವಿಧಾನೇ ತು ದೇವಕೀ ದೇವತೋಪಮಾ ।
ಜಗ್ರಾಹ ಸಪ್ತ ತಾನ್ಗರ್ಭಾನ್ಯಥಾವತ್ಸಮುದಾಹೃತಾನ್ ।। ೨-೫೯-೧

ವೈಶಂಪಾಯನನು ಹೇಳಿದನು: “ಮೊದಲೇ ಹೇಳಿದಂತೆ ಯಥಾವತ್ತಾದ ಗರ್ಭಾದಾನ ಕ್ರಿಯೆಯಿಂದ ದೇವಕಿಯು ಕ್ರಮಶಃ ದೇವತೋಪಮ ಏಳು ಗರ್ಭಗಳನ್ನು ಧರಿಸಿದಳು.

ಷಡ್ಗರ್ಭಾನ್ನಿಸ್ಸೃತಾನ್ಕಂಸಸ್ತಾಂಜಘಾನ ಶಿಲಾತಲೇ ।
ಆಪನ್ನಂ ಸಪ್ತಮಂ ಗರ್ಭಂ ಸಾ ನಿನಾಯಾಥ ರೋಹಿಣೀಮ್ ।। ೨-೫೯-೨

ಮೊದಲು ಹುಟ್ಟಿದ ಆ ಆರು ಅರ್ಭಗಳನ್ನು ಕಂಸನು ಕಲ್ಲಮೇಲೆ ಬಡಿದು ಕೊಂದನು. ಏಳನೆಯ ಗರ್ಭವನ್ನು ಯೋಗಮಾಯೆಯು ರೋಹಿಣಿಯಲ್ಲಿ ಇರಿಸಿದಳು.

ಅರ್ಧರಾತ್ರೇ ಸ್ಥಿತಂ ಗರ್ಭಂ ಪಾತಯಂತೀ ರಜಸ್ವಲಾ ।
ನಿದ್ರಯಾ ಸಹಸಾವಿಷ್ಟಾ ಪಪಾತ ಧರಣೀತಲೇ ।। ೨-೫೯-೩

ಅರ್ಧರಾತ್ರಿಯಲ್ಲಿ ತನ್ನೊಳಗೆ ಸ್ಥಾಪಿತವಾದ ಗರ್ಭವನ್ನು ರಜಸ್ವಲೆ ರೋಹಿಣಿಯು ಬೀಳಿಸಲು ಪ್ರಯತ್ನಿಸಿದಳು. ಆದರೆ ಅವಳು ನಿದ್ರೆಯಿಂದ ಆವಿಷ್ಟಳಾಗಿ ಅವಳು ಒಮ್ಮೆಲೇ ಭೂಮಿಯ ಮೇಲೆ ಬಿದ್ದಳು.

ಸಾ ಸ್ವಪ್ನಮಿವ ತಂ ದೃಷ್ಟ್ವಾ ಸ್ವೇ ಗರ್ಭೇ ಗರ್ಭಮಾದಧತ್ ।
ಅಪಶ್ಯಂತೀ ಚ ತಮ್ಗರ್ಭಂ ಮುಹೂರ್ತಂ ವ್ಯಥಿತಾಭವತ್ ।। ೨-೫೯-೪

ಅವಳು ತನ್ನ ಹೊಟ್ಟೆಯಲ್ಲಿದ್ದ ಗರ್ಭವು ಸ್ವಪ್ವವಿರಬಹುದೆಂದು ತಿಳಿದು ಅದನ್ನು ಹೆಚ್ಚು ಗಮನಿಸಲಿಲ್ಲ. ಆದರೂ ಮುಹೂರ್ತಕಾಲ ವ್ಯಥಿತಳಾದಳು.

ತಾಮಾಹ ನಿದ್ರಾ ಸಂವಿಗ್ನಾಂ ನೈಶೇ ತಮಸಿ ರೋಹಿಣೀಮ್ ।
ೋಹಿಣೀಮಿವ ಸೋಮಸ್ಯ ವಸುದೇವಸ್ಯ ಧೀಮತಃ ।। ೨-೫೯-೫

ಕತ್ತಲೆಯಲ್ಲಿ ಸಂವಿಗ್ನಳಾಗಿದ್ದ, ಚಂದ್ರನ ರೋಹಿಣಿಯಂತೆ ಧೀಮತ ವಸುದೇವನ ರೋಹಿಣಿಗೆ ನಿದ್ರಾದೇವಿಯು ಹೇಳಿದಳು:

ಕರ್ಷಣೇನಾಸ್ಯ ಗರ್ಭಸ್ಯ ಸ್ವಗರ್ಭೇ ಚಾಹಿತಸ್ಯ ವೈ ।
ಸಂಕರ್ಷಣೋ ನಾಮ ಸುತಃ ಶುಭೇ ತವ ಭವಿಷ್ಯತಿ ।। ೨-೫೯-೬

“ಶುಭೇ! ಕರ್ಷಣದಿಂದ ಈ ಗರ್ಭವನ್ನು ನಿನ್ನ ಉದರದಲ್ಲಿ ಸ್ಥಾಪಿಸಲಾಗಿದೆ. ಆದುದರಿಂದ ನಿನ್ನ ಈ ಸುತನು ಸಂಕರ್ಷಣ ಎಂಬ ಹೆಸರುಳ್ಳವನಾಗುತ್ತಾನೆ.”

ಸಾ ತಂ ಪುತ್ರಮವಾಪ್ಯೈವಂ ಹೃಷ್ಟಾ ಕಿಂಚಿದವಾಂಮುಖಾ ।
ವಿವೇಶ ರೋಹಿಣೀ ವೇಶ್ಮ ಸುಪ್ರಭಾ ರೋಹಿಣೀ ಯಥಾ ।। ೨-೫೯-೭

ಈ ರೀತಿ ಪುತ್ರನನ್ನು ಪಡೆದ ರೋಹಿಣಿಯು ಹೃಷ್ಟಳಾದಳು. ಸ್ವಲ್ಪ ಲಜ್ಜೆಯಿಂದ ಮುಖವನ್ನು ಕೆಳಗೆ ಮಾಡಿಕೊಂಡು ರೋಹಿಣಿಯಂತೆ ಸುಪ್ರಭೆಯುಳ್ಳವಳಾಗಿದ್ದ ರೋಹಿಣಿಯು ತನ್ನ ಭವನವನ್ನು ಪ್ರವೇಶಿಸಿದಳು.

ತಸ್ಯ ಗರ್ಭಸ್ಯ ಮಾರ್ಗೇಣ ಗರ್ಭಮಾಧತ್ತ ದೇವಕೀ ।
ಯದರ್ಥಂ ಸಪ್ತ ತೇ ಗರ್ಭಾಃ ಕಂಸೇನ ವಿನಿಪಾತಿತಾಃ ।। ೨-೫೯-೮

ದೇವಕಿಯ ಏಳನೇ ಗರ್ಭವನ್ನು ಹುಡುಕುತ್ತಿರಲು ಯಾವುದಕ್ಕಾಗಿ ಆ ಏಳು ಗರ್ಭಗಳನ್ನು ಕಂಸನು ಕೊಂದಿದ್ದನೋ ಆ ಗರ್ಭವನ್ನು ದೇವಕಿಯು ಧರಿಸಿದಳು.

ತಂ ತು ಗರ್ಭಂ ಪ್ರಯತ್ನೇನ ರರಕ್ಷುಸ್ತಸ್ಯ ಮಂತ್ರಿಣಃ ।
ಸೋಽಪ್ಯತ್ರ ಗರ್ಭವಸತೌ ವಸತ್ಯಾತ್ಮೇಚ್ಛಯಾ ಹರಿಃ ।। ೨-೫೯-೯

ಕಂಸನ ಮಂತ್ರಿಗಳು ಆ ಗರ್ಭವನ್ನು ಪ್ರಯತ್ನಪೂರ್ವಕವಾಗಿ ರಕ್ಷಿಸಿದರು. ಅಲ್ಲಿ ಹರಿಯೂ ಕೂಡ ಸ್ವ-ಇಚ್ಛೆಯಿಂದ ಆ ಗರ್ಭದಲ್ಲಿ ವಾಸಿಸುತ್ತಿದ್ದನು.

ಯಶೋದಾಪಿ ಸಮಾಧತ್ತ ಗರ್ಭಂ ತದಹರೇವ ತು ।
ವಿಷ್ಣೋಃ ಶರೀರಜಾಂ ನಿದ್ರಾಂ ವಿಷ್ಣುನಿರ್ದೇಶಕಾರಿಣೀಮ್ ।। ೨-೫೯-೧೦

ಅದೇ ದಿನ ಯಶೋದೆಯೂ ಕೂಡ ವಿಷ್ಣುವಿನ ಶರೀರದಿಂದ ಹುಟ್ಟಿದ ಮತ್ತು ವಿಷ್ಣುವಿನ ನಿರ್ದೇಶನದಂತೆ ಮಾಡುವ ನಿದ್ರಾದೇವಿಯನ್ನು ತನ್ನ ಗರ್ಭದಲ್ಲಿ ಧರಿಸಿದಳು.

ಗರ್ಭಕಾಲೇ ತ್ವಸಂಪೂರ್ಣೇ ಅಷ್ಟಮೇ ಮಾಸಿ ತೇ ಸ್ತ್ರಿಯೌ ।
ದೇವಕೀ ಚ ಯಶೋದಾ ಚ ಸುಷುವಾತೇ ಸಮಂ ತದಾ ।। ೨-೫೯-೧೧

ಗರ್ಭಕಾಲವು ಸಂಪೂರ್ಣವಾಗುವ ಮೊದಲೇ ಎಂಟನೇ ತಿಂಗಳಿನಲ್ಲಿ ದೇವಕೀ ಮತ್ತು ಯಶೋದಾ ಆ ಇಬ್ಬರು ಸ್ತ್ರೀಯರೂ ಒಂದೇ ಸಮಯದಲ್ಲಿ ಮಕ್ಕಳನ್ನು ಹೆತ್ತರು.

ಯಾಮೇವ ರಜನೀಂ ಕೃಷ್ಣೋ ಜಜ್ಞೇ ವೃಷ್ಣಿಕುಲೋದ್ವಹಃ ।
ತಾಮೇವ ರಜನೀಂ ಕನ್ಯಾಂ ಯಶೋದಾಪಿ ವ್ಯಜಾಯತ ।। ೨-೫೯-೧೨

ಯಾವ ರಾತ್ರಿ ವೃಷ್ಣಿಕುಲೋದ್ವಹ ಕೃಷ್ಣನು ಹುಟ್ಟಿದನೋ ಅದೇ ರಾತ್ರಿ ಯಶೋದೆಯ ಕನ್ಯೆಯೂ ಕೂಡ ಹುಟ್ಟಿದಳು.

ನಂದಗೋಪಸ್ಯ ಭಾರ್ಯೈಕಾ ವಸುದೇವಸ್ಯ ಚಾಪರಾ ।
ತುಲ್ಯಕಾಲಂ ಚ ಗರ್ಭಿಣ್ಯೌ ಯಶೋದಾ ದೇವಕೀ ತಥಾ ।। ೨-೫೯-೧೩

ಒಬ್ಬಳು ನಂದಗೋಪನ ಭಾರ್ಯೆಯಾಗಿದ್ದಳು. ಇನ್ನೊಬ್ಬಳು ವಸುದೇವನ ಭಾರ್ಯೆಯಾಗಿದ್ದಳು. ಯಶೋದಾ ಮತ್ತು ದೇವಕಿಯರು ಒಂದೇ ಸಮಯದಲ್ಲಿ ಗರ್ಭಿಣಿಯರಾಗಿದ್ದರು.

ದೇವಕ್ಯಜನಯದ್ವಿಷ್ಣುಂ ಯಶೋದಾ ತಾಂ ತು ದಾರಿಕಾಮ್ । ಮುಹೂರ್ತೇಽಭಿಜಿತಿ ಪ್ರಾಪ್ತೇ ಸಾರ್ಧರಾತ್ರೇ ವಿಭೂಷಿತೇ ।। ೨-೫೯-೧೪

ಅರ್ಧರಾತ್ರಿಯ ಸಮಯದಲ್ಲಿ ಸುಂದರ ಅಭಿಜಿತ್ ಮುಹೂರ್ತವು ಪ್ರಾಪ್ತವಾದಾಗ ದೇವಕಿಯು ವಿಷ್ಣುವಿಗೂ, ಯಶೋದೆಯು ಆ ಕನ್ಯೆಗೂ ಜನ್ಮವಿತ್ತರು.

ಸಾಗರಾಃ ಸಮಕಂಪಂತ ಚೇಲುಶ್ಚ ಧರಣೀಧರಾಃ ।
ಜಜ್ವಲುಶ್ಚಾಗ್ನಯಃ ಶಾಂತಾ ಜಾಯಮಾನೇ ಜನಾರ್ದನೇ ।। ೨-೫೯-೧೫

ಜನಾರ್ದನನು ಹುಟ್ಟುವಾಗ ಸಾಗರಗಳು ಕಂಪಿಸಿದವು. ಧರಣಿಯನ್ನು ಧರಿಸಿದ್ದ ಶೇಷ ನಾಗ ಮತ್ತು ಇತರರು ವಿಚಲಿತರಾದರು. ಮತ್ತು ಶಾಂತವಾಗಿದ್ದ ಅಗ್ನಿಗಳು ಪ್ರಜ್ವಲಿಸತೊಡಗಿದವು.

ಶಿವಾಶ್ಚಪ್ರವವುರ್ವಾತಾಃ ಪ್ರಶಾಂತಮಭವದ್ರಜಃ ।
ಜ್ಯೋತೀಂಷ್ಯತಿವ್ಯಕಾಶಂತ ಜಾಯಮಾನೇ ಜನಾರ್ದನೇ ।। ೨-೫೯-೧೬

ಜನಾರ್ದನನು ಹುಟ್ಟುವಾಗ ಮಂಗಳಕರ ಗಾಳಿಯು ಬೀಸತೊಡಗಿತು. ಧೂಳು ಪ್ರಶಾಂತವಾಯಿತು. ಗ್ರಹ-ನಕ್ಷತ್ರಗಳು ಅತ್ಯಂತ ಪ್ರಕಾಶಿತಗೊಂಡವು.

ಅಭಿಜಿನ್ನಾಮ ನಕ್ಷತ್ರಂ ಜಯಂತೀ ನಾಮ ಶರ್ವರೀ ।
ಮುಹೂರ್ತೋ ವಿಜಯೋ ನಾಮ ಯತ್ರ ಜಾತೋ ಜನಾರ್ದನಃ ।

ಜನಾರ್ದನನು ಹುಟ್ಟಿದಾಗ ಅಭಿಜಿತ್ ಎಂಬ ಮುಹೂರ್ತವಿತ್ತು. ರೋಹಿಣೀ ನಕ್ಷತ್ರವಿದ್ದ ಅಷ್ಟಮಿಯ ಆ ರಾತ್ರಿ ಜಯಂತೀ ಎಂಬ ಹೆಸರಿನದಾಗಿತ್ತು ಮತ್ತು ವಿಜಯ ಎಂಬ ವಿಶಿಷ್ಠ ಮುಹೂರ್ತವು ನಡೆಯುತ್ತಿತ್ತು.

ಅವ್ಯಕ್ತಃ ಶಾಶ್ವತಃ ಸೂಕ್ಷ್ಮೋ ಹರಿರ್ನಾರಾಯಣಃ ಪ್ರಭುಃ ।। ೨-೫೯-೧೭
ಜಾಯಮಾನೋ ಹಿ ಭಗವಾನ್ನಯನೈರ್ಮೋಹಯನ್ಪ್ರಭುಃ ।

ಅವ್ಯಕ್ತ, ಶಾಶ್ವತ, ಸೂಕ್ಷ್ಮ, ಪ್ರಭು, ಹರಿ, ಭಗವಾನ್ ನಾರಾಯಣನು ಹುಟ್ಟುವಾಗಲೇ ತನ್ನ ನಯನಗಳಿಂದ ಜನರನ್ನು ಮೋಹಗೊಳಿಸಿದನು.

ಅನಾಹತಾ ದುಂದುಭಯೋ ದೇವಾನಾಂ ಪ್ರಾಣದಂದಿವಿ ।। ೨-೫೯-೧೮
ಆಕಾಶಾತ್ಪುಷ್ಪವೃಷ್ಟಿಂ ಚ ವವರ್ಷ ತ್ರಿದಶೇಶ್ವರಃ ।

ದಿವಿಯಲ್ಲಿ ಬಾರಿಸದೆಯೇ ದೇವತೆಗಳ ದುಂದುಭಿಗಳು ಮೊಳಗಿದವು. ತ್ರಿದಶೇಶ್ವರನು ಆಕಾಶದಿಂದ ಪುಷ್ಪವೃಷ್ಟಿಯನ್ನು ಸುರಿಸಿದನು.

ಗೀರ್ಭಿರ್ಮಂಗಲಯುಕ್ತಾಭಿಃ ಸ್ತುವಂತೋ ಮಧುಸೂದನಮ್ ।। ೨-೫೯-೧೯
ಮಹರ್ಷಯಃ ಸಗಂಧರ್ವಾ ಉಪತಸ್ಥುಃ ಸಹಾಪ್ಸರಾಃ ।

ಗಂಧರ್ವರು ಮತ್ತು ಅಪ್ಸರೆಯರೊಡನೆ ಮಹರ್ಷಿಗಳು ಮಂಗಲ ಗೀತೆಗಳೊಂದಿಗೆ ಮಧುಸೂದನನ ಸ್ತುತಿಗೈಯುತ್ತಾ ಅವನ ಸೇವೆಗೆ ಉಪಸ್ಥಿತರಾದರು.

ಜಾಯಮಾನೇ ಹೃಷೀಕೇಶೇ ಪ್ರಹೃಷ್ಟಮಭವಜ್ಜಗತ್ ।। ೨-೫೯-೨೦
ಇಂದ್ರಶ್ಚ ತ್ರಿದಶೈಃ ಸಾರ್ಧಂ ತುಷ್ಟಾವ ಮಧುಸೂದನಮ್ ।

ಹೃಷೀಕೇಶನು ಹುಟ್ಟಲು ಜಗತ್ತೇ ಪ್ರಹೃಷ್ಟಗೊಂದಿತು. ತ್ರಿದಶರೊಂದಿಗೆ ಇಂದ್ರನು ಮಧುಸೂದನನ್ನು ಸ್ತುತಿಸಿದನು.

ವಸುದೇವಶ್ಚ ತಂ ರಾತ್ರೌ ಜಾತಂ ಪುತ್ರಮಧೋಕ್ಷಜಮ್ ।। ೨-೫೯-೨೧
ಶ್ರೀವತ್ಸಲಕ್ಷಣಂ ದೃಷ್ಟ್ವಾ ಯುತಂ ದಿವ್ಯೈಶ್ಚ ಲಕ್ಷಣೈಃ ।
ಉವಾಚ ವಸುದೇವಸ್ತು ರೂಪಂ ಸಂಹರ ವೈ ಪ್ರಭೋ ।। ೨-೫೯-೨೨

ವಸುದೇವನೂ ಕೂಡ ರಾತ್ರಿಯಲ್ಲಿ ಹುಟ್ಟಿದ ಪುತ್ರ ಶ್ರೀವತ್ಸಲಕ್ಷಣ ದಿವ್ಯ ಲಕ್ಷಣಗಳಿಂದ ಕೂಡಿದ ಅಧೋಕ್ಷಜನನ್ನು ನೋಡಿ “ಪ್ರಭೋ! ಸ್ವರೂಪವನ್ನು ಹಿಂತೆಗೆದುಕೋ!” ಎಂದನು.

ಭೀತೋಽಹಂ ದೇವ ಕಂಸಸ್ಯ ತಸ್ಮಾದೇವಂ ಬ್ರವೀಮ್ಯಹಮ್ ।
ಮಮ ಪುತ್ರಾ ಹತಾಸ್ತೇನ ತವ ಜ್ಯೇಷ್ಠಾಂಬುಜೇಕ್ಷಣ ।। ೨-೫೯-೨೩

“ದೇವ! ನಾನು ಕಂಸನಿಂದ ಭೀತನಾಗಿದ್ದೇನೆ. ಆದುದರಿಂದ ಹೀಗೆ ಹೇಳುತ್ತಿದ್ದೇನೆ. ಅಂಬುಜೇಕ್ಷಣ! ನಿನಗೂ ಹಿರಿಯರಾಗಿದ್ದ ನನ್ನ ಪುತ್ರರನ್ನು ಅವನು ಸಂಹರಿಸಿದ್ದಾನೆ.””

ವೈಶಂಪಾಯನ ಉವಾಚ।
ವಸುದೇವವಚಃ ಶ್ರುತ್ವಾ ರೂಪಂ ಚಾಹರದಚ್ಯುತಃ ।
ಅನುಜ್ಞಾಪ್ಯ ಪಿತೃತ್ವೇನ ನಂದ ಗೋಪಗೃಹಂ ನಯ ।। ೨-೫೯-೨೪

ವೈಶಂಪಾಯನನು ಹೇಳಿದನು: “ವಸುದೇವನ ಮಾತನ್ನು ಕೇಳಿ ಅಚ್ಯುತನು ತನ್ನ ರೂಪವನ್ನು ಹಿಂತೆಗೆದುಕೊಂಡನು. ಹೀಗೆ ಪಿತೃತ್ವದಿಂದ ಅವನ ಮಾತನ್ನು ಕೇಳಿದನು ಮತ್ತು ಹೀಗೆಂದನು: “ನನ್ನನ್ನು ನಂದಗೋಪನ ಮನೆಗೆ ಕೊಂಡೊಯ್ಯಿ!”

ವಸುದೇವಸ್ತು ಸಂಗೃಹ್ಯ ದಾರಕಂ ಕ್ಷಿಪ್ರಮೇವ ಚ ।
ಯಶೋದಾಯಾ ಗೃಹಂ ರಾತ್ರೌ ವಿವೇಶ ಸುತವತ್ಸಲಃ ।। ೨-೫೯-೨೫

ಸುತವತ್ಸಲ ವಸುದೇವನಾದರೋ ಕೂಡಲೇ ತನ್ನ ಮಗನನ್ನು ಎತ್ತಿಕೊಂಡು ರಾತ್ರಿಯಲ್ಲಿಯೇ ಯಶೋದೆಯ ಗೃಹವನ್ನು ಪ್ರವೇಶಿಸಿದನು.

ಯಶೋದಾಯಾಸ್ತ್ವವಿಜ್ಞಾತಸ್ತತ್ರ ನಿಕ್ಷಿಪ್ಯ ದಾರಕಮ್ ।
ಪ್ರಗೃಹ್ಯ ದಾರಿಕಾಂ ಚೈವ ದೇವಕೀಶಯನೇಽನ್ಯಸತ್ ।। ೨-೫೯-೨೬

ಯಶೋದೆಗೆ ಇದರ ಅರಿವೆಯೇ ಆಗಲಿಲ್ಲ. ಅಲ್ಲಿ ತನ್ನ ಮಗನನ್ನು ಇರಿಸಿ ಅವಳ ಮಗಳನ್ನು ಎತ್ತಿಕೊಂಡು ಬಂದು ದೇವಕಿಯ ಹಾಸಿಗೆಯಲ್ಲಿರಿಸಿದನು.

ಪರಿವರ್ತೇ ಕೃತೇ ತಾಭ್ಯಾಂ ಗರ್ಭಾಭ್ಯಾಂ ಭಯವಿಕ್ಲವಃ ।
ವಸುದೇವಃ ಕೃತಾರ್ಥೋ ವೈ ನಿರ್ಜಗಾಮ ನಿವೇಶನಾತ್ ।। ೨-೫೯-೨೭

ಹೀಗೆ ಆ ಎರಡು ಗರ್ಭಗಳನ್ನೂ ಅದಲು ಬದಲು ಮಾಡಿ ಕೃತಾರ್ಥನಾದ ವಸುದೇವನು ಭಯಭೀತನಾಗಿ ಆ ಭವನದಿಂದ ಹೊರಟು ಹೋದನು.

ಉಗ್ರಸೇನಸುತಾಯಾಥ ಕಂಸಾಯಾನಕದುಂದುಭಿಃ ।
ನಿವೇದಯಾಮಾಸ ತದಾ ತಾಂ ಕನ್ಯಾಂ ವರವರ್ಣಿನೀಮ್ ।। ೨-೫೯-೨೮

ಆನಕದುಂದುಭಿ ವಸುದೇವನು ಉಗ್ರಸೇನನ ಮಗ ಕಂಸನಿಗೆ ತನಗೆ ಹುಟ್ಟಿದ ವರವರ್ಣಿನೀ ಕನ್ಯೆಯ ಕುರಿತು ನಿವೇದಿಸಿದನು.

ತಚ್ಛ್ರುತ್ವಾ ತ್ವರಿತಃ ಕಂಸೋ ರಕ್ಷಿಭಿಃ ಸಹ ವೇಗಿಭಿಃ ।
ಆಜಗಾಮ ಗೃಹದ್ವಾರಂ ವಸುದೇವಸ್ಯ ವೀರ್ಯವಾನ್ ।। ೨-೫೯-೨೯

ಅದನ್ನು ಕೇಳಿ ವೀರ್ಯವಾನ್ ಕಂಸನು ತ್ವರೆಮಾಡಿ ವೇಗಯುಕ್ತ ರಕ್ಷರೊಡಗೂಡಿ ವಸುದೇವನ ಗೃಹದ್ವಾರಕ್ಕೆ ಬಂದನು.

ಸ ತತ್ರ ತ್ವರಿತಂ ದ್ವಾರಿ ಕಿಂ ಜಾತಮಿತಿ ಚಾಬ್ರವೀತ್ ದೀಯತಾಂ ಶೀಘ್ರಮಿತ್ಯೇವಂ ವಾಗ್ಭಿಃ ಸಮತರ್ಜಯತ್ ।। ೨-೫೯-೩೦

ಅಲ್ಲಿ ಅವನು ದ್ವಾರದಿಂದಲೇ ಏನು ಹುಟ್ಟಿತೆಂದು ಕೇಳಿದನು ಮತ್ತು ಅದನ್ನು ಶೀಘ್ರವೇ ಕೊಡು ಎಂದು ಮಾತುಗಳಿಂದ ಗದರಿಸಿದನು.

ತತೋ ಹಾಹಾಕೃತಾಃ ಸರ್ವಾ ದೇವಕೀಭವನೇ ಸ್ತ್ರಿಯಃ ।
ಉವಾಚ ದೇವಕೀ ದೀನಾ ಬಾಷ್ಪಗದ್ಗದಯಾ ಗಿರಾ ।। ೨-೫೯-೩೧
ದಾರಿಕಾ ತು ಪ್ರಜಾತೇತಿ ಕಂಸಂ ಸಮಭಿಯಾಚತೀ ।
ಶ್ರೀಮಂತೋ ಮೇ ಹತಾಃ ಸಪ್ತ ಪುತ್ರಗರ್ಭಾಸ್ತ್ವಯಾ ವಿಭೋ ।। ೨-೫೯-೩೨
ದಾರಿಕೇಯಂ ಹತೈವೈಷಾ ಪಶ್ಯಸ್ವ ಯದಿ ಮನ್ಯಸೇ ದೃಷ್ಟ್ವಾ ಕಂಸಸ್ತು ತಾಂ ಕನ್ಯಾಮಾಕೃಷ್ಯತ ಮುದಾ ಯುತಃ ।। ೨-೫೯-೩೩

ಆಗ ದೇವಕಿಯ ಭವನದ ಸ್ತ್ರೀಯರೆಲ್ಲರೂ ಹಾಹಾಕಾರಗೈದರು. ದೇವಕಿಯು ದೀನಳಾಗಿ ಬಾಷ್ಪಗದ್ಗದ ದ್ವನಿಯಲ್ಲಿ “ಪುತ್ರಿಯು ಹುಟ್ಟಿದ್ದಾಳೆ” ಎಂದು ಹೇಳಿ ಕಂಸನಲ್ಲಿ ಈ ರೀತಿ ಯಾಚಿಸಿದಳು: “ವಿಭೋ! ನನ್ನ ಏಳು ಶ್ರೀಮಂತ ಪುತ್ರಗರ್ಭಗಳನ್ನು ನೀನು ಕೊಂದಿದ್ದೀಯೆ. ನೋಡು! ಇವಳು ಕನ್ಯೆ. ಇವಳು ಈಗಾಗಲೇ ಸತ್ತುಹೋಗಿದ್ದಾಳೆ. ಬೇಕಾದರೆ ನೀನೇ ನೋಡು!” ಕಂಸನಾದರೋ ಆ ಕನ್ಯೆಯನ್ನು ನೋಡಿ ಆಕರ್ಷಿತನಾದನು ಮತ್ತು ಮುದಿತನಾದನು.

ಹತೈವೈಷಾ ಯದಾ ಕನ್ಯಾ ಜಾತೇತ್ಯುಕ್ತ್ವಾ ವೃಥಾಮತಿಃ ।
ಸಾ ಗರ್ಭಶಯನೇ ಕ್ಲಿಷ್ಟಾ ಗರ್ಭಾಂಬುಕ್ಲಿನ್ನಮೂರ್ಧಜಾ ।। ೨-೫೯-೩೪
ಕಂಸಸ್ಯ ಪುರತೋ ನ್ಯಸ್ತಾ ಪೃಥಿವ್ಯಾಂ ಪೃಥಿವೀಸಮಾ ।
ಸ ಚೈನಾಂ ಗೃಹ್ಯ ಪುರುಷಃ ಸಮಾವಿಧ್ಯಾವಧೂಯ ಚ ।। ೨-೫೯-೩೫
ಉದ್ಯಚ್ಛನ್ನೇವ ಸಹಸಾ ಶಿಲಾಯಾಂ ಸಮಪೋಥಯತ್ ।
ಸಾವಧೂತಾ ಶಿಲಾಪೃಷ್ಟೇಽನಿಷ್ಪಿಷ್ಟಾ ದಿವಮುತ್ಪತತ್ ।। ೨-೫೯-೩೬
ಹಿತ್ವಾ ಗರ್ಭತನುಂ ಸಾ ತು ಸಹಸಾ ಮುಕ್ತಮೂರ್ಧಜಾ ।
ಜಗಾಮ ಕಂಸಮಾದಿಶ್ಯ ದಿವ್ಯಸ್ರಗನುಲೇಪನಾ ।। ೨-೫೯-೩೭

“ಈ ಕನ್ಯೆಯು ಹುಟ್ಟಿ ಸತ್ತಿರಬಹುದು” ಎಂದು ಆ ವೃಥಾಮತಿಯು ಹೇಳಿದನು. ಆಗ ಗರ್ಭಶಯನದಲ್ಲಿ ಕ್ಲೇಶಪೂರ್ವಕ ಮಲಗಿದ್ದ, ಗರ್ಭದ ನೀರಿನಿಂದ ತಲೆಗೂದಲು ಇನ್ನೂ ಒದ್ದೆಯಾಗಿದ್ದ ಅವಳನ್ನು ಕಂಸನ ಎದಿರು ಭೂಮಿಯ ಮೇಲೆ ಇಡಲಾಯಿತು. ಪೃಥ್ವಿಯಂತೆಯೇ ಇದ್ದ ಅವಳನ್ನು ದುರಾತ್ಮಾ ಕಂಸನು ಹಿಡಿದು ತಿರುಗಿಸಿ ಮೇಲೆತ್ತಿ ಒಮ್ಮೆಲೇ ಶಿಲೆಯ ಮೇಲೆ ಬಡಿದನು. ಆದರೆ ಅವಳು ಶಿಲೆಯ ಮೇಲೆ ಬಿದ್ದು ಜಜ್ಜಿಹೋಗುವ ಮೊದಲೇ ಗರ್ಭದೇಹವನ್ನು ತೊರೆದು ಒಮ್ಮಿಂದೊಮ್ಮೆಲ್ಲೇ ಆಕಾಶಕ್ಕೆ ಹಾರಿದಳು. ಅವಳು ದಿವ್ಯ ಮಾಲೆ-ಲೇಪನಗಳಿಂದ ಅಲಂಕೃತಳಾಗಿದ್ದಳು ಮತ್ತು ಅವಳ ತಲೆಗೂದಲು ಕೆದರಿತ್ತು.

ಹಾರಶೋಭಿತಸರ್ವಾಂಗೀ ಮುಕುಟೋಜ್ಜ್ವಲಭೂಷಿತಾ ।
ಕನ್ಯಾಇವ ಸಾಭವನ್ನಿತ್ಯಂ ದಿವ್ಯಾ ದೇವೈರಭಿಷ್ಟುತಾ ।। ೨-೫೯-೩೮

ಆ ಸರ್ವಾಂಗಿಯು ಹಾರಶೋಭಿತಳಾಗಿದ್ದಳು. ಉಜ್ಜ್ವಲ ಮುಕುಟವನ್ನು ಧರಿಸಿದ್ದಳು. ನಿತ್ಯ ಕನ್ಯೆಯಂತಿದ್ದಳು. ಆ ದಿವ್ಯೆಯನ್ನು ದೇವತೆಗಳು ಸ್ತುತಿಸುತ್ತಿದ್ದರು.

ನೀಲಪೀತಾಂಬರಧರಾ ಗಜಕುಂಭೋಪಮಸ್ತನೀ ।
ರಥವಿಸ್ತೀರ್ಣಜಘನಾ ಚಂದ್ರವಕ್ತ್ರಾ ಚತುರ್ಭುಜಾ ।। ೨-೫೯-೩೯

ನೀಲ ಪೀತಾಂಬರವನ್ನು ಧರಿಸಿದ್ದಳು. ಅವಳ ಸ್ತನಗಳು ಆನೆಗಳ ಕುಂಭಸ್ಥಳಗಳಂತಿದ್ದವು. ಅವಳ ಜಘನವು ರಥದಷ್ಟು ವಿಸ್ತೀರ್ಣವಾಗಿತ್ತು. ಅವಳ ಮುಖವು ಚಂದ್ರಮನಂತಿತ್ತು ಮತ್ತು ಅವಳು ಚತುರ್ಭುಜಿಯಾಗಿದ್ದಳು.

ವಿದ್ಯುದ್ವಿಸ್ಪಷ್ಟವರ್ಣಾಭಾ ಬಾಲಾರ್ಕಸದೃಶೇಕ್ಷಣಾ ।
ಪಯೋಧರಸ್ತನವತೀ ಸಂಧ್ಯೇವ ಸಪಯೋಧರಾ ।। ೨-೫೯-೪೦

ಅವಳ ಅಂಗಾಂಗಗಳು ಮಿಂಚಿನಂತೆ ಹೊಳೆಯುತ್ತಿದ್ದವು. ಕಣ್ಣುಗಳು ಉದಯಿಸುವ ಸೂರ್ಯನಂತಿದ್ದವು. ಮೋಡಗಳಂಥಹ ಸ್ತನವುಳ್ಳವಳಾಗಿದ್ದ ಅವಳು ಮೋಡಗಳು ತುಂಬಿದ ಸಂಜೆಯಂತೆಯೇ ತೋರುತ್ತಿದ್ದಳು.

ಸಾ ವೈ ನಿಶಿ ತಮೋಗ್ರಸ್ತೇ ಬಭೌ ಭೂತಗಣಾಕುಲೇ ।
ನೃತ್ಯತೀ ಹಸತೀ ಚೈವ ವಿಪರೀತೇನ ಭಾಸ್ವತೀ ।। ೨-೫೯-೪೧

ರಾತ್ರಿಯ ಕತ್ತಲೆಯಲ್ಲಿ ಭೂತಗಣಕುಲಗಳಿಂದ ಆವೃತಳಾಗಿದ್ದ, ನರ್ತಿಸುತ್ತಾ ನಗುತ್ತಾ ಅವಳು ವಿಪರೀತವಾಗಿ ಹೊಳೆಯುತ್ತಿದ್ದಳು.

ವಿಹಾಯಸಿ ಗತಾ ರೌದ್ರಾ ಪಪೌ ಪಾನಮನುತ್ತಮಮ್ ।
ಜಹಾಸ ಚ ಮಹಾಹಾಸಂ ಕಂಸಂ ಚ ರುಷಿತಾಬ್ರವೀತ್ ।। ೨-೫೯-೪೨

ಆಕಾಶವನ್ನೇರಿ ಆ ರೌದ್ರಿಯು ಅನುತ್ತಮ ಪಾನವನ್ನು ಸೇವಿಸುತ್ತಾ ಮಹಾ ಅಟ್ಟಹಾಸಮಾಡುತ್ತಾ ಕುಪಿತಳಾಗಿ ಕಂಸನಿಗೆ ಹೇಳಿದಳು:

ಕಂಸ ಕಂಸಾತ್ಮನಾಶಾಯ ಯದಹಂ ಘಾತಿತಾ ತ್ವಯಾ ।
ಸಹಸಾ ಚ ಸಮುತ್ಕ್ಷಿಪ್ಯ ಶಿಲಾಯಾಮಭಿಪೋಥಿತಾ ।। ೨-೫೯-೪೩

“ಕಂಸ! ಎಲೇ ಕಂಸ! ನಿನ್ನ ಆತ್ಮನಾಶಕ್ಕಾಗಿಯೇ ನೀನು ನನ್ನನ್ನು ಕೊಲ್ಲಲು ಒಮ್ಮಿಂದೊಮ್ಮೆಲೇ ಮೇಲಕ್ಕಿತ್ತಿ ಬಂಡೆಯ ಮೇಲೆ ಬಡಿದೆ!

ತಸ್ಮಾತ್ತವಾಂತಕಾಲೇಽಹಂ ಕೃಷ್ಯಮಾಣಸ್ಯ ಶತ್ರುಣಾ ।
ಪಾಟಯಿತ್ವಾ ಕರೈರ್ದೇಹಮುಷ್ಣಂ ಪಾಸ್ಯಾಮಿ ಶೋಣಿತಮ್ ।। ೨-೫೯-೪೪

ನಿನ್ನ ಅಂತ್ಯಕಾಲದಲ್ಲಿ ಶತ್ರುವು ನಿನ್ನನ್ನು ಎಳೆದು ಕೈಗಳಿಂದಲೇ ನಿನ್ನನ್ನು ಪ್ರಹರಿಸಿ ಕೊಳ್ಳುವಾಗ ನಿನ್ನ ಬಿಸಿರಕ್ತವನ್ನು ನಾನು ಕುಡಿಯುತ್ತೇನೆ.”

ಏವಮುಕ್ತ್ವಾ ವಚೋ ಘೋರಂ ಸಾ ಯಥೇಷ್ಟೇನ ವರ್ತ್ಮನಾ ।
ಸ್ವಂ ಸಾ ದೇವಾಲಯಂ ದೇವೀ ಸಗಣಾ ವಿಚಚಾರ ಹ ।। ೨-೫೯-೪೫

ಈ ಘೋರ ವಚನವನ್ನು ಹೇಳಿ ಆ ದೇವಿಯು ತನಗಿಷ್ಟಬಂದ ಮಾರ್ಗದಲ್ಲಿ ಹೋಗಿ ಗಣಗಳೊಂದಿಗೆ ದೇವಲೋಕದಲ್ಲಿ ಸಂಚರಿಸತೊಡಗಿದಳು.

ಸಾ ಕನ್ಯಾ ವವೃಧೇ ತತ್ರ ವೃಷ್ಣೀಸಂಘಸುಪೂಜಿತಾ ।
ಪುತ್ರವತ್ಪಾಲ್ಯಮಾನಾ ಸಾ ವಸುದೇವಾಜ್ಞಯಾ ತದಾ ।। ೨-೫೯-೪೬

ಆ ಕನ್ಯೆಯು ಅಲ್ಲಿ ವೃಷ್ಣೀಸಂಘದಿಂದ ಸುಪೂಜಿತಳಾಗಿ ವಸುದೇವನ ಆಜ್ಞೆಯಂತೆ ಪುತ್ರನೋಪಾದಿಯಲ್ಲಿ ಪಾಲಿತಳಾಗಿ ಬೆಳೆದಳು.

ವಿದ್ಧಿ ಚೈನಾಮಥೋತ್ಪನ್ನಾಮಂಶಾದ್ದೇವೀಂ ಪ್ರಜಾಪತೇಃ ।
ಏಕಾನಂಶಾಂ ಯೋಗಕನ್ಯಾಂ ರಕ್ಷಾರ್ಥಂ ಕೇಶವಸ್ಯ ತು ।। ೨-೫೯-೪೭

ಅವಳು ಕೇಶವನ ರಕ್ಷಣೆಗಾಗಿ ಪ್ರಜಾಪತಿಯ ಅಂಶದಿಂದ ಉತ್ಪನ್ನಳಾದ ದೇವಿ ಏಕಾನಂಶಾ ಯೋಗಕನ್ಯೆಯೆಂದು ತಿಳಿ.

ತಾಂ ವೈ ಸರ್ವೇ ಸುಮನಸಃ ಪೂಜಯಂತಿ ಸ್ಮ ಯಾದವಾಃ ।
ದೇವವದ್ದಿವ್ಯವಪುಷಾ ಕೃಷ್ಣಃ ಸಂರಕ್ಷಿತೋ ಯಯಾ ।। ೨-೫೯-೪೮

ಯಾದವಕುಲದಲ್ಲಿ ಜನಿಸಿದ ಸರ್ವ ಯಾದರವರೂ ಕೃಷ್ಣನನ್ನು ಸಂರಕ್ಷಿಸಿದ ಆ ದಿವ್ಯರೂಪಿಯನ್ನು ಆರಾಧ್ಯದೇವತೆಯಂತೆ ಪೂಜಿಸಿದರು.

ತಸ್ಯಾಂ ಗತಾಯಾಂ ಕಂಸಸ್ತು ತಾಂ ಮೇನೇ ಮೃತ್ಯುಮಾತ್ಮನಃ ।
ವಿವಿಕ್ತೇ ದೇವಕೀಂ ಚೈವ ವ್ರೀಡಿತಃ ಸಮಭಾಷತ ।। ೨-೫೯-೪೯

ಅವಳು ಹೊರಟು ಹೋಗಲು ಕಂಸನು ಅವಳನ್ನೇ ತನ್ನ ಮೃತ್ಯುವೆಂದು ತಿಳಿದು ಏಕಾಂತದಲ್ಲಿ ದೇವಕಿಯ ಬಳಿಸಾರಿ ಲಜ್ಜಿತನಾಗಿ ಈ ಮಾತನ್ನಾಡಿದನು.

ಕಂಸ ಉವಾಚ।
ಮೃತ್ಯೋಃ ಸ್ವಸುಃ ಕೃತೋ ಯತ್ನಸ್ತವ ಗರ್ಭಾ ಮಯಾ ಹತಾಃ ।
ಅನ್ಯ ಏವಾನ್ಯತಾ ದೇವಿ ಮಮ ಮೃತ್ಯುರುಪಸ್ಥಿತಃ ।। ೨-೫೯-೫೦

ಕಂಸನು ಹೇಳಿದನು: “ತಂಗೀ! ಮೃತ್ಯುವಿನಿಂದ ತಪ್ಪಿಸಿಕೊಳ್ಳಲು ನಾನು ನಿನ್ನ ಮಕ್ಕಳನ್ನು ಕೊಂದೆ. ಆದರೆ ದೇವೀ! ಬೇರೆ ಯಾರೋ ಒಬ್ಬನು ಬೇರೊಂದುಕಡೆ ನನ್ನ ಮೃತ್ಯುವಾಗಿ ಉಪಸ್ಥಿತನಾಗಿದ್ದಾನೆ.

ನೈರಾಶ್ಯೇನ ಕೃತೋ ಯತ್ನಃ ಸ್ವಜನೇ ಪ್ರಹೃತಂ ಮಯಾ ।
ದೈವಂ ಪುರುಷಕಾರೇಣ ನ ಚಾತಿಕ್ರಾಂತವಾನಹಮ್ ।। ೨-೫೯-೫೧

ಕೃರತೆಯಿಂದ ನಾನು ನನ್ನ ಉದ್ದೇಶಸಾಧನೆಗೆ ಪ್ರಯತ್ನಿಸಿದೆ. ನನ್ನವರ ಮೇಲೆಯೇ ನಾನು ಪ್ರಹರಿಸಿದೆ. ಆದರೆ ಪುರುಷತ್ವದಿಂದ ದೈವವನ್ನು ಉಲ್ಲಂಘಿಸಲಾರದೇ ಹೋದೆನು!

ತ್ಯಜ ಗರ್ಭಕೃತಾಂ ಚಿಂತಾಂ ಸಂತಾಪಂ ಪುತ್ರಜಂ ತ್ಯಜ ।
ಹೇತುಭೂತಸ್ತ್ವಹಂ ತೇಷಾಂ ಸತಿ ಕಾಲವಿಪರ್ಯಯೇ ।। ೨-೫೯-೫೨

ನಿನ್ನ ಮಕ್ಕಳಿಗಾಗಿ ಚಿಂತಿಸುವುದನ್ನು ಬಿಡು. ಪುತ್ರರ ಕುರಿತಾದ ಸಂತಾಪವನ್ನು ತ್ಯಜಿಸು. ಅವರಿಗೆ ಕಾಲವಿಪರ್ಯಾಸದಿಂದಲೇ ಅವರ ಮೃತ್ಯುವಾಯಿತು. ನಾನು ನಿಮಿತ್ತಮಾತ್ರನಾಗಿದ್ದೆ.

ಕಾಲ ಏವ ನೃಣಾಂ ಶತ್ರುಃ ಕಾಲಶ್ಚ ಪರಿಣಾಮಕಃ ।
ಕಾಲೋ ನಯತಿ ಸರ್ವಂ ವೈ ಹೇತುಭೂತಸ್ತು ಮದ್ವಿಧಃ ।। ೨-೫೯-೫೩

ನರರಿಗೆ ಕಾಲವೇ ಶತ್ರು. ಕಾಲವೇ ಪರಿಣಾಮಗಳನ್ನುಂಟುಮಾಡುತ್ತದೆ. ಕಾಲವೇ ಎಲ್ಲವನ್ನೂ ನಡೆಸುತ್ತದೆ. ನನ್ನಂಥವರು ನಿಮಿತ್ತಮಾತ್ರರು.

ಆಗಮಿಷ್ಯಂತಿ ವೈ ದೇವಿ ಯಥಾಭಾಗಮುಪದ್ರವಾಃ ।
ಇದಂ ತು ಕಷ್ಟಂ ಯಜ್ಜಂತುಃ ಕರ್ತಾಹಮಿತಿ ಮನ್ಯತೇ ।। ೨-೫೯-೫೪

ದೇವೀ! ಭಾಗ್ಯದಲ್ಲಿದ್ದಂತೆ ಉಪದ್ರವಗಳು ಬರುತ್ತಿರುತ್ತವೆ. ಆದರೆ ಕಷ್ಟಗಳು ಬಂದಾಗ ಅದಕ್ಕೆ ಕಾರಣರು ನಾವೇ ಎಂದು ತಿಳಿದುಕೊಳ್ಳುತ್ತೇವೆ.

ಮಾ ಕಾರ್ಷೀಃ ಪುತ್ರಜಾಂ ಚಿಂತಾಂ ವಿಲಾಪಂ ಶೋಕಜಂ ತ್ಯಜ ।
ಏವಂಪ್ರಾಯೋ ನೃಣಾಂ ಯೋನಿರ್ನಾಸ್ತಿ ಕಾಲಸ್ಯ ಸಂಸ್ಥಿತಿಃ ।। ೨-೫೯-೫೫

ಪುತ್ರರಿಗಾಗಿ ಕೊರಗಬೇಡ. ಶೋಕದಿಂದಾದ ಚಿಂತೆ ವಿಲಾಪಗಳನ್ನು ನಿಲ್ಲಿಸು. ಮನುಷ್ಯಯೋನಿಯಲ್ಲಿ ಹುಟ್ಟಿದವರಿಗೆ ಕಾಲವನ್ನು ಮೀರಲು ಸಾಧ್ಯವಿಲ್ಲ.

ಏಷ ತೇ ಪಾದಯೋರ್ಮೂರ್ಧ್ನಾ ಪುತ್ರವತ್ತವ ದೇವಕಿ ।
ಮದ್ಗತಸ್ತ್ಯಜ್ಯತಾಂ ರೋಷೋ ಜಾನಾಮ್ಯಪಕೃತಂ ತ್ವಯಿ ।। ೨-೫೯-೫೬

ದೇವಕೀ! ಇಗೋ! ಪುತ್ರನಂತೆ ನಾನು ನಿನ್ನ ಪಾದಗಳಲ್ಲಿ ತಲೆಯನ್ನಿಟ್ಟಿದ್ದೇನೆ. ನಿನಗೆ ನಾನು ಅಪರಾಧವನ್ನೆಸಗಿದ್ದೇನೆ. ನನ್ನ ಮೇಲಿನ ರೋಷವನ್ನು ತೊರೆ!”

ಇತ್ಯುಕ್ತವಂತಂ ಕಂಸಂ ಸಾ ದೇವಕೀ ವಾಕ್ಯಮಬ್ರವೀತ್ ।
ಸಾಶ್ರುಪೂರ್ಣಮುಖಾ ದೀನಾ ಭರ್ತಾರಮುಪವೀಕ್ಷತೀ ।
ಉತ್ತಿಷ್ಠೋತ್ತಿಷ್ಠ ವತ್ಸೇತಿ ಕಂಸಂ ಮಾತೇವ ಜಲ್ಪತೀ ।। ೨-೫೯-೫೭

ಕಂಸನು ಹೀಗೆ ಹೇಳಲು ದೇವಕಿಯು ಮುಖದ ಮೇಲೆ ಕಣ್ಣೀರಿನ ಧಾರೆಗಳನ್ನು ಸುರಿಸಿದಳು. ಅವಳು ದೀನಳಾಗಿ ಪತಿಯನ್ನು ನೋಡುತ್ತಾ ಕಂಸನಿಗೆ ತಾಯಿಯಂತೆ ಹೇಳ ತೊಡಗಿದಳು: “ವತ್ಸ! ಏಳು! ಎದ್ದೇಳು!”

ದೇವಕ್ಯುವಾಚ।
ಮಮಾಗ್ರತೋ ಹತಾ ಗರ್ಭಾ ಯೇ ತ್ವಯಾ ಕಾಮರೂಪಿಣಾ ।
ಕಾರಣಂ ತ್ವಂ ನ ವೈ ಪುತ್ರ ಕೃತಾಂತೋಽಪ್ಯತ್ರ ಕಾರಣಮ್ ।। ೨-೫೯-೫೮

ದೇವಕಿಯು ಹೇಳಿದಳು: “ಕಾಮರೂಪಿಯಾಗಿರುವ ನೀನು ನನ್ನ ಎದುರಿನಲ್ಲಿಯೇ ನನ್ನ ಪುತ್ರರನ್ನು ಸಂಹರಿಸಿದ್ದೀಯೆ. ಪುತ್ರ! ಅದಕ್ಕೆ ನೀನೊಬ್ಬನೇ ಕಾರಣವಾಗಿರಲಿಕ್ಕಿಲ್ಲ. ಕಾಲವೂ ಅದಕ್ಕೆ ಕಾರಣವಾಗಿರಬಹುದು.

ಗರ್ಭಕರ್ತನಮೇತನ್ಮೇ ಸಹನೀಯಂ ತ್ವಯಾ ಕೃತಮ್ ।
ಪಾದಯೋಃ ಪತತಾ ಮೂರ್ಧ್ನಾ ಸ್ವಂ ಚ ಕರ್ಮ ಜುಗುಪ್ಸತಾ ।। ೨-೫೯-೫೯

ಆದರೆ ಇಂದು ನೀನು ನಿನ್ನ ಕರ್ಮವನ್ನು ನಿಂದಿಸುತ್ತಾ ನನ್ನ ಪಾದಗಳಲ್ಲಿ ತಲೆಯನ್ನಿರಿಸಿದುದಕ್ಕಾಗಿ ನೀನು ಮಾಡಿದ ಗರ್ಭಕರ್ತನವನ್ನೂ ಕೂಡ ಸಹಿಸಿಕೊಳ್ಳುತ್ತೇನೆ.

ಗರ್ಭೇ ತು ನಿಯತೋ ಮೃತ್ಯುರ್ಬಾಲ್ಯೇಽಪಿ ನ ನಿವರ್ತತೇ ।
ಯುವಾಪಿ ಮೃತ್ಯೋರ್ವಶಗಃ ಸ್ಥವಿರೋ ಮೃತ ಏವ ತು ।। ೨-೫೯-೬೦

ಗರ್ಭದಲ್ಲಿಯೂ ಮೃತ್ಯುವು ನಿಶ್ಚಿತರೂಪದಲ್ಲಿ ಇರುತ್ತದೆ. ಬಾಲ್ಯಾವಸ್ಥೆಯಲ್ಲಿಯೂ ಅದು ತಪ್ಪದಿರುವುದಿಲ್ಲ. ಯುವಾವಸ್ಥೆಯಲ್ಲಿಯೂ ಮೃತ್ಯುವಿನ ವಶರಾಗಬಲ್ಲರು. ವೃದ್ಧರಂತೋ ಮೃತರಾದಂತೆಯೇ.

ಕಾಲಭೂತಮಿದಂ1 ಸರ್ವಂ ಹೇತುಭೂತಸ್ತು ತದ್ವಿಧಃ ।
ಅಜಾತೇ ದರ್ಶನಂ ನಾಸ್ತಿ ಯಥಾ ವಾಯುಸ್ತಥೈವ ಚ ।। ೨-೫೯-೬೧

ಇವೆಲ್ಲವೂ ಕಾಲಭೂತವು. ನಿನ್ನಂಥವರು ಕೇವಲ ನಿಮಿತ್ತಮಾತ್ರರು. ಹುಟ್ಟದೇ ಇರುವವನು ವಾಯುವಿನಂತೆ ಕಾಣಲು ಸಿಗುವುದಿಲ್ಲ.

ಜಾತೋಽಪ್ಯಜಾತತಾಂ ಯಾತಿ ವಿಧಾತ್ರಾ ಯತ್ರ ನೀಯತೇ ।
ತದ್ಗಚ್ಛ ಪುತ್ರ ಮಾ ತೇ ಭೂನ್ಮದ್ಗತಂ ಮೃತ್ಯುಕಾರಣಮ್ ।। ೨-೫೯-೬೨

ಹುಟ್ಟಿದವನೂ ಕೂಡ ಮೃತ್ಯುವಿನ ನಂತರ ಅಜ್ಞತಭಾವವನ್ನು ಪಡೆದುಕೊಳ್ಳುತ್ತಾನೆ. ವಿಧಾತನು ಎಲ್ಲಿ ಕೊಂಡೊಯ್ಯುತ್ತಾನೋ ಅಲ್ಲಿಗೆ ಹೋಗುತ್ತಾರೆ. ಪುತ್ರ! ಹೋಗು! ನನಗೆ ಹೇಗೆ ಪುತ್ರರ ಮೃತ್ಯುವಿನಿಂದ ದುಃಖವಾಗುತ್ತಿದೆಯೋ ಅದರ ಕುರಿತು ನೀನು ಚಿಂತಿಸಬೇಡ!

ಮೃತ್ಯುನಾಽಪಹೃತೇ ಪೂರ್ವಂ ಶೇಷೋ ಹೇತುಃ ಪ್ರವರ್ತತೇ ।
ವಿಧಿನಾ ಪೂರ್ವದೃಷ್ಟೇನ ಪ್ರಜಾಸರ್ಗೇಣ ತತ್ತ್ವತಃ ।। ೨-೫೯-೬೩
ಮಾತಾಪಿತ್ರೋಸ್ತು ಕಾರ್ಯೇಣ ಜನ್ಮತಸ್ತೂಪಪದ್ಯತೇ ।

ಮೊದಲು ವೃತ್ಯುವು ಪ್ರಹರಿಸುತ್ತದೆ. ನಂತರ ಉಳಿದ ಕಾರಣಗಳು ಕಾರ್ಯಗತವಾಗುತ್ತವೆ. ಪ್ರಜಾಸೃಷ್ಟಿಯ ಕಾಲದಲ್ಲಿ ವಿಧಿಯು ಮೊದಲೇ ಕಂಡಂತೆ ಮಾತಾಪಿತ್ರುಗಳ ಕಾರ್ಯದಿಂದ ಮೃತ್ಯುವಿನ ಸಂಭವವಾಗುತ್ತದೆ.””

ವೈಶಂಪಾಯನ ಉವಾಚ।
ನಿಶಮ್ಯ ದೇವಕೀವಾಕ್ಯಂ ಸ ಕಂಸಃ ಸ್ವಂ ನಿವೇಶನಮ್ ।। ೨-೫೯-೬೪
ಪ್ರವಿವೇಶ ಸ ಸಂರಬ್ಧೋ ದಹ್ಯಮಾನೇನ ಚೇತಸಾ ।
ಕೃತ್ಯೇ ಪ್ರತಿಹತೇ ದೀನೋ ಜಗಾಮ ವಿಮನಾ ಭೃಶಮ್ ।। ೨-೫೯-೬೫

ವೈಶಂಪಾಯನನು ಹೇಳಿದನು: “ದೇವಕಿಯ ಮಾತನ್ನು ಕೇಳಿ ಕಂಸನು ಉರಿಯುತ್ತಿರುವ ಚೇತನದೊಂದಿಗೆ ಸಂರಬ್ಧನಾಗಿ ತನ್ನ ಭವನವನ್ನು ಪ್ರವೇಶಿಸಿದನು. ತನ್ನ ಪ್ರಯತ್ನಗಳು ವಿಫಲವಾದುದರಿಂದ ಅತ್ಯಂತ ದೀನನೂ ಖಿನ್ನನೂ ಆದನು.”

ಸಮಾಪ್ತಿ

ಇತಿ ಶ್ರೀಮಹಾಭಾರತೇ ಖಿಲೇಷು ಹರಿವಂಶೇ ವಿಷ್ಣುಪರ್ವಣಿ ಶ್ರೀಕೃಷ್ಣಜನ್ಮನಿ ಏಕೋನಷಷ್ಠಿತಮೋಽಧ್ಯಾಯಃ


  1. ಕಾಲಪಕ್ವಮಿತಂ (ಗೀತಾ ಪ್ರೆಸ್). ↩︎