ಪ್ರವೇಶ
।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।
ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ
ಶ್ರೀ ಮಹಾಭಾರತ
ಖಿಲಭಾಗೇ ಹರಿವಂಶಃ
ವಿಷ್ಣು ಪರ್ವ
ಅಧ್ಯಾಯ 58
ಸಾರ
ವೈಶಂಪಾಯನ ಉವಾಚ।
ಆರ್ಯಾಸ್ತವಂ ಪ್ರವಕ್ಷ್ಯಾಮಿ ಯಥೋಕ್ತಂಋಷಿಭಿಃ ಪುರಾ ।
ನಾರಾಯಣೀಂ ನಮಸ್ಯಾಮಿ ದೇವೀಂ ತ್ರಿಭುವನೇಶ್ವರೀಮ್ ।। ೨-೫೮-೧
ವೈಶಂಪಾಯನನು ಹೇಳಿದನು: “ಹಿಂದೆ ಋಷಿಗಳು ಹೇಳಿದ ಆರ್ಯಾಸ್ತವವನ್ನು ಹೇಳುತ್ತೇನೆ. ದೇವೀ ತ್ರಿಭುವನೇಶ್ವರೀ ನಾರಾಯಣಿಯನ್ನು ನಮಸ್ಕರಿಸುತ್ತೇನೆ.
ತ್ವಂ ಹಿ ಸಿದ್ಧಿರ್ಧೃತಿಃ ಕೀರ್ತಿಃ ಶ್ರೀರ್ವಿದ್ಯಾ ಸನ್ನತಿರ್ಮತಿಃ ।
ಸಂಧ್ಯಾ ರಾತ್ರಿಃ ಪ್ರಭಾ ನಿದ್ರಾ ಕಾಲರಾತ್ರಿಸ್ತಥೈವ ಚ ।। ೨-೫೮-೨
ನೀನೇ ಸಿದ್ಧಿ, ಧೃತಿ, ಕೀರ್ತಿ, ಶ್ರೀ, ವಿದ್ಯಾ, ಸನ್ನತಿ, ಮತಿ, ಸಂಧ್ಯಾ, ರಾತ್ರಿ, ಪ್ರಭಾ, ನಿದ್ರಾ ಮತ್ತು ಕಾಲರಾತ್ರಿಯು.
ಆರ್ಯಾ ಕಾತ್ಯಾಯನೀ ದೇವೀ ಕೌಶಿಕೀ ಬ್ರಹ್ಮಚಾರಿಣೀ ।
ಜನನೀ ಸಿದ್ಧಸೇನಸ್ಯ ಉಗ್ರಚಾರೀ ಮಹಾಬಲಾ ।। ೨-೫೮-೩
ನೀನು ಆರ್ಯಾ, ಆತ್ಯಾಯನೀ, ದೇವೀ, ಕೌಶಿಕೀ, ಬ್ರಹ್ಮಚಾರಿಣೀ, ಸಿದ್ಧಸೇನ1ನ ಜನನಿ, ಉಗ್ರಚಾರೀ ಮತ್ತು ಮಹಾಬಲವುಳ್ಳವಳು.
ಜಯಾ ಚ ವಿಜಯಾ ಚೈವ ಪುಷ್ಟಿಸ್ತುಷ್ಟಿಃ ಕ್ಷಮಾ ದಯಾ ।
ಜ್ಯೇಷ್ಠಾ ಯಮಸ್ಯ ಭಗಿನೀ ನೀಲಕೌಶೇಯವಾಸಿನೀ ।। ೨-೫೮-೪
ನೀನು ಜಯಾ, ವಿಜಯಾ, ಪುಷ್ಟಿ, ತುಷ್ಟಿ, ಕ್ಷಮಾ, ದಯಾ, ಯಮನ ಜ್ಯೇಷ್ಠ ಭಗಿನೀ, ಮತ್ತು ನೀಲ ವರ್ಣದ ರೇಷ್ಮೆವಸ್ತ್ರವನ್ನು ಧರಿಸಿದವಳು.
ಬಹುರೂಪಾ ವಿರೂಪಾ ಚ ಅನೇಕವಿಧಿಚಾರಿಣೀ ।
ವಿರೂಪಾಕ್ಷೀ ವಿಶಾಲಕ್ಷೀ ಭಕ್ತಾನಾಂ ಪರಿರಕ್ಷಿಣೀ ।। ೨-೫೮-೫
ನೀನು ಬಹುರೂಪಿಣೀ, ವಿರೂಪಿಣೀ, ಮತ್ತು ಅನೇಕವಿಧಿಚಾರಣೀ. ನೀನು ವಿರೂಪಾಕ್ಷೀ, ವಿಶಾಲಾಕ್ಷೀ ಮತ್ತು ಭಕ್ತರ ಪರಿರಕ್ಷಿಣೀ.
ಪರ್ವತಾಗ್ರೇಷು ಘೋರೇಷು ನದೀಷು ಚ ಗುಹಾಸು ಚ ।
ವಾಸಸ್ತೇ ಚ ಮಹಾದೇವಿ ವನೇಷೂಪವನೇಷು ಚ ।। ೨-೫೮-೬
ಮಹಾದೇವೀ! ನೀನು ಘೋರ ಪರ್ವತಶಿಖರಗಳಲ್ಲಿ, ನದಿಗಳಲ್ಲಿ, ಗುಗೆಹಳಲ್ಲಿ ಮತ್ತು ವನ-ಉಪವನಗಳಲ್ಲಿ ವಾಸಿಸುತ್ತೀಯೆ.
ಶಬರೈರ್ಬರ್ಬರೈಶ್ಚೈವ ಪುಲಿಂದೈಶ್ಚ ಸುಪೂಜಿತಾ ।
ಮಯೂರಪಿಚ್ಛಧ್ವಜಿನೀ ಲೋಕಾನ್ಕ್ರಮಸಿ ಸರ್ವಶಃ ।। ೨-೫೮-೭
ನೀನು ಶಬರರು, ಬರ್ಬರರು ಮತ್ತು ಪುಲಿಂದರಿಂದ ಸುಪೂಜಿತೆಯಾಗಿರುವೆ. ನವಿಲುಗರಿಯ ಧ್ವಜವುಳ್ಳವಳೇ! ನೀನು ಎಲ್ಲ ಲೋಕಗಳಲ್ಲಿಯೂ ಸಂಚರಿಸುತ್ತೀಯೆ.
ಕುಕ್ಕುಟೈಶ್ಛಾಗಲೈರ್ಮೇಷೈಸ್ಸಿಂಹೈರ್ವ್ಯಾಘ್ರೈಸ್ಸಮಾಕುಲಾ ।
ಘಂಟಾನಿನಾದಬಹುಲಾ ವಿಂಧ್ಯವಾಸಿನ್ಯಭಿಶ್ರುತಾ ।। ೨-೫೮-೮
ಕೋಳಿಗಳು, ಕುರಿಗಳು, ನರಿಗಳು, ಮೇಷಗಳು, ಸಿಂಹ-ವ್ಯಾಘ್ರಗಳು ನಿನ್ನ ಸುತ್ತಲೂ ಇರುತ್ತವೆ. ವಿಂಧ್ಯಾವಾಸಿನೀ ಎಂದು ವಿಖ್ಯಾತಳಾದ ನಿನ್ನ ಸುತ್ತಲೂ ಅನೇಕ ಘಂಟಾನಾದಗಳಾಗುತ್ತಿರುವೆ.
ತ್ರಿಶೂಲೀ ಪಟ್ಟಿಶಧರಾ ಸೂರ್ಯಚಂದ್ರಪತಾಕಿನೀ ।
ನವಮೀ ಕೃಷ್ಣಪಕ್ಷಸ್ಯ ಶುಕ್ಲಸ್ಯೈಕಾದಶೀ ತಥಾ ।। ೨-೫೮-೯
ನೀನು ತ್ರಿಶೂಲ ಮತ್ತು ಪಟ್ಟಿಶಗಳನ್ನು ಹಿಡಿದಿರುವೆ. ನಿನ್ನ ಪತಾಕೆಯಲ್ಲಿ ಸೂರ್ಯಚಂದ್ರರ ಚಿಹ್ನೆಗಳಿವೆ. ನೀನು ಪ್ರತಿಮಾಸದ ಕೃಷ್ಣಪಕ್ಷದ ನವಮಿ ಮತ್ತು ಶುಕ್ಲಪಕ್ಷದ ಏಕಾದಶಿಯು.
ಭಗಿನೀ ಬಲದೇವಸ್ಯ ರಜನೀ ಕಲಹಪ್ರಿಯಾ ।
ಆವಾಸಃ ಸರ್ವಭೂತಾನಾಂ ನಿಷ್ಠಾ ಚ ಪರಮಾ ಗತಿಃ ।। ೨-೫೮-೧೦
ನೀನು ಬಲದೇವನ ಭಗಿನೀ, ರಜನೀ ಮತ್ತು ಕಲಹಪ್ರಿಯೆ. ಸರ್ವಭೂತಗಳ ಆವಾಸವು ನೀನು. ನಿಷ್ಠೆಯುಳ್ಳವರ ಪರಮ ಗತಿಯು ನೀನು.
ನಂದಗೋಪಸುತಾ ಚೈವ ದೇವಾನಾಂ ವಿಜಯಾವಹಾ ।
ಚೀರವಾಸಾಃ ಸುವಾಸಾಶ್ಚ ರೌದ್ರೀ ಸಂಧ್ಯಾಚರೀ ನಿಶಾ ।। ೨-೫೮-೧೧
ನೀನು ನಂದಗೋಪನ ಸುತೆ. ದೇವತೆಗಳಿಗೆ ವಿಜಯವನ್ನು ತರುವವಳು. ಚೀರವಸ್ತ್ರವನ್ನು ಉಡುವವಳು. ಸುವಾಸಿನೀ, ರುದ್ರೀ, ಮತ್ತು ಸಂಧ್ಯಾಕಾಲ ರಾತ್ರಿಕಾಲಗಳಲ್ಲಿ ಸಂಚರಿಸುವವಳು.
ಪ್ರಕೀರ್ಣಕೇಶೀ ಮೃತ್ಯುಶ್ಚ ಸುರಾಮಾಂಸಬಲಿಪ್ರಿಯಾ ।
ಲಕ್ಷ್ಮೀರಲಕ್ಷ್ಮೀರೂಪೇಣ ದಾನವಾನಾಂ ವಧಾಯ ಚ ।। ೨-೫೮-೧೨
ಪ್ರಕೀರ್ಣಕೇಶೀ! ನೀನು ಮೃತ್ಯು. ಸುರಾಮಾಂಸಬಲಿಪ್ರಿಯೇ! ಲಕ್ಷ್ಮೀ! ನೀನು ದಾನವರ ವಧೆಗಾಗಿ ಅಲಕ್ಷ್ಮಿಯ ರೂಪಧಾರಣೆ ಮಾಡಿದೆ.
ಸಾವಿತ್ರೀ ಚಾಪಿ ದೇವಾನಾಂ ಮಾತಾ ಮಂತ್ರಗಣಸ್ಯ ಚ ।
ಕನ್ಯಾನಾಂ ಬ್ರಹ್ಮಚರ್ಯತ್ವಂ ಸೌಭಾಗ್ಯಂ ಪ್ರಮದಾಸು ಚ ।। ೨-೫೮-೧೩
ಸಾವಿತ್ರೀ! ನೀನು ದೇವತೆಗಳ ಮತ್ತು ಮಂತ್ರಗಣದ ಮಾತೆ. ನೀನ? ಕನ್ಯೆಯರ ಬ್ರಹ್ಮಚರ್ಯ ಮತ್ತು ವಿವಾಹಿತರ ಸೌಭಾಗ್ಯವು.
ಅಂತರ್ವೇದೀ ಚ ಯಜ್ಞಾನಾಮೃತ್ವಿಜಾಂ ಚೈವ ದಕ್ಷಿಣಾ ।
ಕರ್ಷುಕಾಣಾಂ ಚ ಸೀತೇತಿ ಭೂತಾನಾಂ ಧರಣೀತಿ ಚ ।। ೨-೫೮-೧೪
ನೀನು ಯಜ್ಞಗಳ ಅಂತರ್ವೇದೀ ಮತ್ತು ಋತ್ವಿಜರ ದಕ್ಷಿಣೆ. ಕೃಷಿಕರ ನೇಗಿಲು ನೀನು ಮತ್ತು ಜೀವಿಗಳ ಧರಣಿಯು ನೀನು.
ಸಿದ್ಧಿಃ ಸಾಂಯಾತ್ರಿಕಾಣಾಂ ತು ವೇಲಾ ತ್ವಂ ಸಾಗರಸ್ಯ ಚ ।
ಯಕ್ಷಾಣಾಂ ಪ್ರಥಮಾ ಯಕ್ಷೀ ನಾಗಾನಾಂ ಸುರಸೇತಿ ಚ ।। ೨-೫೮-೧೫
ಹಡಗುಗಳಲ್ಲಿ ಪ್ರಯಾಣಿಸುವ ವರ್ತಕರ ಸಿದ್ಧಿಯು ನೀನು. ಸಾಗರದ ತೀರವು ನೀನು. ಯಕ್ಷರಲ್ಲಿ ಪ್ರಥಮ ಯಕ್ಷಿಯು ನೀನು ಮತ್ತು ನಾಗಗಳ ಮಾತೆ ಸುರಸಾ ನೀನು.
ಬ್ರಹ್ಮವಾದಿನ್ಯಥೋ ದೀಕ್ಷಾ ಶೋಭಾ ಚ ಪರಮಾ ತಥಾ ।
ಜ್ಯೋತಿಷಾಂ ತ್ವಂ ಪ್ರಭಾ ದೇವಿ ನಕ್ಷತ್ರಾಣಾಂ ಚ ರೋಹಿಣೀ ।। ೨-೫೮-೧೬
ನೀನು ಬ್ರಹ್ಮವಾದಿನೀ ದೀಕ್ಷಾ ಮತ್ತು ಪರಮ ಶೋಭನೆ. ನಕ್ಷತ್ರಗಳ ಪ್ರಭೆಯು ನೀನು ಮತ್ತು ನಕ್ಷತ್ರಗಳಲ್ಲಿ ನೀನು ರೋಹಿಣೀ.
ರಾಜದ್ವಾರೇಷು ತೀರ್ಥೇಷು ನದೀನಾಂ ಸಂಗಮೇಷು ಚ ।
ಪೂರ್ಣಾ ಚ ಪೂರ್ಣಿಮಾ ಚಂದ್ರೇ ಕೃತ್ತಿವಾಸಾ ಇತಿ ಸ್ಮೃತಾ ।। ೨-೫೮-೧೭
ರಾಜದ್ವಾರಗಳಲ್ಲಿ, ತೀರ್ಥಕ್ಷೇತ್ರಗಳಲ್ಲಿ ಮತ್ತು ನದಿಗಳ ಸಂಗಮಗಳಲ್ಲಿರುವ ಪೂರ್ಣ ಲಕ್ಷ್ಮಿಯು ನೀನು. ಚಂದ್ರನ ಪೂರ್ಣಿಮೆಯು ನೀನು ಮತ್ತು ನಿನ್ನನ್ನು ಕೃತ್ತಿವಾಸಾ ಎಂದು ಕರೆಯುತ್ತಾರೆ.
ಸರಸ್ವತೀ ಚ ವಾಲ್ಮೀಕೇ ಸ್ಮೃತಿರ್ದ್ವೈಪಾಯನೇ ತಥಾ ।
ಋಷೀಣಾಂ ಧರ್ಮಬುದ್ಧಿಸ್ತು ದೇವಾನಾಂ ಮಾನಸೀ ತಥಾ ।
ಸುರಾ ದೇವೀ ಚ ಭೂತೇಷು ಸ್ತೂಯಸೇ ತ್ವಂ ಸ್ವಕರ್ಮಭಿಃ ।। ೨-೫೮-೧೮
ವಾಲ್ಮೀಕಿಯಲ್ಲಿರುವ ಸರಸ್ವತಿಯು ನೀನು. ದ್ವೈಪಾಯನನಲ್ಲಿರುವ ಸ್ಮೃತಿಯು ನೀನು. ಋಷಿಗಳ ಧರ್ಮಬುದ್ಧಿಯು ಮತ್ತು ದೇವತೆಗಳ ಮಾನಸಿಯು ನೀನು. ಭೂತಗಳಲ್ಲಿ ನೀನು ಸುರಾದೇವೀ. ನಿನ್ನ ಕರ್ಮಗಳಿಂದ ನೀನು ಸ್ತುತಿಸಲ್ಪಡುತ್ತೀಯೆ.
ಇಂದ್ರಸ್ಯ ಚಾರುದೃಷ್ಟಿಸ್ತ್ವಂ ಸಹಸ್ರನಯನೇತಿ ಚ ।
ತಾಪಸಾನಾಂ ಚ ದೇವೀ ತ್ವಮರಣೀ ಚಾಗ್ನಿಹೋತ್ರಿಣಾಮ್ ।। ೨-೫೮-೧೯
ಇಂದ್ರನ ಮನೋಹರ ದೃಷ್ಟಿಯು ನೀನು. ಸಹಸ್ರನಯನಳೂ ನೀನು. ತಾಪಸಿಗಳ ದೇವಿಯು ನೀನು ಮತ್ತು ಅಗ್ನಿಹೋತ್ರಿಗಳ ಅರಣಿಯು ನೀನು.
ಕ್ಷುಧಾ ಚ ಸರ್ವಭೂತಾನಾಂ ತೃಪ್ತಿಸ್ತ್ವಂ ದೈವತೇಷು ಚ ।
ಸ್ವಾಹಾ ತೃಪ್ತಿರ್ಧೃತಿರ್ಮೇಧಾ ವಸೂನಾಂ ತ್ವಂ ವಸೂಮತೀ ।। ೨-೫೮-೨೦
ನೀನು ಸರ್ವಭೂತಗಳ ಹಸಿವೆ ಮತ್ತು ಸರ್ವ ದೇವತೆಗಳ ತೃಪ್ತಿಯೂ ನೀನೇ. ನೀನೇ ಸ್ವಾಹಾ, ತೃಪ್ತಿ, ಧೃತಿ ಮತ್ತು ಮೇಧಾ. ವಸುಗಳ ವಸೂಮತಿಯೂ ನೀನೇ.
ಆಶಾ ತ್ವಂ ಮಾನುಷಾಣಾಂ ಚ ಪುಷ್ಟಿಶ್ಚ ಕೃತಕರ್ಮಣಾಮ್ ।
ದಿಶಶ್ಚ ವಿದಿಶಶ್ಚೈವ ತಥಾ ಹ್ಯಗ್ನಿಶಿಖಾ ಪ್ರಭಾ ।। ೨-೫೮-೨೧
ಮನುಷ್ಯರ ಆಶಾ ನೀನು. ಕೃತಕರ್ಮಿಗಳ ಪುಷ್ಟಿಯು ನೀನು. ದಿಕ್ಕುಗಳು, ಉಪದಿಕ್ಕುಗಳು, ಅಗ್ನಿಶಿಖಾ ಮತ್ತು ಪ್ರಭೆಯು ನೀನು.
ಶಕುನೀ ಪೂತನಾ ತ್ವಂ ಚ ರೇವತೀ ಚ ಸುದಾರುಣಾ ।
ನಿದ್ರಾಪಿ ಸರ್ವಭೂತಾನಾಂ ಮೋಹಿನೀ ಕ್ಷತ್ರಿಯಾ ತಥಾ ।। ೨-೫೮-೨೨
ನೀನು ಶಕುನೀ, ಪೂತನಾ ಮತ್ತು ಸುದಾರುಣ ರೇವತೀ. ಸರ್ವಭೂತಗಳನ್ನೂ ಮೋಹಗೊಳಿಸುವ ನಿದ್ರೆಯೂ ನೀನು. ನೀನು ಕ್ಷತ್ರಿಯಾ.
ವಿದ್ಯಾನಾಂ ಬ್ರಹ್ಮವಿದ್ಯಾ ತ್ವಮೋಂಕಾರೋಽಥ ವಷಟ್ ತಥಾ ।
ನಾರೀಣಾಂ ಪಾರ್ವತೀಂ ಚ ತ್ವಾಂ ಪೌರಾಣೀಮೃಷಯೋ ವಿದುಃ ।। ೨-೫೮-೨೩
ವಿದ್ಯೆಗಳಲ್ಲಿ ನೀನು ಬ್ರಹ್ಮವಿದ್ಯಾ. ನೀನು ಓಂಕಾರ ಮತ್ತು ವಷಟ್ಕಾರ. ಪುರಾಣಜ್ಞ ಋಷಿಗಳು ನಿನ್ನನ್ನು ನಾರಿಯರಲ್ಲಿ ಪಾರ್ವತಿಯೆಂದು ತಿಳಿದಿರುತ್ತರೆ.
ಅರೂಂಧತೀ ಚ ಸಾಧ್ವೀನಾಂ ಪ್ರಜಾಪತಿವಚೋ ಯಥಾ ಯಥಾರ್ಥನಾಮಭಿರ್ದಿವ್ಯೈರಿಂದ್ರಾಣೀ ಚೇತಿ ವಿಶ್ರುತಾ ।। ೨-೫೮-೨೪
ಪ್ರಜಾಪತಿಯು ಹೇಳಿದಂತೆ ಸಾಧ್ವಿಯರಲ್ಲಿ ಅರುಂಧತಿಯು ನೀನು. ನಿನ್ನ ಯಥಾರ್ಥನಾಮವಾದ ಇಂದ್ರಾಣಿ ಎಂದು ನೀನು ವಿಶ್ರುತಳಾಗಿರುವೆ.
ತ್ವಯಾ ವ್ಯಾಪ್ತಮಿದಂ ಸರ್ವಂ ಜಗತ್ಸ್ಥಾವರಜಂಗಮಮ್ ।
ಸಂಗ್ರಾಮೇಷು ಚ ಸರ್ವೇಷು ಅಗ್ನಿಪ್ರಜ್ವಲಿತೇಷು ಚ ।
ನದೀತೀರೇಷು ಚೌರೇಷು ಕಾಂತಾರೇಷು ಭಯೇಷು ಚ ।। ೨-೫೮-೨೫
ಪ್ರವಾಸೇ ರಾಜಬಂಧೇ ಚ ಶತ್ರೂಣಾಂ ಚ ಪ್ರಮರ್ದನೇ ।
ಪ್ರಾಣಾತ್ಯಯೇಷು ಸರ್ವೇಷು ತ್ವಂ ಹಿ ರಕ್ಷಾ ನ ಸಂಶಯಃ ।। ೨-೫೮-೨೬
ಸ್ಥಾವರಜಂಗಮ ಯುಕ್ತವಾದ ಈ ಸರ್ವ ಜಗತ್ತನ್ನೂ ನೀನು ವ್ಯಾಪಿಸಿರುವೆ. ಸರ್ವ ಸಂಗ್ರಾಮಗಳಲ್ಲಿ, ಅಗ್ನಿಯು ಪ್ರಜ್ವಲಿಸುತ್ತಿರುವಲ್ಲಿ, ನದೀತೀರಗಳಲ್ಲಿ, ಕಳ್ಳರಿರುವಲ್ಲಿ, ಕಾಂತಾರಗಳಲ್ಲಿ, ಭಯೋತ್ಪಾದಕ ಪರಿಸ್ಥಿತಿಗಳಲ್ಲಿ, ಪ್ರವಾಸದಲ್ಲಿ, ರಾಜಬಂಧನದಲ್ಲಿ, ಶತ್ರುಗಳನ್ನು ಮರ್ದಿಸುವಾಗ ಮತ್ತು ಸರ್ವ ಪ್ರಾಣಸಂಕಟಗಳಲ್ಲಿ ನೀನು ರಕ್ಷಿಸುತ್ತೀಯೆ ಎನ್ನುವುದರಲ್ಲಿ ಸಂಶಯವಿಲ್ಲ.
ತ್ವಯಿ ಮೇ ಹೃದಯಂ ದೇವಿ ತ್ವಯಿ ಚಿತ್ತಂ ಮನಸ್ತ್ವಯಿ ।
ರಕ್ಷ ಮಾಂ ಸರ್ವಪಾಪೇಭ್ಯಃ ಪ್ರಸಾದಂ ಕರ್ತುಮರ್ಹಸಿ ।। ೨-೫೮-೨೭
ನನ್ನ ಹೃದಯವು ನಿನ್ನದು. ದೇವೀ! ಚಿತ್ತವು ನಿನ್ನದು. ಮನಸ್ಸು ನಿನ್ನದು. ಸರ್ವಪಾಪಗಳಿಂದ ನನ್ನನ್ನು ರಕ್ಷಿಸಿ ಕರುಣೆ ತೋರಿಸಬೇಕು.
ಇಮಂ ಯಃ ಸುಸ್ತವಂ ದಿವ್ಯಮಿತಿ ವ್ಯಾಸಪ್ರಕಲ್ಪಿತಮ್ ।
ಯಃ ಪಠೇತ್ಪ್ರಾತರುತ್ಥಾಯ ಶುಚಿಃ ಪ್ರಯತಮಾನಸಃ ।। ೨-೫೮-೨೮
ತ್ರಿಭಿರ್ಮಾಸೈಃ ಕಾಂಕ್ಷಿತಂ ಚ ಫಲಂ ವೈ ಸಂಪ್ರಯಚ್ಛಸಿ ।
ಷಡ್ಭಿರ್ಮಾಸೈರ್ವರಿಷ್ಠಂ ತು ವರಮೇಕಂ ಪ್ರಯಚ್ಛಸಿ ।। ೨-೫೮-೨೯
ಹೀಗೆ ವ್ಯಾಸನು ಕಲ್ಪಿಸಿರುವ ನನ್ನ ಈ ದಿವ್ಯ ಸುಸ್ತವವನ್ನು ಪ್ರಾತಃ ಎದ್ದು ಶುಚಿಯಾಗಿ ಪ್ರಯತಮಾನಸನಾಗಿ ಪಠಿಸುವವನಿಗೆ ಮೂರು ಮಾಸಗಳಲ್ಲಿ ಕಾಂಕ್ಷಿತ ಫಲವನ್ನು ನೀಡುತ್ತೀಯೆ. ಆರು ಮಾಸಗಳಲ್ಲಿ ಅವನಿಗೆ ವರಿಷ್ಠ ವರವೊಂದನ್ನು ನೀಡುತ್ತೀಯೆ.
ಅರ್ಚಿತಾ ತು ತ್ರಿಭಿರ್ಮಾಸೈರ್ದಿವ್ಯಂ ಚಕ್ಷುಃ ಪ್ರಯಚ್ಛಸಿ ।
ಸಂವತ್ಸರೇಣ ಸಿದ್ಧಿಂ ತು ಯಥಾಕಾಮಂ ಪ್ರಯಚ್ಛಸಿ ।। ೨-೫೮-೩೦
ಮುರು ಮಾಸಗಳು ನಿನ್ನನ್ನು ಅರ್ಚಿಸಿದರೆ ದಿವ್ಯ ಚಕ್ಷುವನ್ನು ನೀಡುತ್ತೀಯೆ. ಒಂದು ಸಂವತ್ಸರದಲ್ಲಿ ಬಯಸಿದ ಸಿದ್ಧಿಯನ್ನು ನೀಡುತ್ತೀಯೆ.
ಸತ್ಯಂ ಬ್ರಹ್ಮ ಚ ದಿವ್ಯಂ ಚ ದ್ವೈಪಾಯನವಚೋ ಯಥಾ ।
ನೃಣಾಂ ಬಂಧಂ ವಧಂ ಘೋರಂ ಪುತ್ರನಾಶಂ ಧನಕ್ಷಯಮ್ ।। ೨-೫೮-೩೧
ವ್ಯಾಧಿಮೃತ್ಯುಭಯಂ ಚೈವ ಪೂಜಿತಾ ಶಮಯಿಷ್ಯಸಿ ।
ಭವಿಷ್ಯಸಿ ಮಹಾಭಾಗೇ ವರದಾ ಕಾಮರೂಪಿಣೀ ।। ೨-೫೮-೩೨
ದ್ವೈಪಾಯನನ ವಚನದಂತೆ ನೀನು ಸತ್ಯ ಮತ್ತು ದಿವ್ಯ ಬ್ರಹ್ಮ. ಪೂಜಿತಳಾದ ನೀನು ಮನುಷ್ಯರ ವಂಧನ, ಘೋರ ವಧೆ, ಪುತ್ರನಾಶ, ಧನಕ್ಷಯ, ವ್ಯಾಧಿ-ಮೃತ್ಯುಭಯವನ್ನು ಹೋಗಲಾಡಿಸುತ್ತೀಯೆ. ಮಹಾಭಾಗೇ! ಕಾಮರೂಪಿಣೀ! ನೀನು ವರವನ್ನು ನೀಡುತ್ತೀಯೆ.
ಮೋಹಯಿತ್ವಾ ಚ ತಂ ಕಂಸಮೇಕಾ ತ್ವಂ ಭೋಕ್ಷ್ಯಸೇ ಜಗತ್ ।
ಅಹಮಪ್ಯಾತ್ಮನೋ ವೃತ್ತಿಂ ವಿಧಾಸ್ಯೇ ಗೋಷು ಗೋಪವತ್ ।
ಸ್ವವೃದ್ಧ್ಯರ್ಥಮಹಂ ಚೈವ ಕರಿಷ್ಯೇ ಕಂಸಗೋಪತಾಮ್ ।। ೨-೫೮-೩೩
ಕಂಸನನ್ನು ನೀನು ಮೋಹವಶನನ್ನಾಗಿಸಿ ಓರ್ವಳೇ ಜಗತ್ತನ್ನು ಭೋಗಿಸುತ್ತೀಯೆ. ನಾನೂ ಕೂಡ ನನ್ನನ್ನು ಗೋವುಗಳ ಮಧ್ಯೆ ಗೋಪಾನಕನ ವೃತ್ತಿಯಲ್ಲಿ ತೊಡಗಿಸಿಕೊಳ್ಳುತ್ತೇನೆ. ನನ್ನ ವೃದ್ಧಿಗಾಗಿ ನಾನು ಕಂಸನ ಗೋಪಾಲಕನಾಗುತ್ತೇನೆ.”
ಏವಂ ತಾಂ ಸ ಸಮಾದಿಶ್ಯ ಗತೋಽಂತರ್ಧಾನಮೀಶ್ವರಃ ।
ಸಾ ಚಾಪಿ ತಂ ನಮಸ್ಕೃತ್ಯ ತಥಾಸ್ತ್ವಿತಿ ಚ ನಿಶ್ಚಿತಾ ।। ೨-೫೮-೩೪
ಹೀಗೆ ಅವಳಿಗೆ ಆದೇಶವನ್ನಿತ್ತು ಆ ಈಶ್ವರನು ಅಂತರ್ಧಾನನಾದನು. ಅವಳೂ ಕೂಡ ಅವನಿಗೆ ನಮಸ್ಕರಿಸಿ ಹಾಗೆ ಮಾಡಲು ನಿಶ್ಚಯಿಸಿದಳು.
ಯಶ್ಚೈತತ್ಪಠತೇ ಸ್ತೋತ್ರಂ ಶೃಣುಯಾದ್ವಾಪ್ಯಭೀಕ್ಷ್ಣಶಃ ।
ಸರ್ವಾರ್ಥಸಿದ್ಧಿಂ ಲಭತೇ ನರೋ ನಾಸ್ತ್ಯತ್ರ ಸಂಶಯಃ ।। ೨-೫೮-೩೫
ಈ ಸ್ತೋತ್ರವನ್ನು ಪಠಿಸುವ ಮತ್ತು ಕೇಳುವ ನರನು ಬಯಸಿದ ಎಲ್ಲ ಮನೋರಥಗಳನ್ನೂ ಪಡೆದುಕೊಳ್ಳುತ್ತಾನೆ. ಇದರಲ್ಲಿ ಸಂಶಯವಿಲ್ಲ.”
ಸಮಾಪ್ತಿ
ಇತಿ ಶ್ರಿಮಹಾಭಾರತೇ ಖಿಲೇಷು ಹರಿವಂಶೇ ವಿಷ್ಣುಪರ್ವಣಿ ಸ್ವಪ್ನಗರ್ಭವಿಧಾನೇ ಆರ್ಯಾಸ್ತುತೌ ಅಷ್ಟಪಂಚಾಶತ್ತಮೋಽಧ್ಯಾಯಃ
-
ಕುಮಾರ, ಕಾರ್ತಿಕೇಯ. ↩︎