ಪ್ರವೇಶ
।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।
ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ
ಶ್ರೀ ಮಹಾಭಾರತ
ಖಿಲಭಾಗೇ ಹರಿವಂಶಃ
ವಿಷ್ಣು ಪರ್ವ
ಅಧ್ಯಾಯ 57
ಸಾರ
ಕಂಸನು ದೇವಕಿಯ ಗರ್ಭವನ್ನು ವಿನಾಶಗೊಳಿಸಲು ಪ್ರಯತ್ನಿಸಿದುದು; ಭಗವಾನ್ ವಿಷ್ಣುವು ಪಾತಾಲಲೋಕದಲ್ಲಿದ್ದ ಷಡ್ಗರ್ಭ ಎಂಬ ಹೆಸರಿನ ದೈತ್ಯರ ಜೀವಗಳನ್ನು ಆಕರ್ಷಿಸಿ ಅವರನ್ನು ನಿದ್ರಾ ದೇವಿಯ ಕೈಯಲ್ಲಿ ಕೊಟ್ಟು ದೇವಕಿಯ ಗರ್ಭದಲ್ಲಿ ಅವರನ್ನು ಕ್ರಮಶಃ ಸ್ಥಾಪಿತಗೊಳಿಸಲು ಆದೇಶವನ್ನಿತ್ತಿದುದು.
ವೈಶಂಪಾಯನ ಉವಾಚ।
ಸೋಽಜ್ಞಾಪಯತ ಸಂರಬ್ಧಃ ಸಚಿವಾನಾತ್ಮನೋ ಹಿತಾನ್ ।
ಯತ್ತಾ ಭವತ ಸರ್ವೇ ವೈ ದೇವಕ್ಯಾ ಗರ್ಭಕೃಂತನೇ ।। ೨-೫೭-೧
ವೈಶಂಪಾಯನನು ಹೇಳಿದನು: “ಕ್ರೋಧಾವಿಷ್ಟನಾದ ಕಂಸನು ತನ್ನ ಹಿತೈಷೀ ಸಚಿವರಿಗೆ “ನೀವೆಲ್ಲರೂ ದೇವಕಿಯ ಗರ್ಭವನ್ನು ಕತ್ತರಿಸಲು ಪ್ರಯತ್ನಿಸಿ!” ಎಂದು ಆಜ್ಞಾಪಿಸಿದನು.
ಪ್ರಥಮಾದೇವ ಹಂತವ್ಯಾ ಗರ್ಭಾಸ್ತೇ ಸಪ್ತ ಏವ ಹಿ ।
ಮೂಲಾದೇವ ತು ಹಂತವ್ಯಃ ಸೋಽನರ್ಥೋ ಯತ್ರ ಸಂಶಯಃ ।। ೨-೫೭-೨
“ಮೊದಲನೆಯ ಗರ್ಭದಿಂದ ಪ್ರಾರಂಭಿಸಿ ಏಳೂ ಗರ್ಭಗಳನ್ನೂ ನಷ್ಟಗೊಳಿಸಿ. ಎಲ್ಲಿ ಸಂಶಯವಿದೆಯೋ ಆ ಅನರ್ಥವನ್ನು ಮೂಲದಲ್ಲಿಯೇ ನಾಶಗೊಳಿಸಬೇಕು.
ದೇವಕೀ ಚ ಗೃಹೇ ಗುಪ್ತಾ ಪ್ರಚ್ಛನ್ನೈರಭಿರಕ್ಷಿತಾ ।
ಸ್ವೈರಂ ಚರತು ವಿಶ್ರಬ್ಧಾ ಗರ್ಭಕಾಲೇ ತು ರಕ್ಷ್ಯತಾಮ್ ।। ೨-೫೭-೩
ದೇವಕಿಯು ತನ್ನ ಮನೆಯಲ್ಲಿ ಸ್ವಚ್ಛಂದವಾಗಿರಲಿ ಆದರೆ ಗುಪ್ತ ಸೈನಿಕರ ರಕ್ಷಣೆಯೊಳಗಿರಲಿ. ಆದರೆ ಅವಳ ಗರ್ಭದ ಸಮಯದಲ್ಲಿ ವಿಶೇಷ ನಿಯಂತ್ರಣಗಳಂದಿ ಅವರನ್ನು ರಕ್ಷಿಸಬೇಕು.
ಮಾಸಾನ್ವೈ ಪುಷ್ಪಮಾಸಾದೀನ್ಗಣಯಂತು ಮಮ ಸ್ತ್ರಿಯಃ ।
ಪರಿಣಾಮೇ ತು ಗರ್ಭಸ್ಯ ಶೇಷಂ ಜ್ಞಾಸ್ಯಾಮಹೇ ವಯಮ್ ।। ೨-೫೭-೪
ನನ್ನ ಸ್ತ್ರೀಯರು ಅವಳ ಮುಟ್ಟಿನಿಂದ ಪ್ರಾರಂಭಿಸಿ ಗರ್ಭದ ಮಾಸಗಳನ್ನು ಎಣಿಸುತ್ತಿರಲಿ. ಗರ್ಭವು ಪರಿಪಕ್ವವಾಗಿ ಪ್ರಕಟವಾದಾಗ ಉಳಿದ ಕಾರ್ಯಗಳೇನೆಂದು ನಾವು ಸ್ವಯಂ ಅರ್ಥಮಾಡಿಕೊಳ್ಳುತ್ತೇವೆ.
ವಸುದೇವಸ್ತು ಸಂರಕ್ಷ್ಯಃ ಸ್ತ್ರೀಸನಾಥಾಸು ಭೂಮಿಷು ।
ಅಪ್ರಮತ್ತೈರ್ಮಮ ಹಿತೈ ರಾತ್ರಾವಹನಿ ಚೈವ ಹಿ ।
ಸ್ತ್ರೀಭಿರ್ವರ್ಷವರೈಶ್ಚೈವ ವಕ್ತವ್ಯಂ ನ ತು ಕಾರಣಮ್ ।। ೨-೫೭-೫
ವಸುದೇವನನ್ನಾದರೋ ಅವನ ಅಂತಃಪುರದ ಸ್ತ್ರೀಯರೊಂದಿಗೆ ನನ್ನ ಹಿತೈಷಿಗಳು ಜಾಗರೂಕತೆಯಿಂದ ಹಗಲು ರಾತ್ರಿ ಚೆನ್ನಾಗಿ ರಕ್ಷಿಸುತ್ತಿರಲಿ. ಸ್ತ್ರೀಯರು ಮತ್ತು ಕಿನ್ನರರೂ ಕೂಡ ಅವನ ಮೇಲೆ, ಅವನಿಗೆ ತಿಳಿಯದಂತೆ, ಕಡು ದೃಷ್ಟಿಯನ್ನಿಟ್ಟಿರಲಿ.
ಏಷ ಮಾನುಷ್ಯಕೋ ಯತ್ನೋ ಮಾನುಷೈರೇವ ಸಾಧ್ಯತೇ ।
ಶ್ರೂಯತಾಂ ಯೇನ ದೈವಂ ಹಿ ಮದ್ವಿಧೈಃ ಪ್ರತಿಹನ್ಯತೇ ।। ೨-೫೭-೬
ಈ ರೀತಿಯ ಮಾನುಷ್ಯಕ ಯತ್ನವು ಮನುಷ್ಯನಿಂದ ಮಾತ್ರ ಸಾಧ್ಯವಿದೆ. ನನ್ನಂಥವನು ದೈವವನ್ನೇ ಹೇಗೆ ನಿಷ್ಫಲವಾಗಿಸುತ್ತದೆ ಎನ್ನುವುದನ್ನು ಕೇಳಿ.
ಮಂತ್ರಗ್ರಾಮೈಃ ಸುವಿಹಿತೈರೌಷಧೈಶ್ಚ ಸುಯೋಜಿತೈಃ ।
ಯತ್ನೇನ ಚಾನುಕೂಲೇನ ದೈವಮಪ್ಯನುಲೋಮ್ಯತೇ ।। ೨-೫೭-೭
ಸುವಿಹಿತ ಮಂತ್ರಜಪಗಳಿಂದ, ಸುಯೋಜಿತ ಔಷಧಿಗಳಿಂದ ಮತ್ತು ಅನುಕೂಲ ಪ್ರಯತ್ನಗಳಿಂದ ದೈವವು ನಮ್ಮ ಪರವಾಗಿರುವಂತೆ ಮಾಡಬಹುದು.””
ವೈಶಂಪಾಯನ ಉವಾಚ।
ಏವಂ ಸ ಯತ್ನವಾನ್ಕಂಸೋ ದೇವಕೀಗರ್ಭಕೃಂತನೇ ।
ಭಯೇನ ಮಂತ್ರಯಾಮಾಸ ಶ್ರುತಾರ್ಥೋ ನಾರದಾತ್ಸ ವೈ ।। ೨-೫೭-೮
ವೈಶಂಪಾಯನನು ಹೇಳಿದನು: “ಹೀಗೆ ಕಂಸನು ದೇವಕಿಯ ಗರ್ಭವನ್ನು ನಾಶಗೊಳಿಸಲು ಯತ್ನಿಸಿದನು. ನಾರದನಿಂದ ಎಲ್ಲವನ್ನೂ ಕೇಳಿ ಭಗಹೊಂಡಿದ್ದ ಅವನು ಮಂತ್ರಿಗಳೊಡನೆ ಸಮಾಲೋಚನೆ ಮಾಡತೊಡಗಿದನು.
ಏವಂ ಶ್ರುತ್ವಾ ಪ್ರಯತ್ನಂ ವೈ ಕಂಸಸ್ಯಾರಿಷ್ಟಸಂಜ್ಞಿತಮ್ ।
ಅಂತರ್ಧಾನಂ ಗತೋ ವಿಷ್ಣೂಶ್ಚಿಂತಯಾಮಾಸ ವೀರ್ಯವಾನ್ ।। ೨-೫೭-೯
ಅರಿಷ್ಟಸೂಚಕವಾದ ಕಂಸನ ಆ ಪ್ರಯತ್ನವನ್ನು ಕೇಳಿ ಅಂತರ್ಧಾನನಾಗಿದ್ದ ವೀರ್ಯವಾನ್ ವಿಷ್ಣುವು ಈ ರೀತಿ ಆಲೋಚಿಸಿದನು:
ಸಪ್ತೇಮಾಂದೇವಕೀಗರ್ಭಾನ್ಭೋಜಪುತ್ರೋ ವಧಿಷ್ಯತಿ ।
ಅಷ್ಟಮೇ ಚ ಮಯಾ ಗರ್ಭೇ ಕಾರ್ಯಮಾಧಾನಮಾತ್ಮನಃ ।। ೨-೫೭-೧೦
“ದೇವಕಿಯ ಏಳು ಗರ್ಭಗಳನ್ನು ಈ ಭೋಜಪುತ್ರ ಕಂಸನು ವಧಿಸುತ್ತಾನೆ. ಎಂಟನೆಯ ಗರ್ಭದಲ್ಲಿ ನಾನು ನನ್ನನ್ನು ಅಲ್ಲಿರಿಸಿಕೊಳ್ಳುವ ಕಾರ್ಯವಾಗಬೇಕು.”
ತಸ್ಯ ಚಿಂತಯತಸ್ತ್ವೇವಂ ಪಾತಾಲಮಗಮನ್ಮನಃ ।
ಯತ್ರ ತೇ ಗರ್ಭಶಯನಾಃ ಶಡ್ಗರ್ಭಾ ನಾಮ ದಾನವಾಃ ।। ೨-೫೭-೧೧
ಹಾಗೆ ಯೋಚಿಸುತ್ತಿರುವಾಗಲೇ ಅವನ ಮನವು ಶಡ್ಗರ್ಭಾ ಎಂಬ ಹೆಸರಿನ ಗರ್ಭಶಯನ ದಾನವರಿರುವ ಪಾತಾಲಕ್ಕೆ ಹೋಯಿತು.
ವಿಕ್ರಾಂತವಪುಷೋ ದೀಪ್ತಾಸ್ತೇಽಮೃತಪ್ರಾಶನೋಪಮಾಃ ।
ಅಮರಪ್ರತಿಮಾ ಯುದ್ಧೇ ಪುತ್ರಾ ವೈ ಕಾಲನೇಮಿನಃ ।। ೨-೫೭-೧೨
ಶರೀರದಲ್ಲಿ ವಿಕ್ರಾಂತರಾಗಿದ್ದ, ಅಮೃತವನ್ನು ಕುಡಿದ ಅಮರರಂತೆ ತೇಜಸ್ವಿಗಳಾಗಿದ್ದ, ಯುದ್ಧದಲ್ಲಿ ಅಮರಪ್ರತಿಮರಾಗಿದ್ದ ಅವರು ಕಾಲನೇಮಿಯ ಪುತ್ರರಾಗಿದ್ದರು.
ತೇ ತಾತತಾತಂ ಸಂತ್ಯಜ್ಯ ಹಿರಣ್ಯಕಶಿಪುಂ ಪುರಾ ।
ಉಪಾಸಾಂಚಕ್ರಿರೇ ದೈತ್ಯಾಃ ಪುರಾ ಲೋಕಪಿತಾಮಹಮ್ ।। ೨-೫೭-೧೩
ಹಿಂದೆ ಆ ದೈತ್ಯರು ತಮ್ಮ ತಂದೆಯ ತಂದೆ ಹಿರಣ್ಯಕಶಿಪುವನ್ನು ತೊರೆದು ಲೋಕಪಿತಾಮಹ ಬ್ರಹ್ಮನ ಉಪಾಸನೆ ಮಾಡತೊಡಗಿದರು.
ತಪ್ಯಮಾನಾಸ್ತಪಸ್ತೀವ್ರಂ ಜಟಾಮಂಡಲಧಾರಿಣಃ ।
ತೇಷಾಂ ಪ್ರೀತೋಽಭವದ್ಬ್ರಹ್ಮಾ ಷಡ್ಗರ್ಭಾಣಾಂ ವರಂ ದದೌ ।। ೨-೫೭-೧೪
ಜಟಾಮಂಡಲಧಾರಿಗಳಾಗಿ ತೀವ್ರ ತಪಸ್ಸಿನಿಂದ ಪ್ರಜ್ವಲಿಸುತ್ತಿದ್ದ ಅವರಿಂದ ಪ್ರೀತನಾದ ಬ್ರಹ್ಮನು ಷಡ್ಗರ್ಭರಿಗೆ ವರವನ್ನಿತ್ತನು.
ಬ್ರಹ್ಮೋವಾಚ।
ಭೋ ಭೋ ದಾನವಶಾರ್ದೂಲಾಸ್ತಪಸಾಹಂ ಸುತೋಷಿತಃ ।
ಬ್ರೂತ ವೋ ಯಸ್ಯ ಯಃ ಕಾಮಸ್ತಸ್ಯ ತಂ ತಂ ಕರೋಮ್ಯಹಮ್ ।। ೨-೫೭-೧೫
ಬ್ರಹ್ಮನು ಹೇಳಿದನು: “ಭೋ! ಭೋ! ದಾನವಶಾರ್ದೂಲರೇ! ತಪಸ್ಸಿನಿಂದ ಸಂತೋಷಗೊಂಡಿದ್ದೇನೆ. ನೀವು ಯಾವ ಕಾಮನೆಯಿಂದ ತಪಸ್ಸು ಮಾಡುತ್ತಿದ್ದೀರಿ ಹೇಳಿ. ಅದನ್ನೇ ನಾನು ಪೂರೈಸುತ್ತೇನೆ.”
ತೇ ತು ಸರ್ವೇ ಸಮಾನಾರ್ಥಾ ದೈತ್ಯಾ ಬ್ರಹ್ಮಾಣಮಬ್ರುವನ್ ।
ಯದಿ ನೋ ಭಗವಾನ್ಪ್ರೀತೋ ದೀಯತಾಂ ನೋ ವರೋ ವರಃ ।। ೨-೫೭-೧೬
ಆ ಎಲ್ಲ ದೈತ್ಯರ ಉದ್ದೇಶವೂ ಸಮನಾಗಿತ್ತು. ಅವರು ಬ್ರಹ್ಮಣನಿಗೆ ಹೇಳಿದರು: “ಭಗವಾನ್! ನೀನು ಪಿತನಾಗಿದ್ದರೆ ನಮಗೆ ಈ ಶ್ರೇಷ್ಠ ವರವನ್ನು ನೀಡಬೇಕು.
ಅವಧ್ಯಾಃ ಸ್ಯಾಮ ಭಗವಂದೇವತೈಃ ಸಮಹೋರಗೈಃ ।
ಶಾಪಪ್ರಹರಣೈಶ್ಚೈವಂ ಸ್ವಸ್ತಿ ನೋಽಸ್ತು ಮಹರ್ಷಿಭಿಃ ।। ೨-೫೭-೧೭
ಭಗವನ್! ಮಹೋರಗಗಳನ್ನೂ ಸೇರಿ ದೇವತೆಗಳಿಂದ ನಾವು ಅವಧ್ಯರಾಗಲಿ. ಶಾಪವನ್ನು ಪ್ರಯೋಗಿಸುವ ಮಹರ್ಷಿಗಳಿಂದಲೂ ನಮಗೆ ಮಂಗಳವೇ ಆಗಲಿ.
ಯಕ್ಷಗಂಧರ್ವಪತಿಭಿಸ್ಸಿದ್ಧಚಾರಣಮಾನವೈಃ ।
ಮಾ ಭೂದ್ವಧೋ ನೋ ಭಗವಂದದಾಸಿ ಯದಿ ನೋ ವರಮ್ ।। ೨-೫೭-೧೮
ಭಗವನ್! ನಮಗೆ ವರವನ್ನು ನೀಡುವೆಯಾದರೆ ಯಕ್ಷ-ಗಂಧರ್ವರ ಒಡೆಯನಿಂದಲೂ, ಸಿದ್ಧ-ಚಾರಣ-ಮಾನವರಿಂದಲೂ ನಮ್ಮ ವಧೆಯಾಗದಿರಲಿ.”
ತಾನುವಾಚ ತತೋ ಬ್ರಹ್ಮಾ ಸುಪ್ರೀತೇನಾಂತರಾತ್ಮನಾ ।
ಭವದ್ಭಿರ್ಯದಿದಂ ಪ್ರೋಕ್ತಂ ಸರ್ವಮೇತದ್ಭವಿಷ್ಯತಿ ।। ೨-೫೭-೧೯
ಆಗ ಬ್ರಹ್ಮನು ಒಳಗಿಂದೊಳಗೇ ಪ್ರೀತನಾಗಿ ಅವರಿಗೆ ಹೇಳಿದನು: “ನೀವು ಹೇಳಿದ ಇವೆಲ್ಲವೂ ಹೀಗೆಯೇ ಆಗುತ್ತನೆ.”
ಷಡ್ಗರ್ಭಾಣಾಂ ವರಂ ದತ್ವಾ ಸ್ವಯಂಭೂಸ್ತ್ರಿದಿವಂ ಗತಃ ।
ತತೋ ಹಿರಣ್ಯಕಶಿಪುಃ ಸರೋಷೋ ವಾಕ್ಯಮಬ್ರವೀತ್ ।। ೨-೫೭-೨೦
ಷಡ್ಗರ್ಭರಿಗೆ ವರವನ್ನಿತ್ತು ಸ್ವಯಂಭುವು ದಿವಕ್ಕೆ ತೆರಳಿದನು. ಅನಂತರ ಹಿರಣ್ಯಕಶಿಪುವು ರೋಷಗೊಂಡು ಈ ಮಾತನ್ನಾಡಿದನು:
ಮಾಮುತ್ಸೃಜ್ಯ ವರೋ ಯಸ್ಮಾದ್ವೃತೋ ವಃ ಪದ್ಮಸಂಭವಾತ್ ।
ತಸ್ಮಾದ್ವಸ್ತ್ಯಾಜಿತಃ ಸ್ನೇಹಃ ಶತ್ರುಭೂತಾಂಸ್ತ್ಯಜಾಮ್ಯಹಮ್ ।। ೨-೫೭-೨೧
“ನೀವು ನನ್ನನ್ನು ಬಿಟ್ಟು ಪದ್ಮಸಂಬವನಿಂದ ವರವನ್ನು ಪಡೆದುಕೊಂಡಿರಿ. ಆದುದರಿಂದ ನೀವು ನನಗೆ ಶತ್ರುವಿನಂತೆಯೇ ಆಗಿದ್ದೀರಿ. ನಾನು ನಿಮ್ಮ ಸ್ನೇಹವನ್ನು ತೊರೆಯುತ್ತೇನೆ.
ಷಡ್ಗರ್ಭಾ ಇತಿ ಯೋಽಯಂ ವಃ ಶಬ್ದಃ ಪಿತ್ರಾಭಿವರ್ಧಿತಃ ।
ಸ ಏವ ವೋ ಗರ್ಭಗತಾನ್ಪಿತಾ ಸರ್ವಾನ್ವಧಿಷ್ಯತಿ ।। ೨-೫೭-೨೨
ಯಾವ ತಂದೆಯು ನಿಮಗೆ ಷಡ್ಗರ್ಭರು ಎಂಬ ಹೆಸರನ್ನಿತ್ತು ಬೆಳೆಸಿದನೋ ಅವನೇ ನೀವು ಗರ್ಭಾವಸ್ಥೆಯಲ್ಲಿರುವಾಗ ನಿಮ್ಮೆಲ್ಲರನ್ನೂ ವಧಿಸುತ್ತಾನೆ.
ಷಡೇವ ದೇವಕೀಗರ್ಭಾಃ ಶಡ್ಗರ್ಭಾ ವೈ ಮಹಾಸುರಾಃ ।
ಭವಿಷ್ಯಥ ತತಃ ಕಂಸೋ ಗರ್ಭಸ್ಥಾನ್ವೋ ವಧಿಷ್ಯತಿ ।। ೨-೫೭-೨೩
ನೀವು ಆರು ಷಡ್ಗರ್ಭ ಮಹಾಸುರರೂ ದೇವಕಿಯ ಗರ್ಭದಲ್ಲಿ ನೆಲೆಸುತ್ತೀರಿ. ನೀವು ಗರ್ಭವಾಸಿಗಳಾಗಿರುವಾಗಲೇ ಕಂಸನು ನಿಮ್ಮನ್ನು ವಧಿಸುತ್ತಾನೆ.””
ವೈಶಂಪಾಯನ ಉವಾಚ।
ಜಗಾಮಾಥ ತತೋ ವಿಷ್ಣುಃ ಪಾತಾಲಂ ಯತ್ರ ತೇಽಸುರಾಃ ।
ಷಡ್ಗರ್ಭಾಃ ಸಂಯತಾಃ ಸಂತಿ ಜಲೇ ಗರ್ಭಗೃಹೇಶಯಾಃ ।। ೨-೫೭-೨೪
ವೈಶಂಪಾಯನನು ಹೇಳಿದನು: “ಆಗ ವಿಷ್ಣುವು ಆ ಅಸುರರಿದ್ದ ಪಾತಾಲಕ್ಕೆ ಹೋದನು. ಅಲ್ಲಿ ಷಡ್ಗರ್ಭರು ಸಂಯಮನಿಷ್ಠರಾಗಿ ಜಲದಲ್ಲಿ ಗರ್ಭಗೃಹದಲ್ಲಿ ಮಲಗಿದ್ದರು.
ಸಂದದರ್ಶ ಜಲೇ ಸುಪ್ತಾನ್ಷಡ್ಗರ್ಭಾನ್ಗರ್ಭಸಂಸ್ಥಿತಾನ್ ।
ನಿದ್ರಯಾ ಕಾಲರೂಪಿಣ್ಯಾ ಸರ್ವಾನಂತರ್ಹಿತಾನ್ಸ ವೈ ।। ೨-೫೭-೨೫
ನೀರಿನಲ್ಲಿ ಗರ್ಭಸ್ಥರಾಗಿ ಮಲಗಿದ್ದ ಷಡ್ಗರ್ಭರು ಕಾಲರೂಪಿಣೀ ನಿದ್ರೆಯಿಂದ ಅಂತರ್ಹಿತರಾಗಿದ್ದುದನ್ನು ನೋಡಿದನು.
ಸ್ವಪ್ನರೂಪೇಣ ತೇಷಾಂ ವೈ ವಿಷ್ಣುರ್ದೇಹಾನಥಾವಿಶತ್ ।
ಪ್ರಾಣೇಶ್ವರಾಂಶ್ಚ ನಿಷ್ಕೃಷ್ಯ ನಿದ್ರಾಯೈ ಪ್ರದದೌ ತದಾ ।। ೨-೫೭-೨೬
ವಿಷ್ಣುವು ಸ್ವಪ್ನರೂಪದಲ್ಲಿ ಅವರ ದೇಹವನ್ನು ಪ್ರವೇಶಿಸಿ ಅವರ ಪ್ರಾಣೇಶ್ವರರನ್ನು ಕಿತ್ತು ತೆಗೆದು ನಿದ್ರಾದೇವಿಗೆ ನೀಡಿದನು.
ತಾಂ ಚೋವಾಚ ತತೋ ನಿದ್ರಾಂ ವಿಷ್ಣುಃ ಸತ್ಯಪರಾಕ್ರಮಃ ।
ಗಚ್ಛ ನಿದ್ರೇ ಮಯೋತ್ಸೃಷ್ಟಾ ದೇವಕೀಭವನಾಂತಿಕಮ್ ।। ೨-೫೭-೨೭
ಇಮಾನ್ಪ್ರಾಣೇಶ್ವರಾನ್ಗೃಹ್ಯ ಶಡ್ಗರ್ಭಾನ್ದಾನವೋತ್ತಮಾನ್ ।
ಸರ್ವಪ್ರಾಣೇಶ್ವರಾಂಶ್ಚೈವ ಷಾಡ್ಗರ್ಭಾನ್ನಾಮ ದೇಹಿನಃ ।
ಷಡ್ಗರ್ಭಾನ್ದೇವಕೀಗರ್ಭೇ ಯೋಜಯಸ್ವ ಯಥಾಕ್ರಮಮ್ ।। ೨-೫೭-೨೮
ಆಗ ಸತ್ಯಪರಾಕ್ರಮ ವಿಷ್ಣುವು ನಿದ್ರೆಗೆ ಹೇಳಿದನು: “ನಿದ್ರೇ! ನನ್ನ ಪ್ರೇರಣೆಯಂತೆ ಈ ಜೀವಗಳನ್ನು ತೆಗೆದುಕೊಂಡು ದೇವಕಿಯ ಬಳಿ ಹೋಗು. ಇವರೆಲ್ಲರೂ ಷಡ್ಗರ್ಭ ಎನ್ನುವ ಉತ್ತಮ ದಾನವರು. ಈ ಎಲ್ಲ ಜೀವಗಳೂ ಷಡ್ಗರ್ಭರು ಎನ್ನುವವರ ದೇಹಗಳಲ್ಲಿರುವವರು. ಈ ಷಡ್ಗರ್ಭರನ್ನು ದೇವಕಿಯ ಗರ್ಭದಲ್ಲಿ ಯಥಾಕ್ರಮವಾಗಿ ಸ್ಥಾಪಿಸುತ್ತಿರು.
ಜಾತೇಷ್ವೇತೇಷು ಗರ್ಭೇಷು ನೀತೇಷು ಚ ಯಮಕ್ಷಯಮ್ ।
ಕಂಸಸ್ಯ ವಿಫಲೇ ಯತ್ನೇ ದೇವಕ್ಯಾಃ ಸಫಲೇ ಶ್ರಮೇ ।। ೨-೫೭-೨೯
ಪ್ರಸಾದಂ ತೇ ಕರಿಷ್ಯಾಮಿ ಮತ್ಪ್ರಭಾವಸಮಂ ಭುವಿ ।
ಯೇನ ಸರ್ವಸ್ಯ ಲೋಕಸ್ಯ ದೇವಿ ದೇವೀ ಭವಿಷ್ಯಸಿ ।। ೨-೫೭-೩೦
ಈ ಗರ್ಭಗಳು ಹುಟ್ಟುತ್ತಲೇ ಇವರನ್ನು ಯಮಕ್ಷಯಕ್ಕೆ ಕಳುಹಿಸಿದ ನಂತರ, ಕಂಸನ ಯತ್ನವು ವಿಫಲವಾಗಲು ಮತ್ತು ದೇವಕಿಯ ಶ್ರಮವು ಸಫಲವಾಗಲು, ನಾನು ನಿನಗೆ ವಿಶೇಷ ಅನುಗ್ರಹವನ್ನು ಮಾಡುತ್ತೇನೆ. ದೇವೀ! ಆ ಸಮಯದಿಂದ ಭೂತಲದಲ್ಲಿ ನಿನ್ನ ಪ್ರಭಾವವು ನನ್ನ ಪ್ರಭಾವದ ಸಮನಾಗುವುದು. ಇದರಿಂದ ನೀನು ಸಂಪೂರ್ಣ ಜಗತ್ತಿನ ಆರಾಧ್ಯ ದೇವಿಯಾಗುತ್ತೀಯೆ.
ಸಪ್ತಮೋ ದೇವಕೀಗರ್ಭೋ ಯೋಽಂಶಃ ಸೌಮ್ಯೋ ಮಮಾಗ್ರಜಃ ।
ಸ ಸಂಕ್ರಾಮಯಿತವ್ಯಸ್ತೇ ಸಪ್ತಮೇ ಮಾಸಿ ರೋಹಿಣೀಮ್ ।। ೨-೫೭-೩೧
ದೇವಕಿಯ ಏಳನೆಯ ಗರ್ಭವು ಅದು ನನ್ನದೇ ಸೌಮ್ಯ ಅಂಶವಾಗಿರುತ್ತದೆ. ನನಗಿಂತಲೂ ಮೊದಲು ಅವತರಿಸಿದುದರಿಂದ ಅವನು ನನ್ನ ಅಣ್ಣನಾಗುತ್ತಾನೆ. ಗರ್ಭದಲ್ಲಿ ಅವನಿಗೆ ಏಳನೆಯ ತಿಂಗಳಾಗಿರುವಾಗಲೇ ನೀನು ಅವನನ್ನು ಎಳೆದು ತೆಗೆದು ರೋಹಿಣಿಯ ಗರ್ಭದಲ್ಲಿ ಇರಿಸು.
ಸಂಕರ್ಷಣಾತ್ತು ಗರ್ಭಸ್ಯ ಸ ತು ಸಂಕರ್ಷಣೋ ಯುವಾ ।
ಭವಿಷ್ಯತ್ಯಗ್ರಜೋ ಭ್ರಾತಾ ಮಮ ಶೀತಾಂಶುದರ್ಶನಃ ।। ೨-೫೭-೩೨
ಗರ್ಭದ ಸಂಕರ್ಷಣವಾಗುವುದರಿಂದ ಆ ಯುವ ವೀರನು ಸಂಕರ್ಷಣನೆಂದಾಗುತ್ತಾನೆ. ನನ್ನ ಆ ಅಣ್ಣನು ಚಂದ್ರಮನ ಸಮಾನ ಬಿಳೀ ವರ್ಣದಿಂದ ಸುಶೋಭಿತನಾಗಿರುತ್ತಾನೆ.
ಪತಿತೋ ದೇವಕೀಗರ್ಭಃ ಸಪ್ತಮೋಽಯಂ ಭಯಾದಿತಿ ।
ಅಷ್ಟಮೇ ಮಯಿ ಗರ್ಭಸ್ಥೇ ಕಂಸೋ ಯತ್ನಂ ಕರಿಷ್ಯತಿ ।। ೨-೫೭-೩೩
ಭಯದಿಂದ ದೇವಕಿಯ ಏಳನೇ ಗರ್ಭವು ಪಾತವಾಯಿತು ಎಂದು ಹೇಳುತ್ತಾರೆ. ಎಂಟನೇ ಗರ್ಭದಲ್ಲಿ ನಾನಿರುವಾಗ ಕಂಸನು ನನ್ನನ್ನು ಕೊಲ್ಲಲು ಪ್ರಯತ್ನಿಸುತ್ತಾನೆ.
ಯಾ ತು ಸಾ ನಂದಗೋಪಸ್ಯ ದಯಿತಾ ಭುವಿ ವಿಶ್ರುತಾ ।
ಯಶೋದಾ ನಾಮ ಭದ್ರಂ ತೇ ಭಾರ್ಯಾ ಗೋಪಕುಲೋದ್ವಹಾ ।। ೨-೫೭-೩೪
ನಿನಗೆ ಮಂಗಳವಾಗಲಿ! ಭುವಿಯಲ್ಲಿ ನಂದಗೋಪನ ಪ್ರೀತಿಯ ಭಾರ್ಯೆ ಯಶೋದ ಎಂಬ ಹೆಸರಿನ ಗೋಪಕುಲೋದ್ವಹೆಯಿದ್ದಾಳೆ.
ತಸ್ಯಾಸ್ತ್ವಂ ನವಮೋ ಗರ್ಭಃ ಕುಲೇಽಸ್ಮಾಕಂ ಭವಿಷ್ಯಸಿ ।
ನವಮ್ಯಾಮೇವ ಸಂಜಾತಾ ಕಿಷ್ಣಪಕ್ಷಸ್ಯ ವೈ ತಿಥೌ ।। ೨-೫೭-೩೫
ನೀನು ಅವಳ ಒಂಭತ್ತನೇ ಗರ್ಭದ ರೂಪದಲ್ಲಿ ನಮ್ಮ ಕುಲದಲ್ಲಿ ಹುಟ್ಟುತ್ತೀಯೆ. ಭಾದ್ರಪದ ಕೃಷ್ಣಪಕ್ಷದ ನವಮಿಯಂದೇ ನಿನ್ನ ಜನ್ಮವಾಗುತ್ತದೆ.
ಅಹಂ ತ್ವಭಿಜಿತೋ ಯೋಗೇ ನಿಶಾಯಾಂ ಯೌವನೇ ಸ್ಥಿತೇ ।
ಅರ್ಧರಾತ್ರೇ ಕರಿಷ್ಯಾಮಿ ಗರ್ಭಮೋಕ್ಷಂ ಯಥಾಸುಖಮ್ ।। ೨-೫೭-೩೬
ರಾತ್ರಿಯು ಯೌವನಸ್ಥಿಯಿಯಲ್ಲಿರುವಾಗ ಅರ್ಧರಾತ್ರಿ ಅಭಿಜಿತ್ ಮುಹೂರ್ತದ ಯೋಗದಲ್ಲಿ ನಾನು ಯಥಾಸುಖವಾಗಿ ಗರ್ಭಮೋಕ್ಷವನ್ನು ಹೊಂದುತ್ತೇನೆ.
ಅಷ್ಟಮಸ್ಯ ತು ಮಾಸಸ್ಯ ಜಾತಾವಾವಾಂ ತತಃ ಸಮಮ್ ।
ಪ್ರಾಪ್ಸ್ಯಾವೋ ಗರ್ಭವ್ಯತ್ಯಾಸಂ ಪ್ರಾಪ್ತೇ ಕಂಸಸ್ಯ ನಾಶನೇ ।। ೨-೫೭-೩೭
ನಾವಿಬ್ಬರೂ ಗರ್ಭದ ಎಂಟನೇ ತಿಂಗಳಿನಲ್ಲಿಯೇ ಹುಟ್ಟೋಣ. ನಂತರ ಕಂಸನ ನಾಶಕ್ಕಾಗಿ ಗರ್ಭವ್ಯತ್ಯಾಸಗೊಳ್ಳೋಣ.
ಅಹಂ ಯಶೋದಾಂ ಯಾಸ್ಯಾಮಿ ತ್ವಂ ದೇವಿ ಭಜ ದೇವಕೀಮ್ ।
ಆವಯೋರ್ಗರ್ಭಸಂಯೋಗೇ ಕಂಸೋ ಗಚ್ಛತು ಮೂಢತಾಮ್ ।। ೨-೫೭-೩೮
ದೇವೀ! ನಾನು ಯಶೋದೆಯ ಬಳಿ ಹೋಗುತ್ತೇನೆ. ನೀನು ದೇವಕಿಯ ಆಶ್ರಯವನ್ನು ಪಡೆ. ನಮ್ಮಿಬ್ಬರ ಪರಿವರ್ತಿತ ಗರ್ಭಸಂಯೋಗದಿಂದ ಕಂಸನು ಮೂಢನಾಗುತ್ತಾನೆ.
ತತಸ್ತ್ವಾಂ ಗೃಹ್ಯ ಚರಣೇ ಶಿಲಾಯಾಂ ಪಾತಯಿಷ್ಯತಿ ।
ನಿರಸ್ಯಮಾನಾ ಗಗನೇ ಸ್ಥಾನಂ ಪ್ರಾಪ್ಸ್ಯಸಿ ಶಾಶ್ವತಮ್ ।। ೨-೫೭-೩೯
ಆಗ ಅವನು ನಿನ್ನ ಕಾಲುಗಳನ್ನು ಹಿಡಿದು ಕಲ್ಲಿನ ಮೇಲೆ ನಿನ್ನನ್ನು ಎಸೆಯುತ್ತಾನೆ. ಆದರೆ ನೀನು ಅವನ ಕೈಯಿಂದ ತಪ್ಪಿಸಿಕೊಂಡು ಆಕಾಶದಲ್ಲಿ ಶಾಶ್ವತ ಸ್ಥಾನವನ್ನು ಪಡೆದುಕೊಳ್ಳುತ್ತೀಯೆ.
ಮಚ್ಛವೀಸದೃಶೀ ಕೃಷ್ಣಾ ಸಂಕರ್ಷಣಸಮಾನನಾ ।
ಬಿಬ್ರತೀ ವಿಪುಲೌ ಬಾಹೂ ಮಮ ಬಾಹೂಪಮೌ ದಿವಿ ।। ೨-೫೭-೪೦
ನನ್ನ ಶರೀರದಂತೆ ನಿನ್ನ ಶರೀರವೂ ಕೃಷ್ಣವರ್ಣದ್ದಾಗಿರುತ್ತದೆ. ಆದರೆ ಮುಖವು ಸಂಕರ್ಷಣನ ಮುಖದಂತೆ ಶ್ವೇತವರ್ಣದ್ದಾಗಿರುತ್ತದೆ. ನೀನು ದಿವಿಯಲ್ಲಿ ನನ್ನ ಬಾಹುಗಳಂತಿರುವ ವಿಪುಲ ಬಾಹುಗಳನ್ನು ಧರಿಸಿ ಬೆಳಗುತ್ತೀಯೆ.
ತ್ರಿಶಿಖಂ ಶೂಲಮುದ್ಯಮ್ಯ ಖಡ್ಗಂ ಚ ಕನಕತ್ಸರುಮ್ ।
ಪಾತ್ರೀಂ ಚ ಪೂರ್ಣಾಂ ಮಧುನಾ ಪಂಕಜಂ ಚ ಸುನಿರ್ಮಲಮ್ ।। ೨-೫೭-೪೧
ನಾಲ್ಕು ಭುಜಗಳಲ್ಲಿ ತ್ರಿಶೂಲ, ಚಿನ್ನದ ಹಿಡಿಯಿರುವ ಖಡ್ಗ, ಮಧುವಿನಿಂದ ತುಂಬಿರುವ ಪಾತ್ರೆ, ಮತ್ತು ಸುನಿರ್ಮಲ ಕಮಲವನ್ನು ಹಿಡಿದಿರುತ್ತೀಯೆ.
ನೀಲಕೌಶೇಯಸಂವೀತಾ ಪೀತೇನೋತ್ತರವಾಸಸಾ ।
ಶಶಿರಶ್ಮಿಪ್ರಕಾಶೇನ ಹಾರೇಣೋರಸಿ ರಾಜತಾ ।। ೨-೫೭-೪೨
ನೀಲವರ್ಣದ ರೇಷ್ಮೆ ವಸ್ತ್ರವನ್ನು ಉಡುತ್ತೀಯೆ ಮತ್ತು ಪೀತಾಂಬರವನ್ನು ಹೊದೆಯುತ್ತೀಯೆ. ನಿನ್ನ ವಕ್ಷಸ್ಥಳದಲ್ಲಿ ಚಂದ್ರನ ರಶ್ಮಿಯ ಪ್ರಕಾಶದ ಹಾರವು ರಾರಾಜಿಸುತ್ತದೆ.
ದಿವ್ಯಕುಂಡಲಪೂರ್ಣಾಭ್ಯಾಂ ಶ್ರವಣಾಭ್ಯಾಂ ವಿಭೂಷಿತಾ ।
ಚಂದ್ರಸಾಪತ್ನಭೂತೇನ ಮುಖೇನ ತ್ವಂ ವಿರಾಜಿತಾ ।। ೨-೫೭-೪೩
ದಿವ್ಯಕುಂಡಲಗಳು ನಿನ್ನ ಕಿವಿಗಳನ್ನು ವಿಭೂಷಿತಗೊಳಿಸುತ್ತವೆ. ಮತ್ತು ಚಂದ್ರಮನ ಶೋಭೆಯನ್ನು ಕುಂದಿಸುವ ಮುಖದಿಂದ ವಿರಾಜಿಸುತ್ತೀಯೆ.
ಮುಕುಟೇನ ವಿಚಿತ್ರೇಣ ಕೇಶಬಂಧೇನ ಶೋಭಿನಾ ।
ಭುಜಂಗಾಭೈರ್ಭುಜೈರ್ಭೀಮೈರ್ಭೂಷಯಂತೀ ದಿಶೋ ದಶ ।। ೨-೫೭-೪೪
ವಿಚಿತ್ರ ಮುಕುಟ ಮತ್ತು ಸುಂದರ ಕೇಶಬಂಧದಿಂದ ಅಲಂಕೃತಳಾಗಿರುವೆ. ಭುಜಂಗಗಳಂತಿರುವ ನಿನ್ನ ಭುಜಗಳಿಂದ ಹತ್ತೂ ದಿಕ್ಕುಗಳ ಶೋಭೆಯನ್ನು ಹೆಚ್ಚಿಸುತ್ತೀಯೆ.
ಧ್ವಜೇನ ಶಿಖಿಬರ್ಹೇಣ ಉಚ್ಛ್ರಿತೇನ ವಿರಾಜಿತಾ ।
ಅಂಗಜೇನ ಮಯೂರಾಣಾಮಂಗದೇನ ಚ ಭಾಸ್ವತಾ ।। ೨-೫೭-೪೫
ನವಿಲುಗರಿಯಿಂದ ವಿಭೂಷಿತ ಧ್ವಜ ಮತ್ತು ನವಿಲುಗರಿಗಳಿಂದ ಮಾಡಿದ ಪ್ರಕಾಶಮಾನ ಅಂಗದಗಳಿಂದ ನೀನು ಹೊಳೆಯುತ್ತೀಯೆ.
ಕೀರ್ಣಾ ಭೂತಗಣೈರ್ಘೋರೈರ್ಮನ್ನಿಯೋಗಾನುವರ್ತಿನೀ ।
ಕೌಮಾರಂ ವ್ರತಮಾಸ್ಥಾಯ ತ್ರಿದಿವಂ ತ್ವಂ ಗಮಿಷ್ಯಸಿ ।। ೨-೫೭-೪೬
ಘೋರ ಭೂತಗಣಗಳಿಂದ ಸುತ್ತುವರೆಯಲ್ಪಟ್ಟು ನನ್ನ ಆಜ್ಞಾಪಾಲಕಳಾಗಿ ಸದಾ ಕುಮಾರಿಯಾಗಿರುವ ವ್ರತವನ್ನು ಕೈಗೊಂಡು ನೀನು ತ್ರಿದಿವಕ್ಕೆ ಹೋಗುತ್ತೀಯೆ.
ತತ್ರ ತ್ವಾಂ ಶತದೃಕ್ಛಕ್ರೋ ಮತ್ಪ್ರದಿಷ್ಟೇನ ಕರ್ಮಣಾ ।
ಅಭಿಷೇಕೇಣ ದಿವ್ಯೇನ ದೇವತೈಃ ಸಹ ಯೋಕ್ಷ್ಯಸೇ ।। ೨-೫೭-೪೭
ಅಲ್ಲಿ ಸಹಸ್ರ ನೇತ್ರ ಶಕ್ರನು ನನ್ನ ಅಪೇಕ್ಷೆಯ ಮೇರೆಗೆ ಎಲ್ಲ ಕಾರ್ಯಗಳನ್ನೂ ಸಂಪೂರ್ಣವಾಗಿ ನಡೆಸಿಕೊಟ್ಟಿದ್ದುದಕ್ಕೆ ದೇವತೆಗಳನ್ನೊಡಗೂಡಿ ನಿನಗೆ ದಿವ್ಯ ಅಭಿಷೇಕವನ್ನು ಮಾಡುತ್ತಾನೆ.
ತತ್ರೈವ ತ್ವಾಂ ಭಗಿನ್ಯರ್ಥೇ ಗ್ರಹೀಷ್ಯತಿ ಸ ವಾಸವಃ ।
ಕುಶಿಕಸ್ಯ ತು ಗೋತ್ರೇಣ ಕೌಶಿಕೀ ತ್ವಂ ಭವಿಷ್ಯಸಿ ।। ೨-೫೭-೪೮
ಅಲ್ಲಿಯೇ ವಾಸವನು ನಿನ್ನನ್ನು ತಂಗಿಯನ್ನಾಗಿ ಸ್ವೀಕರಿಸುತ್ತಾನೆ. ಕುಶಿಕ ಗೋತ್ರದವಳಾಗುವುದರಿಂದ ನೀನು ಕೌಶಿಕೀ ಎಂದಾಗುವೆ.
ಸ ತೇ ವಿಂಧ್ಯೇ ನಗಶ್ರೇಷ್ಠೇ ಸ್ಥಾನಂ ದಾಸ್ಯತಿ ಶಾಶ್ವತಮ್ ।
ತತಃ ಸ್ಥಾನಸಹಸ್ರೈಸ್ತ್ವಂ ಪೃಥಿವೀಂ ಶೋಭಯಿಷ್ಯಸಿ ।। ೨-೫೭-೪೯
ಅವನು ನಿನಗೆ ಪರ್ವತಶ್ರೇಷ್ಠ ವಿಂಧ್ಯವನ್ನು ಶಾಶ್ವತ ಸ್ಥಾನವನ್ನಾಗಿ ನೀಡುತ್ತಾನೆ. ಅನಂತರ ನೀನು ಸಹಸ್ರ ಸ್ಥಾನಗಳಿಂದ ಪೃಥ್ವಿಯನ್ನು ಶೋಭಿಸುತ್ತೀಯೆ.
ತ್ರೈಲೋಕ್ಯಚಾರಿಣೀ ಸಾ ತ್ವಂ ಭುವಿ ಸತ್ಯೋಪಯಾಚನಾ ।
ಚರಿಷ್ಯಸಿ ಮಹಾಭಾಗೇ ವರದಾ ಕಾಮರೂಪಿಣೀ ।। ೨-೫೭-೫೦
ಮಹಾಭಾಗೇ! ನೀನು ಕಾಮರೂಪಿಣಿಯಾಗಿ ವರದೆಯಾಗಿ ಮೂರು ಲೋಕಗಳಲ್ಲಿ ಸಂಚರಿಸುತ್ತೀಯೆ ಮತ್ತು ನಿನ್ನ ಯಾವುದೇ ಉಪಯಾಚನೆಗಳೂ ಸತ್ಯವಾಗುತ್ತವೆ.
ತತ್ರ ಶುಂಭನಿಶುಂಭೌ ದ್ವೌ ದಾನವೌ ನಗಚಾರಿಣೌ ।
ತೌ ಚ ಕೃತ್ವಾ ಮನಸಿ ಮಾಂ ಸಾನುಗೌ ನಾಶಯಿಷ್ಯಸಿ ।। ೨-೫೭-೫೧
ಅಲ್ಲಿ ನನ್ನನ್ನು ಮನಸ್ಸಿನಟ್ಟುಕೊಂಡು ವಿಂಧ್ಯಪರ್ವತದಲ್ಲಿ ಸಂಚರಿಸುವ ಶುಂಭ ಮತ್ತು ನಿಶುಂಭ ಎಂಬ ದಾನವರನ್ನು ಅವರ ಅನುಯಾಯಿಗಳೊಂದಿಗೆ ನಾಶಪಡಿಸುತ್ತೀಯೆ.
ಕೃತ್ವಾನುಯಾತ್ರಾಂ ಭೂತೈಸ್ತ್ವಂ ಸುರಾಮಾಂಸಬಲಿಪ್ರಿಯಾ ।
ತಿಥೌ ನವಂಮ್ಯಾಂ ಪೂಜಾಂ ತ್ವಂ ಪ್ರಾಪ್ಸ್ಯಸೇ ಸಪಶುಕ್ರಿಯಾಮ್ ।। ೨-೫೭-೫೨
ಅಲ್ಲಿ ನೀನು ಮಧುಯುಕ್ತ ಮತ್ತು ಮಾಂಸರಹಿತ ಬಲಿಯನ್ನು ಪ್ರೀತಿಯಿಂದ ಗ್ರಹಣಮಾಡುತ್ತೀಯೆ ಮತ್ತು ನಿನ್ನ ತೀರ್ಥಯಾತ್ರೆಯನ್ನು ಮಾಡಿ ನವಮೀ ತಿಥಿಯಲ್ಲಿ ಪಶುಪೂಜನ ಕರ್ಮದೊಂದಿಗೆ ನಿನಗೆ ಪೂಜೆಯನ್ನು ಸಲ್ಲಿಸುತ್ತಾರೆ.
ಯೇ ಚ ತ್ವಾಂ ಮತ್ಪ್ರಭಾವಜ್ಞಾಃ ಪ್ರಣಮಿಷ್ಯಂತಿ ಮಾನವಾಃ ।
ತೇಷಾಂ ನ ದುರ್ಲಭಂ ಕಿಂಚಿತ್ಪುತ್ರತೋ ಧನತೋಽಪಿ ವಾ ।। ೨-೫೭-೫೩
ನನ್ನ ಪ್ರಭಾವವನ್ನು ತಿಳಿದು ನಿನಗೆ ನಮಸ್ಕರಿಸುವ ಮಾನವರಿಗೆ ಪುತ್ರರು ಮತ್ತು ಧನದ ಯಾವುದೂ ದುರ್ಲಭವಾಗುವುದಿಲ್ಲ.
ಕಾಂತಾರೇಷ್ವವಸನ್ನಾನಾಂ ಮಗ್ನಾನಾಂ ಚ ಮಹಾರ್ಣವೇ ।
ದಸ್ಯುಭಿರ್ವಾ ನಿರುದ್ಧಾನಾಂ ತ್ವಂ ಗತಿಃ ಪರಮಾ ನೃಣಾಮ್ ।। ೨-೫೭-೫೪
ಕಾಂತಾರದಲ್ಲಿ ಸಿಕ್ಕಿರಲಿ, ಮಹಾಸಾಗರದಲ್ಲಿ ಮುಳುಗಿರಲಿ, ಅಥವಾ ದಸ್ಯುಗಳ ಬಂಧನದಲ್ಲಿರಲಿ, ಅಂಥಹ ನರರಿಗೆ ನೀನು ಪರಮ ಗತಿಯಾಗುವೆ.
ತ್ವಾಂ ತು ಸ್ತೋಷ್ಯಂತಿ ಯೇ ಭಕ್ತ್ಯಾ ಸ್ತವೇನಾನೇನ ವೈ ಶುಭೇ ।
ತಸ್ಯಾಹಂ ನ ಪ್ರಣಶ್ಯಾಮಿ ಸ ಚ ಮೇ ನ ಪ್ರಣಶ್ಯತಿ ।। ೨-೫೭-೫೫
ಶುಭೇ! ಭಕ್ತಿಯಿಂದ ನಿನ್ನನ್ನು ಈ ಸ್ತವದಿಂದ ಸ್ತುತಿಸುವವರಿಗೆ ನಾನು ಕಾಣಿಸದೇ ಇರುವುದಿಲ್ಲ ಮತ್ತು ಅವರೂ ನನಗೆ ಕಾಣಿಸದೇ ಇರುವುದಿಲ್ಲ.””
ಸಮಾಪ್ತಿ
ಇತಿ ಶ್ರೀಮಹಾಭಾರತೇ ಖಿಲೇಷು ಹರಿವಾಂಶೇ ವಿಷ್ಣುಪರ್ವಣಿ ಭಾರಾವತರಣೇ ನಿದ್ರಾಸಂವಿಜ್ಞಾನೇ ಸಪ್ತಪಂಚಾಶತ್ತಮೋಽಧ್ಯಾಯಃ