ಪ್ರವೇಶ
।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।
ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ
ಶ್ರೀ ಮಹಾಭಾರತ
ಖಿಲಭಾಗೇ ಹರಿವಂಶಃ
ವಿಷ್ಣು ಪರ್ವ
ಅಧ್ಯಾಯ 56
ಸಾರ
ವೈಶಂಪಾಯನ ಉವಾಚ
ಜ್ಞಾತ್ವಾ ವಿಷ್ಣುಂ ಕ್ಷಿತಿಗತಂ ಭಾಗಾಂಶ್ಚ ತ್ರಿದಿವೌಕಸಾಮ್ ।
ವಿನಾಶಶಂಸೀ ಕಂಸಸ್ಯ ನಾರದೋ ಮಥುರಾಂ ಯಯೌ ।। ೨-೫೬-೧
ವೈಶಂಪಾಯನನು ಹೇಳಿದನು: “ವಿಷ್ಣು ಮತ್ತು ತ್ರಿದಿವೌಕಸರು ತಮ್ಮ ತಮ್ಮ ಭಾಗಗಳಲ್ಲಿ ಭೂಮಿಗೆ ಹೋದದ್ದನ್ನು ತಿಳಿದು ನಾರದನು ಕಂಸನಿಗೆ ಅವನ ವಿನಾಶದ ಕುರಿತು ಸೂಚಿಸಲು ಮಥುರೆಗೆ ಹೋದನು.
ತ್ರಿವಿಷ್ಟಪಾದಾಪತಿತೋ ಮಥುರೋಪವನೇ ಸ್ಥಿತಃ ।
ಪ್ರೇಷಯಾಮಾಸ ಕಂಸಸ್ಯ ಉಗ್ರಸೇನಸುತಸ್ಯ ವೈ ।। ೨-೫೬-೨
ತ್ರಿವಿಷ್ಟಪದಿಂದ ಭುವಿಯ ಮೇಲೆ ಪಾದಾರ್ಪಣ ಮಾಡಿ ಮಥುರೆಯ ಉಪವನದಲ್ಲಿ ನಿಂತು ಉಗ್ರಸೇನ ಸುತ ಕಂಸನಬಳಿ ದೂತನೋರ್ವನನ್ನು ಕಳುಹಿಸಿದನು.
ಸ ದೂತಃ ಕಥಯಾಮಾಸ ಮುನೇರಾಗಮನಂ ವನೇ ।
ಸ ನಾರದಸ್ಯಾಗಮನಂ ಶ್ರುತ್ವಾ ತ್ವರಿತವಿಕ್ರಮಃ।। ೨-೫೬-೩
ನಿರ್ಜಗಾಮಾಸುರಃ ಕಂಸಃ ಸ್ವಪುರ್ಯಾಃ ಪದ್ಮಲೋಚನಃ ।
ಉಪವನದಲ್ಲಿ ಮುನಿಯ ಆಗಮದ ಕುರಿತು ಆ ದೂತನು ಹೇಳಿದನು. ನಾರದನ ಆಗಮನವನ್ನು ಕೇಳಿ ತ್ವರಿತವಿರ್ಕಮಿ ಪದ್ಮಲೋಚನ ಅಸುರ ಕಂಸನು ತನ್ನ ಪುರಿಯಿಂದ ಹೊರಟನು.
ಸ ದದರ್ಶಾತಿಥಿಂ ಶ್ಲಾಘ್ಯಂ ದೇವರ್ಷಿಂ ವೀತಕಲ್ಮಷಮ್ ।। ೨-೫೬-೪
ತೇಜಸಾ ಜ್ವಲನಾಕಾರಂ ವಪುಷಾ ಸೂರ್ಯವರ್ಚಸಮ್ ।
ಸೋಽಭಿವಾದ್ಯರ್ಷಯೇ ತಸ್ಮೈ ಪೂಜಾಂ ಚಕ್ರೇ ಯಥಾವಿಧಿ ।। ೨-೫೬-೫
ಅಲ್ಲಿ ಅವನು ತೇಜಸ್ಸಿನಿಂದ ಪ್ರಜ್ವಲಿಸುತ್ತಿದ್ದ ಸೂರ್ಯವರ್ಚಸ ರೂಪದಿಂದಿದ್ದ ವೀತಕಲ್ಮಷ ಶ್ಲಾಘ್ಯ ಅತಿಥಿ ದೇವರ್ಷಿಯನ್ನು ಕಂಡನು. ಅವನು ಋಷಿಗೆ ಅಭಿವಂದಿಸಿ ಯಥಾವಿಧಿಯಾಗಿ ಅವನ ಪೂಜೆಗೈದನು.
ಆಸನಂ ಚಾಗ್ನಿವರ್ಣಾಭಂ ವಿಸೃಜ್ಯೋಪಜಹಾರ ಸಃ ।
ನಿಷಸಾದಾಸನೇ ತಸ್ಮಿನ್ಸ ವೈ ಶಕ್ರಸಖೋ ಮುನಿಃ ।। ೨-೫೬-೬
ಅಗ್ನಿವರ್ಣದಿಂದ ಹೊಳೆಯುತ್ತಿದ್ದ ಆಸನವನ್ನು ಅವನಿಗಿತ್ತು ಉಪಹಾರಗಳನ್ನೂ ನೀಡಿದನು. ಶಕ್ರಸಖ ಮುನಿಯು ಆ ಆಸನದಲ್ಲಿ ಕುಳಿತುಕೊಂಡನು.
ಉವಾಚ ಚೋಗ್ರಸೇನಸ್ಯ ಸುತಂ ಪರಮಕೋಪನಮ್ ।
ಪೂಜಿತೋಽಹಂ ತ್ವಯಾ ವೀರ ವಿಧಿದೃಷ್ಟೇನ ಕರ್ಮಣಾ ।। ೨-೫೬-೭
ಗತೇ ತ್ವೇವಂ ಮಮ ವಚಃ ಶ್ರೂಯತಾಂ ಗೃಹ್ಯತಾಂ ತ್ವಯಾ ।
ಅವನು ಉಗ್ರಸೇನನ ಸುತ ಪರಮಕೋಪನನಿಗೆ ಹೇಳಿದನು: “ವೀರ! ವಿಧಿದೃಷ್ಟಕರ್ಮಗಳಿಂದ ನೀನು ನನ್ನನ್ನು ಪೂಜಿಸಿದ್ದೀಯೆ. ಆದುದರಿಂದ ನಿನಗೆ ನಾನೊಂದು ಮಾತನ್ನು ಹೇಳುತ್ತೇನೆ. ಅದನ್ನು ನೀನು ಕೇಳಬೇಕು ಮತ್ತು ಅರ್ಥಮಾಡಿಕೊಳ್ಳಬೇಕು.
ಅನುಸೃತ್ಯ ದಿವೋಲೋಕಾನಹಂ ಬ್ರಹ್ಮಪುರೋಗಮಾನ್ ।। ೨-೫೬-೮
ಗತಃ ಸೂರ್ಯಸಖಂ ತಾತ ವಿಪುಲಂ ಮೇರುಪರ್ವತಮ್ ।
ಅಯ್ಯಾ! ಬ್ರಹ್ಮಲೋಕವೇ ಮೊದಲಾದ ದಿವಿಯ ಲೋಕಗಳನ್ನು ಸಂಚರಿಸುತ್ತಾ ನಾನು ಸೂರ್ಯಸಖನಾದ ವಿಪುಲ ಮೇರುಪರ್ವತಕ್ಕೆ ಹೋದೆನು.
ಸ ನಂದನವನಂ ಚೈವ ದೃಷ್ಟ್ವಾ ಚೈತ್ರರಥಂ ವನಮ್ ।। ೨-೫೬-೯
ಆಪ್ಲುತಂ ಸರ್ವತೀರ್ಥೇಷು ಸರಿತ್ಸು ಸಹ ದೇವತೈಃ ।
ಅಲ್ಲಿ ನಂದನವನ ಮತ್ತು ಚೈತ್ರರಥ ವನವನ್ನು ನೋಡಿ ದೇವತೆಗಳೊಂದಿಗೆ ಸರ್ವತೀರ್ಥಗಳಲ್ಲಿ ಮತ್ತು ನದಿಗಳಲ್ಲಿ ಸ್ನಾನಮಾಡಿದೆನು.
ದಿವ್ಯಾ ತ್ರಿಧಾರಾ ದೃಷ್ಟಾ ಯೇ ಪುಣ್ಯಾ ತ್ರಿಪಥಗಾ ನದೀ ।। ೨-೫೬-೧೦
ಸ್ಮರಣಾದೇವ ಸರ್ವೇಷಾಮಂಹಸಾಂ ಯಾ ವಿಭೇದಿನೀ ।
ಅನಂತರ ಯಾರ ಸ್ಮರಣೆಯಿಂದಲೇ ಸರ್ವರ ಪಾಪವು ದೂರವಾಗುವುದೋ ಆ ಪುಣ್ಯೆ ತ್ರಿಪಥಗೆ ತ್ರಿಧಾರಾ ದಿವ್ಯ ಗಂಗಾನದಿಯನ್ನು ನೋಡಿದೆನು.
ಉಪಸ್ಪೃಷ್ಟಂ ಚ ತೀರ್ಥೇಷು ದಿವ್ಯೇಷು ಚ ಯಥಾಕ್ರಮಮ್ ।। ೨-೫೬-೧೧
ದೃಷ್ಟಂ ಮೇ ಬ್ರಹ್ಮಸದನಂ ಬ್ರಹ್ಮರ್ಷಿಗಣಸೇವಿತಮ್ ।
ದೇವಗಂಧರ್ವನಿರ್ಘೋಷೈರಪ್ಸರೋಭಿಶ್ಚ ನಾದಿತಮ್ ।। ೨-೫೬-೧೨
ಯಥಾಕ್ರಮವಾಗಿ ದಿವ್ಯ ತೀರ್ಥಗಳಲ್ಲಿ ಮಿಂದು ಬ್ರಹ್ಮರ್ಷಿಗಣಸೇವಿತ ದೇವಗಂಧರ್ವರ ನಿರ್ಘೋಷಗಳಿಂದ ಮತ್ತು ಅಪ್ಸರೆಯರ ನಾದದಿಂದ ಕೂಡಿದ ಬ್ರಹ್ಮಸದನವನ್ನು ನೋಡಲು ಹೋದೆನು.
ಸೋಽಹಂ ಕದಾಚಿದ್ದೇವಾನಾಂ ಸಮಾಜೇ ಮೇರುಮೂರ್ಧನಿ ।
ಸಂಗೃಹ್ಯ ವೀಣಾಂ ಸಂಸಕ್ತಾಮಗಚ್ಛಂ ಬ್ರಹ್ಮಣಃ ಸಭಾಮ್ ।। ೨-೫೬-೧೩
ಹಾಗೆಯೇ ಒಮ್ಮೆ ನಾನು ಕೈಯಲ್ಲಿ ವೀಣೆಯನ್ನು ಹಿಡಿದು ಮೇರುಪರ್ವತದ ಶಿಖರದಲ್ಲಿ ದೇವತೆಗಳು ಸೇರಿದ್ದ ಬ್ರಹ್ಮಸಭೆಗೆ ಹೋದೆನು.
ಸೋಽಹಂ ತವ ಸಿತೋಷ್ಣೀಷಾನ್ನಾನಾರತ್ನವಿಭೂಷಿತಾನ್ ।
ದಿವ್ಯಾಸನಗತಾಂದೇವಾನಪಶ್ಯಂ ಸಪಿತಾಮಹಾನ್ ।। ೨-೫೬-೧೪
ಅಲ್ಲಿ ಪಿತಾಮಹನೊಂದಿಗೆ ಶ್ವೇತ ಪಗಡಿಗಳನ್ನು ಧರಿಸಿ ನಾನಾರತ್ನವಿಭೂಷಿತ ದಿವ್ಯಾಸನಗಳಲ್ಲಿ ಕುಳಿತಿದ್ದ ದೇವತೆಗಳನ್ನು ಕಂಡೆನು.
ತತ್ರ ಮಂತ್ರಯತಾಮೇವಮ್ ದೇವತಾನಾಂ ಮಯಾ ಶ್ರುತಃ ।
ಭವತಃ ಸಾನುಗಸ್ಯೈವ ವಧೋಪಾಯಃ ಸುದಾರುಣಃ ।। ೨-೫೬-೧೫
ಅನುಗರೊಂದಿಗೆ ನಿನ್ನನ್ನು ವಧಿಸುವ ಸುದಾರುಣ ಉಪಾಯದ ಕುರಿತು ಅಲ್ಲಿ ದೇವತೆಗಳು ಮಂತ್ರಾಲೋಚನೆ ಮಾಡುತ್ತಿದ್ದುದನ್ನು ನಾನು ಕೇಳಿದೆ.
ತತ್ರೈಷಾ ದೇವಕೀ ಯಾ ತೇ ಮಥುರಾಯಾಂ ಲಘುಸ್ವಸಾ ।
ಯೋಽಸ್ಯಾಂ ಗರ್ಭೋಽಷ್ಟಮಃ ಕಂಸ ಸ ತೇ ಮೃತ್ಯುರ್ಭವಿಷ್ಯತಿ ।। ೨-೫೬-೧೬
ಕಂಸ! ಮಥುರೆಯಲ್ಲಿರುವ ನಿನ್ನ ಕಿರಿಯ ತಂಗಿ ದೇವಕಿಯ ಎಂಟನೇ ಗರ್ಭವು ನಿನ್ನ ಮೃತ್ಯುವಾಗುತ್ತದೆ.
ದೇವಾನಾಂ ಸ ತು ಸರ್ವಸ್ವಂ ತ್ರಿದಿವಸ್ಯ ಗತಿಶ್ಚ ಸಃ ।
ಪರಂ ರಹಸ್ಯಂ ದೇವಾನಾಂ ಸ ತೇ ಮೃತ್ಯುರ್ಭವಿಷ್ಯತಿ । ೨-೫೬-೧೭
ಅದು ದೇವತೆಗಳ ಸರ್ವಸ್ವ ಮತ್ತು ತ್ರಿದಿವದ ಗತಿಯಾಗುತ್ತದೆ. ಅದೇ ದೇವತೆಗಳ ಪರಮ ರಹಸ್ಯವು. ಅದೇ ನಿನಗೆ ಮೃತ್ಯುವಾಗುತ್ತದೆ.
ಪರಶ್ಚೈವಾಪರಸ್ತೇಷಾಂ ಸ್ವಯಂಭೂಶ್ಚ ದಿವೌಕಸಾಮ್।
ತತಸ್ತೇ ತನ್ಮಹದ್ಭೂತಂ ದಿವ್ಯಂ ಚ ಕಥಯಾಮ್ಯಹಮ್ ।। ೨-೫೬-೧೮
ಆ ಗರ್ಭವೇ ದೇವತೆಗಳ ಪರ ಮತ್ತು ಅಪರ. ಸ್ವಯಂಭೂ. ಆದುದರಿಂದ ಅದು ಮಹಾನ್ ದಿವ್ಯ ಭೂತವು ಎಂದು ಹೇಳುತ್ತಿದ್ದೇನೆ.
ಶ್ಲಾಘ್ಯಶ್ಚ ಸ ಹಿ ತೇ ಮೃತ್ಯುರ್ಭೂತಪೂರ್ವಶ್ಚ ತಂ ಸ್ಮರ ।
ಯತ್ನಶ್ಚ ಕ್ರಿಯತಾಂ ಕಂಸ ದೇವಕ್ಯಾ ಗರ್ಭಕೃಂತನೇ ।। ೨-೫೬-೧೯
ಅದೇ ಮಹಾಭೂತವು ಹಿಂದೆಯೂ ನಿನ್ನ ಮೃತ್ಯುವಾಗಿತ್ತು. ನೆನಪಿಸಿಕೋ. ಈಗಲೂ ಅದು ನಿನಗೆ ಶ್ಲಾಘ್ಯ ಮೃತ್ಯುವಾಗುತ್ತದೆ. ಕಂಸ! ಆದುದರಿಂದ ನೀನು ದೇವಕಿಯ ಗರ್ಭವನ್ನು ಕತ್ತರಿಸುವ ಪ್ರಯತ್ನವನ್ನು ಮಾಡು.
ಏಷಾ ಮೇ ತ್ವದ್ಗತಾ ಪ್ರೀತಿರ್ಯದರ್ಥಂ ಚಾಹಮಾಗತಃ ।
ಭುಜ್ಯಂತಾಂ ಸರ್ವಕಾಮಾರ್ಥಾಃ ಸ್ವಸ್ತಿ ತೇಽಸ್ತು ವ್ರಜಾಮ್ಯಹಮ್ ।। ೨-೫೬-೨೦
ನನಗೆ ನಿನ್ನಮೇಲಿನ ಪ್ರೀತಿಯಿಂದಾಗಿಯೇ ನಾನು ಇಲ್ಲಿಗೆ ಬಂದು ಇದನ್ನು ನಿನಗೆ ಹೇಳಿದ್ದೇನೆ. ಸರ್ವಕಾಮಾರ್ಥಗಳನ್ನೂ ಭುಂಜಿಸು. ನಿನಗೆ ಮಂಗಳವಾಗಲಿ. ನಾನು ಹೋಗುತ್ತೇನೆ.”
ಇತ್ಯುಕ್ತ್ವಾ ನಾರದೇ ಯಾತೇ ತಸ್ಯ ವಾಕ್ಯಂ ವಿಚಿಂತಯನ್ ।
ಜಹಾಸೋಚ್ಚೈಸ್ತತಃ ಕಂಸಃ ಪ್ರಕಾಶದಶನಶ್ಚಿರಮ್ ।। ೨-೫೬-೨೧
ಹೀಗೆ ಹೇಳಿ ನಾರದನು ಹೊರಟುಹೋಗಲು ಅವನ ಮಾತಿನ ಕುರಿತೇ ಬಹಳ ಹೊತ್ತು ಚಿಂತಿಸುತ್ತಿದ್ದ ಕಂಸನು ತನ್ನ ಹಲ್ಲುಗಳನ್ನು ತೋರಿಸುತ್ತಾ ಅಟ್ಟಹಾಸದಿಂದ ನಗತೊಡಗಿದನು.
ಪ್ರೋವಾಚ ಸಸ್ಮಿತಂ ಚೈವ ಭೃತ್ಯಾನಾಮಗ್ರತಃ ಸ್ಥಿತಃ ।
ಹಾಸ್ಯಃ ಖಲು ಸ ಸರ್ವೇಷು ನಾರದೋ ನ ವಿಶಾರದಃ ।। ೨೧-೧-೨೨
ಎದಿರು ನಿಂತಿದ್ದ ಸೇವಕರಿಗೆ ಮುಗುಳ್ನಗುತ್ತಾ ಹೇಳಿದನು: “ಈ ನಾರದನು ಎಲ್ಲರಿಗೂ ಹಾಸ್ಯಾಸ್ಪದನು. ಯಾವುದರಲ್ಲಿಯೂ ವಿಶಾರದನಲ್ಲ.
ನಾಹಂ ಭೀಷಯಿತುಂ ಶಕ್ಯೋ ದೇವೈರಪಿ ಸವಾಸವೈಃ ।
ಆಸನಸ್ಥಃ ಶಯಾನೋ ವಾ ಪ್ರಮತ್ತೋ ಮತ್ತ ಏವ ಚ ।। ೨-೫೬-೨೩
ನಾನು ಆಸನಸ್ಥನಾಗಿರಲಿ ಅಥವಾ ಮಲಗಿರಲಿ, ಪ್ರಮತ್ತನಾಗಿರಲಿ ಅಥವಾ ಮತ್ತನಾಗಿರಲಿ, ವಾಸವನೊಂದಿಗೆ ದೇವತೆಗಳಿಗೂ ನನ್ನನ್ನು ಹೆದರಿಸಲು ಸಾಧ್ಯವಿಲ್ಲ.
ಯೋಽಹಂ ದೋರ್ಭ್ಯಾಮುದಾರಾಭ್ಯಾಂ ಕ್ಷೋಭಯೇಯಂ ಧರಾಮಿಮಾಮ್ ।
ಕೋಽಸ್ತಿ ಮಾಂ ಮಾನುಷೇ ಲೋಕೇ ಯಃ ಕ್ಷೋಭಯಿತುಮುತ್ಸಹೇತ್ ।। ೨-೫೬-೨೪
ನನ್ನ ಈ ಎರಡು ಕೈಗಳಿಂದಲೇ ಇಡೀ ಭೂಮಿಯನ್ನೇ ಕ್ಷೋಭೆಗೊಳಿಸಬಲ್ಲೆ. ಈ ಮಾನುಷಲೋಕದಲ್ಲಿ ನನ್ನನ್ನು ಕ್ಷೋಭೆಗೊಳಿಸಲು ಉತ್ಸುಕನಾಗಿರುವವರು ಯಾರಿದ್ದಾರೆ?
ಅದ್ಯ ಪ್ರಭೃತಿ ದೇವಾನಾಮೇಷ ದೇವಾನುವರ್ತಿನಾಮ್ ।
ನೃಪಕ್ಷಿಪಶುಸಂಘಾನಾಂ ಕರೋಮಿ ಕದನಂ ಮಹತ್ ।। ೨-೫೬-೨೫
ಇಂದಿನಿಂದ ನಾನು ದೇವತೆಗಳನ್ನು ಮತ್ತು ದೇವತೆಗಳನ್ನು ಅನುಸರಿಸುವ ನರ-ಪಕ್ಷಿ-ಪಶು ಸಂಘಗಳೊಂದಿಗೆ ಮಹಾ ಕದನವನ್ನು ನಡೆಸುತ್ತೇನೆ.
ಆಜ್ಞಾಪ್ಯತಾಂ ಹಯಃ ಕೇಶೀ ಪ್ರಲಂಬೋ ಧೇನುಕಸ್ತಥಾ ಅರಿಷ್ಟೋ ವೃಷಭಶ್ಚೈವ ಪೂತನಾ ಕಾಲಿಯಸ್ತಥಾ ।। ೨-೫೬-೨೬
ಅಟಧ್ವಂ ಪೃಥಿವೀಂ ಕೃತ್ಸ್ನಾಂ ಯಥೇಷ್ಟಂ ಕಾಮರೂಪಿಣಃ ಪ್ರಹರಧ್ವಂ ಚ ಸರ್ವೇಷು ಯೇಽಸ್ಮಾಕಂ ಪಕ್ಷದೂಷಕಾಃ ।। ೨-೫೬-೨೭
ಅಶ್ವರೂಪಧಾರೀ ಕೇಶೀ, ಪ್ರಲಂಬ, ಧೇನುಕ, ವೃಷಭರೂಪಧಾರೀ ಅರಿಷ್ಟ, ಪೂತನಾ, ಕಾಲಿಯ ಇವರಿಗೆ ಆಜ್ಞಾಪಿಸಿ. ಕಾಪರೂಪಿಗಳಾದ ಅವರು ಯಥೇಚ್ಛವಾಗಿ ಭೂಮಿಯನ್ನೆಲ್ಲಾ ಸುತ್ತಾಡಿ ನನ್ನ ಪಕ್ಷವನ್ನು ದೂಷಿಸುವವರೆಲ್ಲರನ್ನೂ ಪ್ರಹರಿಸಲಿ.
ಗರ್ಭಸ್ಥಾನಾಮಪಿ ಗತಿರ್ವಿಜ್ಞೇಯಾ ಚೈವ ದೇಹಿನಾಮ್ ।
ನಾರದೇನ ಹಿ ಗರ್ಭೇಭ್ಯೋ ಭಯಂ ನಃ ಸಮುದಾಹೃತಮ್ ।। ೨-೫೬-೨೮
ಗರ್ಭಸ್ಥರಾಗಿರುವ ಪ್ರಾಣಿಗಳ ಕುರಿತೂ ತಿಳಿದುಕೊಳ್ಳಬೇಕು. ಏಕೆಂದರೆ ಗರ್ಭದಿಂದಲೇ ನನಗೆ ಭಯವಿದೆಯೆಂದು ನಾರದನು ಹೇಳಿದ್ದಾನೆ.
ಭವಂತೋ ಹಿ ಯಥಾಕಾಮಂ ಮೋದಂತಾಂ ವಿಗತಜ್ವರಾಃ ।
ಮಾಂ ಚ ವೋ ನಾಥಮಾಶೃತ್ಯ ನಾಸ್ತಿ ದೇವಕೃತಂ ಭಯಮ್ ।। ೨-೫೬-೨೯
ನೀವು ನಿಶ್ಚಿಂತರಾಗಿ ಇಚ್ಛಾನುಸಾರ ಮೋದಿಸಿ. ನಾನು ನಿಮಗೆ ನಾಥನು. ನನ್ನನ್ನು ಆಶ್ರಯಿಸಿದ ನಿಮಗೆ ದೇವತೆಗಳು ನೀಡುವ ಭಯವಿಲ್ಲದಿರಲಿ.
ಸ ತು ಕೇಲಿಕಿಲೋ ವಿಪ್ರೋ ಭೇದಶೀಲಶ್ಚ ನಾರದಃ ।
ಸುಶ್ಲಿಷ್ಟಾನಪಿ ಲೋಕೇಽಸ್ಮಿನ್ಭೇದಯನ್ ಲಭತೇ ರತಿಮ್ ।। ೨-೫೬-೩೦
ಆ ವಿಪ್ರ ನಾರದನಾದರೋ ಭೇದವನ್ನುಂಟುಮಾಡುವ ಆಟವನ್ನೇ ಆಡುತ್ತಾನೆ. ಪರಸ್ಪರ ಹೊಂದಿಕೊಂಡಿರುವ ಈ ಲೋಕದಲ್ಲಿ ಭೇದವನ್ನುಂಟುಮಾಡುವುದರಲ್ಲಿಯೇ ಅವನು ಆನಂದಿಸುತ್ತಾನೆ.
ಕಂಡೂಯಮಾನಃ ಸತತಂ ಲೋಕಾನಟತಿ ಚಂಚಲಃ ।
ಘಟಮಾನೋ ನರೇಂದ್ರಾಣಾಂ ತಂತ್ರೈರ್ವೈರಾಣಿ ಚೈವ ಹಿ ।। ೨-೫೬-೩೧
ಅವನು ಅತಿ ಚಂಚಲ ಸ್ವಭಾವದವನು ಮತ್ತು ಜನರಲ್ಲಿ ಸದಾ ಸಂಘರ್ಷವನ್ನುಂಟುಮಾಡುತ್ತಾ ತಿರುಗುತ್ತಾನೆ. ನರೇಂದ್ರರಲ್ಲಿ ವೈರವನ್ನುಂಟುಮಾಡುವುದರ ತಂತ್ರದಲ್ಲಿಯೇ ತೊಡಗಿರುತ್ತಾನೆ.”
ಏವಂ ಸ ವಿಲಪನ್ನೇವ ವಾಙ್ಮಾತ್ರೇಣೈವ ಕೇವಲಮ್ ।
ವಿವೇಶ ಕಂಸೋ ಭವನಂ ದಹ್ಯಮಾನೇನ ಚೇತಸಾ ।। ೨-೫೬-೩೨
ಹೀಗೆ ಕೇವಲ ಮಾತಿನಲ್ಲಿಯೇ ಪ್ರಲಾಪಗೈಯುತ್ತಾ ಕಂಸನು ತನ್ನ ಭವನವನ್ನು ಪ್ರವೇಶಿಸಿದನು. ಆಗ ಅವನ ಚೇತನವು ದಹಿಸುತ್ತಿತ್ತು.”
ಸಮಾಪ್ತಿ
ಇತಿ ಶ್ರೀಮಹಾಭಾರತೇ ಖಿಲೇಷು ಹರಿವಂಶೇ ವಿಷ್ಣುಪರ್ವಣಿ ನಾರದಾಗಮನೇ ಕಂಸವಾಕ್ಯೇ ಷಟ್ಪಂಚಾಶತ್ತಮೋಽಧ್ಯಾಯಃ