ಪ್ರವೇಶ
।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।
ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ
ಶ್ರೀ ಮಹಾಭಾರತ
ಖಿಲಭಾಗೇ ಹರಿವಂಶಃ
ಹರಿವಂಶ ಪರ್ವ
ಅಧ್ಯಾಯ 55
ಸಾರ
ನಾರದನ ಮಾತಿಗೆ ವಿಷ್ಣುವು ಉತ್ತರಿಸಿದುದು; ಬ್ರಹ್ಮನು ವಿಷ್ಣುವಿನ ಅವತಾರ ಯೋಗ್ಯ ಸ್ಥಾನ ಮತ್ತು ಮಾತಾ-ಪಿತೃಗಳ ಪರಿಚಯವನ್ನು ನೀಡಿದುದು (1-51).
ವೈಶಂಪಾಯನ ಉವಾಚ
ನಾರದಸ್ಯ ವಚಃ ಶ್ರುತ್ವಾ ಸಸ್ಮಿತಂ ಮಧುಸೂದನಃ ।
ಪ್ರತ್ಯುವಾಚ ಶುಭಂ ವಾಕ್ಯಂ ವರೇಣ್ಯಃ ಪ್ರಭುರೀಶ್ವರಃ ।। ೧-೫೫-೧
ವೈಶಂಪಾಯನನು ಹೇಳಿದನು: “ನಾರದನ ವಚನವನ್ನು ಕೇಳಿ ಪ್ರಭು ಈಶ್ವರ ವರೇಣ್ಯ ಮಧುಸೂದನನು ಮುಗುಳ್ನಗುತ್ತಾ ಈ ಶುಭ ವಾಕ್ಯಗಳಿಂದ ಉತ್ತರಿಸಿದನು:
ತ್ರೈಲೋಕ್ಯಸ್ಯ ಹಿತಾರ್ಥಾಯ ಯನ್ಮಾಂ ವದಸಿ ನಾರದ ।
ತಸ್ಯ ಸಂಯಕ್ಪ್ರವೃತ್ತಸ್ಯ ಶ್ರೂಯತಾಮುತ್ತರಂ ವಚಃ ।। ೧-೫೫-೨
“ನಾರದ! ತ್ರೈಲೋಕ್ಯದ ಹಿತಕ್ಕಾಗಿ ನೀನು ನನಗೆ ಏನು ಹೇಳಿದೆಯೋ ಅದು ಉತ್ತಮವಾಗಿಯೇ ಇದೆ. ಅದಕ್ಕೆ ಉತ್ತರವಾಗಿ ನನ್ನ ಈ ಮಾತನ್ನು ಕೇಳು.
ವಿದಿತಾ ದೇಹಿನೋ ಜಾತಾ ಮಯೈತೇ ಭುವಿ ದಾನವಾಃ ।
ಯಾಂ ಚ ಯಸ್ತನುಮಾದಾಯ ದೈತ್ಯಃ ಪುಷ್ಯತಿ ವಿಗ್ರಹಮ್ ।। ೧-೫೫-೩
ದಾನವರು ಭುಮಿಯಲ್ಲಿ ಮನುಷ್ಯದೇಹಗಳನ್ನು ಧರಿಸಿ ಹುಟ್ಟಿದ್ದಾರೆ ಎನ್ನುವುದು ಮತ್ತು ಯಾವ ದೈತ್ಯರು ಯಾವ ಮನುಷ್ಯಶರೀರಗಳಲ್ಲಿ ಜನಿಸಿ ವೈರವನ್ನು ಪುಷ್ಠಿಗೊಳಿಸುತ್ತಿದ್ದಾರೆ ಎನ್ನುವುದೂ ನನಗೆ ತಿಳಿದಿದೆ.
ಜಾನಾಮಿ ಕಂಸಂ ಸಂಭೂತಮುಗ್ರಸೇನಸುತಂ ಭುವಿ ।
ಕೇಶಿನಂ ಚಾಪಿ ಜಾನಾಮಿ ದೈತ್ಯಂ ತುರಗವಿಗ್ರಹಮ್ ।। ೧-೫೫-೪
ಕಾಲನೇಮಿಯು ಭುವಿಯಲ್ಲಿ ಉಗ್ರಸೇನಸುತ ಕಂಸನಾಗಿ ಹುಟ್ಟಿರುವುದನ್ನು ತಿಳಿದಿದ್ದೇನೆ. ಕುದುರೆಯ ಶರೀರವನ್ನು ಧಾರಣೆಮಾಡಬಲ್ಲ ದೈತ್ಯ ಕೇಶಿಯನ್ನೂ ನಾನು ಬಲ್ಲೆ.
ನಾಗಂ ಕುವಲಯಾಪೀಡಂ ಮಲ್ಲೌ ಚಾಣೂರಮುಷ್ಟಿಕೌ ।
ಅರಿಷ್ಟಂ ಚಾಪಿ ಜಾನಾಮಿ ದೈತ್ಯಂ ವೃಷಭರೂಪಿಣಮ್ ।। ೧-೫೫-೫
ಆನೆ ಕುವಲಯಾಪೀಡ, ಮಲ್ಲರಾದ ಚಾಣೂರ-ಮುಷ್ಟಿಕರು, ಮತ್ತು ವೃಷಭರೂಪೀ ದೈತ್ಯ ಅರಿಷ್ಟನನ್ನೂ ನಾನು ಬಲ್ಲೆ.
ವಿದಿತೋ ಮೇ ಖರಶ್ಚೈವ ಪ್ರಲಂಬಶ್ಚ ಮಹಾಸುರಃ ।
ಸಾ ಚ ಮೇ ವಿದಿತಾ ವಿಪ್ರ ಪೂತನಾ ದುಹಿತಾ ಬಲೇಃ ।। ೧-೫೫-೬
ಮಹಾಸುರ ಖರ ಮತ್ತು ಪ್ರಲಂಬರನ್ನೂ ನಾನು ತಿಳಿದಿದ್ದೇನೆ. ವಿಪ್ರ! ಬಲಿಯ ಮಗಳು ಪೂತನಿಯನ್ನೂ ನಾನು ಬಲ್ಲೆ.
ಕಾಲಿಯಂ ಚಾಪಿ ಜಾನಾಮಿ ಯಮುನಾಹ್ರದಗೋಚರಮ್ ।
ವೈನತೇಯಭಯಾದ್ಯಸ್ತು ಯಮುನಾಹ್ರದಮಾವಿಶತ್ ।। ೧-೫೫-೭
ವೈನತೇಯನ ಭಯದಿಂದ ಯಮುನಾಹ್ರದವನ್ನು ಪ್ರವೇಶಿಸಿರುವ ಯಮುನಾಹ್ರದದಲ್ಲಿ ಕಾಣುವ ಕಾಲಿಯನನ್ನೂ ನಾನು ಬಲ್ಲೆ.
ವಿದಿತೋ ಮೇ ಜರಾಸಂಧಃ ಸ್ಥಿತೋ ಮೂರ್ಧ್ನಿ ಮಹೀಕ್ಷಿತಾಮ್ ।
ಪ್ರಾಗ್ಜ್ಯೋತಿಷಪುರೇ ವಾಪಿ ನರಕಂ ಸಾಧು ತರ್ಕಯೇ ।। ೧-೫೫-೮
ಮಹೀಕ್ಷಿತರ ನೆತ್ತಿಯಮೇಲೆ ನಿಂತಿರುವ ಜರಾಸಂಧನನ್ನೂ ನಾನು ತಿಳಿದಿರುವೆ. ಪ್ರಾಗ್ಜ್ಯೋತಿಷಪುರದಲ್ಲಿ ವಾಸಿಸುವ ನರಕನನ್ನೂ ನಾನು ಚೆನ್ನಾಗಿ ಬಲ್ಲೆ.
ಮಾನುಷೇ ಪಾರ್ಥಿವೇ ಲೋಕೇ ಮಾನುಷತ್ವಮುಪಾಗತಮ್ ।
ಬಾಣಂ ಚ ಶೋಣಿತಪುರೇ ಗುಹಪ್ರತಿಮತೇಜಸಮ್ ।। ೧-೫೫-೯
ದೃಪ್ತಂ ಬಾಹುಸಹಸ್ರೇಣ ದೇವೈರಪಿ ಸುದುರ್ಜಯಮ್ ।
ಮಯ್ಯಾಸಕ್ತಾಂ ಚ ಜಾನಾಮಿ ಭಾರತೀಂ ಮಹತೀಂ ಧುರಮ್ ।। ೧-೫೫-೧೦
ಮನುಷ್ಯರ ಪಾರ್ಥಿವ ಲೋಕದಲ್ಲಿ ಮಾನುಷತ್ವವನ್ನು ಪಡೆದಿರುವ ಮತ್ತು ಶೋಣಿತಪುರದಲ್ಲಿರುವ ಕಾರ್ತಿಕೇಯನಂತೆ ಅಮಿತತೇಜಸ್ವಿಯಾಗಿರುವ, ಸಹಸ್ರ ಬಾಹುಗಳಿಂದ ದೃಪ್ತನಾಗಿ ದೇವತೆಗಳಿಗೂ ದುರ್ಜಯನಾಗಿರುವ ಬಾಣನನ್ನೂ ನಾನು ಅರಿತಿದ್ದೇನೆ. ಭಾರತೀ ಸೇನೆಯ ಮಹಾಭಾರವನ್ನು ಇಳಿಸುವುದೂ ಕೂಡ ನನ್ನ ಕರ್ತವ್ಯವೆಂದು ನಾನು ತಿಳಿದುಕೊಂಡಿದ್ದೇನೆ.
ಸರ್ವಂ ತಚ್ಚ ವಿಜಾನಾಮಿ ಯಥಾ ಯಾಸ್ಯಂತಿ ತೇ ನೃಪಾಃ ।
ಕ್ಷಯೋ ಭುವಿ ಮಯಾ ದೃಷ್ಟಃ ಶಕ್ರಲೋಕೇ ಚ ಸತ್ಕ್ರಿಯಾ ।
ಏಷಾಂ ಪುರುಷದೇಹಾನಾಮಪರಾವೃತ್ತದೇಹಿನಾಮ್ ।। ೧-೫೫-೧೧
ಆ ನೃಪರು ಭುವಿಯಲ್ಲಿ ನನ್ನಿಂದ ಕ್ಷಯಗೊಂಡು ಶಕ್ರಲೋಕದಲ್ಲಿ ಹೇಗೆ ಸತ್ಕೃತರಾಗುತ್ತಾರೆನ್ನುವುದನ್ನೂ ಮತ್ತು ಇವರು ಪುರುಷದೇಹಗಳನ್ನು ತೊರೆದು ಪುನಃ ದೇಹಗಳನ್ನು ಹೊಂದದೆಯೇ ಇರುವುದನ್ನೂ ನಾನು ಕಾಣುತ್ತಿದ್ದೇನೆ.
ಸಂಪ್ರವೇಕ್ಷ್ಯಾಮ್ಯಹಂ ಯೋಗಮಾತ್ಮನಶ್ಚ ಪರಸ್ಯ ಚ ।
ಸಂಪ್ರಾಪ್ಯ ಪಾರ್ಥಿವಂ ಲೋಕಂ ಮಾನುಷತ್ವಮುಪಾಗತಃ ।। ೧-೫೫-೧೨
ಯೋಗದಿಂದ ನಾನು ನನ್ನ ಮತ್ತು ಶತ್ರುಗಳ ಆತ್ಮಗಳನ್ನು ಪ್ರವೇಶಿಸುತ್ತೇನೆ. ಪಾರ್ಥಿವಲೋಕವನ್ನು ಸೇರಿ ಮಾನುಷತ್ವವನ್ನು ಪಡೆದುಕೊಳ್ಳುತ್ತೇನೆ.
ಕಂಸಾದೀಂಶ್ಚಾಪಿ ತತ್ಸರ್ವಾನ್ವಧಿಷ್ಯಾಮಿ ಮಹಾಸುರಾನ್ ।
ತೇನ ತೇನ ವಿಧಾನೇನ ಯೇನ ಯಃ ಶಾಂತಿಮೇಷ್ಯತಿ ।। ೧-೫೫-೧೩
ಯಾವ ಯಾವ ವಿಧಾನಗಳಿಂದ ಯಾರ್ಯಾರಿಗೆ ಶಾಂತಿ ದೊರೆಯುತ್ತದೆಯೋ ಅದೇ ವಿಧಾನಗಳಲ್ಲಿ ಕಂಸಾದಿ ಮಹಾ ಅಸುರರೆಲ್ಲರನ್ನೂ ವಧಿಸುತ್ತೇನೆ.
ಅನುಪ್ರವಿಶ್ಯ ಯೋಗೇನ ತಾಸ್ತಾ ಹಿ ಗತಯೋ ಮಯಾ ।
ಅಮೀಷಾಂ ಹಿ ಸುರೇಂದ್ರಾಣಾಂ ಹಂತವ್ಯಾ ರಿಪವೋ ಯುಧಿ ।। ೧-೫೫-೧೪
ಯೋಗದಿಂದ ಇವರನ್ನು ಪ್ರವೇಶಿಸಿ ಇವರ ಗತಿಯನ್ನು ತಡೆಯುತ್ತೇನೆ ಮತ್ತು ಯುದ್ಧದಲ್ಲಿ ಈ ಸುರೇಂದ್ರನ ಶತ್ರುಗಳನ್ನು ಸಂಹರಿಸುತ್ತೇನೆ.
ಜಗತ್ಯರ್ಥೇ ಕೃತೋ ಯೋಽಯಮಂಶೋತ್ಸರ್ಗೋ ದಿವೌಕಸೈಃ ।
ಸುರದೇವರ್ಷಿಗಂಧರ್ವೈರಿತಶ್ಚಾನುಮತೇ ಮಮ ।। ೧-೫೫-೧೫
ವಿನಿಶ್ಚಯೋ ಹಿ ಪ್ರಾಗೇವ ನಾರದಾಯಂ ಕೃತೋ ಮಯಾ ।
ಜಗತ್ತಿಗಾಗಿ ಈ ದಿವೌಕಸರು, ಸುರದೇವರ್ಷಿಗಂಧರ್ವರು ಮಾಡಿರುವ ಅಂಶೋತ್ಸರ್ಗವು ನನ್ನ ಅನುಮತಿಯಿಂದಲೇ ನಡೆದಿದೆ. ನಾರದ! ಮೊದಲೇ ಇದನ್ನು ನಾನು ನಿಶ್ಚಯಿಸಿದ್ದೆ.
ನಿವಾಸಂ ನನು ಮೇ ಬ್ರಹ್ಮನ್ವಿದಧಾತು ಪಿತಾಮಹಃ ।। ೧-೫೫-೧೬
ಯತ್ರ ದೇಶೇ ಯಥಾ ಜಾತೋ ಯೇನ ವೇಷೇಣ ವಾ ವಸನ್ ।
ತಾನಹಂ ಸಮರೇ ಹನ್ಯಾಂ ತನ್ಮೇ ಬ್ರೂಹಿ ಪಿತಾಮಹ ।। ೧-೫೫-೧೭
ಬ್ರಹ್ಮನ್! ಪಿತಾಮಹ! ನಾನು ಎಲ್ಲಿ ನಿವಾಸಿಸಬೇಕು? ಯಾವ ದೇಶದಲ್ಲಿ ಹೇಗೆ ಹುಟ್ಟಿ ಯಾವ ವೇಷದಲ್ಲಿ ವಾಸಿಸಬೇಕು ಎನ್ನುವುದನ್ನು ವಿಧಿಸಬೇಕು. ಪಿತಾಮಹ! ಸಮರದಲ್ಲಿ ಅವರನ್ನು ನಾನು ಹೇಗೆ ಸಂಹರಿಸಬೇಕು ಎನ್ನುವುದನ್ನೂ ನೀನು ಹೇಳಬೇಕು.”
ಬ್ರಹ್ಮೋವಾಚ।
ನಾರಾಯಣೇಮಂ ಸಿದ್ಧಾರ್ಥಮುಪಾಯಂ ಶೃಣು ಮೇ ವಿಭೋ ।
ಭುವಿ ಯಸ್ತೇ ಜನಯಿತಾ ಜನನೀ ಚ ಭವಿಷ್ಯತಿ ।। ೧-೫೫-೧೮
ಯತ್ರ ತ್ವಂ ಚ ಮಹಾಬಾಹೋ ಜಾತಃ ಕುಲಕರೋ ಭುವಿ ।
ಯಾದವಾನಾಂ ಮಹದ್ವಂಶಮಖಿಲಂ ಧಾರಯಿಷ್ಯಸಿ ।। ೧-೫೫-೧೯
ತಾಂಶ್ಚಾಸುರಾನ್ಸಮುತ್ಪಾಟ್ಯ ವಂಶಂ ಕೃತ್ವಾತ್ಮನೋ ಮಹತ್ ।
ಸ್ಥಾಪಯಿಷ್ಯಸಿ ಮರ್ಯಾದಾಂ ನೃಣಾಂ ತನ್ಮೇ ನಿಶಾಮಯ ।। ೧-೫೫-೨೦
ಬ್ರಹ್ಮನು ಹೇಳಿದನು: “ವಿಭೋ! ನಾರಾಯಣ! ಕಾರ್ಯಸಿದ್ಧಿಗಾಗಿರುವ ನನ್ನ ಈ ಉಪಾಯವನ್ನು ಕೇಳು. ಮಹಾಬಾಹೋ! ಭುವಿಯಲ್ಲಿ ನಿನ್ನ ಜನಕ-ಜನನಿಯರು ಯಾರಾಗುತ್ತಾರೆ ಮತ್ತು ಭುವಿಯಲ್ಲಿ ಕುಲಕರನಾಗಿ ಯಾವ ಯಾದವರ ವಂಶದಲ್ಲಿ ಹುಟ್ಟುತ್ತೀಯೋ ಆ ಮಹಾವಂಶವೆಲ್ಲವನ್ನೂ ನೀನು ಹೇಗೆ ಧರಿಸಿಕೊಳ್ಳುತ್ತೀಯೆ, ಆ ಅಸುರರನ್ನು ಸದೆಬಡಿದು ನಿನ್ನ ವಂಶವನ್ನು ಹೇಗೆ ವೃದ್ಧಿಗೊಳಿಸುತ್ತೀಯೆ, ಮತ್ತು ಮನುಷ್ಯರಲ್ಲಿ ಹೇಗೆ ಮರ್ಯಾದೆಗಳನ್ನು ಸ್ಥಾಪಿಸುತ್ತೀಯೆ ಎನ್ನುವುದನ್ನು ಕೇಳು.
ಪುರಾ ಹಿ ಕಶ್ಯಪೋ ವಿಷ್ಣೋ ವರುಣಸ್ಯ ಮಹಾತ್ಮನಃ ।
ಜಹಾರ ಯಜ್ಞಿಯಾ ಗಾ ವೈ ಪಯೋದಾಸ್ತು ಮಹಾಮಖೇ ।। ೧-೫೫-೨೧
ವಿಷ್ಣೋ! ಹಿಂದೆ ಮಹಾತ್ಮ ಕಶ್ಯಪನು ಯಜ್ಞದ ಸಮಯದಲ್ಲಿ ಮಹಾಮಖಕ್ಕೆ ಬೇಕಾದ ಹಾಲು ಮೊದಲಾದವುಗಳಿಗಾಗಿ ವರುಣನ ಗೋವನ್ನು ಕೇಳಿ ತಂದಿದ್ದನು.
ಅದಿತಿಃ ಸುರಭಿಶ್ಚೈತೇ ದ್ವೇ ಭಾರ್ಯೇ ಕಶ್ಯಪಸ್ಯ ತು ।
ಪ್ರದೀಯಮಾನಾ ಗಾಸ್ತಾಸ್ತು ನೈಚ್ಛತಾಂ ವರುಣಸ್ಯ ವೈ ।। ೧-೫೫-೨೨
ಯಜ್ಞವು ಮುಗಿದ ನಂತರವೂ ಕಶ್ಯಪನ ಈರ್ವರು ಭಾರ್ಯೆಯರು -ಅದಿತಿ ಮತ್ತು ಸುರಭಿ – ಆ ಗೋವನ್ನು ವರುಣನಿಗೆ ಹಿಂದಿರುಗಿಸಲು ಬಯಸಲಿಲ್ಲ.
ತತೋ ಮಾಂ ವರುಣೋಽಭ್ಯೇತ್ಯ ಪ್ರಣಮ್ಯ ಶಿರಸಾ ತತಃ ।
ಉವಾಚ ಭಗವನ್ಗಾವೋ ಗುರುಣಾ ಮೇ ಹೃತಾ ಇತಿ ।। ೧-೫೫-೨೩
ಆಗ ವರುಣನು ನನ್ನ ಬಳಿಬಂದು ಶಿರಬಾಗಿ ನಮಸ್ಕರಿಸಿ ಹೀಗೆ ಹೇಳಿದನು: “ಭಗವನ್! ನನ್ನ ಗೋವನ್ನು ಗುರು ಕಶ್ಯಪ1ನು ಅಪಹರಿಸಿದ್ದಾನೆ.
ಕೃತಕಾರ್ಯೋ ಹಿ ಗಾಸ್ತಾಸ್ತು ನಾನುಜಾನಾತಿ ಮೇ ಗುರುಃ ।
ಅನ್ವವರ್ತತ ಭಾರ್ಯೇ ದ್ವೇ ಅದಿತಿಂ ಸುರಭಿಂ ತಥಾ।। ೧-೫೫-೨೪
ಕಾರ್ಯವು ಸಂಪೂರ್ಣವಾಗಿದ್ದರೂ ಆ ಗೋವನ್ನು ಹಿಂದೆ ತೆಗೆದುಕೊಳ್ಳಲು ನನ್ನ ಗುರುವು ಅನುಮತಿಯನ್ನು ನೀಡುತ್ತಿಲ್ಲ. ಅವನು ಅವನ ಭಾರ್ಯೆಯರಾದ ಅದಿತಿ ಮತ್ತು ಸುರಭಿಯನ್ನು ಅನುಸರಿಸುತ್ತಿದ್ದಾನೆ.
ಮಮ ತಾ ಹ್ಯಕ್ಷಯಾ ಗಾವೋ ದಿವ್ಯಾಃ ಕಾಮದುಹಃ ಪ್ರಭೋ ।
ಚರಂತಿ ಸಾಗರಾನ್ ಸರ್ವಾನ್ ರಕ್ಷಿತಾಃ ಸ್ವೇನ ತೇಜಸಾ ।। ೧-೫೫-೨೫
ಪ್ರಭೋ! ನನ್ನ ಆ ಗೋವು ಅಕ್ಷಯವೂ ದಿವ್ಯವೂ ಆದ ಕಾಮಧೇನುವು. ತನ್ನ ತೇಜಸ್ಸಿನಿಂದ ಎಲ್ಲವನ್ನೂ ರಕ್ಷಿಸುತ್ತಾ ಸಾಗರಗಳಲ್ಲಿ ಸಂಚರಿಸುತ್ತಿರುತ್ತದೆ.
ಕಸ್ತಾ ಧರ್ಷಯಿತುಂ ಶಕ್ತೋ ಮಮ ಗಾಃ ಕಶ್ಯಪಾದೃತೇ ।
ಅಕ್ಷಯಂ ಯಾ ಕ್ಷರಂತ್ಯಗ್ರ್ಯಂ ಪಯೋ ದೇವಾಮೃತೋಪಮಮ್ ।। ೧-೫೫-೨೬
ದೇವಾಮೃತಕ್ಕೆ ಸಮನಾದ ಅಕ್ಷಯ ಹಾಲನ್ನು ನೀಡುತ್ತಿರುವ ಆ ಗೋವನ್ನು ತಡೆಯಲು ಕಶ್ಯಪನಲ್ಲದೇ ಬೇರೆ ಯಾರಿಗೆ ತಾನೇ ಸಾಧ್ಯ?
ಪ್ರಭುರ್ವಾ ವ್ಯುತ್ಥಿತೋ ಬ್ರಹ್ಮನ್ಗುರುರ್ವಾ ಯದಿ ವೇತರಃ ।
ತ್ವಯಾ ನಿಯಮ್ಯಾಃ ಸರ್ವೇ ವೈ ತ್ವಂ ಹಿ ನಃ ಪರಮಾ ಗತಿಃ ।। ೧-೫೫-೨೭
ಬ್ರಹ್ಮನ್! ಪ್ರಭುವಾಗಿರಲಿ ಅಥವಾ ಗುರುವೇ ಆಗಿರಲಿ ಒಂದು ವೇಳೆ ನಿಯಮಗಳನ್ನು ಉಲ್ಲಂಘಿಸಿದರೆ ನೀನೇ ಅಂಥವರನ್ನು ನಿಯಂತ್ರಿಸಬಲ್ಲೆ. ಏಕೆಂದರೆ ನೀನೇ ನಮ್ಮೆಲ್ಲರ ಪರಮ ಗತಿ.
ಯದಿ ಪ್ರಭವತಾಂ ದಂಡೋ ಲೋಕೇ ಕಾರ್ಯಮಜಾನತಾಮ್ ।
ನ ವಿದ್ಯತೇ ಲೋಕಗುರೋರ್ನ ಸ್ಯುರ್ವೈ ಲೋಕಸೇತವಃ ।। ೧-೫೫-೨೮
ಲೋಕಗುರುವೇ! ಒಂದುವೇಳೆ ಲೋಕದಲ್ಲಿ ತನ್ನ ಕರ್ತವ್ಯಗಳನ್ನು ತಿಳಿಯದೇ ಇರುವ ಪ್ರಭಾವಶಾಲಿಗಳಿಗೆ ದಂಡನೆಯೆನ್ನುವುದು ಇಲ್ಲವಾದರೆ ಲೋಕದ ಮರ್ಯಾದೆಗಳೇ ನಷ್ಟವಾಗಿ ಹೋಗುತ್ತವೆ.
ಯಥಾ ವಾಸ್ತು ತಥಾ ವಾಸ್ತು ಕರ್ತವ್ಯೇ ಭಗವನ್ಪ್ರಭುಃ ।
ಮಮ ಗಾವಃ ಪ್ರದೀಯಂತಾಂ ತತೋ ಗಂತಾಸ್ಮಿ ಸಾಗರಮ್ ।। ೧-೫೫-೨೯
ಭಗವನ್! ಈ ಕಾರ್ಯದ ಪರಿಣಾಮವು ಹೇಗಾಗಬೇಕೋ ಹಾಗೆ ಮಾಡಿಸುವುದು ನಮ್ಮ ಪ್ರಭುವಾದ ನಿನ್ನ ಕರ್ತವ್ಯವಾಗಿದೆ. ನನಗೆ ನನ್ನ ಗೋವನ್ನು ಕೊಡಿಸು. ಆಗ ನಾನು ಸಾಗರಕ್ಕೆ ಹಿಂದಿರುಗುತ್ತೇನೆ.
ಯಾ ಆತ್ಮದೇವತಾ ಗಾವೋ ಯಾ ಗಾವಃ ಸತ್ತ್ವಮವ್ಯಯಮ್ ।
ಲೋಕಾನಾಂ ತ್ವತ್ಪ್ರವೃತ್ತಾನಾಮೇಕಂ ಗೋಬ್ರಾಹ್ಮಣಂ ಸ್ಮೃತಮ್ ।। ೧-೫೫-೩೦
ಗೋವುಗಳು ಆತ್ಮದೇವತೆಗಳು. ಗೋವುಗಳು ಅವ್ಯಯ ಸತ್ತ್ವವು. ಲೋಕಗಳನ್ನು ನಡೆಸುವ ಗೋವು ಮತ್ತು ಬ್ರಾಹ್ಮಣರು ಒಂದೇ ಎಂಬ ಸ್ಮೃತಿಯಿದೆ.
ತ್ರಾತವ್ಯಾಃ ಪ್ರಥಮಂ ಗಾವಸ್ತ್ರಾತಾಸ್ತ್ರಾಯಂತಿ ತಾ ದ್ವಿಜಾನ್ ।
ಗೋಬ್ರಾಹ್ಮಣಪರಿತ್ರಾಣೇ ಪರಿತ್ರಾತಂ ಜಗದ್ಭವೇತ್ ।। ೧-೫೫-೩೧
ಮೊದಲು ಗೋವುಗಳನ್ನು ರಕ್ಷಿಸಬೇಕು. ಅನಂತರ ದ್ವಿಜರನ್ನು ರಕ್ಷಿಸಬೇಕು. ಗೋ-ಬ್ರಾಹ್ಮಣರನ್ನು ರಕ್ಷಿಸುವುದರಿಂದ ಇಡೀ ಜಗತ್ತೇ ರಕ್ಷಿತವಾಗಿರುತ್ತದೆ.”
ಇತ್ಯಂಬುಪತಿನಾ ಪ್ರೋಕ್ತೋ ವರುಣೇನಾಹಮಚ್ಯುತ ।
ಗವಾಂ ಕಾರಣತತ್ತ್ವಜ್ಞಃ ಕಶ್ಯಪೇ ಶಾಪಮುತ್ಸೃಜಮ್ ।। ೧-೫೫-೩೨
ಅಚ್ಯುತ! ಅಂಬುಪತಿ ವರುಣನು ಹೀಗೆ ಹೇಳಲು ತತ್ತ್ವಜ್ಞನಾದ ನಾನು ಗೋವಿನ ಕಾರಣದಿಂದ ಕಶ್ಯಪನಿಗೆ ಶಾಪವನ್ನಿತ್ತೆನು.
ಯೇನಾಂಶೇನ ಹೃತಾ ಗಾವಃ ಕಶ್ಯಪೇನ ಮಹರ್ಷಿಣಾ ।
ಸ ತೇನಾಂಶೇನ ಜಗತಿ ಗತ್ವಾ ಗೋಪತ್ವಮೇಷ್ಯತಿ ।। ೧-೫೫-೩೩
“ಮಹರ್ಷಿ ಕಶ್ಯಪನು ಯಾವ ಅಂಶದಿಂದ ಗೋವನ್ನು ಅಪಹರಿಸಿದ್ದನೋ ಅದೇ ಅಂಶದಿಂದ ಭೂಮಿಯಲ್ಲಿ ಗೋಪತ್ವವನ್ನು ಪಡೆದುಕೊಳ್ಳುತ್ತಾನೆ.
ಯಾ ಚ ಸಾ ಸುರಭಿರ್ನಾಮ ಅದಿತಿಶ್ಚ ಸುರಾರಣಿಃ ।
ತೇಽಪ್ಯುಭೇ ತಸ್ಯ ಭಾರ್ಯೇ ವೈ ತೇನೈವ ಸಹ ಯಾಸ್ಯತಃ ।। ೧-೫೫-೩೪
ತಾಭ್ಯಾಂ ಚ ಸಹ ಗೋಪತ್ವೇ ಕಶ್ಯಪೋ ಭುವಿ ರಂಸ್ಯತೇ ।
ಸುರಭಿ ಎಂಬ ಹೆಸರಿನ ಮತ್ತು ಅರಣಿಯಂತೆ ಸುರರನ್ನು ಹುಟ್ಟಿಸಿದ ಅದಿತಿ ಎಂಬ ಇಬ್ಬರು ಅವನ ಭಾರ್ಯೆಯರು ಅವನ ಜೊತೆಯೇ ಭೂಲೋಕದಲ್ಲಿ ಇರುತ್ತಾರೆ. ಅವರೊಂದಿಗೆ ಕಶ್ಯಪನು ಭೂಮಿಯಲ್ಲಿ ಗೋಪತ್ವವನ್ನು ರಂಜಿಸುತ್ತಾನೆ.
ಸ ತಸ್ಯ ಕಶ್ಯಪಸ್ಯಾಂಶಸ್ತೇಜಸಾ ಕಶ್ಯಪೋಪಮಃ ।। ೧-೫೫-೩೫
ವಸುದೇವ ಇತಿ ಖ್ಯಾತೋ ಗೋಷು ತಿಷ್ಠತಿ ಭೂತಲೇ ।
ಕಶ್ಯಪನಪಂತೆಯೇ ಸಮಾನ ತೇಜಸ್ಸುಳ್ಳ ಅವನ ಇನ್ನೊಂದು ಅಂಶವು ಭೂತಲದಲ್ಲಿ ಗೋವುಗಳು ಮತ್ತು ಗೋಪಾಲಕರ ಅಧಿಪತಿಯಾಗಿ ವಸುದೇವನೆಂದು ವಿಖ್ಯಾತನಾಗಿ ಹುಟ್ಟುತ್ತದೆ.
ಗಿರಿರ್ಗೋವರ್ಧನೋ ನಾಮ ಮಥುರಾಯಾಸ್ತ್ವದೂರತಃ ।। ೧-೫೫-೩೬
ತತ್ರಾಸೌ ಗೋಷು ನಿರತಃ ಕಂಸಸ್ಯ ಕರದಾಯಕಃ ।
ಮಥುರೆಯಿಂದ ಅನತಿದೂರದಲ್ಲಿಯೇ ಇರುವ ಗೋವರ್ಧನ ಎಂಬ ಗಿರಿಯಲ್ಲಿ ಇವರು ಗೋಪಾಲನೆಯಲ್ಲಿ ನಿರತರಾಗಿರುತ್ತಾರೆ ಮತ್ತು ಕಂಸನಿಗೆ ಕರವನ್ನು ಕೊಡುವವರಾಗಿರುತ್ತಾರೆ.
ತಸ್ಯ ಭಾರ್ಯಾದ್ವಯಂ ಜಾತಮದಿತಿಃ ಸುರಭಿಶ್ಚ ತೇ ।। ೧-೫೫-೩೭
ದೇವಕೀ ರೋಹಿಣೀ ಚೇಮೇ ವಸುದೇವಸ್ಯ ಧೀಮತಃ ।
ಸುರಭೀ ರೋಹಿಣೀ ದೇವೀ ಚಾದಿತಿರ್ದೇವಕೀ ತ್ವಭೂತ್ ।। ೧-೫೫-೩೮
ಅವನ ಇಬ್ಬರು ಭಾರ್ಯೆಯರಾದ ಅದಿತಿ ಮತ್ತು ಸುರಭಿಯರು ದೇವಕೀ ಮತ್ತು ರೋಹಿಣಿಯರಾಗಿ ಧೀಮತ ವಸುದೇವನ ಪತ್ನಿಯರಾಗುವರು. ದೇವೀ ಸುರಭಿಯು ರೋಹಿಣಿಯಾಗುವಳು ಮತ್ತು ಅದಿತಿಯು ದೇವಕಿಯಾಗುವಳು.
ತತ್ರ ತ್ವಂ ಶಿಶುರೇವಾದೌ ಗೋಪಾಲಕೃತಲಕ್ಷಣಃ ।
ವರ್ಧ್ಯಸ್ವ ಮಹಾಬಾಹೋ ಪುರಾ ತ್ರೈವಿಕ್ರಮೇ ಯಥಾ ।। ೧-೫೫-೩೯
ಮಹಾಬಾಹೋ! ಹಿಂದೆ ತ್ರಿವಿಕ್ರಮನಂತೆ ನೀನು ಹೇಗೆ ಬೆಳೆದಿದ್ದೆಯೋ2 ಅದೇ ರೀತಿ ಅಲ್ಲಿ ನೀನು ಮೊದಲು ಗೋಪಾಲಕನ ಲಕ್ಷಣಗಳಿಂದ ಕೂಡಿ ಬೆಳೆ.
ಛಾದಯಿತ್ವಾತ್ಮನಾತ್ಮಾನಂ ಮಾಯಯಾ ಯೋಗರೂಪಯಾ ।
ತತ್ರಾವತರ ಲೋಕಾನಾಂ ಭವಾಯ ಮಧುಸೂದನ ।। ೧-೫೫-೪೦
ಜಯಾಶೀರ್ವಚನೈಸ್ತ್ವೈತೇ ವರ್ಧಯಂತಿ ದಿವೌಕಸಃ ।। ೧-೫೫-೪೧
ಮಧುಸೂದನ! ಲೋಕಹಿತಕ್ಕಾಗಿ ಮಾಯೆಯಿಂದ ನಿನ್ನನ್ನು ನೀನೇ ಮರೆಮಾಡಿಕೊಂಡು ಯೋಗರೂಪದಿಂದ ಅಲ್ಲಿ ಅವತರಿಸು. ದಿವೌಕಸರು ಜಯಾಶೀರ್ವಾದ ವಚನಗಳಿಂದ ನಿನ್ನನ್ನು ವರ್ಧಿಸುತ್ತಿದ್ದಾರೆ.
ಆತ್ಮಾನಮಾತ್ಮನಾ ಹಿ ತ್ವಮವತಾರ್ಯ ಮಹೀತಲೇ ।
ದೇವಕೀಂ ರೋಹಿಣೀಂ ಚೈವ ಗರ್ಭಾಭ್ಯಾಂ ಪರಿತೋಷಯ ।
ಗೋಪಕನ್ಯಾಸಹಸ್ರಾಣಿ ರಮಯಂಶ್ಚರ ಮೇದಿನೀಮ್ ।। ೧-೫೫-೪೨
ಮಹೀತಲದಲ್ಲಿ ದೇವಕೀ ಮತ್ತು ರೋಹಿಣಿಯರ ಗರ್ಭಗಳಲ್ಲಿ ನಿನ್ನನ್ನು ನೀನೇ ಅವತರಿಸಿಕೊಂಡು ಅವರನ್ನು ಸಂತೋಷಗೊಳಿಸು. ಸಹಸ್ರಾರು ಗೋಪಕನ್ಯೆಯರನ್ನು ರಮಿಸುತ್ತಾ ಮೇದಿನಿಯಲ್ಲಿ ಸಂಚರಿಸು.
ಗಾಶ್ಚ ತೇ ರಕ್ಷತೋ ವಿಷ್ಣೋ ವನಾನಿ ಪರಿಧಾವತಃ ।
ವನಮಾಲಾಪರಿಕ್ಷಿಪ್ತಂ ಧನ್ಯಾ ದ್ರಕ್ಷ್ಯಂತಿ ತೇ ವಪುಃ ।। ೧-೫೫-೪೩
ವಿಷ್ಣೋ! ಗೋವುಗಳನ್ನು ರಕ್ಷಿಸುತ್ತಾ ನೀನು ವನಗಳಲ್ಲಿ ಓಡಾಡುತ್ತಿರುವಾಗ ವನಮಾಲಾಭೂಷಿತನಾದ ನಿನ್ನ ರೂಪವನ್ನು ಕಂಡು ಜನರು ಧನ್ಯರಾಗುತ್ತಾರೆ.
ವಿಷ್ಣೌ ಪದ್ಮಪಲಾಶಾಕ್ಷೇ ಗೋಪಾಲವಸತಿಂ ಗತೇ ।
ಬಾಲೇ ತ್ವಯಿ ಮಹಾಬಾಹೋ ಲೋಕೋ ಬಾಲತ್ವಮೇಷ್ಯತಿ ।। ೧-೫೫-೪೪
ಮಹಾಬಾಹೋ! ವಿಷ್ಣೋ! ಪದ್ಮದಳದ ಕಣ್ಣುಗಳುಳ್ಳ ನೀನು ಗೋಪಾಲನ ಗೃಹದಲ್ಲಿ ಬಾಲಕನಾಗಿರುವ ನಿನ್ನನ್ನು ನೋಡಿ ಲೋಕವೇ ಬಾಲತ್ವವನ್ನು ಹೊಂದುತ್ತದೆ.
ತ್ವದ್ಭಕ್ತಾಃ ಪುಂಡರೀಕಾಕ್ಷ ತವ ಚಿತ್ತವಶಾನುಗಾಃ ।
ಗೋಷು ಗೋಪಾ ಭವಿಷ್ಯಂತಿ ಸಹಾಯಾಃ ಸತತಂ ತವ ।
ವನೇ ಚಾರಯತೋ ಗಾಶ್ಚ ಗೋಷ್ಠೇಷು ಪರಿಧಾವತಃ ।। ೧-೫೫-೪೫
ಪುಂಡರೀಕಾಕ್ಷ! ನಿನ್ನ ಚಿತ್ತದಂತೆ ನಡೆದುಕೊಳ್ಳುವ ನಿನ್ನ ಭಕ್ತರು ಗೋವುಗಳ ಮಧ್ಯದಲ್ಲಿ ಗೋಪರಾಗಿ ಸತತವೂ ನಿನ್ನ ಸಹಾಯಮಾಡುತ್ತಾರೆ.
ವನೇ ಚಾರಯತೋ ಗಾಶ್ಚ ಗೋಷ್ಠೇಷು ಪರಿಧಾವತಃ।
ಮಜ್ಜತೋ ಯಮುನಾಯಾಂ ಚ ರತಿಂ ಪ್ರಾಪ್ಸ್ಯಂತಿ ತೇ ತ್ವಯಿ ।
ಜೀವಿತಂ ವಸುದೇವಸ್ಯ ಭವಿಷ್ಯತಿ ಸುಜೀವಿತಮ್ ।। ೧-೫೫-೪೬
ನೀನು ವನಗಳಲ್ಲಿ ಗೋವುಗಳೊಡನೆ ಓಡಾಡುತ್ತಿರುವಾಗ ಮತ್ತು ಯಮುನೆಯಲ್ಲಿ ಮುಳುಗೇಳುತ್ತಿರುವಾಗ ಅವರು ನಿನ್ನೊಡನೆ ರಮಿಸುತ್ತಾರೆ. ವಸುದೇವನ ಜೀವಿತವು ಉತ್ತಮ ಜೀವನವಾಗುವುದು.
ಯಸ್ತ್ವಯಾ ತಾತ ಇತ್ಯುಕ್ತಃ ಸ ಪುತ್ರ ಇತಿ ವಕ್ಷ್ಯತಿ ।
ಅಥ ವಾ ಕಸ್ಯ ಪುತ್ರತ್ವಂ ಗಚ್ಛೇಥಾಃ ಕಶ್ಯಪಾದೃತೇ ।। ೧-೫೫-೪೭
ನೀನು ಅವನನ್ನು ಅಪ್ಪಾ ಎಂದು ಕರೆಯುತ್ತೀಯೆ ಮತ್ತು ಅವನು ನಿನ್ನನ್ನು ಪುತ್ರ ಎಂದು ಕರೆಯುತ್ತಾನೆ. ಕಶ್ಯಪನಲ್ಲದೇ ಬೇರೆ ಯಾರು ತಾನೇ ನಿನ್ನನ್ನು ಪುತ್ರನನ್ನಾಗಿ ಪಡೆಯಬಲ್ಲನು?
ಕಾ ಚ ಧಾರಯಿತುಂ ಶಕ್ತಾ ತ್ವಂ ವಿಷ್ಣೋ ಅದಿತಿಂ ವಿನಾ ।
ಯೋಗೇನಾತ್ಮಸಮುತ್ಥೇನ ಗಚ್ಛ ತ್ವಂ ವಿಜಯಾಯ ವೈ ।
ವಯಮಪ್ಯಾಲಯಾನ್ಸ್ವಾನ್ಸ್ವಾನ್ಗಚ್ಛಾಮೋ ಮಧುಸೂದನ ।। ೧-೫೫-೪೮
ವಿಷ್ಣೋ! ಅದಿತಿಯಲ್ಲದೇ ಬೇರೆ ಯಾರು ತಾನೇ ನಿನ್ನನ್ನು ಧರಿಸಲು ಶಕ್ತಳು? ಮಧುಸೂದನ! ನಿನ್ನದೇ ಯೋಗದಿಂದ ಮೇಲೆದ್ದು ವಿಜಯಕ್ಕಾಗಿ ಪ್ರಸ್ಥಾನಿಸು. ನಾವು ಕೂಡ ನಮ್ಮ ನಮ್ಮ ನಿವಾಸಸ್ಥಾನಗಳಿಗೆ ಹೋಗುತ್ತೇವೆ.””
ವೈಶಂಪಾಯನ ಉವಾಚ
ಸ ದೇವಾನಭ್ಯನುಜ್ಞಾಯ ವಿವಿಕ್ತೇ ತ್ರಿದಿವಾಲಯೇ ।
ಜಗಾಮ ವಿಷ್ಣುಃ ಸ್ವಂ ದೇಶಂ ಕ್ಷೀರೋದಸ್ಯೋತ್ತರಾಂ ದಿಶಮ್ ।। ೧-೫೫-೪೯
ವೈಶಂಪಾಯನನು ಹೇಳಿದನು: “ತ್ರಿದಿವಾಲಯದಲ್ಲಿ ಕುಳಿತಿದ್ದ ವಿಷ್ಣುವು ದೇವತೆಗಳಿಗೆ ಅನುಮತಿಯನ್ನಿತ್ತು ಕ್ಷೀರಸಾಗರದ ಉತ್ತರದಿಶೆಯಲ್ಲಿದ್ದ ಸ್ವಸ್ಥಾನಕ್ಕೆ ತೆರಳಿದನು.
ತತ್ರ ವೈ ಪಾರ್ವತೀ ನಾಮ ಗುಹಾ ಮೇರೋಃ ಸುದುರ್ಗಮಾ ।
ತ್ರಿಭಿಸ್ತಸ್ಯೈವ ವಿಕ್ರಾಂತೈರ್ನಿತ್ಯಂ ಪರ್ವಸು ಪೂಜಿತಾ ।। ೧-೫೫-೫೦
ಅಲ್ಲಿ ಮೇರುಪರ್ವತದ ಪಾರ್ವತೀ ಎಂಬ ಹೆಸರಿನ ಅತ್ಯಂತ ದುರ್ಗಮ ಗುಹೆಯಿದೆ. ಅಲ್ಲಿ ವಿಷ್ಣುವಿನ ಮೂರು ಪಾದಗಳ ಚಿಹ್ನೆಯಿದೆ. ಅದು ಪರ್ವ-ಪರ್ವಗಳಲ್ಲಿ ಪೂಜಿಸಲ್ಪಡುತ್ತದೆ.
ಪುರಾಣಂ ತತ್ರ ವಿನ್ಯಸ್ಯ ದೇಹಂ ಹರಿರುದಾರಧೀಃ ।
ಆತ್ಮಾನಂ ಯೋಜಯಾಮಾಸ ವಸುದೇವಗೃಹೇ ಪ್ರಭುಃ ।। ೧-೫೫-೫೧
ಆ ಗುಹೆಯಲ್ಲಿ ತನ್ನ ಪುರಾತನ ದೇಹವನ್ನು ಇರಿಸಿ ಉದಾರಧೀ ಹರಿ ಪ್ರಭುವು ತನ್ನನ್ನು ತಾನೇ ವಸುದೇವನ ಗೃಹದಲ್ಲಿ ಅವತರಿಸಿದನು.”
ಸಮಾಪ್ತಿ
ಇತಿ ಶ್ರೀಮಹಾಭಾರತೇ ಖಿಲೇಷು ಹರಿವಂಶೇ ಹರಿವಂಶಪರ್ವಣಿ ಪಿತಾಮಹವಾಕ್ಯೇ ಪಂಚಪಂಚಾಶತ್ತಮೋಽಧ್ಯಾಯಃ
ಹರಿವಂಶೇ ಹರಿವಂಶಪರ್ವ ಸಮಾಪ್ತಮ್।।