054: ವಿಷ್ಣುಂ ಪ್ರತಿ ದೇವರ್ಷೇರ್ವಾಕ್ಯಮ್

ಪ್ರವೇಶ

।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।

ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ

ಶ್ರೀ ಮಹಾಭಾರತ

ಖಿಲಭಾಗೇ ಹರಿವಂಶಃ

ಹರಿವಂಶ ಪರ್ವ

ಅಧ್ಯಾಯ 54

ಸಾರ

ವೈಶಂಪಾಯನ ಉವಾಚ।
ಕೃತಕಾರ್ಯೇ ಗತೇ ಕಾಲೇ ಜಗತ್ಯಾಂ ಚ ಯಥಾನಯಮ್।
ಅಂಶಾವತರಣೇ ವೃತ್ತೇ ಸುರಾಣಾಂ ಭಾರತೇ ಕುಲೇ।। ೧-೫೪-೧
ಭಾಗೇಽವತೀರ್ಣೇ ಧರ್ಮಸ್ಯ ಶಕ್ರಸ್ಯ ಪವನಸ್ಯ ಚ।
ಅಶ್ವಿನೋರ್ದೇವಭಿಷಜೋರ್ಭಾಗೇ ವೈ ಭಾಸ್ಕರಸ್ಯ ಚ।। ೧-೫೪-೨
ಪೂರ್ವಮೇವಾವನಿಗತೇ ಭಾಗೇ ದೇವಪುರೋಧಸಃ।
ವಸೂನಾಮಷ್ಟಮೇ ಭಾಗೇ ಪ್ರಾಗೇವ ಧರಣೀಂ ಗತೇ ।। ೧-೫೪-೩
ಮೃತ್ಯೋರ್ಭಾಗೇ ಕ್ಷಿತಿಗತೇ ಕಲೇರ್ಭಾಗೇ ತಥೈವ ಚ ।
ಭಾಗೇ ಶುಕ್ರಸ್ಯ ಸೋಮಸ್ಯ ವರುಣಸ್ಯ ಚ ಗಾಂ ಗತೇ ।। ೧-೫೪-೪
ಶಂಕರಸ್ಯ ಗತೇ ಭಾಗೇ ಮಿತ್ರಸ್ಯ ಧನದಸ್ಯ ಚ ।
ಗಂಧರ್ವೋರಗಯಕ್ಷಾಣಾಂ ಭಾಗಾಂಶೇಷು ಗತೇಷು ಚ ।। ೧-೫೪-೫
ಭಾಗೇಷ್ವೇತೇಷು ಗಗನಾದವತೀರ್ಣೇಷು ಮೇದಿನೀಮ್ ।
ತಿಷ್ಠನ್ನಾರಾಯಣಸ್ಯಾಂಶೇ ನಾರದಃ ಸಮದೃಶ್ಯತ ।। ೧-೫೪-೬

ವೈಶಂಪಾಯನನು ಹೇಳಿದನು: “ಪೃಥ್ವಿ ಮತ್ತು ಕಾಲರು ಕೃತಕೃತ್ಯರಾದೆವೆಂದು ಹಿಂದಿರುಗಲು, ಭಾರತ ಕುಲದಲ್ಲಿ ಸುರರ ಅಂಶಾವತರಣವು ನಡೆಯಲು, ಧರ್ಮ-ಶಕ್ರ-ಪವನ-ಭಿಷಜರಾದ ಅಶ್ವಿನೀ ದೇವತೆಗಳು ಮತ್ತು ಸೂರ್ಯನೂ ಕೂಡ ಭಾಗಗಳಲ್ಲಿ ಅವತರಿಸಿದನಂತರ, ದೇವಪುರೋಹಿತ ಬೃಹಸ್ಪತಿಯು ಭಾಗದಲ್ಲಿ ಮೊದಲೇ ಭುವಿಯಲ್ಲಿ ಅವತರಿಸಿದ್ದಾಗ, ವಸುಗಳ ಎಂಟನೇ ಒಂದು ಭಾಗವು ಮೊದಲೇ ಧರಣೀಗತವಾಗಿದ್ದಾಗ, ಮೃತ್ಯು ಮತ್ತು ಕಲಿಯ ಭಾಗಗಳು ಕ್ಷಿತಿಗತವಾಗಿದ್ದಾಗ, ಶುಕ್ರ,ಸೋ ಮ-ವರುಣರ ಭಾಗಗಳು ಭೂಮಿಯಲ್ಲಿ ಅವತರಿಸಿದ್ದಾಗ, ಶಂಕರ-ಮಿತ್ರ-ಕುಬೇರರ ಗಂಧರ್ವ-ಉರಗ-ಯಕ್ಷರು ಭಾಗಂಶಗಳಲ್ಲಿ ಭೂಮಿಗೆ ಹೋಗಿರಲು ಗಗದಿಂದ ಮೇದಿನಿಗೆ ಇಳಿದ್ದಾಗ ನಾರಾಯಣನ ಅಂಶದ ಮುಂದೆ ನಾರದನು ಕಾಣಿಸಿಕೊಂಡನು.

ಜ್ವಲಿತಾಗ್ನಿಪ್ರತೀಕಾಶೋ ಬಾಲಾರ್ಕಸದೃಶೇಕ್ಷಣಃ ।
ಸವ್ಯಾಪವೃತ್ತಂ ವಿಪುಲಂ ಜಟಾಮಂಡಲಮುದ್ವಹನ್ ।। ೧-೫೪-೭

ಆಗ ನಾರದನ ತೇಜಸ್ವೀ ಶರೀರವು ಪ್ರಜ್ವಲಿತ ಅಗ್ನಿಯಂತೆ ಪ್ರಕಾಶಿತವಾಗಿತ್ತು. ಅವನ ಕಣ್ಣುಗಳು ಉದಯಿಸುತ್ತಿರುವ ಸೂರ್ಯನಂತಿದ್ದವು. ಅವನು ವಾಮಾವರ್ತ ವಿಶಾಲ ಜಟಾಮಂಡಲವನ್ನು ಧರಿಸಿದ್ದನು.

ಚಂದ್ರಾಂಶುಶುಕ್ಲೇ ವಸನೇ ವಸಾನೋ ರುಕ್ಮಭೂಷಿತಃ ।
ವೀಣಾಂ ಗೃಹೀತ್ವಾ ಮಹತೀಂ ಕಕ್ಷಾಸಕ್ತಾಂ ಸಖೀಮಿವ ।। ೧-೫೪-೮

ಚಂದ್ರನ ಕಿರಣಗಳಂತಿದ್ದ ಶ್ವೇತ ವಸ್ತ್ರವನ್ನುಟ್ಟಿದ್ದನು. ರುಕ್ಮವಿಭೂಷಿತನಾಗಿದ್ದನು. ಮಹತೀ ಎನ್ನುವ ವೀಣೆಯನ್ನು, ತನ್ನ ಸಖಿಯೋ ಎನ್ನುವಂತೆ ಅಪ್ಪಿಹಿಡಿದ್ದಿದ್ದನು.

ಕೃಷ್ಣಾಜಿನೋತ್ತರಾಸಂಗೋ ಹೇಮಯಜ್ಞೋಪವೀತವಾನ್ ।
ದಂಡೀ ಕಮಂಡಲುಧರಃ ಸಾಕ್ಷಾಚ್ಛಕ್ರ ಇವಾಪರಃ ।। ೧-೫೪-೯

ಕೃಷ್ಣಾಜಿನವನ್ನು ಉತ್ತರೀಯವನ್ನಾಗಿ ಹೊದೆದಿದ್ದನು. ಚಿನ್ನದ ಯಜ್ಞೋಪವೀತವನ್ನು ಧರಿಸಿದ್ದನು. ದಂಡ-ಕಮಂಡಲುಗಳನ್ನು ಹಿಡಿದಿದ್ದನು. ಸಾಕ್ಷಾತ್ ಇನ್ನೊಬ್ಬ ಶಕ್ರನೋ ಎನ್ನುವಂತೆ ಕಾಣುತ್ತಿದ್ದನು.

ಭೇತ್ತಾ ಜಗತಿ ಗುಹ್ಯಾನಾಂ ವಿಗ್ರಹಾಣಾಂ ಗ್ರಹೋಪಮಃ ।
ಗಾತಾ ಚತುರ್ಣಾಂ ವೇದಾನಾಮುದ್ಗಾತಾ ಪ್ರಥಮರ್ತ್ವಿಜಾಮ್ ।
ಮಹರ್ಷಿವಿಗ್ರಹರುಚಿರ್ವಿದ್ವಾನ್ಗಾಂಧರ್ವಕೋವಿದಃ ।। ೧-೫೪-೧೦

ಅವನು ಜಗತ್ತಿನ ಗುಹ್ಯವಿಷಗಳನ್ನು ಯುದ್ಧಗಳುಂಟಾಗುವಷ್ಟು ಬಹಿರಂಗಪಡಿಸುವವನಾಗಿದ್ದನು. ಮುಂದೆ ಆಗಬಹುದಾದ ಯುದ್ಧಗಳನ್ನು ಮುನ್ಸೂಚುವ ಗ್ರಹಗಳಂತಿದ್ದನು. ಅವನು ನಾಲ್ಕೂವೇದಗಳ ಗಾಯಕನಾಗಿದ್ದನು ಮತ್ತು ಮುಖ್ಯ ಋತ್ವಿಜರಲ್ಲಿ ಉದ್ಗಾತನಾಗಿದ್ದನು. ಮಹರ್ಷಿಯಾಗಿದ್ದರೂ ಯುದ್ಧನೋಡುವುದರಲ್ಲಿ ರುಚಿಯನ್ನಿಟ್ಟಿದ್ದನು. ಮತ್ತು ವಿದ್ವಾನನಾಗಿದ್ದರೂ ಸಂಗೀತವಿದ್ಯೆಯ ಕೋವಿದನಾಗಿದ್ದನು.

ವೈರಿಕೇಲಿಕಿಲೋ ವಿಪ್ರೋ ಬ್ರಾಹ್ಮಃ ಕಲಿರಿವಾಪರಃ ।
ದೇವಗಂಧರ್ವಲೋಕಾನಾಮಾದಿವಕ್ತಾ ಮಹಾಮುನಿಃ ।। ೧-೫೪-೧೧

ಇತರರು ಜಗಳವಾಡುವಂತೆ ಮಾಡುವುದು ಅವನಿಗೆ ಒಂದು ಆಟವಾಗಿತ್ತು. ಅವನು ಬ್ರಾಹ್ಮಣ ಮತ್ತು ಬ್ರಹ್ಮಪುತ್ರನೇ ಆಗಿದ್ದರೂ ಅವನನ್ನು ಎರಡನೇ ಕಲಿ ಎಂದು ತಿಳಿಯುತ್ತಿದ್ದರು. ಮಹಾಮುನಿ ನಾರದನು ದೇವ-ಗಂಧರ್ವಲೋಕಗಳ ಆದಿವಕ್ತಾರನಾಗಿದ್ದನು.

ಸ ನಾರದೋಽಥ ಬ್ರಹ್ಮರ್ಷಿರ್ಬ್ರಹ್ಮಲೋಕಚರೋಽವ್ಯಯಃ ।
ಸ್ಥಿತೋ ದೇವಸಭಾಮಧ್ಯೇ ಸಂರಬ್ಧೋ ವಿಷ್ಣುಮಬ್ರವೀತ್ ।। ೧-೫೪-೧೨

ಬ್ರಹ್ಮಲೋಕಸಂಚಾರಿಯಾದ ಆ ಅವ್ಯಯ ಬ್ರಹ್ಮರ್ಷಿ ನಾರದನು ಈ ಸಮಯ ದೇವಸಭಾಮಧ್ಯದಲ್ಲಿ ಬಂದು ನಿಂತು ರೋಷಾವೇಶದಿಂದ ವಿಷ್ಣುವಿಗೆ ಹೇಳಿದನು:

ಅಂಶಾವತರಣಂ ವಿಷ್ಣೋರ್ಯದಿದಂ ತ್ರಿದಶೈಃ ಕೃತಮ್ ।
ಕ್ಷಯಾರ್ಥಂ ಪೃಥಿವೀಂದ್ರಾಣಾಂ ಸರ್ವಮೇತದಕಾರಣಮ್ ।। ೧-೫೪ ೧೩

“ವಿಷ್ಣೋ! ಪೃಥ್ವೀಂದ್ರರ ಕ್ಷಯಕ್ಕಾಗಿ ತ್ರಿದಶರು ಕೈಗೊಂಡ ಈ ಅಂಶಾತರಣವೆಲ್ಲವೂ ನಿಷ್ಫಲವಾಗಿಹೋಯಿತು!

ಯದೇತತ್ಪಾರ್ಥಿವಂ ಕ್ಷತ್ರಂ ಸ್ಥಿತಂ ತ್ವಯಿ ಯದೀಶ್ವರ ।
ನೃನಾರಾಯಣಯುಕ್ತೋಽಯಂ ಕಾರ್ಯಾರ್ಥಃ ಪ್ರತಿಭಾತಿ ಮೇ ।। ೧-೫೪-೧೪

ಈಶ್ವರ! ಪಾರ್ಥಿವರ ಈ ಯುದ್ಧವು ನಿನ್ನ ಮೇಲೆಯೇ ಅವಲಂಬಿಸಿದೆ. ನರ-ನಾರಾಯಣರ ಸಂಗಮದಿಂದಲೇ ಈ ಕಾರ್ಯವು ನಡೆಯಬಲ್ಲದು ಎಂದು ನನಗನ್ನಿಸುತ್ತದೆ!

ನ ಯುಕ್ತಂ ಜಾನತಾ ದೇವ ತ್ವಯಾ ತತ್ವಾರ್ಥದರ್ಶಿನಾ ।
ದೇವದೇವ ಪೃಥಿವ್ಯರ್ಥೇ ಪ್ರಯೋಕ್ತುಂ ಕಾರ್ಯಮೀದೃಶಮ್ ।। ೧-೫೪-೧೫

ದೇವ! ದೇವದೇವ! ತತ್ವಾರ್ಥದರ್ಶಿಯಾದ ನಿನಗೆ ಎಲ್ಲವೂ ತಿಳಿದಿದೆ. ಆದುದರಿಂದ ಪೃಥ್ವಿಗಾಗಿ ಅದು ಹಾಗಾಗದಿರುವುದು ಸರಿಯಲ್ಲ.

ತ್ವಂ ಹಿ ಚಕ್ಷುಷ್ಮತಾಂ ಚಕ್ಷುಃ ಶ್ಲಾಘ್ಯಃ ಪ್ರಭವತಾಂ ಪ್ರಭುಃ ।
ಶ್ರೇಷ್ಠೋ ಯೋಗವತಾಂ ಯೋಗೀ ಗತಿರ್ಗತಿಮತಾಮಪಿ ।। ೧-೫೪-೧೬

ಏಕೆಂದರೆ ಕಣ್ಣಿರುವವರ ಕಣ್ಣು ನೀನು. ಪ್ರಭುಗಳಿಗೆ ಪ್ರಭುವು. ಯೋಗವಂತ ಯೋಗಿಗಳಲ್ಲಿ ಶ್ರೇಷ್ಠನು ಮತ್ತು ಗತಿಶಾಲಿ ಜೀವಿಗಳ ಗತಿಯು.

ದೇವಭಾಗಾಂಗತಾಂದೃಷ್ಟ್ವಾ ಕಿಂ ತ್ವಂ ಸರ್ವಾಶ್ರಯೋ ವಿಭುಃ ।
ವಸುಂಧರಾಯಾಃ ಸಾಹ್ಯಾರ್ಥಮಂಶಂ ಸ್ವಂ ನಾನುಯುಂಜಸೇ ।। ೧-೫೪-೧೭

ಸರ್ವರಿಗೂ ಅಶ್ರಯನಾಗಿರುವ ಪ್ರಭೋ! ದೇವತೆಗಳು ತಮ್ಮ ತಮ್ಮ ಭಾಗಗಳಲ್ಲಿ ಅವತರಿಸಿರುವುದನ್ನು ನೋಡಿಯೂ ವಸುಂಧರೆಯ ಸಹಾಯಕ್ಕಾಗಿ ಸ್ವಯಂ ನೀನೂ ಅವತರಿಸುವುದಿಲ್ಲವೇ?

ತ್ವಯಾ ಸನಾಥ ದೇವಾಂಶಾಸ್ತ್ವನ್ಮಯಾಸ್ತ್ವತ್ಪರಾಯಣಾಃ ।
ಜಗತ್ಯಾಂ ಸಂಚರಿಷ್ಯಂತಿ ಕಾರ್ಯಾತ್ಕಾರ್ಯಾಂತರಂ ಗತಾಃ ।। ೧-೫೪-೧೮

ದೇವತೆಗಳ ಅಂಶಗಳೂ ನಿನ್ನದೇ ಸ್ವರೂಪವುಳ್ಳವುಗಳು ಮತ್ತು ನಿನ್ನನ್ನೇ ಆಶ್ರಯಿಸಿರುವವು. ನೀನೂ ಅವರ ಜೊತೆಯಿದ್ದರೆ ಜಗತ್ತಿನ ಅವರು ಒಂದು ಕಾರ್ಯದಿಂದ ಇನ್ನೊಂದು ಕಾರ್ಯದಲ್ಲಿ ತೊಡಗಿಸಿಕೊಳ್ಳಬಲ್ಲರು.

ತದಹಂ ತ್ವರಯಾ ವಿಷ್ಣೋ ಪ್ರಾಪ್ತಃ ಸುರಸಭಾಮಿಮಾಮ್ ।
ತವ ಸಂಚೋದನಾರ್ಥಂ ವೈ ಶೃಣು ಚಾಪ್ಯತ್ರ ಕಾರಣಮ್ ।। ೧-೫೪-೧೯

ವಿಷ್ಣೋ! ಅದಕ್ಕಾಗಿಯೇ ನಾನು ತ್ವರೆಮಾಡಿ ನಿನ್ನನ್ನು ಪ್ರಚೋದನೆಗೊಳಿಸಲಾಗಿಯೇ ಈ ಸುರಸಭೆಯನ್ನು ತಲುಪಿದ್ದೇನೆ. ಅದರ ಕಾರಣವನ್ನು ಕೇಳು.

ಯೇ ತ್ವಯಾ ನಿಹತಾ ದೈತ್ಯಾಃ ಸಂಗ್ರಾಮೇ ತಾರಕಾಮಯೇ ।
ತೇಷಾಂ ಶೃಣು ಗತಿಂ ವಿಷ್ಣೋ ಯೇ ಗತಾಃ ಪೃಥಿವೀತಲಮ್ ।। ೧-೫೪-೨೦

ವಿಷ್ಣೋ! ತಾರಕಾಮಯ ಸಂಗ್ರಾಮದಲ್ಲಿ ನಿನ್ನಿಂದ ಹತರಾಗಿದ್ದ ದೈತ್ಯರು ಪೃಥಿವೀತಲಕ್ಕೆ ಹೋಗಿದ್ದಾರೆ. ಅಲ್ಲಿ ಅವರ ಅವಸ್ಥೆಯನ್ನು ಕೇಳು.

ಪುರೀ ಪೃಥಿವ್ಯಾಂ ಮುದಿತಾ ಮಥುರಾ ನಾಮತಃ ಶ್ರುತಾ ।
ನಿವಿಷ್ಟಾ ಯಮುನಾತೀರೇ ಸ್ಫೀತಾ ಜನಪದಾಯುತಾ ।। ೧-೫೪-೨೧

ಪೃಥ್ವಿಯಲ್ಲಿ ಮಥುರಾ ಎಂಬ ಹೆಸರಿನ ಮುದಿತ ಪುರಿಯು ವಿಶ್ರುತವಾಗಿದೆ. ಸಂಪದ್ಭರಿತವಾದ ಆ ನಗರಿಯು ಯಮುನಾತೀರದಲ್ಲಿದೆ. ಅದರ ಸುತ್ತಲೂ ಅನೇಕ ಜನಪದಗಳಿವೆ.

ಮಧುರ್ನಾಮ ಮಹಾನಾಸೀದ್ದಾನವೋ ಯುಧಿ ದುರ್ಜಯಃ ।
ತ್ರಾಸನಃ ಸರ್ವಭೂತಾನಾಂ ಬಲೇನ ಮಹತಾನ್ವಿತಃ ।। ೧-೫೪-೨೨

ಹಿಂದೆ ಅಲ್ಲಿ ಯುದ್ಧದಲ್ಲಿ ದುರ್ಜಯನಾಗಿದ್ದ ಮಧು ಎಂಬ ಹೆಸರಿನ ಮಹಾ ದಾನವನು ಮಹಾ ಬಲದಿಂದ ಕೂಡಿದವನಾಗಿ ಸರ್ವಭೂತಗಳನ್ನೂ ಪೀಡಿಸುತ್ತಿದ್ದನು.

ತಸ್ಯ ತತ್ರ ಮಹಚ್ಚಾಸೀನ್ಮಹಾಪಾದಪಸಂಕುಲಮ್ ।
ಘೋರಂ ಮಧುವನಂ ನಾಮ ಯತ್ರಾಸೌ ನ್ಯವಸತ್ಪುರಾ ।। ೧-೫೪-೨೩

ಅದೇ ಘೋರವೂ ವಿಶಾಲವೂ ಆಗಿದ್ದ ಮಧುವನ ಎಂಬ ಹೆಸರಿನ ವನವಾಗಿತ್ತು. ಅಲ್ಲಿಯೇ ಹಿಂದೆ ಅವನು ವಾಸಿಸುತ್ತಿದ್ದನು.

ತಸ್ಯ ಪುತ್ರೋ ಮಹಾನಾಸೀಲ್ಲವಣೋ ನಾಮ ದಾನವಃ ।
ತ್ರಾಸನಃ ಸರ್ವಭೂತಾನಾಂ ಮಹಾಬಲಪರಾಕ್ರಮಃ ।। ೧-೫೪-೨೪

ಅವನ ಮಗ ಲವಣ ಎಂಬ ಹೆಸರಿನ ಮಹಾ ದಾನವನಾಗಿದ್ದನು. ಮಹಾಬಲ ಪರಾಕ್ರಮಿಯಾಗಿದ್ದ ಅವನೂ ಸರ್ವಭೂತಗಳನ್ನು ಪೀಡಿಸುತ್ತಿದ್ದನು.

ಸ ತತ್ರ ದಾನವಃ ಕ್ರೀಡನ್ವರ್ಷಪೂಗಾನನೇಕಶಃ ।
ಸ ದೈವತಗಣಾಲ್ಲೋಕಾನುದ್ವಾಸಯತಿ ದರ್ಪಿತಃ ।। ೧-೫೪-೨೫

ಅಲ್ಲಿ ಆ ದಾನವನು ಅನೇಕ ವರ್ಷಗಳ ವರೆಗೆ ಆಟವಾಡುತ್ತಿದ್ದನು. ದರ್ಪಿತನಾದ ಅವನು ದೈವತಗಣಗಳನ್ನೂ ಲೋಕಗಳನ್ನು ಉದ್ವಿಗ್ನಗೊಳಿಸತೊಡಗಿದನು.

ಅಯೋಧ್ಯಾಯಾಮಯೋಧ್ಯಾಯಾಂ ರಾಮೇ ದಾಶರಥೌ ಸ್ಥಿತೇ ।
ರಾಜಂ ಶಾಸತಿ ಧರ್ಮಜ್ಞೇ ರಾಕ್ಷಸಾನಾಂ ಭಯಾವಹೇ ।। ೧-೫೪-೨೬
ಸ ದಾನವೋ ಬಲಶ್ಲಾಘೀ ಘೋರಂ ವನಮುಪಾಶ್ರಿತಃ ।
ಪ್ರೇಷಯಾಮಾಸ ರಾಮಾಯ ದೂತಂ ಪರುಷವಾದಿನಮ್ ।। ೧-೫೪-೨೭

ಅಯೋಧನೀಯವಾಗಿದ್ದ ಅಯೋಧ್ಯೆಯಲ್ಲಿ ರಾಕ್ಷಸರಿಗೆ ಭಯವನ್ನುಂಟುಮಾಡುವ ಧರ್ಮಜ್ಞ ದಾಶರಥಿ ರಾಮನು ರಾಜ್ಯವಾಳುತ್ತಿದ್ದಾಗ ಆ ಘೋರ ವನವನ್ನು ಆಶ್ರಯಿಸಿದ್ದ ಬಲಶ್ಲಾಘೀ ದಾನವನು ರಾಮನಿಗೆ ಕಟುಭಾಷೀ ದೂತನನ್ನು ಕಳುಹಿಸಿದ್ದನು.

ವಿಷಯಾಸನ್ನಭೂತೋಽಸ್ಮಿ ತವ ರಾಮ ರಿಪುಶ್ಚ ಹ ।
ನ ಚ ಸಾಮಂತಮಿಚ್ಛಂತಿ ರಾಜಾನೋ ಬಲದರ್ಪಿತಮ್ ।। ೧-೫೪-೨೮

“ರಾಮ! ನಿನ್ನ ರಾಜ್ಯದಲ್ಲಿಯೇ ನಾನು ವಾಸಿಸುತ್ತಿದ್ದೇನ ಮತ್ತು ನಿನ್ನ ಶತ್ರುವೂ ಕೂಡ ಆಗಿದ್ದೇನೆ. ರಾಜರು ಬಲದರ್ಪಿತನನ್ನು ಸಾಮಂತನನ್ನಾಗಿ ಪಡೆದುಕೊಳ್ಳಲು ಇಚ್ಛಿಸುವುದಿಲ್ಲ.

ರಾಜ್ಞಾ ರಾಜ್ಯವ್ರತಸ್ಥೇನ ಪ್ರಜಾನಾಂ ಹಿತಕಾಮ್ಯಯಾ ।
ಜೇತವ್ಯಾ ರಿಪವಃ ಸರ್ವೇ ಸ್ಫೀತಂ ವಿಷಯಮಿಚ್ಛತಾ ।। ೧-೫೪-೨೯

ಸಮೃದ್ಧಶೀಲ ರಾಜ್ಯವನ್ನು ಬಯಸುವವರಿಲ್ಲರೂ ರಾಜ್ಯವ್ರತರಾದ ರಾಜರು ಪ್ರಜೆಗಳ ಹಿತವನ್ನು ಬಯಸಿ ಶತ್ರುಗಳೆಲ್ಲರನ್ನೂ ಜಯಿಸುತ್ತಾರೆ.

ಅಭಿಷೇಕಾರ್ದ್ರಕೇಶೇನ ರಾಜ್ಞಾ ರಂಜನಕಾಮ್ಯಯಾ ।
ಜೇತವ್ಯಾನೀಂದ್ರಿಯಾಣ್ಯಾದೌ ತಜ್ಜಯೇ ಹಿ ಧ್ರುವೋ ಜಯಃ ।। ೧-೫೪-೩೦

ರಾಜ್ಯಾಭಿಷೇಕದಿಂದ ತಲೆಗೂದಲು ಒದ್ದೆಯಾಗಿದ್ದ ರಾಜನು ಪ್ರಜೆಗಳನ್ನು ರಂಜಿಸಲೋಸುಗ ಮೊದಲು ತನ್ನ ಇಂದ್ರಿಯಗಳ ಮೇಲೆ ವಿಜಯವನ್ನು ಸಾಧಿಸಿದರೆ ನಿಶ್ಚಿತವಾಗಿಯೂ ಅವನಿಗೆ ಜಯವೊದಗುತ್ತದೆ.

ಸಮ್ಯಗ್ವರ್ತಿತುಕಾಮ್ಯಸ್ಯ ವಿಶೇಷೇಣ ಮಹೀಪತೇಃ ।
ನಯಾನಾಮುಪದೇಶೇನ ನಾಸ್ತಿ ಲೋಕಸಮೋ ಗುರುಃ ।। ೧-೫೪-೩೧

ಲೋಕದಲ್ಲಿ ನೀತಿಯ ಉಪದೇಶಗಳನ್ನು ನೀಡಲು ಉತ್ತಮವಾಗಿ ವರ್ತಿಸಲು ಬಯಸುವ, ವಿಶೇಷತಃ ಮಹೀಪತಿಯ ಸಮನಾದ ಗುರುವಿಲ್ಲ.

ವ್ಯಸನೇಷು ಜಘನ್ಯಸ್ಯ ಧರ್ಮಮಧ್ಯಸ್ಯ ಧೀಮತಃ ।
ಫಲಜ್ಯೇಷ್ಠಸ್ಯ ನೃಪತೇರ್ನಾಸ್ತಿ ಸಾಮಂತಜಂ ಭಯಮ್ ।। ೧-೫೪-೩೨

ವ್ಯಸನಗಳನ್ನು ಕಳೆದುಕೊಂಡು, ಧರ್ಮಮಧ್ಯಸ್ಥನಾದ ಧೀಮತ ಫಲಜ್ಯೇಷ್ಠ ನೃಪತಿಗೆ ಸಾಮಂತನಿಂದ ಭಯವಿರುವುದಿಲ್ಲ.

ಸಹಜೈರ್ಬಾಧ್ಯತೇ ಸರ್ವಃ ಪ್ರವೃದ್ಧೈರಿಂದ್ರಿಯಾರಿಭಿಃ ।
ಅಮಿತ್ರಾಣಾಂ ಪ್ರಿಯಕರೈರ್ಮೋಹೈರಧೃತಿರೀಶ್ವರಃ ।। ೧-೫೪-೩೩

ಶರೀರದ ಜೊತೆಗೇ ಉತ್ಪನ್ನವಾಗಿರುವ ಇಂದ್ರಿಯರೂಪೀ ಶತ್ರುಗಳು ಹೆಚ್ಚಾದಾಗ ಆ ಶತ್ರುಗಳ ಕೆಲಸವನ್ನು ಮಾಡುವಂಥಹ ಮೋಹವು ಉತ್ಪನ್ನವಾಗುತ್ತದೆ. ಆ ದಶೆಯಿಂದಾಗಿ ಎಲ್ಲ ಪುರುಷ ರಾಜರೂ ಧೈರ್ಯಹೀನರಾಗಿಬಿಡುತ್ತಾರೆ.

ಯತ್ತ್ವಯಾ ಸ್ತ್ರೀಕೃತೇ ಮೋಹಾತ್ಸಗಣೋ ರಾವಣೋ ಹತಃ ।
ನೈತದೌಪಯಿಕಂ ಮನ್ಯೇ ಮಹದ್ವೈ ಕರ್ಮ ಕುತ್ಸಿತಮ್ ।। ೧-೫೪-೩೪

ಮೋಹವಾಶನಾಗಿ ನೀನು ಓರ್ವ ಸ್ತ್ರೀಗಾಗಿ ಗಣಗಳ ಸಮೇತ ರಾವಣನನ್ನು ಕೊಂದದ್ದು ನ್ಯಾಯಸಂಗತವಾದದ್ದು ಎಂದು ನನಗನಿಸುವುದಿಲ್ಲ. ಆ ನಿನ್ನ ಕೃತ್ಯವು ಮಹತ್ತರವಾದುದಾರೂ ಕುತ್ಸಿತವಾದದ್ದು ಎಂದು ಅನ್ನಿಸುತ್ತದೆ.

ವನವಾಸಪ್ರವೃತ್ತೇನ ಯತ್ತ್ವಯಾ ವ್ರತಶಾಲಿನಾ ।
ಪ್ರಹೃತಂ ರಾಕ್ಷಸಾನೀಕೇ ನೈವ ದೃಷ್ಟಃ ಸತಾಂ ವಿಧಿಃ ।। ೧-೫೪-೩೫

ನೀನು ವನವಾಸ ಪೃತ್ತನಾಗಿದ್ದೆ. ವನವಾಸೀ ಮುನಿಗಳ ನಿಯಮಗಳನ್ನು ಪಾಲಿಸುವುದೇ ನಿನ್ನ ಕರ್ಮವಾಗಿತ್ತು. ಆ ಪರಿಸ್ಥಿತಿಯಲ್ಲಿ ಬೇರೆ ಯಾವ ಸತ್ಪುರುಷನೂ ನಿನ್ನಂತೆ ರಾಕ್ಷಸ ಸೇನೆಯನ್ನು ಪ್ರಹರಿಸಿರಲಿಲ್ಲ. ಅದನ್ನು ಎಂದೂ ನೋಡಿರಲಿಲ್ಲ.

ಸತಾಮಕ್ರೋಧಜೋ ಧರ್ಮಃ ಶುಭಾಂ ನಯತಿ ಸದ್ಗತಿಮ್ ।
ಯತ್ತ್ವಯಾ ನಿಹತಾ ಮೋಹಾದ್ದೂಷಿತಾಶ್ಚಾಶ್ರಮೌಕಸಃ ।। ೧-೫೪-೩೬

ಕ್ರೋಧವನ್ನು ಪರಿತ್ಯಜಿಸಿ ಸಾಧುಪುರುಷರು ಪಾಲಿಸುವ ಧರ್ಮವೇ ಶುಭ ಸದ್ಗತಿಯನ್ನು ನೀಡುತ್ತದೆ. ಮೋಹವಶನಾಗಿ ನೀನು ರಾಕ್ಷಸರನ್ನು ವಧಿಸಿದ್ದುದರಿಂದ ಎಲ್ಲ ಆಶ್ರಮವಾಸಿಗಳೂ ಕಲಂಕಿತರಾಗಿಹೋದರು.

ಸ ಏಷ ರಾವಣೋ ಧನ್ಯೋ ಯಸ್ತ್ವಯಾ ವ್ರತಚಾರಿಣಾ ।
ಸ್ತ್ರೀನಿಮಿತ್ತೇ ಹತೋ ಯುದ್ಧೇ ಗ್ರಾಮ್ಯಾಂಧರ್ಮಾನವೇಕ್ಷತಾ ।। ೧-೫೪-೩೭

ಗ್ರಾಮ್ಯಧರ್ಮವನ್ನೇ ಅವಲೋಕಿಸಿ ನಿನ್ನಂತಹ ವ್ರತಧಾರಿಯಿಂದ ಸ್ತ್ರೀಯ ಕಾರಣದಿಂದಾಗಿ ಹತನಾದ ಆ ರಾವಣನೇ ಧನ್ಯ!

ಯದಿ ತೇ ನಿಹತಃ ಸಂಖ್ಯೇ ದುರ್ಬುದ್ಧಿರಜಿತೇಂದ್ರಿಯಃ ।
ಯುದ್ಧ್ಯಸ್ವಾದ್ಯ ಮಯಾ ಸಾರ್ಧಂ ಮೃಧೇ ಯದ್ಯಸಿ ವೀರ್ಯವಾನ್ ।। ೧-೫೪-೩೮

ಒಂದು ವೇಳೆ ನೀನು ಆ ದುರ್ಬುದ್ಧಿ ಅಜಿತೇಂದ್ರಿಯನನ್ನು ಯುದ್ಧದಲ್ಲಿ ಸಂಹರಿಸಿ ರಣದಲ್ಲಿ ವೀರ್ಯವಾನನೆಂದು ಹೇಳಿಸಿಕೊಳ್ಳುವೆಯಾದರೆ ಇಂದು ನನ್ನೊಡನೆ ಯುದ್ಧಮಾಡು.”

ತಸ್ಯ ದೂತಸ್ಯ ತಚ್ಛ್ರುತ್ವಾ ಭಾಷಿತಂ ತತ್ತ್ವವಾದಿನಃ ।
ಧೈರ್ಯಾದಸಂಭ್ರಾಂತವಪುಃ ಸಸ್ಮಿತಂ ರಾಘವೋಽಬ್ರವೀತ್ ।। ೧-೫೪-೩೯

ಆ ದೂತನ ಮಾತುಗಳನ್ನು ಕೇಳಿ ತತ್ತ್ವವಾದೀ ರಾಘವನು ತನ್ನ ಸ್ವಾಭಾವಿಕ ಧೈರ್ಯದಿಂದ ವಿಚಲಿತನಾಗದೇ ಮುಗುಳ್ನಗುತ್ತಾ ಇಂತೆಂದನು:

ಅಸದೇತತ್ತ್ವಯಾ ದೂತ ಭಾಷಿತಂ ತಸ್ಯ ಗೌರವಾತ್ ।
ಯನ್ಮಾಂ ಕ್ಷಿಪಸಿ ದೋಷೇಣ ವೇದಾತ್ಮಾನಂ ಚ ಸುಸ್ಥಿರಮ್ ।। ೧-೫೪-೪೦

“ದೂತ! ಅವನ ಕುರಿತು ಗೌರವದಿಂದ ನೀನಾಡಿದ ಮಾತುಗಳು ಸುಳ್ಳು. ನಿನ್ನನ್ನು ನೀನು ನ್ಯಾಯಮಾರ್ಗದಲ್ಲಿರುವೆಯೆಂದು ತಿಳಿದು ನನ್ನಮೇಲೆ ದೋಷಗಳನ್ನು ಹೊರಿಸುತ್ತಿದ್ದೀಯೆ.

ಯದ್ಯಹಂ ಸತ್ಪಥೇ ಮೂಢೋ ಯದಿ ವಾ ರಾವಣೋ ಹತಃ ।
ಯದಿ ವಾ ಮೇ ಹೃತಾ ಭಾರ್ಯಾ ಕಾ ತತ್ರ ಪರಿದೇವನಾ ।। ೧-೫೪-೪೧

ನಾನು ಸತ್ಪಥದಲ್ಲಿರದ ಮೂಢನಾಗಿದ್ದರೆ, ಅಥವಾ ರಾವಣನು ಹತನಾಗಿದ್ದರೆ ಅಥವಾ ನನ್ನ ಭಾರ್ಯೆಯು ಅಪಹೃತಳಾಗಿದ್ದರೆ ಅದರಲ್ಲಿ ನೀನು ಪರಿವೇದನೆ ಪಡಬೇಕದುದು ಏನಿದೆ?

ನ ವಾಙ್ಮಾತ್ರೇಣ ದುಷ್ಯಂತಿ ಸಾಧವಃ ಸತ್ಪಥೇ ಸ್ಥಿತಾಃ ।
ಜಾಗರ್ತಿ ಚ ಯಥಾ ದೇವಃ ಸದಾ ಸತ್ಸ್ವಿತರೇಷು ಚ ।। ೧-೫೪-೪೨

ಸತ್ಪಥದಲ್ಲಿರುವ ಸಾಧುಗಳು ಯಾರದ್ದೋ ಹೇಳಿಕೆಯಿಂದ ಕಳಂಕಿತರಾಗುವುದಿಲ್ಲ. ಸತ್ಯ ಮತ್ತು ಅಸತ್ಯಗಳಲ್ಲಿ ದೇವನು ಸದಾ ಜಾಗೃತನಾಗಿರುತ್ತಾನೆ.

ಕೃತಂ ದೂತೇನ ಯತ್ಕಾರ್ಯಂ ಗಚ್ಛ ತ್ವಂ ದೂತ ಮಾ ಚಿರಮ್ ।
ನಾತ್ಮಶ್ಲಾಘಿಷು ನೀಚೇಷು ಪ್ರಹರಂತೀಹ ಮದ್ವಿಧಾಃ ।। ೧-೫೪-೪೩

ದೂತ! ದೂತನು ಮಾಡಬೇಕಾದ ಕಾರ್ಯವನ್ನು ನೀನು ಮಾಡಿದ್ದೀಯೆ. ಈಗ ತಡಮಾಡದೇ ಹೋಗು! ನನ್ನಂಥವರು ಆತ್ಮಶ್ಲಾಘನೆ ಮಾಡಿಕೊಳ್ಳುವ ನೀಚರನ್ನು ಪ್ರಹರಿಸುವುದಿಲ್ಲ.

ಅಯಂ ಮಮಾನುಜೋ ಭ್ರಾತಾ ಶತ್ರುಘ್ನಃ ಶತ್ರುತಾಪನಃ ।
ತಸ್ಯ ದೈತ್ಯಸ್ಯ ದುರ್ಬುದ್ಧೇರ್ಮೃಧೇ ಪ್ರತಿಕರಿಷ್ಯತಿ ।। ೧-೫೪-೪೪

ಈ ನನ್ನ ಅನುಜ ಭ್ರಾತಾ ಶತ್ರುತಾಪನ ಶತ್ರುಘ್ನನು ಯುದ್ಧದಲ್ಲಿ ಆ ದುರ್ಬುದ್ಧಿ ದೈತ್ಯನಿಗೆ ಪ್ರತೀಕಾರವನ್ನೆಸಗುತ್ತಾನೆ.”

ಏವಮುಕ್ತಃ ಸ ದೂತಸ್ತು ಯಯೌ ಸೌಮಿತ್ರಿಣಾ ಸಹ ।
ಅನುಜ್ಞಾತೋ ನರೇಂದ್ರೇಣ ರಾಘವೇಣ ಮಹಾತ್ಮನಾ ।। ೧-೫೪-೪೫

ಹೀಗೆ ಹೇಳಲು ಆ ದೂತನು ಮಹಾತ್ಮ ನರೇಂದ್ರ ರಾಘವನ ಅನುಮತಿಯನ್ನು ಪಡೆದು ಸೌಮಿತ್ರಿಯೊಡನೆ ಹೊರಟು ಹೋದನು.

ಸ ಶೀಘ್ರಯಾನಃ ಸಂಪ್ರಾಪ್ತಸ್ತದ್ದಾನವಪುರಂ ಮಹತ್ ।
ಚಕ್ರೇ ನಿವೇಶಂ ಸೌಮಿತ್ರಿರ್ವನಾಂತೇ ಯುದ್ಧಲಾಲಸಃ ।। ೧-೫೪-೪೬

ಯುದ್ಧಲಾಲಸ ಸೌಮಿತ್ರಿಯು ಶೀಘ್ರರಥದಲ್ಲಿ ಕುಳಿತು ಆ ಮಹಾ ದಾನವಪುರವನ್ನು ತಲುಪಿ ವನದ ಬುಡದಲ್ಲಿ ಶಿಬಿರವನ್ನು ಹೂಡಿದನು.

ತತೋ ದೂತಸ್ಯ ವಚನಾತ್ಸ ದೈತ್ಯಃ ಕ್ರೋಧಮೂರ್ಚ್ಛಿತಃ ।
ಪೃಷ್ಠತಸ್ತದ್ವನಂ ಕೃತ್ವಾ ಯುದ್ಧಾಯಾಭಿಮುಖಃ ಸ್ಥಿತಃ ।। ೧-೫೪-೪೭

ಅನಂತರ ದೂತನ ವಚನದಿಂದ ಕ್ರೋಧಮೂರ್ಛಿತನಾದ ದೈತ್ಯನು ಅವನನ್ನು ಅನುಸರಿಸಿ ಆ ವನಕ್ಕೆ ಹೋಗಿ ಯುದ್ಧಾಭಿಮುಖನಾಗಿ ನಿಂತನು.

ತದ್ಯುದ್ಧಮಭವದ್ಘೋರಂ ಸೌಮಿತ್ರೇರ್ದಾನವಸ್ಯ ಚ ।
ಉಭಯೋರೇವ ಬಲಿನೋಃ ಶೂರಯೋ ರಣಮೂರ್ಧನಿ ।। ೧-೫೪-೪೮

ರಣಮೂರ್ಧನಿಯಲ್ಲಿ ಬಲಿಗಳೂ ಶೂರರೂ ಆಗಿದ್ದ ಸೌಮಿತ್ರಿ ಮತ್ತು ದಾನವರ ಆ ಯುದ್ಧವು ಘೋರವಾಗಿತ್ತು.

ತೌ ಶರೈಃ ಸಾಧು ನಿಶಿತೈರನ್ಯೋನ್ಯಮಭಿಜಘ್ನತುಃ ।
ನ ಚ ತೌ ಯುದ್ಧವೈಮುಖ್ಯಂ ಶ್ರಮಂ ವಾಪ್ಯುಪಜಗ್ಮತುಃ ।। ೧-೫೪-೪೯

ಅವರಿಬ್ಬರೂ ನಿಶಿತ ಶರಗಳಿಂದ ಅನ್ಯೋನ್ಯರನ್ನು ಗಾಯಗೊಳಿಸಿದರು. ಅವರಿಬ್ಬರಲ್ಲಿ ಯಾರೂ ಯುದ್ಧದಿಂದ ಹಿಮ್ಮೆಟ್ಟಲಿಲ್ಲ ಮತ್ತು ಯಾರೂ ಬಳಲಲಿಲ್ಲ.

ಅಥ ಸೌಮಿತ್ರಿಣಾ ಬಾಣೈಃ ಪೀಡಿತೋ ದಾನವೋ ಯುಧಿ ।
ತತಃ ಸ ಶೂಲರಹಿತಃ ಪರ್ಯಹೀಯತ ದಾನವಃ ।। ೧-೫೪-೫೦

ಅನಂತರ ಯುದ್ಧದಲ್ಲಿ ಸೌಮಿತ್ರಿಯ ಬಾಣಗಳಿಂದ ಪೀಡಿತನಾದ ಆ ದಾನವನು ಶೂಲರಹಿತನಾದನು ಮತ್ತು ಆ ದಾನವನು ಶಕ್ತಿಹೀನನಾದನು.

ಸ ಗೃಹೀತ್ವಾಂಕುಶಂ ಚೈವ ದೇವೈರ್ದತ್ತವರಂ ರಣೇ ।
ಕರ್ಷಣಂ ಸರ್ವಭೂತಾನಾಂ ಲವಣೋ ವಿರರಾಸ ಹ ।। ೧-೫೪-೫೧

ಆಗ ಅವನು ದೇವತೆಗಳಿಂದ ವರವನ್ನಾಡಿ ಪಡೆದಿದ್ದ, ಸರ್ವಭೂತಗಳನ್ನೂ ಆಕರ್ಷಿಸಿಕೊಳ್ಳಬಹುದಾಗಿದ್ದ ಅಂಕುಶವನ್ನು ಹಿಡಿದು ಲವಣನು ಗರ್ಜಿಸತೊಡಗಿದನು.

ಶಿರೋಧರಾಯಾಂ ಜಗ್ರಾಹ ಸೋಽಂಕುಶೇನ ಚಕರ್ಷ ಹ ।
ಪ್ರವೇಶಯಿತುಮಾರಬ್ಧೋ ಲವಣೋ ರಾಘವಾನುಜಮ್ ।। ೧-೫೪-೫೨

ಲವಣನು ಆ ಅಂಕುಶವನ್ನು ರಾಘವಾನುಜನ ಕತ್ತಿಗೆ ಒತ್ತಿ ಎಳೆದು ಅವನ ಕುತ್ತಿಗೆಯನ್ನು ಚುಚ್ಚಲು ಪ್ರಾರಂಭಿಸಿದನು.

ಸ ರುಕ್ಮತ್ಸರುಮುದ್ಯಮ್ಯ ಶತ್ರುಘ್ನಃ ಖಡ್ಗಮುತ್ತಮಮ್ ।
ಶಿರಶ್ಚಿಚ್ಛೇದ ಖಡ್ಗೇನ ಲವಣಸ್ಯ ಮಹಾಮೃಧೇ ।। ೧-೫೪-೫೩

ಆಗ ಮಹಾಮೃಧದಲ್ಲಿ ಶತ್ರುಘ್ನನು ಚಿನ್ನದ ಹಿಡಿಯಿದ್ದ ಉತ್ತಮ ಖಡ್ಗವನ್ನು ಎತ್ತಿ ಆ ಖಡ್ಗದಿಂದ ಲವಣನ ಶಿರವನ್ನು ತುಂಡರಿಸಿದನು.

ಸ ಹತ್ವಾ ದಾನವಂ ಸಂಖ್ಯೇ ಸೌಮಿತ್ರಿರ್ಮಿತ್ರವತ್ಸಲಃ ।
ತದ್ವನಂ ತಸ್ಯ ದೈತ್ಯಸ್ಯ ಚಿಚ್ಛೇದಾಸ್ತ್ರೇಣ ಬುದ್ಧಿಮಾನ್ ।। ೧-೫೪-೫೪

ಮಿತ್ರವತ್ಸಲ ಬುದ್ಧಿಮಾನ್ ಸೌಮಿತ್ರಿಯು ಯುದ್ಧದಲ್ಲಿ ಆ ದಾನವನನ್ನು ಸಂಹರಿಸಿ ದೈತ್ಯನ ಆ ವನವನ್ನೂ ಅಸ್ತ್ರದಿಂದ ತುಂಡರಿಸಿದನು.

ಛಿತ್ತ್ವಾ ವನಂ ತತ್ಸೌಮಿತ್ರಿರ್ನಿವೇಶಂ ಸೋಽಭ್ಯರೋಚಯತ್ ।
ಭವಾಯ ತಸ್ಯ ದೇಶಸ್ಯ ಪುರ್ಯಾಃ ಪರಮಧರ್ಮವಿತ್ ।। ೧-೫೪-೫೫

ಆ ವನವನ್ನು ಕತ್ತರಿಸಿ ಪರಮಧರ್ಮವಿದು ಸೌಮಿತ್ರಿಯು ಆ ಪ್ರದೇಶದ ಅಭಿವೃದ್ಧಿಗಾಗಿ ಒಂದು ಪುರಿಯನ್ನು ನಿರ್ಮಿಸಲು ಬಯಸಿದನು.

ತಸ್ಮಿನ್ಮಧುವನಸ್ಥಾನೇ ಮಥುರಾ ನಾಮ ಸಾ ಪುರೀ ।
ಶತ್ರುಘ್ನೇನ ಪುರಾ ಸೃಷ್ಟಾ ಹತ್ವಾ ತಂ ದಾನವಂ ರಣೇ ।। ೧-೫೪-೫೬

ಹಿಂದೆ ಆ ದಾನವನನ್ನು ರಣದಲ್ಲಿ ಸಂಹರಿಸಿ ಆ ಮಧುವನದ ಸ್ಥಾನದಲ್ಲಿ ಮಥುರಾ ಎಂಬ ಹೆಸರಿನ ಪುರಿಯನ್ನು ಶತ್ರುಘ್ರನು ರಚಿಸಿದನು.

ಸಾ ಪುರೀ ಪರಮೋದಾರಾ ಸಾಟ್ಟಪ್ರಾಕಾರತೋರಣಾ ।
ಸ್ಫೀತಾ ರಾಷ್ಟ್ರಸಮಾಕೀರ್ಣಾ ಸಮೃದ್ಧಬಲವಾಹನಾ ।। ೧-೫೪-೫೭

ಆ ಪುರಿಯು ಅಟ್ಟ-ಪ್ರಾಕಾರ-ತೋರಣಗಳಿಂದ ಕೂಡಿದ್ದು ಅತಿ ದೊಡ್ಡದಾಗಿತ್ತು. ಸೇನೆ-ವಾಹನಗಳಿಂದ ಸಮೃದ್ಧವಾಗಿದ್ದು ಅದು ರಾಷ್ಟ್ರದ ಜನಸಂದಣಿಯಿಂದ ತುಂಬಿಕೊಂಡಿತ್ತು.

ಉದ್ಯಾನವನಸಂಪನ್ನಾ ಸುಸೀಮಾ ಸುಪ್ರತಿಷ್ಠಿತಾ ।
ಪ್ರಾಂಶುಪ್ರಾಕಾರವಸನಾ ಪರಿಖಾಕುಲಮೇಖಲಾ ।। ೧-೫೪-೫೮

ಅದು ಉದ್ಯಾನವನಗಳಿಂದ ಸಂಪನ್ನವಾಗಿತ್ತು. ಅದರ ಗಡಿಯು ಉತ್ತಮವಾಗಿತ್ತು ಮತ್ತು ಸುಪ್ರತಿಷ್ಠಿತವಾಗಿತ್ತು. ಎತ್ತರದ ಕೋಟೆಗಳಿಂದ ಮುಚ್ಚಲ್ಪಟ್ಟಿತ್ತು. ಆಳವಾದ ಕೋಡಿಗಳು ಆ ಪುರಿಯನ್ನು ರಕ್ಷಿಸುತ್ತಿದ್ದವು.

ಚಯಾಟ್ಟಾಲಕಕೇಯೂರಾ ಪ್ರಾಸಾದವರಕುಂಡಲಾ ।
ಸುಸಂವೃತದ್ವಾರವತೀ ಚತ್ವಾರೋದ್ಗಾರಹಾಸಿನೀ ।। ೧-೫೪-೫೯

ನಗರ ದ್ವಾರ ಮತ್ತು ಗೋಪುರಗಳು ಕೇಯೂರಗಳಂತೆ ಆ ಪುರಿಯನ್ನು ಅಲಂಕರಿಸಿದ್ದವು. ಪ್ರಾಸಾದಗಳು ಶ್ರೇಷ್ಠ ಕುಂಡಲಗಳಂತಿದ್ದವು. ಸುಸಂವೃತ ದ್ವಾರಗಳು ಅದರ ಮುಖದಂತಿತ್ತು ಮತ್ತು ಅದರ ನಾಲ್ಕೂ ರಸ್ತೆಗಳು ಉದ್ಗಾರದ ನಗೆಯಂತೆ ತೋರುತ್ತಿದ್ದವು.

ಅರೋಗವೀರಪುರುಷಾ ಹಸ್ತ್ಯಶ್ವರಥಸಂಕುಲಾ ।
ಅರ್ಧಚಂದ್ರಪ್ರತೀಕಾಶಾ ಯಮುನಾತೀರಶೋಭಿತಾ ।। ೧-೫೪-೬೦

ರೋಗವಿಲ್ಲದ ವೀರಪುರುಷರಿಂದ ಮತ್ತು ಆನೆ-ಕುದುರೆ-ರಥಗಳ ಸಂಕುಲಗಳಿಂದ ತುಂಬಿದ್ದ ಮತ್ತು ಯಮುನಾತೀರದಲ್ಲಿ ಶೋಭಿಸುತ್ತಿದ್ದ ಆ ಪುರಿಯು ಅರ್ಧಚಂದ್ರನಂತೆ ಕಾಣುತ್ತಿತ್ತು.

ಪುಣ್ಯಾಪಣವತೀ ದುರ್ಗಾ ರತ್ನಸಂಚಯಗರ್ವಿತಾ ।
ಕ್ಷೇತ್ರಾಣಿ ಸಸ್ಯವಂತ್ಯಸ್ಯಾಃ ಕಾಲೇ ದೇವಶ್ಚ ವರ್ಷತಿ ।। ೧-೫೪-೬೧

ಈ ಪುರಿಯಲ್ಲಿ ಪುಣ್ಯ ಪಣವಿದೆ. ಇದನ್ನು ಪ್ರವೇಶಿಸುವುದು ಕಷ್ಟ. ರಥಸಂಚಯದಿಂದ ಅದು ಗರ್ವಿತಗೊಂಡಿದೆ. ಇದರ ಹೊಲಗಳು ಸಸ್ಯಗಳಿಂದ ತುಂಬಿಕೊಂಡಿವೆ ಮತ್ತು ದೇವನೂ ಕೂಡ ಕಾಲಕ್ಕೆ ಮಳೆಸುರಿಸುತ್ತಾನೆ.

ನರನಾರೀಪ್ರಮುದಿತಾ ಸಾ ಪುರೀ ಸ್ಮ ಪ್ರಕಾಶತೇ ।
ನಿವಿಷ್ಟವಿಷಯಶ್ಚೈವ ಶೂರಸೇನಸ್ತತೋಽಭವತ್ ।। ೧-೫೪-೬೨

ನರನಾರಿಯರ ಪ್ರಮೋದಗಳಿಂದ ತುಂಬಿದ್ದ ಆ ಪುರಿಯು ಪ್ರಕಾಶಿಸುತ್ತದೆ. ಇದೇ ಪ್ರದೇಶದಲ್ಲಿ ಶೂರಸೇನನು ರಾಜನಾದನು.

ತಸ್ಯಾಂ ಪುರ್ಯಾಂ ಮಹಾವೀರ್ಯೋ ರಾಜಾ ಭೋಜಕುಲೋದ್ವಹಃ ।
ಉಗ್ರಸೇನ ಇತಿ ಖ್ಯಾತೋ ಮಹಾಸೇನಪರಾಕ್ರಮಃ ।। ೧-೫೪-೬೩

ಆ ಪುರಿಯಲ್ಲಿ ಮಹಾವೀರ್ಯ ಭೋಜಕುಲೋದ್ವಹ ರಾಜಾ ಉಗ್ರಸೇನ ಎಂದು ಖ್ಯಾತನಾದ ಮಹಾಸೇನ ಪರಾಕ್ರಮಿಯು ಖ್ಯಾತನಾಗಿದ್ದಾನೆ.

ತಸ್ಯ ಪುತ್ರತ್ವಮಾಪನ್ನೋ ಯೋಽಸೌ ವಿಷ್ಣೋ ತ್ವಯಾ ಹತಃ ।
ಕಾಲನೇಮಿರ್ಮಹಾದೈತ್ಯಃ ಸಂಗ್ರಾಮೇ ತಾರಕಾಮಯೇ ।। ೧-೫೪-೬೪

ವಿಷ್ಣೋ! ತಾರಕಾಮಯ ಸಂಗ್ರಾಮದಲ್ಲಿ ನಿನ್ನಿಂದ ಹತನಾದ ಮಹಾದೈತ್ಯ ಕಾಲನೇಮಿಯು ಅವನ ಪುತ್ರತ್ವವನ್ನು ಪಡೆದುಕೊಂಡಿದ್ದಾನೆ.

ಕಂಸೋ ನಾಮ ವಿಶಾಲಾಕ್ಷೋ ಭೋಜವಂಶವಿವರ್ಧನಃ ।
ರಾಜಾ ಪೃಥಿವ್ಯಾಂ ವಿಖ್ಯಾತಃ ಸಿಂಹವಿಸ್ಪಷ್ಟವಿಕ್ರಮಃ ।। ೧-೫೪-೬೫

ಕಂಸನೆಂಬ ಹೆಸರಿನ ಆ ಭೋಜವಂಶವಿವರ್ಧನನು ವಿಶಾಲಾಕ್ಷನೂ ಸಿಂಹದಂಥಹ ನಡೆ ಮತ್ತು ವಿಕ್ರಮದಿಂದ ಭೂಮಿಯಲ್ಲಿ ವಿಖ್ಯಾತ ರಾಜನೆನಿಸಿಕೊಂಡಿದ್ದಾನೆ.

ರಾಜ್ಞಾಂ ಭಯಂಕರೋ ಘೋರಃ ಶಂಕನೀಯೋ ಮಹೀಕ್ಷಿತಾಮ್ ।
ಭಯದಃ ಸರ್ವಭೂತಾನಾಂ ಸತ್ಪಥಾದ್ಬಾಹ್ಯತಾಂ ಗತಃ ।। ೧-೫೪-೬೬

ಅವನು ರಾಜರಿಗೆ ಭಯಂಕರನೂ ಮಹೀಕ್ಷಿತರಿಗೆ ಶಂಕನೀಯನೂ ಆಗಿದ್ದಾನೆ. ಸರ್ವಭೂತಗಳಿಗೂ ಭಯದಾಯಕನಾಗಿರುವ ಅವನು ಸತ್ಪಥದಿಂದ ಹೊರಗೆ ಹೊರಟಿದ್ದಾನೆ.

ದಾರುಣಾಭಿನಿವೇಶೇನ ದಾರುಣೇನಾಂತರಾತ್ಮನಾ ।
ಯುಕ್ತಸ್ತೇನೈವ ದರ್ಪೇಣ ಪ್ರಜಾನಾಂ ರೋಮಹರ್ಷಣಃ ।। ೧-೫೪-೬೭

ದಾರುಣನೂ ಮತ್ತು ಅಂತರಾತ್ಮದಲ್ಲಿ ಕ್ರೂರನೂ ಆಗಿದ್ದ ಆ ಕಂಸನು ತನ್ನ ಪೂರ್ವಜನ್ಮದ ದರ್ಪದಿಂದ ಪ್ರಜೆಗಳಿಗೆ ರೋಮಾಂಚಕಾರಿಯಾಗಿದ್ದಾನೆ.

ನ ರಾಜಧರ್ಮಾಭಿರತೋ ನಾತ್ಮಪಕ್ಷಸುಖಾವಹಃ ।
ನಾತ್ಮರಾಜ್ಯೇ ಪ್ರಿಯಕರಶ್ಚಂಡಃ ಕರರುಚಿಃ ಸದಾ ।। ೧-೫೪-೬೮

ರಾಜಧರ್ಮದಲ್ಲಿ ಅವನಿಗೆ ಅಭಿರುಚಿಯಿಲ್ಲದಾಗಿದೆ. ಅವನ ಪಕ್ಷದವರಿಗೂ ಕೂಡ ಸುಖವನ್ನು ನೀಡದವನಾಗಿದ್ದಾನೆ. ತನ್ನ ರಾಜ್ಯದವರಿಗೂ ಪ್ರಿಯವಾದುದನ್ನು ಮಾಡುತ್ತಿಲ್ಲ. ಸದಾ ಅತ್ಯಂತ ಕೋಪಿಷ್ಟನೂ ಮತ್ತು ಪ್ರಜೆಗಳಿಂದ ಕೇವಲ ಕರವನ್ನು ಪಡೆದುಕೊಳ್ಳುವುದರಲ್ಲಿ ಆಸಕ್ತನೂ ಆಗಿದ್ದಾನೆ.

ಸ ಕಂಸಸ್ತತ್ರ ಸಂಭೂತಸ್ತ್ವಯಾ ಯುದ್ಧೇ ಪರಾಜಿತಃ ।
ಕ್ರವ್ಯಾದೋ ಬಾಧತೇ ಲೋಕಾನಾಸುರೇಣಾಂತರಾತ್ಮನಾ ।। ೧-೫೪-೬೯

ಯುದ್ಧದಲ್ಲಿ ನಿನ್ನಿಂದ ಪರಾಜಿತನಾದ ಕಾಲನೇಮಿಯೇ ಈಗ ಅಲ್ಲಿ ಕಂಸನಾಗಿ ಪ್ರಕಟಗೊಂಡಿದ್ದಾನೆ. ಅಂತರಾತ್ಮದಲ್ಲಿ ಅಸುರೀಭಾವನಾಗಿರುವ ಆ ಮಾಂಸಾಶಿಯು ಲೋಕಗಳನ್ನು ಬಾಧಿಸುತ್ತಿದ್ದಾನೆ.

ಯೋಽಪ್ಯಸೌ ಹಯವಿಕ್ರಾಂತೋ ಹಯಗ್ರೀವ ಇತಿ ಸ್ಮೃತಃ ।
ಕೇಶೀ ನಾಮ ಹಯೋ ಜಾತಃ ಸ ತಸ್ಯೈವ ಜಘನ್ಯಜಃ ।। ೧-೫೪-೭೦

ಅವನೂ ಅಲ್ಲದೇ ಹಿಂದೆ ಹಯವಿಕ್ರಾಂತ ಹಯಗ್ರೀವನೆಂದು ವಿಖ್ಯಾತನಾಗಿದ್ದ ದೈತ್ಯನು ಕೇಶೀ ಎಂಬ ಕುದುರೆಯಾಗಿ ಹುಟ್ಟಿದ್ದಾನೆ. ಈಗ ಅವನು ಕಂಸನ ತಮ್ಮನಂತಿದ್ದಾನೆ.

ಸ ದುಷ್ಟೋ ಹೇಷಿತಪಟುಃ ಕೇಸರೀ ನಿರವಗ್ರಹಃ ।
ವೃಂದಾವನೇ ವಸತ್ಯೇಕೋ ನೃಣಾಂ ಮಾಂಸಾನಿ ಭಕ್ಷಯನ್ ।। ೧-೫೪-೭೧

ಹೇಂಕಾರದಲ್ಲಿ ಪಟುವಾಗಿರುವ ಆ ಕೇಸರೀ ದುಷ್ಟನನ್ನು ಯಾರೂ ನಿಯಂತ್ರಿಸಲಾರರು. ಅವನು ಒಬ್ಬನೇ ವೃಂದಾವನದಲ್ಲಿ ವಾಸಿಸುತ್ತಾ ನರರ ಮಾಂಸವನ್ನು ಭಕ್ಷಿಸುತ್ತಿದ್ದಾನೆ.

ಅರಿಷ್ಟೋ ಬಲಿಪುತ್ರಶ್ಚ ಕಕುದ್ಮೀ ವೃಷರೂಪಧೃಕ್ ।
ಗವಾಮರಿತ್ವಮಾಪನ್ನಃ ಕಾಮರೂಪೀ ಮಹಾಸುರಃ ।। ೧-೫೪-೭೨

ಬಲಿಯ ಮಗ ಅರಿಷ್ಟನು ಉನ್ನತ ಭುಜವುಳ್ಳ ಹೋರಿಯ ರೂಪವನ್ನು ಧರಿಸಿ ಪ್ರಕಟಗೊಂಡಿದ್ದಾನೆ. ಆ ಕಾಮರೂಪೀ ಮಹಾಸುರನು ಗೋವುಗಳ ಶತ್ರುವಾಗಿಬಿಟ್ಟಿದ್ದಾನೆ.

ರಿಷ್ಟೋ ನಾಮ ದಿತೇಃ ಪುತ್ರೋ ವರಿಷ್ಠೋ ದಾನವೇಷು ಯಃ ।
ಸ ಕುಂಜರತ್ವಮಾಪನ್ನೋ ದೈತ್ಯಃ ಕಂಸಸ್ಯ ವಾಹನಃ ।। ೧-೫೪-೭೩

ದಾನವರಲ್ಲಿಯೇ ವರಿಷ್ಠನಾಗಿರುವ ದಿತಿಯ ಪುತ್ರ ರಿಷ್ಟ ಎನ್ನುವವನು ಆನೆಯ ರೂಪವನ್ನು ತಾಳಿ ದೈತ್ಯ ಕಂಸನ ವಾಹನವಾಗಿದ್ದಾನೆ.

ಲಂಬೋ ನಾಮೇತಿ ವಿಖ್ಯಾತೋ ಯೋಽಸೌ ದೈತ್ಯೇಷು ದರ್ಪಿತಃ ।
ಪ್ರಲಂಬೋ ನಾಮ ದೈತ್ಯೋಽಸೌ ವಟಂ ಭಾಂಡೀರಮಾಶ್ರಿತಃ ।। ೧-೫೪-೭೪

ದೈತ್ಯರಲ್ಲಿಯೇ ದರ್ಪಿತನಾಗಿದ್ದ ಲಂಬ ಎಂಬ ಹೆಸರಿನ ವಿಖ್ಯಾತ ದೈತ್ಯನು ಈಗ ಪ್ರಲಂಬ ಎಂಬ ಹೆಸರಿನಿಂದ ಭಾಂಡೀರ ವಟವನ್ನು ಆಶ್ರಯಿಸಿದ್ದಾನೆ.

ಖರ ಇತ್ಯುಚ್ಯತೇ ದೈತ್ಯೋ ಧೇನುಕಃ ಸೋಽಸುರೋತ್ತಮಃ ।
ಘೋರಂ ತಾಲವನಂ ದೈತ್ಯಶ್ಚರತ್ಯುದ್ವಾಸಯನ್ಪ್ರಜಾಃ ।। ೧-೫೪-೭೫

ಖರ ಎಂಬ ದೈತ್ಯನು ಈಗ ಧೇನುಕನೆಂಬ ಅಸುರೋತ್ತಮನಾಗಿದ್ದಾನೆ. ಆ ದೈತ್ಯನು ಪ್ರಜೆಗಳನ್ನು ಪೀಡಿಸುತ್ತಾ ಈಗ ಘೋರ ತಾಲವನದಲ್ಲಿ ಸಂಚರಿಸುತ್ತಿದ್ದಾನೆ.

ವಾರಾಹಶ್ಚ ಕಿಶೋರಶ್ಚ ದಾನವೌ ಯೌ ಮಹಾಬಲೌ ।
ಮಲ್ಲೌ ರಂಗಗತೌ ತೌ ತು ಜಾತೌ ಚಾಣೂರಮುಷ್ಟಿಕೌ ।। ೧-೫೪-೭೬

ಹಿಂದೆ ವಾರಾಹ ಮತ್ತು ಕಿಶೋರರೆಂಬಿದ್ದ ಮಹಾಬಲಶಾಲೀ ದಾನವರು ಈಗ ಚಾಣೂರ-ಮುಷ್ಟಿಕರೆಂಬ ಮಲ್ಲರಾಗಿ ಪ್ರಸಿದ್ಧರಾಗಿದ್ದಾರೆ.

ಯೌ ತೌ ಮಯಶ್ಚ ತಾರಶ್ಚ ದಾನವೌ ದಾನವಾಂತಕ ।
ಪ್ರಾಗ್ಜ್ಯೋತಿಷೇ ತೌ ಭೌಮಸ್ಯ ನರಕಸ್ಯ ಪುರೇ ರತೌ ।। ೧-೫೪-೭೭

ದಾನವಾಂತಕ! ಮಯ ಮತ್ತು ತಾರ ಎಂಬ ದಾನವರಿಬ್ಬರೂ ಈಗ ಭೂಮಿಪುತ್ರ ನರಕನ ಪುರಿ ಪ್ರಾಜ್ಜ್ಯೋತಿಷದಲ್ಲಿ ವಾಸಿಸುತ್ತಿದ್ದಾರೆ.

ಏತೇ ದೈತ್ಯಾ ವಿನಿಹತಾಸ್ತ್ವಯಾ ವಿಷ್ಣೋ ನಿರಾಕೃತಾಃ ।
ಮಾನುಷಂ ವಪುರಾಸ್ಥಾಯ ಬಾಧಂತೇ ಭುವಿ ಮಾನುಷಾನ್ ।। ೧-೫೪-೭೮

ವಿಷ್ಣೋ! ನಿನ್ನಿಂದ ಪರಾಜಿತಗೊಂಡು ಹತರಾದ ಈ ದೈತ್ಯರು ಭುವಿಯಲ್ಲಿ ಮಾನುಷ ರೂಪವನ್ನು ಪಡೆದು ಮನುಷ್ಯರನ್ನು ಬಾಧಿಸುತ್ತಿದ್ದಾರೆ.

ತ್ವತ್ಕಥಾದ್ವೇಷಿಣಃ ಸರ್ವೇ ತ್ವದ್ಭಕ್ತಾನ್ಘ್ನಂತಿ ಮಾನುಷಾನ್ ।
ತವ ಪ್ರಸಾದಾತ್ತೇಷಾಂ ವೈ ದಾನವಾನಾಂ ಕ್ಷಯೋ ಭವೇತ್ ।। ೧-೫೪-೭೯

ನಿನ್ನ ಕುರಿತು ದ್ವೇಷವನ್ನಿಟ್ಟುಕೊಂಡಿರುವ ಅವರೆಲ್ಲರೂ ನಿನ್ನ ಮನುಷ್ಯ ಭಕ್ತರನ್ನು ಕೊಲ್ಲುತ್ತಿದ್ದಾರೆ. ನಿನ್ನ ಪ್ರಸಾದದಿಂದ ಅ ದಾನವರ ಕ್ಷಯವು ಆಗಬಲ್ಲದು.

ತ್ವತ್ತಸ್ತೇ ಬಿಭ್ಯತಿ ದಿವಿ ತ್ವತ್ತೋ ಬಿಭ್ಯತಿ ಸಾಗರೇ ।
ಪೃಥಿವ್ಯಾಂ ತವ ಬಿಭ್ಯಂತಿ ನಾನ್ಯತಸ್ತು ಕದಾಚನ ।। ೧-೫೪-೮೦

ದಿವಿಯಲ್ಲಿ ಅವರಿಗೆ ನಿನ್ನ ಭಯವಿದೆ. ಸಾಗರದಲ್ಲಿ ಅವರಿಗೆ ನಿನ್ನ ಭಯವಿದೆ. ಪೃಥ್ವಿಯಲ್ಲಿಯೂ ಅವರಿಗೆ ನಿನ್ನ ಭಯವಿದೆ. ಅವರಿಗೆ ಬೇರೆ ಯಾರದ್ದೂ ಭಯವಿಲ್ಲ.

ದುರ್ವೃತ್ತಸ್ಯ ಹತಸ್ಯಾಪಿ ತ್ವಯಾ ನಾನ್ಯೇನ ಶ್ರೀಧರ ।
ದಿವಶ್ಚ್ಯುತಸ್ಯ ದೈತ್ಯಸ್ಯ ಗತಿರ್ಭವತಿ ಮೇದಿನೀ ।। ೧-೫೪-೮೧

ಶ್ರೀಧರ! ಈ ದುರ್ವೃತ್ತರೂ ಕೂಡ ನಿನ್ನಿಂದಲ್ಲದೇ ಬೇರೆ ಯಾರಿಂದಲೂ ಹತರಾಗುವವರಲ್ಲ. ಆದರೆ ದಿವದಿಂದ ಚ್ಯುತರಾದ ದೈತ್ಯರಿಗೆ ಮೇದಿನಿಯೇ ಗತಿಯಾಗುತ್ತಾಳೆ1.

ವ್ಯುತ್ಥಿತಸ್ಯ ಚ ಮೇದಿನ್ಯಾಂ ಹತಸ್ಯ ನೃಶರೀರಿಣಃ ।
ದುರ್ಲಭಂ ಸ್ವರ್ಗಗಮನಂ ತ್ವಯಿ ಜಾಗ್ರತಿ ಕೇಶವ ।। ೧-೫೪-೮೨

ಕೇಶವ! ನೀನು ಜಾಗೃತನಾಗಿರುವಾಗ, ಮೇದಿನಿಯಲ್ಲಿ ಇನ್ನೊಬ್ಬರಿಂದ ಹತರಾದ ಮನುಷ್ಯ ಶರೀರದಲ್ಲಿರುವ ಅವರಿಗೆ ಸ್ವರ್ಗಗಮನವು ದುರ್ಲಭವಾಗುವುದು.

ತದಾಗಚ್ಛ ಸ್ವಯಂ ವಿಷ್ಣೋ ಗಚ್ಛಾಮಃ ಪೃಥಿವೀತಲಮ್ ।
ದಾನವಾನಾಂ ವಿನಾಶಾಯ ವಿಸೃಜಾತ್ಮಾನಮಾತ್ಮನಾ ।। ೧-೫೪-೮೩

ಆದುದರಿಂದ ವಿಷ್ಣೋ! ನೀನು ಸ್ವಯಂ ಹೋಗು! ಕೆಳಗೆ ಭೂಮಿಗೆ ಹೋಗೋಣ! ದಾನವರ ವಿನಾಶಕ್ಕಾಗಿ ನಿನ್ನನ್ನು ನೀನೇ ಪ್ರಕಟಗೊಳಿಸು.

ಮೂರ್ತಯೋ ಹಿ ತವಾವ್ಯಕ್ತಾ ದೃಶ್ಯಾದೃಶ್ಯಾಃ ಸುರೋತ್ತಮೈಃ ।
ತಾಸು ಸೃಷ್ಟಾಸ್ತ್ವಯಾ ದೇವಾಃ ಸಂಭವಿಷ್ಯಂತಿ ಭೂತಲೇ ।। ೧-೫೪-೮೪

ಏಕೆಂದರೆ ನಿನ್ನ ಹಲವಾರು ಮೂರ್ತಿಗಳು ಅವ್ಯಕ್ತವಾಗಿವೆ. ಸುರೋತ್ತಮರಿಗೂ ಸ್ವಲ್ಪ ಕಾಣುತ್ತದೆ ಸ್ವಲ್ಪ ಕಾಣುವುದಿಲ್ಲ. ನಿನ್ನಿಂದ ಸೃಷ್ಟಿಸಲ್ಪಟ್ಟ ದೇವತೆಗಳು ಆಯಾ ಮೂರ್ತಿಗಳಲ್ಲಿಯೇ ಪ್ರಕಟರಾಗುತ್ತಾರೆ.

ತವಾವತರಣೇ ವಿಷ್ಣೋ ಕಂಸಃ ಸ ವಿನಶಿಷ್ಯತಿ ।
ಸೇತ್ಸ್ಯತೇ ಚ ಸ ಕಾರ್ಯಾರ್ಥೋ ಯಸ್ಯಾರ್ಥೇ ಭೂಮಿರಾಗತಾ ।। ೧-೫೪-೮೫

ವಿಷ್ಣೋ! ನಿನ್ನ ಅವತಾರದದಿಂದಲೇ ಕಂಸನು ನಾಶನಾಗುತ್ತಾನೆ ಮತ್ತು ಯಾವ ಕಾರ್ಯಾರ್ಥವಾಗಿ ಭೂಮಿಯು ಇಲ್ಲಿಗೆ ಆಗಮಿಸಿದ್ದಳೋ ಅದು ಪ್ರಯೋಜನಗೊಳ್ಳುತ್ತದೆ.

ತ್ವಂ ಭಾರತೇ ಕಾರ್ಯಗುರುಸ್ತ್ವಂ ಚಕ್ಷುಸ್ತ್ವಂ ಪರಾಯಣಮ್ ।
ತದಾಗಚ್ಛ ಹೃಷೀಕೇಶ ಕ್ಷಿತೌ ತಾಂಜಹಿ ದಾನವಾನ್ ।। ೧-೫೪-೮೬

ಹೃಷೀಕೇಶ! ನೀನು ಭಾರತದಲ್ಲಿ ಗುರುತರ ಕಾರ್ಯವನ್ನೆಸಗಬೇಕಾಗಿದೆ. ನೀನೇ ಎಲ್ಲರಿಗೂ ಕಣ್ಣು ಮತ್ತು ಪರಮ ಆಶ್ರಯನು. ಆದುದರಿಂದ ಹೋಗು! ಕ್ಷಿತಿಯಲ್ಲಿರುವ ಆ ದಾನವರನ್ನು ಸಂಹರಿಸು!”

ಸಮಾಪ್ತಿ

ಇತಿ ಶ್ರೀಮಹಾಭಾರತೇ ಖಿಲೇಷು ಹರಿವಂಶೇ ಹರಿವಂಶಪರ್ವಣಿ ನಾರದವಾಕ್ಯೇ ಚತುಃಪಂಚಾಶತ್ತಮೋಽಧ್ಯಾಯಃ


  1. ಶ್ರೀಧರ! ನಿನ್ನಿಂದ ಮಾತ್ರ ಯಾರು ಸಾಯಬಲ್ಲರೋ, ಬೇರೆಯವರಿಂದ ಅಲ್ಲ, ಆ ದೈತ್ಯನಿಗೆ, ಅವನು ದುರಾಚಾರಿಯಲ್ಲದಿದ್ದರೂ, ನಿನ್ನನ್ನೇ ಹೊಂದುತ್ತಾರೆ. ಆದರೆ ಅರು ಇನ್ನೊಬ್ಬರಿಂದ ಹತರಾದರೋ ಆ ದೈತ್ಯರು ಸ್ವರ್ಗದಿಂದ ಭ್ರಷ್ಟರಾದರೆ ಪೃಥ್ವಿಯಲ್ಲಿಯೇ ಜನ್ಮತಳೆಯುತ್ತಾರೆ (ಗೀತಾ ಪ್ರೆಸ್). ↩︎