ಪ್ರವೇಶ
।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।
ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ
ಶ್ರೀ ಮಹಾಭಾರತ
ಖಿಲಭಾಗೇ ಹರಿವಂಶಃ
ಹರಿವಂಶ ಪರ್ವ
ಅಧ್ಯಾಯ 53
ಸಾರ
ಬ್ರಹ್ಮನ ಆಜ್ಞೆಯಂತೆ ದೇವತೆಗಳ ಅಂಶಾವತರಣ (1-79).
ವೈಶಂಪಾಯನ ಉವಾಚ।
ತೇ ಶ್ರುತ್ವಾ ಪೃಥಿವೀವಾಕ್ಯಂ ಸರ್ವ ಏವ ದಿವೌಕಸಃ ।
ತದರ್ಥಕೃತ್ಯಂ ಸಂಚಿಂತ್ಯ ಪಿತಾಮಹಮಥಾಬ್ರುವನ್ ।। ೧-೫೩-೧
ವೈಶಂಪಾಯನನು ಹೇಳಿದನು: “ಪೃಥ್ವಿಯ ವಾಕ್ಯವನ್ನು ಕೇಳಿ ಸರ್ವ ದಿವೌಕಸರೂ ಅದು ಸಿದ್ಧಿಯಾಗುವಂತೆ ಮಾಡುವುದರ ಕುರಿತು ಚಿಂತಿಸುತ್ತಾ ಪಿತಾಮಹನಿಗೆ ಹೇಳಿದರು:
ಭಗವನ್ಹ್ರಿಯತಾಮಸ್ಯಾ ಧರಣ್ಯಾ ಭಾರಸಂತತಿಃ ।
ಶರೀರಕರ್ತಾ ಲೋಕಾನಾಂ ತ್ವಂ ಹಿ ಲೋಕಸ್ಯ ಚೇಶ್ವರಃ ।। ೧-೫೩-೨
“ಭಗವನ್! ನೀನು ಧರಣಿಯ ಭಾರವನ್ನು ಇಳಿಸು. ಏಕೆಂದರೆ ನೀನೇ ಪ್ರಜೆಗಳ ಶರೀರಕರ್ತ. ನೀನೇ ಈ ಲೋಕದ ಈಶ್ವರ.
ಯತ್ಕರ್ತವ್ಯಂ ಮಹೇಂದ್ರೇಣ ಯಮೇನ ವರುಣೇನ ಚ ।
ಯದ್ವಾ ಕಾರ್ಯಂ ಧನೇಶೇನ ಸ್ವಯಂ ನಾರಾಯಣೇನ ವಾ ।। ೧-೫೩-೩
ಯದ್ವಾ ಚಂದ್ರಮಸಾ ಕಾರ್ಯಂ ಭಾಸ್ಕರೇಣಾನಿಲೇನ ವಾ ।
ಆದಿತ್ಯೈರ್ವಸುಭಿರ್ವಾಪಿ ರುದ್ರೈರ್ವಾ ಲೋಕಭಾವನೈಃ ।। ೧-೫೩-೪
ಅಶ್ವಿಭ್ಯಾಂ ದೇವವೈದ್ಯಾಭ್ಯಾಂ ಸಾಧ್ಯೈರ್ವಾ ತ್ರಿದಶಾಲಯೈಃ ।
ಬೃಹಸ್ಪತ್ಯುಶನೋಭ್ಯಾಂ ವಾ ಕಾಲೇನ ಕಲಿನಾಪಿ ವಾ ।। ೧-೫೩-೫
ಮಹೇಶ್ವರೇಣ ವಾ ಬ್ರಹ್ಮನ್ವಿಶಾಖೇನ ಗುಹೇನ ವಾ ।
ಯಕ್ಷರಾಕ್ಷಸಗಂಧರ್ವೈಶ್ಚಾರನೈರ್ವಾ ಮಹೋರಗೈಃ ।। ೧-೫೩-೬
ಪತಂಗೈಃ ಪರ್ವತೈಶ್ಚಾಪಿ ಸಾಗರೈರ್ವಾ ಮಹೋರ್ಮಿಭಿಃ ।
ಗಂಗಾಮುಖಾಭಿರ್ದಿವ್ಯಾಭಿಃ ಸರಿದ್ಭಿರ್ವಾ ಸುರೇಶ್ವರ ।। ೧-೫೩-೭
ಕ್ಷಿಪ್ರಮಾಜ್ಞಾಪಯ ವಿಭೋ ಕಥಮಂಶಃ ಪ್ರಯುಜ್ಯತಾಮ್ ।
ಯದಿ ತೇ ಪಾರ್ಥಿವಂ ಕಾರ್ಯಂ ಕರ್ಯಂ ಪಾರ್ಥಿವವಿಗ್ರಹೇ ।। ೧-೫೩-೮
“ಬ್ರಹ್ಮನ್! ಸುರೇಶ್ವರ! ವಿಭೋ! ಮಹೇಂದ್ರ, ಯಮ, ಮತ್ತು ವರುಣರು ಏನು ಮಾಡಬೇಕೆಂದು, ಧನೇಶ ಮತ್ತು ಸ್ವಯಂ ನಾರಾಯಣರ ಕಾರ್ಯವನ್ನು, ಚಂದ್ರಮ, ಭಾಸ್ಕರ, ಅನಿಲ, ಆದಿತ್ಯರು, ವಸುಗಳು, ಲೋಕಭಾವನ ರುದ್ರರು, ದೇವವೈದ್ಯರಾದ ಇಬ್ಬರು ಅಶ್ವಿನಿಯರು, ಸಾಧ್ಯರು, ತ್ರಿದಶಾಲಯರು, ಬೃಹಸ್ಪತಿ-ಉಶಾಸನರು, ಕಾಲ ಮತ್ತು ಕಲಿಗಳು, ಮಹೇಶ್ವರ, ವಿಷಾಖಾ, ಗುಹ, ಪತಂಗಗಳು, ಪರ್ವತಗಳು, ಮಹಾತೆರೆಗಳಿರುವ ಸಾಗರಗಳು, ಗಂಗೆಯೇ ಮೊದಲಾದ ನದಿಗಳು- ಇವರ ಮಹಾ ಕಾರ್ಯಗಳೇನು ಎನ್ನುವುದನ್ನು ಬೇಗನೇ ಆಜ್ಞಾಪಿಸು. ಒಂದುವೇಳೆ ಪೃಥ್ವಿಯ ಕಾರ್ಯವನ್ನು ನೀನು ಮಾಡುವೆಯಾದರೆ ಈ ರಾಜರಲ್ಲಿ ಯುದ್ಧವನ್ನುಂಟುಮಾಡುವ ಕಾರ್ಯವನ್ನು ಹೇಗೆ ಮಾಡಬೇಕು?
ಕಥಮಂಶಾವತರಣಂ ಕುರ್ಮಃ ಸರ್ವೇ ಪಿತಾಮಹ ।
ಅಂತರಿಕ್ಷಗತಾ ಯೇ ಚ ಪೃಥಿವ್ಯಾಂ ಪಾರ್ಥಿವಾಶ್ಚ ಯೇ ।। ೧-೫೩-೯
ಸದಸ್ಯಾನಾಂ ಚ ವಿಪ್ರಾಣಾಂ ಪಾರ್ಥಿವಾನಂ ಕುಲೇಷು ಚ ।
ಅಯೋನಿಜಾಶ್ಚೈವ ತನೂಃ ಸೃಜಾಮೋ ಜಗತೀತಲೇ ।। ೧-೫೩-೧೦
ಪಿತಾಮಹ! ನಾವೆಲ್ಲರೂ ಹೇಗೆ ಅಂಶಾವತರಣವನ್ನು ಮಾಡಬೇಕು? ಯಾರು ಅಂತರಿಕ್ಷದಲ್ಲಿಯೇ ಇರುತ್ತಾರೆ ಮತ್ತು ಯಾರು ಪೃಥ್ವಿಯಲ್ಲಿ ಪಾರ್ಥಿವರಾಗುತ್ತಾರೆ? ಯಾವ ವಿಪ್ರಗಣದ ಸದಸ್ಯರು ಪಾರ್ಥಿವರ ಕುಲಗಳಲ್ಲಿ ಹುಟ್ಟುತ್ತಾರೆ? ಯಾರು ಅಯೋನಿಜರಾಗುತ್ತಾರೆ? ಮತ್ತು ಯಾರಾಗಿ ನಮ್ಮ ತನುವನ್ನು ಜಗತೀತಲದಲ್ಲಿ ಸೃಷ್ಟಿಸಿಕೊಳ್ಳಬೇಕು?”
ಸುರಾಣಾಮೇಕಕಾರ್ಯಾಣಾಂ ಶ್ರುತ್ವೈತನ್ನಿಶ್ಚಿತಂ ಮತಮ್ ।
ದೇವೈಃ ಪರಿವೃತೈಃ ಪ್ರಾಹ ವಾಕ್ಯಂ ಲೋಕಪಿತಾಮಹಃ ।। ೧-೫೩-೧೧
ಒಂದೇ ಕಾರ್ಯತತ್ಪರರಾಗಿದ್ದ ಸುರರ ಆ ನಿಶ್ಚಿತ ಮತವನ್ನು ಕೇಳಿ ದೇವತೆಗಳಿಂದ ಪರಿವೃತನಾಗಿದ್ದ ಲೋಕಪಿತಾಮಹನು ಈ ಮಾತನ್ನಾಡಿದನು:
ರೋಚತೇ ಮೇ ಸುರಶ್ರೇಷ್ಠಾ ಯುಷ್ಮಾಕಮಪಿ ನಿಶ್ಚಯಃ ।
ಸೃಜಧ್ವಂ ಸ್ವಶರೀರಾಂಶಾಂಸ್ತೇಜಸಾಽಽತ್ಮಸಮಾನ್ಭುವಿ ।। ೧-೫೩-೧೨
“ಸುರಶ್ರೇಷ್ಠರೇ! ನಿಮ್ಮ ನಿಶ್ಚಯವು ನನಗೂ ಕೂಡ ಇಷ್ಟವಾಯಿತು. ಭುವಿಯಲ್ಲಿ ನಿಮ್ಮದೇ ಶರೀರ-ತೇಜಸ್ಸುಗಳಿಂದ ಆತ್ಮಸಮಾನರನ್ನು ಸೃಷ್ಟಿಸಿರಿ.
ಸರ್ವ ಏವ ಸುರಶ್ರೇಷ್ಠಾಸ್ತೇಜೋಭಿರವರೋಹತ ।
ಭಾವಯಂತೋ ಭುವಂ ದೇವೀಂ ಲಬ್ಧ್ವಾ ತ್ರಿಭುವನಶ್ರಿಯಮ್ ।। ೧-೫೩-೧೩
ಸುರಶ್ರೇಷ್ಠರೇ! ಎಲ್ಲರೂ ನಿಮ್ಮ ತೇಜಸ್ಸುಗಳಿಂದ ಅವತರಿಸಿ. ತ್ರಿಭುವನ ಶ್ರೀಯನ್ನು ಬಡೆದು ದೇವೀ ಭೂಮಿಯನ್ನು ರಂಜಿಸುತ್ತಿರಿ.
ಪಾರ್ಥಿವೇ ಭಾರತೇ ವಂಶೇ ಪೂರ್ವಮೇವ ವಿಜಾನತಾ ।
ಪೃಥಿವ್ಯಾಂ ಸಂಭ್ರಮಮಿಮಮ್ ಶ್ರೂಯತಾಂ ಯನ್ಮಯಾ ಕೃತಮ್ ।। ೧-೫೩-೧೪
ಪಾರ್ಥಿವರ ಭಾರತ ವಂಶದ ಕುರಿತು ಮೊದಲೇ ತಿಳಿದುಕೊಂಡಿದ್ದೆ. ಭೂಮಿಯಲ್ಲಿ ಸಂಭ್ರಮದಿಂದಿರುವ ಇದರ ಕುರಿತು ಏನನ್ನು ಯೋಚಿಸಿದ್ದೇನೆನ್ನುವುದನ್ನು ಕೇಳಿ.
ಸಮುದ್ರೇಽಹಂ ಪುರಾ ಪೂರ್ವೇ ವೇಲಾಮಾಸಾದ್ಯ ಪಶ್ಚಿಮಾಮ್ ।
ಆಸಂ ಸಾರ್ಧಂ ತನೂಜೇನ ಕಶ್ಯಪೇನ ಮಹಾತ್ಮನಾ ।। ೧-೫೩-೧೫
ಹಿಂದೆ ನಾನು ಸಮುದ್ರದ ಪಶ್ಚಿಮತಟದಲ್ಲಿ ತನುಜ ಮಹಾತ್ಮ ಕಶ್ಯಪನೊಡನೆ ಕುಳಿತಿದ್ದೆ.
ಕಥಾಭಿಃ ಪೂರ್ವವೃತ್ತಾಭಿರ್ಲೋಕವೇದಾನುಗಾಮಿಭಿಃ ।
ಇತಿವೃತ್ತೈಶ್ಚ ಬಹುಭಿಃ ಪುರಾಣಪ್ರಭವೈರ್ಗುಣೈಃ ।। ೧-೫೩-೧೬
ಲೋಕ ಮತ್ತು ವೇದಗಳನ್ನು ಅನುಸರಿಸುವ ಪುರಾಣ ಕಥೆಗಳು, ಮತ್ತು ಅನೇಕ ಉತ್ತಮ ಗುಣಗಳಿರುವ ಪುರಾಣಗಳನ್ನು ಚರ್ಚಿಸುತ್ತಿದ್ದೆವು.
ಕುರ್ವತಸ್ತು ಕಥಾಸ್ತಾಸ್ತಾಃ ಸಮುದ್ರಃ ಸಹ ಗಂಗಯಾ ।
ಸಮೀಪಮಾಜಗಾಮಾಶು ಯುಕ್ತಸ್ತೋಯದಮಾರುತೈಃ ।। ೧-೫೩-೧೭
ಹಾಗೆ ಕಥೆಗಳನ್ನು ಹೇಳಿಕೊಳ್ಳುತ್ತಿರುವಾಗ ಅಲ್ಲಿಗೆ ಗಂಗೆಯೊಂದಿಗೆ ಸಮುದ್ರನು ನಮ್ಮ ಬಳಿ ಬಂದನು. ಅವರೊಡನೆ ಮೋಡ-ಮಾರುತರೂ ಇದ್ದರು.
ಸ ವೀಚಿವಿಷಮಾಂ ಕುರ್ವನ್ಗತಿಂ ವೇಗತರಂಗಿಣೀಮ್ ।
ಯಾದೋಗಣವಿಚಿತ್ರೇಣ ಸಂಛನ್ನಸ್ತೋಯವಾಸಸಾ ।। ೧-೫೩-೧೮
ಆ ಸಮುದ್ರವು ಅಲೆಗಳನ್ನು ಮೇಲೆ ಕೆಳಗೆ ಮಾಡುತ್ತಾ ವೇಗ ಮತ್ತು ತರಂಗಗಳಿಂದೊಡಗೂಡಿ ತನ್ನ ಗತಿಯನ್ನು ವಿಷಮವನ್ನಾಗಿಸುತ್ತಾ ಬಂದನು. ಜಲಜಂತುಗಳ ಕಾರಣಗಳಿಂದ ವಿಚಿತ್ರವಾಗಿ ಕಾಣುತ್ತಿದ್ದ ಜಲರೂಪೀ ವಸ್ತ್ರವು ಅವನ ಶರೀರವನ್ನು ಮುಚ್ಚಿತ್ತು.
ಶಂಖಮುಕ್ತಾಮಲತನುಃ ಪ್ರವಾಲಮಣಿಭೂಷಣಃ1 ।
ಯುಕ್ತಚಂದ್ರಮಸಾ ಪೂರ್ಣಃ ಶಾಭ್ರಗಂಭೀರನಿಃಸ್ವನಃ ।। ೧-೫೩-೧೯
ಅವನ ತನುವಿನ ಕಾಂತಿಯ ಶಂಖ ಮತ್ತು ಮುತ್ತಿನಂತಿತ್ತು. ಹರಳುಮಣಿಗಳನ್ನು ಧರಿಸಿದ್ದನು. ಪೂರ್ಣಚಂದ್ರನಂತೆ ಕಾಣುತ್ತಿದ್ದ ಅವನು ಧ್ವನಿಯು ಗುಡುಗಿನಂತೆ ಗಂಭೀರವಾಗಿತ್ತು.
ಸ ಮಾಂ ಪರಿಭವನ್ನೇವ ಸ್ವಾಂ ವೇಲಾಂ ಸಮತಿಕ್ರಮನ್ ।
ಕ್ಲೇದಯಾಮಾಸ ಚಪಲೈರ್ಲಾವನೈರಂಬುವಿಸ್ರವೈಃ ।। ೧-೫೩-೨೦
ಅವನು ನನ್ನನ್ನು ತಿರಸ್ಕರಿಸುತ್ತಾ ತನ್ನ ಮರ್ಯಾದೆಗಳನ್ನು ಉಲ್ಲಂಘಿಸುತ್ತಾ ತನ್ನ ಚಂಚಲ ಉಪ್ಪುನೀರಿನ ಬಿಂದುಗಳಿಂದ ನನ್ನನ್ನು ಒದ್ದೆಮಾಡಿಬಿಟ್ಟನು.
ತಂ ಚ ದೇಶಂ ವ್ಯವಸಿತಃ ಸಮುದ್ರೋದ್ಭಿರ್ವಿಮರ್ದಿತುಮ್ ।
ಉಕ್ತಃ ಸಂರಬ್ಧಯಾ ವಾಚಾ ಶಾಂತೋಽಸೀತಿ ಮಯಾ ತದಾ ।। ೧-೫೩-೨೧
ಸಮುದ್ರವು ಯಾವಾಗ ಆ ಪ್ರದೇಶವನ್ನು ಮರ್ದಿಸಲು ತೊಡಗಿದನೋ ಆಗ ಸಂರಬ್ಧನಾಗಿ ಅವನಿಗೆ “ಶಾಂತನಾಗು!” ಎಂದು ಹೇಳಿದೆ.
ಶಾಂತೋಽಸೀತ್ಯುಕ್ತಮಾತ್ರಸ್ತು ತನುತ್ವಂ ಸಾಗರೋ ಗತಃ ।
ಸಂಹತೋರ್ಮಿತರಂಗೌಘಃ ಸ್ಥಿತೋ ರಾಜಶ್ರಿಯಾ ಜ್ವಲನ್ ।। ೧-೫೩-೨೨
ಶಾಂತನಾಗು ಎಂದು ಹೇಳಿದ ಮಾತ್ರದಲಿ ಸಾಗರನು ಕುಗ್ಗಿ ತನುತ್ವವನ್ನು ಪಡೆದುಕೊಂಡನು. ಅವನ ವೇಗ ಮತ್ತು ಅಲೆಗಳು ನಿಂತವು ಮತ್ತು ರಾಜಶ್ರೀಯಿಂದ ಪ್ರಜ್ವಲಿಸುತ್ತಾ ನನ್ನ ಬಳಿ ಬಂದನು.
ಭೂಯಶ್ಚೈವ ಮಯಾ ಶಪ್ತಃ ಸಮುದ್ರಃ ಸಹ ಗಂಗಯಾ ।
ಸಕಾರಣಾಂ ಮತಿಂ ಕೃತ್ವಾ ಯುಷ್ಮಾಕಂ ಹಿತಕಾಮ್ಯಯಾ ।। ೧-೫೩-೨೩
ನಿಮ್ಮೆಲ್ಲರ ಹಿತವನ್ನು ಬಯಸಿ ಸಕಾರಣವಾಗಿ ನಿಶ್ಚಯಿಸಿ ಗಂಗೆಯೊಡನಿದ್ದ ಸಮುದ್ರನಿಗೆ ಶಪಿಸಿದೆನು.
ಯಸ್ಮಾತ್ತ್ವಂ ರಾಜತುಲ್ಯೇನ ವಪುಷಾ ಸಮುಪಸ್ಥಿತಃ ।
ಗಚ್ಛಾರ್ಣವ ಮಹೀಪಾಲೋ ರಾಜೈವ ತ್ವಂ ಭವಿಷ್ಯಸಿ ।। ೧-೫೩-೨೪
“ಆರ್ಣವ! ರಾಜನ ಸಮಾನ ರೂಪದಿಂದ ನನ್ನಮುಂದೆ ಬಂದಿರುವುದರಿಂದ ಹೋಗು! ನೀನು ಮಹೀಪಾಲ ರಾಜನೇ ಆಗುತ್ತೀಯೆ.
ತತ್ರಾಪಿ ಸಹಜಾಂ ಲೀಲಾಂ ಧಾರಯನ್ಸ್ವೇನ ತೇಜಸಾ ।
ಭವಿಷ್ಯಸಿ ನೃಣಾಂ ಭರ್ತಾ ಭಾರತಾನಾಂ ಕುಲೋದ್ವಹಃ ।। ೧-೫೩-೨೫
ಅಲ್ಲಿಯೂ ಕೂಡ ನಿನ್ನ ತೇಜಸ್ಸಿನಿಂದ ಸಹಜ ಲೀಲೆಗಳನ್ನು ಧರಿಸಿಕೊಂಡು ನರರ ಪಲಕ ಭಾರತ ಕುಲೋದ್ವಹನಾಗುತ್ತೀಯೆ.
ಶಾಂತೋಽಸೀತಿ ಮಯೋಕ್ತಸ್ತ್ವಂ ಯಚ್ಚಾಸಿ ತನುತಾಂ ಗತಃ ।
ಸುತನುರ್ಯಶಸಾ ಲೋಕೇ ಶಂತನುಸ್ತ್ವಂ ಭವಿಷ್ಯಸಿ ।। ೧-೫೩-೨೬
ಶಾಂತನಾಗು ಎಂಬ ನನ್ನ ಮಾತಿನಂತೆ ತನುವನ್ನು ಪಡೆದುಕೊಂಡಿರುವ ನೀನು ಲೋಕದಲ್ಲಿ ಸುಂದರ ತನು ಮತ್ತು ಯಶಸ್ಸನ್ನು ಪಡೆದ ಶಂತನುವಾಗುತ್ತೀಯೆ.
ಇಯಮಪ್ಯಾಯತಾಪಂಗೀ ಗಂಗಾ ಸರ್ವಾಂಗಶೋಭನಾ ।
ರೂಪಿಣೀ ಚ ಸರಿಚ್ಛ್ರೇಷ್ಠಾ ತತ್ರ ತ್ವಾಮುಪಯಾಸ್ಯತಿ ।। ೧-೫೩-೨೭
ಈ ಅಪ್ಯಾಯತಾಪಂಗೀ ಸರ್ವಾಂಗಶೋಭನೆ ರೂಪಿಣೀ ಸರಿಚ್ಛೇಷ್ಠಾ ಗಂಗೆಯು ಅಲ್ಲಿ ನಿನ್ನನ್ನು ಕೂಡುತ್ತಾಳೆ.”
ಏವಮುಕ್ತಸ್ತು ಮಾಂ ಕ್ಷುಬ್ಧಃ ಸೋಽಭಿವೀಕ್ಷ್ಯಾರ್ಣವೋಽಬ್ರವೀತ್ ।
ಮಾಂ ಪ್ರಭೋ ದೇವದೇವಾನಾಂ ಕಿಮರ್ಥಂ ಶಪ್ತವಾನಸಿ ೧-೫೩-೨೮
ನಾನು ಹೀಗೆ ಹೇಳಲು ಕ್ಷುಬ್ಧನಾದ ಆರ್ಣವನು ನನ್ನನ್ನು ನೋಡಿ ಹೀಗೆ ಹೇಳಿದನು: “ದೇವದೇವತೆಗಳ ಪ್ರಭೋ! ನನ್ನನ್ನು ಏಕೆ ಶಪಿಸಿದೆ?
ಅಹಂ ತವ ವಿಧೇಯಾತ್ಮಾ ತ್ವತ್ಕೃತಸ್ತ್ವತ್ಪರಾಯಣಃ ।
ಅಶಪೋಽಸದೃಶೈರ್ವಾಕ್ಯೈರಾತ್ಮಜಂ ಮಾಂ ಕಿಮಾತ್ಮನಾ ।। ೧-೫೩-೨೯
ನನ್ನು ನಿನ್ನ ವಿಧೇಯಾತ್ಮನು. ನಿನ್ನಿಂದಲೇ ಮಾಡಲ್ಪಟ್ಟವನು. ನೀನೇ ನನ್ನ ಪರಾಯಣನು. ನಾನು ನಿನ್ನ ಪುತ್ರನು. ಸ್ವಯಂ ನೀನೇ ನನ್ನನ್ನು ಹೀಗೆ ಇಂತಹ ನನಗೆ ಮತ್ತು ನಿನಗೆ ಅನುರೂಪವಲ್ಲದ ಮಾತುಗಳಿಂದ ಶಪಿಸಿಬಿಟ್ಟೆ?
ಭಗವಂಸ್ತ್ವತ್ಪ್ರಸಾದೇನ ವೇಗಾತ್ಪರ್ವಣಿ ವರ್ಧಿತಃ ।
ಯದ್ಯಹಂ ಚಲಿತೋ ಬ್ರಹ್ಮನ್ಕೋಽತ್ರ ದೋಷೋ ಮಮಾತ್ಮನಃ ।। ೧-೫೩-೩೦
ಭಗವನ್! ನಿನ್ನದೇ ಪ್ರಸಾದದಿಂದ ಪೂರ್ಣಿಮೆಯಂದು ನಾನು ವೇಗದಿಂದ ವೃದ್ಧಿಸುತ್ತೇನೆ. ಬ್ರಹ್ಮನ್! ಇಂದು ನನ್ನ ಸಹಜಗತಿಯಲ್ಲಿ ಹೋಗುತ್ತಿರುವ ನನ್ನಿಂದೇನು ದೋಷವುಂಟಾಯಿತು?
ಕ್ಷಿಪ್ತಾಭಿಃ ಪವನೈರದ್ಭಿಃ ಸ್ಪೃಷ್ಟೋ ಯದ್ಯಸಿ ಪರ್ವಣಿ ।
ಅತ್ರ ಮೇ ಕಿಂ ನು ಭಗವನ್ವಿದ್ಯತೇ ಶಾಪಕಾರಣಮ್ ।। ೧-೫೩-೩೧
ಇಂದು ಪೂರ್ಣಿಮೆಯಂದು ಪ್ರಬಲ ವಾಯುವಿನಿಂದ ಸೋಕಿಹೋದ ನೀರು ನಿನಗೆ ತಾಗಿಬಿಟ್ಟಿತು. ಭಗವನ್! ಅಲ್ಲಿ ನಾನು ಶಾಪಕ್ಕೆ ಕಾರಣವಾದ ಏನನ್ನು ತಾನೇ ಮಾಡಿದೆ?
ಉದ್ಧತೈಶ್ಚ ಮಹಾವಾತೈಃ ಪ್ರವೃದ್ಧೈಶ್ಚ ಬಲಾಹಕೈಃ ।
ಪರ್ವಣಾ ಚೇಂದುಯುಕ್ತೇನ ತ್ರಿಭಿಃ ಕ್ಷುಬ್ಧೋಽಸ್ಮಿ ಕಾರಣೈಃ ।। ೧-೫೩-೩೨
ಮೇಲೆದ್ದ ಚಂಡಮಾರುತ, ಬೆಳೆಯುತ್ತಿರುವ ಮೋಡಗಳು ಮತ್ತು ಇಂದುಸಹಿತವಾಗಿರುವ ಪೂರ್ಣಿಮೆ – ಈ ಮೂರು ಕಾರಣಗಳಿಂದ ನಾನು ಕ್ಷುಬ್ಧನಾಗಿದ್ದೇನೆ.
ಏವಂ ಯದ್ಯಪರಾದ್ಧೋಽಹಂ ಕಾರಣೈಸ್ತ್ವತ್ಪ್ರಕಲ್ಪಿತೈಃ ।
ಕ್ಷಂತುಮರ್ಹಸಿ ಮೇ ಬ್ರಹ್ಮಂಶಾಪೋಽಯಂ ವಿನಿವರ್ತ್ಯತಾಮ್ ।। ೧-೫೩-೩೩
ಬ್ರಹ್ಮನ್! ಹೀಗೆ ನೀನೇ ಕಲ್ಪಿಸಿದ ಕಾರಣಗಳಿಂದ ಕ್ಷುಬ್ಧನಾದ ನನ್ನಿಂದ ಏನಾದರೂ ಅಪರಾಧವಾಗಿದ್ದರೆ ಅದನ್ನು ಕ್ಷಮಿಸಬೇಕು. ಈ ಶಾಪವನ್ನು ಹಿಂತೆಗೆದುಕೋ!
ಏವಂ ಮಯಿ ನಿರಾಲಂಬೇ ಶಾಪಾಚ್ಛಿಥಿಲತಾಂ ಗತೇ ।
ಕಾರುಣ್ಯಂ ಕುರು ದೇವೇಶ ಪ್ರಮಾಣಂ ಯದ್ಯವೇಕ್ಷಸೇ ।। ೧-೫೩-೩೪
ನನಗೆ ನೀನಲ್ಲದೇ ಬೇರೆ ಸಹಾಯಕರ್ಯಾರೂ ಇಲ್ಲ. ಶಾಪದಿಮ್ದ ಶಿಥಿಲನಾಗಿ ಶರಣಾಗತನಾಗಿರುವ ನನ್ನ ಮೇಲೆ ಕಾರುಣ್ಯವನ್ನು ತೋರು.
ಅಸ್ಯಾಸ್ತು ದೇವಗಂಗಾಯಾ ಗಾಂ ಗತಾಯಾಸ್ತ್ವದಾಜ್ಞಯಾ ।
ಮಮ ದೋಷಾತ್ಸದೋಷಾಯಾಃ ಪ್ರಸಾದಂ ಕರ್ತುಮರ್ಹಸಿ ।। ೧-೫೩-೩೫
ಈ ಗಂಗೆಯಾದರೋ ನಿನ್ನದೇ ಆಜ್ಞೆಯಂತೆ ಭೂತಲಕ್ಕೆ ಹೋಗಿರುವಳು. ನನ್ನ ದೋಷದಿಂದಾಗಿ ಇವಳೂ ದೂಷಿತಳಾಗಿದ್ದಾಳೆ. ಇವಳ ಮೇಲೂ ಕೃಪೆತೋರಿಸಬೇಕು.”
ತಮಹಂ ಶ್ಲಕ್ಷ್ಣಯಾ ವಾಚ ಮಹಾರ್ಣವಮಥಾಬ್ರುವಮ್ ।
ಅಕಾರಣಜ್ಞಂ ದೇವಾನಾಂ ತ್ರಸ್ತಂ ಶಾಪಾನಲೇನ ತಮ್ ।। ೧-೫೩-೩೬
ದೇವತೆಗಳ ಕಾರಣವನ್ನು ತಿಳಿಯದಿದ್ದ ಮತ್ತು ಶಾಪನಿಂದ ಭಯಭೀತನಾಗಿದ್ದ ಮಹಾರ್ಣವನಿಗೆ ನಾನು ಮಧುರ ವಾಣಿಯಿಂದೆ ಹೇಳಿದೆನು:
ಶಾಂತಿಂ ವ್ರಜ ನ ಭೇತವ್ಯಂ ಪ್ರಸನ್ನೋಽಸ್ಮಿ ಮಹೋದಧೇ ।
ಶಾಪೇಽಸ್ಮಿನ್ಸರಿತಾಂ ನಾಥ ಭವಿಷ್ಯಂ ಶೃಣು ಕಾರಣಮ್ ।। ೧-೫೩-೩೭
“ಮಹೋದಧೇ! ಶಾಂತಿಯನ್ನು ತಾಳು. ಭಯಪಡಬೇಡ. ನಾನು ಪ್ರಸನ್ನನಾಗಿದ್ದೇನೆ. ನಾಥ! ಈ ಸರಿತೆಯನ್ನೂ ಶಾಪಿಸಿರುವೆ. ಭವಿಷ್ಯದಲ್ಲಿರುವ ಇದರ ಕಾರಣವನ್ನು ಕೇಳು.
ತ್ವಂ ಗಚ್ಛ ಭಾರತೇ ವಂಶೇ ಸ್ವಂ ದೇಹಂ ಸ್ವೇನ ತೇಜಸಾ ।
ಆಧತ್ಸ್ವ ಸರಿತಾಂ ನಾಥ ತ್ಯಕ್ತ್ವೇಮಾಂ ಸಾಗರೀಂ ತನುಮ್ ।। ೧-೫೩-೩೮
ಸರಿತೆಯರ ನಾಥ! ಹೋಗು. ನೀನು ನಿನ್ನ ತೇಜಸ್ಸಿನಿಂದ ಈ ಸಾಗರೀ ತನುವನ್ನು ತ್ಯಜಿಸಿ ಭಾರತ ವಂಶದಲ್ಲಿ ನಿನ್ನನ್ನು ದೇಹದಲ್ಲಿ ಸ್ಥಾಪಿಸಿಕೋ.
ಮಹೋದಧೇ ಮಹೀಪಾಲಸ್ತತ್ರ ರಾಜಶ್ರಿಯಾ ವೃತಃ ।
ಪಾಲಯಂಶ್ಚತುರೋ ವರ್ಣಾನ್ರಂಸ್ಯಸೇ ಸಲಿಲೇಶ್ವರ ।। ೧-೫೩-೩೯
ಮಹೋದಧೇ! ಸಲಿಲೇಶ್ವರ! ಅಲ್ಲಿ ರಾಜಶ್ರೀಯಿಂದ ಆವೃತನಾಗಿ ಮಹೀಪಾಲನಾಗಿ ನಾಲ್ಕೂ ವರ್ಣದವರನ್ನೂ ಪಾಲಿಸುತ್ತಾ ರಮಿಸುತ್ತೀಯೆ.
ಇಯಂ ಚ ತೇ ಸರಿಚ್ಛ್ರೇಷ್ಠಾ ಬಿಭ್ರತೀ ರೂಪಮುತ್ತಮಮ್ ।
ತತ್ಕಾಲಂ ರಮಣೀಯಾಂಗೀ ಗಂಗಾ ಪರಿಚರಿಷ್ಯತಿ ।। ೧-೫೩-೪೦
ಈ ಉತ್ತಮ ರೂಪದಿಂದ ಬೆಳಗುತ್ತಿರುವ ಸರಿಚ್ಛ್ರೇಷ್ಠೆ ರಮಣೀಯಾಂಗೀ ಗಂಗೆಯು ಆ ಸಮಯದಲ್ಲಿ ನಿನ್ನ ಸೇವಗೈಯುತ್ತಾಳೆ.
ಅನಯಾ ಸಹ ಜಾಹ್ನವ್ಯಾ ಮೋದಮಾನೋ ಮಮಾಜ್ಞಯಾ।
ಇಮಂ ಸಲಿಲಸಂಕ್ಲೇದಂ ವಿಸ್ಮರಿಷ್ಯಸಿ ಸಾಗರ ।। ೧-೫೩-೪೧
ಸಾಗರ! ನನ್ನ ಆಜ್ಞೆಯಿಂದ ಈ ಜಾಹ್ನವಿಯೊಡನೆ ಮೋದಿಸುತ್ತಿರುವಾಗ ನನ್ನನ್ನು ಒದ್ದೆಮಾಡಿದ ಕಾರಣದಿಂದ ಉಂಟಾದ ಈ ಸಂಕ್ಲೇಶವನ್ನು ಮರೆತುಬಿಡುತ್ತೀಯೆ!
ತ್ವರತಾ ಚೈವ ಕರ್ತವ್ಯಂ ತ್ವಯೇದಂ ಮಮ ಶಾಸನಮ್ ।
ಪ್ರಾಜಾಪತ್ಯೇನ ವಿಧಿನಾ ಗಂಗಯಾ ಸಹ ಸಾಗರ ।। ೧-೫೩-೪೨
ಸಾಗರ! ನನ್ನ ಈ ಶಾಸನವನ್ನು ನೀನು ತ್ವರೆಮಾಡಿ ಕಾರ್ಯಗತಗೊಳಿಸಬೇಕು. ಪ್ರಜಾಪತ್ಯ ವಿಧಿಯಿಂದ ಗಂಗೆಯೊಂದಿಗೆ ನಿನ್ನ ವಿವಾಹವಾಗುತ್ತದೆ.
ವಸವಃ ಪ್ರಚ್ಯುತಾಃ ಸ್ವರ್ಗಾತ್ಪ್ರವಿಷ್ಟಾಶ್ಚ ರಸಾತಲಮ್ ।
ತೇಷಾಮುತ್ಪಾದನಾರ್ಥಾಯ ತ್ವಂ ಮಯಾ ವಿನಿಯೋಜಿತಃ ।। ೧-೫೩-೪೩
ಸ್ವರ್ಗದಿಂದ ಚ್ಯುತರಾಗಿರುವ ವಸುಗಳು ರಸಾತಲವನ್ನು ಪ್ರವೇಶಿಸಿರುವರು. ಅವರನ್ನು ಉತ್ಪಾದಿಸಲು ನಾನು ನಿಮ್ಮನ್ನು ನಿಯೋಜಿಸಿದ್ದೇನೆ.
ಅಷ್ಟೌ ತಾಂಜಾಹ್ನವೀ ಗರ್ಭಾನಪತ್ಯಾರ್ಥಂ ದಧಾತ್ವಿಯಮ್ ।
ವಿಭಾವಸೋಸ್ತುಲ್ಯಗುಣಾನ್ಸುರಾಣಾಂ ಪ್ರೀತಿವರ್ಧನಾನ್ ।। ೧-೫೩-೪೪
ಅಗ್ನಿಯಸಮಾನ ಗುಣಗಳುಳ್ಳ ಮತ್ತು ಸುರರ ಪ್ರೀತಿವರ್ಧನರಾದ ಆ ಎಂಟು ವಸುಗಳನ್ನು ಸಂತಾನರೂಪದಲ್ಲಿ ಪಡೆಯಲು ಈ ಗಂಗೆಯು ನಿನ್ನಿಂದ ಗರ್ಭಧಾರಣೆಯನ್ನು ಮಾಡುತ್ತಾಳೆ.
ಉತ್ಪಾದ್ಯ ತ್ವಂ ವಸೂಂಶೀಘ್ರಂ ಕೃತ್ವಾ ಕುರುಕುಲಂ ಮಹತ್ ।
ಪ್ರವೇಷ್ಟಾಸಿ ತನುಂ ತ್ಯಕ್ತ್ವಾ ಪುನಃ ಸಾಗರ ಸಾಗರೀಮ್ ।। ೧-೫೩-೪೫
ಸಾಗರ! ವಸುಗಳನ್ನು ಶೀಘ್ರದಲ್ಲಿ ಜನ್ಮಕೊಟ್ಟು ಕುರುಕುಲದ ಮಹತ್ತನ್ನು ಹೆಚ್ಚಿಸಿ ಆ ಮಾನವಶರೀರವನ್ನು ತ್ಯಜಿಸಿ ಪುನಃ ಸಾಗರೀ ತನುವನ್ನು ಪ್ರವೇಶಿಸುತ್ತೀಯೆ.”
ಏವಮೇತನ್ಮಯಾ ಪೂರ್ವಂ ಹಿತಾರ್ಥಂ ವಃ ಸುರೋತ್ತಮಾಃ ।
ಭವಿಷ್ಯಂ ಪಶ್ಯತಾಂ ಭಾರಂ ಪೃಥಿವ್ಯಾಃ ಪಾರ್ಥಿವಾತ್ಮಕಮ್ ।। ೧-೫೩-೪೬
ಸುರೋತ್ತಮರೇ! ಭವಿಷ್ಯದಲ್ಲಿ ಪಾರ್ಥಿವರಿಂದಗುವ ಪೃಥ್ವಿಯ ಭಾರವನ್ನು ನೋಡಿಕೊಂಡೇ ಮತ್ತು ನಿಮ್ಮ ಹಿತಾರ್ಥಕ್ಕಾಗಿ ಹಿಂದೆ ನಾನು ಮಾಡಿದ್ದೆ.
ತದೇಷ ಶಂತನೋರ್ವಂಶಃ ಪೃಥಿವ್ಯಾಂ ರೋಪಿತೋ ಮಯಾ ।
ವಸವೋ ಯೇ ಚ ಗಂಗಾಯಾಮುತ್ಪನ್ನಾಸ್ತ್ರಿದಿವೌಕಸಃ ।। ೧-೫೩-೪೭
ಅದ್ಯಾಪಿ ಭುವಿ ಗಾಂಗೇಯಸ್ತತ್ರೈವ ವಸುರಷ್ಟಮಃ ।
ಸಪ್ತೇಮೇ ವಸವಃ ಪ್ರಾಪ್ತಾಃ ಸ ಏಕಃ ಪರಿಲಂಬತೇ ।। ೧-೫೩-೪೮
ಹೀಗೆ ಭೂಮಿಯಲ್ಲಿ ಶಂತನುವಿನ ವಂಶದ ಬೀಜಾರೋಪಣವನ್ನು ನಾನೇ ಮಾಡಿದ್ದೆ. ತ್ರಿದಿವೌಕಸರಾದ ವಸುಗಳು ಗಂಗೆಯಲ್ಲಿ ಹುಟ್ಟಿದ್ದಾರೆ. ಏಳು ವಸುಗಳು ಇಲ್ಲಿಗೆ ಬಂದು ಸೇರಿದ್ದಾರೆ. ಆದರೆ ಎಂಟನೆಯ ವಸು ಗಾಂಗೇಯನು ಈಗಲೂ ಕೂಡ ಭುವಿಯಲ್ಲಿಯೇ ಸಿಲುಕಿಕೊಂಡಿದ್ದಾನೆ.
ದ್ವಿತೀಯಾಯಾಂ ಸ ಸೃಷ್ಟಾಯಾಂ ದ್ವಿತೀಯಾ ಶಂತನೋಸ್ತನುಃ ।
ವಿಚಿತ್ರವೀರ್ಯೋದ್ಯುತಿಮಾನಾಸೀದ್ರಾಜಾ ಪ್ರತಾಪವಾನ್ ।। ೧-೫೩-೪೯
ಎರಡನೇ ಪತ್ನಿಯಿಂದ ಶಂತನುವಿನ ತನುವಿನಿಂದ ಹುಟ್ಟಿದ ಎರಡನೆಯವನು ಪ್ರತಾಪವಾನ್ ದ್ಯುತಿಮಾನ ರಾಜಾ ವಿಚಿತ್ರವೀರ್ಯನಾಗಿದ್ದನು.
ವೈಚಿತ್ರ್ಯವೀರ್ಯೌ ದ್ವಾವೇವ ಪಾರ್ಥಿವೌ ಭುವಿ ಸಾಂಪ್ರತಮ್ ।
ಧೃತರಾಷ್ಟ್ರಶ್ಚ ಪಾಂಡುಶ್ಚ ವಿಖ್ಯಾತೌ ಪುರುಷರ್ಷಭೌ ।। ೧-೫೩-೫೦
ಸದ್ಯ ವಿಚಿತ್ರವೀರ್ಯನಿಗೆ ಇಬ್ಬರೇ ರಾಜಪುತ್ರರಿದ್ದಾರೆ. ಅವರಿಬ್ಬರು ಪುರುಷರ್ಷಭರೂ ಧೃತರಾಷ್ಟ್ರ ಮತ್ತು ಪಾಂಡುವೆಂದು ವಿಖ್ಯಾತರಾಗಿದ್ದಾರೆ.
ತತ್ರ ಪಾಂಡೋಃ ಶ್ರಿಯಾ ಧೃಷ್ಟೇ ದ್ವೇ ಭಾರ್ಯೇ ಸಂಬಭೂವತುಃ ।
ಶುಭೇ ಕುಂತೀ ಚ ಮಾದ್ರೀ ಚ ದೇವಯೋಷೋಪಮೇ ತು ತೇ ।। ೧-೫೩-೫೧
ಅಲ್ಲಿ ಪಾಂಡುವಿಗೆ ಇಬ್ಬರು ಶೋಭಾಸಂಪನ್ನ, ದೇವಾಂಗನೆಯರ ಸಮಾನ ರೂಪವತಿಯರಾದ ಸುಂದರೀ ಪತ್ನಿಯರಿದ್ದಾರೆ: ಕುಂತೀ ಮತ್ತು ಮಾದ್ರೀ.
ಧೃತರಾಷ್ಟ್ರಸ್ಯ ರಾಜ್ಞಸ್ತು ಭಾರ್ಯೈಕಾ ತುಲ್ಯಚಾರಿಣೀ ।
ಗಾಂಧಾರೀ ಭುವಿ ವಿಖ್ಯಾತಾ ಭರ್ತುರ್ನಿತ್ಯಂ ವ್ರತೇ ಸ್ಥಿತಾ ।। ೧-೫೩-೫೨
ರಾಜಾ ಧೃತರಾಷ್ಟನಿಗಾದರೋ ಅವನಂತೆಯೇ ಆಚರಿಸುವ ನಿತ್ಯವೂ ಪತಿವ್ರತೆಯಾಗಿರುವ ಭುವಿಯಲ್ಲಿ ಗಾಂಧಾರೀ ಎಂದು ವಿಖ್ಯಾತಳಾಗಿರುವ ಓರ್ವಳೇ ಪತ್ನಿಯಿದ್ದಾಳೆ.
ತತ್ರ ವಂಶಾ ವಿಭಜ್ಯಂತಾಂ ವಿಪಕ್ಷಾಃ ಪಕ್ಷ ಏವ ಚ ।
ಪುತ್ರಾಣಾಂ ಹಿ ತಯೋ ರಾಜ್ಞೋರ್ಭವಿತಾ ವಿಗ್ರಹೋ ಮಹಾನ್ ।। ೧-೫೩-೫೩
ಆ ವಂಶವು ಪಕ್ಷ-ವಿಪಕ್ಷಗಳಾಗಿ ಒಡೆಯುತ್ತದೆ. ಆ ರಾಜರ ಪುತ್ರರಿಂದಾಗಿ ಮಹಾ ಯುದ್ಧವು ನಡೆಯುತ್ತದೆ.
ತೇಶಾಂ ವಿಮರ್ದೇ ದಾಯಾದ್ಯೇ ನೃಪಾಣಾಂ ಭವಿತಾ ಕ್ಷಯಃ ।
ಯುಗಾಂತಪ್ರತಿಮಂ ಚೈವ ಭವಿಷ್ಯತಿ ಮಹದ್ಭಯಮ್ ।। ೧-೫೩-೫೪
ದಾಯಾದಿಗಳಾದ ಅವರ ಯುದ್ಧದಲ್ಲಿ ಯುಗಾಂತದಂತಿರುವ ಮಹಾಭಯವನ್ನು ನೀಡುವ ನೃಪರ ಕ್ಷಯವಾಗುತ್ತದೆ.
ಸಬಲೇಷು ನರೇಂದ್ರೇಷು ಶಾಂತಯಸ್ತ್ವಿತರೇತರಮ್ ।
ವಿವಿಕ್ತಪುರರಾಷ್ಟ್ರೌಘಾ ಕ್ಷಿತಿಃ ಶೈಥಿಲ್ಯಮೇಷ್ಯತಿ ।। ೧-೫೩-೫೫
ಸೇನೆಗಳಿಂದ ಕೂಡಿದ ಆ ನರೇಂದ್ರರು ಪರಸ್ಪರರನ್ನು ಸಂಹರಿಸುತ್ತಾರೆ. ಪುರ-ರಾಷ್ಟ್ರಗಳು ಜನಶೂನ್ಯವಾಗಿ ಕ್ಷಿತಿಯು ಹಗುರಾಗುತ್ತದೆ.
ದ್ವಾಪರಸ್ಯ ಯುಗಸ್ಯಾಂತೇ ಮಯಾ ದೃಷ್ಟಂ ಪುರಾತನಮ್ ।
ಕ್ಷಯಂ ಯಾಸ್ಯಂತಿ ಶಸ್ತ್ರೇಣ ಮಾನವೈಃ ಸಹ ಪಾರ್ಥಿವಾಃ ।। ೧-೫೩-೫೬
ದ್ವಾಪರದ ಯುಗಾಂತವನ್ನು ಬಹಳ ಹಿಂದೆಯೇ ನಾನು ಕಂಡಿದ್ದೆನು. ಶಸ್ತ್ರಗಳಿಂದ ಮಾನವರೊಂದಿಗೆ ಪಾರ್ಥಿವರು ಕ್ಷಯವನ್ನು ಹೊಂದುತ್ತಾರೆ.
ತತ್ರಾವಶಿಷ್ಟಾನ್ಮನುಜಾನ್ಸುಪ್ತಾನ್ನಿಶಿ ವಿಚೇತಸಃ ।
ಧಕ್ಷ್ಯತೇ ಶಂಕರಸ್ಯಾಂಶಃ ಪಾವಕೇನಾಸ್ತ್ರತೇಜಸಾ ।। ೧-೫೩-೫೭
ಅವರಲ್ಲಿ ಉಳಿದುಕೊಂಡ ಮನುಷ್ಯರನ್ನು ರಾತ್ರಿ ವಿಚೇತಸರಾಗಿ ಮಲಗಿದ್ದಾಗ ಶಂಕರನ ಅಂಶವು ಪಾವಕನ ಅಸ್ತ್ರತೇಜಸ್ಸಿನಿಂದ ಸುಟ್ಟು ಭಸ್ಮಮಾಡುತ್ತದೆ.
ಅಂತಕಪ್ರತಿಮೇ ತಸ್ಮಿನ್ನಿವೃತ್ತೇ ಕ್ರೂರಕರ್ಮಣಿ ।
ಸಮಾಪ್ತಮಿದಮಾಖ್ಯಾಸ್ಯೇ ತೃತೀಯಂ ದ್ವಾಪರಂ ಯುಗಮ್ ।। ೧-೫೩-೫೮
ಪ್ರಲಯಕಾಲದ ಸಮಾನ ಆ ಕ್ರೂರಕರ್ಮವು ಮುಗಿದಾಗ ಮೂರನೇ ದ್ವಾಪರ ಯುಗವು ಸಮಾಪ್ತವಾಯಿತು ಎಂದು ನಾನು ಹೇಳುತ್ತೇನೆ.
ಮಹೇಶ್ವರಾಂಶೇಽಪಸೃತೇ ತತೋ ಮಾಹೇಶ್ವರಂ ಯುಗಮ್ ।
ಶಿಷ್ಯಂ ಪ್ರವರ್ತತೇ ಪಶ್ಚಾದ್ಯುಗಂ ದಾರುಣದರ್ಶನಮ್ ।। ೧-೫೩-೫೯
ಮಹೇಶ್ವರನ ಅಂಶವು ಅವತರಿಸಿ ಮಾಹೇಶ್ವರ ಯುಗವು ಅಂತ್ಯವಾದ ನಂತರ ದಾರುಣವಾಗಿ ತೋರುವ ಉಳಿದ ಯುಗವು ಪ್ರಾರಂಭವಾಗುತ್ತದೆ2.
ಅಧರ್ಮಪ್ರಾಯಪುರುಷಂ ಸ್ವಲ್ಪಧರ್ಮಪ್ರತಿಗ್ರಹಮ್। ।
ಉತ್ಸನ್ನಸತ್ಯಸಂಯೋಗಂ ವರ್ಧಿತಾನೃತಸಂಚಯಮ್ ।। ೧-೫೩-೬೦
ಆಗ ಹೆಚ್ಚು ಜನರು ಅಧರ್ಮಿಗಳಾಗಿರುತ್ತಾರೆ. ಸ್ವಲ್ಪವೇ ಜನರು ಧರ್ಮವನ್ನು ಹಿಡಿದುಕೊಂಡಿರುತ್ತಾರೆ. ಅವರಲ್ಲಿ ಸತ್ಯಸಂಯೋಗವು ಇರುವುದಿಲ್ಲ ಮತ್ತು ಎಲ್ಲರಲ್ಲಿ ಅಸತ್ಯದ ಸಂಚಯವು ವರ್ಧಿಸುತ್ತದೆ.
ಮಹೇಶ್ವರಂ ಕುಮಾರಂ ಚ ದ್ವೌ ಚ ದೇವೌ ಸಮಾಶ್ರಿತಾಃ ।
ಭವಿಷ್ಯಂತಿ ನರಾಃ ಸರ್ವೇ ಲೋಕೇ ನ ಸ್ಥವಿರಾಯುಷಃ ।। ೧-೫೩-೬೧
ಮಹೇಶ್ವರ ಮತ್ತು ಕುಮಾರ ಈ ಇಬ್ಬರು ದೇವತೆಗಳನ್ನು ಆಶ್ರಯಿಸುತ್ತಾರೆ. ನರರೆಲ್ಲರೂ ಲೋಕದಲ್ಲಿ ವೃದ್ಧಾವಸ್ಥೆಯವರೆಗೆ ಜೀವಿಸುವವರಾಗಿರುವುದಿಲ್ಲ.
ತದೇಷ ನಿರ್ಣಯಃ ಶ್ರೇಷ್ಠಃ ಪೃಥಿವ್ಯಾಂ ಪಾರ್ಥಿವಾಂತಕಃ ।
ಅಂಶಾವತರಣಂ ಸರ್ವೇ ಸುರಾಃ ಕುರುತ ಮಾ ಚಿರಮ್ ।। ೧-೫೩-೬೨
ಸುರರೇ! ಪೃಥ್ವಿಯಲ್ಲಿರುವ ಪಾರ್ಥಿವರನ್ನು ಕೊನೆಗೊಳಿಸಬೇಕು ಎನ್ನುವುದೇ ಶ್ರೇಷ್ಠ ನಿರ್ಣಯವು. ಅದಕ್ಕಾಗಿ ನೀವೆಲ್ಲರೂ ಅಂಶಾವತರಣ ಮಾಡಿಕೊಳ್ಳಿ. ತಡಮಾಡಬೇಡಿ.
ಧರ್ಮಸ್ಯಾಂಶಸ್ತು ಕುಂತ್ಯಾಂ ವೈ ಮಾದ್ರ್ಯಾಂ ಚ ವಿನಿಯುಜ್ಯತಾಮ್ ।
ವಿಗ್ರಹಸ್ಯ ಕಲಿರ್ಮೂಲಂ ಗಾಂಧಾರ್ಯಾಂ ವಿನಿಯುಜ್ಯತಾಮ್ ।। ೧-೫೩-೬೩
ಧರ್ಮದ ಪಕ್ಷದಲ್ಲಿರುವವರು ಕುಂತಿ ಮತ್ತು ಮಾದ್ರಿಯರಲ್ಲಿ ಉತ್ಪನ್ನರಾಗಿ. ಯುದ್ಧದ ಮೂಲ ಕಲಿಯು ಗಾಂಧಾರಿಯಲ್ಲಿ ಹುಟ್ಟಲಿ.
ಏತೌ ಪಕ್ಷೌ ಭವಿಷ್ಯಂತಿ ರಾಜಾನಃ ಕಾಲಚೋದಿತಾಃ ।
ಜಾತರಾಗಾಃ ಪೃಥಿವ್ಯರ್ಥೇ ಸರ್ವೇ ಸಂಗ್ರಾಮಲಾಲಸಾಃ ।। ೧-೫೩-೬೪
ಕಾಲಚೋದಿತರಾದ ರಾಜರು ಇವರಿಬ್ಬರ ಪಕ್ಷದವರಾಗುತ್ತಾರೆ. ಭೂಮಿಗಾಗಿ ಲೋಭಾಸಕ್ತರಾಗಿ ಎಲ್ಲವೂ ಸಂಗ್ರಾಮಲಾಲಸರಾಗುತ್ತಾರೆ.
ಗಚ್ಛತ್ವಿಯಂ ವಸುಮತೀ ಸ್ವಾಂ ಯೋನಿಂ ಲೋಕಧಾರಿಣೀ ।
ಸೃಷ್ಟೋಽಯಂ ನೈಷ್ಠಿಕೋ ರಾಜ್ಞಾಮುಪಾಯೋ ಲೋಕವಿಶ್ರುತಃ ।। ೧-೫೩-೬೫
ಲೋಕಧಾರಿಣೀ ಈ ವಸುಮತೀ ಪೃಥ್ವಿಯು ಹೊರಟುಹೋಗಲಿ. ರಾಜರ ವಿನಾಶಕ್ಕಾಗಿ ಈ ಲೋಕವಿಶ್ರುತ ಉಪಾಯವನ್ನು ಅನುಷ್ಠಾನಕ್ಕೆ ತರುವವರಾಗಿರಿ!”
ಶ್ರುತ್ವಾ ಪಿತಾಮಹವಚಃ ಸಾ ಜಗಾಮ ಯಥಾಗತಮ್ ।
ಪೃಥಿವೀ ಸಹ ಕಾಲೇನ ವಧಾಯ ಪೃಥಿವೀಕ್ಷಿತಾಮ್ ।। ೧-೫೩-೬೬
ಪಿತಾಮಹನ ಮಾತನ್ನು ಕೇಳಿ ಕಾಲನೊಂದಿಗೆ ಪೃಥ್ವಿಯು ಪೃಥಿವೀಕ್ಷಿತರ ವಧೆಗಾಗಿ ಎಲ್ಲಿಂದ ಬಂದಿದ್ದಳೋ ಅಲ್ಲಿಗೆ ಹೊರಟುಹೋದಳು.
ದೇವಾನಚೋದಯದ್ಬ್ರಹ್ಮಾ ನಿಗ್ರಹಾರ್ಥೇ ಸುರದ್ವಿಷಾಮ್ ।
ನರಂ ಚೈವ ಪುರಾಣರ್ಷಿಂ ಶೇಷಂ ಚ ಧರಣೀಧರಮ್ ।। ೧-೫೩-೬೭
ಸನತ್ಕುಮಾರಂ ಸಾಧ್ಯಾಂಶ್ಚ ಸುರಾಂಶ್ಚಾಗ್ನಿಪುರೋಗಮಾನ್ ।
ವರುಣಂ ಚ ಯಮಂ ಚೈವ ಸೂರ್ಯಾಚಂದ್ರಮಸೌ ತದಾ ।। ೧-೫೩-೬೮
ಗಂಧರ್ವಾಪ್ಸರಸಶ್ಚೈವ ರುದ್ರಾದಿತ್ಯಾಸ್ತಥಾಶ್ವಿನೌ ।
ತತೋಽಂಶಾನವನಿಂ ದೇವಾಃ ಸರ್ವ ಏವಾವತಾರಯನ್ ।। ೧-೫೩-೬೯
ಅನಂತರ ಬ್ರಹ್ಮನು ಸುರದ್ವಿಷರನ್ನು ದಮನಮಾಡಲು ದೇವತೆಗಳನ್ನು ಪ್ರೇರೇಪಿಸಿದನು. ಅವನು ಪುರಾಣರುಷಿ ನರ, ಧರಣೀಧರ ಶೇಷ, ಸನತ್ಕುಮಾರ, ಸಾಧ್ಯಗಣ, ಅಗ್ನಿಯೇ ಮೊದಲಾದ ದೇವತೆಗಳು, ವರುಣ, ಯಮ, ಸೂರ?ಯ, ಚಂದ್ರಮಾ, ಗಂಧರ್ವ, ಅಪ್ಸರಾ, ರುದ್ರ, ಆದಿತ್ಯ ಮತ್ತು ಇಬ್ಬರು ಅಶ್ವಿನೀಕುಮಾರರನ್ನೂ ಅವತಾರವನ್ನೆತ್ತಲು ಪ್ರೇರೇಪಿಸಿದನು. ಅದರ ನಂತರ ಸಮಸ್ತ ದೇವತೆಗಳೂ ಪೃಥ್ವಿಯಲ್ಲಿ ತಮ್ಮ ತಮ್ಮ ಅಂಶಗಳಲ್ಲಿ ಉತ್ಪನ್ನರಾದರು.
ಯಥಾ ತೇ ಕಥಿತಂ ಪೂರ್ವಮಂಶಾವತರಣಂ ಮಯಾ ।
ಅಯೋನಿಜಾ ಯೋನಿಜಾಶ್ಚ ತೇ ದೇವಾಃ ಪೃಥಿವೀತಲೇ ।। ೧-೫೩-೭೦
ದೈತ್ಯದಾನವಹಂತಾರಃ ಸಂಭೂತಾಃ ಪುರುಷೇಶ್ವರಾಃ ।
ಹಿಂದೆ ನಾನು ಅಂಶಾವತರಣದ ಕುರಿತು ಹೇಳಿದಂತೆ3 ದೈತ್ಯ-ದಾನವರ ವಿನಾಶಗೈಯಲು ದೇವತೆಗಳು ಯೋನಿಜ ಮತ್ತು ಅಯೋನಿಜ ರೂಪಗಳಲ್ಲಿ ಪೃಥ್ವಿಯಮೇಲೆ ರಾಜರಾಗಿ ಉತ್ಪನ್ನರಾದರು.
ಕ್ಷೀರಿಕಾವೃಕ್ಷಸಂಕಾಶಾ ವಜ್ರಸಂಹನನಾಸ್ತಥಾ ।। ೧-೫೩-೭೧
ನಾಗಾಯುತಬಲಾಃ ಕೇಚಿತ್ಕೇಚಿದೋಘಬಲಾನ್ವಿತಾಃ ।
ಗದಾಪರಿಘಶಕ್ತೀನಾಂ ಸಹಾಃ ಪರಿಘಬಾಹವಃ ।। ೧-೫೩-೭೨
ಅವರ ಶರೀರವು ಖರ್ಜೂರವೃಕ್ಷಗಳಂತೆ ಪುಷ್ಟವಾಗಿದ್ದವು ಮತ್ತು ವಜ್ರದಂತೆ ಸುದೃಢವಾಗಿದ್ದವು. ಅವರಲ್ಲಿ ಕೆಲವರು ಸಾವಿರ ಆನೆಗಳ ಸಮಾನ ಬಲವಂತರಾಗಿದ್ದರು. ಕೆಲವರು ಬಲದ ನಿರಂತರ ಪ್ರವಾಹದಿಂದ ಸಂಪನ್ನರಾಗಿದ್ದರು. ಗದೆ, ಪರಿಘ ಮತ್ತು ಶಕ್ತಿಗಳ ಆಘಾತವನ್ನು ಸಹಿಸಿಕೊಳ್ಳಲು ಸಮರ್ಥರಾಗಿದ್ದರು. ಅವರ ಬಾಹುಗಳು ಪರಿಘದಂತೆ ದಪ್ಪ ಮತ್ತು ಸುದೃಢವಾಗಿದ್ದವು.
ಗಿರಿಶೃಂಗಪ್ರಹರ್ತಾರಃ ಸರ್ವೇ ಪರಿಘಯೋಧಿನಃ ।
ವೃಷ್ಣಿವಂಶಸಮುತ್ಪನ್ನಾಃ ಶತಶೋಽಥ ಸಹಸ್ರಶಃ ।। ೧-೫೩-೭೩
ಕುರುವಂಶೇ ಚ ತೇ ದೇವಾಃ ಪಂಚಾಲೇಷು ಚ ಪಾರ್ಥಿವಾಃ ।
ಯಾಜ್ಞಿಕಾನಾಂ ಸಮೃದ್ಧಾನಾಂ ಬ್ರಾಹ್ಮಣಾನಾಂ ಚ ಯೋನಿಷು ।। ೧-೫೩-೭೪
ಅವರೆಲ್ಲರೂ ಗಿರಿಶೃಂಗಗಳನ್ನೇ ಪ್ರಹರಿಸುವವರಾಗಿದ್ದರು ಮತ್ತು ಪರಿಘಯೋಧಿಗಳಾಗಿದ್ದರು. ಅವರಲ್ಲಿ ನೂರಾರು ಸಹಸ್ರಾರು ಮಂದಿ ವೃಷ್ಣಿವಂಶದಲ್ಲಿ ಹುಟ್ಟಿಕೊಂಡರು. ಮತ್ತು ಆ ದೇವತೆಗಳು ಕುರುವಂಶದಲ್ಲಿ ಮತ್ತು ಪಾಂಚಾಲರ ವಂಶದಲ್ಲಿ ರಾಜರಾಗಿ ಹುಟ್ಟಿದರು.
ಸರ್ವಾಸ್ತ್ರಜ್ಞಾ ಮಹೇಷ್ವಾಸಾ ವೇದವ್ರತಪರಾಯಣಾಃ ।
ಸರ್ವರ್ಧಿಗುಣಸಂಪನ್ನಾ ಯಜ್ವಾನಃ ಪುಣ್ಯಕರ್ಮಿಣಃ ।। ೧-೫೩-೭೫
ಎಲ್ಲರೂ ಅಸ್ತ್ರಜ್ಞರೂ, ಮಹೇಷ್ವಾಸರೂ, ವೇದವ್ರತಪರಾಯಣರೂ ಆಗಿದ್ದರು. ಸರ್ವರೂ ಬುದ್ಧಿಗುಣಸಂಪನರಾಗಿದ್ದು ಯಾಗಗಳನ್ನು ಮಾಡಿಸುವ ಪುಣ್ಯಕರ್ಮಿಗಳಾಗಿದ್ದರು.
ಆಚಾಲಯೇಯುರ್ಯೇ ಶೈಲಾನ್ಕ್ರುದ್ಧಾ ಭಿಂದ್ಯುರ್ಮಹೀತಲಮ್ ।
ಉತ್ಪತೇಯುರಥಾಕಾಶಂ ಕ್ಷೋಭಯೇಯುರ್ಮಹೋದಧಿಮ್ ।। ೧-೫೩-೭೬
ಅವರು ಪರ್ವತಗಳನ್ನೂ ಅಲ್ಲಾಡಿಸುವರಂಥವರಾಗಿದ್ದರು. ಮಹೀತಲವನ್ನು ಸೀಳಬಲ್ಲವರಾಗಿದ್ದರು. ಆಕಾಶದಲ್ಲಿ ಹಾರಬಲ್ಲವರಾಗಿದ್ದರು. ಮತ್ತು ಸಮುದ್ರಗಳನ್ನೇ ವಿಕ್ಷುಬ್ಧಗೊಳಿಸಬಲ್ಲವರಾಗಿದ್ದರು.
ಏವಮಾದಿಶ್ಯ ತಾನ್ಬ್ರಹ್ಮಾ ಭೂತಭವ್ಯಭವತ್ಪ್ರಭುಃ ।
ನಾರಾಯಣೇ ಸಮಾವೇಶ್ಯ ಲೋಕಾನ್ ಶಾಂತಿಮುಪಾಗಮತ್ ।। ೧-೫೩-೭೭
ಹೀಗೆ ಭೂತಭವ್ಯಭವತ್ಪ್ರಭು ಬ್ರಹ್ಮನು ಅವರಿಗೆ ಆದೇಶವನ್ನಿತ್ತು ಲೋಕಗಳ ರಕ್ಷಣೆಯನ್ನು ನಾರಾಯಣನಿಗೆ ಒಪ್ಪಿಸಿ ಶಾಂತನಾದನು.
ಭೂಯಃ ಶೃಣು ಯಥಾ ವಿಷ್ಣುರವತೀರ್ಣೋ ಮಹೀತಲೇ ।
ಪ್ರಜಾನಾಂ ವೈ ಹಿತಾರ್ಥಾಯ ಪ್ರಭುಃ ಪ್ರಾಣಹಿತೇಶ್ವರಃ ।। ೧-೫೩-೭೮
ಮುಂದೆ ಪ್ರಜೆಗಳ ಹಿತಾರ್ಥಕ್ಕಾಗಿ ಪ್ರಭು ಪ್ರಾಣಹಿತೇಶ್ವರ ವಿಷ್ಣುವು ಹೇಗೆ ಮಹೀತಲದಲ್ಲಿ ಅವತರಿಸಿದನು ಎನ್ನುವುದನ್ನು ಕೇಳು.
ಯಯಾತಿವಂಶಜಸ್ಯಾಥ ವಸುದೇವಸ್ಯ ಧೀಮತಃ ।
ಕುಲೇ ಪೂಜ್ಯೇ ಯಶಸ್ಕರ್ಮಾ ಜಜ್ಞೇ ನಾರಾಯಣಃ ಪ್ರಭುಃ ।। ೧-೫೩-೭೯
ಯಯಾತಿಯ ವಂಶಜನಾದ ಧೀಮತ ವಸುದೇವನ ಕುಲದಲ್ಲಿ ಯಶೋವರ್ಧಕ ಕರ್ಮಗಳನ್ನೆಸಗಿದ ಪೂಜ್ಯ ಪ್ರಭು ನಾರಾಯಣನು ಜನಿಸಿದನು.”
ಸಮಾಪ್ತಿ
ಇತಿ ಶ್ರೀಮಹಾಭಾರತೇ ಖಿಲೇಷು ಹರಿವಂಶೇ ಹರಿವಂಶಪರ್ವಣಿ ದೇವಾನಾಮಂಶಾವತರಣೇ ತ್ರಿಪಂಚಾಶತ್ತಮೋಽಧ್ಯಾಯಃ