ಪ್ರವೇಶ
।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।
ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ
ಶ್ರೀ ಮಹಾಭಾರತ
ಖಿಲಭಾಗೇ ಹರಿವಂಶಃ
ಹರಿವಂಶ ಪರ್ವ
ಅಧ್ಯಾಯ 52
ಸಾರ
ಮೇರು ಪರ್ವತದಲ್ಲಿ ಭಗವಾನ್ ವಿಷ್ಣು ಮತ್ತು ದೇವತೆಗಳ ದಿವ್ಯ ಸಭೆ; ಅಲ್ಲಿ ಪೃಥ್ವಿಯು ಭಗವಂತನಲ್ಲಿ ಭಾರಹರಣಮಾಡಲು ಪ್ರಾರ್ಥಿಸಿಕೊಂಡಿದುದು (1-60).
ವೈಶಂಪಾಯನ ಉವಾಚ।
ಬಾಢಮಿತ್ಯೇವ ಸಹ ತೈರ್ದುರ್ದಿನಾಂಭೋದನಿಃಸ್ವನಃ ।
ಪ್ರತಸ್ಥೇ ದುರ್ದಿನಾಕಾರಃ ಸದುರ್ದಿನ ಇವಾಚಲಃ ।। ೧-೫೨-೧
ವೈಶಂಪಾಯನನು ಹೇಳಿದನು: “ಮೇಘಯುಕ್ತ ಪರ್ವತದಂತೆ ಕಾಣುತ್ತಿದ್ದ ಮೇಘದ ಆಕಾರವನ್ನೇ ಹೊಂದಿದ್ದ ವಿಷ್ಣುವು ವರ್ಷಾಕಾಲದ ಮೇಘದಂಥಹ ಗಂಭೀರ ಧ್ವನಿಯಲ್ಲಿ “ಒಳ್ಳೆಯದೇ ಆಯಿತು!” ಎಂದು ಹೇಳಿ ಅಲ್ಲಿಂದ ಹೊರಟನು.
ಸಮುಕ್ತಾಮಣಿವಿದ್ಯೋತಂ ಸಚಂದ್ರಾಂಭೋದವರ್ಚಸಮ್ ।
ಸಜಟಾಮಂಡಲಂ ಕೃತ್ಸ್ನಂ ಸ ಬಿಭ್ರಚ್ಛ್ರೀಧರೋ ಹರಿಃ ।। ೧-೫೨-೨
ಶ್ರೀಧರ ಹರಿಯು ಮೊಳಕಾಲವರೆಗೂ ಮುಟ್ಟುವ, ಚಂದ್ರನ ಪ್ರಭೆಯಿದ್ದ ಮುಕ್ತಾಮಣಿಗಳ ಮಾಲೆಯನ್ನು ಧರಿಸಿದ್ದನು. ಬೇರೆ ಎಲ್ಲ ರೀತಿಯಲ್ಲಿಯೂ ಜಟಾಮಂಡಲಧರನಾಗಿ ಶೋಭಿಸುತ್ತಿದ್ದನು1.
ಸ ಚಾಸ್ಯೋರಸಿ ವಿಸ್ತೀರ್ಣೇ ರೋಮಾಂಚೋದ್ಗತರಾಜಿಮಾನ್ ।
ಶ್ರೀವತ್ಸೋ ರಾಜತೇ ಶ್ರೀಮಾಂಸ್ತನದ್ವಯಮುಖಾಂಚಿತಃ ।। ೧-೫೨-೩
ಅವನ ವಿಶಾಲ ವಕ್ಷಸ್ಥಲದಲ್ಲಿ ರೋಮಾಂಚನಮಾಡುವಂತೆ ರಾಜಿಸುತ್ತಿದ್ದ ಶ್ರೀವತ್ಸವು ರಾಜಿಸುತ್ತಿತ್ತು. ಅದು ಆ ಶ್ರೀಮಾನನ ಎರಡನೇ ಮುಖವೋ ಎಂಬಂತೆ ಕಾಣುತ್ತಿತ್ತು2.
ಪೀತೇ ವಸಾನೋ ವಸನೇ ಲೋಕಾನಾಂ ಗುರುರವ್ಯಯಃ ।
ಹರಿಃ ಸೋಽಭವದಾಲಕ್ಷ್ಯಃ ಸ ಸಂಧ್ಯಾಭ್ರ ಇವಾಚಲಃ ।। ೧-೫೨-೪
ಪೀತವಸ್ತ್ರವನ್ನುಟ್ಟಿದ್ದ ಆ ಲೋಕಗಳ ಗುರು ಅವ್ಯಯ ಹರಿಯು ಸಂಧ್ಯಾಕಾಲದ ಮೇಘಯುಕ್ತ ಪರ್ವತದಂತೆ ಮನೋಹರವಾಗಿ ಕಾಣುತ್ತಿದ್ದನು.
ತಂ ವ್ರಜಂತಂ ಸುಪರ್ಣೇನ ಪದ್ಮಯೋನಿಗತಾನುಗಮ್ ।
ಅನುಜಗ್ಮುಃ ಸುರಾಃ ಸರ್ವೇ ತದ್ಗತಾಸಕ್ತಚಕ್ಷುಷಃ ।। ೧-೫೨-೫
ಸುಪರ್ಣನನ್ನೇರಿ ಹೋಗುತ್ತಿದ್ದ ಅವನನ್ನು ಪದ್ಮಯೋನಿ ಬ್ರಹ್ಮನು ಹಿಂಬಾಲಿಸಿದನು. ಅವನನ್ನು ಸರ್ವ ಸುರರೂ ಆಸಕ್ತರಾಗಿ ಅವನನ್ನೇ ನೋಡುತ್ತಾ ಹಿಂದೆ ಹಿಂದೆ ಹೋದರು.
ನಾತಿದೀರ್ಘೇಣ ಕಾಲೇನ ಸಂಪ್ರಾಪ್ತಾ ರತ್ನಪರ್ವತಮ್ ।
ದದೃಶುರ್ದೇವತಾಸ್ತತ್ರ ತಾಂ ಸಭಾಂ ಕಾಮರೂಪಿಣೀಮ್ ।। ೧-೫೨-೬
ಸ್ವಲ್ಪವೇ ಸಮಯದಲ್ಲಿ ದೇವತೆಗಳು ರತ್ನಪರ್ವತ ಮೇರುವನ್ನು ಸೇರಿ ಅಲ್ಲಿ ಆ ಕಾಮರೂಪಿಣೀ ಬ್ರಹ್ಮಸಭೆಯನ್ನು ನೋಡಿದರು.
ಮೇರೋಃ ಶಿಖರವಿನ್ಯಸ್ತಾಂ ಸಂಯುಕ್ತಾಂ ಸೂರ್ಯವರ್ಚಸಾ ।
ಕಾಂಚನಸ್ತಂಭರಚಿತಾಂ ವಜ್ರಸಂಧಾನತೋರಣಾಮ್ ।। ೧-೫೨-೭
ಮೇರುವಿನ ಶಿಖರದ ಮೇಲೆ ಸ್ಥಾಪಿತವಾಗಿದ್ದ ಆ ದಿವ್ಯ ಸಭೆಯು ಸೂರ್ಯನಂತೆ ತೇಜೋಯುಕ್ತವಾಗಿತ್ತು. ಕಂಚನ ಸ್ಥಂಬಗಳನ್ನು ರಚಿಸಲಾಗಿತ್ತು. ಅದಕ್ಕೆ ವಜ್ರಗಳ ತೋರಣಗಳನ್ನು ಕಟ್ಟಲಾಗಿತ್ತು.
ಮನೋನಿರ್ಮಾಣಚಿತ್ರಾಢ್ಯಾಂ ವಿಮಾನಶತಮಾಲಿನೀಮ್ ।
ರತ್ನಜಾಲಾಂತರವತೀಂ ಕಾಮಗಾಂ ರತ್ನಭೂಷಿತಾಮ್ ।। ೧-೫೨-೮
ಮನಸ್ಸಿನಿಂದ ನಿರ್ಮಾಣವಾದ ಚಿತ್ರಗಳಿಂದ ಕೂಡಿತ್ತು. ನೂರಾರು ವಿಮಾನಗಳು ಮಾಲೆಯ ರೂಪದಲ್ಲಿದ್ದವು. ರತ್ನಜಾಲಗಳನ್ನು ಹೊಂದಿತ್ತು. ರತ್ನಭೂಷಿತವಾಗಿದ್ದ ಅದು ಕಾಮಗವಾಗಿತ್ತು.
ಕ್ಲೃಪ್ತರತ್ನಸಮಾಕೀರ್ಣಾಂ ಸರ್ವರ್ತುಕುಸುಮೋತ್ಕಟಾಮ್ ।
ದೇವಮಾಯಾಧರಾಂ ದಿವ್ಯಾಂ ವಿಹಿತಾಂ ವಿಶ್ವಕರ್ಮಣಾ ।। ೧-೫೨-೯
ಬಹುಮೂಲ್ಯ ರತ್ನಗಳಿಂದ ತುಂಬಿಕೊಂಡಿತ್ತು. ಸರ್ವಋತುಗಳ ಕುಸುಮಗಳಿಂದ ಕೂಡಿತ್ತು. ದಿವ್ಯ ದೇವಮಾಯೆಗಳನ್ನು ಹೊಂದಿದ್ದ ವಿಶ್ವಕರ್ಮನಿಂದ ನಿರ್ಮಿತಗೊಂಡಿತ್ತು.
ತಾಂ ಹೃಷ್ಟಮನಸಃ ಸರ್ವೇ ಯಥಾಸ್ಥಾನಂ ಯಥಾವಿಧಿ ।
ಯಥಾನಿದೇಶಂ ತ್ರಿದಶಾ ವಿವಿಶುಸ್ತೇ ಸಭಾಂ ಶುಭಾಮ್ ।। ೧-೫೨-೧೦
ಹೃಷ್ಟಮನಸ್ಕರಾದ ಆ ಎಲ್ಲ ತ್ರಿದಶರೂ ಬ್ರಹ್ಮನ ನಿರ್ದೇಶನದಂತೆ ಯಥಾವಿಧಿಯಾಗಿ ಬಂದು ಆ ಶುಭ ಸಭೆಯನ್ನು ಪ್ರವೇಶಿಸಿ ಯಥಾಸ್ಥಾನಗಳಲ್ಲಿ ಕುಳಿತುಕೊಂಡರು.
ತೇ ನಿಷೇದುರ್ಯಥೋಕ್ತೇಷು ವಿಮಾನೇಷ್ವಾಸನೇಷು ಚ ।
ಭದ್ರಾಸನೇಷು ಪೀಠೇಷು ಕುಥಾಸ್ವಾಸ್ತರಣೇಷು ಚ ।। ೧-೫೨-೧೧
ಅವರು ಅಲ್ಲಿ ಯೋಗ್ಯತಾನುಸಾರವಾಗಿ ಹೇಳಿದ್ದ ವಿಮಾನಗಳು, ಆಸನಗಳು, ಭದ್ರಾಸನಗಳು, ಪೀಠಗಳು ಮತ್ತು ಇತರರು ಹಾಸಿದ ಹಚ್ಚಡಗಳ ಮೇಲೆ ವಿರಾಜಮಾನರಾದರು.
ತತಃ ಪ್ರಭಂಜನೋ ವಾಯುರ್ಬ್ರಹ್ಮಣಾ ಸಾಧು ಚೋದಿತಃ ।
ಮಾ ಶಬ್ದಮಿತಿ ಸರ್ವತ್ರ ಪ್ರಚಕ್ರಾಮಾಥ ತಾಂ ಸಭಾಮ್ ।। ೧-೫೨-೧೨
ಆಗ ಸಾಧು ಬ್ರಹ್ಮನಿಂದ ಚೋದಿತನಾಗಿ ಪ್ರಭಂಜನ ವಾಯುವು ಶಬ್ದಮಾಡ ಬೇಡಿ ಎಂದು ಸಭೆಯ ಎಲ್ಲೆಡೆಯಲ್ಲಿ ಹೇಳಿ ಮೌನವಾಗಿರಿಸಿದನು.
ನಿಃಶಬ್ದಸ್ತಿಮಿತೇ ತಸ್ಮಿನ್ಸಮಾಜೇ ತ್ರಿದಿವೌಕಸಾಂ ।
ಬಭಾಷೇ ಧರಣೀ ವಾಕ್ಯಂ ಖೇದಾತ್ಕರುಣಭಾಷಿನೀ ।। ೧-೫೨-೧೩
ತ್ರಿದಿವೌಕಸರ ಆ ಸಮಾಜವು ನಿಃಶಬ್ದವಾಗಲು ಕರುಣಭಾಷಿನೀ ಧರಣಿಯು ಖೇದದಿಂದ ಈ ಮಾತನ್ನಾಡಿದಳು.
ಧರಣ್ಯುವಾಚ।
ತ್ವಯಾ ಧಾರ್ಯಾ ತ್ವಹಂ ದೇವ ತ್ವಯಾ ವೈ ಧಾರ್ಯತೇ ಜಗತ್ ।
ತ್ವಂ ಧಾರಯಸಿ ಭೂತಾನಿ ಭುವನಾನಿ ಬಿಭರ್ಷಿ ಚ ।। ೧-೫೨-೧೪
ಧರಣಿಯು ಹೇಳಿದಳು: “ದೇವ! ನಾನು ನಿನ್ನಿಂದ ಧರಿಸಲ್ಪಟ್ಟಿದ್ದೇನೆ. ನಿನ್ನಿಂದ ಈ ಜಗತ್ತೇ ಧರಿಸಲ್ಪಟ್ಟಿದೆ. ನೀನು ಭೂತಗಳನ್ನೂ ಭುವನಗಳನ್ನೂ ಧರಿಸುತ್ತೀಯೆ ಮತ್ತು ಭರಣ-ಪೋಷಣ ಮಾಡುತ್ತೀಯೆ.
ಯತ್ತ್ವಯಾ ಧಾರ್ಯತೇ ಕಿಂಚಿತ್ತೇಜಸಾ ಚ ಬಲೇನ ಚ ।
ತತಸ್ತವ ಪ್ರಸಾದೇನ ಮಯಾ ಯತ್ನಾಚ್ಚ ಧಾರ್ಯತೇ । ೧-೫೨-೧೫
ತೇಜಸ್ಸು ಬಲದಿಂದ ನೀನು ಧರಿಸುವುದನ್ನು ನಿನ್ನ ಪ್ರಸಾದವೆಂದು ತಿಳಿದು ಪ್ರಯತ್ನಪಟ್ಟು ನಾನು ಧರಿಸುತ್ತಿದ್ದೇನೆ.
ತ್ವಯಾ ಧೃತಂ ಧಾರಯಾಮಿ ನಾಧೃತಂ ಧಾರಯಾಮ್ಯಹಮ್ ।
ನ ಹಿ ತದ್ವಿದ್ಯತೇ ಭೂತಂ ಯತ್ತ್ವಯಾ ನಾನುಧಾರ್ಯತೇ ।। ೧-೫೨-೧೬
ನೀನು ಧಾರಣೆಮಾಡಿರುವುದನ್ನೇ ನಾನು ಧರಿಸಿದ್ದೇನೆ. ನೀನು ಧರಿಸದೇ ಇದ್ದುದನ್ನು ನಾನು ಧರಿಸುವುದಿಲ್ಲ. ನೀನು ಧರಿಸದೇ ಇರುವ ಭೂತವು ಯಾವುದೂ ಇಲ್ಲ.
ತ್ವಮೇವ ಕುರುಷೇ ದೇವ ನಾರಾಯಣ ಯುಗೇ ಯುಗೇ ।
ಮಮ ಭಾರಾವತರಣಂ ಜಗತೋ ಹಿತಕಾಮ್ಯಯಾ ।। ೧-೫೨-೧೭
ದೇವ! ನಾರಾಯಣ! ಜಗತ್ತಿನ ಹಿತವನ್ನು ಬಯಸಿ ನೀನೇ ಯುಗಯುಗದಲ್ಲಿಯೂ ನನ್ನ ಭಾರವನ್ನು ಹಗುರಾಗಿಸುತ್ತೀಯೆ.
ತವೈವ ತೇಜಸಾ ಕ್ರಾಂತಾಂ ರಸಾತಲತಲಂ ಗತಾಮ್ ।
ತ್ರಾಯಸ್ವ ಮಾಂ ಸುರಶ್ರೇಷ್ಠ ತ್ವಾಮೇವ ಶರಣಂ ಗತಾಮ್ ।। ೧-೫೨-೧೮
ನಿನ್ನದೇ ತೇಜಸ್ಸಿನಿಂದ ಆಕ್ರಾಂತಳಾಗಿ ನಾನು ರಸಾತಲದ ಅಡಿಯನ್ನು ಸೇರಿದ್ದೇನೆ. ಸುರಶ್ರೇಷ್ಠ! ನಿನ್ನನ್ನೇ ಶರಣುಬಂದಿರುವ ನನ್ನನ್ನು ಉದ್ಧರಿಸು.
ದಾನವೈಃ ಪೀಡ್ಯಮಾನಾಹಂ ರಾಕ್ಷಸೈಶ್ಚ ದುರಾತ್ಮಭಿಃ ।
ತ್ವಾಮೇವ ಶರಣಂ ನಿತ್ಯಮುಪಾಯಾಸ್ಯೇ ಸನಾತನಮ್ ।। ೧-೫೨-೧೯
ದುರಾತ್ಮರಾದ ರಾಕ್ಷಸರು ಮತ್ತು ದಾನವರಿಂದ ಪೀಡಿತಳಾದ ನಾಅನು ನಿತ್ಯವೂ ಉಪಾಸ್ಯನಾಗಿರುವ ಸನಾತನ ನಿನ್ನನ್ನೇ ಶರಣು ಬಂದಿದ್ದೇನೆ.
ತಾವನ್ಮೇಽಸ್ತಿ ಭಯಂ ಭೂಯೋ ಯಾವನ್ನ ತ್ವಾಂ ಕಕುದ್ಮಿನಮ್ ।
ಶರಣಂ ಯಾಮಿ ಮನಸಾ ಶತಶೋ ಹ್ಯುಪಲಕ್ಷಯೇ ।। ೧-೫೨-೨೦
ಕಕುದ್ಮಿಯಾದ ನಿನ್ನನ್ನು ಮತ್ತೆ ಯಾವಾಗ ಕಾಣುತ್ತೀನೋ ಎಂಬ ಭಯವು ನನ್ನಲ್ಲಿತ್ತು. ನೂರಾರು ಸಲ ಮನಸ್ಸಿನಲ್ಲಿಯೇ ಯೋಚನೆಮಾಡಿ ನಿನ್ನ ಶರಣು ಬಂದಿದ್ದೇನೆ.
ಅಹಮಾದೌ ಪುರಾಣಸ್ಯ ಸಂಕ್ಷಿಪ್ತಾ ಪದ್ಮಯೋನಿನಾ ।
ಮಾವರುಂಧಾಂ ಕೃತೌ ಪೂರ್ವಂ ಮೃನ್ಮಯೌ ದ್ವೌ ಮಹಾಸುರೌ ।। ೧-೫೨-೨೧
ಹಿಂದಿನ ಯುಗದ ಪ್ರಾರಂಭದಲ್ಲಿ ಪದ್ಮಯೋನಿಯು ನನ್ನನ್ನು ಜಲದ ಮೇಲೆ ಸ್ಥಾಪಿಸಿದ್ದನು ಮತ್ತು ನನ್ನ ಮೃತ್ತಿಕವನ್ನು ಮುಷ್ಟಿಯಲ್ಲಿ ಹಿಡಿದು ಅದರಿಂದ ಎರಡು ದೊಡ್ಡ ಅಸುರರ ಮೂರ್ತಿಗಳನ್ನು ರಚಿಸಿದನು.
ಕರ್ಣಸ್ರೋತೋದ್ಭವೌ ತೌ ಹಿ ವಿಷ್ಣೋರಸ್ಯ ಮಹಾತ್ಮನಃ ।
ಮಹಾರ್ಣವೇ ಪ್ರಸ್ವಪತಃ ಕಾಷ್ಠಕುಡ್ಯಸಮೌ ಸ್ಥಿತೌ ।। ೧-೫೨-೨೨
ಅವರಿಬ್ಬರೂ ಮಹಾರ್ಣವದಲ್ಲಿ ನಿದ್ರಿಸುತ್ತಿದ್ದ ಮಹಾತ್ಮ ವಿಷ್ಣುವಿನ ಕಿವಿಗಳ ಮಲದಿಂದ ಉತ್ಪನ್ನರಾಗಿದ್ದರು ಮತ್ತು ಕಾಷ್ಠ ಮತ್ತು ಕುಂಡಗಳಂತೆ ಅಚೇತನರಾಗಿದ್ದರು.
ತೌ ವಿವೇಶ ಸ್ವಯಂ ವಾಯುರ್ಬ್ರಹ್ಮನಾ ಸಾಧು ಚೋದಿತಃ ।
ದಿವಂ ಪ್ರಚ್ಛಾದಯಂತೌ ತು ವವೃಧಾತೇ ಮಹಾಸುರೌ ।। ೧-೫೨-೨೩
ಸಾಧು ಬ್ರಹ್ಮನಿಂದ ಪ್ರಚೋದಿತನಾದ ಸ್ವಯಂ ವಾಯುವು ಆ ಎರಡು ಮೂರ್ತಿಗಳನ್ನೂ ಪ್ರವೇಶಿಸಿದನು. ಅದರಿಂದ ದಿವವನ್ನು ಮುಚ್ಚಿಬಿಡುತ್ತಿರುವರೋ ಎಂಬಂತೆ ಇಬ್ಬರು ಮಹಾಸುರರು ಬೆಳೆದರು.
ವಾಯುಪ್ರಾಣೌ ತು ತೌ ಗೃಹ್ಯ ಬ್ರಹ್ಮಾ ಪರ್ಯಮೃಶಚ್ಛನೈಃ ।
ಏಕಂ ಮೃದುತರಂ ಮೇನೇ ಕಠಿನಂ ವೇದ ಚಾಪರಮ್ ।। ೧-೫೨-೨೪
ವಾಯುವಿನಿಂದ ಪ್ರಾಣಗಳನ್ನು ಪಡೆದುಕೊಂಡ ಅವರಿಬ್ಬರನ್ನು ಎತ್ತಿಹಿಡಿದು ಬ್ರಹ್ಮನು ಮೆಲ್ಲನೇ ಅವರ ಅಂಗಾಂಗಗಳನ್ನು ಸವರತೊಡಗಿದನು. ಅವುಗಳಲ್ಲಿ ಒಬ್ಬನ ಶರೀರವು ಅತ್ಯಂತ ಮೃದುವಾಗಿತ್ತು ಮತ್ತು ಇನ್ನೊಬ್ಬನ ಶರೀರವು ಅತ್ಯಂತ ಕಠಿಣವಾಗಿತ್ತು.
ನಾಮನೀ ತು ತಯೋಶ್ಚಕ್ರೇ ಸ ವಿಭುಃ ಸಲಿಲೋದ್ಭವಃ ।
ಮೃದುಸ್ತ್ವಯಂ ಮಧುರ್ನಾಮ ಕಠಿನಃ ಕೈಟಭೋಽಭವತ್ ।। ೧-೫೨-೨೫
ಸಲಿಲೋದ್ಭವ ವಿಭುವು ಅವರಿಗೆ ಹೆಸರನ್ನಿಟ್ಟನು: ಮೃದುವಾಗಿರುವವನ ಹೆಸರು ಮಧು ಎಂದಾಯಿತು ಮತ್ತು ಕಠಿಣನಾಗಿರುವವನ ಹೆಸರು ಕೈಟಭ ಎಂದಾಯಿತು.
ತೌ ದೈತ್ಯೌ ಕೃತನಾಮಾನೌ ಚೇರತುರ್ಬಲದರ್ಪಿತೌ ।
ಸರ್ವಮೇಕಾರ್ಣವಂ ಲೋಕಂ ಯೋದ್ಧುಕಾಮೌ ಸುದುರ್ಜಯೌ ।। ೧-೫೨-೨೬
ನಾಮಕರಣಗಳನ್ನು ಮಾಡಿಸಿಕೊಂಡ ಆ ಇಬ್ಬರು ಸುದುರ್ಜಯ ದೈತ್ಯರೂ ಬಲದರ್ಪಿತರಾಗಿ ಯುದ್ಧವನ್ನು ಬಯಸಿ ಏಕಾರ್ಣವ ಲೋಕಗಳೆಲ್ಲಾ ಸಂಚರಿಸತೊಡಗಿದರು.
ತಾವಾಗತೌ ಸಮಾಲೋಕ್ಯ ಬ್ರಹ್ಮಾ ಲೋಕಪಿತಾಮಹಃ ।
ಏಕಾರ್ಣವಾಂಬುನಿಚಯೇ ತತ್ರೈವಾಂತರಧೀಯತ ।। ೧-೫೨-೨೭
ಆಗಮಿಸಿದ ಅವರಿಬ್ಬರನ್ನೂ ನೋಡಿ ಲೋಕಪಿತಾಮಹ ಬ್ರಹ್ಮನು ಏಕಾರ್ಣವದ ಜಲರಾಶಿಯಲ್ಲಿಯೇ ಅಂತರ್ಧಾನನಾದನು.
ಸ ಪದ್ಮೇ ಪದ್ಮನಾಭಸ್ಯ ನಾಭಿಮಧ್ಯಾತ್ಸಮುತ್ಥಿತೇ ।
ರೋಚಯಾಮಾಸ ವಸತಿಂ ಗುಹ್ಯಾಂ ಬ್ರಹ್ಮಾ ಚತುರ್ಮುಖಃ ।। ೧-೫೨-೨೮
ಚತುರ್ಮುಖ ಬ್ರಹ್ಮನು ಪದ್ಮನಾಭನ ನಾಭಿಮಧ್ಯದಿಂದ ಮೇಲೆದ್ದಿದ್ದ ಪದ್ಮದಲ್ಲಿ ಗುಪ್ತನಾಗಿ ವಾಸಮಾಡಲಿಚ್ಛಿಸಿದನು.
ತಾವುಭೌ ಜಲಗರ್ಭಸ್ಥೌ ನಾರಾಯಣಪಿತಾಮಹೌ ।
ಬಹೂನ್ವರ್ಷಗಣಾನಪ್ಸು ಶಯಾನೌ ನ ಚಕಂಪತುಃ ।। ೧-೫೨-೨೯
ನಾರಾಯಣ ಮತ್ತು ಪಿತಾಮಹರು ಜಲಗರ್ಭಸ್ಥರಾಗಿದ್ದಾಗ ಆ ಇಬ್ಬರು ದೈತ್ಯರೂ ಅನೇಕ ವರ್ಷಗಳ ಕಾಲ ಜಲದಮೇಲೆಯೇ ಮಲಗಿದರು. ಹಂದಾಡಲೂ ಇಲ್ಲ.
ಅಥ ದೀರ್ಘಸ್ಯ ಕಾಲಸ್ಯ ತಾವುಭೌ ಮಧುಕೈಟಭೌ ।
ಆಜಗ್ಮತುಸ್ತಮುದ್ದೇಶಂ ಯತ್ರ ಬ್ರಹ್ಮಾ ವ್ಯವಸ್ಥಿತಃ ।। ೧-೫೨-೩೦
ದೀರ್ಘಕಾಲದ ನಂತರ ಮಧುಕೈಟಭರಿಬ್ಬರೂ ಬ್ರಹ್ಮನು ವ್ಯವಸ್ಥಿತನಾಗಿದ್ದ ಪ್ರದೇಶಕ್ಕೆ ಬಂದರು.
ದೃಷ್ಟ್ವಾ ತಾವಸುರೌ ಘೋರೌ ಮಹಾಕಾಯೌ ದುರಾಸದೌ ।
ಬ್ರಹ್ಮಣಾ ತಾಡಿತೋ ವಿಷ್ಣುಃ ಪದ್ಮನಾಲೇನ ವೈ ತದಾ ।
ಉತ್ಪಪಾತಾಥ ಶಯನಾತ್ಪದ್ಮನಾಭೋ ಮಹಾದ್ಯುತಿಃ ।। ೧-೫೨-೩೧
ದುರಾಸದರೂ ಮಹಾಕಾಯರೂ ಆದ ಆ ಘೋರ ಅಸುರರನ್ನು ನೋಡಿ ಬ್ರಹ್ಮನು ಪದ್ಮನಾಲದಿಂದ ವಿಷ್ಣುವನ್ನು ಹೊಡೆದು ಎಬ್ಬಿಸಿದನು. ಆಗ ಮಹಾದ್ಯುತಿ ಪದ್ಮನಾಭನು ನಿದ್ರೆಯಿಂದ ಎಚ್ಚೆದ್ದನು.
ತದ್ಯುದ್ಧಮಭವದ್ಘೋರಂ ತಯೋಸ್ತಸ್ಯ ಚ ವೈ ತದಾ ।
ಏಕಾರ್ಣವೇ ತದಾ ಲೋಕೇ ತ್ರೈಲೋಕ್ಯೇ ಜಲತಾಂ ಗತೇ ।। ೧-೫೨-೩೨
ಮೂರೂ ಲೋಕಗಳೂ ಜಲಮಯವಾಗಿದ್ದ ಆ ಏಕಾರ್ಣವ ಲೋಕದಲ್ಲಿ ಆಗ ಅವರಿಬ್ಬರು ಮತ್ತು ವಿಷ್ಣುವಿನ ನಡುವೆ ಘೋರ ಯುದ್ಧವು ನಡೆಯಿತು.
ತದಾಭೂತ್ತುಮುಲಂ ಯುದ್ಧಂ ವರ್ಷಸಂಖ್ಯಾಸಹಸ್ರಶಃ ।
ನ ಚ ತಾವಸುರೌ ಯುದ್ಧೇ ತದಾ ಶ್ರಮಮವಾಪತುಃ ।। ೧-೫೨-೩೩
ಸಹಸ್ರಸಂಖ್ಯೆಗಳ ವರ್ಷಗಳ ಪರ್ಯಂತ ತುಮುಲ ಯುದ್ಧವು ನಡೆಯಿತು. ಆದರೂ ಆ ಇಬ್ಬರು ಅಸುರರು ಯುದ್ಧದಲ್ಲಿ ಬಳಲಲಿಲ್ಲ.
ಅಥಾತೋ ದೀರ್ಘಕಾಲಸ್ಯ ತೌ ದೈತ್ಯೌ ಯುದ್ಧದುರ್ಮದೌ ।
ಊಚತುಃ ಪ್ರೀತಮನಸೌ ದೇವಂ ನಾರಾಯಣಂ ಹರಿಮ್ ।। ೧-೫೨-೩೪
ದೀರ್ಘಕಾಲದ ನಂತರ ಆ ಯುದ್ಧದುರ್ಮದ ದೈತ್ಯರಿಬ್ಬರೂ ಪ್ರೀತರಾಗಿ ದೇವ ನಾರಾಯಣ ಹರಿಗೆ ಹೇಳಿದರು:
ಪ್ರೀತೌ ಸ್ವಸ್ತವ ಯುದ್ಧೇನ ಶ್ಲಾಘ್ಯಸ್ತ್ವಂ ಮೃತ್ಯುರಾವಯೋಃ ।
ಆವಾಂ ಜಹಿ ನ ಯತ್ರೋರ್ವೀ ಸಲಿಲೇನ ಪರಿಪ್ಲುತಾ ।। ೧-೫೨-೩೫
“ನಿನ್ನ ಈ ಯುದ್ಧದಿಂದ ನಾವಿಬ್ಬರೂ ಪಿತರಾಗಿದ್ದೇವೆ. ನಿನ್ನಿಂದ ಶ್ಲಾಘನೀಯ ಮೃತ್ಯುವನ್ನು ಬಯಸುತ್ತೇವೆ. ಎಲ್ಲಿ ಉರ್ವಿಯು ಜಲದಲ್ಲಿ ಮುಳುಗಿಲ್ಲವೋ ಅಲ್ಲಿ ನಮ್ಮನ್ನು ವಧಿಸು.
ಹತೌ ಚ ತವ ಪುತ್ರತ್ವಂ ಪ್ರಾಪ್ನುಯಾವಃ ಸುರೋತ್ತಮ ।
ಯೋ ಹ್ಯಾವಾಂ ಯುಧಿ ನಿರ್ಜೇತಾ ತಸ್ಯಾವಾಂ ವಿಹಿತೌ ಸುತೌ ।। ೧-೫೨-೩೬
ಸುರೋತ್ತಮ! ಹತರಾದ ನಾವು ನಿನ್ನ ಪುತ್ರತ್ವವನ್ನು ಪಡೆದುಕೊಳ್ಳುತ್ತೇವೆ. ನಾವು ಯುದ್ಧದಲ್ಲಿ ನಮ್ಮನ್ನು ಜಯಿಸುವವನ ಪುತ್ರರಾಗುತ್ತೇವೆ ಎಂದು ವಿಹಿತವಾಗಿದೆ.”
ಸ ತು ಗೃಹ್ಯ ಮೃಧೇ ದೋರ್ಭ್ಯಾಂ ದೈತ್ಯೌ ತಾವಭ್ಯಪೀಡಯತ್ ।
ಜಗ್ಮತುರ್ನಿಧನಂ ಚಾಪಿ ತಾವುಭೌ ಮಧುಕೈಟಭೌ ।। ೧-೫೨-೩೭
ಆಗ ಅವನು ಯುದ್ಧದಲ್ಲಿ ಅವರಿಬ್ಬರು ದೈತ್ಯರನ್ನೂ ಹಿಡಿದು ಪೀಡಿಸಿದನು. ಇದರಿಂದ ಮಧುಕೈಟಭರಿಬ್ಬರೂ ನಿಧನ ಹೊಂದಿದರು.
ತೌ ಹತೌ ಚಾಪ್ಲುತೌ ತೋಯೇ ವಪುರ್ಭ್ಯಾಮೇಕತಾಂ ಗತೌ ।
ಮೇದೋ ಮುಮುಚತುರ್ದೈತ್ಯೌ ಮಥ್ಯಮಾನೌ ಜಲೋರ್ಮಿಭಿಃ ।। ೧-೫೨-೩೮
ಮೇದಸಾ ತಜ್ಜಲಂ ವ್ಯಾಪ್ತಂ ತಾಭ್ಯಾಮಂತರ್ದಧೇಽನಘಃ ।
ನಾರಾಯಣಶ್ಚ ಭಗವಾನಸೃಜತ್ಸ ಪುನಃ ಪ್ರಜಾಃ ।। ೧-೫೨-೩೯
ಹತರಾಗಲು ಅವರಿಬ್ಬರ ಶರೀರಗಳು ನೀರಿನಲ್ಲಿ ಒಂದಾದವು. ನಂತರ ಜಲದ ಅಲೆಗಳಿಂದ ಮಥಿಸಲ್ಪಟ್ಟು ಆ ಇಬ್ಬರು ದೈತ್ಯರೂ ಬಿಟ್ಟ ಮೇದಸ್ಸು ಹರಡಿದಲ್ಲೆಲ್ಲಾ ನೀರು ಇಲ್ಲದಂತಾಯಿತು. ಅದರ ಮೇಲೆಯೇ ಭಗವಾನ್ ನಾರಾಯಣನು ಪುನಃ ಪ್ರಜೆಗಳನ್ನು ಸೃಷ್ಟಿಸಿದನು.
ದೈತ್ಯಯೋರ್ಮೇಧಸಾ ಚ್ಛನ್ನಾ ಮೇದಿನೀತಿ ತತಃ ಸ್ಮೃತಾ ।
ಪ್ರಭಾವಾತ್ಪದ್ಮನಾಭಸ್ಯ ಶಾಶ್ವತೀ ಜಗತೀ ಕೃತಾ ।। ೧-೫೨-೪೦
ದೈತ್ಯರ ಮೇಧಸ್ಸಿನಿಂದ ಮುಚ್ಚಲ್ಪಟ್ಟಿದುದರಿಂದ ಮೇದಿನಿ ಎಂದು ಕರೆಯಲ್ಪಟ್ಟಿತು. ಪದ್ಮನಾಭನ ಪ್ರಭಾವದಿಂದ ಇದು ಜಗತ್ತಿಗೆ ಶಾಶತ ಆಧಾರವಾಯಿತು.
ವಾರಾಹೇಣ ಪುರಾ ಭೂತ್ವಾ ಮಾರ್ಕಂಡೇಯಸ್ಯ ಪಶ್ಯತಃ ।
ವಿಷಾಣೇನಾಹಮೇಕೇನ ತೋಯಮಧ್ಯಾತ್ಸಮುದ್ಧೃತಾ ।। ೧-೫೨-೪೧
ಹಿಂದೆ ವಾರಾಹರೂಪವನ್ನು ಧರಿಸಿ ಇದೇ ಭಗವಾನ್ ನಾರಾಯಣನು ಮಾರ್ಕಂಡೇಯನು ನೋಡುತ್ತಿದ್ದಂತೆಯೇ ನನ್ನನ್ನು ಒಂದು ಕೋರೆದಾಡೆಯಿಂದ ಹಿಡಿದು ನೀರಿನೊಳಗಿಂದ ಮೇಲೆತ್ತಿದ್ದನು.
ಹೃತಾಹಂ ಕ್ರಮತೋ ಭೂಯಸ್ತದಾ ಯುಷ್ಮಾಕಮಗ್ರತಃ ।
ಬಲೇಃ ಸಕಾಶಾದ್ದೈತ್ಯಸ ವಿಷ್ಣುನಾ ಪ್ರಭವಿಷ್ಣುನಾ ।। ೧-೫೨-೪೨
ಮತ್ತೆ ಇನ್ನೊಮ್ಮೆ ನಿಮ್ಮೆಲ್ಲರ ಎದುರಿಗೆ ವಿಷ್ಣು ಪ್ರಭುವಿಷ್ಣುವು ತ್ರಿವಿಕ್ರಮನಾಗಿ ಬಲಿಯ ಬಳಿಯಿಂದ ನನ್ನನ್ನು ಅಪಹರಿಸಿದನು.
ಸಾಂಪ್ರತಂ ಖಿದ್ಯಮಾನಾಹಮೇನಮೇವ ಗದಾಧರಮ್ ।
ಅನಾಥಾ ಜಗತೋ ನಾಥಂ ಶರಣ್ಯಂ ಶರಣಂ ಗತಾ ।। ೧-೫೨-೪೩
ಈಗಲೂ ಕೂಡ ಅತ್ಯಂತ ಕಷ್ಟದಲ್ಲಿ ಬಿದ್ದು ಅನಾಥಳಂತಾಗಿದ್ದೇನೆ ಮತ್ತು ಅದೇ ಶರಣ್ಯ ಜಗನ್ನಾಥ ಗದಾಧರನ ಶರಣು ಬಂದಿದ್ದೇನೆ.
ಅಗ್ನಿಃ ಸುವರ್ಣಸ್ಯ ಗುರುರ್ಗವಾಂ ಸೂರ್ಯೋ ಗುರುಃ ಸ್ಮೃತಃ ।
ನಕ್ಷತ್ರಾಣಾಂ ಗುರುಃ ಸೋಮೋ ಮಮ ನಾರಾಯಣೋ ಗುರುಃ ।। ೧-೫೨-೪೪
ಅಗ್ನಿಯು ಸುವರ್ಣದ ಗುರು. ಸೂರ್ಯನು ಕಿರಣಗಳಿಗೆ ಗುರು. ನಕ್ಷತ್ರಗಳ ಗುರು ಸೋಮ. ನನಗೆ ನಾರಾಯಣನು ಗುರು.
ಯದಹಂ ಧಾರಯಾಮ್ಯೇಕಾ ಜಗತ್ಸ್ಥಾವರಜಂಗಮಂ ।
ಮಯಾ ಧೃತಂ ಧಾರಯತೇ ಸರ್ವಮೇತದ್ಗದಾಧರಃ ।। ೧-೫೨-೪೫
ನಾನೊಬ್ಬಳೇ ಹೊತ್ತಿರುವ ಈ ಸ್ಥಾವರಜಂಗಮ ಜಗತ್ತನ್ನೂ ಮತ್ತು ನನ್ನನ್ನೂ ಎಲ್ಲವನ್ನೂ ಗದಾಧರನು ಧರಿಸಿಕೊಂಡಿದ್ದಾನೆ.
ಜಾಮದಗ್ನ್ಯೇನ ರಾಮೇಣ ಭಾರಾವತರಣೇಪ್ಸಯಾ ।
ರೋಷಾತ್ತ್ರಿಃಸಪ್ತಕ್ರಿತ್ತ್ವೋಹಂ ಕ್ಷತ್ರಿಯೈರ್ವಿಪ್ರಯೋಜಿತಾ ।। ೧-೫೨-೪೬
ನನ್ನ ಭಾರವನ್ನು ಹಗುರಗೊಳಿಸಲೋಸುಗ ರೋಷದಿಂದ ಇವನು ಜಾಮದಗ್ನಿ ರಾಮನಾಗಿ ಇಪ್ಪತೊಂದು ಬಾರಿ ನನ್ನನ್ನು ಕ್ಷತ್ರಿಯರಿಲ್ಲದಂತೆ ಮಾಡಿದ್ದನು.
ಸಾಽಸ್ಮಿ ವೇದ್ಯಾಂ ಸಮಾರೋಪ್ಯ ತರ್ಪಿತಾ ನೃಪಶೋಣಿತೈಃ ।
ಭಾರ್ಗವೇಣ ಪಿತುಃ ಶ್ರಾದ್ಧೇ ಕಶ್ಯಪಾಯ ನಿವೇದಿತಾ ।। ೧-೫೨-೪೭
ಆ ರಣಯಜ್ಞದ ವೇದಿಯಲ್ಲಿ ನನ್ನನ್ನು ಪ್ರತಿಷ್ಠಾಪಿಸಿ ಆ ಭಾರ್ಗವನು ನೃಪರ ರಕ್ತದಿಂದ ಅವನು ತೃಪ್ತಿಪಡಿಸಿದ್ದನು ಮತ್ತು ಪಿತೃಶ್ರಾದ್ಧದಲ್ಲಿ ನನ್ನನ್ನು ಕಶ್ಯಪನಿಗೆ ದಾನವನ್ನಾಗಿತ್ತಿದ್ದನು.
ಮಾಮ್ಸಮೇದೋಸ್ಥಿದುರ್ಗಂಧಾ ದಿಗ್ಧಾ ಕ್ಷತ್ರಿಯಶೋಣಿತೈಃ ।
ರಜಸ್ವಲೇವ ಯುವತಿಃ ಕಶ್ಯಪಂ ಸಮುಪಸ್ಥಿತಾ ।। ೧-೫೨-೪೮
ಕ್ಷತ್ರಿಯರ ರಕ್ತದಿಂದ ತೋಯ್ದುಹೋಗಿದ್ದ, ಮಾಂಸ-ಮೇದ-ಅಸ್ಥಿಗಳ ದುರ್ಗಂಧದಿಂದ ಕೂಡಿದ್ದ ನಾನು ರಜಸ್ವಲೆಯಾಗಿದ್ದ ಯುವತಿಯಂತೆ ಕಾಣುತ್ತಾ ಕಶ್ಯಪನ ಸೇವೆಯಲ್ಲಿ ಉಪಸ್ಥಿತಳಾಗಿದ್ದೆ.
ಸ ಮಾಂ ಬ್ರಹ್ಮರ್ಷಿರಪ್ಯಾಹ ಕಿಮುರ್ವಿ ತ್ವಮವಾಙ್ಮುಖೀ ।
ವೀರಪತ್ನೀವ್ರತಮಿದಂ ಧಾರಯಂತೀ ವಿಷೀದಸಿ ।। ೧-೫೨-೪೯
ಆ ಬ್ರಹ್ಮರ್ಷಿ ಕಶ್ಯಪನು ನನಗೆ ಹೇಳಿದ್ದನು: “ಉರ್ವೀ! ನೀನು ತಲೆತಗ್ಗಿಸಿರುವೆಯೇಕೆ? ವೀರಪತ್ನಿಯ ಈ ವ್ರತವನ್ನು ಧರಿಸಿ ವಿಷಾದಿಸುತ್ತಿದ್ದೀಯೆ ಏಕೆ?”
ಸಾಹಂ ವಿಜ್ಞಾಪಿತವತೀ ಕಶ್ಯಪಂ ಲೋಕಭಾವನಮ್ ।
ಪತಯೋ ಮೇ ಹತಾ ಬ್ರಹ್ಮನ್ಭಾರ್ಗವೇಣ ಮಹಾತ್ಮನಾ ।। ೧-೫೨-೫೦
ಆಗ ನಾನು ಲೋಕಭಾವನ ಕಶ್ಯಪನಿಗೆ ವಿಜ್ಞಾಪಿಸಿದ್ದೆನು: “ಬ್ರಹ್ಮನ್! ಮಹಾತ್ಮ ಭಾರ್ಗವನು ನನ್ನ ಪತಿಗಳನ್ನು ಸಂಹರಿಸಿದ್ದಾನೆ.
ಸಾಹಂ ವಿಹೀನಾ ವಿಕ್ರಾಂತೈಃ ಕ್ಷತ್ರಿಯೈಃ ಶಸ್ತ್ರವೃತ್ತಿಭಿಃ ।
ವಿಧವಾ ಶೂನ್ಯನಗರಾ ನ ಧಾರಯಿತುಮುತ್ಸಹೇ ।। ೧-೫೨-೫೧
ಶಸ್ತ್ರವೃತ್ತಿಯಲ್ಲಿದ್ದ ವಿಕ್ರಾಂತ ಕ್ಷತ್ರಿಯರಿಂದ ನಾನು ವಿಹೀನಳಾಗಿ ವಿಧವೆಯಾಗಿಬಿಟ್ಟಿದ್ದೇನೆ. ರಾಜರಿಂದ ಶೂನ್ಯವಾದ ನಗರಗಳನ್ನು ಧರಿಸಲು ಇಚ್ಛಿಸುವುದಿಲ್ಲ.
ತನ್ಮಹ್ಯಂ ದೀಯತಾಂ ಭರ್ತಾ ಭಗವಂಸ್ತ್ವತ್ಸಮೋ ನೃಪಃ ।
ರಕ್ಷೇತ್ಸಗ್ರಾಮನಗರಾಂ ಯೋ ಮಾಂ ಸಾಗರಮಾಲಿನೀಮ್ ।। ೧-೫೨-೫೨
ಭಗವನ್! ಸಾಗರ ಮಾಲಿನಿಯಾದ ಮತ್ತು ಗ್ರಾಮನಗರಗಳಿಂದ ಕೂಡಿದ ನನ್ನನ್ನು ರಕ್ಷಿಸಬಲ್ಲ ನಿನ್ನ ಸಮನಾಗಿರುವ ಭರ್ತಾ ನೃಪನನ್ನು ನೀಡು.”
ಸ ಶ್ರುತ್ವಾ ಭಗವಾನ್ವಾಕ್ಯಂ ಬಾಢಮಿತ್ಯಬ್ರವೀತ್ಪ್ರಭುಃ ।
ತತೋ ಮಾಂ ಮಾನವೇಂದ್ರಾಯ ಮನವೇ ಸ ಪ್ರದತ್ತವಾನ್ ।। ೧-೫೨-೫೩
ನನ್ನ ಮಾತನ್ನು ಕೇಳಿ ಭಗವಾನ್ ಪ್ರಭುವು ಒಳ್ಳೆಯದು ಎಂದು ಹೇಳಿ ನನಗೆ ಮಾನವೇಂದ್ರ ಮನುವನ್ನು ನೀಡಿದ್ದನು.
ಸಾ ಮನುಪ್ರಭವಂ ದಿವ್ಯಂ ಪ್ರಾಪ್ಯೇಕ್ಷ್ವಾಕುಕುಲಂ ನೃಪಮ್ ।
ವಿಪುಲೇನಾಸ್ಮಿ ಕಾಲೇನ ಪಾರ್ಥಿವಾತ್ಪಾರ್ಥಿವಂ ಗತಾ ।। ೧-೫೨-೫೪
ವೈವಸ್ವತ ಮನುವಿನಿಂದ ಹುಟ್ಟಿದ್ದ ಆ ಇಕ್ಷ್ವಾಕುನೃಪನ ಕುಲವನ್ನು ನಾನು ಪಡೆದುಕೊಂಡೆನು. ದೀರ್ಘಕಾಲದವರೆಗೆ ಆ ಕುಲದ ಒಬ್ಬ ಪಾರ್ಥಿವನಿಂದ ಇನ್ನೊಬ್ಬ ಪಾರ್ಥಿವನ ಬಳಿಯಲ್ಲಿದ್ದೆ.
ಏವಂ ದತ್ತಾಸ್ಮಿ ಮನವೇ ಮಾನವೇಂದ್ರಾಯ ಧೀಮತೇ ।
ಭುಕ್ತಾ ರಾಜಸಹಸ್ರೈಶ್ಚ ಮಹರ್ಷಿಕುಲಸಂಮಿತೈಃ ।। ೧-೫೨-೫೫
ಹೀಗೆ ಧೀಮತ್ ರಾಜ ಮನುವಿಗೆ ಕೊಡಲ್ಪಟ್ಟ ನಾನು ಸಹಸ್ರಾರು ಮಹರ್ಷಿಕುಲಸಂಮಿತ ರಾಜರ ಉಪಭೋಗ್ಯಳಾದೆ.
ಬಹವಃ ಕ್ಷತ್ರಿಯಾಃ ಶೂರಾ ಮಾಂ ಜಿತ್ವಾ ದಿವಮಾಶ್ರಿತಾಃ ।
ತೇ ಚ ಕಾಲವಶಂ ಪ್ರಾಪ್ಯ ಮಯ್ಯೇವ ಪ್ರಲಯಂ ಗತಾಃ ।। ೧-೫೨-೫೬
ಅನೇಕ ಕ್ಷತ್ರಿಯ ಶೂರರು ನನ್ನನ್ನು ಗೆದ್ದು ದಿವವನ್ನು ಆಶ್ರಯಿಸಿದ್ದಾರೆ. ಅವರು ಕಾಲವಶರಾಗಿ ನನ್ನಲ್ಲಿಯೇ ಲಯಹೊಂದಿದರು.
ಮತ್ಕೃತೇ ವಿಗ್ರಹಾ ಲೋಕೇ ವೃತ್ತಾ ವರ್ತಂತ ಏವ ಚ ।
ಕ್ಷತ್ರಿಯಾಣಾಂ ಬಲವತಾಂ ಸಂಗ್ರಾಮೇಷ್ವನಿವರ್ತಿನಾಮ್ ।। ೧-೫೨-೫೭
ಲೋಕದಲ್ಲಿ ನನಗಾಗಿಯೇ ಸಂಗ್ರಾಮದಿಂದ ಪಲಾಯನಮಾಡದಿದ್ದ ಬಲವಂತ ಕ್ಷತ್ರಿಯರ ನಡುವೆ ಯುದ್ಧವು ನಡೆಯಿತು ಮತ್ತು ನಡೆಯುತ್ತಿದೆ.
ಏತದ್ಯುಷ್ಮತ್ಪ್ರವೃತ್ತೇನ ದೈವೇನ ಪರಿಪಾಲ್ಯತೇ ।
ಜಗದ್ಧಿತಾರ್ಥಂ ಕುರುತ ರಾಜ್ಞಾಂ ಹೇತುಂ ರಣಕ್ಷಯೇ ।। ೧-೫೨-೫೮
ನಿಮ್ಮ ಪ್ರವೃತ್ತಿಯ ದೈವದಿಂದ ಈ ಜಗತ್ತು ಪರಿಪಾಲಿತಗೊಂಡಿದೆ. ಆದುದರಿಂದ ನೀವು ಜಗತ್ತಿನ ಹಿತಕ್ಕಾಗಿ ರಣದಲ್ಲಿ ರಾಜರ ಕ್ಷಯವಾಗುವಂತೆ ಮಾಡಿ.
ಯದ್ಯಸ್ತಿ ಮಯಿ ಕಾರುಣ್ಯಂ ಭಾರಶೈಥಿಲ್ಯಕಾರಣಾತ್ ।
ಏಕಶ್ಚಕ್ರಧರಃ ಶ್ರೀಮಾನಭಯಂ ಮೇ ಪ್ರಯಚ್ಛತು ।। ೧-೫೨-೫೯
ನನ್ನಮೇಲೆ ಕಾರುಣ್ಯಭಾವವಿದ್ದರೆ ಚಕ್ರಧರ ಶೀಮಾನ್ ವಿಷ್ಣುವು ಭಾರವನ್ನು ಕಡಿಮೆಮಾಡುವ ಕಾರಣದಿಂದ ನನಗೆ ಅಭಯವನ್ನು ನೀಡಲಿ.
ಯಮಹಂ ಭಾರಸಂತಪ್ತಾ ಸಂಪ್ರಾಪ್ತಾ ಶರಣಾರ್ಥಿನೀ ।
ಭಾರೋ ಯದ್ಯವರೋಪ್ತವ್ಯೋ ವಿಷ್ಣುರೇಷ ಬ್ರವೀತು ಮಾಮ್ ।। ೧-೫೨-೬೦
ಭಾರದಿಂದ ಸಂತಪ್ತಳಾಗಿ ಶರಣಾರ್ಥಿನಿಯಾಗಿ ಯಾರ ಬಳಿ ಬಂದಿದ್ದೇನೋ ಆ ವಿಷ್ಣುವು ನನ್ನ ಭಾರವನ್ನು ಇಳಿಸುವುದು ಉಚಿತವೆಂದು ತಿಳಿದರೆ ನನಗೆ ಆಶ್ವಾಸನೆಯನ್ನು ನೀಡಲಿ.””
ಸಮಾಪ್ತಿ
ಇತಿ ಶ್ರೀಮಹಾಭಾರತೇ ಖಿಲೇಷು ಹರಿವಂಶೇ ಹರಿವಂಶಪರ್ವಣಿ ಧರಣೀವಾಕ್ಯೇ ದ್ವಿಪಂಚಾಶತ್ತಮೋಽಧ್ಯಾಯಃ ।
-
ಅವನ ಜಟಾಮಂಡಲಮಂಡಿತ ಉದರಭಾಗವು ಮುಕ್ತಾಮಣಿಯ ಮಾಲೆಯು ಬೆಳಗಿ ಚಂದ್ರಮನ ಪ್ರಭಾಯುಕ್ತ ಮೇಘದ ಸಮಾನ ಕಾಂತಿಯುಕ್ತವಾಗಿತ್ತು. ಆ ಉದರವನ್ನು ಧರಿಸಿದ್ದ ಭಗವಾನ್ ಶ್ರೀಹರಿಯು ಅಪೂರ್ವ ಶೋಭಸಂಪನ್ನನಾಗಿ ಕಾಣುತ್ತಿದ್ದನು (ಗೀತಾ ಪ್ರೆಸ್). ↩︎
-
ಅವನ ವಿಸ್ತೃತ ವಕ್ಷಸ್ಥಲದಲ್ಲಿ ರೋಮಾಂಚಕಾರಯುಕ್ತ ಶೋಭೆಯ ಶ್ರೀವತ್ಸವು ಎರಡೂ ಸ್ತನಗಳ ಮುಖಗಳ ವರೆಗೆ ಹರಡಿ ಉದ್ಭಾಸಿಸುತ್ತಿತ್ತು (ಗೀತಾ ಪ್ರೆಸ್). ↩︎