051: ವಿಷ್ಣುದೇವಸಂವಾದಃ

ಪ್ರವೇಶ

।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।

ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ

ಶ್ರೀ ಮಹಾಭಾರತ

ಖಿಲಭಾಗೇ ಹರಿವಂಶಃ

ಹರಿವಂಶ ಪರ್ವ

ಅಧ್ಯಾಯ 51

ಸಾರ

ವೈಶಂಪಾಯನ ಉವಾಚ।
ತಚ್ಛ್ರುತ್ವಾ ವಿಷ್ಣುಗದಿತಂ ಬ್ರಹ್ಮಾ ಲೋಕಪಿತಾಮಹಃ ।
ಉವಾಚ ಪರಮಂ ವಾಕ್ಯಂ ಹಿತಂ ಸರ್ವದಿವೌಕಸಾಮ್ ।। ೧-೫೧-೧

ವೈಶಂಪಾಯನನು ಹೇಳಿದನು: “ವಿಷ್ಣುವು ಹೇಳಿದುದನ್ನು ಕೇಳಿದ ಲೋಕಪಿತಾಮಹ ಬ್ರಹ್ಮನು ಸರ್ವದಿವೌಕಸರಿಗೂ ಪರಮ ಹಿತವಾದ ಈ ಮಾತನ್ನಾಡಿದನು:

ನಾಸ್ತಿ ಕಿಂಚಿದ್ಭಯಂ ವಿಷ್ಣೋ ಸುರಾಣಾಮಸುರಾಂತಕ ।
ಯೇಷಾಂ ಭವಾನಭಯದಃ ಕರ್ಣಧಾರೋ ರಣೇ ರಣೇ ।। ೧-೫೧-೨

“ಅಸುರಾಂತಕ ವಿಷ್ಣೋ! ರಣ ರಣದಲ್ಲಿಯೂ ಸುರರಿಗೆ ಅಭಯವನ್ನು ನೀಡುವ ನೀನು ಕರ್ಣಧಾರನಾಗಿರುವಾಗಿ ಕಿಂಚಿದ್ಭಯವೂ ಇಲ್ಲ.

ಶಕ್ರೇ ಜಯತಿ ದೇವೇಶೇ ತ್ವಯಿ ಚಾಸುರಸೂದನೇ ।
ಧರ್ಮೇ ಪ್ರಯತಮಾನಾನಾಂ ಮಾನವಾನಾಂ ಕುತೋ ಭಯಮ್ ।। ೧-೫೧-೩

ಶಕ್ರನಿಗೆ ಜಯವಿರುವಾಗ ಮತ್ತು ದೇವೇಶನಾದ ನೀನು ಅಸುರರನ್ನು ಸಂಹರಿಸುತ್ತಿರುವಾಗ ಧರ್ಮದಲ್ಲಿರಲು ಪ್ರಯತ್ನಿಸುವ ಮಾನವರಿಗೆ ಯಾರ ಭಯವಿದೆ?

ಸತ್ಯೇ ಧರ್ಮೇ ಚ ನಿರತಾನ್ಮಾನವಾನ್ವಿಗತಜ್ವರಾನ್ ।
ನಾಕಾಲೇ ಧರ್ಮಿಣೋ ಮೃತ್ಯುಃ ಶಕ್ನೋತಿ ಪ್ರಸಮೀಕ್ಷಿತುಮ್ ।। ೧-೫೧-೪

ಅಕಾಲ ಮೃತ್ಯುವಿಗೆ ಸತ್ಯ-ಧರ್ಮಗಳಲ್ಲಿ ನಿರತರಾಗಿ ವಿಗತಜ್ವರರಾಗಿರುವ ಧರ್ಮವನ್ನನುಸರಿಸುವ ಮಾನವರ ಬಳಿಯೂ ಸುಳಿಯಲು ಸಾಧ್ಯವಾಗುವುದಿಲ್ಲ.

ಮಾನವಾನಾಂ ಚ ಪತಯಃ ಪಾರ್ಥಿವಾಶ್ಚ ಪರಸ್ಪರಮ್ ।
ಷಡ್ಭಾಗಮುಪಭುಂಜಾನಾ ನ ಭಯಂ ಕುರ್ವತೇ ಮಿಥಃ ।। ೧-೫೧-೫

ಮಾನವರ ಅಧಿಪತಿ ಪಾರ್ಥಿವರೂ ಕೂಡ ಪ್ರಜೆಗಳ ಪುಣ್ಯಗಳ ಆರನೇ ಒಂದು ಭಾಗವನ್ನು ಭುಂಜಿಸುತ್ತಾ ಭಯವನ್ನುಂಟುಮಾಡುತ್ತಿಲ್ಲ.

ತೇ ಪ್ರಜಾನಾಂ ಶುಭಕರಾಃ ಕರದೈರವಗರ್ಹಿತಾಃ ।
ಸುಕರೈರ್ವಿಪ್ರಯುಕ್ತರ್ಥಾಃ ಕೋಶಮಾಪೂರಯಂತ್ಯುತ ।। ೧-೫೧-೬

ಪ್ರಜೆಗಳಿಗೆ ಶುಭವಾದುದನ್ನೇ ಮಾಡುವ ಅವರನ್ನು ಕರವನ್ನು ನೀಡುವವರು ನಿಂದಿಸುವುದಿಲ್ಲ. ಕೋಶವು ಕಡಿಮೆಯಾದಾಗ ಅವರು ನ್ಯಾಯೋಚಿತ ಕರಗಳಿಂದಲೇ ತಮ್ಮ ಕೋಶವನ್ನು ತುಂಬಿಸಿಕೊಳ್ಳುತ್ತಾರೆ.

ಸ್ಫೀತಾಂಜನಪದಾನ್ಸರ್ವಾನ್ಪಾಲಯಂತಃ ಕ್ಷಮಾಪರಾಃ ।
ಅತೀಕ್ಷ್ಣದಂಡಾಂಶ್ಚತುರೋ ವರ್ಣಾಂಜುಗುಪುರಂಜಸಾ ।। ೧-೫೧-೭

ಕ್ಷಮಾಪರರಾದ ಅವರು ಸಮೃದ್ಧ ಜನಪದಗಳೆಲ್ಲವನ್ನೂ ಪಾಲಿಸುತ್ತಾರೆ. ಯಾರನ್ನೂ ತೀಕ್ಷ್ಣವಾಗಿ ದಂಡಿಸದೇ ನಾಲ್ಕೂ ವರ್ಣದವರನ್ನೂ ಯಥೋಚಿತವಾಗಿ ರಕ್ಷಿಸುತ್ತಾರೆ.

ನೋದ್ವೇಜನೀಯಾ ಭೂತಾನಾಂ ಸಚಿವೈಃ ಸಾಧುಪೂಜಿತಾಃ ।
ಚತುರಂಗಬಲೈರ್ಗುಪ್ತಾಃ ಷಡ್ಗುಣಾನುಪಭುಂಜತೇ ।। ೧-೫೧-೮

ಭೂತಗಳು ಉದ್ವೇಗವನ್ನುಂಟುಮಾಡುತ್ತಿಲ್ಲ. ಸಾಧು ಸಚಿವರಿಂದ ಪೂಜಿತರಾಗಿದ್ದಾರೆ. ಚತುರಂಗ ಬಲಗಳಿಂದ ಸುರಕ್ಷಿತರಾಗಿದ್ದಾರೆ ಮತ್ತು ಷಡ್ಗುಣಗಳನ್ನು1 ಬಳಸಿಕೊಳ್ಳುತ್ತಿದ್ದಾರೆ.

ಧನುರ್ವೇದಪರಾಃ ಸರ್ವೇ ಸರ್ವೇ ವೇದೇಷು ನಿಷ್ಠಿತಾಃ ಯಜಂತೇ ಚ ಯಥಾಕಾಲಂ ಯಜ್ಞೈರ್ವಿಪುಲದಕ್ಷಿಣೈಃ ।। ೧-೫೧-೯

ಎಲ್ಲರೂ ದನುರ್ವೇದ ಪಾರಂಗತರಾಗಿದ್ದಾರೆ. ಸರ್ವರೂ ವೇದಗಳಲ್ಲಿ ನಿಷ್ಠೆಯುಳ್ಳವರಾಗಿದ್ದಾರೆ. ಯಥಾಕಾಲದಲ್ಲಿ ವಿಪುಲದಕ್ಷಿಣೆಗಳಿಂದ ಯಜ್ಞಗಳನ್ನು ಯಜಿಸುತ್ತಾರೆ.

ವೇದಾನಧೀತ್ಯ ದೀಕ್ಷಾಭಿರ್ಮಹರ್ಷೀನ್ಬ್ರಹ್ಮಚರ್ಯಯಾ ।
ಶ್ರಾದ್ಧೈಶ್ಚ ಮೇಧ್ಯೈಃ ಶತಶಸ್ತರ್ಪಯಂತಿ ಪಿತಾಮಹಾನ್ ।। ೧-೫-೧೦

ಬ್ರಹ್ಮಚರ್ಯ ದೀಕ್ಷೆಯಡಿಯಲ್ಲಿ ವೇದಗಳನ್ನು ಅಧ್ಯಯನ ಮಾಡಿ ಮಹರ್ಷಿಗಳನ್ನೂ ಮೇಧಾಯುಕ್ತ ಶ್ರಾದ್ಧಗಳಿಂದ ಪಿತೃಗಳನ್ನು ನೂರಾರು ಬಾರಿ ತೃಪ್ತಿಪಡಿಸುತ್ತಾರೆ.

ನೈಷಾಮವಿದಿತಂ ಕಿಂಚಿತ್ತ್ರಿವಿಧಂ ಭುವಿ ದೃಶ್ಯತೇ ।
ವೈದಿಕಂ ಲೌಕಿಕಂ ಚೈವ ಧರ್ಮಶಾಸ್ತ್ರೋಕ್ತಮೇವ ಚ ।। ೧-೫೧-೧೧

ಭೂಮಿಯಲ್ಲಿ ಕಾಣುವ ಮತ್ತು ಧರ್ಮಶಾಸ್ತ್ರಗಳಲ್ಲಿ ಹೇಳಿರುವ ವೈದಿಕ ಲೌಕಿಕ ಮತ್ತು ಯಾವುದೇ ತ್ರಿವಿಧವು ಇವರಿಗೆ ತಿಳಿಯದೇ ಇಲ್ಲ.

ತೇ ಪರಾವರದೃಷ್ಟಾರ್ಥ ಮಹರ್ಷಿಸಮತೇಜಸಃ ।
ಭೂಯಃ ಕೃತಯುಗಂ ಕರ್ತುಮುತ್ಸಹಂತೇ ನರಾಧಿಪಾಃ ।। ೧-೫೧-೧೨

ಪರಾವರ ತತ್ತ್ವವನ್ನು ಸಾಕ್ಷಾತ್ಕಾರ ಮಾಡಿಕೊಂದಿರುವ ಈ ನರಾಧಿಪರು ಮಹರ್ಷಿಗಳ ಸಮತೇಜಸರಾಗಿದ್ದಾರೆ ಮತ್ತು ಪುನಃ ಕೃತಯುಗವನ್ನು ತರುವುದರಲ್ಲಿ ಉತ್ಸಾಹಿತರಾಗಿದ್ದಾರೆ.

ತೇಷಾಮೇವ ಪ್ರಭಾವೇಣ ಶಿವಂ ವರ್ಷತಿ ವಾಸವಃ ।
ಯಥಾರ್ಥಂ ಚ ವವುರ್ವಾತಾ ವಿರಜಸ್ಕಾ ದಿಶೋ ದಶ ।। ೧-೫೧-೧೩

ಅವರ ಪ್ರಭಾವದಿಂದಲೇ ವಾಸವನು ಮಂಗಳಕರ ಮಳೆಯನ್ನು ಸುರಿಸುತ್ತಾನೆ. ವಾಯುವೂ ಯಥೋಚಿತವಾಗಿ ಬೀಸುತ್ತಾನೆ. ಹತ್ತುದಿಕ್ಕುಗಳೂ ನಿರ್ಮಲವಾಗಿವೆ.

ನಿರುತ್ಪಾತಾ ಚ ವಸುಧಾ ಸುಪ್ರಚಾರಾಶ್ಚ ಖೇ ಗ್ರಹಾಃ ।
ಚಂದ್ರಮಾಶ್ಚ ಸನಕ್ಷತ್ರಃ ಸೌಮ್ಯಂ ಚರತಿ ಯೋಗತಃ ।। ೧-೫೧-೧೪

ಭೂಮಿಯ ಮೇಲೆ ಯಾವ ಉತ್ಪಾತವೂ ಆಗುತ್ತಿಲ್ಲ. ಆಕಾಶದಲ್ಲಿ ಗ್ರಹಗಳು ಸಮುಚಿತ ಗತಿಯಿಂದಲೇ ವಿಚರಿಸುತ್ತಿವೆ. ನಕ್ಷತ್ರ ಸಹಿತ ಚಂದ್ರಮನೂ ಕೂಡ ಅವರೊಂದಿಗೆ ಕೂಡಿಕೊಂಡು ಸೌಮ್ಯಗತಿಯಲ್ಲಿಯೇ ವಿಚರಿಸುತ್ತಿದ್ದಾನೆ.

ಅನುಲೋಮಕರಃ ಸೂರ್ಯಸ್ತ್ವಯನೇ ದ್ವೇ ಚಚಾರ ಹ ।
ಹವ್ಯೈಶ್ಚ ವಿವಿಧೈಸ್ತ್ರಿಪ್ತಃ ಶುಭಗಂಧೋ ಹುತಾಶನಃ ।। ೧-೫೧-೧೫

ಜಗತ್ತಿಗೆ ಅನುಕೂಲಕರನಾದ ಸೂರ್ಯನು ಎರಡು ಆಯನಗಳಲ್ಲಿ ವಿಚರಿಸುತ್ತಾನೆ. ಮತ್ತು ಶುಭಗಂಧಯುಕ್ತ ಹುತಾಶನನು ವಿವಿಧ ಹವಿಸ್ಸುಗಳಿಂದ ತೃಪ್ತನಾಗಿದ್ದಾನೆ.

ಏವಂ ಸಂಯಕ್ಪ್ರವೃತ್ತೇಷು ವಿವೃದ್ಧೇಷು ಮಖಾದಿಷು ।
ತರ್ಪಯತ್ಸು ಮಹೀಂ ಕೃತ್ಸ್ನಾಂ ನೃಣಾಂ ಕಾಲಭಯಂ ಕುತಃ ।। ೧-೫೧-೧೬

ಹೀಗೆ ರಾಜರು ಉತ್ತಮವಾಗಿ ನಡೆದುಕೊಳ್ಳುತ್ತಿರುವಾಗ ಮಖಾದಿಗಳಿಂದ ಅಭಿವೃದ್ಧಿಯನ್ನು ಹೊಂದುತ್ತಿರುವಾಗ ಮತ್ತು ಇಡೀ ಮಹಿಯನ್ನೇ ತೃಪ್ತಿಗೊಳಿಸಿರುವಾಗ ಮನುಷ್ಯರಿಗೆ ಕಾಲನ ಭಯವು ಎಲ್ಲಿಂದ?

ತೇಷಾಂ ಜ್ವಲಿತಕೀರ್ತೀನಾಮನ್ಯೋನ್ಯವಶವರ್ತಿನಾಮ್ ।
ರಾಜ್ಞಾಂ ಬಲೈರ್ಬಲವತಾಂ ಪೀಡ್ಯತೇ ವಸುಧಾತಲಮ್ ।। ೧-೫೧-೧೭

ಪ್ರಜ್ವಲಿಸುವ ಕೀರ್ತಿವಂತರಾದ, ಅನ್ಯೋನ್ಯರ ವಶವರ್ತಿಗಳಾಗಿರುವ ಮತ್ತು ಬಲಶಾಲೀ ಸೇನೆಗಳನ್ನುಳ್ಳ ಆ ರಾಜರ ಭಾರದಿಂದ ವಸುಧಾತಲವು ಪೀಡಿತಳಾಗಿದ್ದಾಳೆ.

ಸೇಯಂ ಭಾರಪರಿಶ್ರಾಂತಾ ಪೀಡ್ಯಮಾನಾ ನರಾಧಿಪೈಃ ।
ಪೃಥಿವೀ ಸಮನುಪ್ರಾಪ್ತಾ ನೌರಿವಾಸನ್ನವಿಪ್ಲವಾ ।। ೧-೫೧-೧೮

ಈ ಭಾರದಿಂದ ಬಳಲಿ ನರಾಧಿಪರಿಂದ ಪೀಡಿತಳಾದ ಪೃಥ್ವಿಯು ಮುಳುಗಲಿರುವ ನೌಕೆಯಂತೆ ನಿಮ್ಮ ಶರಣು ಬಂದಿದ್ದಾಳೆ.

ಯುಗಾಂತಸದೃಶೈ ರೂಪೈಃ ಶೈಲೋಚ್ಚಲಿತಬಂಧನಾ ।
ಜಲೋತ್ಪೀಡಾಕುಲಾ ಸ್ವೇದಂ ಧಾರಯಂತೀ ಮುಹುರ್ಮುಹುಃ ।। ೧-೫೧-೧೯

ಯುಗಾಂತಸದೃಶ ರೂಪಿಗಳಿಂದ ಪೃಥ್ವಿಯ ಪರ್ವತರೂಪೀ ಬಂಧನವು ಸಡಿಲಗೊಂಡಿದೆ. ಆದುದರಿಂದ ಪೃಥ್ವಿಯು ರಸಾತಲದ ಜಲರಾಶಿಯಲ್ಲಿ ಮುಳುಗುವ ಆಶಂಕದಿಂದ ವ್ಯಾಕುಲಳಾಗಿ ಮತ್ತೆ ಮತ್ತೆ ಬೆವರುತ್ತಿದ್ದಾಳೆ.

ಕ್ಷತ್ರಿಯಾಣಾಂ ವಪುರ್ಭಿಷ್ಚ ತೇಜಸಾ ಚ ಬಲೇನ ಚ ।
ನೃಣಾಂ ಚ ರಾಷ್ಟ್ರೈರ್ವಿಸ್ತೀರ್ಣೈಃ ಶ್ರಾಮ್ಯತೀವ ವಸುಂಧರಾ ।। ೧-೫೧-೨೦

ಕ್ಷತ್ರಿಯರ ಶರೀರ, ತೇಜಸ್ಸು ಮತ್ತು ಬಲಗಳಿಂದ ಹಾಗೂ ವಿಸ್ತೀರ್ಣವಾಗಿರುವ ಮನುಷ್ಯರ ರಾಷ್ಟ್ರಗಳಿಂದ ವಸುಂಧರೆಯು ಅತೀವವಾಗಿ ಬಳಲಿದ್ದಾಳೆ.

ಪುರೇ ಪುರೇ ನರಪತಿಃ ಕೋಟಿಸಂಖ್ಯೈರ್ಬಲೈರ್ವೃತಃ ।
ರಾಷ್ಟ್ರೇ ರಾಷ್ಟ್ರೇ ಚ ಬಹವೋ ಗ್ರಾಮಾಃ ಶತಸಹಸ್ರಶಃ ।। ೧-೫೧-೨೧

ಪುರಪುರದ ನರಪತಿಯೂ ಕೋಟಿಸಂಖ್ಯೆಗಳ ಸೇನೆಗಳಿಂದ ಕೂಡಿದ್ದಾನೆ. ರಾಷ್ಟ್ರ ರಾಷ್ಟ್ರಗಳಲ್ಲಿಯೂ ಅನೇಕ ಲಕ್ಷ ಗ್ರಾಮಗಳಿವೆ.

ಭೂಮಿಪಾನಾಂ ಸಹಸ್ರೈಶ್ಚ ತೇಷಾಂ ಚ ಬಲಿನಾಂ ಬಲೈಃ ।
ಗ್ರಾಮಾಯುತಾಢ್ಯೈ ರಾಷ್ಟ್ರೈಶ್ಚ ಭೂಮಿರ್ನಿರ್ವಿವರಾ ಕೃತಾ ।। ೧-೫೧-೨೨

ಸಹಸ್ರಾರು ಭೂಮಿಪಾಲರು, ಅವರ ಬಲಶಾಲೀ ಸೇನೆಗಳು ಮತ್ತು ಹತ್ತು-ಹತ್ತು ಸಾವಿರ ಗ್ರಾಮಗಳುಳ್ಳ ರಾಷ್ಟ್ರಗಳಿಂದ ತುಂಬಿಹೋಗಿರುವ ಭೂಮಿಯಲ್ಲಿ ಸ್ವಲ್ಪವೂ ಸ್ಥಳವಿಲ್ಲದಂತಾಗಿದೆ.

ಸೇಯಂ ನಿರಾಮಯಂ ಕೃತ್ವಾ ನಿಶ್ಚೇಷ್ಟಾ ಕಾಲಮಗ್ರತಃ ।
ಪ್ರಾಪ್ತಾ ಮಮಾಲಯಂ ವಿಷ್ಣೋ ಭವಾಂಶ್ಚಾಸ್ಯಾಃ ಪರಾ ಗತಿಃ ।। ೧-೫೧-೨೩

ವಿಷ್ಣೋ! ನಿಶ್ಚೇಷ್ಟಳಾಗಿದ್ದ ಇವಳು ನಿರಾಮಯ ಕಾಲನನ್ನು ಮುಂದುಮಾಡಿಕೊಂಡು ನನ್ನ ಆಲಯಕ್ಕೆ ಬಂದಿದ್ದಾಳೆ. ನೀನೇ ಇವಳ ಪರಮ ಗತಿ.

ಕರ್ಮಭೂಮಿರ್ಮನುಷ್ಯಾಣಾಂ ಭೂಮಿರೇಷಾ ವ್ಯಥಾಂ ಗತಾ ।
ಯಥಾ ನ ಸೀದೇತ್ತತ್ಕಾರ್ಯಂ ಜಗತ್ಯೇಷಾ ಹಿ ಶಾಶ್ವತೀ ।। ೧-೫೧-೨೪

ಮನುಷ್ಯರ ಕರ್ಮಭೂಮಿಯಾಗಿರುವ ಮತ್ತು ಈ ಜಗತ್ತಿನಲ್ಲಿ ಶಾಶ್ವತಳಾಗಿರುವ ಈ ಭೂಮಿಯು ವ್ಯಥಿತಳಾಗಿದ್ದಾಳೆ. ಇವಳು ಮುಳುಗಿಹೋಗದಂತೆ ಮಾಡಬೇಕು.

ಅಸ್ಯಾ ಹಿ ಪೀಡನೇ ದೋಷೋ ಮಹಾನ್ಸ್ಯಾನ್ಮಧುಸೂದನ ।
ಕ್ರಿಯಾಲೋಪಶ್ಚ ಲೋಕಾನಾಂ ಪೀಡಿತಂ ಚ ಜಗದ್ಭವೇತ್ ।। ೧-೫೧-೨೫

ಮಧುಸೂದನ! ಇವಳ ಪೀಡನೆಯಿಂದ ಮಹಾ ದೋಷವುಂಟಾಗಬಹುದು. ಲೋಕಗಳಲ್ಲಿ ಕ್ರಿಯಾಲೋಪಗಳಾಗಿ ಜಗತ್ತೇ ಪೀಡೆಗೊಳಗಾಗಬಹುದು.

ಶ್ರಾಮ್ಯತೇ ವ್ಯಕ್ತಮೇವೇಯಂ ಪಾರ್ಥಿವೌಘಪ್ರಪೀಡಿತಾ।
ಸಹಜಾಂ ಯಾ ಕ್ಷಮಾಂ ತ್ಯಕ್ತ್ವಾ ಚಲತ್ವಮಚಲಾ ಗತಾ ।। ೧-೫೧-೨೬

ಪಾರ್ಥಿವರ ಸೇನೆಗಳಿಂದ ಪೀಡಿತಳಾಗಿ ಇವಳು ಬಳಲಿರುವುದು ವ್ಯಕ್ತವಾಗುತ್ತಿದೆ. ಅವಳಿಗೆ ಸಹಜವಾಗಿರುವ ಕ್ಷಮೆಯನ್ನು ತೊರೆದು ಅಚಲಳಾಗಿದ್ದ ಇವಳು ವಿಚಲಿತಳಾಗಿದ್ದಾಳೆ.

ತದಸ್ಯಾಃ ಶ್ರುತವಂತಃ ಸ್ಮ ತಚ್ಚಾಪಿ ಭವತಾ ಶ್ರುತಮ್ ।
ಭಾರಾವತರಣಾರ್ಥಂ ಹಿ ಮಂತ್ರಯಾಮ ಸಹ ತ್ವಯಾ ।। ೧-೫೧-೨೭

ಇವಳ ಮಾತನ್ನು ನಾನು ಕೇಳಿದ್ದೇನೆ. ನೀನು ಕೂಡ ಇದನ್ನು ಕೇಲಿದೆ. ಇವಳ ಭಾರವನ್ನು ಇಳಿಸುವುದಕ್ಕಾಗಿ ನಿನ್ನೊಂದಿಗೆ ಮಂತ್ರಾಲೋಚನೆ ಮಾಡಲು ಬಯಸುತ್ತೇವೆ.

ಸತ್ಪಥೇ ಹಿ ಸ್ಥಿತಾಃ ಸರ್ವೇ ರಾಜಾನೋ ರಾಷ್ಟ್ರವರ್ಧನಾಃ ।
ನರಾಣಾಂ ಚ ತ್ರಯೋ ವರ್ಣಾ ಬ್ರಾಹ್ಮಣಾನನುಯಾಯಿನಃ ।। ೧-೫೧-೨೮

ರಾಷ್ಟ್ರವರ್ಧನರಾದ ಸರ್ವ ರಾಜರೂ ಸತ್ಪಥಲ್ಲಿಯೇ ಸ್ಥಿರರಾಗಿದ್ದಾರೆ. ಮೂರು ವರ್ಣಗಳ ನರರೂ ಬ್ರಾಹ್ಮಣರನ್ನೇ ಅನುಸರಿಸುತ್ತಿದ್ದಾರೆ.

ಸರ್ವಂ ಸತ್ಯಪರಂ ವಾಕ್ಯಂ ವರ್ಣಾ ಧರ್ಮಪರಾಸ್ತಥಾ ।
ಸರ್ವೇ ವೇದಪರಾ ವಿಪ್ರಾಃ ಸರ್ವೇ ವಿಪ್ರಪರಾ ನರಾಃ ।। ೧-೫೧-೨೯

ಸರ್ವರೂ ಸತ್ಯಪರರಾಗಿದ್ದಾರೆ. ಸರ್ವ ವರ್ಣದವರೂ ಅವರವರ ಧರ್ಮದಲ್ಲಿ ತತ್ಪರರಾಗಿದ್ದಾರೆ. ಸಮಸ್ತ ವಿಪ್ರರೂ ವೇದಪರರಾಗಿದ್ದಾರೆ ಮತ್ತು ಸಮಸ್ತ ನರರೂ ವಿಪ್ರಪರಾಗಿದ್ದಾರೆ.

ಏವಂ ಜಗತಿ ವರ್ತಂತೇ ಮನುಷ್ಯಾ ಧರ್ಮಕಾರಣಾತ್ ।
ಯಥಾ ಧರ್ಮವಧೋ ನ ಸ್ಯಾತ್ತಥಾ ಮಂತ್ರಃ ಪ್ರವರ್ತ್ಯತಾಮ್ ।। ೧-೫೧-೩೦

ಹೀಗೆ ಜಗತ್ತಿನ ಮನುಷ್ಯರು ಧರ್ಮಪೂರ್ವಕವಾಗಿಯೇ ನಡೆದುಕೊಳ್ಳುತ್ತಾರೆ. ಆದುದರಿಂದ ಧರ್ಮದ ವಧೆಯಾಗದಂತೆ ಆದರೆ ಭೂಮಿಯ ಭಾರವು ಕಡಿಮೆಯಾಗುವಂತೆ ಮಂತ್ರಾಲೋಚನೆಯು ನಡೆಯಲಿ.

ಸತಾಂ ಗತಿರಿಯಂ ನಾನ್ಯಾ ಧರ್ಮಶ್ಚಾಸ್ಯಾಃ ಸುಸಾಧನಮ್ ।
ರಾಜ್ಞಾಂ ಚೈವ ವಧಃ ಕಾರ್ಯೋ ಧರಣ್ಯಾ ಭಾರನಿರ್ಣಯೇ ।। ೧-೫೧-೩೧

ಇದೇ ಸತ್ಪುರುಷರ ಗತಿ. ಬೇರೆ ಅಲ್ಲ. ಇದೇ ಧರ್ಮದ ಸುಸಾಧನ. ಧರಣಿಯ ಭಾರವನ್ನು ಕಳೆಯುವುದಕ್ಕಾಗೆ ರಾಜರ ವಧೆಯ ಕಾರ್ಯವಾಗಬೇಕು.

ತದಾಗಚ್ಛ ಮಹಾಭಾಗ ಸಹ ವೈ ಮಂತ್ರಕಾರಣಾತ್ ।
ವ್ರಜಾಮೋ ಮೇರುಶಿಖರಂ ಪುರಸ್ಕೃತ್ಯ ವಸುಂಧರಾಮ್ ।। ೧-೫೧-೩೨

ಆದುದರಿಂದ ಮಹಾಭಾಗ! ವಸುಂಧರೆಯನ್ನು ಮುಂದಿಟ್ಟುಕೊಂಡು ಒಟ್ಟಾಗಿ ಮಂತ್ರಾಲೋಚನೆಗೈಯಲು ಮೇರುಶಿಖರಕ್ಕೆ ಹೋಗೋಣ!”

ಏತಾವದುಕ್ತ್ವಾ ರಾಜೇಂದ್ರ ಬ್ರಹ್ಮಾ ಲೋಕಪಿತಾಮಹಃ ।
ಪೃಥಿವ್ಯಾ ಸಹ ವಿಶ್ವಾತ್ಮಾ ವಿರರಾಮ ಮಹಾದ್ಯುತಿಃ ।। ೧-೫೧-೩೩

ರಾಜೇಂದ್ರ! ಹೀಗೆ ಹೇಳಿ, ಪೃಥ್ವಿಯೊಡನೆ ಬಂದಿದ್ದ ಲೋಕಪಿತಾಮಹ ವಿಶ್ವಾತ್ಮ ಮಹಾದ್ಯುತಿ ಬ್ರಹ್ಮನು ಸುಮ್ಮನಾದನು.”

ಸಮಾಪ್ತಿ

ಇತಿ ಶ್ರೀಮಹಾಭಾರತೇ ಖಿಲೇಷು ಹರಿವಂಶೇ ಹರಿವಂಶಪರ್ವಣಿ ಭಾರಾವತರಣೇ ಏಕಪಂಚಾಶತ್ತಮೋಽಧ್ಯಾಯಃ


  1. ಸಂಧಿ, ವಿಗ್ರಹ, ಯಾನ, ಆಸನ, ದ್ವೈಧೀಭಾವ ಮತ್ತು ಸಮಾಶ್ರಯ (ಗೀತಾ ಪ್ರೆಸ್). ↩︎