ಪ್ರವೇಶ
।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।
ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ
ಶ್ರೀ ಮಹಾಭಾರತ
ಖಿಲಭಾಗೇ ಹರಿವಂಶಃ
ಹರಿವಂಶ ಪರ್ವ
ಅಧ್ಯಾಯ 50
ಸಾರ
ವೈಶಂಪಾಯನ ಉವಾಚ।
ಋಷಿಭಿಃ ಪೂಜಿತಸ್ತೈಸ್ತು ವಿವೇಶ ಹರಿರೀಶ್ವರಃ ।
ಪೌರಾಣಂ ಬ್ರಹ್ಮಸದನಂ ದಿವ್ಯಂ ನಾರಾಯಣಾಶ್ರಮಮ್ ।। ೧-೫೦-೨
ವೈಶಂಪಾಯನನು ಹೇಳಿದನು: “ಋಷಿಗಳಿಂದ ಪೂಜಿತನಾಗಿ ಹರಿ ಈಶ್ವರನು ಪುರಾಣಪ್ರಸಿದ್ಧವಾದ ಬ್ರಹ್ಮಸದನ ದಿವ್ಯ ನಾರಾಯಣಾಶ್ರಮವನ್ನು ಪ್ರವೇಶಿಸಿದನು.
ಸ ತದ್ವಿವೇಶ ಹೃಷ್ಟಾತ್ಮಾ ತಾನಾಮಂತ್ರ್ಯ ಸದೋಗತಾನ್ ।
ಪ್ರಣಮ್ಯ ಚಾದಿದೇವಾಯ ಬ್ರಹ್ಮಣೇ ಪದ್ಮಯೋನಯೇ ।। ೧-೫೦-೨
ಸ್ವೇನ ನಾಮ್ನಾ ಪರಿಜ್ಞಾತಂ ಸ ತಂ ನಾರಾಯಣಾಶ್ರಮಮ್ ।
ಪ್ರವಿಶನ್ನೇವ ಭಗವಾನಾಯುಧಾನಿ ವ್ಯಸರ್ಜಯತ್ ।। ೧-೫೦-೩
ಯಜ್ಞಸಭೆಯಲ್ಲಿದ್ದವರಿಂದ ಬೀಳ್ಕೊಂಡು ಆದಿದೇವ ಪದ್ಮಯೋನಿ ಬ್ರಹ್ಮನಿಗೆ ವಂದಿಸಿ ಹೃಷ್ಟಾತ್ಮನಾಗಿ ತನ್ನದೇ ನಾಮದಿಂದ ಪರಿಜ್ಞಾತವಾಗಿದ್ದ ನಾರಯಣಾಶ್ರಮವನ್ನು ಪ್ರವೇಶಿಸಿ ಭಗವಂತನು ತನ್ನ ಆಯುಧಗಳನ್ನು ವಿಸರ್ಜಿಸಿದನು.
ಸ ತತ್ರಾಂಬುಪತಿಪ್ರಖ್ಯಂ ದದರ್ಶಾಲಯಮಾತ್ಮನಃ ।
ಸ್ವಧಿಷ್ಠಿತಂ ದೇವಗಣೈಃ ಶಾಶ್ವತೈಶ್ಚ ಮಹರ್ಷಿಭಿಃ ।। ೧-೫೦-೪
ಅಲ್ಲಿ ಅವನು ಸಮುದ್ರದಂತೆ ಶೋಭಿಸುತ್ತಿದ್ದ ತನ್ನ ಶಯನಾಗಾರವನ್ನು ನೋಡಿದನು. ಅದರಲ್ಲಿ ಶಾಶ್ವತ ದೇವಗಣಗಳೂ ಮಹರ್ಷಿಗಳೂ ನಿವಾಸಿಸುತ್ತಿದ್ದರು.
ಸಂವರ್ತಕಾಂಬುನೋಪೇತಂ ನಕ್ಷತ್ರಸ್ಥಾನಸಂಕುಲಂ ।
ತಿಮಿರೌಘಪರಿಕ್ಷಿಪ್ತಮಪ್ರಧೃಷ್ಯಂ ಸುರಾಸುರೈಃ ।। ೧-೫೦-೫
ಅದು ಸಂವರ್ತಕ ಮೇಘದಿಂದ ಕೂಡಿತ್ತು. ನಕ್ಷತ್ರಸಂಕುಲಗಳ ಸ್ಥಾನವಾಗಿತ್ತು. ಸುರಾಸುರರಿಗೂ ಅಲ್ಲಿಗೆ ಹೋಗಲು ಶಕ್ಯವಿರದಂತೆ ಘೋರ ಅಂಧಕಾರದಿಂದ ಆ ಧಾಮವು ಆವೃತವಾಗಿತ್ತು.
ನ ತತ್ರ ವಿಷಯೋ ವಾಯೋರ್ನೇಂದೋರ್ನ ಚ ವಿವಸ್ವತಃ ।
ವಪುಷಃ ಪದ್ಮನಾಭಸ್ಯ ಸ ದೇಶಸ್ತೇಜಸಾಽಽವೃತಃ ।। ೧-೫೦-೬
ಅಲ್ಲಿ ವಾಯುವಾಗಲೀ, ಇಂದುವಾಗಲೀ, ವಿವಸ್ವತ ಸೂರ್ಯನಾಗಲೀ ತಲುಪುವಂತಿರಲಿಲ್ಲ. ಆ ಪ್ರದೇಶವು ಪದ್ಮನಾಭನ ಶರೀರದ ತೇಜಸ್ಸಿನಿಂದಲೇ ಕಾಂತಿಯುಕ್ತವಾಗಿತ್ತು.
ಸ ತತ್ರ ಪ್ರವಿಶನ್ನೇವ ಜಟಾಭಾರಂ ಸಮುದ್ವಹನ್ ।
ಸಹಸ್ರಶೀರ್ಷೋ ಭೂತ್ವಾ ತು ಶಯನಾಯೋಪಚಕ್ರಮೇ ।। ೧-೫೦-೭
ಸಹಸ್ರಶೀರ್ಷನಾಗಿದ್ದರೂ ಅವನು ಆ ಪ್ರದೇಶವನ್ನು ಪ್ರವೇಶಿಸಿದೊಡನೆಯೇ ಜಗತ್ತಿನ ಭಾರವೆಲ್ಲವನ್ನೂ ಜಟೆಯಲ್ಲಿ ಧರಿಸಿ ಮಲಗಲು ಸಿದ್ಧನಾದನು.
ಲೋಕಾನಾಮಂತಕಾಲಜ್ಞಾ ಕಾಲೀ ನಯನಶಾಲಿನೀ ।
ಉಪತಸ್ಥೇ ಮಹಾತ್ಮಾನಂ ನಿದ್ರಾ ತಂ ಕಾಲರೂಪಿಣೀ ।। ೧-೫೦-೮
ಆಗ ಲೋಕಗಳ ಅಂತ್ಯಕಾಲವನ್ನು ತಿಳಿದಿದ್ದ, ನಯನಗಳನ್ನು ಆಶ್ರಯಿಸಿ ಶೋಭಿಸುವ, ಕಪ್ಪುವರ್ಣದ ಕಾಲರೂಪಿಣೀ ನಿದ್ರೆಯು ಆ ಮಹಾತ್ಮನ ಸೇವೆಗೆ ಉಪಸ್ಥಿತಳಾದಳು.
ಸ ಶಿಶ್ಯೇ ಶಯನೇ ದಿವ್ಯೇ ಸಮುದ್ರಾಂಭೋದಶೀತಲೇ ।
ಹರಿರೇಕಾರ್ಣವೋಕ್ತೇನ ವ್ರತೇನ ವ್ರತಿನಾಂ ವರಃ ।। ೧-೫೦-೯
ಪುರಾಣಗಳಲ್ಲಿ ಹೇಳಿದಂತೆ ಪ್ರಲಯಕಾಲದಲ್ಲಿ ಏಕಾರ್ಣವದಲ್ಲಿ ಹೇಗೋ ಹಾಗೆ ವ್ರತಿಗಳಲ್ಲಿ ಶ್ರೇಷ್ಠನಾದ ಹರಿಯು ಸಮುದ್ರ ಮತ್ತು ಮೇಘಗಳ ಶೀತಲ ಶಯ್ಯೆಯ ಮೇಲೆ ಮಲಗಿದನು1.
ತಂ ಶಯಾನಂ ಮಹಾತ್ಮಾನಂ ಭವಾಯ ಜಗತಃ ಪ್ರಭುಮ್ ।
ಉಪಾಸಾಂಚಕ್ರಿರೇ ವಿಷ್ಣುಂ ದೇವಾಃ ಸರ್ಷಿಗಣಾಸ್ತಥಾ ।। ೧-೫೦-೧೦
ಪವಡಿಸಿದ್ದ ಆ ಮಹಾತ್ಮ ಭವ ಜಗತ್ಪ್ರಭು ವಿಷ್ಣುವನ್ನು ಋಷಿಗಣಗಳೊಂದಿಗೆ ದೇವತೆಗಳು ಉಪಾಸಿಸತೊಡಗಿದರು.
ತಸ್ಯ ಸುಪ್ತಸ್ಯ ಶುಶುಭೇ ನಾಭಿಮಧ್ಯಾತ್ಸಮುತ್ಥಿತಮ್ ।
ಆದ್ಯಂ ತಸ್ಯಾಸನಂ ಪದ್ಮಂ ಬ್ರಹ್ಮಣಃ ಸೂರ್ಯವರ್ಚಸಮ್ ।
ಸಹಸ್ರಪತ್ರಂ ವರ್ಣಾಢ್ಯಂ ಸುಕುಮಾರಂ ವಿಭೂಷಿತಮ್ ।। ೧-೫೦-೧೧
ಹಾಗೆ ಮಲಗಿದ್ದ ಅವನ ನಾಭಿಮಧ್ಯದಿಂದ ಸೂರ್ಯವರ್ಚಸ ಪದ್ಮವು ಮೇಲೆದ್ದು ಶೋಭಿಸಿತು. ಆ ಪದ್ಮವು ಬ್ರಹ್ಮನ ಆದಿ ಆಸನವಾಗಿತ್ತು. ಸಹಸ್ರದಳಗಳನ್ನು ಹೊಂದಿದ್ದ ಆ ಪದ್ಮವು ವಿಭಿನ್ನ ವರ್ಣಗಳಿಂದ ಕೂಡಿದ್ದು ಅತ್ಯಂತ ಕೋಮಲವಾಗಿತ್ತು ಮತ್ತು ಚೆನ್ನಾಗಿ ಅರಳಿತ್ತು.
ಬ್ರಹ್ಮಸೂತ್ರೋದ್ಯತಕರಃ ಸ್ವಪನ್ನೇವ ಮಹಾಮುನಿಃ ।
ಆವರ್ತಯತಿ ಲೋಕಾನಾಂ ಸರ್ವೇಷಾಂ ಕಾಲಪರ್ಯಯಮ್ ।। ೧-೫೦-೧೨
ಅವನ ಎತ್ತಿದ ಕೈಯು ಬ್ರಹ್ಮನು ತನ್ನ ಪೂರ್ವಜನ್ಮದ ಕರ್ಮ-ಸಂಸ್ಕಾರ ವಾಸನೆಯಂತೆಯೇ ಸೃಷ್ಟಿಮಾಡಬೇಕೆನ್ನುವುದನ್ನು ಸೂಚಿಸುತ್ತದೆ. ಹೀಗೆ ಮಹಾಮುನಿ ನಾರಾಯಣನು ಮಲಗಿಕೊಂಡೇ ಸರ್ವ ಲೋಕಗಳ ಕಾಲಪರ್ಯಯವನ್ನು ನಡೆಸುತ್ತಾನೆ.
ವಿವೃತಾತ್ತಸ್ಯ ವದನಾನ್ನಿಃಶ್ವಾಸಪವನೇರಿತಾಃ ।
ಪ್ರಜಾನಾಂ ಪಂಕ್ತಯೋ ಹ್ಯುಚ್ಚೈರ್ನಿಷ್ಪತಂತ್ಯುತ್ಪತಂತಿ ಚ ।। ೧-೫೦-೧೩
ಅವನ ತೆರೆದ ಮುಖದಿಂದ ಹೊರಡುವ ನಿಃಶ್ವಾಸದ ಉಸಿರಿನಿಂದ ವಿಭಿನ್ನ ಶ್ರೇಣಿಯ ಪ್ರಜಾಪಂಕ್ತಿಗಳು ಉತ್ಪನ್ನವಾಗಿ ಹೊರಬರುತ್ತಿರುತ್ತವೆ.
ತೇ ಸೃಷ್ಟಾಃ ಪ್ರಾಣಿನೋ ಮೇಧ್ಯಾ ವಿಭಕ್ತಾ ಬ್ರಹ್ಮಣಾ ಸ್ವಯಂ ।
ಚತುರ್ಧಾ ಸ್ವಾಂ ಗತಿಂ ಜಗ್ಮುಃ ಕೃತಾಂತೋಕ್ತೇನ ಕರ್ಮಣಾ ।। ೧-೫೦-೧೪
ಹಾಗೆ ಸೃಷ್ಟಿಸಲ್ಪಟ್ಟ ಪ್ರಾಣಿಗಳನ್ನು ಸ್ವಯಂ ಬ್ರಹ್ಮನು ಬ್ರಾಹ್ಮಣ-ಕ್ಷತ್ರಿಯ-ವೈಶ್ಯ-ಶೂದ್ರ ಎಂದು ನಾಲ್ಕು ಭಾಗಗಳಲ್ಲಿ ವಿಂಗಡಿಸುತ್ತಾನೆ. ನಂತರ ಆ ನಾಲ್ಕು ವರ್ಣದವರು ತಮಗೆ ಸಂಬಂಧಿಸಿದ ವೇದೋಕ್ತ ಕರ್ಮಗಳನ್ನು ನೀಷ್ಕಾಮಭಾವದಿಂದ ಅನುಷ್ಠಾನ ಮಾಡಿ ತಮ್ಮ ಪರಮ ಗತಿ ಮತರಮಾತ್ಮನನ್ನು ಪುನಃ ಸೇರುತ್ತಾರೆ.
ನ ತಂ ವೇದ ಸ್ವಯಂ ಬ್ರಹ್ಮಾ ನಾಪಿ ಬ್ರಹ್ಮರ್ಷಯೋಽವ್ಯಯಾಃ ।
ವಿಷ್ಣೋರ್ರ್ನಿದ್ರಾಮಯಂ ಯೋಗಂ ಪ್ರವಿಷ್ಟಂ ತಮಸಾವೃತಮ್ ।। ೧-೫೦-೧೫
ಯೋಗನಿದ್ರೆಯನ್ನು ಆಶ್ರಯಿಸಿ ಮಲಗಿರುವ ವಿಷ್ಣುವಿನ ಯೋಗಮಾಯೆಯಿಂದ ಸಮಾವೃತಗೊಂಡಿರುವ ಸ್ವರೂಪವನ್ನು ಸ್ವಯಂ ಬ್ರಹ್ಮ ಅಥವಾ ಬ್ರಹ್ಮರ್ಷಿಗಳೂ ತಿಳಿಯಲಾರರು.
ತೇ ತು ಬ್ರಹ್ಮರ್ಷಯಃ ಸರ್ವೇ ಪಿತಾಮಹಪುರೋಗಮಾಃ ।
ನ ವಿದುಸ್ತಂ ಕ್ವಚಿತ್ಸುಪ್ತಂ ಕ್ವಚಿದಾಸೀನಮಾಸನೇ ।। ೧-೫೦-೧೬
ಪಿತಾಮಹನನ್ನೂ ಮೊದಲ್ಗೊಂಡು ಸರ್ವ ಬ್ರಹ್ಮರ್ಷಿಗಳೂ ಯಾವುದೋ ದೇಶ-ಕಾಲದಲ್ಲಿ ಮಲಗಿರುವ ಮತ್ತು ಯಾವುದೋ ದೇಶ-ಕಾಲದಲ್ಲಿ ಆಸನದಲ್ಲಿ ಕುಳಿತಿರುವ ಅವನನ್ನು ತಿಳಿಯಲಾರರು.
ಜಾಗರ್ತಿ ಕೋಽತ್ರ ಕಃ ಶೇತೇ ಕಶ್ಚ ಶಕ್ತಶ್ಚ ನೇಂಗತೇ ।
ಕೋ ಭೋಗವಾನ್ಕೋ ದ್ಯುತಿಮಾನ್ಕೃಷ್ಣಾತ್ಕೃಷ್ಣತರಶ್ಚ ಕಃ ।। ೧-೫೦-೧೭
ಅಲ್ಲಿ ಜಾಗೃತನಾಗಿರುವವನು ಯಾರು? ನಿದ್ರಿಸುತ್ತಿರುವವನು ಯಾರು? ಸರ್ವಶಕ್ತಿಮಾನನಾಗಿದ್ದರೂ ಏನನ್ನೂ ಮಾಡದೇ ಇರುವವನು ಯಾರು? ಭೋಗಿಸುವವನು ಯಾರು? ಪರಮ ಕಾಂತಿಯುಕ್ತನಾಗಿರುವವನು ಯಾರು? ಮತ್ತು ಸೂಕ್ಷ್ಮಕ್ಕಿಂತಲೂ ಸೂಕ್ಷ್ಮನಾಗಿರುವ2 ಇವನು ಯಾರು? ಎನ್ನುವ ಜ್ಞಾನವು ಅವರಿಗಿಲ್ಲ.
ವಿಮೃಶಂತಿ ಸ್ಮ ತಂ ದೇವಾ ದಿವ್ಯಾಭಿರುಪಪತ್ತಿಭಿಃ ।
ನ ಚೈನಂ ಶೇಕುರನ್ವೇಷ್ಟುಂ ಕರ್ಮತೋ ಜನ್ಮತೋಽಪಿ ವಾ ।। ೧-೫೦-೧೮
ದೇವತೆಗಳು ದಿವ್ಯ ಯುಕ್ತಿಯ ಮೂಲಕ ಇವನ ವಿಷಯದ ಕುರಿತು ವಿಚಾರಮಾಡುತ್ತಾರೆ. ಆದರೆ ಇದೂವರೆಗೂ ಇವನ ಜನ್ಮ ಮತ್ತು ಕರ್ಮಗಳ ರಹಸ್ಯಗಳನ್ನು ತಿಳಿಯಲು ಅವರು ಶಕ್ಯರಾಗಿಲ್ಲ.
ಗಾಥಾಭಿಸ್ತತ್ಪ್ರದಿಷ್ಟಾಭಿರ್ಯೇ ತಸ್ಯ ಚರಿತಂ ವಿದುಃ ।
ಪುರಾಣಾಸ್ತಂ ಪುರಾಣೇಷು ಋಷಯಃ ಸಂಪ್ರಚಕ್ಷತೇ ।। ೧-೫೦-೧೯
ಆ ಪರಮಾತ್ಮನು ತನ್ನಿಂದಲೇ ಹೊರಟ ವೇದಮಂತ್ರಗಳ ಮೂಲಕ ಯಾರಿಗೆ ಉಪದೇಶವನ್ನು ನೀಡಿದ್ದನೋ ಅದೇ ಪುರಾತನ ಋಷಿಗಳು ಪುರಾಣಗಳಲ್ಲಿ ಅದೇ ವೇದ ಗಾಥೆಗಳ ಮೂಲಕ ಅವನ ಸ್ವರೂಪವನ್ನು ವಿಶದವಾಗಿ ವಿವೇಚಿಸಿ ಹೇಳಿದ್ದಾರೆ.
ಶ್ರೂಯತೇ ಚಾಸ್ಯ ಚರಿತಂ ದೇವೇಷ್ವಪಿ ಪುರಾತನಮ್ ।
ಮಹಾಪುರಾಣಾತ್ಪ್ರಭೃತಿ ಪರಂ ತಸ್ಯ ನ ವಿದ್ಯತೇ ।। ೧-೫೦-೨೦
ಇವರ ಪುರಾತನ ಚರಿತೆಯನ್ನು ದೇವತೆಗಳೂ ಕೂಡ ಕೇಳುತ್ತಾರೆ. ಈ ಮಹಾಪುರಾಣಗಳ ಆದಿ ಮತ್ತು ಅಂತ್ಯಗಳು ಯಾರಿಗೂ ತಿಳಿದಿಲ್ಲ.
ಯಚ್ಚಾಸ್ಯ ದೇವದೇವಸ್ಯ ಚರಿತಂ ಸ್ವಪ್ರಭಾವಜಮ್ ।
ತೇನೇಮಾಃ ಶ್ರುತಯೋ ವ್ಯಾಪ್ತಾ ವೈದಿಕ್ಯೋ ಲೌಕಿಕಾಶ್ಚ ಯಾಃ ।। ೧-೫೦-೨೧
ಅವನದೇ ಪ್ರಭಾವದಿಂದ ಪ್ರಕಟವಾದ ದೇವದೇವನ ಚರಿತೆಯು ಈ ವೈದಿಕ ಮತ್ತು ಲೌಕಿಕ ಶ್ರುತಿಗಳಲ್ಲಿ ವ್ಯಾಪ್ತವಾಗಿದೆ.
ಭವಕಾಲೇ ಭವತ್ಯೇಷ ಲೋಕಾನಾಂ ಲೋಕಭಾವನಃ ।
ದಾನವಾನಾಮಭಾವಾಯ ಜಾಗರ್ತಿ ಮಧುಸೂದನಃ ।। ೧-೫೦-೨೨
ಲೋಕಗಳ ಸೃಷ್ಟಿಯ ಸಮಯದಲ್ಲಿ ಈ ಲೋಕಭಾವನ ಮಧುಸೂದನನು ಸಗುಣರೂಪದಿಂದ ಪ್ರಕಟನಾಗುತ್ತಾನೆ ಮತ್ತು ದಾನವರ ವಿನಾಶಕ್ಕಾಗಿ ಸದಾ ಜಾಗರೂಕನಾಗಿರುತ್ತಾನೆ.
ಯತ್ರೈನಂ ವೀಕ್ಷಿತುಂ ದೇವಾ ನ ಶೇಕುಃ ಸುಪ್ತಮವ್ಯಯಮ್ ।
ತತಃ ಸ್ವಪಿತಿ ಘರ್ಮಾಂತೇ ಜಾಗರ್ತಿ ಜಲದಕ್ಷಯೇ ।। ೧-೫೦-೨೩
ಮಲಗಿರುವ ಆ ಅವ್ಯಯನನ್ನು ಎಲ್ಲಿ ದೇವತೆಗಳೂ ಕೂಡ ನೋಡಲು ಎಲ್ಲಿ ಶಕ್ಯರಿಲ್ಲವೋ ಅಲ್ಲಿ ಅವನು ಮಳೆಗಾಲದಲ್ಲಿ3 ನಿದ್ರಿಸುತ್ತಾನೆ ಮತ್ತು ಮಳೆಗಾಲವು ಕಳೆದ ನಂತರ ಏಳುತ್ತಾನೆ.
ಸ ಹಿ ವೇದಾಶ್ಚ ಯಜ್ಞಾಶ್ಚ ಯಜ್ಞಾಂಗಾನಿ ಚ ಸರ್ವಶಃ ।
ಯಾ ತು ಯಜ್ಞಗತಿಃ ಪ್ರೋಕ್ತಾ ಸ ಏಷ ಪುರುಷೋತ್ತಮಃ ।। ೧-೫೦-೨೪
ಅವನೇ ವೇದಗಳು, ಯಜ್ಞಗಳು ಮತ್ತು ಸಮಸ್ತ ಯಜ್ಞಾಂಗಗಳು. ಯಜ್ಞದಿಂದ ಪ್ರಾಪ್ತವಾಗುವ ಪರಮ ಗತಿಯು ಯಾವುದೆಂದು ಹೇಳುತ್ತಾರೋ ಅದೂ ಕೂಡ ಆ ಪುರುಷೋತ್ತಮನು.
ತಸ್ಮಿನ್ಸುಪ್ತೇ ನ ವರ್ತಂತೇ ಮಂತ್ರಪೂತಾಃ ಕ್ರತುಕ್ರಿಯಾಃ ।
ಶರತ್ಪ್ರವೃತ್ತಯಜ್ಞೋಽಯಂ ಜಾಗರ್ತಿ ಮಧುಸೂದನಃ ।। ೧-೫೦-೨೫
ಅವನು ಮಲಗಿರುವಾಗ ಮಂತ್ರಪೂತ ಯಜ್ಞಕ್ರಿಯೆಗಳು ನಡೆಯುವುದಿಲ್ಲ. ಶರದೃತುವಿನಲ್ಲಿ ಮಧುಸೂದನನು ಎಚ್ಚೆತ್ತಾಗ ವಾಜಪೇಯ ಮೊದಲಾದ ಯಜ್ಞಗಳ ಅನುಷ್ಠಾನವು ಆರಂಭವಾಗುತ್ತದೆ4.
ತದಿದಂ ವಾರ್ಷಿಕಂ ಚಕ್ರಂ ಕಾರಯತ್ಯಂಬುದೇಶ್ವರಃ ।
ವೈಷ್ಣವಂ ಕರ್ಮ ಕುರ್ವಾನಃ ಸುಪ್ತೇ ವಿಷ್ಣೌ ಪುರಂದರಃ ।। ೧-೫೦-೨೬
ವಿಷ್ಣುವು ನಿದ್ರಿಸುತ್ತಿರುವಾಗ ಅಂಬುದೇಶ್ವರ ಪುರಂದರ ಇಂದ್ರನು ಪ್ರಜಾಪಾಲನರೂಪ ವೈಷ್ಣವ ಕರ್ಮವನ್ನು ವಹಿಸಿಕೊಳ್ಳುತ್ತಾನೆ ಮತ್ತು ಅವನೇ ಪ್ರಜೆಗಳಿಂದ ವರ್ಷಋತುವಿನಲ್ಲಿ ನಡೆಯುವ ಜಲಸಂಬಂಧೀ ಕರ್ಮಗಳ5 ಅನುಷ್ಠಾನವನ್ನು ಮಾಡಿಸುತ್ತಾನೆ.
ಯಾ ಹ್ಯೇಷಾ ಗಹ್ವರಾ ಮಾಯಾ ನಿದ್ರೇತಿ ಜಗತಿ ಸ್ಥಿತಾ ।
ಸಾಕಸ್ಮಾದ್ದ್ವೇಷಿಣೀ ಘೋರಾ ಕಾಲರಾತ್ರಿರ್ಮಹೀಕ್ಷಿತಾಮ್ ।। ೧-೫೦-೨೭
ಈ ಗಹನ ತಮೋಮಯೀ ಮಾಯೆಯೇ ಸಂಸಾರದಲ್ಲಿ ನಿದ್ರಾರೂಪದಲ್ಲಿ ಸ್ಥಿತವಾಗಿದೆ. ಅಕಾರಣವಾಗಿಯೇ ಅದು ರಣಭೂಮಿಯಲ್ಲಿ ಮಹೀಕ್ಷಿತರ ದ್ವೇಷರೂಪಿಣೀ ಮತ್ತು ಘೋರ ಕಾಲರೂಪಿಣಿಯು.
ತಸ್ಯಾಸ್ತನುಸ್ತಮೋದ್ವಾರಾ ನಿಶಾ ದಿವಸನಾಶಿನೀ ।
ಜೀವಿತಾರ್ಧಹರಾ ಘೋರಾ ಸರ್ವಪ್ರಾಣಭೃತಾಂ ಭುವಿ ।। ೧-೫೦-೨೮
ಆ ತಾಮಸೀ ಮಾಯೆಯ ಶರೀರವೇ ದಿವಸನಾಶಿನೀ ರಾತ್ರಿ. ಆ ಘೋರ ರೂಪಿಣಿಯು ಭುವಿಯಲ್ಲಿ ಸರ್ವ ಪ್ರಾಣಿಗಳ ಜೀವನದ ಅರ್ಧಭಾಗವನ್ನು ಅಪಹರಿಸುತ್ತಾಳೆ.
ನೈತಯಾ ಕಶ್ಚಿದಾವಿಷ್ಟೋ ಜೃಂಭಮಾಣೋ ಮುಹುರ್ಮುಹುಃ ।
ಶಕ್ತಃ ಪ್ರಸಹಿತುಂ ವೇಗಂ ಮಜ್ಜನ್ನಿವ ಮಹಾರ್ಣವೇ ।। ೧-೫೦-೨೯
ಇವಳಿಂದ ಆವಿಷ್ಟನಾದ ಯಾರೂ ಪುನಃ ಪುನಃ ಆಕಳಿಸುತ್ತಿರುತ್ತಾನೆ ಮತ್ತು ಮಹರ್ಣವದಲ್ಲಿ ಮುಳುಗುತ್ತಿರುವವನಂತೆ ಇವಳ ವೇಗವನ್ನು ಸಹಿಸಿಕೊಳ್ಳಲು ಶಕ್ತನಾಗುವುದಿಲ್ಲ.
ಅನ್ನಜಾ ಭುವಿ ಮರ್ತ್ಯಾನಾಂ ಶ್ರಮಜಾ ವಾ ಕಥಂಚನ ಸೈಷಾ ಭವತಿ ಲೋಕಸ್ಯ ನಿದ್ರಾ ಸರ್ವಸ್ಯ ಲೌಕಿಕೀ ।। ೧-೫೦-೩೦
ಭುವಿಯಲ್ಲಿ ಮರ್ತ್ಯರಿಗೆ ಈ ನಿದ್ರೆಯು ಭೋಜನ ಅಥವಾ ಯಾವುದೇ ಶ್ರಮದ ಕಾರಣದಿಂದ ಪ್ರಾಪ್ತವಾಗುತ್ತದೆ. ಹೀಗೆ ಈ ಲೌಕಿಕೀ ನಿದ್ರೆಯು ಲೋಕದಲ್ಲಿ ಎಲ್ಲರಿಗೂ ಬರುತ್ತದೆ.
ಸ್ವಪ್ನಾಂತೇ ಕ್ಷೀಯತೇ ಹ್ಯೇಷಾ ಪ್ರಾಯಶೋ ಭುವಿ ದೇಹಿನಮ್ ।।
ಮೃತ್ಯುಕಾಲೇ ಚ ಭೂತಾನಾಂ ಪ್ರಾಣಾನ್ನಾಶಯತೇ ಭೃಶಮ್ ।। ೧-೫೦-೩೧
ಭುವಿಯಲ್ಲಿ ದೇಹಿಗಳಲ್ಲಿ ಪ್ರಾಯಶಃ ಸ್ವಪ್ನದ ಅಂತ್ಯದಲ್ಲಿ ನಿದ್ರೆಯು ಹೋಗಿಬಿಡುತ್ತದೆ. ಆದರೆ ಮೃತ್ಯುಕಾಲದಲ್ಲಿ ಇದು ಪ್ರಾಣಿಗಳ ಪ್ರಾಣಗಳನ್ನು ನಾಶಮಾಡಿಬಿಡುತ್ತದೆ.
ದೇವೇಷ್ವಪಿ ದಧಾರೈನಾಂ ನಾನ್ಯೋ ನಾರಾಯಣಾದೃತೇ ।
ಸಖೀ ಸರ್ವಹರಸ್ಯೈಷಾ ಮಾಯಾ ವಿಷ್ಣುಶರೀರಜಾ ।। ೧-೫೦-೩೨
ದೇವತೆಗಳಲ್ಲಿಯೂ ಕೂಡ ನಾರಾಯಣನನ್ನು ಬಿಟ್ಟು ಬೇರೆ ಯಾರೂ ಇವಳನ್ನು ಧರಿಸಲು ಶಕ್ಯರಿಲ್ಲ. ವಿಷ್ಣುವಿನ ಶರೀರದಿಂದ ಹುಟ್ಟಿದ ಈ ಮಾಯೆಯು ಸರ್ವಸಂಹಾರಕಾರೀ ಕಾಲನ ಸಖಿಯು.
ಸೈಷಾ ನಾರಾಯಣಮುಖೇ ದೃಷ್ಟಾ ಕಮಲಲೋಚನಾ ।
ಲೋಕಾನಲ್ಪೇನ ಕಾಲೇನ ಗ್ರಸತೇ ಲೋಕಮೋಹಿನೀ ।। ೧-೫೦-೩೩
ಇವಳೇ ನಾರಾಯಣನ ಮುಖದಲ್ಲಿ ಅವನ ನೇತ್ರಕಮಲಗಳಲ್ಲಿ ಕಾಣುತ್ತಾಳೆ. ಈ ಕಮಲಲೋಚನಾ ಲೋಕಮೋಹಿನಿಯು ಅಲ್ಪಕಾಲದಲ್ಲಿಯೇ ಲೋಕಗಳನ್ನು ನುಂಗಿಬಿಡುತ್ತದೆ.
ಏವಮೇಷಾ ಹಿತಾರ್ಥಾಯ ಲೋಕಾನಾಂ ಕೃಷ್ಣವರ್ತ್ಮನಾ ।
ಧ್ರಿಯತೇ ಸೇವನೀಯಾ ಹಿ ಪತ್ಯೇವ ಚ ಪತಿವ್ರತಾ ।। ೧-೫೦-೩೪
ಯಾರ ಮಾರ್ಗವು ಸೂಕ್ಷ್ಮವೋ ಆ ಶ್ರೀಹರಿಯು ಸಮಸ್ತ ಲೋಕಗಳ ಹಿತಕ್ಕಾಗಿ ಪತಿಯು ಪತಿವ್ರತೆಯ ಸೇವೆಗೈಯುವಂತೆ ನಿದ್ರೆಯನ್ನು ಧಾರಣೆಮಾಡಿದನು.
ಸ ತಯಾ ನಿದ್ರಯಾ ಚ್ಛನ್ನಸ್ತಸ್ಮಿನ್ನಾರಾಯಣಾಶ್ರಮೇ ।
ಸ್ವಪಿತಿ ಸ್ಮ ತದಾ ವಿಷ್ಣುರ್ಮೋಹಯಂಜಗದವ್ಯಯಮ್ ।। ೧-೫೦-೩೫
ಈ ರೀತಿ ಅವಿನಾಶೀ ವಿಷ್ಣುವು ಆ ಯೋಗನಿದ್ರೆಯಿಂದ ಆಚ್ಛನ್ನನಾಗಿ ಸಂಪೂರ್ಣ ಜಗತ್ತನ್ನೂ ಮೋಹದಲ್ಲಿ ಬೀಳಿಸಿ ನಾರಾಯಣಾಶ್ರಮದಲ್ಲಿ ನಿದ್ರಿಸತೊಡಗಿದನು.
ತಸ್ಯ ವರ್ಷಸಹಸ್ರಾಣಿ ಶಯನಸ್ಯ ಮಹಾತ್ಮನಃ ।
ಜಗ್ಮುಃ ಕೃತಯುಗಂ ಚೈವ ತ್ರೇತಾ ಚೈವ ಯುಗೋತ್ತಮಮ್ ।। ೧-೫೦-೩೬
ಅಲ್ಲಿ ಆ ಮಹಾತ್ಮನು ನಿದ್ರಿಸುತ್ತಿರಲು ಸಹಸ್ರ ವರ್ಷಗಳು ಕಳೆದುಹೋದವು. ಸತ್ಯಯುಗ ಮತ್ತು ಉತ್ತಮ ತ್ರೇತಾಯುಗವೂ ಸಮಾಪ್ತವಾಯಿತು.
ಸ ತು ದ್ವಾಪರಪರ್ಯಂತೇ ಜ್ಞಾತ್ವಾ ಲೋಕಾನ್ಸುದುಃಖಿತಾನ್ ।
ಪ್ರಾಬುಧ್ಯತ ಮಹಾತೇಜಾಃ ಸ್ತೂಯಮಾನೋ ಮಹರ್ಷಿಭಿಃ ।। ೧-೫೦-೩೭
ದ್ವಾಪರದ ಅಂತ್ಯದಲ್ಲಿ ಸಮಸ್ತ ಲೋಕಗಳು ಅತ್ಯಂತ ದುಃಖದಿಂದ ಪೀಡಿತರಾಗಿರುವುದನ್ನು ತಿಳಿದ ಮಹರ್ಷಿಗಳಿಂದ ತನ್ನ ಸ್ತುತಿಯನ್ನು ಕೇಳಿದ ಮಹಾತೇಜಸ್ವೀ ಶ್ರೀ ಹರಿಯು ಎಚ್ಚೆದ್ದನು.
ಋಷಯಃ ಊಚುಃ ।
ಜಹೀಹಿ ನಿದ್ರಾಂ ಸಹಜಾಂ ಭುಕ್ತಪೂರ್ವಾಮಿವ ಸ್ರಜಮ್ ।
ಇಮೇ ತೇ ಬ್ರಹ್ಮಣಾ ಸಾರ್ಧಂ ದೇವಾ ದರ್ಶನಕಾಂಕ್ಷಿಣಃ ।। ೧-೫೦-೩೮
ಋಷಿಗಳು ಹೇಳಿದರು: “ಬಳಸಿ ಹಳಸಾದ ಹೂವನ್ನು ತ್ಯಜಿಸಿಬಿಡುವಂತೆ ನೀನು ನಿನ್ನ ಈ ಸಹಜ ನಿದ್ರೆಯನ್ನು ತ್ಯಜಿಸು. ಬ್ರಹ್ಮನೊಂದಿಗೆ ಈ ದೇವತೆಗಳು ನಿನ್ನ ದರ್ಶನಾಕಾಂಕ್ಷಿಗಳಾಗಿದ್ದಾರೆ.
ಇಮೇ ತ್ವಾಂ ಬ್ರಹ್ಮವಿದ್ವಾಂಸೋ ಬ್ರಹ್ಮಸಂಸ್ತವವಾದಿನಃ ।
ವರ್ಧಯಂತಿ ಹೃಷೀಕೇಶ ಋಷಯಃ ಸಂಶಿತವ್ರತಾಃ ।। ೧-೫೦-೩೯
ಹೃಷೀಕೇಶ! ಈ ಸಂಶಿತವ್ರತ ಬ್ರಹ್ಮವಿದ್ವಾಂಸ ಋಷಿಗಳು ವೇದಸ್ತುತಿಗಳನ್ನು ಪಠಿಸುತ್ತಾ ನಿನ್ನನ್ನು ಸ್ತುತಿಸಿ ಅಭಿನಂದಿಸುತ್ತಿದ್ದಾರೆ.
ಏತೇಷಾಮಾತ್ಮಭೂತಾನಾಂ ಭೂತಾನಾಮಾತ್ಮಭಾವನಃ ।
ಶೃಣು ವಿಷ್ಣೋ ಶುಭಾ ವಾಚೋ ಭೂವ್ಯೋಮಾಗ್ನ್ಯನಿಲಾಂಭಸಾಮ್ ।। ೧-೫೦-೪೦
ವಿಷ್ಣೋ! ನಿನ್ನದೇ ಸ್ವರೂಪಭೂತರಾದ ಈ ಪೃಥ್ವೀ, ಜಲ, ಅಗ್ನಿ, ವಾಯು ಮತ್ತು ಆಕಾಶರೂಪ ಮಹಾಭೂತಗಳ ಅಧಿಷ್ಠಾತ ದೇವತೆಗಳ ಶುಭವಚನವನ್ನು ನೀನು ಕೇಳಬೇಕು.
ಇಮೇ ತ್ವಾಂ ಸಪ್ತ ಮುನಯಃ ಸಹಿತಾ ಮುನಿಮಂಡಲೈಃ ।
ಸ್ತುವಂತಿ ದೇವಾ ದಿವ್ಯಾಭಿರ್ಗೇಯಾಭಿರ್ಗೀರ್ಭಿರಂಜಸಾ । ೧-೫೦-೪೧
ದೇವ! ಮುನಿಮಂಡಲ ಸಹಿತ ಸಪ್ತರ್ಷಿಗಳು ಹಾಡಲು ಯೋಗ್ಯವಾದ ದಿವ್ಯ ವಾಣಿಯಿಂದ ಸ್ವಭಾವತಃ ನಿನ್ನ ಸ್ತುತಿ ಮಾಡುತ್ತಿದ್ದಾರೆ.
ಉತ್ತಿಷ್ಠ ಶತಪತ್ರಾಕ್ಷ ಪದ್ಮನಾಭ ಮಹಾದ್ಯುತೇ ।
ಕಾರಣಂ ಕಿಂಚಿದುತ್ಪನ್ನಂ ದೇವಾನಾಂ ಕಾರ್ಯಗೌರವಾತ್ ।। ೧-೫೦-೪೨
ಶತಪತ್ರಾಕ್ಷ! ಎದ್ದೇಳು! ಪದ್ಮನಾಭ! ಮಹಾದ್ಯುತೇ! ದೇವತೆಗಳ ಗುರುತರ ಕಾರ್ಯದಿಂಡಾಗಿ ನೀನು ಏಳಬೇಕಾದ ಯಾವುದೋ ಕಾರಣವು ಉತ್ಪನ್ನವಾಗಿಬಿಟ್ಟಿದೆ!””
ವೈಶಂಪಾಯನ ಉವಾಚ ।
ಸ ಸಂಕ್ಷಿಪ್ಯ ಜಲಂ ಸರ್ವಂ ತಿಮಿರೌಘಂ ವಿದಾರಯನ್ ।
ಉದತಿಷ್ಠದ್ಧೃಷೀಕೇಶಃ ಶ್ರಿಯಾ ಪರಮಯಾ ಜ್ವಲನ್ ।। ೧-೫೦-೪೩
ವೈಶಂಪಾಯನನು ಹೇಳಿದನು: “ಆಗ ಹೃಷೀಕೇಶನು ಸರ್ವ ಜಲವನ್ನು ಸಂಕ್ಷಿಪ್ತಗೊಳಿಸಿ ಅಂಧಕಾರದ ಆವರಣವನ್ನು ಸೀಳಿ ತನ್ನ ಉತ್ಕೃಷ್ಟ ಶೋಭೆಯಿಂದ ಪ್ರಕಾಶಿತನಾಗಿ ಎದ್ದನು.
ಸ ದದರ್ಶ ಸುರಾನ್ಸರ್ವಾನ್ಸಮೇತಾನ್ಸಪಿತಾಮಹಾನ್ ।
ವಿವಕ್ಷತಃ ಪ್ರಕ್ಷುಭಿತಾಂಜಗದರ್ಥೇ ಸಮಾಗತಾನ್ ।। ೧-೫೦-೪೪
ಅವನು ಪಿತಾಮಹನೊಂದಿಗೆ ಸರ್ವ ಸುರರನ್ನೂ ನೋಡಿದನು. ಅವರು ಕ್ಷೋಭೆಗೊಳಗಾಗಿದ್ದುದನ್ನೂ ಮತ್ತು ಜಗತ್ತಿನ ಒಳಿತಾಗಿಯೇ ಅಲ್ಲಿಗೆ ಒಟ್ಟಾಗಿ ಬಂದಿರುವರೆನ್ನುವುದನ್ನೂ ಅವನು ತಿಳಿದುಕೊಂಡನು.
ತಾನುವಾಚ ಹರಿರ್ದೇವೋ ನಿದ್ರಾವಿಶ್ರಾಂತಲೋಚನಃ ।
ತತ್ತ್ವದೃಷ್ಟಾರ್ಥಯಾ ವಾಚಾ ಧರ್ಮಹೇತ್ವರ್ಥಯುಕ್ತಯಾ ।। ೧-೫೦-೪೫
ನಿದ್ರೆಯ ಮೂಲಕ ವಿಶ್ರಾಂತಿಯನ್ನು ಹೊಂದಿದ್ದ ಕಣ್ಣುಗಳ ದೇವ ಹರಿಯು ಧರ್ಮಸಮ್ಮತ, ಯುಕ್ತಿಸಂಗತ ಮತ್ತು ತಾತ್ತ್ವಿಕ ಅರ್ಥಯುಕ್ತವಾದ ವಾಣಿಯಿಂದ ದೇವತೆಗಳಿಗೆ ಇಂತೆಂದನು.
ಶ್ರೀಭಗವಾನುವಾಚ।
ಕೃತೋ ವೋ ವಿಗ್ರಹೋ ದೇವಾಃ ಕುತೋ ವೋ ಭಯಮಾಗತಮ್ ।
ಕಸ್ಯ ವಾ ಕೇನ ವಾ ಕಾರ್ಯಂ ಕಿಂ ವಾ ಮಯಿ ನ ವರ್ತತೇ ।। ೧-೫೦-೪೬
ಶ್ರೀ ಭಗವಂತನು ಹೇಳಿದನು: “ದೇವತೆಗಳೇ! ಯಾರೊಂದಿಗೆ ನಿಮ್ಮ ಯುದ್ಧವು ಉಂಟಾಗಿದೆ? ಎಲ್ಲಿಂದ ನಿಮಗೆ ಭಯಬಂದೊದಗಿದೆ? ಅಥವಾ ಯಾವ ದೇವತೆಗೆ ಯಾವ ವಸ್ತುವಿನ ಅವಶ್ಯಕತೆಯುಂಟಾಗಿದೆ? ನನ್ನಲ್ಲಿ ಇಲ್ಲದೇ ಇರುವ ಯಾವ ವಸ್ತುವಿದೆ ಹೇಳಿ.
ಕಿಂ ಖಲ್ವಕುಶಲಂ ಲೋಕೇ ವರ್ತತೇ ದಾನವೋತ್ಥಿತಮ್ ।
ನೃಣಾಮಾಯಾಸಜನನಂ ಶೀಘ್ರಮಿಚ್ಛಾಮಿ ವೇದಿತುಂ ।। ೧-೫೦-೪೭
ಲೋಕಕ್ಕೆ ಅಮಂಗಲಕರವಾಗಿರುವ ಮತ್ತು ಮನುಷ್ಯರಿಗೆ ಕಷ್ಟವನ್ನು ತರುವಂಥಹ ಯಾವ ಕೆಲಸವನ್ನು ದಾನವರು ಮಾಡಿದ್ದಾರೆ? ಶೀಘ್ರವೇ ಅದನ್ನು ತಿಳಿಯಲು ಇಚ್ಛಿಸುತ್ತೇನೆ.
ಏಷ ಬ್ರಹ್ಮವಿದಾಂ ಮಧ್ಯೇ ವಿಹಾಯ ಶಯನೋತ್ತಮಂ ।
ಶಿವಾಯ ಭವತಾಮರ್ಥೇ ಸ್ಥಿತಃ ಕಿಂ ಕರವಾಣೀ ವಃ ।। ೧-೫೦-೪೮
ಈ ಉತ್ತಮ ಶಯನವನ್ನು ಬಿಟ್ಟು ಬ್ರಹ್ಮವಿದರಾದ ನಿಮ್ಮ ಮಧ್ಯೆ ಇಗೋ ಬಂದಿದ್ದೇನೆ. ನಾನು ನಿಮಗೆ ಕಲ್ಯಾಣಕರವಾದ ಏನನ್ನು ಮಾಡಬೇಕು?”
ಸಮಾಪ್ತಿ
ಇತಿ ಶ್ರೀಮಹಾಭಾರತೇ ಖಿಲೇಷು ಹರಿವಂಶೇ ಹರಿವಂಶಪರ್ವಣಿ ವಿಷ್ಣೋರ್ಯೋಗಶಯನೋತ್ಥಾನೇ ಪಂಚಾಶತ್ತಮೋಽಧ್ಯಾಯಃ
-
ಆಚಾರ್ಯ ನೀಲಕಂಠರು ಇಲ್ಲಿ ಶಯನದ ಅರ್ಥವನ್ನು ಸಮಾಧಿ ಎಂದು ಮಾಡಿದ್ದಾರೆ. ಅವರ ಪ್ರಕಾರ ಇಲ್ಲಿ ಸಮುದ್ರವು ನಿರ್ವಿಕಲ್ಪ ಸಮಾಧಿಯನ್ನೂ ಮೇಘಗಳು ಸವಿಕಲ್ಪ ಸಮಾಧಿಯನ್ನೂ ಸೂಚಿಸುತ್ತವೆ ಮತ್ತು ಶೀತಲತೆಯು ಸಮಾಧಿಯ ವಿಶೇಷ ಲಕ್ಷಣವಾದ ತಾಪವಿಲ್ಲದೇ ಇರುವುದು. ಇದೇ ರೀತಿ ಅವರು ಏಕಾರ್ಣವೋಕ್ತ ವ್ರತವನ್ನು ನಿರ್ವಿಕಲ್ಪ ಸಮಾಧಿಗೆ ಬೇಕಾದ ಸಂಯಮ ಎಂದು ಅರ್ಥೈಸಿದ್ದಾರೆ (ಗೀತಾ ಪ್ರೆಸ್). ↩︎
-
ಇಲ್ಲಿ ಕೃಷ್ಣ ಎನ್ನುವುದರ ಅರ್ಥ ಕೃಶ ಅಥವಾ ಸೂಕ್ಷ್ಮ ಎಂದು (ಗೀತಾ ಪ್ರೆಸ್). ↩︎
-
ಆಷಾಢ ಶುಕ್ಲ ಏಕಾದಶಿಯಿಂದ ಕಾರ್ತೀಕ ಶುದ್ಧ ಏಕಾದಶಿಯವರೆಗೆ (ಗೀತಾ ಪ್ರೆಸ್). ↩︎
-
ಶ್ರುತಿಗಳ ಪ್ರಕಾರ “ಶರದಿ ವಾಜಪೇಯೇನ ಯಜೇತ್। ” (ನೀಲಕಂಠ). ↩︎
-
ಉಪಾಕರ್ಮ, ಶ್ರಾದ್ಧ ತರ್ಪಣ ಮೊದಲಾದ ಕರ್ಮಗಳು (ಗೀತಾ ಪ್ರೆಸ್). ↩︎