048: ಕಾಲನೇಮಿವಧಃ

ಪ್ರವೇಶ

।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।

ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ

ಶ್ರೀ ಮಹಾಭಾರತ

ಖಿಲಭಾಗೇ ಹರಿವಂಶಃ

ಹರಿವಂಶ ಪರ್ವ

ಅಧ್ಯಾಯ 48

ಸಾರ

ವೈಶಂಪಾಯನ ಉವಾಚ।
ಪಂಚ ತಮ್ನಾಭ್ಯವರ್ತಂತ ವಿಪರೀತೇನ ಕರ್ಮಣಾ ।
ವೇದೋ ಧರ್ಮಃ ಕ್ಷಮಾ ಸತ್ಯಂ ಶ್ರೀಶ್ಚ ನಾರಾಯಣಾಶ್ರಯಾ ।। ೧-೪೮-೧

ವೈಶಂಪಾಯನನು ಹೇಳಿದನು: “ಕಾಲನೇಮಿಯ ವಿಪರೀತ ಕರ್ಮದಿಂದಾಗಿ ವೇದ, ಧರ್ಮ, ಕ್ಷಮಾ, ಸತ್ಯ ಮತ್ತು ನಾರಾಯಣನ ಆಶ್ರಮದಲ್ಲಿರುವ ಶ್ರೀ – ಈ ಐವರು ಅವನ ಬಳಿ ಬರಲೇ ಇಲ್ಲ.

ಸ ತೇಷಾಮನುಪಸ್ಥಾನಾತ್ಸಕ್ರೋಧೋ ದಾನವೇಶ್ವವರಃ ।
ವೈಷ್ಣವಂ ಪದಮನ್ವಿಚ್ಛನ್ಯಯೌ ನಾರಾಯಣಾಂತಿಕಮ್ ।। ೧-೪೮-೨

ಅವರ ಉಪಸ್ಥಿತಿಯಾಗದೇ ಇದ್ದುದರಿಂದ ದಾನವೇಶ್ವರನು ಅತ್ಯಂತ ಕ್ರೋಧಿತನಾದನು. ವೈಷ್ಣವ ಪದವನ್ನು ಬಯಸಿ ಅವನು ನಾರಾಯಣನ ಬಳಿ ಬಂದನು.

ಸ ದದರ್ಶ ಸುಪರ್ಣಸ್ಥಂ ಶಂಖಚಕ್ರಗದಾಧರಮ್ ।
ದಾನವಾನಾಂ ವಿನಾಶಾಯ ಭ್ರಾಮಯಂತಂ ಗದಾಂ ಶುಭಾಮ್ ।। ೧-೪೮-೩

ಅವನು ಸುಪರ್ಣ ಗರುಡನ ಮೇಲೇರಿ ದಾನವರ ವಿನಾಶಕ್ಕಾಗಿ ಶುಭ ಗದೆಯನ್ನು ತಿರುಗಿಸುತ್ತಿದ್ದ ಶಂಖಚಕ್ರಗದಾಧರನನ್ನು ಕಂಡನು.

ಸಜಲಾಂಭೋದಸದೃಶಂ ವಿದ್ಯುತ್ಸದೃಶವಾಸಸಮ್ ।
ಸ್ವಾರೂಢಂ ಸ್ವರ್ಣಪತ್ರಾಢ್ಯಂ ಶಿಖಿನಂ ಕಾಶ್ಯಪಂ ಖಗಮ್ ।। ೧-೪೮-೪

ನೀರುತುಂಬಿದ ಮೇಘಸದೃಶನಾಗಿದ್ದ ಅವನು ವಿದ್ಯುತ್ತಿನ ಸದೃಶವಾದ ವಸ್ತ್ರಗಳನ್ನು ಧರಿಸಿದ್ದನು. ಅವನು ಕಾಶ್ಯಪ ಖಗ ಸ್ವರ್ಣರೂಪದ ರೆಕ್ಕೆಗಳ ಶಿಖಿಯ ಮೇಲೆ ಆರೂಢನಾಗಿದ್ದನು.

ದೃಷ್ಟ್ವಾ ದೈತ್ಯವಿನಾಶಾಯ ರಣೇ ಸ್ವಸ್ಥಮವಸ್ಥಿತಮ್ ।
ದಾನವೋ ವಿಷ್ಣುಮಕ್ಷೋಭ್ಯಂ ಬಭಾಷೇ ಕ್ಷುಬ್ಧಮಾನಸಃ ।। ೧-೪೮-೫

ದೈತ್ಯರ ವಿನಾಶಕ್ಕಾಗಿ ರಣದಲ್ಲಿ ಸ್ವಯಂ ಸ್ಥಿತನಾಗಿದ್ದ ಅಕ್ಷೋಭ್ಯನಾದ ವಿಷ್ಣುವನ್ನು ನೋಡಿ ಕ್ಷುಬ್ಧಮಾನಸನಾದ ದಾನವನು ಹೇಳಿದನು:

ಅಯಂ ಸ ರಿಪುರಸ್ಮಾಕಂ ಪೂರ್ವೇಷಾಂ ದಾನವರ್ಷಿಣಾಮ್ ।
ಅರ್ಣವಾವಾಸಿನಶ್ಚೈವ ಮಧೋರ್ವೈ ಕೈಟಭಸ್ಯ ಚ ।। ೧-೪೮-೬

“ಇವನೇ ನಮ್ಮ ಪೂರ್ವವರ್ತೀ ದಾನವರ್ಷಿಗಳ ಮತ್ತು ಏಕಾರ್ಣವವಾಸಿಗಳಾಗಿದ್ದ ಮಧು-ಕೈಟಭರ ಸುಪ್ರಸಿದ್ಧ ಶತ್ರುವು.

ಅಯಂ ಸ ವಿಗ್ರಹೋಽಸ್ಮಾಕಮಶಾಮ್ಯಃ ಕಿಲ ಕಥ್ಯತೇ ।
ಯೇನ ನಃ ಸಂಯುಗೇಷ್ವಾದ್ಯಾ ಬಹವೋ ದಾನವಾ ಹತಾಃ ।। ೧-೪೮-೭

ಇವನೇ ಮೂರ್ತಿಮಾನ್ ಶಾಂತಗೊಳಿಸಲಿಕ್ಕಾಗದ ನಮ್ಮ ಯುದ್ಧವೆಂದು ಹೇಳುತ್ತಾರಲ್ಲವೇ? ಇವನಿಂದಲೇ ಅನೇಕ ಸಂಗ್ರಾಮಗಳಲ್ಲಿ ನಮ್ಮ ಅನೇಕ ಪೂರ್ವಜ ದಾನವರು ಹತರಾದರು.

ಅಯಂ ಸ ನಿರ್ಘೃಣೋ ಯುದ್ಧೇಽಸ್ತ್ರೀ ಬಾಲನಿರಪತ್ರಪಃ ।
ಯೇನ ದಾನವನಾರೀಣಾಂ ಸೀಮಂತೋದ್ಧರಣಂ ಕೃತಮ್ ।। ೧-೪೮-೮

ಇವನೇ ಯುದ್ಧದಲ್ಲಿ ಅಸ್ತ್ರಧಾರಿಯಾಗಿ ಬಾಲಕರಂತೆ ನಿರ್ಲಜ್ಜನಾಗುವ ಆ ನಿರ್ದಯಿಯು! ಇವನೇ ದಾನವನಾರಿಯರ ಸೀಮಂತವನ್ನು ತೆಗೆದುಹಾಕಿದವನು!

ಅಯಂ ಸ ವಿಷ್ಣುರ್ದೇವಾನಾಂ ವೈಕುಂಠಶ್ಚ ದಿವೌಕಸಾಮ್ ।
ಅನಂತೋ ಭೋಗಿನಾಮಪ್ಸು ಸ್ವಯಂಭೂಶ್ಚ ಸ್ವಯಂಭುವಃ ।। ೧-೪೮-೯

ಇವನೇ ದೇವತೆಗಳ ವಿಷ್ಣು ಮತ್ತು ದಿವೌಕಸರ ವೈಕುಂಠ. ಇವನು ನೀರಿನಲ್ಲಿರುವ ನಾಗ ಅನಂತ ಮತ್ತು ಸ್ವಯಂಭು ಬ್ರಹ್ಮನಿಗೂ ಬ್ರಹ್ಮನು.

ಅಯಂ ಸ ನಾಥೋ ದೇವಾನಾಮಸ್ಮಾಕಂ ವಿಪ್ರಿಯೇ ಸ್ಥಿತಃ ।
ಅಸ್ಯ ಕ್ರೋಧೇನ ಮಹತಾ ಹಿರಣ್ಯಕಶಿಪುರ್ಹತಃ ।। ೧-೪೮-೧೦

ಇವನೇ ದೇವತೆಗಳ ನಾಥ ನಮಗೆ ವಿಪ್ರಿಯನಾಗಿರುವವನು. ಇವನ ಮಹಾಕ್ರೋಧದಿಂದಲೇ ಹಿರಣ್ಯಕಶಿಪುವು ಹತನಾದನು.

ಅಸ್ಯಚ್ಛಾಯಾಂ ಸಮಾಸಾದ್ಯ ದೇವಾ ಮಖಮುಖೇ ಸ್ಥಿತಾಃ ।
ಆಜ್ಯಂ ಮಹರ್ಷಿಭಿರ್ದತ್ತಮಶ್ನುವಂತಿ ತ್ರಿಧಾ ಹುತಮ್ ।। ೧-೪೮-೧೧

ಇವನದೇ ಛಾಯೆಯಲ್ಲಿದ್ದುಕೊಂಡು ದೇವತೆಗಳು ಯಜ್ಞದ ಮುಖಭಾಗದಲ್ಲಿ ಸ್ಥಿತರಾಗಿ ಮೂರು ಪ್ರಕಾರದ ಹವನಗಳಲ್ಲಿ1 ಮಹರ್ಷಿಗಳು ನೀಡಿದ ಹವಿಸ್ಸನ್ನು ಉಪಭೋಗಿಸುತ್ತಾರೆ.

ಅಯಂ ಸ ನಿಧನೇ ಹೇತುಃ ಸರ್ವೇಷಾಂ ದೇವವಿದ್ವಿಷಾಮ್ ।
ಯಸ್ಯ ತೇಜಾಃಪ್ರವಿಷ್ಟಾನಿ ಕುಲಾನ್ಯಸ್ಮಾಕಮಾಹವೇ ।। ೧-೪೮-೧೨

ಎಲ್ಲ ದೇವದ್ವಿಷರ ನಿಧನಕ್ಕೆ ಇವನೇ ಕಾರಣನು. ಇವನ ತೇಜಸ್ಸಿನಿಂದ ಯುದ್ಧದಲ್ಲಿ ನಮ್ಮ ಎಷ್ಟೋ ಕುಲಗಳು ಭಸ್ಮವಾಗಿಹೋಗಿವೆ.

ಅಯಂ ಸ ಕಿಲ ಯುದ್ಧೇಷು ಸುರಾರ್ಥೇ ತ್ಯಕ್ತಜೀವಿತಃ ।
ಸವಿತುಸ್ತೇಜಸಾ ತುಲ್ಯಂ ಚಕ್ರಂ ಕ್ಷಿಪತಿ ಶತ್ರುಷು ।। ೧-೪೮-೧೩

ಯುದ್ಧಗಳಲ್ಲಿ ಸುರರಿಗಾಗಿ ತನ್ನ ಜೀವನವನ್ನೇ ತ್ಯಜಿಸಲು ಸಿದ್ಧನಾಗಿ ಶತ್ರುಗಳ ಮೇಲೆ ಸೂರ್ಯನ ತೇಜಸ್ಸಿಗೆ ಸಮನಾದ ಚಕ್ರವನ್ನು ಎಸೆಯುವವನು ಇವನೇ ಅಲ್ಲವೇ?

ಅಯಂ ಸ ಕಾಲೋ ದೈತ್ಯಾನಾಂ ಕಾಲಭೂತೇ ಮಯಿ ಸ್ಥಿತೇ ।
ಅತಿಕ್ರಾಂತಸ್ಯ ಕಾಲಸ್ಯ ಫಲಂ ಪ್ರಾಪ್ಸ್ಯತಿ ದುರ್ಮತಿಃ ।। ೧-೪೮-೧೪

ಇವನೇ ದೈತ್ಯರ ಕಾಲನು. ಆದರೆ ಇಂದು ಇವನಿಗೂ ಕಾಲಭೂತನಾಗಿ ನಾನಿದ್ದೇನೆ. ನನ್ನಿಂದಲೇ ಈ ದುರ್ಬುದ್ಧಿಯು ಪೂರ್ವಕಾಲದಲ್ಲಿ ತಾನುಮಾಡಿದ ಅತಿಕ್ರಮಣಗಳ ಫಲವನ್ನು ಪಡೆಯುತ್ತಾನೆ.

ದಿಷ್ಟ್ಯೇದಾನೀಂ ಸಮಕ್ಷಂ ಮೇ ವಿಷ್ಣುರೇಷ ಸಮಾಗತಃ ।
ಅದ್ಯ ಮದ್ಬಾಣನಿಷ್ಪಿಷ್ಟೋ ಮಾಮೇವ ಪ್ರಣಮಿಷ್ಯತಿ ।। ೧-೪-೧೫

ಉತ್ತಮವಾಯಿತು! ಈ ವಿಷ್ಣುವು ನನ್ನ ಸಮಕ್ಷಮದಲ್ಲಿ ಬಂದಿದ್ದಾನೆ. ಇಂದು ನನ್ನ ಬಾಣಗಳಿಂದ ಕುಸಿದು ಬಿದ್ದು ನನಗೇ ಪ್ರಣಾಮಮಾಡುತ್ತಾನೆ.

ಯಾಸ್ಯಾಮ್ಯಪಚಿತಿಂ ದಿಷ್ಟ್ಯಾ ಪೂರ್ವೇಷಾಮದ್ಯ ಸಂಯುಗೇ ।
ಇಮಂ ನಾರಾಯಣಂ ಹತ್ವಾ ದಾನವಾನಾಂ ಭಯಾವಹಮ್ ।। ೧-೪೮-೧೬
ಕ್ಷಿಪ್ರಮೇವ ವಧಿಷ್ಯಾಮಿ ರಣೇ ನಾರಾಯಣಾಶ್ರಿತಾನ್ ।

ಇಂದು ಸಮರಾಂಗಣದಲ್ಲಿ ದಾನವರಿಗೆ ಭಯವನ್ನೀಯುವ ಈ ನಾರಾಯಣನ ವಧೆಗೈದು ಶೀಘ್ರದಲ್ಲಿಯೇ ನಾನು ಇವನನ್ನು ಆಶ್ರಯಿಸಿರುವ ದೇವತೆಗಳನ್ನೂ ಸಂಹರಿಸುತ್ತೇನೆ. ಹೀಗೆ ಮಾಡಿ ನಾನು ನನ್ನ ಪೂರ್ವಜರ ಋಣವನ್ನು ತೀರಿಸಿಕೊಳ್ಳುತ್ತೇನೆ. ಇದು ನನಗೆ ಅತ್ಯಂತ ಸೌಭಾಗ್ಯಕರ ವಿಷಯವಾಗುವುದು.

ಜಾತ್ಯಂತರಗತೋಽಪ್ಯೇಷ ಮೃಧೇ ಬಾಧತಿ ದಾನವಾನ್ ।। ೧-೪೮-೧೭
ಏಷೋಽನಂತಃ ಪುರಾ ಭೂತ್ವಾ ಪದ್ಮನಾಭ ಇತಿ ಸ್ಮೃತಃ ।
ಜಘಾನೈಕಾರ್ಣವೇ ಘೋರೇ ತಾವುಭೌ ಮಧುಕೈಟಭೌ ।
ವಿನಿವೇಶ್ಯ ಸ್ವಕೇ ಊರೌ ನಿಹತೌ ದಾನವೇಶ್ವರೌ ।। ೧-೪೮-೧೮

ಇವನು ಬೇರೆ ಬೇರೆ ಯೋನಿಗಳಲ್ಲಿ ಜನಿಸಿಯೂ ಯುದ್ಧದಲ್ಲಿ ದಾನವರನ್ನು ಬಾಧಿಸುತ್ತಾನೆ. ಅನಂತನಾಗಿದ್ದರೂ ಇವನು ಹಿಂದೆ ಮೂರ್ತಿಮಾನನಾಗಿ ಕಾಣಿಸಿಕೊಂಡು ಪದ್ಮನಾಭ ಎಂದು ಕರೆಯಲ್ಪಟ್ಟನು. ಇವನು ಘೋರ ಏಕಾರ್ಣವದಲ್ಲಿ ಸಂಚರಿಸುತ್ತಿದ್ದ ಇಬ್ಬರು ಸಹೋದರ ದಾನವರಾಜರು ಮಧು-ಕೈಟಭರನ್ನು ತನ್ನ ತೊಡೆಯಮೇಲೆ ಮಲಗಿಸಿಕೊಂಡು ಕೊಂದಿದ್ದನು.

ದ್ವಿಧಾಭೂತಂ ವಪುಃ ಕೃತ್ವಾ ಸಿಂಹಾರ್ಧಂ ನರಸಂಸ್ಥಿತಮ್ ।
ಪಿತರಂ ಮೇ ಜಘಾನೈಕೋ ಹಿರಣ್ಯಕಶಿಪುಂ ಪುರಾ ।। ೧-೪೮-೧೯

ಹಿಂದೆ ಇವನೇ ಅರ್ಧ ನರ ಮತ್ತು ಅರ್ಧ ಸಿಂಹದ ರೂಪದಲ್ಲಿ ಎರಡು ಶರೀರಗಳನ್ನು ಧಾರಣೆಮಾಡಿಕೊಂಡು ಒಬ್ಬನೇ ನನ್ನ ಪಿತ ಹಿರಣ್ಯಕಶಿಪುವನ್ನು ವಧಿಸಿದ್ದನು.

ಶುಭಂ ಗರ್ಭಮಧತ್ತೇಮಮದಿತಿರ್ದೇವತಾರಣಿಃ ।
ಯಜ್ಞಕಾಲೇ ಬಲೇರ್ಯೋ ವೈ ಋತ್ವಾ ವಾಮನರೂಪತಾಮ್ ।
ತ್ರೀಽನ್ಲ್ಲೋಕಾನಾಜಹಾರೈಕಃ ಕ್ರಮಮಾಣಸ್ತ್ರಿಭಿಃ ಕ್ರಮೈಃ ।। ೧-೪೮-೨೦

ದೇವತೆಗಳ ಅರಣಿಯಂತಿದ್ದ ಅದಿತಿಯು ಶುಭ ಗರ್ಭದ ರೂಪದಲ್ಲಿ ಇವನನ್ನು ಧಾರಣೆಮಾಡಿಕೊಂಡಿದ್ದಳು. ಅದೇ ಗರ್ಭವು ಬಲಿಯ ಯಜ್ಞದ ಸಮಯದಲ್ಲಿ ವಾಮನ ರೂಪದಲ್ಲಿ ಪ್ರಕಟಗೊಂಡು ಬಂದು, ಅವನೊಬ್ಬನೇ ಮೂರು ಹಜ್ಜೆಗಳಿಂದ ಮೂರೂ ಲೋಕಗಳನ್ನು ಅಳೆದು ಬಲಿಯ ಅಧಿಕಾರವನ್ನು ಕಿತ್ತುಕೊಂಡನು.

ಭೂಯಸ್ತ್ವಿದಾನೀಂ ಸಮರೇ ಸಂಪ್ರಾಪ್ತೇ ತಾರಕಾಮಯೇ ।
ಮಯಾ ಸಹ ಸಮಾಗಮ್ಯ ಸಹ ದೇವೈರ್ವಿನಂಕ್ಷ್ಯತಿ ।। ೧-೪೮-೨೧

ಈಗಈ ತಾರಕಾಮಯ ಸಂಗ್ರಾಮವು ಬಂದೊದಗಲು ಪುನಃ ಇಲ್ಲಿಯೂ ಕೂಡ ಇವನು ಬಂದಿದ್ದಾನೆ. ನನ್ನೊಡನೆ ಯುದ್ಧಮಾಡಿ ಇವನು ದೇವತೆಗಳ ಸಹಿತ ನಷ್ಟನಾಗುತ್ತಾನೆ.”

ಸ ಏವಮುಕ್ತ್ವಾ ಬಹುಧಾ ಕ್ಷಿಪನ್ನಾರಾಯಣಂ ರಣೇ ।
ವಾಗ್ಭಿರಪ್ರತಿರೂಪಾಭಿರ್ಯುದ್ಧಮೇವಾಭ್ಯರೋಚಯತ್ ।। ೧-೪೮-೨೨

ಹೀಗೆ ಹೇಳಿ ರಣಭೂಮಿಯಲ್ಲಿ ನಾರಾಯಣನ ಮೇಲೆ ಅಯೋಗ್ಯ ವಚನಗಳ ಮೂಲಕ ನಾನಾ ಪ್ರಕಾರದ ಆಕ್ಷೇಪಗಳನ್ನು ಮಾಡುತ್ತಾ ಕಾಲನೇಮಿಯು ಅವನೊಂದಿಗೆ ಯುದ್ಧಮಾಡಬಯಸಿದನು.

ಕ್ಷಿಪ್ಯಮಾಣೋಽಸುರೇಂದ್ರೇಣ ನ ಚುಕೋಪ ಗದಾಧರಃ ।
ಕ್ಷಮಾಬಲೇನ ಮಹತಾ ಸಸ್ಮಿತಂ ವಾಕ್ಯಮಬ್ರವೀತ್ ।। ೧-೪೮-೨೩

ಅಸುರೇಂದ್ರನು ಈ ರೀತಿ ಆಕ್ಷೇಪಿಸುತ್ತಿದ್ದರೂ ಗದಾಧರನು ಕುಪಿತನಾಗಲಿಲ್ಲ. ಮಹಾ ಕ್ಷಮಾಬಲದಿಂದ ಮುಗುಳ್ನಗುತ್ತಾ ಈ ಮಾತನ್ನಾಡಿದನು:

ಅಲ್ಪದರ್ಪಬಲೋ ದೈತ್ಯ ಸ್ಥಿತಃ ಕ್ರೋಧಾದಸದ್ವದನ್ ।
ಹತಸ್ತ್ವಮಾತ್ಮನೋ ದೋಷೈಃ ಕ್ಷಮಾಂ ಯೋಽತೀತ್ಯ ಭಾಷಸೇ ।। ೧-೪೮-೨೪

“ದೈತ್ಯ! ಅಲ್ಪ ದರ್ಪ ಮತ್ತು ಬಲಗಳನ್ನುಳ್ಳ ನೀನು ಇಲ್ಲಿ ಕ್ರೋಧದಿಂದ ಈ ಮಾತನ್ನಾಡುತ್ತಿರುವೆ! ನೀನು ಕ್ಷಮೆಯನ್ನು ಉಲ್ಲಂಘಿಸಿ ಅತಿಯಾಗಿ ಮಾತನಾಡುತ್ತಿದ್ದೀಯೆ. ನಿನ್ನದೇ ದೋಷಗಳಿಂದ ನೀನು ಈಗಾಗಲೇ ಹತನಾಗಿಬಿಟ್ಟಿದ್ದೀಯೆ.

ಅಧಮಸ್ತ್ವಂ ಮಮ ಮತೋ ಧಿಗೇತತ್ತವ ವಾಗ್ಬಲಮ್ ।
ನ ತತ್ರ ಪುರುಷಾಃ ಸಂತಿ ಯತ್ರ ಗರ್ಜಂತಿ ಯೋಷಿತಹಃ ।। ೧-೪೮-೨೫

ನನ್ನ ಮತದಲ್ಲಿ ನೀನು ಓರ್ವ ಅಧಮನಾಗಿದ್ದೀಯೆ. ನಿನ್ನ ಈ ವಾಗ್ಬಲಕ್ಕೆ ಧಿಕ್ಕಾರ! ಎಲ್ಲಿ ಪುರುಷರೇ ಇಲ್ಲದೇ ಕೇವಲ ಸ್ತ್ರೀಯರಿರುವರೋ ಅಲ್ಲಿ ಗರ್ಜಿಸುವಂತೆ ನೀನು ಗರ್ಜಿಸುತ್ತಿರುವೆ!

ಅಹಂ ತ್ವಾಂ ದೈತ್ಯ ಪಶ್ಯಾಮಿ ಪೂರ್ವೇಷಾಂ ಮಾರ್ಗಗಾಮಿನಮ್ ।
ಪ್ರಜಾಪತಿಕೃತಂ ಸೇತುಂ ಕೋ ಭಿತ್ತ್ವಾ ಸ್ವಸ್ತಿಮಾನ್ಭವೇತ್ ।। ೧-೪೮-೨೬

ದೈತ್ಯ! ನೀನು ನಿನ್ನ ಪೂರ್ವಜರ ಮಾರ್ಗದಲ್ಲಿಯೇ ಹೋಗುತ್ತಿರುವುದನ್ನು ನಾನು ನೋಡುತ್ತಿದ್ದೇನೆ. ಪ್ರಜಾಪತಿಯು ಮಾಡಿಟ್ಟ ಮರ್ಯಾದೆಗಳನ್ನು ಒಡೆದು ಯಾರುತಾನೇ ಕುಶಲನಾಗಿರಬಹುದು?

ಅದ್ಯ ತ್ವಾಂ ನಾಶಯಿಷ್ಯಾಮಿ ದೇವವ್ಯಾಪಾರಕಾರಕಮ್ ।
ಸ್ವೇಷು ಸ್ವೇಷು ಚ ಸ್ಥಾನೇಷು ಸ್ಥಾಪಯಿಷ್ಯಾಮಿ ದೇವತಾಃ ।। ೧-೪೮-೨೭

ದಾನವನಾಗಿದ್ದುಕೊಂಡೂ ದೇವತೆಗಳ ಅಧಿಕಾರವನ್ನು ಕೈಗೊಂಡಿರುವ ನಿನ್ನನ್ನು ಇಂದು ನಾಶಗೊಳಿಸುತ್ತೇನೆ. ಮತ್ತು ದೇವತೆಗಳನ್ನು ಅವರವರ ಸ್ಥಾನಗಳಲ್ಲಿ ಸ್ಥಾಪಿಸುತ್ತೇನೆ.””

ವೈಶಂಪಾಯನ ಉವಾಚ।
ಏವಂ ಬ್ರುವತಿ ತದ್ವಾಕ್ಯಂ ಮೃಧೇ ಶ್ರೀವತ್ಸಧಾರಿಣಿ ।
ಜಹಾಸ ದಾನವಃ ಕ್ರೋಧಾದ್ಧಸ್ತಾಂಶ್ಚಕ್ರೇ ಚ ಸಾಯುಧಾನ್ ।। ೧-೪೮-೨೮

ವೈಶಂಪಾಯನನು ಹೇಳಿದನು: “ರಣರಂಗದಲ್ಲಿ ಶ್ರೀವತ್ಸಧಾರಿಣಿಯು ಈ ಮಾತನ್ನಾಡುತ್ತಿರುವಾಗ ದಾನವನು ಕ್ರೋಧದಿಂದ ನಗತೊಡಗಿದನು. ಕೂಡಲೇ ಅವನು ಆಯುಧಗಳನ್ನು ಹಿಡಿದನು.

ಸ ಬಾಹುಶತಮುದ್ಯಮ್ಯ ಸರ್ವಾಸ್ತ್ರಗ್ರಹಣಂ ರಣೇ ।
ಕ್ರೋಧಾದ್ದ್ವಿಗುಣರಕ್ತಾಕ್ಷೋ ವಿಷ್ಣುಂ ವಕ್ಷಸ್ಯತಾಡಯತ್ ।। ೧-೪೮-೨೯

ರಣದಲ್ಲಿ ಅವನು ಎಲ್ಲ ಅಸ್ತ್ರಗಳನ್ನೂ ಹಿಡಿದು ತನ್ನ ನೂರು ಬಾಹುಗಳನ್ನು ಮೇಲೆತ್ತಿ ಕ್ರೋಧದಿಂದ ದ್ವಿಗುಣ ರಕ್ತಾಕ್ಷನಾಗಿ ವಿಷ್ಣುವಿನ ವಕ್ಷಸ್ಥಲಕ್ಕೆ ಪ್ರಹರಿಸಿದನು.

ದಾನವಾಶ್ಚಾಪಿ ಸಮರೇ ಮಯತಾರಪುರೋಗಮಾಃ ।
ಉದ್ಯತಾಯುಧನಿಸ್ತ್ರಿಂಶಾದೃಷ್ಟ್ವಾ ವಿಷ್ಣುಮಥಾದ್ರವನ್ ।। ೧-೪೮-೩೦

ಮಯ-ತಾರ ಮೊದಲಾದ ದಾನವರೂ ಕೂಡ ಸಮರದಲ್ಲಿ ನಿಶಿತ ಆಯುಧಗಳನ್ನು ಎತ್ತಿಹಿಡಿದು ವಿಷ್ಣುವನ್ನು ನೋಡಿ ಆಕ್ರಮಣಿಸಿದರು.

ಸ ತಾಡ್ಯಮಾನೋಽತಿಬಲೈರ್ದೈತ್ಯೈಃ ಸರ್ವಾಯುಧೋದ್ಯತೈಃ ।
ನ ಚಚಾಲ ಹರಿರ್ಯುದ್ಧೇಽಕಂಪ್ಯಮಾನ ಇವಾಚಲಃ ।। ೧-೪೮-೩೧

ಸರ್ವಪ್ರಕಾರದ ಆಯುಧಗಳನ್ನು ಮೇಲೆತ್ತಿ ಅತಿಬಲಶಾಲೀ ದೈತ್ಯರಿಂದ ಪ್ರಹರಿಸಲ್ಪಟ್ಟರೂ ಯುದ್ಧದಲ್ಲಿ ಹರಿಯು ಕಂಪಿಸದೇ ಪರ್ವತದಂತೆ ಅಚಲನಾಗಿದ್ದನು.

ಸಂಸಕ್ತಶ್ಚ ಸುಪರ್ಣೇನ ಕಾಲನೇಮೀ ಮಹಾಸುರಃ ।
ಸರ್ವಪ್ರಾಣೇನ ಮಹತೀಂ ಗದಾಮುದ್ಯಮ್ಯ ಬಾಹುಭಿಃ ।। ೧-೪೮-೩೨
ಮುಮೋಚ ಜ್ವಲಿತಾಂ ಘೋರಾಂ ಸಂರಬ್ಧೋ ಗರುಡೋಪರಿ ।
ಕರ್ಮಣಾ ತೇನ ದೈತ್ಯಸ್ಯ ವಿಷ್ಣುರ್ವಿಸ್ಮಯಮಾಗತಃ ।। ೧-೪-೩೩

ಇಷ್ಟರಲ್ಲಿ ಮಹಾಸುರ ಕಾಲನೇಮಿಯು ಸುಪರ್ಣ ಗರುಡನ ಮೇಲೆ ಕುಪಿತನಾದನು. ಅವನು ಸಂರಬ್ಧನಾಗಿ ತನ್ನ ಬಾಹುಗಳಿಂದ ಘೋರವಾಗಿ ಪ್ರಜ್ವಲಿಸುತ್ತಿದ್ದ ಮಹಾ ಗದೆಯನ್ನು ಎತ್ತಿ ಸರ್ವಶಕ್ತಿಯನ್ನೂ ಉಪಯೋಗಿಸಿ ಗರುಡನ ಮೇಲೆ ಪ್ರಯೋಗಿಸಿದನು. ದೈತ್ಯನ ಆ ಕೃತ್ಯದಿಂದ ವಿಷ್ಣುವು ವಿಸ್ಮಯಗೊಂಡನು.

ಯದಾ ತಸ್ಯ ಸುಪರ್ಣಸ್ಯ ಪತಿತಾ ಮೂರ್ಧ್ನಿ ಸಾ ಗದಾ ।
ತದಾಽಽಗಮತ್ಪದಾ ಭೂಮಿಂ ಪಕ್ಷೀ ವ್ಯಥಿತವಿಗ್ರಹಃ ।। ೧-೪೮-೩೪

ಸುಪರ್ಣನ ಮಸ್ತಕದ ಮೇಲೆ ಆ ಗದೆಯು ಬೀಳಲು ಪಕ್ಷಿಯು ತನ್ನ ಪಂಜುಗಳ ಬಲದಿಂದ ಭೂಮಿಯನ್ನು ಗಟ್ಟಿ ಹಿಡಿದುಕೊಂಡಿತು ಮತ್ತು ಅವನ ಶರೀರವು ವ್ಯಥಿತಗೊಂಡಿತು.

ಸುಪರ್ಣಂ ವ್ಯಥಿತಂ ದೃಷ್ಟ್ವಾ ಕ್ಷತಂ ಚ ವಪುರಾತ್ಮನಃ ಕ್ರೋಧಾತ್ಸಂರಕ್ತನಯನೋ ವೈಕುಂಠಶ್ಚಕ್ರಮಾದದೇ ।। ೧-೪೮-೩೫

ಸುಪರ್ಣನು ವ್ಯಥಿತನಾದುದನ್ನು ಮತ್ತು ಶರೀರವು ಗಾಯಗೊಂಡಿದುದನ್ನು ನೋಡಿ ಕ್ರೋಧದಿಂದ ರಕ್ತನಯನನಾದ ವೈಕುಂಠನು ಚಕ್ರವನ್ನು ತೆಗೆದುಕೊಂಡನು.

ವ್ಯವರ್ಧತ ಚ ವೇಗೇನ ಸುಪರ್ಣೇನ ಸಮಂ ಪ್ರಭುಃ ।
ಭುಜಾಶ್ಚಾಸ್ಯ ವ್ಯವರ್ಧಂತ ವ್ಯಾಪ್ನುವಂತೋ ದಿಶೋ ದಶ ।। ೧-೪೮-೩೬

ಸುಪರ್ಣನ ವೇಗಕ್ಕೆ ಸಮನಾಗಿ ಪ್ರಭುವು ಬೆಳೆಯತೊಡಗಿದನು. ಅವನ ಭುಜಗಳು ಹತ್ತುದಿಕ್ಕುಗಳನ್ನೂ ವ್ಯಾಪಿಸಿ ಬೆಳೆಯ ತೊಡಗಿತು.

ಸ ದಿಶಃ ಪ್ರದಿಶಶ್ಚೈವ ಖಂ ಚ ಗಾಂ ಚೈವ ಪೂರಯನ್ ।
ವವೃಧೇ ಸ ಪುನರ್ಲೋಕಾನ್ಕ್ರಾಂತುಕಾಮ ಇವೌಜಸಾ ।। ೧-೪೮-೩೭

ಅವನು ದಿಕ್ಕು, ಉಪದಿಕ್ಕುಗಳು, ಆಕಾಶ ಮತ್ತು ಭೂಮಿಯನ್ನು ತುಂಬಿಕೊಂಡು ತನ್ನ ಓಜಸ್ಸಿನಿಂದ ಪುನಃ ಲೋಕಗಳನ್ನು ಆಕ್ರಾಂತಿಸುವನೋ ಎನ್ನುವಂತೆ ಬೆಳೆದನು.

ತಂ ಜಯಾಯ ಸುರೇಂದ್ರಾಣಾಂ ವರ್ಧಮಾನಂ ನಭಸ್ತಲೇ ।
ಋಷಯಃ ಸಹ ಗಂಧರ್ವೈಸ್ತುಷ್ಟುವುರ್ಮಧುಸೂದನಮ್ ।। ೧-೪೮-೩೮

ಸುರೇಂದ್ರರ ಜಯಕ್ಕಾಗಿ ನಭಸ್ಥಲದಲ್ಲಿ ವರ್ಧಿಸುತ್ತಿರುವ ಅ ಮಧುಸೂದನನನ್ನು ಋಷಿಗಳೊಂದಿಗೆ ಗಂಧರ್ವರು ಸ್ತುತಿಸತೊಡಗಿದರು.

ಸ ದ್ಯಾಂ ಕಿರೀಟೇನ ಲಿಖನ್ಸಾಭ್ರಮಂಬರಮಂಬರೈಃ ।
ಪದ್ಭ್ಯಾಮಾಕ್ರಮ್ಯ ವಸುಧಾಂ ದಿಶಃ ಪ್ರಚ್ಛಾದ್ಯ ಬಾಹುಭಿಃ ।। ೧-೪೮-೩೯

ತನ್ನ ಕಿರೀಟದಿಂದ ಸ್ವರ್ಗಲೋಕದಲ್ಲಿ ಗೆರೆಯನ್ನೆಳೆಯುತ್ತಾ, ಹಾರಾಡುತ್ತಿದ್ದ ತನ್ನ ವಸ್ತ್ರಗಳಿಂದ ಮೋಡಗಳನ್ನು ತಡೆಯುತ್ತಾ, ಬಾಹುಗಳಿಂದ ದಿಕ್ಕುಗಳನ್ನು ಮುಚ್ಚಿ ಪಾದಗಳಿಂದ ವಸುಧೆಯನ್ನು ಮೆಟ್ಟಿ ನಿಂತನು.

ಸೂರ್ಯಸ್ಯ ರಶ್ಮಿತುಲ್ಯಾಭಂ ಸಹಸ್ರಾರಮರಿಕ್ಷಯಮ್ ।
ದೀಪ್ತಾಗ್ನಿಸದೃಶಂ ಘೋರಂ ದರ್ಶನೀಯಂ ಸುದರ್ಶನಮ್ ।। ೧-೪೮-೪೦
ಸುವರ್ಣನೇಮಿಪರ್ಯಂತಂ ವಜ್ರನಾಭಂ ಭಯಾವಹಮ್ ।
ಮೇದೋಮಜ್ಜಾಸ್ಥಿರುಧಿರೈರ್ದಿಗ್ಧಂ ದಾನವಸಂಭವೈಃ ।। ೧-೪೮-೪೧
ಅದ್ವಿತೀಯಂ ಪ್ರಹಾರೇಶು ಕ್ಷುರಪರ್ಯಂತಮಂಡಲಮ್ ।
ಸ್ರಗ್ದಾಮಮಾಲವಿತತಂ ಕಾಮಗಂ ಕಾಮರೂಪಿಣಮ್ ।। ೧-೪೮-೪೨
ಸ್ವಯಂ ಸ್ವಯಂಭುವಾ ಸೃಷ್ಟಂ ಭಯದಂ ಸರ್ವವಿದ್ವಿಷಾಮ್ ।
ಮಹರ್ಷಿರೋಷೈರಾವಿಷ್ಟಂ ನಿತ್ಯಮಾಹವದರ್ಪಿತಮ್ ।। ೧-೪೮-೪೩
ಕ್ಷೇಪಣಾದ್ಯಸ್ಯ ಮುಹ್ಯಂತಿ ಲೋಕಾಃ ಸಸ್ಥಾಣುಜಂಗಮಾಃ ।
ಕ್ರವ್ಯಾದಾನಿ ಚ ಭೂತಾನಿ ತೃಪ್ತಿಂ ಯಾಂತಿ ಮಹಾಹವೇ ।। ೧-೪೮-೪೪
ತಮಪ್ರತಿಮಕರ್ಮಾಣಂ ಸಮಾನಂ ಸೂರ್ಯವರ್ಚಸಾ ।
ಚಕ್ರಮುದ್ಯಮ್ಯ ಸಮರೇ ಕ್ರೋಧದೀಪ್ತೋ ಗದಾಧರಃ ।। ೧-೪೮-೪೫

ಸೂರ್ಯಕಿರಣಸಮಾನ ಪ್ರಭೆಯುಳ್ಳ, ಸಹಸ್ರ ಅರಗಳುಳ್ಳ, ಶತ್ರುಗಳನ್ನು ಕ್ಷಯಿಸಬಲ್ಲ, ಉರಿಯುತ್ತಿರುವ ಅಗ್ನಿಯಂತಿದ್ದ, ಘೋರನೂ ದರ್ಶನೀಯನೂ ಆಗಿದ್ದ, ಅಂಚಿನಲ್ಲಿ ಸುವರ್ಣಮಯ ನೇಮಿಯನ್ನು ಹೊಂದಿದ್ದ, ವಜ್ರನಾಭ, ಭಯಾವಹ, ದಾನವರ ಮೇದ-ಮಜ್ಜ-ಅಸ್ಥಿ-ರುಧಿರಗಳಿಂದ ಪುಷ್ಟನಾಗಿರುವ, ಪ್ರಹಾರಗಳಲ್ಲಿ ಅದ್ವಿತೀಯನಾದ, ಮಂಡಲಾಕಾರದಲ್ಲಿ ಅರಗಳನ್ನು ಹೊಂದಿದ್ದ, ಹೂವಿನ ಮಾಲೆಯಂತೆ ವಿಸ್ತೃತನಾಗಿದ್ದ, ಬೇಕಾದಲ್ಲಿ ಹೋಗಬಬಲ್ಲ, ಬೇಕಾದ ರೂಪವನ್ನು ಧರಿಸಬಲ್ಲ, ಸ್ವಯಂ ಸ್ವಯಂಭುವು ಸೃಷ್ಟಿಸಿದ್ದ, ಸರ್ವವೈರಿಗಳಿಗೆ ಭಯವನ್ನುಂಟುಮಾಡುವ, ಮಹರ್ಷಿಗಳ ರೋಷದಿಂದ ಆವಿಷ್ಟನಾಗಿರುವ, ನಿತ್ಯವೂ ಯುದ್ಧದರ್ಪಿತನಾಗಿರುವ, ಎಸೆಯುವ ಮಾತ್ರಕ್ಕೆ ಸ್ಥಾವರಜಂಗಮಗಳೊಂದಿಗೆ ಲೋಕಗಳನ್ನೇ ಮೋಹಗೊಳಿಸಬಲ್ಲ, ಮಹಾಯುದ್ಧದಲ್ಲಿ ಮಾಂಸಾಹಾರೀ ಭೂತಗಳಿಗೆ ತೃಪ್ತಿಯನ್ನುಂಟುಮಾಡುವ, ಆ ಅಪ್ರತಿಮ ಕರ್ಮಿ, ಸೂರ್ಯವರ್ಚಸ್ಸಿಗೆ ಸಮಾನನಾಗಿದ್ದ ಸುದರ್ಶನ ಚಕ್ರವನ್ನು ಕೈಯಿಂದ ಎತ್ತಿಹಿಡಿದು ಗದಾಧರನು ಸಮರಾಂಗಣದಲ್ಲಿ ಕ್ರೋಧದಿಂದ ಉದ್ದೀಪ್ತನಾದನು.

ಸಮ್ಮುಷ್ಣಂದಾನವಂ ತೇಜಃ ಸಮರೇ ಸ್ವೇನ ತೇಜಸಾ ।
ಚಿಚ್ಛೇದ ಬಾಹುಂ ಚಕ್ರೇಣ ಶ್ರೀಧರಃ ಕಾಲನೇಮಿನಃ ।। ೧-೪೮-೪೬

ಸಮರದಲ್ಲಿ ಶ್ರೀಧರನು ತನ್ನ ತೇಜಸ್ಸಿನಿಂದ ದಾನವನ ತೇಜಸ್ಸನ್ನು ಹೀರಿಕೊಂಡು ಚಕ್ರದಿಂದ ಕಾಲನೇಮಿಯ ಬಾಹುಗಳನ್ನು ತುಂಡರಿಸಿದನು.

ತಚ್ಚ ವಕ್ತ್ರಶತಂ ಘೋರಂ ಸಾಗ್ನಿಚೂರ್ಣಾಟ್ಟಹಾಸಿನಮ್ ।
ತಸ್ಯ ದೈತ್ಯಸ್ಯ ಚಕ್ರೇಣ ಪ್ರಮಮಾಥ ಬಲಾದ್ಧರಿಃ ।। ೧-೪೮-೪೭

ಜೊತೆಗೆ ಅಟ್ಟಹಾಸಗೈಯುವಾಗ ಅಗ್ನಿಚೂರ್ಣಗಳನ್ನು ಹೊರಗೆಡವುತ್ತಿದ್ದ ಆ ದೈತ್ಯನ ನೂರು ಘೋರ ಮುಖಗಳನ್ನೂ ಹರಿಯು ಚಕ್ರದಿಂದ ಬಲಪೂರ್ವಕವಾಗಿ ತುಂಡರಿಸಿದನು.

ಸ ಚ್ಛಿನ್ನಬಾಹುರ್ವಿಶಿರಾ ನ ಪ್ರಾಕಂಪತ ದಾನವಃ ।
ಕಬಂಧೋಽವಸ್ಥಿತಃ ಸಂಖ್ಯೇ ವಿಶಾಖ ಇವ ಪಾದಪಃ ।। ೧-೪೮-೪೮

ಬಾಹುಗಳು ಮತ್ತು ಶಿರಗಳು ತುಂಡಾದರೂ ಆ ದನವನು ಕಂಪಿಸಲಿಲ್ಲ. ಅವನ ಕಬಂಧವು ರಣರಂಗದಲ್ಲಿ ರೆಂಬೆಗಳಿಲ್ಲದ ವೃಕ್ಷದಂತೆ ನಿಂತುಕೊಂಡಿತ್ತು.

ತಂ ವಿತತ್ಯ ಮಹಾಪಕ್ಷೀ ವಾಯೋಃ ಕೃತ್ವಾ ಸಮಂ ಜವಮ್ ।
ಉರಸಾ ಪಾತಯಾಮಾಸ ಗರುಡಃ ಕಾಲನೇಮಿನಮ್ ।। ೧-೪೮-೪೯

ಆಗ ಮಹಾಪಕ್ಷೀ ಗರುಡನು ತನ್ನ ರೆಕ್ಕೆಗಳನ್ನು ಹರಡಿ ವಾಯುಸಮಾನ ವೇಗದಿಂದ ಕಾಲನೇಮಿಯನ್ನು ತನ್ನ ಎದೆಯಿಂದ ಪ್ರಹರಿಸಿ ಕೆಳಗುರುಳಿಸಿದನು.

ಸ ತಸ್ಯ ದೇಹೋ ವಿಮುಖೋ ವಿಶಾಖಃ ಖಾತ್ಪರಿಭ್ರಮನ್ ।
ನಿಪಪಾತ ದಿವಂ ತ್ಯಕ್ತ್ವಾ ಶೋಭಯಂಧರಣೀತಲಮ್ ।। ೧-೪೮-೫೦

ಶಿರಗಳು ಮತ್ತು ಬಾಹುಗಳನ್ನು ಕಳೆದುಕೊಂಡಿದ್ದ ಅವನ ದೇಹವು ದಿವಿಯನ್ನು ತೊರೆದು ಆಕಾಶದಲ್ಲಿ ಪರಿಭ್ರಮಿಸುತ್ತಾ ಕೆಳಗೆ ಬಿದ್ದು ಧರಣೀತಲವನ್ನು ಶೋಭಾಯಮಾನಗೊಳಿಸಿತು.

ತಸ್ಮಿನ್ನಿಪತಿತೇ ದೈತ್ಯೇ ದೇವಾಃ ಸರ್ಷಿಗಣಾಸ್ತದಾ ।
ಸಾಧುಸಾಧ್ವಿತಿ ವೈಕುಂಠಂ ಸಮೇತಾಃ ಪ್ರತ್ಯಪೂಜಯನ್ ।। ೧-೪೮-೫೧

ಆ ದೈತ್ಯನು ಕೆಳಗುರುಳಲು ಋಷಿಗಣಗಳೊಂದಿಗೆ ದೇವತೆಗಳು ಒಂದಾಗಿ ಸಾಧು ಸಾಧು ಎಂದು ವೈಕುಂಠನನ್ನು ಪೂಜಿಸಿದರು.

ಅಪರೇ ಯೇ ತು ದೈತ್ಯಾ ವೈ ಯುದ್ಧೇ ದುಷ್ಟಪರಾಕ್ರಮಾಃ ।
ತೇ ಸರ್ವೇ ಬಾಹುಭಿರ್ವ್ಯಾಪ್ತಾ ನ ಶೇಕುಶ್ಚಲಿತುಂ ರಣೇ ।। ೧-೪೮-೫೨

ಆ ಯುದ್ಧದಲ್ಲಿ ಇತರ ದುಷ್ಟಪರಾಕ್ರಮೀ ದೈತ್ಯರು ಎಲ್ಲರೂ ವಿಷ್ಣುವಿನ ಬಾಹುಗಳಲ್ಲಿ ಸಿಲುಕಿ ರಣದಲ್ಲಿ ಹಂದಾಡಲೂ ಶಕ್ಯರಾಗಲಿಲ್ಲ.

ಕಾಂಶ್ಚಿತ್ಕೇಶೇಷು ಜಗ್ರಾಹ ಕಾಂಶ್ಚಿತ್ಕಂಠೇಽಭ್ಯಪೀಡಯತ್ ।
ಪಾಟಯತ್ಕಸ್ಯಚಿದ್ವಕ್ತ್ರಂ ಮಧ್ಯೇ ಕಾಂಶ್ಚಿದಥಾಗ್ರಹೀತ್ ।। ೧-೪೮-೫೩

ಅವನು ಕೆಲವರ ಕೇಶಗಳನ್ನು ಹಿಡಿದಿದ್ದನು. ಕೆಲವರ ಕಂಠವನ್ನು ಹಿಡಿದು ಪೀಡಿಸುತ್ತಿದ್ದನು. ಕೆಲವರ ಮಸ್ತಕಗಳನ್ನು ಕೆಳಗೆ ಬಡಿಯುತ್ತಿದ್ದನು ಮತ್ತು ಕೆಲವರ ನಡುವನ್ನು ಹಿಡಿದು ತುಂಡರಿಸಿದನು.

ತೇ ಗದಾಚಕ್ರನಿರ್ದಗ್ಧಾ ಗತಸತ್ತ್ವಾ ಗತಾಸವಃ ।
ಗಗನಾದ್ಭ್ರಷ್ಟಸರ್ವಾಂಗಾ ನಿಪೇತುರ್ಧರಣೀತಲೇ ।। ೧-೪೮-೫೪

ದೈತ್ಯರು ಗದೆ ಮತ್ತು ಚಕ್ರಗಳಿಂದ ದಗ್ಧರಾಗಿ ತಮ್ಮ ಸತ್ತ್ವ ಮತ್ತು ಪ್ರಾಣಗಳನ್ನು ಕಳೆದುಕೊಂಡರು. ಅವರ ಸರ್ವಾಂಗಗಳೂ ಗಗನದಿಂದ ಭ್ರಷ್ಟಗೊಂಡು ಧರಣೀತಲದಲ್ಲಿ ಬಿದ್ದವು.

ತೇಷು ಸರ್ವೇಷು ದೈತ್ಯೇಷು ಹತೇಷು ಪುರುಷೋತ್ತಮಃ ।
ತಸ್ಥೌ ಶಕ್ರಪ್ರಿಯಂ ಕೃತ್ವಾ ಕೃತಕರ್ಮಾ ಗದಾಧರಃ ।। ೧-೪೮-೫೫

ಆ ಎಲ್ಲ ದೈತ್ಯರೂ ಹತರಾಗಲು ಶುಕ್ರನಿಗೆ ಪ್ರಿಯವಾದುದನ್ನು ಮಾಡಿ ಕೃತಕೃತ್ಯನಾಗಿ ಪುರುಷೋತ್ತಮ ಗದಾಧರನು ನಿಂತನು.

ತಸ್ಮಿನ್ವಿಮರ್ದೇ ನಿರ್ವೃತ್ತೇ ಸಂಗ್ರಾಮೇ ತಾರಕಾಮಯೇ ।
ತಂ ದೇಶಮಾಜಗಾಮಾಶು ಬ್ರಹ್ಮಾ ಲೋಕಪಿತಾಮಹಃ ।। ೧-೪೮-೫೬
ಸರ್ವೈರ್ಬ್ರಹ್ಮರ್ಷಿಭಿಃ ಸಾರ್ಧಂ ಗಂಧರ್ವೈಃ ಸಾಪ್ಸರೋಗಣೈಃ ।
ದೇವದೇವೋ ಹರಿಂ ದೇವಂ ಪೂಜಯನ್ವಾಕ್ಯಮಬ್ರವೀತ್ ।। ೧-೪೮-೫೭

ಆ ತಾರಕಾಮಯ ಸಂಗ್ರಾಮದ ಹತ್ಯಾಕಾಂಡವು ಸಮಾಪ್ತವಾಗಲು ಆ ಪ್ರದೇಶಕ್ಕೆ ಲೋಕಪಿತಾಮಹ ಬ್ರಹ್ಮನು ಆಗಮಿಸಿದನು. ಅವನೊಡನೆ ಸರ್ವ ಬ್ರಹ್ಮರ್ಷಿಗಳೂ, ಅಪ್ಸರಗಣಗಳೊಂದಿಗೆ ಗಂಧರ್ವರೂ ಇದ್ದರು. ಆ ದೇವದೇವನು ದೇವ ಹರಿಯನ್ನು ಪೂಜಿಸಿ ಈ ಮಾತನ್ನಾಡಿದನು.

ಬ್ರಹ್ಮೋವಾಚ।
ಕೃತಂ ದೇವ ಮಹತ್ಕರ್ಮ ಸುರಾಣಾಂ ಶಲ್ಯಮುದ್ಧೃತಮ್ ।
ವಧೇನಾನೇನ ದೈತ್ಯಾನಾಂ ವಯಂ ಹಿ ಪರಿತೋಷಿತಾಃ ।। ೧-೪೮-೫೮

ಬ್ರಹ್ಮನು ಹೇಳಿದನು: “ದೇವ! ನೀನು ಮಹತ್ಕಾರ್ಯವನ್ನು ಮಾಡಿದೆ. ಸುರರ ಮುಳ್ಳನ್ನು ಕಿತ್ತೊಗೆದೆ. ದೈತ್ಯರ ಈ ವಧೆಯಿಂದ ನಮಗೆ ಅತ್ಯಂತ ಸಂತೋಷವಾಗಿದೆ.

ಯೋಽಯಂ ಹತಸ್ತ್ವಯಾ ವಿಷ್ಣೋ ಕಾಲನೇಮೀ ಮಹಾಸುರಃ ।
ತ್ವಮೇಕೋಽಸ್ಯ ಮೃಧೇ ಹಂತಾ ನಾನ್ಯಃ ಕಶ್ಚನ ವಿದ್ಯತೇ ।। ೧-೪೮-೫೯

ವಿಷ್ಣೋ! ನಿನ್ನಿಂದ ಹತನಾದ ಈ ಮಹಾಸುರ ಕಾಲನೇಮಿಯನ್ನು ಯುದ್ಧದಲ್ಲಿ ನೀನೊಬ್ಬನೇ ಸಂಹರಿಸುವವನಾಗಿದ್ದೆ. ಬೇರೆ ಯಾರಿಗೂ ಇದು ಸಾಧ್ಯವಾಗುತ್ತಿರಲಿಲ್ಲ.

ಏಷ ದೇವಾನ್ಪರಿಭವಽನ್ಲ್ಲೋಕಾಶ್ಚ ಸಚರಾಚರಾನ್ ।
ಋಷೀಣಾಂ ಕದನಂ ಕೃತ್ವಾ ಮಾಮಪಿ ಪ್ರತಿಗರ್ಜತಿ ।। ೧-೪೮-೬೦

ಇವನು ದೇವತೆಗಳನ್ನು ಮತ್ತು ಸಚರಾಚರ ಲೋಕಗಳನ್ನೂ ಪೀಡಿಸುತ್ತಿದ್ದನು. ಋಷಿಗಳನ್ನು ಕೊಂದು ನನ್ನ ಮೇಲೆ ಕೂಡ ಗರ್ಜಿಸುತ್ತಿದ್ದನು.

ತದನೇನ ತವೋಗ್ರೇಣ ಪರಿತುಷ್ಟೋಽಸ್ಮಿ ಕರ್ಮಣಾ ।
ಯದಯಂ ಕಾಲತುಲ್ಯಾಭಃ ಕಾಲನೇಮೀ ನಿಪಾತಿತಃ ।। ೧-೪೮-೬೧

ಆದುದರಿಂದ ಕಾಲನ ಸಮ ಕಾಂತಿಯಿದ್ದ ಆ ಕಾಲನೇಮಿಯನ್ನು ನೀನು ಏನು ಸಂಹರಿಸಿದೆಯೂ ಈ ನಿನ್ನ ಉಗ್ರ ಕರ್ಮದಿಂದ ನಾನು ಪರಿತುಷ್ಟನಾಗಿದ್ದೇನೆ.

ತದಾಗಚ್ಛಸ್ವ ಭದ್ರಂ ತೇ ಗಚ್ಛಾಮ ದಿವಮುತ್ತಮಮ್ ।
ಬ್ರಹ್ಮರ್ಷಯಸ್ತ್ವಾಂ ತತ್ರಸ್ಥಾಃ ಪ್ರತೀಕ್ಷಂತೇ ಸದೋಗತಾಃ ।। ೧-೪೮-೬೨

ಆದುದರಿಂದ ಬಾ! ನಿನಗೆ ಮಂಗಳವಾಗಲಿ! ಉತ್ತಮ ದಿವ್ಯ ಲೋಕಕ್ಕೆ ಹೋಗೋಣ. ಅಲ್ಲಿ ದಿವ್ಯ ಸಭೆಯಲ್ಲಿ ಕುಳಿತಿರುವ ಅಲ್ಲಿಯ ನಿವಾಸೀ ಬ್ರಹ್ಮರ್ಷಿಗಳು ನಿನ್ನ ಪ್ರತೀಕ್ಷೆ ಮಾಡುತ್ತಿದ್ದಾರೆ.

ಅಹಂ ಮಹರ್ಷಯಶ್ಚೈವ ತತ್ರ ತ್ವಾಂ ವದತಾಂ ವರ ।
ವಿಧಿವಚ್ಚಾರ್ಚಯಿಷ್ಯಾಮೋ ಗೀರ್ಭಿರ್ದಿವ್ಯಾಭಿರಚ್ಯುತ ।। ೧-೪೮-೬೩

ಮಾತನಾಡುವವರಲ್ಲಿ ಶ್ರೇಷ್ಠ! ಅಚ್ಯುತ! ಅಲ್ಲಿ ನಾನು ಮತ್ತು ಮಹರ್ಷಿಗಳು ನಿನ್ನನ್ನು ವಿಧಿವತ್ತಾಗಿ ದಿವ್ಯ ವಾಣಿಯಿಂದ ನಿನ್ನನ್ನು ಅರ್ಚಿಸುತ್ತೇವೆ.

ಕಿಂ ಚಾಹಂ ತವ ದಾಸ್ಯಾಮಿ ವರಂ ವರಭೃತಾಂ ವರ ।
ಸುರೇಷ್ವಪಿ ಸದೈತ್ಯೇಷು ವರಾಣಾಂ ವರದೋ ಭವಾನ್ ।। ೧-೪೮-೬೪

ವರಧಾರಣಮಾಡುವವರಲ್ಲಿ ಶ್ರೇಷ್ಠ! ನೀನು ಬಯಸಿದ ಯಾವ ವರವನ್ನು ನಾನು ಕೊಡಬಲ್ಲೆ? ಸುರರಿಗೂ ದೈತ್ಯರಿಗೂ ವರಗಳನ್ನು ನೀಡುವವನೇ ನೀನೇ ಆಗಿರುವೆ.

ನಿರ್ಯಾತಯೈತತ್ತ್ರೈಲೋಕ್ಯಂ ಸ್ಫೀತಂ ನಿಹತಕಂಟಕಮ್ ।
ಅಸ್ಮಿನ್ನೇವ ಮೃಧೇ ವಿಷ್ಣೋ ಶಕ್ರಾಯ ಸುಮಹಾತ್ಮನೇ ।। ೧-೪೮-೬೫

ವಿಷ್ಣೋ! ಈ ರಣರಂಗದಲ್ಲಿಯೇ ಮಹಾತ್ಮ ಶಕ್ರನಿಗೆ ಸಮೃದ್ಧವಾಗಿರುವ ಮತ್ತು ಕಂಟಕರು ಹತರಾಗಿರುವ ಈ ತ್ರೈಲೋಕ್ಯವನ್ನು ಹಿಂದಿರುಗಿಸು.”

ಏವಮುಕ್ತೋ ಭಗವತಾ ಬ್ರಹ್ಮಣಾ ಹರಿರವ್ಯಯಃ ।
ದೇವಾಂಶಕ್ರಮುಖಾನ್ಸರ್ವಾನುವಾಚ ಶುಭಯಾ ಗಿರಾ ।। ೧-೪೮-೬೬

ಭಗವಂತ ಬ್ರಹ್ಮನು ಹೀಗೆ ಹೇಳಲು ಅವ್ಯಯ ಹರಿಯು ಶಕ್ರಪ್ರಮುಖರಾದ ಎಲ್ಲ ದೇವತೆಗಳಿಗೂ ಶುಭ ವಾಣಿಯಲ್ಲಿ ಹೇಳಿದನು.

ವಿಷ್ಣುರುವಾಚ ।
ಶ್ರೂಯತಾಂ ತ್ರಿದಶಾಃ ಸರ್ವೇ ಯಾವಂತೋಽತ್ರ ಸಮಾಗತಾಃ ।
ಶ್ರವಣಾವಹಿತೈರ್ದೇಹೈಃ ಪುರಸ್ಕೃತ್ಯ ಪುರಂದರಮ್ ।। ೧-೪೮-೬೭

ವಿಷ್ಣುವು ಹೇಳಿದನು: “ಇಲ್ಲಿ ಸಮಾಗತರಾಗಿರುವ ಸರ್ವ ದೇವತೆಗಳೂ ಪುರಂದರನನ್ನು ಮುಂದಿಟ್ಟುಕೊಂಡು ದೇಹ ಮತ್ತು ಇಂದ್ರಿಯಗಳನ್ನು ಏಕಾಗ್ರಗೊಳಿಸಿ ನನ್ನ ಈ ಮಾತನ್ನು ಕೇಳಿ.

ಅಸ್ಮಿನ್ನಃ ಸಮರೇ ಸರ್ವೇ ಕಾಲನೇಮಿಮುಖಾ ಹತಾಃ ।
ದಾನವಾ ವಿಕ್ರಮೋಪೇತಾಃ ಶಕ್ರಾದಪಿ ಮಹತ್ತರಾಃ ।। ೧-೪೮-೬೮

ಈ ಸಮರದಲ್ಲಿ ಶಕ್ರನಿಗೂ ಮಹತ್ತರ ವಿಕ್ರಮಗಳಿದ್ದ ಕಾಲನೇಮಿಯೇ ಮೊದಲಾದ ದಾನವರನ್ನು ನಾವು ಸಂಹರಿಸಿದ್ದೇವೆ.

ತಸ್ಮಿನ್ಮಹತಿ ಸಂಕ್ರಂದೇ ದ್ವಾವೇವ ತು ವಿನಿಸ್ಸೃತೌ ।
ವೈರೋಚನಶ್ಚ ದೈತ್ಯೇಂದ್ರಃ ಸ್ವರ್ಭಾನುಶ್ಚ ಮಹಾಗ್ರಹಃ ।। ೧-೪೮-೬೯

ಈ ಮಹಾಸಂಗ್ರಾಮದಲ್ಲಿ ಇಬ್ಬರೇ ದೈತ್ಯರು ಹತರಾಗದೇ ಉಳಿದುಕೊಂಡಿದ್ದಾರೆ: ದೈತ್ಯೇಂದ್ರ ವೈರೋಚನ ಬಲಿ ಮತ್ತು ಮಹಾಗ್ರಹ ಸ್ವರ್ಭಾನು ರಾಹು.

ತದಿಷ್ಟಾಂ ಭಜತಾಂ ಶಕ್ರೋದಿಶಂ ವರುಣ ಏವ ಚ ।
ಯಾಮ್ಯಾಂ ಯಮಃ ಪಾಲಯತಾಮುತ್ತರಾಂ ಚ ಧನಾಧಿಪಃ ।। ೧-೪೮-೭೦

ಈಗ ಇಂದ್ರ ಮತ್ತು ವರುಣರು ತಮಗಿಷ್ಟವಾದ ದಿಕ್ಕುಗಳನ್ನು ಪುನಃ ಗ್ರಹಣಮಾಡಲಿ. ಯಮನು ದಕ್ಷಿಣ ದಿಕ್ಕನ್ನು ಮತ್ತು ಧನಾಧ್ಯಕ್ಷನು ಕುಬೇರನು ಉತ್ತರ ದಿಕ್ಕನ್ನು ಪಾಲಿಸಲಿ.

ಋಕ್ಷೈಃ ಸಹ ಯಥಾಯೋಗಂ ಕಾಲೇ ಚರತು ಚಂದ್ರಮಾಃ ।
ಅಬ್ದಂ ಚತುರ್ಮುಖಂ ಸೂರ್ಯೋ ಭಜತಾಮಯನೈಃ ಸಹ ।। ೧-೪೮-೭೧

ನಕ್ಷತ್ರಗಳೊಡನೆ ಚಂದ್ರಮನು ಯಥಾಯೋಗ್ಯವಾಗಿ ಯಥಾಕಾಲದಲ್ಲಿ ಸಂಚರಿಸಲಿ. ಸೂರ್ಯನು ಅಯನಗಳ ಸಹಿತ ಋತುಪ್ರಧಾನ ವರ್ಷದ ಆಶ್ರಯವನ್ನು ಹೊಂದಲಿ.

ಆಜ್ಯಭಾಗಾಃ ಪ್ರವರ್ತಂತಾಂ ಸದಸ್ಯೈರಭಿಪೂಜಿತಾಃ ।
ಹೂಯಂತಾಮಗ್ನಯೋ ವಿಪ್ರೈರ್ವೇದದೃಷ್ಟೇನ ಕರ್ಮಣಾ ।। ೧-೪೮-೭೨

ಸದಸ್ಯರಿಂದ ಅಭಿಪೂಜಿತಗೊಂಡ ಆಜ್ಯಭಾಗವನ್ನು ದೇವತೆಗಳಲ್ಲಿ ಅರ್ಪಿತಗೊಳ್ಳಲಿ ಮತ್ತು ವಿಪ್ರರು ವೇದದೃಷ್ಟ ಕರ್ಮಗಳಿಂದ ಅಗ್ನಿಯಲ್ಲಿ ಆಹುತಿಯನ್ನು ನೀಡುವಂತಾಗಲಿ.

ದೇವಾಶ್ಚ ಬಲಿಹೋಮೇನ ಸ್ವಾಧ್ಯಾಯೇನ ಮಹರ್ಷಯಃ ।
ಶ್ರಾದ್ಧೇನ ಪಿತರಶ್ಚೈವ ತ್ರುಪ್ತಿಂ ಯಂತು ಯಥಾ ಪುರಾ ।। ೧-೪೮-೭೩

ಹಿಂದಿನಂತೆ ಬಲಿ ಮತ್ತು ಹೋಮಗಳಿಂದ ದೇವತೆಗಳನ್ನು, ಸ್ವಾಧ್ಯಾಯದಿಂದ ಮಹರ್ಷಿಗಳನ್ನು ಮತ್ತು ಶ್ರಾದ್ಧಗಳಿಂದ ಪಿತೃಗಳನ್ನು ತೃಪ್ತಿಪಡಿಸುವಂತಾಗಲಿ.

ವಾಯುಶ್ಚರತು ಮಾರ್ಗಸ್ಥಸ್ತ್ರಿಧಾ ದೀಪ್ಯತು ಪಾವಕಃ ।
ತ್ರಯೋ ವರ್ಣಾಶ್ಚ ಲೋಕಾಂಸ್ತ್ರೀನ್ವರ್ಧಯಂತ್ವಾತ್ಮಜೈರ್ಗುಣೈಃ ।। ೧-೪೮-೭೪

ವಾಯುವು ತನ್ನ ಮಾರ್ಗಸ್ಥನಾಗಿ ವಿಚರಿಸಲಿ. ಪಾವಕನು ಮೂರು ರೂಪಗಳಲ್ಲಿ ಸದಾ ಪ್ರಕಾಶಿತನಾಗಿರಲಿ. ಮೂರು ವರ್ಣದವರು ತಮ್ಮ ಸಹಜ ಗುಣಗಳಿಂದ ಮೂರೂ ಲೋಕಗಳನ್ನು ವೃದ್ಧಿಗೊಳಿಸಲಿ.

ಕ್ರತವಃ ಸಂಪ್ರವರ್ತಂತಾಂ ದೀಕ್ಷಣೀಯೈರ್ದ್ವಿಜಾತಿಭಿಃ ।
ದಕ್ಷಿಣಾಶ್ಚೋಪವರ್ತಂತಾಂ ಯಥಾರ್ಹಂ ಸರ್ವಸತ್ರಿಣಾಮ್ ।। ೧-೪೮-೭೫

ಯಜ್ಞದೀಕ್ಷಾ ಅಧಿಕಾರಿಗಳಾದ ದ್ವಿಜಾತಿಯವರಿಂದ ಯಜ್ಞಾನುಷ್ಠಾನಗಳು ನಡೆಯುತ್ತಿರಲಿ ಮತ್ತು ಸಮಸ್ತ ಯಜಮಾನರಿಗೆ ಯಜ್ಞಗಳಲ್ಲಿ ಯಥಾಯೋಗ್ಯ ದಕ್ಷಿಣೆಗಳನ್ನು ನೀಡುವಂತಾಗಲಿ.

ಗಾಶ್ಚ ಸೂರ್ಯೋ ರಸಾನ್ಸೋಮೋ ವಾಯುಃ ಪ್ರಾಣಾಂಶ್ಚ ಪ್ರಾಣಿಷು ।
ತರ್ಪಯಂತಃ ಪ್ರವರ್ತಂತಾಂ ಶಿವೈಃ ಸೌಮ್ಯೈಶ್ಚ ಕರ್ಮಭಿಃ ।। ೧-೪೮-೭೬

ಸೂರ್ಯನು ಇಂದ್ರಿಯಗಳ, ಸೋಮನು ರಸಗಳ, ವಾಯುವು ಪ್ರಾಣಿಗಳ ಪ್ರಾಣಗಳನ್ನು ತೃಪ್ತಿ ಮತ್ತು ಪುಷ್ಟಿಗೊಳಿಸುತ್ತಾ ಇರಲಿ ಮತ್ತು ತಮ್ಮ ಕಲ್ಯಾಣಕಾರೀ ಮತ್ತು ಸೌಮ್ಯ ಕರ್ಮಗಳಿಂದ ಲೋಕಹಿತದಲ್ಲಿ ತೊಡಗಿರಲಿ.

ಯಥಾವದಾನುಪೂರ್ವ್ಯೇಣ ಮಹೇಂದ್ರಸಲಿಲೋದ್ಭವಾಃ ।
ತ್ರೈಲೋಕ್ಯಮಾತರಃ ಸರ್ವಾಃ ಸಾಗರಂ ಯಾಂತು ನಿಮ್ನಗಾಃ ।। ೧-೪೮-೭೭

ಹಿಂದೆ ನಡೆಯುತ್ತಿದ್ದಂತೆ ಮಹೇಂದ್ರನು ಮಳೆಸುರಿಸುವುದರಿಂದ ಉದ್ಭವವಾದ ತ್ರೈಲೋಕ್ಯ ಮಾತರ ನದಿಗಳೆಲ್ಲವೂ ಸಾಗರವನ್ನು ಸೇರಲಿ.

ದೈತ್ಯೇಭ್ಯಸ್ತ್ಯಜ್ಯತಾಂ ಭೀಶ್ಚ ಶಾಂತಿಂ ವ್ರಜತ ದೇವತಾಃ ।
ಸ್ವಸ್ತಿ ವೋಽಸ್ತು ಗಮಿಷ್ಯಾಮಿ ಬ್ರಹ್ಮಲೋಕಂ ಸನಾತನಮ್ ।। ೧-೪೮-೭೮

ದೇವತೆಗಳೇ! ಇನ್ನು ನೀವು ದೇತ್ಯರ ಭಯವನ್ನು ತೊರೆಯಿರಿ ಮತ್ತು ಮನಸ್ಸಿಗೆ ಶಾಂತಿಯನ್ನು ತಂದುಕೊಳ್ಳಿರಿ. ನಿಮ್ಮೆಲ್ಲರಿಗೂ ಮಂಗಳವಾಗಲಿ. ಈಗ ನಾನು ಸನಾತನ ಬ್ರಹ್ಮಲೋಕಕ್ಕೆ ಹೋಗುತ್ತೇನೆ.

ಸ್ವಗೃಹೇ ಸರ್ವಲೋಕೇ ವಾ ಸಂಗ್ರಾಮೇ ವಾ ವಿಶೇಷತಃ ।
ವಿಶ್ರಂಭೋ ವೋ ನ ಮಂತವ್ಯೋ ನಿತ್ಯಂ ಕ್ಷುದ್ರಾ ಹಿ ದಾನವಾಃ ।। ೧-೪೮-೭೯

ಸ್ವಗೃಹದಲ್ಲಿಯಾಗಲೀ ಅಥವಾ ಸರ್ವಲೋಕದಲ್ಲಿ ಅಥವಾ ವಿಶೇಷತಃ ಸಂಗ್ರಾಮದಲ್ಲಿ ನೀವು ದಾನವರ ಮೇಲೆ ವಿಶ್ವಾಸವನ್ನಿಡಬಾರದು. ಏಕೆಂದರೆ ನಿತ್ಯವೂ ಅವರು ಕ್ಷುದ್ರವಾಗಿಯೇ ವರ್ತಿಸುತ್ತಾರೆ.

ಛಿದ್ರೇಷು ಪ್ರಹರಂತ್ಯೇತೇ ನ ಚೈಷಾಂ ಸಂಸ್ಥಿತಿರ್ಧ್ರುವಾ ।
ಸೌಮ್ಯಾನಾಮೃಜುಭಾವಾನಾಂ ಭವತಾಂ ಚಾರ್ಜವೇ ಮತಿಃ ।। ೧-೪೮-೮೦

ಅವರು ಸಮಯ ಸಿಕ್ಕಾಗಲೆಲ್ಲಾ ಪ್ರಹರಿಸುತ್ತಾರೆ. ಇವರ ಮರ್ಯಾದೆಯು ಸದಾ ಸ್ಥಿರವಾಗಿರುವಂಥಹುದಲ್ಲ. ನೀವು ಸರಳ ಮತ್ತು ಸೌಮ್ಯ ಸ್ವಭಾವದವರು. ಆದುದರಿಂದ ನಿಮ್ಮ ಬುದ್ಧಿಯು ಸರಳ ವರ್ತನೆಯಲ್ಲಿಯೇ ತೊಡಗಿರುತ್ತದೆ.

ಅಹಂ ತು ದುಷ್ಟಭಾವಾನಾಂ ಯುಷ್ಮಾಸು ಸುದುರಾತ್ಮನಾಮ್ ।
ಅಸಂಯಗ್ವರ್ತಮಾನಾನಾಂ ಮೋಹಂ ದಾಸ್ಯಾಮಿ ದೇವತಾಃ ।। ೧-೪೮-೮೧

ದೇವತೆಗಳೇ! ನಿಮ್ಮ ಕುರಿತು ದುರ್ಭಾವದಿಂದ ಅನುಚಿತವಾಗಿ ನಡೆದುಕೊಳ್ಳುವ ದುರಾತ್ಮ ದೈತ್ಯರನ್ನು ನಾನು ಅವಶ್ಯವಾಗಿ ಮೋಹದಲ್ಲಿ ಸಿಲುಕಿಸುತ್ತೇನೆ.

ಯದಾ ಚ ಸುದುರಾಧರ್ಷಂ ದಾನವೇಭ್ಯೋ ಭಯಂ ಭವೇತ್ ।
ತದಾ ಸಮುಪಗಂಯಾಶು ವಿಧಾಸ್ಯೇ ವಸ್ತತೋಽಭಯಮ್ ।। ೧-೪೮-೮೨

ದಾನವರಿಂದ ನಿಮಗೆ ದುರ್ನಿರ್ವಾರ್ಯ ಭಯವು ಪ್ರಾಪ್ತವಾದಾಗ ನಾನು ಶೀಘ್ರವಾಗಿ ಬಂದು ಅವರಿಂದ ನಿರ್ಭಯವನ್ನು ನೀಡುತ್ತೇನೆ.””

ವೈಶಂಪಾಯನ ಉವಾಚ ।
ಏವಮುಕ್ತ್ವಾ ಸುರಗಣಾನ್ವಿಷ್ಣುಃ ಸತ್ಯಪರಾಕ್ರಮಃ ।
ಜಗಾಮ ಬ್ರಹ್ಮನಾ ಸಾರ್ಧಂ ಬ್ರಹ್ಮಲೋಕಂ ಮಹಾಯಶಾಃ ।। ೧-೪೮-೮೩

ವೈಶಂಪಾಯನನು ಹೇಳಿದನು: “ಸುರಗಣಗಳಿಗೆ ಹೀಗೆ ಹೇಳಿ ಮಹಾಯಶಸ್ವೀ ಸತ್ಯಪರಾಕ್ರಮಿ ವಿಷ್ಣುವು ಬ್ರಹ್ಮನೊಡನೆ ಬ್ರಹ್ಮಲೋಕಕ್ಕೆ ಹೋದನು.

ಏತದಾಶ್ಚರ್ಯಮಭವತ್ಸಂಗ್ರಾಮೇ ತಾರಕಾಮಯೇ ।
ದಾನವಾನಾಂ ಚ ವಿಷ್ಣೋಶ್ಚ ಯನ್ಮಾಂ ತ್ವಂ ಪರಿಪೃಚ್ಛಸಿ ।। ೧-೪೮-೮೪

ನೀನು ನನ್ನನ್ನು ಕೇಳಿದುದಕ್ಕೆ ಹೇಳಿದ್ದೇನೆ. ತಾರಕಾಮಯ ಸಂಗ್ರಾಮದಲ್ಲಿ ದಾನವರ ಮತ್ತು ವಿಷ್ಣುವಿನ ಇದೇ ಆಶ್ಚರ್ಯಜನಕ ಘಟನೆಯು ಘಟಿಸಿತ್ತು.”

ಸಮಾಪ್ತಿ

ಇತಿ ಶ್ರೀಮನ್ಮಹಾಭಾರತೇ ಖಿಲೇಷು ಹರಿವಂಶೇ ಹರಿವಂಶಪರ್ವಣಿ ಕಾಲನೇಮಿವಧೇಽಷ್ಟಚತ್ವಾರಿಂಶೋಽಧ್ಯಾಯಃ


  1. ಅಂಗ ಹೋಮ, ಪ್ರಧಾನ ಹೋಮ ಮತ್ತು ಪ್ರಾಯಶ್ಚಿತ್ತ ಹೋಮ -ಇವು ಹೋಮದ ಮೂರು ಪ್ರಕಾರಗಳು. ನಿತ್ಯ, ನೈಮಿತ್ತಿಕ ಮತ್ತು ಕಾಮ್ಯ ಎಂದೂ ಮೂರು ವಿಧದ ಹೋಮಗಳನ್ನು ಹೇಳುತ್ತಾರೆ. ಆವಹನೀಯ, ಗಾರ್ಹಪತ್ಯ, ಮತ್ತು ದಕ್ಷಿಣಾಗ್ನಿಯ ಭೇದಗಳಿಂದಲೂ ಮೂರು ಪ್ರಕಾರದ ಹೋಮಗಳ ಕುರಿತು ಹೇಳುತ್ತಾರೆ (ಗೀತಾ ಪ್ರೆಸ್). ↩︎