047: ಕಾಲನೇಮಿಪರಾಕ್ರಮಃ

ಪ್ರವೇಶ

।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।

ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ

ಶ್ರೀ ಮಹಾಭಾರತ

ಖಿಲಭಾಗೇ ಹರಿವಂಶಃ

ಹರಿವಂಶ ಪರ್ವ

ಅಧ್ಯಾಯ 47

ಸಾರ

ವೈಶಂಪಾಯನ ಉವಾಚ ।
ದಾನವಾಂಶ್ಚಾಪಿ ಪಿಪ್ರೀಷುಃ ಕಾಲನೇಮಿರ್ಮಹಾಸುರಃ ।
ವ್ಯವರ್ಧತ ಮಹಾತೇಜಾಸ್ತಪಾಂತೇ ಜಲದೋ ಯಥಾ ।। ೧-೪೭-೧

ವೈಶಂಪಾಯನನು ಹೇಳಿದನು: “ಬೇಸಗೆಯ ಕೊನೆಯಲ್ಲಿ ಮೋಡಗಳು ಹೇಗೋ ಹಾಗೆ ದಾನವರನ್ನು ಪುಷ್ಟಿಗೊಳಿಸಲು ಮಹಾಸುರ ಕಾಲನೇಮಿಯು ಮಹಾತೇಜಸ್ಸಿನಿಂದ ಬೆಳೆಯತೊಡಗಿದನು.

ತ್ರೈಲೋಕ್ಯಾಂತರ್ಗತಂ ತಂ ತು ದೃಷ್ಟ್ವಾ ತೇ ದಾನವೇಶ್ವರಾಃ ।
ಉತ್ತಸ್ಥುರಪರಿಶ್ರಾಂತಾಃ ಪ್ರಾಪ್ಯೇವಾಮೃತಮುತ್ತಮಮ್ ।। ೧-೪೭-೨

ಮೂರೂಲೋಕಗಳನ್ನು ಪಸರಿಸಿರುವ ಅವನನ್ನು ನೋಡಿ ದಾನವೇಶ್ವರರು ಉತ್ತಮ ಅಮೃತವನ್ನೇ ಪಡೆದುಕೊಂಡರೋ ಎನ್ನುವಂತೆ ಉತ್ಸಾಹದಿಂದ ಮೇಲೆದ್ದರು.

ತೇ ವೀತಭಯಸಂತ್ರಾಸಾ ಮಯತಾರಪುರೋಗಮಾಃ ।
ತಾರಕಾಮಯಸಂಗ್ರಾಮೇ ಸತತಂ ಜಯಕಾಂಕ್ಷಿಣಃ ।
ರೇಜುರಾಯೋಧನಗತಾ ದಾನವಾ ಯುದ್ಧಕಾಂಕ್ಷಿಣಃ ।। ೧-೪೭-೩

ತಾರಕಾಮಯಸಂಗ್ರದಲ್ಲಿ ಸತತವೂ ಜಯವನ್ನೇ ಬಯಸಿದ್ದ ಯುದ್ಧಕಾಂಕ್ಷಿಗಳಾಗಿದ್ದ ಮಯ-ತಾರ ಮೊದಲಾದವರು ಭಯವನ್ನು ತೊರೆದು ಯುದ್ಧದಲ್ಲಿ ನಿಂತು ರಾರಾಜಿಸಿದರು.

ಅಸ್ತ್ರಮಭ್ಯಸ್ಯತಾಂ ತೇಷಾಂ ವ್ಯೂಹಂ ಚ ಪರಿಧಾವತಾಮ್ ।
ಪ್ರೇಕ್ಷತಾಂ ಚಾಭವತ್ಪ್ರೀತಿರ್ದಾನವಂ ಕಾಲನೇಮಿನಮ್ ।। ೧-೪೭-೪

ದಾನವ ಕಾಲನೇಮಿಯನ್ನು ನೋಡಿ ಅಸ್ತ್ರಗಳ ಅಭ್ಯಾಸಗೈಯುತ್ತಾ ವ್ಯೂಹದಲ್ಲಿ ಸಂಚರಿಸುತ್ತಿದ್ದ ದೈತ್ಯರು ಅತ್ಯಂತ ಪ್ರೀತರಾದರು.

ಯೇ ತು ತತ್ರ ಮಯಸ್ಯಾಸನ್ಮುಖ್ಯಾ ಯುದ್ಧಪುರಃಸರಾಃ ।
ತೇಽಪಿ ಸರ್ವೇ ಭಯಂ ತ್ಯಕ್ತ್ವಾ ಹೃಷ್ಟಾ ಯೋದ್ಧುಮುಪಸ್ಥಿತಾಃ ।। ೧-೪೭-೫

ಅಲ್ಲಿದ್ದ ಮಯನ ಪ್ರಮುಖ ಸೇನಾಪತಿಗಳೆಲ್ಲರೂ ಭಯವನ್ನು ತೊರೆದು ಹರ್ಷ ಮತ್ತು ಉತ್ಸಾಹದೊಂದಿಗೆ ಯುದ್ಧಕ್ಕೆ ನಿಂತರು.

ಮಯಸ್ತಾರೋ ವರಾಹಶ್ಚ ಹಯಗ್ರೀವಶ್ಚ ವೀರ್ಯವಾನ್ ।
ವಿಪ್ರಚಿತ್ತಸುತಃ ಶ್ವೇತಃ ಖರಲಂಬಾವುಭಾವಪಿ ।। ೧-೪೭-೬
ಅರಿಷ್ಟೋ ಬಲಿಪುತ್ರಸ್ತು ಕಿಶೋರೋಷ್ಟ್ರೌ ತಥೈವ ಚ ।
ಸ್ವರ್ಭಾನುಶ್ಚಾಮರಪ್ರಖ್ಯೋ ವಕ್ರಯೋಧೀ ಮಹಾಸುರಃ ।। ೧-೪೭-೭
ಏತೇಽಸ್ತ್ರವಿದುಷಃ ಸರ್ವೇ ಸರ್ವೇ ತಪಸಿ ಸುವ್ರತಾಃ ।
ದಾನವಾಃ ಕೃತಿನೋ ಜಗ್ಮುಃ ಕಾಲನೇಮಿನಮುತ್ತಮಮ್ ।। ೧-೪೭-೮

ಮಯ, ತಾರ, ವರಾಹ, ಪರಾಕ್ರಮೀ ಹಯಗ್ರೀವ, ವಿಪ್ರಚಿತ್ತನ ಮಗ ಶ್ವೇತ, ಖರ ಮತ್ತು ಲಂಬ, ಬಲಿಪುತ್ರ ಅರಿಷ್ಠ, ಕಿಶೋರ, ಉಷ್ಟ್ರ ಮತ್ತು ದೇವತಾಸಮಾನ ತೇಜಸ್ವೀ ಮತ್ತು ಕುಟಿಲತೆಯಿಂದ ಯುದ್ಧಮಾಡುವ ಮಹಾನ್ ಅಸುರ ಸ್ವರ್ಭಾನು – ಈ ಎಲ್ಲ ಅಸ್ತ್ರವಿದರೂ ಮತ್ತು ನಿಯಮಪೂರ್ವಕ ತಪಸ್ಸನ್ನು ತಪಿಸಿದ್ದ ದಾನವರು ಉತ್ತಮ ಕಾಲನೇಮಿಯ ಬಳಿ ಸೇರಿದರು.

ತೇ ಗದಾಭಿಶ್ಚ ಗುರ್ವೀಭಿಶ್ಚಕ್ರೈಶ್ಚ ಸಪರಶ್ವಧೈಃ ।
ಅಶ್ಮಭಿಶ್ಚಾದ್ರಿಸದೃಶೈರ್ಗಂಡಶೈಲೈಶ್ಚ ದಂಶಿತೈಃ ।। ೧-೪೭-೯
ಪಟ್ಟಿಶೈರ್ಭಿಂದಿಪಾಲೈಶ್ಚ ಪರಿಘೈಶ್ಚೋತ್ತಮಾಯುಧೈಃ ।
ಘಾತನೀಭಿಶ್ಚ ಗುರ್ವೀಭಿಃ ಶತಘ್ನೀಭಿಸ್ತಥೈವ ಚ ।। ೧-೪೭-೧೦
ಕಾಲಕಲ್ಪೈಶ್ಚ ಮುಸಲೈಃ ಕ್ಷೇಪಣೀಯೈಶ್ಚ ಮುದ್ಗರೈಃ ।
ಯುಗೈರ್ಯಂತ್ರೈಶ್ಚ ನಿರ್ಮುಕ್ತೈರರ್ಗಲೈಶ್ಚಾಗ್ರತಾಡಿತೈಃ ।। ೧-೪೭-೧೧
ದೋರ್ಭಿಶ್ಚಾಯತಪೀನಾಂಸೈಃ ಪಾಶೈಃ ಪ್ರಾಸೈಶ್ಚ ಮೂರ್ಚ್ಛಿತೈಃ ।
ಸರ್ಪೈರ್ಲೇಲಿಹ್ಯಮಾನೈಶ್ಚ ವಿಸರ್ಪದ್ಭಿಶ್ಚ ಸಾಯಕೈಃ ।। ೧-೪೭-೧೨
ವಜ್ರೈಃ ಪ್ರಹರಣೀಯೈಶ್ಚ ದೀಪ್ಯಮಾನೈಶ್ಚ ತೋಮರೈಃ ।
ವಿಕೋಶೈಶ್ಚಾಸಿಭಿಸ್ತೀಕ್ಷ್ಣೈಃ ಶೂಲೈಶ್ಚ ಶಿತನಿರ್ಮಲೈಃ ।। ೧-೪೭-೧೩
ತೇ ವೈ ಸಂದೀಪ್ತಮನಸಃ ಪ್ರಗೃಹೀತೋತ್ತಮಾಯುಧಾಃ ।
ಕಾಲನೇಮಿಂ ಪುರಸ್ಕೃತ್ಯ ತಸ್ಥುಃ ಸಂಗ್ರಾಮಮೂರ್ಧನಿ ।। ೧-೪೭-೧೪

ಅವರೆಲ್ಲರೂ ಹರ್ಷದಿಂದ ಬೀಗಿದ ದಾನವರು ಕೈಯಲ್ಲಿ ಉತ್ತಮ ಆಯುಧಗಳನ್ನು ಹಿಡಿದು ಕಾಲನೇಮಿಯನ್ನು ಮುಂದಿಟ್ಟುಕೊಂಡು ಅವನ ಸೇನಾಪತ್ಯದಲ್ಲಿ ಯುದ್ಧಮಾಡಲು ಸಂಗ್ರಾಮದ ಮುಖದಲ್ಲಿ ನಿಂತರು. ಎಷ್ಟೋ ದಾನವರು ತಮ್ಮ ದಷ್ಟ ಪುಷ್ಟ ಭುಜಯುಕ್ತ ಕೈಗಳನ್ನೇ ಆಯುಧಗಳನ್ನಾಗಿ ಬಳಸಿದ್ದರು ಮತ್ತು ಅನೇಕ ದೈರ್ಯರು ಬಾರೀ ಗದೆ, ಚಕ್ರ, ಕೊಡಲಿ, ಪರ್ವತಸಮಾನ ಶಿಲೆಗಳ ದೊಡ್ಡ-ದೊಡ್ಡ ಬಂಡೆಗಲು, ವಜ್ರ ಮೊದಲಾದವುಗಳ ಆಘಾತದಿಂದ ಚೂರಾಗಿ ಬೀಳುತ್ತಿರುವ ಶಿಲಾಖಂಡಗಳು, ಪಟ್ಟಿಶ, ಭಿಂದಿಪಾಲ, ಪರಿಘ, ಉತ್ತಮ ಆಯುಧ, ಘಾತನಿಗಳು, ಗುರ್ವಿಗಳು, ಶತಘ್ನಿಗಳು, ಕಾಲಸಮಾನ ಭಯಂಕರ ಮುಸಲ, ಕ್ಷೇಪಣೀಯ, ಮುದ್ಗರ, ಯುಗ, ಹೊಡೆದು ವೇಗವಾಗಿ ಆಯುಧವನ್ನು ಎಸೆಯಬಲ್ಲ ಬಿಚ್ಚಿಟ್ಟ ಯಂತ್ರ, ಹರಡುವ ಪಾಶ, ನಾಲಿಗೆಯನ್ನು ಚಾಚುತ್ತಿರುವ ಸರ್ಪಗಳು, ತೀವ್ರಗತಿಯಿಂದ ಲಕ್ಷ್ಯದೆಡೆಗೆ ಹೋಗುವ ಬಾಣ, ಪ್ರಹರಿಸಲು ಯೋಗ್ಯವಾದ ವಜ್ರ, ದೀಪ್ತಿಮಾನ ತೋಮರ, ಬಿಚ್ಚಿಟ್ಟ ತೀಕ್ಷ್ಣ ಖಡ್ಗ, ಮತ್ತು ಬೆಳಗುತ್ತಿರುವ ಹರಿತಾದ ಶೂಲ ಮೊದಲಾದ ಅಸ್ತ್ರ-ಶಸ್ತ್ರಗಳಿಂದ ಸಂಪನ್ನರಾಗಿ ಯುದ್ಧಕ್ಕೆ ನಿಂತರು.

ಸಾ ದೀಪ್ತಶಸ್ತ್ರಪ್ರವರಾ ದೈತ್ಯಾನಾಂ ಶುಶುಭೇ ಚಮೂಃ ।
ದ್ಯೌರ್ನಿಮೀಲಿತನಕ್ಷತ್ರಾ ಸಘನೇವಾಂಬುದಾಗಮೇ ।। ೧-೪೭-೧೫

ಪ್ರಜ್ವಲಿಸುತ್ತಿದ್ದ ಪ್ರವರ ಶಸ್ತ್ರಗಳನ್ನು ಹಿಡಿದಿದ್ದ ದೈತ್ಯರ ಆ ಸೇನೆಯು ವರ್ಷಾಕಾಲದ ಘನ ಮೇಘಗಳಂತೆ ಮತ್ತು ಆಕಾಶದಲ್ಲಿ ಮಿನುಗುತ್ತಿರುವ ನಕ್ಷತ್ರಗಳಂತೆ ಕಾಣುತ್ತಿತ್ತು.

ದೇವತಾನಾಮಪಿ ಚಮೂ ರುರುಚೇ ಶಕ್ರಪಾಲಿತಾ ।
ದೀಪ್ತಾ ಶೀತೋಷ್ಣತೇಜೋಭ್ಯಾಂ ಚಂದ್ರಭಾಸ್ಕರವರ್ಚಸಾ ।। ೧-೪೭-೧೬

ಶಕ್ರಪಾಲಿತ ದೇವತೆಗಳ ಸೇನೆಯೂ ಕೂಡ ಶೀತ ಮತ್ತು ಉಷ್ಣ ತೇಜಸ್ಸುಗಳಿಂದ ಪ್ರದೀಪ್ತವಾಗಿ ಚಂದ್ರ-ಭಾಸ್ಕರರ ವರ್ಚಸ್ಸಿನಿಂದ ಕಂಗೊಳಿಸುತ್ತಿತ್ತು.

ವಾಯುವೇಗವತೀ ಸೌಮ್ಯಾ ತಾರಾಗಣಪತಾಕಿನೀ ।
ತೋಯದಾವಿದ್ಧವಸನಾ ಗ್ರಹನಕ್ಷತ್ರಹಾಸಿನೀ ।। ೧-೪೭-೧೭
ಯಮೇಂದ್ರಧನದೈರ್ಗುಪ್ತಾ ವರುಣೇನ ಚ ಧೀಮತಾ ।
ಸಂಪ್ರದೀಪ್ತಾಗ್ನಿಪವನಾ ನಾರಾಯಣಪರಾಯಣಾ ।। ೧-೪೭-೧೮
ಸಾ ಸಮುದ್ರೌಘಸದೃಶೀ ದಿವ್ಯಾ ದೇವಮಹಾಚಮೂಃ ।
ರರಾಜಾಸ್ತ್ರವತೀ ಭೀಮಾ ಯಕ್ಷಗಂಧರ್ವಶಾಲಿನೀ ।। ೧-೪೭-೧೯

ವಾಯುವಿನ ವೇಗವನ್ನು ಹೊಂದಿದ್ದ ಮತ್ತು ಸೌಮ್ಯವಾಗಿದ್ದ ದೇವತೆಗಳ ಆ ದಿವ್ಯ ವಿಶಾಲ ಸೇನೆಯು ತಾರಾಗಣಗಳ ಪತಾಕೆಯನ್ನು ಹೊಂದಿತ್ತು. ಮೇಘಮಯ ವಸ್ತ್ರಗಳನ್ನು ಧರಿಸಿತ್ತು ಮತ್ತು ಗ್ರಹನಕ್ಷತ್ರಗಳಂಥಹ ಶುಭ್ರ ನಗೆಯಿತ್ತು. ಯಮ-ಇಂದ್ರ-ಧನದ ಮತ್ತು ಧೀಮತ ವರುಣರಿಂದ ರಕ್ಷಿಸಲ್ಪಟ್ಟಿತ್ತು. ಪ್ರದೀಪ್ತರಾದ ಅಗ್ನಿ ಮತ್ತು ಪವನರಿದ್ದರು. ನಾರಾಯಣನ ಆಶ್ರಯವನ್ನು ಪಡೆದಿತ್ತು. ನೋಡಲು ಅಲೆಗಳಿಂದ ಕೂಡಿದ ಸಮುದ್ರದಂತೆ ತೋರುತ್ತಿತ್ತು. ಅಸ್ತ್ರಗಳಿಂದ ಭಯಂಕರವಾಗಿ ರಾರಾಜಿಸುತ್ತಿತ್ತು. ಯಕ್ಷ-ಗಂಧರ್ವರಿಂದ ಕೂಡಿತ್ತು.

ತಯೋಶ್ಚಂಬೋಸ್ತದಾ ತತ್ರ ಬಭೂವ ಸ ಸಮಾಗಮಃ ।
ದ್ಯಾವಾಪೃಥಿವ್ಯೋಃ ಸಂಯೋಗೋ ಯಥಾ ಸ್ಯಾದ್ಯುಗಪರ್ಯಯೇ ।। ೧-೪೭-೨೦

ಯುಗಾಂತದಲ್ಲಿ ಧ್ಯುರ್ಲೋಕ ಮತ್ತು ಭೂಲೋಕಗಳು ಪರಸ್ಪರ ತಾಗಿ ಹೊಡೆದುಕೊಳ್ಳುವಂತೆ ಆ ಎರಡು ಸೇನೆಗಳ ನಡುವೆ ಸಂಘರ್ಷಣೆಯು ಪ್ರಾರಂಭವಾಯಿತು.

ತದ್ಯುದ್ಧಮಭವದ್ಘೋರಂ ದೇವದಾನವಸಂಕುಲಮ್ ।
ಕ್ಷಮಾಪರಾಕ್ರಮಮಯಂ ದರ್ಪಸ್ಯ ವಿನಯಸ್ಯ ಚ ।। ೧-೪೭-೨೧

ದೇವದಾನವ ಸಂಕುಲಗಳ, ಕ್ಷಮಾ-ಪರಾಕ್ರಮಗಳ ಮತ್ತು ದರ್ಪ-ವಿನಯಗಳ ಆ ಯುದ್ಧವು ಘೋರವಾಗಿತ್ತು.

ನಿಶ್ಚಕ್ರಮುರ್ಬಲಾಭ್ಯಾಂ ತು ತಾಭ್ಯಾಂ ಭೀಮಾಃ ಸುರಾಸುರಾಃ ।
ಪೂರ್ವಾಪರಾಭ್ಯಾಂ ಸಂರಬ್ಧಾಃ ಸಾಗರಾಭ್ಯಾಮಿವಾಂಬುದಾಃ ।। ೧-೪೭-೨೨

ಸುರಾಸುರರ ಆ ಭಯಂಕರ ಸೇನೆಗಳು ಪೂರ್ವ-ಪಶ್ಚಿಮ ಸಮುದ್ರಗಳ ಮೇಲೆ ಕ್ಷುಬ್ಧ ಮೋಡಗಳು ಪ್ರಕಟವಾಗುವಂತೆ ಯುದ್ಧಕ್ಕೆ ಹೊರಟವು.

ತಾಭ್ಯಾಂ ಬಲಾಭ್ಯಾಂ ಸಂಹೃಷ್ಟಾಶ್ಚೇರುಸ್ತೇ ದೇವದಾನವಾಃ ।
ವನಾಭ್ಯಾಂ ಪಾರ್ವತೀಯಾಭ್ಯಾಂ ಪುಷ್ಪಿತಾಭ್ಯಾಂ ಯಥಾ ಗಜಾಃ ।। ೧-೪೭-೨೩

ಪರ್ವತದ ಪುಷ್ಪಿತ ವನಗಳಿಂದ ಬಂದ ಆನೆಗಳ ಹಿಂಡಿನಂತೆ ಆ ದೇವದಾನವ ಸೇನೆಗಳು ಸಂಹೃಷ್ಟವಾಗಿದ್ದವು.

ಸಮಾಜಗ್ಮುಸ್ತತೋ ಭೇರೀಃ ಶಂಖಾನ್ ದಧ್ಮುಶ್ಚ ನೈಕಶಃ ।
ಸ ಶಬ್ದೋ ದ್ಯಾಂ ಭುವಂ ಚೈವ ದಿಶಶ್ಚ ಸಮಪೂರಯತ್ ।। ೧-೪೭-೨೪

ಅಗ ಅನೇಕ ಭೇರಿಗಳನ್ನು ಬಾರಿಸಲಾಯಿತು ಮತ್ತು ಶಂಖಗಳನ್ನು ಊದಲಾಯಿತು. ಆ ಶಬ್ದವು ಆಕಾಶ, ಭೂಮಿ ಮತ್ತು ದಿಕ್ಕುಗಳೆಲ್ಲ ಮೊಳಗಿತು.

ಜ್ಯಾಘಾತತಲನಿರ್ಘೋಷೋ ಧನುಷಾಂ ಕೂಜಿತಾನಿ ಚ ।
ದುಂದುಭೀನಾಂ ನಿನದತಾಂ ದೈತ್ಯಾನಾಂ ನಿರ್ದಧುಃ ಸ್ವನಾನ್ ।। ೧-೪೭-೨೫

ಶಿಂಜನಿಯ ಸೆಳೆತದ ಮತ್ತು ಧನುಸ್ಸಿನ ಟೇಂಕಾರಗಳ ನಿರ್ಘೋಷ, ದುಂದುಭಿಗಳ ನಿನಾದಗಳನ್ನು ದೈತ್ಯರ ಗರ್ಜನೆಗಳು ಮುಳುಗಿಸಿಬಿಟ್ಟವು.

ತೇಽನ್ಯೋನ್ಯಮಭಿಸಂಪೇತುಃ ಪಾತಯಂತಃ ಪರಸ್ಪರಮ್ ।
ಬಭಂಜುರ್ಬಾಹುಭಿರ್ಬಾಹೂನ್ ದ್ವಂದ್ವಮನ್ಯೇ ಯುಯುತ್ಸವಃ।। ೧-೪೭-೨೬

ಅವರು ಪರಸ್ಪರರನ್ನು ಬೀಳಿಸುತ್ತಾ ಅನ್ಯೋನರ ಮೇಲೆ ಎರಗಿದರು. ದ್ವಂದ್ವಯುದ್ಧದಲ್ಲಿ ಉತ್ಸುಕರಾದವರು ತಮ್ಮ ಬಾಹುಗಳಿಂದಲೇ ಶತ್ರುಗಳ ಭುಜಗಳನ್ನು ಮುರಿದರು.

ದೇವತಾಸ್ತ್ವಶನೀರ್ಘೋರಾಃ ಪರಿಘಾಂಶ್ಚೋತ್ತಮಾಯಸಾನ್ ।
ಸಸರ್ಜುರಾಜೌ ನಿಸ್ತ್ರಿಂಶಾನ್ಗದಾ ಗುರ್ವೀಂಶ್ಚ ದಾನವಾಃ ।। ೧-೪೭-೨೭

ದೇವತೆಗಳು ಘೊರ ವಜ್ರಗಳನ್ನು ಮತ್ತು ಉತ್ತಮ ಉಕ್ಕಿನ ಪರಿಘಗಳನ್ನು ಪ್ರಯೋಗಿಸತೊಡಗಿದರು ಮತ್ತು ದಾನವರು ಅವರ ಮೇಲೆ ಹರಿತ ಖಡ್ಗಗಳನ್ನು ಮತ್ತು ಭಾರೀ ಗದೆಗಳನ್ನು ಪ್ರಹರಿಸತೊಡಗಿದರು.

ಗದಾನಿಪಾತೈರ್ಭಗ್ನಾಂಗಾ ಬಾಣೈಶ್ಚ ಶಕಲೀಕೃತಾಃ ।
ಪರಿಪೇತುರ್ಭೃಶಂ ಕೇಚಿನ್ಯುಬ್ಜಾಃ ಕೇಚಿತ್ಸಸರ್ಜಿರೇ ।। ೧-೪೭-೨೮

ಗದೆಗಳ ಪ್ರಹಾರದಿಂದ ಎಷ್ಟೋ ಯೋದ್ಧರ ಅಂಗಗಳು ಭಗ್ನವಾದವು ಮತ್ತು ಬಾಣಗಳಿಂದ ಚೂರು ಚೂರಾದವು. ಕೆಲವರು ಅತಿಯಾಗಿ ಗಾಯಗೊಂಡು ಭೂಮಿಯ ಮೇಲೆ ಬಿದ್ದರೆ ಇನ್ನು ಕೆಲವರು ಬೆನ್ನುಮೇಲೆ ಮತ್ತು ಮುಖಕೆಳಗೆ ಮಾಡಿ ಬಿದ್ದರು.

ತತೋ ರಥೈಃ ಸತುರಗೈರ್ವಿಮಾನೈಶ್ಚಾಶುಗಾಮಿಭಿಃ ।
ಸಮೀಯುಸ್ತೇ ತು ಸಂರಬ್ಧಾ ರೋಷಾದನ್ಯೋನ್ಯಮಾಹವೇ ।। ೧-೪೭-೨೯

ಅನಂತರ ತುರಗಗಳನ್ನು ಕಟ್ಟಿದ ರಥಗಳಲ್ಲಿ ಮತ್ತು ಶೀಘ್ರಗಾಮೀ ವಿಮಾನಗಳಲ್ಲಿ ಕುಳಿತು ಆ ರಣಾಂಗಣದಲ್ಲಿ ರೋಷದಿಂದ ಮುಂದುವರೆದು ಅನ್ಯೋನ್ಯರನ್ನು ಆಕ್ರಮಣಿಸಿದರು.

ಸಂವರ್ತಮಾನಾಃ ಸಮರೇ ವಿವರ್ತಂತಸ್ತಥಾಪರೇ ।
ರಥಾ ರಥೈರ್ನಿರುಧ್ಯಂತೇ ಪದಾತಾಶ್ಚ ಪದಾತಿಭಿಃ ।। ೧-೪೭-೩೦

ಸಮರದಲ್ಲಿ ಒಂದು ಪಕ್ಷವು ಮುನ್ನುಗ್ಗುತ್ತಿದ್ದರೆ ಇನ್ನೊಂದು ಪಕ್ಷವು ಹಿಮ್ಮೆಟ್ಟುತ್ತಿತ್ತು. ರಥಗಳನ್ನು ರಥಗಳೂ ಪದಾತಿಗಳನ್ನು ಪದಾತಿಗಳೂ ತಡೆಯುತ್ತಿದ್ದರು.

ತೇಷಾಂ ರಥಾನಾಂ ತುಮುಲಃ ಸ ಶಬ್ದಃ ಶಬ್ದವಾಹಿನಾಮ್ ।
ಬಭೂವಾಥ ಪ್ರಶಕ್ತಾನಾಂ ನಭಸೀವ ಪಯೋಮುಚಾಮ್ ।। ೧-೪೭-೩೧

ಗಡ-ಗಡಾ ಶಬ್ಧಮಾಡುತ್ತಿರುವ ಅವರ ರಥಗಳ ತುಮುಲ ಶಬ್ದವು ಅಕಾಶದಲ್ಲಿ ಪರಸ್ಪರ ಟಕರಾಯುವ ಮೋಡಗಳ ಗಡಗಡಾ ಶಬ್ಧಕ್ಕೆ ಸಮನಾಗಿತ್ತು.

ಬಭಾಂಜಿರೇ ರಥಾನ್ಕೇಚಿತ್ಕೇಚಿತ್ಸಂಮೃದಿತಾ ರಥೈಃ ।
ಸಂಬಾಧಮೇಕೇ ಸಂಪ್ರಾಪ್ಯ ನ ಶೇಕುಶ್ಚಲಿತುಂ ರಥಾಃ ।। ೧-೪೭-೩೨

ಕೆಲವರು ರಥಗಳನ್ನು ತುಂಡುಮಾಡಿದರು. ಕೆಲವರು ರಥಗಳಿಗೆ ಸಿಲುಕಿ ಮುದ್ದೆಯಾದರು. ಕೆಲವು ರಥಗಳು ಇತರ ರಥಗಳ ಎದುರು ಬಂದು ಮುಂದೆ ಚಲಿಸಲಾರದಂತಾದವು.

ಅನ್ಯೋನ್ಯಸ್ಯಾಭಿಸಮರೇ ದೋರ್ಭ್ಯಾಮುತ್ಕ್ಷಿಪ್ಯ ದರ್ಪಿತಾಃ ।
ಸಂಹ್ರಾದಮಾನಾಭರಣಾ ಜಘ್ನುಸ್ತತ್ರಾಸಿಚರ್ಮಿಣಃ ।। ೧-೪೭-೩೩

ದರ್ಪಿತ ಯೋದ್ಧರು ಸಮರದಲ್ಲಿ ಅನ್ಯೋನ್ಯರನ್ನು ಎರಡೂ ಕೈಗಳಿಂದ ದಬ್ಬಿ ತಳ್ಳಿ ಮುಂದುವರೆಯುತ್ತಿದ್ದರು. ಖಡ್ಗ-ಗುರಾಣಿಗಳಿಂದ ಇತರರನ್ನು ಸಂಹರಿಸುತ್ತಿದ್ದಾಗ ಅವರ ಆಭರಣಗಳು ಝಣ-ಝಣ ಶಬ್ದಮಾಡುತ್ತಿದ್ದವು.

ಅಸ್ತ್ರೈರನ್ಯೇ ವಿನಿರ್ಭಿನ್ನಾ ರಕ್ತಂ ವೇಮುರ್ಹತಾ ಯುಧಿ ।
ಕ್ಷರಜ್ಜಲಾನಾಂ ಸದೃಶಾ ಜಲದಾನಾಂ ಸಮಾಗಮೇ ।। ೧-೪೭-೩೪

ಅನ್ಯರು ಯುದ್ಧದಲ್ಲಿ ಅಸ್ತ್ರಗಳ ಆಘಾತಗಳಿಂದ ಒಡೆಯಲ್ಪಟ್ಟು ವರ್ಷಾಕಾಲದಲ್ಲಿ ಮೇಘಸಮೂಹಗಳು ತಾಗಿ ಮಳೆಸುರಿಸುವಂತೆ ರಕ್ತವನ್ನು ಸುರಿಸುತ್ತಿದ್ದರು.

ತದಸ್ತ್ರಶಸ್ತ್ರಗ್ರಥಿತಂ ಕ್ಷಿಪ್ತೋತ್ಕ್ಷಿಪ್ತಗದಾವಿಲಮ್ ।
ದೇವದಾನವಸಂಕ್ಷುಬ್ಧಂ ಸಂಕುಲಂ ಯುದ್ಧಮಾಬಭೌ ।। ೧-೪೭-೩೫

ಅಸ್ತ್ರ-ಶಸ್ತ್ರಗಳು ಒಂದಕ್ಕೊಂದು ಸೇರಿ ಗಂಟಾಗಿದ್ದವು. ಮೇಲೆ ಎಸೆಯಲ್ಪಟ್ಟ ಗದೆಗಳಿಂದ ತುಂಬಿಹೋಗಿತ್ತು. ಸಂಕ್ಷುಬ್ಧ ದೇವದಾನವ ಸಂಕುಲಯುದ್ಧವು ಘೋರವಾಯಿತು.

ತದ್ದಾನವಮಹಾಮೇಘಂ ದೇವಾಯುಧತಡಿತ್ಪ್ರಭಮ್ ।
ಅನ್ಯೋನ್ಯಬಾಣವರ್ಷಂ ತದ್ಯುದ್ಧಂ ದುರ್ದಿನಮಾಬಭೌ ।। ೧-೪೭-೩೬

ದಾನವ ಸೇನೆಯು ಮಹಾಮೇಘದಂತಿತ್ತು. ದೇವತೆಗಳು ಆಯುಧಗಳು ಮಿಂಚಿನಂತೆ ಹೊಳೆಯುತ್ತಿದ್ದವು. ಅನ್ಯೋನ್ಯರ ಮೇಲೆ ಸುರಿಸುತ್ತಿದ್ದ ಬಾಣವರ್ಷಗಳಿಂದ ಕೂಡಿದ ಆ ಯುದ್ಧವು ದುರ್ದಿನದಂತೆ ತೋರುತ್ತಿತ್ತು.

ಏತಸ್ಮಿನ್ನಂತರೇ ಕ್ರುದ್ಧಃ ಕಾಲನೇಮಿರ್ಮಹಾಸುರಃ ।
ವ್ಯವರ್ಧತ ಸಮುದ್ರೌಘೈಃ ಪೂರ್ಯಮಾಣ ಇವಾಂಬುದಃ ।। ೧-೪೭-೩೭

ಈ ಮಧ್ಯೆ ಕ್ರುದ್ಧ ಮಹಾಸುರ ಕಾಲನೇಮಿಯು ಸಮುದ್ರದ ಜಲರಾಶಿಯಿಂದ ಪರಿಪೂರ್ಣವಾದ ಮೇಘದಂತೆ ತನ್ನ ವಿಶಾಲರೂಪವನ್ನು ಪ್ರಕಟಗೊಳಿಸಿದನು.

ತಸ್ಯ ವಿದ್ಯುಚ್ಚಲಾಪೀಡಾಃ ಪ್ರದೀಪ್ತಾಶನಿವರ್ಷಿಣಃ ।
ಗಾತ್ರೇ ನಗಶಿರಃಪ್ರಖ್ಯಾ ವಿನಿಷ್ಪೇಷುರ್ಬಲಾಹಕಾಃ ।। ೧-೪೭-೩೮

ಮಸ್ತಕದಲ್ಲಿ ವಿದ್ಯುತ್ತಿನ ಚಂಚಲ ಆಭೂಷಣವನ್ನು ಧರಿಸಿದ್ದ, ಪ್ರಜ್ವಲಿತ ವಜ್ರದ ಮಳೆಯನ್ನು ಸುರಿಸುತ್ತಿದ್ದ, ಪರ್ವತಶಿಖರದಂತೆ ವಿಶಾಲವಾಗಿದ್ದ ಮೇಘಗಳು ಅವನಿಗೆ ತಾಗಿ ಚೂರುಚೂರಾಗುತ್ತಿದ್ದವು.

ಕ್ರೋಧಾನ್ನಿಃಶ್ವಸತಸ್ತಸ್ಯ ಭ್ರೂಭೇದಸ್ವೇದವರ್ಷಿಣಃ ।
ಸಾಗ್ನಿನಿಷ್ಪೇಷಪವನಾ ಮುಖಾನ್ನಿಶ್ಚೇರುರರ್ಚಿಷಃ ।। ೧-೪೭-೩೯

ಕ್ರೋಧದಿಂದ ಅವನು ದೀರ್ಘ ನಿಶ್ವಾಸವನ್ನು ಬಿಡುವಾಗ ಅವನ ಹುಬ್ಬಿನ ಮಧ್ಯದಿಂದ ಬೆವರಿನ ಮಳೆಯೇ ಸುರಿಯುತ್ತಿತ್ತು ಮತ್ತು ಅವನ ಮುಖದಿಂದ ವಜ್ರ ಮತ್ತು ಪ್ರಚಂಡ ವಾಯುಯುಕ್ತ ಅಗ್ನಿಜ್ವಾಲೆಗಳು ಹೊರಬೀಳುತ್ತಿದ್ದವು.

ತಿರ್ಯಗೂರ್ಧ್ವಂ ಚ ಗಗನೇ ವವೃಧುಸ್ತಸ್ಯ ಬಾಹವಃ ।
ಪಂಚಾಸ್ಯಾಃ ಕೃಷ್ಣವಪುಷೋ ಲೇಲಿಹಾನಾ ಇವೋರಗಾಃ ।। ೧-೪೭-೪೦

ಅವನ ಬಾಹುಗಳು ಗಗನದಲ್ಲಿ ವಕ್ರವಾಗಿ ಮತ್ತು ಊರ್ಧ್ವಮುಖವಾಗಿ ಬೆಳೆಯತೊಡಗಿದವು. ಅವು ಕಪ್ಪು ವರ್ಣದ ಐದುಹೆಡೆಯ ಸರ್ಪವು ತನ್ನ ನಾಲಿಗೆಗಳನ್ನು ಚಾಚುತ್ತಿರುವಂತೆ ತೋರುತ್ತಿದ್ದವು.

ಸೋಽಸ್ತ್ರಜಾಲೈರ್ಬಹುವಿಧೈರ್ಧನುರ್ಭಿಃ ಪರಿಘೈರಪಿ ।
ದಿವ್ಯೈರಾಕಾಶಮಾವವ್ರೇ ಪರ್ವತೈರುಚ್ಛ್ರಿತೈರಿವ ।। ೧-೪೭-೪೧

ಅವನು ಪ್ರಯೋಗಿಸಿದ ಬಹುವಿಧದ ದಿವ್ಯ ಅಸ್ತ್ರಜಾಲಗಳು ಧನುಸ್ಸುಗಳು ಮತ್ತು ಪರಿಘಗಳು ಎತ್ತರ ಪರ್ವತಗಳಂತೆ ಆಕಾಶವನ್ನು ಮುಚ್ಚಿಬಿಟ್ಟವು.

ಸೋಽನಿಲೋದ್ಧೂತವಸನಸ್ತಸ್ಥೌ ಸಂಗ್ರಾಮಮೂರ್ಧನಿ ।
ಸಂಧ್ಯಾತಪಗ್ರಸ್ತಶಿಖಃ ಸಾರ್ಚಿರ್ಮೇರುರಿವಾಪರಃ ।। ೧-೪೭-೪೨

ಸಂಗ್ರಾಮಮೂರ್ಧನಿಯಲ್ಲಿ ಗಾಳಿಯು ಬೀಸುವುದರಿಮ್ದ ಅವನ ವಸ್ತ್ರಗಳು ಹಾರಾಡುತ್ತಿದ್ದವು. ಆಗ ಅವನು ಸಂಧ್ಯಾಕಾಲದ ಬಿಸಿಲು ಬಿದ್ದು ಪ್ರಕಾಶಿತಗೊಂಡ ಶಿಖರವುಳ್ಳ ಎರಡನೇ ಮೇರು ಪರ್ವತದಂತೆ ಶೋಭಿಸುತ್ತಿದ್ದನು.

ಊರುವೇಗಪ್ರತಿಕ್ಷಿಪ್ತೈಃ ಶೈಲಶೃಂಗಾಗ್ರಪಾದಪೈಃ ।
ಅಪಾತಯದ್ದೇವಗಣಾನ್ವಜ್ರೇಣೇವ ಮಹಾಗಿರೀನ್ ।। ೧-೪೭-೪೩

ತನ್ನ ತೊಡೆಗಳ ವೇಗದಿಂದ ಎಸೆಯಲ್ಪಟ್ಟ ಶೈಲಶೃಂಗಗಳಿಂದ ಮತ್ತು ವೃಕ್ಷಗಳಿಂದ ಅವನು ವಜ್ರದಿಂದ ಮಹಾಗಿರಿಗಳನ್ನು ಹೇಗೋ ಹಾಗೆ ದೇವಗಣಗಳನ್ನು ಕೆಳಗುರುಳಿಸಿದನು.

ಬಾಹುಭಿಃ ಶಸ್ತ್ರನಿಸ್ತ್ರಿಂಶೈಶ್ಛಿನ್ನಭಿನ್ನಶಿರೋರಸಃ ।
ನ ಶೇಕುಶ್ಚಲಿತುಂ ದೇವಾಃ ಕಾಲನೇಮಿಹತಾ ಯುಧಿ ।। ೧-೪೭-೪೪

ಯುದ್ಧದಲ್ಲಿ ಕಾಲನೇಮಿಯಿಂದ ಗಾಯಗೊಮ್ಡ ದೇವತೆಗಳು ಚಲಿಸಲೂ ಶಕ್ಯರಾಗದೇ ಹೋದರು. ಅವನ ಭುಜಗಳ ಆಘಾತದಿಂದ ಮತ್ತು ಶಸ್ತ್ರ-ಖಡ್ಗಗಳ ಹೊಡೆತದಿಂದ ಅವರ ಮಸ್ತಕ-ವಕ್ಷಸ್ಥಳಗಳು ಛಿನ್ನ-ಭಿನ್ನವಾಗಿ ಹೋದವು.

ಮುಷ್ಟಿಭಿರ್ನಿಹತಾಃ ಕೇಚಿತ್ಕೇಚ್ಚಿಚ್ಚ ವಿದಲೀಕೃತಾಃ ।
ಯಕ್ಷಗಂಧರ್ವಪತಯಃ ಪೇತುಃ ಸಹ ಮಹೋರಗೈಃ ।। ೧-೪೭-೪೫

ಎಷ್ಟೋ ಮಂದಿ ಯಕ್ಷ-ಗಂಧರ್ವಪಥಿಗಳು ಮಹಾ ಉರಗಗಳೊಂದಿಗೆ ಅವನ ಮುಷ್ಟಿಯಿಂದ ಹತರಾದರು. ಕೆಲವರು ಮುದ್ದೆಮುದ್ದೆಯಾಗಿ ಭೂಮಿಯಮೇಲೆ ಬಿದ್ದರು.

ತೇನ ವಿತ್ರಾಸಿತಾ ದೇವಾಃ ಸಮರೇ ಕಾಲನೇಮಿನಾ ।
ನ ಶೇಕುರ್ಯತ್ನವಂತೋಽಪಿ ಪ್ರತಿಕರ್ತುಂ ವಿಚೇತಸಃ ।। ೧-೪೭-೪೬

ಸಮರದಲ್ಲಿ ಆ ಕಾಲನೇಮಿಯಿಂದ ಭಯಭೀತರಾದ ದೇವತೆಗಳು ವಿಚೇತಸರಾಗಿ ಪ್ರತೀಕಾರವನ್ನೆಸಗಳು ಮತ್ತು ಯತ್ನಿಸಲೂ ಸಾಧ್ಯವಾಗದೇ ಹೋದರು.

ತೇನ ಶಕ್ರಃ ಸಹಸ್ರಾಕ್ಷಃ ಸ್ತಂಭಿತಃ ಶರಬಂಧನೈಃ ।
ಐರಾವತಗತಃ ಸಂಖ್ಯೇ ಚಲಿತುಂ ನ ಶಶಾಕ ಹ । ೧-೪೭-೪೭

ಅವನು ಐರಾವತದ ಮೇಲಿದ್ದ ಸಹಸ್ರಾಕ್ಷ ಶಕ್ರನನ್ನು ಶರಬಂಧನಗಳಿಂದ ಸ್ತಂಭಿತಗೊಳಿಸಿದನು. ಆಗ ಅವನಿಗೆ ರಣದಲ್ಲಿ ಚಲಿಸಲೂ ಸಾಧ್ಯವಾಗಲಿಲ್ಲ.

ನಿರ್ಜಲಾಂಭೋದಸದೃಶೋ ನಿರ್ಜಲಾರ್ಣವಸಪ್ರಭಃ ।
ನಿರ್ವ್ಯಾಪಾರಃ ಕೃತಸ್ತೇನ ವಿಪಾಶೋ ವರುಣೋ ಮೃಧೇ ।। ೧-೪೭-೪೮

ಕಾಲನೇಮಿಯು ರಣಾಂಗಣದಲ್ಲಿ ವರುಣನ ಪಾಶವನ್ನು ಕಸಿದುಕೊಂಡು ಅವನ ಯುದ್ಧವಿಷಯಕ ವ್ಯಾಪಾರವೆಲ್ಲವನ್ನೂ ಮುಚ್ಚಿಬಿಟ್ಟನು. ಆಗ ವರುಣನು ನಿರ್ಜಲ ಮೇಘದಂತೆ ಮತ್ತು ನೀರಿಲ್ಲದ ಸಮುದ್ರದಂತೆ ಕಾಂತಿಹೀನನಾಗಿಬಿಟ್ಟನು.

ರಣೇ ವೈಶ್ರವಣಸ್ತೇನ ಪರಿಘೈಃ ಕಾಲರೂಪಿಭಿಃ ।
ವ್ಯಲಪಲ್ಲೋಕಪಾಲೇಶಾಸ್ತ್ಯಾಜಿತೋ ಧನದಕ್ರಿಯಾಮ್ ।। ೧-೪೭-೪೯

ರಣದಲ್ಲಿ ಅವನ ಕಾಲರೂಪೀ ಪರಿಘಗಳಿಂದ ಪೆಟ್ಟುತಿಂದ ಲೋಕಪಾಲ ವೈಶ್ರವಣನು ರೋದಿಸತೊಡಗಿದನು ಮತ್ತು ಧನಾಧ್ಯಕ್ಷನ ಕಾರ್ಯವನ್ನು ತ್ಯಜಿಸಿಬಿಟ್ಟನು.

ಯಮಃ ಸರ್ವಹರಸ್ತೇನ ದಂಡಪ್ರಹರಣೋ ರಣೇ ।
ಯಾಮ್ಯಾಮವಸ್ಥಾಂ ಸಮರೇ ನೀತಃ ಸ್ವಾಂ ದಿಶಮಾವಿಶತ್ ।। ೧-೪೭-೫೦

ಸರ್ವರ ಪ್ರಾಣಗಳನ್ನೂ ಅಪಹರಿಸುವ ಯಮನು ರಣದಲ್ಲಿ ಕಾಲನೇಮಿಯ ದಂಡಪ್ರಹಾರದಿಂದ ಅಚೇತನನಾಗಿ ಭಯಭೀತನಾಗಿ ತನ್ನ ದಕ್ಷಿಣದಿಕ್ಕನ್ನು ಪ್ರವೇಶಿಸಿಬಿಟ್ಟನು.

ಸ ಲೋಕಪಾಲಾನುತ್ಸಾದ್ಯ ಕೃತ್ವಾ ತೇಷಾಂ ಚ ಕರ್ಮ ತತ್ ।
ದಿಕ್ಷು ಸರ್ವಾಸು ದೇಹಂ ಸ್ವಂ ಚತುರ್ಧಾ ವಿದಧೇ ತದಾ ।। ೧-೪೭-೫೧

ಹೀಗೆ ಸಮಸ್ತ ಲೋಕಪಾಲರನ್ನೂ ದೂರಕ್ಕೆ ಓಡಿಸಿ ಆವನು ಅವರೆಲ್ಲರ ಕಾರ್ಯವನ್ನೂ ತನ್ನ ಕೈಗೆ ತೆಗೆದುಕೊಂಡನು. ಮತ್ತು ಸಂಪೂರ್ಣ ದಿಕ್ಕುಗಳಲ್ಲಿ ತನ್ನನ್ನು ಸ್ಥಾಪಿಸಿಕೊಳ್ಳಲು ತನ್ನ ಶರೀರವನ್ನು ನಾಲ್ಕು ಪ್ರಕಾರಗಳಲ್ಲಿ ಮಾಡಿಕೊಂಡನು.

ಸ ನಕ್ಷತ್ರಪಥಂ ಗತ್ವಾ ದಿವ್ಯಂ ಸ್ವರ್ಭಾನುದರ್ಶಿತಮ್ ।
ಜಹಾರ ಲಕ್ಷ್ಮೀಮ್ಸೋಮಸ್ಯ ತಂ ಚಾಸ್ಯ ವಿಷಯಂ ಮಹತ್ ।। ೧-೪೭-೫೨

ಅವನು ರಾಹುವು ತೋರಿಸಿಕೊಟ್ಟ ದಿವ್ಯ ನಕ್ಷತ್ರಪಥದಲ್ಲಿ ಹೋಗಿ ರಾಜಾ ಸೋಮನ ರಾಜಲಕ್ಷ್ಮಿ ಮತ್ತು ಅವನ ವಿಶಾಲ ರಾಜ್ಯವನ್ನೂ ಅಪಹರಿಸಿಬಿಟ್ಟನು.

ಚಾಲಯಾಮಾಸ ದೀಪ್ತಾಂಶುಂ ಸ್ವರ್ಗದ್ವಾರಾಚ್ಚ ಭಾಸ್ಕರಮ್ ।
ಸಾಯನಂ ಚಾಸ್ಯ ವಿಷಯಂ ಜಹಾರ ದಿನಕರ್ಮ ಚ ।। ೧-೪೭-೫೩

ಅವನು ದೀಪ್ತಾಂಶು ಭಾಸ್ಕರನನ್ನು ಸ್ವರ್ಗದ ದ್ವಾರದಿಂದ ತೆಗೆದುಹಾಕಿದನು. ಮತ್ತು ಅಯನ ಸಹಿತ ಅವನ ಸಂಪೂರ್ಣ ರಾಜ್ಯವನ್ನೂ ದಿನಸಂಬಂಧೀ ಕರ್ಮಗಳನ್ನೂ ಕಸಿದುಕೊಂಡು ತನ್ನ ಅಧಿಕಾರದಡಿಯಲ್ಲಿ ತಂದುಕೊಂಡನು.

ಸೋಽಗ್ನಿಂ ದೇವಮುಖೇ ದೃಷ್ಟ್ವಾ ಚಕಾರಾತ್ಮಮುಖೇ ಸ್ವಯಮ್ ।
ವಾಯುಂ ಚ ತರಸಾ ಜಿತ್ವಾ ಚಕಾರಾತ್ಮವಶಾನುಗಮ್ ।। ೧-೪೭-೫೪

ದೇವಮುಖಗಳಲ್ಲಿದ್ದ ಅಗ್ನಿಯನ್ನು ನೋಡಿ ಅವನು ಅವನನ್ನು ತನ್ನ ಮುಖದಲ್ಲಿ ಸ್ಥಾಪಿಸಿಕೊಂಡನು. ಕೂಡಲೇ ವಾಯುವನ್ನೂ ಗೆದ್ದು ಅವನನ್ನೂ ತನ್ನ ವಶಾನುಗನನ್ನಾಗಿ ಮಾಡಿಕೊಂಡನು.

ಸ ಸಮುದ್ರಾಸ್ತಮಾನೀಯ ಸರ್ವಾಶ್ಚ ಸರಿತೋ ಬಲಾತ್ ।
ಚಕಾರಾತ್ಮವಶೇ ವೀರ್ಯಾದ್ದೇಹಭೂತಾಶ್ಚ ಸಿಂಧವಃ ।। ೧-೪೭-೫೫

ಅವನು ಸರ್ವ ಸರಿತ್ತುಗಳು ಮತ್ತು ಸಮುದ್ರವನ್ನು ಬಲಾತ್ಕಾರವಾಗಿ ತನ್ನ ವಶದಲ್ಲಿರುವಂತೆ ಮಾಡಿಕೊಂಡನು. ಸಮಸ್ತ ಸಾಗರವು ಅವನ ಶರೀರರೂಪವಾಗಿಬಿಟ್ಟಿತು.

ಅಪಃ ಸ್ವವಶಗಾಃ ಕೃತ್ವಾ ದಿವಿಜಾ ಯಾಶ್ಚ ಭೂಮಿಜಾಃ ।
ಸ್ಥಾಪಯಾಮಾಸ ಜಗತೀಂ ಸುಗುಪ್ತಾಂ ಧರಣೀಧರೈಃ ।। ೧-೪೭-೫೬

ಅವನು ಆಕಾಶ ಮತ್ತು ಪೃಥ್ವಿಯ ಜಲಗಳನ್ನು ತನ್ನ ವಶಮಾಡಿಕೊಂಡು ಅದರ ಮೇಲೆ ಪರ್ವತಗಳಿಂದ ಸುರಕ್ಷಿತವಾದ ಭೂಮಿಯನ್ನು ಸ್ಥಾಪಿಸಿದನು.

ಸ ಸ್ವಯಂಭೂರಿವಾಭಾತಿ ಮಹಾಭೂತಪತಿರ್ಮಹಾನ್ ।
ಸರ್ವಲೋಕಮಯೋ ದೈತ್ಯಃ ಸರ್ವಲೋಕಭಯಾವಹಃ ।। ೧-೪೭-೫೭

ಸರ್ವಲೋಕಗಳಿಗೂ ಭಯವನ್ನೀಯುತ್ತಿದ್ದ ಆ ಮಹಾನ್ ದೈತ್ಯನು ಪಂಚಮಹಾಭೂತಗಳ ಅಧಿಪತಿ ಮತ್ತು ಸರ್ವಲೋಕಮಯನಾಗಿಬಿಟ್ಟು ಸ್ವಯಂಭೂ ಬ್ರಹ್ಮನ ಸಮಾನನಾಗಿ ಶೋಭಿಸತೊಡಗಿದನು.

ಸ ಲೋಕಪಾಲೈಕವಪುಶ್ಚಂದ್ರಸೂರ್ಯಗ್ರಹಾತ್ಮವಾನ್ ।
ಪಾವಕಾನಿಲಸಂಘಾತೋ ರರಾಜ ಯುಧಿ ದಾನವಃ ।। ೧-೪೭-೫೮

ಆ ಯುದ್ಧದಲ್ಲಿ ದಾನವ ಕಾಲನೇಮಿಯು ತಾನೊಬ್ಬನೇ ಸಮಸ್ತ ಲೋಕಪಾಲರ ರೂಪದಲ್ಲಿ ಪ್ರತಿಷ್ಠಿತನಾದನು. ಚಂದ್ರಮ, ಸೂರ್ಯ ಮತ್ತು ಅನ್ಯ ಗ್ರಹಗಳ ರೂಪಗಳಲ್ಲಿ ಅವನದೇ ಶರೀರವು ಕಾರ್ಯವನ್ನೆಸಗುತ್ತಿತ್ತು. ಅಗ್ನಿ ಮತ್ತು ವಾಯುಗಳೂ ಅವನ ಶರೀರವಾಗಿಬಿಟ್ಟವು. ಈರೀತಿ ಅವನ ಶೋಭೆಯು ಹೆಚ್ಚಾಗುತ್ತಿತ್ತು.

ಪಾರಮೇಷ್ಠ್ಯೇ ಸ್ಥಿತಃ ಸ್ಥಾನೇ ಲೋಕಾನಾಂ ಪ್ರಭವಾತ್ಯಯೇ ।
ತುಷ್ಟುವುಸ್ತಂ ದೈತ್ಯಗಣಾ ದೇವಾ ಇವ ಪಿತಾಮಹಮ್ ।। ೧-೪೭-೫೯

ಲೋಕಗಳ ಸೃಷ್ಟಿ ಮತ್ತು ಪ್ರಲಯಗಳ ಕಾರಣೀಭೂತ ಬ್ರಹ್ಮಲೋಕದಲ್ಲಿ ಸ್ಥಿತನಾಗಿ ಅವನು ಬ್ರಹ್ಮನಾಗಿಯೇ ಕುಳಿತಿದ್ದನು. ಆಗ ದೈತ್ಯಗಣಗಳು ದೇವತೆಗಳು ಪಿತಾಮಹನನ್ನು ಹೇಗೋ ಹಾಗೆ ಅವನ ಸ್ತುತಿಗೈಯುತ್ತಿದ್ದವು.”

ಸಮಾಪ್ತಿ

ಇತಿ ಶ್ರೀಮಹಾಭಾರತೇ ಖಿಲೇಷು ಹರಿವಂಶೇ ಹರಿವಂಶಪರ್ವಣಿ ಆಶ್ಚರ್ಯತಾರಕಾಮಯೇ ಸಪ್ತಚತ್ವಾರಿಂಶೋಽಧ್ಯಾಯಃ