046: ದೈತ್ಯಪರಾಜಯಃ

ಪ್ರವೇಶ

।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।

ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ

ಶ್ರೀ ಮಹಾಭಾರತ

ಖಿಲಭಾಗೇ ಹರಿವಂಶಃ

ಹರಿವಂಶ ಪರ್ವ

ಅಧ್ಯಾಯ 46

ಸಾರ

ವೈಶಂಪಾಯನ ಉವಾಚ ।
ಏವಮಸ್ತ್ವಿತಿ ಸಂಹೃಷ್ಟಃ ಶಕ್ರಸ್ತ್ರಿದಶವರ್ದ್ಧನಃ ।
ಸಂದಿದೇಶಾಗ್ರತಃ ಸೋಮಂ ಯುದ್ಧಾಯ ಶಿಶಿರಾಯುಧಮ್ ।। ೧-೪೬-೧

ವೈಶಂಪಾಯನನು ಹೇಳಿದನು: “ಆಗ ತ್ರಿದಶರನ್ನು ಆನಂದಿಸುವ ಶಕ್ರನು ಸಂಹೃಷ್ಟನಾಗಿ ಹಾಗೆಯೇ ಆಗಲೆಂದು ಹೇಳಿ ಎದುರಿದ್ದ ಶಿಶಿರಾಯುಧ ಸೋಮನಿಗೆ ತಿಳಿಹೇಳಿದನು.

ಶಕ್ರ ಉವಾಚ ।
ಗಚ್ಛ ಸೋಮ ಸಹಾಯತ್ವಂ ಕುರು ಪಾಶಧರಸ್ಯ ವೈ ।
ಅಸುರಾಣಾಂ ವಿನಾಶಾಯ ಜಯಾಯ ಚ ದಿವೌಕಸಾಮ್ ।। ೧-೪೬-೨

ಶಕ್ರನು ಹೇಳಿದನು: “ಸೋಮ! ಹೋಗು! ಅಸುರರ ವಿನಾಶಕ್ಕಾಗಿ ಮತ್ತು ದಿವೌಕಸರ ಜಯಕ್ಕಾಗಿ ಪಾಶಧರ ವರುಣನಿಗೆ ಸಹಾಯವನ್ನು ಮಾಡು.

ತ್ವಮಪ್ರತಿಮವೀರ್ಯಶ್ಚ ಜ್ಯೋತಿಷಾಂ ಚೇಶ್ವರೇಶ್ವರಃ ।
ತ್ವನ್ಮಯಂ ಸರ್ವಲೋಕಾನಾಂ ರಸಂ ರಸವಿದೋ ವಿದುಃ ।। ೧-೪೬-೩

ನೀನು ಅಪ್ರತಿಮ ವೀರನು ಮತ್ತು ಗ್ರಹ-ನಕ್ಷತ್ರಗಳ ಅಧಿಪತಿಗೆ ಅಧಿಪತಿಯು. ರಸವನ್ನು ತಿಳಿದವರು ಸರ್ವಲೋಕಗಳಲ್ಲಿರುವ ರಸವು ನಿನ್ನದೇ ಎಂದು ತಿಳಿದುಕೊಂಡಿದ್ದಾರೆ.

ಕ್ಷಯವೃದ್ಧೀ ತವಾವ್ಯಕ್ತೇ ಸಾಗರಸ್ಯೇವ ಮಂಡಲೇ ।
ಪರಿವರ್ತಸ್ಯಹೋರಾತ್ರಂ ಕಾಲಂ ಜಗತಿ ಯೋಜಯನ್ ।। ೧-೪೬-೪

ಸಾಗರದಂತೆ ನಿನ್ನ ಮಂಡಲದ ಕ್ಷಯ-ವೃದ್ಧಿಗಳು ಸದಾ ಅವ್ಯಕ್ತವಾಗಿರುತ್ತವೆ. ನೀನು ಜಗತ್ತಿನ ಕಾಲವನ್ನು ಬದಲಾಯಿಸುತ್ತಾ ದಿನ ಮತ್ತು ರಾತ್ರಿಯ ಪರಿವರ್ತನ ಮಾಡುತ್ತಿರುತ್ತೀಯೆ.

ಲೋಕಚ್ಛಾಯಾಮಯಂ ಲಕ್ಷ್ಮ ತವಾಂಕೇ ಶಶಸಂಜ್ಞಿತಮ್ ।
ನ ವಿದುಃ ಸೋಮದೇವಾಪಿ ಯೇ ಚ ನಕ್ಷತ್ರಯೋಗಿನಃ ।। ೧-೪೬-೫

ಸೋಮ! ನಿನ್ನ ಅಂಕದಲ್ಲಿ ಪೃಥ್ವಿಯ ಛಾಯೆ ಶಶವೆಂದು ಸಂಜ್ಞಿತವಾಗಿದೆ. ನಕ್ಷತ್ರಯೋಗಿ ದೇವತೆಗಳೂ ಕೂಡ ನಿನ್ನನ್ನು ಅರಿಯಲಾರರು1.

ತ್ವಮಾದಿತ್ಯಪಥಾದೂರ್ಧ್ವಂ ಜ್ಯೋತಿಷಾಂ ಚೋಪರಿ ಸ್ಥಿತಃ ।
ತಮಶ್ಚೋತ್ಸಾರ್ಯ ವಪುಷಾ ಭಾಸಯಸ್ಯಖಿಲಂ ಜಗತ್ ।। ೧-೪೬-೬

ನೀನು ಆದಿತ್ಯಪಥಕ್ಕಿಂತಲೂ ಮೇಲೆ ಮತ್ತು ನಕ್ಷತ್ರ ಮಂಡಲಗಳ ಮೇಲೆ ಸ್ಥಿತನಾಗಿದ್ದೀಯೆ. ನೀನು ನಿನ್ನ ಶರೀರದ ತೇಜಸ್ಸಿನಿಂದ ಅಂಧಕಾರವನ್ನು ಹೋಗಲಾಡಿಸಿ ಅಖಿಲ ಜಗತ್ತನ್ನೂ ಬೆಳಗಿಸುತ್ತೀಯೆ.

ಶ್ವೇತಭಾನುರ್ಹಿಮತನುರ್ಜ್ಯೋತಿಷಾಮಧಿಪಃ ಶಶೀ ।
ಅಬ್ದಕೃತ್ಕಾಲಯೋಗಾತ್ಮಾ ಈಜ್ಯೋ ಯಜ್ಞರಸೋಽವ್ಯಯಃ ।। ೧-೪೬-೭

ಶಶೀ! ನಿನ್ನ ಕಿರಣವು ಶ್ವೇತವರ್ಣದ್ದಾಗಿದೆ. ನಿನ್ನ ಶರೀರವು ಹಿಮಮಯವಾಗಿದೆ. ನಕ್ಷತ್ರಗಳ ಸ್ವಾಮಿಯು ನೀನು. ನೀನು ಸಂವತ್ಸರಗಳನ್ನುಂಟುಮಾಡುತ್ತೀಯೆ. ನೀನು ಕಾಲಯೋಗಾತ್ಮ. ಪೂಜನೀಯ ಮತ್ತು ಯಜ್ಞದ ರಸ ಹಾಗೂ ಅವ್ಯಯ.

ಓಷಧೀಶಃ ಕ್ರಿಯಾಯೋನಿರಂಭೋಯೋನಿರನುಷ್ಣಭಾಕ್ ।
ಶೀತಾಂಶುರಮೃತಾಧಾರಶ್ಚಪಲಃ ಶ್ವೇತವಾಹನಃ ।। ೧-೪೬-೮

ಓಷಧೀಶ! ನೀನು ಕ್ರಿಯೆಗಳು ಮತ್ತು ಜಲದ ಉತ್ಪತ್ತಿಸ್ಥಾನ ಮತ್ತು ಸ್ವಾಭಾವತಃ ಶೀತಲತೆಯನ್ನು ಧಾರಣೆಮಾಡುತ್ತೀಯೆ. ನಿನ್ನ ಕಿರಣಗಳು ಶೀತಲವಾಗಿವೆ. ನೀನು ಅಮೃತದ ಆಧಾರನು. ಚಪಲನು. ನಿನ್ನ ವಾಹನವು ಶ್ವೇತವರ್ಣದ್ದಾಗಿದೆ.

ತ್ವಂ ಕಾಂತಿಃ ಕಾಂತವಪುಷಾಂ ತ್ವಂ ಸೋಮಃ ಸೋಮವೃತ್ತಿನಾಮ್ ।
ಸೌಮ್ಯಸ್ತ್ವಂ ಸರ್ವಭೂತಾನಾಂ ತಿಮಿರಘ್ನಸ್ತ್ವಮೃಕ್ಷರಾಟ್ ।। ೧-೪೬-೯

ಕಾಂತಿಯುಕ್ತ ಶರೀರಿಗಳ ಕಾಂತಿಯು ನೀನು. ಸೋಮವೃತ್ತಿಗಳ ಸೋಮನು ನೀನು. ಸರ್ವಭೂತಗಳ ಸೌಮ್ಯವು ನೀನು. ನಕ್ಷತ್ರರಾಜ! ನೀನು ಕತ್ತಲೆಯನ್ನು ನಾಶಮಾಡುವವನು.

ತದ್ಗಚ್ಛ ತ್ವಂ ಸಹಾನೇನ ವರುಣೇನ ವರೂಥಿನಾ ।
ಶಮಯಸ್ವಾಸುರೀಂ ಮಾಯಾಂ ಯಯಾ ದಹ್ಯಾಮ ಸಂಗರ ।। ೧-೪೬-೧೦

ಆದುದರಿಂದ ನೀನು ಸೇನೆಯೊಂದಿಗೆ ಸಿದ್ಧನಾಗಿರುವ ವರುಣನಿಗೆ ಸಹಾಯವನ್ನು ಮಾಡು. ಸಂಗರದಲ್ಲಿ ನಮ್ಮನ್ನು ದಹಿಸುತ್ತಿರುವ ಈ ಅಸುರೀಮಾಯೆಯನ್ನು ಶಾಂತಗೊಳಿಸು!”

ಸೋಮ ಉವಾಚ ।
ಯನ್ಮಾಂ ವದಸಿ ಯುದ್ಧಾರ್ಥೇ ದೇವರಾಜ ಜಗತ್ಪತೇ ।
ಏಷ ವರ್ಷಾಮಿ ಶಿಶಿರಂ ದೈತ್ಯಮಾಯಾಪಕರ್ಷಣಮ್ ।। ೧-೪೬-೧೧

ಸೋಮನು ಹೇಳಿದನು: “ದೇವರಾಜ! ಜಗತ್ಪತೇ! ಯುದ್ಧದ ವಿಷಯದಲ್ಲಿ ನೀನು ಹೇಳಿದಂತೆ ನಾನು ಈಗಲೇ ದೈತ್ಯರ ಮಾಯೆಯನ್ನು ನಾಶಪಡಿಸಲು ಹಿಮದ ಮಳೆಯನ್ನು ಸುರಿಸುತ್ತೇನೆ.

ಏತಾನ್ಮಚ್ಛೀತನಿರ್ದಗ್ಧಾನ್ಪಶ್ಯ ತ್ವಂ ಹಿಮವೇಷ್ಟಿತಾನ್ ।
ವಿಮಾಯಾನ್ವಿಮದಾಂಶ್ಚೈವ ದಾನವಾಂಸ್ತ್ವಂ ಮಹಾಮೃಧೇ ।। ೧-೪೬-೧೨

ನೋಡು! ನನ್ನ ಈ ಶೀತಲ ಮಳೆಯಿಂದ ಮಹಾಸಮರದಲ್ಲಿ ದಾನವರು ಹೇಗೆ ಸುಟ್ಟುಹೋಗುತ್ತಿದ್ದಾರೆ ಎನ್ನುವುದನ್ನು ನೀನು ನೋಡು! ಹಿಮದಿಂದ ಮುಚ್ಚಲ್ಪಟ್ಟ ಇವರ ಮಾಯೆಯೂ ಮದವೂ ನಾಶವಾಗುತ್ತಿದೆ.””

ವೈಶಂಪಾಯನ ಉವಾಚ ।
ತತೋ ಹಿಮಕರೋತ್ಸೃಷ್ಟಾಃ ಸುಬಾಷ್ಪಾ ಹಿಮವೃಷ್ಟಯಹ್ ।
ವೇಷ್ಟಯಂತಿ ಸ್ಮ ತಾನ್ಘೋರಾಂದೈತ್ಯಾನ್ಮೇಘಗಣಾ ಇವ ।। ೧-೪೬-೧೩

ವೈಶಂಪಾಯನನು ಹೇಳಿದನು: “ಆಗ ಚಂದ್ರನು ಸುರಿಸಿದ ಮಂಜುಗಡ್ಡೆಗಳ ಹಿಮವೃಷ್ಟಿಯು ಮೇಘಗಳಂತೆ ಆ ಘೋರ ದೈತ್ಯಗಣಗಳನ್ನು ಪೀಡಿಸತೊಡಗಿತು.

ತೌ ಪಾಶಶುಕ್ಲಾಂಶುಧರೌ ವರುಣೇಂದೂ ಮಹಾರಣೇ ।
ಜಘ್ನತುರ್ಹಿಮಪಾತೈಶ್ಚ ಪಾಶಘಾತೈಶ್ಚ ದಾನವಾನ್ ।। ೧-೪೬-೧೪

ಆ ಮಹಾರಣದಲ್ಲಿ ಪಾಶಧರ ವರುಣ ಮತ್ತು ಶುಕ್ಲಾಂಶು ಇಂದು ಇಬ್ಬರೂ ಹಿಮಪಾತ ಮತ್ತು ಪಾಶಘಾತಗಳಿಂದ ದಾನವರನ್ನು ಸಂಹರಿಸಿದರು.

ದ್ವಾವಂಬುನಾಥೌ ಸಮರೇ ತೌ ಪಾಶಹಿಮಯೋಧಿನೌ ।
ಮೃಧೇ ಚೇರತುರಂಭೋಭಿಃ ಕ್ಷುಬ್ಧಾವಿವ ಮಹಾರ್ಣವೌ ।। ೧-೪೬-೧೫

ಪಾಶ ಮತ್ತು ಹಿಮಗಳೊಂದಿಗೆ ಯುದ್ಧಮಾಡುವ ಆ ಇಬ್ಬರು ಜಲಪತಿಗಳೂ ಸಮರದಲ್ಲಿ ಜಲದ ಮಳೆಸುರಿಸುತ್ತಾ ಕ್ಷೋಭೆಗೊಂಡ ಸಮುದ್ರದಂತೆ ಸಂಗ್ರಾಮದಲ್ಲಿ ವಿಚರಿಸತೊಡಗಿದರು.

ತಾಭ್ಯಾಮಾಪ್ಲಾವಿತಂ ಸೈನ್ಯಂ ತದ್ದಾನವಮದೃಶ್ಯತ ।
ಜಗತ್ಸಂವರ್ತಕಾಂಬೋಧೈಃ ಪ್ರವೃಷ್ಟೈರಿವ ಸಂವೃತಮ್ ।। ೧-೪೬-೧೬

ಅವರಿಬ್ಬರ ಜಲವರ್ಷದಿಂದ ಮುಳುಗಿದ ಆ ದಾನವಸೇನೆಯು ಪ್ರಲಯಕಾಲದಲ್ಲಿ ಪ್ರಬಲ ವರ್ಷವನ್ನುಂಟುಮಾಡುವ ಸಂವರ್ತಕ ಮೇಘಗಳಿಂದ ಅನಂತ ಜಲರಾಶಿಯಲ್ಲಿ ಮುಳುಗಿದ ಜಗತ್ತಿನಂತೆ ತೋರುತ್ತಿತ್ತು.

ತಾವುದ್ಯತಾಂಶುಪಾಶೌ ದ್ವೌ ಶಶಾಂಕವರುಣೌ ರಣೇ ।
ಶಮಯಾಮಾಸತುರ್ಮಾಯಾಂ ದೇವೌ ದೈತೇಯನಿರ್ಮಿತಾಮ್ ।। ೧-೪೬-೧೭

ಹೀಗೆ ಶಶಾಂಕ ಮತ್ತು ವರುಣ ದೇವರಿಬ್ಬರೂ ರಣದಲ್ಲಿ ತಮ್ಮ ಕಿರಣ ಮತ್ತು ಪಾಶಗಳಿಂದ ದೈತ್ಯರಿಂದ ನಿರ್ಮಿತವಾಗಿದ್ದ ಆ ಮಾಯೆಯನ್ನು ನಾಶಗೊಳಿಸತೊಡಗಿದರು.

ಶೀತಾಂಶುಜಲನಿರ್ದಗ್ಧಾಃ ಪಾಶೈಶ್ಚ ಪ್ರಸಿತಾ ರಣೇ ।
ನ ಶೇಕುಶ್ಚಲಿತುಂ ದೈತ್ಯಾ ವಿಶಿರಸ್ಕಾ ಇವಾದ್ರಯಃ।। ೧-೪೬-೧೮

ಶೀತಾಂಶುಜಲದಿಂದ ಸುಡಲ್ಪಟ್ಟ ಮತ್ತು ಪಾಶಗಳಿಂದ ಸೆಳೆಯಲ್ಪಟ್ಟ ದೈತ್ಯರು ಶಿಖರಗಳಿಲ್ಲದ ಪರ್ವತಗಳಂತೆ ರಣದಲ್ಲಿ ಚಲಿಸಲಾರದೇ ಹೋದರು.

ಶೀತಾಂಶುನಿಹತಾಸ್ತೇ ತು ಪೇತುರ್ದೈತ್ಯಾ ಹಿಮಾರ್ದಿತಾಃ ।
ಹಿಮಪ್ರಾವೃತಸರ್ವಾಂಗಾ ನಿರೂಷ್ಮಾಣ ಇವಾಗ್ನಯಃ ।। ೧-೪೬-೧೯

ಶೀತಾಂಶುವಿನಿಂದ ನಿಹತರಾಗಿ ಹಿಮಾರ್ದಿತರಾದ ದೈತ್ಯರು ಭೂಮಿಯ ಮೇಲೆ ಬೀಳತೊಡಗಿದರು. ಅವರ ಸರ್ವಾಂಗಗಳೂ ಹಿಮದಿಂದ ಮುಚ್ಚಿಹೋಗಿದ್ದವು. ಉಷ್ಣವಿಲ್ಲದ ಅಗ್ನಿಗಳಂತೆ ತೋರುತ್ತಿದ್ದರು.

ತೇಷಾಂ ತು ದಿವಿ ದೈತ್ಯಾನಾಂ ವಿಪರೀತಪ್ರಭಾಣಿ ಚ ।
ವಿಮಾನಾನಿ ವಿಚಿತ್ರಾಣಿ ನಿಪತಂತ್ಯುತ್ಪತಂತಿ ಚ ।। ೧-೪೬-೨೦

ದಿವಿಯಲ್ಲಿ ದೈತ್ಯರ ವಿಪರೀತ ಪ್ರಭೆಯಿದ್ದ ವಿಚಿತ್ರ ವಿಮಾನಗಳು ಕೆಳಗೆ ಬಿದ್ದು ಕುಪ್ಪಳಿಸತೊಡಗಿದವು.

ತಾನ್ಪಾಶಹಸ್ತಗ್ರಥಿತಾಂಚ್ಛಾದಿತಾನ್ ಹಿಮರಶ್ಮಿನಾ ।
ಮಯೋ ದದರ್ಶ ಮಾಯಾವೀ ದಾನವಾಂದಿವಿ ದಾನವಃ ।। ೧-೪೬-೨೧

ಮಾಯಾವೀ ದಾನವ ಮಯನು ದಿವಿಯಲ್ಲಿ ಪಾಶಹಸ್ತನಿಂದ ಸಿಲುಕಲ್ಪಟ್ಟ ಮತ್ತು ಹಿಮರಶ್ಮಿಯಿಂದ ಮುಚ್ಚಲ್ಪಟ್ಟ ದಾನವರನ್ನು ನೋಡಿದನು.

ಸ ಶಿಲಾಜಾಲವಿತತಾಂ ಗಂಡಶೈಲಾಟ್ಟಹಾಸಿನೀಮ್ ।
ಪಾದಪೋತ್ಕಟಕೂಟಾಗ್ರಾಂ ಕಂದರಾಕೀರ್ಣಕಾನನಾಮ್ ।। ೧-೪೬-೨೨
ಸಿಂಹವ್ಯಾಘ್ರಗಜಾಕೀರ್ಣಾಂ ನದಂತೀಮಿವ ಯೂಥಪೈಃ ।
ಈಹಾಮೃಗಗಣಾಕೀರ್ಣಾಂ ಪವನಾಘೂರ್ಣಿತದ್ರುಮಾಮ್ ।। ೧-೪೬-೨೩
ನಿರ್ಮಿತಾಂ ಸ್ವೇನ ಪುತ್ರೇಣ ಕ್ರೌಂಚೇನ ದಿವಿ ಕಾಮಗಾಮ್ ।
ಪ್ರಸೃತಾಂ ಪಾರ್ವತೀಂ ಮಾಯಾಂ ಸಸೃಜೇ ದಾನವೋತ್ತಮಃ ।। ೧-೪೬-೨೪

ಆಗ ಆ ದಾನವೋತ್ತಮನು ದಿವಿಯಲ್ಲಿ ತನ್ನ ಪುತ್ರ ಕ್ರೌಂಚನು ನಿರ್ಮಿಸಿದ, ಬೇಕಾದಲ್ಲಿ ಎಲ್ಲಕಡೆ ಹೋಗಬಲ್ಲ, ಸುಪ್ರಸಿದ್ದ ಪಾರ್ವತೀ ಮಾಯೆಯನ್ನು ಪ್ರಕಟಿಸಿದನು. ಅದು ಶಿಲೆಗಳ ವಿಶಾಲ ಜಾಲವನ್ನು ಹರಡಿತು. ಭಾರೀ ಬಂಡೆಗಳನ್ನು ಬೀಳಿಸಿ ಅದು ಅಟ್ಟಹಾಸವನ್ನು ಮಾಡುತ್ತಿತ್ತು. ಬೀಳುತ್ತಿರುವ ವೃಕ್ಷಗಳಿಂದಾಗಿ ಆ ಕಲ್ಲುಬಂಡೆಗಳು ಕೊರೆದು ಹೋಗುತ್ತಿದ್ದವು. ಕಂದರ-ಕಾನನಗಳನ್ನು ಕೂಡಿದ್ದ ಆ ಮಾಯೆಯು ಸಿಂಹ-ವ್ಯಾಘ್ರ-ಆನೆಗಳ ಹಿಂಡುಗಳಿಂದಲೂ ಕೂಡಿತ್ತು. ಯೂಥಪತಿಯರ ಓಡಾಟದಿಂದ ಗರ್ಜಿಸುತ್ತಿತ್ತು. ಆ ಪರ್ವತಗಳ ಮಾಲೆಗಳಲ್ಲಿ ಎಲ್ಲೆಡೆ ತೋಳಗಳಿದ್ದವು. ಅಲ್ಲಿದ್ದ ಮರಗಳು ಚಂಡಮಾರುತಕ್ಕೆ ಸಿಲುಕಿ ಬೀಳುತ್ತಿದ್ದವು.

ಸಾಶ್ಮಶಬ್ದೈಃ ಶಿಲಾವರ್ಷೈಃ ಸಂಪತದ್ಭಿಶ್ಚ ಪಾದಪೈಃ ।
ನಿಜಘ್ನೇ ದೇವಸಂಘಾಂಸ್ತಾಂದಾನವಾಂಶ್ಚಾಪ್ಯಜೀವಯತ್ ।। ೧-೪೬-೨೫

ಬಂಡೆಗಳ ಶಬ್ದಗಳಿಂದ, ಶಿಲಾವರ್ಷಗಳಿಂದ ಮತ್ತು ಕೆಳಗುರುಳುತ್ತಿದ್ದ ವೃಕ್ಷಗಳಿಂದ ದೇವಸಂಘಗಳ ನಾಶವು ಪ್ರಾರಂಭವಾಯಿತು. ದಾನವರಿಗೆ ಜೀವವು ಮರಳಿಬಂದಂತಾಯಿತು.

ನೈಶಾಕರೀ ವಾರುಣೀ ಚ ಮಾಯೇಂತರ್ದಧತಸ್ತತಃ ।
ಅಶ್ಮಭಿಶ್ಚಾಯಸಘನೈಃ ಕೀರ್ಣಾ ದೇವಗಣಾನ್ರಣೇ ।। ೧-೪೬-೨೬

ನಿಶಾಕರ ಮತ್ತು ವರುಣರ ಮಾಯೆಗಳು ಅದೃಶ್ಯವಾದವು. ದಟ್ಟವಾದ ಬಂಡೆಗಳ ಮತ್ತು ಲೋಹೆಗಳ ವರ್ಷಗಳು ರಣದಲ್ಲಿ ದೇವಗಣಗಳ ಮೇಲೆ ಸುರಿಯತೊಡಗಿದವು.

ಸಾಶ್ಮಸಂಘಾತವಿಷಮಾ ದ್ರುಮಪರ್ವತಸಂಕಟಾ ।
ಅಭವದ್ಘೋರಸಂಚಾರಾ ಪೃಥಿವೀ ಪರ್ವತೈರಿವ ।। ೧-೪೬-೨೭

ಭೂಮಿಯಲ್ಲಿನ ಪರ್ವತಗಳಂತೆ ಬಂಡೆಗಳ ಸಂಘಾತಗಳಿಂದ ಮತ್ತು ಪರ್ವತವೃಕ್ಷಗಳು ಬೀಳುವುದರಿಂದ ವಿಷಮವಾದ ಘೋರ ರಣಭೂಮಿಯಲ್ಲಿ ಸಂಚರಿಸುವುದೇ ಕಷ್ಟವಾಯಿತು.

ನಾನಾಹತೋಽಶ್ಮಭಿಃ ಕಶ್ಚಿಚ್ಛಿಲಾಭಿಶ್ಚಾಥ ತಾಡಿತಃ ।
ನಾನಿರುದ್ಧೋ ದ್ರುಮಗಣೈರ್ದೇವೋಽದೃಶ್ಯತ ಸಂಯುಗೇ ।। ೧-೪೬-೨೮

ಆ ಸಂಯುಗದಲ್ಲಿ ಶರೀರದಲ್ಲಿ ಕಲ್ಲುಬಂಡೆಗಳಿಂದ ಗಾಯಗೊಳ್ಳದೇ ಇದ್ದ, ಶಿಲೆಗಳು ಮೇಲೆ ಬೀಳದೇ ಇದ್ದ ಮತ್ತು ಬೀಳುವ ವೃಕ್ಷಸಮೂಹಗಳಿಂದ ತಡೆಯಲ್ಪಟ್ಟ ಯಾವ ದೇವತೆಯೂ ಇರಲಿಲ್ಲ.

ತದಪಭ್ರಷ್ಟಧನುಷಂ ಭಗ್ನಪ್ರಹರಣಾವಿಲಮ್ ।
ನಿಷ್ಪ್ರಯತ್ನಂ ಸುರಾನೀಕಂ ವರ್ಜಯಿತ್ವಾ ಗದಾಧರಮ್ ।। ೧-೪೬-೨೯

ಆಗ ಗದಾಧರನನ್ನು ಬಿಟ್ಟು ಉಳಿದ ದೇವತೆಗಳ ಸೇನೆಯಲ್ಲವೂ ನಿರುಪಾಯರೂ ನಿಶ್ಚೇಷ್ಟರೂ ಆಗಿಬಿಟ್ಟರು. ಎಲ್ಲರ ಕೈಗಳಿಂದ ಧನುಸ್ಸುಗಳು ಜಾರಿದವು. ಭಗ್ನ ಆಯುಧಗಳಿಂದ ಮುಖವು ಬಾಡಿತು.

ಸ ಹಿ ಯುದ್ಧಗತಃ ಶ್ರೀಮಾನೀಶೋ ನ ಸ್ಮ ವ್ಯಕಂಪತ ।
ಸಹಿಷ್ಣುತ್ವಾಜ್ಜಗತ್ಸ್ವಾಮೀ ನ ಚುಕ್ರೋಧ ಗದಾಧರಃ ।। ೧-೪೬-೩೦

ಆಗ ಯುದ್ಧಗತನಾಗಿದ್ದ ಶ್ರೀಮಾನ್ ಈಶನು ಕಂಪಿಸಲಿಲ್ಲ. ಆ ಜಗತ್ಸ್ವಾಮಿ ಗದಾಧರನು ಸಹಿಷ್ಣುತೆಯಿಂದ ಕ್ರೋಧಿತನೂ ಆಗಲಿಲ್ಲ.

ಕಾಲಜ್ಞಃ ಕಾಲಮೇಘಾಭಃ ಸಮೈಕ್ಷತ್ಕಾಲಮಾಹವೇ ।
ದೇವಾಸುರವಿಮರ್ದಂ ಸ ದ್ರಷ್ಟುಕಾಮೋ ಜನಾರ್ದನಃ ।। ೧-೪೬-೩೧

ಆ ಕಾಲಜ್ಞ ಕಾಲಮೇಘದ ಕಾಂತಿಯಿದ್ದ ಜನಾರ್ದನನು ಯುದ್ಧದಲ್ಲಿ ಕಾಲವನ್ನೇ ನೋಡುತ್ತಿದ್ದನು. ದೇವಾಸುರರರ ಹೋರಾಟವನ್ನು ನೋಡಬಯಸಿದ್ದನು.

ತತೋ ಭಗವತಾಽಽದಿಷ್ಟೌ ರಣೇ ಪಾವಕಮಾರುತೌ ।
ಶಮನಾರ್ಥಂ ಪ್ರವೃದ್ಧಾಯಾ ಮಾಯಾಯಾ ಮಯಸೃಷ್ಟಯಾ ।। ೧-೪೬-೩೨

ಆಗ ಭಗವಂತನು ಬೆಳೆಯುತ್ತಿರುವ ಮಯನು ಸೃಷ್ಟಿಸಿದ ಮಾಯೆಯನ್ನು ನಾಶಗೊಳಿಸಲು ಅಗ್ನಿ ಮತ್ತು ವಾಯುವಿಗೆ ಆದೇಶವನ್ನಿತ್ತನು.

ತತಃ ಪ್ರವೃದ್ಧಾವನ್ಯೋನ್ಯಂ ಪ್ರವೃದ್ಧೌ ಜ್ವಾಲವಾಹಿನೌ ।
ಚೋದಿತೌ ವಿಷ್ಣುವಾಕ್ಯೇನ ತಾಂ ಮಾಯಾಂ ವ್ಯಪಕರ್ಷತಾಮ್ ।। ೧-೪೬-೩೩

ಆಗ ವಿಷ್ಣುವಾಕ್ಯದಿಂದ ಪ್ರಚೋದಿತರಾದ ವಾಯು-ಅಗ್ನಿಯರು ಪರಸ್ಪರರನ್ನು ಪ್ರವೃದ್ಧಗೊಳಿಸುತ್ತಾ ಆ ಮಾಯೆಯನ್ನು ನಾಶಪಡಿಸಿದರು.

ತಾಭ್ಯಾಮುದ್ಭ್ರಾಂತವೇಗಾಭ್ಯಾಂ ಪ್ರವೃದ್ಧಾಭ್ಯಾಂ ಮಹಾಹವೇ ।
ದಗ್ಧಾ ಸಾ ಪಾರ್ವತೀ ಮಾಯಾ ಭಸ್ಮೀಭೂತಾ ನನಾಶ ಹ ।। ೧-೪೬-೩೪

ಮಹಾಹವದಲ್ಲಿ ಅವರಿಬ್ಬರಿಂದ ಎಬ್ಬಿಸಲ್ಪಟ್ಟ ಮತ್ತು ವೇಗದಿಂದ ಪ್ರವೃದ್ಧವಾಗುತ್ತಿದ್ದ ಜ್ವಾಲೆ-ಚಂಡಮಾರುತಗಳು ಆ ಪಾರ್ವತೀ ಮಾಯೆಯನ್ನು ಸುಟ್ಟು ಭಸ್ಮಮಾಡಿ ನಾಶಗೊಳಿಸಿದವು.

ಸೋಽನಿಲೋಽನಲಸಂಯುಕ್ತಃ ಸೋಽನಲಶ್ಚಾನಿಲಾಕುಲಃ ।
ದೈತ್ಯಸೇನಾಂ ದದಹತುರ್ಯುಗಾಂತೇಷ್ವಿವ ಮೂರ್ಚ್ಛಿತೌ ।। ೧-೪೬-೩೫

ಪ್ರಲಯಕಾಲದಂತಿದ್ದ ವಾಯುವಿನ ಸಂಯೋಗದಿಂದ ಪ್ರಬಲನಾದ ಅಗ್ನಿದೇವನು ಮತ್ತು ಅಗ್ನಿಯ ಸಂಯೋಗದಿಂದ ಪ್ರಬಲನಾದ ವಾಯುದೇವನು ದಾನವಸೇನೆಯನ್ನು ಭಸ್ಮಮಾಡಿದರು.

ವಾಯುಃ ಪ್ರಧಾವಿತಸ್ತತ್ರ ಪಶ್ಚಾದಗ್ನಿಶ್ಚ ಮಾರುತಾತ್ ।
ಚೇರತುರ್ದಾನವಾನೀಕೇ ಕ್ರೀಡಂತಾವನಲಾನಿಲೌ ।। ೧-೪೬-೩೬

ರಣಭೂಮಿಯಲ್ಲಿ ಮೊದಲು ವಾಯುವು ಜೋರಾಗಿ ಚಂಡಮಾರುತವಾಗಿ ಬೀಸಿದನು ಮತ್ತು ವಾಯುವಿನಿಂದ ಪ್ರಜ್ವಲಿತನಾದ ಅಗ್ನಿಯು ವೇಗಪೂರ್ವಕವಾಗಿ ಎಲ್ಲೆಡೆ ಹರಡಿಕೊಂಡನು. ಹೀಗೆ ಅನಲ-ಅನಿಲರಿಬ್ಬರೂ ದಾನವರ ಸೇನೆಯಲ್ಲಿ ಆಟವಾಡುತ್ತಾ ವಿಚರಿಸತೊಡಗಿದರು.

ಭಸ್ಮಾವಯವಭೂತೇಷು ಪ್ರಪತತ್ಸೂತ್ಪತತ್ಸು ಚ ।
ದಾನವೇಷು ವಿನಷ್ಟೇಷು ಕೃತಕರ್ಮಣಿ ಪಾವಕೇ ।। ೧-೪೬-೩೭

ದಾನವರು ಭಸ್ಮೀಭೂತರಾಗಿ ಬೀಳತೊಡಗಿದರು ಮತ್ತು ಅವರ ಭಸ್ಮವು ಮೇಲೆ ಹಾರತೊಡಗಿತು. ಹೀಗೆ ಅಗ್ನಿಯ ಕಾರ್ಯವು ಪರಿಪೂರ್ಣವಾಯಿತು.

ವಾತಸ್ಕಂಧಾಪವಿದ್ಧೇಷು ವಿಮಾನೇಷು ಸಮಂತತಃ ।
ಮಾಯಾಬಂಧೇ ವಿನಿರ್ವೃತ್ತೇ ಸ್ತೂಯಮಾನೇ ಗದಾಧರೇ ।। ೧-೪೬-೩೮

ವಾಯುವಿನ ಪ್ರಚಂಡ ವೇಗದ ಹೊಡೆತಕ್ಕೆ ಸಿಲುಕಿತ ವಿಮಾನಗಳು ಎಲ್ಲ ಕಡೆ ಚೂರುಚೂರಾಗಿ ಬೀಳತೊಡಗಿದವು. ಮಾಯಾಬಂಢವು ನಷ್ಟವಾಗಿ ಹೋಗಲು ಗದಾಧರನ ಸ್ತುತಿಯು ನಡೆಯಿತು.

ನಿಷ್ಪ್ರಯತ್ನೇಷು ದೈತ್ಯೇಷು ತ್ರೈಲೋಕ್ಯೇ ಮುಕ್ತಬಂಧನೇ ।
ಸಂಪ್ರಹೃಷ್ಟೇಷು ದೇವೇಷು ಸಾಧು ಸಾಧ್ವಿತಿ ಸರ್ವಶಃ ।। ೧-೪೬-೩೯

ದೈತ್ಯರು ಪ್ರಯತ್ನಗಳು ನಿಷ್ಫಲವಾದವು ಮತ್ತು ತ್ರೈಲೋಕ್ಯವು ಬಂಧನದಿಂದ ಮುಕ್ತವಾಯಿತು. ಆಗ ಸಂಪ್ರಹೃಷ್ಟರಾದ ದೇವತೆಗಳು ಎಲ್ಲೆಡೆ “ಸಾಧು! ಸಾಧು!” ಎಂದು ಹರ್ಷೋದ್ಗಾರಗೈದರು.

ಜಯೇ ದಶಶತಾಕ್ಷಸ್ಯ ಮಯಸ್ಯ ಚ ಪರಾಜಯೇ ।
ದಿಕ್ಷು ಸರ್ವಾಸು ಶುದ್ಧಾಸು ಪ್ರವೃತ್ತೇ ಧರ್ಮಸಂಸ್ತರೇ ।। ೧-೪೬-೪೦

ಸಹಸ್ರಾಕ್ಷನ ಜಯವಾಯಿತು ಮತ್ತು ಮಯನ ಪರಾಜಯವಾಯಿತು. ಸರ್ವ ದಿಕ್ಕುಗಳೂ ಶುದ್ಧವಾದವು ಮತ್ತು ಧರ್ಮವು ವಿಸ್ತಾರವಾಗತೊಡಗಿತು.

ಅಪಾವೃತ್ತೇ ಚಂದ್ರಪಥೇ ಅಯನಸ್ಥೇ ದಿವಾಕರೇ ।
ಪ್ರಕೃತಿಸ್ಥೇಷು ಲೋಕೇಷು ನೃಷು ಚಾರಿತ್ರಬಂಧುಷು ।। ೧-೪೬-೪೧

ಚಂದ್ರಪಥವು ಪ್ರಶಸ್ತವಾಯಿತು. ದಿವಾಕರನು ತನ್ನ ಪಥದಲ್ಲಿ ಸ್ಥಿತನಾದನು. ಲೋಕಗಳು ತಮ್ಮ ಸ್ವಾಭಾವಿಕ ಸ್ಥಿತಿಗೆ ಬಂದವು. ಮತ್ತು ಮನುಷರು ಚಾರಿತ್ರವನ್ನು ಬಂಧುವೆಂದು ಮನ್ನಿಸತೊಡಗಿದರು.

ಅಭಿನ್ನಬಂಧನೇ ಮೃತ್ಯೌ ಹೂಯಮಾನೇ ಹುತಾಶನೇ ।
ಯಜ್ಞಭಾಗಿಷು ದೇವೇಷು ಸ್ವರ್ಗಾರ್ಥಂ ದರ್ಶಯತ್ಸು ಚ ।। ೧-೪೬-೪೨

ಮೃತ್ಯುವಿನ ಬಂಧನವು ನಿಯತಗೊಂಡಿತು. ಅಗ್ನಿಹೋತ್ರದ ಕಾರ್ಯವು ಸರಿಯಾಗಿ ನಡೆಯತೊಡಗಿತು. ದೇವತೆಗಳು ಯಜ್ಞಗಳಲ್ಲಿ ಭಾಗಧಾರಿಗಳಾಗಿ ಸ್ವರ್ಗದ ಮಾರ್ಗವನ್ನು ತೋರಿಸತೊಡಗಿದರು.

ಲೋಕಪಾಲೇಷು ಸರ್ವೇಷು ದಿಕ್ಷು ಸಂಯಾನವರ್ತಿಷು ।
ಭಾವೇ ತಪಸಿ ಶುದ್ಧಾನಾಮಭಾವೇ ದುಷ್ಟಕರ್ಮಿಣಾಮ್ ।। ೧-೪೬-೪೩

ಲೋಕಪಾಲರು ಎಲ್ಲ ದಿಕ್ಕುಗಳಲ್ಲಿ ನಿರ್ಭಯರಾಗಿ ವಿಚರಿಸತೊಡಗಿದರು. ಶುದ್ಧಾತ್ಪರು ತಪಸ್ಸಿನಲ್ಲಿ ಪ್ರವೃತ್ತರಾಗಿ ಅಭ್ಯುದಯವನ್ನು ಹೊಂದತೊಡಗಿದರು ಮತ್ತು ದುಷ್ಟಕರ್ಮಿಗಳ ಅಭಾವವಾಗತೊಡಗಿತು.

ದೇವಪಕ್ಷೇ ಪ್ರಮುದಿತೇ ದೈತ್ಯಪಕ್ಷೇ ವಿಷೀದತಿ ।
ತ್ರಿಪಾದವಿಗ್ರಹೇ ಧರ್ಮೇ ಅಧರ್ಮೇ ಪಾದವಿಗ್ರಹೇ ।। ೧-೪೬-೪೪

ದೇವಪಕ್ಷವು ಮುದಿತಗೊಳ್ಳಲು ದೈತ್ಯಪಕ್ಷವು ವಿಷಾದಿತಗೊಂಡಿತು. ಧರ್ಮವು ಮೂರು ಕಾಲುಗಳಲ್ಲಿ ನಿಂತುಕೊಂಡಿತು ಮತ್ತು ಅಧರ್ಮವು ಒಂದೇ ಒಂದು ಕಾಲಮೇಲೆ ನಿಂತಿತು.

ಅಪಾವೃತಮಹಾದ್ವಾರೇ ವರ್ತಮಾನೇ ಚ ಸತ್ಪಥೇ ।
ಸ್ವಧರ್ಮಸ್ಥೇಷು ವರ್ಣೇಷು ಲೋಕೇಽಸ್ಮಿನ್ನಾಶ್ರಮೇಷು ಚ ।। ೧-೪೬-೪೫

ಸತ್ಪಥದಲ್ಲಿ ಚಲಿಸುವವರಿಗೆ ಸ್ವರ್ಗದ ಮಹಾದ್ವಾರವು ತೆರೆದುಕೊಂಡಿತು. ಈ ಲೋಕದಲ್ಲಿ ಎಲ್ಲರೂ ತಮ್ಮ ತಮ್ಮ ವರ್ಣಾಶ್ರಮ ಧರ್ಮಗಳನ್ನು ಅನುಸರಿಸತೊಡಗಿದರು.

ಪ್ರಜಾರಕ್ಷಣಯುಕ್ತೇಷು ಭ್ರಾಜಮಾನೇಷು ರಾಜಸು ।
ಗೀಯಮಾನಾಸು ಗಾಥಾಸು ದೇವಸಂಸ್ತವನಾದಿಷು ।। ೧-೪೬-೪೬

ರಾಜರು ಪ್ರಜಾರಕ್ಷಣೆಯಲ್ಲಿ ಯುಕ್ತರಾಗಿ ಬೆಳಗತೊಡಗಿದರು. ದೇವತೆಗಳ ಸ್ತುತಿಯುಕ್ತ ಗಾಥಾಗಳ ಗಾನವು ಎಲ್ಲೆಡೆ ನಡೆಯತೊಡಗಿತು.

ಪ್ರಶಾಂತಕಲುಷೇ ಲೋಕೇ ಶಾಂತೇ ತಪಸಿ ದಾರುಣೇ ।
ಅಗ್ನಿಮಾರುತಯೋಸ್ತಸ್ಮಿನ್ವೃತ್ತೇ ಸಂಗ್ರಾಮಕರ್ಮಣಿ ।। ೧-೪೬-೪೭
ತನ್ಮಯಾ ವಿಮಲಾ ಲೋಕಾಸ್ತಾಭ್ಯಾಂ ಜಯಕೃತಪ್ರಿಯಾಃ ।

ಲೋಕದಲ್ಲಿ ಕಲುಷಗಳು ಶಾಂತವಾದವು. ದಾರುಣ ತಪಸ್ಸುಗಳು ಶಾಂತವಾದವು. ಅಗ್ನಿ-ಮಾರುತರು ನಡೆಸಿದ ಈ ಸಂಗ್ರಾಮಕರ್ಮದಿಂದ ವಿಮಲವಾದ ಲೋಕದಲ್ಲಿ ಅವರಿಬ್ಬರಿಗೂ ಪ್ರಧಾನತೆಯು ದೊರಕಿತು. ಅವರೊದಗಿಸಿದ ಜಯವು ಲೋಕಪ್ರಿಯವಾಯಿತು.

ಪೂರ್ವದೇವಭಯಂ ಶ್ರುತ್ವಾ ಮಾರುತಾಗ್ನಿಕೃತಂ ಮಹತ್ ।।
ಕಾಲನೇಮಿರಿತಿ ಖ್ಯಾತೋ ದಾನವಃ ಪ್ರತ್ಯದೃಶ್ಯತ ।। ೧-೪೬-೪೮

ವಾಯು ಮತ್ತು ಅಗ್ನಿಯರು ಮಹಾ ಭಯವನ್ನುಂಟುಮಾಡಿದ್ದಾರೆಂದು ಕೇಳಿ ಕಾಲನೇಮಿ ಎಂದು ಖ್ಯಾತನಾದ ದಾನವನು ಕಾಣಿಸಿಕೊಂಡನು.

ಭಾಸ್ಕರಾಕಾರಮುಕುಟಃ ಶಿಂಜಿತಾಭರಣಾಂಗದಃ ।
ಮಂದರಾಚಲಸಂಕಾಶೋ ಮಹಾರಜತಸಂವೃತಃ ।। ೧-೪೬-೪೯

ಅವನು ಭಾಸ್ಕರಾಕಾರದ ಮುಕುಟವನ್ನು ಧರಿಸಿದ್ದನು. ಅವನು ಕಾಲು ಮೊದಲಾದ ಅಂಗಗಳಲ್ಲಿ ಝಣ-ಝಣ ಶಬ್ಧಮಾಡುವ ನೂಪುರಗಳೇ ಮೊದಲಾದ ಆಭರಣಗಣನ್ನು ಮತ್ತು ಭುಜಗಳಲ್ಲಿ ಅಂಗದಗಳನ್ನು ಧರಿಸಿದ್ದನು. ಮಹಾರಜತ ಕವಚವನ್ನು ಧರಿಸಿದ್ದ ಅವನು ಮಂದಾರಾಚಲದಂತೆ ಕಾಣುತ್ತಿದ್ದನು.

ಶತಪ್ರಹರಣೋದಗ್ರಃ ಶತಬಾಹುಃ ಶತಾನನಃ ।
ಶತಶೀರ್ಷಾ ಸ್ಥಿತಃ ಶ್ರೀಮಾನ್ ಶತಶೃಂಗ ಇವಾಚಲಃ ।। ೧-೪೬-೫೦
ಕಕ್ಷೇ ಮಹತಿ ಸಂವೃದ್ಧೋ ಹಿಮಾಂತ ಇವ ಪಾವಕಃ ।। ೧-೪೬-೫೧

ಆ ಉಗ್ರ ಶತಾನನನು ತನ್ನ ಶತಬಾಹುಗಳಲ್ಲಿ ಶತ ಆಯುಧಗಳನ್ನು ಧರಿಸಿದ್ದನು. ನೂರುತಲೆಗಳ ಆ ಶ್ರೀಮಾನನು ಶತಶೃಂಗ ಪರ್ವತದಂತೆ ತೋರುತ್ತಿದ್ದನು. ಅವನು ಛಳಿಗಾಲದ ಅಂತ್ಯದಲ್ಲಿ ಒಣಗಿದ ವನವನ್ನು ಸುಡಲು ಪ್ರಜ್ವಲಿಸುತ್ತಿದ್ದ ಮಹಾ ಅಗ್ನಿಯಂತೆ ಕಾಣುತ್ತಿದ್ದನು.

ಧೂಮ್ರಕೇಶೋ ಹರಿಚ್ಛ್ಮಶ್ರುರ್ದಂಷ್ಟ್ರಾಲೋಷ್ಟಪುಟಾನನಃ ।
ತ್ರೈಲೋಕ್ಯಾಂತರವಿಸ್ತಾರೋ ಧಾರಯನ್ವಿಪುಲಂ ವಪುಃ ।। ೧-೪೬-೫೨

ಅವನ ಕೂಡಲು ಧೂಮ್ರವರ್ಣದ್ದಾಗಿತ್ತು. ಆದರೆ ಮೀಸೆಯು ಹಸಿರುಬಣ್ಣದ್ದಾಗಿತ್ತು. ಅವನ ಹಲ್ಲುಗಳು ತುಟಿಗಳ ಹೊರಚಾಚಿ ಮುಖಕ್ಕೆ ಅದ್ಭುತ ಶೋಭೆಯನ್ನು ನೀಡುತ್ತಿದ್ದವು. ಅವನ ವಿಶಾಲ ಶರೀರವು ಮೂರೂ ಲೋಕಗಳಲ್ಲಿ ಪಸರಿಸಿರುವಂತೆ ತೋರುತ್ತಿತ್ತು.

ಬಾಹುಭಿಸ್ತುಲಯನ್ವ್ಯೋಮ ಕ್ಷಿಪನ್ಪದ್ಭ್ಯಾಂ ಮಹೀಧರಾನ್ ।
ಈರಯನ್ಮುಖನಿಃಶ್ವಾಸೈರ್ವೃಷ್ಟಿಮಂತೋ ಬಲಾಹಕಾಃ ।। ೧-೪೬-೫೩

ಅವನು ತನ್ನ ಬಾಹುಗಳಿಂದ ಆಕಾಶವನ್ನು ಬಡಿಯುತ್ತಿದ್ದನು. ಕಾಲಿನಿಂದ ಒದೆದು ಅನೇಕ ಪರ್ವತಗಳನ್ನು ದೂರ ಎಸೆಯುತ್ತಿದ್ದನು. ಮತ್ತು ಮುಖದ ನಿಃಶ್ವಾಸಗಳಿಂದ ಮಳೆಸುರಿಸುವ ಮೋಡಗಳನ್ನು ಹಾರಿಸಿಬಿಡುತ್ತಿದ್ದನು.

ತಿರ್ಯಗಾಯತರಕ್ತಾಕ್ಷಂ ಮಂದರೋದಗ್ರವರ್ಚಸಮ್ ।
ದಿಧಕ್ಷಂತಮಿವಾಯಾಂತಂ ಸರ್ವಾಂದೇವಗಣನ್ಮೃಧೇ ।। ೧-೪೬-೫೪

ಅವನ ನೇತ್ರಗಳು ಕೆಂಪಾಗಿ ವಿಶಾಲವಾಗಿದ್ದವು. ಅವನು ಓರೆದೃಷ್ಟಿಯಿಂದ ನೋಡುತ್ತಿದ್ದನು. ಮಂದರದಂತೆ ಅತ್ಯಂತ ವರ್ಚಸ್ವಿಯಾಗಿದ್ದನು. ಅವನು ಯುದ್ಧದಲ್ಲಿ ಸರ್ವ ದೇವಗಣಗಳನ್ನೂ ಸುಟ್ಟುಬಿಡುವನೋ ಎನ್ನುವಂತೆ ಬರುತ್ತಿದ್ದನು.

ತರ್ಜಯಂತಂ ಸುರಗಣಾಂಶ್ಛಾದಯಂತಂ ದಿಶೋ ದಶ ।
ಸಂವರ್ತಕಾಲೇ ಕ್ಷುಧಿತಂ ದೃಪ್ತಂ ಮೃತ್ಯುಮಿವೋತ್ಥಿತಮ್ ।। ೧-೪೬-೫೫

ಅವನು ಹತ್ತು ದಿಕ್ಕುಗಳನ್ನೂ ಆಚ್ಛಾದಿಸಿ ಸುರಗಣಗಳನ್ನು ಬೆದರಿಸುತ್ತಾ ಬರುತ್ತಿದ್ದನು. ಪ್ರಲಯಕಾಲದ ಹಸಿದ ದರ್ಪಿತ ಮೃತ್ಯುವಿನಂತೆ ಮೇಲೇರಿಬರುತ್ತಿದ್ದನು.

ಸುತಲೇನೋಚ್ಛ್ರಿತವತಾ ವಿಪುಲಾಂಗುಲಿಪರ್ವಣಾ ।
ಮಾಲ್ಯಾಭರಣಪೂರ್ಣೇನ ಕಿಂಚಿಚ್ಚಲಿತವರ್ಮಣಾ ।। ೧-೪೬-೫೬
ಉಚ್ಛ್ರಿತೇನಾಗ್ರಹಸ್ತೇನ ದಕ್ಷಿಣೇನ ವಪುಷ್ಮತಾ ।
ದಾನವಾಂದೇವನಿಹತಾನುತ್ತಿಷ್ಠಧ್ವಮಿತಿ ಬ್ರುವನ್ ।। ೧-೪೬-೫೭

ಅವನ ಅಂಗೈಗಳು ಸುಂದರವಾಗಿದ್ದವು. ಅಂಗುಲಿಗಳು ದಷ್ಟಪುಷ್ಟವಾಗಿದ್ದವು. ಮಾಲೆ-ಆಭರಣಗಳನ್ನು ಧರಿಸಿದ್ದನು. ಸ್ವಲ್ಪ ನುಗ್ಗಾದ ಕವಚವನ್ನು ಧರಿಸಿದ್ದನು. ಅವನು ತನ್ನ ಎಡಗೈಯನ್ನು ಮೇಲೆ ಎತ್ತಿ ದೇವತೆಗಳಿಂದ ಹತರಾಗಿದ್ದ ದಾನವರನ್ನು “ಮೇಲೇಳಿ!” ಎಂದು ಹೇಳುತ್ತಾ ಬರುತ್ತಿದ್ದನು.

ತಂ ಕಾಲನೇಮಿಂ ಸಮರೇ ದ್ವಿಷತಾಂ ಕಾಲಸನ್ನಿಭಮ್ ।
ವೀಕ್ಷಂತಿ ಸ್ಮ ಸುರಾಃ ಸರ್ವೇ ಭಯವಿಕ್ಲವಮಾನಸಾಃ ।। ೧-೪೬-೫೮

ಸಮರದಲ್ಲಿ ಶತ್ರುಗಳಿಗೆ ಕಾಲಸದೃಶನಾಗಿದ್ದ ಆ ಕಾಲನೇಮಿಯನ್ನು ಸುರರೆಲ್ಲರೂ ಭಯಭೀತರಾಗಿ ಅವನ ಕಡೆ ನೋಡತೊಡಗಿದರು.

ತಂ ಸ್ಮ ವೀಕ್ಷಂತಿ ಭೂತಾನಿ ಕ್ರಮಂತಂ ಕಾಲನೇಮಿನಮ್ ।
ತ್ರಿವಿಕ್ರಮಂ ವಿಕ್ರಮಂತಂ ನಾರಾಯಣಮಿವಾಪರಮ್ ।। ೧-೪೬-೫೯

ದೊಡ್ಡ-ದೊಡ್ಡ ಹೆಜ್ಜೆಗಳನ್ನಿಡುತ್ತಾ ಮುಂದೆ ಬರುತ್ತಿದ್ದ ಕಾಲನೇಮಿಯನ್ನು ನೋಡಿದ ಸರ್ವಭೂತಗಳಿಗೂ ಅವನು ಹೆಜ್ಜೆಯಿಡುತ್ತಿರುವ ಎರಡನೆಯ ತ್ರಿವಿಕ್ರಮ ನಾರಾಯಣನೋ ಎಂಬಂತೆ ತೋರುತ್ತಿದ್ದನು.

ಸೋಚ್ಛ್ರಯನ್ಪ್ರಥಮಂ ಪಾದಂ ಮಾರುತಾಘೂರ್ಣಿತಾಂಬರಃ ।
ಪ್ರಾಕ್ರಾಮದಸುರೋ ಯುದ್ಧೇ ತ್ರಾಸಯನ್ಸರ್ವದೇವತಾಃ ।। ೧-೪೬-೬೦

ಸರ್ವ ದೇವತೆಗಳನ್ನೂ ನಡುಗಿಸುತ್ತಾ ಆ ಅಸುರನು ಯುದ್ಧದಲ್ಲಿ ತನ್ನ ಮೊದಲ ಹೆಜ್ಜೆಯನ್ನು ಇಟ್ಟಾಗ ಮೇಲೆದ್ದ ಭಿರುಗಾಳಿಯಿಂದ ಅವನ ವಸ್ತ್ರವು ಹಾರಾಡತೊಡಗಿತು.

ಸ ಮಯೇನಾಸುರೇಂದ್ರೇಣ ಪರಿಷ್ವಕ್ತಃ ಕ್ರಮನ್ರಣೇ ।
ಕಾಲನೇಮಿರ್ಬಭೌ ದೈತ್ಯಃ ವಿಷ್ಣುನೇವ ಪುರಂದರಃ2 ।। ೧-೪೬-೬೧

ರಣದಲ್ಲಿ ಮುಂದೆಬರುತ್ತಿದ್ದ ಅವನನ್ನು ಅಸುರೇಂದ್ರ ಮಯನು ಆಲಂಗಿಸಿದನು. ಆಗ ದೈತ್ಯನೊಂದಿಗೆ ಕಾಲನೇಮಿಯು ಪುರಂದರನೊಡನಿದ್ದ ವಿಷ್ಣುವಿನಂತೆಯೇ ತೋರಿದನು.

ಅಥ ವಿವ್ಯಥಿರೇ ದೇವಾಃ ಸರ್ವೇ ಶಕ್ರಪುರೋಗಮಾಃ ।
ದೃಷ್ಟ್ವಾ ಕಾಲಮಿವಾಯಾಂತಂ ಕಾಲನೇಮಿಂ ಭಯಾವಹಮ್ ।। ೧-೪೬-೬೨

ಕಾಲನಂತೆ ಬರುತ್ತಿದ್ದ ಭಯಾವಹ ಕಾಲನೇಮಿಯನ್ನು ನೋಡಿ ಶಕ್ರನೇ ಮೊದಲಾದ ಎಲ್ಲ ದೇವತೆಗಳೂ ವ್ಯಥಿತರಾದರು.”

ಸಮಾಪ್ತಿ

ಇತಿ ಶ್ರೀಮನ್ಮಹಾಭಾರತೇ ಖಿಲೇಷು ಹರಿವಂಶೇ ಹರಿವಂಶಪರ್ವಣಿ ಕಾಲನೇಮಿಪ್ರಕ್ರಮಣೇ ಷಡ್ಚತ್ವಾರಿಂಶೋಽಧ್ಯಾಯಃ


  1. ನಕ್ಷತ್ರಗಳ ಕುರಿತು ವಿಚಾರಮಾಡುವವರು ಮತ್ತು ಚಂದ್ರನ ಉಪಾಸಕರೂ ನಿನ್ನನ್ನು ವಾಸ್ತವಿಕರೂಪದಲ್ಲಿ ಅರಿಯಲಾರರು (ಗೀತಾ ಪ್ರೆಸ್). ↩︎

  2. ಸವಿಷ್ಣುರಿವ ಮಂದರಃ। ಎಂಬ ಪಾಠಾಂತರವಿದೆ. ↩︎