045: ದೇವಾಸುರಸಂಗ್ರಾಮವರ್ಣನಮ್

ಪ್ರವೇಶ

।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।

ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ

ಶ್ರೀ ಮಹಾಭಾರತ

ಖಿಲಭಾಗೇ ಹರಿವಂಶಃ

ಹರಿವಂಶ ಪರ್ವ

ಅಧ್ಯಾಯ 45

ಸಾರ

ದೇವಾಸುರಸಂಗ್ರಾಮ ಮತ್ತು ಔರ್ವ ಅಗ್ನಿಯ ಉತ್ಪತ್ತಿ (1-77).

ವೈಶಂಪಾಯನ ಉವಾಚ ।
ತಾಭ್ಯಾಂ ಬಲಾಭ್ಯಾಂ ಸಂಜಜ್ಞೇ ತುಮುಲೋ ವಿಗ್ರಹಸ್ತದಾ ।
ಸುರಾಣಾಮಸುರಾಣಾಂ ಚ ಪರಸ್ಪರಜಯೈಷಿಣಾಮ್ ।। ೧-೪೫-೧

ವೈಶಂಪಾಯನನು ಹೇಳಿದನು: “ಆಗ ಪರಸ್ಪರರನ್ನು ಜಯಿಸಲು ಬಯಸಿದ್ದ ಆ ಸುರ ಮತ್ತು ಅಸುರಸೇನೆಗಳ ತುಮುಲಯುದ್ಧವು ಪ್ರಾರಂಭವಾಯಿತು.

ದಾನವಾ ದೈವತೈಃ ಸಾರ್ಧಂ ನಾನಾಪ್ರಹರಣೋದ್ಯತಾಃ ।
ಸಮೀಯುರ್ಯುಧ್ಯಮಾನಾ ವೈ ಪರ್ವತಾಃ ಪರ್ವತೈರಿವ ।। ೧-೪೫-೨

ನಾನಾಪ್ರಹರಣಗಳನ್ನು ಮೇಲೆತ್ತಿ ದಾನವರು ಪರ್ವತಗಳು ಪರ್ವತಗಳೊಡನೆ ಯುದ್ಧಮಾಡುತ್ತಿರುವವೋ ಎನ್ನುವಂತೆ ದೇವತೆಗಳೊಡನೆ ಯುದ್ಧಮಾಡತೊಡಗಿದರು.

ತತ್ಸುರಾಸುರಸಂಯುಕ್ತಂ ಯುದ್ಧಮತ್ಯದ್ಭುತಂ ಬಭೌ ।
ಧರ್ಮಾಧರ್ಮಸಮಾಯುಕ್ತಂ ದರ್ಪೇಣ ವಿನಯೇನ ಚ ।। ೧-೪೫-೩

ಸುರಾಸುರಸಂಯುಕ್ತವಾಗಿದ್ದ ಆ ಯುದ್ಧವು ಧರ್ಮ ಮತ್ತು ಅಧರ್ಮಗಳು ಯುದ್ಧಮಾಡುತ್ತಿವೆಯೋ ಅಥಾವ ದರ್ಪವು ವಿನಯೊಂದಿಗೆ ಯುದ್ಧಮಾಡುತ್ತಿವೆಯೋ ಎಂಬಂತೆ ಅತ್ಯದ್ಭುತವಾಗಿತ್ತು.

ತತೋ ರಥೈಃ ಪ್ರಜವಿಭಿರ್ವಾಹನೈಶ್ಚ ಪ್ರಚೋದಿತೈಃ ।
ಉತ್ಪತದ್ಭಿಶ್ಚ ಗಗನಂ ಸಾಸಿಹಸ್ತೈಃ ಸಮಂತತಃ ।। ೧-೪೫-೪
ವಿಕ್ಷಿಪ್ಯಮಾಣೈರ್ಮುಸಲೈಃ ಸಂ ಪ್ರೇಷ್ಯದ್ಭಿಶ್ಚ ಸಾಯಕೈಃ ।
ಚಾಪೈರ್ವಿಸ್ಫಾರ್ಯಮಾಣೈಶ್ಚ ಪಾತ್ಯಮಾನೈಶ್ಚ ಮುದ್ಗರೈಃ ।। ೧-೪೫-೫
ತದ್ಯುದ್ಧಮಭವದ್ಘೋರಂ ದೇವದಾನವಸಂಕುಲಮ್ ।
ಜಗತಸ್ತ್ರಾಸಜನನಂ ಯುಗಸಂವರ್ತಕೋಪಮಮ್ ।। ೧-೪೫-೬

ಆಗ, ಪ್ರಜೋದಿತ ವಾಹನ-ರಥಗಳ ವೇಗದಿಂದ, ಎಲ್ಲಕಡೆ ಗಗನಕ್ಕೆ ಹಾರುತ್ತಿದ್ದ ಖಡ್ಗಧಾರಿಗಳಿಂದ, ಮುಸಲಗಳ ಎಸೆತದಿಂದ, ಸಾಯಕಗಳ ಪ್ರಯೋಗದಿಂದ, ಧನುಸ್ಸುಗಳ ಟೇಂಕಾರದಿಂದ, ಮುದ್ಗರಗಳು ಬೀಳುವುದರಿಂದ ದೇವ-ದಾನವರಿಂದ ತುಂಬಿಹೋಗಿದ್ದ ಆ ಘೋರ ರಣಭೂಮಿಯು ಪ್ರಲಯಕಾಲದ ಅಗ್ನಿಯಂತೆ ಸಂಪೂರ್ಣ ಜಗತ್ತನ್ನು ಭಯಪಡಿಸಿತು.

ಸ್ವಹಸ್ತಮುಕ್ತೈಃ ಪರಿಘೈಃ ಕ್ಷಿಪ್ಯಮಾಣೈಶ್ಚ ಪರ್ವತೈಃ ।
ದಾನವಾ ಸಮರೇ ಜಘ್ನುರ್ದೇವಾನಿಂದ್ರಪುರೋಗಮಾನ್ ।। ೧-೪೫-೭

ಆ ಸಮರದಲ್ಲಿ ದಾನವರು ತಮ್ಮ ಕೈಗಳಿಂದ ಎಸೆಯಬಹುದಾದ ಪರ್ವತದಂಥಹ ಪರಿಘಗಳಿಂದ ಇಂದ್ರನ ನಾಯಕತ್ವದಲ್ಲಿದ್ದ ದೇವತೆಗಳನ್ನು ಗಾಯಗೊಳಿಸಿದರು.

ತೇ ವಧ್ಯಮಾನಾ ಬಲಿಭಿರ್ದಾನವೈರ್ಜಿತಕಾಶಿಭಿಃ ।
ವಿಷಣ್ಣಮನಸೋ ದೇವಾ ಜಗ್ಮುರಾರ್ತಿಂ ಪರಾಮ್ಮೃಧೇ ।। ೧-೪೫-೮

ಜಿತಕಾಶೀ ಬಲಶಾಲೀ ದಾನವರಿಂದ ವಧಿಸಲ್ಪಡುತ್ತಿದ್ದ ದೇವತೆಗಳು ವಿಷಣ್ಣಮನಸ್ಕರಾದರು ಮತ್ತು ಯುದ್ಧದಲ್ಲಿ ಅತ್ಯಂತ ಪೀಡಿತರಾದರು.

ತೇಽಸ್ತ್ರಜಾಲೈಃ ಪ್ರಮಥಿತಾಃ ಪರಿಘೈರ್ಭಿನ್ನಮಸ್ತಕಾಃ ।
ಭಿನ್ನೋರಸ್ಕಾ ದಿತಿಸುತೈರ್ವೇಮೂ ರಕ್ತಂ ವ್ರಣೈರ್ಬಹು ।। ೧-೪೫-೯

ದಿತಿಸುತರು ಅವರನ್ನು ಅಸ್ತ್ರಜಾಲಗಳಿಂದ ಪ್ರಮಥಿಸಿ ಪರಿಘಗಳಿಂದ ಅವರ ಮಸ್ತಕಗಳನ್ನು ಒಡೆದರು ಮತ್ತು ಎದೆಗಳನ್ನು ಸೀಳಿದರು. ಗಾಯಗೊಂಡವರು ಅಧಿಕ ರಕ್ತವನ್ನು ಸುರಿಸಿದರು.

ಸ್ಪಂದಿತಾಃ ಪಾಶಜಾಲೈಶ್ಚ ನಿಯತ್ನಾಶ್ಚ ಶರೈಃ ಕೃತಾಃ ।
ಪ್ರವಿಷ್ಟ ದಾನವೀಂ ಮಾಯಾಂ ನ ಶೇಕುಸ್ತೇ ವಿಚೇಷ್ಟಿತುಮ್ ।। ೧-೪೫-೧೦

ದೈತ್ಯರು ಪಾಶಜಾಲ1ಗಳನ್ನು ಬೀಸಿ ದೇವತೆಗಳನ್ನು ನಿರುಪಾಯರನ್ನಾಗಿ2 ಮಾಡಿದರು ಮತ್ತು ಬಾಣಗಳ ಪ್ರಯೋಗದಿಂದ ಅವರ ಅಂಗಾಂಗಗಳು ರಕ್ತಸುರಿಸುವಂತೆ ಗಾಯಗೊಳಿಸಿದರು.

ಸಂಸ್ತಂಭಿತಮಿವಾಭಾತಿ ನಿಷ್ಪ್ರಾಣಸದೃಶಾಕೃತಿ ।
ಬಲಂ ಸುರಾಣಾಮಸುರೈರ್ನಿಷ್ಪ್ರಯತ್ನಾಯುಧಂ ಕೃತಮ್ ।। ೧-೪೫-೧೧

ದೇವತೆಗಳು ಸ್ತಂಭಿತರಾದಂತೆ ತೋರುತ್ತಿದ್ದರು. ಪ್ರಾಣರಹಿತ ಶವಗಳಂತೆ ತೋರುತ್ತಿದ್ದರು. ಅಸುರರು ಸುರಸೇನೆಯನ್ನು ನಿಷ್ಪ್ರಯತ್ನರನ್ನಾಗಿಯೂ ನಿರಾಯುಧರನ್ನಾಗಿಯೂ ಮಾಡಿದರು.

ಮಾಯಾಪಾಶಾನ್ವಿಕರ್ಷಂಶ್ಚ ಭಿಂದನ್ವಜ್ರೇಣ ತಾನ್ ಶರಾನ್ ।
ಶಕ್ರೋ ದೈತ್ಯಬಲಂ ಘೋರಂ ವಿವೇಶ ಬಹುಲೋಚನಃ ।। ೧-೪೫-೧೨

ಆಗ ಬಹುಲೋಚನ ಶಕ್ರನು ವಜ್ರದಿಂದ ಆ ಮಾಯಾಪಾಶಗಳನ್ನು ಕಡಿಯುತ್ತಾ ಮತ್ತು ಶರಗಳನ್ನು ತುಂಡುಮಾಡುತ್ತಾ ಘೋರ ದೈತ್ಯಬಲವನ್ನು ಪ್ರವೇಶಿಸಿದನು.

ಸ ದೈತ್ಯಾನ್ಪ್ರಮುಖೇ ಹತ್ವಾ ತದ್ದಾನವಬಲಂ ಮಹತ್ ।
ತಾಮಸೇನಾಸ್ತ್ರಜಾಲೇನ ತಮೋಭೂತಮಥಾಕರೋತ್ ।। ೧-೪೫-೧೩

ಅವನು ದೈತ್ಯಪ್ರಮುಖರನ್ನು ಸಂಹರಿಸಿ ಆ ಮಹಾ ದಾನವ ಬಲವನ್ನು ತಾಮಾಸ್ತ್ರದ ಜಾಲದಿಂದ ಅಂಧಕಾರಮಯವನ್ನಾಗಿಸಿದನು.

ತೇಽನ್ಯೋನ್ಯಂ ನಾವಬುಧ್ಯಂತ ದೇವಾನ್ವಾ ದಾನವಾನಪಿ ।
ಘೋರೇಣ ತಮಸಾವಿಷ್ಟಾಃ ಪುರುಹೂತಸ್ಯ ತೇಜಸಾ ।। ೧-೪೫-೧೪

ಪುರುಹೂತನ ತೇಜಸ್ಸಿನಿಂದ ಘೋರ ಅಂಧಕಾರದಲ್ಲಿ ಸಿಲುಕಿದ ಅವರು ಅನ್ಯೋನ್ಯರು ದೇವತೆಗಳೋ ಅಥವಾ ದಾನವರೋ ಎಂದು ಅರಿಯದಂತಾದರು.

ಮಾಯಾಪಾಶೈರ್ವಿಮುಕ್ತಾಶ್ಚ ಯತ್ನವಂತಃ ಸುರೋತ್ತಮಾಃ ।
ವಪೂಂಷಿ ದೈತ್ಯಸಂಘಾನಾಂ ತಮೋಭೂತಾನ್ಯಪಾತಯನ್ ।। ೧-೪೫-೧೫

ಮಾಯಾಪಾಶದಿಂದ ವಿಮುಕ್ತರಾದ ಯತ್ನಶೀಲ ಸುರೋತ್ತಮರು ಆ ದೈತ್ಯಸಂಘಗಳನ್ನು ಅಂಧಕಾರದಲ್ಲಿ ಮುಳುಗಿಸಿ ಭೂಮಿಯ ಮೇಲೆ ಬೀಳಿಸತೊಡಗಿದರು.

ಅಪಧ್ವಸ್ತಾ ವಿಸಂಜ್ಞಾಶ್ಚ ತಮಸಾ ನೀಲವರ್ಚಸಃ ।
ಪೇತುಸ್ತೇ ದಾನವಗಣಾಶ್ಛಿನ್ನಪಕ್ಷಾ ಇವಾಚಲಾಃ ।। ೧-೪೫-೧೬

ಅಂಧಕಾರದಲ್ಲಿ ಮುಳುಗಿ ನೀಲವರ್ಚಸರಾದ ಆ ದಾನವಗಣಗಳು ಮೂರ್ಛಿತಗೊಂಡು ರೆಕ್ಕೆಗಳು ಕತ್ತರಿಸಲ್ಪಟ್ಟ ಪರ್ವತಗಳಮ್ತೆ ಭೂಮಿಗೊರಗಿದವು.

ತದ್ಘನೀಭೂತದೈತ್ಯಾನಾಮಂಧಕಾರಮಹಾರ್ಣವಮ್ ।
ಪ್ರವಿಷ್ಟಂ ಬಲಮುತ್ತ್ರಸ್ತಂ ತಮೋಭೂತಮಿವಾಬಭೌ ।। ೧-೪೫-೧೭

ಅಂಧಕಾರದ ಮಾಹಾಸಾಗರದಲ್ಲಿ ಮುಳುಗಿದ್ದ ದೈತ್ಯರ ಆ ಘನೀಭೂತ ಸೇನೆಯು ಅತ್ಯಂತ ಭಯಭೀತಗೊಂಡು ಅದೇ ತಮೋಭೂತವಾದಂತೆ ತೋರುತ್ತಿತ್ತು.

ತದಾಸೃಜನ್ಮಹಾಮಾಯಾಂ ಮಯಸ್ತಾಂ ತಾಮಸೀಂ ದಹನ್ ।
ಯುಗಾಂತಾಗ್ನಿಮಿವಾತ್ಯುಗ್ರಾಂ ಸೃಷ್ಟಾಮೌರ್ವೇಣ ವಹ್ನಿನಾ ।। ೧-೪೫-೧೮

ಆಗ ಮಯನು ಮಾಹಾಮಾಯೆಯಿಂದ ಔರ್ವನಿಂದ ಸೃಷ್ಟಿಸಲ್ಪಟ್ಟ ಅಗ್ನಿಯನ್ನು3 ಪ್ರಯೋಗಿಸಿ ಆ ತಮಸ್ಸನ್ನು ಸುಟ್ಟುಹಾಕಿದನು.

ಸಾ ದದಾಹ ತಮಃ ಸರ್ವಂ ಮಾಯಾ ಮಯವಿಕಲ್ಪಿತಾ ।
ದೈತ್ಯಾಶ್ಚ ದೀಪ್ತವಪುಷಃ ಸದ್ಯ ಉತ್ತಸ್ಥುರಾಹವೇ ।। ೧-೪೫-೧೯

ಮಯನಿಂದ ಕಲ್ಪಿತವಾದ ಆ ಮಾಯೆಯು ಸರ್ವತಮವನ್ನೂ ಸುಟ್ಟುಭಸ್ಮಮಾಡಿತು. ಬೆಳಗುವ ಶರೀರಗಳಿಂದ ದೈತ್ಯರು ಯುದ್ಧದಲ್ಲಿ ಮೇಲೆದ್ದರು.

ಮಾಯಾಮೌರ್ವೀಂ ಸಮಾಸಾದ್ಯ ದಹ್ಯಮಾನಾ ದಿವೌಕಸಃ ।
ಭೇಜಿರೇ ಚಂದ್ರವಿಷಯಂ ಶೀತಾಂಶುಸಲಿಲೇ ಶಯಾತ್ ।। ೧-೪೫-೨೦

ಮಾಯೆಯ ಔರ್ವೀ ಅಗ್ನಿಗೆ ಸಿಲುಕಿದ ದಿವೌಕಸರು ದಹಿಸತೊಡಗಿದರು ಮತ್ತು ಶೀತಲ ಸಲಿಲದಲ್ಲಿ ಮಲಗಲು ಚಂದ್ರನ ಬಳಿ ಬಂದರು.

ತೇ ದಹ್ಯಮಾನಾ ಹ್ಯೌರ್ವೇಣ ತೇಜಸಾ ಭ್ರಷ್ಟತೇಜಸಃ ।
ಶಶಂಸುರ್ವಜ್ರಿಣೇ ದೇವಾಃ ಸಂತಪ್ತಾಃ ಶರಣೈಷಿಣಃ ।। ೧-೪೫-೨೧

ಔರ್ವಾಗ್ನಿಯ ತೇಜಸ್ಸಿನಿಂದ ಸುಟ್ಟು ಭ್ರಷ್ಟತೇಜಸರಾಗಿ ಸಂತಪ್ತರಾದ ದೇವತೆಗಳು ಶರಣ್ಯನನ್ನು ಬಯಸಿ ವಜ್ರಿಣಿಯ ಬಳಿಸಾರಿದರು.

ಸಂತಪ್ತೇ ಮಾಯಯಾ ಸೈನ್ಯೇ ದಹ್ಯಮಾನೇ ಚ ದಾನವೈಃ ।
ಚೋದಿತೋ ದೇವರಾಜೇನ ವರುಣೋ ವಾಕ್ಯಮಬ್ರವೀತ್ ।। ೧-೪೫-೨೨

ಮಾಯೆಯಿಂದ ಸಂತಪ್ತಗೊಂಡ ಸೈನ್ಯವು ದಾನವರಿಂದ ಸುಡಲ್ಪಟ್ಟು ದೇವರಾಜನಿಂದ ಪ್ರೇರಿತನಾಗಿ ವರುಣನು ಈ ಮಾತನ್ನಾಡಿದನು.

ವರುಣ ಉವಾಚ ।
ಪುರಾ ಬ್ರಹ್ಮರ್ಷಿಜಃ ಶಕ್ರ ತಪಸ್ತೇಪೇಽತಿದಾರುಣಮ್ ।
ಊರ್ವೋ ಮುನಿಃ ಸ ತೇಜಸ್ವೀ ಸದೃಶೋ ಬ್ರಹ್ಮಣೋ ಗುಣೈಃ ।। ೧-೪೫-೨೩

ವರುಣನು ಹೇಳಿದನು: “ಶಕ್ರ! ಹಿಂದೆ ಬ್ರಹ್ಮನ ಗುಣಗಳನ್ನೇ ಹೊಂದಿದ್ದ ಬ್ರಹ್ಮರ್ಷಿ ಭೃಗುವಿನ ಮಗ ಊರ್ವನೆಂಬ ತೇಜಸ್ವೀ ಮುನಿಯು ಅತಿದಾರುಣ ತಪಸ್ಸನ್ನು ತಪಿಸಿದನು.

ತಂ ತಪಂತಮಿವಾದಿತ್ಯಂ ತಪಸಾ ಜಗದವ್ಯಯಮ್ ।
ಉಪತಸ್ಥುರ್ಮುನಿಗಣಾ ದೇವಾ ಬ್ರಹ್ಮರ್ಷಿಭಿಃ ಸಹ ।। ೧-೪೫-೨೪

ಆದಿತ್ಯನು ಈ ಅವ್ಯಯ ಜಗತ್ತನ್ನು ಸುಡುವಂತೆ ಅವನು ತಪಸ್ಸಿನಿಂದ ಸುಡತೊಡಗಿದನು. ಆಗ ಬ್ರಹ್ಮರ್ಷಿಗಳೊಂದಿದೆ ದೇವ-ಮುನಿಗಣಗಳು ಅವನ ಬಳಿ ಹೋದರು.

ಹಿರಣ್ಯಕಶಿಪುಶ್ಚೈವ ದಾನವೋ ದಾನವೇಶ್ವರಃ ।
ಋಷಿಂ ವಿಜ್ಞಾಪಯಾಮಾಸ ಪುರಾ ಪರಮತೇಜಸಮ್ ।। ೧-೪೫-೨೫

ದಾನವೇಶ್ವರ ದಾನವ ಹಿರಣ್ಯಕಶಿಪುವೂ ಕೂಡ ಹಿಂದೆ ಈ ಪರಮತೇಜಸ್ವಿ ಋಷಿಯಲ್ಲಿ ವಿಜ್ಞಾಪಿಸಿಕೊಂಡಿದ್ದನು.

ತಮೂಚುರ್ಬ್ರಹ್ಮಋಷಯೋ ವಚನಂ ಬ್ರಹ್ಮಸಂಮಿತಮ್ ।
ಋಷಿವಂಶೇಷು ಭಗವಂನ್ಛಿನ್ನಮೂಲಮಿದಂ ಕುಲಮ್ ।। ೧-೪೫-೨೬

ಬ್ರಹ್ಮರ್ಷಿಗಳು ಅವನಿಗೆ ಬ್ರಹ್ಮಸಂಮಿತವಾದ ಈ ಮಾತನ್ನಾಡಿದರು: “ಭಗವನ್! ಋಷಿವಂಶದ ಈ ಕುಲವು ಬೇರುಸಹಿತವಾಗಿ ಕೀಳಲ್ಪಟ್ಟಿದೆ.

ಏಕಸ್ತ್ವಮನಪತ್ಯಶ್ಚ ಗೋತ್ರಂ ಯನ್ನಾನುವರ್ತಸೇ ।
ಕೌಮಾರಂ ವ್ರತಮಾಸ್ಥಾಯ ಕ್ಲೇಶಮೇವಾನುವರ್ತಸೇ ।। ೧-೪೫-೨೭

ಈ ಗೋತ್ರವನ್ನು ಮುಂದುವರಿಸಿಕೊಂಡು ಹೋಗಬಲ್ಲ ನೀನೊಬ್ಬನೇ ಉಳಿದುಕೊಂಡಿದ್ದೀಯೆ. ಆದರೆ ನಿನಗೆ ಮಕ್ಕಳಿಲ್ಲ. ಕೌಮಾರವ್ರತವನ್ನಾಶ್ರಯಿಸಿ ಕ್ಲೇಶವನ್ನೇ ತಂದೊಡ್ಡುತ್ತಿದ್ದೀಯೆ.

ಬಹೂನಿ ವಿಪ್ರಗೋತ್ರಾಣಿ ಮುನೀನಾಂ ಭಾವಿತಾತ್ಮನಾಮ್ ।
ಏಕದೇಹಾನಿ ತಿಷ್ಠಂತಿ ವಿಭಕ್ತಾನಿ ವಿನಾ ಪ್ರಜಾಃ ।। ೧-೪೫-೨೮

ಭಾವಿತಾತ್ಮ ಮುನಿಗಳ ಅನೇಕ ವಿಪ್ರಗೋತ್ರಗಳು ಒಬ್ಬನೇ ಒಬ್ಬನ ಮೇಲೆ ಅವಲಂಬಿತಗೊಂಡಿವೆ ಮತ್ತು ಸಂತಾನಗಳಲ್ಲಿದೇ ಬೇರಿನಿಂದ ಕತ್ತರಿಸಲ್ಪಟ್ಟಿವೆ.

ಕುಲೇಷು ಛಿನ್ನಮೂಲೇಷು ತೇಷು ನೋ ನಾಸ್ತಿ ಕಾರಣಮ್ ।
ಭವಾಂಸ್ತು ತಪಸಾ ಶ್ರೇಷ್ಠಃ ಪ್ರಜಾಪತಿಸಮದ್ಯುತಿಃ ।। ೧-೪೫-೨೯

ಬೇರೇ ಛಿನ್ನವಾಗಿರುವ ಆ ಕುಲಗಳ ವೃದ್ಧಿಗೆ ಕಾರಣವನ್ನೇ ನಾವು ಕಾಣುತ್ತಿಲ್ಲ. ಆದರೆ ನೀನಾದರೋ ತಪಸ್ಸಿನಲ್ಲಿ ಶ್ರೇಷ್ಠನು ಮತ್ತು ಪ್ರಜಾಪತಿಸಮದ್ಯುತಿಯು.

ತತ್ಪ್ರವರ್ತಸ್ವ ವಂಶಾಯ ವರ್ಧಯಾತ್ಮಾನಮಾತ್ಮನಾ ।
ತ್ವಮಾಧತ್ಸ್ವೋರ್ಜಿತಂ ತೇಜೋ ದ್ವಿತೀಯಾಂ ವೈ ತನುಂ ಕುರು ।। ೧-೪೫-೩೦

ಆದುದರಿಂದ ನಿನ್ನ ವಂಶದ ವೃದ್ಧಿಗಾಗಿ ಪ್ರಯತ್ನಿಸು. ನಿನ್ನನ್ನು ನೀನೇ ಬೆಳೆಯಿಸಿಕೋ. ನಿನ್ನ ಓಜಸ್ಸಿನ ತೇಜಸ್ಸನ್ನು ನೀಡಿ ನಿನ್ನ ಎರಡನೇ ಶರೀರವನ್ನು ಪ್ರಕಟಗೊಳಿಸು.”

ಸ ಏವಮುಕ್ತೋ ಮುನಿಭಿರ್ಮುನಿರ್ಮನಸಿ ತಾಡಿತಃ ।
ಜಗರ್ಹೇ ತಾಣೃಷಿಗಣಾನ್ವಚನಂ ಚೇದಮಬ್ರವೀತ್ ।। ೧-೪೫-೩೧

ಅವರ ಮಾತುಗಳು ಮುನಿಯ ಮನಸ್ಸನ್ನು ಘಾತಿಸಿದವು. ಅವನು ಆ ಋಷಿಗಳನ್ನು ನಿಂದಿಸುತ್ತಾ ಈ ಮಾತನ್ನಾಡಿದನು:

ಯಥಾಯಂ ಶಾಶ್ವತೋ ಧರ್ಮೋ ಮುನೀನಾಂ ವಿಹಿತಃ ಪುರಾ ।
ಸದಾಽಽರ್ಷಂ ಸೇವತಾಂ ಕರ್ಮ ವನ್ಯಮೂಲಫಲಾಶಿನಾಮ್ ।। ೧-೪೫-೩೨

“ವನದ ಫಲಮೂಲಗಳನ್ನು ತಿಂದುಕೊಂಡು ಇರುವವರಿಗೆ ಮತ್ತು ಸದಾ ಆರ್ಷಶಾಸ್ತ್ರಗಳಲ್ಲಿ ಹೇಳಿರುವ ಕರ್ಮಗಳನ್ನೇ ಮಾಡುವವರಿಗೇ ಪುರಾತನ ಕಾಲದಿಂದ ಈ ತಪ ಮತ್ತು ಬ್ರಹ್ಮಚರ್ಯವೆಂಬ ಶಾಶ್ವತ ಧರ್ಮವು ವಿಹಿತವಾಗಿದೆ ತಾನೇ?

ಬ್ರಹ್ಮಯೋನೌ ಪ್ರಸೂತಸ್ಯ ಬ್ರಾಹ್ಮಣಸ್ಯಾನುವರ್ತಿನಃ ।
ಬ್ರಹ್ಮಚರ್ಯಂ ಸುಚರಿತಂ ಬ್ರಹ್ಮಾಣಮಪಿ ಚಾಲಯೇತ್ ।। ೧-೪೫-೩೩

ಬ್ರಹ್ಮಯೋನಿಯಲ್ಲಿ ಹುಟ್ಟಿ ಬ್ರಾಹ್ಮಣಧರ್ಮವನ್ನು ಅನುಸರಿಸಿದವನು ಉತ್ತಮವಾಗಿ ಬ್ರಹ್ಮಚರ್ಯವನ್ನು ಪರಿಪಾಲಿಸಿದರೆ ಅವನು ಬ್ರಹ್ಮನನ್ನೂ ವಿಚಲಿತಗೊಳಿಸಬಲ್ಲನು.

ದ್ವಿಜಾನಾಂ ವೃತ್ತಯಸ್ತಿಸ್ರೋ ಯೇ ಗೃಹಾಶ್ರಮವಾಸಿನಃ ।
ಅಸ್ಮಾಕಂ ತು ವನಂ ವೃತ್ತಿರ್ವನಾಶ್ರಮನಿವಾಸಿನಾಮ್।। ೧-೪೫-೩೪

ಗೃಹಸ್ಥಾಶ್ರಮವಾಸೀ ದ್ವಿಜರಿಗೆ ಮಾತ್ರ ಶಾಸ್ತ್ರಗಳಲ್ಲಿ ಯಜ್ಞಮಾಡಿಸುವುದು, ವೇದವನ್ನು ಹೇಳಿಕೊಡುವುದು ಮತ್ತು ದಾನಗ್ರಹಣಮಾಡುವುದು – ಈ ಮೂರು ವೃತ್ತಿಗಳನ್ನು ಹೇಳಲಾಗಿದೆ. ನಮ್ಮಂಥಹ ವನವಾಸಿಗಳಿಗೆ ವನದ ಫಲಮೂಲಗಳೇ ಜೀವನಸಾಧನಗಳಾಗಿವೆ.

ಅಂಬುಭಕ್ಷಾ ವಾಯುಭಕ್ಷಾ ದಂತೋಲೂಖಲಿಕಾಸ್ತಥಾ ।
ಅಶ್ಮಕುಟ್ಟಾ ದಶನಪಾಃ ಪಂಚಾತಪತಪಾಶ್ಚ ಯೇ ।। ೧-೪೫-೩೫

ಕೆಲವರು ಕೇವಲ ನೀರನ್ನೇ ಕುಡಿದುಕೊಂಡಿರುತ್ತಾರೆ. ಕೆಲವರು ವಾಯುವನ್ನೇ ಕುಡಿದುಕೊಂಡಿರುತ್ತಾರೆ. ಕೆಲವರು ಹಲ್ಲಿನಿಂದಲೇ ಕೀಳುವ ಮತ್ತು ಕುಟ್ಟುವ ಕಾರ್ಯಗಳನ್ನು ಮಾಡುವ ದಶನಪರಿದ್ದಾರೆ. ಆಶ್ಮಕುಟ್ಟರಿದ್ದಾರೆ. ಪಂಚಾಗ್ನಿಯನ್ನೇ ಸೇವಿಸುವವರಿದ್ದಾರೆ.

ಏತೇ ತಪಸಿ ತಿಷ್ಠಂತೋ ವ್ರತೈರಪಿ ಸುದುಷ್ಕರೈಃ ।
ಬ್ರಹ್ಮಚರ್ಯಂ ಪುರಸ್ಕೃತ್ಯ ಪ್ರಾರ್ಥಯಂತೇ ಪರಾಂ ಗತಿಮ್ ।। ೧-೪೫-೩೬

ಇವರು ದುಷ್ಕರ ವ್ರತಗಳನ್ನು ಆಚರಿಸುತ್ತಾ ತಪಸ್ಸನ್ನಾಚರಿಸುತ್ತಾ ಬ್ರಹ್ಮಚರ್ಯವನ್ನು ಪ್ರಧಾನವಾಗಿಟ್ಟುಕೊಂಡು ಪರಮ ಗತಿಯನ್ನು ಪ್ರಾರ್ಥಿಸುತ್ತಾರೆ.

ಬ್ರಹ್ಮಚರ್ಯಾದ್ಬ್ರಾಹ್ಮಣಸ್ಯ ಬ್ರಾಹ್ಮಣತ್ವಂ ವಿಧೀಯತೇ ।
ಏವಮಾಹುಃ ಪರೇ ಲೋಕೇ ಬ್ರಹ್ಮ ಬ್ರಹ್ಮವಿದೋ ಜನಾಃ ।। ೧-೪೫-೩೭

ಬ್ರಹ್ಮಚರ್ಯದಿಂದ ಬ್ರಾಹ್ಮಣನಿಗೆ ಬ್ರಾಹ್ಮಣತ್ವವು ದೊರೆಯುತ್ತದೆ. ಬ್ರಹ್ಮವಿದ ಜನರು ಇದು ಪರಲೋಕದಲ್ಲಿ ಬ್ರಹ್ಮನನ್ನು ನೀಡುತ್ತದೆ ಎಂದು ಹೇಳುತ್ತಾರೆ.

ಬ್ರಹ್ಮಚರ್ಯೇ ಸ್ಥಿತಂ ಧೈರ್ಯಂ ಬ್ರಹ್ಮಚರ್ಯೇ ಸ್ಥಿತಂ ತಪಃ ।
ಯೇ ಸ್ಥಿತಾ ಬ್ರಹ್ಮಚರ್ಯೇಷು ಬ್ರಾಹ್ಮಣಾಸ್ತೇ ದಿವಿ ಸ್ಥಿತಾಃ ।। ೧-೪೫-೩೮

ಧೈರ್ಯವು ಬ್ರಹ್ಮಚರ್ಯದಲ್ಲಿಯೇ ಸ್ಥಿತವಾಗಿದೆ. ಬ್ರಹ್ಮಚರ್ಯದಲ್ಲಿ ತಪಸ್ಸು ಸ್ಥಿತವಾಗಿದೆ. ಬ್ರಹ್ಮಚರ್ಯದಲ್ಲಿ ಸ್ಥಿತರಾಗಿರುವವರು ಬ್ರಹ್ಮಲೋಕದಲ್ಲಿ ವಿರಾಜಿಸುತ್ತಾರೆ.

ನಾಸ್ತಿ ಯೋಗಂ ವಿನಾ ಸಿದ್ಧಿಃ ನಾಸ್ತಿ ಸಿದ್ಧಿಂ ವಿನಾ ಯಶಃ ।
ನಾಸ್ತಿ ಲೋಕೇ ಯಶೋಮೂಲಂ ಬ್ರಹ್ಮಚರ್ಯಾತ್ಪರಂ ತಪಃ ।। ೧-೪೫-೩೯

ಯೋಗವಿಲ್ಲದೇ ಸಿದ್ಧಿಯಾಗುವುದಿಲ್ಲ. ಸಿದ್ಧಿಯಿಲ್ಲದೇ ಯಶಸ್ಸಿಲ್ಲ. ಯಶಸ್ಸಿನ ಮೂಲವು ತಪಸ್ಸು. ಆದರೆ ಈ ಲೋಕದಲ್ಲಿ ಬ್ರಹ್ಮಚರ್ಯಕ್ಕಿಂತ ಹೆಚ್ಚಿನ ತಪಸ್ಸಿಲ್ಲ.

ತನ್ನಿಗೃಹ್ಯೇಂದ್ರಿಯಗ್ರಾಮಂ ಭೂತಗ್ರಾಮಂ ಚ ಪಂಚಮಮ್ ।
ಬ್ರಹ್ಮಚರ್ಯೇಣ ವರ್ತೇತ ಕಿಮತಃ ಪರಮಂ ತಪಃ ।। ೧-೪೫-೪೦

ಆದುದರಿಂದ ಇಂದ್ರಿಯಗ್ರಾಮಗಳನ್ನೂ ಐದು ಭೂತಗ್ರಾಮಗಳನ್ನೂ4 ನಿಯಂತ್ರಿಸಿ ಬ್ರಹ್ಮಚರ್ಯದಿಂದ ಇರಬೇಕು. ಇದಕ್ಕಿಂತಲೂ ಪರಮ ತಪವು ಯಾವುದಿದೆ?

ಅಯೋಗೇ ಕೇಶಹರಣಮಸಂಕಲ್ಪೇ ವ್ರತಕ್ರಿಯಾ ।
ಅಬ್ರಹ್ಮಚರ್ಯೇ ಚರ್ಯಾ ಚ ತ್ರಯಂ ಸ್ಯಾದ್ದಂಭಸಂಜ್ಞಿತಮ್ ।। ೧-೪೫-೪೧

ಅಯೋಗದಲ್ಲಿ ಮುಂಡನಮಾಡಿಕೊಳ್ಳುವುದು ಮತ್ತು ಸಂಕಲ್ಪವಿಲ್ಲದೇ ವ್ರತಗಳನ್ನು ನಡೆಸುವುದು ಮತ್ತು ಬ್ರಹ್ಮಚರ್ಯವನ್ನು ನಡೆಸದೇ ಇರುವುದು ಈ ಮೂರೂ ದಂಭದ ಲಕ್ಷಣಗಳು5.

ಕ್ವ ದಾರಾಃ ಕ್ವ ಚ ಸಂಯೋಗಃ ಕ್ವ ಚ ಭಾವವಿಪರ್ಯಯಃ ।
ಯದೇಯಂ ಬ್ರಹ್ಮಣಾ ಸೃಷ್ಟಾ ಮನಸಾ ಮಾನಸೀ ಪ್ರಜಾ ।। ೧-೪೫-೪೨

ಬ್ರಹ್ಮನು ಮನಸ್ಸಿನಿಂದಲೇ ಮಾನಸೀ ಪ್ರಜೆಗಳನ್ನು ಸೃಷ್ಟಿಸುವ ಸಮಯದಲ್ಲಿ ಪತ್ನಿಯು ಎಲ್ಲಿದ್ದಳು? ಸ್ತ್ರೀ-ಪುರುಷರ ಸಂಯೋಗವು ಎಲಿತ್ತು? ಮತ್ತು ಭಾವವಿಪರ್ಯಾಸವು6 ಎಲ್ಲಿತ್ತು?

ಯದ್ಯಸ್ತಿ ತಪಸೋ ವೀರ್ಯಂ ಯುಷ್ಮಾಕಮಮಿತಾತ್ಮನಾಮ್ ।
ಸೃಜಧ್ವಂ ಮಾನಸಾನ್ಪುತ್ರಾನ್ಪ್ರಾಜಾಪತ್ಯೇನ ಕರ್ಮಣಾ ।। ೧-೪೫-೪೩

ಅಮಿತಾತ್ಮರಾದ ನಿಮ್ಮಲ್ಲಿ ತಪಸ್ಸಿನ ವೀರ್ಯವಿದ್ದರೆ ಪ್ರಜಾಪತಿಯ ಕರ್ಮದಂತೆ ಮಾನಸಪುತ್ರರನ್ನು ಸೃಷ್ಟಿಸಿ.

ಮನಸಾ ನಿರ್ಮಿತಾ ಯೋನಿರಾಧಾತವ್ಯಾ ತಪಸ್ವಿನಾ ।
ನ ದಾರಯೋಗಂ ಬೀಜಂ ವಾ ವ್ರತಮುಕ್ತಂ ತಪಸ್ವಿನಾಮ್ ।। ೧-೪೫-೪೪

ತಪಸ್ವಿಯು ತನ್ನ ಮನೋಕಲ್ಪಿತ ಯೋನಿಯಲ್ಲಿ ಮಾನಸಿಕ ಗರ್ಭಾದಾನವನ್ನು ಮಾಡಬೇಕು. ಸ್ತ್ರೀಯೊಡನೆ ಸಂಯೋಗ ಅಥವಾ ವೀರವನ್ನು ನೀಡುವುದು ಇವು ತಪಸ್ವಿಗಳಿಗೆ ವ್ರತಗಳೆಂದು ಹೇಳಲ್ಪಟ್ಟಿಲ್ಲ.

ಯದಿದಂ ಲುಪ್ತಧರ್ಮಾರ್ಥಂ ಯುಷ್ಮಾಭಿರಿಹ ನಿರ್ಭಯೈಃ ।
ವ್ಯಾಹೃತಂ ಸದ್ಭಿರತ್ಯರ್ಥಮಸದ್ಭಿರಿವ ಮೇ ಮತಿಃ ।। ೧-೪೫-೪೫

ನೀವು ಸಜ್ಜನರಾಗಿದ್ದರೂ ಅಸಜ್ಜನರಂತೆ ನಿರ್ಭಯರಾಗಿ ಧರ್ಮಾರ್ಥ ಶೂನ್ಯವಾದ ಮಾತುಗಳನ್ನಾಡಿದ್ದೀರಿ ಎಂದು ನನಗನ್ನಿಸುತ್ತಿದೆ.

ವಪುರ್ದೀಪ್ತಾಂತರಾತ್ಮಾನಮೇಷ ಕೃತ್ವಾ ಮನೋಮಯಮ್ ।
ದಾರಯೋಗಂ ವಿನಾ ಸ್ರಕ್ಷ್ಯೇ ಪುತ್ರಮಾತ್ಮತನೂರುಹಮ್ ।। ೧-೪೫-೪೬

ಇಗೋ! ಅಂತರಾತ್ಮನು ಬೆಳಗುತ್ತಿರುವ ಈ ಶರೀರವನ್ನು ಮನೋಮಯವನ್ನಾಗಿ ಮಾಡಿಕೊಂಡು ಸ್ತ್ರೀಸಂಯೋಗವಿಲ್ಲದೇ ನನ್ನಂತೆಯೇ ಇರುವ ಪುತ್ರನನ್ನು ಸೃಷ್ಟಿಸುತ್ತೇನೆ7.

ಏವಮಾತ್ಮಾನಮಾತ್ಮಾ ಮೇ ದ್ವಿತೀಯಂ ಜನಯಿಷ್ಯತಿ ।
ವನ್ಯೇನಾನೇನ ವಿಧಿನಾ ದಿಧಕ್ಷಂತಮಿವ ಪ್ರಜಾಃ ।। ೧-೪೫-೪೭

ಈ ಪ್ರಕಾರ ನನ್ನ ಈ ಶರೀರವು ವನವಾಸಿಗೆ ಉಚಿತವಾದ ವಿಧಾನದಿಂದಲೇ ಸಮಸ್ತ ಪ್ರಜೆಗಳನ್ನೂ ಸುಡುವಂತಿರುವ ನನ್ನ ಎರಡನೇ ಸ್ವರೂಪಕ್ಕೆ ಜನ್ಮವೀಯುತ್ತದೆ.”

ಊರ್ವಸ್ತು ತಪಸಾವಿಷ್ಟೋ ನಿವೇಶ್ಯೋರುಂ ಹುತಾಶನೇ ।
ಮಮಂಥೈಕೇನ ದರ್ಭೇಣ ಪುತ್ರಸ್ಯ ಪ್ರಭವಾರಣಿಮ್ ।। ೧-೪೫-೪೮

ತಪಸ್ಸಿನಿಂದ ಆವಿಷ್ಟನಾಗಿದ್ದ ಊರ್ವನಾದರೋ ತನ್ನ ತೊಡೆಯನ್ನು ಅಗ್ನಿಯಲ್ಲಿ ಹಾಕಿದನು ಮತ್ತು ಪುತ್ರನ ಉತ್ಪತ್ತಿಗಾಗಿ ಅರಣಿರೂಪದಲ್ಲಿದ್ದ ಆ ತೊಡೆಯನ್ನು ದರ್ಭೆಯಿಂದ ಮಥಿಸತೊಡಗಿದನು.

ತಸ್ಯೋರುಂ ಸಹಸಾ ಭಿತ್ತ್ವಾ ಜ್ವಾಲಾಮಾಲೀ ನಿರಿಂಧನಃ ।
ಜಗತೋ ನಿಧನಾಕಾಂಕ್ಷೀ ಪುತ್ರೋಽಗ್ನಿಃ ಸಮಪದ್ಯತ ।। ೧-೪೫-೪೯

ಆಗ ಒಮ್ಮೆಲೇ ಅವನ ತೊಡೆಯನ್ನು ಸೀಳಿಕೊಂಡು ಓರ್ವ ಅಗ್ನಿಸ್ವರೂಪ ಪುತ್ರನು ಉತ್ಪನ್ನನಾದನು. ಜಗತ್ತನ್ನೇ ಅಂತ್ಯಕೊಳಿಸಲು ಬಯಸುತ್ತಿದ್ದ ಅವನು ಇಂಧನವಿಲ್ಲದೇ ಜ್ವಾಲಾಮಾಲಿಯಾಗಿ ಉರಿಯುತ್ತಿದ್ದನು.

ಊರ್ವಸ್ಯೋರುಂ ವಿನಿರ್ಭಿದ್ಯ ಔರ್ವೋ ನಾಮಾಂತಕೋಽನಲಃ ।
ದಿಧಕ್ಷನ್ನಿವ ಲೋಕಾಂಸ್ತ್ರೀಂಜಜ್ಞೇ ಪರಮಕೋಪನಃ ।। ೧-೪೫-೫೦

ಊರ್ವನ ತೊಡೆಯನ್ನು ಸೀಳಿ ಹುಟ್ಟಿದ ಮೂರುಲೋಕಗಳನ್ನೂ ಸುಟ್ಟುಬಿಡುವಂಥಹ ಪರಮ ಕೋಪನನಾದ ಅಂತಕ ಅನಲನಂತಿದ್ದ ಅವನ ಹೆಸರು ಔರ್ವ ಎಂದಾಯಿತು.

ಉತ್ಪನ್ನಮಾತ್ರಶ್ಚೋವಾಚ ಪಿತರಂ ದೀಪ್ತಯಾ ಗಿರಾ ।
ಕ್ಷುಧಾ ಮೇ ಬಾಧತೇ ತಾತ ಜಗದ್ಭಕ್ಷೇ ತ್ಯಜಸ್ವ ಮಾಮ್ ।। ೧-೪೫-೫೧

ಉತ್ಪನ್ನನಾಗುತ್ತಲೇ ಅವನು ಪ್ರದೀಪ್ತ ಧ್ವನಿಯಲ್ಲಿ ತಂದೆಗೆ ಹೇಳಿದನು: “ಅಪ್ಪಾ! ಹಸಿವೆಯು ನನ್ನನ್ನು ಕಾಡುತ್ತಿದೆ. ನನ್ನ ಭೋಜನಕ್ಕಾಗಿ ಇಡೀ ಜಗತ್ತನ್ನೇ ನೀಡಿಬಿಡು!”

ತ್ರಿದಿವಾರೋಹಿಭಿರ್ಜ್ವಾಲೈರ್ಜೃಂಭಮಾಣೋ ದಿಶೋ ದಶ ।
ನಿರ್ದಹನ್ನಿವ ಭೂತಾನಿ ವವೃಧೇ ಸೋಽಂತಕೋಽನಲಃ ।। ೧-೪೫-೫೨

ಆ ಕಾಲರೂಪ ಅಗ್ನಿಯು ಸಮಸ್ತ ಪ್ರಾಣಿಗಳನ್ನೂ ಸುಡುತ್ತಾ ಬೆಳೆಯತೊಡಗಿದನು. ಸ್ವರ್ಗದವರೆಗೂ ತಲುಪಿದ್ದ ತನ್ನ ಜ್ವಾಲೆಗಳಿಂದ ಅವನು ಹತ್ತು ದಿಕ್ಕುಗಳಲ್ಲಿಯೂ ಪಸರಿಸತೊಡಗಿದನು.

ಏತಸ್ಮಿನ್ನಂತರೇ ಬ್ರಹ್ಮಾ ಸರ್ವಲೋಕಪತಿಃ ಪ್ರಭುಃ ।
ಆಜಗಾಮ ಮುನಿರ್ಯತ್ರ ವ್ಯಸೃಜತ್ಪುತ್ರಮುತ್ತಮಮ್ ।। ೧-೪೫-೫೩

ಈ ಮಧ್ಯದಲ್ಲಿ ಸರ್ವಲೋಕಪತಿ ಪ್ರಭು ಬ್ರಹ್ಮನು ಉತಮ ಪುತ್ರನನ್ನು ಸೃಷ್ಟಿಸಿದ ಮುನಿಯಿದ್ದಲ್ಲಿಗೆ ಆಗಮಿಸಿದನು.

ಸ ದದರ್ಶೋರುಮೂರ್ವಸ್ಯ ದೀಪ್ಯಮಾನಂ ಸುತಾಗ್ನಿನಾ ।
ಔರ್ವಕೋಪಾಗ್ನಿಸಂತಪ್ತಾಽನ್ಲ್ಲೋಕಾಂಶ್ಚ ಋಷಿಭಿಃ ಸಹ ।
ತಮುವಾಚ ತತೋ ಬ್ರಹ್ಮಾ ಮುನಿಮೂರ್ವಂ ಸಭಾಜಯನ್ ।। ೧-೪೫-೫೪

ಊರ್ವನ ತೊಡೆಯಿಂದ ಹುಟ್ಟಿದ ಉರಿಯುತ್ತಿರುವ ಅಗ್ನಿಯ ರೂಪದಲ್ಲಿದ್ದ ಔರ್ವನನ್ನೂ, ಅವನ ಕೋಪಾಗ್ನಿಯಿಂದ ಋಷಿಗಳೊಂದಿಗೆ ಲೋಕಗಳು ಸಂತಪ್ತವಾದುದನ್ನೂ ಅವನು ನೋಡಿದನು. ಆಗ ಬ್ರಹ್ಮನು ಮುನಿ ಊರ್ವನನ್ನು ಗೌರವಿಸಿ ಹೇಳಿದನು:

ಧಾರ್ಯತಾಂ ಪುತ್ರಜಂ ತೇಜೋ ಲೋಕಾನಾಂ ಹಿತಕಾಮ್ಯಯಾ ।
ಅಸ್ಯಾಪತ್ಯಸ್ಯ ತೇ ವಿಪ್ರ ಕರಿಷ್ಯೇ ಸಾಹ್ಯಮುತ್ತಮಮ್ ।। ೧-೪೫-೫೫

“ವಿಪ್ರ! ಲೋಕಗಳ ಹಿತವನ್ನು ಬಯಸಿ ನಿನ್ನ ಪುತ್ರನ ತೇಜಸ್ಸನ್ನು ಹಿಡಿದಿಟ್ಟುಕೋ. ನಾನು ನಿನ್ನ ಈ ಪುತ್ರನಿಗೆ ಉತ್ತಮ ಸಹಾಯವನ್ನು ಮಾಡುತ್ತೇನೆ.

ವಾಸಂ ಚಾಸ್ಯ ಪ್ರದಾಸ್ಯಾಮಿ ಪ್ರಾಶನಂ ಚಾಮೃತೋಪಮಮ್ ।
ತಥ್ಯಮೇತನ್ಮಮ ವಚಃ ಶೃಣು ತ್ವಂ ವದತಾಂ ವರ ।। ೧-೪೫-೫೬

ಮಾತನಾಡುವವರಲ್ಲಿ ಶ್ರೇಷ್ಠ! ನನ್ನ ಈ ತಥ್ಯ ವಚನವನ್ನು ಕೇಳು. ನಾನು ಇವನಿಗೆ ಅಮೃತಸಮಾನ ಭೋಜನವನ್ನು ಮತ್ತು ವಾಸಿಸಲು ಸ್ಥಳವನ್ನು ನೀಡುತ್ತೇನೆ.”

ಊರ್ವ ಉವಾಚ ।
ಧನ್ಯೋಽಸ್ಮ್ಯನುಗೃಹೀತೋಽಸ್ಮಿ ಯನ್ಮಮಾದ್ಯ ಭವಾಂಶಿಶೋಃ ।
ಮತಿಮೇತಾಂ ದದಾತೀಹ ಪರಮಾನುಗ್ರಹಾಯ ವೈ ।। ೧-೪೫-೫೭

ಊರ್ವನು ಹೇಳಿದನು: “ಧನ್ಯನಾದೆ! ಅನುಗೃಹೀತನಾದೆ! ಇಂದು ನೀನು ನನ್ನ ಶಿಶುವಿಗೆ ಪರಮ ಅನುಗ್ರಹ ಮಾಡುವ ಸಲಹೆಯನ್ನು ನೀಡುತ್ತಿದ್ದೀಯೆ!

ಪ್ರಭಾವಕಾಲೇ ಸಂಪ್ರಾಪ್ತೇ ಕಾಂಕ್ಷಿತವ್ಯೇ ಸಮಾಗಮೇ ।
ಭಗವಂಸ್ತರ್ಪಿತಃ ಪುತ್ರಃ ಕೈರ್ಹವ್ಯೈಃ ಪ್ರಾಪ್ಸ್ಯತೇ ಸುಖಂ ।। ೧-೪೫-೫೮
ಕುತ್ರ ಚಾಸ್ಯ ನಿವಾಸೋ ವೈ ಭೋಜನಂ ಚ ಕಿಮಾತ್ಮಕಮ್ ।
ವಿಧಾಸ್ಯತಿ ಭವಾನಸ್ಯ ವೀರ್ಯತುಲ್ಯಂ ಮಹೌಜಸಃ ।। ೧-೪೫-೫೯

ಭಗವನ್! ಇವನ ಯೌವನಾವಸ್ಥೆಯ ಕಾಲವು ಎಂದಾಗುವುದು ಮತ್ತು ಇವನಿಗೆ ವ್ಯವಸ್ಥಿತವಾಗಿರುವ ಭೋಜನವು ಅವನಿಗಿಷ್ಟವಾಗುವುದೇ? ಇವನು ಯಾವ ಹವಿಸ್ಸಿನಿಂದ ತೃಪ್ತನಾಗಿ ಸುಖಿಯಾಗುತ್ತಾನೆ? ಇವನ ನಿವಾಸಸ್ಥಾನವು ಎಲ್ಲಿರುವುದು? ಈ ಮಹೌಜಸನ ವೀರ್ಯಕ್ಕೆ ಸರಿಸಾಟಿಯಾದ ಎಂಥಹ ಭೋಜನವನ್ನು ಇವನಿಗೆ ನೀನು ವಿಧಿಸುತ್ತೀಯೆ?”

ಬ್ರಹ್ಮೋವಾಚ ।
ವಡವಾಮುಖೇಽಸ್ಯ ವಸತಿಃ ಸಮುದ್ರಾಸ್ಯೇ ಭವಿಷ್ಯತಿ।
ಮಮ ಯೋನಿರ್ಜಲಂ ವಿಪ್ರ ತಚ್ಚ ತೋಯಮಯಂ ವಪುಃ ।। ೧-೪೫-೬೦

ಬ್ರಹ್ಮನು ಹೇಳಿದನು: “ವಿಪ್ರ! ಸಮುದ್ರದ ವಡವಾಮುಖವು ಇವನ ವಾಸಸ್ಥಾನವಾಗುವುದು. ನನ್ನ ಯೋನಿಯು ಜಲ ಮತ್ತು ವಡವಾಮುಖದ ಶರೀರವೂ ತೋಯಮಯವು.

ತದ್ಧವಿಸ್ತವ ಪುತ್ರಸ್ಯ ವಿಸೃಜಾಮ್ಯಾಲಯಂ ತು ತತ್ ।
ತತ್ರಾಯಮಾಸ್ತಾಂ ನಿಯತಃ ಪಿಬನ್ವಾರಿಮಯಂ ಹವಿಃ ।। ೧-೪೫-೬೧

ಅದೇ ಜಲವನ್ನು ನಿನ್ನ ಪುತ್ರನಿಗೆ ಹವಿಸ್ಸಿನ ರೂಪದಲ್ಲಿ ಅರ್ಪಿಸುತ್ತೇನೆ ಮತ್ತು ಅವನ ವಾಸಸ್ಥಾನವೂ ಅದೇ ಆಗುತ್ತದೆ. ಅವನು ಈ ಜಲಮಯ ಹವಿಸ್ಸನ್ನು ಕೂಡಿಯುತ್ತಾ ಸದಾ ಅಲ್ಲಿಯೇ ಇರಲಿ.

ತತೋ ಯುಗಾಂತೇ ಭೂತಾನಾಮೇಷ ಚಾಹಂ ಚ ಸುವ್ರತ ।
ಸಹಿತೌ ವಿಚರಿಷ್ಯಾವೋ ಲೋಕಾನಿತಿ ಪುನಃ ಪುನಃ ।। ೧-೪೫-೬೨

ಸುವ್ರತ! ಅನಂತರ ಭೂತಗಳ ಯುಗಾಂತದಲ್ಲಿ ಇವನು ಮತ್ತು ನಾನು ಇಬ್ಬರೂ ಒಟ್ಟಿಗೇ ಸಂಪೂರ್ಣ ಲೋಕಗಳಲ್ಲಿ ಪುನಃ ಪುನಃ ವಿಚರಿಸುತ್ತೇವೆ.

ಏಷೋಽಗ್ನಿರಂತಕಾಲೇ ತು ಸಲಿಲಾಶೀ ಮಯಾ ಕೃತಃ ।
ದಹನಃ ಸರ್ವಭೂತಾನಾಂ ಸದೇವಾಸುರರಕ್ಷಸಾಮ್ ।। ೧-೪೫-೬೩

ಈ ಅಗ್ನಿಯನ್ನು ನಾನು ಜಲಾಹಾರಿಯನ್ನಾಗಿ ಮಾಡಿದ್ದೇನೆ. ಅಂತಕಾಲದಲ್ಲಿ ಇವನು ದೇವಾಸುರರಾಕ್ಷಸರೊಂದಿಗೆ ಸರ್ವಭೂತಗಳನ್ನೂ ದಹಿಸುತ್ತಾನೆ.”

ಏವಮಸ್ತ್ವಿತಿ ಸೋಽಪ್ಯಗ್ನಿಃ ಸಂವೃತಜ್ವಾಲಮಂಡಲಃ ।
ಪ್ರವಿವೇಶಾರ್ಣವಮುಖಂ ನಿಕ್ಷಿಪ್ಯ ಪಿತರಿ ಪ್ರಭಾಮ್ ।। ೧-೪೫-೬೪

ಆಗ “ಹಾಗೆಯೇ ಆಗಲಿ!” ಎಂದು ಹೇಳಿ ಆ ಅಗ್ನಿಯು ತನ್ನ ಜ್ವಾಲಮಂಡಲವನ್ನು ಸಂಕ್ಷಿಪ್ತಗೊಳಿಸಿದನು. ತನ್ನ ಪ್ರಭೆಯನ್ನು ತಂದೆಯಲ್ಲಿರಿಸಿ ಸಮುದ್ರಮುಖವನ್ನು ಪ್ರವೇಶಿಸಿದನು.

ಪ್ರತಿಯಾತಸ್ತತೋ ಬ್ರಹ್ಮಾ ತೇ ಚ ಸರ್ವೇ ಮಹರ್ಷಯಃ ।
ಔರ್ವಸ್ಯಾಗ್ನೇಃ ಪ್ರಭಾವಜ್ಞಾಃ ಸ್ವಾಂ ಸ್ವಾಂ ಗತಿಮುಪಾಶ್ರಿತಾಃ ।। ೧-೪೫-೬೫

ಅನಂತರ ಬ್ರಹ್ಮನು ಹಿಂದಿರುಗಿದನು ಮತ್ತು ಔರ್ವನ ಅಗ್ನಿಯ ಪ್ರಭಾವವನ್ನು ತಿಳಿದ ಸರ್ವ ಮಹರ್ಷಿಗಳೂ ತಮ್ಮ ತಮ್ಮ ಸ್ಥಾನಗಳಿಗೆ ತೆರಳಿದರು.

ಹಿರಣ್ಯಕಶಿಪುರ್ದೃಷ್ಟ್ವಾ ತದದ್ಭುತಮಪೂಜಯತ್ ।
ಊರ್ವಂ ಪ್ರಣತಸರ್ವಾಂಗೋ ವಾಕ್ಯಂ ಚೇದಮುವಾಚ ಹ ।। ೧-೪೫-೬೬

ಆ ಅದ್ಭುತವನ್ನು ಕಂಡು ಹಿರಣ್ಯಕಶಿಪುವು ಊರ್ವನಿಗೆ ಸಾಷ್ಟಾಂಗ ನಮಸ್ಕಾರಮಾಡಿ ಈ ಮಾತನ್ನಾಡಿದನು:

ಭಗವನ್ನದ್ಭುತಮಿದಂ ನಿವೃತ್ತಂ ಲೋಕಸಾಕ್ಷಿಕಮ್ ।
ತಪಸಾ ತೇ ಮುನಿಶ್ರೇಷ್ಠ ಪರಿತುಷ್ಟಃ ಪಿತಾಮಹಃ ।। ೧-೪೫-೬೭

“ಭಗವನ್! ನೀನು ಲೋಕಸಾಕ್ಷಿಕವಾದ ಈ ಅದ್ಭುತವನ್ನು ಮಾಡಿ ತೋರಿಸಿದೆ. ಮುನಿಶ್ರೇಷ್ಠ! ನಿನ್ನ ತಪಸ್ಸಿನಿಂದ ಪಿತಾಮಹನು ಪರಿತುಷ್ಟನಾದನು.

ಅಹಂ ತು ತವ ಪುತ್ರಸ್ಯ ತವ ಚೈವ ಮಹಾವ್ರತ ।
ಭೃತ್ಯ ಇತ್ಯವಗಂತವ್ಯಃ ಶ್ಲಾಘ್ಯೋಽಸ್ಮಿ ಯದಿ ಕರ್ಮಣಾ ।। ೧-೪೫-೬೮

ಮಹಾವ್ರತ! ಒಂದುವೇಳೆ ನೀನು ನನ್ನ ಕರ್ಮಗಳಿಂದ ನಾನು ಶ್ಲಾಘನೀಯ ಎಂದು ಅಭಿಪ್ರಾಯಪಟ್ಟಿದ್ದರೆ ನಾನು ನನ್ನನ್ನು ನಿನ್ನ ಪುತ್ರ ಮತ್ತು ಕಿಂಕರನೆಂದು ತಿಳಿ.

ತನ್ಮಾಂ ಪಶ್ಯ ಸಮಾಪನ್ನಂ ತವೈವಾರಾಧನೇ ರತಮ್ ।
ಯದಿ ಸೀದೇ ಮುನಿಶ್ರೇಷ್ಠ ತವೈವ ಸ್ಯಾತ್ಪರಾಜಯಃ ।। ೧-೪೫-೬೯

ಮುನಿಶ್ರೇಷ್ಠ! ಆದುದರಿಂದ ನಾನು ನಿನ್ನ ಶರಣುಬಂದು ನಿನ್ನ ಆರಾಧನೆಯಲ್ಲಿಯೇ ತತ್ಪರನಾಗಿರುವುದನ್ನು ನೋಡು. ನನಗೆ ಕಷ್ಟವೊದಗಿದರೆ ನಿನ್ನದೇ ಪರಾಜಯವಾಗುವುದು!”

ಊರ್ವ ಉವಾಚ।
ಧನ್ಯೋಽಸ್ಮ್ಯನುಗೃಹೀತೋಽಸ್ಮಿ ಯಸ್ಯ ತೇಽಹಂ ಗುರುರ್ಮತಃ ।
ನಾಸ್ತಿ ತೇ ತಪಸಾನೇನ ಭಯಮದ್ಯೇಹ ಸುವ್ರತ ।। ೧-೪೫-೭೦

ಊರ್ವನು ಹೇಳಿದನು: “ಸುವ್ರತ! ನೀನು ನನ್ನನ್ನು ಗುರುವೆಂದು ತಿಳಿದಿದ್ದೀಯೆ! ಧನ್ಯನಾದೆ ಮತ್ತು ಅನುಗೃಹೀತನಾದೆ. ನನ್ನ ತಪಸ್ಸಿನ ಪ್ರಭಾವದಿಂದ ನಿನಗೆ ಇನ್ನು ಯಾವ ಭಯವೂ ಉಂಟಾಗುವುದಿಲ್ಲ.

ಇಮಾಂ ಚ ಮಾಯಾಂ ಗೃಹ್ಣೀಷ್ವ ಮಮ ಪುತ್ರೇಣ ನಿರ್ಮಿತಾಮ್ ।
ನಿರಿಂಧನಾಮಗ್ನಿಮಯೀಂ ದುಃಸ್ಪರ್ಶಾಂ ಪಾವಕೈರಪಿ ।। ೧-೪೫-೭೧

ಜೊತೆಗೆ ನನ್ನ ಪುತ್ರನು ನಿರ್ಮಿಸಿದ ಈ ಮಾಯೆಯನ್ನೂ ಸ್ವೀಕರಿಸು. ಇಂಧನ ರಹಿತವಾಗಿರುವ ಈ ಅಗ್ನಿಯನ್ನು ಸ್ವಯಂ ಪಾವಕನಿಗೂ ಸ್ಪರ್ಷಿಸಲು ಕಷ್ಟವಾಗುವುದು.

ಏಷಾ ತೇ ಸ್ವಸ್ಯ ವಂಶಸ್ಯ ವಶಗಾರಿವಿನಿಗ್ರಹೇ ।
ರಕ್ಷಿಷ್ಯತ್ಯಾತ್ಮಪಕ್ಷಂ ಸಾ ಪರಾಂಶ್ಚ ಪ್ರಹರಿಷ್ಯತಿ ।। ೧-೪೫-೭೨

ಇದು ನೀನಿರುವ ವರೆಗೆ ನಿನ್ನ ವಂಶದ ವಶದಲ್ಲಿದ್ದುಕೊಂಡು ಶತ್ರುಗಳನ್ನು ನಿಗ್ರಹಿಸಿ ನಿನ್ನ ಪಕ್ಷವನ್ನು ರಕ್ಷಿಸುತ್ತದೆ. ಶತ್ರುಗಳನ್ನು ಸಂಹರಿಸುತ್ತದೆ.”

ಏವಮಸ್ತ್ವಿತಿ ತಾಂ ಗೃಹ್ಯ ಪ್ರಣಮ್ಯ ಮುನಿಪುಂಗವಮ್ ।
ಜಗಾಮ ತ್ರಿದಿವಂ ಹೃಷ್ಟಃ ಕೃತಾರ್ಥೋ ದಾನವೇಶ್ವರಃ ।। ೧-೪೫-೭೩

ಹಾಗೆಯೇ ಆಗಲೆಂದು ಹೇಳಿ ದಾನವೇಶ್ವರನು ಮುನಿಪುಂಗವನಿಗೆ ನಮಸ್ಕರಿಸಿ ಆ ಮಾಯೆಯನ್ನು ಸ್ವೀಕರಿಸಿದನು ಮತ್ತು ಕೃತಾರ್ಥನಾದೆನೆಂಬ ಸಂತೋಷದಿಂದ ತ್ರಿದಿವಕ್ಕೆ ತೆರಳಿದನು.”

ವರುಣ ಉವಾಚ।
ಸೈಷಾ ದುರ್ವಿಷಹಾ ಮಾಯಾ ದೇವೈರಪಿ ದುರಾಸದಾ ।
ಔರ್ವೇಣ ನಿರ್ಮಿತಾ ಪೂರ್ವಂ ಪಾವಕೇನೋರ್ವಸೂನುನಾ ।। ೧-೪೫-೭೪

ವರುಣನು ಹೇಳಿದನು: “ಹೀಗೆ ಹಿಂದೆ ಊರ್ವಮಹರ್ಷಿಯ ಪುತ್ರ ಔರ್ವನೆನ್ನುವ ಅಗ್ನಿಯು ದೇವತೆಗಳಿಗೂ ದುಃಸ್ಸಹ ಮತ್ತು ದುರ್ಜಯವಾದ ಈ ಮಾಯೆಯನ್ನು ರಚಿಸಿದ್ದನು.

ತಸ್ಮಿಂಸ್ತು ವ್ಯುತ್ಥಿತೇ ದೈತ್ಯೇ ನಿವೀರ್ಯೈಷಾ ನ ಸಂಶಯಃ ।
ಶಾಪೋ ಹ್ಯಸ್ಯಾಃ ಪುರಾ ದತ್ತಃ ಸೃಷ್ಟಾ ಯೇನೈವ ತೇಜಸಾ ।। ೧-೪೫-೭೫

ಈ ದೈತ್ಯನು ಈ ಸಂಸಾರದಿಂದ ಎದ್ದುಬಿಟ್ಟಿದ್ದಾನೆ. ಆದುದರಿಂದ ಈ ಮಾಯೆಯು ನಿರ್ಬಲವಾಗಿಬಿಟ್ಟಿದೆ ಎನ್ನುವುದರಲ್ಲಿ ಸಂದೇಹವೇ ಇಲ್ಲ. ಏಕೆಂದರೆ ಯಾರು ತನ್ನ ತೇಜಸ್ಸಿನಿಂದ ಇದನ್ನು ರಚಿಸಿದ್ದನೋ ಅವನೇ ಇವನಿಗೆ ಶಾಪವನ್ನೂ ಇತ್ತಿದ್ದನು8.

ಯದ್ಯೇಷಾ ಪ್ರತಿಹಂತವ್ಯಾ ಕರ್ತವ್ಯೋ ಭಗವಾನ್ಸುಖೀ ।
ದೀಯತಾಮ್ಮೇ ಸಖಾ ಶಕ್ರ ತೋಯಯೋನಿರ್ನಿಶಾಕರಃ ।। ೧-೪೫-೭೬

ಭಗವಾನ್! ಶಕ್ರ! ಇಂದು ಈ ಮಾಯೆಯನ್ನು ನಾಶಪಡಿಸಿ ಸುಖವಾಗಿರಲು ನೀನು ಜಲದ ಉತ್ಪತ್ತಿಸ್ಥಾನವಾದ ಸಖ ಚಂದ್ರಮನನ್ನು ನನ್ನ ಸಹಾಯಕ್ಕೆ ಕಳುಹಿಸು.

ತೇನಾಹಂ ಸಹ ಸಂಗಮ್ಯ ಯಾದೋಭಿಶ್ಚ ಸಮಾವೃತಃ ।
ಮಾಯಾಮೇತಾಂ ಹನಿಷ್ಯಾಮಿ ತ್ವತ್ಪ್ರಸಾದಾನ್ನ ಸಂಶಯಃ ।। ೧-೪೫-೭೭

ನಿನ್ನ ಪ್ರಸಾದದಿಂದ ಮತ್ತು ಚಂದ್ರಮನ ಸಹಯೋಗದಿಂದ ನಾನು ಜಲಚರಜೀವಿಗಳಿಂದ ಆವೃತನಾಗಿ ಈ ಮಾಯೆಯನ್ನು ನಾಶಪಡಿಸುತ್ತೇನೆ. ಇದರಲ್ಲಿ ಸಂಶಯವಿಲ್ಲ.”

ಸಮಾಪ್ತಿ

ಇತಿ ಶ್ರೀಮನ್ಮಹಾಭಾರತೇ ಖಿಲೇಷು ಹರಿವಂಶೇ ಹರಿವಂಶಪರ್ವಣಿ ಔರ್ವಾಗ್ನಿಸಂಭವೋನಾಮ ಪಂಚಚತ್ವಾರಿಂಶೋಽಧ್ಯಾಯಃ


  1. ಮೂರ್ಛೆಗೊಳಿಸುವ ಅಸ್ತ್ರಗಳು. ↩︎

  2. ಮೂರ್ಛಿತರಾದವರು ಹೇಗೆ ಉಪಾಯ ಮಾಡಬಲ್ಲರು? ↩︎

  3. ಔರ್ವನು ತನ್ನ ಕ್ರೋಧಾಗ್ನಿಯನ್ನು ಸಮುದ್ರದಲ್ಲಿ ಬಡವಾಗ್ನಿಯಾಗಿ ಇರಿಸಿದ್ದನು (ಆದಿ ಪರ್ವ: ಅಧ್ಯಾಯ 71). ಆದರೆ ಹರಿವಂಶದ ಈ ಕಥೆಯು ಅನ್ಯ ಔರ್ವನ ಕುರಿತಾಗಿದೆ. ↩︎

  4. ಶಬ್ಧ ಮೊದಲಾದ ಸೂಕ್ಷ್ಮ ಭೂತಸ್ವರೂಪ ವಿಷಯಸಮೂಹಗಳು (ಗೀತಾ ಪ್ರೆಸ್). ↩︎

  5. ಅವಶ್ಯವಾಗಿ ಮಾಡಬೇಕಾದ ಧ್ಯಾನರೂಪ ಯೋಗದ ಅಭಾವದಲ್ಲಿಯೂ ಮುಂಡನ ಮಾಡಿಕೊಳ್ಳುವುದು, ಉತ್ತಮ ಪರಲೋಕದ ಸಂಕಲ್ಪವಿಲ್ಲದೇ ಕೇವಲ ಲೋಕರಂಜನೆಗಾಗಿ ಕೃಚ್ಛ್ರ ಮೊದಲಾದ ವ್ರತಗಳನ್ನು ಆಚರಿಸುವುದು ಮತ್ತು ಬ್ರಹ್ಮಪ್ರಾಪ್ತಿಯನ್ನು ಲಕ್ಷ್ಯವನ್ನಾಗಿಟ್ಟುಕೊಂಡು ನಿಯಮಿತ ವೇದಾಧ್ಯಯನವಿಲ್ಲದೇ ಬ್ರಹ್ಮಚರ್ಯ ನಿಯಮಗಳನ್ನು ಆಶ್ರಯಿಸುವುದು – ಈ ಮೂರೂ ದಂಭವೆನಿಸಿಕೊಳ್ಳುತ್ತವೆ (ಗೀತಾ ಪ್ರೆಸ್). ↩︎

  6. ಚಿತ್ತದ ವಿಕಾರ, ಕಾಮಾನುರಾಗ (ಗೀತಾ ಪ್ರೆಸ್). ↩︎

  7. ನಾನೀಗ ಮನೋಮಯ ವಪು (ಯೋನಿ)ವನ್ನು ನಿರ್ಮಿಸಿ ಸ್ತ್ರೀಸಹವಾಸವಿಲ್ಲದೇ ನನ್ನ ಶರೀರದಿಂದ ಉತ್ಪನ್ನನಾಗುವ ನನ್ನಂತಹ ಪುತ್ರನ ಸೃಷ್ಟಿಯನ್ನು ಮಾಡುತ್ತೇನೆ. ಅವನ ಅಂತರಾತ್ಮವು ಅತ್ಯಂತ ಉದ್ದೀಪ್ತವಾಗಿರುತ್ತದೆ. (ಗೀತಾ ಪ್ರೆಸ್). ↩︎

  8. ಈ ಮಾಯೆಯು ಹಿರಣ್ಯಕಶಿಪುವಿನ ಜೀವವಿರುವ ವರೆಗೆ ಬಲಶಾಲಿಯಾಗಿರುತ್ತದೆ ಎಂಬ ಶಾಪ (ಗೀತಾ ಪ್ರೆಸ್). ↩︎