ಪ್ರವೇಶ
।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।
ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ
ಶ್ರೀ ಮಹಾಭಾರತ
ಖಿಲಭಾಗೇ ಹರಿವಂಶಃ
ಹರಿವಂಶ ಪರ್ವ
ಅಧ್ಯಾಯ 44
ಸಾರ
ವೈಶಂಪಾಯನ ಉವಾಚ।
ಶ್ರುತಸ್ತೇ ದೈತ್ಯಸೈನ್ಯಸ್ಯ ವಿಸ್ತರಸ್ತಾತ ವಿಗ್ರಹೇ ।
ಸುರಾಣಾಂ ಸರ್ವಸೈನ್ಯಸ್ಯ ವಿಸ್ತರಂ ವೈಷ್ಣವಂ ಶೃಣು ।। ೧-೪೪-೧
ವೈಶಂಪಾಯನನು ಹೇಳಿದನು: “ಅಯ್ಯಾ ನೀನು ಇಷ್ಟರವರೆಗೆ ಯುದ್ಧಕ್ಕೆ ಸೇರಿದ್ದ ದೈತ್ಯಸೈನ್ಯದ ವಿಸ್ತರವನ್ನು ಕೇಳಿದೆ. ಈಗ ವಿಷ್ಣುವಿನ ನಾಯಕತ್ವದಲ್ಲಿದ್ದ ಸರ್ವ ಸುರರ ಸೈನ್ಯದ ವಿಸ್ತರವನ್ನು ಕೇಳು.
ಆದಿತ್ಯಾ ವಸವೋ ರುದ್ರಾ ಅಶ್ವಿನೌ ಚ ಮಹಾಬಲೌ ।
ಸಬಲಾಃ ಸಾನುಗಾಶ್ಚೈವ ಸಂನಹ್ಯಂತ ಯಥಾಬಲಮ್ ।। ೧-೪೪-೨
ಆದಿತ್ಯರು, ವಸುಗಳು, ರುದ್ರರು ಮತ್ತು ಮಹಾಬಲ ಅಶ್ವಿನರು ತಮ್ಮ ತಮ್ಮ ಅನುಯಾಯೀ ಸೇನೆಗಳೊಂದಿಗೆ ಯಥಾಶಕ್ತಿ ಯುದ್ಧಮಾಡಲು ಸಿದ್ಧರಾಗಿದ್ದರು.
ಪುರುಹೂತಸ್ತು ಪುರತೋ ಲೋಕಪಾಲಃ ಸಹಸ್ರಧೃಕ್ ।
ಗ್ರಾಮಣೀಃ ಸರ್ವದೇವಾನಮಾರುರೋಹ ಸುರದ್ವಿಪಮ್ ।। ೧-೪೪-೩
ಮುಂದೆ ಸರ್ವದೇವತೆಗಳ ನೇತಾರ ಲೋಕಪಾಲ ಸಹಸ್ರಾಕ್ಷ ಪುರುಹೂತನು ಸುರರ ಆನೆ ಐರಾವತವನು ಏರಿದ್ದನು.
ಸವ್ಯೇ ಚಾಸ್ಯ ರಥಃ ಪಾರ್ಷ್ವೇ ಪಕ್ಷಿಪ್ರವರವೇಗವಾನ್ ।
ಸುಚಾರುಚಕ್ರಚರಣೋ ಹೇಮವಜ್ರಪರಿಷ್ಕೃತಃ ।। ೧-೪೪-೪
ಅವನ ಬಲಭಾಗದಲ್ಲಿ ಪಕ್ಷಿಪ್ರವರ ಗರುಡನ ವೇಗವುಳ್ಳ ಹೇಮ-ವಜ್ರಗಳಿಂದ ಪರಿಷ್ಕೃತಗೊಂಡಿದ್ದ ಸುಂದರ ಚಕ್ರಗಳನ್ನೇ ಕಾಲುಗಳನ್ನಾಗಿಸಿಕೊಂಡಿದ್ದ ಅವನ ರಥವಿತ್ತು.
ದೇವಗಂಧರ್ವಯಕ್ಷೌಘೈರನುಯಾತಃ ಸಹಸ್ರಶಃ ।
ದೀಪ್ತಿಮದ್ಭಿಃ ಸದಸ್ಯೈಶ್ಚ ಬ್ರಹ್ಮರ್ಷಿಭಿರಭಿಷ್ಟುತಃ ।। ೧-೪೪-೫
ಅವನ ಹಿಂದೆ ಸಹಸ್ರಾರು ದೇವ-ಗಂಧರ್ವ-ಯಕ್ಷರ ಮಂಡಲಿಗಳು ಹೋಗುತ್ತಿದ್ದರು. ಹಾಗೂ ಯಜ್ಞಗಳಲ್ಲಿ ಸದಸ್ಯರಾಗಿದ್ದ ದೀಪ್ತಿಮಾನ್ ಬ್ರಹ್ಮರ್ಷಿಗಳು ಅವನನ್ನು ಸ್ತುತಿಸುತ್ತಾ ಮುಂದುವರೆಯುತ್ತಿದ್ದರು.
ವಜ್ರವಿಸ್ಫೂರ್ಜಿತೋದ್ಧೂತೈರ್ವಿದ್ಯುದಿಂದ್ರಾಯುಧಾನ್ವಿತೈಃ ।
ಗುಪ್ತೋ ಬಲಾಹಕಗಣೈಃ ಕಾಮಗೈರಿವ ಪರ್ವತೈಃ ।। ೧-೪೪-೬
ಬೇಕಾದಲ್ಲಿ ಹೋಗಬಲ್ಲ ಪರ್ವತಗಳಂತಿದ್ದ ಮೇಘ ಸಮೂಹಗಳು ಮಿಂಚು-ಇಂದ್ರಧನುಸ್ಸು ಮತ್ತು ಚಟಪಟನೆ ಸಿಡಿಯುತ್ತಿದ್ದ ವಜ್ರದೊಂದಿಗೆ ದೇವರಾಜನನ್ನು ರಕ್ಷಿಸಿ ಚಲಿಸುತ್ತಿದ್ದವು.
ಸಮಾರೂಢಃ ಸ ಭಗವಾನ್ಪರ್ಯೇತಿ ಮಘವಾ ಗಜಮ್ ।
ಹವಿರ್ಧಾನೇಷು ಗಾಯಂತಿ ವಿಪ್ರಾಃ ಸೋಮಮಖೇ ಸ್ಥಿತಾಃ ।। ೧-೪೪-೭
ಸೋಮಯಾಗದಲ್ಲಿ ಹವಿಸ್ಸನ್ನು ನೀಡುವಾಗ ವಿಪ್ರರು ಯಾರನ್ನು ಸ್ತುತಿಸುತ್ತಾರೋ ಆ ಭಗವಾನ್ ಮಘವನು ಗಜಾರೂಢನಾಗಿದ್ದನು.
ಸ್ವರ್ಗೇ ಶಕ್ರಾನುಯಾನೇಷು ದೇವತೂರ್ಯನಿನಾದಿಷು ।
ಇಂದ್ರಂ ಸಮುಪನೃತ್ಯಂತಿ ಶತಶೋ ಹ್ಯಪ್ಸರೋಗಣಾಃ ।। ೧-೪೪-೮
ಸ್ವರ್ಗದಲ್ಲಿ ಇಂದ್ರನು ಹೊರಟಾಗ ದೇವದುಂದುಭಿಗಳು ಮೊಳಗಿದವು. ಇಂದ್ರನ ಸಮೀಪದಲ್ಲಿ ನೂರಾರು ಅಪ್ಸರಗಣಗಳು ನರ್ತಿಸುತ್ತಿದ್ದವು.
ಕೇತುನಾ ವಂಶಜಾತೇನ ರಾಜಮಾನೋ ಯಥಾ ರವಿಃ ।
ಯುಕ್ತೋ ಹರಿಸಹಸ್ರೇಣ ಮನೋಮಾರುತರಂಹಸಾ ।। ೧-೪೪-೯
ಗಿಡುಗದ ಧ್ವಜದಿಂದ ಸುಶೋಭಿತವಾದ, ಮನಸ್ಸು-ಮಾರುತಗಳ ವೇಗವುಳ್ಳ ಸಹಸ್ರ ಕುದುರೆಗಳಿಂದ ಯುಕ್ತವಾದ ರಥದಲ್ಲಿ ರವಿಯಂತೆ ಇಂದ್ರನು ರಾರಾಜಿಸುತ್ತಿದ್ದನು.
ಸ ಸ್ಯಂದನವರೋ ಭಾತಿ ಯುಕ್ತೋ ಮಾತಲಿನಾ ತದಾ ।
ಕೃತ್ಸ್ನಃ ಪರಿವೃತೋ ಮೇರುರ್ಭಾಸ್ಕರಸ್ಯೇವ ತೇಜಸಾ ।। ೧-೪೪-೧೦
ಮಾತಲಿಯು ನಡೆಸುತ್ತಿದ್ದ ಆ ಶ್ರೇಷ್ಠ ರಥವು ಭಾಸ್ಕರನ ಕಿರಣಗಳಿಂದ ಸಂಪೂರ್ಣವಾಗಿ ಮುಚ್ಚಲ್ಪಟ್ಟ ಮೇರುಪರ್ವತದಂತೆ ತೇಜೋಯುಕ್ತವಾಗಿತ್ತು.
ಯಮಸ್ತು ದಂಡಮುದ್ಯಮ್ಯ ಕಾಲಯುಕ್ತಂ ಚ ಮುದ್ಗರಮ್ ।
ತಸ್ಥೌ ಸುರಗಣಾನೀಕೇ ದೈತ್ಯಾನ್ನಾದೇನ ಭೀಷಯನ್ ।। ೧-೪೪-೧೧
ಯಮನಾದರೋ ಕಾಲಯುಕ್ತ ದಂಡ ಮತ್ತು ಮುದ್ಗರಗಳನ್ನು ಮೇಲೆತ್ತಿ ಗರ್ಜನೆಯೊಂದಿಗೆ ದೈತ್ಯರನ್ನು ಬೆದರಿಸುತ್ತಾ ಸುರಗಣ ಸೇನೆಯಲ್ಲಿ ನಿಂತನು.
ಚತುರ್ಭಿಃ ಸಾಗರೈರ್ಗುಪ್ತೋ ಲೇಲಿಹಾನೈಶ್ಚ ಪನ್ನಗೈಃ ।
ಶಂಖಮುಕ್ತಾಂಗದಧರೋ ಬಿಭ್ರತ್ತೋಯಮಯಂ ವಪುಃ ।। ೧-೪೪-೧೨
ಕಾಲಪಾಶಂ ಸಮಾವಿಶ್ಯ ಹಯೈಃ ಶಶಿಕರೋಪಮೈಃ ।
ವಾಯ್ವೀರಿತಜಲೋದ್ಗಾರೈಃ ಕುರ್ವಂಲ್ಲೀಲಾಃ ಸಹಸ್ರಶಃ ।। ೧-೪೪-೧೩
ಪಾಂಡುರೋದ್ಧೂತವಸನಃ ಪ್ರವಾಲರುಚಿರಾಧರಃ1 ।
ಮಣಿಶ್ಯಾಮೋತ್ತಮವಪುರ್ಹಾರಭಾರಾರ್ಪಿತೋದರಃ ।। ೧-೪೪-೧೪
ವರುಣಃ ಪಾಶಭೃನ್ಮಧ್ಯೇ ದೇವಾನೀಕಸ್ಯ ತಸ್ಥಿವಾನ್ ।
ಯುದ್ಧವೇಲಾಮಭಿಲಷನ್ಭಿನ್ನವೇಲ ಇವಾರ್ಣವಃ ।। ೧-೪೪-೧೫
ಯುದ್ಧದ ವೇಳೆಯನ್ನು ಬಯಸುತ್ತಾ ಪಾಶಧಾರೀ ವರುಣನು ತೀರವನ್ನು ಒಡೆದು ಮುಂದೆ ಸಾಗುವ ಸಮುದ್ರದಂತೆ ದೇವತೆಗಳ ಸೇನೆಯ ಮಧ್ಯದಿಂದ ಬಂದು ಸೆಟೆದು ನಿಂತನು. ಅವನನ್ನು ನಾಲ್ಕು ಸಮುದ್ರಗಳು ಮತ್ತು ನಾಲಿಗೆಗಳನ್ನು ಸುಳಿಯುತ್ತಿದ್ದ ಸರ್ಪಗಳು ರಕ್ಷಿಸುತ್ತಿದ್ದವು. ಅವನು ಶಂಕ ಮತ್ತು ಮುತ್ತಿನ ಅಂಗದಗಳನ್ನು ಧರಿಸಿದ್ದನು. ಅವನ ಶರೀರವು ಜಲಮಯವಾಗಿತ್ತು. ಅವನು ಕಾಲಪಾಶವನ್ನು ತಿರುಗಿಸುತ್ತಾ ಚಂದ್ರಮನ ಕಿರಣಸಮಾನ ಶ್ವೇತವರ್ಣದ ಕುದುರೆಗಳು ಮತ್ತು ವಾಯುವಿನಿಂದ ಮೇಲೆಬ್ಬಿಸಲ್ಪಟ್ಟ ಅಲೆಗಳ ಉದ್ಗಾರಗಳೊಂದಿಗೆ ಸಹಸ್ರಾರು ಕ್ರೀಡೆಗಳನ್ನಾಡುತ್ತಿದ್ದನು. ಅವನ ಶ್ವೇತ ವಸ್ತ್ರವು ಹಾರಾಡುತ್ತಿತ್ತು. ಅವನ ಸುಂದರ ತುಟಿಗಳು ಹವಳದಂತೆ ಕೆಂಪಾಗಿದ್ದವು. ಮಣಿಮಯ ಆಭೂಷಣಗಳಿಂದ ಭೂಷಿತನಾಗಿದ್ದ ಅವನ ಶ್ಯಾಮವರ್ಣದ ಅಂಗಗಳು ಶೋಭಾಯಮಾನವಾಗಿದ್ದವು ಮತ್ತು ಹಾರಗಳ ಭಾರವು ಅವನ ಉದರದ ಮೇಲೆ ಬಿದ್ದಿದ್ದವು.
ಯಕ್ಷರಾಕ್ಷಸಸೈನ್ಯೇನ ಗುಹ್ಯಕಾನಾಂ ಗಣೈರಪಿ ।
ಮಣಿಶ್ಯಾಮೋತ್ತಮವಪುಃ ಕುಬೇರೋ ನರವಾಹನಃ ।। ೧-೪೪-೧೬
ಯುಕ್ತಶ್ಚ ಶಂಖಪದ್ಮಾಭ್ಯಾಂ ನಿಧೀನಾಮಧಿಪಃ ಪ್ರಭುಃ ।
ರಾಜರಾಜೇಶ್ವರಃ ಶ್ರೀಮಾನ್ಗದಾಪಾಣಿರದೃಶ್ಯತ ।। ೧-೪೪-೧೭
ನೀಲಮಣಿಯಂತೆ ಶೋಭಿಸುವ ಶ್ಯಾಮವರ್ಣದ ಶರೀರವುಳ್ಳ ನಿಧಿಗಳ ಅಧಿಪ ಪ್ರಭು ರಾಜರಾಜೇಶ್ವರ ನರವಾಹನ ಶ್ರೀಮಾನ್ ಕುಬೇರನು ಶಂಖಪದ್ಮಗಳನ್ನು ಹಿಡಿದು ಯಕ್ಷ-ರಾಕ್ಷಸರ ಸೇನೆಗಳೊಂದಿಗೆ ಮತ್ತು ಗುಹ್ಯಕರ ಗಣಗಳೊಂದಿಗೆ ಗದಾಪಾಣಿಯಾಗಿ ಕಾಣಿಸಿಕೊಂಡನು.
ವಿಮಾನಯೋಧೀ ಧನದೋ ವಿಮಾನೇ ಪುಷ್ಪಕೇ ಸ್ಥಿತಃ ।
ಸ ರಾಜರಾಜಃ ಶುಶುಭೇ ಯುದ್ಧಾರ್ಥೀ ನರವಾಹನಃ ।
ಪ್ರೇಕ್ಷ್ಯಮಾಣಃ ಶಿವಸಖಃ ಸಾಕ್ಷಾದಿವ ಶಿವಃ ಸ್ವಯಂ ।। ೧-೪೪-೧೮
ಆ ವಿಮಾನಯೋಧೀ ರಾಜರಾಜ ಯುದ್ಧಾರ್ಥೀ ನರವಾಹನ ಧನದನು ಪುಷ್ಪಕ ವಿಮಾನದಲ್ಲಿ ಕುಳಿತು ಶೋಭಿಸುತ್ತಿದ್ದನು. ಶಿವಸಖನಾದ ಅವನು ನೋಡಲು ಸ್ವಯಂ ಶಿವನಂತೆಯೇ ತೋರುತ್ತಿದ್ದನು.
ಪೂರ್ವಂ ಪಕ್ಷಂ ಸಹಸ್ರಾಕ್ಷಃ ಪಿತೃರಾಜಸ್ತು ದಕ್ಷಿಣಮ್ ।
ವರುಣಃ ಪಶ್ಚಿಮಂ ಪಕ್ಷಮುತ್ತರಂ ನರವಾಹನಃ ।। ೧-೪೪-೧೯
ಆ ದೇವಸೇನೆಯ ಪೂರ್ವಪಕ್ಷವನ್ನು ಸಹಸ್ರಾಕ್ಷನು ವಹಿಸಿಕೊಂಡಿದ್ದನು. ದಕ್ಷಿಣಪಕ್ಷವನ್ನು ಪಿತೃರಾಜನೂ, ವರುಣನು ಪಶ್ಚಿಮ ಭಾಗವನ್ನೂ ಮತ್ತು ನರವಾಹನನು ಉತ್ತರಪಕ್ಷವನ್ನೂ ರಕ್ಷಿಸುತ್ತಿದ್ದರು.
ಚತುರ್ಷು ಯುಕ್ತಾಶ್ಚತ್ವಾರೋ ಲೋಕಪಾಲಾ ಬಲೋತ್ಕಟಾಃ ।
ಸ್ವಾಸು ದಿಕ್ಷ್ವಭ್ಯರಕ್ಷನ್ವೈ ತಸ್ಯ ದೇವಬಲಸ್ಯ ಹ ।। ೧-೪೪-೨೦
ಹೀಗೆ ಬಲೋತ್ಕಟರಾದ ನಾಲ್ವರು ಲೋಕಪಾಲರೂ ನಾಲ್ಕು ದಿಕ್ಕುಗಳಲ್ಲಿ ಸಾವಧಾನರಾಗಿ ನಿಂತು ದೇವಬಲಗಳನ್ನು ರಕ್ಷಿಸುತ್ತಿದ್ದರು.
ಸೂರ್ಯಃ ಸಪ್ತಾಶ್ವಯುಕ್ತೇನ ರಥೇನಾಂಬರಗಾಮಿನಾ ।
ಶ್ರಿಯಾ ಜಾಜ್ವಲ್ಯಮಾನೇನ ದೀಪ್ಯಮಾನೈಶ್ಚ ರಶ್ಮಿಭಿಃ ।। ೧-೪೪-೨೧
ಉದಯಾಸ್ತಮಯಂ ಚಕ್ರೇ ಮೇರುಪರ್ಯಂತಗಾಮಿನಾ ।
ತ್ರಿದಿವದ್ವಾರಚಕ್ರೇಣ ತಪತಾ ಲೋಕಮವ್ಯಯಮ್ ।। ೧-೪೪-೨೨
ಸೂರ್ಯನು ಏಳು ಕುದುರೆಗಳನ್ನು ಕಟ್ಟಿದ್ದ ಅಂಬರಗಾಮಿನೀ ರಥದಲ್ಲಿ ಕುಳಿತಿದ್ದನು. ದೀಪ್ತಮಾನ ರಶ್ಮಿಗಳಿಂದ ಅವನು ಜಾಜ್ವಲ್ಯಮಾನ ಶ್ರೀಯಿಂದ ಬೆಳಗುತ್ತಿದ್ದನು. ಮೇರುಪರ್ವತದ ಸುತ್ತಲೂ ತಿರುಗುತ್ತಿದ್ದ, ಸ್ವರ್ಗದ ದ್ವಾರದಲ್ಲಿ ಚಕ್ರದಂತೆ ತಿರುಗುತ್ತಾ ಉದಯ-ಅಸ್ತಗಳನ್ನುಂಟುಮಾಡುವ ರಥದಲ್ಲಿ ಕುಳಿತು ಅವನು ಅವ್ಯಯ ಲೋಕವನ್ನು ಸುಡುತ್ತಿದ್ದನು.
ಸಹಸ್ರರಶ್ಮಿಯುಕ್ತೇನ ಭ್ರಾಜಮಾನಃ ಸ್ವತೇಜಸಾ ।
ಚಚಾರ ಮಧ್ಯೇ ದೇವಾನಾಂ ದ್ವಾದಶಾತ್ಮಾ ದಿನೇಶ್ವರಃ ।। ೧-೪೪-೨೩
ಸಹಸ್ರರಶ್ಮಿಯುಕ್ತನಾಗಿ ತನ್ನದೇ ತೇಜಸ್ಸಿನಿಂದ ಬೆಳಗುತ್ತಾ ಆ ದ್ವಾದಶಾತ್ಮ ದಿನೇಶ್ವರನು ದೇವತೆಗಳ ಮಧ್ಯೆ ಸಂಚರಿಸುತ್ತಿದ್ದನು.
ಸೋಮಃ ಶ್ವೇತಹಯೈರ್ಭಾತಿ ಸ್ಯಂದನೇ ಶೀತರಶ್ಮಿವಾನ್ ।
ಹಿಮತೋಯಪ್ರಪೂರ್ಣಾಭಿರ್ಭಾಭಿರಾಹ್ಲಾದಯಂಜಗತ್ ।। ೧-೪೪-೨೪
ಶೀತರಶ್ಮಿವಾನ್ ಸೋಮನು ಶ್ವೇತಹಯಗಳ ರಥದಲ್ಲಿ ಬೆಳಗುತ್ತಿದ್ದನು. ಅವನು ಹಿಮ ಮತ್ತು ಜಲಗಳಿಂದ ತುಂಬಿದ ತನ್ನ ಪ್ರಭೆಯಿಂದ ಸಂಪೂರ್ಣ ಜಗತ್ತನ್ನೂ ಆಹ್ಲಾದಿಸುತ್ತಿದ್ದನು.
ತಮೃಕ್ಷಯೋಗಾನುಗತಂ ಶಿಶಿರಾಂಶುಂ ದ್ವಿಜೇಶ್ವರಮ್ ।
ಜಗಚ್ಛಾಯಾಂಕಿತತನುಂ ನೈಶಸ್ಯ ತಮಸಃ ಕ್ಷಯಮ್ ।। ೧-೪೪-೨೫
ಭೂಮಿಯ ಛಾಯೆಯಿಂದ ಶರೀರದಲ್ಲಿ ಅಂಕಿತನಾಗಿದ್ದ ಮತ್ತು ರಾತ್ರಿಯ ಕತ್ತಲೆಯನ್ನು ನಾಶಮಾಡುವ ಆ ಶಿಶಿರಾಂಶು ದ್ವಿಜೇಶ್ವರನನ್ನು ನಕ್ಷತ್ರ ಮತ್ತು ಯೋಗಗಳು ಅನುಸರಿಸುತ್ತಿದ್ದವು.
ಜ್ಯೋತಿಷಾಮೀಶ್ವರಂ ವ್ಯೋಮ್ನಿ ರಸಾನಾಂ ರಸನಂ ಪ್ರಭುಮ್ ।
ಔಷಧೀನಾಂ ಪರಿತ್ರಾಣಂ ನಿಧಾನಮಮೃತಸ್ಯ ಚ ।। ೧-೪೪-೨೬
ಜಗತಃ ಪ್ರಥಮಂ ಭಾಗಂ ಸೌಮ್ಯಂ ಶೀತಮಯಂ ರಸಮ್ ।
ದದೃಶುರ್ದಾನವಾಃ ಸೋಮಂ ಹಿಮಪ್ರಹರಣಸ್ಥಿತಮ್ ।। ೧-೪೪-೨೭
ಹಿಮದ ಆಯುಧವನ್ನು ಹಿಡಿದು ನಿಂತಿದ್ದ ಆಕಾಶದಲ್ಲಿ ಜ್ಯೋತಿಷಗಳ ಈಶ್ವರ, ರಸಗಳ ರಸ ಮತ್ತು ಪ್ರಭು, ಔಷಧಿಗಳ ಪರಿತ್ರಾಣ, ಅಮೃತದ ನಿಧಿ, ಜಗತ್ತಿನ ಪ್ರಥಮ ಭಾಗ, ಸೌಮ್ಯ ಶೀತಮಯ ರಸ ಸೋಮನನ್ನು ದಾನವರು ನೋಡಿದರು.
ಯಃ ಪ್ರಾಣಃ ಸರ್ವಭೂತಾನಾಂ ಪಂಚಧಾ ಭಿದ್ಯತೇ ನೃಷು ।
ಸಪ್ತಸ್ಕಂಧಗತೋ ಲೋಕಾಂಸ್ತ್ರೀಂದಧಾರ ಚರಾಚರಾನ್ ।। ೧-೪೪-೨೮
ಯಮಾಹುರಗ್ನೇರ್ಯಂತಾರಂ ಸರ್ವಪ್ರಭವಮೀಶ್ವರಮ್ ।
ಸಪ್ತಸ್ವರಗತಾ ಯಸ್ಯ ಯೋನಿರ್ಗೀತಿರುದೀರ್ಯತೇ ।। ೧-೪೪-೨೯
ಯಂ ವದಂತ್ಯುತ್ತಮಂ ಭೂತಂ ಯಂ ವದಂತ್ಯಶರೀರಿಣಮ್ ।
ಯಮಾಹುರಾಕಾಶಗಮಂ ಶೀಘ್ರಗಂ ಶಬ್ದಯೋನಿಜಮ್ ।। ೧-೪೪-೩೦
ಸ ವಾಯುಃ ಸರ್ವಭೂತಾಯುರುದ್ಧತಃ ಸ್ವೇನ ತೇಜಸಾ ।
ವವೌ ಪ್ರವ್ಯಥಯಂದೈತ್ಯಾನ್ಪ್ರತಿಲೋಮಃ ಸತೋಯದಃ ।। ೧-೪೪-೩೧
ಸರ್ವಭೂತಗಳ ಪ್ರಾಣ, ಮನುಷ್ಯರಲ್ಲಿ ಐದುಪ್ರಕಾರಗಳಲ್ಲಿರುವ, ಏಳು ಸ್ಕಂಧಗಳ ಮೇಲೆ ಸ್ಥಿತನಾಗಿರುವ, ಮೂರೂ ಲೋಕಗಳ ಚರಾಚರಗಳನ್ನು ಧರಿಸಿಕೊಂಡಿರುವ, ಅಗ್ನಿಸಾರಥಿಯೆನ್ನಿಸಿಕೊಂಡಿರುವ, ಎಲ್ಲವುಗಳ ಉತ್ಪತ್ತಿಸ್ಥಾನ, ಈಶ್ವರ, ಯಾರ ಯೋನಿಯಿಂದ ಸತ್ಪಸ್ವರಗಳ ಗೀತೆಯು ಹೊರಬರುತ್ತದೆಯೋ, ಉತ್ತಮ ಭೂತನೆಂದಿಸಿಕೊಂದಿರುವ, ಅಶರೀರಿಯೆಂದೆನಿಸಿಕೊಂಡಿರುವ, ಆಕಾಶಗನೆಂದೆನಿಸಿಕೊಂಡಿರು, ಶೀಘ್ರಗ, ಶಬ್ದಯೋನಿಜ, ಸರ್ವಭೂತಾಯು ವಾಯುವು ತನ್ನ ತೇಜಸ್ಸಿನಿಂದ ದೈತ್ಯರನ್ನು ವ್ಯಥಿತಗೊಳಿಸುತ್ತಾ ಅಲ್ಲಿ ಮೇಘಗಳೊಂದಿಗೆ ಪ್ರತಿಕೂಲ ಮತ್ತು ಪ್ರಚಂಡಗತಿಯಿಂದ ಬೀಸತೊಡಗಿದನು.
ಮರುತೋ ದೇವಗಂಧರ್ವಾ ವಿದ್ಯಾಧರಗಣೈಃ ಸಹ ।
ಚಿಕ್ರೀಡುರಸಿಭಿಃ ಶುಭ್ರೈರ್ನಿರ್ಮುಕ್ತೈರಿವ ಪನ್ನಗೈಃ ।। ೧-೪೪-೩೨
ದೇವ-ಗಂಧರ್ವ-ವಿದ್ಯಾಧರ ಗಣಗಳೊಂದಿಗೆ ಮರುತ್ತರು ಪೊರೆಬಿಟ್ಟ ಸರ್ಪಗಳಂತೆ ಶುಭ್ರವಾಗಿದ್ದ ಖಡ್ಗಗಳಿಂದ ಕ್ರೀಡಿಸತೊಡಗಿದರು.
ಸೃಜಂತಃ ಸರ್ಪಪತಯಸ್ತೀವ್ರಂ ರೋಶಮಯಂ ವಿಷಮ್ ।
ಶರಭೂತಾಃ ಸುರೇಂದ್ರಾಣಾಂ ಚೇರುರ್ವ್ಯಾತ್ತಮುಖಾ ದಿವಿ ।। ೧-೪೪-೩೩
ಸುರೇಂದ್ರರ ಶರಗಳಾಗಿದ್ದ ಸರ್ಪಪತಿಗಳು ದಿವಿಯಲ್ಲಿ ಬಾಯಿಕಳೆದು ತೀವ್ರವಾದ ರೋಷಮಯ ವಿಷವನ್ನು ಕಾರತೊಡಗಿದವು.
ಪರ್ವತಾಸ್ತು ಶಿಲಾಶೃಂಗೈಃ ಶತಶಾಖೈಶ್ಚ ಪಾದಪೈಃ ।
ಉಪತಸ್ಥುಃ ಸುರಗಣಾನ್ಪ್ರಹರ್ತುಂ ದಾನವಂ ಬಲಮ್ ।। ೧-೪೪-೩೪
ಶಿಲಾಶೃಂಗಗಳಿಂದ ಮತ್ತು ಶತಶಾಖೆಗಳ ವೃಕ್ಷಗಳಿಂದ ದಾನವರ ಬಲವನ್ನು ಪ್ರಹರಿಸಲು ಪರ್ವತಗಳೂ ಸುರಗಣಗಳ ಬಳಿ ಉಪಸ್ಥಿತಗೊಂಡವು.
ಯಃ ಸ ದೇವೋ ಹೃಷೀಕೇಶಃ ಪದ್ಮನಾಭಸ್ತ್ರಿವಿಕ್ರಮಃ ।
ಕೃಷ್ಣವರ್ತ್ಮಾ ಯುಗಾಂತಾಭೋ ವಿಶ್ವಸ್ಯ ಜಗತಃ ಪ್ರಭುಃ ।। ೧-೪೪-೩೫
ಸಮುದ್ರಯೋನಿರ್ಮಧುಹಾ ಹವ್ಯಭುಕ್ಕ್ರತುಸತ್ಕೃತಃ ।
ಭೂರಾಪೋವ್ಯೋಮಭೂತಾತ್ಮಾ ಸಮಃ ಶಾಂತಿಕರೋಽರಿಹಾ ।। ೧-೪೪-೩೬
ಜಗದ್ಯೋನಿರ್ಜಗದ್ಬೀಜೋ ಜಗದ್ಗುರುರುದಾರಧೀಃ ।
ಸಾರ್ಕಮಗ್ನಿಮಿವೋದ್ಯಂತಮುದ್ಯಮ್ಯೋತ್ತಮತೇಜಸಮ್ ।। ೧-೪೪-೩೭
ಅರಿಘ್ನಮಮರಾನೀಕೇ ಚಕ್ರಂ ಚಕ್ರಗದಾಧರಃ ।
ಸಪರೀವೇಷಮುದ್ಯಂತಂ ಸವಿತುರ್ಮಂಡಲಂ ಯಥಾ ।। ೧-೪೪-೩೮
ಆ ದೇವ ಹೃಷೀಕೇಶ ಪದ್ಮನಾಭ ತ್ರಿವಿಕ್ರಮ ಯುಗಾಂತದ ಅಗ್ನಿಯಂತೆ ಬೆಳಗುವ ಸಂಪೂರ್ಣ ಜಗತ್ತಿನ ಪ್ರಭು, ಸಮುದ್ರಯೋನಿ, ಮಧುಹಂತಕ, ಕ್ರತುಗಳಲ್ಲಿ ಸತ್ಕೃತ ಹವ್ಯಭುಕ್, ಭೂಮಿ-ಆಪ-ವ್ಯೋಮಗಳ ಭೂತಾತ್ಮಾ, ಸರ್ವತ್ರ ಸಮಭಾವದಿಂದಿರುವ, ಶಾಂತಿಕರ್ಥ, ಶತ್ರುಸೂದನ, ಜಗದ್ಯೋನಿ, ಜಗದ್ಬೀಜ, ಜಗದ್ಗುರು, ಉದಾರಧಿ, ಚಕ್ರಗದಾಧರನು ಅಗ್ನಿ ಮತ್ತು ಸೂರ್ಯನಸಮಾನ ಉತ್ತಮ ತೇಜಸ್ಸಿನ ಚಕ್ರವನ್ನು ಎತ್ತಿ ದೇವಸೇನೆಯ ಮಧ್ಯದಲ್ಲಿ ವಿರಾಜಮಾನನಾಗಿದ್ದನು. ಅವನು ಮಂಡಲದೊಂದಿಗೆ ಉದಯಿಸುತ್ತಿರುವ ಸೂರ್ಯನಂತೆ ತೋರುತ್ತಿದ್ದನು.
ಸವ್ಯೇನಾಲಂಬ್ಯ ಮಹತೀಂ ಸರ್ವಾಸುರವಿನಾಶಿನೀಮ್ ।
ಕರೇಣ ಕಾಲೀಂ ವಪುಷಾ ಶತ್ರುಕಾಲಪ್ರದಾಂ ಗದಾಮ್ ।
ಶೇಷೈರ್ಭುಜೈಃ ಪ್ರದೀಪ್ತಾನಿ ಭುಜಗಾರಿಧ್ವಜಃ ಪ್ರಭುಃ ।। ೧-೪೪-೩೯
ದಧಾರಾಯುಧಜಾಲಾನಿ ಶಾಂಙ್ರಾದೀನಿ ಮಹಾಯಶಾಃ ।
ಭುಜಂಗಾರಿ ಗರುಡಧ್ವಜ ಆ ಮಯಾಯಶಸ್ವೀ ಪ್ರಭುವು ತನ್ನ ಎಡಕೈಯಲ್ಲಿ ಸಮಸ್ತ ಅಸುರರರನ್ನು ವಿನಾಶಗೊಳಿಸುವ ಮತ್ತು ಶತ್ರುಗಳನ್ನು ಕಾಲನಿಗರ್ಪಿಸುವ ಕಪ್ಪುವರ್ಣದ ವಿಶಾಲ ಗದೆಯನ್ನು ಹಿಡಿದಿದ್ದನು ಮತ್ತು ಉಳಿದ ಭುಜಗಳಲ್ಲಿ ಅತ್ಯಂತ ದೀಪ್ತಮಾನ ಶಾಂಙ್ರವೇ ಮೊದಲಾದ ಆಯುಧಗಳನ್ನು ಧರಿಸಿದ್ದನು.
ಸ ಕಶ್ಯಪಃ ಸ್ವಾತ್ಮಭವಂ ದ್ವಿಜಂ ಭುಜಗಭೋಜನಮ್ ।। ೧-೪೪-೪೦
ಪವನಾಧಿಕಸಂಪಾತಂ ಗಗನಕ್ಷೋಭಣಂ ಖಗಮ್ ।
ಭುಜಗೇಂದ್ರೇಣ ವದನೇ ನಿವಿಷ್ಟೇನ ವಿರಾಜಿತಮ್ ।। ೧-೪೪-೪೧
ಅಮೃತಾರಂಭನಿರ್ಮುಕ್ತಂ ಮಂದರಾದ್ರಿಮಿವೋಚ್ಛ್ರಿತಮ್ ।
ದೇವಾಸುರವಿಮರ್ದೇಷು ಶತಶೋ ದ್ರೃಷ್ಟವಿಕ್ರಮಮ್ ।। ೧-೪೪-೪೨
ಮಹೇಂದ್ರೇಣಾಮೃತಸ್ಯಾರ್ಥೇ ವಜ್ರೇಣ ಕೃತಲಕ್ಷಣಮ್ ।
ಶಿಖಿನಂ ಚೂಡಿನಂ ಚೈವ ತಪ್ತಕುಂಡಲಭೂಷಣಮ್ ।
ವಿಚಿತ್ರಪಕ್ಷವಸನಂ ಧಾತುಮಂತಮಿವಾಚಲಮ್ ।। ೧-೪೪-೪೩
ಸ್ಫೀತಕ್ರೋಡಾವಲಂಬೇನ ಶೀತಾಂಶುಸಮತೇಜಸಾ।
ಭೋಗಿಭೋಗಾವಸಕ್ತೇನ ಮಣಿರತ್ನೇನ ಭಾಸ್ವತಾ ।। ೧-೪೪-೪೪
ಪಕ್ಷಾಭ್ಯಾಂ ಚಾರುಪತ್ರಾಭ್ಯಾಮಾವೃತ್ಯ ದಿವಿ ಲೀಲಯಾ ।
ಯುಗಾಂತೇ ಸೇಂದ್ರಚಾಪಾಭ್ಯಾಂ ತೋಯದಾಭ್ಯಾಮಿವಾಂಬರಮ್ ।। ೧-೪೪-೪೫
ನೀಲಲೋಹಿತಪೀತಾಭಿಃ ಪತಾಕಾಭಿರಲಂಕೃತಮ್ ।
ಕೇತುವೇಷಪ್ರತಿಚ್ಛನ್ನಂ ಮಹಾಕಾಯನಿಕೇತನಮ್ ।। ೧-೪೪-೪೬
ಅರುಣಾವರಜಂ ಶ್ರೀಮಾನಾರುಹ್ಯ ಸಮರೇ ಹರಿಃ ।
ಸ ದೇವಃ ಸ್ವೇನ ವಪುಷಾ ಸುಪರ್ಣಂ ಖೇಚರೋತ್ತಮಮ್ ।। ೧-೪೪-೪೭
ಶ್ರೀಮಾನ್ ದೇವ ಹರಿಯು ಕಶ್ಯಪನ ಆತ್ಮಸಂಬವ, ಅರುಣನ ತಮ್ಮ, ದ್ವಿಜ, ಭುಜಗಭೋಜನ, ಭಿರುಗಾಳಿಗಿಂತಲೂ ಅಧಿಕವೇಗವಿದ್ದ, ಗಗನವನ್ನು ಕ್ಷೋಭೆಗೊಳಿಸಬಲ್ಲ, ಖಗ, ಬಾಯಲ್ಲಿ ಭುಜಗೇಂದ್ರನನ್ನು ಕಚ್ಚಿಕೊಂಡು ಶೋಭಾಯಮಾನನಾಗಿದ್ದ, ಅಮೃತಮಂಥನದ ಪ್ರಾರಂಭದಲ್ಲಿ ಕಿತ್ತಿದ್ದ ಮಂದರಾಚಲದಂತೆ ಎತ್ತರನಾಗಿದ್ದ, ನೂರಾರು ದೇವಾಸುರರ ಸಂಗ್ರಾಮಗಳಲ್ಲಿ ತನ್ನ ಪರಾಕ್ರಮವನ್ನು ಪ್ರದರ್ಶಿಸಿದ್ದ, ಅಮೃತಕಾಗಿ ಹೋದಾಗ ಮಹೇಂದ್ರನ ವಜ್ರವು ತಾಗಿದ ಗುರುತಿದ್ದ, ಶಿಖಿಯಲ್ಲಿ ನವಿಲುಗರಿಯನ್ನು ಮುಡಿದಿದ್ದ, ಸುವರ್ಣಕುಂಡಲ ಭೂಷಿತ, ಖನಿಜಗಳಿಂದ ಕೂಡಿದ ಪರ್ವತದಂತೆ ಬಣ್ಣಬಣ್ಣದ ರೆಕ್ಕೆಗಳಿದ್ದ, ವಿಶಾಲ ವಕ್ಷಸ್ಥಲದಲ್ಲಿ ಚಂದ್ರನ ಕಿರಣಗಳಂತೆ ಬೆಳಗುವ ಸರ್ಪದ ಹೆಡೆಯ ಮಣಿಯಿದ್ದ, ಯುಗಾಂತದಲ್ಲಿ ಇಂದ್ರಧನುಸ್ಸಿನೊಂದಿಗೆ ಕಾಣಿಸುವ ಮೇಘಖಂಡಗಳಂತೆ ತನ್ನ ಮನೋಹರ ಬಣ್ಣದ ರೆಕ್ಕೆಗಳನ್ನು ಆಕಾಶವನ್ನು ಮುಚ್ಚುವಂತೆ ಬಿಚ್ಚಿಕೊಂಡಿದ್ದ, ಮತ್ತು ತನ್ನ ಧ್ವಜದ ಚಿಹ್ನೆಯಾಗಿದ್ದ ಪಕ್ಷಿಶ್ರೇಷ್ಠ ಗರುಡನನ್ನೇರಿ ಅಲ್ಲಿಗೆ ಆಗಮಿಸಿದ್ದನು.
ತಮನ್ವಯುರ್ದೇವಗಣಾ ಮುನಯಶ್ಚ ತಪೋಧನಾಃ ।
ಗೀರ್ಭಿಃ ಪರಮಮಂತ್ರಾಭಿಸ್ತುಷ್ಟುವುಶ್ಚ ಗದಾಧರಮ್ ।। ೧-೪೪-೪೮
ಆ ಗದಾಧರನನ್ನು ದೇವಗಣಗಳೂ ತಪೋಧನ ಮುನಿಗಳೂ ಪರಮ ಮಂತ್ರಯುಕ್ತ ಸ್ತುತಿಗಳಿಂದ ಸ್ತುತಿಸುತ್ತಾ ಅನುಸರಿಸಿ ಹೋಗುತ್ತಿದ್ದರು.
ತದ್ವೈಶ್ರವಣಸಂಶ್ಲಿಷ್ಟಂ ವೈವಸ್ವತಪುರಃಸರಮ್ ।
ವಾರಿರಾಜಪರಿಕ್ಷಿಪ್ತಂ ದೇವರಾಜವಿರಾಜಿತಮ್ ।। ೧-೪೪-೪೯
ಚಂದ್ರಪ್ರಭಾಭಿರ್ವಿಮಲಂ ಯುದ್ಧಾಯ ಸಮುಪಸ್ಥಿತಮ್ ।
ಪವನಾವಿದ್ಧನಿರ್ಘೋಷಂ ಸಂಪ್ರದೀಪ್ತಹುತಾಶನಮ್ ।। ೧-೪೪-೫೦
ವೈಶ್ರವಣ ಕುಬೇರನಿಂದ ಸಂಘಟಿತಗೊಂಡಿದ್ದ, ವೈವಸ್ವತ ಯಮನು ಮುಂದೆ ಮುಂದೆ ಹೋಗುತ್ತಿದ್ದ, ವಾರಿರಾಜ ವರುಣನ ಪರಿರಕ್ಷಿಸುತ್ತಿದ್ದ, ದೇವರಾಜನು ವಿರಾಜಮಾನನಾಗಿದ್ದ ಆ ದೇವಸೇನೆಯು ಯುದ್ಧಸನ್ನದ್ಧವಾಗಿ ನಿಂತಿತು. ಚಂದ್ರಮನ ಪ್ರಭೆಯಿಂದ ಅದು ನಿರ್ಮಲವಾಗಿ ತೋರುತ್ತಿತ್ತು. ವಾಯುವಿನ ಚಲನೆಯಿಂದ ನಿರ್ಘೋಷವು ಕೇಳಿಬರುತ್ತಿತ್ತು. ಆ ಸೇನೆಯಲ್ಲಿದ್ದ ಹುತಾಶನನು ಪ್ರಜ್ವಲಿಸುತ್ತಿದ್ದನು.
ವಿಷ್ಣೋರ್ಜಿಷ್ಣೋಃ ಸಹಿಷ್ಣೋಶ್ಚ ಭ್ರಾಜಿಷ್ಣೋಸ್ತೇಜಸಾ ವೃತಮ್ ।
ಬಲಂ ಬಲವದುದ್ಭೂತಂ ಯುದ್ಧಾಯ ಸಮವರ್ತತ ।। ೧-೪೪-೫೧
ಜಿಷ್ಣು, ಸಹಿಷ್ಣು, ಭ್ರಾಜಿಷ್ಣು ವಿಷ್ಣುವಿನ ತೇಜಸ್ಸಿನಿಂದ ಬೆಳಗುತ್ತಿದ್ದ ಆ ಬಲವಂತ ಸೇನೆಯು ಯುದ್ಧಕ್ಕೆ ಸನ್ನದ್ಧವಾಗಿತ್ತು.
ಸ್ವಸ್ತ್ಯಸ್ತು ದೇವೇಭ್ಯ ಇತಿ ಸ್ತುತ್ವಾ ತತ್ರಾಂಗಿರಾಬ್ರವೀತ್ ।
ಸ್ವಸ್ತ್ಯಸ್ತು ದೈತ್ಯೇಭ್ಯ ಇತಿ ಉಶನಾ ವಾಕ್ಯಮಾದದೇ ।। ೧-೪೪-೫೨
ಆಗ ಅಂಗಿರಪುತ್ರ ಬೃಹಸ್ಪತಿಯು “ದೇವತೆಗಳಿಗೆ ಕಲ್ಯಾಣವಾಗಲಿ!” ಎಂದು ಸ್ತುತಿಗೈದನು ಮತ್ತು “ದೈತ್ಯರಿಗೆ ಕಲ್ಯಾಣವಾಗಲಿ!” ಎಂದು ಉಶನ ಶುಕ್ರಾಚಾರ್ಯನು ಹೇಳಿದನು.”
ಸಮಾಪ್ತಿ
ಇತಿ ಶ್ರೀಮನ್ಮಹಾಭಾರತೇ ಖಿಲೇಷು ಹರಿವಂಶೇ ಹರಿವಂಶಪರ್ವಣಿ ಆಶ್ಚರ್ಯತಾರಕಾಮಯೇ ಚತುಶ್ಚತ್ವಾರಿಂಶೋಽಧ್ಯಾಯಃ
-
ಪ್ರವಾಲರುಚಿರಾಂಗದಃ ಎಂಬ ಪಾಠಾಂತರವಿದೆ. ↩︎