043: ದೈತ್ಯಸೇನವರ್ಣನಮ್

ಪ್ರವೇಶ

।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।

ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ

ಶ್ರೀ ಮಹಾಭಾರತ

ಖಿಲಭಾಗೇ ಹರಿವಂಶಃ

ಹರಿವಂಶ ಪರ್ವ

ಅಧ್ಯಾಯ 43

ಸಾರ

ವೈಶಂಪಾಯನ ಉವಾಚ।
ತತೋ ಭಯಂ ವಿಷ್ಣುಮಯಂ ಶ್ರುತ್ವಾ ದೈತೇಯದಾನವಾಃ ।
ಉದ್ಯೋಗಂ ವಿಪುಲಂ ಚಕ್ರುರ್ಯುದ್ಧಾಯ ಯುಧಿ ದುರ್ಜಯಾಃ ।। ೧-೪೩-೧

ವೈಶಂಪಾಯನನು ಹೇಳಿದನು: “ಆಗ ವಿಷ್ಣುಮಯ ಭಯವನ್ನು ಕೇಳಿದ ಯುದ್ಧದಲ್ಲಿ ದುರ್ಜಯರಾದ ದೈತ್ಯ-ದಾನವರು ಯುದ್ಧಮಾಡಲು ವಿಪುಲ ಉದ್ಯೋಗವನ್ನು ಕೈಗೊಂಡರು.

ಮಯಸ್ತು ಕಾಂಚನಮಯಂ ತ್ರಿನಲ್ವಾಂತರಮವ್ಯಯಮ್ ।
ಚತುಶ್ಚಕ್ರಂ ವಿಕ್ರಮಂತಂ ಸುಕಲ್ಪಿತಮಹಾಯುಧಮ್ ।। ೧-೪೩-೨
ಕಿಂಕಿನೀಜಾಲನಿರ್ಘೋಷಂ ದ್ವೀಪಿಚರ್ಮಪರಿಷ್ಕೃತಮ್ ।
ಖಚಿತಂ ರತ್ನಜಾಲೈಶ್ಚ ಹೇಮಜಾಲೈಶ್ಚ ಭೂಷಿತಮ್ ।। ೧-೪೩-೩

ಮಯಾಸುರನು ಒಂದು ಸುವರ್ಣಮಯ ರಥದಲ್ಲಿ ಆರೂಢನಾದನು. ಅದರ ವಿಸ್ತಾರವು ಸಾವಿರದ ಎರಡುನೂರು ಮೊಳಗಳಿದ್ದವು. ಅದಕ್ಕೆ ನಾಲ್ಕು ಚಕ್ರಗಳಿದ್ದವು. ಆ ರಥವು ಒಡೆಯುವಂಥದ್ದಾಗಿರಲಿಲ್ಲ ಮತ್ತು ಚೂರಾಗುವಂಥಾದ್ದಾಗಿರಲಿಲ್ಲ. ಎಷ್ಟೇ ಏರು-ತಗ್ಗಿನ ಭೂಮಿಯಾಗಿದ್ದರೂ ಅದು ಮುಂದೆ ಚಲಿಸುತ್ತಿತ್ತು. ಆ ರಥದಲ್ಲಿ ದೊಡ್ಡ ದೊಡ್ಡ ಆಯುಧಗಳನ್ನು ಚೆನ್ನಾಗಿ ಜೋಡಿಸಿ ಇಡಲಾಗಿತ್ತು. ಅದಕ್ಕೆ ಚಿಕ್ಕ-ಚಿಕ್ಕ ಗಂಟೆಗಳ ಮಾಲೆಗಳನ್ನು ಕಟ್ಟಲಾಗಿತ್ತು. ಅವುಗಳಿಂದ ಕಿಂಕಿಣೀ ಶಬ್ಧಗಳು ಪ್ರತಿಧ್ವನಿಸುತ್ತಿದ್ದವು. ಆ ರಥಕ್ಕೆ ಚಿರತೆಯ ಚರ್ಮವನ್ನು ಹೊದಿಸಲಾಗಿತ್ತು. ರತ್ನಜಾಲಗಳು ಖಚಿತಗೊಂಡಿದ್ದ ಆ ರಥವು ಸುವರ್ಣಜಾಲಗಳಿಂದ ಭೂಷಿತವಾಗಿತ್ತು.

ಸ್ವಕ್ಷಂ ರಥವರೋದಗ್ರಂ ಸೂಪಸ್ಥಾನಮಗೋಪಮಮ್ ।
ಈಹಾಮೃಗಗಣಾಕೀರ್ಣಂ ಪಕ್ಷಿಭಿಶ್ಚ ವಿರಾಜಿತಮ್ ।
ದಿವ್ಯಾಸ್ತ್ರತೂಣೀರಧರಂ ಪಯೋಧರನಿನಾದಿತಮ್ ।। ೧-೪೩-೪

ಅದರ ಮೂಕಿಯು ಸುಂದರವಾಗಿತ್ತು. ಶ್ರೇಷ್ಠರಥಗಳಲ್ಲಿಯೇ ಅದು ಅಗ್ರವಾಗಿತ್ತು. ಅದರ ಸೂಪಸ್ಥಾನವು ಪರ್ವತದಂತಿತ್ತು. ಅದರ ಮೇಲೆ ಜೀವ-ಜಂತುಗಳು ಚಿತ್ರಿತಗೊಂಡಿದ್ದವು. ಪಕ್ಷಿಗಳ ಚಿತ್ರಗಳೂ ವಿರಾಜಿಸುತ್ತಿದ್ದವು. ಅದರಲ್ಲಿ ದಿವ್ಯಾಸ್ತ್ರಗಳನ್ನೂ ತೂಣೀರಗಳನ್ನು ಇರಿಸಲಾಗಿತ್ತು. ಆ ರಥದ ಘೋಷವು ಗುಡುಗಿನ ಶಬ್ಧದಂತಿತ್ತು.

ಗದಾಪರಿಘಸಂಪೂರ್ಣಂ ಮೂರ್ತಿಮಂತಮಿವಾರ್ಣವಮ್ ।
ಹೇಮಕೇಯೂರವಲಯಂ ಸ್ವರ್ಣಮಂಡಲಕೂಬರಮ್ ।। ೧-೪೩-೫

ಆ ರಥವು ಗದೆ-ಪರಿಘಗಳಿಂದ ತುಂಬಿಕೊಂಡಿತ್ತು. ಅದು ಸಮುದ್ರವೇ ಮೂರ್ತಿಮತ್ತಾಗಿರುವಂತೆ ಕಾಣುತ್ತಿತ್ತು. ಹೇಮಕೇಯೂರ ಪಟ್ಟಿಗಳಿಂದಲೂ ಸ್ವರ್ಣದ ಕೂಬರದಿಂದಲೂ ಕೂಡಿತ್ತು.

ಸಪತಾಕಧ್ವಜೋದಗ್ರಂ ಸಾದಿತ್ಯಮಿವ ಮಂದರಮ್ ।
ಗಜೇಂದ್ರಾಂಭೋದಸದೃಶಂ ಲಂಬಕೇಸರವರ್ಚಸಮ್ ।। ೧-೪೩-೬

ಎತ್ತರದ ಪತಾಕೆ-ಧ್ವಜಗಳಿಂದ ಕೂಡಿದ ಆ ರಥವು ಆದಿತ್ಯನೊಡನಿರುವ ಮಂದರ ಪರ್ವತದಂತೆ ಕಾಣುತ್ತಿತ್ತು. ಗಜೇಂದ್ರನಂತೆ ಮತ್ತು ಮೋಡದಂತೆಯೂ ತೋರುತ್ತಿತ್ತು.

ಯುಕ್ತಮೃಕ್ಷಸಹಸ್ರೇಣ ಸಹಸ್ರಾಂಬುದನಾದಿತಮ್ ।
ದೀಪ್ತಮಾಕಾಶಗಂ ದಿವ್ಯಂ ರಥಂ ಪರರಥಾರುಜಮ್ ।। ೧-೪೩-೭
ಅಧ್ಯತಿಷ್ಠದ್ರಣಾಕಾಂಕ್ಷೀ ಮೇರುಂ ದೀಪ್ತಮಿವಾಂಶುಮಾನ್ ।

ಅದಕ್ಕೆ ಸಹಸ್ರ ಕರಡಿಗಳನ್ನು ಕಟ್ಟಲಾಗಿತ್ತು. ಅದು ಸಹಸ್ರ ಮೋಡಗಳ ಧ್ವನಿಯಂತೆ ಘೋಷಿಸುತ್ತಿತ್ತು. ಬೆಳಗುತ್ತಿದ್ದ ಆ ದಿವ್ಯ ರಥವು ಅಕಾಶದಲ್ಲಿಯೂ ಚಲಿಸುತ್ತಿತ್ತು ಮತ್ತು ಶತ್ರುಗಳ ರಥಗಳನ್ನು ಪುಡಿಪುಡಿಮಾಡುತ್ತಿತ್ತು. ಯದ್ಧಾಕಾಂಕ್ಷಿಯಾದ ಮಯಾಸುರನು ಆ ರಥವನ್ನೇರಿ ಮೇರುಪರ್ವತವನ್ನೇರಿದ ದೀಪ್ತಮಾನ ಸೂರ್ಯನಂತೆ ಕಂಗೊಳಿಸುತ್ತಿದ್ದನು.

ತಾರಸ್ತು ಕ್ರೋಶವಿಸ್ತಾರಮಾಯಸಂ ವಾಯಸಧ್ವಜಮ್ ।। ೧-೪೩-೮
ಶೈಲೋತ್ಕರಸಮಾಕೀರ್ಣಂ ನೀಲಾಂಜನಚಯೋಪಮಮ್ । ೧-೪೩-೮
ಕಾಲಲೋಹಾಷ್ಟಚರಣಂ ಲೋಹೇಷಾಯುಗಕೂಬರಮ್ ।
ತಿಮಿರಾಂಗಾರಕಿರಣಂ ಗರ್ಜಂತಮಿವ ತೋಯದಮ್ ।। ೧-೪೩-೯

ತಾರ ಎಂಬ ಹೆಸರಿನ ದೈತ್ಯನು ಒಂದು ಕ್ರೋಶ ವಿಸ್ತೀರ್ಣದ, ಕಾಗೆಯ ಚಿಹ್ನೆಯ ಧ್ವಜವಿದ್ದ ಉಕ್ಕಿನ ರಥವನ್ನು ಏರಿದನು. ಅದರಲ್ಲಿ ಕಲ್ಲುಬಂಡೆಗಳ ಸಮೂಹಗಳನ್ನು ತುಂಬಿಸಲಾಗಿತ್ತು. ಅದು ನೀಲ ಅಂಜನದ ರಾಶಿಯಂತೆ ಕಾಣುತ್ತಿತ್ತು. ಅದಕ್ಕೆ ಕಪ್ಪುಲೋಹೆಯ ಎಂಟು ಗಾಲಿಗಳಿದ್ದವು. ಲೋಹಗಳ ಈಷಾದಂಡ ಮತ್ತು ಕೂಬರಗಳಿದ್ದವು. ಅದರ ಕಾಂತಿಯು ಕಪ್ಪು ಕೆಂಡದಂತಿತ್ತು ಮತ್ತು ಅದು ಗುಡುಗಿನಂತೆ ಗರ್ಜಿಸುತ್ತಿತ್ತು.

ಲೋಹಜಾಲೇನ ಮಹತಾ ಸಗವಾಕ್ಷೇಣ ದಂಶಿತಮ್ ।
ಆಯಸೈಃ ಪರಿಘೈಃ ಕೀರ್ಣಂ ಕ್ಷೇಪಣೀಯೈಸ್ತಥಾಶ್ಮಭಿಃ ।। ೧-೪೩-೧೦

ಅದರ ಮೇಲೆ ಲೋಹೆಯ ದೊಡ್ಡ ಜಾಲವಿತ್ತು. ಅದರ ಗವಾಕ್ಷಗಳು ಹಾರೆಕೋಲು, ಪರಿಘ, ಕ್ಷೇಪಣಿ ಮತ್ತು ಕಲ್ಲುಬಂಡೆಗಳಿಂದ ತುಂಬಿಕೊಂಡಿದ್ದವು.

ಪ್ರಾಸೈಃ ಪಾಶೈಶ್ಚ ವಿತತೈರವಸಕ್ತೈಶ್ಚ ಮುದ್ಗರೈಃ ।
ಶೋಭಿತಂ ತ್ರಾಸನೀಯೈಶ್ಚ ತೋಮರೈಃ ಸಪರಶ್ವಧೈಃ ।। ೧-೪೩-೧೧

ಪ್ರಾಸಗಳು, ಪಾಶಗಳು, ಅನೇಕ ನೇತಾಡುವ ಮುದ್ಗರಗಳು, ಭಯಪಡಿಸುವ ತೋಮರಗಳು ಮತ್ತು ಪರಶಾಯುಧಗಳಿಂದ ಅದು ಶೋಭಿಸುತ್ತಿತ್ತು.

ಉದ್ಯಂತಂ ದ್ವಿಷತಾಂ ಹೇತೋರ್ದ್ವಿತೀಯಮಿವ ಮಂದರಮ್ ।
ಯುಕ್ತಂ ಖರಸಹಸ್ರೇಣ ಸೋಽಧ್ಯಾರೋಹದ್ರಥೋತ್ತಮಮ್ ।। ೧-೪೩-೧೨

ಶತ್ರುಗಳಿಗಾಗಿ ಹುಟ್ಟಿಕೊಂಡ ಎರಡನೇ ಮಂದರದಂತೆ ತೋರುತ್ತಿದ್ದ ಆ ರಥಕ್ಕೆ ಸಾವಿರ ಕತ್ತೆಗಳನ್ನು ಕಟ್ಟಲಾಗಿತ್ತು. ಅಂಥಹ ಉತ್ತಮ ರಥವನ್ನು ತಾರನು ಏರಿದನು.

ವಿರೋಚನಸ್ತು ಸಂಕ್ರುದ್ಧೋ ಗದಾಪಾಣಿರವಸ್ಥಿತಃ ।
ಪ್ರಮುಖೇ ತಸ್ಯ ಸೈನ್ಯಸ್ಯ ದೀಪ್ತಶೃಂಗ ಇವಾಚಲಃ ।। ೧-೪೩-೧೩

ವಿರೋಚನನಾದರೋ ಸಂಕ್ರುದ್ಧನಾಗಿ ಗದಾಪಾಣಿಯಾಗಿ ತನ್ನ ಸೈನ್ಯದ ಪ್ರಮುಖದಲ್ಲಿ ಉರಿಯುತ್ತಿರುವ ಪರ್ವತಶಿಖರದಂತೆ ನಿಂತಿದ್ದನು.

ಯುಕ್ತಂ ಹಯಸಹಸ್ರೇಣ ಹಯಗ್ರೀವಸ್ತು ದಾನವಃ ।
ಸ್ಯಂದನಂ ವಾಹಯಾಮಾಸ ಸಪತ್ನಾನೀಕಮರ್ದನಃ ।। ೧-೪೩-೧೪

ಶತ್ರುಮರ್ದನ ದಾನವ ಹಯಗ್ರೀವನಾದರೋ ಸಾವಿರ ಕುದುರೆಗಳನ್ನು ಕಟ್ಟಿದ್ದ ರಥವನ್ನು ತನ್ನ ವಾಹನವನ್ನಾಗಿ ಬಳಸಿದ್ದನು.

ವ್ಯಾಯತಂ ಬಹುಸಾಹಸ್ರಂ ಧನುರ್ವಿಸ್ಫಾರಯನ್ಮಹತ್ ।
ವರಾಹಃ ಪ್ರಮುಖೇ ತಸ್ಥೌ ಸಾವರೋಹ ಇವಾಚಲಃ ।। ೧-೪೩-೧೫

ಅನೇಕ ಸಾವಿರ ಮೊಳ ವಿಸ್ತಾರವಾಗಿದ್ದ ಮಹಾ ಧನುಸ್ಸನ್ನು ಟೇಂಕರಿಸುತಾ ವರಾಹ ದೈತ್ಯನು ಸೇನೆಯ ಪ್ರಮುಖದಲ್ಲಿ ಪರ್ವತದಂತೆ ತೋರುತ್ತಿದ್ದನು.

ಖರಸ್ತು ವಿಕ್ಷರಂದರ್ಪಾನ್ನೇತ್ರಾಭ್ಯಾಂ ರೋಷಜಂ ಜಲಮ್ ।
ಸ್ಫುರದ್ದಂತೌಷ್ಠವದನಃ ಸಂಗ್ರಾಮಂ ಸೋಽಭ್ಯಕಾಂಕ್ಷತ ।। ೧-೪೩-೧೬

ಖರನೆಂಬ ದೈತ್ಯನಾದರೋ ತನ್ನ ನೇತ್ರಗಳಿಂದ ರೋಷಜನಿತ ನೀರನ್ನು ಸುರಿಸುತ್ತಾ ಅತ್ಯಂತ ದರ್ಪಿತನಾಗಿ ಯುದ್ಧೇಚ್ಛಿಯಾಗಿ ನಿಂತಿದ್ದನು. ಅವನ ಮುಖ, ಹಲ್ಲುಗಳು ಮತ್ತು ತುಟಿಗಳು ಕ್ರೋಧದಿಂದ ಮಿಡಿಯುತ್ತಿದ್ದವು.

ತ್ವಷ್ಟಾ ತ್ವಷ್ಟಾದಶಹಯಂ ಯಾನಮಾಸ್ಥಾಯ ದಾನವಃ ।
ವ್ಯೂಹಿತೋ ದಾನವೈರ್ವ್ಯೂಹೈಃ ಪರಿಚಕ್ರಾಮ ವೀರ್ಯವಾನ್ ।। ೧-೪೩-೧೭

ತ್ವಷ್ಟನೆಂಬ ವೀರ್ಯವಾನ್ ದಾನವನು ಹದಿನೆಂಟು ಕುದುರೆಗಳನ್ನು ಕಟ್ಟಿದ್ದ ರಥದಲ್ಲಿ ಕುಳಿತು ದಾನವರ ವ್ಯೂಹಗಳಲ್ಲಿ ತಾನೂ ಒಂದು ವ್ಯೂಹವಾಗಿ ಸಂಚರಿಸುತ್ತಿದ್ದನು.

ವಿಪ್ರಚಿತ್ತಿಸುತಃ ಶ್ವೇತಃ ಶ್ವೇತಕುಂಡಲಭೂಷಣಃ ।
ಶ್ವೇತಶೈಲಪ್ರತೀಕಾಶೋ ಯುದ್ಧಾಯಾಭಿಮುಖಃ ಸ್ಥಿತಃ ।। ೧-೪೩-೧೮

ವಿಪ್ರಚಿತ್ತಿಯ ಮಗ ಶ್ವೇತನು ಶ್ವೇತಕುಂಡಲ ವಿಭೂಷಿತನಾಗಿ ಶ್ವೇತಪರ್ವತದಂತೆ ತೋರುತ್ತಾ ಯುದ್ಧಾಭಿಮುಖನಾಗಿ ನಿಂತನು.

ಅರಿಷ್ಟೋ ಬಲಿಪುತ್ರಸ್ತು ವರಿಷ್ಠೋಽದ್ರಿಶಿಲಾಯುಧೈಃ ।
ಯುದ್ಧಾಯಾತಿಷ್ಠದಾಯಸ್ತೋ ಧರಾಧರ ಇವಾಪರಃ ।। ೧-೪೩-೧೯

ಬಲಿಯ ಜ್ಯೇಷ್ಠ ಪುತ್ರ ಅರಿಷ್ಟನು ಪರ್ವತಶಿಲೆಗಳನ್ನು ಆಯುಧಗಳನ್ನಾಗಿ ಧರಿಸಿ ಯುದ್ಧಕ್ಕಾಗಿ ನಿಂತನು.

ಕಿಶೋರಸ್ತ್ವತಿಸಂಹರ್ಷಾತ್ಕಿಶೋರ ಇವ ಚೋದಿತಃ ।
ಅಭವದ್ದೈತ್ಯಸೈನ್ಯಸ್ಯ ಮಧ್ಯೇ ರವಿರಿವೋದಿತಃ ।। ೧-೪೩-೨೦

ಕಿಶೋರ ಎಂಬ ದೈತ್ಯನು ಬಾರಿಕೋಲಿನಿಂದ ಪ್ರಚೋದಿತನಾದ ಕರುವಿನಂತೆ ಅತಿಸಂಹರ್ಷದಿಂದ ಸೈನ್ಯದ ಮಧ್ಯೆ ರವಿಯಂತೆ ಕಾಣಿಸಿಕೊಂಡನು.

ಲಂಬಸ್ತು ಲಂಬಮೇಘಾಭಃ ಪ್ರಲಂಬಾಂಬರಬೂಷಣಃ ।
ದೈತ್ಯವ್ಯೂಹಗತೋ ಭಾತಿ ಸನೀಹಾರ ಇವಾಂಶುಮಾನ್ ।। ೧-೪೩-೨೧

ಲಂಬನಾದರೋ ಜೋಲುತ್ತಿರುವ ಮೇಘಗಳಂತೆ ಕಾಣುತ್ತಿದ್ದನು. ಅವನ ಉಡುಪು-ಭೂಷಣಗಳು ಉದ್ದುದ್ದವಾಗಿದ್ದವು. ದೈತ್ಯವ್ಯೂಹವನ್ನು ಸೇರಿಕೊಂಡ ಅವನು ಮೋಡಗಳಿಂದ ಮುಚ್ಚಲ್ಪಟ್ಟ ಸೂರ್ಯನಂತೆ ಹೊಳೆಯುತ್ತಿದ್ದನು.

ಸ್ವರ್ಭಾನುರ್ವಕ್ರಯೋಧೀ ಚ ದಶನೌಷ್ಠೇಕ್ಷಣಾಯುಧಃ ।
ಹಸಂಸ್ತಿಷ್ಠತಿ ದೈತ್ಯಾನಾಂ ಪ್ರಮುಖೇ ಸ ಮಹಾಗ್ರಹಃ ।। ೧-೪೩-೨೨

ವಕ್ರಯೋಧೀ ಮಹಾಗ್ರಹ ಸ್ವರ್ಭಾನುವು ಅಟ್ಟಹಾಸಗೈಯುತ್ತಾ ದೈತ್ಯರ ಪ್ರಮುಖದಲ್ಲಿ ನಿಂತನು. ಅವನು ತನ್ನ ಹಲ್ಲುಗಳು, ಕಣ್ಣುಗಳು ಮತ್ತು ತುಟಿಗಳನ್ನೂ ಆಯುಧಗಳನ್ನಾಗಿ ಬಳಸುವವನಾಗಿದ್ದನು.

ಅನ್ಯೇ ಹಯಗತಾ ಭಾಂತಿ ನಾಗಸ್ಕಂಧಗತಾಃ ಪರೇ ।
ಸಿಂಹವ್ಯಾಘ್ರಗತಾಶ್ಚಾನ್ಯೇ ವರಾಹರ್ಕ್ಷಗತಾಃ ಪರೇ ।। ೧-೪೩-೨೩

ಅನ್ಯರು ಕುದುರೆಗಳನ್ನೇರಿದ್ದರು ಮತ್ತು ಇತರರು ಆನೆಗಳ ಮೇಲೆ ಸವಾರರಾಗಿದ್ದರು. ಕೆಲವರು ಸಿಂಹ-ವ್ಯಾಘ್ರಗಳನ್ನು ಮತ್ತು ಇನ್ನು ಕೆಲವರು ವರಾಹ-ಕರಡಿಗಳನ್ನು ಏರಿದ್ದರು.

ಕೇಚಿತ್ಖರೋಷ್ಟ್ರಯಾತಾರಃ ಕೇಚಿತ್ತೋಯದವಾಹನಾಃ ।
ನಾನಾಪಕ್ಷಿಗತಾಶ್ಚಾನ್ಯೇ ಕೇಚಿತ್ಪವನವಾಹನಾಃ ।। ೧-೪೩-೨೪

ಕೆಲವರು ಕತ್ತೆಗಳನ್ನೇರಿದ್ದರು. ಕೆಲವರು ಒಂಟೆಗಳನ್ನೇರಿದ್ದರು. ಕೆಲವರು ಮೋಡಗಳನ್ನೇ ವಾಹನಗಳನ್ನಾಗಿ ಬಳಸಿದ್ದರು. ಅನ್ಯರು ನಾನಾಪಕ್ಷಿಗಳನ್ನೇರಿದ್ದರು. ಕೆಲವರು ಗಾಳಿಯನ್ನೇ ವಾಹನವನ್ನಾಗಿ ಬಳಸಿದ್ದರು.

ಪತ್ತಯಶ್ಚಾಪರೇ ದೈತ್ಯಾ ಭೀಷಣಾ ವಿಕೃತಾನನಾಃ ।
ಏಕಪಾದಾ ದ್ವಿಪಾದಾಶ್ಚ ನರ್ದಂತೋ ಯುದ್ಧಕಾಂಕ್ಷಿಣಃ ।। ೧-೪೩-೨೫

ಅ ಸೇನೆಯಲ್ಲಿ ಬೇರೆ ಬೇರೆ ರೀತಿಯ ಭೀಷಣ ವಿಕೃತಾನನರು ಇದ್ದರು. ಯುದ್ಧಾಕಾಂಕ್ಷಿಗಳಾಗಿದ್ದ ಒಂದು ಅಥವಾ ಎರಡು ಕಾಲಿದ್ದವರು ನರ್ದಿಸುತ್ತಿದ್ದರು.

ಪ್ರಕ್ಷ್ವೇಡಮಾನಾ ಬಹವಃ ಸ್ಫೋಟಯಂತಶ್ಚ ತೇ ಭುಜಾನ್ ।
ದೃಪ್ತಶಾರ್ದೂಲನಿರ್ಘೋಷಾ ನೇದುರ್ದಾನವಪುಂಗವಾಃ ।। ೧-೪೩-೨೬

ಅನೇಕ ದಾನವಪುಂಗವರು ಭುಜಗಳನ್ನು ಸ್ಫೋಟಗೊಳಿಸುವಂತೆ ತಟ್ಟಿಕೊಳ್ಳುತ್ತಾ ದೃಪ್ತಶಾರ್ದೂಲಗಳಂತೆ ಗರ್ಜಿಸುತ್ತಾ ಕೂಗಿಕೊಳ್ಳುತ್ತಿದ್ದರು.

ತೇ ಗದಾಪರಿಘೈರುಗ್ರೈರ್ಧನುರ್ವ್ಯಾಯಾಮಶಾಲಿನಃ ।
ಬಾಹುಭಿಃ ಪರಿಘಾಕಾರೈಸ್ತರ್ಜಯಂತಿ ಸ್ಮ ದೇವತಾಃ ।। ೧-೪೩-೨೭

ಆ ವ್ಯಾಯಾಮಶಾಲಿಗಳು ಪರಿಘಾಕಾರದ ತಮ್ಮ ಬಾಹುಗಳಲ್ಲಿ ಉಗ್ರ ಗದಾ-ಪರಿಘಗಳನ್ನು ತಿರುಗಿಸುತ್ತಾ ದೇವತೆಗಳನ್ನು ಬೆದರಿಸುತ್ತಿದ್ದರು.

ಪ್ರಾಸೈಃ ಪಾಶೈಶ್ಚ ಖಡ್ಗೈಶ್ಚ ತೋಮರಾಂಕುಶಪಟ್ಟಿಶೈಃ ।
ಚಿಕ್ರೀಡುಸ್ತೇ ಶತಘ್ನೀಭಿಃ ಶತಧಾರೈಶ್ಚ ಮುದ್ಗರೈಃ ।। ೧-೪೩-೨೮

ಪ್ರಾಸಗಳು, ಪಾಶಗಳು, ಖಡ್ಗಗಳು, ತೋಮಾಂಕುಶಪಟ್ಟಿಶಗಳು, ಶತಘ್ನಿಗಳು, ಶತಧಾರೆಗಳು, ಮುದ್ಗರಗಳನ್ನು ಅವರು ತಿರುಗಿಸುತ್ತಿದ್ದರು.

ಗಂಡಶೈಲೈಶ್ಚ ಶೈಲೈಶ್ಚ ಪರಿಘೈಶ್ಚೋತ್ತಮಾಯುಧೈಃ ।
ಚಕ್ರೈಶ್ಚ ದೈತ್ಯಪ್ರವರಾಶ್ಚಕ್ರುರಾನಂದಿತಂ ಬಲಂ ।। ೧-೪೩-೨೯

ಆ ದೈತ್ಯಪ್ರವರು ಗಿರಿಗಳಿಂದ ಕೆಳಗುರುಳಿದ ಬಂಡೆಗಳನ್ನು, ಪರಿಘಗಳನ್ನು, ಉತ್ತಮ ಆಯುಧಗಳು ಮತ್ತು ಚಕ್ರಗಳಿಂದ ಸೇನೆಯನ್ನು ಆನಂದಗೊಳಿಸುತ್ತಿದ್ದರು.

ಏವಂ ತದ್ದಾನವಂ ಸೈನ್ಯಂ ಸರ್ವಂ ಯುದ್ಧಬಲೋತ್ಕಟಮ್ ।
ದೇವತಾಭಿಮುಖಂ ತಸ್ಥೌ ಮೇಘಾನೀಕಮಿವೋತ್ಥಿತಮ್ ।। ೧-೪೩-೩೦

ಹೀಗೆ ಆ ಯುಬಲೋತ್ಕಟ ದಾನವ ಸೈನ್ಯವೆಲ್ಲವೂ ಮೇಘಗಳ ಗುಂಪಿನಂತೆ ಮೇಲೆದ್ದು ದೇವತೆಗಳ ಅಭಿಮುಖವಾಗಿ ನಿಂತಿತು.

ತದದ್ಭುತಂ ದೈತ್ಯಸಹಸ್ರಗಾಢಂ ವಾಯ್ವಗ್ನಿತೋಯಾಂಬುದಶೈಲಕಲ್ಪಮ್ ।
ಬಲಂ ರಣೌಘಾಭ್ಯುದಯಾವಕೀರ್ಣಂ ಯುಯುತ್ಸಯೋನ್ಮತ್ತಮಿವಾಬಭಾಸೇ ।। ೧-೪೩-೩೧

ಆ ಅದ್ಭುತ ಸೇನೆಯು ಸಹಸ್ರಾರು ದೈತ್ಯರಿಂದ ತುಂಬಿಕೊಂಡಿತ್ತು. ವಾಯು, ಅಗ್ನಿ, ಜಲ , ಮೇಘಗಳು ಮತ್ತು ಪರ್ವತಗಳ ಮಾಲೆಯಂತೆ ತೋರುತ್ತಿತ್ತು. ರಣದ ಬಲವನ್ನು ಹೆಚ್ಚಿಸಲು ಎಲ್ಲ ಕಡೆ ಪಸರಿಕೊಂಡಿತ್ತು ಮತ್ತು ಯುದ್ಧಮಾಡಲು ಉತ್ಸುಕವಾಗಿ ಉನ್ಮತ್ತಗೊಂಡಂತೆ ತೋರುತ್ತಿತ್ತು.

ಸಮಾಪ್ತಿ

ಇತಿ ಶ್ರೀಮನ್ಮಹಾಭಾರತೇ ಖಿಲೇಷು ಹರಿವಂಶೇ ಹರಿವಂಶಪರ್ವಣಿ ತ್ರಿಚತ್ವಾರಿಂಶೋಽಧ್ಯಾಯಃ