042: ವಿಷ್ಣೋರೀಶ್ವರತ್ವಕಥನಮ್

ಪ್ರವೇಶ

।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।

ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ

ಶ್ರೀ ಮಹಾಭಾರತ

ಖಿಲಭಾಗೇ ಹರಿವಂಶಃ

ಹರಿವಂಶ ಪರ್ವ

ಅಧ್ಯಾಯ 42

ಸಾರ

ವಿಷ್ಣುವಿನ ಈಶ್ವರತ್ವದ ವರ್ಣನೆ ಮತ್ತು ಅದ್ಭುತ ತಾರಕಾಮಯ ಸಂಗ್ರಾಮದ ಕಥಾರಂಭ.

ವೈಶಂಪಾಯನ ಉವಾಚ।
ವಿಶ್ವತ್ವಂ ಶೃಣು ಮೇ ವಿಷ್ಣೋರ್ಹರಿತ್ವಂ ಚ ಕೃತೇ ಯುಗೇ ।
ವೈಕುಂಠತ್ವಂ ಚ ದೇವೇಷು ಕೃಷ್ಣತ್ವಂ ಮಾನುಷೇಷು ಚ ।। ೧-೪೨-೧
ಈಶ್ವರತ್ವಂ ಚ ತಸ್ಯೇದಂ ಗಹನಾಂ ಕರ್ಮಣಾಂ ಗತಿಮ್ ।
ಸಂಪ್ರತ್ಯತೀತಾಂ ಭಾವ್ಯಾಂ ಚ ಶೃಣು ರಾಜನ್ಯಥಾತಥಮ್ ।। ೧-೪೨-೨

ವೈಶಂಪಾಯನನು ಹೇಳಿದನು: “ರಾಜನ್! ಕೃತಯುಗದಲ್ಲಿ ವಿಷ್ಣುವಿನ ವಿಶ್ವತ್ವ ಮತು ಹರಿತ್ವದ ಕುರಿತು, ದೇವತೆಗಳಲ್ಲಿ ಅವನ ವೈಕುಂಠತ್ವ ಮತ್ತು ಮನುಷ್ಯರಲ್ಲಿ ಅವನ ಕೃಷ್ಣತ್ವ, ಅವನ ಈಶ್ವರತ್ವ ಮತ್ತು ಅವನ ಭೂತ-ಭವಿಷ್ಯ-ವರ್ತಮಾನ ಕರ್ಮಗಳ ಗಹನ ಗತಿಯ ಕುರಿತು ಯಥಾರ್ಥವಾಗಿ ಕೇಳು.

ಅವ್ಯಕ್ತೋ ವ್ಯಕ್ತಲಿಂಗಸ್ಥೋ ಯತ್ರೈವ ಭಗವಾನ್ಪ್ರಭುಃ ।
ನಾರಾಯಣೋ ಹ್ಯನಂತಾತ್ಮಾ ಪ್ರಭವೋಽವ್ಯಯ ಏವ ಚ ।। ೧-೪೨-೩

ಭಗವಾನ್ ಪ್ರಭು ನಾರಾಯಣನು ಅವ್ಯಕ್ತನಾಗಿದ್ದರೂ ತನ್ನ ಮೂರ್ತಿಯನ್ನು ವ್ಯಕ್ತಗೊಳಿಸುತ್ತಾನೆ. ಏಕೆಂದರೆ ಅವನು ಅನಂತಾತ್ಮಾ ಮತ್ತು ಎಲ್ಲದರ ಉತ್ಪತ್ತಿಸ್ಥಾನ ಮತ್ತು ಅವ್ಯಯನು.

ಏಷ ನಾರಾಯಣೋ ಭೂತ್ವಾ ಹರಿರಾಸೀತ್ಕೃತೇ ಯುಗೇ ।
ಬ್ರಹ್ಮಾ ಶಕ್ರಶ್ಚ ಸೋಮಶ್ಚ ಧರ್ಮಃ ಶುಕ್ರೋ ಬೃಹಸ್ಪತಿಃ ।। ೧-೪೨-೪

ಕೃತಯುಗದಲ್ಲಿ ಇವನು ನಾರಾಯಣನಾಗಿ ಇವನೇ ಹರಿ, ಬ್ರಹ್ಮ, ಶಕ್ರ, ಸೋಮ, ಧರ್ಮ, ಶುಕ್ರ ಮತ್ತು ಬೃಹಸ್ಪತಿಯರಾಗಿದ್ದನು.

ಅದಿತೇರಪಿ ಪುತ್ರತ್ವಮೇತ್ಯ ಯಾದವನಂದನಃ ।
ಏಷ ವಿಷ್ಣುರಿತಿ ಖ್ಯಾತ ಇಂದ್ರಾದವರಜೋಽಭವತ್ ।। ೧-೪೨-೫

ಈ ಯಾದವನಂದನನು ಅದಿತಿಯ ಪುತ್ರತ್ವವನ್ನೂ ಪಡೆದುಕೊಂಡು ವಿಷ್ಣುವೆಂದು ಖ್ಯಾತನಾಗಿ ಇಂದ್ರನ ತಮ್ಮನಾದನು.

ಪ್ರಸಾದಜಂ ಹ್ಯಸ್ಯ ವಿಭೋರದಿತ್ಯಾಃ ಪುತ್ರಜನ್ಮ ತತ್ ।
ವಧಾರ್ಥಂ ಸುರಶತ್ರೂಣಾಂ ದೈತ್ಯದಾನವರಕ್ಷಸಾಮ್ ।। ೧-೪೨-೬

ಸುರರ ಶತ್ರುಗಳಾಗಿದ್ದ ದೈತ್ಯ-ದಾನವ-ರಾಕ್ಷಸರ ವಧೆಗಾಗಿ ವಿಭುವು ಅದಿತಿಯ ಪುತ್ರನಾಗಿ ಜನ್ಮವನ್ನು ಪಡೆದುದು ಅವನ ಪ್ರಸಾದರೂಪವಾಗಿತ್ತು.

ಪ್ರಧಾನಾತ್ಮಾ ಪುರಾ ಹ್ಯೇಷ ಬ್ರಹ್ಮಾಣಮಸೃಜತ್ಪ್ರಭುಃ ।
ಸೋಽಸೃಜತ್ಪೂರ್ವಪುರುಷಃ ಪುರಾ ಕಲ್ಪೇ ಪ್ರಜಾಪತೀನ್ ।। ೧-೪೨-೭

ಹಿಂದೆ ಈ ಪ್ರಭುವೇ ಪ್ರಧಾನಾತ್ಮನಾಗಿ ಬ್ರಹ್ಮನನ್ನು ಸೃಷ್ಟಿಸಿದನು. ಇವನೇ ಹಿಂದಿನ ಕಲ್ಪಗಳಲ್ಲಿ ಪ್ರಜಾಪತಿಗಳನ್ನು ಸೃಷ್ಟಿಸಿದ ಪೂರ್ವಪುರುಷನು1.

ತೇ ತನ್ವಾನಾಸ್ತನೂಸ್ತತ್ರ ಬ್ರಹ್ಮವಂಶಾನನುತ್ತಮಾನ್ ।
ತೇಭ್ಯೋಽಭವನ್ಮಹಾತ್ಮಭ್ಯೋ ಬಹುಧಾ ಬ್ರಹ್ಮ ಶಾಶ್ವತಮ್ ।। ೧-೪೨-೮

ಆ ಪ್ರಜಾಪತಿಗಳ ತನುವಿನಿಂದ ಉತ್ತಮ ಬ್ರಹ್ಮವಂಶಗಳು ಉತ್ಪನ್ನವಾದವು. ಆ ಮಹಾತ್ಮರಿಂದಲೇ ಶಾಶ್ವತ ಬ್ರಹ್ಮವು ಅನೇಕವಾಯಿತು.

ಏತದಾಶ್ಚರ್ಯಭೂತಸ್ಯ ವಿಷ್ಣೋರ್ನಾಮಾನುಕೀರ್ತನಮ್ ।
ಕೀರ್ತನೀಯಸ್ಯ ಲೋಕೇಷು ಕೀರ್ತ್ಯಮಾನಂ ನಿಬೋಧ ಮೇ ।। ೧-೪೨-೯

ಲೋಕದಲ್ಲಿ ಕೀರ್ತನೀಯನಾದ ಈ ಆಶ್ಚರ್ಯಭೂತ ವಿಷ್ಣುವಿನ ನಾಮಾನುಕೀರ್ತನೆಯನ್ನು ನಾನು ಮಾಡುವುದನ್ನು ಕೇಳು.

ವೃತ್ತೇ ವೃತ್ರವಧೇ ತಾತ ವರ್ತಮಾನೇ ಕೃತೇ ಯುಗೇ ।
ಆಸೀತ್ತ್ರೈಲೋಕ್ಯವಿಖ್ಯಾತಃ ಸಂಗ್ರಾಮಸ್ತಾರಕಾಮಯಃ ।। ೧-೪೨-೧೦

ಅಯ್ಯಾ! ಕೃತಯುಗದಲ್ಲಿ ವೃತ್ರವಧೆಯು ನಡೆದನಂತರ ನಡೆದ ವೃತ್ತಾಂತವಿದು. ಆಗ ತ್ರೈಲೋಕ್ಯವಿಖ್ಯಾತವಾದ ತಾರಕಾಮಯ ಸಂಗ್ರಮವು ನಡೆಯಿತು.

ತತ್ರಾಸಂದಾನವಾ ಘೋರಾಃ ಸರ್ವೇ ಸಂಗ್ರಾಮದರ್ಪಿತಾಃ ।
ಘ್ನಂತಿ ದೇವಗಣಾನ್ಸರ್ವಾನ್ಸಯಕ್ಷೋರಗರಾಕ್ಷಸಾನ್ ।। ೧-೪೨-೧೧

ಅಲ್ಲಿ ಘೋರದಾನವರು, ಎಲ್ಲರೂ ಸಂಗ್ರಾಮದರ್ಪಿತರೇ, ಯಕ್ಷೋರಗರಾಕ್ಷಸ2ರೊಡನೆ ದೇವಗಣಗಳೆಲ್ಲವನ್ನೂ ಸಂಹರಿಸಿದ್ದರು.

ತೇ ವಧ್ಯಮಾನಾ ವಿಮುಖಾಃ ಕ್ಷೀಣಪ್ರಹರಣಾ ರಣೇ ।
ತ್ರಾತಾರಂ ಮನಸಾ ಜಗ್ಮುರ್ದೇವಂ ನಾರಾಯಣಂ ಹರಿಮ್ ।। ೧-೪೨-೧೨

ಹೀಗೆ ವಧಿಸಲ್ಪಡುತ್ತಿದ್ದ ಮತ್ತು ಆಯಸ್ಸನ್ನು ಕಳೆದುಕೊಂಡ ಅವರು ರಣದಿಂದ ವಿಮುಖರಾಗಿ ಮನಸಾ ದೇವ ನಾರಾಯಣ ಹರಿಯ ಶರಣುಹೊಕ್ಕರು.

ಏತಸ್ಮಿನ್ನಂತರೇ ಮೇಘಾ ನಿರ್ವಾಣಾಂಗಾರವರ್ಷಿಣಃ ।
ಸಾರ್ಕಚಂದ್ರಗ್ರಹಗಣಂ ಛಾದಯಂತೋ ನಭಸ್ತಲಮ್ ।। ೧-೪೨-೧೩

ಈ ಮಧ್ಯದಲ್ಲಿ ಮೇಘಗಳು ಜ್ವಾಲಾರಹಿತ ಅಂಗಾರೆಗಳನ್ನು ಸುರಿಸತೊಡಗಿದವು. ಅವು ಸೂರ್ಯ-ಚಂದ್ರ ಮೊದಲಾದ ಗ್ರಹಗಣಸಹಿತ ನಭಸ್ತಲವನ್ನೇ ಮುಸುಕಿತ್ತು.

ಚಂಚದ್ವಿದ್ಯುದ್ಗಣಾವಿದ್ಧಾ ಘೋರಾ ನಿಹ್ರಾದಕಾರಿಣಃ ।
ಅನ್ಯೋನ್ಯವೇಗಾಭಿಹತಾಃ ಪ್ರವವುಃ ಸಪ್ತ ಮಾಋತಾಃ ।। ೧-೪೨-೧೪

ಕುಪಿತ ವಿದ್ಯುತ್ ಜ್ವಾಲೆಗಳಂತೆ ಹರಡಿಕೊಂಡಿದ್ದ ಆ ಘೋರ ಮೋಡಗಳು ಜೋರಾಗಿ ಗರ್ಜಿಸುತ್ತಿದ್ದವು ಮತ್ತು ಸಪ್ತಮಾರುತಗಳಿಂದ ಬೀಸಲ್ಪಟ್ಟು ವೇಗದಿಂದ ಪರಸ್ಪರರನ್ನು ಘರ್ಷಿಸುತ್ತಿದ್ದವು.

ದೀಪ್ತತೋಯಾಶನೀಪಾತೈರ್ವಜ್ರವೇಗಾನಿಲಾಕುಲೈಃ ।
ರರಾಸ ಘೋರೈರುತ್ಪಾತೈರ್ದಹ್ಯಮಾನಮಿವಾಂಬರಮ್ ।। ೧-೪೨-೧೫

ಉರಿಯುತ್ತಿರುವ ಸಿಡಿಲುಗಳು ಬೀಳುತ್ತಿರಲು ವಜ್ರವೇಗದ ಗಾಳಿಯು ಬೀಸುತ್ತಿರಲು ಅಂಬರವೇ ಹತ್ತಿ ಉರಿಯುತ್ತಿದೆಯೋ ಎನ್ನುವಂತೆ ಘೋರ ಉತ್ಪಾತಗಳು ಕಾಣಿಸಿಕೊಂಡವು.

ಪೇತುರುಲ್ಕಾಸಹಸ್ರಾಣಿ ಮುಹುರಾಕಾಶಗಾನ್ಯಪಿ ।
ನ್ಯುಬ್ಜಾನಿ ಚ ವಿಮಾನಾನಿ ಪ್ರಪತಂತ್ಯುತ್ಪತಂತಿ ಚ ।। ೧-೪೨-೧೬

ಸಹಸ್ರಾರು ಉಲ್ಕೆಗಳು ಬೀಳುತ್ತಿದ್ದವು ಮತ್ತು ಪುನಃ ಆಕಾಶಕ್ಕೆ ಹಾರುತ್ತಿದ್ದವು. ವಿಮಾನಗಳು ಕೂಡ ಕೆಳಕ್ಕೆ ಬೀಳುತ್ತಿದ್ದವು ಮತ್ತು ಪುನಃ ಮೇಲಕ್ಕೆ ಪುಟಿಯುತ್ತಿದ್ದವು.

ಚತುರ್ಯುಗಾಂತಪರ್ಯಾಯೇ ಲೋಕಾನಾಂ ಯದ್ಭಯಂ ಭವೇತ್ ।
ತಾದೃಶಾನ್ಯೇವ ರೂಪಾಣಿ ತಸ್ಮಿನ್ನುತ್ಪಾತಲಕ್ಷಣೇ ।। ೧-೪೨-೧೭

ಚತುರ್ಯುಗಾಂತಗಳ ಕೊನೆಯಲ್ಲಿ ಲೋಕಗಳಿಗೆ ಯಾವ ಭಯವುಂಟಾಗುವುದೋ ಅದರಂತೆಯೇ ಕಾಣುವ ಉತ್ಪಾತಲಕ್ಷಣಗಳು ಕಂಡುಬಂದವು.

ತಮಸಾ ನಿಷ್ಪ್ರಭಂ ಸರ್ವಂ ನ ಪ್ರಾಜ್ಞಾಯತ ಕಿಂಚನ ।
ತಿಮಿರೌಘಪರಿಕ್ಷಿಪ್ತಾ ನ ರೇಜುಶ್ಚ ದಿಶೋ ದಶ ।। ೧-೪೨-೧೮

ಕತ್ತೆಲಿಯಿಂದ ಎಲ್ಲವೂ ನಿಷ್ಪ್ರಭೆಗೊಂಡಿತು. ಯಾವುದೂ ತಿಳಿಯಂದಾಯಿತು. ಘನ ಕತ್ತಲೆಯಿಂದ ಮುಚ್ಚಿಕೊಂಡಿದ್ದ ಹದ್ದು ದಿಕ್ಕುಗಳೂ ಕಾಣುತ್ತಿರಲಿಲ್ಲ.

ನಿಶೇವ ರೂಪಿಣೀ ಕಾಲೀ ಕಾಲಮೇಘಾವಗುಂಠಿತಾ ।
ದ್ಯೌರ್ನ ಭಾತ್ಯಭಿಭೂತಾರ್ಕಾ ಘೋರೇಣ ತಮಸಾ ವೃತಾ ।। ೧-೪೨-೧೯

ಕಾಲಮೇಘಗಳು ತುಂಬಿರುವ ರಾತ್ರಿಯು ಹೇಗೆ ಕಪ್ಪಾಗಿರುವುದೋ ಆಗೆ ಆಕಾಶವೇ ಕಾಣುತ್ತಿರಲಿಲ್ಲ. ಸೂರ್ಯನು ಘೋರ ಕತ್ತಲೆಯಿಂದ ಆವೃತನಾಗಿದ್ದನು.

ತಾನ್ಘನೌಘಾನ್ಸತಿಮಿರಾಂದೋರ್ಭ್ಯಾಮುತ್ಕ್ಷಿಪ್ಯ ಸ ಪ್ರಭುಃ ।
ವಪುಃ ಸಂದರ್ಶಯಾಮಾಸ ದಿವ್ಯಂ ಕೃಷ್ಣವಪುರ್ಹರಿಃ ।। ೧-೪೨-೨೦

ಆಗ ಪ್ರಭು ಕೃಷ್ಣವಪು ಹರಿಯು ಆ ಘನೋಘನ ತಿಮಿರಾಂಧ ಮೋಡಗಳನ್ನು ತನ್ನ ಎರಡೂ ಬಾಹುಗಳಿಂದ ಮೇಲೆತ್ತಿ ತನ್ನ ರೂಪವನ್ನು ತೋರಿಸಿದನು.

ಬಲಾಹಕಾಂಜನನಿಭಂ ಬಲಾಹಕತನೂರುಹಮ್ ।
ತೇಜಸಾ ವಪುಷಾ ಚೈವ ಕೃಷ್ಣಂ ಕೃಷ್ಣಮಿವಾಚಲಮ್ ।। ೧-೪೨-೨೧

ಆಗ ಕೃಷ್ಣನು ಕಪ್ಪುಮೋಡಗಳಂತಿದ್ದನು. ಅವನ ತಲೆಗೂದಲು ಮೋಡಗಳಂತಿದ್ದವು. ತೇಜಸ್ಸು ಮತ್ತು ರೂಪದಲ್ಲಿ ಅವನು ಕಪ್ಪು ಪರ್ವತದಂತಿದ್ದನು.

ದೀಪ್ತಪೀತಾಂಬರಧರಂ ತಪ್ತಕಾಂಚನಭೂಷಣಮ್ ।
ಧೂಮಾಂಧಕಾರವಪುಷಾ ಯುಗಾಂತಾಗ್ನಿಮಿವೋತ್ಥಿತಮ್ ।। ೧-೪೨-೨೨

ಬೆಳಗುತ್ತಿದ್ದ ಪೀತಾಂಬರವನ್ನು ಉಟ್ಟಿದ್ದನು. ಕಾಯಿಸಿದ ಕಾಂಚನ ಭೂಷಣಗಳನ್ನು ಧರಿಸಿದ್ದನು. ಹೊಗೆಯ ಅಂಧಕಾರದಂತೆ ಅವನ ಮುಖವು ಯುಗಾಂತದ ಅಗ್ನಿಯನ್ನು ಹೊರಹೊಮ್ಮುತ್ತಿದೆಯೋ ಎಂದು ಕಾಣುತ್ತಿತ್ತು.

ಚತುರ್ದ್ವಿಗುಣಪೀನಾಂಸಂ ಬಲಾಕಾಪಂಕ್ತಿಭೂಷಣಮ್ ।
ಚಾಮೀಕರಕರಾಕಾರೈರಾಯುಧೈರುಪಶೋಭಿತಮ್ ।। ೧-೪೨-೨೩

ಅವನು ಚತುರ್ಭುಜಿಯಾಗಿದ್ದನು. ಬಲಾಕಪಕ್ಷಿಗಳ ಸಾಲಿನಿಂದ ಭೂಷಿತನಾಗಿದ್ದನು. ಚಾಮೀಕರಕರಾಕಾರ ಆಯುಧಗಳಿಂದ ಉಪಶೋಭಿತನಾಗಿದ್ದನು.

ಚಂದ್ರಾರ್ಕಕಿರಣೋದ್ದ್ಯೋತಂ ಗಿರಿಕೂಟಂ ಶಿಲೋಚ್ಚಯಮ್ ।
ನಂದಕಾನಂದಿತಕರಂ ಶರಾಶೀವಿಷಧಾರಿಣಮ್ ।। ೧-೪೨-೨೪

ಸೂರ್ಯಚಂದ್ರರ ಕಿರಣಗನ್ನು ಸೂಸುವ ಗಿರಿಕೂಟ ಶಿಲೋಚ್ಚಯನಂತಿದ್ದನು. ನಂದಕವೆಂಬ ಖಡ್ಗವನ್ನು ಹಿಡಿದಿದ್ದನು. ಸರ್ಪಾಕಾರದ ಬಾಣಾವನ್ನು ಹಿಡಿದಿದ್ದನು.

ಶಕ್ತಿಚಿತ್ರಂ ಹಲೋದಗ್ರಂ ಶಂಖಚಕ್ರಗದಾಧರಮ್ ।
ವಿಷ್ಣುಶೈಲಂ ಕ್ಷಮಾಮೂಲಂ ಶ್ರೀವೃಕ್ಷಂ ಶಾಙ್ರಧನ್ವಿನಮ್ ।। ೧-೪೨-೨೫

ಚಿತ್ರಿತ ಶಕ್ತಿಯನ್ನೂ, ಹಲಾಯುಧವನ್ನು, ಶಂಖ-ಚಕ್ರ-ಗದಾಯುಧಗಳನ್ನೂ ಧರಿಸಿದ್ದನು. ಆ ವಿಷ್ಣುಶೈಲ ಕ್ಷಮಾಮೂಲ ಶ್ರೀವೃಕ್ಷನು ಶಾಂಙ್ರಧನುಸ್ಸನ್ನು ಹಿಡಿದಿದ್ದನು.

ಹರ್ಯಶ್ವರಥಸಂಯುಕ್ತೇ ಸುಪರ್ಣಧ್ವಜಶೋಭಿತೇ ।
ಚಂದ್ರಾರ್ಕಚಕ್ರರುಚಿರೇ ಮಂದರಾಕ್ಷವೃತಾಂತರೇ ।। ೧-೪೨-೨೬

ಹಸಿರುಬಣ್ಣದ ಕುದುರೆಗಳನ್ನು ಕಟ್ಟಿದ್ದ, ಗರುಡನು ಧ್ವಜದಲ್ಲಿ ಶೋಭಿಸುತ್ತಿದ್ದ, ಸೂರ್ಯ-ಚಂದ್ರರೇ ಚಕ್ರಗಳಾಗಿದ್ದ, ಸುಂದರ ರಥದಲ್ಲಿ ಕುಳಿತಿದ್ದನು. ಮಂದರಾಚಲವೇ ಅದರ ಮೂಕಿಯಾಗಿತ್ತು.

ಅನಂತರಶ್ಮಿಸಂಯುಕ್ತೇ ದದೃಶೇ ಮೇರುಕೂಬರೇ ।
ತಾರಕಾಚಿತ್ರಕುಸುಮೇ ಗ್ರಹನಕ್ಷತ್ರಬಂಧುರೇ ।। ೧-೪೨-೨೭

ಅನಂತನೇ ಆ ರಥದ ಕಡಿವಾಣಗಳಾಗಿದ್ದನು. ಮೇರುಪರ್ವತವು ಅದರ ನೊಗವಾಗಿತ್ತು. ತಾರೆಗಳೇ ಅದರ ಮೇಲೆ ಕುಸುಮಗಳಾಗಿ ಚಿತ್ರಿತಗೊಂಡಿದ್ದವು. ಗ್ರಹನಕ್ಷತ್ರಗಳು ಹಗ್ಗವಾಗಿ ಆ ಕುಸುಮಗಳನ್ನು ಪೋಣಿಸಿದ್ದವು.

ಭಯೇಷ್ವಭಯದಂ ವ್ಯೋಮ್ನಿ ದೇವಾ ದೈತ್ಯಪರಾಜಿತಾಃ ।
ದದೃಶುಸ್ತೇ ಸ್ಥಿತಂ ದೇವಂ ದಿವ್ಯಲೋಕಮಯೇ ರಥೇ ।। ೧-೪೨-೨೮

ದೈತ್ಯರಿಂದ ಪರಾಜಿತರಾದ ದೇವತೆಗಳು ಆಕಾಶದಲ್ಲಿ ದಿವ್ಯಲೋಕಮಯ ರಥದಲ್ಲಿ ನಿಂತಿದ್ದ ಭಯದಲ್ಲಿ ಅಭಯವನ್ನು ನೀಡುವ ದೇವನನ್ನು ನೋಡಿದರು.

ತೇ ಕೃತಾಂಜಲಯಃ ಸರ್ವೇ ದೇವಾಃ ಶಕ್ರಪುರೋಗಮಾಃ ।
ಜಯಶಬ್ದಂ ಪುರಸ್ಕೃತ್ಯ ಶರಣ್ಯಂ ಶರಣಂ ಗತಾಃ ।। ೧-೪೨೨-೨೯

ಆ ಸರ್ವ ದೇವತೆಗಳೂ, ಶಕ್ರನನ್ನು ಮುಂದಿರಿಸಿಕೊಂಡು, ಜಯಕಾರ ಮಾಡುತ್ತಾ ಶರಣ್ಯನ ಶರಣುಹೊಕ್ಕರು.

ಸ ತೇಷಾಂ ತಾ ಗಿರಃ ಶ್ರುತ್ವಾ ವಿಷ್ಣುರ್ದಯಿತದೇವತಃ ।
ಮನಶ್ಚಕ್ರೇ ವಿನಾಶಾಯ ದಾನವಾನಾಂ ಮಹಾಮೃಧೇ ।। ೧-೪೨-೩೦

ಅವರ ಆ ಮಾತನ್ನು ಕೇಳಿ ಪ್ರೀತಿಯ ದೇವತೆ ವಿಷ್ಣುವು ಮಹಾರಣದಲ್ಲಿ ದಾನವರನ್ನು ವಿನಾಶಗೊಳಿಸುವ ಮನಸ್ಸು ಮಾಡಿದನು.

ಆಕಾಶೇ ತು ಸ್ಥಿತೋ ವಿಷ್ಣುಃ ಸೋತ್ತಮೇ ಪುರುಷೋತ್ತಮಃ ।
ಉವಾಚ ದೇವತಾಃ ಸರ್ವಾಃ ಸಪ್ರತಿಜ್ಞಮಿದಂ ವಚಃ ।। ೧-೪೨-೩೧

ಉತ್ತಮ ಆಕಾಶದಲ್ಲಿ ನಿಂತಿತ್ತ ಪುರುಷೋತ್ತಮ ವಿಷ್ಣುವು ದೇವತೆಗಳೆಲ್ಲರಿಗೂ ಈ ಪ್ರತಿಜ್ಞಾಪೂರ್ವಕ ಮಾತನ್ನಾಡಿದನು:

ಶಾಂತಿಂ ಭಜತ ಭದ್ರಂ ವೋ ಮಾ ಭೈಷ್ಟಾ ಮರುತಾಂ ಗಾಣಾಃ ।
ಜಿತಾ ಮೇ ದಾನವಾಃ ಸರ್ವೇ ತ್ರೈಲೋಕ್ಯಾಂ ಪ್ರತಿಗೃಹ್ಯತಾಮ್ ।। ೧-೪೨-೩೨

“ಮರುದ್ಗಣಗಳೇ! ನಿಮಗೆ ಮಂಗಳವಾಗಲಿ! ಈಗ ನೀವು ಶಾಂತರಾಗಿರಿ! ಭಯಪಡದಿರಿ! ಈ ದಾನವರೆಲ್ಲರನ್ನೂ ಗೆದ್ದು ತ್ರೈಲೋಕ್ಯವನ್ನು ಪಡೆದುಕೊಳ್ಳಿ.”

ತೇ ತಸ್ಯ ಸತ್ಯಸಂಧಸ್ಯ ವಿಷ್ಣೋರ್ವಾಕ್ಯೇನ ತೋಷಿತಾಃ ।
ದೇವಾಃ ಪ್ರೀತಿಂ ಪರಾಂ ಜಗ್ಮುಃ ಪ್ರಾಪ್ಯೇವಾಮೃತಮುತ್ಥಿತಮ್ ।। ೧-೪೨-೩೩

ಸತ್ಯಸಂಧ ವಿಷ್ಣುವಿನ ಆ ಮಾತನ್ನು ಕೇಳಿ ತೃಪ್ತರಾದ ದೇವತೆಗಳು ಕ್ಷೀರಸಾಗರದಿಂದ ಉತ್ಪನ್ನವಾದ ಅಮೃತವು ದೊರಕಿದಷ್ಟೇ ಪರಮ ಪ್ರೀತರಾದರು.

ತತಸ್ತಮಃ ಸಂಹ್ರಿಯತೇ ವಿನೇಶುಶ್ಚ ಬಲಾಹಕಾಃ ।
ಪ್ರವವುಶ್ಚ ಶಿವಾ ವಾತಾಃ ಪ್ರಸನ್ನಾಶ್ಚ ದಿಶೋ ದಶ ।। ೧-೪೨-೩೪

ಆಗ ಕತ್ತಲೆಯು ದೂರವಾಯಿತು. ಮೋಡಗಳು ಚದುರಿಹೋದವು. ಮಂಗಳಕರ ಗಾಳಿಯು ಬೀಸತೊಡಗಿತು ಮತ್ತು ಹತ್ತು ದಿಕ್ಕುಗಳೂ ತಿಳಿಯಾದವು.

ಸುಪ್ರಭಾಣಿ ಚ ಜ್ಯೋತೀಂಷಿ ಚಂದ್ರಂ ಚಕ್ರುಃ ಪ್ರದಕ್ಷಿಣಮ್ ।
ದೀಪ್ತಿಮಂತಿ ಚ ತೇಜಾಂಸಿ ಚಕ್ರುರರ್ಕಂ ಪ್ರದಕ್ಷಿಣಮ್ ।। ೧-೪೨-೩೫

ಸುಪ್ರಭೆಯ ನಕ್ಷತ್ರಗಳು ಚಂದ್ರನನ್ನು ಪ್ರದಕ್ಷಿಣೆಮಾಡತೊಡಗಿದವು. ಪ್ರಕಾಶಮಾನ ಗ್ರಹಗಳು ಸೂರ್ಯನನ್ನು ಪ್ರದಕ್ಷಿಣೆಮಾಡತೊಡಗಿದವು.

ನ ವಿಗ್ರಹಂ ಗ್ರಹಾಶ್ಚಕ್ರುಃ ಪ್ರಸನ್ನಾಶ್ಚಾಪಿ ಸಿಂಧವಃ ।
ನೀರಜಸ್ಕಾ ಬಭುರ್ಮಾರ್ಗಾ ನಾಕಮಾರ್ಗಾದಯಸ್ತ್ರಯಃ ।। ೧-೪೨-೩೬

ಗ್ರಹಗಳು ಒಂದಕ್ಕೊಂಡು ಹೊಡೆಯುವುದನ್ನು ನಿಲ್ಲಿಸಿದವು. ನದಿಗಳು ಪ್ರಸನ್ನವಾದವು. ದೇವಯಾನ, ಪಿತೃಯಾನ ಮತ್ತು ಮೋಕ್ಷಮಾರ್ಗಗಳೆಂಬ ಮೂರು ಮಾರ್ಗಗಳೂ ಧೂಳಿನಿಂದ ರಹಿತವಾಗಿ ನಿರ್ಮಲವಾದವು.

ಯಥಾರ್ಥಾಮೂಹುಃ ಸರಿತೋ ನಾಪಿ ಚುಕ್ಷುಭಿರೇಽರ್ಣವಾಃ ।
ಆಸಂಶುಭಾನೀಂದ್ರಿಯಾಣಿ ನರಾಣಾಮಂತರಾತ್ಮಸು ।। ೧-೪೨-೩೭

ನದಿಗಳು ಸರಿಯಾಗಿ ಹರಿಯತೊಡಗಿದವು. ಸಮುದ್ರಗಳು ಕ್ಷೋಭೆಗೊಳ್ಳುವುದು ನಿಂತಿತು. ಮನುಷ್ಯರ ಅಂತರಾತ್ಮದಲ್ಲಿ ಇಂದ್ರಿಗಳು ಶುಭ ಕರ್ಮಗಳಲ್ಲಿ ತೊಡಗಲು ಬಯಸಿದವು.

ಮಹರ್ಷಯೋ ವೀತಶೋಕಾ ವೇದಾನುಚ್ಚೈರಧೀಯತ ।
ಯಜ್ಞೇಷು ಚ ಹವಿಃ ಸ್ವಾದು ಶಿವಮಶ್ನಾತಿ ಪಾವಕಃ ।। ೧-೪೨-೩೮

ಮಹರ್ಷಿಗಳು ಶೋಕರಹಿತರಾಗಿ ವೇದಗಳನ್ನು ಉಚ್ಚರಿಸತೊಡಗಿದರು. ಪಾವಕನು ಯಜ್ಞಗಳಲ್ಲಿನ ಪವಿತ್ರ ಮತ್ತು ಸ್ವಾದು ಹವಿಸ್ಸನ್ನು ಭಕ್ಷಿಸತೊಡಗಿದನು.

ಪ್ರವೃತ್ತಧರ್ಮಾಃ ಸಂವೃತ್ತಾ ಲೋಕಾ ಮುದಿತಮಾನಸಾಃ ।
ಪ್ರೀತ್ಯಾ ಪರಮಯಾ ಯುಕ್ತಾ ದೇವದೇವಸ್ಯ ಭೂಪತೇ ।
ವಿಷ್ಣೋಃ ಸತ್ಯಪ್ರತಿಜ್ಞಸ್ಯ ಶ್ರುತ್ವಾರಿನಿಧನೇ ಗಿರಮ್ ।। ೧-೪೨-೩೯

ಭೂಪತೇ! ಸತ್ಯಪ್ರತಿಜ್ಞ ದೇವದೇವ ವಿಷ್ಣುವಿನ ಈ ಶತ್ರುನಾಶನ ಪ್ರತಿಜ್ಞೆಯನ್ನು ಕೇಳಿ ಲೋಕಗಳು ಮುದಿತಮಾನಸಗೊಂಡು ಪರಮ ಪ್ರೀತಿಯಿಂದ ಪ್ರವೃತ್ತಧರ್ಮದಲ್ಲಿ ತೊಡಗಿತು.”

ಸಮಾಪ್ತಿ

ಇತಿ ಶ್ರೀಮಹಾಭಾರತೇ ಖಿಲೇಷು ಹರಿವಂಶೇ ಹರಿವಂಶಪರ್ವಣಿ ಆಶ್ಚರ್ಯತಾರಕಾಮಯೇ ದ್ವಿಚತ್ವಾರಿಂಶೋಽಧ್ಯಾಯಃ


  1. ಪುರುಷಸೂಕ್ತದಲ್ಲಿ ಹೇಳಿದ ಸಹಸ್ರಶೀರ್ಷಾ ಪುರುಷಃ! ↩︎

  2. ಆಗ (ಕೃತಯುಗದಲ್ಲಿ) ರಾಕ್ಷಸರನ್ನೂ ದೇವಗಣಗಳೆಂದು ಎಣಿಸಲಾಗಿತ್ತು. ↩︎