041: ವಿಷ್ಣ್ವವತಾರವರ್ಣನಮ್

ಪ್ರವೇಶ

।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।

ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ

ಶ್ರೀ ಮಹಾಭಾರತ

ಖಿಲಭಾಗೇ ಹರಿವಂಶಃ

ಹರಿವಂಶ ಪರ್ವ

ಅಧ್ಯಾಯ 41

ಸಾರ

ಭಗವಾನ್ ವಿಷ್ಣುವಿನ ವಾರಾಹ, ನರಸಿಂಹ, ವಾಮನ , ದತ್ತಾತ್ರೇಯ, ಪರಶುರಾಮ, ಶ್ರೀರಾಮ, ಶ್ರೀಕೃಷ್ಣ, ವ್ಯಾಸ ಮತ್ತು ಕಲ್ಕಿ ಅವತಾರಗಳ ಸಂಕ್ಷಿಪ್ತ ಕಥಾ (1-174).

ವೈಶಂಪಾಯನ ಉವಾಚ
ಪ್ರಶ್ನಭಾರೋ ಮಹಾಂಸ್ತಾತ ತ್ವಯೋಕ್ತಃ ಶಾಂಙ್ರಧನ್ವನಿ ।
ಯಥಾಶಕ್ತಿ ತು ವಕ್ಷ್ಯಾಮಿ ಶ್ರೂಯತಾಂ ವೈಷ್ಣವಂ ಯಶಃ ।। ೧-೪೧-೧

ವೈಶಂಪಾಯನನು ಹೇಳಿದನು: “ಅಯ್ಯಾ! ಶಾಂಙ್ರಧನ್ವಿಯ ಕುರಿತಾದ ನಿನ್ನ ಈ ಪ್ರಶ್ನೆಯು ಮಹಾ ಭಾರವಾದುದು. ವಿಷ್ಣುವಿನ ಯಶಸ್ಸನ್ನು ಯಥಾಶಕ್ತಿಯಾಗಿ ನಿನಗೆ ಹೇಳುತ್ತೇನೆ. ಕೇಳಬೇಕು.

ವಿಷ್ಣೋಃ ಪ್ರಭಾವಶ್ರವಣೇ ದಿಷ್ಟ್ಯಾ ತೇ ಮತಿರುತ್ಥಿತಾ ।
ಹಂತ ವಿಷ್ಣೋಃ ಪ್ರವೃತ್ತಿಂ ಚ ಶೃಣು ದಿವ್ಯಾಂ ಮಯೇರಿತಾಮ್ ।। ೧-೪೧-೨

ವಿಷ್ಣುವಿನ ಪ್ರಭಾವಗಳ ಕುರಿತು ಕೇಳುವ ಬುದ್ಧಿಯು ನಿನ್ನಲ್ಲಿ ಹುಟ್ಟಿರುವುದು ಸೌಭಾಗ್ಯವೇ ಸರಿ. ನಿಲ್ಲು. ನಾನು ಹೇಳುವ ವಿಷ್ಣುವಿನ ದಿವ್ಯ ಪ್ರವೃತ್ತಿಯನ್ನು ಕೇಳು.

ಸಹಸ್ರಾಕ್ಷಂ ಸಹಸ್ರಾಸ್ಯಂ ಸಹಸ್ರಭುಜಮವ್ಯಯಮ್ ।
ಸಹಸ್ರಶಿರಸಂ ದೇವಂ ಸಹಸ್ರಕರಮವ್ಯಯಮ್ ।। ೧-೪೧-೩
ಸಹಸ್ರಜಿಹ್ವಂ ಭಾಸ್ವಂತಂ ಸಹಸ್ರಮುಕುಟಂ ಪ್ರಭುಮ್ ।
ಸಹಸ್ರದಂ ಸಹಸ್ರಾದಿಂ ಸಹಸ್ರಭುಜಮವ್ಯಯಮ್ ।। ೧-೪೧-೪
ಸವನಂ ಹವನಂ ಚೈವ ಹವ್ಯಂ ಹೋತಾರಮೇವ ಚ ।
ಪಾತ್ರಾಣಿ ಚ ಪವಿತ್ರಾಣಿ ವೇದಿಂ ದೀಕ್ಷಾಂ ಚರುಂ ಸ್ರುವಮ್ ।। ೧-೪೧-೫
ಸ್ರುಕ್ಸೋಮಂ ಶೂರ್ಪಮುಸಲಂ ಪ್ರೋಕ್ಷಣಂ ದಕ್ಷಿಣಾಯನಮ್ ।
ಅಧ್ವರ್ಯುಂ ಸಾಮಗಂ ವಿಪ್ರಂ ಸದ್ಸ್ಯಂ ಸದನಂ ಸದಃ ।। ೧-೪೧-೬
ಯೂಪಂ ಸಮಿತ್ಕುಶಂ ದರ್ವೀಂ ಚಮಸೋಲೂಖಲಾನಿ ಚ ।
ಪ್ರಾಗ್ವಂಶಂ ಯಜ್ಞಭೂಮಿಂ ಚ ಹೋತಾರಂ ಚಯನಂ ಚ ಯತ್ ।। ೧-೪೧-೭
ಹ್ರಸ್ವಾನ್ಯತಿಪ್ರಮಾಣಾನಿ ಚರಾಣಿ ಸ್ಥಾವರಾಣಿ ಚ ।
ಪ್ರಾಯಶ್ಚಿತ್ತಾನಿ ಚಾರ್ಥಂ ಚ ಸ್ಥಂಡಿಲಾನಿ ಕುಶಾಂಸ್ತಥಾ ।। ೧-೪೧-೮
ಮಂತ್ರಂ ಯಜ್ಞವಹಂ ವಹ್ನಿಂ ಭಾಗಂ ಭಾಗವಹಂ ಚ ಯತ್ ।
ಅಗ್ರೇಭುಜಂ ಸೋಮಭುಜಂ ಘೃತಾರ್ಚಿಷಮುದಾಯುಧಮ್ ।। ೧-೪೧-೯
ಆಹುರ್ವೇದವಿದೋ ವಿಪ್ರಾ ಯಂ ಯಜ್ಞೇ ಶಾಶ್ವತಂ ವಿಭುಮ್ ।
ತಸ್ಯ ವಿಷ್ಣೋಃ ಸುರೇಶಸ್ಯ ಶ್ರೀವತ್ಸಾಂಕಸ್ಯ ಧೀಮತಃ ।। ೧-೪೧-೧೦
ಪ್ರಾದುರ್ಭಾವಸಹಸ್ರಾಣಿ ಅತೀತಾನಿ ನ ಸಂಶಯಃ ।
ಭೂಯಶ್ಚೈವ ಭವಿಷ್ಯಂತೀತ್ಯೇವಮಾಹ ಪ್ರಜಾಪತಿಃ ।। ೧-೪೧-೧೧

ವೇದವಿದ ವಿಪ್ರರು ಯಾರನ್ನು ಸಹಸ್ರಾಕ್ಷ, ಸಹಸ್ರಮುಖಿ, ಸಹಸ್ರಚರಣ, ಸಹಸ್ರಶಿರಸ, ಸಹಸ್ರಕರಗಳುಳ್ಳ ದೇವ, ಸಹಸ್ರಜಿಹ್ವ, ಹೊಳೆಯುತ್ತಿರುವ ಸಹಸ್ರಮುಕುಟಗಳುಳ್ಳ ಪ್ರಭು, ಸಹಸ್ರದಾನಗಳನ್ನು ನೀಡುವ, ಸಹಸ್ರ ಸೃಷ್ಟಿಗಳನ್ನು ಮಾಡುವ, ಸಹಸ್ರಭುಜಗಳ ಅವ್ಯವ, ಸವನ-ಹವನ-ಹವ್ಯ-ಹೋತಾರ-ಯಜ್ಞಪಾತ್ರೆಗಳು-ವೇದಿ-ಪವಿತ್ರಗಳು-ದೀಕ್ಷಾ-ಚರು-ಸ್ರುವ-ಸ್ರುಕ್-ಸೋಮ-ಸೂಪ-ಮುಸಲ-ಪ್ರೋಕ್ಷಣೀ-ದಕ್ಷಿಣಾಯನ-ಅಧ್ವರ್ಯು-ಸಾಮಗ-ವಿಪ್ರ-ಸದಸ್ಯ-ಸದನ-ಸದ-ಯೂಪ-ಸಮಿತ್ತು-ಕುಶ-ದರ್ವೀ-ಚಮಸ-ಊಖಲ-ಪ್ರಾಗ್ವಂಶ-ಯಜ್ಞಭೂಮಿ-ಹೋತಾರ-ಚಯನ-ಚಿಕ್ಕ ದೊಡ್ಡ ಪ್ರಾಣಿಗಳು-ಚರ-ಸ್ಥಾವರಗಳು-ಪ್ರಾಯಶ್ಚಿತ್ತಗಳು-ಫಲ-ಸ್ಥಂಡಿಲ-ಕುಶ-ಮಂತ್ರ-ಯಜ್ಞವಾಹಕ ಅಗ್ನಿ-ದೇವತೆಗಳ ಭಾಗ-ಭಾಗವಾಹಕ-ಅಗ್ರಾಸನಭೋಜೀ-ಸೋಮಭೋಕ್ತಾ-ಧೀ ಎಂಬ ಆಹುತಿಯಿಂದ ಭುಗಿಲೇಳುವ ಜ್ವಾಲೆ-ಉದಾಯುಧ ಮತ್ತು ಯಜ್ಞದಲ್ಲಿ ವಿದ್ಯಮಾನನಾಗಿರುವ ಸನಾತನ ಪ್ರಭು ಎಂದು ಕರೆಯುತ್ತಾರೋ ಆ ಶ್ರೀವತ್ಸಚಿಹ್ನ ವಿಭೂಷಿತ ದೇವೇಶ್ವರ ಬುದ್ಧಿಮಾನ್ ಭಗವಾನ್ ವಿಷ್ಣುವಿನ ಸಹಸ್ರಾರು ಅವತಾರಗಳು ಈ ಹಿಂದೆ ಆಗಿಹೋಗಿವೆ ಮತ್ತು ಭವಿಷ್ಯದಲ್ಲಿಯೂ ಸಮಯ ಸಮಯಕ್ಕೆ ಮತ್ತೆ ಮತ್ತೆ ಆಗುತ್ತಿರುತ್ತವೆ ಎನ್ನುವುದರಲ್ಲಿ ಸಂಶಯವಿಲ್ಲವೆಂದು ಪ್ರಜಾಪತಿ ಬ್ರಹ್ಮನ ಹೇಳಿಕೆ.

ಯತ್ಪೃಚ್ಛಸಿ ಮಹಾರಾಜ ಪುಣ್ಯಾಂ ದಿವ್ಯಾಂ ಕಥಾಂ ಶುಭಾಮ್ ।
ಯದರ್ಥಂ ಭಗವಾನ್ವಿಷ್ಣುಃ ಸುರೇಶೋ ರಿಪುಸೂದನಃ ।
ದೇವಲೋಕಂ ಸಮುತ್ಸೃಜ್ಯ ವಸುದೇವಕುಲೇಽಭವತ್ ।। ೧-೪೧-೧೨
ತತ್ತೇಹಂ ಸಂಪ್ರವಕ್ಷ್ಯಾಮಿ ಶೃಣು ಸರ್ವಮಶೇಷತಃ ।
ವಾಸುದೇವಸ್ಯ ಮಾಹಾತ್ಮ್ಯಂ ಚರಿತಂ ಚ ಮಹಾದ್ಯುತೇಃ ।। ೧-೪೧-೧೩

ಮಹಾರಾಜ! ಭಗವಾನ್ ವಿಷ್ಣು ಸುರೇಶ ರಿಪುಸೂದನನು ಯಾವಕಾರಣಕ್ಕಾಗಿ ದೇವಲೋಕವನ್ನು ಬಿಟ್ಟು ವಸುದೇವಕುಲದಲ್ಲಿ ಹುಟ್ಟಿದನು ಎಂಬ ನಿನ್ನ ಪ್ರಶ್ನೆಗೆ ನಾನು ಈ ಪುಣ್ಯ ದಿವ್ಯ ಶುಭ ಕಥೆಯನ್ನು ಹೇಳುತ್ತೇನೆ. ಮಹಾದ್ಯುತಿ ವಾಸುದೇವನ ಮಹಾತ್ಮೆ ಮತ್ತು ಚರಿತ್ರೆಯನ್ನು ಎಲ್ಲವನ್ನೂ ಬಿಡದೇ ಕೇಳು.

ಹಿತಾರ್ಥಂ ಸುರಮರ್ತ್ಯಾನಾಂ ಲೋಕಾನಾಂ ಪ್ರಭವಾಯ ಚ ।
ಬಹುಶಃ ಸರ್ವಭೂತಾತ್ಮಾ ಪ್ರಾದುರ್ಭವತಿ ಕಾರ್ಯತಃ ।। ೧-೪೧-೧೪

ಸುರರು ಮತ್ತು ಮರ್ತ್ಯರ ಹಿತಾರ್ಥಕ್ಕಾಗಿ ಮತ್ತು ಲೋಕಗಳ ಅಭ್ಯುದಯಕ್ಕಾಗಿ ಸರ್ವಭೂತಾತ್ಮನು ಅನೇಕಬಾರಿ ಅವತರಿಸುತ್ತಾನೆ.

ಪ್ರಾದುರ್ಭಾವಾಂಶ್ಚ ವಕ್ಷ್ಯಾಮಿ ಪುಣ್ಯಾಂದಿವ್ಯಗುಣೈರ್ಯುತಾನ್ ।
ಛಾಂದಸೀಭಿರುದಾರಾಭಿಃ ಶ್ರುತಿಭಿಃ ಸಮಲಂಕೃತಾನ್ ।। ೧-೪೧-೧೫

ಉದಾರ ವೈದಿಕ ಶ್ರುತಿಗಳಲ್ಲಿ ವರ್ಣಿತವಾಗಿರುವ ದಿವ್ಯಗುಣಗಳಿಂದ ಕೂಡಿದ ಭಗವಂತನ ಸಮಲಂಕೃತವಾದ ಪುಣ್ಯ ಅವತಾರಗಳನ್ನು ವರ್ಣಿಸುತ್ತೇನೆ.

ಶುಚಿಃ ಪ್ರಯತವಾಗ್ಭೂತ್ವಾ ನಿಬೋಧ ಜನಮೇಜಯ ।
ಇದಂ ಪುರಾಣಂ ಪರಮಂ ಪುಣ್ಯಂ ವೇದೈಶ್ಚ ಸಂಮಿತಮ್ ।। ೧-೪೧-೧೬
ಹಂತ ತೇ ಕಥಯಿಷ್ಯಾಮಿ ವಿಷ್ಣೋರ್ದಿವ್ಯಾಂ ಕಥಾಂ ಶೃಣು ।

ಜನಮೇಜಯ! ಈ ಪರಮ ಪುಣ್ಯ ಪುರಾಣವು ವೇದಸಂಮಿತವಾಗಿದೆ. ನೀನು ಶುಚಿಯಾಗಿ ಮತ್ತು ಮೌನಿಯಾಗಿ ಇದನ್ನು ಕೇಳು. ನಿಲ್ಲು! ವಿಷ್ಣುವಿನ ದಿವ್ಯ ಕಥೆಯನ್ನು ಹೇಳುತ್ತೇನೆ. ಕೇಳು.

ಯದಾ ಯದಾ ಹಿ ಧರ್ಮಸ್ಯ ಗ್ಲಾನಿರ್ಭವತಿ ಭಾರತ ।
ಧರ್ಮಸಂಸ್ಥಾಪನಾರ್ಥಾಯ ತದಾ ಸಂಭವತಿ ಪ್ರಭುಃ ।। ೧-೪೧-೧೭

ಭಾರತಾ! ಯಾವ್ಯಾವಾಗ ಧರ್ಮದ ಗ್ಲಾನಿಯಾಗುತ್ತದೆಯೋ ಆಗಾಗ ಧರ್ಮಸಂಸ್ಥಾಪನೆಗಾಗಿ ಪ್ರಭುವು ಹುಟ್ಟುತ್ತಾನೆ.

ತಸ್ಯ ಹ್ಯೇಕಾ ಮಹಾರಾಜ ಮೂರ್ತಿರ್ಭವತಿ ಸತ್ತಮ ।
ನಿತ್ಯಂ ದಿವಿಷ್ಠಾ ಯಾ ರಾಜಂಸ್ತಪಶ್ಚರತಿ ದುಶ್ಚರಮ್ ।। ೧-೪೧-೧೮

ಮಹಾರಾಜ! ರಾಜನ್! ಅವನ ಒಂದು ಶ್ರೇಷ್ಠತಮ ಸಾತ್ವಿಕೀ ಮೂರ್ತಿಯು ದಿವ್ಯಲೋಕದಲ್ಲಿ ಸದಾ ದುಷ್ಕರ ತಪಸ್ಸನ್ನು ಮಾಡುತ್ತಿರುತ್ತದೆ.

ದ್ವಿತೀಯಾ ಚಾಸ್ಯ ಶಯನೇ ನಿದ್ರಾಯೋಗಮುಪಾಯಯೌ ।
ಪ್ರಜಾಸಂಹಾರಸರ್ಗಾರ್ಥಂ ಕಿಮಧ್ಯಾತ್ಮವಿಚಿಂತಕಮ್ ।। ೧-೪೧-೧೯

ಅವನ ಎರಡನೇ ಮೂರ್ತಿಯು ಪ್ರಜೆಗಳ ಸಂಹಾರ ಮತ್ತು ಸೃಷ್ಟಿಗಾಗಿ ಯೋಗನಿದ್ರೆಯನ್ನು ಆಶ್ರಯಿಸಿ ಯಾವುದೋ ಆಧ್ಯಾತ್ಮ ಚಿಂತನೆ ಮಾಡುತ್ತಾ ಶೇಷಶಯನದಲ್ಲಿ ಪವಡಿಸಿರುತ್ತದೆ.

ಸುಪ್ತ್ವಾ ಯುಗಸಹಸ್ರಂ ಸ ಪ್ರಾದುರ್ಭವತಿ ಕಾರ್ಯತಃ ।
ಪೂರ್ಣೇ ಯುಗಸಹಸ್ರೇ ತು ದೇವದೇವೋ ಜಗತ್ಪತಿಃ ।। ೧-೪೧-೨೦
ಪಿತಾಮಹೋ ಲೋಕಪಾಲಾಶ್ಚಂದ್ರಾದಿತ್ಯೌ ಹುತಾಶನಃ ।
ಬ್ರಹ್ಮಾ ಚ ಕಪಿಲಶ್ಚೈವ ಪರಮೇಷ್ಠೀ ತಥೈವ ಚ ।। ೧-೪೧-೨೧
ದೇವಾಃ ಸಪ್ತರ್ಷಯಶ್ಚೈವ ತ್ರ್ಯಂಬಕಶ್ಚ ಮಹಾಯಶಾಃ ।
ವಾಯುಃ ಸಮುದ್ರಾಃ ಶೈಲಾಶ್ಚ ತಸ್ಯ ದೇಹಂ ಸಮಾಶ್ರಿತಾಃ ।। ೧-೪೧-೨೨

ಒಂದು ಸಹಸ್ರ ಚತುರ್ಯುಗಗಳವರೆಗೆ ನಿದ್ರಿಸಿ ಅವನು ಸೃಷ್ಟಿ ಸಂಚಾಲನಾ ಕಾರ್ಯದಿಂದ ಪುನಃ ವಿಭಿನ್ನ ರೂಪಗಳಲ್ಲಿ ಪ್ರಕಟನಾಗುತ್ತಾನೆ. ಸಹಸ್ರಯುಗಗಳು ಪೂರ್ಣಗೊಳ್ಳಲು ಆ ದೇವದೇವ ಜತತ್ಪತಿಯೇ ಪಿತಾಮಹ ಬ್ರಹ್ಮ, ಲೋಕಪಾಲರು, ಚಂದ್ರ, ಆದಿತ್ಯ, ಅಗ್ನಿ, ಕಪಿಲ, ಪರಮೇಷ್ಠೀ, ದೇವತಾ, ಸಪ್ತರ್ಷಿ ಮತ್ತು ಮಹಾಯಶಸ್ವೀ ತ್ರ್ಯಂಬಕರ ರೂಪದಲ್ಲಿ ಪ್ರಾದುರ್ಭವಿಸುತ್ತಾನೆ. ವಾಯು, ಸಮುದ್ರ, ಮತ್ತು ಪರ್ವತ ಇವೆಲ್ಲವೂ ಅವನ ದೇಹವನ್ನೇ ಆಶ್ರಯಿಸಿವೆ.

ಸನತ್ಕುಮಾರಶ್ಚ ಮಹಾನುಭಾವೋ ಮನುರ್ಮಹಾತ್ಮಾ ಭಗವಾನ್ಪ್ರಜಾಕರಃ ।
ಪುರಾಣದೇವೋಽಥ ಪುರಾಣಿ ಚಕ್ರೇ ಪ್ರದೀಪ್ತವೈಶ್ವಾನರತುಲ್ಯತೇಜಾಃ ।। ೧-೪೧-೨೩

ಮಹಾನುಭಾವ ಸನತ್ಕುಮಾರ ಮತ್ತು ಪ್ರಜಾಕರ ಭಗವಾನ್ ಮಹಾತ್ಮಾ ಮನು ಇವರೂ ಕೂಡ ಅವನ ಸ್ವರೂಪಗಳೇ. ಪ್ರದೀಪ್ತ ವಿಶ್ವಾನರನ ಸಮಾನ ತೇಜಸ್ಸುಳ್ಳ ಆ ಪುರಾಣ ದೇವನೇ ಈ ಸಮಸ್ತ ದೇಹಧಾರಿಗಳ ಶರೀರಗಳನ್ನು ರಚಿಸಿದನು.

ಯೇನ ಚಾರ್ಣವಮಧ್ಯಸ್ಥೌ ನಷ್ಟೇ ಸ್ಥಾವರಜಂಗಮೇ ।
ನಷ್ಟೇ ದೇವಾಸುರಗಣೇ ಪ್ರನಷ್ಟೋರಗರಾಕ್ಷಸೇ ।। ೧-೪೧-೨೪
ಯೋದ್ಧುಕಾಮೌ ಸುದುರ್ಧರ್ಷೌ ದಾನವೌ ಮಧುಕೈಟಭೌ ।
ಹತೌ ಪ್ರಭವತಾ ತೇನ ತಯೋರ್ದತ್ತ್ವಾಮಿತಂ ವರಮ್ ।। ೧-೪೧-೨೫

ಸ್ಥಾವರ-ಜಂಗಮಗಳೂ ದೇವಾಸುರಗಣಗಳೂ ಮತ್ತು ಉರಗ-ರಾಕ್ಷಸರೂ ನಷ್ಟವಾಗಿ ಹೋಗಿದ್ದಾಗ ಏಕಾರ್ಣವ ಮಧ್ಯದಲ್ಲಿದ್ದ ಸುದುರ್ಧರ್ಷ ದಾನವ ಮಧುಕೈಟಭರು ಯುದ್ಧಮಾಡಲು ಬಯಸಿ ಬಂದಾಗ ಅವನೇ ಅವರನ್ನು ತನ್ನ ಪ್ರಭಾವದಿಂದ ಅಮಿತ ಮರವನ್ನಿತ್ತು ಸಂಹರಿಸಿದ್ದನು.

ಪುರಾ ಕಮಲನಾಭಸ್ಯ ಸ್ವಪತಃ ಸಾಗರಾಂಭಸಿ ।
ಪುಷ್ಕರೇ ಯತ್ರ ಸಂಭೂತಾ ದೇವಾಃ ಸರ್ಷಿಗಣಾಃ ಪುರಾ ।। ೧-೪೧-೨೬

ಹಿಂದೆ ಕಮಲನಾಭನು ಸಮುದ್ರದ ನೀರಿನಲ್ಲಿ ಮಲಗಿದ್ದಾಗ ಅವನಿಂದ ಪ್ರಕಟವಾದ ಕಮಲದಿಂದಲೇ ಮೊದಲು ದೇವತೆಗಳೂ ಋಷಿಗಣಗಳೂ ಉತ್ಪನ್ನವಾದವು.

ಏಷ ಪೌಷ್ಕರಕೋ ನಾಮ ಪ್ರಾದುರ್ಭಾವೋ ಮಹಾತ್ಮನಃ ।
ಪುರಾಣೇ ಕಥ್ಯತೇ ಯತ್ರ ವೇದಃ ಶ್ರುತಿಸಮಾಹಿತಃ ।। ೧-೪೧-೨೭

ವೇದ ಶೃತಿಗಳು ಸಮಾಹಿತವಾಗಿರುವ ಪುರಾಣಗಳಲ್ಲಿ ಇದನ್ನು ಮಹಾತ್ಮನ ಪೌಷ್ಕರಕ ಸೃಷ್ಟಿ ಎಂಬ ಹೆಸರಿನಿಂದ ಕರೆಯುತ್ತಾರೆ.

ವಾರಾಹಸ್ತು ಶ್ರುತಿಮುಖಃ ಪ್ರಾದುರ್ಭಾವೋ ಮಹಾತ್ಮನಃ ।
ಯತ್ರ ವಿಷ್ಣುಃ ಸುರಶ್ರೇಷ್ಠೋ ವಾರಾಹಂ ರೂಪಮಾಸ್ಥಿತಃ ।
ಮಹೀಂ ಸಾಗರಪರ್ಯಂತಾಂ ಸಶೈಲವನಕಾನನಾಮ್ ।। ೧-೪೧-೨೮

ಮಹಾತ್ಮ ವಾರಾಹ ಅವತಾರವು ಶೃತಿಯಲ್ಲಿ ವರ್ಣಿತವಾಗಿದೆ. ಸುರಶ್ರೇಷ್ಠ ವಿಷ್ಣುವು ವಾರಾಹ ರೂಪವನ್ನು ತಳೆದು ಶೈಲವನಕಾನನಗಳೊಂದಿಗೆ ಭೂಮಿಯನ್ನು ಸಮುದ್ರದಿಂದ ಉದ್ಧರಿಸಿದ್ದನು.

ವೇದಪಾದೋ ಯೂಪದಂಷ್ಟ್ರಃ ಕ್ರತುದಂತಶ್ಚಿತೀಮುಖಃ ।
ಅಗ್ನಿಜಿಹ್ವೋ ದರ್ಭರೋಮಾ ಬ್ರಹ್ಮಶೀರ್ಷೋ ಮಹಾತಪಾಃ ।। ೧-೪೧-೨೯

ವೇದಗಳೇ ಅವನ ಪಾದಗಳಾಗಿದ್ದವು ಮತ್ತು ಅವನ ಕೋರೆದಾಡೆಯು ಯೂಪವಾಗಿತ್ತು. ಹಲ್ಲು ಕ್ರತುವಾಗಿತ್ತು ಮತ್ತು ಮುಖವು ಚಿತಿಯಾಗಿತ್ತು. ಅವನ ನಾಲಿಗೆಯೇ ಅಗ್ನಿಯಾಗಿತ್ತು, ರೋಮಗಳು ದರ್ಭೆಗಳಾಗಿದ್ದವು, ಮತ್ತು ಶಿರವು ಬ್ರಹ್ಮನಾಗಿತ್ತು. ಅವನು ಮಹಾತಪಸ್ವಿಯಾಗಿದ್ದನು.

ಅಹೋರಾತ್ರೇಕ್ಷಣೋ ದಿವ್ಯೋ ವೇದಾಂಗಶ್ರುತಿಭೂಷಣಃ ।
ಆಜ್ಯನಾಸಃ ಸ್ರುವಾತುಂಡಃ ಸಾಮಘೋಷಸ್ವನೋ ಮಹಾನ್ ।। ೧-೪೧-೩೦

ದಿನ-ರಾತ್ರಿಗಳು ಅವನ ಕಣ್ಣುಗಳಾಗಿದ್ದವು. ವೇದಾಂಗ ಶ್ರುತಿಗಳು ಅವನ ಆಭರಣಗಳಾಗಿದ್ದವು. ನಾಸಿಕವು ಆಜ್ಯವಾಗಿತ್ತು. ತುಂಡವು ಸ್ರುವವಾಗಿತ್ತು ಮತ್ತು ಅವನ ಮಹಾಸ್ವನವು ಸಾಮಘೋಷದಂತಿತ್ತು.

ಧರ್ಮಸತ್ಯಮಯಃ ಶ್ರೀಮಾನ್ಕ್ರಮವಿಕ್ರಮಸತ್ಕೃತಃ ।
ಪ್ರಾಯಶ್ಚಿತ್ತನಖೋ ಧೀರಃ ಪಶುಜಾನುರ್ಮಹಾಭುಜಾಃ ।। ೧-೪೧-೩೧

ಅವನು ಧರ್ಮ ಮತ್ತು ಸತ್ಯಮಯನು. ಆ ಶ್ರೀಮಾನನು ಕ್ರಮ ಮತ್ತು ಮಿಕ್ರಮಗಳಿಂದ ಸತ್ಕೃತನು. ಅವನ ಉಗುರುಗಳೇ ಪ್ರಾಯಶ್ಚಿತ್ತ ಮತ್ತು ಆ ಧೀರನ ಮಹಾಭುಜಗಳೇ ಪಶು.

ಉದ್ಗಾತ್ರಂತೋ ಹೋಮಲಿಂಗಃ ಫಲಬೀಜಮಹೌಷಧಿಃ ।
ವಾಯ್ವಂತರಾತ್ಮಾ ಮಂತ್ರಸ್ಫಿಗ್ವಿಕೃತಃ ಸೋಮಶೋಣಿತಃ ।। ೧-೪೧-೩೨

ಅವನ ಒಳ ಶರೀರವು ಉದ್ಗಾತಾ, ಲಿಂಗವು ಹೋಮ, ಮತ್ತು ಅವನ ಅಂಡಕೋಶ ಮತ್ತು ವೀರ್ಯವು ಮಹೌಷಧಿ. ಅವನ ಅಂತರಾತ್ಮವು ವಾಯು, ನಿತಂಬವು ಮಂತ್ರ ಮತ್ತು ಅವನ ರಕ್ತವೇ ಹಿಂಡಿ ತಯಾರಿಸಿದ ಸೋಮರಸ.

ವೇದಿಸ್ಕಂಧೋ ಹವಿರ್ಗಂಧೋ ಹವ್ಯಕವ್ಯಾತಿವೇಗವಾನ್ ।
ಪ್ರಾಗ್ವಂಶಕಾಯೋ ದ್ಯುತಿಮಾನ್ನಾನಾದೀಕ್ಷಾಭಿರಾಚಿತಃ ।। ೧-೪೧-೩೩

ಅವನ ಸ್ಕಂಧವು ವೇದಿ. ಅವನ ಗಂಧವೇ ಹವಿಸ್ಸು. ಅವನ ಅತಿವೇಗವೇ ಹವ್ಯಕವ್ಯಗಳು. ಅವನ ಕಾಯವೇ ಪ್ರಾಗ್ವಂಶ1. ಆ ದ್ಯುತಿಮಾನನು ನಾನಾ ದೀಕ್ಷೆಗಳಿಂದ ಸಂಪನ್ನನು.

ದಕ್ಷಿಣಾಹೃದಯೋ ಯೋಗೀ ಮಹಾಸತ್ರಮಯೋ ಮಹಾನ್ ।
ಉಪಾಕರ್ಮೋಷ್ಠರುಚಕಃ ಪ್ರವರ್ಗ್ಯಾವರ್ತಭೂಷಣಾಃ ।। ೧-೪೧-೩೪

ದಕ್ಷಿಣೆಯೇ ಅವನ ಹೃದಯ. ಮಹಾ ಸತ್ರವು ಆ ಮಹಾಯೋಗಿಯ ಸ್ವರೂಪ. ಉಪಾಕರ್ಮವು ಅವನ ಗೀಳಿನ ಆಭರಣ. ಪ್ರವರ್ಗ್ಯದ ಆವೃತಿಯು ಅವನ ಆಭೂಷಣ.

ನಾನಾಛಂದೋಗತಿಪಥೋ ಗುಹ್ಯೋಪನಿಷದಾಸನಃ ।
ಛಾಯಾಪತ್ನೀಸಹಾಯೋ ವೈ ಮೇರುಶೃಂಗ ಇವೋಚ್ಛ್ರಿತಃ ।। ೧-೪೧-೩೫

ನಾನಾ ಛಂದಗಳ ಗತಿಯು ಅವನ ಮಾರ್ಗ. ಗುಹ್ಯ ಉಪನಿಷತ್ತು ಅವನ ಆಸನ. ಛಾಯೆಯೇ ಪತ್ನಿಯಂತೆ ಅವನ ಸಹಾಯಕಿಯು. ಅವನು ಮೇರುಶೃಂಗದಂತೆ ಎತ್ತರವಾಗಿದ್ದನು.

ಮಹೀಂ ಸಾಗರಪರ್ಯಂತಾಂ ಸಶೈಲವನಕಾನನಾಮ್ ।
ಏಕಾರ್ಣವಜಲೇ ಭ್ರಷ್ಟಾಮೇಕಾರ್ಣವಗತಃ ಪ್ರಭುಃ ।। ೧-೪೧-೩೬
ದಂಷ್ಟ್ರಯಾ ಯಃ ಸಮುದ್ಧೃತ್ಯ ಲೋಕಾನಾಂ ಹಿತಕಾಮ್ಯಯಾ ।
ಸಹಸ್ರಶೀರ್ಷೋ ದೇವಾದಿಶ್ಚಕಾರ ಪೃಥಿವೀಂ ಪುನಃ ।। ೧-೪೧-೩೭

ಆ ಸಹಸ್ರಶೀರ್ಷ ಪ್ರಭುವು ಲೋಕಗಳ ಹಿತವನ್ನು ಬಯಸಿ ಏಕಾರ್ಣವ ಜಲವನ್ನು ಪ್ರವೇಶಿಸಿ ಅದರಲ್ಲಿ ಮುಳುಗಿದ್ದ ಪರ್ವತ-ವನ-ಕಾನನಸಮೇತ ಸಮುದ್ರಪರ್ಯಂತ ಮಹಿಯನ್ನು ತನ್ನ ಕೋರೆದಾಡೆಗಳಿಂದ ಹಿಡಿದೆತ್ತಿ ಪುನಃ ಪೃಥ್ವಿಯನ್ನು ನೀರಿನ ಮೇಲೆ ಸ್ಥಿರವಾಗಿ ಸ್ಥಾಪಿಸಿದನು.

ಏವಂ ಯಜ್ಞವರಾಹೇಣ ಭೂತ್ವಾ ಭೂತಹಿತಾರ್ಥಿನಾ ।
ಉದ್ಧೃತಾ ಪೃಥಿವೀ ಸರ್ವಾ ಸಾಗರಾಂಬುಧರಾ ಪುರಾ ।। ೧-೪೧-೩೮

ಹೀಗೆ ಹಿಂದೆ ಭೂತಗಳ ಹಿತಾರ್ಥಕ್ಕಾಗಿ ಯಜ್ಞವರಾಹನಾಗಿ ಸಾಗರಾಂಬುಧರೆ ಪೃಥ್ವಿಯನ್ನು ಉದ್ಧರಿಸಿದ್ದನು.

ವಾರಾಹ ಏಷ ಕಥಿತೋ ನಾರಸಿಂಹಮತಃ ಶೃಣು ।
ಯತ್ರ ಭೂತ್ವಾ ಮೃಗೇಂದ್ರೇಣ ಹಿರಣ್ಯಕಶಿಪುರ್ಹತಃ ।। ೧-೪೧-೩೯

ವಾರಾಹಾವತಾರದ ಕಥೆಯು ಇದು. ಇನ್ನು ಮೃಗೇಂದ್ರನಾಗಿ ಹಿರಣ್ಯಕಶಿಪುವನ್ನು ಸಂಹರಿಸಿದ ನಾರಸಿಂಹ ಅವತಾರವನ್ನು ಕೇಳು.

ಪುರಾ ಕೃತಯುಗೇ ರಾಜನ್ಸುರಾರಿರ್ಬಲದರ್ಪಿತಃ ।
ದೈತ್ಯಾನಾಮಾದಿಪುರ್ಷಶ್ಚಚಾರ ತಪ ಉತ್ತಮಮ್ ।। ೧-೪೧-೪೦
ದಶ ವರ್ಷಸಹಸ್ರಾಣಿ ಶತಾನಿ ದಶ ಪಂಚ ಚ ।
ಜಲೋಪವಾಸನಿರತಃ ಸ್ಥಾನಮೌನದೃಢವ್ರತಃ ।। ೧-೪೧-೪೧

ರಾಜನ್! ಹಿಂದೆ ಕೃತಯುಗದಲ್ಲಿ ಸುರಾರಿ ಬಲದರ್ಪಿತ ದೈತ್ಯರ ಆದಿಪುರುಷನು ಉತ್ತಮ ತಪಸ್ಸನ್ನು ತಪಿಸಿದನು. ಹನ್ನೊಂದು ಸಾವಿರದ ಐದುನೂರು ವರ್ಷಗಳ ಪರ್ಯಂತ ಆ ದೃಢವ್ರತನು ಜಪ ಉಪವಾಸ ನಿರತನಾಗಿ ಒಂದೇ ಸ್ಥಾನದಲ್ಲಿ ಮೌನಿಯಾಗಿದ್ದನು.

ತತಃ ಶಮದಮಾಭ್ಯಾಂ ಚ ಬ್ರಹ್ಮಚರ್ಯೇಣ ಚಾನಘ ।
ಬ್ರಹ್ಮಾ ಪ್ರೀತೋಽಭವತ್ತಸ್ಯ ತಪಸಾ ನಿಯಮೇನ ಚ ।। ೧-೪೧-೪೨

ಅನಘ! ಅನಂತರ ಅವನ ಇಂದ್ರಿಯ ಸಂಯಮ, ಮನೋನಿಗ್ರಹ, ಬ್ರಹ್ಮಚರ್ಯ, ತಪಸ್ಸು ಮತ್ತು ನಿಯಮಗಳಿಂದ ಬ್ರಹ್ಮನು ಪ್ರೀತನಾದನು.

ತಂ ವೈ ಸ್ವಯಂಭೂರ್ಭಗವಾನ್ಸ್ವಯಮಾಗತ್ಯ ಭೂಪತೇ ।
ವಿಮಾನೇನಾರ್ಕವರ್ಣೇನ ಹಂಸಯುಕ್ತೇನ ಭಾಸ್ವತಾ ।। ೧-೪೧-೪೩

ಭೂಪತೇ! ಭಗವಾನ್ ಸ್ವಯಂಭುವು ಹಂಸಯುಕ್ತವಾದ ಸೂರ್ಯನ ತೇಜಸ್ಸಿನಂತೆ ಬೆಳಗುತ್ತಿದ್ದ ವಿಮಾನದಲ್ಲಿ ಕುಳಿತು ಅವನ ಬಳಿ ಆಗಮಿಸಿದನು.

ಆದಿತ್ಯೈರ್ವಸುಭಿಃ ಸಾಧ್ಯೈರ್ಮರುದ್ಭಿರ್ದೈವತೈಃ ಸಹ ।
ರುದ್ರೈರ್ವಿಶ್ವಸಹಾಯೈಶ್ಚ ಯಕ್ಷರಾಕ್ಷಸಕಿನ್ನರೈಃ ।। ೧-೪೧-೪೪
ದಿಶಾಭಿರ್ವಿದಿಶಾಭಿಶ್ಚ ನದೀಭಿಃ ಸಾಗರೈಸ್ತಥಾ ।
ನಕ್ಷತ್ರೈಶ್ಚ ಮುಹೂರ್ತೈಶ್ಚ ಖೇಚರೈಶ್ಚ ಮಹಾಗ್ರಹೈಃ ।। ೧-೪೧-೪೫
ದೇವರ್ಷಿಭಿಸ್ತಪೋವೃದ್ಧೈಃ ಸಿದ್ಧೈಃ ಸಪ್ತರ್ಷಿಭಿಸ್ತಥಾ ।
ರಾಜರ್ಷಿಭಿಃ ಪುಣ್ಯತಮೈರ್ಗಂಧರ್ವೈಶ್ಚಾಪ್ಸರೋಗಣೈಃ ।। ೧-೪೧-೪೬

ಅವನೊಂದಿಗೆ ಆದಿತ್ಯರು, ವಸುಗಳು, ಸಾಧ್ಯರು, ಮರುತ್ತರು, ದೇವತೆಗಳು, ರುದ್ರರು, ವಿಶ್ವೇದೇವರು, ಯಕ್ಷರು, ರಾಕ್ಷಸರು, ಕಿನ್ನರರು, ದಿಕ್ಕುಗಳು, ಉಪದಿಕ್ಕುಗಳು, ನದಿಗಳು, ಸಾಗರಗಳು, ನಕ್ಷತ್ರಗಳು, ಮುಹೂರ್ತಗಳು, ಕೇಚರರು, ಮಹಾಗ್ರಹಗಳು, ದೇವರ್ಷಿಗಳು, ತಪೋವೃದ್ಧರು, ಸಿದ್ಧರು ಮತ್ತು ಸಪ್ತರ್ಷಿಗಳೂ ಇದ್ದರು.

ಚರಾಚರಗುರುಃ ಶ್ರೀಮಾನ್ವೃತಃ ಸರ್ವೈಃ ಸುರೈಸ್ತಥಾ ।
ಬ್ರಹ್ಮಾ ಬ್ರಹ್ಮವಿದಾಂ ಶ್ರೇಷ್ಠೋ ದೈತ್ಯಂ ವಚನಮಬ್ರವೀತ್ । ೧-೪೧-೪೭

ಸರ್ವ ಸುರರಿಂದ ಆವೃತನಾಗಿದ್ದ ಆ ಚರಾಚರಗುರು ಶ್ರೀಮಾನ್ ಬ್ರಹ್ಮವಿದರಲ್ಲಿ ಶ್ರೇಷ್ಠ ಬ್ರಹ್ಮನು ದೈತ್ಯನಿಗೆ ಈ ಮಾತನ್ನಾಡಿದನು:

ಪ್ರೀತೋಽಸ್ಮಿ ತವ ಭಕ್ತಸ್ಯ ತಪಸಾನೇನ ಸುವ್ರತ ।
ವರಂ ವರಯ ಭದ್ರಂ ತೇ ಯಥೇಷ್ಟಂ ಕಾಮಮಾಪ್ನುಹಿ ।। ೧-೪೧-೪೮

“ಸುವ್ರತ! ನಿನ್ನ ಭಕ್ತಿ ಮತ್ತು ತಪಸ್ಸಿನಿಂದ ಪ್ರೀತನಾಗಿದ್ದೇನೆ. ನಿನಗೆ ಮಂಗಳವಾಗಲಿ. ವರವನ್ನು ಕೇಳು. ನಿನಗಿಷ್ಟವಾದುದನ್ನು ಪಡೆದುಕೊಳ್ಳುತ್ತೀಯೆ.”

ಹಿರಣ್ಯಕಶಿಪುರುವಾಚ।
ನ ದೇವಾಸುರಗಂಧರ್ವಾ ನ ಯಕ್ಷೋರಗರಾಕ್ಷಸಾಃ ।
ನ ಮಾನುಷಾಃ ಪಿಶಾಚಾಶ್ಚ ನಿಹನ್ಯುರ್ಮಾಂ ಕಥಂಚನ ।। ೧-೪೧-೪೯
ಋಷಯೋ ವಾ ನ ಮಾಂ ಶಾಪೈಃ ಕ್ರುದ್ಧಾ ಲೋಕಪಿತಾಮಹ ।
ಶಪೇಯುಸ್ತಪಸಾ ಯುಕ್ತಾ ವರಮೇತಂ ವೃಣೋಮ್ಯಹಮ್ ।। ೧-೪೧-೫೦

ಹಿರಣ್ಯಕಶಿಪುವು ಹೇಳಿದನು: “ಲೋಕಪಿತಾಮಹ! ದೇವಾಸುರಗಂಧರ್ವರಾಗಲೀ, ಯಕ್ಷೋರಗರಾಕ್ಷಸರಾಗಲೀ, ಮನುಷ್ಯ-ಪಿಶಾಚಿಗಳಾಗಲೀ ಎಂದೂ ನನ್ನನ್ನು ಕೊಲ್ಲದಿರಲಿ. ತಪಸ್ಸಿನಿಂದ ಯುಕ್ತರಾದ ಋಷಿಗಳೂ ಕ್ರುದ್ಧರಾಗಿ ನನಗೆ ಶಾಪವನ್ನು ಕೊಡದಿರಲಿ. ನಾನು ಇದೇ ವರವನ್ನು ಕೇಳಿಕೊಳ್ಳುತ್ತೇನೆ.

ನ ಶಸ್ತ್ರೇಣ ನ ಚಾಸ್ತ್ರೇಣ ಗಿರಿಣಾ ಪಾದಪೇನ ವಾ ।
ನ ಶುಷ್ಕೇಣ ನ ಚಾರ್ದ್ರೇಣ ಸ್ಯಾನ್ನ ಚಾನ್ಯೇನ ಮೇ ವಧಃ ।। ೧-೪೧-೫೧

ಶಸ್ತ್ರಾದಿಂದಾಗಲೀ, ಅಸ್ತ್ರದಿಂದಾಗಲೀ, ಪರ್ವತದಿಂದಾಗಲೀ ಅಥವಾ ವೃಕ್ಷಗಳಿಂದಾಗಲೀ, ಒಣಗಿರುವುದರಿಂದಾಗಲೀ, ಒದ್ದೆಯಾಗಿರುವುದರಿಂದಾಗಲೀ ಮತ್ತು ಅನ್ಯದಿಂದಾಗಲೀ ನನ್ನ ವಧೆಯಾಗದಿರಲಿ.

ಪಾಣಿಪ್ರಹಾರೇಣೈಕೇನ ಸಭೃತ್ಯಬಲವಾಹನಮ್ ।
ಯೋ ಮಾಂ ನಾಶಯಿತುಂ ಶಕ್ತಃ ಸ ಮೇ ಮೃತ್ಯುರ್ಭವಿಷ್ಯತಿ ।। ೧-೪೧-೫೨

ಸೇವಕ-ಸೇನಾ-ವಾಹನಗಳೊಂದಿಗೆ ನನ್ನನ್ನು ಒಂದೇ ಒಂದು ಕೈ-ಹೊಡೆತದಿಂದ ನಾಶಪಡಿಸಲು ಶಕ್ತನಾಗಿರುವವನಿಂದಲೇ ನನಗೆ ಮೃತ್ಯುವುಂಟಾಗಲಿ.

ಭವೇಯಮಹಮೇವಾರ್ಕಃ ಸೋಮೋ ವಾಯುರ್ಹುತಾಶನಃ ।
ಸಲಿಲಂ ಚಾಂತರಿಕ್ಷಂ ಚ ನಕ್ಷತ್ರಾಣಿ ದಿಶೋ ದಶ ।। ೧-೪೧-೫೩

ನಾನೇ ಸೂರ್ಯ, ಸೋಮ, ವಾಯು, ಹುತಾಶನ, ನೀರು, ಅಂತರಿಕ್ಷ, ನಕ್ಷತ್ರಗಳು ಮತ್ತು ಹತ್ತು ದಿಕ್ಕುಗಳೂ ಆಗಲಿ.

ಅಹಂ ಕ್ರೋಧಶ್ಚ ಕಾಮಶ್ಚ ವರುಣೋ ವಾಸವೋ ಯಮಃ ।
ಧನದಶ್ಚ ಧನಾಧ್ಯಕ್ಷೋ ಯಕ್ಷಃ ಕಿಂಪುರುಷಾಧಿಪಃ ।। ೧-೪೧-೫೪

ನಾನೇ ಕ್ರೋಧ, ಕಾಮ, ವರುಣ, ವಾಸವ, ಯಮ, ಧನದ, ಧನಾಧ್ಯಕ್ಷ, ಯಕ್ಷ, ಮತ್ತು ಕಿಂಪುರುಷಾಧಿಪನಾಗಲಿ.”

ಏವಮುಕ್ತಸ್ತು ದೈತ್ಯೇನ ಸ್ವಯಂಭೂರ್ಭಗವಾಂಸ್ತದಾ ।
ಉವಾಚ ದೈತ್ಯರಾಜಂ ತಂ ಪ್ರಹಸನ್ನೃಪಸತ್ತಮ ।। ೧-೪೧-೫೫

ನೃಪಸತ್ತಮ! ದೈತ್ಯನು ಹೀಗೆ ಹೇಳಲು ಭಗವಾನ್ ಸ್ವಯಂಭುವು ನಸುನಗುತ್ತಾ ದೈತ್ಯರಾಜನಿಗೆ ಹೀಗೆಂದನು:

ಬ್ರಹ್ಮೋವಾಚ।
ಏತೇ ದಿವ್ಯಾ ವರಾಸ್ತಾತ ಮಯಾ ದತ್ತಾಸ್ತವಾದ್ಭುತಾಃ ।
ಸರ್ವಾನ್ಕಾಮಾನಿಮಾಂಸ್ತಾತ ಪ್ರಾಪ್ಸ್ಯಸಿ ತ್ವಂ ನ ಸಂಶಯಃ ।। ೧-೪೧-೫೬

ಬ್ರಹ್ಮನು ಹೇಳಿದನು: “ಅಯ್ಯಾ! ಈ ದಿವ್ಯ ಅದ್ಭುತ ವರಗಳನ್ನು ನಾನು ನಿನಗೆ ನೀಡಿದ್ದೇನೆ. ನಿನ್ನ ಸರ್ವಕಾಮನೆಗಳನ್ನೂ ಪಡೆದುಕೊಳ್ಳುತ್ತೀಯೆ ಎನ್ನುವುದರಲ್ಲಿ ಸಂಶಯವಿಲ್ಲ.”

ಏವಮುಕ್ತ್ವಾ ತು ಭಗವಾಂಜಗಾಮಾಕಾಶಮೇವ ಹಿ ।
ವೈರಾಜಂ ಬ್ರಹ್ಮಸದನಂ ಬ್ರಹ್ಮರ್ಷಿಗಣಸೇವಿತಮ್ ।। ೧-೪೧-೫೭

ಹೀಗೆ ಹೇಳಿ ಭಗವಾನ್ ಬ್ರಹ್ಮನು ಆಕಾಶದಲ್ಲಿದ್ದ ಬ್ರಹ್ಮರ್ಷಿಗಣಗಳಿಂದ ಸೇವಿತ ವೈರಾಜವೆಂಬ ಬ್ರಹ್ಮಸದನಕ್ಕೆ ಹೊರಟುಹೋದನು.

ತತೋ ದೇವಾಶ್ಚ ನಾಗಾಶ್ಚ ಗಂಧರ್ವಾ ಮುನಯಸ್ತಥಾ ।
ವರಪ್ರದಾನಂ ಶ್ರುತ್ವಾ ತೇ ಪಿತಾಮಹಮುಪಸ್ಥಿತಾಃ ।। ೧-೪೧-೫೮
ವಿಭುಂ ವಿಜ್ಞಾಪಯಾಮಾಸುರ್ದೇವಾ ಇಂದ್ರಪುರೋಗಮಾಃ ।। ೧-೪೧-೫೯

ಈ ವರಪ್ರದಾನವನ್ನು ಕೇಳಿ ದೇವತೆಗಳು, ನಾಗರು, ಗಂಧರ್ವರು ಮತ್ತು ಮುನಿಗಳು ಪಿತಾಮಹನ ಬಳಿಸಾರಿದರು. ಇಂದ್ರನ ನಾಯಕತ್ವದಲ್ಲಿದ್ದ ದೇವತೆಗಳು ವಿಭುವಿಗೆ ವಿಜ್ಞಾಪಿಸಿದರು.

ದೇವಾ ಊಚುಃ।
ವರೇಣಾನೇನ ಭಗವನ್ಬಾಧಯಿಷ್ಯತಿ ನೋಽಸುರಃ ।
ತತಃ ಪ್ರಸೀದ ಭಗವನ್ವಧೋಽಪ್ಯಸ್ಯ ವಿಚಿಂತ್ಯತಾಮ್ ।। ೧-೪೧-೬೦
ಭಗವಾನ್ಸರ್ವಭೂತಾನಾಂ ಸ್ವಯಂಭೂರಾದಿಕೃದ್ವಿಭುಃ ।
ಸ್ರಷ್ಟಾ ಚ ಹವ್ಯಕವ್ಯಾನಾಮವ್ಯಕ್ತಃ ಪ್ರಕೃತಿರ್ಧ್ರುವಃ ।। ೧-೪೧-೬೧

ದೇವತೆಗಳು ಹೇಳಿದರು: “ಭಗವನ್! ಈ ವರದಿಂದ ಆ ಅಸುರನು ನಮ್ಮನ್ನು ಬಾಧಿಸುತ್ತಾನೆ. ಆದುದರಿಂದ ಭಗವನ್! ಪ್ರಸನ್ನನಾಗು. ಅವನ ವಧೆಯ ಕುರಿತೂ ಆಲೋಚಿಸು. ನೀನೇ ಸರ್ವಭೂತಗಳ ವಿಭು. ಸ್ವಯಂಭು ಮತ್ತು ಆದಿಸೃಷ್ಠಾ.ನೀನೇ ಹವ್ಯಕವ್ಯಗಳನ್ನು ರಚಿಸಿದವನು. ಅವ್ಯಕ್ತ ಪ್ರಕೃತಿ ಮತ್ತು ಧ್ರುವ.”

ಸರ್ವಲೋಕಹಿತಂ ವಾಕ್ಯಂ ಶ್ರುತ್ವಾ ದೇವಃ ಪ್ರಜಾಪತಿಃ ।
ಪ್ರೋವಾಚ ಭಗವಾನ್ವಾಕ್ಯಂ ಸರ್ವಾಂದೇವಗಣಾಂಸ್ತದಾ ।। ೧-೪೧-೬೨

ಸರ್ವಲೋಕಹಿತವಾದ ಮಾತನ್ನು ಕೇಳಿ ದೇವ ಪ್ರಜಾಪತಿ ಭಗವಂತನು ಆ ಎಲ್ಲ ದೇವಗಣಗಳಿಗೆ ಉತ್ತರಿಸಿದನು:

ಅವಶ್ಯಂ ತ್ರಿದಶಾಸ್ತೇನ ಪ್ರಾಪ್ತವ್ಯಂ ತಪಸಃ ಫಲಮ್ ।
ತಪಸೋಽಂತೇಽಸ್ಯ ಭಗವಾನ್ವಧಂ ವಿಷ್ಣುಃ ಕರಿಷ್ಯತಿ ।। ೧-೪೧-೬೩

“ತ್ರಿದಶರೇ! ಅವಶ್ಯವಾಗಿಯೂ ಅವನಿಗೆ ಅವನ ತಪಸ್ಸಿನ ಫಲವು ದೊರಕಬೇಕು. ಅವನ ತಪಸ್ಸಿನ ಫಲವು ಅಂತ್ಯವಾದ ನಂತರ ಅವನ ವಧೆಯನ್ನು ಭಗವಾನ್ ವಿಷ್ಣುವು ಮಾಡುತ್ತಾನೆ.”

ಏತಚ್ಛ್ರುತ್ವಾ ಸುರಾಃ ಸರ್ವೇ ವಾಕ್ಯಂ ಪಂಕಜಸಂಭವಾತ್ ।
ಸ್ವಾನಿ ಸ್ಥಾನಾನಿ ದಿವ್ಯಾನಿ ಜಗ್ಮುಸ್ತೇ ವೈ ಮುದಾನ್ವಿತಾಃ ।। ೧-೪೧-೬೪

ಪಂಕಜಸಂಭವನ ಈ ಮಾತನ್ನು ಕೇಳಿ ಸರ್ವ ಸುರರು ಮುದಾನ್ವಿತರಾಗಿ ತಮ್ಮ ತಮ್ಮ ದಿವ್ಯ ಸ್ಥಾನಗಳಿಗೆ ತೆರಳಿದರು.

ಲಬ್ಧಮಾತ್ರೇ ವರೇ ಚಾಪಿ ಸರ್ವಾಃ ಸೋಽಬಾಧತ ಪ್ರಜಾಃ ।
ಹಿರಣ್ಯಕಶಿಪುರ್ದೈತ್ಯೋ ವರದಾನೇನ ದರ್ಪಿತಃ ।। ೧-೪೧-೬೫

ಆ ವರವನ್ನು ಪಡೆದೊಡನೆಯೇ ದೈತ್ಯ ಹಿರಣ್ಯಕಶಿಪುವು ವರದಾನದಿಂದ ದರ್ಪಿತನಾಗಿ ಸರ್ವ ಪ್ರಜೆಗಳನ್ನೂ ಬಾಧಿಸತೊಡಗಿದನು.

ಆಶ್ರಮೇಷು ಮಹಾಭಾಗಾನ್ಮುನೀನ್ವೈ ಸಂಶಿತವ್ರತಾನ್ ।
ಸತ್ಯಧರ್ಮರತಾಂದಾಂತಾನ್ಪುರಾ ಧರ್ಷಿತವಾಂಸ್ತು ಸಃ ।। ೧-೪೧-೬೬

ಎಲ್ಲಕ್ಕಿಂತ ಮೊದಲು ಅವನು ಆಶ್ರಮಗಳಲ್ಲಿದ್ದ ಸಂಶಿತವ್ರತ ಸತ್ಯಧರ್ಮರತ ಇಂದ್ರಿಯನಿಗ್ರಹಿ ಮಹಾಭಾಗ ಮುನಿಗಳನ್ನು ಪೀಡಿಸತೊಡಗಿದನು.

ದೇವಾನ್ಸ್ತ್ರಿಭುವನಸ್ಥಾಂಸ್ತು ಪರಾಜಿತ್ಯ ಮಹಾಸುರಃ ।
ತ್ರೈಲೋಕ್ಯಂ ವಶಮಾನೀಯ ಸ್ವರ್ಗೇ ವಸತಿ ದಾನವಃ । ೧-೪೧-೬೭

ತ್ರಿಭುವನಗಳಲ್ಲಿದ್ದ ದೇವತೆಗಳನ್ನು ಪರಾಜಯಗೊಳಿಸಿ ಆ ಮಹಾಸುರ ದಾನವನು ತ್ರೈಲೋಕ್ಯವನ್ನು ಪಶಪಡಿಸಿಕೊಂಡು ಸ್ವರ್ಗದಲ್ಲಿ ವಾಸಿಸತೊಡಗಿದನು.

ಯದಾ ವರಮದೋನ್ಮತ್ತೋ ನ್ಯವಸದ್ದಾನವೋ ದಿವಿ ।
ಯಜ್ಞಿಯಾನ್ಕೃತವಾಂದೈತ್ಯಾನ್ದೇವಾಂಶ್ಚೈವಾಪ್ಯಯಜ್ಞಿಯಾನ್ ।। ೧-೪೧-೬೮

ವರಮದೋನ್ಮತ್ತನಾದ ಅವನು ದಿವಿಯಲ್ಲಿ ವಾಸಿಸುತ್ತಿರುವಾಗ ದೈತ್ಯರನ್ನು ಯಜ್ಞಭಾಗಿಗಳನ್ನಾಗಿ ಮಾಡಿ ದೇವತೆಗಳನ್ನು ಅದರಿಂದ ವಂಚಿತರನ್ನಾಗಿಸಿದನು.

ಆದಿತ್ಯಾಶ್ಚ ತತೋ ರುದ್ರಾ ವಿಶ್ವೇ ಚ ಮರುತಸ್ತಥಾ ।
ಶರಣ್ಯಂ ಶರಣಂ ವಿಷ್ಣುಮುಪಾಜಗ್ಮುರ್ಮಹಾಬಲಮ್ ।। ೧-೪೧-೬೯

ಆಗ ಆದಿತ್ಯರು, ರುದ್ರರು, ವಿಶ್ವೇದೇವರು, ಮತ್ತು ಮರುತ್ತರು ಶರಣ್ಯ ಮಹಾಬಲ ವಿಷ್ಣುವಿನ ಮೊರೆಹೊಕ್ಕರು.

ವೇದಯಜ್ಞಮಯಂ ಬ್ರಹ್ಮ ಬ್ರಹ್ಮದೇವಂ ಸನಾತನಮ್ ।
ಭೂತಂ ಭವ್ಯಂ ಭವಿಷ್ಯಂ ಚ ಪ್ರಭುಂ ಲೋಕನಮಸ್ಕೃತಮ್ ।
ನಾರಾಯಣಂ ವಿಭುಂ ದೇವಾಃ ಶರಣಂ ಶರಣಾಗತಾಃ ।। ೧-೪೧-೭೦

ದೇವತೆಗಳು ವೀದಯಜ್ಞಮಯ, ಬ್ರಹ್ಮ, ಬ್ರಹ್ಮದೇವ, ಸನಾತನ, ಭೂತ, ಭವ್ಯ, ಭವಿಷ್ಯ, ಪ್ರಭು, ಲೋಕನಮಸ್ಕೃತ, ನಾರಾಯಣ ವಿಭು, ಶರಣನ ಶರಣಾಗತರಾದರು.

ದೇವಾ ಊಚುಃ।
ತ್ರಾಯಸ್ವ ನೋಽದ್ಯ ದೇವೇಶ ಹಿರಣ್ಯಕಶಿಪೋರ್ಭಯಾತ್ ।
ತ್ವಂ ಹಿ ನಃ ಪರಮೋ ಧಾತಾ ಬ್ರಹ್ಮಾದೀನಾಂ ಸುರೋತ್ತಮ ।। ೧-೪೧-೭೧

ದೇವತೆಗಳು ಹೇಳಿದರು: “ದೇವೇಶ! ಸುರೋತ್ತಮ! ಇಂದು ಹಿರಣ್ಯಕಶಿಪುವಿನ ಭಯದಿಂದ ನಮ್ಮನ್ನು ಪಾರುಮಾಡು. ಬ್ರಹ್ಮಾದಿಗಳಿಗೆ ನೀನೇ ಪರಮ ಧಾತಾ.

ತ್ವಮ್ ಹಿ ನಃ ಪರಮೋ ದೇವಸ್ತ್ವಂ ಹಿ ನಃ ಪರಮೋ ಗುರುಃ ।
ಉತ್ಫುಲ್ಲಾಂಬುಜಪತ್ರಾಕ್ಷಃ ಶತ್ರುಪಕ್ಷಭಯಂಕರಃ ।
ಕ್ಷಯಾಯ ದಿತಿವಂಶಸ್ಯ ಶರಣ್ಯಸ್ತ್ವಂ ಭವಸ್ವ ನಃ ।। ೧-೪೧-೭೨

ನೀನೇ ನಮಗೆ ಪರಮ ದೇವನು. ನೀನೇ ನಮಗೆ ಪರಮ ಗುರುವು. ಉತ್ಫುಲ್ಲಾಂಬುಜಪತ್ರಾಕ್ಷ! ಶತ್ರುಪಕ್ಷಭಯಂಕರ! ದಿತಿವಂಶದ ವಿನಾಶಕ್ಕಾಗಿ ನಾವು ನಿನ್ನ ಶರಣು ಬಂದಿದ್ದೇವೆ.”

ವಿಷ್ಣುರುವಾಚ।
ಭಯಂ ತ್ಯಜಧ್ವಮಮರಾ ಹ್ಯಭಯಂ ವೋ ದದಾಮ್ಯಹಮ್ ।
ತಥೈವಂ ತ್ರಿದಿವಂ ದೇವಾಃ ಪ್ರತಿಪತ್ಸ್ಯಥ ಮಾ ಚಿರಮ್ ।। ೧-೪೧-೭೩

ವಿಷ್ಣುವು ಹೇಳಿದನು: “ಅಮರರೇ! ದೇವತೆಗಳೇ! ಭಯವನ್ನು ತ್ಯಜಿಸಿರಿ. ನಿಮಗೆ ನಾನು ಅಭಯವನ್ನು ನೀಡುತ್ತೇನೆ. ನೀವು ಬೇಗನೇ ಮೊದಲಿನಂತೆಯೇ ತ್ರಿದಿವವನ್ನು ಪಡೆದುಕೊಳ್ಳುತ್ತೀರಿ.

ಏಷ ತಂ ಸಗಣಂ ದೈತ್ಯಂ ವರದಾನೇನ ದರ್ಪಿತಮ್ ।
ಅವಧ್ಯಮಮರೇಂದ್ರಾಣಾಂ ದಾನವಂ ತಂ ನಿಹನ್ಮ್ಯಹಮ್ ।। ೧-೪೧-೭೪

ವರದಾನದಿಂದ ದರ್ಪಿತನಾದ ಅಮರೇಂದ್ರರಿಂದಲೂ ಅವಧ್ಯನಾದ ಆ ದಾನವನನ್ನು ದೈತ್ಯಗಣಗಳೊಂದಿಗೆ ನಾನು ಸಂಹರಿಸುತ್ತೇನೆ.””

ವೈಶಂಪಾಯನ ಉವಾಚ।
ಏವಮುಕ್ತ್ವಾ ಸ ಭಗವಾನ್ವಿಸೃಜ್ಯ ತ್ರಿದಶೇಶ್ವರಾನ್ ।
ಹಿರಣ್ಯಕಶಿಪೋ ರಾಜನ್ನಾಜಗಾಮ ಹರಿಃ ಸಭಾಮ್ ।। ೧-೪೧-೭೫

ವೈಶಂಪಾಯನನು ಹೇಳಿದನು: “ರಾಜನ್! ಹೀಗೆ ಹೇಳಿ ತ್ರಿದಶೇಶ್ವರನ್ನು ಕಳುಹಿಸಿ ಭಗವಾನ್ ಹರಿಯು ಹಿರಣ್ಯಕಶಿಪುವಿನ ಸಭೆಗೆ ಆಗಮಿಸಿದನು.

ನರಸ್ಯ ಕೃತ್ವಾರ್ಧತನುಂ ಸಿಂಹಸ್ಯಾರ್ಧತನುಂ ಪ್ರಭುಃ ।
ನಾರಸಿಂಹೇಣ ವಪುಷಾ ಪಾಣಿಂ ಸಂಸ್ಪೃಶ್ಯ ಪಾಣಿನಾ ।। ೧-೪೧-೭೬

ಪ್ರಭುವು ಆಗ ತನ್ನ ಅರ್ಧಶರೀರದಲ್ಲಿ ಮನುಷ್ಯನಾಗಿಯೂ ಅರ್ಥ ಶರೀರದಲ್ಲಿ ಸಿಂಹನಾಗಿಯೂ ಕಾಣಿಸಿಕೊಂಡು ನಾರಸಿಂಹನ ರೂಪದಲ್ಲಿ ಕೈಯನ್ನು ಕೈಯಿಂದ ತಿಕ್ಕುತ್ತಾ ಕಾಣಿಸಿಕೊಂಡನು.

ಜೀಮೂತಘನಸಂಕಾಶೋ ಜೀಮೂತಘನನಿಃಸ್ವನಃ ।
ಜೀಮೂತಘನದೀಪ್ತೌಜಾ ಜೀಮೂತ ಇವ ವೇಗವಾನ್ ।। ೧-೪೧-೭೭

ಅವನ ಶರೀರವು ಘನ ಮೋಡದಂತೆ ಶ್ಯಾಮಲವರ್ಣದ್ದಾಗಿತ್ತು. ಅವನ ಕೂಗು ಗುಡುಗಿನ ಶಬ್ಧದಂತಿತ್ತು. ಅವನ ಬೆಳಗುತ್ತಿದ್ದ ತೇಜಸ್ಸು ಮೇಘದಂತಿತ್ತು ಮತ್ತು ವೇಗವೂ ಮೇಘದಂತಿತ್ತು.

ದೈತ್ಯಂ ಸೋಽತಿಬಲಂ ದೀಪ್ತಂ ದೃಪ್ತಶಾರ್ದೂಲವಿಕ್ರಮಮ್ ।
ದೃಪ್ತೈರ್ದೈತ್ಯಗಣೈರ್ಗುಪ್ತಂ ಹತವಾನೇಕಪಾಣಿನಾ ।। ೧-೪೧-೭೮

ಆ ದೈತ್ಯನು ಅತಿಬಲನೂ ದೀಪ್ತನೂ ದೃಪ್ತಶಾರ್ದೂಲವಿಕ್ರಮನೂ ದೃಪ್ತದೈತ್ಯಗಣಗಳಿಂದ ರಕ್ಷಿತನೂ ಆಗಿದ್ದರೂ ನರಸಿಂಹನು ಅವನನ್ನು ಒಂದೇ ಕೈಯಿಂದ ಪ್ರಹರಿಸಿ ಸಂಹರಿಸಿದನು.

ನೃಸಿಂಹ ಏಷ ಕಥಿತೋ ಭೂಯೋಽಯಂ ವಾಮನೋಽಪರಃ ।
ಯತ್ರ ವಾಮನಮಾಶೃತ್ಯ ರೂಪಂ ದೈತ್ಯವಿನಾಶಕೃತ್ ।। ೧-೪೧-೭೯

ಇದು ನೃಸಿಂಹಾವತಾರದ ಕಥೆಯು. ಈಗ ವಿಷ್ಣುವು ವಮನನ ರೂಪವನ್ನು ಆಶ್ರಯಿಸಿ ದೈತ್ಯರ ವಿನಾಶಮಾಡಿದ ವಾಮನನ ಕಥೆಯನ್ನು ಹೇಳುತ್ತೇನೆ.

ಬಲೇರ್ಬಲವತೋ ಯಜ್ಞೇ ಬಲಿನಾ ವಿಷ್ಣುನಾ ಪುರಾ ।
ವಿಕ್ರಮೈಸ್ತ್ರಿಭಿರಕ್ಷೋಭ್ಯಾಃ ಕ್ಷೋಭಿತಾಸ್ತೇ ಮಹಾಸುರಾಃ । ೧-೪೧-೮೦

ಹಿಂದೆ ಬಲಶಾಲೀ ವಿಷ್ಣುವು ಬಲವಾನ್ ಬಲಿಯ ಯಜ್ಞದಲ್ಲಿ ಮೂರು ಹೆಜ್ಜೆಗಳಿಂದ ಅಕ್ಷೋಭಿತರಾಗಿದ್ದ ಮಹಾಸುರರನ್ನು ಕ್ಷೋಭಿತಗೊಳಿಸಿದನು.

ವಿಪ್ರಚಿತ್ತಿಃ ಶಿಬಿಃ ಶಂಕುರಯಃ ಶಂಕುಸ್ತಥೈವ ಚ ।
ಅಯಃಶಿರಾ ಶಂಕುಶಿರಾ ಹಯಗ್ರೀವಶ್ಚ ವೀರ್ಯವಾನ್ ।। ೧-೪೧-೮೧
ವೇಗವಾನ್ ಕೇತುಮಾನುಗ್ರಃ ಸೋಮವ್ಯಗ್ರೋ ಮಹಾಸುರಃ ।
ಪುಷ್ಕರಃ ಪುಷ್ಕಲಶ್ಚೈವ ವೇಪನಶ್ಚ ಮಹಾರಥಃ ।। ೧-೪೧-೮೨
ಬೃಹತ್ಕೀರ್ತಿರ್ಮಹಾಜಿಹ್ವಃ ಸಾಶ್ವೋಽಶ್ವಪತಿರೇವ ಚ ।
ಪ್ರಹ್ಲಾದೋಽಶ್ವಶಿರಾಃ ಕುಂಭಃ ಸಂಹ್ರಾದೋ ಗಗನಪ್ರಿಯಃ ।
ಅನುಹ್ರಾದೋ ಹರಿಹರೌ ವರಾಹಃ ಶಂಕರೋ ರುಜಃ ।। ೧-೪೧-೮೩
ಶರಭಃ ಶಲಭಶ್ಚೈವ ಕುಪನಃ ಕೋಪನಃ ಕ್ರಥಃ ।
ಬೃಹತ್ಕೀರ್ತಿರ್ಮಹಾಜಿಹ್ವಃ ಶಂಕುಕರ್ಣೋ ಮಹಾಸ್ವನಃ ।। ೧-೪೧-೮೪
ದೀರ್ಘಜಿಹ್ವೋಽರ್ಕನಯನೋ ಮೃದುಚಾಪೋ ಮೃದುಪ್ರಿಯಃ ।
ವಾಯುರ್ಯವಿಷ್ಠೋ ನಮುಚಿಃ ಶಂಬರೋ ವಿಜ್ವರೋ ಮಹಾನ್।। ೧-೪೧-೮೫
ಚಂದ್ರಹಂತಾ ಕ್ರೋಧಹಂತಾ ಕ್ರೋಧವರ್ಧನ ಏವ ಚ ।
ಕಾಲಕಃ ಕಾಲಕೇಯಶ್ಚ ವೃತ್ರಃ ಕ್ರೋಧೋ ವಿರೋಚನಃ ।। ೧-೪೧-೮೬
ಗರಿಷ್ಠಶ್ಚ ವರಿಷ್ಠಶ್ಚ ಪ್ರಲಂಬನರಕಾವುಭೌ ।
ಇಂದ್ರತಾಪನವಾತಾಪೀ ಕೇತುಮಾನ್ಬಲದರ್ಪಿತಃ ।। ೧-೪೧-೮೭
ಅಸಿಲೋಮಾ ಪುಲೋಮಾ ಚ ವಾಕ್ಕಲಃ ಪ್ರಮದೋ ಮದಃ ।
ಸ್ವಸೃಮಃ ಕಾಲವದನಃ ಕರಾಲಾಃ ಕೈಶಿಕಃ ಶರಃ ।। ೧-೪೧-೮೮
ಏಕಾಕ್ಷಶ್ಚಂದ್ರಹಾ ರಾಹುಃ ಸಂಹ್ರಾದಃ ಸೃಮರಃ ಸ್ವನಃ ।
ಶತಘ್ನೀಚಕ್ರಹಸ್ತಾಶ್ಚ ತಥಾ ಪರಿಘಪಾಣಯಃ ।। ೧-೪೧-೮೯
ಮಹಾಶಿಲಾಪ್ರಹರಣಾಃ ಶೂಲಹಸ್ತಾಶ್ಚ ದಾನವಾಃ ।
ಅಶ್ವಯಂತ್ರಾಯುಧೋಪೇತಾ ಭಿಂಡಿಪಾಲಾಯುಧಾಸ್ತಥಾ ।। ೧-೪-೯೦
ಶೂಲೋಲೂಖಲಹಸ್ತಾಶ್ಚ ಪರಶ್ವಧಧರಾಸ್ತಥಾ ।
ಪಾಶಮುದ್ಗರಹಸ್ತಾ ವೈ ತಥಾ ಮುದ್ಗಲಪಾಣಯಃ ।। ೧-೪೧-೯೧
ನಾನಾಪ್ರಹರಣಾ ಘೋರಾ ನಾನಾವೇಷಾ ಮಹಾಜವಾಃ ।
ಕೂರ್ಮಕುಕ್ಕುಟವಕ್ತ್ರಾಶ್ಚ ಶಶೋಲೂಕಮುಖಾಸ್ತಥಾ ।। ೧-೪೧-೯೨
ಖರೋಷ್ಟ್ರವದನಾಶ್ಚೈವ ವರಾಹವದನಾಸ್ತಥಾ ।
ಭೀಮಾ ಮಕರವಕ್ತ್ರಾಶ್ಚ ಕ್ರೋಷ್ಟುವಕ್ತ್ರಾಶ್ಚ ದಾನವಾಃ ।
ಆಖುದರ್ದುರವಕ್ತ್ರಾಶ್ಚ ಘೋರಾ ವೃಕಮುಖಾಸ್ತಥಾ ।। ೧-೪೧-೯೩
ಮಾರ್ಜಾರಗಜವಕ್ತ್ರಾಶ್ಚ ಮಹಾವಕ್ತ್ರಾಸ್ತಥಾಪರೇ ।
ನಕ್ರಮೇಷಾನನಾ ಶೂರಾ ಗೋಽಜಾವಿಮಹಿಷಾನನಾಃ ।। ೧-೪೧-೯೪
ಗೋಧಾಶಲ್ಯಕವಕ್ತ್ರಾಶ್ಚ ಕ್ರೌಂಚವಕ್ತ್ರಾಶ್ಚ ದಾನವಾಃ ।
ಗರುಡಾನನಾಃ ಖಡ್ಗಮುಖಾ ಮಯೂರವದನಾಸ್ತಥಾ ।। ೧-೪೧-೯೫
ಗಜೇಂದ್ರಚರ್ಮವಸನಾಸ್ತಥಾ ಕೃಷ್ಣಾಜಿನಾಂಬರಾಃ ।
ಚೀರಸಂವೃತದೇಹಾಶ್ಚ ತಥಾ ವಲ್ಕಲವಾಸಸಃ ।
ಉಷ್ಣೀಷಿಣೋ ಮುಕುಟಿನಸ್ತಥಾ ಕುಂಡಲಿನೋಽಸುರಾಃ ।। ೧-೪೧-೯೬
ಕಿರೀಟಿನೋ ಲಂಬಶಿಖಾಃ ಕಂಬುಗ್ರೀವಾಃ ಸುವರ್ಚಸಃ ।
ನಾನಾವೇಷಧರಾ ದೈತ್ಯಾ ನಾನಾಮಾಲ್ಯಾನುಲೇಪನಾಃ ।। ೧-೪೧-೯೭
ಸ್ವಾನ್ಯಾಯುಧಾನಿ ಸಂಗೃಹ್ಯ ಪ್ರದೀಪ್ತಾನ್ಯತಿತೇಜಸಾ ।
ಕ್ರಮಮಾಣಂ ಹೃಷೀಕೇಶಮುಪಾವರ್ತಂತ ಸರ್ವಶಃ ।। ೧-೪೧-೯೮

ವಿಪ್ರಚಿತ್ತಿ, ಶಿಬಿ, ಶಂಕುರಯ, ಮತ್ತು ಶಂಕು, ಅಯಃಶಿರ ಮತ್ತು ಶಂಖಶಿರ, ಪರಾಕ್ರಮೀ ಹಯಗ್ರೀವ, ವೇಗವಾನ್, ಕೇತುಮಾನ್, ಉಗ್ರ, ಮಹಾಸುರ ಸೋಮವ್ಯಗ್ರ, ಪುಷ್ಕರ ಮತ್ತು ಪುಷ್ಕಲ, ಮತ್ತು ಹಾಗೆಯೇ ಮಹಾರಥಿ ವೇಪನ, ಬೃಹತ್ಕೀರ್ತಿ, ಮಹಾಜಿಹ್ವ ಹಾಗೂ ಅಶ್ವಸಹಿತ ಅಶ್ವಪತಿ, ಪ್ರಹ್ರಾದ, ಅಶ್ವಶಿರಾ, ಕುಂಭ, ಸಂಹ್ರಾದ, ಗಗನಪ್ರಿಯ, ಅನುಹ್ರಾದ, ಹರಿ ಮತ್ತು ಹರ, ವರಾಹ, ಶಂಕರ, ರುಜ, ಶರಭ ಮತ್ತು ಶಲಭ, ಕುಪ್ನ, ಕೋಪನ, ಕ್ರಥ, ಬ್ರಹತ್ಕೀರ್ತಿ, ಮಹಾಜಿಹ್ವ, ಶಂಕುಕರ್ಣ, ಮಹಾಸ್ವನ, ದೀರ್ಘಜಿಹ್ವ, ಅರ್ಕನಯನ, ಮೃದುಚಾಪ, ಮೃದುಪ್ರಿಯ, ವಾಯು, ಯವಿಷ್ಠ, ನಮುಚಿ, ಶಂಬರ, ಮಹಾಕಾಯ ವಿಜ್ವರ, ಇಂದ್ರಹಂತಾ, ಕ್ರೋಧಹಂತಾ ಮತ್ತು ಕ್ರೋಧವರ್ಧನ, ಕಾಲಕ ಮತ್ತು ಕಾಲಕೇಯ, ವೃತ್ರ, ಕ್ರೋಧ, ವಿರೋಚನ, ಗರಿಷ್ಠ ಮತ್ತು ವರಿಷ್ಠ, ಪ್ರಲಂಬ ಮತ್ತು ನರಕರೆಂಬ ಇಬ್ಬರು ದೈತ್ಯರು, ಇಂದ್ರತಾಪನ ಮತ್ತು ವಾತಾಪಿ, ಬಲಾಭಿಮಾನೀ ಕೇತುಮಾನ್, ಅಸಿಲೋಮ ಮತ್ತು ಪುಲೋಮ, ವಾಕ್ಕಲ, ಪ್ರಮದ, ಮದ, ಖಸ್ರುಮ, ಕಾಲವದನ ಕರಾಲ, ಕೌಶಿಕ, ಶರ, ಏಕಾಕ್ಷ, ಚಂದ್ರಹಾ, ರಾಹು, ಸಂಹ್ರಾದ, ನೂನರ, ಮತ್ತು ಖನ ಮೊದಲಾದ ದೈತ್ಯರು ನಾಲ್ಕೂಕಡೆಗಳಿಂದ ಭಗವಂತನನ್ನು ಸುತ್ತುವರೆದಿದ್ದರು. ಅವರ ಕೈಗಳಲ್ಲಿ ಶತಘ್ನೀ-ಚಕ್ರಗಳಿದ್ದವು. ಪರಿಘಗಳನ್ನು ಹಿಡಿದಿದ್ದರು. ಮಹಾಶಿಲೆಗಳನ್ನು ಪ್ರಹರಿಸುತ್ತಿದ್ದರು. ದಾನವರು ಶೂಲಹಸ್ತರೂ ಆಗಿದ್ದರು. ಅಶ್ವಯಂತ್ರಾಯುಧಗಲ್ಣನ್ನೂ ಭಿಂಡಿಪಾಲಾಯುಧಗಳನ್ನೂ ಹಿಡಿದಿದ್ದರು. ಶೂಲ-ಉಲೂಖಲಗಳನ್ನು ಹಿಡಿದಿದ್ದರು. ಪರಶುಗಳನ್ನು ಧರಿಸಿದ್ದರು. ಪಾಶ-ಮುದ್ಗರಗಳನ್ನು ಹಿಡಿದಿದ್ದರು. ಮುದ್ಗಲಪಾಣಿಗಳಾಗಿದ್ದರು. ನಾನಾವೇಷಗಳಲ್ಲಿದ್ದ ಅವರು ಮಹಾವೇಗದಿಂದ ನಾನಾ ಆಯುಧಗಳನ್ನು ಪ್ರಹರಿಸುತ್ತಿದ್ದರು. ಅವರಲ್ಲಿ ಆಮೆ-ಕೋಳಿಗಳ ಮುಖವುಳ್ಳವರು, ಮೊಲ-ಗೂಬೆಗಳ ಮುಖವುಳ್ಳವರು, ಕತ್ತೆ-ಒಂಟೆಗಳ ಮುಖದವರು, ವರಾಹವದನರು, ಭಯಂಕರ ಮೊಸಳೆಗಳ ಮುಖದವರು, ನರಿಯ ಮುಖದ ದಾನವರು, ಇಲಿ-ಕಪ್ಪೆಗಳ ಮುಖದವರು, ಘೋರತೋಳಗಳ ಮುಖದವರು, ಬೆಕ್ಕು-ಆನೆಗಳ ಮುಖದವರು ಇದ್ದವು. ಇವಕ್ಕಿಂತಲೂ ದೊಡ್ಡ ಮುಖವುಳ್ಳವರಿದ್ದರು. ಆ ದಾನವರಲ್ಲಿ ನಕ್ರ-ಮೇಷಗಳ ಮುಖವುಳ್ಳ ಶೂರರು, ಹೋರಿ, ಕುರಿ, ಮೇಕೆ, ಎಮ್ಮೆಗಳ ಮುಖದವರು, ಗೋಧಾನ-ಶಲ್ಯಕ ಮುಖದವರು, ಕ್ರೌಂಚದ ಮುಖದವರು, ಗರುಡಾನನರು, ಖಡ್ಗದಂತೆ ಮುಖವವರು, ಮತ್ತು ನವಿಲಿನ ಮುಖದವರು ಸೇರಿದ್ದರು. ಕೆಲವರು ಗಜೇಂದ್ರಚರ್ಮವನ್ನು ಧರಿಸಿದ್ದರು. ಕೃಷ್ಣಾಜಿನಗಳನ್ನು ಧರಿಸಿದ್ದರು. ಕೆಲವರ ದೇಹವನ್ನು ಚೀರವಸ್ತ್ರವು ಮುಚ್ಚಿತ್ತು. ಕೆಲವರು ವಲ್ಕಲಗಳನ್ನು ಉಟ್ಟಿದ್ದರು. ಕೆಲವರು ಮುಂಡಾಸುಗಳನ್ನು ಧರಿಸಿದ್ದರು. ಕೆಲವರು ಮುಕುಟಿಗಳಾಗಿದ್ದರು. ಆ ಅಸುರರು ಕುಂಡಲಿಗಳೂ, ಕಿರೀಟಿಗಳೂ, ಉದ್ದಶಿಖೆಗಳಿದ್ದವರೂ, ಸುವರ್ಚಸ ಕಂಬುಗ್ರೀವರೂ ಆಗಿದ್ದರು. ಈ ರೀತಿ ನಾನಾ ವೇಷಗಳನ್ನು ಧರಿಸಿದ್ದ ದೈತ್ಯರು ನಾನಾಮಾಲ್ಯಾನುಲೇಪನರಾಗಿ ತಮ್ಮ ತಮ್ಮ ಆಯುಧಗಳನ್ನು ಹಿಡಿದು ಉರಿಯುತ್ತಿರುವ ಅತಿ ತೇಜಸ್ಸಿನಿಂದ ಮುಂದುವರೆಯುತ್ತಿದ್ದ ಹೃಷೀಕೇಶನನ್ನು ಎಲ್ಲಕಡೆಗಳಿಂದ ಸುತ್ತುವರೆದಿದ್ದರು.

ಪ್ರಮಥ್ಯ ಸರ್ವಾಂದೈತೇಯಾನ್ಪಾದಹಸ್ತತಲೈಃ ಪ್ರಭುಃ ।
ರೂಪಂ ಕೃತ್ವಾ ಮಹಾಭೀಮಂ ಜಹಾರಾಶು ಸ ಮೇದಿನೀಮ್ ।। ೧-೪೧-೯೯

ಪ್ರಭುವು ಮಹಾಭೀಮ ರೂಪವನ್ನು ಮಾಡಿಕೊಂಡು ಸರ್ವ ದೈತ್ಯರನ್ನೂ ಕೇವಲ ಹಸ್ತತಲದಿಂದಲೇ ಮಥಿಸಿ ಈ ಮೇದಿನಿಯನ್ನು ಅವರಿಂದ ಕಸಿದುಕೊಂಡನು.

ತಸ್ಯ ವಿಕ್ರಮತೋ ಭೂಮಿಂ ಚಂದ್ರಾದಿತ್ಯೌ ಸ್ತನಾಂತರೇ ।
ನಭಃ ಪ್ರಕ್ರಮಮಾಣಸ್ಯ ನಾಭ್ಯಾಂ ಕಿಲ ಸಮಾಸ್ಥಿತೌ ।। ೧-೪೧-೧೦೦

ಅವನು ಭೂಮಿಯಲ್ಲಿ ವಿಕ್ರಮಿಸುತ್ತಿದ್ದಾಗ ಅವನ ಸ್ತನಾಂತರದಲ್ಲಿದ್ದ ಚಂದ್ರಾದಿತ್ಯರು ಆಕಾಶದಲ್ಲಿ ಬೆಳೆಯುತ್ತಿದ್ದ ಅವನ ನಾಭಿಭಾಗಕ್ಕೆ ಬಂದಿರಲಿಲ್ಲವೇ?

ಪರಂ ಪ್ರಕ್ರಮಮಾಣಸ್ಯ ಜಾನುದೇಶೇ ಸ್ಥಿತಾವುಭೌ ।
ವಿಷ್ಣೋರತುಲವೀರ್ಯಸ್ಯ ವದಂತ್ಯೇವಂ ದ್ವಿಜಾತಯಃ ।। ೧-೪೧-೧೦೧

ಈ ಅತುಲವೀರ್ಯ ವಿಷ್ಣುವು ಆಕಾಶಕ್ಕೂ ಮೇಲಿನ ಲೋಕಗಳನ್ನು2 ಅಳೆಯುವ ಸಮಯದಲ್ಲಿ ಅವರಿಬ್ಬರೂ ಅವನ ಹಿಮ್ಮಡಿಯವರೆಗೆ ಬಂದಿದ್ದರೆಂದು ಬ್ರಾಹ್ಮಣರು ಹೇಳುತ್ತಾರೆ.

ಹೃತ್ವಾ ಸ ಪೃಥಿವೀಂ ಕೃತ್ಸ್ನಾಂ ಜಿತ್ವಾ ಚಾಸುರಪುಂಗವಾನ್ ।
ದದೌ ಶಕ್ರಾಯ ತ್ರಿದಿವಂ ವಿಷ್ಣುರ್ಬಲವತಾಂ ವರಃ ।। ೧-೪೧-೧೦೨

ಬಲವಂತರಲ್ಲಿ ಶ್ರೇಷ್ಠ ವಿಷ್ಣುವು ಹೀಗೆ ಅಸುರಪುಂಗವರನ್ನು ಗೆದ್ದು ಈ ಪೃಥ್ವಿಯೆಲ್ಲವನ್ನೂ ಅವರಿಂದ ಅಪಹರಿಸಿ ತ್ರಿದಿವವನ್ನು ಶಕ್ರನಿಗೆ ಕೊಟ್ಟನು.

ಏಷ ತೇ ವಾಮನೋ ನಾಮ ಪ್ರಾದುರ್ಭಾವೋ ಮಹಾತ್ಮನಃ ।
ವೇದವಿದ್ಭಿರ್ದ್ವಿಜೈರೇವಂ ಕಥ್ಯತೇ ವೈಷ್ಣವಂ ಯಶಃ ।। ೧-೪೧-೧೦೩

ಇದು ಮಹಾತ್ಮನು ವಾಮನನೆಂಬ ಹೆಸರಿನಿಂದ ಅವತರಿಸಿದ್ದುದನ್ನು ವಿಷ್ಣುವಿನ ಯಶಸ್ಸೆಂದು ವೇದವಿದು ದ್ವಿಜರು ಹೇಳುತ್ತಾರೆ.

ಭೂಯೋ ಭೂತಾತ್ಮನೋ ವಿಷ್ಣೋಃ ಪ್ರಾದುರ್ಭಾವೋ ಮಹಾತ್ಮನಃ ।
ದತ್ತಾತ್ರೇಯ ಇತಿ ಖ್ಯಾತಃ ಕ್ಷಮಯಾ ಪರಯಾ ಯುತಃ ।। ೧-೪೧-೧೦೪

ಆ ಭೂತಾತ್ಮಾ ವಿಷ್ಣು ಮಹಾತ್ಮನ ಇನ್ನೂ ಅನೇಕ ಅವತಾರಗಳು ಆದವು. ದತ್ತಾತ್ರೇಯನೆಂದು ಖ್ಯಾತನಾದವನು ಪರಮ ಕ್ಷಮೆಯಿಂದ ಕೂಡಿದ್ದನು.

ತೇನ ನಷ್ಟೇಷು ವೇದೇಷು ಪ್ರಕ್ರಿಯಾಸು ಮಖೇಷು ಚ ।
ಚಾತುರ್ವರ್ಣ್ಯೇ ತು ಸಂಕೀರ್ಣೇ ಧರ್ಮೇ ಶಿಥಿಲತಾಂ ಗತೇ ।। ೧-೪೧-೧೦೫
ಅಭಿವರ್ಧತಿ ಚಾಧರ್ಮೇ ಸತ್ಯೇ ನಷ್ಟೇಽನೃತೇ ಸ್ಥಿತೇ ।
ಪ್ರಜಾಸು ಶೀರ್ಯಮಾಣಾಸು ಧರ್ಮೇ ಚಾಕುಲತಾಂ ಗತೇ ।। ೧-೪೧-೧೦೬
ಸಹಯಜ್ಞಕ್ರಿಯಾ ವೇದಾಃ ಪ್ರತ್ಯಾನೀತಾ ಹಿ ತೇನ ವೈ ।
ಚಾತುರ್ವರ್ಣ್ಯಮಸಂಕೀರ್ಣಂ ಕೃತಂ ತೇನ ಮಹಾತ್ಮನಾ ।। ೧-೪೧-೧೦೭

ವೇದಗಳಲ್ಲಿದ್ದ ಯಜ್ಞಪ್ರಕ್ರಿಯೆಗಳು ನಷ್ಟವಾಗಿರಲು, ಚಾತುರ್ವರ್ಣ್ಯಗಳು ಸಂಕೀರ್ಣಗೊಂಡು ಧರ್ಮವು ಶಿಥಿಲ ಗತಿಯನ್ನು ಹೊಂದಿರಲು, ಅಧರ್ಮವು ಹೆಚ್ಚಿತ್ತಿರುವಾಗ, ಸತ್ಯವು ನಷ್ಟವಾದಾಗ, ಅಸತ್ಯವೇ ನಡೆಯುತ್ತಿರುವಾಗ, ಪ್ರಜೆಗಳು ಕ್ಷೀಣರಾಗುತ್ತಿರುವಾಗ ಮತ್ತು ಧರ್ಮಸಂಕರವು ನಡೆಯುತ್ತಿದ್ದಾಗ ಆ ಮಹಾತ್ಮನು ಯಜ್ಞಕ್ರಿಯೆಗಳೊಂದಿಗೆ ವೇದಗಳನ್ನು ಪುನಃ ಸ್ಥಾಪಿಸಿ ಚಾತುರ್ವರ್ಣ್ಯಗಳನ್ನು ಪ್ರತ್ಯೇಕಿಸಿದನು.

ತೇನ ಹೈಹಯರಾಜಸ್ಯ ಕಾರ್ತವೀರ್ಯಸ್ಯ ಧೀಮತಃ ।
ವರದೇನ ವರೋ ದತ್ತೋ ದತ್ತಾತ್ರೇಯೇಣ ಧೀಮತಾ ।। ೧-೪೧-೧೦೮

ಧೀಮತ ವರದ ದತ್ತಾತ್ರೇಯನು ಹೈಹಯರಾಜ ಧೀಮತ ಕಾರ್ತವೀರ್ಯನಿಗೆ ವರವನ್ನು ನೀಡಿದನು.

ಏತದ್ಬಾಹೂದ್ವಯಂ ಯತ್ತೇ ಮೃಧೇ ಮಮ ಕೃತೇಽನಘ ।
ಶತಾನಿ ದಶ ಬಾಹೂನಾಂ ಭವಿಷ್ಯಂತಿ ನ ಸಂಶಯಃ ।। ೧-೧-೧೦೯

“ಅನಘ! ನಿನ್ನ ಈ ಎರಡು ಬಾಹುಗಳು ಯುದ್ಧದಲ್ಲಿ ಸಹಸ್ರ ಬಾಹುಗಳಾಗುತ್ತವೆ ಎಂದು ಮಾಡುತ್ತೇನೆ. ಅದರಲ್ಲಿ ಸಂಶಯವಿಲ್ಲ.

ಪಾಲಯಿಷ್ಯಸಿ ಕೃತ್ಸ್ನಾಂ ಚ ವಸುಧಾಂ ವಸುಧಾಧಿಪ ।
ದುರ್ನಿರೀಕ್ಷ್ಯೋಽರಿವೃಂದಾನಾಂ ಧರ್ಮಜ್ಞಶ್ಚ ಭವಿಷ್ಯಸಿ ।। ೧-೪೧-೧೧೦

ವಸುಧಾಧಿಪ! ಇಡೀ ವಸುಧೆಯನ್ನು ಪಾಲಿಸುತ್ತೀಯೆ. ಅರಿವೃಂದಗಳಿಗೆ ದುರ್ನಿರೀಕ್ಷನಾಗುತ್ತೀಯೆ. ಧರ್ಮಜ್ಞನೂ ಆಗುತ್ತೀಯೆ.

ಏಷ ತೇ ವೈಷ್ಣವಃ ಶ್ರೀಮಾನ್ಪ್ರಾದುರ್ಭಾವೋಽದ್ಭುತಃ ಶುಭಃ ।
ಕಥಿತೋ ವೈ ಮಹಾರಾಜ ಯಥಾಶ್ರುತಮರಿಂದಮ ।

ಮಹಾರಾಜ! ಅರಿಂದಮ! ಇದು ಶ್ರುತಿಗಳಲ್ಲಿರುವ ಆ ಶ್ರೀಮಾನ್ ವಿಷ್ಣುವಿನ ಶುಭವಾದ ಅದ್ಭುತ ಅವತಾರದ ಕಥೆ.

ಭೂಯಶ್ಚ ಜಾಮದಗ್ನ್ಯೋಽಯಂ ಪ್ರಾದುರ್ಭಾವೋ ಮಹಾತ್ಮನಃ ।। ೧-೪೧-೧೧೧
ಯತ್ರ ಬಾಹುಸಹಸ್ರೇಣ ವಿಸ್ಮಿತಂ ದುರ್ಜಯಂ ರಣೇ ।
ರಾಮೋಽರ್ಜುನಮನೀಕಸ್ಥಂ ಜಘಾನ ನೃಪತಿಂ ಪ್ರಭುಃ ।। ೧-೪೧-೧೧೨

ಆ ಮಹಾತ್ಮನ ಇನ್ನೊಂದು ಅವತಾರವು ಜಾಮದಗ್ನಿಯದು. ಅದರಲ್ಲಿ ಪ್ರಭು ರಾಮನು ಸಹಸ್ರಬಾಹುಗಳಿಂದ ವಿಸ್ಮಿತನಾಗಿದ್ದ ರಣದಲ್ಲಿ ದುರ್ಜಯನಾಗಿದ್ದ ನೃಪತಿ ಅರ್ಜುನನನ್ನು ಸಂಹರಿಸಿದನು.

ರಥಸ್ಥಂ ಪಾರ್ಥಿವಂ ರಾಮಃ ಪಾತಯಿತ್ವಾರ್ಜುನಂ ಯುಧಿ ।
ಧರ್ಷಯಿತ್ವಾ ಯಥಾಕಾಮಂ ಕ್ರೋಶಮಾನಂ ಚ ಮೇಘವತ್ ।। ೧-೪೧-೧೧೩
ಕೃತ್ಸ್ನಂ ಬಾಹುಸಹಸ್ರಂ ಚ ಚಿಚ್ಛೇದ ಭೃಗುನಂದನಃ ।
ಪರಶ್ವಧೇನ ದೀಪ್ತೇನ ಜ್ಞಾತಿಭಿಃ ಸಹಿತಸ್ಯ ವೈ ।। ೧-೪೧-೧೧೪

ಆಗ ಭೃಗುನಂದನ ರಾಮನು ಯುದ್ಧದಲ್ಲಿ ಪಾರ್ಥಿವ ಅರ್ಜುನನನ್ನು ಕೆಳಗೆ ಬೀಳಿಸಿ ಮೇಘದಂತೆ ಬೇಕಾದಷ್ಟು ಕೂಗುತ್ತಿದ್ದ ಅವನನ್ನು ಹಿಡಿದು ಉರಿಯುತ್ತಿದ್ದ ಪರಶ್ವಾಯುಧದಿಂದ ಬಾಂಧವರೊಂದಿಗೆ ಅವನ ಸಹಸ್ರಬಾಹುಗಳೆಲ್ಲವನ್ನೂ ಕಡಿದನು.

ಕೀರ್ಣಾ ಕ್ಷತ್ರಿಯಕೋಟೀಭಿರ್ಮೇರುಮಂದರಭೂಷಣಾ ।
ತ್ರಿಃಸಪ್ತಕೃತ್ವಃ ಪೃಥಿವೀ ತೇನ ನಿಃಕ್ಷತ್ರಿಯಾ ಕೃತಾ ।। ೧-೪೧-೧೧೫

ಅವನು ಮೇರು-ಮಂದರಗಳಿಂದ ವಿಭೂಷಿತವಾದ ಸಮಸ್ತ ಪೃಥ್ವಿಯಲ್ಲಿ ಕೋಟಿ ಕ್ಷತ್ರಿಯರ ಶವಗಳನ್ನು ಹರಡಿದನು ಮತ್ತು ಇಪ್ಪತ್ತೊಂದು ಬಾರಿ ಭೂಲೋಕದಲ್ಲಿ ಕ್ಷತ್ರಿಯರಿಲ್ಲದಂತೆ ಮಾಡಿದನು.

ಕೃತ್ವಾ ನಿಃಕ್ಷತ್ರಿಯಾಂ ಚೈವ ಭಾರ್ಗವಃ ಸುಮಹಾತಪಾಃ ।
ಸರ್ವಪಾಪವಿನಾಶಾಯ ವಾಜಿಮೇಧೇನ ಚೇಷ್ಟವಾನ್ ।। ೧-೪೧-೧೧೬

ಮಹಾತಪಸ್ವೀ ಭಾರ್ಗವನು ನಿಃಕ್ಷತ್ರಿಯರನ್ನಾಗಿ ಮಾಡಿ ಸರ್ವಪಾಪವಿನಾಶಕ್ಕಾಗಿ ಅಶ್ವಮೇಧವನ್ನು ಮಾಡಿದನು.

ತಸ್ಮಿನ್ಯಜ್ಞೇ ಮಹಾದಾನೇ ದಕ್ಷಿಣಾಂ ಭೃಗುನಂದನಃ ।
ಮಾರೀಚಾಯ ದದೌ ಪ್ರೀತಃ ಕಶ್ಯಪಾಯ ವಸುಂಧರಾಮ್ ।। ೧-೪೧-೧೧೭

ಆ ಯಜ್ಞದ ಮಹಾದಾನವಾಗಿ ಭೃಗುನಂದನನು ಪ್ರೀತನಾಗಿ ವಸುಂಧರೆಯನ್ನು ಮಾರೀಚ ಕಶ್ಯಪನಿಗೆ ಕೊಟ್ಟಿದ್ದನು.

ವಾರುಣಾಂಸ್ತುರಗಾಂಶೀಘ್ರಾನ್ರಥಂ ಚ ರಥಿನಾಂ ವರಃ ।
ಹಿರಣ್ಯಮಕ್ಷಯಂ ಧೇನೂರ್ಗಜೇಂದ್ರಾಂಶ್ಚ ಮಹಾಮನಾಃ ।
ದದೌ ತಸ್ಮಿನ್ಮಹಾಯಜ್ಞೇ ವಾಜಿಮೇಧೇ ಮಹಾಯಶಾಃ ।। ೧-೪೧-೧೧೮

ಮಹಾಯಶಸ್ವೀ ರಥಿಗಳಲ್ಲಿ ಶ್ರೇಷ್ಠ ಮಹಾಮನಸ್ವೀ ಪರಶುರಾಮನು ಆ ಮಹಾಯಜ್ಞ ಅಶ್ವಮೇಧ ಯಜ್ಞದಲ್ಲಿ ವರುಣನಲಿದ್ದ ಶೀಘ್ರಗಾಮೀ ಕುದುರೆಗಳು, ರಥ, ಅಕ್ಷಯ ಹಿರಣ್ಯ, ಗೋವು ಮತ್ತು ಗಜರಾರನ್ನು ದಾನವಾಗಿ ಕೊಟ್ಟಿದ್ದನು.

ಅದ್ಯಾಪಿ ಚ ಹಿತಾರ್ಥಾಯ ಲೋಕಾನಾಂ ಭೃಗುನಂದನಃ ।
ಚರಮಾಣಸ್ತಪೋ ದೀಪ್ತಂ ಜಾಮದಗ್ನ್ಯಃ ಪುನಃ ಪುನಃ ।
ತಿಷ್ಠತೇ ದೇವವದ್ಧೀಮಾನ್ಮಹೇಂದ್ರೇ ಪರ್ವತೋತ್ತಮೇ ।। ೧-೪೧-೧೧೯

ಲೋಕಗಳ ಹಿತಾರ್ಥಕ್ಕಾಗಿ ಈಗಲೂ ಕೂಡ ಭೃಗುನಂದನ ಧೀಮಾನ್ ಜಾಮದಗ್ನ್ಯನು ಪರ್ವತಗಳಲ್ಲಿ ಉತ್ತಮ ಮಹೇಂದ್ರದಲ್ಲಿ ದೇವನಂತೆ ದೀಪ್ತ ತಪಸ್ಸನ್ನು ಮಾಡುತ್ತಾ ಇದ್ದಾನೆ.

ಏಷ ವಿಷ್ಣೋಃ ಸುರೇಶಸ್ಯ ಶಾಶ್ವತಸ್ಯಾವ್ಯಯಸ್ಯ ಚ ।
ಜಾಮದಗ್ನ್ಯ ಇತಿ ಖ್ಯಾತಃ ಪ್ರಾದುರ್ಭಾವೋ ಮಹಾತ್ಮನಃ ।। ೧-೪೧-೧೨೦

ಇದು ಸುರೇಶ, ಶಾಶ್ವತ, ಅವ್ಯಯ ಮಹಾತ್ಮ ವಿಷ್ಣುವಿನ ಜಾಮದಗ್ನ್ಯ ಎಂದು ಖ್ಯಾತವಾದ ಅವತಾರ.

ಚತುರ್ವಿಂಶೇ ಯುಗೇ ಚಾಪಿ ವಿಶ್ವಾಮಿತ್ರಪುರಃಸರಃ ।
ರಾಜ್ಞೋ ದಶರಥಸ್ಯಾಥ ಪುತ್ರಃ ಪದ್ಮಾಯತೇಕ್ಷಣಃ ।। ೧-೪೧-೧೨೧
ಕೃತ್ವಾಽಽತ್ಮಾನಂ ಮಹಾಬಾಹುಶ್ಚತುರ್ಧಾ ಪ್ರಭುರೀಶ್ವರಃ ।
ಲೋಕೇ ರಾಮ ಇತಿ ಖ್ಯಾತಸ್ತೇಜಸಾ ಭಾಸ್ಕರೋಪಮಃ ।। ೧-೪೧-೧೨೨

ಇಪ್ಪತ್ನಾಲ್ಕನೇ ಕೃತಯುಗದಲ್ಲಿ ಕೂಡ ಮಹಾಬಾಹು ಪ್ರಭು ಈಶ್ವರನು ತನ್ನನ್ನು ನಾಲ್ಕು ಭಾಗಳನ್ನಾಗಿ ಮಾಡಿಕೊಂಡು ದಶರಥನ ಪದ್ಮಾಯತೇಕ್ಷಣ ಪುತ್ರನಾಗಿ. ವಿಶ್ವಾಮಿತ್ರನನ್ನು ಮುಂದಿಟ್ಟುಕೊಂಡು, ರಾಮನೆಂದು ಭಾಸ್ಕರೋಪಮ ತೇಜಸ್ಸಿನಿಂದ ಖ್ಯಾತನಾದನು.

ಪ್ರಸಾದನಾರ್ಥಂ ಲೋಕಸ್ಯ ರಕ್ಷಸಾಂ ನಿಧನಾಯ ಚ ।
ಧರ್ಮಸ್ಯ ಚ ವಿವೃದ್ಧ್ಯರ್ಥಂ ಜಜ್ಞೇ ತತ್ರ ಮಹಾಯಶಾಃ ।। ೧-೪೧-೧೨೩

ರಾಕ್ಷಸರ ನಿಧನದಿಂದ ಲೋಕವನ್ನು ಪ್ರಸನ್ನವಾಗಿಸಲು ಮತ್ತು ಧರ್ಮದ ವೃದ್ಧಿಗಾಗಿ ಆ ಮಹಾಯಶನು ಅಲ್ಲಿ ಜನಿಸಿದನು.

ತಮಪ್ಯಾಹುರ್ಮನುಷ್ಯೇಂದ್ರಂ ಸರ್ವಭೂತಪತೇಸ್ತನುಮ್ ।
ಯಸ್ಮೈ ದತ್ತಾನಿ ಚಾಸ್ತ್ರಾಣಿ ವಿಶ್ವಾಮಿತ್ರೇಣ ಧೀಮತಾ ।। ೧-೪೧-೧೨೪
ವಧಾರ್ಥಂ ದೇವಶತ್ರೂಣಾಂ ದುರ್ಧರಾಣಿ ಸುರೈರಪಿ ।
ಯಜ್ಞವಿಘ್ನಕರೋ ಯೇನ ಮುನೀನಾಂ ಭಾವಿತಾತ್ಮನಾಮ್ ।। ೧-೪೧-೧೨೫

ಆ ಮನುಷ್ಯೇಂದ್ರನು ಸರ್ವಭೂತಪತಿಯ ತನುವೆಂದು ಹೇಳುತ್ತಾರೆ. ಭಾವಿತಾತ್ಮ ಮುನಿಗಳ ಯಜ್ಞಗಳಿಗೆ ವಿಘ್ನವನ್ನುಂಟುಮಾಡುತ್ತಿದ್ದ, ಸುರರಿಂದಲೂ ಸೋಲಿಸಲಸಾಧ್ಯರಾಗಿದ್ದ ದೇವಶತ್ರುಗಳ ವಧಾರ್ಥವಾಗಿ ಧೀಮತ ವಿಶ್ವಾಮಿತ್ರನು ಅವನಿಗೆ ಅಸ್ತ್ರಗಳನ್ನು ನೀಡಿದನು.

ಮಾರೀಚಶ್ಚ ಸುಬಾಹುಶ್ಚ ಬಲೇನ ಬಲಿನಾಂ ವರೌ ।
ನಿಹತೌ ಚ ನಿರಾಶೌ ಚ ಕೃತೌ ತೇನ ಮಹಾತ್ಮನಾ ।। ೧-೪೧-೧೨೬

ಆ ಮಹಾತ್ಮನು ಬಲಿಗಳಲ್ಲಿ ಶ್ರೇಷ್ಠರಾದ ಮಾರೀಚ ಮತ್ತು ಸುಬಾಹು ಇಬ್ಬರನ್ನು ಬಲದಿಂದ ನಿರಾಶರನ್ನಾಗಿ ಮಾಡಿ ಸಂಹರಿಸಿದ್ದನು.

ವರ್ತಮಾನೇ ಮಖೇ ಯೇನ ಜನಕಸ್ಯ ಮಹಾತ್ಮನಃ ।
ಭಗ್ನಂ ಮಾಹೇಶ್ವರಂ ಚಾಪಂ ಕ್ರೀಡತಾ ಲೀಲಯಾ ಪುರಾ ।। ೧-೪೧-೧೨೭

ಹಿಂದೆ ಮಹಾತ್ಮ ಜನಕನ ಮಖವು ನಡೆಯುತ್ತಿರಲು ಲೀಲೆಯಿಂದಲೋ ಎನ್ನುವಂತೆ ಮಹೇಶ್ವರನ ಬಿಲ್ಲನ್ನು ಮುರಿದಿದ್ದನು.

ಯಃ ಸಮಾಃ ಸರ್ವಧರ್ಮಜ್ಞಶ್ಚತುರ್ದಶ ವನೇಽವಸತ್ ।
ಲಕ್ಷ್ಮಣಾನುಚರೋ ರಾಮಃ ಸರ್ವಭೂತಹಿತೇ ರತಃ ।। ೧-೪೧-೧೨೮

ಸರ್ವಭೂತಹಿತರತನಾದ ಮತ್ತು ಸರ್ವಧರ್ಮಗಳನ್ನು ತಿಳಿದಿದ್ದ ರಾಮನು ಹದಿನಾಲ್ಕು ವರ್ಷಗಳು ವನದಲ್ಲಿ ವಾಸಿಸಿದನು. ಲಕ್ಷ್ಮಣನು ಅವನ ಅನುಚರನಾಗಿದ್ದನು.

ರೂಪಿಣೀ ಯಸ್ಯ ಪಾರ್ಶ್ವಸ್ಥಾ ಸೀತೇತಿ ಪ್ರಥಿತಾ ಜನೈಃ ।
ಪೂರ್ವೋಚಿತಾ ತಸ್ಯ ಲಕ್ಷ್ಮೀರ್ಭರ್ತಾರಮನುಗಚ್ಛತಿ ।। ೧-೪೧-೧೨೯

ಅವನ ಭಾರ್ಯೆಯೆಂದು ಮೊದಲಿನಿಂದಲೇ ನಿಶ್ಚಿತಳಾಗಿದ್ದ ಅವನ ಪಾರ್ಶ್ವಸ್ಥೆ ಲಕ್ಷ್ಮಿಯು ಸೀತೆಯೆಂದು ಜನರಲ್ಲಿ ಪ್ರಥಿತಳಾಗಿ, ಅವನನ್ನು ಅನುಸರಿಸಿ ಹೋದಳು.

ಚತುರ್ದಶ ತಪಸ್ತಪ್ತ್ವಾ ವನೇ ವರ್ಷಾಣಿ ರಾಘವಃ ।
ಜನಸ್ಥಾನೇ ವಸನ್ಕಾರ್ಯಂ ತ್ರಿದಶಾನಾಂ ಚಕಾರ ಹ ।
ಸೀತಾಯಾಃ ಪದಮನ್ವಿಚ್ಛನ್ಲಕ್ಷ್ಮಣಾನುಚರೋ ವಿಭುಃ ।। ೧-೪೧-೧೩೦

ಹದಿನಾಲ್ಕು ವರ್ಷಗಳು ವನದಲ್ಲಿ ತಪಸ್ಸನ್ನು ತಪಿಸಿ ಜನಸ್ಥಾನದಲ್ಲಿ ವಾಸಿಸುತ್ತಿರುವಾಗ, ಸೀತೆಯ ಪದವನ್ನು ಹುಡುಕುತ್ತಾ, ಲಕ್ಷ್ಮಣನೊಂದಿಗೆ ತಿರುಗುತ್ತಾ ವಿಭು ರಾಘವನು ತ್ರಿದಶರ ಕಾರ್ಯವನ್ನು ನಡೆಸಿದನು.

ವಿರಾಧಂ ಚ ಕಬಂಧಂ ಚ ರಾಕ್ಷಸೌ ಭೀಮವಿಕ್ರಮೌ ।
ಜಘಾನ ಪುರುಷವ್ಯಾಘ್ರೌ ಗಂಧರ್ವೌ ಶಾಪವೀಕ್ಷಿತೌ ।। ೧-೪೧-೧೩೧

ಆ ಭೀಮವಿಕ್ರಮಿ ಪುರುಷವ್ಯಾಘ್ರರು ವಿರಾಧ ಮತ್ತು ಕಬಂಧರೆಂಬ ರಾಕ್ಷಸರನ್ನು ಕೊಂದು ಗಂಧರ್ವರನ್ನು ಶಾಪವಿಮೋಚನಗೊಳಿಸಿದರು.

ಹುತಾಶನಾರ್ಕೇಂದುತಡಿದ್ಘನಾಭೈಃ ಪ್ರತಪ್ತಜಾಂಬೂನದಚಿತ್ರಪುಂಖೈಃ ।
ಮಹೇಂದ್ರವಜ್ರಾಶನಿತುಲ್ಯಸಾರೈಃ ಶರೈಃ ಶರೀರೇಣ ವಿಯೋಜಿತೌ ಬಲಾತ್ ।। ೧-೪೧-೧೩೨

ಹುತಾಶನ-ಅರ್ಕರ ಪ್ರಭೆಯಿದ್ದ, ಸಿಡಿಲಿನಂತೆ ಪ್ರಕಾಶಿಸುತ್ತಿದ್ದ ಕಾಯಿಸಿದ ಚಿನ್ನದಿಂದ ಮಾಡಿದ್ದ, ವಿಚಿತ್ರ ಪುಂಖಗಳಿದ್ದ, ಸಾರದಲ್ಲಿ ಮಹೇಂದ್ರನ ವಜ್ರದ ಸಿಡಿಲಿನಂತಿದ್ದ ಶರಗಳಿಂದ ಬಲವನ್ನುಪಯೋಗಿಸಿ ಅವರನ್ನು ಶರೀರಗಳಿಂದ ಬೇರ್ಪಡಿಸಿದ್ದನು.

ಸುಗ್ರೀವಸ್ಯ ಕೃತೇ ಯೇನ ವಾನರೇಂದ್ರೋ ಮಹಾಬಲಃ ।
ವಾಲೀ ವಿನಿಹತೋ ಯುದ್ಧೇ ಸುಗ್ರೀವಶ್ಚಾಭಿಷೇಚಿತಃ ।। ೧-೪೧-೧೩೩

ವಾನರೇಂದ್ರ ಸುಗ್ರೀವನಿಗಾಗಿ ಮಹಾಬಲ ರಾಮನು ಯುದ್ಧದಲ್ಲಿ ವಾಲಿಯನ್ನು ಸಂಹರಿಸಿ ರಾಜ್ಯದಲ್ಲಿ ಸುಗ್ರೀವನನ್ನು ಅಭಿಷೇಕಿಸಿದನು.

ದೇವಾಸುರಗಣಾನಾಂ ಹಿ ಯಕ್ಷಗಂಧರ್ವಭೋಗಿನಾಮ್ ।
ಅವಧ್ಯಂ ರಾಕ್ಷಸೇಂದ್ರಂ ತಂ ರಾವಣಂ ಯುಧಿ ದುರ್ಜಯಮ್ ।। ೧-೪೧-೧೩೪
ಯುಕ್ತಂ ರಾಕ್ಷಸಕೋಟೀಭಿರ್ನೀಲಾಂಜನಚಯೋಪಮಮ್ ।
ತ್ರೈಲೋಕ್ಯರಾವಣಂ ಘೋರಂ ರಾವಣಂ ರಾಕ್ಷಸೇಶ್ವರಮ್ ।। ೧-೪೧-೧೩೫
ದುರ್ಜಯಂ ದುರ್ಧರಂ ದೃಪ್ತಂ ಶಾರ್ದೂಲಸಮವಿಕ್ರಮಮ್ ।
ದುರ್ನಿರೀಕ್ಷ್ಯಂ ಸುರಗಣೈರ್ವರದಾನೇನ ದರ್ಪಿತಮ್ ।। ೧-೪೧-೧೩೬
ಜಘಾನ ಸಚಿವೈಃ ಸಾರ್ಧಂ ಸಸೈನ್ಯಂ ರಾವಣಂ ಯುಧಿ ।
ಮಹಾಭ್ರಘನಸಂಕಾಶಂ ಮಹಾಕಾಯಂ ಮಹಾಬಲಮ್ ।। ೧-೪೧-೧೩೭

ದೇವಾಸುರಗಣಗಳಿಗೂ ಯಕ್ಷಗಂಧರ್ವನಾಗಗಳಿಗೂ ಅವಧ್ಯನಾಗಿದ್ದ ಯುದ್ಧದಲ್ಲಿ ದುರ್ಜಯನಾಗಿದ್ದ, ಕೋಟಿ ರಾಕ್ಷಸರಿಂದ ಕೂಡಿದ್ದ, ನೀಲಾಂಜನದಂತಹ ಕಾಯವನ್ನು ಪಡೆದಿದ್ದ, ತ್ರೈಲೋಕ್ಯವನ್ನು ಪೀಡಿಸುತ್ತಿದ್ದ ಘೋರ ರಾಕ್ಷಸೇಶ್ವರ ದುರ್ಜಯ ದುರ್ಧರ ದೃಪ್ತ ಶಾರ್ದೂಲಸಮವಿಕ್ರಮಿ ಸುರಗಣಗಳಿಗೆ ದುರ್ನಿರೀಕ್ಷ್ಯನಾಗಿದ್ದ ವರದಾನದಿಂದ ದರ್ಪಿತನಾಗಿದ್ದ ಘನಮೋಡದಂತಿದ್ದ ಮಹಾಕಾಯ ಮಹಾಬಲ ರಾವಣನನ್ನು ರಾಮನು ಸಚಿವರು ಮತ್ತು ಸೈನ್ಯದೊಂದಿಗೆ ಸಂಹರಿಸಿದನು.

ತಮಾಗಸ್ಕಾರಿಣಂ ಘೋರಂ ಪೌಲಸ್ತ್ಯಮ್ಯುಧಿ ದುರ್ಜಯಮ್ ।
ಸಭ್ರಾತೃಪುತ್ರಸಚಿವಂ ಸಸೈನ್ಯಂ ಕ್ರೂರನಿಶ್ಚಯಮ್ ।। ೧-೪೧-೧೩೮
ರಾವಣಂ ನಿಜಘಾನಾಶು ರಾಮೋ ಭೂತಪತಿಃ ಪುರಾ ।

ಹಿಂದೆ ಭೂತಪತಿ ರಾಮನು ಆ ಪಾಪಿ ಘೋರ ದುರ್ಜಯ ಕೃರನಿಶ್ಚಯ ಪೌಲಸ್ತ್ಯನನ್ನು ಯುದ್ಧದಲ್ಲಿ ಸಹೋದರ-ಪುತ್ರ-ಸಚಿವರೊಂದಿಗೆ ಮತ್ತು ಸೈನ್ಯದೊಂದಿಗೆ ಸಂಹರಿಸಿದನು.

ಮಧೋಶ್ಚ ತನಯೋ ದೃಪ್ತೋ ಲವಣೋ ನಾಮ ದಾನವಃ ।। ೧-೪೧-೧೩೯
ಹತೋ ಮಧುವನೇ ವೀರೋ ವರದೃಪ್ತೋ ಮಹಾಸುರಃ ।
ಸಮರೇ ಯುದ್ಧಶೌಂಡೇನ ತಥ ಚಾನ್ಯೇಽಪಿ ರಾಕ್ಷಸಾಃ ।। ೧-೪೧-೧೪೦

ಮಧುವನದಲ್ಲಿದ್ದ ಮಧುವಿನ ತನಯ ದೃಪ್ತ, ವೀರ, ವರದೃಪ್ತ, ಮಹಾಸುರ ಲವಣ ಎಂಬ ಹೆಸರಿನ ದಾನವನೂ ಮತ್ತು ಅನ್ಯ ರಾಕ್ಷಸರೂ ಸಮರದಲ್ಲಿ ಯುದ್ಧಶೌಂಡ3ನಿಂದ ಹತರಾದರು.

ಏತಾನಿ ಕೃತ್ವಾ ಕರ್ಮಾಣಿ ರಾಮೋ ಧರ್ಮಭೃತಾಂ ವರಃ ।
ದಶಾಶ್ವಮೇಧಾಂಜಾರೂಥ್ಯಾನಾಜಹಾರ ನಿರರ್ಗಲಾನ್ ।। ೧-೪೧-೧೪೧

ಈ ಕರ್ಮಗಳನ್ನು ಮಾಡಿ ಧರ್ಮಭೃತರಲ್ಲಿ ಶ್ರೇಷ್ಠ ರಾಮನು ನಿರರ್ಗಲವಾಗಿ ಹತ್ತು ಅಶ್ವಮೇಧಯಾಗಗಳನ್ನು ಮಾಡಿದನು.

ನಾಶ್ರೂಯಂತಾಶುಭಾ ವಾಚೋ ನಾಕುಲಂ ಮಾರುತೋ ವವೌ ।
ನ ವಿತ್ತಹರಣಂ ತ್ವಾಸೀದ್ರಾಮೇ ರಾಜ್ಯಂ ಪ್ರಶಾಸತಿ ।। ೧-೪೧-೧೪೨

ರಾಮನು ರಾಜ್ಯವಾಳುತ್ತಿದ್ದಾಗ ಅಶುಭ ಮಾತುಗಳು ಕೇಳಿಬರುತ್ತಿರಲಿಲ್ಲ. ಗಾಳಿಯು ಪ್ರಚಂಡವಾಗಿ ಬೀಸುತ್ತಿರಲಿಲ್ಲ. ವಿತ್ತರಹರಣವೂ ನಡೆಯುತ್ತಿರಲಿಲ್ಲ.

ಪರ್ಯದೇವನ್ನ ವಿಧವಾ ನಾನರ್ಥಾಶ್ಚಾಭವಂಸ್ತದಾ ।
ಸರ್ವಮಾಸೀಜ್ಜಗದ್ದಾಂತಮ್ರಾಮೇ ರಾಜ್ಯಂ ಪ್ರಶಾಸತಿ ।। ೧-೪೧-೧೪೩

ರಾಮನು ರಾಜ್ಯವನ್ನಾಳುತ್ತಿದ್ದಾಗ ವಿಧವೆಯರ ಪರಿವೇದನೆಯು ಕೇಳಿಬರುತ್ತಿರಲಿಲ್ಲ, ಅನರ್ಥ ಘಟನೆಗಳು ನಡೆಯುತ್ತಿರಲಿಲ್ಲ ಮತ್ತು ಸರ್ವ ಜಗತ್ತೂ ವಿನೀತವಾಗಿತ್ತು.

ನ ಪ್ರಾಣಿನಾಂ ಭಯಂ ಚಾಪಿ ಜಲಾನಿಲನಿಘಾತಜಮ್ ।
ನ ಚ ಸ್ಮ ವೃದ್ಧಾ ಬಾಲಾನಾಂ ಪ್ರೇತಕಾರ್ಯಾಣಿ ಕುರ್ವತೇ ।। ೧-೪೧-೧೪೪

ಪ್ರಾಣಿಗಳಿಗೆ ನೀರು ಮತ್ತು ಬೆಂಕಿಗಳಿಂದ ಮೃತ್ಯುವಿನ ಭಯವಿರಲಿಲ್ಲ. ವೃದ್ಧರಿಗೆ ಬಾಲಕರ ಪ್ರೇತಕಾರ್ಯಗಳನ್ನು ಮಾಡುವಂತೆ ಆಗುತ್ತಿರಲಿಲ್ಲ.

ಬ್ರಹ್ಮ ಪರ್ಯಚರತ್ಕ್ಷತ್ರಂ ವಿಶಃ ಕ್ಷತ್ರಮನುವ್ರತಾಃ ।
ಶೂದ್ರಾಶ್ಚೈವ ಹಿ ವರ್ಣಾಂಸ್ತ್ರೀಂಶುಶ್ರೂಷಂತ್ಯನಹಂಕೃತಾಃ ।
ನಾರ್ಯೋ ನಾತ್ಯಚರನ್ಭರ್ತೄನ್ಭಾರ್ಯಾಂ ನಾತ್ಯಚರತ್ಪತಿಃ ।। ೧-೪೧-೧೪೫

ಕ್ಷತ್ರಿಯರು ಬ್ರಾಹ್ಮಣರ ಪರಿಚರ್ಯ ಮಾಡುತ್ತಿದ್ದರು. ವೈಶ್ಯರು ಕ್ಷತ್ರಿಯರ ಅನುವ್ರತರಾಗಿದ್ದರು. ಶೂದ್ರರೂ ಕೂಡ, ಅಹಂಕಾರರಹಿತರಾಗಿ, ಈ ಮೂರು ವರ್ಣದವರ ಶುಶ್ರೂಷೆ ಮಾಡುತ್ತಿದ್ದರು. ನಾರಿಯರು ಅತ್ಯಾಚರ ನಡೆಸುತ್ತಿರಲಿಲ್ಲ. ಮತ್ತು ಪತಿಯಂದಿರೂ ಕೂಡ ತಮ್ಮ ಪತ್ನಿಯರನ್ನು ಬಿಟ್ಟು ಇತರ ಸ್ತಿಯರನ್ನು ಆಸಕ್ತಿಯಿಂದ ನೋಡುತ್ತಲೂ ಇರಲಿಲ್ಲ.

ಸರ್ವಮಾಸೀಜ್ಜಗದ್ದಾಂತಂ ನಿರ್ದಸ್ಯುರಭವನ್ಮಹೀ ।
ರಾಮ ಏಕೋಽಭವದ್ಭರ್ತಾ ರಾಮಃ ಪಾಲಯಿತಾಭವತ್ ।। ೧-೪೧-೧೪೬

ಸರ್ವ ಜಗತ್ತೂ ಜಿತೇಂದ್ರಿಯವಾಗಿತ್ತು. ಮಹಿಯಲ್ಲಿ ದಸ್ಯುಗಳೇ ಇರಲಿಲ್ಲ. ರಾಮನೊಬ್ಬನೇ ಏಕಮಾತ್ರ ಭರ್ತಾ ಮತ್ತು ಪಾಲಕನಾಗಿದ್ದನು.

ಆಯುರ್ವರ್ಷಸಹಸ್ರಾಣಿ ತಥಾ ಪುತ್ರಸಹಸ್ರಿಣಃ ।
ಅರೋಗಾಃ ಪ್ರಾಣಿನಶ್ಚಾಸನ್ರಾಮೇ ರಾಜ್ಯಂ ಪ್ರಶಾಸತಿ ।। ೧-೪೧-೧೪೭

ರಾಮನು ರಾಜ್ಯವಾಳುತ್ತಿದ್ದಾಗ ಮನುಷ್ಯನ ಆಯಸ್ಸು ಸಾವಿರಾರು ವರ್ಷಗಳಾಗಿತ್ತು. ಅವರು ಸಹಸ್ರ ಪುತ್ರರ ತಂದೆಯಾಗುತ್ತಿದ್ದರು. ಮತ್ತು ಪ್ರಾಣಿಗಳು ಅರೋಗಿಗಳಾಗಿದ್ದರು.

ದೇವತಾನಾಮೃಷೀಣಾಂ ಚ ಮನುಷ್ಯಾಣಾಂ ಚ ಸರ್ವಶಃ ।
ಪೃಥಿವ್ಯಾಂ ಸಮವಾಯೋಽಭೂದ್ರಾಮೇ ರಾಜ್ಯಂ ಪ್ರಶಾಸತಿ ।। ೧-೪೧-೧೪೮

ರಾಮನು ರಾಜ್ಯವಾಳುತ್ತಿದ್ದಾಗ ಭೂಮಿಯಲ್ಲಿ ಎಲ್ಲೆಡೆ ದೇವತೆಗಳು, ಋಷಿಗಳು ಮತ್ತು ಮನುಷ್ಯರ ಸಮಾಗಮವಾಗುತ್ತಿತ್ತು.

ಗಾಥಾ ಅಪ್ಯತ್ರ ಗಾಯಂತಿ ಯೇ ಪುರಾಣವಿದೋ ಜನಾಃ ।
ರಾಮೇ ನಿಬದ್ಧತತ್ತ್ವಾರ್ಥಾ ಮಾಹಾತ್ಮ್ಯಂ ತಸ್ಯ ಧೀಮತಃ ।। ೧-೪೧-೧೪೯

ರಾಮನೇ ನಿಬದ್ಧ ತರ್ತ್ವಾರ್ಥ ಎಂದು ಸೂಚಿಸುವ ಆ ಧೀಮತನ ಮಹಾತ್ಮ್ಯೆಯನ್ನು ಪುರಾಣವಿದ ಜನರು ಈ ಗಾಥೆಯನ್ನು ಹಾಡುತ್ತಾರೆ.

ಶ್ಯಾಮೋ ಯುವಾ ಲೋಹಿತಾಕ್ಷೋ ದೀಪ್ತಾಸ್ಯೋ ಮಿತಭಾಷಿತಾ ।
ಆಜಾನುಬಾಹುಃ ಸುಮುಖಃ ಸಿಂಹಸ್ಕಂಧೋ ಮಹಾಭುಜಃ ।। ೧-೪೧-೧೫೦
ದಶ ವರ್ಷಸಹಸ್ರಾಣಿ ದಶ ವರ್ಷಶತಾನಿ ಚ ।
ಅಯೋಧ್ಯಾಧಿಪತಿರ್ಭೂತ್ವಾ ರಾಮೋ ರಾಜ್ಯಮಕಾರಯತ್ ।। ೧-೪೧-೧೫೧

“ಶ್ಯಾಮವರ್ಣೀ, ಯುವ, ಲೋಹಿತಾಕ್ಷ, ಕಾಂತಿಯುಕ್ತ ಮುಖವಿದ್ದ, ಮಿತಭಾಷಿತ, ಆಜಾನುಬಾಹು, ಸುಮುಖ, ಸಿಂಹಸ್ಕಂಧ, ಮಹಾಭುಜ ರಾಮನು ಹನ್ನೊಂದು ಸಾವಿರ ವರ್ಷಗಳು ಅಯೋಧ್ಯಾಧಿಪತಿಯಾಗಿ ರಾಜ್ಯಭಾರವನ್ನು ಮಾಡಿದನು.

ಋಕ್ಸಾಮಯಜುಷಾಂ ಘೋಷೋ ಜ್ಯಾಘೋಷಶ್ಚ ಮಹಾತ್ಮನಃ ।
ಅವ್ಯುಚ್ಛಿನ್ನೋಽಭವದ್ರಾಜ್ಯೇ ದೀಯತಾಂ ಭುಜ್ಯತಾಮಿತಿ ।। ೧-೪೧-೧೫೨

ಆ ಮಹಾತ್ಮನ ರಾಜ್ಯದಲ್ಲಿ ಸದಾ ಋಗ್ವೇದ, ಸಾಮವೇದ ಮತ್ತು ಯಜುರ್ವೇದಗಳ ಗೋಷಗಳು ಕೇಳಿಬರುತ್ತಿದ್ದವು. ಧನುಸ್ಸಿನ ಠೇಂಕಾರದ ಧ್ವನಿಯೂ ಕೇಳಿಬರುತ್ತಿತ್ತು. ದಾನಗಳನ್ನು “ಕೊಡಿ” ಮತ್ತು ಭೋಜನವನ್ನು “ತಿನ್ನಿ” ಎಂಬ ಘೋಷಗಳೂ ಕೇಳಿಬರುತ್ತಿದ್ದವು.

ಸತ್ತ್ವವಾನ್ಗುಣಸಂಪನ್ನೋ ದೀಪ್ಯಮಾನಃ ಸ್ವತೇಜಸಾ ।
ಅತಿಚಂದ್ರಂ ಚ ಸೂರ್ಯಂ ಚ ರಾಮೋ ದಾಶರಥಿರ್ಬಭೌ ।। ೧-೪-೧೫೩

ಸೂರ್ಯ-ಚಂದ್ರರಂತೆ ತನ್ನದೇ ತೇಜಸ್ಸಿನಿಂದ ಬೆಳಗುತ್ತಿದ್ದ ದಾಶರಥಿ ರಾಮನು ಸತ್ತ್ವವಾನನೂ ಗುಣಸಂಪನ್ನನೂ ಆಗಿದ್ದನು.

ಈಜೇ ಕ್ರತುಶತೈಃ ಪುಣ್ಯೈಃ ಸಮಾಪ್ತವರದಕ್ಷಿಣೈಃ ।
ಹಿತ್ವಾಯೋಧ್ಯಾಂ ದಿವಂ ಯಾತೋ ರಾಘವಃ ಸ ಮಹಾಬಲಃ ।। ೧-೪೧-೧೫೪

ಪರ್ಯಾಪ್ತ ವರದಕ್ಷಿಣೆಗಳಿಂದ ನೂರಾರು ಪುಣ್ಯ ಯಾಗಗಳನ್ನು ಪೂರೈಸಿ ಮಹಾಬಲ ರಾಘವನು ಅಯೋಧ್ಯೆಯನ್ನು ತೊರೆದು ದಿವಕ್ಕೆ ತೆರಳಿದನು.

ಏವಮೇಷಾ ಮಹಾಬಾಹುರಿಕ್ಷ್ವಾಕುಕುಲನಂದನಃ ।
ರಾವಣಂ ಸಗಣಂ ಹತ್ವಾ ದಿವಮಾಚಕ್ರಮೇ ಪ್ರಭುಃ ।। ೧-೪೧-೧೫೫

ಈ ರೀತಿ ಇಕ್ಷ್ವಾಕುಕುಲನಂದನ ಮಹಾಬಾಹು ಪ್ರಭುವು ಗಣಗಳೊಂದಿಗೆ ರಾವಣನನ್ನು ಸಂಹರಿಸಿ ದಿವವನ್ನೇರಿದನು.””

ವೈಶಂಪಾಯನ ಉವಾಚ।
ಅಪರಃ ಕೇಶವಸ್ಯಾಯಂ ಪ್ರಾದುರ್ಭಾವೋ ಮಹಾತ್ಮನಃ ।
ವಿಖ್ಯಾತೋ ಮಾಥುರೇ ಕಲ್ಪೇ ಸರ್ವಲೋಕಹಿತಾಯ ವೈ ।। ೧-೪೧-೧೫೬

ವೈಶಂಪಾಯನನು ಹೇಳಿದನು: “ಅನಂತರ ಸರ್ವಲೋಕಹಿತಕ್ಕಾಗಿ ವಿಖ್ಯಾತ ಮಾಥುರ ಕಲ್ಪದಲ್ಲಿ ಮಹಾತ್ಮ ಕೇಶವನ ಈ ಅವತಾರವು ನಡೆಯಿತು.

ಯತ್ರ ಶಾಲ್ವಂ ಚ ಮೈಂದಂ ಚ ದ್ವಿವಿದಂ ಕಂಸಮೇವಚ ।
ಅರಿಷ್ಟಮೃಷಭಂ ಕೇಶಿಂ ಪೂತನಾಂ ದೈತ್ಯದಾರಿಕಾಮ್ ।। ೧-೪೧-೧೫೭
ನಾಗಂ ಕುವಲಯಾಪೀಡಂ ಚಾಣೂರಂ ಮುಷ್ಟಿಕಂ ತಥಾ ।
ದೈತ್ಯಾನ್ಮಾನುಷದೇಹಸ್ಥಾನ್ಸೂದಯಾಮಾಸ ವೀರ್ಯವಾನ್ ।। ೧-೪೧-೧೫೮

ಈ ಅವತಾರದಲ್ಲಿ ವೀರ್ಯವಾನ್ ಹರಿಯು ಶಾಲ್ವ, ಮೈಂದ, ದ್ವಿವಿದ, ಕಂಸ, ಅರಿಷ್ಠ, ವೃಷಭ, ಕೇಶಿ, ದೈತ್ಯಕನ್ಯೆ ಪೂತನಾ, ಕುವಲಯಾಪೀಡವೆಂಬ ಆನೆ, ಚಾಣೂರ-ಮುಷ್ಠಿರರು ಮೊದಲಾದ ಮನುಷ್ಯ ಶರೀರಧಾರೀ ದೈತ್ಯರನ್ನು ಸಂಹರಿಸಿದನು.

ಛಿನ್ನಂ ಬಾಹುಸಹಸ್ರಂ ಚ ಬಾಣಸ್ಯಾದ್ಭುತಕರ್ಮಣಃ ।
ನರಕಸ್ಯ ಹತಃ ಸಂಖ್ಯೇ ಯವನಶ್ಚ ಮಹಾಬಲಃ ।। ೧-೪೧-೧೫೯

ಆ ಮಹಾಬಲ ಅಧ್ಭುತಕರ್ಮಿಯು ಬಾಣನ ಸಹಸ್ರ ಬಾಹುಗಳನ್ನು ತುಂಡರಿಸಿ ಯುದ್ಧದಲ್ಲಿ ಯವನ ಮತ್ತು ನರಕರನ್ನು ಸಂಹರಿಸಿದನು.

ಹೃತಾನಿ ಚ ಮಹೀಪಾನಾಂ ಸರ್ವರತ್ನಾನಿ ತೇಜಸಾ ।
ದುರಾಚಾರಾಶ್ಚ ನಿಹತಾಃ ಪಾರ್ಥಿವಾಶ್ಚ ಮಹೀತಲೇ ।। ೧-೪೧-೧೬೦

ಅವನು ತನ್ನ ತೇಜಸ್ಸಿನಿಂದ ಮಹೀಪಾಲರ ಸರ್ವರತ್ನಗಳನ್ನೂ ಅಪಹರಿಸಿದನು ಮತ್ತು ಮಹೀತಲದಲ್ಲಿದ್ದ ದುರಾಚಾರೀ ಪಾರ್ಥಿವರನ್ನು ಸಂಹರಿಸಿದನು.

ನವಮೇ ದ್ವಾಪರೇ ವಿಷ್ಣುರಷ್ಟಾವಿಂಶೇ ಪುರಾಭವತ್ ।
ವೇದವ್ಯಾಸಸ್ತಥಾ ಜಜ್ಞೇ ಜಾತೂಕರ್ಣ್ಯಪುರಃಸರಃ ।। ೧-೪೧-೧೬೧

ಇಪ್ಪತ್ತೆಂಟನೇ ದ್ವಾಪರದಲ್ಲಿ ವಿಷ್ಣುವಿನ ಈ ಒಂಭತ್ತನೆಯ ಅವತಾರವು ನಡೆಯಿತು. ಇದಕ್ಕೂ ಮೊದಲು ಅವನು ಜಾತೂಕರ್ಣನೊಡನೆ ವೇದವ್ಯಾಸನಾಗಿ ಜನಿಸಿದನು.

ಏಕೋ ವೇದಶ್ಚತುರ್ಧಾ ತು ಕೃತಸ್ತೇನ ಮಹಾತ್ಮನಾ ।
ಜನಿತೋ ಭಾರತೋ ವಂಶಃ ಸತ್ಯವತ್ಯಾಃ ಸುತೇನ ಚ ।। ೧-೪೧-೧೬೨

ಆ ಸತ್ಯವತೀ ಪುತ್ರ ಮಹಾತ್ಮನು ಒಂದಾಗಿದ್ದ ವೇದವನ್ನು ನಾಲ್ಕುಭಾಗಗಳನ್ನಾಗಿ ವಿಂಗಡಿಸಿದನು ಮತ್ತು ಅವನಿಂದ ಭಾರತ ಅಂಶವು ಬೆಳೆಯಿತು.

ಏತೇ ಲೋಕಹಿತಾರ್ಥಾಯ ಪ್ರಾದುರ್ಭಾವಾ ಮಹಾತ್ಮನಃ ।
ಅತೀತಾಃ ಕಥಿತಾ ರಾಜನ್ಕಥ್ಯಂತೇ ಚಾಪ್ಯನಾಗತಾಃ ।। ೧-೪-೧೬೩

ರಾಜನ್! ಇವು ಲೋಕಹಿತಾರ್ಥಕ್ಕಾಗಿ ಇದೂ ವರೆಗೆ ನಡೆದ ಮಹಾತ್ಮನ ಅವತಾರಗಳು. ಇನ್ನು ಮುಂದೆ ಬರುವ ಅವತಾರರದ ಕುರಿತು ಹೇಳುತ್ತಾರೆ.

ಕಲ್ಕಿರ್ವಿಷ್ಣೂಯಶಾ ನಾಮ ಶಂಭಲಂ ಗ್ರಾಮಕೇ ದ್ವಿಜಃ ।
ಸರ್ವಲೋಕಹಿತಾರ್ಥಾಯ ಭೂಯಶ್ಚೋತ್ಪತ್ಸ್ಯತೇ ಪ್ರಭುಃ ।। ೧-೪-೧೬೪

ಸರ್ವಲೋಕಹಿತಾರ್ಥಕ್ಕಾಗಿ ಪ್ರಭುವು ಪುನಃ ಶಂಭಲ ಗ್ರಾಮದಲ್ಲಿ ಕಲ್ಕಿ ವಿಷ್ಣುಯಶ ಎಂಬ ಹೆಸರಿನಿಂದ ಅವತರಿಸಿದನು.

ದಶಮೋ ಭಾವ್ಯಸಂಪನ್ನೋ ಯಾಜ್ಞವಲ್ಕ್ಯಪುರಃಸರಃ ।
ಕ್ಷಪಯಿತ್ವಾ ಚ ತಾನ್ಸರ್ವಾನ್ಭಾವಿನಾರ್ಥೇನ ಚೋದಿತಾನ್ ।। ೧-೪-೧೬೫
ಗಂಗಾಯಮುನಯೋರ್ಮಧ್ಯೇ ನಿಷ್ಠಾಂ ಪ್ರಾಪ್ಸ್ಯತಿ ಸಾನುಗಃ ।

ಹತ್ತನೇ ಭಾವ್ಯಸಂಪನ್ನ ಕಲ್ಕಿಯು ಯಾಜ್ಞವಲ್ಕ್ಯನೊಡನೆ ಭಾವಿತಾರ್ಥದಿಂದ ಚೋದಿತರಾದ ಅವರೆಲ್ಲರನ್ನೂ ನಾಶಪಡಿಸಿ ಗಂಗಾಯಮುನೆಯರ ಮಧ್ಯೆ ಅನುಗರೊಂದಿಗೆ ತನ್ನ ಅವತಾರವನ್ನು ಸಮಾಪ್ತಗೊಳಿಸುತ್ತಾನೆ.

ತತಃ ಕುಲೇ ವ್ಯತೀತೇ ತು ಸಾಮಾತ್ಯೇ ಸಹಸೈನಿಕಮ್ ।। ೧-೪-೧೬೬
ನೃಪೇಷ್ವಥ ಪ್ರನಷ್ಟೇಷು ತದಾ ತ್ವಪ್ರಗ್ರಹಾಃ ಪ್ರಜಾಃ ।

ಅನಂತರ ಆಮಾತ್ಯರು ಮತ್ತು ಸೈನಿಕರೊಂದಿಗೆ ಎಲ್ಲ ನೃಪರ ಕುಲಗಳು ನಾಶವಾಗಲು ಪ್ರಜೆಗಳು ಸ್ವೇಚ್ಛಾಚಾರಿಗಳಾಗುತ್ತಾರೆ.

ರಕ್ಷಣೇ ವಿನಿವೃತ್ತೇ ಚ ಹತ್ವಾ ಚಾನ್ಯೋನ್ಯಮಾಹವೇ ।। ೧-೪-೧೬೭
ಪರಸ್ಪರಹೃತಸ್ವಾಶ್ಚ ನಿರಾಕ್ರಂದಾಃ ಸುದುಃಖಿತಾಃ ।

ರಕ್ಷಣೆಯ ರಾಜಕೀಯ ವ್ಯವಸ್ಥೆಯು ಸಮಾಪ್ತವಾಗಲು ಜನರು ಯುದ್ಧದಲ್ಲಿ ಅನ್ಯೋನ್ಯರನ್ನು ಸಂಹರಿಸುತ್ತಾರೆ. ಪರಸ್ಪರರ ಸ್ವತ್ತನ್ನು ಅಪಹರಿಸಿ ಅಸಹಾಯಕರೂ ದುಃಖಿತರೂ ಆಗುತ್ತಾರೆ.

ಏವಂ ಕಷ್ಟಮನುಪ್ರಾಪ್ತಾಃ ಕಲಿಸಂಧ್ಯಾಂಶಕಂ ತದಾ ।। ೧-೪-೧೬೮
ಪ್ರಜಾಃ ಕ್ಷಯಂ ಪ್ರಯಾಸ್ಯಂತಿ ಸಾರ್ಧಂ ಕಲಿಯುಗೇನ ಹ ।

ಹೀಗೆ ಕಲಿಯುಗದ ಸಂಧ್ಯಾಂಶದಲ್ಲಿ ಕಷ್ಟವು ಪ್ರಾಪ್ತವಾಗುತ್ತದೆ. ಕಲಿಯುಗದೊಂದಿಗೆ ಪ್ರಜೆಗಳೂ ಕ್ಷಯವನ್ನು ಹೊಂದುತ್ತಾರೆ.

ಕ್ಷೀಣೇ ಕಲಿಯುಗೇ ತಸ್ಮಿಂಸ್ತತಃ ಕೃತಯುಗಂ ಪುನಃ ।
ಪ್ರಪತ್ಸ್ಯತೇ ಯಥಾನ್ಯಾಯಂ ಸ್ವಭಾವಾದೇವ ನಾನ್ಯಥಾ ।। ೧-೪-೧೬೯

ಕಲಿಯುಗವು ಕ್ಷೀಣವಾಗಲು ಪುನಃ ಸ್ವಭಾವತಃ ಸತ್ಯಯುಗವು ಯಥಾನ್ಯಾಯವಾಗಿ ಬರುತ್ತದೆ. ಅನ್ಯಥಾ ಅಲ್ಲ.

ಏತೇ ಚಾನ್ಯೇ ಚ ಬಹವೋ ದಿವ್ಯಾ ದೇವಗುಣೈರ್ಯುತಾಃ ।
ಪ್ರಾದುರ್ಭಾವಾಃ ಪುರಾಣೇಷು ಗೀಯಂತೇ ಬ್ರಹ್ಮವಾದಿಭಿಃ ।। ೧-೪೧-೧೭೦

ಇವು ಮತ್ತು ಅನ್ಯ ಅನೇಕ ದಿವ್ಯ ದೇವಗುಣಸಂಯುತ ಅವತಾರಗಳ ಕುರಿತು ಬ್ರಹ್ಮವಾದಿಗಳು ಪುರಾಣಗಳಲ್ಲಿ ವರ್ಣಿಸಿದ್ದಾರೆ.

ಯತ್ರ ದೇವಾಪಿ ಮುಹ್ಯಂತಿ ಪ್ರಾದುರ್ಭಾವಾನುಕೀರ್ತನೇ ।
ಪುರಾಣಂ ವರ್ತತೇ ಯತ್ರ ವೇದಶ್ರುತಿಸಮಾಹಿತಮ್ ।। ೧-೩೧-೧೭೧

ಅವತಾರಗಳನ್ನು ವರ್ಣಿಸುವುದರಲ್ಲಿ ದೇವತೆಗಳೂ ಕೂಡ ತಪ್ಪುತ್ತಾರೆ. ಆದುದರಿಂದ ವೇದಶ್ರುತಿಸಮಾಹಿತವಾದ ಪುರಾಣವೇ ಈ ಅವತಾರಗಳ ಪ್ರಮಾಣಗಳಾಗಿವೆ.

ಏತದುದ್ದೇಶಮಾತ್ರೇಣ ಪ್ರಾದುರ್ಭಾವಾನುಕೀರ್ತನಮ್ ।
ಕೀರ್ತಿತಂ ಕೀರ್ತನೀಯಸ್ಯ ಸರ್ವಲೋಕಗುರೋಃ ಪ್ರಭೋಃ ।। ೧-೪೧-೧೭೨

ಸರ್ವಲೋಕಗುರು ಕೀರ್ತನೀಯ ಪ್ರಭುವಿನ ಪ್ರಾದುರ್ಭಾವಗಳನ್ನು ಸಂಕ್ಷಿಪ್ತವಾಗಿಯೇ ವರ್ಣಿಸಿದ್ದಾಯಿತು.

ಪ್ರೀಯಂತೇ ಪಿತರಸ್ತಸ್ಯ ಪ್ರಾದುರ್ಭಾವಾನುಕೀರ್ತನಾತ್ ।
ವಿಷ್ಣೋರತುಲವೀರ್ಯಸ್ಯ ಯಃ ಶೃಣೋತಿ ಕೃತಾಂಜಲಿಃ ।। ೧-೪೧-೧೭೩

ಅತುಲವೀರ್ಯ ವಿಷ್ಣುವಿನ ಅವತಾರಗಳ ವರ್ಣನೆಯನ್ನು ಕೃತಾಂಜಲಿಯಾಗಿ ಕೇಳುವವನ ಪಿತೃಗಳು ಪ್ರೀತರಾಗುತ್ತಾರೆ.

ಏತಾಸ್ತು ಯೋಗೇಶ್ವರಯೋಗಮಾಯಾಃ ಶ್ರುತ್ವಾ ನರೋ ಮುಚ್ಯತಿ ಸರ್ವಪಾಪೈಃ ।
ಋದ್ಧಿಂ ಸಮೃದ್ಧಿಂ ವಿಪುಲಾಂಶ್ಚ ಭೋಗಾನ್ ಪ್ರಾಪ್ನೋತಿ ಸರ್ವಂ ಭಗವತ್ಪ್ರಸಾದಾತ್ ।। ೧-೪೧-೧೭೪

ಯೋಗೇಶ್ವರನ ಈ ಯೋಗಮಾಯೆಯನ್ನು ಕೇಳಿದ ನರನು ಸರ್ವಪಾಪಗಳಿಂದ ಮುಕ್ತನಾಗಿ ಭಗವಂತನ ಪ್ರಸಾದದಿಂದ ಋದ್ಧಿ, ಸಮೃದ್ಧಿ, ಮತ್ತು ವಿಪುಲ ಭೋಗಗಳೆಲ್ಲವನ್ನೂ ಪಡೆಯುತ್ತಾನೆ.”

ಸಮಾಪ್ತಿ

ಇತಿ ಶ್ರೀಮನ್ಮಹಾಭಾರತೇ ಖಿಲೇಷು ಹರಿವಂಶೇ ಹರಿವಂಶಪರ್ವಣಿ ಪ್ರಾದುರ್ಭಾವಾನುಸಂಗ್ರಹೋ ನಾಮೈಕಚತ್ವಾರಿಂಶೋಽಧ್ಯಾಯಃ


  1. ಯಜಮಾನ ಗೃಹ. ↩︎

  2. ಮಹ, ಜನ, ತಪ, ಮತ್ತು ಸತ್ಯವೆಂಬುವ ಲೋಕಗಳು. ↩︎

  3. ರಾಮ ಸ್ವರೂಪೀ ಶತ್ರುಘ್ನನು ಲವಣಾಸುರನನ್ನು ಸಂಹರಿಸಿದನು. ↩︎