ಪ್ರವೇಶ
।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।
ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ
ಶ್ರೀ ಮಹಾಭಾರತ
ಖಿಲಭಾಗೇ ಹರಿವಂಶಃ
ಹರಿವಂಶ ಪರ್ವ
ಅಧ್ಯಾಯ 40
ಸಾರ
ಜನಮೇಜಯನು ಭಗವಂತನ ವರಾಹ, ನರಸಿಂಹ, ಪರಶುರಾಮ, ಶ್ರೀಕೃಷ್ಣ ಮೊದಲಾದ ಅವತಾರಗಳ ರಹಸ್ಯವನ್ನು ಕೇಳುವುದು.
ಜನಮೇಜಯ ಉವಾಚ
ಪ್ರಾದುರ್ಭಾವಾನ್ಪುರಾಣೇಷು ವಿಷ್ಣೋರಮಿತತೇಜಸಃ ।
ಸತಾಂ ಕಥಯತಾಮೇವ ವರಾಹ ಇತಿ ನಃ ಶ್ರುತಮ್ ।। ೧-೪೦-೧
ಜನಮೇಜಯನು ಹೇಳಿದನು: “ಕಥೆಗಳನ್ನು ಹೇಳುವ ಸತ್ಪುರುಷರಿಂದ ಪುರಾಣಗಳಲ್ಲಿ ಹೇಳಿದಂತೆ ಅಮಿತತೇಜಸ್ವಿ ವಿಷ್ಣುವು ವರಾಹ1ನಾಗಿ ಅವತರಿಸಿದನು ಎಂದು ನಾನು ಕೇಳಿದ್ದೇನೆ.
ನ ಜಾನೇ ತಸ್ಯ ಚರಿತಂ ನ ವಿಧಿಂ ನೈವ ವಿಸ್ತರಮ್ ।
ನ ಕರ್ಮಗುಣಸಂತಾನಂ ನ ಹೇತುಂ ನ ಮನೀಷಿತಮ್ ।। ೧-೪೦-೨
ಆದರೆ ನನಗೆ ಅವನ ಚರಿತ, ವಿಧಿ, ವಿಸ್ತಾರ, ಕರ್ಮಗುಣ ಸಂತಾನ, ಕಾರಣ ಮತ್ತು ಯೋಚನೆಗಳ ಕುರಿತು ತಿಳಿದಿಲ್ಲ.
ಕಿಮಾತ್ಮಕೋ ವರಾಹಃ ಸ ಕಾ ಮೂರ್ತಿಃ ಕಾ ಚ ದೇವತಾ ।
ಕಿಮಾಚಾರಃ ಪ್ರಭಾವೋ ವಾ ಕಿಂ ವಾ ತೇನ ಪುರಾ ಕೃತಮ್ ।। ೧-೪೦-೩
ಆ ವರಾಹದ ಸ್ವರೂಪವೇನು? ಅದರ ಮೂರ್ತಿಯು ಹೇಗಿದೆ? ಅದರ ದೇವತೆಯರು ಯಾರು? ಅದರ ಕರ್ಮವ್ಯಾವುದು? ಅದರ ಪ್ರಭಾವವು ಏನು? ಹಿಂದೆ ಅದು ಏನನ್ನು ಮಾಡಿತ್ತು?
ಯಜ್ಞಾರ್ಥಂ ಸಮವೇತಾನಾಂ ಮಿಷತಾಂ ಚ ದ್ವಿಜನ್ಮನಾಮ್ ।
ಮಹಾವರಾಹಚರಿತಂ ಕೃಷ್ಣದ್ವೈಪಾಯನೇರಿತಮ್ ।। ೧-೪೦-೪
ಯಜ್ಞಾರ್ಥವಾಗಿ ಸೇರಿದ್ದ ದ್ವಿಜರ ವಾದವಿವಾದಗಳ ಸಮಯದಲ್ಲಿ ಕೃಷ್ಣದ್ವೈಪಾಯನನು ಹೇಳಿದ್ದ ಮಹಾವರಾಹ ಚರಿತವನ್ನು ಕೇಳಿದ್ದೆ.
ಯಥಾ ನಾರಾಯಣೋ ಬ್ರಹ್ಮನ್ವಾರಾಹಂ ರೂಪಮಾಸ್ಥಿತಃ ।
ದಂಷ್ಟ್ರಯಾ ಗಾಂ ಸಮುದ್ರಸ್ಥಾಮುಜ್ಜಹಾರಾರಿಸೂದನಃ ।। ೧-೪೦-೫
ಬ್ರಹ್ಮನ್! ಅರಿಂದಮ ನಾರಾಯಣನು ಹೇಗೆ ವಾರಾಹ ರೂಪವನ್ನು ತಾಳಿ ತನ್ನ ಕೋರೆದಾಡೆಗಳಿಂದ ಸಮುದ್ರದಲ್ಲಿ ಮುಳುಗಿಹೋಗಿದ್ದ ಭೂಮಿಯನ್ನು ಮೇಲೆತ್ತಿದನು?
ವಿಸ್ತರೇಣೈವ ಕರ್ಮಾಣಿ ಸರ್ವಾಣಿ ರಿಪುಘಾತಿನಃ ।
ಶ್ರೋತುಮಿಚ್ಛಾಮ್ಯಶೇಷೇಣ ಹರೇಃ ಕೃಷ್ಣಸ್ಯ ಧೀಮತಃ ।। ೧-೪೦-೬
ನಾನು ರಿಪುಘಾತೀ ಧೀಮತ ಹರಿ ಕೃಷ್ಣನ ಸರ್ವ ಕರ್ಮಗಳನ್ನೂ ವಿಸ್ತಾರವಾಗಿ ಸಂಪೂರ್ಣವಾಗಿ ಕೇಳ ಬಯಸುತ್ತೇನೆ.
ಕರ್ಮಣಾಮಾನುಪೂರ್ವ್ಯಾಚ್ಚ ಪ್ರಾದುರ್ಭಾವಾಶ್ಚ ಯೇ ವಿಭೋಃ ।
ಯಾ ಚಾಸ್ಯ ಪ್ರಕೃತಿರ್ಬ್ರಹ್ಮಂಸ್ತಾಂ ಮೇ ವ್ಯಾಖ್ಯಾತುಮರ್ಹಸಿ ।। ೧-೪೦-೭
ಬ್ರಹ್ಮನ್! ವಿಭುವಿನ ಹಿಂದಿನ ಅವತಾರಗಳು, ಪ್ರಕೃತಿಗಳು ಮತ್ತು ಕರ್ಮಗಳನ್ನು ಕ್ರಮಪ್ರಕಾರವಾಗಿ ನನಗೆ ಹೇಳಬೇಕು.
ಕಥಂ ಚ ಭಗವಾನ್ವಿಷ್ಣುಃ ಸುರಶತ್ರುನಿಷೂದನಃ ।
ವಸುದೇವಕುಲೇ ಧೀಮಾನ್ವಾಸುದೇವತ್ವಮಾಗತಃ ।। ೧-೪೦-೮
ಸುರಶತ್ರುನಿಷೂದನ ಭಗವಾನ್ ವಿಷ್ಣುವು ಹೇಗೆ ವಸುದೇವಕುಲದಲ್ಲಿ ಧೀಮಂತ ವಾಸುದೇವತ್ವವನ್ನು ಪಡೆದುಕೊಂಡನು?
ಅಮರೈರಾವೃತಂ ಪುಣ್ಯಂ ಪುಣ್ಯಕೃದ್ಭಿರ್ನಿಷೇವಿತಮ್ ।
ದೇವಲೋಕಂ ಸಮುತ್ಸೃಜ್ಯ ಮರ್ತ್ಯಲೋಕಮಿಹಾಗತಃ ।। ೧-೪೦-೯
ಅಮರರಿಂದ ಸುತ್ತುವರೆಯಲ್ಪಟ್ಟು ಪುಣ್ಯಕರ್ಮಿಗಳಿಂದ ಪೂಜಿಸಲ್ಪಡುವ ಅವನು ಪುಣ್ಯ ದೇವಲೋಕವನ್ನು ತ್ಯಜಿಸಿ ಈ ಮರ್ತ್ಯಲೋಕಕ್ಕೆ ಏಕೆ ಬಂದನು?
ದೇವಮಾನುಷಯೋರ್ನೇತಾ ಯೋ ಭುವಃ ಪ್ರಭವೋ ವಿಭುಃ ।
ಕಿಮರ್ಥಂ ದಿವ್ಯಮಾತ್ಮಾನಂ ಮಾನುಷ್ಯೇ ಸಂನ್ಯಯೋಜಯತ್ ।। ೧-೪೦-೧೦
ದೇವ-ಮಾನುಷರ ನಾಯಕ, ಭುವನಗಳ ಸೃಷ್ಟಿಕರ್ತ ವಿಭುವು ಯಾವ ಕಾರಣಕ್ಕಾಗಿ ತನ್ನ ದಿವ್ಯ ಆತ್ಮವನ್ನು ಮನುಷ್ಯನೊಂದಿಗೆ ಜೋಡಿಸಿಕೊಂಡನು?
ಯಶ್ಚಕ್ರಂ ವರ್ತಯೇತ್ಯೇಕೋ ಮಾನುಷಾಣಾಮನಾಮಯಮ್ ।
ಮಾನುಷ್ಯೇ ಸ ಕಥಂ ಬುದ್ಧಿಂ ಚಕ್ರೇ ಚಕ್ರಭೃತಾಂ ವರಃ ।। ೧-೪೦-೧೧
ಮನುಷ್ಯರ ಸಂಸಾರಚಕ್ರವನ್ನು ಏಕಾಕಿಯಾಗಿ ನಿರಂತರವಾಗಿ ಚಲಿಸುವ ಆ ಚಕ್ರಧಾರಿಗಳಲ್ಲಿ ಶ್ರೇಷ್ಠನು ಮನುಷ್ಯನಾಗಲು ಏಕೆ ಯೋಚಿಸಿದನು?
ಗೋಪಾಯನಂ ಯಃ ಕುರುತೇ ಜಗತಃ ಸಾರ್ವಲೌಕಿಕಮ್ ।
ಸ ಕಥಂ ಗಾಂ ಗತೋ ದೇವೋ ವಿಷ್ಣುರ್ಗೋಪತ್ವಮಾಗತಃ ।। ೧-೪೦-೧೨
ಜತ್ತಿನ ಸಾರ್ವಲೌಕಿಕ ರಕ್ಷಣೆಯನ್ನು ಮಾಡುವ ದೇವ ವಿಷ್ಣುವು ಗೋವುಗಳನ್ನು ರಕ್ಷಣೆಮಾಡುವ ಗೋಪತ್ವವನ್ನು ಹೇಗೆ ಪಡೆದುಕೊಂಡನು?
ಮಹಾಭೂತಾನಿ ಭೂತಾತ್ಮಾ ಯೋ ದಧಾರ ಚಕಾರ ಚ ।
ಶ್ರೀಗರ್ಭಃ ಸ ಕಥಂ ಗರ್ಭೇ ಸ್ತ್ರಿಯಾ ಭೂಚರಯಾ ಧೃತಃ ।। ೧-೪೦-೧೩
ಸಮಸ್ತ ಭೂತಗಳಿಗೂ ಆತ್ಮಸ್ವರೂಪನಾದ ಮತ್ತು ಮಹಾಭೂತಗಳನ್ನು ಸೃಷ್ಟಿಸಿದ ಮತ್ತು ಧಾರಣೆಮಾಡಿಕೊಂಡ ಶ್ರೀಗರ್ಭನನ್ನು ಹೇಗೆ ತಾನೇ ಪೃಥ್ವಿಯಲ್ಲಿ ಚಲಿಸುವ ಸ್ತ್ರೀಯೋರ್ವಳು ತನ್ನ ಗರ್ಭದಲ್ಲಿ ಹೇಗೆ ತಾನೇ ಧಾರಣೆಮಾಡಿಕೊಂಡಳು?
ಯೇನ ಲೋಕಾನ್ಕ್ರಮೈರ್ಜಿತ್ವಾ ತ್ರಿಭಿಸ್ತ್ರೀಂಸ್ತ್ರಿದಶೇಪ್ಸಯಾ ।
ಸ್ಥಾಪಿತಾ ಜಗತೋ ಮಾರ್ಗಾಸ್ತ್ರಿವರ್ಗಪ್ರಭವಾಸ್ತ್ರಯಃ ।। ೧-೪೦-೧೪
ತ್ರಿದಷರು ಬಯಸಿದಂತೆ ಅವನು ಮೂರೇ ಹೆಜ್ಜೆಗಳಲ್ಲಿ ಮೂರೂ ಲೋಕಗಳನ್ನೂ ಅಳೆದು ಜಗತ್ತಿನಲ್ಲಿ ತ್ರಿವರ್ಗಮಾರ್ಗವನ್ನು ಸ್ಥಾಪಿಸಿದನು.
ಯೋಽಂತಕಾಲೇ ಜಗತ್ಪೀತ್ವಾ ಕೃತ್ವಾ ತೋಯಮಯಂ ವಪುಃ ।
ಲೋಕಮೇಕಾರ್ಣವಂ ಚಕ್ರೇ ದೃಶ್ಯಾದೃಶ್ಯೇನ ವರ್ತ್ಮನಾ ।। ೧-೪೦-೧೫
ಅಂತ್ಯಕಾಲದಲ್ಲಿ ಅವನು ದೃಶ್ಯ-ಅದೃಶ್ಯ ರೀತಿಯಲ್ಲಿ ಜಗತ್ತನ್ನೇ ಕುಡಿದು ನೀರಿನ ಆಕಾರವನ್ನೇ ತಾಳಿ ಜಗತ್ತನ್ನೇ ಒಂದು ಜಲರಾಶಿಯನ್ನಾಗಿ ಮಾಡಿದನು.
ಯಃ ಪುರಾಣೇ ಪುರಾಣಾತ್ಮಾ ವಾರಾಹಂ ರೂಪಮಾಸ್ಥಿತಃ ।
ವಿಷಾಣಾಗ್ರೇಣ ವಸುಧಾಮುಜ್ಜಹಾರಾರಿಸೂದನಃ ।। ೧-೪೦-೧೬
ಪುರಾಣಕಾಲದಲ್ಲಿ ಆ ಪುರಣಾತ್ಮಾ ಅರಿಸೂದನನು ವಾರಾಹ ರೂಪವನ್ನು ತಾಳಿ ತನ್ನ ಕೋರೆದಾಡೆಗಳಿಂದ ವಸುಧೆಯನ್ನು ಮೇಲೆತ್ತಿದನು.
ಯಃ ಪುರಾ ಪುರುಹೂತಾರ್ಥೇ ತ್ರೈಲೋಕ್ಯಮಿದಮವ್ಯಯಃ ।
ದದೌ ಜಿತ್ವಾಸುರಗಣಾನ್ಸುರಾಣಾಂ ಸುರಸತ್ತಮಃ ।। ೧-೪೦-೧೭
ಹಿಂದೆ ಅಸುರಗಣಗಳನ್ನು ಗೆದ್ದು ಆ ಅವ್ಯಯ ಸುರಸತ್ತಮನು ತ್ರೈಲೋಕ್ಯವನ್ನೇ ಇಂದ್ರನಿಗಿತ್ತನು.
ಯೇನ ಸೈಂಹಂ ವಪುಃ ಕೃತ್ವಾ ದ್ವಿಧಾ ಕೃತ್ವಾ ಚ ತತ್ಪುನಃ ।
ಪೂರ್ವಂ ದೈತ್ಯೋ ಮಹಾವೀರ್ಯೋ ಹಿರಣ್ಯಕಶಿಪುರ್ಹತಃ ।। ೧-೪೦-೧೮
ಪೂರ್ವದಲ್ಲಿ ಸಿಂಹದ ವೇಷವನ್ನು ತಳೆದು ಅದರಲ್ಲಿಯೂ ಎರಡು-ಭಾಗಗಳಾಗಿ – ನರಸಿಂಹನಾಗಿ – ಅವನು ದೈತ್ಯ ಮಹಾವೀರ್ಯ ಹಿರಣ್ಯಕಶಿಪುವನ್ನು ಸಂಹರಿಸಿದನು.
ಯಃ ಪುರಾ ಹ್ಯನಲೋ ಭೂತ್ವಾ ಔರ್ವಃ ಸಂವರ್ತಕೋ ವಿಭುಃ ।
ಪಾತಾಲಸ್ಥೋಽರ್ಣವಗತಂ ಪಪೌ ತೋಯಮಯಂ ಹವಿಃ ।। ೧-೪೦-೧೯
ಹಿಂದೆ ಪಾತಾಲದಲ್ಲಿದ್ದ ವಿಭು ಔರ್ವನ ಸಂವರ್ತಕ ಅಗ್ನಿಯಾಗಿ ಅವನು ನೀರನ್ನೇ ಹವಿಸ್ಸನ್ನಾಗಿ ಕುಡಿದು ಜಲಮಯನಾದನು.
ಸಹಸ್ರಶಿರಸಂ ಬ್ರಹ್ಮನ್ಸಹಸ್ರಾರಂ ಸಹಸ್ರದಮ್ ।
ಸಹಸ್ರಚರಣಂ ದೇವಂ ಯಮಾಹುರ್ವೈ ಯುಗೇ ಯುಗೇ ।। ೧-೪೦-೨೦
ಬ್ರಹ್ಮನ್! ಯುಗ ಯುಗದಲ್ಲಿ ಆ ದೇವನನ್ನು ಸಹಸ್ರಶಿರಸ, ಸಹಸ್ರಾರ, ಸಹಸ್ರದ ಮತ್ತು ಸಹಸ್ರಚರಣನೆಂದು ಕರೆಯುತ್ತಾರೆ.
ನಾಭ್ಯಾರಣ್ಯಾಂ ಸಮುತ್ಪನ್ನಂ ಯಸ್ಯ ಪೈತಾಮಹಂ ಗೃಹಮ್ ।
ಏಕಾರ್ಣವಜಲಸ್ಥಸ್ಯ ನಷ್ಟೇ ಸ್ಥಾವರಜಂಗಮೇ ।। ೧-೪೦-೨೧
ಸ್ಥಾವರ ಜಂಗಮಗಳು ನಷ್ಟವಾಗಲು ಏಕಾರ್ಣವ ಜಲದಲ್ಲಿದ್ದುಕೊಂಡು ನಾಭಿಯಿಂದ ಪಿತಾಮಹನ ಗೃಹವಾದ ಕಮಲವನ್ನು ನಾಲರೂಪ ಅರಣಿಯಂತೆ ಹುಟ್ಟಿಸಿದನು.
ತೇ ನಿಹತಾ ದೈತ್ಯಾಃ ಸಂಗ್ರಾಮೇ ತಾರಕಾಮಯೇ ।
ಸರ್ವದೇವಮಯಂ ಕೃತ್ವಾ ಸರ್ವಾಯುಧಧರಂ ವಪುಃ ।। ೧-೪೦-೨೨
ತಾರಕಾಮಯ ಸಂಗ್ರಾಮದಲ್ಲಿ ಅವನು ತನ್ನ ಶರೀರವನ್ನು ಸರ್ವದೇವಮಯವನ್ನಾಗಿಯೂ ಸರ್ವಾಯುಧಧರನನ್ನಾಗಿಯೂ ಮಾಡಿಕೊಂಡು ದೈತ್ಯರನ್ನು ಸಂಹರಿಸಿದನು.
ಗರುಡಸ್ತೇನಚೋತ್ಸಿಕ್ತಃ ಕಾಲನೇಮಿರ್ನಿಪಾತಿತಃ ।
ನಿರ್ಜಿತಶ್ಚ ಮಯೋ ದೈತ್ಯಃ ತಾರಕಶ್ಚ ಮಹಾಸುರಃ ।। ೧-೪೦-೨೩
ಗರುಡನ ಮೇಲೇರಿ ಅವನು ಉದ್ದಂಡ ಕಾಲನೇಮಿಯನ್ನು ಕೆಳಗುರುಳಿಸಿದನು ಮತ್ತು ದೈತ್ಯ ಮಯ ಮತ್ತು ಮಹಾಸುರ ತಾರಕನನ್ನು ಸೋಲಿಸಿದನು.
ಉತ್ತರಾಂತೇ ಸಮುದ್ರಸ್ಯ ಕ್ಷೀರೋದಸ್ಯಾಮೃತೋದಧೇಃ ।
ತಃ ಶೇತೇ ಶಾಶ್ವತಂ ಯೋಗಮಾಸ್ಥಾಯ ತಿಮಿರಮ್ಮಹತ್ ।। ೧-೪೦-೨೪
ಕ್ಷೀರಸಮುದ್ರದ ಉತ್ತರ ತಟದಲ್ಲಿರುವ ಅಮೃತ ಸಮುದ್ರದಲ್ಲಿ ಯೋಗಮಾಯಾರೂಪ ಶಾಶ್ವತ ಯೋಗವನ್ನಾಶ್ರಯಿಸಿ ಮಲಗಿರುತ್ತಾನೆ.
ಸುರಾರಣಿರ್ಗರ್ಭಮಧತ್ತ ದಿವ್ಯಂ ತಪಃ ಪ್ರಕರ್ಷಾದದಿತಿಃ ಪುರಾಣಂ ।
ಶಕ್ರಂ ಚ ಯೋ ದೈತ್ಯಗಣಾವರುದ್ಧಂ ಗರ್ಭಾವಸಾನೇ ನಿಭೃತಂ ಚಕಾರ ।। ೧-೪೦-೨೫
ಸುರರ ಅರಣಿ ರೂಪಿಣೀ ಅದಿತಿಯು ಮಹಾ ತಪಸ್ಸನ್ನು ಮಾಡಿ ಆ ಪುರಾಣ ಪುರುಷರೂಪೀ ಗರ್ಭವನ್ನು ಧರಿಸಿದಳು ಮತ್ತು ಅವನು ಗರ್ಭದಿಂದ ಹೊರಬಂದು ದೈತ್ಯಗಣಗಳಿಂದ ಪೀಡಿತನಾಗಿದ್ದ ಶಕ್ರನನ್ನು ಮುಕ್ತಗೊಳಿಸಿದನು.
ಪದಾನಿ ಯೋ ಲೋಕಮಯಾನಿ ಕೃತ್ವಾ ಚಕಾರ ದೈತ್ಯಾನ್ಸಲಿಲೇಶಯಾಂಸ್ತಾನ್ ।
ಕೃತ್ವಾ ಚ ದೇವಾಂಸ್ತ್ರಿದಿವಸ್ಯ ದೇವಾಂಶ್ಚಕ್ರೇ ಸುರೇಶಂ ತ್ರಿದಶಾಧಿಪತ್ಯೇ ।। ೧-೪೦-೨೬
ತನ್ನ ಕಾಲಿಂದ ಲೋಕವನ್ನು ಅಳೆದು ಅವನು ದೈತ್ಯರನ್ನು ಪಾತಾಳಲೋಕವಾಸಿಗಳನ್ನಾಗಿ ಮಾಡಿದನು. ದೇವತೆಗಳನ್ನು ತ್ರಿದಿವದ ನಿವಾಸಿಗಳನ್ನಾಗಿ ಮಾಡಿ ಸುರೇಶ ಇಂದ್ರನಿಗೆ ತ್ರಿದಶಾಧಿಪತ್ಯವನ್ನು ನೀಡಿದನು.
ಪಾತ್ರಾಣಿ ದಕ್ಷಿಣಾ ದೀಕ್ಷಾ ಚಮಸೋಲೂಖಲಾನಿ ಚ ।
ಗಾರ್ಹಪತ್ಯೇನ ವಿಧಿನಾ ಅನ್ವಾಹಾರ್ಯೇಣ ಕರ್ಮಣಾ ।। ೧-೪—೨೭
ಅವನು ಗೃಹ್ಯಸೂತ್ರಗಳಲ್ಲಿ ಹೇಳಿರುವಂಥಹ ವಿಧಿ ಮತ್ತು ಅನ್ವಾಹಾರ್ಯಕರ್ಮ2ಗಳೊಂದಿಗೆ ಯಜ್ಞೋಪಯೋಗೀ ಚಮಸ, ಉಳುಖಲ ಮೊದಲಾದ ಪಾತ್ರ, ದಕ್ಷಿಣಾ ಮತ್ತು ದೀಕ್ಷಾದಿಗಳನ್ನು ರಚಿಸಿದನು.
ಅಗ್ನಿಮಾಹವನೀಯಂ ಚ ವೇದೀಂ ಚೈವ ಕುಶಂ ಸ್ರುವಮ್ ।
ಪ್ರೋಕ್ಷಣೀಯಂ ಧ್ರುವಾಂ ಚೈವ ಆವಭೃಥ್ಯಂ ತಥೈವ ಚ ।। ೧-೪೦-೨೮
ಅವನು ಆಹವನೀಯ ಅಗ್ನಿ, ವೇದೀ, ಸ್ರುವಾ, ದರ್ಬೆ, ಪ್ರೋಕ್ಷಣೀಪಾತ್ರ, ಧ್ರುವಾ ಮತ್ತು ಅವಭೃತ ಸ್ನಾನೋಪಯೋಗೀ ಸಾಮಾಗ್ರಿಗಳನ್ನು ಕಲ್ಪಿಸಿದನು.
ಸುಧಾತ್ರೀಣಿ ಚ ಯಶ್ಚಕ್ರೇ ಹವ್ಯಕವ್ಯಪ್ರದಾಂದ್ವಿಜಾನ್ ।
ಹವ್ಯಾದಾಂಶ್ಚ ಸುರಾನ್ಯಜ್ಞೇ ಕ್ರವ್ಯಾದಾಂಸ್ತು ಪಿತ್ರೂನಪಿ ।। ೧-೪೦-೨೯
ಅವನು ಮೂರು ವಿಧದ3 ಸುಧೆಗಳನ್ನು ಮಾಡಿ ದ್ವಿಜರು ಹವ್ಯಕವ್ಯಗಳ4ನ್ನು ಕೊಡುವವರಂತೆಯೂ, ಸುರರು ಯಜ್ಞದಲ್ಲಿ ಹವ್ಯಗಳನ್ನು ಸ್ವೀಕರಿಸುವವರಂತೆಯೂ ಮತ್ತು ಪಿತೃಗಳು ಕ್ರವ್ಯ5ಗಳನ್ನು ಸ್ವೀಕರಿಸುವವರಂತೆಯೂ ಮಾಡಿದನು.
ಭಾಗಾರ್ಥೇ ಮಂತ್ರವಿಧಿನಾ ಯಶ್ಚಕ್ರೇ ಯಜ್ಞಕರ್ಮಣಿ ।
ಯೂಪಾನ್ಸಮಿತ್ಸ್ರುಚಂ ಸೋಮಂ ಪವಿತ್ರಾನ್ಪರಿಧೀನಪಿ ।। ೧-೪೦-೩೦
ಅವನು ದೇವತೆಗಳ ಭಾಗವನ್ನು ಹಂಚುವುದಕ್ಕಾಗಿ ಮಂತ್ರಪ್ರಯೋಗದ ವಿಧಿಗಳೊಂದಿಗೆ ಯಜ್ಞಕರ್ಮದಲ್ಲಿ ಯೂಪ, ಸಮಿತ್ತು, ಸ್ರುವಾ, ಸೋಮ, ಪವಿತ್ರಾ ಮತ್ತು ಪರಿಧಿಗಳನ್ನು ಕಲ್ಪಿಸಿದನು.
ಯಜ್ಞಿಯಾನಿ ಚ ದ್ರವ್ಯಾಣಿ ಯಜ್ಞಾಂಶ್ಚ ಸಚಯಾನಲಾನ್ ।
ಸದಸ್ಯಾನ್ಯಜಮಾನಾಂಶ್ಚ ಮೇಧ್ಯಾದೀಂಶ್ಚ ಕ್ರತೂತ್ತಮಾನ್ ।। ೧-೪೦-೩೧
ವಿಬಭಾಜ ಪುರಾ ಸರ್ವಂ ಪಾರಮೇಷ್ಠ್ಯೇನ ಕರ್ಮಣಾ ।
ಯಾಗಾನುರೂಪಾನ್ಯಃ ಕೃತ್ವಾ ಲೋಕಾನನುಪರಾಕ್ರಮತ್ ।। ೧-೪೦-೩೨
ಹಿಂದೆ ಅವನು ಯಜ್ಞೋಪಯೋಗೀ ದ್ರವ್ಯ, ಯಜ್ಞ, ಇಟ್ಟಿಗೆಯಿಂದ ಮಾಡಲ್ಪಟ್ಟ ಅಗ್ನಿಸ್ಥಾಪನಾ ಸ್ಥಾನ, ಮತ್ತು ಆವಹನೀಯವೇ ಮೊದಲಾದ ಮೂರು ಪ್ರಕಾರದ ಅಗ್ನಿಗಳು, ಸದಸ್ಯ6, ಯಜಮಾನ, ಉತ್ತಮ ಯಜ್ಞ ಹಾಗೂ ಮೇದ್ಯ ಮೊದಲಾದ ಪದಾರ್ಥಗಳನ್ನು ಪರಮೇಷ್ಠಿಯ ವಿಧಿಯಲ್ಲಿ ವಿಭಜಿಸಿದನು ಮತ್ತು ಲೋಕಗಳು ಯುಗಗಳ ಅನುರೂಪವಾಗಿರುವಂತೆ ಮಾಡಿ ನಂತರ ತನ್ನ ಹಸ್ತಕ್ಷೇಪವನ್ನು ನಿಲ್ಲಿಸಿದನು.
ಕ್ಷಣಾ ಲವಾಶ್ಚ ಕಾಷ್ಠಾಶ್ಚ ಕಲಾಸ್ತ್ರೈಕಾಲ್ಯಮೇವ ಚ ।
ಮುಹೂರ್ತಾಸ್ತಿಥಯೋ ಮಾಸಾಃ ಪಕ್ಷಾಃ ಸಂವತ್ಸರಾಸ್ತಥಾ ।। ೧-೪೦-೩೩
ಋತವಃ ಕಾಲಯೋಗಾಶ್ಚ ಪ್ರಮಾಣಂ ತ್ರಿವಿಧಂ ತ್ರಿಷು ।
ಆಯುಃ ಕ್ಷೇತ್ರಾಣ್ಯುಪಚಯೋ ಲಕ್ಷಣಂ ರೂಪಸೌಷ್ಠವಮ್ ।। ೧-೪೦-೩೪
ಅವನು ಕ್ಷಣ, ಲವ, ಕಾಷ್ಠಾ, ಕಲಾ, ತ್ರಿಕಾಲ7, ಮುಹೂರ್ತ, ತಿಥಿ, ಮಾಸ, ಪಕ್ಷ, ವರ್ಷ, ಋತು, ಕಾಲಯೋಗಗಳು, ಮೂರು ಕರ್ಮಗಳ8 ಮೂರು ಪ್ರಮಾಣಗಳು9, ಆಯು, ಕ್ಷೇತ್ರ, ವೃದ್ಧಿ, ಲಕ್ಷಣ ಮತ್ತು ರೂಪಸೌಷ್ಠವವನ್ನು ರಚಿಸಿದನು.
ತ್ರಯೋ ವರ್ಣಾಸ್ತ್ರಯೋ ಲೋಕಾಸ್ತ್ರೈವಿದ್ಯಂ ಪಾವಕಾಸ್ತ್ರಯಃ ।
ತ್ರೈಕಾಲ್ಯಂ ತ್ರೀಣಿ ಕರ್ಮಾಣಿ ತ್ರಯೋಽಪಾಯಾಸ್ತ್ರಯೋ ಗುಣಾಃ ।। ೧-೪೦-೩೫
ಅವನು ಮೂರು ವರ್ಣಗಳು10, ಮೂರು ಲೋಕಗಳು11, ಮೂರು ವಿದ್ಯೆಗಳು12, ಮೂರು ಅಗ್ನಿಗಳು13, ಮೂರು ಕಾಲಗಳು14, ಮೂರು ಕರ್ಮಗಳು15, ಮೂರು ಅಪಾಯಗಳು16 ಮತ್ತು ಮೂರು ಗುಣಗಳನ್ನು17 ರಚಿಸಿದನು.
ತ್ರಯೋ ಲೋಕಾಃ ಪುರಾ ಸೃಷ್ಟಾ ಯೇನಾನಂತ್ಯೇನ ಕರ್ಮಣಾ ।
ಸರ್ವಭೂತಗಣಸ್ರಷ್ಟಾ ಸರ್ವಹೂತಗುಣಾತ್ಮಕಃ ।। ೧-೪೦-೩೬
ಹಿಂದೆ ಅವನು ಜೀವಿಗಳ ಅನಂತ ಕರ್ಮಗಳಿಗಾಗಿ ಮೂರು ಲೋಕಗಳನ್ನು ಸೃಷ್ಟಿಸಿದನು. ಸರ್ವಭೂತಗಳನ್ನು ಸೃಷ್ಟಿಸಿದ ಅವನು ಸರ್ವರ ಗುಣಾತ್ಮಕನು.
ನೃಣಾಮಿಂದ್ರಿಯಪೂರ್ವೇಣ ಯೋಗೇನ ರಮತೇ ಚ ಯಃ ।
ಗತಾಗತಾಭ್ಯಾಂ ಯೋ ನೇತಾ ಸರ್ವತ್ರ ಜಗದೀಶ್ವರಃ ।। ೧-೪೦-೩೭
ಆ ಜಗದೀಶ್ವರನು ಸರ್ವತ್ರ ಹುಟ್ಟು-ಸಾವುಗಳ ನೇತಾರ. ನರರ ಇಂದ್ರಿಯರೂಪದಲ್ಲಿ ವಿಷಯಗಳೊಡನೆ ಕೂಡಿ ರಮಿಸುತ್ತಾನೆ.
ಯೋ ಗತಿರ್ಧರ್ಮಯುಕ್ತಾನಾಮಗತಿಃ ಪಾಪಕರ್ಮಣಾಮ್ ।
ಚಾತುರ್ವರ್ಣ್ಯಸ್ಯ ಪ್ರಭವಃ ಚಾತುರ್ಹೋತ್ರಸ್ಯ ರಕ್ಷಿತಾ ।। ೧-೪೦-೩೮
ಧರ್ಮಯುಕ್ತರ ಗತಿಯೂ ಅವನೇ. ಪಾಪಕರ್ಮಿಗಳ ಅಗತಿಯೂ ಅವನೇ. ಅವನು ಚಾತುರ್ವರ್ಣಗಳ ಕರ್ತ ಮತ್ತು ಚಾತುರ್ಹೋತ್ರದ ರಕ್ಷಕ.
ಚಾತುರ್ವಿದ್ಯಸ್ಯ ಯೋ ವೇತ್ತಾ ಚಾತುರಾಶ್ರಮ್ಯಸಂಶ್ರಯಃ ।
ದಿಗಂತರೋ ನಭೋಭೂತೋ ವಾಯುರಾಪೋ ವಿಭಾವಸುಃ ।। ೧-೪೦-೩೯
ಅವನು ನಾಲ್ಕು ವಿದ್ಯೆಗಳನ್ನು ತಿಳಿದವನು18. ನಾಲ್ಕು ಆಶ್ರಮಗಳ19 ಆಶ್ರಯನು. ದಿಕ್ಕುಗಳು ಅವನಲ್ಲಿವೆ. ಅವನು ವಾಯು-ಆಕಾಶ-ಜಲ-ಅಗ್ನಿ ಮತ್ತು ಅಗ್ನಿರೂಪನು.
ಚಂದ್ರಸೂರ್ಯಮಯಜ್ಯೋತಿರ್ಯೋಗೀಶಃ ಕ್ಷಣದಾಂತಕಃ ।
ಯತ್ಪರಂ ಶ್ರೂಯತೇ ಜ್ಯೋತಿರ್ಯತ್ಪರಂ ಶ್ರೂಯತೇ ತಪಃ ।। ೧-೪೦-೪೦
ಅವನು ಸೂರ್ಯ-ಚಂದ್ರರಿಗೂ ಜ್ಯೋತಿಯನ್ನು ನೀಡುವವನು. ಅವನು ಯೋಗೀಶನು. ರಾತ್ರಿಯನ್ನು ಕಳೆಯುವವನು. ಅವನು ಪರಮಜ್ಯೋತಿ20ಯೆಂದೂ ಪರಮ ತಪ21ನೆಂದೂ ಕೇಳಿದ್ದೇವೆ.
ಯಂ ಪರಂ ಪ್ರಾಹುರಪರಂ ಯಃ ಪರಃ ಪರಮಾತ್ಮವಾನ್ ।
ನಾರಾಯಣಪರಾ ವೇದಾ ನಾರಾಯಣಪರಾಃ ಕ್ರಿಯಾಃ ।। ೧-೪೦-೪೧
ಅವನನ್ನು ಪರ22, ಅಪರ23 ಮತ್ತು ಪರಾತ್ಪರ24 ಎಂದೂ ಕರೆಯುತ್ತಾರೆ. ಅವನು ವೇದನಾರಾಯಣನ ನಿರೂಪನು. ಎಲ್ಲ ಕ್ರಿಯೆಗಳೂ ನಾರಾಯಣನಲ್ಲಿಯೇ ಪರ್ಯವಸಾನಗೊಳ್ಳುತ್ತವೆ.
ನಾರಾಯಣಪರೋ ಧರ್ಮೋ ನಾರಾಯಣಪರಾ ಗತಿಃ ।
ನಾರಾಯಣಪರಂ ಸತ್ಯಂ ನಾರಾಯಣಪರಂ ತಪಃ ।। ೧-೪೦-೪೨
ಧರ್ಮದ ಲಕ್ಷ್ಯವೂ ನಾರಾಯಣನೇ. ನಾರಾಯಣನೇ ಸಂಪೂರ್ಣ ಗತಿಗಳ ಪರಮ ಗತಿ. ನಾರಾಯಣನೇ ಪರಮ ಸತ್ಯ ಮತ್ತು ತಪಸ್ಸಿನ ಮೂಲಕ ದೊರೆಯುವವನೇ ನಾರಾಯಣ.
ನಾರಾಯಣಪರೋ ಮೋಕ್ಷೋ ನಾರಾಯಣಪರಾಯಣಮ್ ।
ಆದಿತ್ಯಾದಿಸ್ತು ಯೋ ದಿವ್ಯೋ ಯಶ್ಚ ದೈತ್ಯಾಂತಕೋ ವಿಭುಃ ।। ೧-೪೦-೪೩
ನಾರಾಯಣನೇ ಪರಮ ಮೋಕ್ಷ. ನಾರಾಯಣನೇ ಪರಮ ಆಶ್ರಯ. ಅವನೇ ಆದಿತ್ಯಾದಿ ದಿವ್ಯ ಗ್ರಹಗಳು. ಅವನೇ ದೈತ್ಯಾಂತಕ ವಿಭು.
ಯುಗಾಂತೇಷ್ವಂತಕೋ ಯಶ್ಚ ಯಶ್ಚ ಲೋಕಾಂತಕಾಂತಕಃ ।
ಸೇತುರ್ಯೋ ಲೋಕಸೇತೂನಾಂ ಮೇಧ್ಯೋ ಯೋ ಮೇಧ್ಯಕರ್ಮಣಾಮ್ ।। ೧-೪೦-೪೪
ಪ್ರಲಯದ ಸಮಯದಲ್ಲಿ ಕಾಲದ ರೂಪಧಾರಣ ಮಾಡಿ ಸಂಸಾರವನ್ನು ಅಂತ್ಯಗೊಳಿಸುವ ಅವನು ಯಮನಿಗೂ ಯಮನು. ಮೃತ್ಯುವಿಗೂ ಮೃತ್ಯುವು. ಲೋಕಸೇತುವೆಗಳಿಗೂ ಸೇತುವು. ಪವಿತ್ರಕರ್ಮಿಗಳಿಗಿಂತಲೂ ಪವಿತ್ರನು.
ವೇದ್ಯೋ ಯೋ ವೇದವಿದುಷಾಂ ಪ್ರಭುರ್ಯಃ ಪ್ರಭವಾತ್ಮನಾಮ್ ।
ಸೋಮಭೂತಸ್ತು ಸೌಮ್ಯಾನಾಮಗ್ನಿಭೂತೋಽಗ್ನಿವರ್ಚಸಾಮ್ ।। ೧-೪೦-೪೫
ಅವನು ವೇದವಿದುಷರಿಗೆ ಮಾತ್ರ ಅರ್ಥವಾಗುವವನು. ಪ್ರಭುಗಳಿಗೂ ಪ್ರಭುವು. ಆತ್ಮವಾನನು. ಸೌಮ್ಯರಲ್ಲಿರುವ ಸೋಮಭೂತನು. ಅಗ್ನಿವರ್ಚಸರಲ್ಲಿರುವ ಅಗ್ನಿಯು.
ಮನುಷ್ಯಾಣಾಂ ಮನೋಭೂತಸ್ತಪೋಭೂತಸ್ತಪಸ್ವಿನಾಮ್ ।
ವಿನಯೋ ನಯವೃತ್ತೀನಾಂ ತೇಜಸ್ತೇಜಸ್ವಿನಾಮಪಿ ।
ಸರ್ಗಾಣಾಂ ಸರ್ಗಕಾರಶ್ಚ ಲೋಕಹೇತುರನುತ್ತಮಃ ।। ೧-೪೦-೪೬
ಅವನು ಮನುಷ್ಯರ ಮನೋಭೂತನು. ತಪಸ್ವಿಗಳ ತಪೋಭೂತನು. ನಯವೃತ್ತಿಗಳಲ್ಲಿರುವ ವಿನಯನು. ತೇಜಸ್ವಿಗಳಲ್ಲಿರುವ ತೇಜಸ್ಸು. ಸೃಷ್ಟಿಗಳನ್ನು ಸೃಷ್ಟಿಸುವವನು. ಲೋಕ ಕಾರಣನು. ಅನುತ್ತಮನು.
ವಿಗ್ರಹೋ ವಿಗ್ರಹಾರ್ಹಾಣಾಂ ಗತಿರ್ಗತಿಮತಾಮಪಿ ।
ಆಕಾಶಪ್ರಭವೋ ವಾಯುರ್ವಾಯುಪ್ರಾಣೋ ಹುತಾಶನಃ ।। ೧-೪೦-೪೭
ಅವನು ಶರೀರಧಾರಣೆ ಮಾಡಿ ಅವತರಿಸುವವರಲ್ಲಿ ವಿಗ್ರಹರೂಪನು. ಗತಿಮಾನರ ಗತಿಯು. ಆಕಾಶದಲ್ಲಿ ಹುಟ್ಟಿದ ವಾಯುವಿನಿಂದ ಪ್ರಾಣಧಾರಣೆ ಮಾಡುವ ಹುತಾಶನನು.
ದೇವಾ ಹುತಾಶನಪ್ರಾಣಾಃ ಪ್ರಾಣೋಽಗ್ನೇರ್ಮಧುಸೂದನಃ ।
ರಸಾದ್ವೈ ಶೋಣಿತಂ ಜಾತಂ ಶೋಣಿತಾನ್ಮಾಂಸಮುಚ್ಯತೇ ।। ೧-೪೦-೪೮
ಮಧುಸೂದನನು ಅಗ್ನಿ ಮತ್ತು ಅಗ್ನಿದೇವತೆಗಳ ಪ್ರಾಣ. ರಸದಿಂದ ರಕ್ತವು ಆಗುತ್ತದೆ ಮತ್ತು ರಕ್ತದಿಂದ ಮಾಂಸವು ಉಂಟಾಗುತ್ತದೆ25.
ಮಾಂಸಾತ್ತು ಮೇದಸೋ ಜನ್ಮ ಮೇದಸೋಽಸ್ಥೀನಿ ಚೈವ ಹಿ ।
ಅಸ್ಥ್ನೋ ಮಜ್ಜಾ ಸಮಭವನ್ಮಜ್ಜಾತಃ ಶುಕ್ರಮೇವ ಚ ।। ೧-೪೦-೪೯
ಮಾಂಸದಿಂದ ಮೇದಸವು ಹುಟ್ಟುತ್ತದೆ ಮತ್ತು ಮೇದಸದಿಂದ ಅಸ್ಥಿಗಳು ಹುಟ್ಟುತ್ತವೆ. ಅಸ್ಥಿಗಳಿಂದ ಮಜ್ಜೆ ಮತ್ತು ಮಜ್ಜೆಯಿಂದ ಶುಕ್ರದ ಉತ್ಪತ್ತಿಯಾಗುತ್ತದೆ.
ಶುಕ್ರಾದ್ಗರ್ಭಃ ಸಮಭವದ್ರಸಮೂಲೇನ ಕರ್ಮಣಾ ।
ತತ್ರಾಪಾಂ ಪ್ರಥಮೋ ಭಾಗಃ ಸ ಸೌಮ್ಯೋ ರಾಶಿರುಚ್ಯತೇ ।। ೧-೪೦-೫೦
ಗರ್ಭೋಷ್ಮಸಂಭವೋಽಗ್ನಿರ್ಯೋ ದ್ವಿತೀಯೋ ರಾಶಿರುಚ್ಯತೇ ।
ಶುಕ್ರಂ ಸೋಮಾತ್ಮಕಂ ವಿದ್ಯಾದಾರ್ತವಂ ವಿದ್ಧಿ ಪಾವಕಮ್ ।
ರಸಮೂಲ ಕರ್ಮದಿಂದಾಗಿ ಶುಕ್ರದಿಂದ ಗರ್ಭವುಂಟಾಗುತ್ತದೆ. ಅಲ್ಲಿ ಪ್ರಥಮ ಭಾಗವಾದ ಜಲದ ಅಂಶವನ್ನು ಸೋಮನಿಗೆ ಸಂಬಧಿಸಿದುದೆಂದು ಹೇಳುತ್ತಾರೆ. ಗರ್ಭದ ಉಷ್ಣದಿಂದ ಉಂಟಾದ ಎರಡನೆಯ ಭಾಗವು ಅಗ್ನಿಯ ಅಂಶವೆಂದು ಹೇಳುತ್ತಾರೆ. ಹೀಗೆ ವೀರ್ಯವು ಸೋಮನ ಅಂಶವೆಂದೂ ರಜವು ಅಗ್ನಿಯ ಅಂಶವೆಂದೂ ತಿಳಿಯಬೇಕು.
ಭಾಗೌ ರಸಾತ್ಮಕೌ ಹ್ಯೇಷಾಂ ವೀರ್ಯಂ ಚ ಶಶಿಪಾವಕೌ ।। ೧-೪೦-೫೧
ಕಫವರ್ಗೇ ಭವೇಚ್ಛುಕ್ರಂ ಪಿತ್ತವರ್ಗೇ ಚ ಶೋಣಿತಮ್ ।
ಕಫಸ್ಯ ಹೃದಯಂ ಸ್ಥಾನಂ ನಾಭ್ಯಾಂ ಪಿತ್ತಂ ಪ್ರತಿಷ್ಠಿತಮ್ ।। ೧-೪೦-೫೨
ಇವೆರಡೂ ರಸದ ಭಾಗಗಳೇ ಆಗಿವೆ. ಏಕೆಂದರೆ ಶಶಿ ಮತ್ತು ಪಾವಕರು ಈ ರಸದ ಸಾರವೇ ಆಗಿದ್ದಾರೆ. ಶುಕ್ರವು ಕಫ ವರ್ಗಕ್ಕೆ ಸೇರುತ್ತದೆ ಮತ್ತು ರಕ್ತವು ಪಿತ್ತವರ್ಗಕ್ಕೆ ಸೇರುತ್ತದೆ. ಕಫದ ಸ್ಥಾನವು ಹೃದಯ ಮತ್ತು ಪಿತ್ತದ ಸ್ಥಾನವು ನಾಭಿ.
ದೇಹಸ್ಯ ಮಧ್ಯೇ ಹೃದಯಂ ಸ್ಥಾನಂ ತನ್ಮನಸಃ ಸ್ಮೃತಮ್ ।
ನಾಭಿಕೋಷ್ಠಾಂತರಂ ಯತ್ತು ತತ್ರ ದೇವೋ ಹುತಾಶನಃ ।। ೧-೪-೫೩
ದೇಹದ ಮಧ್ಯದಲ್ಲಿರುವ ಹೃದಯವು ಮನಸ್ಸಿನ ಸ್ಥಾನವೆಂದೂ ನಾಭಿಕೋಶದ ಒಳಗೆ ಅಗ್ನಿದೇವನು ಇರುತ್ತಾನೆಂದೂ ಹೇಳುತ್ತಾರೆ.
ಮನಃ ಪ್ರಜಾಪತಿರ್ಜ್ಞೇಯಃ ಕಫಃ ಸೋಮೋ ವಿಭಾವ್ಯತೇ ।
ಪಿತ್ತಮಗ್ನಿಃ ಸ್ಮೃತಂ ಹ್ಯೇತದಗ್ನೀಷೋಮಾತ್ಮಕಂ ಜಗತ್ ।। ೧-೪೦-೫೪
ಮನಸ್ಸನ್ನು ಪ್ರಜಾಪತಿಯೆಂದು ತಿಳಿಯಬೇಕು. ಕಫವು ಸೋಮವೆಂದು ತಿಳಿಯಬೇಕು. ಪಿತ್ತವು ಅಗ್ನಿಯೆಂದು ಹೇಳುತ್ತಾರೆ. ಹೀಗೆ ಈ ಜಗತ್ತು ಅಗ್ನಿ-ಸೋಮಾತ್ಮಕವಾಗಿದೆ.
ಏವಂ ಪ್ರವರ್ತತೇ ಗರ್ಭೇ ವರ್ಧಿತೇಽಂಬುದಸನ್ನಿಭೇ ।
ವಾಯುಃ ಪ್ರವೇಶಂ ಸಂಚಕ್ರೇ ಸಂಗತಃ ಪರಮಾತ್ಮನಾ ।। ೧-೪೦-೫೫
ಧೂಳು, ಬೆಳಕು, ಜಲ ಮತ್ತು ಗಾಳಿಯಿಂದ ಮೋಡಗಳು ಹೇಗೆ ವೃದ್ಧಿಯಾಗುವವೋ ಹಾಗೆ ಗರ್ಭವೂ ಕೂಡ ಅನ್ನ, ಅಗ್ನಿ, ಜಲ ಮತ್ತು ಪ್ರಾಣದಿಂದ ಬೆಳೆಯುತ್ತದೆ. ಅಚೇತನವಾದ ಗರ್ಭವನ್ನು ವಾಯುವು ಪರಮಾತ್ಮನೊಡನೆ ಪ್ರವೇಶಿಸಿ ಅದನ್ನು ಚಲಿಸುವಂತೆ ಮಾಡುತ್ತಾನೆ.
ತತೋಽಂಗಾನಿ ವಿಸೃಜತಿ ಬಿಭರ್ತಿ ಪರಿವರ್ಧಯನ್ ।
ಸ ಪಂಚಧಾ ಶರೀರಸ್ಥೋ ಭಿದ್ಯತೇ ವರ್ಧತೇ ಪುನಃ ।। ೧-೪೦-೫೬
ಅನಂತರ ಅದು ಅಂಗಗಳನ್ನು ರಚಿಸುತ್ತದೆ ಮತ್ತು ಪುಷ್ಟಿಯನ್ನಿತ್ತು ಅವುಗಳನ್ನು ಬೆಳೆಸುತ್ತದೆ. ಆ ವಾಯುವು ಶರೀರದಲ್ಲಿ ಐದು ಬೇರೆ ಬೇರೆ ರೂಪದಲ್ಲಿದ್ದು ಅದನ್ನು ಪುನಃ ಪುನಃ ಬೆಳೆಸುತ್ತದೆ.
ಪ್ರಾಣೋಽಪಾನಃ ಸಮಾನಶ್ಚ ಉದಾನೋ ವ್ಯಾನ ಏವ ಚ ।
ಪ್ರಾಣಃ ಸ ಪ್ರಥಮಂ ಸ್ಥಾನಂ ವರ್ಧಯನ್ಪರಿವರ್ತತೇ ।। ೧-೪೦-೫೭
ಈ ಐದು ವಿಧಗಳು ಈ ರೀತಿ ಇವೆ: ಪ್ರಾಣ, ಅಪಾನ, ಸಮಾನ, ಉದಾನ ಮತ್ತು ವ್ಯಾನ. ಇದರಲ್ಲಿ ಮೊದಲನೆಯ ಸ್ಥಾನದಲ್ಲಿದ್ದ ಪ್ರಾಣವು ಶರೀರಕ್ಕೆ ಪುಷ್ಟಿಯನ್ನು ಕೊಡುತ್ತಾ ಬರುತ್ತದೆ.
ಅಪಾನಃ ಪಶ್ಚಿಮಂ ಕಾಯಮುದಾನೋರ್ಧ್ವಂ ಶರೀರಿಣಃ ।
ವ್ಯಾನೋ ವ್ಯಾಯಚ್ಛತೇ ಯೇನ ಸಮಾನಃ ಸನ್ನಿವರ್ತಯೇತ್ ।
ಭೂತಾವಾಪ್ತಿಸ್ತತಸ್ತಸ್ಯ ಜಾಯತೇಂದ್ರಿಯಗೋಚರಾತ್ ।। ೧-೪೦-೫೮
ಅಪಾನವು ಪ್ರಾಣಿಯ ಕೆಳ ಶರೀರವನ್ನು ಮತ್ತು ಉದಾನವು ಪ್ರಾಣಿಯ ಮೇಲಿನ ಶರೀರವನ್ನು ವರ್ಧಿಸುತ್ತದೆ. ವ್ಯಾನವು ವ್ಯಾಯಾಮ ಕರ್ಮಗಳನ್ನು ಮಾಡಿಸುತ್ತದೆ ಮತ್ತು ಸಮಾನವು ಸೇವಿಸಿದ ಆಹಾರ-ಪಾನೀಯಗಳನ್ನು ಯಥಾಸ್ಥಾನಗಳಿಗೆ ತಲುಪಿಸಿ ಸಮನಾಗಿಸುತ್ತದೆ. ಈ ರೀತಿ ವಾಯುವಿನ ಕರ್ಮಗಳ ವಿಭಜನೆಯು ಜೀವಿಯ ಇಂದ್ರಿಯಗಳ ವಿಷಯದ ಮೂಲಕ ಸಾಕ್ಷಾತ್ಕಾರವಾಗುತ್ತದೆ.
ಪೃಥಿವೀ ವಾಯುರಾಕಾಶಮಾಪೋ ಜ್ಯೋತಿಶ್ಚ ಪಂಚಮಮ್ ।
ತಸ್ಯೇಂದ್ರಿಯಾಣಿ ವಿಷ್ಟಾನಿಸ್ವಂ ಸ್ವಂ ಯೋಗಂ ಪ್ರಚಕ್ರಿರೇ ।। ೧-೪೦-೫೯
ಪೃಥ್ವೀ, ವಾಯು, ಆಕಾಶ, ಆಪ ಮತ್ತು ಐದನೆಯ ಜ್ಯೋತಿ ಇವು ತಮ್ಮ ತಮ್ಮ ಇಂದ್ರಿಯಗಳನ್ನು ಪ್ರವೇಶಿಸಿ ತಮಗೆ ಸಂಬಂಧಿಸಿದವುಗಳನ್ನು ಗ್ರಹಿಸುತ್ತವೆ.
ಪಾರ್ಥಿವಂ ದೇಹಮಾಹುಸ್ತಂ ಪ್ರಾಣಾತ್ಮಾನಂ ಚ ಮಾರುತಮ್ ।
ಛಿದ್ರಾಣ್ಯಾಕಾಶಯೋನೀನಿ ಜಲಾತ್ಸ್ರಾವಃ ಪ್ರವರ್ತತೇ ।। ೧-೪೦-೬೦
ದೇಹವನ್ನು ಪಾರ್ಥಿವವೆಂದೂ, ಪ್ರಾಣವನ್ನು ಮಾರುತವೆಂದೂ, ರಂಧ್ರಗಳನ್ನು ಆಕಾಶಯೋನಿಯೆಂದೂ, ಸ್ರಾವಗಳು ಜಲಸ್ವರೂಪವೆಂದೂ ಹೇಳುತ್ತಾರೆ.
ಜ್ಯೋತಿಶ್ಚಕ್ಷುಶ್ಚ ತೇಜಾತ್ಮಾ ತೇಷಾಂ ಯಂತಾ ಮನಃ ಸ್ಮೃತಃ ।
ಗ್ರಾಮಾಶ್ಚ ವಿಷಯಾಶ್ಚೈವ ಯಸ್ಯ ವೀರ್ಯಾತ್ಪ್ರವರ್ತಿತಾಃ ।। ೧-೪೦-೬೧
ಚಕ್ಷುವು ತೇಜಸ್ವರೂಪವು. ಅವುಗಳ ವಾಹನವೇ ಮನವೆಂದು ಹೇಳುತ್ತಾರೆ. ಮನಸ್ಸಿನ ವೀರ್ಯದಿಂದಲೇ ವಿಷಯಗ್ರಾಮಗಳು ಉಂಟಾಗುತ್ತವೆ.
ಇತ್ಯೇವಂ ಪುರುಷಃ ಸರ್ವಾನ್ಸೃಜನ್ಲೋಕಾನ್ಸನಾತನಾನ್ ।
ಕಥಂ ಲೋಕೇ ನೈಧನೇಽಸ್ಮಿನ್ನರತ್ವಂ ವಿಷ್ಣುರಾಗತಃ ।। ೧-೪೦-೬೨
ಹೀಗೆ ಸರ್ವ ಸನಾತನ ಲೋಕಗಳನ್ನೂ ಸೃಷ್ಟಿಸುತ್ತಿರುವ ಪುರುಷ ವಿಷ್ಣುವು ಹೇಗೆ ಈ ನಿಧನಶೀಲ ಲೋಕದಲ್ಲಿ ನರತ್ವವನ್ನು ಪಡೆದುಕೊಂಡನು?
ಏಷ ಮೇ ಸಂಶಯೋ ಬ್ರಹ್ಮನ್ನೇವಂ ಮೇ ವಿಸ್ಮಯೋ ಮಹಾನ್ ।
ಕಥಂ ಗತಿರ್ಗತಿಮತಾಮಾಪನ್ನೋ ಮಾನುಷೀಂ ತನುಮ್ ।। ೧-೪೦-೬೩
ಬ್ರಹ್ಮನ್! ಗತಿಮತರಿಗೆ ಗತಿಯನ್ನು ನೀಡುವ ಅವನು ಮಾನುಷೀ ತನುವನ್ನು ಹೇಗೆ ಪಡೆದುಕೊಂಡನು ಎಂದು ನನಗೆ ಮಹಾ ವಿಸ್ಮಯವೂ ಸಂಶಯವೂ ಆಗಿದೆ.
ಶ್ರುತೋ ಮೇ ಸ್ವಸ್ವವಂಶಸ್ಯ ಪೂರ್ವೇಷಾಂ ಚೈವ ಸಂಭವಃ ।
ಶ್ರೋತುಮಿಚ್ಛಾಮಿ ವಿಷ್ಣೋಸ್ತು ವೃಷ್ಣೀನಾಂ ಚ ಯಥಾಕ್ರಮಮ್ ।। ೧-೪೦-೬೪
ನಾನು ನನ್ನ ವಂಶದ ಮತ್ತು ಪೂರ್ವಜರ ಸಂಭವಗಳನ್ನು ಕೇಳಿಯಾಯಿತು. ಈಗ ವಿಷ್ಣುವಿನ ಮತ್ತು ವೃಷ್ಣಿಗಳ ಉತ್ಪತ್ತಿಯನ್ನು ಕ್ರಮಾನುಸಾರವಾಗಿ ಕೇಳ ಬಯಸುತ್ತೇನೆ.
ಆಶ್ಚರ್ಯಂ ಪರಮಂ ವಿಷ್ಣುರ್ದೇವೈರ್ದೈತ್ಯೈಶ್ಚ ಕಥ್ಯತೇ ।
ವಿಷ್ಣೋರುತ್ಪತ್ತಿಮಾಶ್ಚರ್ಯಂ ಮಮಾಚಕ್ಷ್ವ ಮಹಾಮುನೇ ।। ೧-೪೦-೬೫
ದೇವತೆಗಳು ಮತ್ತು ದೈತ್ಯರು ವಿಷ್ಣುವು ಪರಮ ಆಶ್ಚರ್ಯನೆಂದು ಹೇಳುತ್ತಾರೆ. ಮಹಾಮುನೇ! ವಿಷ್ಣುವಿನ ಆಶ್ಚರ್ಯಕರ ಉತ್ಪತ್ತಿಯನ್ನು ನನಗೆ ಹೇಳು.
ಏತದಾಶ್ಚರ್ಯಮಾಖ್ಯಾನಂ ಕಥಯಸ್ವ ಸುಖಾವಹಮ್ ।
ಪ್ರಖ್ಯಾತಬಲವೀರ್ಯಸ್ಯ ವಿಷ್ಣೋರಮಿತತೇಜಸಃ ।
ಕರ್ಮ ಚಾಶ್ಚರ್ಯಭೂತಸ್ಯ ವಿಷ್ಣೋಸ್ತತ್ತ್ವಮಿಹೋಚ್ಯತಾಮ್ ।। ೧-೪೦-೬೬
ಆ ಪ್ರಖ್ಯಾತಬಲವೀರ್ಯ ಅಮಿತತೇಜಸ್ವೀ ವಿಷ್ಣುವಿನ ಸುಖವನ್ನೀಯುವ ಈ ಆಶ್ಚರ್ಯಕರ ಆಖ್ಯಾನವನ್ನು ಹೇಳು. ಮತ್ತು ಅವನ ಆಶ್ಚರ್ಯಕರ ಕರ್ಮಗಳ ಕುರಿತೂ ವಿಷ್ಣುವಿನ ಸತ್ತ್ವಗಳ ಕುರಿತೂ ಹೇಳು.”
ಸಮಾಪ್ತಿ
ಇತಿ ಶ್ರೀಮನ್ಮಹಾಭಾರತೇ ಖಿಲೇಷು ಹರಿವಂಶೇ ಹರಿವಂಶಪರ್ವಣಿ ವರಾಹೋತ್ಪತ್ತಿವರ್ಣನೇ ಚತ್ವಾರಿಂಶೋಽಧ್ಯಾಯಃ
-
ವರಾಹ ಶಬ್ಧದ ಆಧ್ಯಾತ್ಮಿಕ ಅರ್ಥ: ವರ ಮತ್ತು ಅಹ ಅರ್ಥಾತ್ ಶ್ರೇಷ್ಠ ಯಜ್ಞ. ↩︎
-
ಪಿತೃಗಳಿಗಾಗಿ ಪ್ರತಿ ಅಮವಾಸ್ಯೆಯಲ್ಲಿ ಮಾಡುವ ಮಾಸಿಕ ಶ್ರಾದ್ಧ. ↩︎
-
ಊರ್ಧ್ವ, ಮಧ್ಯ ಮತ್ತು ಅಧೋಗತಿರೂಪ ಸುಧಾ. ↩︎
-
ದೇವತೆಗಳಿಗೆ ಕೊಡುವ ಆಹುತಿಗಳು ಹವ್ಯಗಳು ಮತ್ತು ಪಿತೃಗಳಿಗೆ ನೀಡುವ ತರ್ಪಣ-ಪಿಂಡಾದಿಗಳು ಕವ್ಯಗಳು. ದ್ವಿಜರು ಇವೆರಡನ್ನೂ ಮಾಡುವವರು. ↩︎
-
ಶ್ರಾದ್ಧದಲ್ಲಿ ಅರ್ಪಿಸುವ ತರ್ಪಣ, ಪಿಂಡ ಮೊದಲಾದವುಗಳು, ಕವ್ಯ. ↩︎
-
ಯಜ್ಞಕರ್ಮಗಳನ್ನು ನಿರೀಕ್ಷಿಸುವ ಬ್ರಾಹ್ಮಣ. ↩︎
-
ಪ್ರಾತಃ, ಮಧ್ಯಾಹ್ನ ಮತ್ತು ಸಾಯಂಕಾಲಗಳು. ↩︎
-
ನಿತ್ಯ, ನೈಮಿತ್ತಿಕ ಮತ್ತು ಕಾಮ್ಯ ಕರ್ಮಗಳು. ↩︎
-
ಶ್ರುತಿ, ಸ್ಮೃತಿ ಮತ್ತು ಶಿಷ್ಟಾಚಾರ. ↩︎
-
ದ್ವಿಜರಾದ ಬ್ರಾಹ್ಮಣ, ಕ್ಷತ್ರಿಯ ಮತ್ತು ವೈಶ್ಯ. ↩︎
-
ಭೂಲೋಕ, ಭುವರ್ಲೋಕ ಮತ್ತು ಸುವರ್ಲೋಕ. ↩︎
-
ಋಕ್, ಯಜು ಮತ್ತು ಸಾಮ. ↩︎
-
ಗಾರ್ಹಪತ್ಯ, ಆವಹನೀಯ ಮತ್ತು ದಕ್ಷಿಣಾ. ↩︎
-
ಭೂತ, ಭವಿಷ್ಯತ್, ವರ್ತಮಾನ. ↩︎
-
ಸಾತ್ವಿಕ, ರಾಜಸ ಮತ್ತು ತಾಮಸ. ↩︎
-
ಪುತ್ರೈಷಣ, ವಿತ್ತೈಷಣ ಮತ್ತು ಲೋಕೈಷಣ. ↩︎
-
ಸತ್ತ್ವ, ರಜ ಮತ್ತು ತಮ. ↩︎
-
ಆನ್ವೀಷಿಕೀ, ತ್ರಯೀ, ವಾರ್ತಾ ಮತ್ತು ದಂಡನೀತಿ. ↩︎
-
ಬ್ರಹ್ಮಚರ್ಯ, ಗೃಹಸ್ಥ, ವಾನಪ್ರಸ್ಥ ಮತ್ತು ಸಂನ್ಯಾಸ. ↩︎
-
ಅವನ ಜ್ಯೋತಿಸ್ವರೂಪ ನೇತ್ರವು ಎಲ್ಲಕಡೆ ಎಲ್ಲವನ್ನೂ ನೋಡುತ್ತದೆ. ↩︎
-
ಪರಮ ತಪಸ್ಸಿನಿಂದ ಅವನು ಪ್ರಾಪ್ತನಾಗುತ್ತಾನೆ. ↩︎
-
ಸೂತ್ರಾತ್ಮಾ . ↩︎
-
ವಿರಾಟ್ ಸ್ವರೂಪ. ↩︎
-
ಸೂತ್ರಾತ್ಮಕ್ಕಿಂತಲೂ ಮೇಲಾದ ಮಾಯಾಸಂಪನ್ನ ಮಹೇಶ್ವರ, ಸಗುಣ ಬ್ರಹ್ಮ, ಆತ್ಮಕ್ಕೆ ಸಮಾನ ಮಾಯಾರೂಪೀ ಶರೀರಧಾರೀ. ↩︎
-
ಅವನು ಅಗ್ನಿಯ ಪ್ರಾಣವಾಗಿ ಅಗ್ನಿಯ ಮೂಲಕ ಅನ್ನದ ಸಾರರೂಪವಾಗುತ್ತಾನೆ. ಅನ್ನದ ಸಾರದಿಂದ ಅದು ಕ್ರಮಶಃ ವೀರ್ಯವಾಗಿ ಗರ್ಭವಾಗುತ್ತದೆ. ಈ ಪ್ರಕಾರ ಅಗ್ನಿಯ ಪ್ರಾಣನಾಗಿ ಅವನು ಅಗ್ನಿಯ ಮೂಲಕ ಸಂಪೂರ್ಣ ಸೃಷ್ಟಿಕಾರ್ಯವನ್ನು ನಡೆಸುತ್ತಾನೆ (ಗೀತಾ ಪ್ರೆಸ್). ↩︎