ಪ್ರವೇಶ
।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।
ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ
ಶ್ರೀ ಮಹಾಭಾರತ
ಖಿಲಭಾಗೇ ಹರಿವಂಶಃ
ಹರಿವಂಶ ಪರ್ವ
ಅಧ್ಯಾಯ 39
ಸಾರ
ಸ್ಯಮಂತಕ ಮಣಿಯ ಕಾರಣದಿಂದ ಪ್ರಸೇನ, ಸತ್ರಾಜಿತ ಮತ್ತು ಶತಧನ್ವರು ಮೃತ್ಯುವನ್ನಪ್ಪಿದುದು; ಬಲದೇವನ ದುರ್ಯೋಧನನನಿಗೆ ಗದಾಯುದ್ಧದ ಶಿಕ್ಷಣವನ್ನು ನೀಡುವುದು; ಅಕ್ರೂರನು ಸ್ಯಮಂತಕ ಮಣಿಯನ್ನು ಕೃಷ್ಣನಿಗೆ ಕೊಡಲು ಅದನ್ನು ಕೃಷ್ಣನು ಅವನಿಗೆ ಹಿಂದಿರುಗಿಸಿದುದು.
ವೈಶಂಪಾಯನ ಉವಾಚ
ಯತ್ತತ್ಸತ್ರಾಜಿತೇ ಕೃಷ್ಣೋ ಮಣಿರತ್ನಂ ಸ್ಯಮಂತಕಮ್ ।
ಅದಾತ್ತದ್ಧಾರಯಾಮಾಸ ಬಭ್ರುರ್ವೈ ಶತಧನ್ವನಾ ।। ೧-೩೯-೧
ವೈಶಂಪಾಯನನು ಹೇಳಿದನು: “ಕೃಷ್ಣನು ಸತ್ರಾಜಿತನಿಗೆ ಮರಳಿ ಕೊಟ್ಟಿದ್ದ ಮಣಿರತ್ನ ಸ್ಯಮಂತಕವನ್ನು ಬಭ್ರು ಅಕ್ರೂರನು ಶತಧನ್ವನ ಮೂಲಕ ಕದಿಯಲು ಬಯಸಿದನು.
ಯದಾ ಹಿ ಪ್ರಾರ್ಥಯಾಮಾಸ ಸತ್ಯಭಾಮಾಮನಿಂದಿತಾಮ್ ।
ಅಕ್ರೂರೋಽಂತರಮನ್ವಿಚ್ಛನ್ಮಣಿಂ ಚೈವ ಸ್ಯಮಂತಕಮ್ ।। ೧-೩೯-೨
ನಿತ್ಯವೂ ಚಿನ್ನವನ್ನು ಕೊಡುವ ಸ್ಯಮಂತಕ ಮಣಿಯನ್ನಲ್ಲದೇ ಅಕ್ರೂರನು ಅನಿಂದಿತೆ ಸತ್ಯಭಾಮೆಯನ್ನೂ ಬಯಸಿದ್ದನು.
ಸತ್ರಾಜಿತಂ ತತೋ ಹತ್ವಾ ಶತಧನ್ವಾ ಮಹಾಬಲಃ ।
ರಾತ್ರೌ ತನ್ಮಣಿಮಾದಾಯ ತತೋಽಕ್ರೂರಾಯ ದತ್ತವಾನ್ ।। ೧-೩೯-೩
ಮಹಾಬಲ ಶತಧನ್ವನು ರಾತ್ರಿಯಲ್ಲಿ ಸತ್ರಾಜಿತನನ್ನು ಕೊಂದು ಆ ಮಣಿಯನ್ನು ಅಕ್ರೂರನಿಗೆ ತಂದಿತ್ತನು.
ಅಕ್ರೂರಸ್ತು ತತೋ ರತ್ನಮಾದಾಯ ಭರತರ್ಷಭ । ಸಮಯಂ ಕಾರಯಾಂಚಕ್ರೇ ನಾವೇದ್ಯೋಽಹಂ ತ್ವಯೇತ್ಯುತ ।। ೧-೩೯-೪
ವಯಮಭ್ಯುಪಯಾಸ್ಯಾಮಃ ಕೃಷ್ಣೇನ ತ್ವಾಮಭಿದ್ರುತಮ್ ।
ಮಮಾದ್ಯ ದ್ವಾರಕಾ ಸರ್ವಾ ವಶೇ ತಿಷ್ಠತ್ಯಸಂಶಯಮ್ ।। ೧-೩೯-೫
ಭರತರ್ಷಭ! ಅಕ್ರೂರನಾದರೋ ಆ ರತ್ನವನ್ನು ತೆಗೆದುಕೊಂಡು “ನನ್ನಲ್ಲಿ ಮಣಿಯಿದೆಯೆಂಬ ವಿಷಯವನ್ನು ಯಾರಿಗೂ ಹೇಳಬಾರದು. ಕೃಷ್ಣನೇನಾದರೂ ನಿನ್ನನ್ನು ಪೀಡಿಸತೊಡಗಿದರೆ ನಾನು ನಿನ್ನ ಪಕ್ಷವನ್ನು ಸೇರಿಕೊಳ್ಳುತ್ತೇನೆ. ಈ ದಿನಗಳಲ್ಲಿ ದ್ವಾರಕೆಯಲ್ಲವೂ ನನ್ನ ವಶದಲ್ಲಿದೆ ಎನ್ನುವುದರಲ್ಲಿ ಸಂಶಯವೇ ಇಲ್ಲ.” ಎಂದು ಶತಧನ್ವನೊಂದಿಗೆ ಕರಾರನ್ನು ಮಾಡಿಕೊಂಡನು.
ಹತೇ ಪಿತರಿ ದುಃಖಾರ್ತಾ ಸತ್ಯಭಾಮಾ ಯಶಸ್ವಿನೀ ।
ಪ್ರಯಯೌ ರಥಮಾರುಹ್ಯ ನಗರಂ ವಾರಣಾವತಮ್ ।। ೧-೩೯-೬
ತಂದೆಯು ಹತನಾಗಲು ದುಃಖಾರ್ತಳಾದ ಯಶಸ್ವಿನೀ ಸತ್ಯಭಾಮೆಯು ರಥವನ್ನೇರಿ ವಾರಣಾವತನಗರಕ್ಕೆ ಹೋದಳು.
ಸತ್ಯಭಾಮಾ ತು ತದ್ವೃತ್ತಂ ಭೋಜಸ್ಯ ಶತಧನ್ವನಃ ।
ಭರ್ತುರ್ನಿವೇದ್ಯ ದುಃಖಾರ್ತಾ ಪಾರ್ಶ್ವಸ್ಥಾಶ್ರೂಣ್ಯವರ್ತಯತ್ ।। ೧-೩೯-೭
ದುಃಖಾರ್ತಳಾದ ಸತ್ಯಭಾಮೆಯು ಆಗ ಅಲ್ಲಿದ್ದ ಕೃಷ್ಣನ ಪಕ್ಕದಲ್ಲಿ ಕುಳಿತು ಭೋಜ ಶತಧನ್ವನನ ಆ ಕೃತ್ಯದ ಕುರಿತು ಹೇಳಿದಳು.
ಪಾಂಡವಾನಾಂ ತು ದಗ್ಧಾನಾಂ ಹರಿಃ ಕೃತ್ವೋದಕಕ್ರಿಯಾಮ್ ।
ಕುಲ್ಯಾರ್ಥೇ ಚಾಪಿ ಪಾಂಡೂನಾಂ ನ್ಯಯೋಜಯತ ಸಾತ್ಯಕಿಮ್ ।। ೧-೩೯-೮
ಆಗ ವಾರಣಾವತ ಲಾಕ್ಷಾಗೃಹದಲ್ಲಿ ಸುಟ್ಟುಹೋಗಿದ್ದ ಪಾಂಡವರಿಗೆ ಉದಕಕ್ರಿಯೆಗಳನ್ನು ಮಾಡಿ ಹರಿಯು ಪಾಂಡವರ ಅಸ್ತಿಸಂಚಯನ ಕಾರ್ಯಕ್ಕೆ ಸಾತ್ಯಕಿಯನ್ನು ನಿಯೋಜಿಸಿದನು.
ತತಸ್ತ್ವರಿತಮಾಗತ್ಯ ದ್ವಾರಕಾಂ ಮಧುಸೂದನಃ ।
ಪೂರ್ವಜಂ ಹಲಿನಂ ಶ್ರೀಮಾನಿದಂ ವಚನಮಬ್ರವೀತ್ ।। ೧-೩೯-೯
ತ್ವರೆಮಾಡಿ ದ್ವಾರಕೆಗೆ ಹಿಂದಿರುಗಿ ಮಧುಸೂದನನು ತನ್ನ ಪೂರ್ವಜ ಹಲಿ ಶ್ರೀಮಾನ ಬಲರಾಮನಿಗೆ ಹೇಳಿದನು:
ಹತಃ ಪ್ರಸೇನಃ ಸಿಂಹೇನ ಸತ್ರಾಜಿಚ್ಛತಧನ್ವನಾ ।
ಸ್ಯಮಂತಕಃ ಸ ಮದ್ಗಾಮೀ ತಸ್ಯ ಪ್ರಭುರಹಂ ವಿಭೋ ।। ೧-೩೯-೧೦
“ವಿಭೋ! ಪ್ರಸೇನನು ಸಿಂಹದಿಂದ ಹತನಾದನು. ಸತ್ರಾಚಿತನು ಶತಧನ್ವನಿಂದ ಹತನಾದನು. ಈಗ ಆ ಸ್ಯಮಂತಕ ಮಣಿಯ ಪ್ರಭುವು ನಾನಾಗುತ್ತೇನೆ.
ತದಾರೋಹ ರಥಂ ಶೀಘ್ರಂ ಭೋಜಂ ಹತ್ವಾ ಮಹಾಬಲಮ್ ।
ಸ್ಯಮಂತಕೋ ಮಹಾಬಾಹೋ ಹ್ಯಸ್ಮಾಕಂ ಸ ಭವಿಷ್ಯತಿ ।। ೧-೩೯-೧೧
ಮಹಾಬಾಹೋ! ಆದುದರಿಂದ ಶೀಘ್ರವಾಗಿ ರಥವನ್ನೇರಿ ಮಹಾಬಲ ಭೋಜನನ್ನು ಸಂಹರಿಸಿದರೆ ಸ್ಯಮಂತಕವು ನಮ್ಮದಾಗುತ್ತದೆ.”
ತತಃ ಪ್ರವವೃತೇ ಯುದ್ಧಂ ತುಮುಲಂ ಭೋಜಕೃಷ್ಣಯೋಃ ।
ಶತಧನ್ವಾ ತತೋಽಕ್ರೂರಮವೈಕ್ಷತ್ಸರ್ವತೋದಿಶಮ್ ।। ೧-೩೯-೧೨
ಆಗ ಭೋಜ ಶತಧನ್ವ ಮತ್ತು ಕೃಷ್ಣರ ನಡುವೆ ತುಮುಲ ಯುದ್ಧವು ಪ್ರಾರಂಭವಾಯಿತು. ಆಗ ಶತಧನ್ವನು ಅಕ್ರೂರನಿಗಾಗಿ ಎಲ್ಲ ಕಡೆ ನೋಡಿದನು.
ಸಂರಬ್ಧೌ ತಾವುಭೌ ದೃಷ್ಟ್ವಾ ತತ್ರ ಭೋಜಜನಾರ್ದನೌ ।
ಶಕ್ತೋಽಪಿ ಶಾಠ್ಯಾದ್ಧಾರ್ದಿಕ್ಯಮಕ್ರೂರೋ ನಾಭ್ಯಪದ್ಯತ ।। ೧-೩೯-೧೩
ಕುಪಿತರಾದ ಭೋಜ-ಜನಾರ್ದನರಿಬ್ಬರನ್ನೂ ನೋಡಿ ಶಕ್ತನಾಗಿದ್ದರೂ ಶಠತನದ ಕಾರಣದಿಂದ ಅಕ್ರೂರನು ಹಾರ್ದಿಕ್ಯ ಕೃತವರ್ಮನ ಮಗ ಶತಧನ್ವನ ಪರವಾಗಿ ಹೋರಾಡಲು ಹೋಗಲಿಲ್ಲ.
ಅಪಯಾನೇ ತತೋ ಬುದ್ಧಿಂ ಭೋಜಶ್ಚಕ್ರೇ ಭಯಾರ್ದಿತಃ ।
ಯೋಜನಾನಾಂ ಶತಂ ಸಾಗ್ರಂ ಹಯಯಾ ಪ್ರತ್ಯಪದ್ಯತ ।। ೧-೩೯-೧೪
ಆಗ ಭಯಾರ್ದಿತನಾದ ಶತಧನ್ವನು ಪಲಾಯನಮಾಡಲು ಯೋಚಿಸಿದನು. ಅವನು ಕುದುರೆಯನ್ನೇರಿ ನೂರು ಯೋಜನ ದೂರ ಪಲಾಯನ ಮಾಡಿದನು.
ವಿಖ್ಯಾತಾ ಹೃದಯಾ ನಾಮ ಶತಯೋಜನಗಾಮಿನೀ ।
ಭೋಜಸ್ಯ ವಡವಾ ರಾಜನ್ಯಯಾ ಕೃಷ್ಣಮಯೋಧಯತ್ ।। ೧-೩೯-೧೫
ರಾಜನ್! ಶತಧನ್ವನು ಯಾವ ಕುದುರೆಯನ್ನೇರಿ ಕೃಷ್ಣನೊಡನೆ ಯುದ್ಧಮಾಡಲು ಬಂದಿದ್ದನೋ ಆ ಕುದುರೆಯು ಶತಯೋಜನ ಗಾಮಿನಿಯಾಗಿತ್ತು ಮತ್ತು ಹೃದಯಾ ಎಂಬ ಹೆಸರಿನಿಂದ ವಿಖ್ಯಾತವಾಗಿತ್ತು.
ಕ್ಷೀಣಾಂ ಜವೇನ ಚ ಹಯಾಮಧ್ವನಃ ಶತಯೋಜನೇ ।
ದೃಷ್ಟ್ವಾ ರಥಸ್ಯ ತಾಂ ವೃದ್ಧಿಂ ಶತಧನ್ವಾನಮಾರ್ದಯತ್ ।। ೧-೩೯-೧೬
ಶತಯೋಜನ ದೂರ ಹೋದ ನಂತರ ಆ ಕುದುರೆಯ ವೇಗವು ಕಡಿಮಿಯಾಗತೊಡಗಿತು. ಕೃಷ್ಣನ ರಥದ ವೇಗವು ಹೆಚ್ಚಾಗುತ್ತಿರುವುದನ್ನು ಕಂಡು ಶತಧನ್ವನು ಕುದುರೆಯನ್ನು ಬಿಟ್ಟು ಓಡತೊಡಗಿದನು.
ತತಸ್ತಸ್ಯಾ ಹಯಾಯಾಸ್ತು ಶ್ರಮಾತ್ಖೇದಾಚ್ಚ ಭಾರತ ।
ಖಮುತ್ಪೇತುರಥ ಪ್ರಾಣಾಃ ಕೃಷ್ಣೋ ರಾಮಮಥಾಬ್ರವೀತ್ ।। ೧-೩೯-೧೭
ಭಾರತ! ಆಗ ಅವನ ಆ ಕುದುರೆಯು ಶ್ರಮ ಮತ್ತು ಖೇದದ ಕಾರಣದಿಂದ ಪ್ರಾಣವನ್ನು ತೊರೆಯಿತು. ಕೃಷ್ಣನು ರಾಮನಿಗೆ ಹೇಳಿದನು:
ತಿಷ್ಠಸ್ವೇಹ ಮಹಾಬಾಹೋ ದೃಷ್ಟದೋಷಾ ಹಯಾ ಮಯಾ ।
ಪದ್ಭ್ಯಾಂ ಗತ್ವಾ ಹರಿಷ್ಯಾಮಿ ಮಣೀರತ್ನಂ ಸ್ಯಮಂತಕಮ್ ।। ೧-೩೯-೧೮
“ಮಹಾಬಾಹೋ! ಕುದುರೆಗಳು ಬಳಲಿರುವುದನ್ನು ನೋಡು. ಇಲ್ಲಿಯೇ ನಿಲ್ಲಿಸು. ಪದಾತಿಯಾಗಿ ಹೋಗಿ ಆ ಮಣಿರತ್ನ ಸ್ಯಮಂತಕವನ್ನು ತರುತ್ತೇನೆ.”
ಪದ್ಭ್ಯಾಮೇವ ತತೋ ಗತ್ವಾ ಶತಧನ್ವಾನಮಚ್ಯುತಃ ।
ಮಿಥಿಲಾಮಭಿತೋ ರಾಜನ್ಜಘಾನ ಪರಮಾಸ್ತ್ರವಿತ್ ।। ೧-೩೯-೧೯
ರಾಜನ್! ಆಗ ಪರಮಾಸ್ತ್ರವಿದು ಅಚ್ಯುತನು ಪದಾತಿಯಾಗಿಯೇ ಹೋಗಿ ಮಿಥಿಲಾನಗರದ ಬಳಿ ಶತಧನ್ವನನ್ನು ಕೊಂದನು.
ಸ್ಯಮಂತಕಂ ಚ ನಾಪಶ್ಯದ್ಧತ್ವಾ ಬೋಜಂ ಮಹಾಬಲಮ್ ।
ನಿವೃತ್ತಂ ಚಾಬ್ರವೀತ್ಕೃಷ್ಣಂ ರತ್ನಂ ದೇಹೀತಿ ಲಾಂಗಲೀ ।। ೧-೩೯-೨೦
ಮಹಾಬಲ ಭೋಜನನ್ನು ಸಂಹರಿಸಿಯೂ ಅವನಿಗೆ ಸ್ಯಮಂತಕ ಮಣಿಯು ದೊರಕಲಿಲ್ಲ. ಹಿಂದಿರುಗಿದ ಕೃಷ್ಣನಿಗೆ ಲಾಂಗಲೀ ರಾಮನು ರತ್ನವನ್ನು ಕೊಡೆಂದು ಕೇಳಿದನು.
ನಾಸ್ತೀತಿ ಕೃಷ್ಣಶ್ಚೋವಾಚ ತತೋ ರಾಮೋ ರುಷಾನ್ವಿತಃ ।
ಧಿಕ್ಛಬ್ದಮಸಕೃತ್ಕೃತ್ವಾ ಪ್ರತ್ಯುವಾಚ ಜನಾರ್ದನಮ್ ।। ೧-೩೯-೨೧
“ಅದು ಸಿಗಲಿಲ್ಲ” ಎಂದು ಕೃಷ್ಣನು ಹೇಳಿದನು. ಆಗ ರಾಮನು ರೋಷಾನ್ವಿತನಾಗಿ ಧಿಕ್ಕಾರದ ಶಬ್ದಗಳನ್ನು ಬಳಸುತ್ತಾ ಜನಾರ್ದನನಿಗೆ ಹೇಳಿದನು:
ಭ್ರಾತೃತ್ವಾನ್ಮರ್ಷಯಾಮ್ಯೇಷ ಸ್ವಸ್ತಿ ತೇಽಸ್ತು ವ್ರಜಾಮ್ಯಹಮ್ ।
ಕೃತ್ಯಂ ನ ಮೇ ದ್ವಾರಕಯಾ ನ ತ್ವಯಾ ನ ಚ ವೃಷ್ಣಿಭಿಃ ।। ೧-೩೯-೨೨
“ಭ್ರಾತೃತ್ವದ ಕಾರಣದಿಂದ ನಿನ್ನ ಈ ಕೃತ್ಯವನ್ನು ಸಹಿಸಿಕೊಳ್ಳುತ್ತಿದ್ದೇನೆ! ನಿನಗೆ ಮಂಗಳವಾಗಲಿ! ಹೋಗುತ್ತಿದ್ದೇನೆ! ಇನ್ನು ನನಗೆ ದ್ವಾರಕೆಯಲ್ಲಾಗಲೀ, ನಿನ್ನಲ್ಲಾಗಲೀ ಮತ್ತು ವೃಷ್ಣಿಗಳಿಂದಾಗಲೀ ಯಾವ ಕೆಲಸವೂ ಇಲ್ಲ!”
ಪ್ರವಿವೇಶ ತತೋ ರಾಮೋ ಮಿಥಿಲಾಮರಿಮರ್ದನಃ ।
ಸರ್ವಕಾಮೈರುಪಚಿತೈರ್ಮೈಥಿಲೇನಾಭಿಪೂಜಿತಃ ।। ೧-೩೯-೨೩
ಆಗ ಅರಿಮರ್ದನ ರಾಮನು ಮಿಥಿಲೆಯನ್ನು ಪ್ರವೇಶಿಸಿದನು. ಮಿಥಿಲೇಶನು ಅವನ ಸರ್ವಕಾಮಗಳನ್ನು ಪೂರೈಸುವ ಉಪಚಾರವನ್ನು ಮಾಡಿ ಪೂಜಿಸಿದನು.
ಏತಸ್ಮಿನ್ನೇವ ಕಾಲೇ ತು ಬಭ್ರುರ್ಮತಿಮತಾಂ ವರಃ ।
ನಾನಾರೂಪಾನ್ಕ್ರತೂನ್ಸರ್ವಾನಾಜಹಾರ ನಿರರ್ಗಲಾನ್ ।। ೧-೩೯-೨೪
ಇದೇ ಕಾಲದಲ್ಲಿ ಮತಿವಂತರಲ್ಲಿ ಶ್ರೇಷ್ಠ ಬಭ್ರು1ವು ನಿರರ್ಗಲವಾದ ನಾನಾರೂಪದ ಕ್ರತುಗಳನ್ನು ನೆರವೇರಿಸಿದನು.
ದೀಕ್ಷಾಮಯಂ ಸ ಕವಚಂ ರಕ್ಷಾರ್ಥಂ ಪ್ರವಿವೇಶ ಹ ।
ಸ್ಯಮಂತಕಕೃತೇ ಪ್ರಾಜ್ಞೋ ಗಾಂದೀಪುತ್ರೋ ಮಹಾಯಶಾಃ ।। ೧-೩೯-೨೫
ಮಹಾಯಶಸ್ವೀ ಪ್ರಾಜ್ಞ ಗಾಂದೀಪುತ್ರ ಅಕ್ರೂರನು ಸ್ಯಮಂತಕವನ್ನು ರಕ್ಷಿಸುವುದಕ್ಕೋಸ್ಕರ ದೀಕ್ಷೆಯ ಕವಚವನ್ನು ಧರಿಸಿದ್ದನು2.
ಅಥ ರತ್ನಾನಿ ಚಾಗ್ರ್ಯಾಣಿ ದ್ರವ್ಯಾಣಿ ವಿವಿಧಾನಿ ಚ ।
ಷಷ್ಟಿಂ ವರ್ಷಾಣಿ ಧರ್ಮಾತ್ಮಾ ಯಜ್ಞೇಷು ವಿನಿಯೋಜಯತ್ ।। ೧-೩೯-೨೬
ಹಾಗೆ ಧರ್ಮಾತ್ಮಾ ಅಕ್ರೂರನು ಅರವತ್ತು ವರ್ಷಗಳ ಪರ್ಯಂತ ವಿವಿಧ ರತ್ನಗಳು ಮತ್ತು ಅಗ್ರ ದ್ರವ್ಯಗಳನ್ನು ಯಜ್ಞಗಳಿಗೆ ವೆಚ್ಚಮಾಡಿದನು.
ಅಕ್ರೂರಯಜ್ಞಾ ಇತಿ ತೇ ಖ್ಯಾತಾಸ್ತಸ್ಯ ಮಹಾತ್ಮನಃ ।
ಬಹ್ವನ್ನದಕ್ಷಿಣಾಃ ಸರ್ವೇ ಸರ್ವಕಾಮಪ್ರದಾಯಿನಃ ।। ೧-೩೯-೨೭
ಸರ್ವಕಾಮಗಳನ್ನೂ ಪೂರೈಸುವ ಮತ್ತು ಅಪಾರ ಅನ್ನ-ಕಕ್ಷಿಣೆಗಳಿಂದ ಕೂಡಿದ್ದ ಆ ಮಹಾತ್ಮನ ಯಜ್ಞವು ಅಕ್ರೂರಯಯಜ್ಞ ಎಂದೇ ಖ್ಯಾತವಾಯಿತು.
ಅಥ ದುರ್ಯೋಧನೋ ರಾಜಾ ಗತ್ವಾ ತು ಮಿಥಿಲಾಂ ಪ್ರಭುಃ ।
ಗದಾಶಿಕ್ಷಾಂ ತತೋ ದಿವ್ಯಾಂ ಬಲಭದ್ರಾದವಾಪ್ತವಾನ್ ।। ೧-೩೯-೨೮
ಅದೇ ಸಮಯದಲ್ಲಿ ರಾಜಾ ಪ್ರಭು ದುರ್ಯೋಧನನು ಮಿಥಿಲೆಗೆ ಹೋಗಿ ಅಲ್ಲಿ ಬಲಭದ್ರನಿಂದ ದಿವ್ಯ ಗದಾಶಿಕ್ಷೆಯನ್ನು ಪಡೆದುಕೊಂಡನು.
ಪ್ರಸಾದ್ಯ ತು ತತೋ ರಾಮೋ ವೃಷ್ಣ್ಯಂಧಕಮಹಾರಥೈಃ ।
ಆನೀತೋ ದ್ವಾರಕಾಮೇವ ಕೃಷ್ಣೇನ ಚ ಮಹಾತ್ಮನಾ ।। ೧-೩೯-೨೯
ಅನಂತರ ವೃಷ್ಣಿ-ಅಂಧಕ ಮಹಾರಥತರು ಮತ್ತು ಮಹಾತ್ಮ ಕೃಷ್ಣ ಇವರು ರಾಮನನ್ನು ಪ್ರಸನ್ನಗೊಳಿಸಿ ದ್ವಾರಕೆಗೇ ಕರೆತಂದರು.
ಅಕ್ರೂರಸ್ತ್ವಂಧಕೈಃ ಸಾರ್ಧಮಪಾಯಾದ್ಭರತರ್ಷಭ ।
ಹತ್ವಾ ಸತ್ರಾಜಿತಂ ಸುಪ್ತಂ ಸಹಬಂಧುಂ ಮಹಾಬಲಮ್ ।। ೧-೩೯-೩೦
ಜ್ಞಾತಿಭೇದಭಯಾತ್ಕೃಷ್ಣಸ್ತಮುಪೇಕ್ಷಿತವಾನಥ ।
ಅಪಯಾತೇ ತಥಾಕ್ರೂರೇ ನಾವರ್ಷತ್ಪಾಕಶಾಸನಃ ।। ೧-೩೯-೩೧
ಭರತರ್ಷಭ! ಮಲಗಿದ್ದ ಮಹಾಬಲ ಸತ್ರಾಜಿತನನ್ನು ಅವನ ಬಂಧುಗಳೊಂದಿಗೆ ಶತುಬಂಧುವಿನ ಕೈಯಿಂದ ಕೊಲ್ಲಿಸಿ ಅಕೃರನು ಅಂಧಕರೊಂದಿಗೆ ಓಡಿಹೋಗಿದ್ದನು. ದಾಯಾದಿಗಳಲ್ಲಿ ಒಡಕು ಬರಬರದೆಂಬ ಭಯದಿಂದ ಕೃಷ್ಣನು ಅಕ್ರೂರನ ಆ ಕೃತ್ಯವನ್ನು ಉಪೇಕ್ಷಿಸಿದ್ದನು. ಅಕ್ರೂರನು ಓಡಿಹೋಗಿದ್ದಂದಿನಿಂದ ಪಾಕಶಾಸನನು ಮಳೆಯನ್ನೇ ಸುರಿಸಲಿಲ್ಲ.
ಅನಾವೃಷ್ಟ್ಯಾ ಯದಾ ರಾಜ್ಯಮಭವದ್ಬಹುಧಾ ಕೃಶಮ್ ।
ತತಃ ಪ್ರಸಾದಯಾಮಾಸುರಕ್ರೂರಂ ಕುಕುರಾಂಧಕಾಃ ।। ೧-೩೯-೩೨
ಅನಾವೃಷ್ಟಿಯ ಕಾರಣದಿಂದ ರಾಜ್ಯವು ಅತ್ಯಂತ ಕೃಶವಾಗತೊಡಗಿದಾಗ ಕುಕುರರು ಮತ್ತು ಅಂಧಕರು ಅಕ್ರೂರನನ್ನು ಪ್ರಸನ್ನಗೊಳಿಸಿದರು.
ಪುನರ್ದ್ವಾರವತೀಂ ಪ್ರಾಪ್ತೇ ತಸ್ಮಿನ್ ದಾನಪತೌ ತತಃ ।
ಪ್ರವವರ್ಷೇ ಸಹಸ್ರಾಕ್ಷಃ ಕಚ್ಛೇ ಜಲನಿಧೇಸ್ತದಾ ।। ೧-೩೯-೩೩
ಆ ದನಪತಿಯು ದ್ವಾರವತಿಯನ್ನು ಪ್ರವೇಶಿಸಲು ಸಮುದ್ರದ ಆ ತೀರದಲ್ಲಿ ಸಹಸ್ರಾಕ್ಷನು ಭಾರೀ ಮಳೆಯನ್ನು ಸುರಿಸಿದನು.
ಕನ್ಯಾಂ ಚ ವಾಸುದೇವಾಯಾ ಸ್ವಸಾರಂ ಶೀಲಸಂಮತಾಮ್ ।
ಅಕ್ರೂರಃ ಪ್ರದದೌ ಧೀಮಾನ್ಪ್ರೀತ್ಯರ್ಥಂ ಕುರುನಂದನ ।। ೧-೩೯-೩೪
ಕುರುನಂದನ! ವಾಸುದೇವನನ್ನು ಪ್ರೀತಗೊಳಿಸಲು ಧೀಮಾನ್ ಅಕ್ರೂರನು ತನ್ನ ತಂಗಿ ಶೀಲಸಂಮತ ಕನ್ಯೆಯನ್ನು ಅವನಿಗೆ ಕೊಟ್ಟನು.
ಅಥ ವಿಜ್ಞಾಯ ಯೋಗೇನ ಕೃಷ್ಣೋ ಬಭ್ರುಗತಂ ಮಣಿಮ್ ।
ಸಭಾಮಧ್ಯೇ ಗತಂ ಪ್ರಾಹ ತಮಕ್ರೂರಂ ಜನಾರ್ದನಃ ।। ೧-೩೯-೩೫
ತನ್ನ ಯೋಗದಿಂದ ಮಣಿಯು ಬಭ್ರು ಅಕ್ರೂರನಲ್ಲಿದೆ ಎಂದು ತಿಳಿದ ಜನಾರ್ದನ ಕೃಷ್ಣನು ಸಭಾಮಧ್ಯದಲ್ಲಿ ಹೋಗಿ ಅಕ್ರೂರನಿಗೆ ಹೇಳಿದನು:
ಯತ್ತದ್ರತ್ನಂ ಮಣಿವರಂ ತವ ಹಸ್ತಗತಂ ವಿಭೋ ।
ತತ್ಪ್ರಯಚ್ಛಸ್ವ ಮಾನಾರ್ಹಂ ಮಯಿ ಮಾನಾರ್ಯಕಂ ಕೃಥಾಃ ।। ೧-೩೯-೩೬
“ವಿಭೋ! ಮಣಿವರ ರತ್ನವು ನಿನ್ನ ಹಸ್ತಗತವಾಗಿರುವಾಗ ಅದನ್ನು ಮಾನಾರ್ಹನಾದ ನನಗೆ ಕೊಟ್ಟುಬಿಡು. ಅನಾರ್ಯಕ ಕಾರ್ಯವನ್ನು ಮಾಡಬೇಡ!
ಷಷ್ಟಿವರ್ಷೇ ಗತೇ ಕಾಲೇ ಯದ್ರೋಷೋಽಭೂನ್ಮಮಾನಘ ।
ಸ ಸಂರೂಢೋಽಸಕೃತ್ಪ್ರಾಪ್ತಸ್ತತಃ ಕಾಲಾತ್ಯಯೋ ಮಹಾನ್ ।। ೧-೩೯-೩೭
ಅರವತ್ತು ವರ್ಷಗಳ ಹಿಂದೆ ಯಾವ ರೋಷವುಂಟಾಗಿತ್ತೋ ಅದೇ ಮಹಾನ್ ರೋಷವು ಬಾರಿ ಬಾರಿ ನನಗಾಗುತ್ತಿದೆ.”
ತತಃ ಕೃಷ್ಣಸ್ಯ ವಚನಾತ್ಸರ್ವಸಾತ್ತ್ವತಸಂಸದಿ ।
ಪ್ರದದೌ ತಂ ಮಣಿಂ ಬಭ್ರುರಕ್ಲೇಶೇನ ಮಹಾಮತಿಃ ।। ೧-೩೯-೩೮
ಆಗ ಕೃಷ್ಣನ ವಚನದಂತೆ ಆ ಸಾತ್ವತ ಸಂಸದಿಯಲ್ಲಿ ಮಹಾಮತಿ ಬಭ್ರುವು ಕ್ಲೇಶವಿಲ್ಲದೇ ಆ ಮಣಿಯನ್ನು ಅವನಿಗೆ ನೀಡಿದನು.
ತತಸ್ತಮಾರ್ಜವಪ್ರಾಪ್ತಂ ಬಭ್ರೋರ್ಹಸ್ತಾದರಿಂದಮಃ ।
ದದೌ ಹೃಷ್ಟಮನಾಃ ಕೃಷ್ಣಸ್ತಂ ಮಣಿಂ ಬಭ್ರವೇ ಪುನಃ ।। ೧-೩೯-೩೯
ಅತಿ ಸರಳತೆಯಿಂದ ಬಭ್ರುವಿನ ಕೈಯಿಂದ ಪಡೆದುಕೊಂಡ ಆ ಮಣಿಯನ್ನು ಹೃಷ್ಟಮನಸ್ಕನಾದ ಅರಿಂದಮ ಕೃಷ್ಣನು ಪುನಃ ಅದನ್ನು ಬಭ್ರುವಿಗೆ ಕೊಟ್ಟನು.
ಸ ಕೃಷ್ಣಹಸ್ತಾತ್ಸಂಪ್ರಾಪ್ತಂ ಮಣಿರತ್ನಂ ಸ್ಯಮಂತಕಮ್ ।
ಆಬಧ್ಯ ಗಾಂಧಿನೀಪುತ್ರೋ ವಿರರಾಜಾಂಶುಮಾನಿವ ।। ೧-೩೯-೪೦
ಕೃಷ್ಣನ ಹಸ್ತದಿಂದ ಆ ಮಣಿರತ್ನ ಸ್ಯಮಂತಕವನ್ನು ಪಡೆದ ಗಾಂಧಿನೀಪುತ್ರನು ಅದನ್ನು ಕಟ್ಟಿಕೊಂಡು ಸೂರ್ಯನಂತೆ ವಿರಾಜಿಸಿದನು.
ಯಸ್ತ್ವೇವಂ ಶೃಣುಯಾನ್ನಿತ್ಯಂ ಶುಚಿರ್ಭೂತ್ವಾ ಸಮಾಹಿತಃ ।
ಸುಖಾನಾಂ ಸಕಲಾನಾಂ ಚ ಫಲಭಾಗೀಹ ಜಾಯತೇ ।। ೧-೩೯-೪೧
ನಿತ್ಯವೂ ಇದನ್ನು ಶುಚಿಯಾಗಿದ್ದು ಸಮಾಹಿತನಾಗಿ ಕೇಳುವವನಿಗೆ ಇದರ ಫಲರೂಪವಾಗಿ ಸಕಲ ಸುಖಗಳೂ ದೊರೆಯುತ್ತದೆ.
ಆಬ್ರಹ್ಮಭುವನಾಚ್ಚಾಪಿ ಯಶಃ ಖ್ಯಾತಿರ್ನ ಸಂಶಯಃ ।
ಭವಿಷ್ಯತಿ ನೃಪಶ್ರೇಷ್ಠ ಸತ್ಯಮೇತದ್ಬ್ರವೀಮಿ ತೇ ।। ೧-೩೯-೪೨
ನೃಪಶ್ರೇಷ್ಠ! ಅವನ ಯಶಸ್ಸು ಬ್ರಹ್ಮಭುವನದ ವರೆಗೂ ಕೇಳಿಬರುತ್ತದೆ. ಇದರಲ್ಲಿ ಸಂಶಯವೇ ಇಲ್ಲ. ಸತ್ಯವನ್ನೇ ನಾನು ನಿನಗೆ ಹೇಳುತ್ತಿದ್ದೇನೆ.”
ಸಮಾಪ್ತಿ
ಇತಿ ಶ್ರೀಮನ್ಮಹಾಭಾರತೇ ಖಿಲೇಷು ಹರಿವಂಶೇ ಹರಿವಂಶಪರ್ವಣ್ಯೇಕೋನಚತ್ವಾರಿಂಶೋಽಧ್ಯಾಯಃ