038: ಭಜಮಾನ ವಂಶವರ್ಣನಮ್ ಸ್ಯಮಂತಕಮಣಿ ಕಥಂ ಚ

ಪ್ರವೇಶ

।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।

ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ

ಶ್ರೀ ಮಹಾಭಾರತ

ಖಿಲಭಾಗೇ ಹರಿವಂಶಃ

ಹರಿವಂಶ ಪರ್ವ

ಅಧ್ಯಾಯ 38

ಸಾರ

ವೈಶಂಪಾಯನ ಉವಾಚ
ಭಜಮಾನಸ್ಯ ಪುತ್ರೋಽಥ ರಥಮುಖ್ಯೋ ವಿದೂರಥಃ ।
ರಾಜಾಧಿದೇವಃ ಶೂರಸ್ತು ವಿದೂರಥಸುತೋಽಭವತ್ ।। ೧-೩೮-೧

ವೈಶಂಪಾಯನನು ಹೇಳಿದನು: “ಅಂಧಕಪುತ್ರ ಭಜಮಾನನಿಗೆ ರಥಮುಖ್ಯ ವಿದೂರಥನು ಪುತ್ರನಾದನು. ಶೂರ ರಾಜಾಧಿದೇವನು ವಿದೂರಥನ ಪುತ್ರನಾದನು.

ರಾಜಾಧಿದೇವಸ್ಯ ಸುತಾ ಜಜ್ಞಿರೇ ವೀರ್ಯವತ್ತರಾಃ ।
ದತ್ತಾತಿದತ್ತಬಲಿನೌ ಶೋಣಾಶ್ವಃ ಶ್ವೇತವಾಹನಃ ।। ೧-೩೮-೨
ಶಮೀ ಚ ದಂಡಶರ್ಮಾ ಚ ದಂಡಶತ್ರುಶ್ಚ ಶತ್ರುಜಿತ್ ।
ಶ್ರವಣಾ ಚ ಶ್ರವಿಷ್ಠಾ ಚ ಸ್ವಸಾರೌ ಸಂಬಭೂವತುಃ ।। ೧-೩೮-೩

ರಾಜಾಧಿದೇವನಿಗೆ ವೀರ್ಯವತ್ತರ ಬಲವಾನ ದತ್ತ, ಅತಿದತ್ತ, ಶೋಣಾಶ್ವ, ಶ್ವೇತವಾಹನ, ಶಮೀ, ದಂಡಶರ್ಮಾ, ದಂಡಶತ್ರು ಮತ್ತು ಶತ್ರುಜಿತ್ ಎಂಬ ಪುತ್ರರೂ ಶ್ರವಣಾ ಮತ್ತು ಶ್ರವಿಷ್ಠಾ ಎಂಬ ಪುತ್ರಿಯರೂ ಜನಿಸಿದರು.

ಶಮೀಪುತ್ರಃ ಪ್ರತಿಕ್ಷತ್ರಃ ಪ್ರತಿಕ್ಷತ್ರಸ್ಯ ಚಾತ್ಮಜಃ ।
ಸ್ವಯಂಭೋಜಃ ಸ್ವಯಂಭೋಜಾದ್ಧೃದೀಕಃ ಸಂಬಭೂವ ಹ ।। ೧-೩೮-೪

ಶಮಿಯ ಪುತ್ರನು ಪ್ರತಿಕ್ಷತ್ರ ಮತ್ತು ಪ್ರತಿಕ್ಷತ್ರನ ಪುತ್ರನು ಸ್ವಯಂಭೋಜ. ಸ್ವಯಂಭೋಜನಿಂದ ಹೃದೀಕನು ಹುಟ್ಟಿದನು.

ತಸ್ಯ ಪುತ್ರಾ ಬಭೂವುರ್ಹಿ ಸರ್ವೇ ಭೀಮಪರಾಕ್ರಮಾಃ ।
ಕೃತವರ್ಮಾಗ್ರಜಸ್ತೇಷಾಂ ಶತಧನ್ವಾಥ ಮಧ್ಯಮಃ ।। ೧-೩೮-೫

ಹೃದೀಕನ ಎಲ್ಲ ಪುತ್ರರೂ ಭೀಮಪರಾಕ್ರಮಿಗಳಾಗಿದ್ದರು. ಅವರಲ್ಲಿ ಕೃತವರ್ಮನು ಅಗ್ರಜನಾಗಿದ್ದನು ಮತ್ತು ಶತಧನ್ವನು ಮಧ್ಯಮನಾಗಿದ್ದನು.

ದೇವರ್ಷೇರ್ವಚನಾತ್ತಸ್ಯ ಭಿಷಗ್ವೈತರಣಶ್ಚ ಯಃ ।
ಸುದಾಂತಶ್ಚ ವಿದಾಂತಶ್ಚ ಕಾಮದಾ ಕಾಮದಂತಿಕಾ ।। ೧-೩೮-೬

ದೇವರ್ಷಿ ಚ್ಯವನನ ವಚನದಂತೆ ಶತಧನ್ವನಿಗೆ ಭಿಷಕ್, ವೈತರಣ, ಸುದಾಂತ, ಮತ್ತು ವಿದಾಂತ ಎನ್ನುವ ನಾಲ್ವರು ಪುತ್ರರೂ ಕಾಮದಾ ಮತ್ತು ಕಾಮದಂತಿಕಾ ಎಂಬ ಈರ್ವರು ಪುತ್ರಿಯರೂ ಜನಿಸಿದರು.

ದೇವವಾಂಶ್ಚಾಭವತ್ಪುತ್ರೋ ವಿದ್ವಾನ್ಕಂಬಲಬರ್ಹಿಷಃ ।
ಅಸಮೌಜಾಸ್ತಥಾ ವೀರೋ ನಾಸಮೌಜಾಶ್ಚ ತಾವುಭೌ ।। ೧-೩೮-೭

ಅಂಧಕಪುತ್ರ ಕಂಬಲಬರ್ಹಿಷನಿಗೆ ದೇವವಾನ್ ಎಂಬ ವಿದ್ವಾನ್ ಪುತ್ರನು ಜನಿಸಿದನು. ನಂತರ ವೀರರಾದ ಅಸಮೌಜ ಮತ್ತು ನಾಸಮೌಜ ಎಂಬ ಇಬ್ಬರು ಪುತ್ರರೂ ಜನಿಸಿದರು.

ಅಜಾತಪುತ್ರಾಯ ಸುತಾನ್ಪ್ರದದಾವಸಮೌಜಸೇ ।
ಸುದಂಷ್ಟ್ರಂ ಚಾರುರೂಪಂ ಚ ಕೃಷ್ಣಮಿತ್ಯಂಧಕಾಸ್ತ್ರಯಃ ।। ೧-೩೮-೮

ಅಂಧಕನಿಗೆ ಕುಕುರ ಮೊದಲಾದ ಪುತ್ರರಲ್ಲದೇ ಸುದಂಷ್ಟ್ರ, ಚಾರುರೂಪ ಮತ್ತು ಕೃಷ್ಣ ಎಂಬ ಮೂವರು ಮಕ್ಕಳಿದ್ದರು. ಅವರನ್ನು ಅವನು ಪುತ್ರರಿಲ್ಲದ ಅಸಮೌಜಸನಿಗೆ ಕೊಟ್ಟಿದ್ದನು.

ಏತೇ ಚಾನ್ಯೇ ಚ ಬಹವೋ ಅಂಧಕಾಃ ಕಥಿತಾಸ್ತವ ।
ಅಂಧಕಾನಾಮಿಮಂ ವಂಶೇ ಧಾರಯೇದ್ಯಸ್ತು ನಿತ್ಯಶಃ ।। ೧-೩೮-೯
ಆತ್ಮನೋ ವಿಪುಲಂ ವಂಶಂ ಲಭತೇ ನಾತ್ರ ಸಂಶಯಃ ।

ಇವರ ಮತ್ತು ಇನ್ನೂ ಅನೇಕ ಅಂಧಕ ವಂಶೀಯರ ಕುರಿತು ನಿನಗೆ ಹೇಳಿದೇನೆ. ಅಂಧಕರ ಈ ವಂಶವನ್ನು ನಿತ್ಯವೂ ಧಾರಣೆಮಾಡುವವನಿಗೆ ವಿಪುಲ ವಂಶವು ದೊರೆಯುತ್ತದೆ ಎನ್ನುವುದರಲ್ಲಿ ಸಂಶಯವಿಲ್ಲ.

ಗಾಂಧಾರೀ ಚೈವ ಮಾದ್ರೀ ಚ ಕ್ರೋಷ್ಟಭಾರ್ಯೇ ಬಭೂವತುಃ ।। ೧-೩೮-೧೦
ಗಾಂಧಾರೀ ಜನಯಾಮಾಸ ಅನಮಿತ್ರಂ ಮಹಾಬಲಮ್ ।
ಮಾದ್ರೀ ಯುಧಾಜಿತಂ ಪುತ್ರಂ ತತೋ ವೈ ದೇವಮೀಡುಷಮ್ ।। ೧-೩೮-೧೧

ಯದುಪುತ್ರ ಕ್ರೋಷ್ಟುವಿಗೆ ಗಾಂದಾರೀ ಮತ್ತು ಮಾದ್ರೀ ಎಂಬ ಈರ್ವರು ಪತ್ನಿಯರಿದ್ದರು. ಗಾಂಧಾರಿಯು ಮಹಾಬಲ ಅನಮಿತ್ರನಿಗೆ ಜನ್ಮವಿತ್ತಳು. ಮಾದ್ರಿಯು ಯುಧಾಜಿತ ಮತ್ತು ದೇವಮೀಡುಷರಿಗೆ ಜನ್ಮವಿತ್ತಳು.

ಅನಮಿತ್ರಮಮಿತ್ರಾಣಾಂ ಜೇತಾರಮಪರಾಜಿತಮ್ ।
ಅನಮಿತ್ರಸುತೌ ನಿಘ್ನೋ ನಿಘ್ನತೋ ದ್ವೌ ಬಭೂವತುಃ ।। ೧-೩೮-೧೨
ಪ್ರಸೇನಶ್ಚಾಥ ಸತ್ರಾಜಿಚ್ಛತ್ರುಸೇನಾಜಿತಾವುಭೌ ।
ಪ್ರಸೇನೋ ದ್ವಾರವತ್ಯಾಂ ತು ನಿವಸಂತ್ಯಾಂ ಮಹಾಮಣಿಮ್ ।। ೧-೩೮-೧೩
ದಿವ್ಯಂ ಸ್ಯಮಂತಕಂ ನಾಮ ಸಮುದ್ರಾದುಪಲಬ್ಧವಾನ್ ।
ತಸ್ಯ ಸತ್ರಾಜಿತಃ ಸೂರ್ಯಃ ಸಖಾ ಪ್ರಾಣಸಮೋಽಭವತ್ ।। ೧-೩೮-೧೪

ಅನಮಿತ್ರನು ಅಮಿತ್ರರನ್ನು ಗೆಲ್ಲುವ ಅಪರಾಜಿತನಗಿದ್ದನು. ನಿಘ್ನನು ಅನಮಿತ್ರನ ಸುತನು. ನಿಘ್ನನಿಗೆ ಪ್ರಸೇನ ಮತ್ತು ಸತ್ರಾಜಿತರೆಂಬ ಇಬ್ಬರು ಪುತ್ರರಾದರು. ಅವರಿಬ್ಬರೂ ಶತ್ರುಸೇನೆಗಳನ್ನು ಗೆಲ್ಲುವವರಾಗಿದ್ದರು. ದ್ವಾರವತಿಯಲ್ಲಿ ವಾಸಿಸುವ ಸಮಯದಲ್ಲಿ ಪ್ರಸೇನನು ಸಮುದ್ರದಿಂದ ಸ್ಯಮಂತಕವೆಂಬ ದಿವ್ಯ ಮಹಾಮಣಿಯನ್ನು ಪಡೆದಿದ್ದನು. ಸೂರ್ಯನು ಸತ್ರಾಜಿತನ ಪ್ರಾಣಸಮ ಸಖನಾಗಿದ್ದನು.

ಸ ಕದಾಚಿನ್ನಿಶಾಪಾಯೇ ರಥೇನ ರಥಿನಾಂ ವರಃ ।
ಅಬ್ಧಿಕೂಲಮುಪಸ್ಪ್ರಷ್ಟುಮುಪಸ್ಥಾತುಂ ಯಯೌ ರವಿಮ್ ।। ೧-೩೮-೧೫

ಒಮ್ಮೆ ರಥಿಗಳಲ್ಲಿ ಶ್ರೇಷ್ಠ ಸತ್ರಾಜಿತುವು ಸಾಯಂಕಾಲ ರವಿಗೆ ಅರ್ಘ್ಯವನ್ನು ನೀಡಲು ರಥದಲ್ಲಿ ಕುಳಿತು ಸಮುದ್ರತಟಕ್ಕೆ ಹೋಗಿದ್ದನು.

ತಸ್ಯೋಪತಿಷ್ಠತಃ ಸೂರ್ಯಂ ವಿವಸ್ವಾನಗ್ರತಃ ಸ್ಥಿತಃ ।
ಅಸ್ಪಷ್ಟಮೂರ್ತಿರ್ಭಗವಾಂಸ್ತೇಜೋಮಂಡಲವಾನ್ಪ್ರಭುಃ ।। ೧-೩೮-೧೬
ಅಥ ರಾಜಾ ವಿವಸ್ವಂತಮುವಾಚ ಸ್ಥಿತಮಗ್ರತಃ ।
ಯಥೈವಂ ವ್ಯೋಮ್ನಿ ಪಶ್ಯಾಮಿ ಸದಾ ತ್ವಾಂ ಜ್ಯೋತಿಷಾಂಪತೇ ।। ೧-೩೮-೧೭
ತೇಜೋಮಂಡಲಿನಂ ದೇವಂ ತಥೈವ ಪುರತಃ ಸ್ಥಿತಮ್ ।
ಕೋ ವಿಶೇಷೋಽಸ್ತಿ ಮೇ ತ್ವತ್ತಃ ಸಖ್ಯೇನೋಪಗತಸ್ಯ ವೈ ।। ೧-೩೮-೧೮

ಆಗ ಅವನ ಮುಂದೆ ವಿವಸ್ವಾನ್ ಸೂರ್ಯನು ಬಂದು ನಿಂತನು. ಸರ್ವಶಕ್ತಿಸಂಪನ್ನ ಭಗವಾನ್ ಪ್ರಭುವು ತನ್ನ ತೇಜೋಮಂಡಲದಲ್ಲಿ ವಿರಾಜಮಾನನಾಗಿದ್ದನು. ಆದುದರಿಂದ ಅವನ ಆಕಾರವು ಸ್ಪಷ್ಟವಾಗಿ ಕಾಣುತ್ತಿರಲಿಲ್ಲ. ತನ್ನ ಮುಂದೆ ನಿಂತಿದ್ದ ವಿವಸ್ವಂತನನ್ನು ಉದ್ದೇಶಿಸಿ ರಾಜನು ಹೇಳಿದನು: “ ಜ್ಯೋತಿಷಾಂಪತೇ! ಸದಾ ನಾನು ಆಕಾಶದಲ್ಲಿ ತೇಜೋಮಂಡಲದಲ್ಲಿರುವ ನಿನ್ನನ್ನು ಹೇಗೆ ನೋಡುತ್ತೇನೋ ಹಾಗೆ ದೇವ ನಿನ್ನನ್ನು ನನ್ನ ಎದಿರು ನಿಂತಿರುವುದನ್ನು ನೋಡುತ್ತಿದ್ದೇನೆ. ಸಖನಂತೆ ನನ್ನ ಬಳಿಬಂದಿರುವುದರ ವಿಶೇಷತೆ ಏನಿರಬಹುದು?”

ಏತಚ್ಛ್ರುತ್ವಾ ತು ಭಗವಾನ್ಮಣಿರತ್ನಂ ಸ್ಯಮಂತಕಮ್ ।
ಸ್ವಕಂಠಾದವಮುಚ್ಯೈವ ಏಕಾಂತೇ ನ್ಯಸ್ತವಾನ್ವಿಭುಃ ।
ತತೋ ವಿಗ್ರಹವಂತಂ ತಂ ದದರ್ಶ ನೃಪತಿಸ್ತದಾ ।। ೧-೩೮-೧೯
ಪ್ರೀತಿಮಾನಥ ತಂ ದೃಷ್ಟ್ವಾ ಮುಹೂರ್ತಂ ಕೃತವಾನ್ಕಥಾಮ್ ।। ೧-೩೮-೨೦

ಇದನ್ನು ಕೇಳಿದೊಡನೆಯೇ ವಿಭು ಭಗವಂತನು ಸ್ಯಮಂತನ ಮಣಿರತ್ನವನ್ನು ತನ್ನ ಕಂಠದಿಂದ ತೆಗೆದು ಏಕಾಂತದಲ್ಲಿರಿಸಿದನು. ಆಗ ವಿಗ್ರಹವಂತ ಸೂರ್ಯನನ್ನು ನೃಪತಿಯು ನೋಡಿದನು. ಅವನನ್ನು ನೋಡಿ ಪ್ರೀತಿಯಿಂದ ಮುಹೂರ್ತಕಾಲ ಅವನೊಡನೆ ಮಾತನಾಡಿದನು.

ತಮಪಿ ಪ್ರಸ್ಥಿತಂ ಭೂಯೋ ವಿವಸ್ವಂತಂ ಸ ಸತ್ರಜಿತ್ ।
ಲೋಕಾನುದ್ಭಾಸಯಸ್ಯೇತಾನ್ಯೇನ ತ್ವಂ ಸತತಂ ಪ್ರಭೋ ।
ತದೇತನ್ಮಣಿರತ್ನಂ ಮೇ ಭಗವಂದಾತುಮರ್ಹಸಿ ।। ೧-೩೮-೨೧

ಅನಂತರ ವಿವಸ್ವಂತನು ಹೊರಡಲು ಸತ್ರಜಿತುವು ಅವನಿಗೆ ಹೇಳಿದನು: “ಪ್ರಭೋ! ಭಗವನ್! ಯಾವುದರಿಂದ ನೀನು ಸದಾ ಈ ಲೋಕಗಳನ್ನು ಬೆಳಗಿಸುತ್ತೀಯೋ ಆ ಮಣಿರತ್ನವನ್ನು ನನಗೆ ಕೊಡಬೇಕು.”

ತತಃ ಸ್ಯಮಂತಕಮಣಿಂ ದತ್ತವಾಂಸ್ತಸ್ಯ ಭಾಸ್ಕರಃ ।
ಸ ತಮಾಬಧ್ಯ ನಗರೀಂ ಪ್ರವಿವೇಶ ಮಹೀಪತಿಃ ।। ೧-೩೮-೨೨

ಆಗ ಭಾಸ್ಕರನು ಸ್ಯಮಂತಕ ಮಣಿಯನ್ನು ಅವನಿಗೆ ಕೊಟ್ಟನು. ಮಹೀಪತಿಯು ಅದನ್ನು ಕಟ್ಟಿಕೊಂಡು ನಗರವನ್ನು ಪ್ರವೇಶಿಸಿದನು.

ತಂ ಜನಾಃ ಪರ್ಯಧಾವಂತ ಸೂರ್ಯೋಽಯಂ ಗಚ್ಛತೀತಿ ಹ ।
ಪುರೀಂ ವಿಸ್ಮಾಪಯಿತ್ವಾ ಚ ರಾಜಾ ತ್ವಂತಃಪುರಂ ಯಯೌ ।। ೧-೩೮-೨೩

ಆಗ ಜನರು ಇಗೋ ಸೂರ್ಯನು ಹೋಗುತ್ತಿದ್ದಾನೆ ಎಂದು ಅವನ ಹಿಂದೆ ಓಡತೊದಗಿದರು. ಹೀಗೆ ಪುರಿಯನ್ನು ವಿಸ್ಮಯಕ್ಕೀಡುಮಾಡುತ್ತಾ ರಾಜನು ಅಂತಃಪುರಕ್ಕೆ ಹೋದನು.

ತತ್ಪ್ರಸೇನಜಿತಂ ದಿವ್ಯಂ ಮಣಿರತ್ನಂ ಸ್ಯಮಂತಕಮ್ ।
ದದೌ ಭ್ರಾತ್ರೇ ನರಪತಿಃ ಪ್ರೇಮ್ಣಾ ಸತ್ರಾಜಿದುತ್ತಮಮ್ ।। ೧-೩೮-೨೪

ಅಲ್ಲಿ ನರಪತಿ ಸತ್ರಾಜಿತನು ಆ ಉತ್ತಮ ದಿವ್ಯ ಮಣಿರತ್ನ ಸ್ಯಮಂತಕವನ್ನು ಪ್ರೀತಿಯಿಂದ ತನ್ನ ತಮ್ಮ ಪ್ರಜೇಸಜಿತುವಿಗೆ ಕೊಟ್ಟನು.

ಸ ಮಣಿಃ ಸ್ಯಂದತೇ ರುಕ್ಮಂ ವೃಷ್ಣ್ಯಂಧಕನಿವೇಶನೇ ।
ಕಾಲವರ್ಷೀ ಚ ಪರ್ಜನ್ಯೋ ನ ಚ ವ್ಯಾಧಿಭಯಂ ಹ್ಯಭೂತ್ ।। ೧-೩೮-೨೫

ಆ ಮಣಿಯು ವೃಶ್ಃಣಿ-ಅಂಧಕರ ಭವನಗಳಲ್ಲಿ ಚಿನ್ನವನ್ನು ಸುರಿಸುತ್ತಿತ್ತು. ಕಾಲಕ್ಕೆ ತಕ್ಕಂತೆ ಮಳೆಯಾಗುತ್ತಿತ್ತು ಮತ್ತು ವ್ಯಾಧಿಗಳ ಭಯವಿರಲಿಲ್ಲ.

ಲಿಪ್ಸಾಂ ಚಕ್ರೇ ಪ್ರಸೇನಾತ್ತು ಮಣಿರತ್ನೇ ಸ್ಯಮಂತಕೇ ।
ಗೋವಿಂದೋ ನ ಚ ತಲ್ಲೇಭೇ ಶಕ್ತೋಽಪಿ ನ ಜಹಾರ ಸಃ ।। ೧-೩೮-೨೬

ಗೋವಿಂದನು ಆ ಮಣಿರತ್ನ ಸ್ಯಮಂತಕವನ್ನು ಬಯಸಿದನು. ಆದರೆ ಪ್ರಸೇನನನು ಅದನ್ನು ಅವನಿಗೆ ಕೊಡಲಿಲ್ಲ. ಶಕ್ತನಾಗಿದ್ದರೂ ಕೃಷ್ಣನು ಬಲಪೂರ್ವಕವಾಗಿ ಅದನ್ನು ಕಸಿದುಕೊಳ್ಳಲಿಲ್ಲ.

ಕದಾಚಿನ್ಮೃಗಯಾಂ ಯಾತಃ ಪ್ರಸೇನಸ್ತೇನ ಭೂಷಿತಃ ।
ಸ್ಯಮಂತಕಕೃತೇ ಸಿಂಹಾದ್ವಧಂ ಪ್ರಾಪ ವನೇಚರಾತ್ ।। ೧-೩೮-೨೭

ಒಮ್ಮೆ ಮಣಿಯಿಂದ ಭೂಷಿತನಾಗಿ ಬೇಟೆಯಾಡಲು ಹೋಗಿದ್ದ ಪ್ರಸೇನನನ್ನು ಆ ಮಣಿಯ ಕಾರಣದಿಂದ ವನದಲ್ಲಿ ಸಂಚರಿಸುತ್ತಿದ್ದ ಸಿಂಹದಿಂದಾಗಿ ಮರಣವನ್ನಪ್ಪಿದನು.

ಅಥ ಸಿಂಹಂ ಪ್ರಧಾವಂತಮೃಕ್ಷರಾಜೋ ಮಹಾಬಲಃ ।
ನಿಹತ್ಯ ಮಣಿರತ್ನಂ ತದಾದಾಯ ಬಿಲಮಾವಿಶತ್ ।। ೧-೩೮-೨೮

ಆಗ ಓಡುತ್ತಿದ್ದ ಸಿಂಹವನ್ನು ಕೊಂದು ಮಹಾಬಲ ಋಕ್ಷರಾಜನು ಮಣಿರತ್ನವನ್ನು ಪಡೆದುಕೊಂಡು ಗುಹೆಯನ್ನು ಪ್ರವೇಶಿಸಿದನು.

ತತೋ ವೃಷ್ಣ್ಯಂಧಕಾಃ ಕೃಷ್ಣಂ ಪ್ರಸೇನವಧಕಾರಣಾತ್ ।
ಪ್ರಾರ್ಥನಾಂ ತಾಂ ಮಣೇರ್ಬುದ್ಧ್ವಾ ಸರ್ವ ಏವ ಶಶಂಕಿರೇ ।। ೧-೩೮- ೨೯

ಆಗ ವೃಷ್ಣಿ-ಅಂಧಕರು ಎಲ್ಲರೂ ಆ ಮಣಿಯನ್ನು ಕೇಳಿದ್ದ ಕೃಷ್ಣನೇ ಪ್ರಸೇನನ ವಧೆಗೆ ಕಾರಣನೆಂದು ಶಂಕಿಸಿದರು.

ಸ ಶಂಕ್ಯಮಾನೋ ಧರ್ಮಾತ್ಮಾ ನಕಾರೀ ತಸ್ಯ ಕರ್ಮಣಃ ।
ಆಹರಿಷ್ಯೇ ಮಣಿಮಿತಿ ಪ್ರತಿಜ್ಞಾಯ ವನಂ ಯಯೌ ।। ೧-೩೮-೩೦

ಹಾಗೆ ಶಂಕೆಗೊಳಗಾದ ಧರ್ಮಾತ್ಮ ಕೃಷ್ಣನು ಆ ಕೆಲಸವನ್ನು ತಾನು ಮಾಡಿರದೇ ಇದ್ದರೂ ಮಣಿಯನ್ನು ತರುತ್ತೇನೆ ಎಂದು ಪ್ರತಿಜ್ಞೆಮಾಡಿ ವನಕ್ಕೆ ಹೋದನು.

ಯತ್ರ ಪ್ರಸೇನೋ ಮೃಗಯಾಮಾಚರತ್ತತ್ರ ಚಾಪ್ಯಥ ।
ಪ್ರಸೇನಸ್ಯ ಪದಂ ಗೃಹ್ಯ ಪುರುಷೈರಾಪ್ತಕಾರಿಭಿಃ ।। ೧-೩೮-೩೧

ಆಪ್ತ ಜನರ ಮುಖಾಂತರ ಪ್ರಸೇನನು ಬೇಟೆಯಾಡುತ್ತಿದ್ದ ಸ್ಥಳವನ್ನು ತಿಳಿದುಕೊಂಡು ಅಲ್ಲಿ ಅವನ ಹೆಜ್ಜೆಯ ಗುರುತುಗಳನ್ನು ಕಂಡನು.

ಋಕ್ಷವಂತಂ ಗಿರಿವರಂ ವಿಂಧ್ಯಂ ಚ ಗಿರಿಮುತ್ತಮಮ್।
ಆನ್ವೇಷಯನ್ಪರಿಶ್ರಾಂತಃ ಸ ದದರ್ಶ ಮಹಾಮನಾಃ ।। ೧-೩೮-೩೨

ಪದಚಿಹ್ನೆಗಳನ್ನು ಅನುಸರಿಸಿ ಹುಡುಕುತ್ತಾ ನಡೆದು ಬಳಲಿದ್ದ ಅ ಮಹಾಮನಸ್ವೀ ಕೃಷ್ಣನು ಉತ್ತಮ ಗಿರಿ ಋಕ್ಷವಂತ ವಿಂಧ್ಯ ಗಿರಿಯನ್ನು ನೋಡಿದನು.

ಸಾಶ್ವಂ ಹತಂ ಪ್ರಸೇನಂ ವೈ ನಾವಿಂದಚ್ಚೇಚ್ಛಿತಂ ಮಣಿಮ್।
ಅಥ ಸಿಂಹಃ ಪ್ರಸೇನಸ್ಯ ಶರೀರಸ್ಯಾವಿದೂರತಃ ।। ೧-೩೮-೩೩
ಋಕ್ಷೇಣ ನಿಹತೋ ದೃಷ್ಟಃ ಪಾದೈರೃಕ್ಷಶ್ಚ ಸೂಚಿತಃ ।
ಪಾದೈರನ್ವೇಷಯಾಮಾಸ ಗುಹಾಮೃಕ್ಷಸ್ಯ ಮಾಧವಃ ।। ೧-೩೮-೩೪

ಅಲ್ಲಿ ಅವನು ಅಶ್ವದೊಂದಿಗೆ ಹತನಾಗಿದ್ದ ಪ್ರಸೇನನನ್ನು ಕಂಡನು. ಆದರೆ ಅವನಿಗೆ ಯಾವುದರಲ್ಲಿ ಇಚ್ಛೆಯಿತ್ತೋ ಆ ಮಣಿಯು ಅಲ್ಲಿ ದೊರಕಲಿಲ್ಲ. ಪ್ರಸೇನನ ಶರೀರದ ಅನತಿದೂರದಲ್ಲಿಯೇ ಸಿಂಹವೊಂದು ಕರಡಿಯಿಂದ ಹತಗೊಂಡಿರುವನ್ನು ನೋಡಿದನು. ಪಾದದ ಚಿಹ್ನೆಗಳಿಂದ ಸಿಂಹವನ್ನು ಕೊಂದಿರುವುದು ಕರಡಿಯೆಂದು ತಿಳಿದುಕೊಂಡನು. ಆ ಪಾದಚಿಹ್ನೆಗಳನ್ನೇ ಅನುಸರಿಸಿ ಮಾಧವನು ಕರಡಿಯ ಗುಹೆಯನ್ನು ಪ್ರವೇಶಿಸಿದನು.

ಮಹತ್ಯೃಕ್ಷಬಿಲೇ ವಾಣೀಂ ಶುಶ್ರಾವ ಪ್ರಮದೇರಿತಾಮ್ ।
ಧಾತ್ರ್ಯಾ ಕುಮಾರಮಾದಾಯ ಸುತಂ ಜಾಂಬವತೋ ನೃಪ ।
ಕ್ರೀಡಾಪಯಂತ್ಯಾ ಮಣಿನಾ ಮಾ ರೋದೀರಿತ್ಯಥೇರಿತಾಮ್ ।। ೧-೩೮-೩೫

ಕರಡಿಯ ಆ ಮಹಾಗುಹೆಯೊಳಗಿನಿಂದ ಓರ್ವ ಸ್ತ್ರೀಯ ಧ್ವನಿಯನ್ನು ಕೇಳಿದನು. ನೃಪ! ಧಾತ್ರಿಯೋರ್ವಳು ಜಾಂಬವಂತನ ಕುಮಾರ ಸುತನನ್ನು ಮಣಿಯೊಂದಿಗೆ ಆಡಿಸುತ್ತಾ ಅಳಬೇಡ ಎಂದು ಹೇಳುತ್ತಿದ್ದಳು.

ಧಾತ್ರ್ಯುವಾಚ
ಸಿಂಹಃ ಪ್ರಸೇನಮವಧೀತ್ಸಿಂಹೋ ಜಾಂಬವತಾ ಹತಃ ।
ಸುಕುಮಾರಕ ಮಾ ರೋದೀಸ್ತವ ಹ್ಯೇಷ ಸ್ಯಮಂತಕಃ ।। ೧-೩೮-೩೬

ಧಾತ್ರಿಯು ಹೇಳಿದಳು: “ಪ್ರಸೇನನನ್ನು ಸಿಂಹವು ಕೊಂದಿತು. ಸಿಂಹವನ್ನು ಜಾಂಬವಂತನು ಕೊಂದನು. ಸುಕುಮಾರ! ಅಳಬೇಡ. ಇಗೋ. ಇದು ಸ್ಯಮಂತಕ.

ಸುವ್ಯಕ್ತೀಕೃತಶಬ್ದಸ್ತು ತೂಷ್ಣೀಂ ಬಿಲಮಥಾವಿಶತ್ ।
ಪ್ರಾವಿಶ್ಯ ಚಾಪಿ ಭಗವಾಂಸ್ತಮೃಕ್ಷಬಿಲಮಂಜಸಾ ।। ೧- ೩೮-೩೭
ಸ್ಥಾಪಯಿತ್ವಾ ಬಿಲದ್ವಾರಿ ಯದೂನ್ ಲಾಂಗಲಿನಾ ಸಹ ।
ಶಾಂಙ್ರಧನ್ವಾ ಬಿಲಸ್ಥಂ ತು ಜಾಂಬವಂತಂ ದದರ್ಶ ಹ ।। ೧-೩೮-೩೮

ಧಾತ್ರಿಯ ಶಬ್ಧವನ್ನು ಸ್ಪಷ್ಟವಾಗಿ ಕೇಳಿ ಗುಹೆಯ ದ್ವಾರದಲ್ಲಿ ಲಾಂಗಲಿ ಬಲರಾಮನೊಂದಿಗೆ ಯದುಗಳನ್ನು ನಿಲ್ಲಿಸಿ ಶಬ್ಧಮಾಡದೇ ಕರಡಿಯ ಆ ಗುಹೆಯನ್ನು ಪ್ರವೇಶಿಸಿದನು. ಪ್ರವೇಶಿಸಿ ಭಗವಂತ ಶಾಂಙ್ರಧನ್ವಿಯು ಬಿಲದಲ್ಲಿದ್ದ ಜಾಂಬವಂತನನ್ನು ನೋಡಿದನು.

ಯುಯುಧೇ ವಾಸುದೇವಸ್ತು ಬಿಲೇ ಜಾಂಬವತಾ ಸಹ ।
ಬಾಹುಭ್ಯಾಮೇವ ಗೋವಿಂದೋ ದಿವಸಾನೇಕವಿಂಶತಿಂ ।। ೧-೩೮-೩೯

ವಾಸುದೇವ ಗೋವಿಂದನಾದರೋ ಬಿಲದಲ್ಲಿ ಜಾಂಬವಂತನೊಂದಿಗೆ ಇಪ್ಪತ್ತೊಂದು ದಿನಗಳ ಪರ್ಯಂತ ಬಾಹುಗಳಿಂದಲೇ ಯುದ್ಧಮಾಡಿದನು.

ಪ್ರವಿಷ್ಟೇ ತು ಬಿಲಂ ಕೃಷ್ಣೇ ಬಲದೇವಪುರಃಸರಾಃ ।
ಪುರೀಂ ದ್ವಾರವತೀಮೇತ್ಯ ಹತಂ ಕೃಷ್ಣಂ ನ್ಯವೇದಯನ್ ।। ೧-೩೮-೪೦

ಕೃಷ್ಣನು ಬಿಲವನ್ನು ಪ್ರವೇಶಿಸಿ ಬಹಳ ದಿನಗಳು ಹೊರಬರದೇ ಇದ್ದುದನ್ನು ನೋಡಿ ಬಲದೇವ ಮೊದಲಾದವರು ದ್ವಾರವತೀ ಪುರಿಗೆ ಹಿಂದಿರುಗಿ ಕೃಷ್ಣನು ಹತನಾದನೆಂದು ನಿವೇದಿಸಿದರು.

ವಾಸುದೇವಸ್ತು ನಿರ್ಜಿತ್ಯ ಜಾಂಬವಂತಂ ಮಹಾಬಲಮ್ ।
ಭೇಜೇ ಜಾಂಬವತೀಂ ಕನ್ಯಾಮೃಕ್ಷರಾಜಸ್ಯ ಸಂಮತಾಮ್ ।
ಮಣಿಂ ಸ್ಯಮಂತಕಂ ಚೈವ ಜಗ್ರಾಹಾತ್ಮವಿಶುದ್ಧಯೇ।। ೧-೩೮-೪೧

ವಾಸುದೇವನಾದರೋ ಮಹಾಬಲ ಜಾಂಬವಂತನನ್ನು ಸೋಲಿಸಿ ಋಕ್ಷರಾಜನ ಪ್ರಿಯ ಕನ್ಯೆ ಜಾಂಬವತಿಯನ್ನು ಮದುವೆಯಾಗಿ ತನ್ನ ಆತ್ಮಶುದ್ಧಿಯನ್ನು ತೋರಿಸಲು ಸ್ಯಮಂತಕ ಮಣಿಯನ್ನೂ ಪಡೆದುಕೊಂಡನು.

ಅನುನೀಯರ್ಕ್ಷರಾಜಾನಂ ನಿರ್ಯಯೌ ಚ ತದಾ ಬಿಲಾತ್ ।
ದ್ವಾರಕಾಮಗಮತ್ಕೃಷ್ಣಃ ಶ್ರಿಯಾ ಪರಮಯಾ ಯುತಃ ।। ೧-೩೮-೪೨

ಋಕ್ಷರಾಜನನ್ನು ಅನುನಯದಿಂದ ಸಂತವಿಸಿ ಆ ಗುಹೆಯಿಂದ ಹೊರಬಂದು ಪರಮ ಶ್ರೀಯಿಂದ ಕೃಷ್ಣನು ದ್ವಾರಕೆಗೆ ಆಗಮಿಸಿದನು.

ಏವಂ ಸ ಮಣಿಮಾಹೃತ್ಯ ವಿಶೋದ್ಧ್ಯಾತ್ಮನಮಚ್ಯುತಃ ।
ದದೌ ಸತ್ರಾಜಿತೇ ತಂ ವೈ ಸರ್ವಸಾತ್ತ್ವತಸಂಸದಿ ।। ೧-೩೮-೪೩

ಹೀಗೆ ಅಚ್ಯುತನು ಆ ಮಣಿಯನ್ನು ತಂದು ತನ್ನ ವಿಶುದ್ಧಾತ್ಮತೆಯನ್ನು ಪ್ರಮಾಣೀಕರಿಸಿ ಸರ್ವ ಸಾತ್ತ್ವತರ ಸಂಸದಿಯಲ್ಲಿ ಅದನ್ನು ಸತ್ರಾಜಿತನಿಗೆ ಒಪ್ಪಿಸಿದನು.

ಏವಂ ಮಿಥ್ಯಾಭಿಶಪ್ತೇನ ಕೃಷ್ಣೇನಾಮಿತ್ರಘಾತಿನಾ ।
ಆತ್ಮಾ ವಿಶೋಧಿತಃ ಪಾಪಾದ್ವಿನಿರ್ಜಿತ್ಯ ಸ್ಯಮಂತಕಮ್ ।। ೧-೩೮-೪೪

ಹೀಗೆ ಮಿತ್ಯಾಪವಾದದಿಂದ ಸ್ಯಮಂತಕ ಮಣಿಯನ್ನು ಗೆದ್ದು ಪಾಪದಿಂದ ವಿಮುಕ್ತನಾಗಿ ತನ್ನ ಆತ್ಮಶುದ್ಧಿಯನ್ನು ತೋರಿಸಿಕೊಟ್ಟನು.

ಸತ್ರಾಜಿತೋ ದಶ ತ್ವಾಸನ್ಭಾರ್ಯಾಸ್ತಾಸಾಂ ಶತಂ ಸುತಾಃ ।
ಖ್ಯಾತಿಮಂತಸ್ತ್ರಯಸ್ತೇಷಾಂ ಭಂಗಕಾರಸ್ತು ಪೂರ್ವಜಃ ।। ೧-೩೮-೪೫
ವೀರೋ ವಾತಪತಿಶ್ಚೈವ ಉಪಸ್ವಾವಾಂಶ್ಚ ತೇ ತ್ರಯಃ ।
ಕುಮಾರ್ಯಶ್ಚಾಪಿ ತಿಸ್ರೋ ವೈ ದಿಕ್ಷು ಖ್ಯಾತಾ ನರಾಧಿಪ ।। ೧-೩೮-೪೬
ಸತ್ಯಭಾಮೋತ್ತಮಾ ಸ್ತ್ರೀಣಾಂ ವ್ರತಿನೀ ಚ ದೃಢವ್ರತಾ ।
ತಥಾ ಪ್ರಸ್ವಾಪಿನೀ ಚೈವ ಭಾರ್ಯಾಂ ಕೃಷ್ಣಾಯ ತಾಂ ದದೌ ।। ೧-೩೮-೪೭

ಸತ್ರಾಜಿತನಿಗೆ ಹತ್ತು ಭಾರ್ಯೆಯರಿದ್ದರು. ಅವರಲ್ಲಿ ಅವನಿಗೆ ನೂರು ಮಕ್ಕಳಾದರು. ಅವರೆಲ್ಲರೂ ಖ್ಯಾತಿವಂತರಾಗಿದ್ದರು. ಅವರಲ್ಲಿ ಭಂಗಕಾರನು ಹಿರಿಯವನು. ವೀರ ವಾತಪತಿಯು ಎರಡನೆಯವನು. ಉಪಸ್ವಾವಾನನು ಮೂರನೆಯವನು. ನರಾಧಿಪ! ಅವನಿಗೆ ದಿಕ್ಕುಗಳಲ್ಲಿ ಖಾತರಾಗಿದ್ದ ಮೂವರು ಕುಮಾರಿಯರೂ ಇದ್ದರು. ಸ್ತ್ರೀಯರಲ್ಲಿ ಉತ್ತಮೆ ಸತ್ಯಭಾಮಾ, ದೃಢವ್ರತಾ ವ್ರತಿನೀ ಮತ್ತು ಪ್ರಸ್ವಾಪಿನೀ. ಸತ್ಯಭಾಮೆಯನ್ನು ಅವನು ಕೃಷ್ಣನಿಗೆ ಪತ್ನಿಯನ್ನಾಗಿ ಕೊಟ್ಟನು.

ಸಮಾಕ್ಷೋ ಭಂಗಕಾರಿಸ್ತು ನಾರೇಯಶ್ಚ ನರೋತ್ತಮೌ ।
ಜಜ್ಞಾತೇ ಗುಣಸಂಪನ್ನೌ ವಿಶ್ರುತೌ ರೂಪಸಂಪದಾ ।। ೧-೩೮-೪೮

ಭಂಗಕಾರಿಗೆ ಸಮಾಕ್ಷ ಮತ್ತು ನಾರೇಯರೆಂಬ ನರೋತ್ತಮರಾದರು. ಇವರಿಬ್ಬರೂ ಗುಣಸಂಪನ್ನರೂ ತಮ್ಮ ರೂಪಸಂಪತ್ತಿನಿಂದ ವಿಶ್ರುತರಾಗಿದ್ದರು.

ಮಾದ್ರೀಪುತ್ರಸ್ಯ ಜಜ್ಞೇಽಥ ಪೃಶ್ನಿಃ ಪುತ್ರೋ ಯುಧಾಜಿತಃ ।
ಜಜ್ಞಾತೇ ತನಯೌ ಪೃಶ್ನೇಃ ಶ್ವಫಲ್ಕಶ್ಚಿತ್ರಕಸ್ತಥಾ ।। ೧-೩೮-೪೯

ಕ್ರೋಷ್ಟುವಿನ ಕಿರಿಯ ರಾಣಿ ಮಾದ್ರೀಪುತ್ರ ಯುಧಾಜಿತುವಿಗೆ ಪೃಶ್ನಿಯು ಪುತ್ರನಾದನು. ಪೃಶ್ನಿಗೆ ಶಫಲ್ಕ ಮತ್ತು ಚಿತ್ರಕರೆಂಬ ಇಬ್ಬರು ತನಯರಾದರು.

ಶ್ವಫಲ್ಕಃ ಕಾಶಿರಾಜಸ್ಯ ಸುತಾಂ ಭಾರ್ಯಾಮವಿಂದತ ।
ಗಾಂದಿನೀಂ ನಾಮ ತಸ್ಯಾಶ್ಚ ಸದಾ ಗಾಃ ಪ್ರದದೌ ಪಿತಾ ।। ೧-೩೮-೫೦

ಶಫಲ್ಕನು ಕಾಶಿರಾಜನ ಸುತೆಯನ್ನು ವಿವಾಹವಾದನು. ಗಾಂದಿನೀ ಎಂಬ ಹೆಸರಿನ ಅವಳ ತಂದೆಯು ನಿತ್ಯವೂ ಅವಳಿಂದ ಗೋದಾನವನ್ನು ಮಾಡಿಸುತ್ತಿದ್ದನು.

ತಸ್ಯಾಂ ಜಜ್ಞೇ ಮಹಾಬಾಹುಃ ಶ್ರುತವಾನಿತಿ ವಿಶ್ರುತಃ ।
ಅಕ್ರೂರೋಽಥ ಮಹಾಭಾಗೋ ಯಜ್ವಾ ವಿಪುಲದಕ್ಷಿಣಃ ।। ೧-೩೮-೫೧

ಅವಳಲ್ಲಿ ಮಹಾಬಾಹು ಅಕ್ರೂರನು ಜನಿಸಿದನು. ಅವನು ಶ್ರುತವಾನನೆಂದು ವಿಶ್ರುತನಾಗಿದ್ದನು. ಆ ಮಹಾಭಾಗನು ವಿಪುಲದಕ್ಷಿಣಾಯುಕ್ತ ಯಜ್ಞಗಳನ್ನು ನಡೆಸಿದ್ದನು.

ಉಪಾಸಂಗಸ್ತಥಾ ಮದ್ಗುರ್ಮೃದುರಶ್ಚಾರಿಮೇಜಯಃ ।
ಗಿರಿಕ್ಷಿಪಸ್ತಥೋಪೇಕ್ಷಃ ಶತ್ರುಹಾ ಚಾರಿಮರ್ದನಃ ।। ೧-೩೮-೫೨
ಧರ್ಮಧೃಗ್ಯತಿಧರ್ಮಾ ಚ ಗೃಧ್ರಭೋಜೋಽಂಧಕಸ್ತಥಾ ।
ಸುಬಾಹುಃ ಪ್ರತಿಬಾಹುಶ್ಚ ಸುಂದರೀ ಚ ವರಾಂಗನಾ ।। ೧-೩೮-೫೩

ಅಕ್ರೂರನೂ ಅಲ್ಲದೇ ಗಾಂದಿನಿಗೆ ಬೇರೆ ಪುತ್ರರಿದ್ದರು: ಉಪಾಸಂಗ, ಮದ್ಗು, ಮೃದುರ್, ಅರಿಮೇಜಯ, ಗಿರಿಕ್ಷಿಪ, ಉಪೇಕ್ಷ, ಶತ್ರುಘ್ನ, ಅರಿಮರ್ದನ, ಧರ್ಮಧೃಗ್, ಯತಿಧರ್ಮ, ಗೃಧ್ರಬೋಜ, ಅಂಧಕ, ಸುಬಾಹು, ಮತ್ತು ಪ್ರತಿಬಾಹು. ಅವಳಿಗೆ ಸುಂದರಿ ವರಾಂಗನೆ ಎಂಬ ಕನ್ಯೆಯೂ ಇದ್ದಳು.

ವಿಶ್ರುತಾ ಸಾಂಬಮಹಿಷೀ ಕನ್ಯಾ ಚಾಸ್ಯ ವಸುಂಧರಾ ।
ರೂಪಯೌವನಸಂಪನ್ನಾ ಸರ್ವಸತ್ತ್ವಮನೋಹರಾ ।। ೧-೩೮-೫೪

ರೂಪಯೌವನಸಂಪನ್ನಳಾದ ಮತ್ತು ಸರ್ವಸತ್ತ್ವಮನೋಹರಳಾದ ಈ ಸಾಂಬಮಹಿಷೀ ಕನ್ಯೆಯು ವಸುಂಧರಾ ಎಂದು ವಿಶ್ರುತಳಾದಳು.

ಅಕ್ರೂರೇಣೋಗ್ರಸೇನ್ಯಾಂ ತು ಸುತೌ ದ್ವೌ ಕುರುನಂದನ।
ಸುದೇವಶ್ಚೋಪದೇವಶ್ಚ ಜಜ್ಞಾತೇ ದೇವವರ್ಚಸೌ ।। ೧-೩೮-೫೫

ಕುರುನಂದನ! ಅಕ್ರೂರನಿಗೆ ಉಗ್ರಸೇನಿಯಲ್ಲಿ ಈರ್ವರು ದೇವವರ್ಚಸ ಸುತರು ಜನಿಸಿದರು: ಸುದೇವ ಮತ್ತು ಉಪದೇವ.

ಚಿತ್ರಕಸ್ಯಾಭವನ್ಪುತ್ರಾಃ ಪೃಥುರ್ವಿಪೃಥುರೇವ ಚ।
ಅಶ್ವಗ್ರೀವೋಽಶ್ವಬಾಹುಶ್ಚ ಸುಪಾರ್ಶ್ವಕಗವೇಷಣೌ ।। ೧-೩೮-೫೬
ಅರಿಷ್ಟನೇಮೇರಶ್ವಶ್ಚ ಸುಧರ್ಮಾ ಧರ್ಮಭೃತ್ತಥಾ।
ಸುಬಾಹುರ್ಬಹುಬಾಹುಶ್ಚ ಶ್ರವಿಷ್ಠಾಶ್ರವಣೇ ಸ್ತ್ರಿಯೌ ।। ೧-೩೮-೫೭

ಚಿತ್ರಕನ ಶ್ರವಣಾ ಮತ್ತು ಶ್ರವಿಷ್ಠಾ ಎಂಬ ಇಬ್ಬರು ಪತ್ನಿಯರಲ್ಲಿ ಪೃಥು, ವಿಪೃಥು, ಅಶ್ವಗ್ರೀವ, ಅಶ್ವಬಾಹು, ಸುಪಾರ್ಶ್ವಕ, ಗವೇಷಣ, ಅರಿಷ್ಟನೇಮಿ, ಅಶ್ವ, ಸುಧರ್ಮಾ, ಧರ್ಮಭೃತ್, ಸುಬಾಹು ಮತ್ತು ಬಹುಬಾಹು ಎಂಬ ಹೆಸರಿನ ಪುತ್ರರು ಜನಿಸಿದರು.

ಇಮಾಂ ಮಿಥ್ಯಾಭಿಶಸ್ತಿಂ ಯಃ ಕೃಷ್ಣಸ್ಯ ಸಮುದಾಹೃತಾಮ್ ।
ವೇದ ಮಿಥ್ಯಾಭಿಶಾಪಾಸ್ತಂ ನ ಸ್ಪೃಶಂತಿ ಕದಾಚನ ।। ೧-೩೮- ೫೮

ಕೃಷ್ಣನ ಈ ಮಿಥ್ಯಾಪವಾದದ ಕಥೆಯನ್ನು ಓದುವವರಿಗೆ ಮಿಥ್ಯಾಪವಾದದ ದೋಷವು ಎಂದೂ ಮುಟ್ಟುವುದಿಲ್ಲ.”

ಸಮಾಪ್ತಿ

ಇತಿ ಶ್ರೀಮಹಾಭಾರತೇ ಖಿಲೇಷು ಹರಿವಂಶೇ ಹರಿವಂಶಪರ್ವಣ್ಯಷ್ಟತ್ರಿಂಶೋಽಧ್ಯಾಯಃ