ಪ್ರವೇಶ
।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।
ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ
ಶ್ರೀ ಮಹಾಭಾರತ
ಖಿಲಭಾಗೇ ಹರಿವಂಶಃ
ಹರಿವಂಶ ಪರ್ವ
ಅಧ್ಯಾಯ 37
ಸಾರ
ವೈಶಂಪಾಯನ ಉವಾಚ
ಸತ್ತ್ವತಾತ್ಸತ್ತ್ವಸಂಪನ್ನಾನ್ಕೌಶಲ್ಯಾ ಸುಷುವೇ ಸುತಾನ್ ।
ಭಜಿನಂ ಭಜಮಾನಂ ಚ ದಿವ್ಯಂ ದೇವಾವೃಧಂ ನೃಪಮ್ ।। ೧-೩೭-೧
ಅಂಧಕಂ ಚ ಮಹಾಬಾಹುಂ ವೃಷ್ಣಿಂ ಚ ಯದುನಂದನಮ್ ।
ತೇಷಾಂ ವಿಸರ್ಗಾಶ್ಚತ್ವಾರೋ ವಿಸ್ತರೇಣೇಹ ತಾಂಶೃಣು ।। ೧-೩೭-೨
ವೈಶಂಪಾಯನನು ಹೇಳಿದನು: “ಸತ್ತ್ವತನಲ್ಲಿ ಕೌಶಲ್ಯೆಯು ಸತ್ತ್ವಸಂಪನ್ನರಾದ ಭಜಿನ, ಭಜಮಾನ, ಮತ್ತು ದಿವ್ಯ ನೃಪ ದೇವಾವೃಧ, ಮಹಾಬಾಹು ಅಂಧಕ, ಯದುನಂದನ ವೃಷ್ಣಿ ಎಂಬ ಸುತರಿಗೆ ಜನ್ಮವಿತ್ತಳು. ಅವರಿಂದ ನಾಲ್ಕು ವಂಶಗಳು ಹುಟ್ಟಿಕೊಂಡವು. ಅವುಗಳ ಕುರಿತು ವಿಸ್ತಾರವಾಗಿ ಕೇಳು.
ಭಜಮಾನಸ್ಯ ಸೃಂಜಯ್ಯೌ ಬಾಹ್ಯಕಾಥೋಪಬಾಹ್ಯಕಾ ।
ಆಸ್ತಾಂ ಭಾರ್ಯೇ ತಯೋಸ್ತಸ್ಮಾಜ್ಜಜ್ಞಿರೇ ಬಹವಃ ಸುತಾಃ ।। ೧-೩೭-೩
ಭಜಮಾನನಿಗೆ ಸೃಂಜಯವಂಶೀಯ ಬಾಹ್ಯಕಾ ಮತ್ತು ಉಪಬಾಹ್ಯಕಾ ಎಂಬ ಇಬ್ಬರು ಭಾರ್ಯೆಯರಿದ್ದರು. ಅವರಲ್ಲಿ ಅನೇಕ ಮಕ್ಕಳು ಹುಟ್ಟಿದರು.
ಕೃಮಿಶ್ಚ ಕ್ರಮಣಶ್ಚೈವ ಧೃಷ್ಟಃ ಶೂರಃ ಪುರಂಜಯಃ ।
ಏತೇ ಬಾಹ್ಯಕಸೃಂಜಯ್ಯಾಂ ಭಜಮಾನಾದ್ವಿಜಜ್ಞಿರೇ ।। ೧-೩೭-೪
ಸೃಂಜಯಿ ಬಾಹ್ಯಕಳಲ್ಲಿ ಭಜಮಾನನಿಗೆ ಕೃಮಿ, ಕ್ರಮಣ, ಧೃಷ್ಟ, ಶೂರ, ಮತ್ತು ಪುರಂಜಯರು ಹುಟ್ಟಿದರು.
ಅಯುತಾಜಿತ್ಸಹಸ್ರಾಜಿಚ್ಛತಾಜಿಚ್ಚಾಥ ದಾಶಕಃ ।
ಉಪಬಾಹ್ಯಕಸೃಂಜಯ್ಯಾಂ ಭಜಮಾನಾದ್ವಿಜಜ್ಞಿರೇ ।। ೧-೩೭-೫
ಸೃಂಜಯಿ ಉಪಬಾಹ್ಯಕಳಲ್ಲಿ ಭಜಮಾನನಿಗೆ ಅಯುತಾಜಿತ್, ಸಹಸ್ರಾಜಿತ್, ಶತಾಜಿತ್ ಮತ್ತು ದಾಶಕರು ಹುಟ್ಟಿದರು.
ಯಜ್ವಾ ದೇವವೃಧೋ ರಾಜಾ ಚಚಾರ ವಿಪುಲಂ ತಪಃ ।
ಪುತ್ರಃ ಸರ್ವಗುಣೋಪೇತೋ ಮಮ ಸ್ಯಾದಿತಿ ನಿಶ್ಚಿತಃ ।। ೧-೩೭-೬
ರಾಜಾ ದೇವವೃಧನು ನನಗೆ ಸರ್ವಗುಣೋಪೇತ ಪುತ್ರನಾಗಬೇಕೆಂದು ನಿಶ್ಚಯಿಸಿ ಯಜ್ಞಯಾಗಾದಿಗಳನ್ನು ಮಾಡಿ ವಿಪುಲ ತಪಸ್ಸನ್ನೂ ತಪಿಸಿದನು.
ಸಂಯುಜ್ಯಾತ್ಮನಮೇವಂ ತು ಪರ್ಣಶಾಯಾ ಜಲಂ ಸ್ಪೃಶನ್ ।
ಸದೋಪಸ್ಪೃಶತಸ್ತಸ್ಯ ಚಕಾರ ಪ್ರಿಯಮಾಪಗಾ ।। ೧-೩೭-೭
ಹೀಗೆ ತನ್ನಲ್ಲಿ ತಾನೇ ನಿಶ್ಚಯಿಸಿ ಅವನು ಪರ್ಣಾಶಾ ನದಿಯಲ್ಲಿ ನಿಂತು ಸದಾ ತಪಸ್ಸನ್ನಾಚರಿಸುತ್ತಿದ್ದನು. ಸದಾ ತನ್ನಲ್ಲಿಯೇ ನಿಂತಿರುತ್ತಿದ್ದ ರಾಜನನ್ನು ಆ ನದಿಯು ಪ್ರೀತಿಸತೊಡಗಿದಳು.
ಚಿಂತಯಾಭಿಪರೀತಾ ಸಾ ಜಗಾಮೈಕಾಭಿನಿಶ್ಚಯಮ್ ।
ಕಲ್ಯಾಣತ್ವಾನ್ನರಪತೇಸ್ತಸ್ಯ ಸಾ ನಿಮ್ನಗೋತ್ತಮಾ ।। ೧-೩೭-೮
ನಾಧ್ಯಗಚ್ಛತ ತಾಂ ನಾರೀಂ ಯಸ್ಯಾಮೇವಂವಿಧಃ ಸುತಃ ।
ಜಾಯೇತ್ತಸ್ಮಾತ್ಸ್ವಯಂ ಹಂತ ಭವಾಮ್ಯಸ್ಯ ಸಹವ್ರತಾ ।। ೧-೩೭-೯
ಅವನಿಗೆ ಈ ರೀತಿಯ ಸುತನನ್ನು ನೀಡುವ ಬೇರೆ ಯಾವ ನಾರಿಯನ್ನೂ ಕಾಣದೇ ಆ ಉತ್ತಮ ನದಿಯು ನರಪತಿಗೆ ಕಲ್ಯಾಣವನ್ನುಂಟುಮಾಡಬೇಕೆಂದು ನಿಶ್ಚಯಿಸಿ ಚಿಂತೆಯಿಂದ ಏಕಾಂತದಲ್ಲಿ “ನಾನೇ ಇವನ ಪತ್ನಿಯೇಕೆ ಆಗಬಾರದು?” ಎಂದು ನಿಶ್ಚಯವನ್ನು ಮಾಡಿದಳು.
ಅಥ ಭೂತ್ವಾ ಕುಮಾರೀ ಸಾ ಬಿಭ್ರತೀ ಪರಮಂ ವಪುಃ ।
ವರಯಾಮಾಸ ನೃಪತಿಂ ತಾಮಿಯೇಷ ಚ ಸ ಪ್ರಭುಃ ।। ೧-೩೭-೧೦
ಕೂಡಲೇ ಅವಳು ಹೊಳೆಯುವ ಕುಮಾರಿಯ ಪರಮ ರೂಪವನ್ನು ತಾಳಿ ಆ ನೃಪತಿಯನ್ನು ವರಿಸಿದಳು. ಆ ಪ್ರಭುವೂ ಕೂಡ ಅವಳನ್ನು ಬಯಸಿದನು.
ತಸ್ಯಾಮಾಧತ್ತ ಗರ್ಭಂ ಚ ತೇಜಸ್ವಿನಮುದಾರಧೀಃ ।
ಅಥ ಸಾ ದಶಮೇ ಮಾಸಿ ಸುಷುವೇ ಸರಿತಾಂ ವರಾ ।। ೧-೩೭-೧೧
ಪುತ್ರಂ ಸರ್ವಗುಣೋಪೇತಂ ಬಭ್ರುಂ ದೇವಾವೃಧಾನ್ನೃಪಾತ್ ।
ಉದಾರಧೀ ರಾಜನು ಅವಳಲ್ಲಿ ತೇಜಸ್ವೀ ಗರ್ಭವನ್ನಿರಿಸಿದನು. ನದಿಗಳಲ್ಲಿ ಶ್ರೇಷ್ಠೆಯು ಹತ್ತನೇ ತಿಂಗಳಿನಲ್ಲಿ ನೃಪ ದೇವವೃಧನ ಸರ್ವಗುಣೋಪೇತ ಪುತ್ರ ಬಭ್ರುವಿಗೆ ಜನ್ಮವಿತ್ತಳು.
ಅತ್ರ ವಂಶೇ ಪುರಾಣಜ್ಞಾ ಗಾಯಂತೀತಿ ಪರಿಶ್ರುತಮ್ ।। ೧-೩೭-೧೨
ಗುಣಾಂದೇವಾವೃಧಸ್ಯಾಥ ಕೀರ್ತಯಂತೋ ಮಹಾತ್ಮನಃ ।
ಯಥೈವಾಗ್ರೇ ಸಮಂ ದೂರಾತ್ಪಶ್ಯಾಮ ಚ ತಥಾಂತಿಕೇ ।। ೧-೩೭-೧೩
ಆ ವಂಶದ ಪ್ರಾಚೀನ ಇತಿಹಾಸವನ್ನು ತಿಳಿದಿರುವವರು ಮಹಾತ್ಮಾ ದೇವಾವೃಧನ ಗುಣಗಳ ಕೀರ್ತನೆಯನ್ನು ಈ ರೀತಿ ಮಾಡುತ್ತಿದ್ದರು ಎಂದು ಕೇಳಿದ್ದೇವೆ: “ದೂರದಿಂದಲೂ ಮತ್ತು ಹತ್ತಿರದಿಂದಲೂ ಅವನು ಒಂದೇ ಸಮನಾಗಿ ಕಾಣುತ್ತಾನೆ!”
ಬಭ್ರುಃ ಶ್ರೇಷ್ಠೋ ಮನುಷ್ಯಾಣಾಂ ದೇವೈರ್ದೇವಾವೃಧಃ ಸಮಃ ।
ಷಷ್ಟಿಶ್ಚ ಷಟ್ಚ ಪುರುಷಾಃ ಸಹಸ್ರಾಣಿ ಚ ಸಪ್ತ ಚ ।। ೧-೩೭-೧೪
ಏತೇಽಮೃತತ್ವಂ ಸಂಪ್ರಾಪ್ತಾ ಬಭ್ರುರ್ದೇವಾವೃಧಾವಪಿ ।
ಯಜ್ವಾ ದಾನಪತಿರ್ವಿದ್ವಾನ್ಬ್ರಹ್ಮಣ್ಯಃ ಸುಧೃಢಾಯುಧಃ ।। ೧-೩೭-೧೫
ಕೀರ್ತಿಮಾಂಶ್ಚ ಮಹಾತೇಜಾಃ ಸಾತ್ತ್ವತಾನಾಂ ಮಹಾವರಃ ।
ತಸ್ಯಾನ್ವವಾಯಃ ಸುಮಹಾನ್ಭೋಜಾ ಯೇ ಮಾರ್ತಿಕಾವತಾಃ ।। ೧-೩೭-೧೬
ಬಭ್ರುವು ಮನುಷ್ಯರಲ್ಲಿ ಶ್ರೇಷ್ಠನು ಮತ್ತು ದೇವಾವೃಧನು ದೇವತೆಗಳಿಗೆ ಸಮನು. ಏಳುಸಾವಿರದ ಅರವತ್ತಾರು ಪುರುಷರ ಸಹಿತ ಬಭ್ರು ಮತ್ತು ದೇವಾವೃಧರು ಅಮೃತತ್ತ್ವವನ್ನು ಪಡೆದುಕೊಂಡರು. ಸಾತ್ತ್ವತರಲ್ಲಿ ಮಹಾಶ್ರೇಷ್ಠ ಬಭ್ರುವು ಯಜ್ಞಯಾಗಾದಿಗಳನ್ನು ಮಾಡಿ ದಾನಪತಿಯೂ, ವಿದ್ವಾನನೂ, ಬ್ರಹ್ಮಣ್ಯನೂ, ಸುದೃಢಾಯುಧನೂ ಕೀರ್ತಿಮಾನನೂ ಮತ್ತು ಮಹಾತೇಜಸ್ವಿಯೂ ಆಗಿದ್ದನು. ಅವನ ವಂಶವು ಅತಿದೊಡ್ಡದು. ಮಾರ್ತಿಕಾವತ ಭೋಜರು ಅವನದೇ ವಂಶದವರು.
ಅಂಧಕಾತ್ಕಾಶ್ಯದುಹಿತಾ ಚತುರೋಽಲಭದಾತ್ಮಜಾನ್ ।
ಕುಕುರಂ ಭಜಮಾನಂ ಚ ಶಮಿಂ ಕಂಬಲಬರ್ಹಿಷಮ್ ।। ೧-೩೭-೧೭
ಅಂಧಕನಿಗೆ ಕಾಶಿರಾಜ ದೃಢಾಶ್ವನ ಮಗಳಲ್ಲಿ ಕುಕುರ, ಭಜಮಾನ, ಶಮಿ ಮತ್ತು ಕಂಬಲಬರ್ಹಿಷ ಎಂಬ ನಾಲ್ವರು ಪುತ್ರರು ಜನಿಸಿದರು.
ಕುಕುರಸ್ಯ ಸುತೋ ಧೃಷ್ಣುರ್ಧೃಷ್ಣೋಸ್ತು ತನಯಸ್ತಥಾ ।
ಕಪೋತರೋಮಾ ತಸ್ಯಾಥ ತೈತ್ತಿರಿಸ್ತನಯೋಽಭವತ್ ।। ೧-೩೭-೧೮
ಕುಕುರನ ಸುತನ ಧೃಷ್ಣು. ಧೃಷ್ಣುವಿನ ತನಯನು ಕಪೋತರೋಮಾ. ತೈತ್ತಿರಿಯು ಕವನ ತನಯನಾದನು.
ಜಜ್ಞೇ ಪುನರ್ವಸುಸ್ತಸ್ಮಾದಭಿಜಿತ್ತು ಪುನರ್ವಸೋಃ ।
ತಸ್ಯ ವೈ ಪುತ್ರಮಿಥುನಂ ಬಭೂವಾಭಿಜಿತಃ ಕಿಲ ।। ೧-೩೭-೧೯
ತೈತಿರಿಯಲ್ಲಿ ಪುನರ್ವಸುವು ಹುಟ್ಟಿದನು ಮತ್ತು ಪುನರ್ವಸುವಲ್ಲಿ ಅಭಿಜಿತ್ ಜನಿಸಿದನು. ಅಭಿಜಿತನಿಗೆ ಅವಳಿ ಮಕ್ಕಳಾದರು.
ಆಹುಕಶ್ಚಾಹುಕೀ ಚೈವ ಖ್ಯಾತೌ ಖ್ಯಾತಿಮತಾಂ ವರೌ ।
ಇಮಾಂ ಚೋದಾಹರಂತ್ಯತ್ರ ಗಾಥಾಂ ಪ್ರತಿ ತಮಾಹುಕಮ್ ।। ೧-೩೭-೨೦
ಆಹುಕ ಮತ್ತು ಆಹುಕೀ ಎಂದು ಆ ಖ್ಯಾತಿವಂತರಲ್ಲಿ ಶ್ರೇಷ್ಠರಿಬ್ಬರು ಖ್ಯಾತರಾದರು. ಆಹುಕನ ಕುರಿತು ಈ ಗಾಥೆಯನ್ನು ಉದಾಹರಿಸುತ್ತಾರೆ.
ಶ್ವೇತೇನ ಪರಿವಾರೇಣ ಕಿಶೋರಪ್ರತಿಮೋ ಮಹಾನ್ ।
ಅಶೀತಿಚರ್ಮಣಾ ಯುಕ್ತಃ ಸ ನೃಪಃ ಪ್ರಥಮಂ ವ್ರಜೇತ್ ।। ೧-೩೭-೨೧
ತರುಣ ಅಶ್ವದಂತೆ ಉತ್ಸಾಹಿಯಾದ ಆ ರಾಜನು ತನ್ನ ಪರಿಶುದ್ಧ ಪರಿವಾರದೊಂದಿಗೆ ಹೊರಟಾಗ ಎಂಭತ್ತು ಕವಚಧಾರೀ ಸೇವಕರು ಅವನ ಪಲ್ಲಕ್ಕಿಯನ್ನು ಹೊರುತ್ತಾರೆ.
ನಾಪುತ್ರವಾನ್ನಾಶತದೋ ನಾಸಹಸ್ರಶತಾಯುಷಃ ।
ನಾಶುದ್ಧಕರ್ಮಾ ನಾಯಜ್ವಾ ಯೋ ಭೋಜಮಭಿತೋ ವ್ರಜೇತ್ ।। ೧-೩೭-೨೨
ಆ ಭೋಜ1ನೊಂದಿಗೆ ಹೋಗುತ್ತಿದ್ದವರಲ್ಲಿ ಯಾರೂ ಪುತ್ರರಿಲ್ಲದವರು, ನೂರು-ಸಾವಿರ ವರ್ಷಗಳ ಆಯುಸ್ಸಿಲ್ಲದವರು, ಶುದ್ಧಕರ್ಮಗಳನ್ನು ಮಾಡದಿದ್ದವರು ಮತ್ತು ಯಜ್ಞಗಳನ್ನು ಮಾಡದಿದ್ದವರು ಇರಲಿಲ್ಲ.
ಪೂರ್ವಸ್ಯಾಂ ದಿಶಿ ನಾಗಾನಾಂ ಭೋಜಸ್ಯೇತ್ಯನುಮೋದನಮ್ ।
ಸೋಪಾಸಂಗಾನುಕರ್ಷಾಣಾಂ ಧ್ವಜಿನಾಂ ಸವರೂಥಿನಾಮ್ ।। ೧-೩೭-೨೩
ರಥಾನಾಂ ಮೇಘಘೋಷಾಣಾಂ ಸಹಸ್ರಾಣಿ ದಶೈವ ತು ।
ರೂಪ್ಯಕಾಂಚನಕಕ್ಷಾಣಾಂ ಸಹಸ್ರಾಣಿ ದಶಾಪಿ ಚ ।। ೧-೩೭-೨೪
ಭೋಜನನ್ನು ಅನುಮೋದಿಸುತ್ತಾ ಪೂರ್ವ ದಿಕ್ಕಿನಲ್ಲಿ ಬೆಳ್ಳಿ ಮತ್ತು ಚಿನ್ನದ ಸರಪಳಿಗಳಿಂದ ಕಟ್ಟಲ್ಪಟ್ಟ ಹತ್ತು ಸಾವಿರ ಆನೆಗಳು ಬರುತ್ತಿದ್ದವು. ಹಾಗೆಯೇ ಉಪಸಂಗ, ಅನುಕರ್ಷ, ಧ್ವಜಗಳು ಮತ್ತು ವರೂಥಿಗಳಿಂದ ಕೂಡಿದ ಮೇಘಘೋಷಗಳುಳ್ಳ ಸಹಸ್ರಾರು ರಥಗಳು ಬರುತ್ತಿದ್ದವು.
ತಾವಂತ್ಯೇವ ಸಹಸ್ರಾಣಿ ಉತ್ತರಸ್ಯಾಂ ತಥಾ ದಿಶಿ ।
ಆ ಭೂಮಿಪಾಲಾನ್ಭೋಜಾನ್ಸ್ವಾನುತ್ತಿಷ್ಠನ್ಕಿಂಕಿಣೀಕಿಣಃ ।। ೧-೩೭-೨೫
ಅಷ್ಟೇ ಸಹಸ್ರ ಆನೆ-ರಥಗಳು ಉತ್ತರ ಮತ್ತು ಇತರ ದಿಕ್ಕುಗಳಲ್ಲಿ ಭೂಮಿಪಾಲ ಭೋಜನನ್ನು ಅಭಿನಂದಿಸಲು ಬರುತ್ತಿದ್ದವು. ಅವನು ಆ ಎಲ್ಲ ರಥಗಳಿಗೆ ಚಿನ್ನದ ಕಿಂಕಿಣೀ ಗಂಟೆಗಳನ್ನು ಮಾಡಿಸಿದ್ದನು.
ಆಹುಕೀಂ ಚಾಪ್ಯವಂತಿಭ್ಯಃ ಸ್ವಸಾರಂ ದದುರಂಧಕಾಃ ।
ಆಹುಕಸ್ಯ ತು ಕಾಶ್ಯಾಯಾಂ ದ್ವೌ ಪುತ್ರೌ ಸಂಬಭೂವತುಃ ।। ೧-೩೭-೨೬
ಅಂಧಕರು ಆಹುಕಿಯನ್ನು ಅವಂತಿಯ ರಾಜವಂಶಕ್ಕೆ ವಿವಾಹಮಾಡಿಕೊಟ್ಟರು. ಆಹುಕನಿಗೆ ಕಾಶಿಕನ್ಯೆಯಲ್ಲಿ ಎಬ್ಬರು ಪುತ್ರರು ಹುಟ್ಟಿದರು.
ದೇವಕಶ್ಚೋಗ್ರಸೇನಶ್ಚ ದೇವಪುತ್ರಸಮಾವುಭೌ ।
ದೇವಕಸ್ಯಾಭವನ್ಪುತ್ರಾಶ್ಚತ್ವಾರಸ್ತ್ರಿದಶೋಪಮಾಃ ।। ೧-೩೭-೨೭
ದೇವವಾನುಪದೇವಶ್ಚ ಸುದೇವೋ ದೇವರಕ್ಷಿತಃ ।
ದೇವಪುತ್ರರಂತಿದ್ದ ಅವರು ದೇವಕ ಮತ್ತು ಉಗ್ರಸೇನ. ದೇವಕನಿಗೆ ತ್ರಿದಶೋಪಮರಾದ ನಾಲ್ವರು ಪುತ್ರರು ಜನಿಸಿದರು: ದೇವವಾನ್, ಉಪದೇವ, ಸುದೇವ ಮತ್ತು ದೇವರಕ್ಷಿತ.
ಕುಮಾರ್ಯಃ ಸಪ್ತ ಚಾಸ್ಯಾಸನ್ವಸುದೇವಾಯ ತಾ ದದೌ ।। ೧-೩೭-೨೮
ದೇವಕೀ ಶಂತಿದೇವಾ ಚ ಸುದೇವಾ ದೇವರಕ್ಷಿತಾ ।
ವೃಕದೇವ್ಯುಪದೇವೀ ಚ ಸುನಾಸೀ ಚೈವ ಸಪ್ತಮೀ ।। ೧-೩೭-೨೯
ಅವನಿಗೆ ಏಳು ಕುಮಾರಿಯರೂ ಹುಟ್ಟಿದ್ದರು. ಅವರನ್ನು ವಸುದೇವನಿಗೆ ಕೊಟ್ಟಿದ್ದನು: ದೇವಕೀ, ಶಂತಿದೇವಾ, ಸುದೇವಾ, ದೇವರಕ್ಷಿತಾ, ವೃಕದೇವೀ, ಉಪದೇವೀ, ಮತ್ತು ಏಳನೆಯವರು ಸುನಾಸೀ.
ನವೋಗ್ರಸೇನಸ್ಯ ಸುತಾಸ್ತೇಷಾಂ ಕಂಸಸ್ತು ಪೂರ್ವಜಃ ।
ನ್ಯಗ್ರೋಧಶ್ಚ ಸುನಾಮಾ ಚ ಕಂಕಃ ಶಂಕುಃ ಸುಭೂಮಿಪಃ ।। ೧-೩೭-೩೦
ರಾಷ್ಟ್ರಪಾಲೋಽಥ ಸುತನುರನಾಧೃಷ್ಟಿಶ್ಚ ಪುಷ್ಟಿಮಾನ್ ।
ಉಗ್ರಸೇನನಿಗೆ ಒಂಭತ್ತು ಪುತ್ರರಿದ್ದರು. ಅವರಲ್ಲಿ ಕಂಸನು ಹಿರಿಯವನು. ಉಳಿದವರು – ನ್ಯಗ್ರೋಧ, ಸುನಾಮಾ, ಕಂಕ, ಶಂಕು, ಸುಭೂಮಿಪ, ರಾಷ್ಟ್ರಪಾಲ, ಸುತನು, ಅನಾಧೃಷ್ಟಿ, ಮತ್ತು ಪುಷ್ಟಿಮಾನ್.
ತೇಷಾಂ ಸ್ವಸಾರಃ ಪಂಚಾಽಽಸನ್ಕಂಸಾ ಕಂಸವತೀ ತಥಾ ।। ೧-೩೭-೩೧
ಸುತನೂ ರಾಷ್ಟ್ರಪಾಲೀ ಚ ಕಂಕಾ ಚೈವ ವರಾಂಗನಾ ।
ಉಗ್ರಸೇನಃ ಸಹಾಪತ್ಯೋ ವ್ಯಾಖ್ಯಾತಃ ಕುಕುರೋದ್ಭವಃ ।। ೧-೩೭-೩೨
ಅವರಿಗೆ ಐವರು ತಂಗಿಯರೂ ಇದ್ದರು: ಕಂಸಾ, ಕಂಸವತೀ, ಸುತನೂ, ರಾಷ್ಟ್ರಪಾಲೀ, ಮತ್ತು ವರಾಂಗನೆ ಕಂಕಾ. ಇದು ಕುಕುರ ವಂಶದಲ್ಲಿ ಜನಿಸಿದ ಉಗ್ರಸೇನ ಮತ್ತು ಅವನ ಸಂತಾನದ ವರ್ಣನೆ.
ಕುಕುರಾಣಾಮಿಮಂ ವಂಶಂ ಧಾರಯನ್ನಮಿತೌಜಸಾಮ್ ।
ಆತ್ಮನೋ ವಿಪುಲಂ ವಂಶಂ ಪ್ರಜಾವಾನಾಪ್ನುಯಾನ್ನರಃ ।। ೧-೩೭-೩೩
ಅಮಿತೌಜಸ ಕುಕುರರ ಈ ವಂಶವನ್ನು ತನ್ನಲ್ಲಿಯೇ ಧರಿಸಿಕೊಳ್ಳುವ ನರನು ಸಂತಾನಯುಕ್ತನಾಗಿ ವಿಪುಲ ವಂಶವನ್ನು ಪಡೆಯುತ್ತಾನೆ.”
ಸಮಾಪ್ತಿ
ಇತಿ ಶ್ರೀಮಹಾಭಾರತೇ ಖಿಲೇಷು ಹರಿವಂಶೇ ಹರಿವಂಶಪರ್ವಣಿ ಸಪ್ತತ್ರಿಂಶೋಽಧ್ಯಾಯಃ
-
ಆಹುಕ . ↩︎