ಪ್ರವೇಶ
।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।
ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ
ಶ್ರೀ ಮಹಾಭಾರತ
ಖಿಲಭಾಗೇ ಹರಿವಂಶಃ
ಹರಿವಂಶ ಪರ್ವ
ಅಧ್ಯಾಯ 36
ಸಾರ
ವೈಶಂಪಾಯನ ಉವಾಚ
ಕ್ರೋಷ್ಟೋರೇವಾಭವತ್ಪುತ್ರೋ ವೃಜಿನೀವಾನ್ಮಹಾಯಶಾಃ ।
ವೃಜಿನೀವತ್ಸುತಶ್ಚಾಪಿ ಸ್ವಾಹಿಃ ಸ್ವಾಹಾಕೃತಂ ವರಃ ।। ೧-೩೬-೧
ವೈಶಂಪಾಯನನು ಹೇಳಿದನು: “ಕ್ರೋಷ್ಟುವಿಗೆ ವೃಜಿನೀವಾನ್ ಎಂಬ ಮಹಾಯಶಸ್ವೀ ಪುತ್ರನಾದನು. ವೃಜಿನೀವಾನನನಿಗೆ ಸ್ವಾಹಿ ಎಂಬ ಯಜ್ಞಗಳಲ್ಲಿ ಸ್ವಾಹಾಗಳನ್ನು ಮಾಡುವವರಲ್ಲಿ ಶ್ರೇಷ್ಠನು ಮಗನಾದನು.
ಸ್ವಾಹಿಪುತ್ರೋಽಭವದ್ರಾಜಾ ರುಷದ್ಗುರ್ವದತಾಂ ವರಃ ।
ಮಹಾಕ್ರತುಭಿರೀಜೇ ಯೋ ವಿವಿಧೈರ್ಭೂರಿದಕ್ಷಿಣೈಃ ।। ೧-೩೬-೨
ಮಾತನಾಡುವವರಲ್ಲಿ ಶ್ರೇಷ್ಠ ರಾಜಾ ರುಷದ್ಗುವು ಸ್ವಾಹಿಯ ಪುತ್ರನಾದನು. ಅವನು ವಿವಿಧ ಭೂರಿದಕ್ಷಿಣೆಗಳಿಂದ ಮಹಾಕ್ರತುಗಳನ್ನು ಯಜಿಸಿದನು.
ಸುತಪ್ರಸೂತಿಮನ್ವಿಚ್ಛನ್ರುಷದ್ಗುಃ ಸೋಽಗ್ರ್ಯಮಾತ್ಮಜಮ್ ।
ಜಜ್ಞೇ ಚಿತ್ರರಥಸ್ತಸ್ಯ ಪುತ್ರಃ ಕರ್ಮಭಿರನ್ವಿತಃ ।। ೧-೩೬-೩
ಪುತ್ರಪೌತ್ರರನ್ನು ಹೊಂದುವ ಮಗನನ್ನು ಬಯಸಿ ಋಷದ್ಗುವು ಯಜ್ಞಗಳನ್ನು ನಡೆಸಲು ಅವನಿಗೆ ಚಿತ್ರರಥನೆಂಬ ಪುತ್ರನಾದನು.
ಆಸೀಚ್ಚೈತ್ರರಥಿರ್ವೀರೋ ಯಜ್ವಾ ವಿಪುಲದಕ್ಷಿಣಃ ।
ಶಶಬಿಂದುಃ ಪರಂ ವೃತ್ತಂ ರಾಜರ್ಷೀಣಾಮನುಷ್ಠಿತಃ ।। ೧-೩೬-೪
ಚಿತ್ರರಥನ ಮಗ ವೀರ ಶಶಬಿಂದುವು ವಿಪುಲದಕ್ಷಿಣಾಯುಕ್ತ ಯಜ್ಞಗಳನ್ನು ಮಾಡಿ ರಾಜರ್ಷಿಗಳ ಪರಮ ವೃತಿಯಲ್ಲಿ ನೆಲೆಸಿದ್ದನು.
ಪೃಥುಶ್ರವಾಃ ಪೃಥುಯಶಾ ರಾಜಾಽಽಸೀಚ್ಛಶಬಿಂದುಜಃ ।
ಶಂಸಂತಿ ಚ ಪುರಾಣಜ್ಞಾಃ ಪಾರ್ಥಶ್ರವಸಮುತ್ತರಮ್ ।। ೧-೩೬-೫
ಶಶಬಿಂದುವಿನ ಮಗನು ರಾಜಾ ಪೃಥುಯಶ ಪೃಥುಶ್ರವನಾದನು. ಪುರಾಣಜ್ಞರು ಪೃಥುಶ್ರವನ ಮಗನು ಉತ್ತರನೆಂದು ಹೇಳುತ್ತಾರೆ.
ಅನಂತರಂ ಸುಯಜ್ಞಸ್ತು ಸುಯಜ್ಞತನಯೋಽಭವತ್ ।
ಉಶತೋ ಯಜ್ಞಮಖಿಲಂ ಸ್ವಧರ್ಮಮುಶತಾಂ ವರಃ ।। ೧-೩೬-೬
ಉತ್ತರನ ಮಗನು ಸುಯಜ್ಞ ಮತ್ತು ಉಶತನು ಸುಯಜ್ಞನ ತನಯನಾದನು. ಸ್ವಧರ್ಮಿಗಳಲ್ಲಿ ಶ್ರೇಷ್ಠನಾದ ಉಶತನು ಅಖಿಲ ಯಜ್ಞಗಳಲ್ಲಿ ನಿರತನಾಗಿದ್ದನು.
ಶಿನೇಯುರಭವತ್ಸೂನುರುಶತಃ ಶತ್ರುತಾಪನಃ ।
ಮರುತ್ತಸ್ತಸ್ಯ ತನಯೋ ರಾಜರ್ಷಿರಭವನ್ನೃಪ ।। ೧-೩೬-೭
ಉಶತನ ಮಗನು ಶತ್ರುತಾಪನ ಶಿನೇಯು. ನೃಪ! ಅವನ ತನಯನು ರಾಜರ್ಷಿ ಮರುತ್ತನು.
ಮರುತ್ತೋಽಲಭತ ಜ್ಯೇಷ್ಠಂ ಸುತಂ ಕಂಬಲಬರ್ಹಿಷಮ್ ।
ಚಚಾರ ವಿಪುಲಂ ಧರ್ಮಮಮರ್ಷಾತ್ಪ್ರೇತ್ಯಭಾಗಪಿ ।। ೧-೩೬-೮
ಮರುತ್ತನು ಕಂಬಲಬರ್ಹಿಷನನ್ನು ಜ್ಯೇಷ್ಠ ಸುತನನ್ನಾಗಿ ಪಡೆದುಕೊಂಡನು. ಅವನು ಮರಣಾನಂತರ ಫಲವನ್ನೀಡುವ ವಿಪುಲ ಧರ್ಮಾಚರಣೆಗಳಲ್ಲಿ ತೊಡಗಿದ್ದನು.
ಸುತಪ್ರಸೂತಿಮಿಚ್ಛನ್ವೈ ಸುತಂ ಕಂಬಲಬರ್ಹಿಷಃ ।
ಬಭೂವ ರುಕ್ಮಕವಚಃ ಶತಪ್ರಸವತಃ ಸುತಃ ।। ೧-೩೬-೯
ಪುತ್ರಪೌತ್ರರನ್ನು ಇಚ್ಛಿಸಿದ ಕಂಬಲಬರ್ಹಿಷನಿಗೆ ರುಕ್ಮಕವಚನು ಸುತನಾದನು. ಅವನು ನೂರು ಮಕ್ಕಳಲ್ಲಿ ಉಳಿದುಕೊಂಡ ಒಬ್ಬನೇ ಮಗನಾಗಿದ್ದನು.
ನಿಹತ್ಯ ರುಕ್ಮಕವಚಃ ಶತಂ ಕವಚಿನಾಂ ರಣೇ ।
ಧನ್ವಿನಾಂ ನಿಶಿತೈರ್ಬಾಣೈರವಾಪ ಶ್ರಿಯಮುತ್ತಮಾಮ್ ।। ೧-೩೬-೧೦
ರುಕ್ಮಕವಚನು ರಣದಲ್ಲಿ ನೂರು ಕವಚಧಾರೀ ಧನುರ್ಧಾರಿಗಳನ್ನು ನಿಶಿತ ಬಾಣಗಳಿಂದ ಸಂಹರಿಸಿ ಉತ್ತಮ ಶ್ರೀಯನ್ನು ಪಡೆದುಕೊಂಡಿದ್ದನು.
ಜಜ್ಞೇಽಥ ರುಕ್ಮಕವಚಾತ್ಪರಾಜಿತ್ಪರವೀರಹಾ ।
ಜಜ್ಞಿರೇ ಪಂಚ ಪುತ್ರಾಸ್ತು ಮಹಾವೀರ್ಯಾಃ ಪರಾಜಿತಃ ।। ೧-೩೬-೧೧
ರುಕ್ಮಕವಚನಿಗೆ ಪರವೀರಹಾ ಪರಾಜಿತನು ಜನಿಸಿದನು. ಪರಾಜಿತನಿಗೆ ಮಹಾವೀರ್ಯ ಐವರು ಪುತ್ರರು ಜನಿಸಿದರು.
ರುಕ್ಮೇಷುಃಪೃಥುರುಕ್ಮಶ್ಚ ಜ್ಯಾಮಘಃ ಪಾಲಿತೋ ಹರಿಃ ।
ಪಾಲಿತಂ ಚ ಹರಿಂ ಚೈವ ವಿದೇಹೇಭ್ಯಃ ಪಿತಾ ದದೌ ।। ೧-೩೬-೧೨
ರುಕ್ಮೇಷು, ಪೃಥುರುಕ್ಮ, ಜ್ಯಾಮಘ, ಪಾಲಿತ ಮತ್ತು ಹರಿ. ಪಾಲಿತ ಮತ್ತು ಹರಿ ಇವರನ್ನು ತಂದೆಯು ವಿದೇಹರಾಜನಿಗೆ ಕೊಟ್ಟಿದ್ದನು.
ರುಕ್ಮೇಷುರಭವದ್ರಾಜಾ ಪೃಥುರುಕ್ಮಸ್ಯ ಸಂಶ್ರಿತಃ ।
ತಾಭ್ಯಾಂ ಪ್ರವ್ರಾಜಿತೋ ರಾಜ್ಯಾಜ್ಜ್ಯಾಮಘೋಽವಸದಾಶ್ರಮೇ ।। ೧-೩೬-೧೩
ಪೃಥುರುಕ್ಮನ ಆಶ್ರಯದಲ್ಲಿ ರುಕ್ಮೇಷುವು ರಾಜನಾದನು. ಅವರಿಬ್ಬರೂ ತಂದೆಯನ್ನು ರಾಜ್ಯದಿಂದ ಹೊರಹಾಕಲು ಜ್ಯಾಮಘನು ಆಶ್ರಮದಲ್ಲಿ ವಾಸಿಸತೊಡಗಿದನು.
ಪ್ರಶಾಂತಃ ಸ ವನಸ್ಥಸ್ತು ಬ್ರಾಹ್ಮಣೈಶ್ಚಾವಬೋಧಿತಃ ।
ಜಿಗಾಯ ರಥಮಾಸ್ಥಾಯ ದೇಶಮನ್ಯಂ ಧ್ವಜೀ ರಥೀ ।। ೧-೩೬-೧೪
ವನದಲ್ಲಿದ್ದು ಪ್ರಶಾಂತನಾಗಿದ್ದ ಅವನು ಬ್ರಾಹ್ಮಣರಿಂದ ಶಕ್ತಿವಂತನಾಗಿ ಧ್ವಜಯುಕ್ತ ರಥದಲ್ಲಿ ಕುಳಿತು ಅನ್ಯ ದೇಶವನ್ನು ಗೆದ್ದನು.
ನರ್ಮದಾಕೂಲಮೇಕಾಕೀ ನಗರೀಂ ಮೃತ್ತಿಕಾವತೀಮ್ ।
ಋಕ್ಷವಂತಂ ಗಿರಿಂ ಜಿತ್ವಾ ಶುಕ್ತಿಮತ್ಯಾಮುವಾಸ ಸಃ ।। ೧-೩೬-೧೫
ಏಕಾಕಿಯಾಗಿ ಅವನು ನರ್ಮದಾತೀರದ ಮೃತ್ತಿಕಾವತೀ ನಗರಿಯನ್ನೂ ಋಕ್ಷವಂತ ಗಿರಿಯನ್ನು ಗೆದ್ದು ಶುಕ್ತಿಮತಿಯಲ್ಲಿ ತನ್ನ ಪುರವನ್ನು ಸ್ಥಾಪಿಸಿದನು.
ಜ್ಯಾಮಘಸ್ಯಾಭವದ್ಭಾರ್ಯಾ ಶೈಬ್ಯಾ ಬಲವತೀ ಸತೀ ।
ಅಪುತ್ರೋಽಪಿ ಚ ರಾಜಾ ಸ ನಾನ್ಯಾಂ ಭಾರ್ಯಾಮವಿಂದತ ।। ೧-೩೬-೧೬
ಜ್ಯಾಮಘನ ಪತ್ನಿ ಸತೀ ಶೈಬ್ಯೆಯು ಬಲವತಿಯಾಗಿದ್ದಳು. ಆದುದರಿಂದ ಪುತ್ರರಿಲ್ಲದಿದ್ದರೂ ರಾಜನು ಅನ್ಯ ಭಾರ್ಯೆಯನ್ನು ವಿವಾಹವಾಗಲಿಲ್ಲ.
ತಸ್ಯಾಸೀದ್ವಿಜಯೋ ಯುದ್ಧೇ ತತ್ರ ಕನ್ಯಾಮವಾಪ ಸಃ ।
ಭಾರ್ಯಾಮುವಾಚ ಸಂತ್ರಸ್ತಃ ಸ್ನುಷೇತಿ ಸ ನರೇಶ್ವರಃ ।। ೧-೩೬-೧೭
ಅವನು ಒಂದು ಯುದ್ಧದಲ್ಲಿ ವಿಜಯಿಯಾದಾಗ ಕನ್ಯೆಯೋರ್ವಳನ್ನು ಪಡೆದುಕೊಂಡನು. ಆದರೆ ಹೆದರಿ ಆ ನರೇಶ್ವರನು ಪತ್ನಿಗೆ ಇವಳು ಸೊಸೆ ಎಂದುಬಿಟ್ಟನು.
ಏತಚ್ಛ್ರುತ್ವಾಬ್ರವೀದ್ದೇವೀ ಕಸ್ಯ ಚೇಯಂ ಸ್ನುಷೇತಿ ವೈ ।
ಅಬ್ರವೀತ್ತದುಪಶ್ರುತ್ಯ ಜ್ಯಾಮಘೋ ರಾಜಸತ್ತಮಃ ।। ೧-೩೬-೧೮
ಇದನ್ನು ಕೇಳಿದ ದೇವಿಯು ಇವಳು ಯಾರ ಸೊಸೆ ಎಂದು ಹೇಳಿದಾಗ ರಾಜಸತ್ತಮ ಜ್ಯಾಮಘನು ಅವಳಿಗೆ ಹೇಳಿದನು:
ಯಸ್ತೇ ಜನಿಷ್ಯತೇ ಪುತ್ರಃ ತಸ್ಯ ಭಾರ್ಯೋಪದಾನವೀ ।
ಉಗ್ರೇಣ ತಪಸಾ ತಸ್ಯಾಃ ಕನ್ಯಾಯಾಃ ಸ ವ್ಯಜಾಯತ ।
ಪುತ್ರಂ ವಿದರ್ಭಂ ಸುಭಗಾ ಶೈಬ್ಯಾ ಪರಿಣತಾ ಸತೀ ।। ೧-೩೬-೧೯
“ಈ ಉಪದಾನವಿಯು ನಿನ್ನಲ್ಲಿ ಜನಿಸುವ ಪುತ್ರನ ಭಾರ್ಯೆಯಾಗುತ್ತಾಳೆ.” ಆ ಕನ್ಯೆಯ ಉಗ್ರ ತಪಸ್ಸಿನಿಂದಾಗಿ ವೃದ್ಧೆಯಾಗಿದ್ದರೂ ಸತೀ ಸುಭಗೆ ಶೈಬ್ಯೆಯಲ್ಲಿ ವಿದರ್ಭನೆಂಬ ಪುತ್ರನು ಜನಿಸಿದನು.
ರಾಜಪುತ್ರ್ಯಾಂ ತು ವಿದ್ವಾಂಸೌ ಸ್ನುಷಾಯಾಂ ಕ್ರಥಕೌಶಿಕೌ ।
ಪಶ್ಚಾದ್ವಿದರ್ಭೋಽಜನಯಚ್ಛೂರೌ ರಣವಿಶಾರದೌ ।। ೧-೩೬-೨೦
ನಂತರ ಆ ರಾಜಪುತ್ರಿಯಲ್ಲಿ ವಿದರ್ಭನು ವಿದ್ವಾಂಸರೂ, ಶೂರರೂ, ರಣವಿಶಾರದರೂ ಆದ ಕ್ರಥ ಮತ್ತು ಕೌಶಿಕರೆಂಬ ಈರ್ವರು ಪುತ್ರರನ್ನು ಪಡೆದನು.
ಲೋಮಪಾದಂ ತೃತೀಯಂ ತು ಪುತ್ರಂ ಪರಮಧಾರ್ಮಿಕಮ್ ।
ಲೋಮಪಾದಾತ್ಮಜೋ ಬಭ್ರುರಾಹ್ವತಿಸ್ತಸ್ಯ ಚಾತ್ಮಜಃ ।। ೧-೩೬-೨೧
ಲೋಮಪಾದನೆಂಬ ಮೂರನೆಯ ಪರಮಧಾರ್ಮಿಕ ಪುತ್ರನಿಗೂ ಜನ್ಮವಿತ್ತನು. ಲೋಮಪಾದನ ಮಗನು ಬಭ್ರು ಮತ್ತು ಆಹ್ವತಿಯು ಬಭ್ರುವಿನ ಮಗನು.
ಆಹ್ವತೇಃ ಕೌಶಿಕಶ್ಚೈವ ವಿದ್ವಾನ್ಪರಮಧಾರ್ಮಿಕಃ ।
ಚೇದಿಃ ಪುತ್ರಃ ಕೌಶಿಕಸ್ಯ ತಸ್ಮಾಚ್ಚೈದ್ಯಾ ನೃಪಾಃ ಸ್ಮೃತಾಃ ।। ೧-೩೬-೨೨
ಆಹ್ವತನಿಗೆ ಕೌಶಿಕನೆಂಬ ವಿದ್ವಾನ್ ಮತ್ತು ಪರಮಧಾರ್ಮಿಕ ಪುತ್ರನಾದನು. ಚೇದಿಯು ಕೌಶಿಕನ ಪುತ್ರ. ಅವನಿಂದ ಚೈದ್ಯನೃಪರೆಂದಾದರು.
ಭೀಮೋ ವಿದರ್ಭಸ್ಯ ಸುತಃ ಕುಂತಿಸ್ತಸ್ಯಾತ್ಮಜೋಽಭವತ್ ।
ಕುಂತೇರ್ಧೃಷ್ಟಸುತೋ ಜಜ್ಞೇ ರಣಧೃಷ್ಟಃ ಪ್ರತಾಪವಾನ್ ।
ಧೃಷ್ಟಸ್ಯ ಜಜ್ಞಿರೇ ಶೂರಾಸ್ತ್ರಯಃ ಪರಮಧಾರ್ಮಿಕಾಃ ।। ೧-೩೬-೨೩
ವಿದರ್ಭನ ನಾಲ್ಕನೇ ಪುತ್ರನು ಭೀಮನು. ಕುಂತಿಯು ಅವನ ಪುತ್ರನಾದನು. ಕುಂತಿಗೆ ದೃಷ್ಟನು ಸುತನಾಗಿ ಜನಿಸಿದನು. ದೃಷ್ಟನು ರಣದಲ್ಲಿ ಪ್ರತಾಪವಾನನಾಗಿದ್ದನು. ಧೃಷ್ಟನಿಗೆ ಮೂವರು ಪರಮಧಾರ್ಮಿಕ ಶೂರರು ಹುಟ್ಟಿದರು.
ಆವಂತಶ್ಚ ದಶಾರ್ಹಶ್ಚ ಬಲೀ ವಿಷಹರಶ್ಚ ಯಃ ।
ದಶಾರ್ಹಸ್ಯ ಸುತೋ ವ್ಯೋಮಾ ವ್ಯೋಮ್ನೋ ಜೀಮೂತ ಉಚ್ಯತೇ ।। ೧-೩೬-೨೪
ಆವಂತ, ದಶಾರ್ಹ ಮತ್ತು ಬಲಶಾಲೀ ವಿಷಹರ. ದಶಾರ್ಹನ ಸುತನ ವ್ಯೋಮನು ಮತ್ತು ವ್ಯೋಮನ ಮಗನು ಜೀಮೂತನು.
ಜೀಮೂತಪುತ್ರೋ ಬೃಹತಿಸ್ತಸ್ಯ ಭೀಮರಥಃ ಸುತಃ ।
ಅಥ ಭೀಮರಥಸ್ಯಾಸೀತ್ಪುತ್ರೋ ನವರಥಸ್ತಥಾ ।। ೧-೩೬-೨೫
ಜೀಮೂತನ ಪುತ್ರನು ಬೃಹತಿ ಮತ್ತು ಭೀಮರಥನು ಅವನ ಸುತನು. ಭೀಮರಥನಿಗೆ ನವರಥನು ಪುತ್ರನಾದನು.
ತಸ್ಯ ಚಾಸೀದ್ದಶರಥಾಃ ಶಕುನಿಸ್ತಸ್ಯ ಚಾತ್ಮಜಃ ।
ತಸ್ಮಾತ್ಕರಂಭಃ ಕಾರಂಭಿರ್ದೇವರಾತೋಽಭವನ್ನೃಪಃ ।। ೧-೩೬-೨೬
ಅವನ ಪುತ್ರನು ದಶರಥನು ಮತ್ತು ಶಕುನಿಯು ಅವನ ಮಗನು. ಶಕುನಿಯಿಂದ ಕರಂಭ ಮತ್ತು ಕರಂಭನಿಂದ ನೃಪ ದೇವರಾತನಾದನು.
ದೇವಕ್ಷತ್ರೋಽಭವತ್ತಸ್ಯ ದೈವಕ್ಷತ್ರಿರ್ಮಹಾಯಶಾಃ ।
ದೇವಗರ್ಭಸಮೋ ಜಜ್ಞೇ ದೇವಕ್ಷತ್ರಸ್ಯ ನಂದನಃ ।। ೧-೩೬-೨೭
ದೇವರಾತನಿಗೆ ದೇವಕ್ಷತ್ರನು ಮಗನಾದನು. ದೇವಕ್ಷತ್ರಿಗೆ ಮಹಾಯಶಸ್ವೀ ದೇವಗರ್ಭಸಮ ದೈವಕ್ಷತ್ರಿಯು ಮಗನಾದನು.
ಮಧೂನಾಂ ವಂಶಕೃದ್ರಾಜಾ ಮಧುರ್ಮಧುರವಾಗಪಿ ।
ಮಧೋರ್ಜಜ್ಞೇಽಥ ವೈದರ್ಭ್ಯಾಂ ಪುತ್ರೋ ಮರುವಸಾಸ್ತಥಾ ।। ೧-೩೬-೨೮
ಅವನ ಹೆಸರು ಮಧು ಎಂದಾಗಿತ್ತು. ಮಧುಗಳ ವಂಶವರ್ಧಕನಾದ ಆ ರಾಜನ ವಾಣಿಯೂ ಮಧುರವಾಗಿತ್ತು. ಮಧುವಿಗೆ ವೈದರ್ಭಿಯಲ್ಲಿ ಮರುವಸು ಎಂಬ ಪುತ್ರನು ಜನಿಸಿದನು.
ಆಸೀನ್ಮರುವಸಃ ಪುತ್ರಃ ಪುರುದ್ವಾನ್ಪುರುಷೋತ್ತಮಃ ।
ಮಧುರ್ಜಜ್ಞೇಽಥ ವೈದರ್ಭ್ಯಾಂ ಭದ್ರವತ್ಯಾಂ ಕುರೂದ್ವಹಃ ।। ೧-೩೬-೨೯
ಮರುವಸುವಿನ ಪುತ್ರನು ಪುರುಷೋತ್ತಮ ಪುರುದ್ವಾನನಾದನು. ಅವನಿಗೆ ವೈದರ್ಭಿ ಭದ್ರವತಿಯಲ್ಲಿ ಮಧು ಎಂಬ ಕುರೂದ್ವಹನು ಹುಟ್ಟಿದನು.
ಐಕ್ಷ್ವಾಕೀ ಚಾಭವದ್ಭಾರ್ಯಾ ಸತ್ತ್ವಾಂಸ್ತಸ್ಯಾಮಜಾಯತ ।
ಸತ್ತ್ವಾನ್ಸರ್ವಗುಣೋಪೇತಃ ಸಾತ್ತ್ವತಾಂ ಕೀರ್ತಿವರ್ಧನಃ ।। ೧-೩೬-೩೦
ಮರುವಸುವಿನ ಇನ್ನೊಬ ಭಾರ್ಯೆ ಇಕ್ಷ್ವಾಕಿಯಲ್ಲಿ ಸತ್ತ್ವಾನ್ ಎನ್ನುವ ಮಗನು ಜನಿಸಿದನು. ಸತ್ತ್ವಾನನು ಸರ್ವಗುಣೋಪೇತನೂ ಸಾತ್ತ್ವತರ ಕೀರ್ತಿವರ್ಧನನೂ ಆಗಿದ್ದನು.
ಇಮಾಂ ವಿಸೃಷ್ಟಿಂ ವಿಜ್ಞಾಯ ಜ್ಯಾಮಘಸ್ಯ ಮಹಾತ್ಮನಃ ।
ಯುಜ್ಯತೇ ಪರಯಾ ಕೀರ್ತ್ಯಾ ಪ್ರಜಾವಾಂಶ್ಚ ಭವೇನ್ನರಃ ।। ೧-೩೬-೩೧
ಮಹಾತ್ಮ ಜ್ಯಾಮಘನ ಈ ವಂಶವನ್ನು ತಿಳಿದುಕೊಂಡ ನರನು ಪರಮ ಕೀರ್ತಿಯನ್ನು ಪಡೆದುಕೊಳ್ಳುತ್ತಾನೆ ಮತ್ತು ಸಂತಾನವಂತನಾಗುತ್ತಾನೆ.”
ಸಮಾಪ್ತಿ
ಇತಿ ಶ್ರೀಮಹಾಭಾರತೇ ಖಿಲೇಷು ಹರಿವಂಶೇ ಹರಿವಂಶಪರ್ವಣಿ ಷಟ್ತ್ರಿಂಶೋಽಧ್ಯಾಯಃ