034: ವೃಷ್ಣಿವಂಶವರ್ಣನಮ್

ಪ್ರವೇಶ

।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।

ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ

ಶ್ರೀ ಮಹಾಭಾರತ

ಖಿಲಭಾಗೇ ಹರಿವಂಶಃ

ಹರಿವಂಶ ಪರ್ವ

ಅಧ್ಯಾಯ 34

ಸಾರ

ಅಕ್ರೂರ, ವಸುದೇವ, ಕುಂತೀ, ಸಾತ್ಯಕಿ, ಉದ್ಧವ, ಚಾರುದೇಷ್ಣ, ಏಕಲವ್ಯ ಮೊದಲಾದವರ ಪರಿಚಯ (1-41).

ವೈಶಂಪಾಯನ ಉವಾಚ
ಗಾಂಧಾರೀ ಚೈವ ಮಾದ್ರೀ ಚ ಕ್ರೋಷ್ಟೋರ್ಭಾರ್ಯೇ ಬಭೂವತುಃ ।
ಗಾಂಧಾರೀ ಜನಯಾಮಾಸ ಅನಮಿತ್ರಂ ಮಹಾಬಲಮ್ ।। ೧-೩೪-೧

ವೈಶಂಪಾಯನನು ಹೇಳಿದನು: “ಗಾಂಧಾರೀ ಮತ್ತು ಮಾದ್ರೀ ಇವರು ಕ್ರೋಷ್ಟುವಿನ ಭಾರ್ಯೆಯರಾಗಿದ್ದರು. ಗಾಂಧಾರಿಯು ಮಹಾಬಲ ಅನಮಿತ್ರನಿಗೆ ಜನ್ಮವಿತ್ತಳು.

ಮಾದ್ರೀ ಯುಧಾಜಿತಂ ಪುತ್ರಂ ತತೋಽನ್ಯಂ ದೇವಮೀಢುಷಮ್ ।
ತೇಷಾಂ ವಂಶಸ್ತ್ರಿಧಾ ಭೂತೋ ವೃಷ್ಣೀನಾಂ ಕುಲವರ್ಧನಃ ।। ೧-೩೪-೨

ಮಾದ್ರಿಯ ಪುತ್ರ ಯುಧಾಜಿತ. ಅವಳ ಇನ್ನೊಬ್ಬ ಪುತ್ರ ದೇವಮೀಢುಷ. ಆ ಮೂವರಿಂದ ವರ್ಧಿಸುತ್ತಿದ್ದ ವೃಷ್ಣಿಗಳ ಕುಲವು ಮೂರು ಭಾಗಗಳಾಯಿತು.

ಮಾದ್ರ್ಯಾಃ ಪುತ್ರಸ್ಯ ಜಜ್ಞಾತೇ ಸುತೌ ವೃಷ್ಣ್ಯಂಧಕಾವುಭೌ ।
ಜಜ್ಞಾತೇ ತನಯೌ ವೃಷ್ಣೇಃ ಶ್ವಫಲ್ಕಶ್ಚಿತ್ರಕಸ್ತಥಾ ।। ೧-೩೪-೩

ಮಾದ್ರಿಯ ಪುತ್ರ1ನಲ್ಲಿ ವೃಷ್ಣಿ-ಅಂಧಕರೆಂಬ ಇಬ್ಬರು ಪುತ್ರರು ಜನಿಸಿದರು. ವೃಷ್ಣಿಯಲ್ಲಿ ಶ್ವಫಲ್ಕ ಮತ್ತು ಚಿತ್ರಕರೆಂಬ ಇಬ್ಬರು ಪುತ್ರರಾದರು.

ಶ್ವಫಲ್ಕಸ್ತು ಮಹಾರಾಜ ಧರ್ಮಾತ್ಮಾ ಯತ್ರ ವರ್ತತೇ ।
ನಾಸ್ತಿ ವ್ಯಾಧಿಭಯಂ ತತ್ರ ನಾವರ್ಷಭಯಮಪ್ಯುತ ।। ೧-೩೪-೪

ಮಹಾರಾಜ! ಧರ್ಮಾತ್ಮಾ ಶ್ವಫಲ್ಕನು ವಾಸಿಸುತ್ತಿದ್ದಲ್ಲಿ ವ್ಯಾಧಿಭಯವಾಗಲೀ ಬರಗಾಲದ ಭಯವಾಗಲೀ ಇರಲಿಲ್ಲ.

ಕದಾಚಿತ್ಕಾಶಿರಾಜಸ್ಯ ವಿಭೋರ್ಭರತಸತ್ತಮ ।
ತ್ರೀಣಿ ವರ್ಷಾಣಿ ವಿಷಯೇ ನಾವರ್ಷತ್ಪಾಕಶಾಸನಃ ।। ೧-೩೪-೫

ಭರತಸತ್ತಮ! ಒಮ್ಮೆ ಕಾಶಿರಾಜನ ದೇಶದಲ್ಲಿ ಪಾಕಶಾಸನನು ಮೂರುವರ್ಷಗಳು ಮಳೆಯನ್ನೇ ಸುರಿಸಲಿಲ್ಲ.

ಸ ತತ್ರ ವಾಸಯಾಮಾಸ ಶ್ವಫಲ್ಕಂ ಪರಮಾರ್ಚಿತಮ್ ।
ಶ್ವಫಲ್ಕಪರಿವರ್ತೇ ಚ ವವರ್ಷ ಹರಿವಾಹನಃ ।। ೧-೩೪-೬

ಆಗ ಅವನು ಅಲ್ಲಿಗೆ ಶಫಲ್ಕನನ್ನು ಪರಮ ಪೂಜೆಯಿಂದ ಉಳಿಸಿಕೊಂಡನು. ಶ್ವಫಲ್ಕನು ಬರುತ್ತಲೇ ಹರಿವಾಹನನು ಮಳೆಸುರಿಸಿದನು.

ಶ್ವಫಲ್ಕಃ ಕಾಶಿರಾಜಸ್ಯ ಸುತಾಂ ಭಾರ್ಯಾಮವಿಂದತ ।
ಗಾಂದಿನೀಂ ನಾಮ ಸಾ ಗಾಂ ತು ದದೌ ವಿಪ್ರೇಷು ನಿತ್ಯಶಃ ।। ೧-೩೪-೭

ಶ್ವಫಲ್ಕನು ಗಾಂದಿನೀ ಎಂಬ ಹೆಸರಿನ ಕಾಶಿರಾಜನ ಸುತೆಯನ್ನು ಪತ್ನಿಯನ್ನಾಗಿ ಪಡೆದುಕೊಂಡನು. ಅವಳು ನಿತ್ಯವೂ ವಿಪ್ರರಿಗೆ ಗೋವುಗಳ ದಾನಮಾಡುತ್ತಿದ್ದಳು.

ಸಾ ಮಾತುರುದರಸ್ಥಾ ತು ಬಹೂನ್ವರ್ಷಗಣಾನ್ಕಿಲ ।
ನಿವಸಂತೀ ನ ವೈ ಜಜ್ಞೇ ಗರ್ಭಸ್ಥಾಂ ತಾಂ ಪಿತಾಬ್ರವೀತ್ ।। ೧-೩೪-೮

ಅವಳು ಬಹಳ ವರ್ಷಗಳ ಕಾಲ ತನ್ನ ತಾಯಿಯ ಉದರದಲ್ಲಿಯೇ ವಾಸಿಸುತ್ತಿದ್ದಳು. ಹುಟ್ಟಿಬರುತ್ತಿರಲಿಲ್ಲ. ಗರ್ಭಸ್ಥಳಾಗಿದ್ದ ಅವಳಿಗೆ ತಂದೆಯು ಹೇಳಿದ್ದನು:

ಜಾಯಸ್ವ ಶೀಘ್ರಂ ಭದ್ರಂ ತೇ ಕಿಮರ್ಥಮಿಹ ತಿಷ್ಠಸಿ ।
ಪ್ರೋವಾಚ ಚೈನಂ ಗರ್ಭಸ್ಥಾ ಕನ್ಯಾ ಗಾಂ ಚ ದಿನೇ ದಿನೇ ।। ೧-೩೪-೯
ಯದಿ ದದ್ಯಾಂ ತತೋಽದ್ಯಾಹಂ ಜಾಯಯಿಷ್ಯಾಮಿ ತಾಂ ಪಿತಾ ।
ತಥೇತ್ಯುವಾಚ ತಂ ಚಾಸ್ಯಾಃ ಪಿತಾ ಕಾಮಮಪೂರಯತ್ ।। ೧-೩೪-೧೦

“ನಿನಗೆ ಮಂಗಳವಾಗಲಿ! ಬೇಗನೆ ಹುಟ್ಟು. ಯಾವಕಾರಣಕ್ಕಾಗಿ ಇನ್ನೂ ನೀನು ಗರ್ಭದಲ್ಲಿಯೇ ಇದ್ದೀಯೆ?” ಆಗ ಗರ್ಭಸ್ಥ ಕನ್ಯೆಯು ಅವನಿಗೆ “ಪ್ರತಿದಿನವೂ ನನ್ನಿಂದ ಗೋದಾನವನ್ನು ಮಾಡಿಸುತ್ತೀಯೆ ಎಂದು ಭರವಸೆಯನ್ನಿತ್ತರೆ ಇಂದೇ ನಾನು ಹುಟ್ಟುತ್ತೇನೆ” ಎಂದು ಹೇಳಿದ್ದಳು. ಆಗ ಅವಳ ತಂದೆಯು ತಥಾಸ್ತು ಎಂದು ಹೇಳಿ ಅವಳ ಕಾಮನೆಯನ್ನು ಪೂರೈಸಿದ್ದನು.

ದಾತಾ ಯಜ್ವಾ ಚ ಧೀರಶ್ಚ ಶ್ರುತವಾನತಿಥಿಪ್ರಿಯಃ ।
ಅಕ್ರೂರಃ ಸುಷುವೇ ತಸ್ಮಾಚ್ಛ್ವಫಲ್ಕಾದ್ಭೂರಿದಕ್ಷಿಣಃ ।। ೧-೩೪-೧೧

ಶ್ವಫಲ್ಕ ಮತ್ತು ಅವಳಲ್ಲಿ ದಾನಶೀಲ, ಯಜ್ಞಶೀಲ, ಧೀರ, ಶ್ರುತವಾನ, ಅತಿಥಿಪ್ರಿಯ, ಭೂರಿದಕ್ಷಿಣ ಅಕ್ರೂರನು ಜನಿಸಿದನು.

ಉಪಾಸಂಗಸ್ತಥಾ ಮದ್ಗುರ್ಮೃದುರಶ್ಚಾರಿಮೇಜಯಃ ।
ಅವಿಕ್ಷಿಪಸ್ತಥೋಪೇಕ್ಷಃ ಶತ್ರುಘ್ನೋಽಥಾರಿಮರ್ದನಃ ।। ೧-೩೪-೧೨
ಧರ್ಮಧೃಗ್ಯತಿಧರ್ಮಾ ಚ ಗೃಧ್ರೋ ಭೋಜೋಽಂಧಕಸ್ತಥಾ ।
ಆವಾಹಪ್ರತಿವಾಹೌ ಚ ಸುಂದರೀ ಚ ವರಾಂಗನಾ ।। ೧-೩೪-೧೩

ಹಾಗೆಯೇ ಶ್ವಫಲ್ಕನಿಗೆ ಉಪಾಸಂಗ, ಮದ್ಗು, ಮೃದುರ್, ಅರಿಮೇಜಯ, ಅವಿಕ್ಷಿಪ, ಉಪೇಕ್ಷ, ಶತ್ರುಘ್ನ, ಅರಿಮರ್ದನ, ಧರ್ಮಧೃಕ್, ಯತಿಧರ್ಮಾ, ಗೃಧ್ರ, ಭೋಜ, ಅಂಧಕ, ಆವಾಹ ಮತ್ತು ಪ್ರತಿವಾಹ ಎಂಬ ಅಕ್ರೂರನ ತಮ್ಮಂದಿರೂ ಮತ್ತು ವರಾಂಗನಾ ಎಂಬ ಸುಂದರ ಕನ್ಯೆಯೂ ಹುಟ್ಟಿದರು.

ಅಕ್ರೂರೇಣೋಗ್ರಸೇನಾಯಾಂ ಸುಗಾತ್ರ್ಯಾಂ ಕುರುನಂದನ ।
ಪ್ರಸೇನಶ್ಚೋಪದೇವಶ್ಚ ಜಜ್ಞಾತೇ ದೇವವರ್ಚಸೌ ।। ೧-೩೪-೧೪

ಕುರುನಂದನ! ಸುಂದರಿ ಉಗ್ರಸೇನೆಯಲ್ಲಿ ಅಕ್ರೂರನಿಗೆ ದೇವವರ್ಚಸರಾದ ಪ್ರಸೇನ ಮತ್ತು ಉಪದೇವ ಎಂಬ ಇಬ್ಬರು ಮಕ್ಕಳು ಜನಿಸಿದರು.

ಚಿತ್ರಕಸ್ಯಾಭವನ್ಪುತ್ರಾಃ ಪೃಥುರ್ವಿಪೃಥುರೇವ ಚ ।
ಅಶ್ವಗ್ರೀವೋಽಶ್ವಬಾಹುಶ್ಚ ಸುಪಾರ್ಶ್ವಕಗವೇಷಣೌ ।। ೧-೩೪-೧೫
ಅರಿಷ್ಟನೇಮಿರಶ್ವಶ್ಚ ಸುಧರ್ಮಾ ಧರ್ಮಭೃತ್ತಥಾ ಸುಬಾಹುರ್ಬಹುಬಾಹುಶ್ಚ ಶ್ರವಿಷ್ಠಾಶ್ರವಣೇ ಸ್ತ್ರಿಯೌ ।। ೧-೩೪-೧೬

ಚಿತ್ರಕ2ನ ಶ್ರವಿಷ್ಠಾ ಮತ್ತು ಶ್ರವಣಾ ಎಂಬ ಇಬ್ಬರು ಪತ್ನಿಯರಲ್ಲಿ ಪೃಥು, ವಿಪೃಥು, ಅಶ್ವಗ್ರೀವ, ಅಶ್ವಬಾಹು, ಸುಪಾರ್ಶ್ವಕ, ಗವೇಷಣ, ಅರಿಷ್ಟನೇಮಿ, ಅಶ್ವ, ಸುಧರ್ಮ, ಧರ್ಮಭೃತ್, ಸುಬಾಹು ಮತ್ತು ಬಹುಬಾಹು ಇವರು ಹುಟ್ಟಿದರು.

ಅಶ್ಮಕ್ಯಾಂ ಜನಯಾಮಾಸ ಶೂರಂ ವೈ ದೇವಮೀಢುಷಃ ।
ಮಹಿಷ್ಯಾಂ ಜಜ್ಞಿರೇ ಶೂರಾದ್ಭೋಜ್ಯಾಯಾಂ ಪುರುಷಾ ದಶ ।। ೧-೩೪-೧೭

ದೇವಮೀಢುಷು3ವಿಗೆ ಅಶ್ಮಕಳಲ್ಲಿ ಶೂರನು ಹುಟ್ಟಿದನು. ಶೂರನಿಗೆ ಭೋಜರ ರಾಜಕುಮಾರಿಯಲ್ಲಿ ಹತ್ತು ಪುರುಷರು ಹುಟ್ಟಿದರು.

ವಸುದೇವೋ ಮಹಾಬಾಹುಃ ಪೂರ್ವಮಾನಕದುಂದುಭಿಃ ।
ಜಜ್ಞೇ ಯಸ್ಯ ಪ್ರಸೂತಸ್ಯ ದುಂದುಭ್ಯಃ ಪ್ರಣದಂದಿವಿ ।। ೧-೩೪-೧೮

ಮೊದಲನೆಯದಾಗಿ ಆನಕದುಂದುಭಿ ಮಹಾಬಾಹು ವಸುದೇವನು ಹುಟ್ಟಿದನು. ಇವನು ಹುಟ್ಟಿದಾಗ ದಿವಿಯಲ್ಲಿ ದುಂದುಭಿಗಳು ಮೊಳಗಿದ್ದವು.

ಆನಕಾನಾಂ ಚ ಸಂಹ್ರಾದಃ ಸುಮಹಾನಭವದ್ದಿವಿ ।
ಪಪಾತ ಪುಷ್ಪವರ್ಷಂ ಚ ಶೂರಸ್ಯ ಭವನೇ ಮಹತ್ ।। ೧-೩೪-೧೯

ಆಗ ಶೂರನ ಮಹಾ ಭವನದಲ್ಲಿ ದಿವಿಯಿಂದ ಆನಕಗಳ ಮಹಾ ಧ್ವನಿಯು ಕೇಳಿಬಂದಿತು ಮತ್ತು ಪುಷ್ಪವೃಷ್ಟಿಯೂ ಬಿದ್ದಿತು.

ಮನುಷ್ಯಲೋಕೇ ಕೃತ್ಸ್ನೇಽಪಿ ರೂಪೇ ನಾಸ್ತಿ ಸಮೋ ಭುವಿ ।
ಯಸ್ಯಾಸೀತ್ಪುರುಷಾಗ್ರ್ಯಸ್ಯ ಕಾಂತಿಶ್ಚಂದ್ರಮಸೋ ಯಥಾ ।। ೧-೩೪-೨೦

ವಸುದೇವನ ಮುಖಕಾಂತಿಯು ಚಂದ್ರಮಸನ ಕಾಂತಿಯಿಂದ ಕೂಡಿತ್ತು. ಇಡೀ ಭುವಿಯಲ್ಲಿ ಮತ್ತು ಮನುಷ್ಯಲೋಕದಲ್ಲಿ ಅವನಷ್ಟು ಸುಂದರನು ಬೇರೆ ಯಾರೂ ಇರಲಿಲ್ಲ.

ದೇವಭಾಗಸ್ತತೋ ಜಜ್ಞೇ ತಥಾ ದೇವಶ್ರವಾಃ ಪುನಃ ।
ಅನಾಧೃಷ್ಟಿಃ ಕನವಕೋ ವತ್ಸಾವಾನಥ ಗೃಂಜಿಮಃ ।। ೧-೩೪-೨೧
ಶ್ಯಾಮಃ ಶಮೀಕೋ ಗಂಡೂಷಃ ಪಂಚ ಚಾಸ್ಯ ವರಾಂಗನಾಃ ।
ಪೃಥುಕೀರ್ತಿಃ ಪೃಥಾ ಚೈವ ಶ್ರುತದೇವಾ ಶ್ರುತಶ್ರವಾಃ ।। ೧-೩೪-೨೨
ರಾಜಾಧಿದೇವೀ ಚ ತಥಾ ಪಂಚೈತಾ ವೀರಮಾತರಃ ।
ಪೃಥಾಂ ದುಹಿತರಂ ವವ್ರೇ ಕುಂತಿಸ್ತಾಂ ಕುರುನಂದನ ।। ೧-೩೪-೨೩

ವಸುದೇವನ ನಂತರ ದೇವಭಾಗ, ದೇವಶ್ರವ, ಅನಾಧೃಷ್ಟಿ, ಕನವಕ, ವತ್ಸಾವಾನ್, ಗೃಂಜಿಮ, ಶಾಮ, ಶಮೀಕ, ಗಂಡೂಷ ಮತ್ತು ಇವರು ವರಾಂಗನೆಯರು – ಪೃಥುಕೀರ್ತಿ, ಪೃಥಾ, ಶ್ರುತದೇವಾ, ಶ್ರುತಶ್ರವಾ ಮತ್ತು ರಾಜಾಧಿದೇವೀ. ಇವರೈವರೂ ವೀರ ಮಾತರರಾಗಿದ್ದರು. ಕುರುನಂದನ! ಕುಂತಿರಜನು ಪೃಥಾಳನ್ನು ತನ್ನ ಮಗಳನ್ನಾಗಿ ಮಾಡಿಕೊಂಡನು.

ಶೂರಃ ಪೂಜ್ಯಾಯ ವೃದ್ಧಾಯ ಕುಂತಿಭೋಜಾಯ ತಾಂ ದದೌ ।
ತಸ್ಮಾತ್ಕುಂತೀತಿ ವಿಖ್ಯಾತಾ ಕುಂತಿಭೋಜಾತ್ಮಜಾ ಪೃಥಾ ।। ೧-೩೪-೨೪

ಆಗ ಶೂರನು ಅವಳನ್ನು ಪೂಜ್ಯ ವೃದ್ಧ ಕುಂತಿಭೋಜನಿಗೆ ಕೊಟ್ಟನು. ಆದುದರಿಂದ ಕುಂತಿಭೋಜಾತ್ಮಜೆ ಪೃಥಾಳು ಕುಂತಿ ಎಂದೇ ವಿಖ್ಯಾತಳಾದಳು.

ಅಂತ್ಯಸ್ಯ ಶ್ರುತದೇವಾಯಾಂ ಜಗೃಹುಃ ಸುಷುವೇ ಸುತಃ ।
ಶ್ರುತಶ್ರವಾಯಾಂ ಚೈದ್ಯಸ್ಯ ಶಿಶುಪಾಲೋ ಮಹಾಬಲಃ ।। ೧-೩೪-೨೫
ಹಿರಣ್ಯಕಶಿಪುರ್ಯೋಽಸೌ ದೈತ್ಯರಾಜೋಽಭವತ್ಪುರಾ ।

ಶ್ರುತದೇವಿಯಲ್ಲಿ ಅಂತ್ಯನಿಗೆ ಜಗೃಹುವು ಮಗನಾಗಿ ಜನಿಸಿದನು. ಶ್ರುತಶ್ರವೆಯಲ್ಲಿ ಚೈದ್ಯನಿಗೆ ಮಹಾಬಲ ಶಿಶುಪಾಲನು ಜನಿಸಿದನು. ಹಿಂದೆ ಇವನು ದೈತ್ಯರಾಜ ಹಿರಣ್ಯಕಶಿಪುವಾಗಿದ್ದನು.

ಪೃಥುಕೀರ್ತ್ಯಾಂ ತು ತನಯಃ ಸಂಜಜ್ಞೇ ವೃದ್ಧಶರ್ಮಣಃ ।। ೧-೩೪-೨೬
ಕರೂಷಾಧಿಪತಿರ್ವೀರೋ ದಂತವಕ್ತ್ರೋ ಮಹಾಬಲಃ ।

ವೃದ್ಧಶರ್ಮನಿಗೆ ಪೃಥುಕೀರ್ತಿಯಲ್ಲಿ ಕರೂಷಾಧಿಪತಿ ವೀರ ಮಹಾಬಲ ದಂತವಕ್ತ್ರನು ತನಯನಾಗಿ ಜನಿಸಿದನು.

ಪೃಥಾಂ ದುಹಿತರಂ ಚಕ್ರೇ ಕುಂತಿಸ್ತಾಂ ಪಾಂಡುರಾವಹತ್ ।। ೧-೩೪-೨೭
ಯಸ್ಯಾಂ ಸ ಧರ್ಮವಿದ್ರಾಜಾ ಧರ್ಮಾಜ್ಜಜ್ಞೇ ಯುಧಿಷ್ಠಿರಃ ।
ಭೀಮಸೇನಸ್ತಥಾ ವಾತಾದಿಂದ್ರಾಚ್ಚೈವ ಧನಂಜಯಃ ।। ೧-೩೪-೨೮
ಲೋಕೇಽಪ್ರತಿರಥೋ ವೀರಃ ಶಕ್ರತುಲ್ಯಪರಾಕ್ರಮಃ ।

ಕುಂತಿಭೋಜನು ಮಗಳನ್ನಾಗಿ ಮಾಡಿಕೊಂಡಿದ್ದ ಪೃಥೆಯು ಪಾಂಡುವನ್ನು ವಿವಾಹವಾದಳು. ಅವಳಲ್ಲಿ ಧರ್ಮನಿಂದ ಧರ್ಮವಿದು ರಾಜಾ ಯುಧಿಷ್ಠಿರ, ವಾಯುವಿನಿಂದ ಭೀಮಸೇನ ಮತ್ತು ಇಂದ್ರನಿಂದ ಲೋಕದಲ್ಲಿಯೇ ಅಪ್ರತಿರಥನಾಗಿದ್ದ ಶಕ್ರತುಲ್ಯಪರಾಕ್ರಮಿಯಾಗಿದ್ದ ವೀರ ಧನಂಜಯ ಇವರು ಹುಟ್ಟಿದರು.

ಅನಮಿತ್ರಾಚ್ಛಿನಿರ್ಜಜ್ಞೇ ಕನಿಷ್ಠಾದ್ವೃಷ್ಣಿನಂದನಾತ್ ।। ೧-೩೪-೨೯
ಶೈನೇಯಃ ಸತ್ಯಕಸ್ತಸ್ಮಾದ್ಯುಯುಧಾನಶ್ಚ ಸಾತ್ಯಕಿಃ ।
ಅಸಂಗೋ ಯುಯುಧಾನಸ್ಯ ಭೂಮಿಸ್ತಸ್ಯಾಭವತ್ಸುತಃ ।। ೧-೩೪-೩೦
ಭೂಮೇರ್ಯುಗಧರಃ ಪುತ್ರ ಇತಿ ವಂಶಃ ಸಮಾಪ್ಯತೇ ।

ಕ್ರೋಷ್ಟುವಿನ ಕಿರಿಯಮಗ ವೃಷ್ಣಿನಂದನ ಅನಮಿತ್ರನಲ್ಲಿ ಶಿನಿಯು ಹುಟ್ಟಿದನು. ಶಿನಿಯಿಂದ ಶೈನೇಯ ಸತ್ಯಕ ಮತ್ತು ಸತ್ಯಕನಿಂದ ಯುಯುಧಾನ ಅಥವಾ ಸಾತ್ಯಕಿಯು ಜನಿಸಿದನು. ಅಸಂಗನು ಯುಯುಧಾನನ ಪುತ್ರನಾಗಿದ್ದನು. ಅವನ ಸುತನು ಭೂಮಿ. ಭೂಮಿಯ ಮಗನು ಯುಗಧರ. ಇಲ್ಲಿ ಕ್ರೋಷ್ಟುವಿನ ವಂಶವು ಸಮಾಪ್ತಿಯಾಗುತ್ತದೆ.

ಉದ್ಧವೋ ದೇವಭಾಗಸ್ಯ ಮಹಾಭಾಗಃ ಸುತೋಽಭವತ್ ।
ಪಂಡಿತಾನಾಂ ಪರಂ ಪ್ರಾಹುರ್ದೇವಶ್ರವಸಮುದ್ಭವಮ್ ।। ೧-೩೪-೩೧

ದೇವಭಾಗ4ನಿಗೆ ಮಹಾಭಾಗ ಉದ್ಧವನು ಸುತನಾದನು. ಅವನು ಪಂಡಿತರಲ್ಲಿ ಶ್ರೇಷ್ಠನೆಂದೂ ದೇವಶ್ರವಸಮುದ್ಭವನೆಂದೂ ಹೇಳುತ್ತಾರೆ.

ಅಶ್ಮಕ್ಯಾಂ ಪ್ರಾಪ್ತವಾನ್ಪುತ್ರಮನಾಧೃಷ್ಟಿರ್ಯಶಸ್ವಿನಮ್ ।
ನಿವೃತ್ತಶತ್ರುಂ ಶತ್ರುಘ್ನಂ ದೇವಶ್ರವಾ ವ್ಯಜಾಯತ ।। ೧-೩೪-೩೨

ಅನಾಧೃಷ್ಟಿ5ಯು ಆಶ್ಮಕಿಯನ್ನು ಪತ್ನಿಯನ್ನಾಗಿ ಪಡೆದು ಯಶಸ್ವಿನಿಯನ್ನು ಮಗನನ್ನಾಗಿ ಪಡೆದನು. ದೇವಶ್ರವ6ನಿಗೆ ಶತ್ರುಗಳನ್ನು ಹಿಂದಿರುಗಿಸುವ ಶತ್ರುಘ್ನನು ಹುಟ್ಟಿದನು.

ದೇವಶ್ರವಾಃ ಪ್ರಜಾತಸ್ತು ನೈಷಾದಿರ್ಯಃ ಪ್ರತಿಶ್ರುತಃ ।
ಏಕಲವ್ಯೋ ಮಹಾರಾಜ ನಿಷಾದೈಃ ಪರಿವರ್ಧಿತಃ ।। ೧-೩೪-೩೩

ಮಹಾರಾಜ! ದೇವಶ್ರವನ ಮಗನನ್ನು ನಿಷಾದರು ಬೆಳೆಸಿದ್ದರು ಎಂದು ಕೇಳಿದ್ದೇವೆ. ನಿಷಾದರಿಂದ ಅವನು ಏಕಲವ್ಯನಾಗಿ ಬೆಳೆದಿದ್ದನು.

ವತ್ಸಾವತೇ ತ್ವಪುತ್ರಾಯ ವಸುದೇವಃ ಪ್ರತಾಪವಾನ್ ।
ಅದ್ಭಿರ್ದದೌ ಸುತಂ ವೀರಂ ಶೌರಿಃ ಕೌಶಿಕಮೌರಸಮ್ ।। ೧-೩೪-೩೪

ಪ್ರತಾಪವಾನ್ ಶೌರಿ ವಸುದೇವನು ಅಪುತ್ರನಾಗಿದ್ದ ವತ್ಸಾವನ7ನಿಗೆ ತನ್ನ ಔರಸ ಪುತ್ರ ವೀರ ಕೌಶಿಕನನ್ನು ದಾರೆಯೆರೆದು ಕೊಟ್ಟಿದ್ದನು.

ಗಂಡೂಷಾಯ ತ್ವಪುತ್ರಾಯ ವಿಷ್ವಕ್ಸೇನೋ ದದೌ ಸುತಾನ್ ।
ಚಾರುದೇಷ್ಣಂ ಸುಚಾರುಂ ಚ ಪಂಚಾಲಂ ಕೃತಲಕ್ಷಣಮ್ ।। ೧-೩೪-೩೫

ವಿಷ್ವಕ್ಸೇನ ಕೃಷ್ಣನು ತನ್ನ ಮಕ್ಕಳಾದ ಚಾರುದೇಷ್ಣ, ಸುಚಾರು, ಪಂಚಾಲ ಮತ್ತು ಕೃತಲಕ್ಷಣರನ್ನು ಅಪುತ್ರನಾಗಿದ್ದ ಗಂಡೂಷ8ನಿಗೆ ಕೊಟ್ಟಿದ್ದನು.

ಅಸಂಗ್ರಾಮೇಣ ಯೋ ವೀರೋ ನಾವರ್ತತ ಕದಾಚನ ।
ರೌಕ್ಮಿಣೇಯೋ ಮಹಾಬಾಹುಃ ಕನೀಯಾನ್ಪುರುಷರ್ಷಭ ।। ೧-೩೪-೩೬

ರುಕ್ಮಿಣಿಯ ಕಿರಿಯ ಮಗ ಪುರುಷರ್ಷಭ ಮಹಾಬಾಹು ವೀರ ಚಾರುದೇಷ್ಣನು ಯುದ್ಧಮಾಡದೇ ರಣಭೂಮಿಯಿಂದ ಹಿಂದಿರುಗುತ್ತಿರಲಿಲ್ಲ.

ವಾಯಸಾನಾಂ ಸಹಸ್ರಾಣಿ ಯಂ ಯಾಂತಂ ಪೃಷ್ಠತೋಽನ್ವಯುಃ ।
ಚಾರುಮಾಂಸಾನಿ ಭೋಕ್ಷ್ಯಾಮಶ್ಚಾರುದೇಷ್ಣಹತಾನಿ ತು ।। ೧-೩೪-೩೭

ಅವನ ಹಿಂದೆ ಸಹಸ್ರಾರು ಕಾಗೆಗಳು ಹಿಂಬಾಲಿಸಿ ಹೋಗುತ್ತಿದ್ದವು. ಅವುಗಳಿಗೆ ತನ್ನ ಶತ್ರುಗಳ ಸ್ವಾಧಿಷ್ಟ ಮಾಂಸಗಳನ್ನು ಭೋಜನವನ್ನಾಗಿ ನೀಡುತ್ತಿದ್ದ ಅವನು ಚಾರುದೇಷ್ಣನೆಂದಾದನು.

ತಂದ್ರಿಜಸ್ತಂದ್ರಿಪಾಲಶ್ಚ ಸುತೌ ಕನವಕಸ್ಯ ತು ।
ವೀರಶ್ಚಾಶ್ವಹನಶ್ಚೈವ ವೀರೌ ತಾವಾವಗೃಂಜಿಮೌ ।। ೧-೩೪-೩೮

ಕನವಕ9ನಿಗೆ ತಂದ್ರಿಜ ಮತ್ತು ತಂದ್ರಿಪಾಲ ಎಂಬ ಇಬ್ಬರು ಸುತರಾದರು. ಮತ್ತು ಗೃಂಜಿಮನಿಗೆ ವೀರ ಮತ್ತು ಅಶ್ವಹನ ಎಂಬ ಇಬ್ಬರು ವೀರಮಕ್ಕಳಿದ್ದರು.

ಶ್ಯಾಮಪುತ್ರಃ ಶಮೀಕಸ್ತು ಶಮೀಕೋ ರಾಜ್ಯಮಾವಹತ್ ।
ಜುಗುಪ್ಸಮಾನೌ ಭೋಜತ್ವಾದ್ರಾಜಸೂಯಮವಾಪ ಸಃ ।
ಅಜಾತಶತ್ರುಃ ಶತ್ರೂಣಾಂ ಜಜ್ಞೇ ತಸ್ಯ ವಿನಾಶನಃ ।। ೧-೩೪-೩೯

ಶಮೀಕನು ಶ್ಯಾಮಪುತ್ರನಾದನು10. ಶಮೀಕನು ರಾಜ್ಯವನ್ನು ಪಡೆದುಕೊಂಡನು. ಆದರೆ ಭೋಜತ್ವಕ್ಕೆ11 ಜುಗುಪ್ಸೆಗೊಂಡು ಅವನು ರಾಜಸೂಯವನ್ನು12 ಪಡೆದುಕೊಂಡಿದ್ದನು.

ವಸುದೇವಸುತಾನ್ವೀರಾನ್ಕೀರ್ತಯಿಷ್ಯಾಮಿ ತಾಂಶೃಣು ।। ೧-೩೪-೪೦
ವೃಷ್ಣೇಸ್ತ್ರಿವಿಧಮೇತತ್ತು ಬಹುಶಾಖಂ ಮಹೌಜಸಮ್ ।
ಧಾರಯನ್ವಿಪುಲಂ ವಂಶಂ ನಾನರ್ಥೈರಿಹ ಯುಜ್ಯತೇ ।। ೧-೩೪-೪೧

ಈಗ ನಾನು ವಸುದೇವನ ವೀರಪುತ್ರರ ಕುರಿತು ಹೇಳುತ್ತೇನೆ. ಅದನ್ನು ಕೇಳು. ಅನೇಕ ಶಾಖೆಗಳುಳ್ಳ ಮಹೌಜಸರಿಂದ ಕೂಡಿದ ವೃಷ್ಣಿಗಳ ಈ ವಿಪುಲ ತ್ರಿವಿಧ ವಂಶವನ್ನು ಧಾರಣೆಮಾಡುವವನು ಸಂಸಾರದ ಅನರ್ಥಗಳಿಂದ ಮುಕ್ತನಾಗುತ್ತಾನೆ.”

ಸಮಾಪ್ತಿ

ಇತಿ ಶ್ರೀಮಹಾಭಾರತೇ ಖಿಲೇಷು ಹರಿವಂಶೇ ಹರಿವಂಶಪರ್ವಣಿ ವೃಷ್ಣಿವಂಶಕೀರ್ತನಂ ನಾಮ ಚತುಸ್ತ್ರಿಂಶೋಽಧ್ಯಾಯಃ


  1. ಯುಧಾಜಿತು . ↩︎

  2. ಅಕ್ರೂರನ ತಮ್ಮ. ↩︎

  3. ಕ್ರೋಷ್ಟುವಿನ ಮೂರನೆಯ ಪುತ್ರ. ↩︎

  4. ವಸುದೇವನ ಭ್ರಾತಾ. ↩︎

  5. ವಸುದೇವನ ಮೂರನೆಯ ತಮ್ಮ. ↩︎

  6. ವಸುದೇವನ ಇನ್ನೊಬ್ಬ ಸಹೋದರ. ↩︎

  7. ವಸುದೇವನ ಇನ್ನೊಬ್ಬ ತಮ್ಮ. ↩︎

  8. ವಸುದೇವನ ಇನ್ನೊಬ್ಬ ತಮ್ಮ. ↩︎

  9. ವಸುದೇವನ ಇನ್ನೊಬ್ಬ ಸಹೋದರ. ↩︎

  10. ವಸುದೇವನ ಸಹೋದರ ಶ್ಯಾಮನು ತನ್ನ ತಮ್ಮ ಶಮೀಕನನ್ನು ತನ್ನ ಪುತ್ರನಂತೆಯೇ ಕಾಣುತ್ತಿದ್ದನು. ↩︎

  11. ಭೋಜವಂಶಿಯು ಒಂದೇ ವಂಶದವನು ಒಂದೇ ದೇಶದ ರಾಜನು. ↩︎

  12. ಸಾಮ್ರಾಜ್ಯ . ↩︎