ಪ್ರವೇಶ
।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।
ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ
ಶ್ರೀ ಮಹಾಭಾರತ
ಖಿಲಭಾಗೇ ಹರಿವಂಶಃ
ಹರಿವಂಶ ಪರ್ವ
ಅಧ್ಯಾಯ 33
ಸಾರ
ಯದುವಂಶದ ವರ್ಣನೆ; ಕಾರ್ತವೀರ್ಯನ ಉತ್ಪತ್ತಿ ಮತ್ತು ಚರಿತ್ರೆ; ಯಯಾತಿಯ ಐವರು ಪುತ್ರರ ವಂಶಶ್ರವಣದ ಫಲ (1-61)
ವೈಶಂಪಾಯನ ಉವಾಚ
ಬಭೂವುಸ್ತು ಯದೋಃ ಪುತ್ರಾಃ ಪಂಚ ದೇವಸುತೋಪಮಾಃ ।
ಸಹಸ್ರದಃ ಪಯೋದಶ್ಚ ಕ್ರೋಷ್ಟಾ ನೀಲೋಽಂಜಿಕಸ್ತಥಾ ।। ೧-೩೩-೧
ವೈಶಂಪಾಯನನು ಹೇಳಿದನು: “ಯದುವಿಗೆ ಐವರು ದೇವಸುತೋಪಮ ಪುತ್ರರಿದ್ದರು: ಸಹಸ್ರದ, ಪಯೋದ, ಕ್ರೋಷ್ಟಾ, ನೀಲ ಮತ್ತು ಅಂಜಿಕ.
ಸಹಸ್ರದಸ್ಯ ದಾಯಾದಾಸ್ತ್ರಯಃ ಪರಮಧಾರ್ಮಿಕಾಃ ।
ಹೈಹಯಶ್ಚ ಹಯಶ್ಚೈವ ರಾಜನ್ವೇಣುಹಯಸ್ತಥಾ ।। ೧-೩೩-೨
ರಾಜನ್! ಸಹಸ್ರದನಿಗೆ ಮೂವರು ಪರಮಧಾರ್ಮಿಕ ಪುತ್ರರಿದ್ದರು: ಹೈಹಯ, ಹಯ ಮತ್ತು ವೇಣುಹಯ.
ಹೈಹಸ್ಯಾಭವತ್ಪುತ್ರೋ ಧರ್ಮನೇತ್ರ ಇತಿ ಸ್ಮೃತಃ ।
ಧರ್ಮನೇತ್ರಸ್ಯ ಕಾರ್ತಸ್ತು ಸಾಹಂಜಸ್ತಸ್ಯ ಚಾತ್ಮಜಃ ।। ೧-೩೩-೩
ಹೈಹಯನ ಪುತ್ರನು ಧರ್ಮನೇತ್ರ ಎಂದಿದೆ. ಧರ್ಮನೇತ್ರನ ಮಗನು ಕಾರ್ತ ಮತ್ತು ಸಾಹಂಜನು ಅವನ ಪುತ್ರ.
ಸಾಹಂಜನೀ ನಾಮ ಪುರೀ ಯೇನ ರಾಜ್ಞಾ ನಿವೇಶಿತಾ ।
ಸಾಹಂಜಸ್ಯ ತು ದಾಯಾದೋ ಮಹಿಷ್ಮಾನ್ನಾಮ ಪಾರ್ಥಿವಃ ।। ೧-೩೩-೪
ರಾಜಾ ಸಾಹಂಜನು ಸಾಹಂಜನೀ ಎಂಬ ಪುರಿಯನ್ನು ಸ್ಥಾಪಿಸಿದನು. ಸಾಹಂಜನ ಮಗನು ಮಹಿಷ್ಮಾನ್ ಎಂಬ ಹೆಸರಿನ ಪಾರ್ಥಿವನು.
ಮಾಹಿಷ್ಮತೀ ನಾಮ ಪುರೀ ಯೇನ ರಾಜ್ಞಾ ನಿವೇಶಿತಾ ।
ಆಸೀನ್ಮಾಹಿಷ್ಮತಃ ಪುತ್ರೋ ಭದ್ರಶ್ರೇಣ್ಯಃ ಪ್ರತಾಪವಾನ್ ।। ೧-೩೩-೫
ಆ ರಾಜನು ಮಾಹಿಷ್ಮತೀ ಎಂಬ ಹೆಸರಿನ ಪುರಿಯನ್ನು ಸ್ಥಾಪಿಸಿದ್ದನು. ಮಹಿಷ್ಮಾನನ ಪುತ್ರನು ಪ್ರತಾಪವಾನ್ ಭದ್ರಶ್ರೇಣ್ಯ.
ವಾರಾಣಸ್ಯಧಿಪೋ ರಾಜಾ ಕತಿಥಃ ಪೂರ್ವಮೇವ ತು ।
ಭದ್ರಶ್ರೇಣ್ಯಸ್ಯ ಪುತ್ರಸ್ತು ದುರ್ದಮೋ ನಾಮ ವಿಶ್ರುತಃ ।। ೧-೩೩-೬
ಭದ್ರಶ್ರೇಣ್ಯನು ವಾರಾಣಸಿಯ ಅಧಿಪನಾಗಿದ್ದನು. ಇವನ ಕುರಿತು ಈ ಮೊದಲೇ ಹೇಳಿದ್ದೇನೆ. ಭದ್ರಶ್ರೇಣ್ಯನ ಪುತ್ರನು ದುರ್ದಮ ಎಂಬ ಹೆಸರಿನಲ್ಲಿ ವಿಶ್ರುತನಾಗಿದ್ದನು.
ದುರ್ದಮಸ್ಯ ಸುತೋ ಧೀಮಾನ್ಕನಕೋ ನಾಮ ವೀರ್ಯವಾನ್ ।
ಕನಕಸ್ಯ ತು ದಾಯಾದಾಶ್ಚತ್ವಾರೋ ಲೋಕವಿಶ್ರುತಾಃ ।। ೧-೩೩-೭
ದುರ್ದಮನ ಸುತನು ಕನಕ ಎಂಬ ಹೆಸರಿನ ಧೀಮಂತ ವೀರ್ಯವಾನನು. ಕನಕನಿಗೆ ನಾಲ್ವರು ಲೋಕವಿಶ್ರುತ ಮಕ್ಕಳಿದ್ದರು.
ಕೃತವೀರ್ಯಃ ಕೃತೌಜಾಶ್ಚ ಕೃತವರ್ಮಾ ತಥೈವ ಚ ।
ಕೃತಾಗ್ನಿಸ್ತು ಚತುರ್ಥೋಽಭೂತ್ಕೃತವೀರ್ಯಾತ್ತಥಾರ್ಜುನಃ ।। ೧-೩೩-೮
ಕೃತವೀರ್ಯ, ಕೃತೌಜ, ಕೃತವರ್ಮ ಮತ್ತು ನಾಲ್ಕನೆಯವನು ಕೃತಾಗ್ನಿ. ಕೃತವೀರ್ಯನಿಂದ ಅರ್ಜುನನಾದನು.
ಯಸ್ತು ಬಾಹುಸಹಸ್ರೇಣ ಸಪ್ತದ್ವೀಪೇಶ್ವರೋಽಭವತ್ ।
ಜಿಗಾಯ ಪೃಥಿವೀಮೇಕೋ ರಥೇನಾದಿತ್ಯವರ್ಚಸಾ ।। ೧-೩೩-೯
ಅರ್ಜುನನಿಗೆ ಸಹಸ್ರಬಾಹುಗಳಿದ್ದವು. ಅವನು ಆದಿತ್ಯ ವರ್ಚಸ ಏಕ ರಥದಲ್ಲಿ ಇಡೀ ಪೃಥ್ವಿಯನ್ನೇ ಗೆದ್ದು ಸಪ್ತದ್ವೀಪೇಶ್ವರನಾದನು.
ಸ ಹಿ ವರ್ಷಾಯುತಂ ತಪ್ತ್ವಾ ತಪಃ ಪರಮದುಶ್ಚರಮ್ ।
ದತ್ತಮಾರಾಧಯಾಮಾಸ ಕಾರ್ತವೀರ್ಯೋಽತ್ರಿಸಂಭವಮ್ ।। ೧-೩೩-೧೦
ಕಾರ್ತವೀರ್ಯ ಅರ್ಜುನನು ಹತ್ತು ಸಾವಿರ ವರ್ಷಗಳ ಪರಮ ದುಶ್ಚರ ತಪಸ್ಸನ್ನು ತಪಿಸಿ ಅತ್ರಿ ಸಂಭವ ದತ್ತನನ್ನು ಆರಾಧಿಸಿದನು.
ತಸ್ಮೈ ದತ್ತೋ ವರಾನ್ಪ್ರಾದಾಚ್ಚತುರೋ ಭೂರಿತೇಜಸಃ ।
ಪೂರ್ವಂ ಬಾಹುಸಹಸ್ರಂ ತು ಪ್ರಾರ್ಥಿತಂ ಸುಮಹದ್ವರಮ್ ।। ೧-೩೩-೧೧
ಭೂರಿತೇಜಸ ದತ್ತನು ಅವನಿಗೆ ನಾಲ್ಕು ವರಗಳನ್ನಿತ್ತನು. ಮೊಟ್ಟಮೊದಲು ಅವನು ಯುದ್ಧದಲ್ಲಿ ತನಗೆ ಸಹಸ್ರಬಾಹುಗಳಿರಲಿ ಎಂಬ ವರವನ್ನು ಕೇಳಿದ್ದನು.
ಅಧರ್ಮೇ ವರ್ತಮಾನಸ್ಯ ಸದ್ಭಿಸ್ತತ್ರ ನಿವಾರಣಮ್ ।
ಉಗ್ರೇಣ ಪೃಥಿವೀಂ ಜಿತ್ವಾ ಸ್ವಧರ್ಮೇಣಾನುರಂಜನಮ್ ।। ೧-೩೩-೧೨
ಎರಡನೇ ವರವು “ಅಧರ್ಮದಲ್ಲಿ ನಡೆದಾಗ ಸತ್ಪುರುಷನು ನನ್ನನ್ನು ತಡೆಯಲಿ” ಎಂಬುದಾಗಿತ್ತು. ಮೂರನೆಯ ವರವು “ಸ್ವಧರ್ಮದಿಂದ ಯುದ್ಧದಲ್ಲಿ ಪೃಥ್ವಿಯನ್ನು ಗೆದ್ದು ಪ್ರಜೆಗಳನ್ನು ರಂಜಿಸುವಂತಾಗಲಿ” ಎಂಬುದಾಗಿತ್ತು.
ಸಂಗ್ರಾಮಾನ್ಸುಬಹೂನ್ಕೃತ್ವಾ ಹತ್ವಾ ಚಾರೀನ್ಸಹಸ್ರಶಃ ।
ಸಂಗ್ರಾಮೇ ವರ್ತಮಾನಸ್ಯ ವಧಂ ಚಾಪ್ಯಧಿಕಾದ್ರಣೇ ।। ೧-೩೩-೧೩
ನಾಲ್ಕನೇ ವರವು ಹೀಗಿತ್ತು: “ಅನೇಕ ಸಂಗ್ರಾಮಗಳಲ್ಲಿ ಸಹಸ್ರಾರು ಅರಿಗಳನ್ನು ಸಂಹರಿಸಿ ಸಂಗ್ರಾಮನಡೆಸುತ್ತಿರುವಾಗ ನನಗಿಂತಲೂ ಅಧಿಕನಾದವನಿಂದ ರಣದಲ್ಲಿ ನನ್ನ ವಧೆಯಾಗಲಿ”.
ತಸ್ಯ ಬಾಹುಸಹಸ್ರಂ ತು ಯುಧ್ಯತಃ ಕಿಲ ಭಾರತ ।
ಯೋಗಾದ್ಯೋಗೇಶ್ವರಸ್ಯೈವ ಪ್ರಾದುರ್ಭವತಿ ಮಾಯಯಾ ।। ೧-೩೩-೧೪
ಭಾರತ! ಯುದ್ಧಮಾಡುತ್ತಿರುವ ಯೋಗದಿಂದ ಯೋಗೇಶ್ವರನಂತೆಯೇ ಮಾಯೆಯಿಂದ ಅವನ ಸಹಸ್ರಬಾಹುಗಳು ಕಾಣಿಸಿಕೊಳ್ಳುತ್ತಿದ್ದವು.
ತೇನೇಯಂ ಪೃಥಿವೀ ಸರ್ವಾ ಸಪ್ತದ್ವೀಪಾ ಸಪತ್ತನಾ ।
ಸಸಮುದ್ರಾ ಸನಗರಾ ಉಗ್ರೇಣ ವಿಧಿನಾ ಜಿತಾ ।। ೧-೩೩-೧೫
ಅವನು ಉಗ್ರವಿಧಿಯಲ್ಲಿ ಸರ್ವ ಪೃಥ್ವಿಯನ್ನೂ, ಸಪ್ತದ್ವೀಪಗಳನ್ನೂ, ಪತ್ತರ-ನಗರಗಳನ್ನೂ, ಸಮುದ್ರಗಳೊಂದಿಗೆ ಜಯಿಸಿದ್ದನು.
ತೇನ ಸಪ್ತಸು ದ್ವೀಪೇಷು ಸಪ್ತ ಯಜ್ಞಶತಾನಿ ವೈ ।
ಪ್ರಾಪ್ತಾನಿ ವಿಧಿನಾ ರಾಜ್ಞಾ ಶ್ರೂಯಂತೇ ಜನಮೇಜಯ ।। ೧-೩೩-೧೬
ಜನಮೇಜಯ! ಆ ರಾಜನು ವಿಧಿವತ್ತಾಗಿ ಸಪ್ತ ದ್ವೀಪಗಳಲ್ಲಿ ಏಳುನೂರು ಯಜ್ಞಗಳನ್ನು ನೆರವೇರಿಸಿದ್ದನೆಂದು ಕೇಳಿದ್ದೇವೆ.
ಸರ್ವೇ ಯಜ್ಞಾ ಮಹಾಬಾಹೋಸ್ತಸ್ಯಾಸನ್ಭೂರಿದಕ್ಷಿಣಾಃ ।
ಸರ್ವೇ ಕಾಂಚನಯೂಪಾಶ್ಚ ಸರ್ವೇ ಕಾಂಚನವೇದಯಃ ।। ೧-೩೩-೧೭
ಮಹಾಬಾಹುವಿನ ಆ ಎಲ್ಲ ಯಜ್ಞಗಳೂ ಭೂರಿದಕ್ಷಿಣೆಗಳಿಂದ ಕೂಡಿತ್ತು. ಎಲ್ಲದರಲ್ಲಿಯೂ ಕಾಂಚನದ ಯೂಪಗಳಿದ್ದವು. ಎಲ್ಲದರಲ್ಲಿಯೂ ಕಾಂಚನ ವೇದಿಗಳಿದ್ದವು.
ಸರ್ವೈರ್ದೇವೈರ್ಮಹಾರಾಜಾ ವಿಮಾನಸ್ಥೈರಲಂಕೃತಾಃ ।
ಗಂಧರ್ವೈರಪ್ಸರೋಭಿಶ್ಚ ನಿತ್ಯಮೇವೋಪಶೋಭಿತಾಃ ।। ೧-೩೩-೧೮
ಮಹಾರಾಜ! ಸರ್ವ ದೇವತೆಗಳೂ ಅಲಂಕೃತರಾಗಿ ವಿಮಾನಸ್ಥರಾಗಿ ಗಂಥರ್ವ-ಅಪ್ಸರೆಯರೊಡನೆ ನಿತ್ಯವೂ ಆ ಯಜ್ಞಗಳಲ್ಲಿ ಶೋಭಿಸುತ್ತಿದ್ದರು.
ಯಸ್ಯ ಯಜ್ಞೇ ಜಗೌ ಗಾಥಾಂ ಗಂಧರ್ವೋ ನಾರದಸ್ತಥಾ ।
ವರೀದಾಸಾತ್ಮಜೋ ವಿದ್ವಾನ್ಮಹಿಮ್ನಾ ತಸ್ಯ ವಿಸ್ಮಿತಃ ।। ೧-೩೩-೧೯
ಅವನ ಯಜ್ಞದಲ್ಲಿ ಗಂಧರ್ವ ವರೀದಾಸನ ಮಗ ವಿದ್ವಾನ ನಾರದನು ವಿಸ್ಮಿತನಾಗಿ ಯಜ್ಞದ ಮಹಿಮೆಯ ಕುರಿತು ಈ ಗಾಥವನ್ನು ಹಾಡಿದ್ದನು.
ನಾರದ ಉವಾಚ
ನ ನೂನಂ ಕಾರ್ತವೀರ್ಯಸ್ಯ ಗತಿಂ ಯಾಸ್ಯಾಂತಿ ಪಾರ್ಥಿವಾಃ ।
ಯಜ್ಞೈರ್ದಾನೈಸ್ತಪೋಭಿರ್ವಾ ವಿಕ್ರಮೇಣ ಶ್ರುತೇನ ಚ ।। ೧-೩೩-೨೦
ನಾರದನು ಹೇಳಿದನು: “ಯಜ್ಞ, ದಾನ, ತಪಸ್ಸು, ವಿಕ್ರಮ ಮತ್ತು ವಿದ್ಯೆಯಲ್ಲಿ ಬೇರೆ ಯಾವ ಪಾರ್ಥಿವರೂ ಕಾರ್ತವೀರ್ಯನ ಗತಿಯನ್ನು ಹೊಂದಲಾರರು.
ಸ ಹಿ ಸಪ್ತಸು ದ್ವೀಪೇಷು ಖಡ್ಗೀ ಚರ್ಮೀ ಶರಾಸನೀ ।
ರಥೀ ದ್ವೀಪಾನನುಚರನ್ಯೋಗೀ ಸಂದೃಶ್ಯತೇ ನೃಭಿಃ ।। ೧-೩೩-೨೧
ಯೋಗಿಯಾದ ಅವನೊಬ್ಬನೇ ಏಳು ದ್ವೀಪಗಳಲ್ಲಿ ಖಡ್ಗ-ಗುರಾಣಿ-ಧನುಸ್ಸಗಳನ್ನು ಹಿಡಿದು ರಥವನ್ನೇರಿ ದ್ವೀಪಗಳಲ್ಲಿ ಸಂಚರಿಸುತ್ತಿರುವುದನ್ನು ಮನುಷ್ಯರು ನೋಡುತ್ತಾರೆ.
ಅನಷ್ಟದ್ರವ್ಯತಾ ಚೈವ ನ ಶೋಕೋ ನ ಚ ವಿಭ್ರಮಃ ।
ಪ್ರಭಾವೇಣ ಮಹಾರಾಜ್ಞಃ ಪ್ರಜಾ ಧರ್ಮೇಣ ರಕ್ಷತಃ ।। ೧-೩೩-೨೨
ಪ್ರಜೆಗಳನ್ನು ಧರ್ಮದಿಂದ ರಕ್ಷಿಸುವ ಮಹಾರಾಜನ ಪ್ರಭಾವದಿಂದ ಯಾರಿಗೂ ದ್ರವ್ಯನಷ್ಟವಾಗುತ್ತಿಲ್ಲ. ಯಾರಿಗೂ ಶೋಕ-ವಿಭ್ರಮೆಗಳಾಗುತ್ತಿಲ್ಲ.”
ಪಂಚಾಶೀತಿಸಹಸ್ರಾಣಿ ವರ್ಷಾಣಾಂ ವೈ ನರಾಧಿಪಃ ।
ಸ ಸರ್ವರತ್ನಭಾಕ್ ಸಮ್ರಾಟ್ ಚಕ್ರವರ್ತೀ ಬಭೂವ ಹ ।। ೧-೩೩-೨೩
ಆ ನರಾಧಿಪನು ಎಂಬತ್ತೈದು ಸಾವಿರ ವರ್ಷಗಳ ಪರ್ಯಂತ ರತ್ನಸಂಪನ್ನ ಸಮ್ರಾಟ ಚಕ್ರವರ್ತಿಯಾಗಿದ್ದನು.
ಸ ಏವ ಯಜ್ಞಪಾಲೋಽಭೂತ್ಕ್ಷೇತ್ರಪಾಲಃ ಸ ಏವ ಚ ।
ಸ ಏವ ವೃಷ್ಟ್ಯಾಂ ಪರ್ಜನ್ಯೋ ಯೋಗಿತ್ವಾದರ್ಜುನೋಽಭವತ್ ।। ೧-೩೩-೨೪
ಯೋಗಿತ್ವದಿಂದ ಅರ್ಜುನನು ಅವನೇ ಯಜ್ಞಪಾಲನಾಗಿದ್ದನು. ಅವನೇ ಕ್ಷೇತ್ರಪಾಲನೂ ಆಗಿದ್ದನು. ಅವನೇ ಮಳೆಸುರಿಸುವ ಪರ್ಜನ್ಯನಾಗಿದ್ದನು.
ಸ ವೈ ಬಾಹುಸಹಸ್ರೇಣಾ ಜ್ಯಾಘಾತಕಠಿನತ್ವಚಾ ।
ಭಾತಿ ರಶ್ಮಿಸಹಸ್ರೇಣ ಶರದೀವ ದಿವಾಕರಃ ।। ೧-೩೩-೨೫
ಬಿಲ್ಲುಗಳನ್ನು ಹೆದೆಯೇರಿಸಿ ಚರ್ಮವು ಕಠಿನವಾಗಿದ್ದ ಅವನ ಸಹಸ್ರಬಾಹುಗಳು ಶರದೃತುವಿನಲ್ಲಿ ಸಹಸ್ರ ರಶ್ಮಿಗಳಿರುವ ದಿವಾಕರನಂತೆ ಹೊಳೆಯುತ್ತಿದ್ದವು.
ಸ ಹಿ ನಾಗಾನ್ಮನುಷ್ಯೇಷು ಮಾಹಿಷ್ಮತ್ಯಾಂ ಮಹಾದ್ಯುತಿಃ ।
ಕರ್ಕೋಟಕಸುತಾಂಜಿತ್ವಾ ಪುರ್ಯಾಂ ತಸ್ಯಾಂ ನ್ಯವೇಶಯತ್ ।। ೧-೩೩-೨೬
ಆ ಮಹಾದ್ಯುತಿ ಕರ್ಕೋಟಕ ನಾಗನ ಸುತರನ್ನು ಗೆದ್ದು ಆ ನಾಗಗಳನ್ನು ಮಾಹಿಷ್ಮತೀ ನಗರದಲ್ಲಿ ಮನುಷ್ಯರೊಂದಿಗೆ ವಾಸಿಸುವಂತೆ ಮಾಡಿದ್ದನು.
ಸ ವೈ ವೇಗಂ ಸಮುದ್ರಸ್ಯ ಪ್ರಾವೃಟ್ಕಾಲೇಽಂಬುಜೇಕ್ಷಣಃ ।
ಕ್ರೀಡನ್ನಿವ ಭುಜೋದ್ಭಿನ್ನಂ ಪ್ರತಿಸ್ರೋತಶ್ಚಕಾರ ಹ ।। ೧-೩೩-೨೭
ಆ ಅಂಬುಜೇಕ್ಷಣನು ಮಳೆಗಾಲದಲ್ಲಿ ಸಮುದ್ರದ ಅಲೆಗಳ ವೇಗವನ್ನು ತನ್ನ ಭುಜಗಳಿಂದ ಹಿಂದೆ ತಳ್ಳಿ ಜಲಕ್ರೀಡೆಯನ್ನಾಡುತ್ತಿದ್ದನು.
ಲುಂಠಿತಾ ಕ್ರೀಡಿತಾ ತೇನ ಫೇನಸ್ರಗ್ದಾಮಮಾಲಿನೀ ।
ಚಲದೂರ್ಮಿಸಹಸ್ರೇಣ ಶಂಕಿತಾಭ್ಯೇತಿ ನರ್ಮದಾ ।। ೧-೩೩-೨೮
ಅವನು ನರ್ಮದೆಯಲ್ಲಿ ಮುಳುಗಿ ಮೇಲೆದ್ದು ಆಡುತ್ತಿದ್ದಾಗ ನೊರೆಯನ್ನೇ ಮಾಲೆಗಳನ್ನಾಗಿ ಧರಿಸಿದ್ದ ನರ್ಮದೆಯು ಸಹಸ್ರಾರು ಅಲೆಗಳಿಂದ ಶಂಕಿತಳಾಗುತ್ತಿದ್ದಳು.
ತಸ್ಯ ಬಾಹುಸಹಸ್ರೇಣ ಕ್ಷುಭ್ಯಮಾಣೇ ಮಹೋದಧೌ ।
ಭಯಾನ್ನಿಲೀನಾ ನಿಶ್ಚೇಷ್ಟಾಃ ಪಾತಾಲಸ್ಥಾ ಮಹಾಸುರಾಃ ।। ೧-೩೩-೨೯
ಅವನ ಸಹಸ್ರಬಾಹುಗಳಿಂದ ಮಹಾಸಾಗರವು ಕ್ಷೋಭೆಗೊಂಡಾಗ ಪಾತಾಲಸ್ಥ ಮಹಾಸುರರು ಭಯದಿಂದ ನಿಶ್ಚೇಷ್ಟರಾಗಿ ಅಡಗಿಕೊಳ್ಳುತ್ತಿದ್ದರು.
ಚೂರ್ಣೀಕೃತಮಹಾವೀಚಿಂ ಚಲಮೀನಮಹಾತಿಮಿಮ್ ।
ಮಾರುತಾವಿದ್ಧಫೇನೌಘಮಾವರ್ತಕ್ಷೋಭದುಃಸಹಮ್ ।। ೧-೩೩-೩೦
ಪ್ರಾವರ್ತಯತ್ತದಾ ರಾಜಾ ಸಹಸ್ರೇಣ ಚ ಬಾಹುನಾ ।
ದೇವಾಸುರಸಮಾಕ್ಷಿಪ್ತಃ ಕ್ಷೀರೋದಮಿವ ಮಂದರಃ ।। ೧-೩೩-೩೧
ಆ ರಾಜನು ಸಹಸ್ರಬಾಹುಗಳಿಂದ ದೇವಾಸುರರು ಸೇರಿ ಕ್ಷೀರಸಾಗರವನ್ನು ಮಂದರದಿಂದ ಕಡೆದಂತೆ ಕಡೆಯುತ್ತಿರುವಾಗ ನೀರಿನಲ್ಲಿ ಸಂಚರಿಸುತ್ತಿದ್ದ ಮೀನು-ತಿಮಿಂಗಿಲಗಳು ಚೂರ್ಣೀಕೃತವಾಗುತ್ತಿದ್ದವು. ಭಿರುಗಾಳಿಯಿಂದಲೋ ಎಂಬಂತೆ ಕ್ಷೋಭೆಗೊಂಡು ಅಲೆಗಳು ನೊರೆನೊರೆಯಾಗಿ ಮೇಲೆ ಉಕ್ಕಿಬರುತ್ತಿದ್ದವು.
ಮಂದರಕ್ಷೋಭಚಕಿತಾ ಅಮೃತೋದ್ಭವಶಂಕಿತಾಃ ।
ಸಹಸೋತ್ಪತಿತಾ ಭೀತಾ ಭೀಮಂ ದೃಷ್ಟ್ವಾ ನೃಪೋತ್ತಮಮ್ ।। ೧-೩೩-೩೨
ನತಾ ನಿಶ್ಚಲಮೂರ್ಧಾನೋ ಬಭೂವುಸ್ತೇ ಮಹೋರಗಾಃ ।
ಸಾಯಾಹ್ನೇ ಕದಲೀಖಂಡೈಃ ಕಂಪಿತಾಸ್ತಸ್ಯ ವಾಯುನಾ ।। ೧-೩೩-೩೩
ಮಂದರಪರ್ವತದಂತಹ ಕ್ಷೋಭೆಯಿಂದ ಚಕಿತಗೊಂಡು ಅಮೃತೋದ್ಭವವಾಗಲಿದೆಯೋ ಎಂಬ ಶಂಕೆಯಿಂದ ಒಮ್ಮೆಲೇ ಭೀತರಾಗಿ ಮೇಲೆ ಬಂದ ಮಹೋರಗಗಳು ಆ ಭಯಂಕರ ನೃಪೋತ್ತಮನನ್ನು ನೋಡಿ ಸಾಯಂಕಾಲದ ಗಾಳಿಯಿಂದ ಕಂಪಿತಗೊಂಡು ತಲೆತಗ್ಗಿಸುವ ಬಾಳೆಯ ಮರಗಳಂತೆ ತಲೆತಗ್ಗಿಸಿ ನಿಶ್ಚಲವಾಗುತ್ತಿದ್ದವು.
ಸ ವೈ ಬದ್ಧ್ವಾ ಧನುರ್ಜ್ಯಾಭಿರುತ್ಸಿಕ್ತಂ ಪಂಚಭಿಃ ಶರೈಃ ।
ಲಂಕೇಶಂ ಮೋಹಯಿತ್ವಾ ತು ಸಬಲಂ ರಾವಣಂ ಬಲಾತ್ ।
ನಿರ್ಜಿತ್ಯೈವ ಸಮಾನೀಯ ಮಾಹಿಷ್ಮತ್ಯಾಂ ಬಬಂಧ ತಮ್ ।। ೧-೩೩-೩೪
ಅವನು ಐದು ಶರಗಳಿಂದ ಸೇನೆಯೊಂದಿಗೆ ಲಂಕೇಶ ರಾವಣನನ್ನು ಮೂರ್ಛೆಗೊಳಿಸಿ ತನ್ನ ಬಿಲ್ಲಿನ ಶಿಂಜಿನಿಯಿಂದ ಬಂಧಿಸಿ ಅವನನ್ನು ಮಾಹಿಷ್ಮತೀ ನಗರಕ್ಕೆ ತಂದಿದ್ದನು.
ಶ್ರುತ್ವಾ ತು ಬದ್ಧಂ ಪೌಲಸ್ತ್ಯಂ ರಾವಣಂ ತ್ವರ್ಜುನೇನ ತು ।
ತತೋ ಗತ್ವಾ ಪುಲಸ್ತ್ಯಸ್ತಮರ್ಜುನಂ ದದೃಶೇ ಸ್ವಯಮ್ ।
ಮುಮೋಚ ರಕ್ಷಃ ಪೌಲಸ್ತ್ಯಂ ಪುಲಸ್ತ್ಯೇನಾನುಯಾಚಿತಃ ।। ೧-೩೩-೩೫
ಪೌಲಸ್ತ್ಯ ರಾವಣನನ್ನು ಅರ್ಜುನನು ಬಂಧಿಸಿದ್ದಾನೆಂದು ಕೇಳಿದ ಪುಲಸ್ತ್ಯನು ಸ್ವಯಂ ತಾನೇ ಹೋಗಿ ಅರ್ಜುನನನ್ನು ಕಂಡಿದ್ದನು. ಪುಲಸ್ತ್ಯನು ಯಾಚಿಸಲು ಅವನು ಪೌಲಸ್ತ್ಯ ರಾಕ್ಷಸನನ್ನು ಮುಕ್ತಗೊಳಿಸಿದ್ದನು.
ಯಸ್ಯ ಬಾಹುಸಹಸ್ರಸ್ಯ ಬಭೂವ ಜ್ಯಾತಲಸ್ವನಃ ।
ಯುಗಾಂತೇ ತ್ವಂಬುದಸ್ಯೇವ ಸ್ಫುಟತೋ ಹ್ಯಶನೇರಿವ ।। ೧-೩೩-೩೬
ಕಾರ್ತವೀರ್ಯನ ಸಹಸ್ರಬಾಹುಗಳು ಮೀಟಿದ ಶಿಂಜಿನಿಯ ಧ್ವನಿಯು ಯುಗಾಂತದ ಮೋಡಗಳ ಗರ್ಜನೆಯಂತೆಯೋ ಅಥವಾ ವಜ್ರವು ಸೀಳುತ್ತಿರುವಂತೆಯೋ ಕೇಳಿಬರುತ್ತಿತ್ತು.
ಅಹೋ ಬತ ಮೃಧೇ ವೀರ್ಯಂ ಭಾರ್ಗವಸ್ಯ ಯದಚ್ಛಿನತ್ ।
ರಾಜ್ಞೋ ಬಾಹುಸಹಸ್ರಂ ತು ಹೈಮಂ ತಾಲವನಂ ಯಥಾ ।। ೧-೩೩-೩೭
ಆಹಾ! ಕಾಂಚನದ ತಾಲವೃಕ್ಷಗಳ ವನಗಳಂತಿದ್ದ ಆ ರಾಜನ ಸಹಸ್ರಬಾಹುಗಳನ್ನು ಯುದ್ಧದಲ್ಲಿ ಕತ್ತರಿಸಿದ ಆ ಭಾರ್ಗವ ಪರಶುರಾಮನ ವೀರ್ಯವೇನಿತ್ತು!
ತೃಷಿತೇನ ಕದಾಚಿತ್ಸ ಭಿಕ್ಷಿತಶ್ಚಿತ್ರಭಾನುನಾ ।
ಸ ಭಿಕ್ಷಾಮದದಾದ್ವೀರಃ ಸಪ್ತದ್ವೀಪಾನ್ವಿಭಾವಸೋಃ ।। ೧-೩೩-೩೮
ಪುರಾಣಿ ಗ್ರಾಮಘೋಷಾಂಶ್ಚ ವಿಷಯಾಂಶ್ಚೈವ ಸರ್ವಶಃ ।
ಜಜ್ವಾಲ ತಸ್ಯ ಸರ್ವಾಣಿ ಚಿತ್ರಭಾನುರ್ದಿಧಕ್ಷಯಾ ।। ೧-೩೩-೩೯
ಒಮ್ಮೆ ಹಸಿವೆಯಿಂದ ಬಳಲಿದ್ದ ಚಿತ್ರಭಾನು ಅಗ್ನಿಯು ಕಾರ್ತವೀರ್ಯನಲ್ಲಿ ಭಿಕ್ಷೆಯನ್ನು ಬೇಡಿದನು. ಆಗ ಆ ವೀರನು ಪುರ-ಗ್ರಾಮ-ಘೋಷ-ವಿಷಯಗಳನ್ನೂ ಸೇರಿಸಿ ಸಪ್ತದ್ವೀಪಗಳನ್ನೂ ವಿಭಾವಸುವಿಗೆ ಭಿಕ್ಷೆಯ ರೂಪದಲ್ಲಿತ್ತನು. ಚಿತ್ರಭಾನುವು ಭುಗಿಲೆದ್ದು ಅವನ ಸರ್ವಸ್ವವನ್ನೂ ಸುಟ್ಟುಹಾಕಿದನು.
ಸ ತಸ್ಯ ಪುರುಷೇಂದ್ರಸ್ಯ ಪ್ರಭಾವೇನ ಮಹಾತ್ಮನಃ ।
ದದಾಹ ಕಾರ್ತವೀರ್ಯಸ್ಯ ಶೈಲಾಂಶ್ಚೈವ ವನಾನಿ ಚ ।। ೧-೩೩-೪೦
ಮಹಾತ್ಮ ಪುರುಷೇಂದ್ರ ಕಾರ್ತವೀರ್ಯನ ಪ್ರಭಾವದಿಂದ ಅವನು ಗಿರಿ-ವನಗಳನ್ನು ಸುಟ್ಟುಹಾಕಿದನು.
ಸ ಶೂನ್ಯಮಾಶ್ರಮಂ ರಮ್ಯಂ ವರುಣಸ್ಯಾತ್ಮಜಸ್ಯ ವೈ ।
ದದಾಹ ವನವದ್ಭೀತಶ್ಚಿತ್ರಭಾನುಃ ಸಹೈಹಯಃ ।। ೧-೩೩-೪೧
ಹೈಹಯನೊಡಗೂಡಿ ಚಿತ್ರಭಾನುವು ವರುಣನ ಮಗನ ಶೂನ್ಯವಾಗಿದ್ದ ರಮ್ಯ ಆಶ್ರಮವನ್ನೂ ಹೆದರುತ್ತಾ ಸುಟ್ಟುಹಾಕಿದನು.
ಯಂ ಲೇಭೇ ವರುಣಃ ಪುತ್ರಂ ಪುರಾ ಭಾಸ್ವಂತಮುತ್ತಮಮ್ ।
ವಸಿಷ್ಠಂ ನಾಮ ಸ ಮುನಿಃ ಖ್ಯಾತ ಆಪವ ಇತ್ಯುತ ।। ೧-೩೩-೪೨
ಹಿಂದೆ ವರುಣನು ಬೆಳಗುತ್ತಿದ್ದ ಉತ್ತಮ ವಸಿಷ್ಠ ಎಂಬ ಮುನಿಯನ್ನು ಪುತ್ರನನ್ನಾಗಿ ಪಡೆದುಕೊಂಡಿದ್ದನು. ಅವನೇ ಆಪವನೆಂದೂ ಖ್ಯಾತನಾಗಿದ್ದನು.
ಯತ್ರಾಪವಸ್ತು ತಂ ಕ್ರೋಧಾಚ್ಛಪ್ತವಾನರ್ಜುನಂ ವಿಭುಃ ।
ಯಸ್ಮಾನ್ನ ವರ್ಜಿತಮಿದಂ ವನಂ ತೇ ಮಮ ಹೈಹಯ ।। ೧-೩೩-೪೩
ಆಗ ವಿಭು ಆಪವನು ಕ್ರೋಧದಿಂದ ಅರ್ಜುನನನ್ನು ಶಪಿಸಿದನು: “ಹೈಹಯ! ನೀನು ನನ್ನ ಆಶ್ರಮವನ್ನೂ ಬಿಡಲಿಲ್ಲ.
ತಸ್ಮಾತ್ತೇ ದುಷ್ಕರಂ ಕರ್ಮ ಕೃತಮನ್ಯೋ ಹನಿಷ್ಯತಿ ।
ರಾಮೋ ನಾಮ ಮಹಾಬಾಹುರ್ಜಾಮದಗ್ನ್ಯಃ ಪ್ರತಾಪವಾನ್ ।। ೧-೩೩-೪೪
ಛಿತ್ತ್ವಾ ಬಾಹುಸಹಸ್ರಂ ತೇ ಪ್ರಮಥ್ಯ ತರಸಾ ಬಲೀ ।
ತಪಸ್ವೀ ಬ್ರಾಹ್ಮಣಶ್ಚ ತ್ವಾಂ ವಧಿಷ್ಯತಿ ಸ ಭಾರ್ಗವಃ ।। ೧-೩೩-೪೫
ನಿನ್ನ ಈ ದುಷ್ಕರ ಕರ್ಮದಿಂದ ಕುಪಿತನಾದ ರಾಮನೆಂಬ ಪ್ರತಾಪವಾನ್ ಜಾಮದಗ್ನಿಯು ನಿನ್ನ ಸಹಸ್ರಬಾಹುಗಳನ್ನು ಕತ್ತರಿಸುತ್ತಾನೆ. ಆ ಬಲಶಾಲೀ ತಪಸ್ವೀ ಭಾರ್ಗವ ಬ್ರಾಹ್ಮಣನು ನಿನ್ನನ್ನು ಮಥಿಸಿ ವಧಿಸುತ್ತಾನೆ.””
ವೈಶಂಪಾಯನ ಉವಾಚ
ಅನಷ್ಟದ್ರವ್ಯತಾ ಯಸ್ಯ ಬಭೂವಾಮಿತ್ರಕರ್ಶನ ।
ಪ್ರಭಾವೇನ ನರೇಂದ್ರಸ್ಯ ಪ್ರಜಾ ಧರ್ಮೇಣ ರಕ್ಷತಃ ।। ೧-೩೩-೪೬
ವೈಶಂಪಾಯನನು ಹೇಳಿದನು: “ಅಮಿತ್ರಕರ್ಶನ! ಪ್ರಜೆಗಳನ್ನು ಧರ್ಮದಿಂದ ರಕ್ಷಿಸುತ್ತಿದ್ದ ಆ ನರೇಂದ್ರನ ಪ್ರಭಾವದಿಂದ ಯಾರಿಗೂ ಯಾವರೀತಿಯ ದ್ರವ್ಯನಷ್ಟವೂ ಆಗುತ್ತಿರಲಿಲ್ಲ.
ರಾಮಾತ್ತತೋಽಸ್ಯ ಮೃತ್ಯುರ್ವೈ ತಸ್ಯ ಶಾಪಾನ್ಮುನೇರ್ನೃಪ ।
ವರಶ್ಚೈವ ಹಿ ಕೌರವ್ಯ ಸ್ವಯಮೇವ ವೃತಃ ಪುರಾ ।। ೧-೩೩-೪೭
ನೃಪ! ಕೌರವ್ಯ! ವಸಿಷ್ಠನ ಶಾಪದಿಂದಾಗಿ ಮತ್ತು ಹಿಂದೆ ನಾನೇ ಕೇಳಿಕೊಂಡಿದ್ದ ವರದ ಕಾರಣದಿಂದಾಗಿ ಕಾರ್ತವೀರ್ಯನು ಮೃತ್ಯುವನ್ನಪ್ಪಿದನು.
ತಸ್ಯ ಪುತ್ರಶತಸ್ಯಾಸನ್ಪಂಚ ಶೇಷಾ ಮಹಾತ್ಮನಃ ।
ಕೃತಾಸ್ತ್ರಾ ಬಲಿನಃ ಶೂರಾ ಧರ್ಮಾತ್ಮಾನೋ ಯಶಸ್ವಿನಃ ।। ೧-೩೩-೪೮
ಅವನ ನೂರು ಪುತ್ರರಲ್ಲಿ ಐವರು ಮಹಾತ್ಮರು ಮಾತ್ರ ಉಳಿದುಕೊಂಡರು. ಅವರು ಕೃತಾಸ್ತ್ರರೂ, ಬಲಶಾಲಿಗಳೂ, ಧರ್ಮಾತ್ಮರೂ, ಮತ್ತು ಯಶಸ್ವಿಗಳೂ ಆಗಿದ್ದರು.
ಶೂರಸೇನಶ್ಚ ಶೂರಶ್ಚ ಧೃಷ್ಟೋಕ್ತಃ ಕೃಷ್ಣ ಏವ ಚ ।
ಜಯಧ್ವಜಶ್ಚ ನಾಮ್ನಾಽಽಸೀದಾವಂತ್ಯೋ ನೃಪತಿರ್ಮಹಾನ್ ।। ೧-೩೩-೪೯
ಶೂರಸೇನ, ಶೂರ, ಧೃಷ್ಟ, ಕೃಷ್ಣ ಮತ್ತು ಜಯಧ್ವಜ – ಇವು ಆ ಮಹಾನ್ ನೃಪತಿಗಳ ಹೆಸರುಗಳು. ಇವರಲ್ಲಿ ಜಯಧ್ವಜನು ಅವಂತೀ ದೇಶದ ರಾಜನಾದನು.
ಕಾರ್ತವೀರ್ಯಸ್ಯ ತನಯಾ ವೀರ್ಯವಂತೋ ಮಹಾರಥಾಃ ।
ಜಯಧ್ವಜಸ್ಯ ಪುತ್ರಸ್ತು ತಾಲಜಂಘೋ ಮಹಾಬಲಃ ।। ೧-೩೩-೫೦
ಕಾರ್ಯವೀರ್ಯನ ತನಯರು ವೀರ್ಯವಂತರೂ ಮಹಾರಥರೂ ಆಗಿದ್ದರು. ಜಯಧ್ವಜನ ಪುತ್ರ ಮಹಾಬಲ ತಾಲಜಂಘನು.
ತಸ್ಯ ಪುತ್ರಾಃ ಶತಂ ಖ್ಯಾತಾಸ್ತಾಲಜಂಘಾ ಇತಿ ಶ್ರುತಾಃ ।
ತೇಷಾಂ ಕುಲೇ ಮಹಾರಾಜ ಹೈಹಯಾನಾಂ ಮಹಾತ್ಮನಾಮ್ ।। ೧-೩೩-೫೧
ವೀತಿಹೋತ್ರಾಃ ಸುಜಾತಾಶ್ಚ ಭೋಜಾಶ್ಚಾವಂತಯಃ ಸ್ಮೃತಾಃ ।
ತೌಂಡಿಕೇರಾ ಇತಿ ಖ್ಯಾತಾಸ್ತಾಲಜಂಘಾಸ್ತಥೈವ ಚ ।। ೧-೩೩-೫೨
ಭರತಾಶ್ಚ ಸುತಾ ಜಾತಾ ಬಹುತ್ವಾನ್ನಾನುಕೀರ್ತಿತಾಃ ।
ವೃಷಪ್ರಭೃತಯೋ ರಾಜನ್ಯಾದವಾಃ ಪೂರ್ಣಕರ್ಮಿಣಃ ।। ೧-೩೩-೫೩
ಅವನ ನೂರು ಮಕ್ಕಳು ತಾಲಜಂಘರೆಂದು ಖ್ಯಾತರಾದರು. ಮಹಾರಾಜ! ಮಹಾತ್ಮರಾದ ಆ ಹೈಹಯರ ಕುಲದಲ್ಲಿ ವೀತಿಹೋತ್ರರು, ಸುಜಾತರು, ಭೋಜರು, ಅವಂತಿಯವರು, ತೌಂಡಿಕೇರರು, ಭರತರು ಮತ್ತು ತಾಲಜಂಘರು ಎಂಬ ಖ್ಯಾತ ಕುಲಗಳು ಹುಟ್ಟಿಕೊಂಡವು. ಅವು ಅನೇಕವಾಗಿರುವುದರಿಂದ ಎಲ್ಲರ ಹೆಸರುಗಳನ್ನೂ ಇಲ್ಲಿ ಹೇಳುತ್ತಿಲ್ಲ. ವೃಷನೇ ಮೊದಲಾದ ಪೂರ್ಣಕರ್ಮಿ ಯಾದವರು ಈ ವಂಶದಲ್ಲಿ ಆಗಿಹೋದರು.
ವೃಷೋ ವಂಶಧರಸ್ತತ್ರ ತಸ್ಯ ಪುತ್ರೋಽಭವನ್ಮಧುಃ ।
ಮಧೋಃ ಪುತ್ರಶತಂ ತ್ವಾಸೀದ್ವೃಷಣಸ್ತಸ್ಯ ವಂಶಭಾಕ್ ।। ೧-೩೩-೫೪
ಅವರಲ್ಲಿ ವೃಷನು ವಂಶಧರನಾದನು. ಅವನ ಮಗನು ಮಧುವು. ಮಧುವಿಗೆ ನೂರು ಪುತ್ರರಿದ್ದರು. ಅವರಲ್ಲಿ ವೃಷಣನು ವಂಶವರ್ಧಕನಾದನು.
ವೃಷಣಾದ್ವೃಷ್ಣಯಃ ಸರ್ವೇ ಮಧೋಸ್ತು ಮಾಧವಾಃ ಸ್ಮೃತಾಃ ।
ಯಾದವಾ ಯದುನಾ ಚಾಗ್ರೇ ನಿರುಚ್ಯಂತೇ ಚ ಹೈಹಯಾಃ ।। ೧-೩೩-೫೫
ವೃಷನನಿಂದಾಗಿ ಎಲ್ಲರೂ ವೃಷ್ಣಿಗಳಾದರು ಮತ್ತು ಮಧುವಿನಿಂದ ಮಾಧವರೆಂದಾದರು. ಯದುವಿನಿಂದ ಯಾದವರಾದರು ಮತ್ತು ಮುಂದೆ ಹೈಹಯರೆಂದೂ ಕರೆಯಲ್ಪಟ್ಟರು.
1ಶೂರಾಶ್ಚ ಶೂರವೀರಾಶ್ಚ ಶೂರಸೇನಾಸ್ತಥಾನಘ ।
ಶೂರಸೇನ ಇತಿ ಖ್ಯಾತಸ್ತಸ್ಯ ದೇಶೋ ಮಹಾತ್ಮನಃ ।। ೧-೩೩-೫೬
ಅನಘ! ಶೂರಸೇನರು ಶೂರರು ಶೂರವೀರರೂ ಆಗಿದ್ದರು. ಆ ಮಹಾತ್ಮನ ದೇಶವು ಶೂರಸೇನ ಎಂದು ಖ್ಯಾತವಾಗಿತ್ತು.
ನ ತಸ್ಯ ವಿತ್ತನಾಶೋಽಸ್ತಿ ನಷ್ಟಂ ಪ್ರತಿಲಭೇಚ್ಚ ಸಃ ।
ಕಾರ್ತವೀರ್ಯಸ್ಯ ಯೋ ಜನ್ಮ ಕೀರ್ತಯೇದಿಹ ನಿತ್ಯಶಃ ।। ೧-೩೩-೫೭
ಕಾರ್ತವೀರ್ಯನ ಜನ್ಮ ಮತ್ತು ಕೀರ್ತನೆಯನ್ನು ನಿತ್ಯವೂ ಯಾರು ಕೇಳುತ್ತಾರೋ ಅವರ ವಿತ್ತವು ನಾಶವಾಗುವುದಿಲ್ಲ ಮತ್ತು ಕಳೆದುಹೋದುದು ಪುನಃ ದೊರೆಯುತ್ತದೆ.
ಏತೇ ಯಯಾತಿಪುತ್ರಾಣಾಂ ಪಂಚ ವಂಶಾ ವಿಶಾಂಪತೇ ।
ಕೀರ್ತಿತಾ ಲೋಕವೀರಾಣಾಂ ಯೇ ಲೋಕಾಂಧಾರಯಂತಿ ವೈ ।
ಭೂತಾನೀವ ಮಹಾರಾಜ ಪಂಚ ಸ್ಥಾವರಜಂಗಮಾನ್ ।। ೧-೩೩-೫೮
ವಿಶಾಂಪತೇ! ಮಹಾರಾಜ! ಹೀಗೆ ಯಯಾತಿಯ ಐವರು ಪುತ್ರರ ವಂಶಗಳನ್ನು ವರ್ಣಿಸಿದ್ದೇನೆ. ಪಂಚಭೂತಗಳು ಸ್ಥಾವರಜಂಗಮಗಳನ್ನು ಧರಿಸಿರುವಂತೆ ಈ ಐದು ಲೋಕವೀರರ ವಂಶಗಳೂ ಲೋಕಗಳನ್ನು ಧರಿಸಿವೆ.
ಶ್ರುತ್ವಾ ಪಂಚವಿಸರ್ಗಂ ತು ರಾಜಾ ಧರ್ಮಾರ್ಥಕೋವಿದಃ ।
ವಶೀ ಭವತಿ ಪಂಚಾನಾಮಾತ್ಮಜಾನಾಂ ತಥೇಶ್ವರಃ ।। ೧-೩೩-೫೯
ಈ ಐದು ವಂಶಗಳ ಸೃಷ್ಟಿಯ ಕುರಿತು ಕೇಳಿದ ರಾಜನು ಧರ್ಮಾರ್ಥಕೋವಿದನಾಗುತ್ತಾನೆ. ಇಂದ್ರಿಯಗಳನ್ನು ವಶದಲ್ಲಿಟ್ಟುಕೊಳ್ಳುತ್ತಾನೆ ಹಾಗೂ ತನ್ನ ಪುತ್ರರ ಮೇಲೆ ಪ್ರಭುತ್ವವನ್ನು ಸ್ಥಾಪಿಸಿಕೊಳ್ಳುತ್ತಾನೆ.
ಲಭೇತ್ಪಂಚ ವರಾಂಶ್ಚೈವ ದುರ್ಲಭಾನಿಹ ಲೌಕಿಕಾನ್ ।
ಆಯುಃ ಕೀರ್ತಿಂ ತಥಾ ಪುತ್ರಾನೈಶ್ವರ್ಯಂ ಭೂಮಿಮೇವ ಚ ।
ಧಾರಣಾಚ್ಛ್ರವಣಾಚ್ಚೈವ ಪಂಚವರ್ಗಸ್ಯ ಭಾರತ ।। ೧-೩೩-೬೦
ಭಾರತ! ಈ ಪಂಚವಂಶಗಳ ಶ್ರವಣ ಮತ್ತು ಧಾರಣೆಯಿಂದ ಇಲ್ಲಿ ಲೌಕಿಕರಿಗೆ ದುರ್ಲಭವಾಗಿರುವ ಆಯು, ಕೀರ್ತಿ, ಪುತ್ರರು, ಐಶ್ವರ್ಯ ಮತ್ತು ಭೂಮಿ ಎಂಬ ಐದು ವರಗಳನ್ನು ಪಡೆದುಕೊಳ್ಳುತ್ತಾನೆ.
ಕ್ರೋಷ್ಟೋಸ್ತು ಶೃಣು ರಾಜೇಂದ್ರ ವಂಶಮುತ್ತಮಪೌರುಷಮ್ ।
ಯದೋರ್ವಂಶಧರಸ್ಯಾಥ ಯಜ್ವನಃ ಪುಣ್ಯಕರ್ಮಣಃ ।। ೧-೩೩-೬೧
ರಾಜೇಂದ್ರ! ಈಗ ಕ್ರೋಷ್ಟುವಿನ ಉತ್ತಮ ಪೌರುಷಯುಕ್ತ ವಂಶದ ಕುರಿತು ಕೇಳು. ಯಜ್ಞಗಳನ್ನೂ ಪುಣ್ಯಕರ್ಮಗಳನ್ನೂ ಮಾಡಿದ್ದ ಕ್ರೋಷ್ಟುವು ಯದುವಿನ ವಂಶಧರನಾಗಿದ್ದನು.
ಕ್ರೋಷ್ಟುರ್ಹಿ ವಂಶಂ ಶ್ರುತ್ವೇಮಂ ಸರ್ವಪಾಪೈಃ ಪ್ರಮುಚ್ಯತೇ ।
ಯಸ್ಯಾನ್ವವಾಯಜೋ ವಿಷ್ಣುರ್ಹರಿರ್ವೃಷ್ಣಿಕುಲೋದ್ವಹಃ ।। ೧-೩೩-೬೨
ಕ್ರೋಷ್ಟುವಿನ ವಂಶದ ಕುರಿತು ಕೇಳಿದವರು ಸರ್ವಪಾಪಗಳಿಂದ ಮುಕ್ತರಾಗುತ್ತಾರೆ. ಕ್ರೋಷ್ಟುವಿನ ಕುಲದಲ್ಲಿಯೇ ವೃಷ್ಣಿಕುಲೋದ್ವಹ ಹರಿ ವಿಷ್ಣುವು ಜನಿಸಿದ್ದನು.”
ಸಮಾಪ್ತಿ
ಇತಿ ಶ್ರೀಮಹಾಭಾರತೇ ಖಿಲೇಷು ಹರಿವಂಶೇ ಹರಿವಂಶಪರ್ವಣಿ ತ್ರಯಸ್ತ್ರಿಂಶೋಽಧ್ಯಾಯಃ
-
ಈ ಶ್ಲೋಕವು ಗೋರಖಪುರ ಸಂಪುಟದಲ್ಲಿ ಇಲ್ಲ. ↩︎