032: ಪುರುವಂಶಾನುಕೀರ್ತನಮ್

ಪ್ರವೇಶ

।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।

ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ

ಶ್ರೀ ಮಹಾಭಾರತ

ಖಿಲಭಾಗೇ ಹರಿವಂಶಃ

ಹರಿವಂಶ ಪರ್ವ

ಅಧ್ಯಾಯ 32

ಸಾರ

ಪುರುವಿನ ವಂಶದಲ್ಲಿ ಋಚೇಯುವಿನ ವಂಶಪರಂಪರೆ – ಅಜಮೀಢವಂಶ, ಪಾಂಚಾಲ ಮತ್ತು ಸೋಮಕವಂಶ, ಕೌರವವಂಶ ಮತ್ತು ಹಾಗೆಯೇ ತುರ್ವಸು, ದ್ರುಹ್ಯು ಮತ್ತು ಅನುವಿನ ಸಂತತಿಗಳ ವರ್ಣನೆ (1-129).

ವೈಶಂಪಾಯನ ಉವಾಚ
ಅನಾಧೃಷ್ಯಸ್ತು ರಾಜರ್ಷಿರೃಚೇಯುಶ್ಚೈಕರಾಟ್ಸ್ಮೃತಃ ।
ಋಚೇಯೋರ್ಜ್ವಲನಾ ನಾಮ ಭಾರ್ಯಾ ವೈ ತಕ್ಷಕಾತ್ಮಜಾ ।। ೧-೩೨-೧

ವೈಶಂಪಾಯನನು ಹೇಳಿದನು: “ರಾಜರ್ಷಿ ಋಚೇಯುವು ಏಕಛತ್ರ ಸಾಮ್ರಾಟನೆಂದು ಕರೆಯಲ್ಪಟ್ಟಿದ್ದನು. ಅವನು ಇತರರಿಗೆ ಅಜೇಯನಾಗಿದ್ದನು. ಋಚೇಯುವಿಗೆ ತಕ್ಷಕಾತ್ಮಜೆ ಜ್ವಲನಾ ಎಂಬ ಹೆಸರಿನ ಪತ್ನಿಯಿದ್ದಳು.

ತಸ್ಯಾಂ ಸ ದೇವ್ಯಾಂ ರಾಜರ್ಷಿರ್ಮತಿನಾರೋ ಮಹೀಪತಿಃ ।
ಮತಿನಾರಸುತಾಶ್ಚಾಸಂಸ್ತ್ರಯಃ ಪರಮಧಾರ್ಮಿಕಾಃ ।। ೧-೩೨-೨

ಆ ದೇವಿಯಲ್ಲಿ ರಾಜರ್ಷಿ ಮಹೀಪತಿ ಮತಿನಾರನು ಜನಿಸಿದನು. ಮತಿನಾರನಿಗೆ ಮೂವರು ಪರಮಧಾರ್ಮಿಕ ಪುತ್ರರಾದರು.

ತಂಸುರಾದ್ಯಃ ಪ್ರತಿರಥಃ ಸುಬಾಹುಶ್ಚೈವ ಧಾರ್ಮಿಕಃ ।
ಗೌರೀ ಕನ್ಯಾ ಚ ವಿಖ್ಯಾತಾ ಮಾಂಧಾತೃಜನನೀ ಶುಭಾ ।। ೧-೩೨-೩

ಮೊದಲನೆಯವನು ತಂಸು, ನಂತರ ಪ್ರತಿರಥ ಮತ್ತು ಧರ್ಮಾತ್ಮ ಸುಬಾಹು. ಮತಿನಾರನಿಗೆ ಗೌರೀ ಎಂಬ ಕನ್ಯೆಯೂ ಇದ್ದಳು. ಆ ಶುಭೆಯೇ ಮಾಂಧಾತನ ಜನನಿ ಎಂದು ವಿಖ್ಯಾತಳಾಗಿದ್ದಳು.

ಸರ್ವೇ ವೇದವಿದಸ್ತತ್ರ ಬ್ರಹ್ಮಣ್ಯಾಃ ಸತ್ಯವಾದಿನಃ ।
ಸರ್ವೇ ಕೃತಾಸ್ತ್ರಾ ಬಲಿನಃ ಸರ್ವೇ ಯುದ್ಧವಿಶಾರದಾಃ ।। ೧-೩೨-೪

ಅವರೆಲ್ಲರೂ ವೇದವಿದರೂ ಬ್ರಹ್ಮಣ್ಯರೂ ಸತ್ಯವಾದಿಗಳೂ ಆಗಿದ್ದರು. ಎಲ್ಲರೂ ಕೃತಾಸ್ತ್ರರಾಗಿದ್ದರು. ಆ ಎಲ್ಲ ಬಲಶಾಲಿಗಳೂ ಯುದ್ಧವಿಶಾರದರಾಗಿದ್ದರು.

ಪುತ್ರಃ ಪ್ರತಿರಥಸ್ಯಾಸೀತ್ಕಣ್ವಃ ಸಮಭವನ್ನೃಪಃ ।
ಮೇಧಾತಿಥಿಃ ಸುತಸ್ತಸ್ಯ ಯಸ್ಮಾತ್ಕಾಣ್ವಾಯನಾ ದ್ವಿಜಾಃ ।। ೧-೩೨-೫

ಪ್ರತಿರಥನಿಗೆ ನೃಪ ಕಣ್ವನು ಪುತ್ರನಾದನು. ಅವನ ಪುತ್ರನು ಮೇಧಾತಿಥಿಯು. ಅವನಿಂದ ಕಣ್ವಾಯನ ಬ್ರಾಹ್ಮಣರ ಪರಂಪರೆಯು ಪ್ರಚಲಿತವಾಯಿತು.

ಈಲಿನೀ ಭೂಪ ಯಸ್ಯಾಽಽಸೀತ್ಕನ್ಯಾ ವೈ ಜನಮೇಜಯ ।
ಬ್ರಹ್ಮವಾದಿನ್ಯಧಿ ಸ್ತ್ರೀಂ ಚ ತಂಸುಸ್ತಾಮಭ್ಯಗಚ್ಛತ ।। ೧-೩೨-೬

ಜನಮೇಜಯ! ಬ್ರಹ್ಮವಾದಿಗಳಲ್ಲಿ ಉತ್ಕೃಷ್ಟನೆಂದೆನಿಸಿದ್ದ ರಾಜನ ಕನ್ಯೆ ಈಲಿನಿಯನ್ನು ತಂಸುವು ಪತ್ನಿಯನ್ನಾಗಿ ಪಡೆದುಕೊಂಡನು.

ತಂಸೋಃ ಸುರೋಧೋ ರಾಜರ್ಷಿರ್ಧರ್ಮನೇತ್ರೋ ಮಹಾಯಶಾಃ ।
ಬ್ರಹ್ಮವಾದೀ ಪರಾಕ್ರಾಂತಸ್ತಸ್ಯ ಭಾರ್ಯೋಪದಾನವೀ ।। ೧-೩೨-೭

ತಂಸುವಿನ ಮಗನು ರಾಜರ್ಷಿ ಸುರೋಧನು. ಅವನು ಧರ್ಮನೇತ್ರನೆಂದೂ ಮಹಾಯಶಸ್ಸನ್ನು ಹೊಂದಿದ್ದನು. ಬ್ರಹ್ಮವಾದಿಯೂ ಪರಾಕ್ರಾಂತನೂ ಆಗಿದ್ದ ಅವನ ಪತ್ನಿಯು ಉಪದಾನವಿಯಾಗಿದ್ದಳು.

ಉಪದಾನವೀ ಸುತಾಽನ್ ಲೇಭೇ ಚತುರಸ್ತ್ವೈಲಿಕಾತ್ಮಜಾನ್ ।
ದುಷ್ಯಂತಮಥ ಸುಷ್ಮಂತಂ ಪ್ರವೀರಮನಘಂ ತಥಾ ।। ೧-೩೨-೮

ಉಪದಾನವಿಯು ನಾಲ್ವರು ಪುತ್ರರನ್ನು ಪಡೆದಳು: ದುಷ್ಯಂತ, ಸುಷ್ಮಂತ, ಪ್ರವೀರ, ಮತ್ತು ಅನಘ.

ದುಷ್ಯಂತಸ್ಯ ತು ದಾಯಾದೋ ಭರತೋ ನಾಮ ವೀರ್ಯವಾನ್ ।
ಸ ಸರ್ವದಮನೋ ನಾಮ ನಾಗಾಯುತಬಲೋ ಮಹಾನ್ ।। ೧-೩೨-೯

ದುಷ್ಯಂತನ ಪುತ್ರನು ಭರತನೆಂಬ ವೀರ್ಯವಾನನು. ಸಾವಿರ ಆನೆಗಳ ಬಲವಿದ್ದ ಆ ಮಹಾನ್ ಪುರುಷನು ಸರ್ವದಮನ ಎಂಬ ಹೆಸರನ್ನೂ ಪಡೆದಿದ್ದನು.

ಚಕ್ರವರ್ತೀ ಸುತೋ ಜಜ್ಞೇ ದುಷ್ಯಂತಸ್ಯ ಮಹಾತ್ಮನಃ ।
ಶಕುಂತಲಾಯಾಂ ಭರತೋ ಯಸ್ಯ ನಾಮ್ನಾ ಸ್ಥ ಭಾರತಾಃ ।। ೧-೩೨-೧೦

ಮಹಾತ್ಮ ದುಷ್ಯಂತನಿಗೆ ಶಕುಂತಲೆಯಲ್ಲಿ ಹುಟ್ಟಿದ್ದ ಮಗ ಭರತನಿಂದಲೇ ನಿಮಗೆ ಭಾರತರೆಂಬ ಹೆಸರು ಬಂದಿತು.

ದುಷ್ಯಂತಂ ಪ್ರತಿ ರಾಜಾನಂ ವಾಗುವಾಚಾಶರೀರಿಣೀ ।
ಮಾತಾ ಭಸ್ತ್ರಾ ಪಿತುಃ ಪುತ್ರೋ ಯೇನ ಜಾತಃ ಸ ಏವ ಸಃ ।। ೧-೩೨-೧೧

ರಾಜಾ ದುಷ್ಯಂತನಿಗೆ ಅಶರೀರ ವಾಣಿಯು ಹೀಗೆ ಹೇಳಿತ್ತು: “ಮಾತೆಯು ತೊಗಲಿನ ಚೀಲ. ಯಾವ ತಂದೆಯಿಂದ ಪುತ್ರನು ಹುಟ್ಟುತ್ತಾನೋ ಅವನೇ ಅವನು.

ಭರಸ್ವ ಪುತ್ರಂ ದುಷ್ಯಂತ ಮಾವಮಂಸ್ಥಾಃ ಶಕುಂತಲಾಮ್ ।
ರೇತೋಧಾಃ ಪುತ್ರ ಉನ್ನಯತಿ ನರದೇವ ಯಮಕ್ಷಯಾತ್ ।। ೧-೩೨-೧೨

ದುಷ್ಯಂತ! ಪುತ್ರನನ್ನು ಪಾಲಿಸು. ಶಕುಂತಲೆಯನ್ನು ಅವಮಾನಗೊಳಿಸಬೇಡ. ನರದೇವ! ತನ್ನದೇ ರೇತದಿಂದ ಹುಟ್ಟಿದ ಪುತ್ರನು ತಂದೆಯನ್ನು ಯಮಕ್ಷಯದಿಂದ ಉದ್ಧರಿಸುತ್ತಾನೆ.

ತ್ವಂ ಚಾಸ್ಯ ಧಾತಾ ಗರ್ಭಸ್ಯ ಸತ್ಯಮಾಹ ಶಕುಂತಲಾ ।
ಭರತಸ್ಯ ವಿನಷ್ಟೇಷು ತನಯೇಷು ಮಹೀಪತೇಃ ।। ೧-೩೨-೧೩

ಇವನು ಗರ್ಭವನ್ನಿತ್ತವನು ನೀನೇ. ಶಕುಂತಲೆಯು ಸತ್ಯವನ್ನೇ ಹೇಳಿದ್ದಾಳೆ.” ಮಹೀಪತಿ ಭರತನ ತನಯರು ವಿನಾಶಹೊಂದಿದರು.

ಮಾತೄಣಾಂ ತಾತ ಕೋಪೇನ ಮಯಾ ತೇ ಕತಿಥಂ ಪುರಾ ।
ಬೃಹಸ್ಪತೇರಾಂಗಿರಸಃ ಪುತ್ರೋ ರಾಜನ್ಮಹಾಮುನಿಃ ।
ಸಂಕ್ರಾಮಿತೋ ಭರದ್ವಾಜೋ ಮರುದ್ಭಿಃ ಋತುಭಿರ್ವಿಭುಃ ।। ೧-೩೨-೧೪

ಅಯ್ಯಾ! ಮಾತೃಗಳ ಕೋಪದಿಂದ ಹೀಗೆ ಆಗಿತ್ತು. ಇದರ ಕುರಿತು ನಾನು ನಿನಗೆ ಮೊದಲೇ ಹೇಳಿದ್ದೇನೆ. ರಾಜನ್! ಕ್ರತುವಿನಲ್ಲಿ ಮರುದ್ಗಣಗಳು ಅವನಿಗೆ ಆಂಗಿರಸ ಬೃಹಸ್ಪತಿಯ ಪುತ್ರ ಮಹಾಮುನಿ ಭರದ್ವಾಜನನ್ನೇ ಪುತ್ರನನ್ನಾಗಿ ಮಾಡಿ ಕೊಟ್ಟಿದ್ದರು.

ಅತ್ರೈವೋದಾಹರಂತೀಮಂ ಭರದ್ವಾಜಸ್ಯ ಧೀಮತಃ ।
ಧರ್ಮಸಂಕ್ರಮಣಂ ಚಾಪಿ ಮರುದ್ಭಿರ್ಭರತಾಯ ವೈ ।। ೧-೩೨-೧೫

ಮರುದ್ಗಣಗಳು ಧೀಮತ ಭರದ್ವಾಜನನ್ನು ಭರತನಿಗೆ ಕೊಟ್ಟ ಈ ವಿಷಯವನ್ನು ಧರ್ಮಸಂಕ್ರಮಣದ ಉದಾಹರಣೆಯಾಗಿ ಕೊಡುತ್ತಾರೆ.

ಅಯೋಜಯದ್ಭರದ್ವಾಜೋ ಮರುದ್ಭಿಃ ಕ್ರತುಭಿರ್ಹಿತಮ್ ।
ಪೂರ್ವಂ ತು ವಿತಥೇ ತಸ್ಯ ಕೃತೇ ವೈ ಪುತ್ರಜನ್ಮನಿ ।। ೧-೩೨-೧೬

ಭರದ್ವಾಜನು ಮರುದ್ಗಣಗಳೊಂದಿಗೆ ಭರತನ ಕ್ರತುವನ್ನು ಪೂರೈಸಿದನು. ಇದಕ್ಕೆ ಮೊದಲು ಭರತನ ಪುತ್ರಜನ್ಮದ ಕುರಿತಾದ ಎಲ್ಲ ಪ್ರಯತ್ನಗಳೂ ವಿತಥ (ವ್ಯರ್ಥ) ವಾಗಿದ್ದವು.

ತತೋಽಥ ವಿತಥೋ ನಾಮ ಭರದ್ವಾಜಸುತೋಽಭವತ್ ।
ತತೋಽಥ ವಿತಥೇ ಜಾತೇ ಭರತಸ್ತು ದಿವಂ ಯಯೌ ।। ೧-೩೨-೧೭

ಆದುದರಿಂದ ಭರದ್ವಾಜಸುತನು ವಿತಥ ಎಂಬ ಹೆಸರನ್ನು ಪಡೆದುಕೊಂಡನು. ವಿತಥನು ಹುಟ್ಟಲು ಭರತನು ಸ್ವರ್ಗಕ್ಕೆ ಹೋದನು.

ವಿತಥಂ ಚಾಭಿಷಿಚ್ಯಾಥ ಭರದ್ವಾಜೋ ವನಂ ಯಯೌ ।
ಸ ರಾಜಾ ವಿತಥಃ ಪುತ್ರಾಂಜನಯಾಮಾಸ ಪಂಚ ವೈ ।। ೧-೩೨-೧೮

ವಿತಥನನ್ನು ಅಭಿಷೇಕಿಸಿ ಭರದ್ವಾಜನು ವನಕ್ಕೆ ತೆರಳಿದನು. ರಾಜಾ ವಿತಥನು ಐವರು ಪುತ್ರರಿಗೆ ಜನ್ಮವಿತ್ತನು.

ಸುಹೋತ್ರಂ ಚ ಸುಹೋತಾರಂ ಗಯಂ ಗರ್ಗಂ ತಥೈವ ಚ ।
ಕಪಿಲಂ ಚ ಮಹಾತ್ಮಾನಂ ಸುಹೋತ್ರಸ್ಯ ಸುತದ್ವಯಮ್ ।। ೧-೩೨-೧೯

ಸುಹೋತ್ರ, ಸುಹೋತಾರ, ಗಯ, ಗರ್ಗ ಮತ್ತು ಕಪಿಲ. ಮಹಾತ್ಮ ಸುಹೋತ್ರನಿಗೆ ಈರ್ವರು ಪುತ್ರರಿದ್ದರು.

ಕಾಶಿಕಶ್ಚ ಮಹಾಸತ್ತ್ವಸ್ತಥಾ ಗೃತ್ಸಮತಿರ್ನೃಪಃ ।
ತಥಾ ಗೃತ್ಸಮತೇಃ ಪುತ್ರಾ ಬ್ರಾಹ್ಮಣಃ ಕ್ಷತ್ರಿಯಾ ವಿಶಃ ।। ೧-೩೨-೨೦

ಮಹಾಸತ್ತ್ವಯುತ ಕಾಶಿಕ ಮತ್ತು ನೃಪ ಗೃತ್ಸಮತಿ. ಗೃತ್ಸಮತಿಗೆ ಬ್ರಾಹ್ಮಣ-ಕ್ಷತ್ರಿಯ-ವೈಶ್ಯ ಪುತ್ರರಾದರು.

ಕಾಶಿಕಸ್ಯ ತು ಕಾಶೇಯಃ ಪುತ್ರೋ ದೀರ್ಘತಪಾಸ್ತಥಾ1
ಬಭೂವ ದೀರ್ಘತಪಸೋ ವಿದ್ವಾಂಧನ್ವಂತರಿಃ ಸುತಃ ।। ೧-೩೨–೨೧

ಕಾಶಿಕನಿಗೆ ಕಾಶೇಯ ಮತ್ತು ದೀರ್ಘತಪ ಎನ್ನುವ ಈರ್ವರು ಪುತ್ರರಾದರು. ವಿದ್ವಾನ್ ಧನ್ವಂತರಿರು ದೀರ್ಘತಪಸನ ಮಗನಾದನು.

ಧನ್ವಂತರೇಸ್ತು ತನಯಃ ಕೇತುಮಾನಿತಿ ವಿಶ್ರುತಃ ।
ಅಥ ಕೇತುಮತಃ ಪುತ್ರೋ ವೀರೋ ಭೀಮರಥೋ ನೃಪ ।। ೧-೩೨-೨೨

ಧನ್ವಂತರಿಯ ಮಗನು ಕೇತುಮಾನನೆಂದು ವಿಶ್ರುತನಾದನು. ಕೇತುಮಾನನ ಪುತ್ರನು ವೀರ ನೃಪ ಭೀಮರಥನು.

ಸುತೋ ಭೀಮರಥಸ್ಯಾಸೀದ್ದಿವೋದಾಸಃ ಪ್ರಜೇಶ್ವರಃ ।
ದಿವೋದಾಸ ಇತಿ ಖ್ಯಾತಃ ಸರ್ವರಕ್ಷೋವಿನಾಶನಃ ।। ೧-೩೨-೨೩

ಭೀಮರಥನ ಸುತನು ಪ್ರಜೇಶ್ವರ ದಿವೋದಾಸನಾಗಿದ್ದನು. ದಿವೋದಾಸನು ಸರ್ವರಾಕ್ಷಸರ ವಿನಾಶಕನೆಂದು ಖ್ಯಾತನಾಗಿದ್ದನು.

2ಏತಸ್ಮಿನ್ನೇವ ಕಾಲೇ ತು ಪುರೀಂ ವಾರಾಣಸೀಂ ನೃಪ ।
ಶೂನ್ಯಾಂ ನಿವೇಶಯಾಮಾಸ ಕ್ಷೇಮಕೋ ನಮ ರಾಕ್ಷಸಃ ।
ಶಪ್ತಾ ಹಿ ಸಾ ಮತಿಮತಾ ನಿಕುಂಭೇನ ಮಹಾತ್ಮನಾ ।
ಶೂನ್ಯಾ ವರ್ಷಸಹಸ್ರಂ ವೈ ಭವಿತ್ರೀತಿ ನರಾಧಿಪ ।। ೧-೩೨-೨೪

ನೃಪ! ಇದೇ ಕಾಲದಲ್ಲಿ ಶೂನ್ಯವಾಗಿದ್ದ ವಾರಾಣಸೀ ಪುರಿಯನ್ನು ಕ್ಷೇಮಕ ಎಂಬ ಹೆಸರಿನ ರಾಕ್ಷಸನು ವಾಸಿಸುತ್ತಿದ್ದನು. ನರಾಧಿಪ! ಮತಿವಂತ ಮಹಾತ್ಮ ನಿಕುಂಭನು ಆ ಪುರಿಗೆ ಸಹಸ್ರವರ್ಷಗಳ ಪರ್ಯಂತ ಶೂನ್ಯವಾಗಿರು ಎಂದು ಶಪಿಸಿದ್ದನು.

ತಸ್ಯಾಂ ತು ಶಪ್ತಮಾತ್ರಾಯಾಂ ದಿವೋದಾಸಃ ಪ್ರಜೇಶ್ವರಃ ।
ವಿಷಯಾಂತೇ ಪುರೀಂ ರಮ್ಯಾಂ ಗೋಮತ್ಯಾಂ ಸಂನ್ಯವೇಶಯತ್ ।। ೧-೩೨-೨೫

ಆ ಪುರಿಯು ಶಪಿತವಾದಾಗ ಪ್ರಜೇಶ್ವರ ದಿವೋದಾಸನು ರಾಜ್ಯದ ಗಡಿಯಲ್ಲಿ ಗೋಮತೀ ತೀರದಲ್ಲಿ ರಮ್ಯ ಪುರಿಯಲ್ಲಿ ವಾಸಿಸುತ್ತಿದ್ದನು.

ಭದ್ರಶ್ರೇಣ್ಯಸ್ಯ ಪೂರ್ವಂ ತು ಪುರೀ ವಾರಾಣಸೀ ಭವತ್ ।
ಯದುವಂಶಪ್ರಸೂತಸ್ಯ ತಪಸ್ಯಭಿರತಸ್ಯ ಚ ।। ೧-೩೨-೨೬

ಆ ಹಿಂದೆ ವಾರಾಣಸೀ ಪುರಿಯು ಯದುವಂಶಪ್ರಸೂತ ತಪೋನಿರತ ಭದ್ರಶ್ರೇಣ್ಯನದಾಗಿತ್ತು.

ಭದ್ರಶ್ರೇಣ್ಯಸ್ಯ ಪುತ್ರಾಣಾಂ ಶತಮುತ್ತಮಧನ್ವಿನಾಮ್ ।
ಹತ್ವಾ ನಿವೇಶಯಾಮಾಸ ದಿವೋದಾಸಃ ಪ್ರಜೇಶ್ವರಃ ।। ೧-೩೨-೨೭

ಭದ್ರಶ್ರೇಣ್ಯನ ನೂರು ಉತ್ತಮಧನ್ವೀ ಪುತ್ರರನ್ನು ಸಂಹರಿಸಿ ಪ್ರಜೇಶ್ವರ ದಿವೋದಾಸನು ಆ ಪುರಿಯಲ್ಲಿ ವಾಸಿಸುತ್ತಿದ್ದನು.

ದಿವೋದಾಸಸ್ಯ ಪುತ್ರಸ್ತು ವೀರೋ ರಾಜಾ ಪ್ರತರ್ದನಃ ।
ಪ್ರತರ್ದನಸ್ಯ ಪುತ್ರೌ ದ್ವೌ ವತ್ಸೋ ಭಾರ್ಗಸ್ತಥೈವ ಚ ।। ೧-೩೨-೨೮

ದಿವೋದಾಸನ ಪುತ್ರನಾದರೋ ವೀರ ರಾಜಾ ಪ್ರತರ್ದನನು. ಪ್ರತರ್ದನನನಿಗೆ ಈರ್ವರು ಪುತ್ರರಿದ್ದರು: ವತ್ಸ ಮತ್ತು ಭಾರ್ಗ.

ಅಲರ್ಕೋ ರಾಜಪುತ್ರಸ್ತು ರಾಜಾ ಸನ್ನತಿಮಾನ್ಭುವಿ ।
ಹೈಹಯಸ್ಯ ತು ದಾಯಾದ್ಯಂ ಹೃತವಾನ್ವೈ ಮಹೀಪತಿಃ ।। ೧-೩೨-೨೯

ವತ್ಸನ ರಾಜಪುತ್ರ ಅಲರ್ಕನು ಭುವಿಯಲ್ಲಿ ರಾಜಾ ಸನ್ನತಿಮಾನನಾದನು. ಆ ಮಹೀಪತಿಯು ಹೈಹಯನ ದಾಯಾದ್ಯವನ್ನು ಅಪಹರಿಸಿದ್ದನು.

ಆಜಹ್ರೇ ಪಿತೄದಾಯಾದ್ಯಂ ದಿವೋದಾಸಹೃತಂ ಬಲಾತ್ ।
ಭದ್ರಶ್ರೇಣ್ಯಸ್ಯ ಪುತ್ರೇಣ ದುರ್ದಮೇನ ಮಹಾತ್ಮನಾ ।
ದಿವೋದಾಸೇನ ಬಾಲೇತಿ ಘೃಣಯಾ ಪರಿವರ್ಜಿತಃ ।। ೧-೩೨-೩೦

ದಿವೋದಾಸನು ಅಪಹರಿಸಿದ ಪಿತೃದಾಯಾದ್ಯವನ್ನು ಭದಶ್ರೇಷ್ನ್ಯನ ಪುತ್ರ ಮಹಾತ್ಮಾ ದುರ್ದಮನು ಹಿಂತೆಗೆದುಕೊಂಡನು. ಬಾಲಕನೆಂದು ತಿಳಿದು ಕರುಣೆಯಿಂದ ದಿವೋದಾಸನು ಅವನನ್ನು ಜೀವಂತ ಬಿಟ್ಟುಬಿಟ್ಟಿದ್ದನು.

ಅಷ್ಟಾರಥೋ ನಾಮ ನೃಪಃ ಸುತೋ ಭೀಮರಥಸ್ಯ ವೈ।
ತೇನ ಪುತ್ರೇಷು ಬಾಲೇಷು ಪ್ರಹೃತಂ ತಸ್ಯ ಭಾರತ ।। ೧-೩೨-೩೧

ಭಾರತ! ಭೀಮರಥನಿಗೆ ಅಷ್ಟಾರಥನೆಂಬ ನೃಪಸುತನೂ ಇದ್ದನು. ಅವನ ಪುತ್ರರು ಬಾಲ್ಯದಲ್ಲಿಯೇ ಅಪಹೃತರಾಗಿದ್ದರು.

ವೈರಸ್ಯಾಂತಂ ಮಹಾರಾಜ ಕ್ಷತ್ರಿಯೇಣ ವಿಧಿತ್ಸತಾ ।
ಅಲರ್ಕಃ ಕಾಶಿರಾಜಸ್ತು ಬ್ರಹ್ಮಣ್ಯಃ ಸತ್ಯಸಂಗರಃ ।। ೧-೩೨-೩೨

ಮಹಾರಾಜ! ಈ ವೈರದ ಅಂತ್ಯದಲ್ಲಿ ಕ್ಷತ್ರಿಯ ವಿಧಿಯಂತೆ ಬ್ರಹ್ಮಣ್ಯ ಸತ್ಯಸಂಗರ ಅಲರ್ಕನು ಕಾಶಿರಾಜನಾದನು.

ಷಷ್ಟಿವರ್ಷಸಹಸ್ರಾಣಿ ಷಷ್ಟಿವರ್ಷಶತಾನಿ ಚ ।
ತಸ್ಯಾಽಽಸೀತ್ಸುಮಹದ್ರಾಜ್ಯಂ ರೂಪಯೌವನಶಾಲಿನಃ ।। ೧-೩೨-೩೩

ರೂಪಯೌವನಶಾಲಿಯಾದ ಅವನು ಅರವತ್ತು ಸಾವಿರದ ಆರುನೂರು ವರ್ಷಗಳ ಪರ್ಯಂತ ಆ ಮಹಾರಾಜ್ಯವನ್ನು ಆಳಿದನು.

ಯುವಾ ರೂಪೇಣ ಸಂಪನ್ನ ಆಸೀತ್ಕಾಶಿಕುಲೋದ್ವಹಃ ।
ಲೋಪಾಮುದ್ರಾಪ್ರಸಾದೇನ ಪರಮಾಯುರವಾಪ ಸಃ ।। ೧-೩೨-೩೪

ಆ ಕಾಶಿಕುಲೋದ್ವಹನು ಯೌವನ ರೂಪಗಳಿಂದ ಸಂಪನ್ನನಾಗಿದ್ದನು. ಲೋಪಾಮುದ್ರೆಯ ಪ್ರಸಾದದಿಂದ ದೀರ್ಘ ಆಯುಸ್ಸನ್ನೂ ಪಡೆದಿದ್ದನು.

ವಯಸೋಽಂತೇ ಮಹಾಬಾಹುರ್ಹತ್ವಾ ಕ್ಷೇಮಕರಾಕ್ಷಸಮ್ ।
ಶೂನ್ಯಾಂ ನಿವೇಶಯಾಮಾಸ ಪುರೀಂ ವಾರಾಣಸೀಂ ನೃಪ ।। ೧-೩೨-೩೫

ಅಂತ್ಯದಲ್ಲಿ ಆ ಮಹಾಬಾಹು ನೃಪನು ಕ್ಷೇಮಕ ರಾಕ್ಷಸನನ್ನು ಸಂಹರಿಸಿ ಶೂನ್ಯ ವಾರಾಣಸೀ ಪುರಿಯಲ್ಲಿ ವಾಸಿಸತೊಡಗಿದನು.

ಅಲರ್ಕಸ್ಯ ತು ದಾಯಾದಃ ಸುನೀಥೋ ನಾಮ ಪಾರ್ಥಿವಃ ।
ಸುನೀಥಸ್ಯ ತು ದಾಯಾದಃ ಕ್ಷೇಮ್ಯೋ ನಾಮ ಮಹಾಯಶಾಃ ।। ೧-೩೨-೩೬

ಅಲರ್ಕನ ಮಗನು ಸುನೀಥ ಎಂಬ ಹೆಸರಿನ ಪಾರ್ಥಿವನು. ಸುನೀಥನ ಮಗನು ಕ್ಷೇಮ ಎಂಬ ಮಹಾಯಶಸ್ವಿಯು.

ಕ್ಷೇಮ್ಯಸ್ಯ ಕೇತುಮಾನ್ಪುತ್ರೋ ವರ್ಷಕೇತುಸ್ತತೋಽಭವತ್ ।
ವರ್ಷಕೇತೋಸ್ತು ದಾಯಾದೋ ವಿಭುರ್ನಾಮ ಪ್ರಜೇಶ್ವರಃ ।। ೧-೩೨-೩೭

ಕ್ಷೇಮನ ಪುತ್ರನು ಕೇತುಮಾನನು. ವರ್ಷಕೇತುವು ಅವನ ಪುತ್ರನು. ವರ್ಷಕೇತುವಿನ ಪುತ್ರನು ವಿಭು ಎಂಬ ಹೆಸರಿನ ಪ್ರಜೇಶ್ವರನು.

ಆನರ್ತಸ್ತು ವಿಭೋಃ ಪುತ್ರಃ ಸುಕುಮಾರಸ್ತತೋಽಭವತ್ ।
ಪುತ್ರಸ್ತು ಸುಕುಮಾರಸ್ಯ ಸತ್ಯಕೇತುರ್ಮಹಾರಥಃ ।। ೧-೩೨-೩೮

ಆನರ್ತನು ವಿಭುವಿನ ಪುತ್ರನು. ಅವನ ಪುತ್ರನು ಸುಕುಮಾರ. ಸುಕುಮಾರನ ಪುತ್ರನು ಮಹಾರಥ ಸತ್ಯಕೇತು.

ತತೋಽಭವನ್ಮಹಾತೇಜಾ ರಾಜಾ ಪರಮಧಾರ್ಮಿಕಃ ।
ವತ್ಸಸ್ಯ ವತ್ಸಭೂಮಿಸ್ತು ಭಾರ್ಗಭೂಮಿಸ್ತು ಭಾರ್ಗವಾತ್ ।। ೧-೩೨-೩೯

ಅವನು ಮಹಾತೇಜಸ್ವೀ ಪರಮಧಾರ್ಮಿಕ ರಾಜನಾಗಿದ್ದನು. ವತ್ಸನಿಗೆ ವತ್ಸಭೂಮಿ ಮತ್ತು ಭಾರ್ಗನಿಗೆ ಭಾರ್ಗಭೂಮಿಯರು ಮಕ್ಕಳಾದರು.

ಏತೇ ತ್ವಂಗಿರಸಃ ಪುತ್ರಾ ಜಾತಾ ವಂಶೇಽಥ ಭಾರ್ಗವೇ ।
ಬ್ರಾಹ್ಮಣಾಃ ಕ್ಷತ್ರಿಯಾ ವೈಶ್ಯಾಃ ಶೂದ್ರಾಶ್ಚ ಭರತರ್ಷಭ ।। ೧-೩೨-೪೦

ಇವರು ಅಂಗಿರಸ ಗೋತ್ರದಲ್ಲಿ ಭಾರ್ಗವ ವಂಶದಲ್ಲಿ ಆದ ಗಾಲವನ ವಂಶಜರು. ಭರತರ್ಷಭ! ಅವರಿಗೆ ಸಹಸ್ರಾರು ಬ್ರಾಹ್ಮಣ, ಕ್ಷತ್ರಿಯ, ವೈಶ್ಯ ಮತ್ತು ಶೂದ್ರ ಪುತ್ರರಾದರು.

3ಸುಹೋತ್ರಸ್ಯ ಬೃಹತ್ಪುತ್ರೋ ಬೃಹತಸ್ತನಯಾಸ್ತ್ರಯಃ ।
ಅಜಮೀಢೋ ದ್ವಿಮೀಢಶ್ಚ ಪುರುಮೀಢಶ್ಚ ವೀರ್ಯವಾನ್ ।। ೧-೩೨-೪೧

ಸುಹೋತ್ರನ ಮಗನು ಬೃಹತ್. ಬೃಹತನಿಗೆ ಮೂವರು ಪುತ್ರರು: ಅಜಮೀಢ, ದ್ವಿಮೀಢ ಮತ್ತು ವೀರ್ಯವಾನ್ ಪುರುಮೀಢ.

ಅಜಮೀಢಸ್ಯ ಪತ್ನ್ಯಸ್ತು ತಿಸ್ರೋ ವೈ ಯಶಸಾನ್ವಿತಾಃ ।
ನೀಲಿನೀ ಕೇಶಿನೀ ಚೈವ ಧೂಮಿನೀ ಚ ವರಾಂಗನಾ ।। ೧-೩೨-೪೨

ಅಜಮೀಢನಿಗೆ ಮೂವರು ಯಶಸಾನ್ವಿತ ಪತ್ನಿಯರಿದ್ದರು: ನೀಲಿನೀ, ಕೇಶಿನೀ ಮತ್ತು ವರಾಂಗನೆ ಧೂಮಿನೀ.

ಅಜಮೀಢಸ್ಯ ಕೇಶಿನ್ಯಾಂ ಜಜ್ಞೇ ಜಹ್ನುಃ ಪ್ರತಾಪವಾನ್ ।
ಆಜಹ್ರೇ ಯೋ ಮಹಾಸತ್ರಂ ಸರ್ವಮೇಧಂ ಮಹಾಮಖಮ್ ।। ೧-೩೨-೪೩

ಅಜಮೀಢನಿಗೆ ಕೇಶಿನಿಯಲ್ಲಿ ಪ್ರತಾಪವಾನ್ ಜಹ್ನುವು ಹುಟ್ಟಿದನು. ಅವನು ಮಹಾಸತ್ರ ಮಹಾಮಖ ಸರ್ವಮೇಧವನ್ನು ಯಜಿಸಿದನು.

ಪತಿಲೋಭೇನ ಯಂ ಗಂಗಾ ವಿನೀತಾಭಿಸಸಾರ ಹ ।
ನೇಚ್ಛತಃ ಪ್ಲಾವಯಾಮಾಸ ತಸ್ಯ ಗಂಗಾಥ ತತ್ಸದಃ ।। ೧-೩೨-೪೪

ಅವನನ್ನು ಪತಿಯನ್ನಾಗಿ ಬಯಸಿ ಗಂಗೆಯು ವಿನೀತಳಾಗಿ ಅವನ ಬಳಿಸಾರಿದಾಗ ಅವನು ಅವಳನ್ನು ಇಷ್ಟಪಡದಿರಲು ಗಂಗೆಯು ಆ ಸದಸ್ಸನ್ನು ತನ್ನ ಪ್ರವಾಹದಲ್ಲಿ ಮುಳುಗಿಸಿದಳು.

ಸ ತಯಾ ಪ್ಲಾವಿತಂ ದೃಷ್ಟ್ವಾ ಯಜ್ಞವಾಟಂ ಪರಂತಪ ।
ಜಹ್ನುರಪ್ಯಬ್ರವೀದ್ಗಂಗಾಂ ಕ್ರುದ್ಧೋ ಭರತಸತ್ತಮ ।। ೧-೩೨-೪೫

ಭರತಸತ್ತಮ! ಅವಳು ಯಜ್ಞವಾಟಿಕೆಯನ್ನು ಮುಳುಗಿಸುತ್ತಿರುವುದನ್ನು ಕಂಡು ಪರಂತಪ ಜಹ್ನುವು ಕ್ರುದ್ಧನಾಗಿ ಗಂಗೆಗೆ ಹೇಳಿದನು:

ಏಷ ತೇ ತ್ರಿಷು ಲೋಕೇಷು ಸಂಕ್ಷಿಪ್ಯಾಪಃ ಪಿಬಾಮ್ಯಹಮ್ ।
ಅಸ್ಯ ಗಂಗೇಽವಲೇಪಸ್ಯ ಸದ್ಯಃ ಫಲಮವಾಪ್ನುಹಿ ।। ೧-೩೨-೪೬

“ಗಂಗೇ! ಈ ಮೂರು ಲೋಕಗಳಲ್ಲಿರುವ ಎಲ್ಲ ನೀರನ್ನೂ ಒಂದೇ ಗುಟುಕಿನಲ್ಲಿ ನಾನು ಕುಡಿಯಬಲ್ಲೆನು. ನನ್ನನ್ನು ಆಕ್ರಮಣಿಸಿದ ನೀನು ಸದ್ಯವೇ ಅದರ ಫಲವನ್ನು ಅನುಭವಿಸುತ್ತೀಯೆ.”

ತತಃ ಪೀತಾಂ ಮಹಾತ್ಮಾನೋ ಗಂಗಾಂ ದೃಷ್ಟ್ವಾ ಮಹರ್ಷಯಃ ।
ಉಪನಿನ್ಯುರ್ಮಹಾಭಾಗಾ ದುಹಿತೃತ್ವಾಯ ಜಾಹ್ನವೀಮ್ ।। ೧-೩೨-೪೭

ಆಗ ಆ ಮಹಾತ್ಮನು ಗಂಗೆಯನ್ನು ಕುಡಿದುದನ್ನು ನೋಡಿ ಮಹರ್ಷಿಗಳು ಅವನ ಮೊರೆಹೊಗಲು ಅವನು ಮಹಾಭಾಗೆ ಗಂಗೆಯನ್ನು ಮಗಳನ್ನಾಗಿ ಮಾಡಿಕೊಂಡನು. ಅವಳು ಜಾಹ್ನವಿಯಾದಳು.

ಯುವನಾಶ್ವಸ್ಯ ಪುತ್ರೀಂ ತು ಕಾವೇರೀಂ ಜಹ್ನುರಾವಹತ್ ।
ಗಂಗಾಶಾಪೇನ ದೇಹಾರ್ಧಂ ಯಸ್ಯಾಃ ಪಶ್ಚಾನ್ನದೀಕೃತಮ್ ।। ೧-೩೨-೪೮

ಯುವನಾಶ್ವನ ಪುತ್ರಿ ಕಾವೇರಿಯನ್ನು ಜಹ್ನುವು ಮದುವೆಯಾದನು. ನಂತರ ಗಂಗೆಯ ಶಾಪದಿಂದ ಅವಳ ದೇಹಾರ್ಧವು ನದಿಯಾಗಿ ಹರಿಯಿತು.

ಜಹ್ನೋಸ್ತು ದಯಿತಃ ಪುತ್ರಸ್ತ್ವಜಕೋ ನಾಮ ವೀರ್ಯವಾನ್ ।
ಅಜಕಸ್ಯ ತು ದಾಯಾದೋ ಬಲಾಕಾಶ್ವೋ ಮಹೀಪತಿಃ ।। ೧-೩೨-೪೯

ಜಹ್ನುವಿನ ಪ್ರಿಯ ಪುತ್ರನು ಅಜಕ ಎಂಬ ವೀರ್ಯವಂತನು. ಅಜಕನ ಮಗನು ಮಹೀಪತಿ ಬಲಾಕಾಶ್ವ.

ಬಭೂವ ಮೃಗಯಾಶೀಲಃ ಕುಶಿಕಸ್ತಸ್ಯ ಚಾತ್ಮಜಃ ।
ಪಹ್ಲವೈಃ ಸಹ ಸಂರುದ್ಧೋ ರಾಜಾ ವನಚರೈಸ್ತದಾ ।। ೧-೩೨-೫೦

ಅವನ ಮಗ ಕುಶಿಕನು ಬೇಟೆಯಲ್ಲಿ ಆಸಕ್ತನಾಗಿದ್ದನು. ಆ ರಾಜನು ವನಚರ ಪಹ್ಲವರೊಂದಿಗೆ ವೈರವನ್ನು ಕಟ್ಟಿಕೊಂಡನು.

ಕುಶಿಕಸ್ತು ತಪಸ್ತೇಪೇ ಪುತ್ರಮಿಂದ್ರಸಮಂ ಪ್ರಭುಃ ।
ಲಭೇಯಮಿತಿ ತಂ ಶಕ್ರಸ್ತ್ರಾಸಾದಭ್ಯೇತ್ಯ ಜಜ್ಞಿವಾನ್ ।। ೧-೩೨-೫೧

ಪ್ರಭು ಕುಶಿಕನಾದರೋ ಇಂದ್ರಸಮ ಪುತ್ರನನ್ನು ಪಡೆಯಲೋಸುಗ ತಪಸ್ಸನ್ನು ತಪಿಸಿದನು. ಅವನಿಗೆ ಶಕ್ರನೇ ಮಗನಾಗಿ ಜನಿಸಿದನು.

ಸ ಗಾಧಿರಭವದ್ರಾಜಾ ಮಘವಾನ್ಕೌಶಿಕಃ ಸ್ವಯಮ್ ।
ವಿಶ್ವಾಮಿತ್ರಸ್ತು ಗಾಧೇಯೋ ರಾಜಾ ವಿಶ್ವರಥಸ್ತದಾ ।। ೧-೩೨-೫೨
ವಿಶ್ವಕೃದ್ವಿಶ್ವಜಿಚ್ಚೈವ ತಥಾ ಸತ್ಯವತೀ ನೃಪ ।
ಋಚೀಕಾಜ್ಜಮದಗ್ನಿಸ್ತು ಸತ್ಯವತ್ಯಾಮಜಾಯತ ।। ೧-೩೨-೫೩

ನೃಪ! ರಾಜನ್! ಸ್ವಯಂ ಮಘವಾನನೇ ಕೌಶಿಕ ರಾಜಾ ಗಾಧಿಯಾದನು. ಗಾಧಿಗೆ ವಿಶ್ವಾಮಿತ್ರ, ವಿಶ್ವರಥ, ವಿಶ್ವಕೃತ್, ಮತ್ತು ವಿಶ್ವಜಿತ್ ಹಾಗೂ ಸತ್ಯವತೀ ಎಂಬ ಮಕ್ಕಳಾದರು. ಸತ್ಯವತಿಯಲ್ಲಿ ಋಚೀಕನಿಗೆ ಜಮದಗ್ನಿಯು ಹುಟ್ಟಿದನು.

ವಿಶ್ವಾಮಿತ್ರಸ್ಯ ತು ಸುತಾ ದೇವರಾತಾದಯಃ ಸ್ಮೃತಾಃ ।
ಪ್ರಖ್ಯಾತಾಸ್ತ್ರಿಷು ಲೋಕೇಷು ತೇಷಾಂ ನಾಮಾನಿ ಮೇ ಶೃಣು ।। ೧-೩೨-೫೪

ದೇವರಾತ ಮೊದಲಾದವರು ವಿಶ್ವಾಮಿತ್ರನ ಮಕ್ಕಳೆಂದು ಪ್ರತೀತಿಯಿದೆ. ಮೂರು ಲೋಕಗಳಲ್ಲಿಯೂ ಪ್ರಖ್ಯಾತರಾದ ಅವರ ಹೆಸರುಗಳನ್ನು ನನ್ನಿಂದ ಕೇಳು.

ದೇವಶ್ರವಾಃ ಕತಿಶ್ಚೈವ ಯಸ್ಮಾತ್ಕಾತ್ಯಾಯನಾಃ ಸ್ಮೃತಾಃ ।
ಶಾಲಾವತ್ಯಾ ಹಿರಣ್ಯಾಕ್ಷೋ ರೇಣೋರ್ಜಜ್ಞೇಽಥ ರೇಣುಮಾನ್ ।। ೧-೩೨-೫೫
ಸಾಂಕೃತ್ಯೋ ಗಾಲವೋ ರಾಜನ್ಮೌದ್ಗಲ್ಯಶ್ಚೇತಿ ವಿಶ್ರುತಾಃ ।
ತೇಷಾಂ ಖ್ಯಾತಾನಿ ಗೋತ್ರಾಣಿ ಕೌಶಿಕಾನಾಂ ಮಹಾತ್ಮಹಾಮ್ ।। ೧-೩೨-೫೬
ಪಾಣಿನೋ ಬಭ್ರವಶ್ಚೈವ ಧ್ಯಾನಜಪ್ಯಾಸ್ತಥೈವ ಚ ।
ಪಾರ್ಥಿವಾ ದೇವರಾತಾಶ್ಚ ಶಾಲಂಕಾಯನಸೌಶ್ರವಾಃ ।। ೧-೩೨-೫೭
ಲೌಹಿತ್ಯಾ ಯಾಮದೂತಾಶ್ಚ ತಥಾ ಕಾರೀಷಯಃ ಸ್ಮೃತಾಃ ।
ವಿಶ್ರುತಾಃ ಕೌಶಿಕಾ ರಾಜಂಸ್ತಥಾನ್ಯೇ ಸೈಂಧವಾಯನಾಃ ।। ೧-೩೨-೫೮
ಋಷ್ಯಂತರವಿವಾಹ್ಯಾಶ್ಚ ಕೌಶಿಕಾ ಬಹವಃ ಸ್ಮೃತಾಃ ।
ಪೌರವಸ್ಯ ಮಹಾರಾಜ ಬ್ರಹ್ಮರ್ಷೇಃ ಕೌಶಿಕಸ್ಯ ಹ ।। ೧-೩೨-೫೯
ಸಂಬಂಧೋ ಹ್ಯಸ್ಯ ವಂಶೇಽಸ್ಮಿನ್ಬ್ರಹ್ಮಕ್ಷತ್ರಸ್ಯ ವಿಶ್ರುತಃ ।
ವಿಶ್ವಾಮಿತ್ರಾತ್ಮಜಾನಾಂ ತು ಶುನಃಶೇಪೋಽಗ್ರಜಃ ಸ್ಮೃತಃ ।। ೧-೩೨-೬೦
ಭಾರ್ಗವಃ ಕೌಶಿಕತ್ವಂ ಹಿ ಪ್ರಾಪ್ತಃ ಸ ಮುನಿಸತ್ತಮಃ ।
ದೇವರಾತಾದಯಶ್ಚಾನ್ಯೇ ವಿಶ್ವಾಮಿತ್ರಸ್ಯ ವೈ ಸುತಾಃ ।। ೧-೩೨-೬೧
ದೃಷದ್ವತೀಸುತಶ್ಚಾಪಿ ವಿಶ್ವಾಮಿತ್ರಾದಥಾಷ್ಟಕಃ ।
ಅಷ್ಟಕಸ್ಯ ಸುತೋ ಲೌಹಿಃ ಪ್ರೋಕ್ತೋ ಜಹ್ನುಗಣೋ ಮಯಾ ।। ೧-೩೨-೬೨
ಆಜಮೀಢೋಽಪರೋ ವಂಶಃ ಶ್ರೂಯತಾಂ ಪುರುಷರ್ಷಭ ।
ಅಜಮೀಢಸ್ಯ ನೀಲಿನ್ಯೋ ಸುಶಾಂತಿರುದಪದ್ಯತ ।। ೧-೩೨-೬೩

ಭರತರ್ಷಭ! ಅಜಮೀಢನೆಂಬ ಇನ್ನೊಬ್ಬ ರಾಜನ ವಂಶದ ವರ್ಣನೆಯನ್ನು ಕೇಳು. ಅಜಮೀಢನಿಗೆ ನೀಲಿನಿಯಲ್ಲಿ ಸುಶಾಂತಿಯು ಹುಟ್ಟಿದನು.

ಪುರುಜಾತಿಃ ಸುಶಾಂತೇಸ್ತು ವಾಹ್ಯಾಶ್ವಃ ಪುರುಜಾತಿತಃ ।
ವಾಹ್ಯಾಶ್ವತನಯಾಃ ಪಂಚ ಬಭೂವುರಮರೋಪಮಾಃ ।। ೧-೩೨-೬೪

ಸುಶಾಂತಿಯಲ್ಲಿ ಪುರುಜಾತಿ ಮತ್ತು ಪುರುಜಾತಿಯಲ್ಲಿ ವಾಹ್ಯಾಶ್ವನು ಹುಟ್ಟಿದರು. ವಾಹ್ವಾಶ್ವನಿಗೆ ಅಮರೋಪಮ ಐವರು ತನಯರಿದ್ದರು.

ಮುದ್ಗಲಃ ಸೃಂಜಯಶ್ಚೈವ ರಾಜಾ ಬೃಹದಿಷುಃ ಸ್ಮೃತಃ ।
ಯವೀನರಸ್ಚ ವಿಕ್ರಾಂತಃ ಕೃಮಿಲಾಶ್ವಶ್ಚ ಪಂಚಮಃ ।। ೧-೩೨-೬೫

ಮುದ್ಗಲ, ಸೃಂಜಯ, ರಾಜಾ ಬೃಹದಿಷು, ಯವೀನರ ಮತ್ತು ಐದನೆಯವನು ವಿಕ್ರಾಂತ ಕೃಮಿಲಾಶ್ವ.

ಪಂಚೈತೇ ರಕ್ಷಣಾಯಾಲಂ ದೇಶಾನಾಮಿತಿ ವಿಶ್ರುತಾಃ ।
ಪಂಚಾನಾಂ ವಿದ್ಧಿ ಪಂಚಾಲಾನ್ಸ್ಫೀತೈರ್ಜನಪದೈರ್ವೄತಾನ್ ।। ೧-೩೨-೬೬

ಈ ಐವರೂ ದೇಶಗಳನ್ನು ರಕ್ಷಿಸುವುದರಲ್ಲಿ ಅಲಂ ಅರ್ಥಾತ್ ಸಮರ್ಥರೆಂದು ವಿಶ್ರುತರಾಗಿದ್ದರು. ಆ ಐವರ ಜನಪದಗಳು ಸೇರಿ ಪಾಂಚಾಲವೆನಿಸಿತು ಎಂದು ತಿಳಿದುಕೋ.

ಅಲಂ ಸಂರಕ್ಷಣಂ ತೇಷಾಂ ಪಂಚಾಲಾ ಇತಿ ವಿಶ್ರುತಾಃ ।
ಮುದ್ಗಲಸ್ಯ ತು ದಾಯಾದೋ ಮೌದ್ಗಲ್ಯಃ ಸುಮಹಾಯಶಾಃ ।। ೧-೩೨-೬೭

ಸಂರಕ್ಷಣೆಯ ಸಮರ್ಥರಾಗಿದ್ದ ಅವರು ಪಾಂಚಾಲರೆಂದೇ ವಿಶ್ರುತರಾದರು. ಮುದ್ಗಲನ ಮಗ ಮೌದ್ಗಲ್ಯನಾದರೋ ಮಹಾಯಶಸ್ವಿಯಾಗಿದ್ದನು.

ಸರ್ವ ಏತೇ ಮಹಾತ್ಮಾನಃ ಕ್ಷತ್ರೋಪೇತಾ ದ್ವಿಜಾತಯಃ ।
ಏತೇ ಹ್ಯಂಗಿರಸಃ ಪಕ್ಷಂ ಸಂಶ್ರಿತಾಃ ಕಣ್ವಮೌದ್ಗಲಾಃ ।। ೧-೩೨-೬೮

ಈ ಎಲ್ಲ ಮಹಾತ್ಮರೂ ಕ್ಷತ್ರಧರ್ಮೋಪೇತ ಬ್ರಾಹ್ಮಣರಾಗಿದ್ದರು. ಅಂಗಿರಸನ ಪಕ್ಷದವರಾದ ಇವರು ಒಟ್ಟಿಗೇ ಕಣ್ವ-ಮೌದ್ಗಲರೆಂದು ಕರೆಯಲ್ಪಟ್ಟಿದ್ದರು.

ಮೌದ್ಗಲ್ಯಸ್ಯ ಸುತೋ ಜ್ಯೇಷ್ಠೋ ಬ್ರಹ್ಮರ್ಷಿಃ ಸುಮಹಾಯಶಾಃ ।
ಇಂದ್ರಸೇನೋ ಯತೋ ಗರ್ಭಂ ವಧ್ರ್ಯಶ್ವಂ ಪ್ರತ್ಯಪದ್ಯತ ।। ೧-೩೨-೬೯

ಮೌದ್ಗಲ್ಯನ ಜ್ಯೇಷ್ಠ ಪುತ್ರನು ಬ್ರಹ್ಮರ್ಷಿ ಸುಮಹಾಯಶಸ್ವೀ ಇಂದ್ರಸೇನನಾಗಿದ್ದನು. ಅವನಿಂದ ವೃಧ್ರ್ಯಶ್ವನು ಜನಿಸಿದನು.

ವೃಧ್ರ್ಯಶ್ವಾನ್ಮಿಥುನಂ ಜಜ್ಞೇ ಮೇನಕಾಯಾಮಿತಿ ಶ್ರುತಿಃ ।
ದಿವೋದಾಸಶ್ಚ ರಾಜರ್ಷಿರಹಲ್ಯಾ ಚ ಯಶಸ್ವಿನೀ ।। ೧-೩೨-೭೦

ವೃಧ್ರ್ಯಶ್ವನಿಗೆ ಮೇನಕೆಯಲ್ಲಿ ಅವಳಿ-ಜವಳಿ ಮಕ್ಕಳು ಜನಿಸಿದರೆಂದು ಕೇಳಿದ್ದೇವೆ: ರಾಜರ್ಷಿ ದಿವೋದಾಸ ಮತ್ತು ಯಶಸ್ವಿನೀ ಅಹಲ್ಯಾ.

ಶರದ್ವತಸ್ಯ ದಾಯಾದಮಹಲ್ಯಾ ಸಮಸೂಯತ ।
ಶತಾನಂದಮೃಷಿಶ್ರೇಷ್ಠಂ ತಸ್ಯಾಪಿ ಸುಮಹಾಯಶಾಃ ।। ೧-೩೨-೭೧

ಮಹಾಯಶಸ್ವೀ ಅಹಲ್ಯೆಯು ಶರದ್ವತ (ಗೌತಮ) ನ ಮಗ ಋಷಿಶ್ರೇಷ್ಠ ಶತಾನಂದನಿಗೆ ಜನ್ಮವಿತ್ತಳು.

ಪುತ್ರಃ ಸತ್ಯಧೃತಿರ್ನಾಮ ಧನುರ್ವೇದಸ್ಯ ಪಾರಗಃ ।
ತಸ್ಯ ಸತ್ಯಧೃತೇ ರೇತೋ ದೃಷ್ಟ್ವಾಪ್ಸರಸಮಗ್ರತಃ ।। ೧-೩೨-೭೨
ಅವಸ್ಕನ್ನಂ ಶರಸ್ತಂಬೇ ಮಿಥುನಂ ಸಮಪದ್ಯತ ।

ಪುತ್ರ ಸತ್ಯಧೃತಿ4 ಎಂಬ ಹೆಸರಿನ ಶತಾನಂದನ ಪುತ್ರನು ಧನುರ್ವೇದಪಾರಂಗತನಾಗಿದ್ದನು. ಎದುರಾದ ಅಪ್ಸರೆಯನ್ನು ನೋಡಿ ಸತ್ಯಧೃತಿಯ ವೀರ್ಯವು ಶರಸ್ತಂಬದಲ್ಲಿ ಸ್ಕಲನವಾಗಲು, ಅದರಿಂದ ಒಂದು ಅವಳಿ ಮಕ್ಕಳು ಹುಟ್ಟಿದರು.

ಕೃಪಯಾ ತಚ್ಚ ಜಗ್ರಾಹ ಶಂತನುರ್ಮೃಗಯಾಂ ಗತಃ ।। ೧-೩೨-೭೩
ಕೃಪಃ ಸ್ಮೃತಃ ಸ ವೈ ತಸ್ಮಾದ್ಗೌತಮೀ ಚ ಕೃಪೀ ತಥಾ ।
ಏತೇ ಶಾರದ್ವತಾಃ ಪ್ರೋಕ್ತಾ ಏತೇ ತೇ ಗೌತಮಾಃ ಸ್ಮೃತಾಃ ।। ೧-೩೨-೭೪

ಬೇಟೆಗೆಂದು ಹೋಗಿದ್ದ ಶಂತನುವು ಅವರನ್ನು ಕೃಪೆಯಿಂದ ಸ್ವೀಕರಿಸಿದನು. ಅವನೇ ಕೃಪನೆಂದಾದನು. ಅವಳು ಗೌತಮೀ ಕೃಪಿಯಾದಳು. ಇವರು ಶಾರದ್ವತರೆಂದೂ ಗೌತಮರೆಂದೂ ಕರೆಯಲ್ಪಟ್ಟರು.

ಅತ ಊರ್ಧ್ವಂ ಪ್ರವಕ್ಷ್ಯಾಮಿ ದಿವೋದಾಸಸ್ಯ ಸಂತತಿಮ್ ।
ದಿವೋದಾಸಸ್ಯ ದಾಯಾದೋ ಬ್ರಹ್ಮರ್ಷಿರ್ಮಿತ್ರಯುರ್ನೃಪಃ ।। ೧-೩೨-೭೫

ಇನ್ನು ಮುಂದೆ ದಿವೋದಾಸನ ಸಂತತಿಯ ಕುರಿತು ಹೇಳುತ್ತೇನೆ. ದಿವೋದಾಸನ ಮಗನು ಬ್ರಹ್ಮರ್ಷಿ ನೃಪ ಮಿತ್ರಯು.

ಮೈತ್ರಾಯಣಸ್ತತಃ ಸೋಮೋ ಮೈತ್ರೇಯಾಸ್ತು ತತಃ ಸ್ಮೃತಾಃ ।
ಏತೇ ಹಿ ಸಂಶ್ರಿತಾಃ ಪಕ್ಷಂ ಕ್ಷತ್ರೋತ್ಪೇತಾಸ್ತು ಭಾರ್ಗವಾಃ ।। ೧-೩೨-೭೬

ಮಿತ್ರಯುವಿನ ಮಗನು ಮೈತ್ರಾಯಣನು. ಅವನ ಮಗ ಸೋಮನ ವಂಶಜರನ್ನು ಮೈತ್ರೇಯರೆಂದು ಹೇಳುತ್ತಾರೆ. ಇವರು ಕ್ಷತ್ರಧರ್ಮವನ್ನು ಅಳವಡಿಸಿಕೊಂಡ ಭಾರ್ಗವ ಪಕ್ಷದವರು.

ಆಸೀತ್ಪಂಚಜನಃ ಪುತ್ರಃ ಸೃಂಜಯಸ್ಯ ಮಹಾತ್ಮನಃ ।
ಸುತಃ ಪಂಚಜನಸ್ಯಾಪಿ ಸೋಮದತ್ತೋ ಮಹೀಪತಿಃ ।। ೧-೩೨-೭೭

ಸೃಂಜಯನ ಪುತ್ರನು ಮಹಾತ್ಮ ಪಂಚಜನ. ಪಂಚಜನನ ಸುತನು ಮಹೀಪತಿ ಸೋಮದತ್ತನು.

ಸೋಮದತ್ತಸ್ಯ ದಾಯಾದಃ ಸಹದೇವೋ ಮಹಾಯಶಃ ।
ಸಹದೇವಸುತಶ್ಚಾಪಿ ಸೋಮಕೋ ನಾಮ ಪಾರ್ಥಿವಃ ।। ೧-೩೨-೭೮

ಸೋಮದತ್ತನ ಮಗನು ಮಹಾಯಶಸ್ವೀ ಸಹದೇವನು. ಸಹದೇವನ ಮಗನು ಸೋಮಕ ಎನ್ನುವ ಪಾರ್ಥಿವನು.

ಅಜಮೀಢಾತ್ಪುನರ್ಜಾತಃ ಕ್ಷೀಣವಂಶೇ ತು ಸೋಮಕಃ ।
ಸೋಮಕಸ್ಯ ಸುತೋ ಜಂತುರ್ಯಸ್ಯ ಪುತ್ರಶತಂ ಬಭೌ ।। ೧-೩೨-೭೯

ಅಜಮೀಢವಂಶವು ಕ್ಷೀಣಿಸುವ ಸಮಯದಲ್ಲಿ ಸೋಮಕನು ಹುಟ್ಟಿದನು. ಸೋಮಕನ ಮಗನು ಜಂತು5. ಜಂತುವಿನ ಬದಲಾಗಿ ಸೋಮಕನಲ್ಲಿ ನೂರು ಪುತ್ರರು ಹುಟ್ಟಿದರು.

ತೇಷಾಂ ಯವೀಯಾನ್ಪೃಷತೋ ದ್ರುಪದಸ್ಯ ಪಿತಾ ಪ್ರಭುಃ ।
ಧೃಷ್ಟದ್ಯುಮ್ನಸ್ತು ದ್ರುಪದಾದ್ಧೃಷ್ಟಕೇತುಶ್ಚ ತತ್ಸುತಃ ।। ೧-೩೨-೮೦

ಅವರಲ್ಲಿ ಕಿರಿಯವನೇ ದೃಪದನ ತಂದೆ ಪ್ರಭು ಪೃಷತ. ಧೃಷ್ಟದ್ಯುಮ್ನನು ದ್ರುಪದನ ಮಗ ಮತ್ತು ಧೃಷ್ಟಕೇತುವು ಧೃಷ್ಟದ್ಯುಮ್ನನ ಮಗ.

ಅಜಮೀಢಾಃ ಸ್ಮೃತಾ ಹ್ಯೇತೇ ಮಹಾತ್ಮಾನಸ್ತು ಸೋಮಕಾಃ ।
ಪುತ್ರಾಣಾಮಜಮೀಢಸ್ಯ ಸೋಮಕತ್ವಂ ಮಹಾತ್ಮನಃ ।। ೧-೩೨-೮೧

ಈ ಮಹಾತ್ಮರನ್ನು ಅಜಮೀಢರೆಂದು ಕರೆಯುತ್ತಾರೆ. ಅಜಮೀಢನ ಪುತ್ರ ಮಹಾತ್ಮ ಸೋಮಕನಿಂದಾಗಿ ಸೋಮಕರೆಂದೂ ಕರೆಯಲ್ಪಟ್ಟರು.

ಮಹಿಷೀ ತ್ವಜಮೀಢಸ್ಯ ಧೂಮಿನೀ ಪುತ್ರಗೃದ್ಧಿನೀ ।
ತೃತೀಯಾ ತವ ಪೂರ್ವೇಷಾಂ ಜನನೀ ಪೃಥಿವೀಪತೇ ।। ೧-೩೨-೮೨

ಪೃಥಿವೀಪತೇ! ಅಜಮೀಢನ ಮೂರನೇ ಪತ್ನಿ ಧೂಮಿನೀ ಎಂಬ ಹೆಸರಿನವಳು ಪುತ್ರರನ್ನು ಬಯಸಿದಳು. ಅವಳೇ ನಿನ್ನ ಪೂರ್ವಜರ ಜನನಿ.

ಸಾ ತು ಪುತ್ರಾರ್ಥಿನೀ ದೇವೀ ವ್ರತಚರ್ಯಾಸಮನ್ವಿತಾ ।
ತತೋ ವರ್ಷಾಯುತಂ ತಪ್ತ್ವಾ ತಪಃ ಪರಮದುಶ್ಚರಮ್ ।। ೧-೩೨-೮೩

ಪುತ್ರಾರ್ಥಿನಿಯಾಗಿದ್ದ ಆ ದೇವಿಯು ವ್ರತಚರ್ಯ ಸಮನ್ವಿತೆಯಾಗಿದ್ದಳು. ಅವಳು ಹತ್ತು ಸಾವಿರ ವರ್ಷ ಪರಮ ದುಶ್ಚರ ತಪಸ್ಸನ್ನು ತಪಿಸಿದಳು.

ಹುತ್ವಾಗ್ನಿಂ ವಿಧಿವತ್ಸಾ ತು ಪವಿತ್ರಮಿತಭೋಜನಾ ।
ಅಗ್ನಿಹೋತ್ರಕುಶೇಷ್ವೇವ ಸುಷ್ವಾಪ ಜನಮೇಜಯ ।
ಧೂಮಿನ್ಯಾ ಸ ತಯಾ ದೇವ್ಯಾ ತ್ವಜಮೀಢಃ ಸಮೇಯಿವಾನ್ ।। ೧-೩೨-೮೪

ಜನಮೇಜಯ! ಅವಳು ವಿಧಿವತ್ತಾಗಿ ಅಗ್ನಿಯಲ್ಲಿ ಆಹುತಿಗಳನ್ನಿತ್ತು, ಪವಿತ್ರ ಮಿತ ಆಹಾರಗಳನ್ನು ಸೇವಿಸುತ್ತಾ ಅಗ್ನಿಹೋತ್ರದ ಬುಡದಲ್ಲಿಯೇ ದರ್ಬೆಗಳ ಮೇಲೆ ಮಲಗುತ್ತಿದ್ದಳು. ಆ ದೇವೀ ಧೂಮಿನಿಯೊಡನೆ ಅಜಮೀಢನು ಕೂಡಿದನು.

ಋಕ್ಷಂ ಸಂಜನಯಾಮಾಸ ಧೂಮವರ್ಣಂ ಸುದರ್ಶನಮ್ ।
ಋಕ್ಷಾತ್ಸಂವರಣೋ ಜಜ್ಞೇ ಕುರುಃ ಸಂವರಣಾತ್ತಥಾ ।
ಯಃ ಪ್ರಯಾಗಾದತಿಕ್ರಮ್ಯ ಕುರುಕ್ಷೇತ್ರಂ ಚಕಾರ ಹ ।। ೧-೩೨-೮೫

ಅವಳಲ್ಲಿ ಧೂಮವರ್ಣದ ಸುಂದರ ಋಕ್ಷನು ಜನಿಸಿದನು. ಋಕ್ಷನಿಂದ ಸಂವರಣನು ಹುಟ್ಟಿದನು. ಸಂವರಣನಲ್ಲಿ ಪ್ರಯಾಗದಿಂದ ಹೋಗಿ ಕುರುಕ್ಷೇತ್ರವನ್ನು ಸ್ಥಾಪಿಸಿದ ಕುರುವು ಹುಟ್ಟಿದನು.

ತದ್ವೈ ತತ್ಸ ಮಹಾಭಾಗೋ ವರ್ಷಾಣಿ ಸುಬಹೂನ್ಯಥ ।
ತಪ್ಯಮಾನೇ ತದಾ ಶಕ್ರೋ ಯತ್ರಾಸ್ಯ ವರದೋ ಬಭೌ ।। ೧-೩೨-೮೬

ಅಲ್ಲಿ ಮಹಾಭಾಗ ಕುರುವು ಅನೇಕ ವರ್ಷಗಳ ತಪಸ್ಸನ್ನಾಚರಿಸಿದನು. ಆಗ ಶಕ್ರನು ಅವನಿಗೆ ವರವನ್ನಿತ್ತನು.

ಪುಣ್ಯಂ ಚ ರಮಣೀಯಂ ಚ ಪುಣ್ಯಕೃದ್ಭಿರ್ನಿಷೇವಿತಮ್ ।
ತಸ್ಯಾನ್ವವಾಯಃ ಸುಮಹಾಂಸ್ತಸ್ಯ ನಾಮ್ನಾ ಸ್ಥ ಕೌರವಾಃ ।। ೧-೩೨-೮೭

ಆ ಪುಣ್ಯ ರಮಣೀಯ ಪ್ರದೇಶವನ್ನು ಪುಣ್ಯಕರ್ಮಿಗಳು ಸೇವಿಸುತ್ತಾರೆ. ಕುರುವಿನ ವಂಶವು ಅತಿ ದೊಡ್ಡದು. ಅವನಿಂದಲೇ ನೀವು ಕೌರವರೆಂಬ ಹೆಸರನ್ನು ಪಡೆದುಕೊಂಡಿರಿ.

ಕುರೋಶ್ಚ ಪುತ್ರಾಶ್ಚತ್ವಾರಃ ಸುಧನ್ವಾ ಸುಧನುಸ್ತಥಾ ।
ಪರೀಕ್ಷಿಚ್ಚ ಮಹಾಬಾಹುಃ ಪ್ರವರಶ್ಚಾರಿಮೇಜಯಃ ।। ೧-೩೨-೮೮

ಕುರುವಿಗೆ ನಾಲ್ವರು ಪುತ್ರರಿದ್ದರು – ಸುಧನ್ವ, ಸುಧನು, ಮಹಾಬಾಹು ಪರೀಕ್ಷಿತ್ ಮತ್ತು ಪ್ರವರ ಅರಿಮೇಜಯ.

ಸುಧನ್ವನಸ್ತು ದಾಯಾದಃ ಸುಹೋತ್ರೋ ಮತಿಮಾಂಸ್ತತಃ ।
ಚ್ಯವನಸ್ತಸ್ಯ ಪುತ್ರಸ್ತು ರಾಜಾ ಧರ್ಮಾರ್ಥಕೋವಿದಃ ।। ೧-೩೨-೮೯

ಸುಧನ್ವನ ಮಗನು ಸುಹೋತ್ರನು. ಸುಹೋತ್ರನ ಮಗನು ಮತಿಮಾನನು. ಅರ್ಥಕೋವಿದ ರಾಜಾ ಚ್ಯವನನು ಅವನ ಪುತ್ರನು.

ಚ್ಯವನಾತ್ಕೃತಯಜ್ಞಸ್ತು ಇಷ್ಟ್ವಾ ಯಜ್ಞಃ ಸ ಧರ್ಮವಿತ್ ।
ವಿಶ್ರುತಂ ಜನಯಾಮಾಸ ಪುತ್ರಮಿಂದ್ರಸಮಂ ನೃಪಃ ।। ೧-೩೨-೯೦

ಚ್ಯವನನಿಂದ ಕೃತಯಜ್ಞನಾದನು. ಆ ಧರ್ಮವಿದು ನೃಪನು ಇಷ್ಟಿಯನ್ನು ಯಜಿಸಿ ಇಂದ್ರಸಮನಾದ ವಿಶ್ರುತ ಪುತ್ರನನ್ನು ಹುಟ್ಟಿಸಿದನು.

ಚೈದ್ಯೋಪರಿಚರಂ ವೀರಂ ವಸುಂ ನಾಮಾಂತರಿಕ್ಷಗಮ್ ।
ಚೈದ್ಯೋಪರಿಚರಾಜ್ಜಜ್ಞೇ ಗಿರಿಕಾ ಸಪ್ತ ಮಾನವಾನ್ ।। ೧-೩೨-೯೧

ಅವನೇ ವೀರ ಚೈದ್ಯ ವಸು. ಅಂತರಿಕ್ಷದಲ್ಲಿ ಸಂಚರಿಸುತ್ತಿದ್ದುದರಿಂದ ಅವನ ಹೆಸರು ಉಪರಿಚರ ಎಂದಾಯಿತು. ಚೈದ್ಯ ಉಪರಿಚರನಿಗೆ ಗಿರಿಕೆಯಲ್ಲಿ ಏಳು ಮಾನವರು ಹುಟ್ಟಿದರು.

ಮಹಾರಥೋ ಮಗಧರಾಡ್ವಿಶ್ರುತೋ ಯೋ ಬೃಹದ್ರಥಃ ।
ಪ್ರತ್ಯಗ್ರಹಃ ಕುಶಶ್ಚೈವ ಯಮಾಹುರ್ಮಣಿವಾಹನಮ್ ।। ೧-೩೨-೯೨

ಮಹಾರಥ ಮಗಧರಾಜ ವಿಶ್ರುತ ಬೃಹದ್ರಥ, ಪ್ರತ್ಯಗ್ರಹನ್ನ್ ಮತ್ತು ಕುಶ. ಕುಶನನ್ನು ಮಣಿವಾಹನ ಎಂದೂ ಕರೆಯುತ್ತಿದ್ದರು.

ಮಾರುತಶ್ಚ ಯದುಶ್ಚೈವ ಮತ್ಸ್ಯಃ ಕಾಲೀ ಚ ಸತ್ತಮಃ ।
ಬೃಹದ್ರಥಸ್ಯ ದಾಯಾದಃ ಕುಶಾಗ್ರೋ ನಾಮ ವಿಶ್ರುತಃ ।। ೧-೩೨-೯೩

ಉಳಿದವರು ಮಾರುತ, ಯದು, ಸತ್ತಮ ಮತ್ಸ್ಯ ಮತ್ತು ಕಾಲೀ. ಬೃಹದ್ರಥನ ಮಗನು ಕುಶಾಗ್ರ ಎಂಬ ಹೆಸರಿನಿಂದ ವಿಶ್ರುತನಾದನು.

ಕುಶಾಗ್ರಸ್ಯಾತ್ಮಜೋ ವಿದ್ವಾನ್ವೃಷಭೋ ನಾಮ ವೀರ್ಯವಾನ್ ।। ೧-೩೨-೯೪
ವೃಷಭಸ್ಯ ತು ದಾಯಾದಃ ಪುಷ್ಪವಾನ್ನಾಮ ಧಾರ್ಮಿಕಃ ।
ದಾಯಾದಸ್ತಸ್ಯ ವಿಕ್ರಾಂತೋ ರಾಜಾ ಸತ್ಯಹಿತಃ ಸ್ಮೃತಃ ।। ೧-೩೨-೯೫

ಕುಶಾಗ್ರನ ಮಗ ವಿದ್ವಾನ ವೃಷಭ ಎಂಬ ಹೆಸರಿನ ವೀರ್ಯವಾನನು. ವೃಷಭನ ಪುತ್ರನು ಪುಷ್ಪವಾನ್ ಎಂಬ ಹೆಸರಿನ ಧಾರ್ಮಿಕನು. ಅವನ ವಿಕ್ರಾಂತ ಮಗನು ರಾಜಾ ಸತ್ಯಹಿತ.

ತಸ್ಯ ಪುತ್ರೋಽಥ ಧರ್ಮಾತ್ಮಾ ನಾಮ್ನಾ ಊರ್ಜಸ್ತು ಜಜ್ಞಿವಾನ್ ।
ಊರ್ಜಸ್ಯ ಸಂಭವಃ ಪುತ್ರೋ ಯಸ್ಯ ಜಜ್ಞೇ ಸ ವೀರ್ಯವಾನ್ ।। ೧-೩೨-೯೬

ಅವನ ಮಗನು ಧರ್ಮಾತ್ಮಾ ಊರ್ಜ ಎಂಬ ಹೆಸರಿನವನು ಹುಟ್ಟಿದನು. ಊರ್ಜನ ಮಗನ ಹೆಸರು ಸಂಬವ. ಅವನಿಗೆ ವೀರ್ಯವಾನ್ ಜರಾಸಂಧನು ಹುಟ್ಟಿದನು.

ಶಕಲೇ ದ್ವೇ ಸ ವೈ ಜಾತೋ ಜರಯಾ ಸಂಧಿತಃ ಸ ತು ।
ಜರಯಾ ಸಂಧಿತೋ ಯಸ್ಮಾಜ್ಜರಾಸಂಧಸ್ತತಃ ಸ್ಮೃತಃ ।। ೧-೩೨ ೯೭

ಎರಡು ಭಾಗಗಳಲ್ಲಿ ಹುಟ್ಟಿದ್ದ ಅವನನ್ನು ಜರೆಯು ಜೋಡಿಸಿದ್ದಳು. ಜರೆಯಿಂದ ಸಂಧಿತನಾದುದರಿಂದ ಅವನು ಜರಾಸಂಧನೆನಿಸಿಕೊಂಡನು.

ಸರ್ವಕ್ಷತ್ರಸ್ಯ ಜೇತಾಸೌ ಜರಾಸಂಧೋ ಮಹಾಬಲಃ ।
ಜರಾಸಂಧಸ್ಯ ಪುತ್ರೋ ವೈ ಸಹದೇವಃ ಪ್ರತಾಪವಾನ್ ।। ೧-೩೨-೯೮

ಈ ಮಹಾಬಲ ಜರಾಸಂಧನು ಸರ್ವಕ್ಷತ್ರಿಯರನ್ನೂ ಜಯಿಸಿದ್ದನು. ಜರಾಸಂಧನ ಪುತ್ರನು ಪ್ರತಾಪವಾನ್ ಸಹದೇವನು.

ಸಹದೇವಾತ್ಮಜಃ ಶ್ರೀಮಾನುದಾಯುಃ ಸ ಮಹಾಯಶಾಃ ।
ಉದಾಯುರ್ಜನಯಾಮಾಸ ಪುತ್ರಂ ಪರಮಧಾರ್ಮಿಕಮ್ ।। ೧-೩೨-೯೯

ಸಹದೇವನ ಮಗನು ಶ್ರೀಮಾನ್ ಮಹಾಯಶಸ್ವೀ ಉದಾಯು. ಉದಾಯುವು ಪರಮಧಾರ್ಮಿಕ ಪುತ್ರನನ್ನು ಹುಟ್ಟಿಸಿದನು.

ಶ್ರುತಧರ್ಮೇತಿ ನಾಮಾನಂ ಮಘವಾನ್ಯೋಽವಸದ್ವಿಭುಃ ।
ಪರೀಕ್ಷಿತಸ್ತು ದಾಯಾದೋ ಧಾರ್ಮಿಕೋ ಜನಮೇಜಯಃ ।। ೧-೩೨-೧೦೦

ಶ್ರುತಧರ್ಮ ಎಂಬ ಹೆಸರಿನ ಈ ವಿಭುವು ಮಘನಾನನಂತಿದ್ದನು. ಕುರುವಿನ ಇನ್ನೊಬ್ಬ ಮಗ ಪರೀಕ್ಷಿತನ ಮಗನು ಧಾರ್ಮಿಕ ಜನಮೇಜಯನಾದನು.

ಜನಮೇಜಯಸ್ಯ ದಾಯಾದಸ್ತ್ರಯ ಏವ ಮಹಾರಥಾಃ ।
ಶ್ರುತಸೇನೋಗ್ರಸೇನೌ ಚ ಭೀಮಸೇನಶ್ಚ ನಾಮತಃ ।। ೧-೩೨-೧೦೧

ಜನಮೇಜಯನ ಮಕ್ಕಳು ಮೂವರು ಮಹಾರಥರು. ಶ್ರುತಸೇನ, ಉಗ್ರಸೇನ ಮತ್ತು ಭೀಮಸೇನ ಎಂಬ ಹೆಸರಿನವರು.

ಏತೇ ಸರ್ವೇ ಮಹಾಭಾಗಾ ವಿಕ್ರಾಂತಾ ಬಲಶಾಲಿನಃ ।
ಜನಮೇಜಯಸ್ಯ ಪುತ್ರೌ ತು ಸುರಥೋ ಮತಿಮಾಂಸ್ತಥಾ ।। ೧-೩೨-೧೦೨

ಇವರೆಲ್ಲರ ಮಹಾಭಾಗರೂ ವಿಕ್ರಾಂತ ಬಲಶಾಲಿಗಳಾಗಿದ್ದರು. ಜನಮೇಜಯನಿಗೆ ಇಬ್ಬರು ಮಕ್ಕಳಾದರು – ಸುರಥ ಮತ್ತು ಮತಿಮಾನ್.

ಸುರಥಸ್ಯ ತು ವಿಕ್ರಾಂತಃ ಪುತ್ರೋ ಜಜ್ಞೇ ವಿದೂರಥಃ ।
ವಿದೂರಥಸ್ಯ ದಾಯಾದ ಋಕ್ಷ ಏವ ಮಹಾರಥಃ ।। ೧-೩೨-೧೦೩

ಸುರಥನಿಗೆ ವಿದೂರಥನೆಂಬ ವಿಕ್ರಾಂತ ಪುತ್ರನು ಹುಟ್ಟಿದನು. ವಿದೂರಥನ ಮಗನೇ ಮಹಾರಥ ಋಕ್ಷ.

ದ್ವಿತೀಯಃ ಸ ಬಭೌ ರಾಜಾ ನಾಮ್ನಾ ತೇನೈವ ಸಂಜ್ಞಿತಃ ।
ದ್ವಾವೃಕ್ಷೌ ತವ ವಂಶೇಽಸ್ಮಿಂದ್ವಾವೇವ ತು ಪರೀಕ್ಷಿತೌ ।। ೧-೩೨-೧೦೪

ಇವರು ಎರಡನೆಯ ಋಕ್ಷ. ಮೊದಲಿನವನ ಹೆಸರಿನಿಂದಲೇ ಕರೆಯಲ್ಪಟ್ಟವನು. ಹೀಗೆ ನಿನ್ನ ವಂಶದಲ್ಲಿ ಇಬ್ಬರು ಋಕ್ಷರೂ ಇಬ್ಬರೂ ಪರೀಕ್ಷಿತರೂ ಆಗಿಹೋಗಿದ್ದಾರೆ.

ಭೀಮಸೇನಾಸ್ತ್ರಯೋ ರಾಜನ್ ದ್ವಾವೇವ ಜನಮೇಜಯೌ ।
ಋಕ್ಷಸ್ಯ ತು ದ್ವಿತೀಯಸ್ಯ ಭೀಮಸೇನೋಽಭವತ್ಸುತಃ ।। ೧-೩೨-೧೦೫

ರಾಜನ್! ನಿನ್ನ ವಂಶದಲ್ಲಿ ಮೂವರು ಭೀಮಸೇನರೂ, ಇಬ್ಬರೂ ಜನಮೇಜಯರೂ ಆಗಿಹೋದರು. ಎರಡನೇ ಋಕ್ಷನಿಗೆ ಭೀಮಸೇನನು ಸುತನಾದನು.

ಪ್ರತೀಪೋ ಭೀಮಸೇನಸ್ಯ ಪ್ರತೀಪಸ್ಯ ತು ಶಂತನುಃ ।
ದೇವಾಪಿರ್ಬಾಹ್ಲಿಕಶ್ಚೈವ ತ್ರಯ ಏವ ಮಹಾರಥಾಃ ।। ೧-೩೨-೧೦೬

ಪ್ರತೀಪನು ಭೀಮಸೇನನ ಮಗ. ಮತ್ತು ಪ್ರತೀಪನಿಗೆ ಶಂತನು, ದೇವಾಪಿ ಮತ್ತು ಬಾಹ್ಲಿಕ ಎನ್ನುವ ಮೂವರು ಮಹಾರಥ ಪುತ್ರರು.

ಶಂತನೋಃ ಪ್ರಸವಸ್ತ್ವೇಷ ಯತ್ರ ಜಾತೋಽಸಿ ಪಾರ್ಥಿವ ।
ಬಾಹ್ಲಿಕಸ್ಯ ತು ರಾಜ್ಯಂ ವೈ ಸಪ್ತವಾಹ್ಯಂ ನರೇಶ್ವರ ।। ೧-೩೨-೧೦೭

ಪಾರ್ಥಿವ! ನೀನು ಹುಟ್ಟಿರುವ ಈ ವಂಶವು ಶಂತನುವಿನದ್ದು. ನರೇಶ್ವರ! ಬಾಹ್ಲಿಕನ ರಾಜ್ಯವಾದರೋ ಸಪ್ತವಾಹ್ಯ6ವಾಗಿತ್ತು.

ಬಾಹ್ಲಿಕಸ್ಯ ಸುತಶ್ಚೈವ ಸೋಮದತ್ತೋ ಮಹಾಯಶಾಃ ।
ಜಜ್ಞಿರೇ ಸೋಮದತ್ತಾತ್ತು ಭೂರಿರ್ಭೂರಿಶ್ರವಾಃ ಶಲಃ ।। ೧-೩೨-೧೦೮

ಬಾಹ್ಲೀಕನ ಮಗನು ಮಹಾಯಶಸ್ವೀ ಸೋಮದತ್ತನು. ಸೋಮದತ್ತನಿಗೆ ಭೂರಿ, ಭೂರಿಶ್ರವ ಮತ್ತು ಶಲ – ಈ ಮೂವರು ಹುಟ್ಟಿದರು.

ಉಪಾಧ್ಯಾಯಸ್ತು ದೇವಾನಾಂ ದೇವಾಪಿರಭವನ್ಮುನಿಃ ।
ಚ್ಯವನಸ್ಯ ಕೃತಃ ಪುತ್ರ ಇಷ್ಟಶ್ಚಾಸೀನ್ಮಹಾತ್ಮನಃ ।। ೧-೩೨-೧೦೯

ದೇವಾಪಿಯಾದರೋ ದೇವತೆಗಳ ಉಪಾಧ್ಯಾಯನಾಗಿ ಮುನಿಯಾಗಿದ್ದನು. ಮಹಾತ್ಮ ಚ್ಯವನನು ಅವನನ್ನು ತನ್ನ ಪುತ್ರನನ್ನಾಗಿ ಮಾಡಿಕೊಂಡಿದ್ದನು.

ಶಂತನುಸ್ತ್ವಭವದ್ರಾಜಾ ಕೌರವಾಣಾಂ ಧುರಂಧರಃ ।
ಶಂತನೋಃ ಸಂಪ್ರವಕ್ಷ್ಯಾಮಿ ಯತ್ರ ಜಾತೋಽಸಿ ಪಾರ್ಥಿವ ।। ೧-೩೨-೧೧೦

ಶಂತನುವಾದರೋ ಕೌರವರ ಧುರಂಧರ ರಾಜನಾಗಿದ್ದನು. ಪಾರ್ಥಿವ! ನೀನು ಹುಟ್ಟಿರುವ ಶಂತನುವಿನ ವಂಶವನ್ನು ಹೇಳುತ್ತೇನೆ.

ಗಾಂಗಂ ದೇವವ್ರತಂ ನಾಮ ಪುತ್ರಂ ಸೋಽಜನಯತ್ಪ್ರಭುಃ ।
ಸ ತು ಭೀಷ್ಮ ಇತಿ ಖ್ಯಾತಃ ಪಾಂಡವಾನಾಂ ಪಿತಾಮಹಃ ।। ೧-೩೨-೧೧೧

ಪ್ರಭು ಶಾಂತನುವು ಗಂಗೆಯಲ್ಲಿ ದೇವವ್ರತನೆಂಬ ಹೆಸರಿನ ಮಗನನ್ನು ಹುಟ್ಟಿಸಿದನು. ಅವನಾದರೋ ಪಾಂಡವರ ಪಿತಾಮಹ ಭೀಷ್ಮನೆಂದು ಖ್ಯಾತನಾದನು.

ಕಾಲೀ ವಿಚಿತ್ರವೀರ್ಯಂ ತು ಜನಯಾಮಾಸ ಭಾರತ ।
ಶಂತನೋರ್ದಯಿತಂ ಪುತ್ರಂ ಧರ್ಮಾತ್ಮಾನಮಕಲ್ಮಷಮ್ ।। ೧-೩೨-೧೧೨

ಭಾರತ! ಕಾಲೀಯು ಶಂತನುವಿನ ಪ್ರೀತಿಯ ಪುತ್ರ ಧರ್ಮಾತ್ಮ ಅಕಲ್ಮಷ ವಿಚಿತ್ರವೀರ್ಯನಿಗೆ ಜನ್ಮವಿತ್ತಳು.

ಕೃಷ್ಣದ್ವೈಪಾಯನಶ್ಚೈವ ಕ್ಷೇತ್ರೇ ವೈಚಿತ್ರವೀರ್ಯಕೇ ।
ಧೃತರಾಷ್ಟ್ರಂ ಚ ಪಾಂಡುಂ ಚ ವಿದುರಂ ಚಾಪ್ಯಜೀಜನತ್ ।। ೧-೩೨-೧೧೩

ಕೃಷ್ಣದ್ವೈಪಾಯನನು ವಿಚಿತ್ರವೀರ್ಯನ ಕ್ಷೇತ್ರದಲ್ಲಿ ಧೃತರಾಷ್ಟ್ರ, ಪಾಂಡು ಮತ್ತು ವಿದುರರಿಗೆ ಜನ್ಮವಿತ್ತನು.

ಧೃತರಾಷ್ಟ್ರಶ್ಚ ಗಾಂಧಾರ್ಯಾಂ ಪುತ್ರಾನುತ್ಪಾದಯಚ್ಛತಮ್ ।
ತೇಷಾಂ ದುರ್ಯೋಧನಃ ಶ್ರೇಷ್ಠಃ ಸರ್ವೇಷಾಮೇವ ಸ ಪ್ರಭುಃ ।। ೧-೩೨-೧೧೪

ಧೃತರಾಷ್ಟ್ರನು ಗಾಂಧಾರಿಯಲ್ಲಿ ನೂರು ಪುತ್ರರನ್ನು ಹುಟ್ಟಿಸಿದನು. ಅವರೆಲ್ಲರಲ್ಲಿ ಪ್ರಭು ದುರ್ಯೋಧನನು ಶ್ರೇಷ್ಠನಾಗಿದ್ದನು.

ಪಾಂಡೋರ್ಧನಂಜಯಃ ಪುತ್ರಃ ಸೌಭದ್ರಸ್ತಸ್ಯ ಚಾತ್ಮಜಃ ।
ಅಭಿಮನ್ಯುಃ ಪರೀಕ್ಷಿತ್ತು ಪಿತಾ ತವ ಜನೇಶ್ವರ ।। ೧-೩೨-೧೧೫

ಪಾಂಡುವಿನ ಪುತ್ರ ಧನಂಜನು ಸುಭದ್ರೆಯಲ್ಲಿ ಮಗ ಅಭಿಮನ್ಯುವನ್ನು ಪಡೆದನು. ಜನೇಶ್ವರ! ಅಭಿಮನ್ಯುವಿನ ಮಗ ಪರೀಕ್ಷಿತನು ನಿನ್ನ ತಂದೆ.

ಏಷ ತೇ ಪೌರವೋ ವಂಶೋ ಯತ್ರ ಜಾತೋಽಸಿ ಪಾರ್ಥಿವ ।
ತುರ್ವಸೋಸ್ತು ಪ್ರವಕ್ಷ್ಯಾಮಿ ದ್ರುಹ್ಯೋಶ್ಚಾನೋರ್ಯದೋಸ್ತಥಾ ।। ೧-೩೨-೧೧೬

ಪಾರ್ಥಿವ! ಇದು ನೀನು ಹುಟ್ಟಿರುವ ಪೌರವ ವಂಶ. ಈಗ ತುರ್ವಸುವಿನ, ನಂತರ ದ್ರುಹ್ಯು, ಅನು ಮತ್ತು ಯದುವಿನ ವಂಶಗಳ ಕುರಿತು ಹೇಳುತ್ತೇನೆ.

ಸುತಸ್ತು ತುರ್ವಸೋರ್ವಹ್ನಿರ್ವಹ್ನೇರ್ಗೋಭಾನುರಾತ್ಮಜಃ ।
ಗೋಭಾನೋಸ್ತು ಸುತೋ ರಾಜಾ ತ್ರೈಸಾನುರಪರಾಜಿತಃ ।। ೧-೩೨-೧೧೭

ತುರ್ವಸುವಿನ ಮಗನು ವಹ್ನಿ. ವಹ್ನಿಯ ಮಗನು ಗೋಭಾನು. ಗೋಭಾನುವಿನ ಮಗನು ಅಪರಾಜಿತ ರಾಜಾ ತ್ರೈಸಾನು.

ಕರಂಧಮಸ್ತು ತ್ರೈಸಾನೋರ್ಮರುತ್ತಸ್ತಸ್ಯ ಚಾತ್ಮಜಃ ।
ಅನ್ಯಸ್ತ್ವಾವೀಕ್ಷಿತೋ ರಾಜಾ ಮರುತ್ತಃ ಕತಿಥಸ್ತವ ।। ೧-೩೨-೧೧೮

ಕರಂಧಮನು ತ್ರೈಸಾನುವಿನ ಮಗನು ಮತ್ತು ಮರುತ್ತನು ಅವನ ಮಗನು. ಅವೀಕ್ಷಿತನ ಮಗ ರಾಜಾ ಮರುತ್ತನು ಬೇರೆ. ಅವನ ಕುರಿತಾಗಿ ಈ ಮೊದಲೇ ನಿನಗೆ ಹೇಳಿಯಾಗಿದೆ7.

ಅನಪತ್ಯೋಽಭವದ್ರಾಜಾ ಯಜ್ವಾ ವಿಪುಲದಕ್ಷಿಣಃ ।
ದುಹಿತಾ ಸಂಮತಾ ನಾಮ ತಸ್ಯಾಸೀತ್ಪೃಥಿವೀಪತೇ ।। ೧-೩೨-೧೧೯

ಈ ಕರಂಧಮಪುತ್ರ ರಾಜಾ ಮರುತ್ತನು ಪುತ್ರಹೀನನಾಗಿದ್ದನು. ಇವನು ಯಜ್ಞಗಳನ್ನು ನೆರವೇರಿಸಿ ವಿಪುಲ ದಕ್ಷಿಣೆಗಳನ್ನು ನೀಡುತ್ತಿದ್ದನು. ಈ ಪೃಥಿವೀಪತಿಗೆ ಸಂಮತಾ ಎಂಬ ಹೆಸರಿನ ಪುತ್ರಿಯಿದ್ದಳು.

ದಕ್ಷಿಣಾರ್ಥಂ ಸ್ಮ ವೈ ದತ್ತಾ ಸಂವರ್ತಾಯ ಮಹಾತ್ಮನೇ ।
ದುಷ್ಯಂತಂ ಪೌರವಂ ಚಾಪಿ ಲೇಭೇ ಪುತ್ರಮಕಲ್ಮಷಮ್ ।। ೧-೩೨-೧೨೦

ಮರುತನು ಅವಳನ್ನು ಮಹಾತ್ಮ ಸಂವರ್ತನಿಗೆ ದಕ್ಷಿಣೆಯಾಗಿ ಕೊಟ್ಟಿದ್ದನು. ಅವಳೇ ಅಕಲ್ಮಷ ಪೌರವ ದುಷ್ಯಂತನನ್ನು ಮಗನನ್ನಾಗಿ ಪಡೆದಳು8.

ಏವಂ ಯಯಾತೇಃ ಶಾಪೇನ ಜರಾಸಂಕ್ರಮಣೇ ತದಾ ।
ಪೌರವಂ ತುರ್ವಸೋರ್ವಂಶಃ ಪ್ರವಿವೇಶ ನೃಪೋತ್ತಮ ।। ೧-೩೨-೧೨೧

ನೃಪೋತ್ತಮ! ಹೀಗೆ ಮುಪ್ಪನ್ನು ಹೊರಿಸುವ ಸಮಯದಲ್ಲಿ ಯಯಾತಿಯಿಂದ ಶಾಪಗ್ರಸ್ತವಾಗಿದ್ದ ತುರ್ವಸುವಿನ ವಂಶವು ಲಯಗೊಂಡು ಪೌರವ ವಂಶವನ್ನು ಪ್ರವೇಶಿಸಿತು.

ದುಷ್ಯಂತಸ್ಯ ತು ದಾಯಾದಾಃ ಕರುತ್ಥಾಮಃ ಪ್ರಜೇಶ್ವರಃ ।
ಕರುತ್ಥಾಮಾತ್ತಥಾಕ್ರೀಡಶ್ಚತ್ವಾರಸ್ತಸ್ಯ ಚಾತ್ಮಜಾಃ ।। ೧-೩೨-೧೨೨

ದುಷ್ಯಂತನ ಮಗನು ಪ್ರಜೇಶ್ವರ ಕರುತ್ಥಾಮ9. ಕರುತ್ಥಾಮನಿಂದ ಆಕ್ರೀಡನ ಜನ್ಮವಾಯಿತು. ಅವನಿಗೆ ನಾಲ್ವರು ಮಕ್ಕಳಿದ್ದರು.

ಪಾಂಡ್ಯಶ್ಚ ಕೇರಲಶ್ಚೈವ ಕೋಲಶ್ಚೋಲಶ್ಚ ಪಾರ್ಥಿವಃ ತೇಷಾಂ ಜನಪದಾಃ ಸ್ಫೀತಾಃ ಪಾಂಡ್ಯಾಶ್ಚೋಲಾಃ ಸಕೇರಲಾಃ ।। ೧-೩೨-೧೨೩

ಪಾಂಡ್ಯ, ಕೇರಲ, ಕೋಲ, ಮತ್ತು ಪಾರ್ಥಿವ ಚೋಲ. ಅವರ ಜನಪದಗಳು ಸಮೃದ್ಧಶಾಲೀ ಪಾಂಡ್ಯ, ಚೋಲ, ಮತ್ತು ಕೇರಲಗಳು.

ದ್ರುಹ್ಯೋಶ್ಚ ತನಯೋ ರಾಜನ್ಬಭ್ರುಃ ಸೇತುಶ್ಚ ಪಾರ್ಥಿವಃ ।
ಅಂಗಾರಸೇತುಸ್ತತ್ಪುತ್ರೋ ಮರುತಾಂ ಪತಿರುಚ್ಯತೇ ।। ೧-೩೨-೧೨೪

ರಾಜನ್! ದ್ರುಹ್ಯುವಿನ ಪುತ್ರರು ಪಾರ್ಥಿವ ಬಭ್ರು ಮತ್ತು ಸೇತು. ಅಂಗಾರಸೇತುವು ಸೇತುವಿನ ಸತ್ಪುತ್ರನು. ಅವನನ್ನು ಮರುತ್ಪತಿಯೆಂದೂ ಕರೆಯುತ್ತಿದ್ದರು.

ಯೌವನಾಶ್ವೇನ ಸಮರೇ ಕೃಚ್ಛ್ರೇಣ ನಿಹತೋ ಬಲೀ ।
ಯುದ್ಧಂ ಸುಮಹದಸ್ಯಾಽಽಸೀನ್ಮಾಸಾನ್ಪರಿ ಚತುರ್ದಶ ।। ೧-೩೨-೧೨೫

ಯುವನಾಶ್ವನ ಮಗ ಮಾಂಧಾತನೊಡನೆ ನಡೆದ ಹದಿನಾಲ್ಕು ತಿಂಗಳುಗಳ ಮಹಾ ಯುದ್ಧದಲ್ಲಿ ಆ ಬಲಶಾಲಿಯು ಸಮರಾಂಗಣದಲ್ಲಿ ಅತಿ ಕಷ್ಟದಿಂದ ಹತನಾದನು.

ಅಂಗಾರಸ್ಯ ತು ದಾಯಾದೋ ಗಾಂಧಾರೋ ನಾಮ ಭಾರತ ।
ಖ್ಯಾಯತೇ ತಸ್ಯ ನಾಮ್ನಾ ವೈ ಗಾಂಧಾರವಿಷಯೋ ಮಹಾನ್ ।। ೧-೩೨-೧೨೬

ಭಾರತ! ಅಂಗಾರನ ಮಗನು ಗಾಂಧಾರ ಎಂಬ ಹೆಸರಿನವನು. ಅವನ ಹೆಸರಿನಿಂದಲೇ ಈ ಮಹಾನ್ ಗಾಂಧಾರದೇಶವು ಪ್ರಖ್ಯಾತವಾಗಿದೆ.

ಗಾಂಧಾರದೇಶಜಾಶ್ಚೈವ ತುರಗಾ ವಾಜಿನಾಂ ವರಾಃ ।
ಅನೋಸ್ತು ಪುತ್ರೋ ಧರ್ಮೋಽಭೂದ್ಧೃತಸ್ತಸ್ಯಾತ್ಮಜೋಽಭವತ್ ।। ೧-೩೨-೧೨೭

ಶ್ರೇಷ್ಠ ತುರಗ ವಾಜಿಗಳು ಗಾಂಧಾರದೇಶದಲ್ಲಿಯೇ ಹುಟ್ಟಿದವು. ಅನುವಿನ ಪುತ್ರನು ಧರ್ಮನಾಗಿದ್ದನು. ಅವನ ಮಗನು ಧೃತನಾದನು.

ಧೃತಾತ್ತು ದುದುಹೋ ಜಜ್ಞೇ ಪ್ರಚೇತಾಸ್ತಸ್ಯ ಚಾತ್ಮಜಃ ।
ಪ್ರಚೇತಸಃ ಸುಚೇತಾಸ್ತು ಕೀರ್ತಿತೋ ಹ್ಯಾನವೋ ಮಯಾ ।। ೧-೩೨-೧೨೮

ಧೃತನ ಮಗನು ದುದುಹನು. ಅವನ ಮಗನು ಪ್ರಜೇತ. ಪ್ರಚೇತನ ಮಗ ಸುಚೇತ. ಹೀಗೆ ನಾನು ಅನುವಿನ ವಂಶವನ್ನು ಹೇಳಿದ್ದೇನೆ.

ಯದೋರ್ವಂಶಂ ಪ್ರವಕ್ಷ್ಯಾಮಿ ಜ್ಯೇಷ್ಠಸ್ಯೋತ್ತಮತೇಜಸಃ ।
ವಿಸ್ತರೇಣಾನುಪೂರ್ವ್ಯಾತ್ತು ಗದತೋ ಮೇ ನಿಶಾಮಯ ।। ೧-೩೨-೧೨೯

ಈಗ ನಾನು ಯಯಾತಿಯ ಜ್ಯೇಷ್ಠಪುತ್ರ ಉತ್ತಮ ತೇಜಸ ಯದುವಿನ ವಂಶವನ್ನು ವಿಸ್ತಾರವಾಗಿ ಮೊದಲಿನಿಂದ ಹೇಳುತ್ತೇನೆ. ನನ್ನನ್ನು ಕೇಳು.”

ಸಮಾಪ್ತಿ

ಇತಿ ಶ್ರೀಮಹಾಭಾರತೇ ಖಿಲೇಷು ಹರಿವಂಶೇ ಹರಿವಂಶಪರ್ವಣಿ ಪುರುವಂಶಾನುಕೀರ್ತನೇ ದ್ವಾತ್ರಿಂಶೋಽಧ್ಯಾಯಃ


  1. ಮುಂದಿನ 18 ಶ್ಲೋಕಗಳು ಗೀತಾಪ್ರೆಸ್ ಗೋರಖಪುರದ ಸಂಪುಟದಲ್ಲಿ ಇಲ್ಲ. ↩︎

  2. ಈ ಶ್ಲೋಕ ಮತ್ತು ಮುಂದಿನ ಹಲವಾರು ಶ್ಲೋಕಗಳು ಹರಿವಂಶದ ಅಧ್ಯಾಯ 29ರಲ್ಲಿ ಈ ಮೊದಲೇ ಬಂದಿವೆ. ↩︎

  3. ಇದಕ್ಕೆ ಮೊದಲು ಗೀತಾಪ್ರೆಸ್ ಗೋರಖಪುರ ಸಂಪುಟದಲ್ಲಿ ಈ ಒಂದು ಶ್ಲೋಕಾರ್ಧವಿದೆ: ಅಜಮೀಢೋಽಪರೋ ವಂಶಃ ಶ್ರೂತಯಾಂ ಪುರುಷರ್ಷಭ। ↩︎

  4. ತನ್ನ ಪಿತಾಮಹನಂತೆ ಸತ್ಯಧೃತಿಗೆ ಶರದ್ವತನೆಂಬ ಹೆಸರೂ ಇದ್ದಿತ್ತು. ↩︎

  5. ಸೋಮಕನು ತನ್ನ ಮಗ ಜಂತುವನ್ನು ಯಜ್ಞಪಶುವನ್ನಾಗಿ ಮಾಡಿ ಅವನ ಬದಲಾಗಿ ನೂರು ಮಕ್ಕಳನ್ನು ಪಡೆದ ಕಥೆಯು ಅರಣ್ಯಕ ಪರ್ವದ ಅಧ್ಯಾಯ 127-128ರಲ್ಲಿ ಬಂದಿದೆ. ↩︎

  6. ಮಂತ್ರಿಯೇ ಮೊದಲಾದ ಏಳು ರಾಜ್ಯಾಂಗಗಳಿಂದ ಸಂಚಲಿತಗೊಳ್ಳಲು ಯೋಗ್ಯವಾಗಿತ್ತು. ↩︎

  7. ಅಶ್ವಮೇಧಿಕ ಪರ್ವದ ಅಧ್ಯಾಯ 3-10ರಲ್ಲಿ ವ್ಯಾಸನು ಯುಧಿಷ್ಠಿರನಿಗೆ ಮರುತ್ತನ ಕುರಿತು ಹೇಳಿದ ಕಥೆಯು ಬಂದಿದೆ. ↩︎

  8. ಸಂವರ್ತನು ಸಂಮತಾಳನ್ನು ದುಷ್ಯಂತನ ತಂದೆಗೆ ಕೊಟ್ಟಿದ್ದನು. ↩︎

  9. ಇವನು ಶಕುಂತಲೆಯ ಮಗನಲ್ಲ. ದುಷ್ಯಂತನ ಇನ್ನೊಬ್ಬ ಪತ್ನಿಯ ಮಗನು. ↩︎