031: ಕಕ್ಷೇಯುವಂಶವರ್ಣನಮ್

ಪ್ರವೇಶ

।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।

ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ

ಶ್ರೀ ಮಹಾಭಾರತ

ಖಿಲಭಾಗೇ ಹರಿವಂಶಃ

ಹರಿವಂಶ ಪರ್ವ

ಅಧ್ಯಾಯ 31

ಸಾರ

ಜನಮೇಜಯ ಉವಾಚ
ಪೂರೋರ್ವಂಶಮಹಂ ಬ್ರಹ್ಮಂಶ್ರೋತುಮಿಚ್ಛಾಮಿ ತತ್ತ್ವತಃ ।
ದ್ರುಹ್ಯೋಶ್ಚಾನೋರ್ಯದೋಶ್ಚೈವ ತುರ್ವಸೋಶ್ಚ ಪೃಥಕ್ಪೃಥಕ್ ।। ೧-೩೧-೧

ಜನಮೇಜಯನು ಹೇಳಿದನು: “ಬ್ರಹ್ಮನ್! ಪೂರುವಿನ ವಂಶವನ್ನು ಮತ್ತು ದ್ರುಹ್ಯು, ಅನು, ಯದು ಮತ್ತು ತುರ್ವಸುಗಳ ವಂಶವನ್ನು ತತ್ತ್ವತಃ ಪ್ರತ್ಯೇಕ ಪ್ರತ್ಯೇಕವಾಗಿ ಕೇಳಬಯಸುತ್ತೇನೆ.

ವೃಷ್ಣಿವಂಶಪ್ರಸಂಗೇನ ಸ್ವಂ ವಂಶಂ ಪೂರ್ವಮೇವ ತು ।
ವಿಸ್ತರೇಣಾನುಪೂರ್ವ್ಯಾ ಚ ತದ್ಭವಾನ್ವಕ್ತುಮರ್ಹತಿ ।। ೧-೩೧-೨

ವೃಷ್ಣಿವಂಶಪ್ರಸಂಗದಲ್ಲಿ ನನ್ನ ವಂಶದ ಕುರಿತು ಮೊದಲು ಕೇಳಲು ಬಯಸುತ್ತೇನೆ. ಆದುದರಿಂದ ವಿಸ್ತಾರದಿಂದ ಪೂರುವಿನ ವಂಶದ ಕುರಿತು ಹೇಳಬೇಕು.”

ವೈಶಂಪಾಯನ ಉವಾಚ
ಶೃಣು ಪೂರೋರ್ಮಹಾರಾಜ ವಂಶಮುತ್ತಮಪೌರುಷಮ್ ।
ವಿಸ್ತರೇಣಾನುಪೂರ್ವ್ಯಾ ಚ ಯತ್ರ ಜಾತೋಽಸಿ ಪಾರ್ಥಿವ ।। ೧-೩೧-೩

ವೈಶಂಪಾಯನನು ಹೇಳಿದನು: “ಮಹಾರಾಜ! ಪಾರ್ಥಿವ! ಯಾವ ವಂಶದಲ್ಲಿ ನೀನು ಹುಟ್ಟಿರುವೆಯೋ ಆ ಉತ್ತಮ ಪೌರುಷ ವಂಶ ಪೂರುವಿನ ವಂಶದ ಕುರಿತು ವಿಸ್ತಾರವಾಗಿ ಮೊದಲಿನಿಂದ ಕೇಳು.

ಹಂತ ತೇ ಕೀರ್ತಯಿಷ್ಯಾಮಿ ಪೂರೋರ್ವಂಶಮನುತ್ತಮಮ್ ।
ದ್ರುಹ್ಯೋಶ್ಚಾನೋರ್ಯದೋಶ್ಚೈವ ತುರ್ವಸೋಶ್ಚ ನರಾಧಿಪ ।। ೧-೩೧-೪

ನರಾಧಿಪ! ಪೂರುವಿನ ಉತ್ತಮ ವಂಶದ ಬಳಿಕ ದ್ರುಹ್ಯು, ಅನು, ಯದು ಮತ್ತು ತುರ್ವಸುವಿನ ವಂಶಗಳ ಕುರಿತೂ ಹೇಳುತ್ತೇನೆ.

ಪೂರೋಃ ಪುತ್ರೋ ಮಹಾವೀರ್ಯೋ ರಾಜಾಽಽಸೀಜ್ಜನಮೇಯಃ ।
ಪ್ರಚಿನ್ವಾಂಸ್ತು ಸುತಸ್ತಸ್ಯ ಯಃ ಪ್ರಾಚೀಮಜಯದ್ದಿಶಮ್ ।। ೧-೩೧-೫

ಪೂರುವಿನ ಪುತ್ರನು ಮಹಾವೀರ್ಯ ರಾಜಾ ಜನಮೇಜಯನಾದನು. ಅವನ ಸುತನು ಪ್ರಚಿನ್ವಾನನು. ಅವನು ಪೂರ್ವದಿಕ್ಕನ್ನು ಜಯಿಸಿದ್ದನು.

ಪ್ರಚಿನ್ವತಃ ಪ್ರವೀರೋಽಭೂನ್ಮನಸ್ಯುಸ್ತಸ್ಯ ಚಾತ್ಮಜಃ ।
ರಾಜಾ ಚಾಭಯದೋ ನಾಮ ಮನಸ್ಯೋರಭವತ್ಸುತಃ ।। ೧-೩೧-೬

ಪ್ರಚಿನ್ವಾನನ ಪುತ್ರನು ಪ್ರವೀರನಾದನು. ಮನಸ್ಯು ಅವನ ಮಗನಾದನು. ಮನಸ್ಯುವಿನ ಪುತ್ರ ರಾಜಾ ಅಭಯದ ಎಂಬ ಹೆಸರಿನವನಾಗಿದ್ದನು.

ತಥೈವಾಭಯದಸ್ಯಾಸೀತ್ಸುಧನ್ವಾ ತು ಮಹೀಪತಿಃ ।
ಸುಧನ್ವನೋ ಬಹುಗವಃ ಶಂಯಾತಿಸ್ತಸ್ಯ ಚಾತ್ಮಜಃ ।। ೧-೩೧-೭

ಅಭಯದನ ಪುತ್ರನು ಮಹೀಪತಿ ಸುಧನ್ವನಾದನು. ಸುಧನ್ವನ ಮಗನು ಬಹುಗವ ಮತ್ತು ಶಂಯಾತಿಯು ಅವನ ಮಗನು.

ಶಂಯಾತೇಸ್ತು ರಹಸ್ಯಾತೀ ರೌದ್ರಶ್ವಸ್ತಸ್ಯ ಚಾತ್ಮಜಃ ।
ರೌದ್ರಾಶ್ವಸ್ಯ ಘೃತಾಚ್ಯಾಂ ವೈ ದಶಾಪ್ಸರಸಿ ಸೂನವಃ ।। ೧-೩೧-೮

ಶಂಯಾತಿಯ ಮಗನು ರಹಸ್ಯಾತೀ ಮತ್ತು ರೌದ್ರಶ್ವನು ಅವನ ಮಗನು. ರೌದ್ರಶ್ವನಿಗೆ ಅಪ್ಸರಾ ಘೃತಾಚಿಯಲ್ಲಿ ಹತ್ತು ಮಕ್ಕಳು ಜನಿಸಿದರು.

ಋಚೇಯುಃ ಪ್ರಥಮಸ್ತೇಷಾಂ ಕೃಕಣೇಯುಸ್ತಥೈವ ಚ ।
ಕಕ್ಷೇಯುಃ ಸ್ಥಂಡಿಲೇಯುಶ್ಚ ಸನ್ನತೇಯುಸ್ತಥೈವ ಚ ।। ೧-೩೧-೯
ದಶಾರ್ಣೇಯುರ್ಜಲೇಯುಶ್ಚ ಸ್ಥಲೇಯುಶ್ಚ ಮಹಾಯಶಾಃ ।
ಧನೇಯುಶ್ಚ ವನೇಯುಶ್ಚ ಪುತ್ರಿಕಾಶ್ಚ ದಶ ಸ್ತ್ರಿಯಃ ।। ೧-೩೧-೧೦
ರುದ್ರಾ ಶೂದ್ರಾ ಚ ಭದ್ರಾ ಚ ಮಲದಾ ಮಲಹಾ ತಥಾ ।
ಖಲದಾ ಚೈವ ರಾಜೇಂದ್ರ ನಲದಾ ಸುರಸಾಪಿ ಚ ।
ತಥಾ ಗೋಚಪಲಾ ತು ಸ್ತ್ರೀರತ್ನಕೂಟಾಶ್ಚ ತಾ ದಶ ।। ೧-೩೧-೧೧

ಅವರಲ್ಲಿ ಋಚೇಯುವು ಮೊದಲನೆಯವನಾಗಿದ್ದನು. ಅವನ ನಂತರ ಕೃಕಣೇಯು, ಕಕ್ಷೇಯು, ಸ್ಥಂಡಿಲೇಯು, ಸನ್ನತೇಯು, ದಶಾರ್ಣೇಯು, ಜಲೇಯು, ಮಹಾಯಶಸ್ವೀ ಸ್ಥಲೇಯು, ಧನೇಯು, ಮತ್ತು ವನೇಯು. ಅವನಿಗೆ ಪುತ್ರಿಕಾಧರ್ಮವನ್ನು ಪಾಲಿಸುತ್ತಿದ್ದ ಹತ್ತು ಪುತ್ರಿಯರೂ ಇದ್ದರು. ರುದ್ರಾ, ಶೂದ್ರಾ, ಭದ್ರಾ, ಮಲದಾ, ಮಲಹಾ, ಖಲದಾ, ನಲದಾ, ಸುರಸಾ, ಗೋಚಪಲಾ ಮತ್ತು ಸ್ತ್ರೀರತ್ನಕೂಟಾ ಇವರೇ ಆ ಹತ್ತು ಕನ್ಯೆಯರು.

ಋಷಿರ್ಜಾತೋಽತ್ರಿವಂಶೇ ತು ತಾಸಾಂ ಭರ್ತಾ ಪ್ರಭಾಕರಃ ।
ರುದ್ರಾಯಾಂ ಜನಯಾಮಾಸ ಸುತಂ ಸೋಮಂ ಯಶಸ್ವಿನಮ್ ।। ೧-೩೧-೧೨

ಅತ್ರಿವಂಶೀಯ ಋಷಿ ಪ್ರಭಾಕರನು ಅವರ ಪತಿಯಾದನು. ಅವನು ರುದ್ರೆಯಲ್ಲಿ ಯಶಸ್ವೀ ಸೋಮನನ್ನು ಪುತ್ರನನ್ನಾಗಿ ಪಡೆದನು.

ಸ್ವರ್ಭಾನುನಾ ಹತೇ ಸೂರ್ಯೇ ಪತಮಾನೇ ದಿವೋ ಮಹೀಮ್ ।
ತಮೋಽಭಿಭೂತೇ ಲೋಕೇ ಚ ಪ್ರಭಾ ಯೇನ ಪ್ರಕಲ್ಪಿತಾ ।। ೧-೩೧-೧೩

ರಾಹುವಿನಿಂದ ಹತನಾಗಿ ಸೂರ್ಯನು ದಿವದಿಂದ ಮಹಿಯ ಮೇಲೆ ಬೀಳುತ್ತಿರುವ ಸಂದರ್ಭದಲ್ಲಿ ಕತ್ತಲೆಯು ಲೋಕವನ್ನು ಆವರಿಸಿದಾಗ ಈ ಪ್ರಭಾಕರನೇ ತನ್ನ ಪ್ರಭೆಯಿಂದ ಬೆಳಕನ್ನು ನೀಡಿದ್ದನು.

ಸ್ವಸ್ತಿ ತೇಽಸ್ತ್ವಿತಿ ಚೋಕ್ತೋ ವೈ ಪತಮಾನೋ ದಿವಾಕರಃ ।
ವಚನಾತ್ತಸ್ಯ ವಿಪ್ರರ್ಷೇರ್ನ ಪಪಾತ ದಿವೋ ಮಹೀಮ್ ।। ೧-೩೧-೧೪

ಆ ಮಹರ್ಷಿಯು ಬೀಳುತ್ತಿದ್ದ ದಿವಾಕರನಿಗೆ “ನಿನಗೆ ಮಂಗಳವಾಗಲಿ!” ಎಂದು ಹೇಳಿದನು. ಆ ವಿಪ್ರರ್ಷಿಯ ವಚನದಂತೆ ಅವನು ದಿವದಿಂದ ಮಹಿಯ ಮೇಲೆ ಬೀಳಲಿಲ್ಲ.

ಅತ್ರಿಶ್ರೇಷ್ಠಾನಿ ಗೋತ್ರಾಣಿ ಯಶ್ಚಕಾರ ಮಹಾತಪಾಃ ।
ಯಜ್ಞೇಷ್ವತ್ರೇರ್ಧನಂ ಚೈವ ಸುರೈರ್ಯಸ್ಯ ಪ್ರವರ್ತಿತಮ್ ।। ೧-೩೧-೧೫

ಮಹಾತಪಸ್ವೀ ಪ್ರಭಾಕರನು ಎಲ್ಲ ಗೋತ್ರಗಳಲ್ಲಿ ಅತ್ರಿಗೋತ್ರವನ್ನು ಶ್ರೇಷ್ಠವೆಂದಾಗಿಸಿದನು. ಅತ್ರಿಯ ಯಜ್ಞದಲ್ಲಿ ಇವನ ಪ್ರಭಾವದಿಂದಲೇ ಸುರರು ಧನವನ್ನು ತಂದಿದ್ದರು.

ಸ ತಾಸು ಜನಯಾಮಾಸ ಪುತ್ರಿಕಾಸು ಸನಾಮಕಾನ್ ।
ದಶ ಪುತ್ರಾನ್ಮಹಾತ್ಮಾ ಸ ತಪಸ್ಯುಗ್ರೇ ರತಾನ್ಸದಾ ।। ೧-೩೧-೧೬

ಆ ಮಹಾತ್ಮನು ರುದ್ರಶ್ವನ ಪುತ್ರಿಯರಲ್ಲಿ ಒಂದೇ ಹೆಸರಿನ ಹತ್ತು ಪುತ್ರರನ್ನು ಪಡೆದನು ಮತ್ತು ಅವರು ಸದಾ ಉಗ್ರ ತಪಸ್ಸಿನಲ್ಲಿ ನಿರತರಾಗಿರುತ್ತಿದ್ದರು.

ತೇ ತು ಗೋತ್ರಕರಾ ರಾಜನೃಷಯೋ ವೇದಪಾರಗಾಃ ।
ಸ್ವಸ್ತ್ಯಾತ್ರೇಯಾ ಇತಿ ಖ್ಯಾತಾಃ ಕಿಂ ತ್ವತ್ರಿಂ ಧನವರ್ಜಿತಾಃ ।। ೧-೩೧-೧೭

ರಾಜನ್! ಆ ಋಷಿಗಳು ವೇದಪಾರಗರೂ ಗೋತ್ರಪ್ರವರ್ತಕರೂ ಆದರು. ಸ್ವಸ್ತ್ಯಾತ್ರೇಯರೆಂದು ಅವರು ಖ್ಯಾತರಾದರು. ಆದರೆ ಅವರು ಅತ್ರಿಗೋತ್ರೀ ಪಿತೃಧನದಿಂದ ವಂಚಿತರಾಗಿದ್ದರು1.

ಕಕ್ಷೇಯೋಸ್ತನಯಾಶ್ಚಾಸಂಸ್ತ್ರಯ ಏವ ಮಹಾರಥಾಃ ।
ಸಭಾನರಶ್ಚಾಕ್ಷುಷಶ್ಚ ಪರಮನ್ಯುಸ್ತಥೈವ ಚ ।। ೧-೩೧-೧೮

ಕಕ್ಷೇಯುವಿಗೆ ಸಭಾನರ, ಚಾಕ್ಷುಷ ಮತ್ತು ಪರಮನ್ಯು ಎಂಬ ಮೂವರು ಮಹಾರಥ ಪುತ್ರರಾದರು.

ಸಭಾನರಸ್ಯ ಪುತ್ರಸ್ತು ವಿದ್ವಾನ್ಕಾಲಾನಲೋ ನೃಪಃ ।
ಕಾಲಾನಲಸ್ಯ ಧರ್ಮಜ್ಞಃ ಸೃಂಜಯೋ ನಾಮ ವೈ ಸುತಃ ।। ೧-೩೧-೧೯

ಸಭಾನರನ ಪುತ್ರನು ವಿದ್ವಾನ್ ನೃಪ ಕಾಲಾನಲನು. ಕಾಲಾನಲನ ಧರ್ಮಜ್ಞ ಸುತನು ಸೃಂಜಯ ಎಂಬ ಹೆಸರಿನಿಂದ ಖ್ಯಾತನಾದನು.

ಸೃಂಜಯಸ್ಯಾಭವತ್ಪುತ್ರೋ ವೀರೋ ರಾಜಾ ಪುರಂಜಯಃ ।
ಜನಮೇಜಯೋ ಮಹಾರಾಜ ಪುರಂಜಯಸುತೋಽಭವತ್ ।। ೧-೩೧-೨೦

ಸೃಂಜಯನ ಪುತ್ರನು ವೀರ ರಾಜಾ ಪುರಂಜಯನು. ಮಹಾರಾಜ! ಜನಮೇಜಯನು ಪುರಂಜಯನ ಮಗನಾದನು.

ಜನಮೇಜಯಸ್ಯ ರಾಜರ್ಷೇರ್ಮಹಾಶಾಲೋಽಭವತ್ಸುತಃ ।
ದೇವೇಷು ಸ ಪರಿಜ್ಞಾತಃ ಪ್ರತಿಷ್ಠಿತಯಶಾ ಭುವಿ ।। ೧-೩೧-೨೧

ರಾಜರ್ಷಿ ಜನಮೇಜಯನ ಸುತನು ಮಹಾಶಾಲನಾಗಿದ್ದನು. ಅವನು ದೇವತೆಗಳಲ್ಲಿಯೂ ವಿಖ್ಯಾತನಾಗಿದ್ದನು ಮತ್ತು ಅವನ ಯಶಸ್ಸು ಭುವಿಯಲ್ಲಿಯೂ ಪ್ರತಿಷ್ಠಿತವಾಗಿತ್ತು.

ಮಹಾಮನಾ ನಾಮ ಸುತೋ ಮಹಾಶಾಲಸ್ಯ ಧಾರ್ಮಿಕಃ ।
ಜಜ್ಞೇ ವೀರಃ ಸುರಗಣೈಃ ಪೂಜಿತಃ ಸುಮಹಾಯಶಾಃ ।। ೧-೩೧-೨೨

ಮಹಾಶಾಲನಿಗೆ ಮಹಾಮನಾ ಎಂಬ ಧಾರ್ಮಿಕ ಸುತನಾದನು. ವೀರನಾಗಿ ಹುಟ್ಟಿದ ಆ ಸುಮಹಾಯಶಸ್ವಿಯು ಸುರಗಣಗಳಿಂದಲೂ ಸತ್ಕೃತನಾಗಿದ್ದನು.

ಮಹಾಮನಾಸ್ತು ಪುತ್ರೌ ದ್ವೌ ಜನಯಾಮಾಸ ಭಾರತ ।
ಉಶೀನರಂ ಚ ಧರ್ಮಜ್ಞಂ ತಿತಿಕ್ಷುಂ ಚ ಮಹಾಬಲಮ್ ।। ೧-೩೧-೨೩

ಭಾರತ! ಮಹಾಮನನಿಗೆ ಇಬ್ಬರು ಪುತ್ರರು ಹುಟ್ಟಿದರು: ಧರ್ಮಜ್ಞ ಉಶೀನರ ಮತ್ತು ಮಹಾಬಲಿ ತಿತಿಕ್ಷು.

ಊಶೀನರಸ್ಯ ಪತ್ನ್ಯಸ್ತು ಪಂಚ ರಾಜರ್ಷಿವಂಶಜಾಃ ।
ನೃಗಾ ಕೃಮೀ ನವಾ ದರ್ವಾ ಪಂಚಮೀ ಚ ದೃಷದ್ವತೀ ।। ೧-೩೧-೨೪

ಉಶೀನರನಿಗೆ ರಾಜರ್ಷಿವಂಶಗಳಲ್ಲಿ ಹುಟ್ಟಿದ ಐವರು ಪತ್ನಿಯರಿದ್ದರು: ನೃಗಾ, ಕೃಮೀ, ನವಾ, ದರ್ವಾ ಮತ್ತು ಐದನೆಯವಳು ದೃಷದ್ವತೀ.

ಉಶೀನರಸ್ಯ ಪುತ್ರಾಸ್ತು ಪಂಚ ತಾಸು ಕುಲೋದ್ವಹಾಃ ।
ತಪಸಾ ವೈ ಸುಮಹತಾ ಜಾತಾ ವೃದ್ಧಸ್ಯ ಭಾರತ ।। ೧-೩೧-೨೫

ಭಾರತ! ಉಶೀನರನಿಗೆ ಅವರಲ್ಲಿ ಐವರು ಕುಲೋದ್ವಹ ಪುತ್ರರು ಹುಟ್ಟಿದರು. ವೃದ್ಧಾಪ್ಯದಲ್ಲಿ ಮಹಾ ತಪಸ್ಸಿನಿಂದ ಅವರು ಹುಟ್ಟಿದ್ದರು.

ನೃಗಾಯಾಸ್ತು ನೃಗಃ ಪುತ್ರಃ ಕೃಮ್ಯಾಂ ಕೃಮಿರಜಾಯತ ।
ನವಾಯಾಸ್ತು ನವಃ ಪುತ್ರೋ ದರ್ವಾಯಾಃ ಸುವ್ರತೋಽಭವತ್ ।। ೧-೩೧-೨೬

ನೃಗಾಳಲ್ಲಿ ಹುಟ್ಟಿದ ಮಗನು ನೃಗ. ಕೃಮಿಯಲ್ಲಿ ಕೃಮಿಯು ಹುಟ್ಟಿದನು. ನವಾಳಲ್ಲಿ ನವನು ಮಗನಾದನು ಮತ್ತು ದರ್ವಾಳಲ್ಲಿ ಸುವ್ರತನು ಹುಟ್ಟಿದನು.

ದೃಷದ್ವತ್ಯಾಸ್ತು ಸಂಜಜ್ಞೇ ಶಿಬಿರೌಶೀನರೋ ನೃಪಃ ।
ಶಿಬೇಸ್ತು ಶಿಬಯಸ್ತಾತ ಯೋಧೇಯಾಸ್ತು ನೃಗಸ್ಯ ಹ ।। ೧-೩೧-೨೭

ದೃಷದ್ವತಿಯಲ್ಲಿ ನೃಪ ಶಿಬಿ ಔಶೀನರನು ಹುಟ್ಟಿದನು. ಅಯ್ಯಾ! ಶಿಬಿಗೆ ಶಿಬಿದೇಶವು ದೊರೆಯಿತು ಮತ್ತು ನೃಗನಿಗೆ ಯೌಧೇಯ ಪ್ರದೇಶವು ದೊರೆಯಿತು.

ನವಸ್ಯ ನವರಾಷ್ಟ್ರಂ ತು ಕೃಮೇಸ್ತು ಕೃಮಿಲಾ ಪುರೀ ।
ಸುವ್ರತಸ್ಯ ತಥಾಮ್ಬಷ್ಠಾ ಶಿಬಿಪುತ್ರಾನ್ನಿಬೋಧ ಮೇ ।। ೧-೩೧-೨೮

ನವನಿಗೆ ನವರಾಷ್ಟ್ರ, ಕೃಮಿಗೆ ಕೃಮಿಲಾ ಪುರಿ ಮತ್ತು ಸುವ್ರತನಿಗೆ ಅಂಬಷ್ಠ ರಾಜ್ಯಗಳು ದೊರೆತವು. ಈಗ ಶಿಬಿಯ ಪುತ್ರರ ಕುರಿತು ಕೇಳು.

ಶಿಬೇಶ್ಚ ಪುತ್ರಾಶ್ಚತ್ವಾರೋ ವೀರಾಸ್ತ್ರೈಲೋಕ್ಯವಿಶ್ರುತಾಃ ।
ವೃಷದರ್ಭಃ ಸುವೀರಶ್ಚ ಮದ್ರಕಃ ಕೈಕಯಸ್ತಥಾ ।। ೧-೩೧-೨೯

ಶಿಬಿಗೆ ನಾಲ್ವರು ತ್ರೈಲೋಕ್ಯವಿಶ್ರುತ ವೀರ ಪುತ್ರರಿದ್ದರು: ವೃಷದರ್ಭ, ಸುವೀರ, ಮದ್ರಕ ಮತ್ತು ಕೈಕಯ.

ತೇಷಾಂ ಜನಪದಾಃ ಸ್ಫೀತಾಃ ಕೇಕಯಾ ಮದ್ರಕಾಸ್ತಥಾ ।
ವೃಷದರ್ಭಾಃ ಸುವೀರಾಶ್ಚ ತಿತಿಕ್ಷೋಸ್ತು ಪ್ರಜಾಃ ಶೃಣು ।। ೧-೩೧-೩೦

ಇವರ ಸಮೃದ್ಧಶಾಲೀ ಜನಪದಗಳು ಅವರದ್ದೇ ಹೆಸರಿನಿಂದ ಪ್ರಸಿದ್ಧವಾದವು: ಕೇಕಯಾ, ಮದ್ರಕಾ, ವೃಷದರ್ಭಾ, ಮತ್ತು ಸುವೀರ ರಾಷ್ಟ್ರಗಳು. ತಿತಿಕ್ಷುವಿನ ಸಂತಾನಗಳ ಕುರಿತು ಕೇಳು.

ತೈತಿಕ್ಷವೋಽಭವದ್ರಾಜಾ ಪೂರ್ವಸ್ಯಾಂ ದಿಶಿ ಭಾರತ ।
ಉಷದ್ರಥೋ ಮಹಾಬಾಹುಸ್ತಸ್ಯ ಫೇನಃ ಸುತೋಽಭವತ್ ।। ೧-೩೧-೩೧

ಭಾರತ! ತಿತಿಕ್ಷುವಿನ ಪುತ್ರ ಮಹಾಬಾಹು ಉಷದ್ರಥನು ಆದನು. ಅವನು ಪೂರ್ವದಿಕ್ಕಿನ ರಾಜನಾಗಿದ್ದನು. ಫೇನನು ಅವನ ಮಗನಾಗಿದ್ದನು.

ಫೇನಾತ್ತು ಸುತಪಾ ಜಜ್ಞೇ ಸುತಹ್ ಸುತಪಸೋ ಬಲಿಃ ।
ಜಾತೋ ಮಾನುಷಯೋನೌ ತು ಸ ರಾಜಾ ಕಾಂಚನೇಷುಧೀಃ ।। ೧-೩೧-೩೨

ಫೇನನಿಗೆ ಸುತಪನು ಹುಟ್ಟಿದನು. ಸುತಪನ ಪುತ್ರನು ಬಲಿಯು. ದಾನವರಾಜ ಬಲಿಯೇ ಮನುಷ್ಯಯೋನಿಯಲ್ಲಿ ಜನ್ಮತಾಳಿದ್ದನು. ಅವನು ಕಾಂಚನದ ಬತ್ತಳಿಕೆಯನ್ನು ಹೊಂದಿದ್ದನು.

ಮಹಾಯೋಗೀ ಸ ತು ಬಲಿರ್ಬಭೂವ ನೃಪತಿಃ ಪುರಾ ।
ಪುತ್ರಾನುತ್ಪಾದಯಾಮಾಸ ಪಂಚ ವಂಶಕರಾನ್ಭುವಿ ।। ೧-೩೧-೩೩

ಪೂರ್ವಕಾಲದಲ್ಲಿ ನೃಪತಿ ಬಲಿಯು ಮಹಾಯೋಗಿಯಾಗಿದ್ದನು. ಅವನು ಭುವಿಯಲ್ಲಿ ಐವರು ಪುತ್ರರನ್ನು ಹುಟ್ಟಿಸಿದನು.

ಅಂಗಃ ಪ್ರಥಮತೋ ಜಜ್ಞೇ ವಂಗಃ ಸುಹ್ಮಸ್ತಥೈವ ಚ ।
ಪುಂಡಃ ಕಲಿಂಗಶ್ಚ ತಥಾ ಬಾಲೇಯಂ ಕ್ಷತ್ರಮುಚ್ಯತೇ ।। ೧-೩೧-೩೪

ಅಂಗನು ಪ್ರಥಮನು. ಅನಂತರ ಕ್ರಮಶಃ ವಂಗ, ಸುಹ್ಮ, ಪುಂಡ್ರ ಮತ್ತು ಕಲಿಂಗ. ಇವರೆಲ್ಲರೂ ಬಾಲೇಯ ಕ್ಷತ್ರಿಯರೆಂದು ಕರೆಯಲ್ಪಡುತ್ತಾರೆ.

ಬಾಲೇಯಾ ಬ್ರಾಹ್ಮಣಾಶ್ಚೈವ ತಸ್ಯ ವಂಶಕರಾ ಭುವಿ ।
ಬಲೇಸ್ತು ಬ್ರಹ್ಮನಾ ದತ್ತಾ ವರಾಃ ಪ್ರೀತೇನ ಭಾರತ ।। ೧-೩೧-೩೫

ಭಾರತ! ಬಲಿಯ ಕುಲದಲ್ಲಿ ಬಾಲೇಯ ಬ್ರಾಹ್ಮಣರೂ ಆದರು. ಅವರು ಭುವಿಯಲ್ಲಿ ಅವನ ವಂಶವನ್ನು ವೃದ್ಧಿಸಿದರು. ಬ್ರಹ್ಮನು ಪ್ರೀತನಾಗಿ ಬಲಿಗೆ ಈ ವರವನ್ನಿತ್ತಿದ್ದನು:

ಮಹಾಯೋಗಿತ್ವಮಾಯುಶ್ಚ ಕಲ್ಪಸ್ಯ ಪರಿಮಾಣತಃ ।
ಸಂಗ್ರಾಮೇ ವಾಪ್ಯಜೇಯತ್ವಂ ಧರ್ಮಂ ಚೈವ ಪ್ರಧಾನತಾ ।। ೧-೩೧-೩೬

“ನೀನು ಮಹಾಯೋಗಿಯಾಗುವೆ. ನಿನ್ನ ಆಯಸ್ಸು ಒಂದು ಕಲ್ಪದವರೆಗೆ ಇರುತ್ತದೆ. ನೀನು ಯುದ್ಧದಲ್ಲಿ ಅಜೇಯನಾಗುವೆ, ನಿನಗೆ ಧರ್ಮವೇ ಪ್ರಧಾನವಾಗಿರುವುದು.

ತ್ರೈಲೋಕ್ಯದರ್ಶನಮ್ ಚೈವ ಪ್ರಾಧಾನ್ಯಂ ಪ್ರಸವೇ ತಥಾ ।
ಬಲೇ ಚಾಪ್ರತಿಮತ್ವಂ ವೈ ಧರ್ಮತತ್ತ್ವಾರ್ಥದರ್ಶನಂ ।। ೧-೩೧-೩೭

ನಿನಗೆ ಮೂರೂ ಲೋಕಗಳೂ ಕಾಣಿಸುತ್ತವೆ. ನಿನ್ನ ಸಂತಾನವು ಪ್ರಾಧಾನ್ಯತೆಯನ್ನು ಪಡೆದುಕೊಳ್ಳುತ್ತದೆ. ಬಲದಲ್ಲಿ ನೀನು ಅಪ್ರತಿಮನಾಗಿರುವೆ. ನಿನಗೆ ಧರ್ಮತತ್ತ್ವಾರ್ಥಗಳ ದರ್ಶನವಾಗುತ್ತದೆ.

ಚತುರೋ ನಿಯತಾನ್ವರ್ಣಾಂಸ್ತ್ವಂ ಚ ಸ್ಥಾಪಯಿತಾ ಭುವಿ ।
ಇತ್ಯುಕ್ತೋ ವಿಭುನಾ ರಾಜಾ ಬಲಿಃ ಶಾಂತಿಂ ಪರಾಮ್ಯಯೌ ।। ೧-೩೧-೩೮

ನೀನು ಭುವಿಯಲ್ಲಿ ನಾಲ್ಕೂ ವರ್ಣದವರನ್ನು ನಿಯಂತ್ರಿಸಿ ಅವರನ್ನು ಮರ್ಯಾದೆಗಳ ಒಳಗೇ ಸ್ಥಾಪಿಸುತ್ತೀಯೆ.” ವಿಭುವು ಹೀಗೆ ಹೇಳಲು ರಾಜಾ ಬಲಿಯು ಪರಮ ಶಾಂತಿಯನ್ನು ಹೊಂದಿದನು.

ತಸ್ಯ ತೇ ತನಯಾಃ ಸರ್ವೇ ಕ್ಷೇತ್ರಜಾ ಮುನಿಪುಂಗವಾಃ ।
ಸಂಭೂತಾ ದೀರ್ಘತಪಸೋ ಸುದೇಕ್ಷ್ಣಾಯಾಂ ಮಹೌಜಸಃ ।। ೧-೩೧-೩೯

ಅವನ ಮಕ್ಕಳೆಲ್ಲರೂ ಕ್ಷೇತ್ರಜರಾಗಿದ್ದರು. ಮುನಿಪುಂಗವ ದೀರ್ಘತಪಸನಿಂದ ಸುದೇಷ್ಣಾಳ ಗರ್ಭದಲ್ಲಿ ಜನಿಸಿದ್ದರು. ಎಲ್ಲರೂ ಮಹೌಜಸರಾಗಿದ್ದರು.

ಬಲಿಸ್ತಾನಭಿಶಿಚ್ಯೇಹ ಪಂಚ ಪುತ್ರಾನಕಲ್ಮಷಾನ್ ।
ಕೃತಾರ್ಥಃ ಸೋಽಪಿ ಯೋಗಾತ್ಮಾ ಯೋಗಮಾಶೃತ್ಯ ಸ ಪ್ರಭುಃ ।। ೧-೩೧-೪೦
ಅಧೃಷ್ಯಃ ಸರ್ವಭೂತಾನಾಂ ಕಾಲಾಪೇಕ್ಷೀ ಚರನ್ನಪಿ ।
ಕಾಲೇನ ಮಹತಾ ರಾಜನ್ಸ್ವಂ ಚ ಸ್ಥಾನಮುಪಾಗಮತ್ ।। ೧-೩೧-೪೧

ಬಲಿಯಾದರೋ ಆ ಐವರು ಅಕಲ್ಮಷ ಪುತ್ರರನ್ನು ಅಭಿಷೇಕಿಸಿ ಕೃತಾರ್ಥನಾದನು. ಆ ಪ್ರಭು ಯೋಗಾತ್ಮನು ಯೋಗವನ್ನು ಆಶ್ರಯಿಸಿ ಸರ್ವಭೂತಗಳಿಗೂ ಅಜೇಯನಾಗಿದ್ದನು. ಕಾಲವನ್ನು ಅಪೇಕ್ಷಿಸುತ್ತಾ ಸಂಚರಿಸುತ್ತಿದ್ದನು. ರಾಜನ್! ದೀರ್ಘಕಾಲದ ನಂತರ ಅವನಿಗೆ ತನ್ನ ಸ್ಥಾನವಾದ ಸುತಲಲೋಕವು ದೊರಕಿತು.

ತೇಷಾಂ ಜನಪದಾಃ ಪಂಚ ಅಂಗಾ ವಂಗಾಃ ಸಸುಹ್ಮಕಾಃ ।
ಕಲಿಂಗಾಃ ಪುಂಡ್ರಕಾಶ್ಚೈವ ಪ್ರಜಾಸ್ತ್ವಂಗಸ್ಯ ಮೇ ಶೃಣು ।। ೧-೩೧-೪೨

ಬಲಿಯ ಐವರು ಪುತ್ರರ ಐದು ಜನಪದಗಳು ಇಂತಿವೆ: ಅಂಗ, ವಂಗ, ಸುಹ್ಮಕ, ಕಲಿಂಗ ಮತ್ತು ಪುಂಡ್ರಕ. ಈಗ ಅಂಗನ ಸಂತಾನದ ಕುರಿತು ಕೇಳು.

ಅಂಗಪುತ್ರೋ ಮಹಾನಾಸೀದ್ರಾಜೇಂದ್ರೋ ದಧಿವಾಹನಃ ।
ದಧಿವಾಹನಪುತ್ರಸ್ತು ರಾಜಾ ದಿವಿರಥೋಽಭವತ್ ।। ೧-೩೧-೪೩

ಮಹಾನ್ ರಾಜೇಂದ್ರ ದಧಿವಾಹನನು ಅಂಗಪುತ್ರನಾಗಿದ್ದನು. ರಾಜಾ ದಿವಿರಥನು ದಧಿವಾನನನ ಪುತ್ರನಾದನು.

ಪುತ್ರೋ ದಿವಿರಥಸ್ಯಾಸೀಚ್ಛಕ್ರತುಲ್ಯಪರಾಕ್ರಮಃ ।
ವಿದ್ವಾಂಧರ್ಮರಥೋ ನಾಮ ತಸ್ಯ ಚಿತ್ರರಥಃ ಸುತಃ ।। ೧-೩೧-೪೪

ದಿವಿರಥನ ಪುತ್ರನು ಶಕ್ರತುಲ್ಯ ಪರಾಕ್ರಮಿಯಾಗಿದ್ದನು. ಆ ವಿದ್ವಾನನ ಹೆಸರು ಧರ್ಮರಥನೆಂದಿತ್ತು. ಚಿತ್ರರಥನು ಅವನ ಮಗನು.

ತೇನ ಚಿತ್ರರಥೇನಾಥ ತದಾ ವಿಷ್ಣುಪದೇ ಗಿರೌ ।
ಯಜತಾ ಸಹ ಶಕ್ರೇಣ ಸೋಮಃ ಪೀತೋ ಮಹಾತ್ಮನಾ ।। ೧-೩೧-೪೫

ಚಿತ್ರರಥನು ವಿಷ್ಣುಪದ ಗಿರಿಯಲ್ಲಿ ಯಜ್ಞವನ್ನು ನಡೆಸಿದಾಗ ಆ ಮಹಾತ್ಮನು ಶಕ್ರನೊಂದಿಗೆ ಸೋಮವನ್ನು ಕುಡಿದಿದ್ದನು.

ಅಥ ಚಿತ್ರರಥಸ್ಯಾಪಿ ಪುತ್ರೋ ದಶರಥೋಽಭವತ್ ।
ಲೋಮಪಾದ ಇತಿ ಖ್ಯಾತೋ ಯಸ್ಯ ಶಾಂತಾ ಸುತಾಭವತ್ ।। ೧-೩೧-೪೬

ಚಿತ್ರರಥನ ಪುತ್ರನು ದಶರಥನಾದನು. ಅವನು ಲೋಮಪಾದನೆಂದು ಖ್ಯಾತನಾಗಿದ್ದನು. ಅವನ ಮಗಳು ಶಾಂತಾ.

ತಸ್ಯ ದಾಶರಥಿರ್ವೀರಶ್ಚತುರಂಗೋ ಮಹಾಯಶಾಃ ।
ಋಶ್ಯಶೃಂಗಪ್ರಸಾದೇನ ಜಜ್ಞೇ ಕುಲವಿವರ್ಧನಃ ।। ೧-೩೧-೪೭

ಆ ಲೋಮಪಾದ ದಶರಥನ ಮಗನು ಮಹಾಯಶಸ್ವೀ ವೀರ ಚತುರಂಗನು. ಆ ಕುಲವಿವರ್ಧನನು ಋಷ್ಯಶೃಂಗನ ಪ್ರಸಾದದಿಂದ ಹುಟ್ಟಿದ್ದನು.

ಚತುರಂಗಸ್ಯ ಪುತ್ರಸ್ತು ಪೃಥುಲಾಕ್ಷ ಇತಿ ಸ್ಮೃತಃ ।
ಪೃಥುಲಾಕ್ಷಸುತೋ ರಾಜಾ ಚಂಪೋ ನಾಮಾ ಮಹಾಯಶಾಃ ।। ೧-೩೧-೪೮

ಚತುರಂಗನ ಪುತ್ರನು ಪೃಥುಲಾಕ್ಷ ಎಂದು ಹೇಳುತ್ತಾರೆ. ಪೃಥುಲಾಕ್ಷನ ಮಗನು ಚಂಪಾ ಎಂಬ ಹೆಸರಿನ ಮಹಾಯಶಸ್ವೀ ರಾಜನು.

ಚಂಪಸ್ಯ ತು ಪುರೀ ಚಂಪಾ ಯಾ ಮಾಲಿನ್ಯಭವತ್ಪುರಾ ।
ಪೂರ್ಣಭದ್ರಪ್ರಸಾದೇನ ಹರ್ಯಂಗೋಽಸ್ಯ ಸುತೋಽಭವತ್ ।। ೧-೩೧-೪೯

ಚಂಪನ ಪುರಿಯು ಚಂಪಾ ಎಂದಾಯಿತು. ಅದು ಹಿಂದೆ ಮಾಲಿನಿ ಎಂಬ ಹೆಸರನ್ನು ಪಡೆದಿತ್ತು. ಋಷಿ ಪೂರ್ಣಭದ್ರನ ಪ್ರಸಾದದಿಂದ ಅವನಿಗೆ ಹರ್ಯಂಗ ಎಂಬ ಸುತನಾದನು.

ತತೋ ವೈಭಾಂಡಕಿಸ್ತಸ್ಯ ವಾರಣಂ ಶಕ್ರವಾರಣಮ್ ।
ಅವತಾರಯಾಮಾಸ ಮಹೀಂ ಮಂತ್ರೈರ್ವಾಹನಮುತ್ತಮಮ್ ।। ೧-೩೧-೫೦

ಆಗ ವಿಭಾಂಡಕ ಮುನಿಯ ಪುತ್ರ ಋಷ್ಯಶೃಂಗನು ಅವನಿಗಾಗಿ ಉತ್ತಮ ವಾಹನ ಶಕ್ರನ ಆನೆ ಐರಾವತವನ್ನು ಮಂತ್ರಗಳ ಮೂಲಕ ಭೂಮಿಗೆ ಇಳಿಸಿದ್ದನು.

ಹರ್ಯಂಗಸ್ಯ ತು ದಾಯಾದೋ ರಾಜಾ ಭದ್ರರಥಃ ಸ್ಮೃತಃ ।
ಪುತ್ರೋ ಭದ್ರರಥಸ್ಯಾಸೀದ್ಬೃಹತ್ಕರ್ಮಾ ಪ್ರಜೇಶ್ವರಃ ।। ೧-೩೧-೫೧

ಹರ್ಯಂಗನ ಪುತ್ರನು ರಾಜಾ ಭದ್ರರಥನಾದನು. ಭದ್ರರಥನ ಪುತ್ರನು ಪ್ರಜೇಶ್ವರ ಬೃಹತ್ಕರ್ಮನಾದನು.

ಬೃಹದ್ದರ್ಭಃ ಸುತಸ್ತಸ್ಯ ತಸ್ಮಾಜ್ಜಜ್ಞೇ ಬೃಹನ್ಮನಾಃ ।
ಬೃಹನ್ಮನಾಸ್ತು ರಾಜೇಂದ್ರ ಜನಯಾಮಾಸ ವೈ ಸುತಮ್ ।। ೧-೩೧-೫೨
ನಾಮ್ನಾ ಜಯದ್ರಥಂ ನಾಮ ಯಸ್ಮಾದ್ದೃಢರಥೋ ನೃಪಃ ।

ಬೃಹತ್ಕರ್ಮನ ಮಗನು ಬೃಹದ್ದರ್ಭನು. ಅವನಿಗೆ ಬೃಹನ್ಮನನು ಹುಟ್ಟಿದನು. ರಾಜೇಂದ್ರ! ಬೃಹನ್ಮನನು ಜಯದ್ರಥನೆಂಬ ಹೆಸರಿನ ಪುತ್ರನನ್ನು ಹುಟ್ಟಿಸಿದನು. ಅವನ ಮಗನು ನೃಪ ದೃಢರಥನು.

ಆಸೀದ್ದೃಢರಥಸ್ಯಾಪಿ ವಿಶ್ವಜಿಜ್ಜನಮೇಜಯ ।
ದಾಯಾದಸ್ತಸ್ಯ ಕರ್ಣಸ್ತು ವಿಕರ್ಣಸ್ತಸ್ಯ ಚಾತ್ಮಜಃ ।। ೧-೩೧-೫೩
ತಸ್ಯ ಪುತ್ರಶತಂ ತ್ವಾಸೀದಂಗಾನಾಂ ಕುಲವರ್ಧನಮ್ ।

ಜನಮೇಜಯ! ದೃಢರಥನ ಮಗನು ವಿಶ್ವಜಿತುವು. ಅವನ ಮಗನು ಕರ್ಣ ಮತ್ತು ಅವನ ಮಗನು ವಿಕರ್ಣ. ವಿಕರ್ಣನಿಗೆ ನೂರು ಮಕ್ಕಳಿದ್ದರು. ಅವರು ಅಂಗರ ಕುಲವರ್ಧನರಾಗಿದ್ದರು.

ಬೃಹದ್ದರ್ಭಸುತೋ ಯಸ್ತು ರಾಜಾ ನಾಮ್ನಾ ಬೃಹನ್ಮನಾಃ ।। ೧-೩೧-೫೪
ತಸ್ಯ ಪತ್ನೀದ್ವಯಂ ಚಾಸೀಚ್ಚೈದ್ಯಸ್ಯೈತೇ ಸುತೇ ಶುಭೇ ।
ಯಶೋದೇವೀ ಚ ಸತ್ಯಾ ಚ ತಾಭ್ಯಾಂ ವಂಶಸ್ತು ಭಿದ್ಯತೇ ।। ೧-೩೧-೫೫

ಬೃಹದ್ದರ್ಭನ ಮಗ ಬೃಹನ್ಮನಾ ಎಂಬ ಹೆಸರಿನ ಯಾವ ರಾಜನಿದ್ದನೋ ಅವನಿಗೆ ಇಬ್ಬರು ಪತ್ನಿಯರಿದ್ದರು. ಇಬ್ಬರೂ ಚೇದಿರಾಜನ ಶುಭ ಸುತೆಯರು: ಯಶೋದೇವೀ ಮತ್ತು ಸತ್ಯಾ. ಅವರಿಬ್ಬರಿಂದ ವಂಶವು ಒಡೆಯಿತು.

ಜಯದ್ರಥಸ್ತು ರಾಜೇಂದ್ರ ಯಶೋದೇವ್ಯಾಂ ವ್ಯಜಾಯತ ।
ಬ್ರಹ್ಮಕ್ಷತ್ರೋತ್ತರಃ ಸತ್ಯಾಂ ವಿಜಯೋ ನಾಮ ವಿಶ್ರುತಃ ।। ೧-೩೧-೫೬

ರಾಜೇಂದ್ರ! ಜಯದ್ರಥನು ಯಶೋದೇವಿಯಲ್ಲಿ ಹುಟ್ಟಿದನು. ಬೃಹನ್ಮನನ ಇನ್ನೊಬ್ಬ ಪುತ್ರನು ಸತ್ಯೆಯಲ್ಲಿ ಹುಟ್ಟಿದನು. ಅವನು ವಿಜಯ ಎಂಬ ನಾಮದಿಂದ ವಿಶ್ರುತನಾದನು. ಅವನು ಬ್ರಾಹ್ಮಣ-ಕ್ಷತ್ರಿಯ ಗುಣಗಳಿಂದ ಉತ್ಕೃಷ್ಟನಾಗಿದ್ದನು.

ವಿಜಯಸ್ಯ ಧೃತಿಃ ಪುತ್ರಸ್ತಸ್ಯ ಪುತ್ರೋ ಧೃತವ್ರತಃ ।
ಧೃತವ್ರತಸ್ಯ ಪುತ್ರಸ್ತು ಸತ್ಯಕರ್ಮಾ ಮಹಾಯಶಾಃ ।। ೧-೩೧-೫೭

ವಿಜಯನ ಪುತ್ರನು ಧೃತಿ. ಅವನ ಪುತ್ರನು ಧೃತವ್ರತ. ಧೃತವ್ರತನ ಪುತ್ರನು ಮಹಾಯಶಸ್ವೀ ಸತ್ಯಕರ್ಮ.

ಸತ್ಯಕರ್ಮಸುತಶ್ಚಾಪಿ ಸೂತಸ್ತ್ವಧಿರಥಸ್ತು ವೈ ।
ಯಃ ಕರ್ಣಂ ಪ್ರತಿ ಜಗ್ರಾಹ ತತಃ ಕರ್ಣಸ್ತು ಸೂತಜಃ ।। ೧-೩೧-೫೮

ಸತ್ಯಕರ್ಮನ ಸುತನು ಸೂತ ಅಧಿರಥನು. ಅವನು ಕರ್ಣನನ್ನು ಮಗನನ್ನಾಗಿ ಸ್ವೀಕರಿಸಿದ್ದನು. ಅದರಿಂದಾಗಿ ಕರ್ಣನು ಸೂತಜನೆಂದಾಗಿದ್ದನು.

ಏತದ್ವಃ ಕಥಿತಂ ಸರ್ವಂ ಕರ್ಣಂ ಪ್ರತಿ ಮಹಾಬಲಮ್ ।
ಕರ್ಣಸ್ಯ ವೃಷಸೇನಸ್ತು ವೃಷಸ್ತಸ್ಯಾತ್ಮಜಃ ಸ್ಮೃತಃ ।। ೧-೩೧-೫೯

ಈ ಎಲ್ಲವನ್ನೂ ನಾನು ನಿನಗೆ ಮಹಾಬಲೀ ಕರ್ಣನ ವಿಷಯದಲ್ಲಿ ಹೇಳಿದ್ದೇನೆ. ಕರ್ಣನ ಪುತ್ರನು ವೃಷಸೇನನಾದನು. ವೃಷಸೇನನ ಪುತ್ರನು ವೃಷ ಎಂದು ಹೇಳುತ್ತಾರೆ.

ಏತೇಽಂಗವಂಶಜಾಃ ಸರ್ವೇ ರಾಜಾನಃ ಕೀರ್ತಿತಾ ಮಯಾ ।
ಸತ್ಯವ್ರತಾ ಮಹಾತ್ಮಾನಃ ಪ್ರಜಾವಂತೋ ಮಹಾರಥಾಃ ।। ೧-೩೧-೬೦

ಈ ಎಲ್ಲ ಅಂಗವಂಶಜ ರಾಜರ ಕುರಿತು ನಾನು ಹೇಳಿದ್ದೇನೆ. ಆ ಮಹಾರಥರು ಮಹಾತ್ಮರೂ ಸತ್ಯವ್ರತರೂ ಮತ್ತು ಪ್ರಜಾವಂತರೂ ಆಗಿದ್ದರು.

ಋಚೇಯೋಸ್ತು ಮಹಾರಾಜ ರೌದ್ರಾಶ್ವತನಯಸ್ಯ ಹ ।
ಶೃಣು ವಂಶಮನುಪ್ರೋಕ್ತಂ ಯತ್ರ ಜಾತೋಽಸಿ ಪಾರ್ಥಿವ ।। ೧-೩೧-೬೧

ಪಾರ್ಥಿವ! ಮಹಾರಾಜ! ಈಗ ನೀನು ಹುಟ್ಟಿರುವ ರೌದ್ರಾಶ್ವನ ಪುತ್ರ ಋಚೇಯುವಿನ ವಂಶದ ಕುರಿತು ಹೇಳುತ್ತೇನೆ. ಕೇಳು.”

ಸಮಾಪ್ತಿ

ಇತಿ ಶ್ರೀಮಹಾಭಾರತೇ ಖಿಲೇಷು ಹರಿವಂಶೇ ಹರಿವಂಶಪರ್ವಣಿ ಕುಕ್ಷೇಯುವಂಶಾನುಕೀರ್ತನಂ ನಾಮ ಏಕತ್ರಿಂಶೋಽಧ್ಯಾಯಃ


  1. ಏಕೆಂದರೆ ಪುತ್ರಿಕಾ ಧರ್ಮದ ಪ್ರಕಾರ ಅವರು ಅವರ ತಾಯಿಯ ತಂದೆಯ ಸಂತಾನವಾಗಿದ್ದರು. ↩︎