ಪ್ರವೇಶ
।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।
ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ
ಶ್ರೀ ಮಹಾಭಾರತ
ಖಿಲಭಾಗೇ ಹರಿವಂಶಃ
ಹರಿವಂಶ ಪರ್ವ
ಅಧ್ಯಾಯ 29
ಸಾರ
ಅನೇನನ ವಂಶದ ವರ್ಣನೆ; ಕ್ಷತ್ರವೃದ್ಧನ ವಂಶದ ವರ್ಣನೆ; ಧನ್ವಂತರಿಯು ಕಾಶಿರಾಜ ಧನ್ವನ ಮಗನಾಗಿ ಅವತರಿಸಿದುದು; ದಿವೋದಾಸನ ರಾಜ್ಯಕಾಲದಲ್ಲಿ ಶಿವನ ಆಜ್ಞೆಯಂತೆ ನಿಕುಂಭನು ವಾರಾಣಸಿಯನ್ನು ಜನಶೂನ್ಯವಾಗಿ ಮಾಡಿದುದು; ಅಲ್ಲಿ ಶಿವ-ಪಾರ್ವತಿಯರ ವಾಸ; ವಾರಾಣಸಿಯಲ್ಲಿ ದಿವೋದಾಸನ ರಾಜ್ಯಭಾರ; ಅಲರ್ಕನೇ ಮೊದಲಾದ ನಂತರದ ಕಾಶಿರಾಜರ ವರ್ಣನೆ.
ವೈಶಂಪಾಯನ ಉವಾಚ
ರಂಭೋಽನಪತ್ಯಸ್ತತ್ರಾಸೀದ್ವಂಶಂ ವಕ್ಷ್ಯಾಮ್ಯನೇನಸಃ ।
ಅನೇನಸಃ ಸುತೋ ರಾಜಾ ಪ್ರತಿಕ್ಷತ್ರೋ ಮಹಾಯಶಾಃ ।। ೧-೨೯-೧
ವೈಶಂಪಾಯನನು ಹೇಳಿದನು: “ಆಯುಪುತ್ರ ರಂಭನಿಗೆ ಮಕ್ಕಳಿರಲಿಲ್ಲ. ಈಗ ನಾನು ಅನೇನನ ವಂಶದ ಕುರಿತು ಹೇಳುತ್ತೇನೆ. ಮಹಾಯಶಸ್ವೀ ರಾಜಾ ಪ್ರತಿಕ್ಷತ್ರನು ಅನೇನನ ಮಗನಾಗಿದ್ದನು.
ಪ್ರತಿಕ್ಷತ್ರಸುತಶ್ಚಾಪಿ ಸೃಂಜಯೋ ನಾಮ ವಿಶ್ರುತಃ ।
ಸೃಂಜಯಸ್ಯ ಜಯಃ ಪುತ್ರೋ ವಿಜಯಸ್ತಸ್ಯ ಚಾತ್ಮಜಃ ।। ೧-೨೯-೨
ಪ್ರತಿಕ್ಷತ್ರನ ಮಗನು ಸೃಂಜಯ ಎಂಬ ಹೆಸರಿನಿಂದ ವಿಶ್ರುತನಾದನು. ಸೃಂಜಯನ ಮಗನು ಜಯ ಮತ್ತು ವಿಜಯನು ಅವನ ಮಗ.
ವಿಜಯಸ್ಯ ಕೃತಿಃ ಪುತ್ರಸ್ತಸ್ಯ ಹರ್ಯಶ್ವತಃ ಸುತಃ ।
ಹರ್ಯಶ್ವತಸುತೋ ರಾಜಾ ಸಹದೇವಃ ಪ್ರತಾಪವಾನ್ ।। ೧-೨೯-೩
ವಿಜಯನ ಮಗನು ಕೃತಿ ಮತ್ತು ಹರ್ಯಶ್ವನು ಅವನ ಮಗ. ಹರ್ಯಶ್ವನ ಮಗನು ಪ್ರತಾಪವಾನ್ ರಾಜ ಸಹದೇವನು.
ಸಹದೇವಸ್ಯ ಧರ್ಮಾತ್ಮಾ ನದೀನ ಇತಿ ವಿಶ್ರುತಃ ।
ನದೀನಸ್ಯ ಜಯತ್ಸೇನೋ ಜಯತ್ಸೇನಸ್ಯ ಸಂಕೃತಿಃ ।। ೧-೨೯-೪
ಸಹದೇವನ ಮಗನು ಧರ್ಮಾತ್ಮಾ ನದೀನನೆಂದು ವಿಶ್ರುತನಾದನು. ನದೀನನ ಮಗನು ಜಯತ್ಸೇನ ಮತ್ತು ಜಯತ್ಸೇನನ ಮಗನು ಸಂಕೃತಿ.
ಸಂಕೃತೇರಪಿ ಧರ್ಮಾತ್ಮಾ ಕ್ಷತ್ರಧರ್ಮಾ ಮಹಾಯಶಾಃ ।
ಅನೇನಸಃ ಸಮಾಖ್ಯಾತಾಃ ಕ್ಷತ್ರವೃದ್ಧಸ್ಯ ಮೇ ಶೃಣು ।। ೧-೨೯-೫
ಸಂಕೃತಿಯ ಮಗನು ಧರ್ಮಾತ್ಮಾ ಮಹಾಯಶಸ್ವೀ ಕ್ಷತ್ರಧರ್ಮನಾದನು. ಇಲ್ಲಿಯವರೆಗೆ ಅನೇನನ ವಂಶದ ಕುರಿತು ಹೇಳಿದ್ದಾಯಿತು. ಈಗ ಆಯುಪುತ್ರ ಕ್ಷತ್ರವೃದ್ಧನ1 ಕುರಿತು ಕೇಳು.
ಕ್ಷತ್ರವೃದ್ಧಾತ್ಮಜಸ್ತತ್ರ ಸುನಹೋತ್ರೋ ಮಹಾಯಶಾಃ ।
ಸುನಹೋತ್ರಸ್ಯ ದಾಯಾದಾಸ್ತ್ರಯಃ ಪರಮಧಾರ್ಮಿಕಾಃ ।। ೧-೨೯-೬
ಕಾಶಃ ಶಲಶ್ಚ ದ್ವಾವೇತೌ ತಥಾ ಗೃತ್ಸಮದಃ ಪ್ರಭುಃ ।
ಪುತ್ರೋ ಗೃತ್ಸಮದಸ್ಯಾಪಿ ಶುನಕೋ ಯಸ್ಯ ಶೌನಕಃ ।। ೧-೨೯-೭
ಬ್ರಾಹ್ಮಣಾಃ ಕ್ಷತ್ರಿಯಾಶ್ಚೈವಂ ವೈಶ್ಯಾಃ ಶೂದ್ರಾಸ್ತಥೈವ ಚ ।
ಕ್ಷತ್ರವೃದ್ಧನ ಮಗನು ಮಹಾಯಶಸ್ವೀ ಸುನಹೋತ್ರನು. ಸುನಹೋತ್ರನಿಗೆ ಪರಮಧಾರ್ಮಿಕರಾದ ಮೂವರು ಪುತ್ರರಿದ್ದರು: ಕಾಶ, ಶಲ ಇವರಿಬ್ಬರು ಮತ್ತು ಪ್ರಭು ಗೃತ್ಸಮದ. ಗೃತ್ಸಮದನ ಮಗನು ಶುನಕ ಮತ್ತು ಶುನಕನಿಂದ ಶೌನಕರಾದರು. ಶೌನಕರಲ್ಲಿ ಬ್ರಾಹ್ಮಣರು, ಕ್ಷತ್ರಿಯರು, ವೈಶ್ಯರು ಮತ್ತು ಶೂದ್ರರು ಆದರು.
ಶಲಾತ್ಮಜಶ್ಚಾರ್ಷ್ಟಿಷೇಣಸ್ತನಯಸ್ತಸ್ಯ ಕಾಶಕಃ ।। ೧-೨೯-೮
ಕಾಶಸ್ಯ ಕಾಶಯೋ ರಾಜನ್ಪುತ್ರೋ ದೀರ್ಘತಪಾಸ್ತಥಾ ।
ಧನ್ವಸ್ತು ದೀರ್ಘತಪಸೋ ವಿದ್ವಾಂಧನ್ವಂತರಿಸ್ತತಃ ।। ೧-೨೯-೯
ಶಲನ ಮಗನು ಆರ್ಷ್ಟಿಷೇಣನು. ಅವನ ಮಗನು ಕಾಶಕನು. ರಾಜನ್! ಕಾಶನ ಪುತ್ರರು ಕಾಶಯರಾದರು. ಅವರಲ್ಲಿ ದೀರ್ಘತಪನು ಹಿರಿಯವನು. ದೀರ್ಘತಪನಿಗೆ ಧನ್ವನು ಮಗನಾದನು. ಮತ್ತು ಧನ್ವನಿಗೆ ಧನ್ವಂತರಿಯು ಮಗನಾದನು.
ತಪಸೋಽಂತೇ ಸುಮಹತೋ ಜಾತೋ ವೃದ್ಧಸ್ಯ ಧೀಮತಃ ।
ಪುನರ್ಧನ್ವಂತರಿರ್ದೇವೋ ಮಾನುಷೇಷ್ವಿಹ ಜಜ್ಞಿವಾನ್ ।। ೧-೨೯-೧೦
ಮಹಾತಪಸ್ಸಿನ ಅಂತ್ಯದಲ್ಲಿ ದೇವ ಧನ್ವಂತರಿಯು ಧೀಮತ ವೃದ್ಧ ಧನ್ವನಿಗೆ ಮಗನಾಗೆ ಪುನಃ ಇಲ್ಲಿ ಮನುಷ್ಯನಾಗಿ ಜನ್ಮತಾಳಿದನು.”
ಜನಮೇಜಯ ಉವಾಚ
ಕಥಂ ಧನ್ವಂತರಿರ್ದೇವೋ ಮಾನುಷೇಷ್ವಿಹ ಜಜ್ಞಿವಾನ್ ।
ಏತದ್ವೇದಿತುಮಿಚ್ಛಾಮಿ ತನ್ಮೇ ಬ್ರೂಹಿ ಯಥಾತಥಮ್ ।। ೧-೨೯-೧೧
ಜನಮೇಜಯನು ಹೇಳಿದನು: “ದೇವ ಧನ್ವಂತರಿಯು ಹೇಗೆ ಇಲ್ಲಿ ಮನುಷ್ಯನಾಗಿ ಜನ್ಮತಾಳಿದನು? ಇದನ್ನು ಕೇಳಲು ಬಯಸುತ್ತೇನೆ. ನಡೆದಹಾಗೆ ನನಗೆ ಹೇಳು.”
ವೈಶಂಪಾಯನ ಉವಾಚ
ಧನ್ವಂತರೇಃ ಸಂಭವೋಽಯಂ ಶ್ರೂಯತಾಂ ಭರತರ್ಷಭ ।
ಜಾತಃ ಸ ಹಿ ಸಮುದ್ರಾತ್ತು ಮಥ್ಯಮಾನೇ ಪುರಾಮೃತೇ ।। ೧-೨೯-೧೨
ವೈಶಂಪಾಯನನು ಹೇಳಿದನು: “ಭರತರ್ಷಭ! ಧನ್ವಂತರಿಯ ಜನ್ಮದ ಕುರಿತು ಕೇಳಬೇಕು. ಅವನು ಹಿಂದೆ ಅಮೃತಕ್ಕಾಗಿ ಸಮುದ್ರವನ್ನು ಮಥಿಸುವಾಗ ಸಮುದ್ರದಿಂದ ಉತ್ಪನ್ನನಾಗಿದ್ದನಷ್ಟೇ.
ಉತ್ಪನ್ನಃ ಕಲಶಾತ್ಪೂರ್ವಂ ಸರ್ವತಶ್ಚ ಶ್ರಿಯಾ ವೃತಃ ।
ಅಭ್ಯಸನ್ಸಿದ್ಧಿಕಾರ್ಯೇ ಹಿ ವಿಷ್ಣುಂ ದೃಷ್ಟ್ವಾ ಹಿ ತಸ್ಥಿವಾನ್ ।। ೧-೨೯-೧೩
ಮೊದಲು ಅವನು ಸಮುದ್ರದಿಂದ ಉತ್ಪನ್ನನಾದಾಗ ಅವನು ವಿಷ್ಣುವಿನ ನಾಮಗಳನ್ನು ಜಪಿಸುತ್ತಿದ್ದನು ಮತ್ತು ಆರೋಗ್ಯ ಸಾಧಕ ಕಾರ್ಯದ ಕುರಿತು ಚಿಂತಿಸುತ್ತಾ ಎಲ್ಲ ಕಡೆಗಳಿಂದಲೂ ದಿವ್ಯ ಕಾಂತಿಯಿಂದ ಪ್ರಕಾಶಿತನಾಗಿದ್ದನು. ಅವನು ತನ್ನ ಎದಿರು ವಿಷ್ಣುವನ್ನು ನೋಡಿ ಎದ್ದು ನಿಂತನು.
ಅಬ್ಜಸ್ತ್ವಮಿತಿ ಹೋವಾಚ ತಸ್ಮಾದಬ್ಜಸ್ತು ಸ ಸ್ಮೃತಃ ।
ಅಬ್ಜಃ ಪ್ರೋವಾಚ ವಿಷ್ಣುಂ ವೈ ತವ ಪುತ್ರೋಽಸ್ಮಿ ವೈ ಪ್ರಭೋ ।। ೧-೨೯-೧೪
ಆಗ ವಿಷ್ಣುವು “ನೀನು ಆಪದಿಂದ ಉತ್ಪನ್ನನಾಗಿರುವುದರಿಂದ ಅಬ್ಜ” ಎಂದನು. ಅಂದಿನಿಂದ ಅವನು ಅಬ್ಜನೆಂದೇ ಆದನು. ಅಬ್ಜನು ವಿಷ್ಣುವಿಗೆ “ಪ್ರಭೋ! ನಾನು ನಿನ್ನ ಪುತ್ರನು!” ಎಂದು ಹೇಳಿದನು.
ವಿಧತ್ಸ್ವ ಭಾಗಂ ಸ್ಥಾನಂ ಚ ಮಮ ಲೋಕೇ ಸುರೇಶ್ವರ ।
ಏವಮುಕ್ತಃ ಸ ದೃಷ್ಟ್ವಾ ವೈ ತಥ್ಯಂ ಪ್ರೋವಾಚ ತಂ ಪ್ರಭುಃ ।। ೧-೨೯-೧೫
“ಸುರೇಶ್ವರ! ನನಗಾಗಿ ಯಜ್ಞಭಾಗದ ವ್ಯವಸ್ಥೆಯನ್ನು ಮಾಡು ಮತ್ತು ಲೋಕದಲ್ಲಿ ನನಗೆ ಒಂದು ಸ್ಥಾನವನ್ನು ಕೊಡು!” ಹೀಗೆ ಹೇಳಲು ಪ್ರಭುವು ಅವನಿಗೆ ಯಥಾರ್ಥವಾದ ಈ ಮಾತನ್ನು ಹೇಳಿದನು.
ಕೃತೋ ಯಜ್ಞವಿಭಾಗೋ ಹಿ ಯಜ್ಞಿಯೈರ್ಹಿ ಸುರೈಃ ಪುರಾ ।
ದೇವೇಷು ವಿನುಯುಕ್ತಂ ಹಿ ವಿದ್ಧಿ ಹೋತ್ರಂ ಮಹರ್ಷಿಭಿಃ ।। ೧-೨೯-೧೬
“ಹಿಂದೆಯೇ ಸುರರು ಯಜ್ಞಸಂಬಂಧೀ ದೇವತೆಗಳಿಗೆ ಯಜ್ಞವಿಭಾಗಗಳನ್ನು ಮಾಡಿಬಿಟ್ಟಿದ್ದಾರೆ. ಮಹರ್ಷಿಗಳು ಯಜ್ಞದ ಆಹುತಿಗಳನ್ನು ದೇವತೆಗಳಿಗಾಗಿಯೇ ವಿನಿಯೋಜಿಸಿದ್ದಾರೆ. ಇದನ್ನು ನೀನು ಚೆನ್ನಾಗಿ ಅರ್ಥಮಾಡಿಕೋ.
ನ ಶಕ್ಯಮುಪಹೋಮಾ ವೈ ತುಭ್ಯಂ ಕರ್ತುಂ ಕದಾಚನ ।
ಅರ್ವಾಗ್ಭೂತೋಽಸಿ ದೇವಾನಾಂ ಪುತ್ರ ತ್ವಂ ತು ನ ಹೀಶ್ವರಃ ।। ೧-೨೯-೧೭
ಪುತ್ರ! ನಿನಗಾಗಿ ಎಂದೂ ಉಪಹೋಮಗಳನ್ನೂ ಮಾಡಲು ಸಾಧ್ಯವಿಲ್ಲ. ನೀನು ದೇವತೆಗಳ ನಂತರ ಹುಟ್ಟಿರುವೆ. ನೀನು ಯಜ್ಞಭಾಗಗಳ ಈಶ್ವರನಾಗುವುದಿಲ್ಲ.
ದ್ವಿತೀಯಾಯಾಂ ತು ಸಂಭೂತ್ಯಾಂ ಲೋಕೇ ಖ್ಯಾತಿಂ ಗಮಿಷ್ಯಸಿ ।
ಅಣಿಮಾದಿಶ್ಚ ತೇ ಸಿದ್ಧಿರ್ಗರ್ಭಸ್ಥಸ್ಯ ಭವಿಷ್ಯತಿ ।। ೧-೨೯-೧೮
ಎರಡನೇ ಜನ್ಮದಲ್ಲಿ ನೀನು ಲೋಕದಲ್ಲಿ ವಿಖ್ಯಾತನಾಗುತ್ತೀಯೆ. ನೀನು ಗರ್ಭದಲ್ಲಿರುವಾಗಲೇ ನಿನಗೆ ಅಣಿಮಾದಿ ಸಿದ್ಧಿಗಳು ದೊರೆಯುತ್ತವೆ.
ತೇನೈವ ತ್ವಂ ಶರೀರೇಣ ದೇವತ್ವಂ ಪ್ರಾಪ್ಸ್ಯಸೇ ಪ್ರಭೋ ।
ಚರುಮಂತ್ರೈರ್ವ್ರತೈರ್ಜಾಪ್ಯೈರ್ಯಕ್ಷ್ಯಂತಿ ತ್ವಾಂ ದ್ವಿಜಾತಯಃ ।। ೧-೨೯-೧೯
ಪ್ರಭೋ! ನಿನ್ನ ಆ ಶರೀರದಿಂದಲೇ ನೀನು ದೇವತ್ವವನ್ನು ಪಡೆದುಕೊಳ್ಳುತ್ತೀಯೆ. ದ್ವಿಜಾತಿಯವರು ನಿನ್ನನ್ನು ಚರು-ಮಂತ್ರ-ವ್ರತ-ಮತ್ತು ಜಪಗಳಿಂದ ಅರ್ಚಿಸುತ್ತಾರೆ.
ಅಷ್ಟಧಾ ತ್ವಂ ಪುನಶ್ಚೈವಮಾಯುರ್ವೇದಂ ವಿಧಾಸ್ಯಸಿ ।
ಅವಶ್ಯಭಾವೀ ಹ್ಯರ್ಥೋಽಯಂ ಪ್ರಾಗ್ದೃಷ್ಟಸ್ತ್ವಬ್ಜಯೋನಿನಾ ।। ೧-೨೯-೨೦
ಪುನಃ ನೀನು ಆಯುರ್ವೇದವನ್ನು ಎಂಟು ಭಾಗಗಳನ್ನಾಗಿ2 ವಿಂಗಡಿಸುತ್ತೀಯೆ. ಇದು ಅವಶ್ಯವಾಗಿ ನಡೆಯುತ್ತದೆ. ಕಮಲಯೋನೀ ಬ್ರಹ್ಮನು ಮೊದಲೇ ಇದನ್ನು ಕಂಡಿದ್ದನು.
ದ್ವಿತೀಯಂ ದ್ವಾಪರಂ ಪ್ರಾಪ್ಯ ಭವಿತಾ ತ್ವಂ ನ ಸಂಶಯಃ ।
ಇಮಂ ತಸ್ಮೈ ವರಂ ದತ್ತ್ವಾ ವಿಷ್ಣುರಂತರ್ದಧೇ ಪುನಃ ।। ೧-೨೯-೨೧
ಎರಡನೇ ದ್ವಾಪರವು ಪ್ರಾಪ್ತವಾದಾಗ ನೀನು ಪುನಃ ಪ್ರಕಟನಾಗುತ್ತೀಯೆ. ಇದರಲ್ಲಿ ಸಂಶಯವಿಲ್ಲ.” ಹೀಗೆ ಅವನಿಗೆ ವರವನ್ನಿತ್ತು ವಿಷ್ಣುವು ಪುನಃ ಅಂತರ್ಧಾನನಾದನು.
ದ್ವಿತೀಯೇ ದ್ವಾಪರಂ ಪ್ರಾಪ್ತೇ ಸೌನಹೋತ್ರಿಃ ಸ ಕಾಶಿರಾಟ್ ।
ಪುತ್ರಕಾಮಸ್ತಪಸ್ತೇಪೇ ಧಿನ್ವಂದೀರ್ಘತಪಾಸ್ತದಾ ।। ೧-೨೯-೨೨
ಎರಡನೆಯ ದ್ವಾಪರವು ಪ್ರಾಪ್ತವಾಗಲು ಸುನಹೋತ್ರನ ಪುತ್ರ ಕಾಶಿರಾಜ ಧನ್ವನು ಪುತ್ರನನ್ನು ಬಯಸಿ ದೀರ್ಘ ತಪಸ್ಸನ್ನು ತಪಿಸಿದನು.
ಪ್ರಪದ್ಯೇ ದೇವತಾಂ ತಾಂ ತು ಯಾ ಮೇ ಪುತ್ರಂ ಪ್ರದಾಸ್ಯತಿ ।
ಅಬ್ಜಂ ದೇವಂ ಸುತಾರ್ಥಾಯ ತದಾಽಽರಾಧಿತವಾನ್ನೃಪಃ ।। ೧-೨೯-೨೩
ಯಾವದೇವತೆಯು ನನಗೆ ಪುತ್ರನನ್ನು ಕೊಡುವನೋ ಆ ದೇವತೆಯನ್ನೇ ಪೂಜಿಸುತ್ತೇನೆ ಎಂದು ಆ ನೃಪನು ಮಗನಿಗಾಗಿ ಅಬ್ಜ ದೇವನನ್ನೇ ಆರಾಧಿಸಿದನು.
ತತಸ್ತುಷ್ಟಃ ಸ ಭಗವಾನಬ್ಜಃ ಪ್ರೋವಾಚ ತಂ ನೃಪಮ್ ।
ಯದಿಚ್ಛಸಿ ವರಂ ಬ್ರೂಹಿ ತತ್ತೇ ದಾಸ್ಯಾಮಿ ಸುವ್ರತ ।। ೧-೨೯-೨೪
ಆಗ ತುಷ್ಟನಾದ ಭಗವಾನ್ ಅಬ್ಜನು ಆ ನೃಪತಿಗೆ ಹೇಳಿದನು: “ಸುವ್ರತ! ನೀನು ಬಯಸಿದ ವರವನ್ನು ಕೇಳು. ಅದನ್ನು ನಿನಗೆ ನೀಡುತ್ತೇನೆ.”
ನೃಪ ಉವಾಚ
ಭಗವನ್ಯದಿ ತುಷ್ಟಸ್ತ್ವಂ ಪುತ್ರೋ ಮೇ ಖ್ಯಾತಿಮಾನ್ಭವ ।
ತಥೇತಿ ಸಮನುಜ್ಞಾಯ ತತ್ರೈವಾಂತರಧೀಯತ ।। ೧-೨೯-೨೫
ನೃಪನು ಹೇಳಿದನು: “ಭಗವನ್! ಒಂದು ವೇಳೆ ನೀನು ತುಷ್ಟನಾಗಿರುವೆಯಾದರೆ ನನ್ನ ಪುತ್ರನಾಗಿ ಖ್ಯಾತಿವಂತನಾಗು.” ಹಾಗೆಯೇ ಆಗಲೆಂದು ಅನುಜ್ಞೆಯನ್ನಿತ್ತು ಅಬ್ಜನು ಅಲ್ಲಿಯೇ ಅಂತರ್ಧಾನನಾದನು.
ತಸ್ಯ ಗೇಹೇ ಸಮುತ್ಪನ್ನೋ ದೇವೋ ಧನ್ವಂತರಿಸ್ತದಾ ।
ಕಾಶಿರಾಜೋ ಮಹಾರಾಜ ಸರ್ವರೋಗಪ್ರಣಾಶನಃ ।। ೧-೨೯-೨೬
ಮಹಾರಾಜ! ಅನಂತರ ದೇವ ಧನ್ವಂತರಿಯು ಧನ್ವನ ಮನೆಯಲ್ಲಿ ಹುಟ್ಟಿಕೊಂಡನು. ಆ ಕಾಶಿರಾಜನು ಸರ್ವರೋಗಗಳನ್ನೂ ನಾಶಪಡಿಸಲು ಸಮರ್ಥನಾಗಿದ್ದನು.
ಆಯುರ್ವೇದಂ ಭರದ್ವಾಜಾತ್ಪ್ರಾಪ್ಯೇಹ ಭಿಷ್ಜಾಂ ಕ್ರಿಯಾಮ್ ।
ತಮಷ್ಟಧಾ ಪುನರ್ವ್ಯಸ್ಯ ಶಿಷ್ಯೇಭ್ಯಃ ಪ್ರತ್ಯಪಾದಯತ್ ।। ೧-೨೯-೨೭
ಭರದ್ವಾಜನಿಂದ ಆಯುರ್ವೇದ ಮತ್ತು ಚಿಕಿತ್ಸಾಕರ್ಮಗಳನ್ನು ಪಡೆದುಕೊಂಡು ಪುನಃ ಅದನ್ನು ಎಂಟು ಭಾಗಗಳನ್ನಾಗಿ ವಿಭಜಿಸಿ, ಶಿಷ್ಯರಿಗೂ ಅದನ್ನು ಹೇಳಿಕೊಟ್ಟನು.
ಧನ್ವಂತರೇಸ್ತು ತನಯಃ ಕೇತುಮಾನಿತಿ ವಿಶ್ರುತಃ ।
ಅಥ ಕೇತುಮತಃ ಪುತ್ರೋ ವೀರೋ ಭೀಮರಥಃ ಸ್ಮೃತಃ ।। ೧-೨೯-೨೮
ಧನ್ವಂತರಿಯ ತನಯನು ಕೇತುಮಾನನೆಂದು ವಿಶ್ರುತನಾದನು. ಕೇತುಮತನ ಪುತ್ರನು ವೀರ ಭೀಮರಥನು.
ಸುತೋ ಭೀಮರಥಸ್ಯಾಪಿ ದಿವೋದಾಸಃ ಪ್ರಜೇಶ್ವರಃ ।
ದಿವೋದಾಸಸ್ತು ಧರ್ಮಾತ್ಮಾ ವಾರಾಣಸ್ಯಧಿಪೋಽಭವತ್ ।। ೧-೨೯-೨೯
ಭೀಮರಥನ ಮಗನು ಪ್ರಜೇಶ್ವರ ದಿವೋದಾಸನು. ಧರ್ಮಾತ್ಮ ದಿವೋದಾಸನಾದರೋ ವಾರಾಣಸಿಯ ಅಧಿಪನಾದನು.
ಏತಸ್ಮಿನ್ನೇವ ಕಾಲೇ ತು ಪುರೀಂ ವಾರಾಣಸೀಂ ನೃಪ ।
ಶೂನ್ಯಾಂ ನಿವಾಸಯಾಮಾಸ ಕ್ಷೇಮಕೋ ನಾಮ ರಾಕ್ಷಸಃ ।। ೧-೨೯-೩೦
ನೃಪ! ಈ ಕಾಲದಲ್ಲಿಯೇ ವಾರಾಣಸೀ ಪುರವು ಜನಶೂನ್ಯವಾಗಿದ್ದು ಅಲ್ಲಿ ಕ್ಷೇಮಕ ಎಂಬ ರಾಕ್ಷಸನು ವಾಸಿಸುತ್ತಿದ್ದನು.
ಶಪ್ತಾ ಹಿ ಸಾ ಮತಿಮತಾ ನಿಕುಂಭೇನ ಮಹಾತ್ಮನಾ ।
ಶೂನ್ಯಾ ವರ್ಷಸಹಸ್ರಂ ವೈ ಭವಿತ್ರೀ ನಾತ್ರ ಸಂಶಯಃ ।। ೧-೨೯-೩೧
ಮಹಾತ್ಮ ಮತಿಮತ ನಿಕುಂಭನು ವಾರಾಣಸೀ ಪುರಿಗೆ “ಸಹಸ್ರವರ್ಷಗಳು ನೀನು ಜನಶೂನ್ಯಳಾಗಿರುವೆ. ಇದರಲ್ಲಿ ಸಂಶಯವಿಲ್ಲ” ಎಂದು ಶಪಿಸಿದ್ದನು.
ತಸ್ಯಾಂ ತು ಶಪ್ತಮಾತ್ರಾಯಾಂ ದಿವೋದಾಸಃ ಪ್ರಜೇಶ್ವರಃ ।
ವಿಷಯಾಂತೇ ಪುರೀಂ ರಮ್ಯಾಂ ಗೋಮತ್ಯಾಂ ಸಂನ್ಯವೇಶಯತ್ ।। ೧-೨೯-೩೨
ವಾರಾಣಸಿಯು ಹಾಗೆ ಶಾಪಕ್ಕೊಳಗಾಗಲು ಪ್ರಜೇಶ್ವರ ದಿವೋದಾಸನು ರಾಜ್ಯದ ಗಡಿಯಲ್ಲಿ ಗೋಮತಿಯ ಬಳಿ ರಮ್ಯ ಪುರಿಯನ್ನು ನಿರ್ಮಿಸಿ ವಾಸಿಸುತ್ತಿದ್ದನು.
ಭದ್ರಶ್ರೇಣ್ಯಸ್ಯ ಪೂರ್ವಂ ತು ಪುರೀ ವಾರಾಣಸೀತ್ಯಭೂತ್ ।
ಭದ್ರಶ್ರೇಣ್ಯಸ್ಯ ಪುತ್ರಾಣಾಂ ಶತಮುತ್ತಮಧನ್ವಿನಾಮ್ ।। ೧-೨೯-೩೩
ಮೊದಲು ವಾರಾಣಸೀ ಪುರಿಯು ಭದ್ರಶ್ರೇಣ್ಯ3ನ ಅಧಿಕಾರದಲ್ಲಿತ್ತು. ಭದ್ರಶ್ರೇಣ್ಯನಿಗೆ ಉತ್ತಮ ಧನ್ವಿಗಳಾದ ನೂರು ಪುತ್ರರಿದ್ದರು.
ಹತ್ವಾ ನಿವೇಶಯಾಮಾಸ ದಿವೋದಾಸೋ ನರರ್ಷಭಃ ।
ಭದ್ರಶ್ರೇಣ್ಯಸ್ಯ ತದ್ರಾಜ್ಯಂ ಹೃತಂ ತೇನ ಬಲೀಯಸಾ ।। ೧-೨೯-೩೪
ನರರ್ಷಭ ದಿವೋದಾಸನು ಅವನನ್ನು ಸಂಹರಿಸಿ ಅಲ್ಲಿ ತನ್ನ ರಾಜ್ಯವನ್ನು ಸ್ಥಾಪಿಸಿದ್ದನು. ಭದ್ರಶ್ರೇಣ್ಯನ ಆ ರಾಜ್ಯವನ್ನು ಅವನು ಬಲವನ್ನುಪಯೋಗಿಸಿ ಅಪಹರಿಸಿದ್ದನು.”
ಜನಮೇಜಯ ಉವಾಚ
ವಾರಾಣಸೀಂ ನಿಕುಂಭಸ್ತು ಕಿಮರ್ಥಂ ಶಪ್ತವಾನ್ಪ್ರಭುಃ ।
ನಿಕುಂಭಕಶ್ಚ ಧರ್ಮಾತ್ಮಾ ಸಿದ್ಧಿಕ್ಶೇತ್ರಂ ಶಶಾಪ ಯಃ ।। ೧-೨೯-೩೫
ಜನಮೇಜಯನು ಹೇಳಿದನು: “ಪ್ರಭು ನಿಕುಂಭನಾದರೋ ವಾರಾಣಸಿಯನ್ನು ಯಾವಕಾರಣಕ್ಕಾಗಿ ಶಪಿಸಿದನು? ನಿಕುಂಭನು ಧರ್ಮಾತ್ಮನಾಗಿದ್ದನು ಮತ್ತು ಅವನು ಶಪಿಸಿದ ವಾರಾಣಸಿಯಾದರೋ ಸಿದ್ಧಿಕ್ಷೇತ್ರವು.”
ವೈಶಂಪಾಯನ ಉವಾಚ
ದಿವೋದಾಸಸ್ತು ರಾಜರ್ಷಿರ್ನಗರೀಂ ಪ್ರಾಪ್ಯ ಪಾರ್ಥಿವಃ ।
ವಸತಿ ಸ್ಮ ಮಹಾತೇಜಾಃ ಸ್ಫೀತಾಯಾಂ ತು ನರಾಧಿಪಃ ।। ೧-೨೯-೩೬
ವೈಶಂಪಾಯನನು ಹೇಳಿದನು: “ಪಾರ್ಥಿವ ನರಾಧಿಪ ರಾಜರ್ಷಿ ದಿವೋದಾಸನಾದರೋ ಆ ನಗರಿಯನ್ನು ಪಡೆದು ಅಲ್ಲಿ ಮಹಾತೇಜಸ್ಸಿನಿಂದ ಸಮೃದ್ಧಿಯಿಂದ ವಾಸಿಸುತ್ತಿದ್ದನು.
ಏತಸ್ಮಿನ್ನೇವ ಕಾಲೇ ತು ಕೃತದಾರೋ ಮಹೇಶ್ವರಃ ।
ದೇವ್ಯಾಃ ಸ ಪ್ರಿಯಕಾಮಸ್ತು ನ್ಯವಸಚ್ಛ್ವಶುರಾಂತಿಕೇ ।। ೧-೨೯-೩೭
ಇದೇ ಸಮಯದಲ್ಲಿ ಮಹೇಶ್ವರನು ವಿವಾಹವಾಗಿ ದೇವಿಗೆ ಪ್ರಿಯವಾದುದನ್ನು ಮಾಡಲು ಬಯಸಿ ತನ್ನ ಮಾವನ ಮನೆಯಲ್ಲಿಯೇ ವಾಸಿಸುತ್ತಿದ್ದನು.
ದೇವಾಜ್ಞಯಾ ಪಾರ್ಷದಾ ಯೇ ತ್ವಧಿರೂಪಾಸ್ತಪೋಧನಾಃ ।
ಪೂರ್ವೋಕ್ತೈರುಪದೇಶೈಶ್ಚ ತೋಷಯಂತಿ ಸ್ಮ ಪಾರ್ವತೀಮ್ ।। ೧-೨೯-೩೮
ದೇವನ ಆಜ್ಞೆಯಂತೆ ಮತ್ತು ಅವನು ಮೊದಲೇ ನೀಡಿದ್ದ ಉಪದೇಶದಂತೆ ತಪೋಧನರಾಗಿದ್ದ ಶಿವನ ಪಾರ್ಷದರು ಪಾರ್ವತಿಯನ್ನು ಸಂತೋಷಪಡಿಸುವುದರಲ್ಲಿಯೇ ನಿರತರಾಗಿದ್ದರು.
ಹೃಷ್ಯತೇ ವೈ ಮಹಾದೇವೀ ಮೇನಾ ನೈವ ಪ್ರಹೃಷ್ಯತಿ ।
ಜುಗುಪ್ಸತ್ಯಸಕೃತ್ತಾಂ ವೈ ದೇವೀಂ ದೇವಂ ತಥೈವ ಸಾ ।। ೧-೨೯-೩೯
ಇದರಿಂದ ಮಹಾದೇವಿಯು ಹರ್ಷಿತಳಾಗುತ್ತಿದ್ದಳು. ಆದರೆ ಮೇನಳು ಸಂತೋಷಪಡುತ್ತಿರಲಿಲ್ಲ. ಅವಳು ಜುಗುಪ್ಸೆಯಿಂದ ಮತ್ತೆ ಮತ್ತೆ ದೇವೀ ಮತ್ತು ದೇವನನ್ನು ಅಪಮಾನಿಸುತ್ತಿದ್ದಳು.
ಸಪಾರ್ಷದಸ್ತ್ವನಾಚಾರಸ್ತವ ಭರ್ತಾ ಮಹೇಶ್ವರಃ ।
ದರಿದ್ರಃ ಸರ್ವದೈವಾಸೌ ಶೀಲಂ ತಸ್ಯ ನ ವರ್ತತೇ ।। ೧-೨೯-೪೦
“ನಿನ್ನ ಪತಿ ಮಹೇಶ್ವರ ಮತ್ತು ಅವನ ಪಾರ್ಷದರೆಲ್ಲರೂ ಅನಾಚಾರಿಗಳು. ಅವನು ದರಿದ್ರನೂ ಕೂಡ. ಅವನ ವರ್ತನೆಯಲ್ಲಿ ಶೀಲವೆನ್ನುವುದೇ ಇಲ್ಲ.”
ಮಾತ್ರಾ ತಥೋಕ್ತಾ ವರದಾ ಸ್ತ್ರೀಸ್ವಭಾವಾಚ್ಚ ಚುಕ್ರುಧೇ ।
ಸ್ಮಿತಂ ಕೃತ್ವಾ ಚ ವರದಾ ಭವಪಾರ್ಶ್ವಮಥಾಗಮತ್ ।। ೧-೨೯-೪೧
ತಾಯಿಯು ಹೀಗೆ ಹೇಳಲು ವರದೆಯು ಸ್ತ್ರಿಸ್ವಭಾವದಿಂದ ಕ್ರುದ್ಧಳಾದಳು. ಆ ವರದೆಯು ಮುಗುಳ್ನಗುತ್ತಾ ಭವನ ಬಳಿ ಬಂದಳು.
ವಿವರ್ಣವದನಾ ದೇವೀ ಮಹಾದೇವಮಭಾಷತ ।
ನೇಹ ವತ್ಸ್ಯಾಮ್ಯಹಂ ದೇವ ನಯ ಮಾಂ ಸ್ವಂ ನಿಕೇತನಮ್ ।। ೧-೨೯-೪೨
ವಿವರ್ಣವದನಳಾದ ದೇವಿಯು ಮಹಾದೇವನಿಗೆ ಹೇಳಿದಳು: “ದೇವ! ನನಗಿನ್ನು ಇಲ್ಲಿ ವಾಸಿಸುವುದು ಬೇಡವಾಗಿದೆ. ನನಗೆ ನಮ್ಮದೇ ಸ್ವಂತ ಹೊಸ ಮನೆಯು ಬೇಕು.”
ತಥಾ ಕರ್ತುಂ ಮಹಾದೇವಃ ಸರ್ವಲೋಕಾನವೈಕ್ಷತ ।
ವಾಸಾರ್ಥಂ ರೋಚಯಾಮಾಸ ಪೃಥಿವ್ಯಾಂ ಕುರುನಂದನ ।। ೧-೨೯-೪೩
ಕುರುನಂದನ! ಹಾಗೆ ಮಾಡಲು ಮಹಾದೇವನು ಲೋಕಗಳೆಲ್ಲವನ್ನೂ ವೀಕ್ಷಿಸಿದನು. ಆಗ ಮಹಾತೇಜಸ್ವೀ ಮಹೇಶ್ವರನು ಆವಾಸಕ್ಕೆ ಪೃಥ್ವಿಯಲ್ಲಿ ಸಿದ್ಧಿಕ್ಷೇತ್ರ ವಾರಾಣಸೀ ಪುರಿಯನ್ನೇ ಮೆಚ್ಚಿಕೊಂಡನು.
ವಾರಾಣಸೀ ಮಹಾತೇಜಾಃ ಸಿದ್ಧಿಕ್ಶೇತ್ರಂ ಮಹೇಶ್ವರಃ ।
ದಿವೋದಾಸೇನ ತಾಂ ಜ್ಞಾತ್ವಾ ನಿವಿಷ್ಟಾಂ ನಗರೀಂ ಭವಃ ।। ೧-೨೦-೪೪
ಪಾರ್ಶ್ವೇ ತಿಷ್ಠಂತಮಾಹೂಯ ನಿಕುಂಭಮಿದಮಬ್ರವೀತ್ ।
ಗಣೇಶ್ವರ ಪುರೀಂ ಗತ್ವಾ ಶೂನ್ಯಾಂ ವಾರಾಣಸೀಂ ಕುರು ।। ೧-೨೯-೪೫
ಮೃದುನೈವಾಭ್ಯುಪಾಯೇನ ಹ್ಯತಿವೀರ್ಯಃ ಸ ಪಾರ್ಥಿವಃ ।
ಆ ನಗರಿಯಲ್ಲಿ ದಿವೋದಾಸನು ವಾಸಿಸುತ್ತಿದ್ದಾನೆ ಎಂದು ತಿಳಿದು ಭವನು ಪಕ್ಕದಲ್ಲಿ ನಿಂತಿದ್ದ ನಿಕುಂಭನನ್ನು ಕರೆದು ಹೇಳಿದನು: “ಗಣೇಶ್ವರ! ವಾರಾಣಸೀ ಪುರಿಗೆ ಹೋಗಿ ಅದನ್ನು ಶೂನ್ಯವನ್ನಾಗಿ ಮಾಡು. ಇದನ್ನು ನಯದಿಂದ ಮತ್ತು ಉಪಾಯದಿಂದ ಮಾಡು. ಏಕೆಂದರೆ ಆ ಪಾರ್ಥಿವನು ಅತಿವೀರ್ಯನು.”
ತತೋ ಗತ್ವಾ ನಿಕುಂಭಸ್ತು ಪೂರೀಂ ವಾರಾಣಸೀಂ ತದಾ ।। ೧-೨೯-೪೬
ಸ್ವಪ್ನೇ ನಿದರ್ಶಯಾಮಾಸ ಕಂಡುಕಂ ನಾಮ ನಾಪಿತಮ್ ।
ಶ್ರೇಯಸ್ತೇಽಹಂ ಕರಿಷ್ಯಾಮಿ ಸ್ಥಾನಂ ಮೇ ರೋಚಯಾನಘ ।। ೧-೨೯-೪೭
ಮದ್ರೂಪಾಂ ಪ್ರತಿಮಾಂ ಕೃತ್ವಾ ನಗರ್ಯಂತೇ ತಥೈವ ಚ ।
ಅನಂತರ ನಿಕುಂಭನು ವಾರಾಣಸೀ ಪುರಿಗೆ ಹೋಗಿ ಕಂಡುಕ ಎಂಬ ಹೆಸರಿನ ಕ್ಷೌರಿಕನಿಗೆ ಸ್ವಪ್ನದಲ್ಲಿ ಕಾಣಿಸಿಕೊಂಡು ಹೇಳಿದನು: “ಅನಘ! ಈ ನಗರದ ಗಡಿಯಲ್ಲಿ ನನ್ನ ರೂಪದ ಪ್ರತಿಮೆಯನ್ನು ಮಾಡಿ ನನಗೆ ಇಷ್ಟವಾಗುವಂಥಹ ಸ್ಥಾನವನ್ನು ಕಲ್ಪಿಸು. ನಿನಗೆ ನಾನು ಶ್ರೇಯಸ್ಸನ್ನುಂಟುಮಾಡುತ್ತೇನೆ.”
ತತಃ ಸ್ವಪ್ನೇ ಯಥೋದ್ದಿಷ್ಟಂ ಸರ್ವಂ ಕಾರಿತವಾನ್ನೃಪ ।। ೧-೨೯-೪೮
ಪುರೀದ್ವಾರೇ ತು ವಿಜ್ಞಾಪ್ಯ ರಾಜಾನಂ ಚ ಯಥಾವಿಧಿ ।
ಪೂಜಾಂ ತು ಮಹತೀಂ ತಸ್ಯ ನಿತ್ಯಮೇವ ಪ್ರಯೋಜಯತ್ ।। ೧-೨೯-೪೯
ಗಂಧೈಶ್ಚ ಧೂಪಮಾಲ್ಯೈಶ್ಚ ಪ್ರೋಕ್ಷಣೀಯೈಸ್ತಥೈವ ಚ ।
ಅನ್ನಪಾನಪ್ರಯೋಗೈಶ್ಚ ಅತ್ಯದ್ಭುತಮಿವಾಭವತ್। ।। ೧-೨೯-೫೦
ನೃಪ! ಅನಂತರ ಕಂಡುಕನು ಸ್ವಪ್ನದಲ್ಲಿ ಕಂಡಂತೆ ಎಲ್ಲವನ್ನೂ ಮಾಡಿಸಿದನು. ಯಥಾವಿಧಿಯಾಗಿ ರಾಜನಿಗೆ ತಿಳಿಸಿ ಪುರೀದ್ವಾರದಲ್ಲಿ ನಿತ್ಯವೂ ನಿಕುಂಭನಿಗೆ ಮಹಾ ಪೂಜೆಯನ್ನು ನಿಯೋಜಿಸಿದನು. ಗಂಧ, ಧೂಪ, ಮಾಲೆ, ಪ್ರೋಕ್ಷಣೀಯಗಳು, ಅನ್ನ-ಪಾನ ನೈವೇದ್ಯಗಳು ಇವೇ ಮೊದಲಾದವುಗಳಿಂದ ಆ ಪೂಜೆಯು ಅತ್ಯದ್ಭುತವಾಗಿತ್ತು.
ಏವಂ ಸಂಪೂಜ್ಯತೇ ತತ್ರ ನಿತ್ಯಮೇವ ಗಣೇಶ್ವರಃ ।
ತತೋ ವರಸಹಸ್ರಂ ತು ನಾಗರಾಣಾಂ ಪ್ರಯಚ್ಛತಿ ।
ಪುತ್ರಾನ್ ಹಿರಣ್ಯಮಾಯುಶ್ಚ ಸರ್ವಾನ್ಕಾಮಾಂಸ್ತಥೈವ ಚ ।। ೧-೨೯-೫೧
ಹೀಗೆ ನಿತ್ಯವೂ ಪೂಜಿಸಲ್ಪಡುತ್ತಿದ್ದ ಗಣೇಶ್ವರನು ನಾಗರಿಕರಿಗೆ ಸಹಸ್ರಾರು ವರಗಳನ್ನಿತ್ತನು – ಪುತ್ರರು, ಚಿನ್ನ, ಆಯಸ್ಸು, ಮತ್ತು ಸರ್ವ ಕಾಮನೆಗಳನ್ನೂ ಪೂರೈಸಿದನು.
ರಾಜ್ಞಸ್ತು ಮಹಿಷೀ ಶ್ರೇಷ್ಠಾ ಸುಯಶಾ ನಾಮ ವಿಶ್ರುತಾ ।
ಪುತ್ರಾರ್ಥಮಾಗತಾ ದೇವೀ ಸಾಧ್ವೀ ರಾಜ್ಞಾ ಪ್ರಚೋದಿತಾ ।। ೧-೨೯-೫೨
ರಾಜಾ ದಿವೋದಾಸನ ಮಹಿಷೀ ಶ್ರೇಷ್ಠಳು ಸುಯಶಾ ಎಂಬ ಹೆಸರಿನಿಂದ ವಿಶ್ರುತಳಾಗಿದ್ದಳು. ರಾಜನಿಂದ ಪ್ರಚೋದಿತಳಾದ ಆ ಸಾಧ್ವೀ ದೇವಿಯು ಪುತ್ರನಿಗಾಗಿ ಅಲ್ಲಿಗೆ ಆಗಮಿಸಿದಳು.
ಪೂಜಾಂ ತು ವಿಪುಲಾಂ ಕೃತ್ವಾ ದೇವೀ ಪುತ್ರಮಯಾಚತ ।
ಪುನಃ ಪುನರಥಾಗಮ್ಯ ಬಹುಶಃ ಪುತ್ರಕಾರಣಾತ್ ।। ೧-೨೯-೫೩
ಆ ದೇವಿಯು ವಿಪುಲ ಪೂಜೆಗೈದು ಪುತ್ರನನ್ನು ಯಾಚಿಸಿದಳು. ಪುತ್ರಕಾರಣದಿಂದ ಅವಳು ಅನೇಕ ಬಾರಿ ಪುನಃ ಪುನಃ ಅಲ್ಲಿಗೆ ಬಂದಳು.
ನ ಪ್ರಯಚ್ಛತಿ ಪುತ್ರಂ ಹಿ ನಿಕುಂಭಃ ಕಾರಣೇನ ಹಿ ।
ರಾಜಾ ತು ಯದಿ ನಃ ಕುಪ್ಯೇತ್ಕಾರ್ಯಸಿದ್ಧಿಸ್ತತೋ ಭವೇತ್ ।। ೧-೨೯-೫೪
“ರಾಜನು ನನ್ನ ಮೇಲೆ ಕುಪಿತನಾದರೆ ಕಾರ್ಯಸಿದ್ಧಿಯಾಗುತ್ತದೆ” ಎಂಬ ಕಾರಣದಿಂದ ನಿಕುಂಭನು ಅವಳಿಗೆ ಪುತ್ರನನ್ನು ನೀಡಲಿಲ್ಲ.
ಅಥ ದೀರ್ಘೇಣ ಕಾಲೇನ ಕ್ರೋಧೋ ರಾಜಾನಮಾವಿಶತ್ ।
ಭೂತ ಏಷ ಮಹಾಂದ್ವಾರಿ ನಾಗರಾಣಾಂ ಪ್ರಯಚ್ಛತಿ ।। ೧-೨೯-೫೫
ಪ್ರೀತೋ ವರಾನ್ವೈ ಶತಶೋ ಮಮ ಕಿಂ ನ ಪ್ರಯಚ್ಛತಿ ।
ದೀರ್ಘ ಕಾಲದ ನಂತರ ಕ್ರೋಧವು ರಾಜನನ್ನು ಆವೇಶಿಸಿತು. “ಮಹಾದ್ವಾರದಲ್ಲಿರುವ ಈ ಭೂತನು ನಾಗರಿಕರಿಗೆ ಪ್ರೀತನಾಗಿ ನೂರಾರು ವರಗಳನ್ನು ನೀಡುತ್ತಾನೆ. ಆದರೆ ನನಗೆ ಏಕೆ ನೀಡುತ್ತಿಲ್ಲ?
ಮಾಮಕೈಃ ಪೂಜ್ಯತೇ ನಿತ್ಯಂ ನಗರ್ಯಾ ಮೇ ಸದೈವ ಹಿ ।। ೧-೨೯-೫೬
ವಿಜ್ಞಾಪಿತೋ ಮಯಾತ್ಯರ್ಥಂ ದೇವ್ಯಾ ಮೇ ಪುತ್ರಕಾರಣಾತ್ ।
ನ ದದಾತಿ ಚ ಪುತ್ರಂ ಮೇ ಕೃತಘ್ನಃ ಕೇನ ಹೇತುನಾ ।। ೧-೨೯-೫೭ನನ್ನದೇ ನಗರದಲ್ಲಿ ನನ್ನದೇ ಜನರು ಸದಾ ಇವನನ್ನು ಪೂಜಿಸುತ್ತಿದ್ದಾರೆ. ನನ್ನ ದೇವಿಗೆ ಪುತ್ರನು ಬೇಕೆಂದು ನಾನೂ ಕೂಡ ವಿಜ್ಞಾಪಿಸಿಕೊಂಡಿದ್ದೇನೆ. ಆದರೂ ಈ ಕೃತಘ್ನನು ಯಾವುದೋ ಕಾರಣದಿಂದ ನನಗೆ ಪುತ್ರನನ್ನು ನೀಡುತ್ತಿಲ್ಲ.
ತತೋ ನಾರ್ಹತಿ ಸತ್ಕಾರಂ ಮತ್ಸಕಾಶಾದ್ವಿಶೇಷತಃ ।
ತಸ್ಮಾತ್ತು ನಾಶಯಿಷ್ಯಾಮಿ ಸ್ಥಾನಮಸ್ಯ ದುರಾತ್ಮನಃ ।। ೧-೨೯-೫೮
ಆದುದರಿಂದ ಇವನು ನನ್ನ ವಿಶೇಷ ಸತ್ಕಾರಗಳಿಗೆ ಅರ್ಹನಲ್ಲ. ಈ ದುರಾತ್ಮನ ಸ್ಥಾನವನ್ನು ನಾಶಪಡಿಸುತ್ತೇನೆ.”
ಏವಂ ಸ ತು ವಿನಿಶ್ಚಿತ್ಯ ದುರಾತ್ಮಾ ರಾಜಕಿಲ್ಬಿಷೀ ।
ಸ್ಥಾನಂ ಗಣಪತೇಸ್ತಸ್ಯ ನಾಶಯಾಮಾಸ ದುರ್ಮತಿಃ ।। ೧-೨೯-೫೯
ಹೀಗೆ ನಿಶ್ಚಯಿಸಿ ದುರಾತ್ಮಾ ರಾಜಕಿಲ್ಬಿಷೀ ದುರ್ಮತಿಯು ಗಣಪತಿಯ ಸ್ಥಾನವನ್ನು ನಾಶಗೊಳಿಸತೊಡಗಿದನು.
ಭಗ್ನಮಾಯತನಂ ದೃಷ್ಟ್ವಾ ರಾಜಾನಮಶಪತ್ಪ್ರಭುಃ ।
ಯಸ್ಮಾದನಪರಾಧಸ್ಯ ತ್ವಯಾ ಸ್ಥಾನಂ ವಿನಾಶಿತಮ್ ।
ಪುರ್ಯಕಸ್ಮಾದಿಯಂ ಶೂನ್ಯಾ ತವ ನೂನಂ ಭವಿಷ್ಯತಿ ।। ೧-೨೯-೬೦
ತನ್ನ ವಾಸಸ್ಥಾನವು ಭಗ್ನವಾದುದನ್ನು ಕಂಡ ಪ್ರಭು ನಿಕುಂಭನು ರಾಜನನ್ನು ಶಪಿಸುತ್ತಾ ಹೇಳಿದನು: “ನೀನು ಅನಪರಾಧಿಯಾದ ನನ್ನ ಸ್ಥಾನವನ್ನು ನಾಶಗೊಳಿಸಿದ್ದೀಯೆ. ಆದುದರಿಂದ ನಿನ್ನ ಈ ಪುರಿಯೂ ಅಕಸ್ಮಾತ್ ಜನಶೂನ್ಯವಾಗುತ್ತದೆ.”
ತತಸ್ತೇನ ತು ಶಾಪೇನ ಶೂನ್ಯಾ ವಾರಾಣಸೀ ತದಾ ।
ಶಪ್ತ್ವಾ ಪುರೀಂ ನಿಕುಂಭಸ್ತು ಮಹಾದೇವಮಥಾಗಮತ್ ।। ೧-೨೯-೬೧
ಅನಂತರ ಅವನ ಶಾಪದಿಂದ ವಾರಾಣಸಿಯು ಶೂನ್ಯವಾಯಿತು. ಪುರಿಯನ್ನು ಶಪಿಸಿ ನಿಕುಂಭನಾದರೋ ಮಹಾದೇವನ ಬಳಿ ಆಗಮಿಸಿದನು.
ಅಕಸ್ಮಾತ್ತು ಪುರೀ ಸಾ ತು ವಿದ್ರುತಾ ಸರ್ವತೋದಿಶಮ್ ।
ತಸ್ಯಾಂ ಪುರ್ಯಾಂ ತತೋ ದೇವೋ ನಿರ್ಮಮೇ ಪದಮಾತ್ಮನಃ ।। ೧-೨೯-೬೨
ಅಕಸ್ಮಾತ್ತಾಗಿ ಆ ಪುರಿಯ ಜನರು ಎಲ್ಲಕಡೆ ಓಡಿ ಹೋದರು. ಅನಂತರ ದೇವನು ಆ ಪುರಿಯಲ್ಲಿ ವಾಸಿಸತೊಡಗಿದನು.
ರಮತೇ ತತ್ರ ವೈ ದೇವೋ ರಮಮಾಣೋ ಗಿರೇಃ ಸುತಾಮ್ ।
ನ ರತಿಂ ತತ್ರ ವೈ ದೇವೀ ಲಭತೇ ಗೃಹವಿಸ್ಮಯಾತ್ ।
ವಸಾಮ್ಯತ್ರ ನ ಪುರ್ಯಾಂ ತು ದೇವೀ ದೇವಮಥಾಬ್ರವೀತ್ ।। ೧-೨೯-೬೩
ಗಿರಿಯ ಸುತೆಯನ್ನು ರಮಿಸುತ್ತಾ ಅಲ್ಲಿ ದೇವನು ಆನಂದದಿಂದ ಇರುತ್ತಿದ್ದನು. ಆದರೆ ದೇವಿಯು ಅಲ್ಲಿ ಸಂತೋಷದಿಂದಿರಲಿಲ್ಲ. ಯಾವುದು ತನ್ನ ಮನೆಯೆಂದು ವಿಸ್ಮಯದಿಂದಲೇ ಇರುತ್ತಿದ್ದಳು. ಆ ದೇವಿಯು “ಈ ಪುರಿಯಲ್ಲಿ ನನಗೆ ಇರುವುದು ಬೇಡ” ಎಂದು ದೇವನಿಗೆ ಹೇಳಿದಳು.
ದೇವ ಉವಾಚ
ನಾಹಂ ವೇಶ್ಮನಿ ವತ್ಸ್ಯಾಮಿ ಅವಿಮುಕ್ತಂ ಹಿ ಮೇ ಗೃಹಮ್ ।
ನಾಹಂ ತತ್ರ ಗಮಿಷ್ಯಾಮಿ ಗಚ್ಛ ದೇವಿ ಗೃಹಂ ಪ್ರತಿ ।। ೧-೨೯-೬೪
ದೇವನು ಹೇಳಿದನು: “ನಾನು ಬೇರೆ ಯಾವ ಮನೆಯಲ್ಲಿಯೂ ವಾಸಿಸುವುದಿಲ್ಲ. ಈ ಅವಿಮುಕ್ತ ಕ್ಷೇತ್ರವೇ ನನ್ನ ಮನೆಯು. ನಾನು ಬೇರೆ ಎಲ್ಲಿಗೂ ಹೋಗುವುದಿಲ್ಲ. ದೇವೀ! ನೀನೇ ಆ ಮನೆಗೆ ಹೋಗು.”
ಹಸನ್ನುವಾಚ ಭಗವಾಂಸ್ತ್ರ್ಯಮ್ಬಕಸ್ತ್ರಿಪುರಾಂತಕಃ ।
ತಸ್ಮಾತ್ತದವಿಮುಕ್ತಂ ಹಿ ಪ್ರೋಕ್ತಂ ದೇವೇನ ವೈ ಸ್ವಯಮ್ ।। ೧-೨೯-೬೫
ಭಗವಾನ್ ತ್ರ್ಯಂಬಕ ತ್ರಿಪುರಾಂತಕ ದೇವನು ಸ್ವಯಂ ನಸುನಗುತ್ತಾ ಹೀಗೆ ಹೇಳಿದ್ದನು.
ಏವಂ ವಾರಾಣಸೀ ಶಪ್ತಾ ಅವಿಮುಕ್ತಂ ಚ ಕೀರ್ತಿತಮ್ ।। ೧-೨೯-೬೬
ಆದುದರಿಂದ ಶಪಿತ ವಾರಾಣಸಿಯು ಅವಿಮುಕ್ತ ಎಂಬ ಹೆಸರನ್ನು ಪಡೆದುಕೊಂಡಿತು.
ಯಸ್ಮಿನ್ವಸತಿ ವೈ ದೇವಃ ಸರ್ವದೇವನಮಸ್ಕೃತಃ ।
ಯುಗೇಷು ತ್ರಿಷು ಧರ್ಮಾತ್ಮಾ ಸಹ ದೇವ್ಯಾ ಮಹೇಶ್ವರಃ ।। ೧-೨೯-೬೭
ಸರ್ವದೇವ ನಮಸ್ಕೃತ ಮಹೇಶ್ವರ ದೇವನು ಧರ್ಮಾತ್ಮ ದೇವಿಯ ಸಹಿತ ಮೂರು ಯುಗಗಳು ಅಲ್ಲಿಯೇ ವಾಸಿಸುತ್ತಾನೆ.
ಅಂತರ್ಧಾನಂ ಕಲೌ ಯಾತಿ ತತ್ಪುರಂ ಹಿ ಮಹಾತ್ಮನಃ ।
ಅಂತರ್ಹಿತೇ ಪುರೇ ತಸ್ಮಿನ್ ಪುರೀ ಸಾ ವಸತೇ ಪುನಃ ।
ಏವಂ ವಾರಾಣಸೀ ಶಪ್ತಾ ನಿವೇಶಂ ಪುನರಾಗತಾ ।। ೧-೨೯-೬೮
ಕಲಿಯುಗದಲ್ಲಿ ಮಹಾತ್ಮನ ಆ ಪುರಿಯು ಅಂತರ್ಧಾನವಾಗುತ್ತದೆ. ಆ ಪುರಿಯು ಅಂತರ್ಧಾನವಾಗಲು ವಾರಾಣಸೀ ಪುರಿಯಲ್ಲಿ ಪುನಃ ಜನರು ವಾಸಿಸತೊಡಗುತ್ತಾರೆ. ಹೀಗೆ ವಾರಾಣಸಿಯು ಶಪಿಸಲ್ಪಟ್ಟು ಪುನಃ ಜನರು ನಿವಾಸಿಸುತ್ತಾರೆ.
ಭದ್ರಶ್ರೇಣ್ಯಸ್ಯ ಪುತ್ರೋ ವೈ ದುರ್ದಮೋ ನಾಮ ವಿಶ್ರುತಃ ।
ದಿವೋದಾಸೇನ ಬಾಲೇತಿ ಘೃಣಯಾ ಸ ವಿವರ್ಜಿತಃ ।। ೧-೨೯-೬೯
ಭದ್ರಶ್ರೇಣ್ಯನಿಗೆ ದುರ್ದಮ ಎಂಬ ಹೆಸರಿನ ವಿಶ್ರುತ ಪುತ್ರನಿದ್ದನು. ದಿವೋದಾಸನು ಅವನನ್ನು ಬಾಲಕನೆಂದು ಕರುಣಿಯಿಂದ ಜೀವಂತ ಬಿಟ್ಟುಬಿಟ್ಟಿದ್ದನು.
ಹೈಹಯಸ್ಯ ತು ದಾಯಾದ್ಯಂ ಕೃತವಾನ್ವೈ ಮಹೀಪತಿಃ ।
ಆಜಹ್ರೇ ಪಿತೃದಾಯಾದ್ಯಂ ದಿವೋದಾಸಹೃತಂ ಬಲಾತ್ ।। ೧-೨೯-೭೦
ಆ ಮಹೀಪತಿಯು ಹೈಹಯನ ಪುತ್ರನಾಗಲು ಒಪ್ಪಿಕೊಂಡು ಅವನ ಸಹಾಯದಿಂದ ಬಲವನ್ನುಪಯೋಗಿಸಿ ದಿವೋದಾಸನು ಅಪಹರಿಸಿದ್ದ ತನ್ನ ಪಿತೃ ಸಂಪತ್ತಿಯನ್ನು ಹಿಂದೆ ಪಡೆದುಕೊಂಡನು.
ಭದ್ರಶ್ರೇಣ್ಯಸ್ಯ ಪುತ್ರೇಣ ದುರ್ದಮೇನ ಮಹಾತ್ಮನಾ ।
ವೈರಸ್ಯಾಂತಂ ಮಹಾರಾಜ ಕ್ಷತ್ರಿಯೇಣ ವಿಧಿತ್ಸತಾ ।। ೧-೨೯-೭೧
ಮಹಾರಾಜ! ವೈರವನ್ನು ಅಂತ್ಯಗೊಳಿಸಲೇ ಭದ್ರಶ್ರೇಣ್ಯನ ಆ ಮಹಾತ್ಮ ಕ್ಷತ್ರಿಯ ಪುತ್ರ ದುರ್ದಮನು ಹಾಗೆ ಮಾಡಿದನು.
ದಿವೋದಾಸಾದ್ದೃಷದ್ವತ್ಯಾಂ ವೀರೋ ಜಜ್ಞೇ ಪ್ರತರ್ದನಃ ।
ತೇನ ಪುತ್ರೇಣ ಬಾಲೇನ ಪ್ರಹೃತಂ ತಸ್ಯ ವೈ ಪುನಃ ।। ೧-೨೯-೭೨
ದೃಷದ್ವತಿಯಲ್ಲಿ ದಿವೋದಾಸನಿಗೆ ವೀರ ಪ್ರತರ್ದನನು ಜನಿಸಿದನು. ಆ ಪುತ್ರನು ಬಾಲಕನಾಗಿದ್ದಾಗಲೇ ದುರ್ದಮನಿಂದ ರಾಜ್ಯವನ್ನು ಪುನಃ ಅಪಹರಿಸಿದನು.
ಪ್ರತರ್ದನಸ್ಯ ಪುತ್ರೌ ದ್ವೌ ವತ್ಸಭಾರ್ಗೌ ಬಭೂವತುಃ ।
ವತ್ಸಪುತ್ರೋ ಹ್ಯಲರ್ಕಸ್ತು ಸನ್ನತಿಸ್ತಸ್ಯ ಚಾತ್ಮಜಃ ।। ೧-೨೯-೭೩
ಪ್ರತರ್ದನನಿಗೆ ವತ್ಸ ಮತ್ತು ಭಾರ್ಗ ಎಂಬ ಇಬ್ಬರು ಪುತ್ರರಾದರು. ವತ್ಸನ ಮಗನು ಅಲರ್ಕ ಮತ್ತು ಸನ್ನತಿಯು ಅವನ ಮಗ.
ಅಲರ್ಕಃ ಕಾಶಿರಾಜಸ್ತು ಬ್ರಹ್ಮಣ್ಯಃ ಸತ್ಯಸಂಗರಃ ।
ಅಲರ್ಕಂ ಪ್ರತಿ ರಾಜರ್ಷಿಂ ಶ್ಲೋಕೋ ಗೀತಃ ಪುರಾತನೈಃ ।। ೧-೨೯-೭೪
ಕಾಶಿರಾಜ ಅಲರ್ಕನಾದರೋ ಬ್ರಹ್ಮಣ್ಯನೂ ಸತ್ಯಸಂಗರನೂ ಆಗಿದ್ದನು. ರಾಜರ್ಷಿ ಅಲರ್ಕನ ಕುರಿತು ಪುರಾತನರು ಈ ಶ್ಲೋಕವನ್ನು ಹಾಡುತ್ತಾರೆ.
ಷಷ್ಟಿವರ್ಷಸಹಸ್ರಾಣಿ ಷಷ್ಟಿಂ ವರ್ಷಶತಾನಿ ಚ ।
ಯುವಾ ರೂಪೇಣ ಸಂಪನ್ನ ಆಸೀತ್ಕಾಶಿಕುಲೋದ್ವಹಃ ।। ೧-೨೯-೭೫
“ಕಾಶಿಕುಲೋದ್ವಹ ಅಲರ್ಕನು ಅರವತ್ತಾರು ಸಾವಿರ ಆರುನೂರು ವರ್ಷಗಳ ಪರ್ಯಂತ ಯೌವನ ಮತ್ತು ರೂಪ ಸಂಪನ್ನನಾಗಿದ್ದನು.”
ಲೋಪಾಮುದ್ರಾಪ್ರಸಾದೇನ ಪರಮಾಯುರವಾಪ ಸಃ ।
ತಸ್ಯಾಸೀತ್ಸುಮಹದ್ರಾಜ್ಯಂ ರೂಪಯೌವನಶಾಲಿನಃ ।
ಲೋಪಾಮುದ್ರೆಯ ಪ್ರಸಾದದಿಂದ ಅವನು ದೀರ್ಘಾಯುವಾಗಿದ್ದನು. ಆ ರೂಪಯೌವನಶಾಲಿಯ ರಾಜ್ಯವು ಅತಿ ವಿಶಾಲವಾಗಿತ್ತು.
ಶಾಪಸ್ಯಾಂತೇ ಮಹಾಬಾಹುರ್ಹತ್ವಾ ಕ್ಷೇಮಕರಾಕ್ಷಸಮ್ ।। ೧-೨೯-೭೬ ರಮ್ಯಾಂ ನಿವೇಶಯಾಮಾಸ ಪುರೀಂ ವಾರಾಣಸೀಂ ಪುನಃ ।
ಮಹಾಬಾಹು ಅಲರ್ಕನು ನಿಕುಂಭನ ಶಾಪವು ಅಂತ್ಯವಾಗಲು ಕ್ಷೇಮಕನೆನ್ನುವ ರಾಕ್ಷಸನನ್ನು ಸಂಹರಿಸಿ ರಮ್ಯವಾದ ವಾರಾಣಸೀ ಪುರಿಯಲ್ಲಿ ಜನರು ಪುನಃ ವಾಸಿಸುವಂತೆ ಮಾಡಿದನು.
ಸನ್ನತೇರಪಿ ದಾಯಾದಃ ಸುನೀಥೋ ನಾಮ ಧಾರ್ಮಿಕಃ ।। ೧-೨೯-೭೭
ಸುನೀಥಸ್ಯ ತು ದಾಯಾದಃ ಕ್ಷೇಮ್ಯೋ ನಾಮ ಮಹಾಯಶಾಃ ।
ಕ್ಷೇಮ್ಯಸ್ಯ ಕೇತುಮಾನ್ಪುತ್ರಃ ಸುಕೇತುಸ್ತಸ್ಯ ಚಾತ್ಮಜಃ ।। ೧-೨೯-೭೮
ಸನ್ನತಿಯ ಪುತ್ರನು ಸುನೀಥ ಎಂಬ ಹೆಸರಿನ ಪರಮ ಧಾರ್ಮಿಕನಾಗಿದ್ದನು. ಸುನೀಥನ ಮಗನು ಕ್ಷೇಮ ಎಂಬ ಹೆಸರಿನ ಮಹಾಯಶಸ್ವಿಯು. ಕ್ಷೇಮನ ಪುತ್ರನು ಕೇತುಮಾನ್ ಮತ್ತು ಸುಕೇತುವು ಅವನ ಮಗನು.
ಸುಕೇತೋಸ್ತನಯಶ್ಚಾಪಿ ಧರ್ಮಕೇತುರಿತಿ ಸ್ಮೃತಃ ।
ಧರ್ಮಕೇತೋಸ್ತು ದಾಯಾದಃ ಸತ್ಯಕೇತುರ್ಮಹಾರಥಃ ।। ೧-೨೯-೭೯
ಸುಕೇತುವಿನ ತನಯನು ಧರ್ಮಕೇತು ಎಂದು ಹೇಳುತ್ತಾರೆ. ಧರ್ಮಕೇತುವಿನ ಮಗನು ಮಹಾರಥ ಸತ್ಯಕೇತುವು.
ಸತ್ಯಕೇತುಸುತಶ್ಚಾಪಿ ವಿಭುರ್ನಾಮ ಪ್ರಜೇಶ್ವರಃ ।
ಆನರ್ತಸ್ತು ವಿಭೋಃ ಪುತ್ರಃ ಸುಕುಮಾರಸ್ತು ತತ್ಸುತಃ ।। ೧-೨೯-೮೦
ಸತ್ಯಕೇತುವಿನ ಮಗನು ವಿಭು ಎಂಬ ಹೆಸರಿನ ಪ್ರಜೇಶ್ವರನು. ಆನರ್ತನು ವಿಭುವಿನ ಪುತ್ರನು ಮತ್ತು ಸುಕುಮಾರನು ಅವನ ಮಗನು.
ಸುಕುಮಾರಸ್ಯ ಪುತ್ರಸ್ತು ಧೃಷ್ಟಕೇತುಃ ಸುಧಾರ್ಮಿಕಃ ।
ಧೃಷ್ಟಕೇತೋಸ್ತು ದಾಯಾದೋ ವೇಣುಹೋತ್ರಃ ಪ್ರಜೇಶ್ವರಃ ।। ೧-೨೯-೮೧
ಸುಧಾರ್ಮಿಕ ಧೃಷ್ಟಕೇತುವು ಸುಕುಮಾರನ ಮಗನು. ಪ್ರಜೇಶ್ವರ ವೇಣುಹೋತ್ರನು ಧೃಷ್ಟಕೇತುವಿನ ಮಗನು.
ವೇಣುಹೋತ್ರಸುತಶ್ಚಾಪಿ ಭರ್ಗೋ ನಾಮ ಪ್ರಜೇಶ್ವರಃ ।
ವತ್ಸಸ್ಯ ವತ್ಸ್ಭೂಮಿಸ್ತು ಭೃಗುಭೂಮಿಸ್ತು ಭಾರ್ಗವಾತ್ ।। ೧-೨೯-೮೨
ಭರ್ಗ ಎಂಬ ಹೆಸರಿನ ಪ್ರಜೇಶ್ವರನು ವೇಣುಹೋತ್ರನ ಮಗನು. ಪ್ರತರ್ದನನ ಮಕ್ಕಳಾದ ವತ್ಸನಿಗೆ ವತ್ಸಭೂಮಿ ಮತ್ತು ಭಾರ್ಗನಿಗೆ ಭೃಗುಭೂಮಿ ಎಂಬ ಮಕ್ಕಳಾದರು.
ಏತೇ ತ್ವಂಗಿರಸಃ ಪುತ್ರಾ ಜಾತಾ ವಂಶೇಽಥ ಭಾರ್ಗವೇ ।
ಬ್ರಾಹ್ಮಣಾಃ ಕ್ಷತ್ರಿಯಾ ವೈಶ್ಯಾಸ್ತಯೋಃ ಪುತ್ರಾಃ ಸಹಸ್ರಶಃ ।
ಇತ್ಯೇತೇ ಕಾಶಯಃ ಪ್ರೋಕ್ತಾ ನಹುಷಸ್ಯ ನಿಬೋಧ ಮೇ ।। ೧-೨೯-೮೩
ಇವರು ಅಂಗಿರಸ ಗೋತ್ರದಲ್ಲಿ ಭಾರ್ಗವ ವಂಶದಲ್ಲಿ ಆದ ಗಾಲವನ ವಂಶಜರು. ಅವರಿಗೆ ಸಹಸ್ರಾರು ಬ್ರಾಹ್ಮಣ, ಕ್ಷತ್ರಿಯ, ಮತ್ತು ವೈಶ್ಯ ಪುತ್ರರಾದರು. ಈಗ ನಾನು ಹೇಳಿದುದು ಕಾಶಿಯ ಕುಲದಲ್ಲಿ ಹುಟ್ಟಿದ ಕ್ಷತ್ರಿಯರ ಕುರಿತು. ನಹುಷನ ವಂಶದ ಕುರಿತು ನನ್ನನ್ನು ಕೇಳು.”
ಸಮಾಪ್ತಿ
ಇತಿ ಶ್ರೀಮಹಾಭಾರತೇ ಖಿಲೇಷು ಹರಿವಂಶೇ ಹರಿವಂಶಪರ್ವಣಿ ಕಾಶ್ಯಪವರ್ಣನಂ ನಾಮ ಏಕೋನತ್ರಿಂಶೋಽಧ್ಯಾಯಃ
-
ಹಿಂದಿನ ಅಧ್ಯಾಯದಲ್ಲಿ ಹೇಳಿದ ವೃದ್ಧಶರ್ಮ? ↩︎
-
ಆಯುರ್ವೇದದ ಎಂಟು ಭಾಗಗಳನ್ನು ಈ ರೀತಿ ವರ್ಣಿಸಲಾಗಿದೆ: ಕಾಯಬಾಲಗ್ರಹೋರ್ಧ್ವಾಂಗಶಲ್ಯದಂಷ್ಟ್ರಾಜರಾವೃಷಾನ್। ಅಷ್ಟಾವಂಗಾನಿ ತಸ್ಯಾಹುಶ್ಚಿಕಿತ್ಸಾ ಯೇಷು ಸಂಶ್ರಿತಾ।। (1) ಕಾಯ ಚಿಕಿತ್ಸಾ (2) ಬಾಲಚಿಕಿತ್ಸಾ (3) ಗ್ರಹಚಿಕಿತ್ಸಾ (4) ಊರ್ಧ್ವಾಂಗ ಚಿಕಿತ್ಸಾ (5) ಶಲ್ಯಚಿಕಿತ್ಸಾ (6) ದಂಷ್ಟ್ರಾಚಿಕಿತ್ಸಾ (7) ಜರಾಚಿಕಿತ್ಸಾ (8) ವೃಷಚಿಕಿತ್ಸಾ. ↩︎
-
ಯದುವಂಶೀ ಮಹಿಷ್ಮಾನನ ಮಗ. ↩︎